Please wait...


ಮೊದಲ ನಾಲ್ಕೈದು ತಿಂಗಳ ಕಾಲ ಸಿಗುವ ನಿರಂತರ ಸ್ಪರ್ಶವು ಶಿಶುವಿನ ಭವಿಷ್ಯವನ್ನೇ ಬದಲಾಯಿಸುತ್ತದೆ!

250: ಮಗು ಬೇಕೆ? ಏಕೆ? – 3

ಹೋದಸಲ ಗರ್ಭಧಾರಣೆಯ ಕುರಿತಾಗಿ ವೈದ್ಯರ “ಕಲಿತ ಆತ್ಮಸಾಕ್ಷಿ,” ಅದರಿಂದ ಬಿತ್ತಲ್ಪಟ್ಟ ಸಾರ್ವಜನಿಕ ಮಿಥ್ಯೆಗಳ ಜೊತೆಗೆ ವೈಜ್ಞಾನಿಕ ಸತ್ಯಗಳ ಬಗೆಗೆ ತಿಳಿದುಕೊಂಡೆವು. ಅವಸರದಲ್ಲಿ ಅಥವಾ ಅರೆಮನಸ್ಸಿನಿಂದ ಮಗುವನ್ನು ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳ ಬಗೆಗೆ ಈ ಸಲ ಯೋಚಿಸೋಣ.

ಮಗುವಿನ ಅಗತ್ಯಗಳ ಪೂರೈಕೆ?

ಶಿಶುವಿಗೆ ಆಹಾರ, ನಿದ್ರೆಗಳ ಜೊತೆಗೆ ನಿರಂತರವಾದ ಬೆಚ್ಚಗಿನ ದೇಹಸಂಪರ್ಕ, ವಾತ್ಸಲ್ಯಧಾರೆ ಹಾಗೂ ಸುಖಸಂವಹನ ಬೇಕೇಬೇಕು. ಇವು ಮಗುವಿನ ಭಾವನಾತ್ಮಕ ಭವಿಷ್ಯದ ಜೀವಾಳ. ಇದನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ ಡಾ. ಎಡ್ವರ್ಡ್ ಟ್ರೋನಿಕ್ ಅವರ ಕಿರುವಿಡಿಯೋ (Still Face Experiment: Edward Tronick) ನೋಡಿ. ಮೊದಲೇ ದಾಂಪತ್ಯದ ಸಮಸ್ಯೆಗಳು ಬಗೆಹರಿಯದೆ ಹಿಂಸೆ ಅನುಭವಿಸುತ್ತಿರುವ ಅನೇಕ ಹೆಂಗಸರಿಗಂತೂ ಒತ್ತಾಯದ ತಾಯ್ತನಕ್ಕೆ ಅರೆಮನಸ್ಸು ಇರುವುದು ಸಹಜ. ಪರಿಣಾಮವಾಗಿ ಸಾಕಷ್ಟು ಹೆಂಗಸರು ಬಸಿರಿನ ಹಾಗೂ ಬಾಣಂತನದ ಅವಧಿಯಲ್ಲಿ ಖಿನ್ನತೆಗೆ ಬಲಿಯಾಗುತ್ತಾರೆ. ಇಂಥ ಸ್ಥಿತಿಯಲ್ಲಿ ಹಿರಿಯ ಹೆಂಗಸರು ನೆರವು ನೀಡುವ ಉತ್ತಮ ಪದ್ದತಿ ನಮ್ಮಲ್ಲಿದೆ ಎನ್ನುವುದು ಸಮಾಧಾನಕರ. ಇನ್ನೊಂದು ವಿಷಯ ಏನೆಂದರೆ, ಹೆರಿಗೆಯಾದ ಕೂಡಲೇ ಎದೆಹಾಲು ಬೇಗ ಬರಲು ಶಿಶುವನ್ನು ದೀರ್ಘಕಾಲ ಎದೆಗೆ ತೆಗೆದುಕೊಂಡಿರಬೇಕು (ಇದು ಆಕ್ಸಿಟೋಸಿನ್ ಎಂಬ ಹಾರ್ಮೋನನ್ನು ಪ್ರಚೋದಿಸುತ್ತದೆ). ಎಲ್ಲದಕ್ಕಿಂತ ಮುಖ್ಯವಾಗಿ, ತಾಯಿಯ ಬೆಚ್ಚಗಿನ ಮೈಯ ಸಂಪರ್ಕವು ಗರ್ಭದಲ್ಲಿ ಇರುವಂತೆ ಸತತವಾಗಿ ಇರಬೇಕು. ಇವೆಲ್ಲ ಮಗುವಿಗೆ ಭದ್ರಭಾವವನ್ನು ಬೆಳೆಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಒತ್ತಾಯಕ್ಕೆ ತಾಯಿಯಾದವಳಿಗೆ ಇದರಲ್ಲೆಲ್ಲ ಕ್ರಿಯಾಶೀಲಳಾಗಿ ತೊಡಗಿಸಿಕೊಳ್ಳುವುದು ಪ್ರಾಣಸಂಕಟ ಎನಿಸುತ್ತದೆ. ಎಡೆಬಿಡದೆ ಅಳುತ್ತಿರುವ ಮಗುವನ್ನು ಕಿಟಿಕಿಯಿಂದ ಹೊರಗೆ ಎಸೆಯಬೇಕೆಂದು ವಿಚಾರ ಬಂದು, ಅದರ ಹಿಂದೆ ತಪ್ಪಿತಸ್ಥ ಭಾವ ಕಾಡುವುದನ್ನು ಮಹಿಳೆಯೊಬ್ಬಳು ನನ್ನಲ್ಲಿ ಹಂಚಿಕೊಂಡಿದ್ದಾಳೆ.

ಅದೇ ಹುಟ್ಟಿ ಇನ್ನೂ ಕಣ್ಣು ಬಿಡದಿರುವ ಶಿಶುವಿನ ಲೋಕದಲ್ಲಿ ಎಷ್ಟೊಂದು ನಡೆಯುತ್ತದೆ ಎಂದು ತಿಳಿದುಕೊಳ್ಳುವುದು ವಿಸ್ಮಯಕರ. ತಾಯಿಯ ಗರ್ಭದಲ್ಲಿಯ ಉಷ್ಣತೆಯು ಒಂದೇಸಮವಾಗಿ ಬೆಚ್ಚಗಿರುತ್ತದೆ. ಹೊರಬಂದ ಕೂಡಲೇ ತಟ್ಟುವ ತಂಗಾಳಿಯ ಸ್ಪರ್ಶವು ಶಿಶುವಿನ ಇಡೀ ದೇಹಕ್ಕೆ ಆಘಾತ ಕೊಡುತ್ತದೆ. (ದೇಹಾಘಾತವನ್ನು ಅರ್ಥಮಾಡಿಕೊಳ್ಳಲು ಹೀಗೆ ಊಹಿಸಿ: ಚಳಿಗಾಲದಲ್ಲಿ ಬಿಸಿನೀರು ಮೈಮೇಲೆ ಸುರಿಯುವುದನ್ನು ಕಣ್ಣುಮುಚ್ಚಿ ಅನುಭವಿಸುತ್ತಿರುವಾಗ ದಿಢೀರೆಂದು ತಣ್ಣೀರು ಮೈಮೇಲೆ ಬೀಳಲು ಶುರುವಾಗಿ, ತಪ್ಪಿಸಿಕೊಳ್ಳಲು ಆಗದಿದ್ದರೆ ಹೇಗಿರುತ್ತದೆ?) ದೇಹಾಘಾತದಿಂದ ಸಂರಕ್ಷಣೆ ಪಡೆಯಲು ಮಗುವು ಹೊರಬಂದ ಕೂಡಲೇ ತಾಯಿಯ ಶರೀರದ ಸಂಪರ್ಕದ ಮಿತಿಯೊಳಗೆ ಭದ್ರವಾಗಬೇಕು (ಅದೇ ಕಾರಣಕ್ಕೆ ಶಿಶುವನ್ನು ಬಟ್ಟೆಯಲ್ಲಿ ಭದ್ರವಾಗಿ ಸುತ್ತಿಡಲಾಗುತ್ತದೆ). ಇದಾಗದಿದ್ದರೆ ಉಂಟಾಗುವ ಕೊರತೆಯು ಅದೇ ರೂಪುಗೊಳ್ಳುತ್ತಿರುವ ದೇಹಪ್ರಜ್ಞೆಯಲ್ಲಿ ವಿಕೃತವಾಗಿ ಅಡಕವಾಗಿ, ಮುಂದೆ ಬದುಕಿನುದ್ದಕ್ಕೂ ಉಳಿದುಬಿಡುತ್ತದೆ ಎಂದು ನಂಬಲು ಮನೋವಿಜ್ಞಾನದಲ್ಲಿ ಸಾಕಷ್ಟು ಆಧಾರವಿದೆ. ಈ ವಿಕೃತಿ ಹೇಗಿರಬಹುದು ಎಂಬುದಕ್ಕೆ ಒಂದು ದೃಷ್ಟಾಂತ: ಇಲ್ಲೊಬ್ಬನು ಪೋಷಕ ಕುಟುಂಬದಲ್ಲಿ ಬೆಳೆದಿದ್ದರೂ ಆತಂಕ-ಅಭದ್ರತೆಯ ಸ್ವಭಾವವನ್ನು ಹೊಂದಿದ್ದಾನೆ. ಬುದ್ಧಿವಂತ ಹಾಗೂ ವಿಚಾರವಾದಿ ಎನ್ನಿಸಿಕೊಂಡರೂ ಒಳಗೊಳಗೇ ನರಳುತ್ತ ಅಸಾಮರ್ಥ್ಯವನ್ನು ಅನುಭವಿಸುತ್ತ ಇರುತ್ತಾನೆ. ಆಗಾಗ ಮೈಕೈ ಭಾರ, ಏನೂ ಮಾಡಲು ಪ್ರೇರಣೆ ಇಲ್ಲದಿರುವುದರಿಂದ ಉದ್ಯೋಗದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ. ಎತ್ತಿಕೊಂಡ ಕೆಲಸವನ್ನು ಅರ್ಧಕ್ಕೇ ಬಿಟ್ಟಿದ್ದು ಎಷ್ಟು ಸಲವೊ! ಚಿಕಿತ್ಸೆಯ ಸಮಯದಲ್ಲಿ ಅವನ ಅಂತರಾಳವನ್ನು ಬಗೆದಾಗ ಅಚ್ಚರಿಯ ವಿಷಯವೊಂದು ಹೊರಬಂತು: ಇವನು ಗರ್ಭದಲ್ಲಿ ಬೆಳೆಯುತ್ತಿದ್ದಾಗ ತಾಯಿಯು ಕೌಟುಂಬಿಕ ಹಿಂಸೆಯನ್ನೂ ಶಾರೀರಿಕ ರೋಗಸ್ಥಿತಿಯನ್ನೂ ಅನುಭವಿಸುತ್ತಿದ್ದಳು. ಬಹುಕಷ್ಟದ ಹೆರಿಗೆಯ ನಂತರ ಸುಮಾರು ಹೊತ್ತು ಪ್ರಜ್ಞೆ ಕಳೆದುಕೊಂಡಿದ್ದಳು. ಈ ಸಂದರ್ಭದಲ್ಲಿ ಬೆಚ್ಚನೆಯ ಶರೀರಸ್ಪರ್ಶ ಹಾಗೂ ಸುಖಸಂಪರ್ಕ ಸಿಗದಿದ್ದುದರಿಂದ ಶಿಶುವು ದೇಹಾಘಾತಕ್ಕೆ ಒಳಗಾಗಿ “ಒಂಟಿತನದ ದೇಹಪ್ರಜ್ಞೆ” ಹುಟ್ಟಿದೆ. ಈ “ಶಾರೀರಿಕ ಅನಾಥಪ್ರಜ್ಞೆ”ಯನ್ನು ಅವನು ಮನೋಭಾವುಕ ರೂಪದಲ್ಲಿ ಅನುಭವಿಸುತ್ತಿದ್ದಾನೆ. ಎತ್ತಣ ಮಾಮರ ಎತ್ತಣ ಕೋಗಿಲೆ?

ಇನ್ನು, ಒಮ್ಮೆ ಒತ್ತಾಯದಿಂದ ತಾಯಿಯಾದವರು ಇನ್ನೊಂದು ಸಲ ತಾಯ್ತನವನ್ನು ಎದುರುಹಾಕಿಕೊಳ್ಳಲು ಸಹಸಾ ಇಷ್ಟಪಡುವುದಿಲ್ಲ. ಹಾಗಾಗಿ ಇರುವ ಒಂದು ಮಗುವಿನ ಮೂಲಕವೇ ತಮ್ಮೆಲ್ಲ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಹವಣಿಸುತ್ತಾರೆ. ಅದರ ಬೆಳವಣಿಗೆಯ ಬಗೆಗೆ ಅಸಹಜ ಕಾಳಜಿ ತೋರಿಸುತ್ತಾರೆ. ಮಗು ಒಂದು ಘಟ್ಟ ಮುಟ್ಟುವಾಗ ಖುಷಿಯಲ್ಲಿ ಮನಸ್ಸನ್ನು ನೆಲೆಸಗೊಡುವುದಿಲ್ಲ; ಅತೃಪ್ತಿ, ಅಸಹನೆ ತೋರುತ್ತ ಮುಂದಿನ ಘಟ್ಟಕ್ಕೆ ಹಾತೊರೆಯುತ್ತಾರೆ. ಇಲ್ಲಿ ವಿಡಂಬನೆಯ ಹೇಳಿಕೆಯೊಂದು ನೆನಪಿಗೆ ಬರುತ್ತಿದೆ: ಮಗುವಿಗೆ ಯಾವಾಗ ಮಾತು, ಕಾಲು ಬರುತ್ತದೋ ಎಂದು ಕಾತುರದಿಂದ ಕಾಯುತ್ತಿರುವವರು ಒಮ್ಮೆ ಮಾತು, ಓಡಾಟ ಶುರುವಾದ ನಂತರ ಬಾಯಿಮುಚ್ಚಿ ಒತ್ತಟ್ಟಿಗೆ ಕುಳಿತುಕೊಳ್ಳಲು ಆಜ್ಞಾಪಿಸುತ್ತಾರೆ! ಪರಿಣಾಮವಾಗಿ ಮಕ್ಕಳ ಬೆಳವಣಿಗೆಯನ್ನು ನೋಡುವ ಸೌಭಾಗ್ಯವನ್ನು ಕಳೆದುಕೊಳ್ಳುವುದಲ್ಲದೆ ಮಗುವಿನ ಬಾಲ್ಯದ ಸವಿನೆನಪು ಅನ್ನಿಸಿಕೊಳ್ಳಲು ಏನೂ ಇರುವುದಿಲ್ಲ.

ಮಗು ಯಾಕೆ ಬೇಕು?

ಈ ಪ್ರಶ್ನೆಗೆ ಸರ್ವಸಮಾನ್ಯವಾಗಿ ಎಲ್ಲರೂ ಕೊಡುವ ಹಾಗೂ ಸಮಂಜಸ ಎನ್ನಿಸುವ ಉತ್ತರ ಒಂದೇ: ಪ್ರೀತಿಸಲು ಹಾಗೂ ಸುಖಸಂಪರ್ಕಿಸಲು ನನ್ನವರು ಎನ್ನುವವರು ಯಾರಾದರೂ ಬೇಕೇಬೇಕು! ಇದಕ್ಕೆ ಅಸ್ತಿತ್ವವಾದದ ಆಧಾರವಿದೆ. ಅಪ್ಪ, ಅಮ್ಮ, ಸಂಗಾತಿ… ಎಲ್ಲರೂ ತನಗಿಂತ ಮುಂಚೆ ಸಾಯಬಹುದು, ಆದರೆ ಮಗು ತನ್ನನ್ನು ಮೀರಿ ಬದುಕುತ್ತದೆ, ಹಾಗಾಗಿ ಕೊನೆಯ ತನಕ ಸುಖಸಂಪರ್ಕದ ಭರವಸೆ ಇರುತ್ತದೆ ಎನ್ನುವ ಪರಿಕಲ್ಪನೆಯಲ್ಲಿ ಮೇಲುನೋಟದಲ್ಲಿ ಹುರುಳಿದೆ. ಆದರೆ ಒಳಗಿನ ಕತೆಯೇ ಬೇರೆ. “ನನ್ನದೇ ಮಗು” ಎನ್ನುವುದಿದೆಯಲ್ಲ, ಅದರ ಹಿಂದೆ ಒಡೆತನದ ಸ್ವಾರ್ಥವಿದೆ –  ನನ್ನ ಮಗು ನನ್ನದೇ ಆಗಿರಬೇಕು, ಇನ್ನಾರದೂ ಆಗಿರಬಾರದು! ಮಗುವಿಗೆ ಜನ್ಮಕೊಡುವಾಗ ಪ್ರೀತಿಯ ಜೊತೆಗೆ ಹಕ್ಕು, ಸ್ವಾಮ್ಯ, ಒಡೆತನ ಬರುತ್ತದೆ – ಕೆಲವೊಮ್ಮೆ ಒಡೆತನದ ಆಳ್ವಿಕೆಯನ್ನೇ ಪ್ರೀತಿಯ ನಂಟೆಂದು ತಪ್ಪಾಗಿ ತಿಳಿಯುವುದೂ ಇದೆ. ಉದಾ. ಕೋಪದಿಂದ ಮಗುವನ್ನು ಶಿಕ್ಷಿಸುವಾಗ ಯಾರಾದರೂ ಅಡ್ಡಿಬಂದರೆ, “ನನ್ನ ಮಗು ಹೇಗೆಂದು ನನಗೆ ಚೆನ್ನಾಗಿ ಗೊತ್ತಿದೆ, ದೂರವಿರು!” ಎನ್ನುವವರನ್ನು ಕೇಳಿದ್ದೇವೆ. ಮಗುವು ಅಪ್ಪನನ್ನು ಹೆಚ್ಚು ಪ್ರೀತಿಸುವಂತೆ ಕಂಡಾಗ ತಾಯಿಗೆ ಮತ್ಸರವಾಗುವುದು ಇದೇ ಕಾರಣಕ್ಕೆ. ದಂಪತಿ ವಿಚ್ಛೇದನ ತೆಗೆದುಕೊಳ್ಳುವಾಗ ಮಗು ನನ್ನಲ್ಲಿರಲಿ ಎನ್ನುವುದಕ್ಕಿಂತ ವಿಚ್ಛೇದಿತ ಸಂಗಾತಿಯ ಬಳಿ ಇರುವುದು ಬೇಡ ಎನ್ನುವ ಕೆಟ್ಟ ಹಂಬಲ ಹೆಚ್ಚಾಗಿರುತ್ತದೆ. ಹೆತ್ತವರ ಇಂಥ “ಸೂಕ್ಷ್ಮ ದುರ್ವರ್ತನೆ”ಯು (micro-abuse) ಮಗುವಿನ ಸ್ವತಂತ್ರ ಬೆಳವಣಿಗೆಗೆ ಹಾಗೂ ಭಾವವಿಕಾಸಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ, ಒಡೆತನಕ್ಕೆ ಒಳಗಾದ ಮಕ್ಕಳು ಬೇರೆಯಾಗಿ ಸ್ವತಂತ್ರ ಬದುಕನ್ನು ಹುಡುಕುತ್ತ ದೂರವಾಗುವಾಗ ಮಕ್ಕಳನ್ನು ಬೆಳೆಸಿದ ತೃಪ್ತಿಗಿಂತ ಕಳೆದುಕೊಂಡ ವ್ಯಥೆ ಹೆಚ್ಚಾಗಿರುತ್ತದೆ. ನನಗೆ ಗೊತ್ತಿರುವ ಒಬ್ಬಳ ಮಗ ಸಕುಟುಂಬ ವಿದೇಶದಲ್ಲಿ ನೆಲೆಸಿದ್ದಾನೆ. ಎರಡು-ಮೂರು ದಿನಗಳಿಗೊಮ್ಮೆ ಆತ ಕರೆಮಾಡುವಾಗ ತಾಯಿಯ ಮೊದಲ ಮಾತು: ”ಏನೋ ನನ್ನನ್ನು ಮರೆತುಬಿಟ್ಟಿದ್ದೀಯಾ  ಅಂದುಕೊಂಡಿದ್ದೆ. ಅಂತೂ ನನ್ನ ನೆನಪಾಯಿತಲ್ಲ?” ಹಾಗೆಂದು ವಿದೇಶಕ್ಕೆ ಆಹ್ವಾನಿಸಿದರೆ ಸುತರಾಂ ಒಲ್ಲೆಯೆನ್ನುತ್ತಾಳೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಗರ್ಭಧಾರಣೆಗೆ ಇಪ್ಪತ್ತೆಂಟಕ್ಕೂ ಮೂವತ್ತೆಂಟಕ್ಕೂ ವಿಶೇಷ ವ್ಯತ್ಯಾಸವಿಲ್ಲ ಎಂದು ಅಧ್ಯಯನ ತಿಳಿಸುತ್ತದೆ.

249: ಮಗು ಬೇಕೆ? ಏಕೆ? – 2

ಮದುವೆಯ ನಂತರ ಬೇಗ ಮಗುವಾದಷ್ಟೂ ಒಳ್ಳೆಯದು ಎನ್ನುವ ಸಾರ್ವಜನಿಕ ನಂಬಿಕೆಯನ್ನು ಒರೆಗಲ್ಲಿಗೆ ಹಚ್ಚುತ್ತಿದ್ದೇವೆ. ಶಿಕ್ಷಣ ಆದಮೇಲೆ ಉದ್ಯೋಗ, ಉದ್ಯೋಗ ಸಿಕ್ಕಮೇಲೆ ಮದುವೆ, ಮದುವೆಯ ನಂತರ ಮಗು, ಮಗುವಾಗುವ ತನಕ ಆತಂಕ, ಅನಿಶ್ಚಿತತೆ, ನಂತರ ಅದನ್ನು ಬೆಳೆಸುವ ಆತಂಕ… ಇದನ್ನೆಲ್ಲ ನೋಡಿದರೆ ನಮ್ಮ ಯುವದಂಪತಿಗಳು ಏನನ್ನು ಬೆನ್ನಟ್ಟಿ ಹೊರಟಿದ್ದಾರೆ, ಹಾಗೂ ಎಲ್ಲಿಗೆ ಮುಟ್ಟುತ್ತಿದ್ದಾರೆ ಎಂದು ಯಾರೂ ತಲೆ ಕೆಡಿಸಿಕೊಂಡಂತಿಲ್ಲ.

ಮಗು ಮಾಡಿಕೊಳ್ಳುವ ಅವಸರಕ್ಕೆ ಪರಿಸರದ ಒತ್ತಡವಲ್ಲದೆ ಇನ್ನೊಂದು ಬಲವಾದ ಕಾರಣವೂ ಇದೆ. ಅದನ್ನು ಸ್ಪಷ್ಟಪಡಿಸಲು ನನ್ನದೇ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಮೂವತ್ತೆರಡು ವರ್ಷದ ನನ್ನ ಸಂಬಂಧಿ ಯುವತಿ ಆರು ವರ್ಷದಿಂದ ವಿವಾಹಿತಳಾಗಿದ್ದು, ಮುಟ್ಟಿನ ತೊಂದರೆ ಅನುಭವಿಸುತ್ತಿದ್ದಳು. ಆಕೆಯನ್ನು ನಮ್ಮ ಸ್ನೇಹಿತೆ ಸ್ತ್ರೀವೈದ್ಯರ ಹತ್ತಿರ ಕಳಿಸಿಕೊಟ್ಟೆ. “ಈಕೆಗೆ ಗರ್ಭಧಾರಣೆ ಬೇಕಿಲ್ಲ, ಕೇವಲ ಮುಟ್ಟಿನ ತೊಂದರೆಗೆ ಮಾತ್ರ ಬರುತ್ತಿದ್ದಾಳೆ” ಎಂದು ಮುಂಚೆಯೇ ಎಚ್ಚರಿಸಿದ್ದೆ. ಮರಳಿದ ಯುವತಿ ಅತೀವ ಬೇಸರದಿಂದ ಹೇಳಿಕೊಂಡಳು: ತನಗೆ ಮಗು ಬೇಕಿಲ್ಲ ಎಂದದ್ದನ್ನು ವೈದ್ಯೆ ಕಿವಿಯಮೇಲೆ ಹಾಕಿಕೊಳ್ಳಲೇ ಇಲ್ಲ. ಬದಲಾಗಿ ಫಲವತ್ತತೆಯ ಪರೀಕ್ಷೆಗೆ ಒಳಪಡಿಸಿ ಸಾವಿರಾರು ಕಿತ್ತರು. ನಂತರ ನಿರ್ಣಯ ಕೊಟ್ಟರು: “ನಿನ್ನಲ್ಲಿ ಅಂಡಾಣುಗಳ ಸಂಗ್ರಹ ಕಡಿಮೆ ಆಗುತ್ತಿದೆ. ಹಾಗಾಗಿ ಬೇಗ ಗರ್ಭ ಧರಿಸಿದಷ್ಟೂ ಒಳ್ಳೆಯದು!”  ಆಮೇಲೆ ನನಗೆ ನೆನಪಾಯಿತು – ಅವರು ಇತ್ತೀಚೆಗೆ ಗರ್ಭಧಾರಣೆಯ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ!

ವೈದ್ಯರ ವ್ಯಾಧಿ:

ನನ್ನ ಪ್ರಕಾರ ವೈದ್ಯರಿಗೆ ಎರಡು ’ಕಾಯಿಲೆ’ಗಳಿವೆ. ಒಂದು: ರೋಗಿಗಳು ಏನೇ ಉದ್ದೇಶದಿಂದ ಬಂದರೂ ಅದೇನೆಂದು ಯೋಚಿಸದೆ ತಮ್ಮ ಪರಿಣಿತಿಯನ್ನು ಹುಡುಕಿಕೊಂಡು ಬಂದಿದ್ದಾರೆ ಎಂದೇ  ಭ್ರಮಿಸಿ, ತಜ್ಞಬುದ್ಧಿಯು ತೋರಿಸುವ ದಾರಿಯಲ್ಲೇ ಮುಂದೆ ಸಾಗುವುದು. (ಇದಕ್ಕೆ ನಾನೂ ಹೊರತಲ್ಲ. ಇಪ್ಪತ್ತು ವರ್ಷಗಳ ಹಿಂದೆ ಶಿಶ್ನದೌರ್ಬಲ್ಯವನ್ನು ಮುಂದುಮಾಡಿಕೊಂಡು ಬಂದ ನವವಿವಾಹಿತನಿಗೆ ಔಷಧಿ ಬರೆಯಲು ಹೊರಟಾಗ, ಆತ ನನ್ನನ್ನು ತಡೆದು ಹೇಳಿದ: “ಇಲ್ಲ ಡಾಕ್ಟರ್, ನನಗೆ ಸಂಭೋಗ ಸಾಮರ್ಥ್ಯ ಬೇಕಾಗಿಲ್ಲ. ಸಂಭೋಗಕ್ಕೆ ಅಸಮರ್ಥ ಎಂದು ದೃಢೀಕರಣ ಪತ್ರ ಬೇಕು.” ಯಾಕೆ? ಒತ್ತಾಯದ ಮದುವೆಯಿಂದ ಬಿಡುಗಡೆ ಬೇಕಿದೆ!)

 ಎರಡು: ತಜ್ಞರು ತಮ್ಮ ತಜ್ಞತೆಯ ಚೌಕಟ್ಟಿನೊಳಗೆ ಮಾತ್ರ ಯೋಚಿಸುತ್ತಾರೆಯೇ ಹೊರತು ಅದರ ಹೊರಗಲ್ಲ. ಅವರ ಪಾಂಡಿತ್ಯವು ಕೊಡುವ ದೃಢತೆಯು ಅದರಾಚೆಗಿರುವ ಅನಿಶ್ಚಿತೆಯನ್ನು ಎದುರುಹಾಕಿಕೊಳ್ಳಲು ಅವಕಾಶ ಕೊಡುವುದಿಲ್ಲ. ಉದಾಹರಣೆಗೆ, ಸರ್ವಪರೀಕ್ಷೆಗಳ ನಂತರ, “ನಿನಗೇನೂ ತೊಂದರೆಯಿಲ್ಲ, ಹಾಗಾಗಿ ಔಷಧಿ ಬೇಕಾಗಿಲ್ಲ” ಎಂದು ಆತ್ಮವಿಶ್ವಾಸದಿಂದ ಬೆನ್ನುತಟ್ಟಿ ಬರಿಗೈಯಲ್ಲಿ ಬೀಳ್ಕೊಡುವ ವೈದ್ಯರು ಎಷ್ಟಿದ್ದಾರೆ? ಪ್ರತಿ ವೈದ್ಯರನ್ನೂ “ಕಲಿತ ಆತ್ಮಸಾಕ್ಷಿ” ಕಾಡುತ್ತಿದ್ದು, ಕಣ್ತಪ್ಪಿನ ಪರಿಣಾಮದಿಂದ ಅಚಾತುರ್ಯ ಸಂಭವಿಸುವ ಭಯವಿರುತ್ತದೆ (ನಾಳೆ ಏನಾದರೂ ಹೆಚ್ಚುಕಡಿಮೆ ಆದರೆ?!). ಹೀಗಾಗಿ ನವನಿವಾಹಿತರು ಪ್ರಸೂತಿ ತಜ್ಞರಲ್ಲಿ ಹೋದಾಗ, “ಇಪ್ಪತ್ತೆಂಟರೊಳಗೆ ಎರಡು ಮಕ್ಕಳನ್ನು ಮಾಡಿಕೊಂಡುಬಿಡಿ. ಆಮೇಲೆ ನಿರಾಳವಾಗಿ ಇರಬಹುದು” ಎನ್ನುವ ಉಪದೇಶ ಬರುತ್ತದೆ. ಇಲ್ಲಿ ಮಾಡಿಮುಗಿಸಿ ಕೈತೊಳೆದುಕೊಳ್ಳುವ ಸೂಚನೆಯಿದೆ. ಆದರೆ ಮಗು ಹುಟ್ಟಿದಮೇಲೆ ಮುಗಿಯುವುದಲ್ಲ, ಬದುಕಿನ ಹೊಸ ಆಯಾಮ ಶುರುವಾಗುತ್ತದೆ ಎನ್ನುವುದು ವಾಸ್ತವ.

ಆದಷ್ಟು ಬೇಗ ಮಗುವಾಗಬೇಕು ಎನ್ನುವುದಕ್ಕೆ ಸಹಜ ಕಾರಣವೊಂದಿದೆ: ಗರ್ಭಧಾರಣೆಗೆ ದೇಹಸ್ಥಿತಿ ಹಾಗೂ ಧಾರಣಾಶಕ್ತಿ ಪ್ರಶಸ್ತವಾಗಿರುತ್ತದೆ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಮಗುವನ್ನು ಬೆಳೆಸಲು ಅತ್ಯಗತ್ಯವಾದ ಮಾನಸಿಕ ಸಿದ್ಧತೆ ಹಾಗೂ ಭಾವನಾತ್ಮಕ ಪಕ್ವತೆಯನ್ನು ಅಲಕ್ಷಿಸುತ್ತಿದ್ದೇವೆ. ಪರಿಣಾಮ? ಅನೇಕ ಮಕ್ಕಳ ತಾಯ್ತಂದೆಯರು ತಾವೇ ಸ್ವತಃ ಮಕ್ಕಳಂತೆ ಗೊಂದಲದಲ್ಲಿ ಇರುವುದನ್ನು ಕಂಡಿದ್ದೇನೆ – ಅಳುವ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಕೂಡಿಸುವವರು ಇದಕ್ಕೊಂದು ಉದಾಹರಣೆ. ಅಕಾಲದ ಮಗುವು ದಾಂಪತ್ಯದ ಸಂಬಂಧದ ಮೇಲೆ ಅನಿಷ್ಟ ಪರಿಣಾಮ ಉಂಟುಮಾಡುತ್ತದೆ. ಈ ನವದಂಪತಿಯು ವಿದೇಶದಲ್ಲಿ ಕೆಲಸದಲ್ಲಿದ್ದು ಮಧುಚಂದ್ರದ ಲಹರಿಯಲ್ಲಿ ಇರುವಾಗಲೇ ಕಾಂಡೋಮ್ ವಿಫಲಗೊಂಡು ಗರ್ಭಕಟ್ಟಿತು. ಆಘಾತದಿಂದ ಹಿರಿಯರಿಗೆ ಕರೆಮಾಡಲಾಗಿ ಗರ್ಭಪಾತಕ್ಕೆ ಒಪ್ಪದೆ ಮುಂದುವರಿಸಲು ಸೂಚಿಸಿದರು. ಇದಾಗಿ ಏಳು ವರ್ಷಗಳಾಯಿತು, ಇಬ್ಬರೂ ಮಗುವನ್ನು ಇಷ್ಟಪಡಲು “ಕಲಿತಿ”ದ್ದರೂ ಆಘಾತದಿಂದ ಹೊರಬಂದಿಲ್ಲ. ಎಗ್ಗು-ಸಿಗ್ಗಿಲ್ಲದ ಕಾಮಕೂಟಗಳ ಬಿಂದಾಸ್ ಅವಕಾಶವು ಮತ್ತೆಂದೂ ಮರಳಲಾರದು ಎನ್ನುವ ವ್ಯಥೆ ಅವರಿಗಿದೆ.  ನನ್ನ ಪ್ರಶ್ನೆ ಏನೆಂದರೆ, ಪ್ರತಿಯೊಂದೂ ಆಯಾ ವಯಸ್ಸಿಗೆ ತಕ್ಕಂತೆ ಆಗಲಿ ಎನ್ನುವುದು ಕಾಮೇಚ್ಛೆಯ ಪೂರೈಕೆಗೆ ಯಾಕೆ ಅನ್ವಯವಾಗುವುದಿಲ್ಲ?

ವೈದ್ಯರ ಈ ವ್ಯಾಧಿಯು ಅಮೆರಿಕದಂಥ ದೇಶಗಳಲ್ಲೂ ಬಿಟ್ಟಿಲ್ಲ. ಅದಕ್ಕೊಂದು ದೃಷ್ಟಾಂತ: ಅರಿಜ಼ೋನಾದ ಮನಃಶಾಸ್ತ್ರದ ಪ್ರೊಫೆಸರ್ ಜೀನ್ ಟ್ವೆಂಗೆ (Jean Twenge) ತಡಗರ್ಭದ ಬಗೆಗೆ ಯೋಚಿಸುತ್ತಿದ್ದಳು. ಎಲ್ಲೆಡೆಯೂ ಮೂವತ್ತೆರಡರ ನಂತರದ ಗರ್ಭದ ಬಗೆಗೆ ಎಚ್ಚರಿಕೆಯ ಫಲಕಗಳು ಕಂಡುಬರುತ್ತಿರುವಾಗ ಆಕೆಗೇನೋ ಸಂದೇಹ ಬಂತು. ಸಾಮಾನ್ಯಜ್ಞಾನವು ವೈಜ್ಞಾನಿಕ ಸತ್ಯಕ್ಕೆ ಸಮವಲ್ಲ ಎಂದು ಆಕೆಗೆ ಗೊತ್ತು. ಜಗತ್ತಿನಾದ್ಯಂತ ಗರ್ಭಧಾರಣೆಯ ಬಗೆಗಿನ ಮಾಹಿತಿಯನ್ನು ಜಾಲಾಡಿ ಕ್ರೋಢೀಕರಿಸಿ ಪುಸ್ತಕರೂಪದಲ್ಲಿ ದಾಖಲಿಸಿದ್ದಾಳೆ (An Impatient Woman’s Guide to Getting Pregnant). ಅದರಲ್ಲಿನ ಕೆಲವಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ:

  • ನಮ್ಮ ಪ್ರಸೂತಿ ತಜ್ಞರು  ಹೇಳುವ  “35ರಿಂದ 39ರ ವಯಸ್ಸಿನ ಮಹಿಳೆಯರು ಗರ್ಭಧರಿಸುವ ಸಂಭವ 65% ಮಾತ್ರ” ಎನ್ನುವ ಅಂಕಿಸಂಖ್ಯೆಗಳ ಮೂಲ ಯಾವುದು ಗೊತ್ತೆ? ಫ್ರಾನ್ಸ್‌‌ನ 17ನೇ ಶತಮಾನದ ಜನನದ ದಾಖಲೆಗಳು! ಇತ್ತೀಚಿನ ಲೆಕ್ಕಾಚಾರದ ಪ್ರಕಾರ 80%ಕ್ಕೂ ಮೀರಿ ಗರ್ಭಧಾರಣೆಗಳು ಆಗುತ್ತವೆ.
  • ಮೂವತ್ತೈದರ ಹೆಣ್ಣು ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗದಲ್ಲಿ ಪಾಲುಗೊಂಡರೆ ಶೇ. 20ರಷ್ಟಲ್ಲ, ಶೇ. 33ರಷ್ಟು ಪ್ರಸಂಗಗಳಲ್ಲಿ ಗರ್ಭಿಣಿಯಾಗುವ ಸಂಭವ ಇರುತ್ತದೆ. 
  • ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗಿಸಿದರೆ ಎರಡು ವರ್ಷದೊಳಗೆ ಗರ್ಭಧರಿಸುವ ಸಂಭವ ಇಪ್ಪತ್ತೆಂಟರ ಹೆಣ್ಣಿನಲ್ಲಿ ಶೇ. 86ರಷ್ಟಿದೆ. ಅದೇ ಮೂವತ್ತೆಂಟರ ಹೆಣ್ಣಿಗೆ ಶೇ. 82ರಷ್ಟಿದೆ. ಅಂದರೆ ಗರ್ಭಧಾರಣೆಗೆ 28ನೇ ವಯಸ್ಸಿಗೂ 38ನೇ ವಯಸ್ಸಿಗೂ ವಿಶೇಷ ವ್ಯತ್ಯಾಸವಿಲ್ಲ!
  • ಗರ್ಭಧಾರಣೆಯ ಅವಧಿಯಲ್ಲಿ ಸಂಭವಿಸುವ ತೊಡಕುಗಳು 20ರ ಹರೆಯದಲ್ಲೂ 38ರ ತಡವಯಸ್ಸಿನಲ್ಲೂ ಒಂದೇ ಆಗಿವೆ. ನಲವತ್ತರ ಮೇಲೆ ಮಾತ್ರ ಇದರ ಸಂಭವ ಗಣನೀಯವಾಗಿ ಹೆಚ್ಚಾಗುತ್ತವೆ.
  • ಮಾನಸಿಕ ಒತ್ತಡವು ಗರ್ಭಧರಿಸುವ ಪ್ರಕ್ರಿಯೆಯ ಮೇಲೆ ವಿಶೇಷ ಪ್ರಭಾವ ಬೀರಲಾರದು.

ಇದರಿಂದ ಏನು ತಿಳಿದು ಬರುತ್ತದೆ? ಗರ್ಭಧರಿಸಲು ಮೂವತ್ತೆಂಟರ ವಯಸ್ಸೂ ಸುರಕ್ಷಿತ! ಅಷ್ಟಲ್ಲದೆ, ಹೀಗೆ ಯೋಚಿಸುವುದರಲ್ಲಿ ಪ್ರಯೋಜನವಿದೆ. ಗರ್ಭಧರಿಸುವ ಸಾಮರ್ಥ್ಯ ತನ್ನಲ್ಲಿನ್ನೂ ಜೀವಂತವಾಗಿದೆ ಎನ್ನುವ ಸ್ಥಿತ್ಯಂತರವು ಹೆಣ್ಣಿಗೆ ಅತೀವ ಆತ್ಮವಿಶ್ವಾಸವನ್ನು ಕೊಡುತ್ತದೆ. ಅದಲ್ಲದೆ, ಎಲ್ಲೆಲ್ಲೋ ಕಾಣುವ ತೊಂದರೆಗಳು ತನಗೂ ಬರಬಹುದು ಎಂದು ಅಂತರ್ಗತ ಮಾಡಿಕೊಳ್ಳುವ ಸಂಭವ ಕಡಿಮೆಯಾಗುತ್ತದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಾಕಷ್ಟು ದಂಪತಿಗಳು ಮಗುವನ್ನು ಹುಟ್ಟಿಸುವುದರ ಮೂಲಕ ತಮ್ಮನ್ನು (ತಪ್ಪಾಗಿ) ಗುರುತಿಸಿಕೊಳ್ಳುತ್ತಾರೆ.

248: ಮಗು ಬೇಕೆ? ಏಕೆ? – 1

ಈ ಸಲದ ವಿಷಯ ನಿಮಗೆ ವಿಚಿತ್ರ ಅನ್ನಿಸುತ್ತಿರಬಹುದು. ಹೌದು, ನನಗೂ ಹಾಗೆಯೇ ಅನ್ನಿಸುತ್ತದೆ. ಅದಕ್ಕೆಂದೇ ಇದನ್ನು ಎತ್ತಿಕೊಂಡಿದ್ದೇನೆ. ಶೀರ್ಷಿಕೆಯಲ್ಲಿ, “ಹೇಗೆ” ಎನ್ನುವುದರ ಬದಲು “ಏಕೆ” ಎಂದು ಕೇಳಲು ಹೊರಟಿದ್ದೇನಲ್ಲ, ಅದರ ಬಗೆಗೆ ಮತ್ತಿನ್ನೇನೋ ಯೋಚನೆ ನಿಮ್ಮ ತಲೆಯಲ್ಲಿ ಬರುವುದಕ್ಕಿಂತ ಮುಂಚೆ ಕೆಲವು ದೃಷ್ಟಾಂತಗಳನ್ನು ನೋಡಿ:

ದೃಷ್ಟಾಂತ 1: ಈ ದಂಪತಿಗೆ ಮದುವೆಯಾಗಿ ಎರಡು ವರ್ಷ ಕಳೆದರೂ ಸರಿಯಾಗಿ ಸಂಭೋಗ ಸಾಧ್ಯವಾಗುತ್ತಿಲ್ಲ (ಮತ್ತದೇ ಗೋಳು ಎನ್ನುತ್ತೀರೇನೋ?). ಅದಕ್ಕಾಗಿ ಅನೇಕ ಸಲ ಪ್ರಯತ್ನಪಟ್ಟು ಸೋತು ಸುಣ್ಣವಾಗಿದ್ದಾರೆ. ಈಗ ಸಂಭೋಗದ ಕೈಬಿಟ್ಟು ಸಹಜವಲ್ಲದ ರೀತಿಯಲ್ಲಿ ಮಗುವನ್ನು ಪಡೆಯಲು ಗರ್ಭಧಾರಣೆಯ ಕೇಂದ್ರಕ್ಕೆ ಹೋಗಿದ್ದಾರೆ. ಗರ್ಭ’ಧಾರಣೆ’ಯನ್ನು ಕೇಳಿ ಅಷ್ಟು ಹಣ ಕೈಲಾಗದೆಂದು ನನ್ನಲ್ಲಿ ಬಂದಿದ್ದಾರೆ. ಅವರ ಪ್ರಶ್ನೆಯಿದು: “ಮೊದಲ ಸಂಭೋಗದಲ್ಲೇ ಗರ್ಭ ಕಟ್ಟುವ ಅವಕಾಶ ಆಗಬೇಕೆಂದರೆ ನಾವೇನು ಮಾಡಬೇಕು?”  ಇಬ್ಬರೂ ತಾಳ್ಮೆಗೆಟ್ಟಿದ್ದಾರೆ.

ದೃ. 2: ಈ ದಂಪತಿಯೂ ಎರಡು ವರ್ಷಗಳಿಂದ ಕಾಮಕೂಟ ನಡೆಸುತ್ತಿದ್ದು, ಗರ್ಭ ಕಟ್ಟುತ್ತಿಲ್ಲ. ಹೀಗಾಗಿ ಬರಬರುತ್ತ ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೆಂಡತಿಯ ಸ್ತ್ರೀವೈದ್ಯರು ಮಾತ್ರೆ ಕೊಟ್ಟು, ಇಂತಿಂಥ ದಿನ ಸಂಭೋಗಿಸಲು ಹೇಳಿದ್ದಾರೆ. ಪರಿಣಾಮ? ಸಹಜ ಸಮಾಗಮವು “ನಿರ್ದೇಶಿತ” ಸಂಭೋಗದಿಂದ ಪದಚ್ಯುತಗೊಂಡು ಆಸಕ್ತಿ ನಿಂತೇಹೋಗಿದೆ! ವೈದ್ಯರಿಗೆ ಕೇಳಲಾಗಿ ಇನ್ನಷ್ಟು ಹೆಚ್ಚು ಸಮಯ, ಮನಸ್ಸು ಕೊಡಲು ಉಪದೇಶ ಬಂದಿದೆ. ನನ್ನ ಪ್ರಶ್ನೆ ಏನೆಂದರೆ, ಸಹಜ ಸಮಾಗಮದಲ್ಲೇ ಆಸಕ್ತಿ ಇಲ್ಲದಿರುವವರಿಗೆ ನಿರ್ದೇಶಿತ ಸಂಭೋಗದಲ್ಲಿ ಆಸಕ್ತಿ ಹೇಗೆ ಬಂದೀತು?

ದೃ. 3: ಮದುವೆಯಾಗಿ ಎರಡು ತಿಂಗಳೂ ಆಗದ ಇವರು ದಿನಾಲೂ ಕೂಟ ನಡೆಸುತ್ತಿದ್ದಾರೆ. ಇಪ್ಪತ್ತು ದಿನಗಳ ನಂತರ ಗಂಡ ರಾತ್ರಿ ತಡಮಾಡಿ ಮನೆಸೇರಿ ಇವೊತ್ತು ಕೂಟ ಬೇಡವೆಂದ. ಮುಂದಿನ ವಾರ ಇನ್ನೊಂದು ಸಲ ಬೇಡವೆಂದಾಗ ಹೆಂಡತಿ ಏನೆಂದಳು? “ನೀವು ಹೀಗೆ ಸೆಕ್ಸ್ ಮಿಸ್ ಮಾಡುತ್ತಿದ್ದರೆ ನಮಗೆ ಮಗು ಆಗುವುದು ಯಾವಾಗ?”  ಅವನ, “ನಾಳೆ ನೋಡೋಣ” ಎನ್ನುವ ಉತ್ತರದಲ್ಲಿ ನಾಳೆಯೂ ಬೇಡ ಎನ್ನುವ ಇಂಗಿತವನ್ನು ಕಂಡು ಆಕೆಗೆ ರೇಗಿದೆ. ಪರಿಣಾಮವಾಗಿ ಗಂಡ ಸಂಭೋಗದಲ್ಲಷ್ಟೇ ಅಲ್ಲ, ಸಂಬಂಧದಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ. ಇದು ಎರಡೂ ಕಡೆಯವರಿಗೆ ತಿಳಿದು ಅವರು ಹಣಾಹಣಿ ನಡೆಸಿದ್ದಾರೆ.

ದೃ. 4: ಒಂದೂವರೆ ವರ್ಷವಾದರೂ ಈ ಜೋಡಿಯಲ್ಲಿ ಸಾಮರಸ್ಯದ ಎಳೆ ಹುಡುಕಿದರೂ ಕಾಣುವುದಿಲ್ಲ. ಯಾಕೆ? ಗಂಡ ವಿಕ್ಷಿಪ್ತ ಸ್ವಭಾವದವನು. ಹೆಂಡತಿಯ ಆಸ್ತಿ ತನ್ನ ಹೆಸರಿಗೆ ಆದಮೇಲೆಯೇ ಮೊದಲ ಸಂಭೋಗವಂತೆ. ಒಂದು ಸಲ ಸೇರಿ ಒಂದು ಮಗುವಾದರೂ ಸಾಕು, ಮತ್ತಿನ್ನೇನೂ ಬೇಡ ಎಂದು ಹೆಂಡತಿಯ ಆಸೆ. ಅಂದಹಾಗೆ ಹೆಂಡತಿ ಸ್ನಾತಕೋತ್ತರ ಪದವೀಧರೆಯಾಗಿ ಉದ್ಯೋಗದಲ್ಲಿದ್ದಾಳೆ. ಗಂಡ ಪಿಯುಸಿ  ಓದಿ ಸಾಧಾರಣ ಸರಕಾರಿ ಕೆಲಸದಲ್ಲಿ ಇದ್ದಾನೆ. ಆಕೆ ಗೋಗರೆಯುವಾಗ ಪಶುಗರ್ಭಧಾರಣೆಯ ಕೇಂದ್ರದಲ್ಲಿ ಚೌಕಟ್ಟಿನಲ್ಲಿ ವೀರ್ಯದಾನಕ್ಕಾಗಿ ಕಾಯುತ್ತಿರುವ ಹಸುವಿನ ನೆನಪಾಗುತ್ತಿದೆ.

ಈ ದೃಷ್ಟಾಂತಗಳನ್ನು ಗಮನಿಸಿದರೆ ಕೆಲವು ಪ್ರಶ್ನೆಗಳೂ ಸಂದೇಹಗಳೂ ತಲೆಯೆತ್ತುತ್ತವೆ.

ದಂಪತಿಗಳಿಗೆ ಮಗುವಿನ ಬಯಕೆ ಎಲ್ಲಿಂದ ಹುಟ್ಟಿತು?

ಸಂತಾನದ ಬಯಕೆ ಮಾನವಪ್ರಾಣಿಗೆ ಸಹಜವಲ್ಲವೆ ಎಂದುಕೊಂಡರೆ ಖಂಡಿತವಾಗಿಯೂ ಸರಿ. ಆದರೆ ಸಂಭೋಗದ ಆಸೆ ಅದಕ್ಕಿಂತ ಸಹಜವಲ್ಲವೆ? ಸಂಭೋಗ ಮಾಡುವಾಗ ಹಸಿಕಾಮದ ಸೆಳೆತ ಇರುತ್ತದೆಯೇ ವಿನಾ ಪರಿಣಾಮಗಳ ಪರಿವೆ ಇರುವುದಿಲ್ಲ (ಒಂದುವೇಳೆ ಹಾಗಿದ್ದರೆ ಹೆಚ್ಚಿನ ಅನಪೇಕ್ಷಿತ ಗರ್ಭಗಳನ್ನು ತಡೆಯಬಹುದಿತ್ತು). ಅಂಥದ್ದರಲ್ಲಿ ಸುಖಾನುಭವ ಬಿಟ್ಟು ಮುಂದಿನ ಘಟ್ಟಕ್ಕೆ ಹಾರುವುದರ ಒಳವುದ್ದೇಶವೇನು? “ಸಂಭೋಗ ನಡೆಯುವಾಗ ನಿಮ್ಮ ತಲೆಯೊಳಗೆ ಏನು ನಡೆಯುತ್ತಿರುತ್ತದೆ?” ಎಂದು ಕೇಳಿದಾಗ ಇವರೇನು ಹೇಳುತ್ತಾರೆ? “ಯೋನಿಯೊಳಗೆ ವೀರ್ಯಸ್ಖಲನವಾದರೆ ಸಾಕೇ ಸಾಕು!” ಸಹಜ ಕಾಮಕೂಟದಲ್ಲಿ ಲಾಸ್ಯವಾಡುವ ಖುಷಿ, ಉನ್ಮಾದ, ರೋಚಕತೆಯ ಬದಲಾಗಿ ಅವಸರ, ಆತುರ, ಆತಂಕ ತಾಂಡವ ಆಡುವುದನ್ನು ನೋಡಿದರೆ ಮಗುವಾಗುವ ಬಯಕೆ ಅವರದ್ದಲ್ಲ , ಅವರ ಮೇಲೆ ಹೇರಲ್ಪಟ್ಟಿದ್ದು ಎನ್ನುವುದು ಸ್ಪಷ್ಟವಾಗುತ್ತದೆ.

ಮಗು ಬೇಕು ಎನ್ನುವವರಿಗೆ ನಾನೊಂದು ವಿಚಿತ್ರ ಪ್ರಶ್ನೆಕೇಳುತ್ತೇನೆ: “ನಿಮಗೆ ಮಗು ಯಾಕೆ ಬೇಕು?” ಹೆಚ್ಚಿನವರು ಆಶ್ಚರ್ಯಾಘಾತದಿಂದ, “ಏನು ಹೀಗೆ ಕೇಳುತ್ತೀರಿ? ಮದುವೆ ಅಂತಾದಮೇಲೆ ಮಗು ಬೇಡವೆ?!” ಎಂದು ಉದ್ದಮುಖದಿಂದ ಉದ್ಗರೆಯುತ್ತಾರೆ. ಮದುವೆಯ ಏಕೈಕ ಗುರಿ ಎಂದರೆ ಸಂತಾನೋತ್ಪತ್ತಿ, ಅದಿಲ್ಲದೆ ಮದುವೆಗೆ ಅರ್ಥವಿಲ್ಲ ಎಂಬುದು ಅವರ ದೃಢನಂಬಿಕೆ. ಅದಕ್ಕೆ ನನ್ನ ಎರಡನೆಯ ಪ್ರಶ್ನೆ: “ಒಂದುವೇಳೆ ಯಾವುದೋ ದೋಷದಿಂದ ಮಗುವಾಗಲು ಅಸಾಧ್ಯವೆಂದು ತಜ್ಞರ ಅಭಿಪ್ರಾಯ ಬಂದರೆ ಏನು ಮಾಡುತ್ತೀರಿ?” ದತ್ತು ತೆಗೆದುಕೊಳ್ಳುತ್ತೇವೆ ಎಂದವರಿಗೆ, “ಸರಿ, ನಂತರ ನೀವಿಬ್ಬರೂ ಹಾಸಿಗೆಯಲ್ಲಿ ಏನು ಮಾಡುತ್ತೀರಿ?” ಎಂದು ಕೇಳುತ್ತೇನೆ. ಆಗ ಅವರಿಗೆ ಹೊಳೆಯುತ್ತದೆ: ನಾವಿಬ್ಬರೂ ಏನೋ ಮಾಡಲು ಹೋಗಿ ಏನೋ ಮಾಡುತ್ತಿದ್ದೇವೆ!

ನನ್ನ ವೃತ್ತಿಯಲ್ಲಿ ಕಂಡುಬಂದಂತೆ ಸಂತಾನ ಬಯಸುವುದರ ಕಾರಣಗಳಲ್ಲಿ ಇವು ಮುಖ್ಯವಾಗಿವೆ:

  1. ಮಗು ಸಾಮಾಜಿಕ ಪ್ರತಿಷ್ಠೆಯ ಸಂಕೇತ: ತಮ್ಮ ಸರೀಕರಿಗೆ, ಹಾಗೂ ನಂತರ ಮದುವೆ ಆದವರಿಗೆ ಮಗುವಾಗಿದೆ; ಅಪ್ಪ-ಅಮ್ಮ ತಲೆಯಮೇಲೆ ಕೂತುಕೊಂಡಿದ್ದಾರೆ; ಎಲ್ಲರಿಗೂ ಉತ್ತರಿಸಿ ಸಾಕಾಗಿದೆ; ಉಪದೇಶ ಕೊಡುವರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ,; ಸಮಾರಂಭಗಳಿಗೆ ಹೋಗಲಾಗುತ್ತಿಲ್ಲ… ಇತ್ಯಾದಿ. ಇದರರ್ಥ ಏನು? ಬೇರೆಯವರ ಕೀಳುಭಾವಕ್ಕೆ ಗುರಿಯಾಗದಿರಲು ಮಗು ಬೇಕು. ಇಲ್ಲಿ ಮಗು ಹುಟ್ಟುತ್ತಲೇ ಒಂದು ಉದ್ದೇಶವನ್ನು ಇಟ್ಟುಕೊಂಡು ಹುಟ್ಟುತ್ತದೆ – ಪುರಾಣದ ಕುಮಾರ ಸಂಭವದಂತೆ! ಇದು ಸರಿಯೆ?
  2. ಮಗುವು ತಾಯಿಗೆ ಅಸ್ಮಿತೆಯ (identity) ಕೊಡುಗೆ: ಅನೇಕ ತಾಯಂದಿರು ಮಗುವಿನ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ಅವರಿಗೆ ತಮ್ಮದೇ ಆದ ಸ್ವಂತಿಕೆ, ಗುರುತು ಇರುವುದಿಲ್ಲ. ಅಂಥವರು ಮೊದಲು ಆತುರ, ಆತಂಕ ತೋರಿಸುತ್ತಾರೆ. ನಂತರ ತಮ್ಮಷ್ಟಕ್ಕೆ ತಾವಾಗುತ್ತ “ಕನಿಷ್ಟಮಾತೆ” ಆಗುತ್ತಾರೆ.
  3. ಮಗು ಹುಟ್ಟಿದ ನಂತರದ ಅಸ್ಪಷ್ಟತೆ: ಮಗುವಾದರೆ ಸಾಕು ಎನ್ನುವವರಿಗೆ ಅದಾದಮೇಲೆ ಏನು ಮಾಡಬೇಕು ಎನ್ನುವುದರ ಬಗೆಗೆ ಏನೂ ಕಲ್ಪನೆ ಇರುವುದಿಲ್ಲ – ಇವರ ಅರ್ಹತೆಯ ಅಳತೆಗೋಲು ಶಾರೀರಿಕ ಹಾಗೂ ಆರ್ಥಿಕ ಸಾಮರ್ಥ್ಯ, ಬಾಣಂತನಕ್ಕೆ ಹಿರಿಯರ ನೆರವು ಮಾತ್ರ. ಮಗುವಿಗೆ ಎಷ್ಟೊಂದು ಮಾತಾಪಿತೃವಾತ್ಸಲ್ಯ ಬೇಕು, ಹಾಗೂ ಅದಕ್ಕಾಗಿ ಸಮಯ ಹಾಗೂ ಧಾರಣಾ ಸಾಮರ್ಥ್ಯ ತಮ್ಮಲ್ಲಿದೆಯೆ ಎಂದು ಯೋಚಿಸಿದಂತಿಲ್ಲ.  ಇದರ ಬಗೆಗೆ ಕೇಳಿದರೆ ತಮ್ಮ ತಾಯ್ತಂದೆಯರ ಕಡೆಗೆ ಬೆರಳು ತೋರಿಸುತ್ತಾರೆ. ಅವರ ನೆರವು ಒಳ್ಳೆಯದಾದರೂ ಮಕ್ಕಳನ್ನು ಹೆರುವುದು ಮಾತ್ರ ತಮ್ಮ ಕೆಲಸ, ಅವರನ್ನು ನೋಡಿಕೊಳ್ಳುವುದು ಹೆತ್ತವರ ಕೆಲಸ ಎನ್ನುವ ಹೊಣೆಗೇಡಿ ಮನೋಭಾವ ಇರುವುದು ಎದ್ದುಕಾಣುತ್ತದೆ.

ಮಗುವನ್ನು ಬಯಸುವ ದಂಪತಿಗಳ ಬಗೆಗೆ ಬಹಳಷ್ಟು ತಿಳಿದುಕೊಳ್ಳುವುದಿದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಪುರುಷ ಪ್ರಧಾನತೆಗೆ ವಿರುದ್ಧವಾಗಿ ಸ್ತ್ರೀವಾದವನ್ನು ಅನುಷ್ಠಾನಕ್ಕೆ ತರಲು ನಾವು ಸಿದ್ಧರಿದ್ದೆವೆಯೆ?

247: ಅನ್ಯೋನ್ಯತೆಗೆ ಹುಡುಕಾಟ – 26

ಸರಳಾ-ಭೀಮಯ್ಯ ದಂಪತಿಯ ಕತೆ ಓದಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ದೀರ್ಘವಾಗಿರುವ ಒಂದನ್ನು ಉಲ್ಲೇಖಿಸುತ್ತಿದ್ದೇನೆ. ಇವರ ಸಂಬಂಧದ ಕುರಿತು ಚಿಂತನಶೀಲ ಲೇಖಕಿಯೊಬ್ಬರು ಹೀಗೆ ಬರೆದಿದ್ದಾರೆ. ಜೊತೆಗೆ ಪ್ರಶ್ನೆಗಳನ್ನೂ ಎತ್ತಿದ್ದಾರೆ. ಅವುಗಳನ್ನು ಒಂದೊಂದಾಗಿ ಉತ್ತರಿಸಲು ಯತ್ನಿಸಿದ್ದೇನೆ:

  1. ಸರಳೆಯ ಬದುಕಿಗೂ ನನ್ನದಕ್ಕೂ ಹೋಲಿಕೆಯಿದೆ. ನಾನೂ ಬಾಲ್ಯದಲ್ಲಿ ಅಲಕ್ಷ್ಯಕ್ಕೀಡಾಗಿದ್ದೇನೆ. ಪುರುಷ ಪ್ರಧಾನತೆಯ ಏಟುತಿಂದು ನರಳಿದ್ದೇನೆ ಆದರೆ ಶರಣಹೋಗದೆ ಅದರ ಸಾಮರ್ಥ್ಯವನ್ನು ಪ್ರಶ್ನಿಸಿದ್ದೇನೆ. ನಿಮ್ಮ ಬರಹದ ಬಗೆಗೆ ನನಗೆ ಅನ್ನಿಸಿದ್ದು ಏನೆಂದರೆ, ನೀವು ಮತ್ತೆ ಮತ್ತೆ ಪುರುಷ ಪ್ರಧಾನತೆಯ ಕಡೆಗೇ ತಿರುಗುತ್ತಿದ್ದೀರಿ. ಸರಳೆಯನ್ನು ಗಂಡ ಬೆಂಬಲಿಸಲಿಲ್ಲ ಎನ್ನುವುದು ನಿಜ. ಆದರೆ ಸ್ವತಃ ಅವನನ್ನು ಅರ್ಥಮಾಡಿಕೊಳ್ಳಲು, ಬೆಂಬಲಿಸಲು ಯಾರಿದ್ದಾರೆ? ಅವನಲ್ಲೂ ಪೂರೈಸಲು ಆಗದಿರುವ ಅಗತ್ಯಗಳು ಸಾಕಷ್ಟಿರಬಹುದು. ಅಂದರೆ ಪುರುಷ ಪ್ರಧಾನ ವ್ಯವಸ್ಥೆಯು ಹೆಂಗಸರಿಗೆ ಕೆಟ್ಟದ್ದು ಮಾಡಿದಂತೆ ಗಂಡಸರಿಗೂ ಕೆಟ್ಟದ್ದು ಮಾಡಿದೆ. ಅದಕ್ಕೆ ನೀವು ಗಮನ ಕೊಟ್ಟಂತಿಲ್ಲ.

ಉತ್ತರ: ಹೌದು, ಪುರುಷ ಪ್ರಧಾನತೆಯಿಂದ ನೊಂದ ಹೆಂಗಸರ ಬಗೆಗೆ ಮತ್ತೆ ಮತ್ತೆ ಬರೆಯುತ್ತಿದ್ದೇನೆ. ಯಾಕೆಂದರೆ ನನ್ನಲ್ಲಿ ಬರುವವರಲ್ಲಿ ಇಂಥ ಹೆಂಗಸರೇ ಹೆಚ್ಚಾಗಿದ್ದಾರೆ. ತಲೆಮಾರುಗಳಿಂದ ಬಂದ ಈ ಜಾಡ್ಯದಿಂದ  ಗಂಡಸರೂ ಅಷ್ಟೇ ನರಳುತ್ತಿದ್ದಾರೆ – ಅವರ ಬಗೆಗೆ “ಪುರುಷರ ನಾಕ-ನರಕ” ಎಂಬ ಶೀರ್ಷಿಕೆಯಲ್ಲಿ ವಿವರಿಸಿದ್ದೇನೆ (ಕಂತುಗಳು 192-204). ಭೀಮಯ್ಯನನ್ನು ಬೆಂಬಲಿಸಲು ಯಾರಿದ್ದಾರೆ ಎಂದು ನೀವು ಕೇಳಿರುವುದು ಸೂಕ್ತವಾಗಿದೆ. ಅವನು ನಡೆದುಕೊಳ್ಳುವುದನ್ನು ನೋಡಿದರೆ (ಉದಾ. ಅಪ್ಪನ ಮಾತಿಗೆ ಹೆಂಡತಿಯನ್ನು ಹೊಡೆದುದು) ಅವನಿಗೆ ಸ್ವಂತಬುದ್ಧಿ ಬೆಳೆಯಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಭಾವನಾತ್ಮಕವಾಗಿ ಅವನಿನ್ನೂ ಕುಟುಂಬದೊಂದಿಗೆ ಬೆಸೆದುಕೊಂಡಿದ್ದು, ಅವರ ಮರ್ಜಿ ಕಾಯುತ್ತಿದ್ದಾನೆ.

  • ಈ ದಂಪತಿಗಳಲ್ಲಿ ಇನ್ನೂ ಪ್ರೀತಿ ಹುಟ್ಟಿಯೇ ಇಲ್ಲ. ಅವರೀಗ ಮದುವೆ ಎಂದಾಗಿದ್ದಾರಷ್ಟೆ. ಪ್ರೀತಿ ಬೆಳೆದಮೇಲೆ ಸಾಧ್ಯವಾಗಬಹುದಾದ ಕೆಲಸಗಳನ್ನು ಪ್ರೀತಿ ಇಲ್ಲದಿರುವಾಗ ಮಾಡಲು ಹಚ್ಚುತ್ತಿದ್ದೀರಿ ಎನಿಸುತ್ತದೆ.

ಉತ್ತರ: ಹೌದು, ಮೊದಲು ಪ್ರೀತಿ ಬೆಳೆಯಬೇಕು. ಪರಿಚಯವಿಲ್ಲದೆ ಮದುವೆಯಾದವರಿಗೆ ಪ್ರೀತಿ ಕಟ್ಟಿಕೊಳ್ಳಲು ಸಮಯ, ಜಾಗ ಬೇಕಲ್ಲವೆ? ಅದಕ್ಕೇ ಪ್ರತ್ಯೇಕ ವಾಸದ ಮಾತು ಬಂದಿದೆ.

  • ಸರಳಾ ಭಾವಬಂಧದ ಮೂಲಕ ಬಾಂಧವ್ಯವನ್ನು ಹುಟ್ಟುಹಾಕುವಂತೆ ಭೀಮಯ್ಯ ಕೂಡ ಕಾಮಕ್ರಿಯೆಯ ಮೂಲಕ ಬಾಂಧವ್ಯಕ್ಕೆ ಹುಟ್ಟುಹಾಕುತ್ತಿದ್ದಾನೆ. ನೀವು ಹೆಂಡತಿಯ ಅಗತ್ಯಗಳಿಗೆ ಗಮನ ನೀಡುತ್ತಿದ್ದೀರಿ ವಿನಾ ಗಂಡನ ಅಗತ್ಯಗಳಿಗೆ ಇಲ್ಲ. ಇಲ್ಲಿ ಉಪಯೋಗಿಸಿದ ಪುರುಷ ಪ್ರಧಾನತೆಯ ಚೌಕಟ್ಟು ಅಷ್ಟು ಸೂಕ್ತವಲ್ಲ ಎಂದು ಅನಿಸುತ್ತದೆ.

ಉತ್ತರ: ಹೌದು, ಅನ್ಯೋನ್ಯತೆಯಿಂದ ಕೂಟದಲ್ಲಿ ರೋಚಕತೆ ಹುಟ್ಟುವಂತೆ ರೋಚಕವಾದ ಕೂಟದಿಂದಲೂ ಅನ್ಯೋನ್ಯತೆ ಹುಟ್ಟಲು ಸಾಧ್ಯವಿದೆ – ಕೂಟದ ನಂತರ ಪರಸ್ಪರ ಹಂಚಿಕೊಳ್ಳುವುದು ನಡೆದರೆ ಮಾತ್ರ. ಆದರೆ ಸ್ವಂತಿಕೆ ಅಷ್ಟಾಗಿ ಬೆಳೆಯದಿರುವ ಗಂಡಸರು ಉದ್ರೇಕದ ಮೇಲೆ ಭಾರವೂರಿ ಕೂಟಕ್ಕೆ ಹಾತೊರೆಯುತ್ತಾರೆ. ಅದು ಮುಗಿದಮೇಲೆ ಸಂಗಾತಿಯಿಂದ “ದೂರವಾಗಿ” ನಿದ್ರಿಸಲು ಇಷ್ಟಪಡುತ್ತಾರೆ. ಅದೇ ಹೆಂಗಸರು ಆತ್ಮೀಯವಾಗಿ ಬೆರೆಯುವ ಕಾಲ. ಹಂಚಿಕೊಳ್ಳುವುದು ನಡೆಯದಿದ್ದಲ್ಲಿ ಹೆಣ್ಣಿಗೆ ಕೊಟ್ಟು ಖಾಲಿತನ ಅನ್ನಿಸುತ್ತದೆ. ಸರಳಾ ಇದಕ್ಕೆ ಹೊರತಲ್ಲ. ಅದಲ್ಲದೆ ಆಕೆಗೆ ಬೇರೆ ಅವಕಾಶವಾದರೂ ಎಲ್ಲಿದೆ? ಅನ್ಯೋನ್ಯತೆ ಹುಟ್ಟಲು ನಿರಂತರ ಚರ್ಚೆ ನಡೆಯಬೇಕಾಗುತ್ತದೆ. ಅಷ್ಟಲ್ಲದೆ, ಮನ ತೆರೆದುಕೊಳ್ಳುವುದು ಎಂದರೆ ಕುಟುಂಬದ ವಿರುದ್ಧ ಎನ್ನುವವನ ಜೊತೆಗೆ ಹೇಗೆ ಬೆರೆತಾಳು?

ಇನ್ನು, ಭೀಮಯ್ಯನ ಸ್ಠಿತಿಯನ್ನು ಗಮನಿಸಿ: ಮೂಲ ಕುಟುಂಬದ ಜೊತೆಗೆ ಗುರುತಿಸಿಕೊಂಡಿರುವುದು ಜವಾಬ್ದಾರಿ ಹಾಗೂ ಕರ್ತವ್ಯನಿಷ್ಠೆಯ ಮೂಲಕವೇ ವಿನಾ ಪ್ರೀತಿಯನ್ನು ಕೊಡು-ತೆಗೆದುಕೊಳ್ಳುವುದರಿಂದ ಅಲ್ಲ. ಅದೇ ಕಾರಣದಿಂದ ಅವನು ಬೆಸೆದುಕೊಂಡಿದ್ದು ವ್ಯಕ್ತಿ ಪ್ರತ್ಯೇಕತೆಯನ್ನು (differentiation) ಬೆಳೆಸಿಕೊಂಡಿಲ್ಲ. ಅವನು ಮನೆ ಬಿಡದಿರಲು ಪುರುಷ ಪ್ರಧಾನತೆ ಅಲ್ಲದೆ ಬೇರೆ ಕಾರಣಗಳಿವೆ: ತನ್ನವರಿಂದ ದೂರವಾಗುವ ಭಯದ ಜೊತೆಗೆ ಅವನಿಗೆ ಹೆಂಡತಿಯ ಹತ್ತಿರವಾಗಲೂ ಭಯವಿದೆ! ಯಾಕೆಂದರೆ ಶೈಶವದಲ್ಲಿ ಅಗತ್ಯವಾಗಿರುವ ಪ್ರೀತಿವಾತ್ಸಲ್ಯಗಳು ಸಿಗದೆ ಭಾವನಿರಸನವಾಗಿ, ಏಕಾಂಗಿಭಾವದ ನಂಟನ್ನು (avoidant attachment style) ಬೆಳೆಸಿಕೊಂಡಿದ್ದಾನೆ. ಅವನಿಗೆ ಪ್ರೀತಿಯನ್ನು ಹೇಗೆ ವಿನಿಮಯಿಸಬೇಕು ಎನ್ನುವುದು ಸ್ಪಷ್ಟವಿಲ್ಲ.  ಹಾಗಾಗಿ ಹೆಂಡತಿಯ ಜೊತೆ ಪ್ರತ್ಯೇಕ ವಾಸದಲ್ಲಿ ದಾಂಪತ್ಯಕ್ಕೆ ತನ್ನ ಕೊಡುಗೆ ಏನು ಎಂಬುದೂ ತಿಳಿದಿಲ್ಲ. ಹಾಗಾಗಿ ಮೂಲಕುಟುಂಬದಿಂದ ಹೊರಬಂದು ಮಾಡುವುದಾದರೂ ಏನು?

  • ಈಗ ಸ್ತ್ರೀವಾದದ ಬಗೆಗೆ: ಗಂಡಸೆಂದು ಹುಟ್ಟಿರುವುದರಿಂದಲೇ ಅನೇಕರಿಗೆ ತೊಂದರೆಯಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉದಾ. ಮಗಳ ಅಲಂಕಾರಕ್ಕೆ ಕೈಸಡಿಲಿಸಿ ಖರ್ಚುಮಾಡುವ ಹೆತ್ತವರು ಮಗನ ಅಗತ್ಯಗಳಿಗೆ ಕೈ ಬಿಗಿಹಿಡಿಯುತ್ತಾರೆ. ಮಗ-ಮಗಳು ಇಬ್ಬರೂ ಗಳಿಸುವಾಗ ಮಗಳ ಗಳಿಕೆಯನ್ನು ಮುಟ್ಟದೆ ಮಗನಿಗೆ ಮಾತ್ರ ಖರ್ಚುಹೊರಲು ನಿರೀಕ್ಷಿಸುತ್ತಾರೆ. ಹಾಗಾಗಿ ಸ್ತ್ರೀವಾದವು ಗಂಡಸರ ವಿರುದ್ಧದ ತಾರತಮ್ಯದಿಂದ ಆಗುವ ನೋವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಇತ್ತೀಚಿನ ತಾಯ್ತಂದೆಯರು ಗಂಡುಮಕ್ಕಳನ್ನು ಬಿಟ್ಟು ಹೆಣ್ಣುಮಕ್ಕಳನ್ನು ವೈಭವೀಕರಿಸುತ್ತಾರೆ. ಇದು ಮತ್ತೆ ಕುಟುಂಬದಲ್ಲಿ ಭೇದಭಾವದ ರಾಜಕೀಯಕ್ಕೆ ದಾರಿಯಾಗುತ್ತದೆ.

ಉತ್ತರ: ಹೌದು, ಇದು ನನ್ನ ಅನುಭವಕ್ಕೂ ಬಂದಿದೆ. ಬಾಲ್ಯದಲ್ಲಿ ತಾಯ್ತಂದೆಯರು ನನ್ನ ತಂಗಿಯ ಅಲಂಕಾರಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದರು. ಪ್ರಶ್ನಿಸಿದರೆ, “ಹೆಂಗಸರಿಗೆ ಸೌಂದರ್ಯವೇ ಮರ್ಯಾದೆ; ಗಂಡಸರಿಗೆ ಮರ್ಯಾದೆಯೇ ಸೌಂದರ್ಯ. ಸರಳ ಉಡುಪಿನಿಂದ ವ್ಯಕ್ತಿತ್ವ ಬೆಳೆಸಿಕೋ” ಎನ್ನುತ್ತಿದ್ದರು. ಅವರ ವರ್ತನೆಯು “ತಾಯ್ತಂದೆಯರು ನನ್ನ ಪಾಲಿಗಿಲ್ಲ” ಎನ್ನುವ ವ್ಯಥೆ ಕೊಟ್ಟಿದ್ದಲ್ಲದೆ ತಂಗಿಯೊಡನೆ ಬಾಂಧವ್ಯ ಕಟ್ಟಿಕೊಳ್ಳಲು ಬಹುಕಾಲ ಅಡ್ಡಿಯಾಗಿತ್ತು.

  • ಪುರುಷ ಪ್ರಧಾನ ವ್ಯವಸ್ಥೆಯನ್ನು ಅನುಸರಿಸುವ ಎಲ್ಲ ಕುಟುಂಬಗಳೂ ದುರ್ವರ್ತನೆಯಲ್ಲಿ ತೊಡಗಿಲ್ಲ. ಇವು ಹೇಗೆ ತಮ್ಮ ನೆಮ್ಮದಿಯನ್ನು ಹೇಗೆ ಕಾಪಾಡಿಕೊಂಡಿವೆ? ಏಟುತಿಂದು ಬಿದ್ದಾಗ ಪುನಶ್ಚೇತನ ಹೊಂದುವುದು ಒಂದು ಕಾರಣ. ಏನ್ನೇನು ಇರಬಹುದು?

ಉತ್ತರ: ಇಲ್ಲಿಯ  ಪುರುಷನ ಔದಾರ್ಯ, ಹಾಗೂ ನಾನು ಅನುಭವಿಸಿದ್ದು ನನ್ನ ಮಕ್ಕಳೂ ಅನುಭವಿಸಬಾರದು ಎನ್ನುವ ಅರಿವು ತಿಳಿವಳಿಕೆಯ ಬಾಂಧವ್ಯಕ್ಕೆ ಸೆಲೆಯಾಗುತ್ತದೆ ಎಂದು ಅನಿಸುತ್ತದೆ.

  • ಅನೇಕ ಅಪ್ಪಂದಿರು ಹೆಣ್ಣಿನ ಅಂತಿಮ ಗುರಿಯು ದಾಂಪತ್ಯ ಹಾಗೂ ಮಕ್ಕಳನ್ನು ಬೆಳೆಸುವುದರಲ್ಲೇ ಇದೆಯೆಂದು ನಂಬುತ್ತಾರೆ. ಹಾಗೆಂದು ಅವರೆಲ್ಲ ಮಗಳ ನೋವಿಗೆ ಸ್ಪಂದಿಸುವುದಿಲ್ಲ ಎಂದಲ್ಲ. ಹಾಗಾಗಿ ಸಮಸ್ಯೆಯು ಪುರುಷ ಪ್ರಧಾನತೆಯನ್ನು ಮೀರಿದೆ ಎಂದೆನಿಸುತ್ತದೆ.

ಉತ್ತರ: ಸರಿಯಾಗಿ ಹೇಳಿದಿರಿ. ನಾನು ನೋಡುತ್ತಿರುವ ಇತ್ತೀಚಿನ ದಾಂಪತ್ಯಗಳಲ್ಲಿ ತಂದೆಯಂದಿರು ಹೆಣ್ಣುಮಕ್ಕಳ ಹಿತಕ್ಕಾಗಿ ವಿಚ್ಛೇದನಕ್ಕೂ ಒಪ್ಪುತ್ತಿದ್ದಾರೆ.

ಒಟ್ಟಿನಲ್ಲಿ ನಿಮ್ಮ ಅಭಿಪ್ರಾಯ, ದೃಷ್ಟಿಕೋನ ನನಗೆ ಹಿಡಿಸಿತು. ಸ್ತ್ರೀವಾದವು ಕೇವಲ ಹೆಂಗಸರಿಗಾಗಿ ಹುಟ್ಟಿದ್ದಲ್ಲ, ಇದೊಂದು ಎಲ್ಲರ ಹಿತ ಬಯಸುವ ನೈತಿಕ ಮಾರ್ಗವೆಂದು ನಾನೂ ಒಪ್ಪುತ್ತೇನೆ. ಹೊಸ ಒಳನೋಟ ಕೊಟ್ಟಿದ್ದಕ್ಕೆ ಧನ್ಯವಾದಗಳು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕಾಮಸುಖದಲ್ಲಿ ಕೊರತೆಯಾದಾಗ ಗಂಡಸರು ನನಗೂ ಬಯಕೆಯಿಲ್ಲವೆ ಎನ್ನುವುದರ ಬದಲು “ನಾನೂ ಗಂಡಸಲ್ಲವೆ?” ಎನ್ನುವುದರ ಐತಿಹ್ಯ ಏನು?

246: ಅನ್ಯೋನ್ಯತೆಗೆ ಹುಡುಕಾಟ – 25

ಶರೀರದಿಂದ ಹೆಣ್ಣಾದ ಸರಳಾ ಪುರುಷ ಪ್ರಧಾನ ಸಮಾಜದ ಆಘಾತದಿಂದ  ಜರ್ಜರಿತಳಾಗಿದ್ದಾಳೆ. ಎಲ್ಲರಿಂದ ದೂರವಾಗಿ ಒಂಟಿತನವನ್ನು ಅಪ್ಪಿಕೊಳ್ಳಲು ಹೊರಟಿದ್ದಾಳೆ. ಈ ಪ್ರಸಂಗದಲ್ಲಿ ಸರಳೆಯ ಗಂಡನ ಪಾತ್ರವೇನು?

ಭೀಮಯ್ಯ (ಹೆಸರು ಬದಲಾಯಿಸಿದೆ) ಸ್ನಾತಕೋತ್ತರ ಪದವೀಧರ, ಸಂಭಾವಿತ. ಮೊದಲು ಕುಟುಂಬದ ಮಗನಾಗಿ, ಎಲ್ಲರೊಂದಿಗನಾಗಿ, ಇತ್ತೀಚೆಗಷ್ಟೆ ಹೆಂಡತಿಗೆ ಗಂಡನಾಗುತ್ತಿದ್ದಾನೆ. ಸರಳೆಯ ಸಮಸ್ಯೆಯಿಂದ ತನಗೂ ಸಮಸ್ಯೆ ಆಗಿದೆ. ಹೆಂಡತಿಯ ಅಪೇಕ್ಷೆಯಂತೆ ಸ್ವಲ್ಪಕಾಲ ಕಾಮಾಪೇಕ್ಷೆಯನ್ನು ತಡೆಹಿಡಿದಿದ್ದಾನೆ – ಅದರ ಬಗೆಗೆ ಹಕ್ಕು ಕಳೆದುಕೊಂಡ ನಿರಾಸೆಯೂ ಹೆಂಡತಿಯ ವಿರುದ್ಧ ಆಕ್ಷೇಪಣೆಯೂ ಇದೆ. ಆಕೆಯನ್ನು ಹೊಡೆದಿದ್ದಕ್ಕೆ ವಿಷಾದತೆಯಿದ್ದು, ಆಗಿನಿಂದ ಸ್ವಲ್ಪ ಹೆಚ್ಚೆನಿಸುವ (ಸರಳೆಯ ಪ್ರಕಾರ “ಮೈಮೇಲೆ ಬಿದ್ದು”) ಪ್ರೀತಿ ತೋರಿಸುತ್ತಿದ್ದಾನೆ. ಅವಳು ಸುಧಾರಿಸುವ  ಭರವಸೆ ಸಿಕ್ಕರೆ ಕೂಟದಾಸೆಯನ್ನು ಇನ್ನಷ್ಟು ಕಾಲ ತಡೆದುಕೊಳ್ಳಬಲ್ಲ. ಆದರೆ, ಸರಳಾ ಕಾಮಕೂಟ ಬೇಡವೆನ್ನುವುದರ ಹಿನ್ನೆಲೆಯೇ ಅವನಿಗೆ ಅರ್ಥವಾದಂತೆ ಕಾಣಲಿಲ್ಲ. ಕೆದಕಿ ಕೇಳಿದಾಗ, ”ಆರು ತಿಂಗಳು ಕಾಯ್ದೆ, ಇನ್ನೆಷ್ಟು ದಿನ ಕಾಯಲಿ? ನಾನೂ ಗಂಡಸಲ್ಲವೆ?” ಎಂದ. ಅಂದರೆ, ಆಕೆಗೆ ಕಾಲಾವಕಾಶ ಕೊಡುತ್ತಿರುವುದು ತನಗೆ ಹತ್ತಿರವಾಗಲೆಂದಷ್ಟೆ. ಅವಳ ಗಾಯಮಾಯುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಒಳಗೊಳ್ಳುವುದು ಅವನ ತಲೆಯಲ್ಲಿಲ್ಲ. ಸಾಕಾಗದ್ದಕ್ಕೆ, ತನ್ನ ಮನೆಯವರಿಗೆ ಹೊಂದಿಕೊಳ್ಳುವಂತೆ ತಿದ್ದಿಕೊಳ್ಳುತ್ತಿಲ್ಲ ಎಂದು ಅಸಮಾಧಾನವೂ ಇದೆ.

ಎಲ್ಲಕ್ಕಿಂತ ಮಹತ್ತರವಾದ ಅಂಶ ಇನ್ನೊಂದಿದೆ. “ನಾನೂ ಗಂಡಸಲ್ಲವೆ?” ಎನ್ನುವ ಅವನ ಧಾಟಿಯನ್ನು ಗಮನಿಸಿ. ಇದರಲ್ಲೇನು ಸಂದೇಶವಿದೆ? “ಹೆಣ್ಣಿಗೆ ಭದ್ರತೆ, ಸುರಕ್ಷಿತತೆ ಒದಗಿಸುವ ಗುತ್ತಿಗೆ ತೆಗೆದುಕೊಂಡಿದ್ದೇನೆ. ಪ್ರತಿಯಾಗಿ ಆಕೆಯ ಶರೀರದ ಮೇಲೆ ಸ್ವಾಮ್ಯ ಪಡೆದುಕೊಂಡಿದ್ದೇನೆ!” ಇದೊಂದೇ ಮಾತಿನಲ್ಲಿ ಐದುಸಾವಿರ ವರ್ಷಗಳ ಉದ್ದಕ್ಕೂ ಗಂಡು ಹೆಣ್ಣನ್ನು ದಾಂಪತ್ಯದ ಹೆಸರಿನಲ್ಲಿ ನಡೆಸಿಕೊಂಡು ಬಂದ ಗುಲಾಮಗಿರಿಯ ಹೆಜ್ಜೆ ಗುರುತುಗಳಿವೆ. ಮಕ್ಕಳನ್ನು ಪೋಷಿಸಲು ನೆರವಾಗುವ ನೆಪದಲ್ಲಿ ಗಂಡಿನ ಭಾವಹೀನ ಪಾರಮ್ಯದ ಐತಿಹ್ಯ ಇಲ್ಲಿ ಎದ್ದುಕಾಣುತ್ತದೆ. ಇದರ ಪರಿಣಾಮ ಸರಳೆಯ ಮೇಲೆ ಏನಾಗುತ್ತಿದೆ ಎಂಬುದನ್ನು ಅವನಿಗೆ ಅರ್ಥಮಾಡಿಸಬೇಕು. ಸರಳೆಗೆ ಭದ್ರತೆ, ಸುರಕ್ಷಿತತೆ ಬೇಕಿಲ್ಲ – ಓದಿರುವ ಆಕೆಗೆ ಸ್ವಾವಲಂಬಿ ಆಗಲು ಸಮಸ್ಯೆಯಿಲ್ಲ. ಗಾಯಗಳದ್ದೇ ಸಮಸ್ಯೆ. ಅವು ದಾಂಪತ್ಯದಲ್ಲಿದ್ದೇ ಮಾಯಬೇಕಾದರೆ ಪುರುಷ ಪಾರಮ್ಯದ ಸೋಂಕಿಲ್ಲದ ಅಪರಿಮಿತ ಆಸರೆ ಹಾಗೂ ನೆರವು ಅತ್ಯಗತ್ಯ.

ಭೀಮಯ್ಯನೆದುರು ಎರಡು ಉದ್ದೇಶಗಳನ್ನು ಇಟ್ಟೆ: ಒಂದು, ಸರಳೆ ಗುಣವಾಗಲು ಸಹಾಯ ಮಾಡುವುದು; ಎರಡು, ತನಗೋಸ್ಕರ ಅವಳೊಡನೆ ಅನ್ಯೋನ್ಯತೆಯನ್ನು ಕಟ್ಟಿಕೊಳ್ಳುವುದು. ಆತ ವ್ಯಾವಹಾರಿಕ ತರ್ಕವನ್ನು ಮುಂದಿಟ್ಟ. ಸರಳೆಯನ್ನು ಅಲಕ್ಷಿಸಿದವರು ಆಕೆಯ ಮನೆಯ ಗಂಡಸರು ತಾನೆ? ಅವರ ಹೊಣೆ ತನಗೇಕೆ? ನಾನು ಸ್ಪಷ್ಟಪಡಿಸಬೇಕಾಯಿತು. “ನಾವು ಗಂಡಸರೆಲ್ಲ ಒಂದು” ಎಂಬ ಸಮಷ್ಟಿಪ್ರಜ್ಞೆ (collective consciousness) ಒಂದಿದೆ – ಅವನೂ ಅದರಲ್ಲಿ ಸೇರಿದ್ದಾನೆ. ಉದಾಹರಣೆಗೆ, ಆಕೆಯ ಅಣ್ಣ, ಅಪ್ಪ “ತನ್ನ ಹೆಂಡತಿ”ಯನ್ನು ಹೊಡೆದಿರುವುದಕ್ಕೆ ಆತನ ಪ್ರತಿಕ್ರಿಯೆಯೇ ಇಲ್ಲ. ಹೀಗಾಗಿ, “ನಾವು ಗಂಡಸರು ಸರಿಯಿಲ್ಲ, ಆದರೆ ನಾನು ಸರಿಯಿದ್ದೇನೆ” ಎಂದೆನ್ನುವುದು ಡಾಂಭಿಕತನ. ಒಂದುಕಡೆ ಪುರುಷ ಪ್ರಧಾನತೆಗೆ ಸೈಗುಟ್ಟಿ ಇನ್ನೊಂದು ಕಡೆ ಪ್ರೀತಿ ತೋರಿಸುವುದು ಕುರುಡು ಸ್ವಾರ್ಥವಾಗುತ್ತದೆ. ಅದಲ್ಲದೆ, ಇತರ ಗಂಡಸರು ಕೀಳಾಗಿ ಕಂಡಿರುವ ಹೆಣ್ಣಿಗೆ ಗೌರವ ತೋರಿಸುವುದು ಗಂಡಸಾದ ಅವನ ವೈಯಕ್ತಿಕ ಜವಾಬ್ದಾರಿ. ಹಾಗಾಗಿ ನೇರವಾಗಿಯೇ ಕೇಳಿದೆ: ಗಂಡುಜಾತಿಗೆ ಇತರ ಗಂಡಸರು ಬಳಿದ ಕಲಂಕವನ್ನು ಸ್ವತಃ ಸ್ವಚ್ಛಗೊಳಿಸಲು ತಯಾರಿದ್ದಾನೆಯೆ? ಭೀಮಯ್ಯ ಗೊಂದಲಕ್ಕೆ ಒಳಗಾದ. ಪರಿಹಾರದ ರೂಪುರೇಷೆಯನ್ನು ಮುಂದಿಟ್ಟೆ.

ತುಳಿತಕ್ಕೆ ಒಳಗಾದ ಹೆಣ್ಣಿನ ಸಂಗದಲ್ಲಿ ತಾನು ಗಂಡು ಎನ್ನುವುದನ್ನು ಪೂರ್ತಿ ಮರೆತುಬಿಡಬೇಕು. ತನ್ನಾಸೆಗಳನ್ನು ಪೂರೈಸಲು ಆಕೆಯಿದ್ದಾಳೆ ಎಂಬುದನ್ನೂ ಬದಿಗಿಡಬೇಕು. ಯಾಕೆ? ಪ್ರೀತಿಸುವ ಗಂಡೇ ಆಗಲಿ, ಬಯಸಿದಾಗ ಕೊಡಲು ಸಿದ್ಧಳಿರಬೇಕು ಎನ್ನುವುದು ಆಕೆಯ ದೇಹಪ್ರಜ್ಞೆಯ ವಿರುದ್ಧ ಆಗುತ್ತದೆ. ಆಗಾಕೆಯ ಹಳೆಯ ಗಾಯಗಳು ತೆರೆದುಕೊಳ್ಳುತ್ತವೆ. ಬದಲಾಗಿ ನಿಸ್ವಾರ್ಥ ಸ್ನೇಹ ಸಂಬಂಧವನ್ನು ಅನಿರ್ದಿಷ್ಟ ಕಾಲ ಕೊಡುತ್ತ ಆಕೆಯ ನಂಬಿಕೆಗೆ ಪಾತ್ರನಾಗಬೇಕು. ಆಕೆಗೆ ಇಷ್ಟವಾದ ದಿಕ್ಕಿನಲ್ಲಿ ಸ್ವತಂತ್ರವಾಗಿ ಬೆಳೆಯಲು ಜಾಗ ಬಿಡಬೇಕು. ಜೊತೆಗೆ ಮನೋಚಿಕಿತ್ಸೆಯೂ ಬೇಕು ಎಂದೆ.

ಈ ಅನಿರ್ದಿಷ್ಟ ವ್ಯವಹಾರ ತನಗೆ ಭಾರವಾಯಿತು ಎಂದ. ನಾನು ಇನ್ನೊಂದು ವಿಚಾರ ಮುಂದಿಟ್ಟೆ. ವಾಸ್ತವವಾಗಿ, ಅವಳ ನೋವಿನ ಮೂಲಕವೇ ಬಾಂಧವ್ಯವನ್ನು ಬೆಳೆಸಬಹುದು. ನಿರಂತರ ನೋವು-ನರಳಿಕೆಗೆ ಪ್ರತಿಯಾಗಿ ಕೊಡುವ ಪ್ರೀತಿ-ಆಸರೆಗಳೂ ನಿರಂತರ ಆಗಿದ್ದರೆ ಆ ಸ್ತರದಲ್ಲೇ ಬಾಂಧವ್ಯದ ನಮೂನೆಯೊಂದು ಹುಟ್ಟುತ್ತದೆ. ಹಾಗಾಗಿ ನರಳಿಕೆಯೆಂದು ದೂರವಿಡದೆ ಬಾಂಧವ್ಯವನ್ನು ನಿರಂತರವಾಗಿ ಜೋಡಿಸುವ ಕೊಂಡಿಯೆಂದು ಬರಮಾಡಿಕೊಳ್ಳಬಹುದು. ಅದಕ್ಕವನು ಇಬ್ಬರ ಕೊಡುಗೆಯೂ ಸಮವಾಗಿ ಇರಬೇಕಲ್ಲವೆ ಎಂದ. ಹಾಗೇನಿಲ್ಲ, ಯಾಕೆಂದರೆ ಎಲ್ಲರ  ಶಕ್ತಿಸಾಮರ್ಥ್ಯಗಳು ಸದಾಕಾಲ ಒಂದೇಸಮ ಇರುವುದಿಲ್ಲ. ಹಾಗಾಗಿ ಪಾಲು 50-50 ಬದಲು 60-40, ಅಥವಾ 20-80 ಆಗಬಹುದು, ಕೆಲವೊಮ್ಮೆ 0-100 ಆಗಬಹುದು. ಮತ್ತೆ ತಿರುವುಮುರುವೂ ಆಗಬಹುದು. ಒಬ್ಬರು ನೆಲಕಚ್ಚಿದರೆ ಇನ್ನೊಬ್ಬರು ನೆರವು ನೀಡಬೇಕು. ಇದು ಕರ್ತವ್ಯ ಎನ್ನಬಾರದು. ನಿನಗೆ ಸಹಾಯ ಮಾಡುವುದೇ ನನಗಿಷ್ಟವಾದ ವಿಷಯ ಎನ್ನುವ ಮಟ್ಟಿಗೆ ಹೊಸ ಸ್ವಭಾವಕ್ಕೆ ಹುಟ್ಟುಹಾಕಬೇಕು ಎಂದೆ.

ದಾಂಪತ್ಯಕ್ಕೆ ಇಷ್ಟೆಲ್ಲ ಒದ್ದಾಡಬೇಕೆ ಎಂದುದಕ್ಕೆ, ಬಾಂಧವ್ಯ ಕಟ್ಟಿಕೊಳ್ಳುವುದು ಎಂದರೆ ಅಷ್ಟು ಸುಗಮ ಅಲ್ಲ ಎಂದೆ. ತನ್ನ ಪೈಕಿ ಯಾವ ಹೆಂಗಸರಿಗೂ ಹೀಗಿಲ್ಲ ಎಂದ. ಒಂದೋ ಅವರಿಗೆ ಸರಳೆಯಷ್ಟು ಗಾಯಗಳಾಗಿಲ್ಲ. ಅಥವಾ ಸರಳೆಯಂತೆ ನೋವಿನ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ಹೊರಬರಲು ಪ್ರಯತ್ನಿಸುತ್ತಿಲ್ಲ. ನರಳಿಕೆಯ ಮೇಲೆ ನಗುವಿನ ಮುಖವಾಡ ಧರಿಸಿದ್ದಾರಷ್ಟೆ.

ವಿಷಯ ಆಳಕ್ಕೆ ಹೋದಂತೆ ಅನಿಶ್ಚಿತತೆಯ ಝಂಝಾವಾತದಲ್ಲಿ ಭೀಮಯ್ಯನ ಮುಖದಮೇಲೆ ಅಸಮರ್ಥತೆಯ ಛಾಯೆ ದಟ್ಟವಾಗುತ್ತ ಹೋಯಿತು. ಚಡಪಡಿಸುತ್ತ ಕೇಳಿದ: “ಹಾಗಾದರೆ ಈಗ ನಾನೇನು ಮಾಡಬೇಕು?” ಅವನ ಕುಟುಂಬದ ವಾತಾವರಣದಲ್ಲಿ ಅವರಿಬ್ಬರೇ ಸಂವಹನಿಸಲು ಪ್ರತ್ಯೇಕ ಅವಕಾಶವಿಲ್ಲ. ಅದರಲ್ಲೂ ಭಾವನಾತ್ಮಕವಾಗಿ ವ್ಯವಹರಿಸಲು ಗಂಡಹೆಂಡತಿ ಪರಸ್ಪರರ ತೋಳುಗಳಲ್ಲಿ ಗಂಟೆಗಟ್ಟಲೆ ಇರಬೇಕಾಗುತ್ತದೆ. ಅದು ಈಗಿರುವ ಮನೆಯಲ್ಲಿ ಸಾಧ್ಯವೆ?

ಬೇರೆ ಮನೆಯ ವಿಚಾರ ಭೀಮಯ್ಯನ ಮುಖದಲ್ಲಿ ಥಟ್ಟನೆ ಮೂಡಿತು. ತನ್ನಿಂದ ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ. ಪ್ರತ್ಯೇಕ ಮನೆಯು ಸ್ವಂತಿಕೆಯ ಲಕ್ಷಣ ಎನ್ನುವುದು ಅವನಿಗೆ ಅನಿಸಿದಂತೆ ಕಾಣಲಿಲ್ಲ. ಬೇರೆ ಮನೆಯೆಂದರೆ ದೀರ್ಘಕಾಲದ ಮಧುಚಂದ್ರದಂತೆ ಎಂದು ವಿವರಿಸಿದೆ. ಅವನ ಪ್ರಕಾರ ಅದು ತನ್ನವರನ್ನು ಧಿಕ್ಕರಿಸಿದಂತೆ. ಅವನ ಸಾಂಪ್ರದಾಯಿಕ ಮೌಲ್ಯಗಳ ವಿರುದ್ಧ. ಬಹಳವಾದರೆ ಹೆಂಡತಿಯೊಂದಿಗೆ ಒಂದೆರಡು ಗಂಟೆ ಹೆಚ್ಚಿಗೆ ಕಳೆಯಬಲ್ಲೆ ಎಂದ. ಸರಳೆಗೆ ಅದೇನೂ ಸಾಲದು. ಅಲ್ಲದೆ ಮೈಮೇಲೆ ಬೀಳುವ ಬಂಧುಗಳಿಂದ ಆಕೆಯ ಮನಶ್ಶಾಂತಿ ಭಂಗವಾಗುತ್ತದೆ. ಇಬ್ಬರಿಗೂ ಯೋಚಿಸಲು ಹಚ್ಚಿ ಅನಿಶ್ಚಿತತೆಯಲ್ಲೇ ಬೀಳ್ಕೊಟ್ಟೆ. ಮುಂದೇನಾಯಿತು ಎಂಬುದು ನನಗಿನ್ನೂ ಗೊತ್ತಾಗಿಲ್ಲ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಾಕಷ್ಟು ಭದ್ರತೆ, ಸುರಕ್ಷಿತತೆ ಕೊಡುವ ಪರಿಸರವು ಸಿಕ್ಕಾಗ ಎರಗು-ತೊಲಗುಗಳ ಹೋರಾಟ ತಣ್ಣಗಾಗುತ್ತ ಸಹಜ ಕಾಮುಕತೆ ಕೆರಳುತ್ತದೆ.

245: ಅನ್ಯೋನ್ಯತೆಗೆ ಹುಡುಕಾಟ – 24

ಗಂಡನ ಮನೆಯಲ್ಲಿ ಅನ್ಯಾಯಕ್ಕೆ ಒಳಗಾಗಿ ಹೊರಹಾಕಲ್ಪಟ್ಟು, ಮೂಲ ಕುಟುಂಬದಿಂದಲೂ ಪರಿತ್ಯಕ್ತಳಾಗಿ ನಡುಬೀದಿಗೆ ಇಳಿಯಲಿರುವ ಸರಳೆಯ ಬಗೆಗೆ ಮಾತಾಡುತ್ತಿದ್ದೇವೆ. ಭದ್ರತೆ, ಸುರಕ್ಷಿತತೆ ಕೊಡುವ ಏಕೈಕ ವ್ಯಕ್ತಿಯಾದ ಗಂಡನಿಂದಲೂ ದೂರವಾಗಿ ಒಬ್ಬಳೇ ಬದುಕಬೇಕೆಂದು ಬಯಸುವವಳ ಅಂತರಾಳದಲ್ಲಿ ನಡೆಯುತ್ತಿರುವ ಸಂಘರ್ಷದ ಬಗೆಗೆ ತಿಳಿಯೋಣ.

ಸರಳಾ ಗಂಡನಿಂದ ವಿಮುಖಳಾಗುವುದರ ಹಿನ್ನೆಲೆ ಅರ್ಥವಾಗಬೇಕಾದರೆ ಮಾನವರ ಮೂಲಭೂತ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈ ಅಗತ್ಯಗಳನ್ನು ಅಬ್ರಾಹಮ್ ಮ್ಯಾಸ್ಲೋವ್  (Abraham Maslow) ಐದು ಹಂತಗಳಲ್ಲಿ  ಪೇರಿಸುತ್ತಾನೆ. ಮೊದಲ ಅಗತ್ಯವೆಂದರೆ ಅನ್ನಾಹಾರ, ವಿಶ್ರಾಂತಿ; ಎರಡನೆಯ ಅಗತ್ಯವು ಭದ್ರತೆ ಹಾಗೂ ಸುರಕ್ಷಿತತೆಯ ಬಗೆಗಿದೆ. ಇವೆರಡೂ ಪೂರೈಕೆ ಆದಮೇಲೆಯೇ ಸಂಗಾತಿಯೊಡನೆ ಸಂಬಂಧ, ಹಾಗೂ ಸಂಬಂಧದಲ್ಲಿ ಸಂತಾನವನ್ನು ಪಡೆಯುವ ಮೂರನೆಯ ಹಂತಕ್ಕೆ ಮನಸ್ಸು ತಯಾರಾಗುತ್ತದೆ. ಇವಿಲ್ಲದಿದ್ದರೆ ಕಟ್ಟಿಕೊಂಡ ಸಂಬಂಧವನ್ನು ನಿರ್ವಹಿಸಲು ಆಗಲಾರದು. (ಅಂದಹಾಗೆ, ಮೊದಲ ಮೂರು ಹಂತಗಳನ್ನು “ಅನಿವಾರ್ಯ ಅಗತ್ಯ”ಗಳೆಂದು ಗಣಿಸಲಾಗುತ್ತದೆ. ಉಳಿದೆರಡು ಹಂತಗಳು ಆತ್ಮಪ್ರತಿಷ್ಠೆ ಆತ್ಮಗೌರವ, ಹಾಗೂ ಆತ್ಮತೃಪ್ತಿಯನ್ನು ಪಡೆಯುವ ಬಗೆಗಿವೆ.) ಇನ್ನು, ಮೊದಲ ಮೂರು ಅಗತ್ಯಗಳನ್ನು ಪೂರೈಸಲು ಪ್ರಾಣಿಗಳಿಗಿರುವಂತೆ ನಮ್ಮಲ್ಲೂ ಮೂರು ಹುಟ್ಟುಪ್ರವೃತ್ತಿಗಳು ಸಜ್ಜಾಗಿ ನಿಂತಿವೆ: ಅಪಾಯದಿಂದ ಸ್ವರಕ್ಷಣೆ, ಆಹಾರ-ನೆಲೆಗಾಗಿ ಹುಡುಕಾಟ, ಹಾಗೂ ಸಂಗಾತಿಯ ಜೊತೆಗೂಡಿ ಸಂತಾನೋತ್ಪತ್ತಿ. ಆಹಾರ, ಭದ್ರನೆಲೆ, ಹಾಗೂ ಸಂಗಾತಿಯ ಹುಡುಕಾಟದಲ್ಲಿ ಹೆಚ್ಚಿನಂಶ ಎರಗು/ತೊಲಗುಗಳ (fight/flight) ಹೋರಾಟವು ಸದಾ ಜಾಗ್ರತವಾಗಿರುತ್ತದೆ (ಉದಾ. ಯೋಗ್ಯ ಸಂಗಾತಿ ಬೇಕಾದರೆ ಒಳ್ಳೆಯ ಉದ್ಯೋಗಕ್ಕೆ ಒದ್ದಾಡಬೇಕು; ಅದಕ್ಕಾಗಿ ಒಲ್ಲದ ಪರೀಕ್ಷೆಗೆ ಸಜ್ಜಾಗಬೇಕು). ಹೋರಾಟಕ್ಕೆ ಹೆಚ್ಚಿನ ಬುದ್ಧಿ ಬೇಕಿಲ್ಲ; ನಮ್ಮ ಮೆದುಳಿನ ಕೆಳಕೇಂದ್ರವಾದ ಅಮಿಗ್ಡ್ಯಾಲಾ (amygdala) ಸಾಕು – ಇದೇ ಹಾದಿಹಿಡಿದು ಹೆಚ್ಚಿನ ವಿವಾಹಗಳು ನಿಶ್ಚಿತಗೊಳ್ಳುತ್ತವೆ. ಬದುಕಿಗೆ ಸಾಕಷ್ಟು ಭದ್ರತೆ, ಸುರಕ್ಷಿತತೆ ಕೊಡುವ ಸ್ಥಿರವಾದ ಪರಿಸರ ಸಿಕ್ಕಾಗ ಎರಗು-ತೊಲಗುಗಳ ಹೋರಾಟ ತಣ್ಣಗಾಗುತ್ತ ಸಹಜ ಕಾಮುಕತೆ ಕೆರಳುತ್ತದೆ (ಉದಾ. ಮನವರಳುವ ಪ್ರವಾಸಕ್ಕೂ ಕಾಮಾಪೇಕ್ಷೆ ಹೆಚ್ಚುವುದಕ್ಕೂ ಸಂಬಂಧವಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು). ಬುದ್ಧಿ-ಕೌಶಲ್ಯಗಳಿಂದ ಕೂಡಿದ ಚೆಲ್ಲಾಟ, ಸರಸ, ಪ್ರಣಯಕೇಳಿ ಶುರುವಾಗುವುದು ಇಲ್ಲಿಂದಲೇ. ಹಾಗೆಂದು ಎರಗು-ತೊಲಗುಗಳ ಹಂತದಲ್ಲಿ ಲೈಂಗಿಕ ಕ್ರಿಯೆ ಸಾಧ್ಯವಿಲ್ಲ ಎಂದಿಲ್ಲ. ಆದರೆ ಆಗ ನಡೆಯುವುದು ಹಸಿಕಾಮದಿಂದ ಪ್ರೇರಿತವಾದ ಮೃಗೀಯ “ಸಂಭೋಗ”ವೇ ವಿನಾ ಬುದ್ಧಿ-ಭಾವನೆ-ಪಾರಸ್ಪರಿಕತೆಗಳು ಮೇಳೈಸುವ “ಕಾಮಕೂಟ”ವಲ್ಲ.

ಮೇಲಿನ ಸಿದ್ದಾಂತವನ್ನು ಸರಳೆಯ ದಾಂಪತ್ಯಕ್ಕೆ ಜೋಡಿಸಿ ಸರಳೀಕರಿಸಿದರೆ ಏನು ಗೊತ್ತಾಗುತ್ತದೆ? ಮೂಲ ಕುಟುಂಬದಿಂದ ಆಕೆಗೆ ಭದ್ರತೆ, ಬೆಲೆ ಸಿಗದೆ ಬರೀ ತಿರಸ್ಕಾರ ಸಿಕ್ಕಿದೆ. ಗಂಡನ ಮನೆಯಲ್ಲೂ ಅದು ಸಿಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಅಲ್ಲಿ ನಡೆಸಿದ ಹೋರಾಟವನ್ನೇ ಇಲ್ಲಿ ಮುಂದುವರಿಸಿಕೊಂಡು ಬಂದಿದ್ದಾಳೆ – ಅದನ್ನೇ ಹಟಮಾರಿತನ ಎಂದು ಹೆಸರಿಸಲಾಗುತ್ತಿದೆ. ಪ್ರತಿಯೊಬ್ಬರ ಹಠದ ಹಿಂದೆ ಅವರಿಗೆ ಅರಿವಿಲ್ಲದ ಒಳವುದ್ದೇಶ ಇರುತ್ತದೆ. ಹಟದ ಮೂಲಕ ತನ್ನ ಜೊತೆಗಿನ ಸಂಪರ್ಕವನ್ನು ಇಟ್ಟುಕೊಳ್ಳುತ್ತ “ನಾನು ಬದುಕಿದ್ದೇನೆ” ಎಂದು ಖಚಿತಪಡಿಸಿಕೊಳ್ಳುತ್ತ ಇರುವುದು. ಹಟ ಇಲ್ಲದಿದ್ದರೆ ಖಿನ್ನತೆ, ಖಾಲಿತನ, ಆತ್ಮಹೀನತೆ ಮುಂತಾದವುಗಳಿಗೆ ಬಲಿಯಾಗಬಹುದು. ಒಂದುರೀತಿ ಹೇಳಬೇಕೆಂದರೆ, ಸರಳೆಯ ಹಟಮಾರಿತನಕ್ಕೆ ರಕ್ಷಣಾತ್ಮಕ ಮೌಲ್ಯವಿದೆ.

ಇನ್ನು, ಗಂಡಹೆಂಡಿರ ನಡುವೆ ಏಕಾಂತದಲ್ಲಿ ಏನು ನಡೆಯುತ್ತಿದೆ? ಪ್ರೀತಿಸಲು, ಬೆಲೆಕೊಡಲು ಅನರ್ಹಳು ಎನ್ನುವ ಕಠೋರ ಸಂದೇಶದಿಂದ ಘಾತಿಸಲ್ಪಡುತ್ತಿದ್ದ ಬಂದಿದ್ದ ಆಕೆಗೆ ಮೊಟ್ಟಮೊದಲ ಸಲ ಗಂಡೊಬ್ಬ “ನಾನು ನಿನಗೆ ಬೆಲೆಕೊಡುತ್ತೇನೆ” ಎಂದು ಮುಂದೆಬಂದಿದ್ದಾನೆ. ಅವನ ಅಪ್ಪುಗೆಯಲ್ಲಿ ಭದ್ರತೆಯೂ ಆರಾಮವೂ ಅನಿಸುತ್ತಿದೆ. ಆದರೆ ಇದೆಲ್ಲ ಆಕೆಗೆ ಹೊಚ್ಚಹೊಸದು. ಸುಖವೆನಿಸಿದರೂ ಅಪರಿಚಿತವಾಗಿರುವ, ನಿಜವಾಗಿದ್ದರೂ ವಿಚಿತ್ರ ಅನ್ನಿಸುವ ಇದು ಮನಕ್ಕೆ ಒಗ್ಗಲು, ಮೈಗೂಡಲು ಸಮಯ ಬೇಕು – ಅದಕ್ಕಾಗಿಯೇ ಆರು ತಿಂಗಳು ತೆಗೆದುಕೊಂಡಿದ್ದಾಳೆ. ಭದ್ರತೆಯ ಸೆಲೆ ನಿರಂತರವಾಗಿ ಬೇಕು ಎಂಬಾಸೆ ಮೊಳೆಯುತ್ತಿರುವಾಗಲೇ ಗಂಡ ಥಟ್ಟನೆ ತನ್ನೆದೆಯಿಂದ ಕೆಳಗಿಳಿಸಿ, ಇವಳ ಮೇಲೆ ಬರುತ್ತಾನೆ. ಇಲ್ಲಿಯ ತನಕ ಮೇಲಿದ್ದವಳು ಈಗ ಕೆಳಗಾಗುತ್ತಾಳೆ. ಇವನೇನು ವಿಚಿತ್ರ ನಡೆಸಲು ಹೊರಟಿದ್ದಾನಲ್ಲ ಎಂದು ಯೋಚಿಸುವಷ್ಟರಲ್ಲೇ ಅಲುಗಾಟದ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾಳೆ. ಮೈಗೆ ಒಗ್ಗದಿರುವುದನ್ನು ತಡೆಯಲು ನೋಡುತ್ತಾಳೆ. ಆದರೆ ಅವನ ಮೈಮನಗಳಲ್ಲಿ ಮುಂಚೆಗಿದ್ದ ಕಮನೀಯತೆ ಮಾಯವಾಗಿ ಕಠಿಣತೆ ಕಾಣುತ್ತದೆ. ತನ್ನನ್ನು ತುಳಿದಿರುವ ಎಲ್ಲ ಗಂಡಸರನ್ನೂ ಸಂಕೇತಿಸುವ ದೈತ್ಯರೂಪ ಅವಳ ಕಣ್ಣೆದುರು ಪ್ರತ್ಯಕ್ಷವಾಗುತ್ತ, ನನ್ನನ್ನು ತಡೆಯುವ ಧಾರ್ಷ್ಟ್ಯ ನಿನಗಿದೆಯೆ ಎಂದು ಕೆಣಕುತ್ತದೆ. ವಿರೋಧಿಸಲು ಭಯಪಟ್ಟು ಮೈ ಒಪ್ಪಿಸುತ್ತಾಳೆ. ಅದರಿಂದ ಅವನಿಗೇನು ಸಿಗುತ್ತದೋ ದೇವರೇ ಬಲ್ಲ. ತನಗೆ ಮಾತ್ರ ಆ ಜಾಗ ಒದ್ದೆಯಾಗಿ ಮೂತ್ರಕ್ಕೆ ಹೋಗಬೇಕೆಂದು ಅನ್ನಿಸುತ್ತದೆ ಅಷ್ಟೆ. ತನ್ನನ್ನು ಆಕ್ರಮಿಸಿ ಅವನು ಯಾವ ಸುಖ ಪಡೆದ ಎನ್ನುವುದು ಆಕೆಗೆ ಇದುವರೆಗೂ ಅರ್ಥವಾಗಿಲ್ಲ. ಮತ್ತೆ ತಬ್ಬಿಕೊಳ್ಳುತ್ತಾನೋ ಎಂದರೆ ಅವನು ಮುತ್ತುಕೊಟ್ಟಂತೆ ಮಾಡಿ ಮುಖ ತಿರುಗಿಸಿಕೊಂಡು ಮಲಗುತ್ತಾನೆ. ಕೊನೆಗೆ ತನ್ನ ಪಾಲಿಗೆ ಉಳಿಯುವುದು ಭದ್ರತೆಯಿಂದ ಕಳಚಿಕೊಂಡ ತತ್ತರಿಕೆ, ಖಾಲಿಭಾವ, ಒಂಟಿತನ, ಹಾಗೂ ಅದರದೇ ಪುನರಾವೃತ್ತಿ. (ಈ ಮನಃಸ್ಥಿತಿಗೆ Complex PTSD ಎಂದು ಹೆಸರಿದೆ. ಇದು ಅತ್ಯಾಚಾರ, ಅಪಘಾತ ಮುಂತಾದ ಒಂದುಸಲದ ಆಘಾತಗಳಿಗಿಂತಲೂ ಭಿನ್ನವಾಗಿದೆ. ತಾನು ನಂಬಿದ ವ್ಯಕ್ತಿಗಳಿಂದಲೇ ನಡೆಯುವುದು, ಎಡೆಬಿಡದೆ ನಿರಂತರವಾಗಿ ಮುಂದುವರಿಯುವುದು, ಹಾಗೂ ಎರಗು-ತೊಲಗು ಎರಡೂ ಅಸಾಧ್ಯವಾಗಿ ಆತ್ಮವು ತತ್ತರಿಸಿ ಹೆಪ್ಪುಗಟ್ಟುವುದು ಇದರ ಲಕ್ಷಣಗಳು.) ಇಷ್ಟರಲ್ಲಿ ಸರಳಾಗೆ ಒಂದಂಶ ಮನದಟ್ಟಾಗಿದೆ: ಅವಳನ್ನು ಬಳಸಿಕೊಳ್ಳುವುದಕ್ಕಾಗಿ ಆತ ತನ್ನೆದೆಯ, ಅಪ್ಪುಗೆಯ ಗಾಳ ಹಾಕುತ್ತಿದ್ದಾನೆ. ವಾಸ್ತವವಾಗಿ ಅವನಿಗೆ ತಾನಿಷ್ಟವಿಲ್ಲ. ತನ್ನೊಳಗಿರುವ ಜಾಗವನ್ನು ಇಷ್ಟಪಡುತ್ತಿದ್ದಾನೆ, ಅಷ್ಟೆ. ತನ್ನ ಬದಲು ಇನ್ನೊಂದು ಹೆಣ್ಣಿದ್ದರೂ ಅವನು ಮಾಡುವುದು ಅಷ್ಟೆ… ಮುಂದೆ ತರ್ಕವನ್ನು ಇತರ ಗಂಡಸರಿಗೆ ವಿಸ್ತರಿಸುತ್ತಾಳೆ. ತನ್ನ ಅಪ್ಪ, ಅಣ್ಣ, ಮಾವ ಮುಂತಾದವರೂ ಇದನ್ನೇ ಮಾಡುತ್ತಿದ್ದಾರೆ. ಅಮ್ಮನ ಮೇಲೂ ಇದೇ ನಡೆದಿದೆ. ಮದುವೆ ಎಂದರೆ ಹೆಣ್ಣಿನಮೇಲೆ ಹಕ್ಕು ಸ್ಥಾಪನೆಗೆ, ಹಾಗೂ ಇಷ್ಟಬಂದಂತೆ ಬಳಸಿಕೊಳ್ಳುವುದಕ್ಕೆ. ಅದಕ್ಕೇ ಅಪ್ಪ, ಅಣ್ಣ ಗಂಡನ ಮನೆಗೆ ತಳ್ಳಲು ನೋಡಿದ್ದಾರೆ. ಅವರಿಗಿಂತ ಗಂಡ ಹೇಗೆ ಭಿನ್ನವಾಗುತ್ತಾನೆ? ಅವರು ಕೊಟ್ಟ ಸಂದೇಶವನ್ನೇ ಇವನೂ ಕೊಡುತ್ತಿದ್ದಾನೆ: “ನನ್ನ ಬಳಕೆಗೆ ಒಪ್ಪಿದರೆ ಮಾತ್ರ ನಿನಗೆ ಸ್ಥಾನವಿದೆ. ಇಲ್ಲದಿದ್ದರೆ ನನ್ನ ಪ್ರೀತಿಗೆ ಅರ್ಹಳಲ್ಲ!” ಚೂರುಪಾರು ಪ್ರೀತಿ-ಭದ್ರತೆಯ ಆಸೆಗೆ ಗಂಡುಜಾತಿಯನ್ನು ಅವಲಂಬಿಸುವ ಬದಲು ಅದರಾಸೆಯನ್ನೇ ಕೈಬಿಟ್ಟು ಒಂಟಿಯಾಗಿ ಬದುಕುವುದು ಹೆಚ್ಚು ಸುರಕ್ಷಿತ. ಅದರಲ್ಲಿ ನಿಶ್ಚಿತತೆಯೂ ಇದೆ. ಬಲಿಗೆ ತುತ್ತಾಗುವ ಪ್ರೀತಿ-ಭದ್ರತೆಗಿಂತಲೂ ಅದಿಲ್ಲದ ಖಾಲಿ ನಿಶ್ಚಿತತೆ ಎಷ್ಟೋ ಮಿಗಿಲು. ಆಗ ಏನೇ ಆಗಲಿ, ಎಲ್ಲವೂ ತನ್ನ ಕೈಯಲ್ಲಿದೆ,  ತನ್ನಿಷ್ಟದಂತೆ ಬದುಕಬಹುದು.

ಸರಳೆಯ ಅಂತರಾಳ ಅರ್ಥವಾಯಿತಷ್ಟೆ?  ಆಕೆಯ ಗಂಡನ ಅಂತರಾಳವನ್ನು ಮುಂದಿನ ಸಲ ನೋಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಎಲ್ಲರಿಂದಲೂ ಹೀನೈಕೆ ಅನುಭವಿಸುವಾಗ ಅನ್ಯೋನ್ಯತೆ ಹುಟ್ಟುವುದಾದರೂ ಹೇಗೆ?

244: ಅನ್ಯೋನ್ಯತೆಗೆ ಹುಡುಕಾಟ – 23

ದಾಂಪತ್ಯದಲ್ಲಿ ವಿವಿಧ ಸಮಸ್ಯೆಗಳಿರುವಾಗ ಅನ್ಯೋನ್ಯತೆಯನ್ನು ತಂದುಕೊಳ್ಳುವುದು ಹೇಗೆ ಎನ್ನುವುದರ ಬಗೆಗೆ ಮಾತಾಡುತ್ತ, ಒಂದೊಂದು ವಿಶಿಷ್ಟ ಸಂದರ್ಭವನ್ನೂ ಮುಂದಿಟ್ಟುಕೊಂಡು ಚರ್ಚಿಸುತ್ತಿದ್ದೇವೆ.

ನಮ್ಮಲ್ಲಿ ಹಿರಿಯರ ವ್ಯವಸ್ಥೆಯಂತೆ ಮದುವೆಯಾಗುವ ಪದ್ಧತಿ ವ್ಯಾಪಕವಾಗಿದೆ. ಅದರಲ್ಲೂ ಸಂಪ್ರದಾಯಸ್ಥ ಹಳ್ಳಿಯ ಜನರಿಗೆ ಮದುವೆ ಎಂದರೆ ಗಂಡನಿಗೆ ಹೆಂಡತಿಯನ್ನು ತರುವುದಕ್ಕಿಂತಲೂ ಅವನ ತಾಯ್ತಂದೆಯರಿಗೆ ಸೊಸೆಯನ್ನು, ಮನೆಗೆ ಹೆಣ್ಣನ್ನು ತರುವುದು ಮುಖ್ಯವಾಗಿರುತ್ತದೆ. ಹೆಣ್ಣಿಗೆ ಸ್ವಾತಂತ್ರ್ಯ ಅಷ್ಟಕ್ಕಷ್ಟೆ ಎನ್ನುವ ಸಂದಿಗ್ಧ ಸನ್ನಿವೇಶದಲ್ಲಿ ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವುದು ಅಸಾಧ್ಯ ಎನ್ನಿಸಿಬಿಡುತ್ತದೆ. ಇಂಥ ಪ್ರಸಂಗದಲ್ಲಿ ಏನಾಗಬಹುದು ಎನ್ನುವುದನ್ನು ದೃಷ್ಟಾಂತದ ಮೂಲಕ ನಿಮ್ಮಮುಂದೆ ಇಡುತ್ತಿದ್ದೇನೆ.

ತರುಣಿ  ಸರಳಾ (ಹೆಸರು ಬದಲಿಸಿದೆ) ತಾಯಿಯ ಜೊತೆಗೆ ನನ್ನನ್ನು ಭೇಟಿಮಾಡಿದ್ದಾಳೆ. ಸ್ನಾತಕೋತ್ತರ ಪದವೀಧರೆ. ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. ಸಮಸ್ಯೆ ಏನೆಂದರೆ, ಆಕೆಯು ಅತ್ತೆಯ ಮನೆಗೆ ಹೊಂದಿಕೊಳ್ಳುತ್ತಿಲ್ಲವಂತೆ. ಅವರೆಲ್ಲ ಸೇರಿ ಈಕೆಯ ಮೇಲೆ ಕೈಮಾಡಿದ್ದಾರೆ. ಪೋಲೀಸರ ಸಹಾಯದಿಂದ ತವರಿಗೆ ಮರಳಿದ್ದಾಳೆ. ಅಲ್ಲಿ ಆಕೆಯ ಅಣ್ಣನೂ ಅಪ್ಪನೂ ಮನವೊಲಿಸಿ ತಿರುಗಿ ಕಳಿಸಲು ನೋಡಿದ್ದಾರೆ. ಮಾತು ಕೇಳದಿರುವಾಗ ಅವರೂ ಬಯ್ದು ಹೊಡೆದಿದ್ದಾರೆ. ತವರಿನಲ್ಲಿ ಜಾಗವಿಲ್ಲ ಎಂದಿದ್ದಾರೆ. ಎರಡೂ ನೆಲೆಗಳನ್ನು ಕಳೆದುಕೊಂಡು ಅತಂತ್ರಳಾಗುವ ಭಯದಿಂದ ಬುದ್ಧಿಭ್ರಮಣೆಗೊಂಡ ಆಕೆಗೆ ಮನೋವೈದ್ಯರಿಂದ ಮಾತ್ರೆ ಕೊಡಿಸಲಾಗಿದೆ. ಕೆಲಸವಾಗದೆ ನನ್ನಲ್ಲಿ ಬಂದಿದ್ದಾಳೆ. ಆಕೆಯ ನಿಷ್ಪಾಪಿ ಕಣ್ಣುಗಳಲ್ಲಿ ಭಯ, ಮುಖದಲ್ಲಿ ಕಂಗಾಲು ಭಾವ ಹೆಪ್ಪುಗಟ್ಟಿದೆ. ಏಕತಾನದಲ್ಲಿ ಎಚ್ಚರಿಕೆಯಿಂದ ಮಾತಾಡುತ್ತಿದ್ದಾಳೆ – ಬಹುಶಃ ನಾನೂ ಹಿರಿಯ ಗಂಡಸೆಂಬ ಭಯವೇನೊ?

ಸರಳಾಳ ಅತ್ತೆ ಮಾವಂದಿರ ಬಗೆಗೆ ವಿಚಾರಿಸಿದೆ. ಮನೆಯಲ್ಲಿ ಅತ್ತೆಯದೇ ದರಬಾರು. ಮೊದಲ ಸೊಸೆಯನ್ನು ಮುಂಚೂಣಿಯಲ್ಲಿಟ್ಟು ಸರಳಾಳನ್ನು ಮೂರನೆಯ ಸ್ಥಾನಕ್ಕೆ ತಳ್ಳಲಾಗಿದೆ. ಅಡುಗೆ ಮನೆಯಲ್ಲಿ ಈಕೆಗೆ ಸ್ವಾಗತವಿಲ್ಲ. ಆಗಾಗ ಈಕೆಯ ತಾಯ್ತಂದೆಯರ ಮಾತೆತ್ತಿ ಚಿಟಕುಮುಳ್ಳು ಆಡಿಸುತ್ತಾರೆ. ಸಲ್ಲದ ನಿಯಮಗಳನ್ನು ಆಕೆಯ ಮೇಲೆ ಹೇರಲಾಗಿದೆ. ಉದಾ. ಒಮ್ಮೆ ಈಕೆ ಮಧ್ಯಾಹ್ನ ಹುಬ್ಬು ತಿದ್ದಿಸಿಕೊಳ್ಳಲು ಹೊರಟಾಗ ಮಾವ ತಡೆದಿದ್ದಾರೆ. ಒಬ್ಬಳೇ ಹೊರಗೆ ಹೋಗುವುದು ಉಚಿತವಲ್ಲ, ಗಂಡ ಬರುವ ತನಕ ಕಾಯ್ದು ಅವನೊಪ್ಪಿದರೆ ಅವನೊಡನೆ ಹೋಗಬಹುದು ಎಂದಿದ್ದಾರೆ. ಮುಂಚೆಯೆಲ್ಲ ಒಬ್ಬಳೇ ಎಲ್ಲ ವ್ಯವಹಾರ ಮಾಡುತ್ತಿದ್ದವಳು, ಮದುವೆಯಾಗಿದೆ ಎಂದಮಾತ್ರಕ್ಕೆ ಸ್ವಚ್ಛಂದತೆಯನ್ನು ಬಿಟ್ಟುಕೊಡಲು ಮನಸ್ಸು ಒಪ್ಪಿಲ್ಲ. ಸಂಜೆ ಗಂಡ ಮರಳಿದಾಗ ಅವನೆದುರು ಇವಳ ಉದ್ಧಟತನವನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು, ಸರಳಾಗೆ ಏಕಾಂತ ಎಂದರೆ ಇಷ್ಟ. ಆಗಾಗ ತನ್ನ ಕೋಣೆಯನ್ನು ಸೇರಿ ಒಂಟಿಯಾಗಿ ಕಳೆಯುತ್ತಾಳೆ. ಅದು ಎಲ್ಲರಿಗೂ ಕಣ್ಣುಕೀಸರಾಗಿದೆ. ಬಂಧುಬಳಗ ಸಂತೆಯಂತೆ ಇವರಲ್ಲಿಗೆ ಬರುತ್ತಾರೆ. ಅವರನ್ನು ಸತ್ಕರಿಸುವ ಹೊಣೆ ಹೊಸ ಸೊಸೆಯದು. ಈಕೆಗೋ ಅಪರಿಚಿತರೊಡನೆ ಬೆರೆತು ನಕ್ಕು ರೂಢಿಯಿಲ್ಲ. ಅವಳ ಹಿಂಜರಿಕೆಯನ್ನು ಎಲ್ಲರೂ ಹೀಗಳೆಯುತ್ತಾರೆ.  ಹಾಗಾಗಿ ಗಂಡನಿಗೆ ಬೇರೆ ಮನೆ ಮಾಡಲೆಂದು ಒತ್ತಾಯಿಸಿದ್ದಾಳೆ. ಅದೇ ದೊಡ್ಡ ಪ್ರಕರಣವಾಗಿ, ಇವಳ ಮೇಲೆ ಸೌಮ್ಯವಾಗಿ ಹಲ್ಲೆ ಮಾಡಲಾಗಿದೆ. ತಾನು ಯಾಕೆ ಹೊಡೆಸಿಕೊಂಡೆ ಎಂಬುದು ಇಲ್ಲಿಯ ತನಕ ಗೊತ್ತಾಗಿಲ್ಲ. ನೋವು ತಿಂದು ಪರಿತ್ಯಕ್ತಳಾಗಿ ತವರಿಗೆ ಮರಳಿದಾಗ ಇಲ್ಲಿಯೂ ಅದೇ ಕತೆ. ಹುಡುಗ ಎಷ್ಟು ಒಳ್ಳೆಯವನು, ಇವಳದೇ ತಪ್ಪು ಎಂದು ಅಣ್ಣ ಅಪ್ಪ ಕೂಡಿ ಹೊಡೆದಿದ್ದಾರೆ. ಮುಂದಿನ ವಾರ ಗಂಡನ ಮನೆಯವರು ಕರೆಯಲು ಬರುತ್ತಾರಂತೆ. ಎಲ್ಲರೆದುರು ಈಕೆ ತಪ್ಪೊಪ್ಪಿಕೊಂಡು, ಒಂದೇ ಮನೆಯಲ್ಲಿ ಎಲ್ಲರೊಡನೆ ಹೊಂದಿಕೊಂಡು ನಡೆಯುತ್ತೇನೆಂದು ಪ್ರಮಾಣ ಮಾಡಬೇಕಂತೆ. ತನ್ನನ್ನು ಅಪರಾಧಿಯಾಗಿ ಮಾಡಿ ಮನೆಯಿಂದ ಗಡಿಪಾರು  ಶಿಕ್ಷೆ ವಿಧಿಸಲಾಗುತ್ತಿದೆ ಎಂದೆನಿಸುತ್ತಿದೆ. ಅದಿರಲಿ, ಇಲ್ಲಿ ಸರಳಾಳ ತಾಯಿಯ ಪಾತ್ರವೇನು? ಅವಳೋ ಕೈಚೆಲ್ಲಿ ಕೂತಿದ್ದಾಳೆ. ಮಗಳ ಬಾಳು ಹಸನಾದರೆ ಸಾಕು ಎನ್ನುತ್ತಾಳಷ್ಟೇ ವಿನಾ ಆಕೆಗೇನು ಬೇಕು, ಹಾಗೂ ಅದನ್ನು ಪಡೆಯಲು ಹೇಗೆ ಸಹಾಯ ಮಾಡಬೇಕು ಎಂದು ನಿರ್ದಿಷ್ಟವಾಗಿ ಯೋಚಿಸುತ್ತಿಲ್ಲ. ದೇವರ ಮೇಲೆ ಭಾರಹಾಕಿ ಕೈಮುಗಿಯುತ್ತಾಳೆ. ಇತರರ ವಿರುದ್ಧ ತನ್ನನ್ನು ರಕ್ಷಿಸದೆ ಇದ್ದುದಕ್ಕಾಗಿ ಮಗಳಿಗೆ ತಾಯಿಯ ಮೇಲೂ ಮುನಿಸಿದೆ. ತಾಯಿ ಗೊಂದಲದಲ್ಲಿದ್ದಾಳೆ.

ಗಂಡಹೆಂಡಿರ ಕಾಮಸಂಬಂಧ ಹೇಗಿದೆ? ಮದುವೆಗೆ ಮುಂಚೆ ಇಬ್ಬರ ನಡುವೆ ವಿಶೇಷ ವ್ಯವಹಾರ ನಡೆದಿಲ್ಲ. ಮೊದಲ ರಾತ್ರಿ ಗಂಡ ಕಾಮಕ್ರಿಯೆಗೆ ಮುಂದುವರಿದಾಗ ಆಕೆ ಒಪ್ಪದೆ ಆರು ತಿಂಗಳ ಕಾಲಾವಧಿ ಕೇಳಿದ್ದಾಳೆ, ಗಂಡ ಒಪ್ಪಿದ್ದಾನೆ. ಆರು ತಿಂಗಳ ನಂತರವೇ ಅವರ ಲೈಂಗಿಕ ಸಂಬಂಧ ಶುರುವಾಗಿದೆ. ಆದರೆ ಇವಳಿಗೆ ಕಾಮಕೂಟದಲ್ಲಿ, ಸಂಭೋಗದಲ್ಲಿ ಆಸಕ್ತಿಯಿಲ್ಲ. ಗಂಡನಿಗೆ ಅಸಮಾಧಾನ ಆಗಿ ಸರಿಪಡಿಸಿಕೊಳ್ಳಲು ಈಕೆಗೆ ಜಬರಿಸಿದ್ದಾನೆ. ಒಮ್ಮೆ ಬಸಿರಾಗಿ ಗರ್ಭಪಾತವೂ ಆಗಿದೆ. ಇನ್ನೊಂದು ಬಸಿರು ಬೇಗ ಆಗಲೆಂದು ಹಿರಿಯರಿಂದ ಒತ್ತಾಯ ಬಂದಿದೆ. ಅಷ್ಟರಲ್ಲೇ ಜಗಳವಾಗಿ ತವರು ಸೇರಿದ್ದಾಳೆ.

ಗಂಡನ ಸ್ವಭಾವ ಹೇಗಿದೆ? ಆತ ಇವಳನ್ನು ಪ್ರೀತಿಸುತ್ತಾನೆ. ಆದರೆ ಆಕೆ ತನ್ನ ತಾಯ್ತಂದೆಯರಿಗೆ ವಿರೋಧವಾಗಿ ನಡೆದುಕೊಳ್ಳುವುದು ಇಷ್ಟವಿಲ್ಲ. ಅತ್ತೆಯ ಬಗೆಗೆ ತಕರಾರು ಹೇಳಿದರೆ ನೀನೇ ಹೊಂದಿಕೋ ಎಂದು ಬಾಯಿ ಮುಚ್ಚಿಸುತ್ತಾನೆ. ಹಾಸಿಗೆಯಲ್ಲಿ ಪ್ರೀತಿ ತೋರಿಸುತ್ತ ಹತ್ತಿರ ಬರುತ್ತಾನೆ. ಗಂಡನೆಂದರೆ ಆಕೆಗೆ ಇಷ್ಟವಿದೆ. ಅವನ ಎದೆಯ ಮೇಲೆ ತಲೆಯಿಟ್ಟು ಅವನ ತೋಳುಗಳಿಂದ ತಬ್ಬಿಸಿಕೊಂಡು ಮಲಗುವುದು ಹಿತವೆನಿಸುತ್ತದೆ. ಅದನ್ನೇ ಅನುಭವಿಸುತ್ತಿರಬೇಕು ಎನ್ನಿಸುತ್ತದೆ. ಅಷ್ಟರಲ್ಲೇ ಗಂಡ ಕಾಮಸುಖಕ್ಕಾಗಿ ತಡಕಾಡುತ್ತಾನೆ. ಆಕೆಯ ಹಿತಕ್ಕೆ ಭಂಗಬಂದು, ಕೂಟಕ್ಕೆ ನಿರಾಕರಿಸುತ್ತಾಳೆ. ಅವನು ಸುಮ್ಮನಿದ್ದರೆ ಸರಿ; ಮುನಿಸಿಕೊಂಡರೆ ಅನಿವಾರ್ಯವಾಗಿ ಒಪ್ಪಿಸಿಕೊಳ್ಳುತ್ತಾಳೆ. ಒಟ್ಟಾರೆ ಸಂಭೋಗ ನಡೆದರೂ ಇಬ್ಬರಿಗೂ ತೃಪ್ತಿ ಇಲ್ಲವಾಗಿದೆ.

ನನ್ನಿಂದ ಏನಾಗಬೇಕು ಎಂದು ಸರಳಾಗೆ ಕೇಳಿದಾಗ ಬಂದ ಉತ್ತರ ಸರಳವಾಗಿತ್ತು: ತಾನು ಸ್ವತಂತ್ರವಾಗಿ ಬದುಕಬೇಕು, ಕೆಲಸ ಹುಡುಕಿಕೊಳ್ಳಬೇಕು. ಅದಕ್ಕಾಗಿ ಇಂಗ್ಲೀಷಿನಲ್ಲಿ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕು, ಇದಕ್ಕೆಲ್ಲ ಸಹಾಯ ಬೇಕು ಎಂದಳು. ದಾಂಪತ್ಯದ ಬಗೆಗೆ ಸೂಚ್ಯವಾಗಿ  ಕೇಳಿದಾಗ ಸ್ಪಷ್ಟಪಡಿಸಿದಳು: ನನಗೆ ದಾಂಪತ್ಯ ಸಾಕೇಸಾಕು! ಅಷ್ಟಲ್ಲದೆ ಇನ್ನೊಂದು ಮಾತು ಸೇರಿಸಿದಳು: ಎಲ್ಲ ಬಂಧುಬಳಗದಿಂದಲೂ ದೂರವಾಗಿ ತನ್ನ ಪಾಡಿಗೆ ತಾನಿರಬೇಕು!

ಸರಳಾಳ ಕತೆ ಕೇಳುತ್ತಿರುವಾಗ ನನ್ನ ತಲೆಯೊಳಗೆ ಹಲವು ಪ್ರಶ್ನೆಗಳು ಹುಟ್ಟುತ್ತಿದ್ದುವು. ಇವಳು ಒಂಟಿಯಾಗಿ ಬದುಕಲು ಬಯಸುವುದರ ಕಾರಣವೇನು? ಇವಳ ಹಟಮಾರಿತನದ ಹಿನ್ನೆಲೆ ಏನಿದೆ? ಗಂಡನ ಮನೆಯವರು ಬೇಡ ಎನ್ನುವುದು ಅರ್ಥವಾಗುತ್ತದೆ, ಆದರೆ ತಮ್ಮ ಮನೆಯವರೂ ಬೇಡವಾದ ಕಾರಣವೇನು? ಗಂಡನ ತಬ್ಬುಗೆಯಲ್ಲಿ ಸುಖ ಅನುಭವಿಸುವವಳಿಗೆ ಕಾಮಕೂಟ ಹೇಗೆ ಬೇಡವಾಗುತ್ತಿದೆ? ಬೇರೆ ಮನೆ ಮಾಡುವ ಬೇಡಿಕೆಯ ಹಿಂದಿನ ಉದ್ದೇಶ ಏನಿದೆ? ತವರಿನವರು ನೆರವಾಗದಿರುವಾಗ ಅವಳೇಕೆ ಪ್ರತಿಭಟಿಸದೆ ಸುಮ್ಮನಿದ್ದಾಳೆ?

ಈ ಪ್ರಶ್ನೆಗಳು ನಿಮಗೂ ಬಂದಿರಬಹುದು. ಉತ್ತರಕ್ಕಾಗಿ ಮರುವಾರದ ತನಕ ಯೋಚಿಸಿ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅಂತರಾಳದಲ್ಲಿ ನಡೆಯುವ ತುಮುಲವನ್ನು ಹೊರತಂದು ಭಾವನೆಗಳನ್ನು ಒಪ್ಪಿಕೊಳ್ಳುವಂತೆ ಸಹಾಯ ಸಿಕ್ಕರೆ ಆಯ್ಕೆಯ ನಿರ್ಧಾರ ಸುಗಮವಾಗುತ್ತದೆ.

243: ಅನ್ಯೋನ್ಯತೆಗೆ ಹುಡುಕಾಟ – 22

ಒಂದೆಡೆ ಅನ್ಯೋನ್ಯತೆಯಲ್ಲಿ ಒಂದಾಗಲು ಕಾಯುತ್ತಿರುವ ಪ್ರಿಯಪತ್ನಿ, ಇನ್ನೊಂದೆಡೆ ಕುಸಿಯುತ್ತಿದ್ದ ತನ್ನನ್ನು ಕೈಹಿಡಿದಿದ್ದ ಕುಡಿತ – ಎರಡರ ನಡುವೆ ತೊಳಲಾಡುತ್ತಿರುವ ಸುರೇಶನ ಕತೆ ಹೇಳುತ್ತಿದ್ದೇನೆ. ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಕಠಿಣ ಪರಿಸ್ಥಿತಿಗೆ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳಬಾರದು ಎಂದೂ ಅರಿವು ಮಾಡಿಕೊಟ್ಟ ನಂತರ ಮುಂದಾದುದನ್ನು ಸಂಕ್ಷಿಪ್ತವಾಗಿ ಹೇಳುತ್ತಿದ್ದೇನೆ.

ಸುರೇಶನ ಕುಡಿಯುವ “ಆಚರಣೆ”ಯು ಅವನ ವ್ಯರ್ಥ ಶ್ರಮ, ಹತಾಶೆ-ನಿರಾಶೆಗಳ ಸ್ಮರಣೆಯ ಸಂಕೇತ ಎಂದು ಅರಿವು ಮಾಡಿಕೊಟ್ಟ ನಂತರ ಮಹತ್ವದ ಪ್ರಶ್ನೆಗೆ ಬಂದೆ. “ಈಗ ಹೇಳಿ: ಕುಡಿತವನ್ನು ಹೇಗೆ ನಿಲ್ಲಿಸಬೇಕು ಎಂದುಕೊಂಡಿದ್ದೀರಿ?” ಅವನು ಒಂದೇ ಮಾತಿನಲ್ಲಿ ತನ್ನ ವಿಚಾರಧಾರೆಯನ್ನು ಸಂಕ್ಷಿಪ್ತಗೊಳಿಸಿದ: “ಕುಡಿತವನ್ನು ಸಾಯಿಸಿಬಿಡುತ್ತೇನೆ, ಆಯಿತಲ್ಲ?”

ಹೆಚ್ಚಿನವರು ಇಲ್ಲಿಯೇ ಎಡವುತ್ತಾರೆ. ತನುಮನದೊಳಗೆ ಆಳವಾಗಿ ಬೇರೂರಿ ಬೆಚ್ಚಗಿನ ಅನುಭವ ಕೊಡುತ್ತಿರುವ ವಿಷಯಗಳ ವಿರುದ್ಧ ಬಾಯಿಮಾತಿನ ನಿರ್ಧಾರ ತೆಗೆದುಕೊಳ್ಳುತ್ತಾರೆ – ಗಾಢಪ್ರೇಮಿಯನ್ನು ಹಿರಿಯರು ಆಕ್ಷೇಪಿಸಿದ ತಕ್ಷಣ ಬಿಟ್ಟುಕೊಡಲು ಒಪ್ಪಿದಂತೆ. ಒಳಗಿನ ಅನುಭವವು ಯೋಚನೆಗೆ ನಿಲುಕದಷ್ಟು ಆಳವಾಗಿರುತ್ತದೆ, ಹಾಗಾಗಿ ಥಟ್ಟನೆಯ ನಿರ್ಧಾರಗಳು ಕೆಲಸ ಮಾಡುವುದಿಲ್ಲ ಎಂಬುದು ತಲೆಗೆ ಹೊಳೆಯುವುದೇ ಇಲ್ಲ. ಅದಕ್ಕೇ ಕೇಳಿದೆ. “ಕುಡಿತವನ್ನು ಹಾಸಿಗೆಗೆ ಕರೆತಂದಿದ್ದು ನೀವು ತಾನೆ? ಇಷ್ಟು ವಿರೋಧದ ನಡುವೆಯೂ  ಕುಡಿತದಿಂದ ಅಗಲಿಲ್ಲ ಎಂದರೆ ಸಾಯಿಸುವುದು ಹೇಗೆ ಸಾಧ್ಯ? ಕಷ್ಟಕಾಲದಲ್ಲಿ ನೆರವಾದವನನ್ನು ಕೊಲ್ಲಲು  ಮನಸ್ಸಾದರೂ ಹೇಗೆ ಬರುತ್ತದೆ?” ತಪ್ಪಿನ ಅರಿವಾಗಿ ಸುರೇಶ ನಾಲಗೆ ಕಚ್ಚಿಕೊಂಡ. ಮತ್ತೆ ಸಂದಿಗ್ಧತೆಗೆ ಬಿದ್ದ.

“ಸ್ನೇಹಿತನನ್ನು ಕೊಲ್ಲುವುದರ ಬದಲು ಧನ್ಯವಾದಗಳೊಂದಿಗೆ ಬೀಳ್ಕೊಟ್ಟರೆ ಹೇಗಿರುತ್ತದೆ?” ಎಂದೆ. ಇದು ಅವನಿಗೆ ಥಟ್ಟನೆ ಹಿಡಿಸಿತು. ಸರಿ, ಒಂದು ಗಾಜಿನ ಬಾಟಲಿಯನ್ನು ಅವನ ಮುಂದಿಟ್ಟು, “ಇದು ನಿಮ್ಮ ಇಪ್ಪತ್ತೈದು ವರ್ಷಗಳ ಸ್ನೇಹಿತ. ಇವನೊಡನೆ ಮಾತಾಡಿ.” ಎಂದು ಉತ್ತೇಜಿಸಿದೆ. ಅವನು ಬಾಟಲನ್ನು ಮುದ್ದುಮಗುವೋ ಎಂಬಂತೆ ಅಕ್ಕರೆಯಿಂದ ಎತ್ತಿಕೊಂಡು ಮೈಸವರುತ್ತ ಆರಂಭಿಸಿದ. “ಮೂವತ್ತೆರಡು ವರ್ಷಗಳ ಹಿಂದೆ ಸಿಕ್ಕಾಪಟ್ಟೆ ತೊಂದರೆಯಲ್ಲಿದ್ದೆ. ಆಗ ನೀನು ಬಂದು ದೊಡ್ಡ ಸಹಾಯ ಮಾಡಿದೆ. ಹಾಗೆ ನಮ್ಮಿಬ್ಬರ ಸ್ನೇಹ ಗಾಢವಾಯಿತು… ನಿನ್ನನ್ನ ಭೇಟಿಯಾಗದಿದ್ದರೆ ನಿದ್ರೆಯೇ ಬರುವುದಿಲ್ಲ ಎನ್ನುವ ತನಕ ಹತ್ತಿರವಾದೆ. ಬದುಕಿನ ಅರ್ಧಕಾಲ ಜೊತೆಯಾದ ನಿನ್ನನ್ನು ಬಿಟ್ಟುಕೊಡುತ್ತಿದ್ದೇನೆ… ನೀನು ತೊಂದರೆ ಕೊಡ್ತಿದ್ದೀಯಾ ಅಂತ ಕಿತ್ತು ಬಿಸಾಕುತ್ತೇನೆ ಎಂದಲ್ಲ, ಸ್ನೇಹಿತನಾಗಿ ಕಾಪಾಡಿದ್ದೀಯಾ. ನೀನಿಲ್ಲದಿದ್ದರೆ ಆತ್ಮಹತ್ಯೆಯೇ ಗತಿಯಾಗುತ್ತಿತ್ತು. ಅದಕ್ಕೆ ನಾನು ಚಿರರುಣಿ… ಆದರೆ ನನಗೀಗ ಕಷ್ಟಗಳಿಲ್ಲ. ಹಾಗಾಗಿ ನಿನ್ನ ಅಗತ್ಯ ನನಗಿಲ್ಲ. ನಿನ್ನನ್ನು ತಿರಸ್ಕರಿಸುತ್ತಿಲ್ಲ, ಕೃತಜ್ಞತೆಯಿಂದ ಬೀಳ್ಕೊಡುತ್ತಿದ್ದೇನೆ. ನನಗೆ ಸಂಕಟ ಆಗುತ್ತಿದೆ… ಆದರೂ ನಾವು ಅಗಲುವ ಕಾಲ ಬಂದಿದೆ…” ಎಂದು ನಿಲ್ಲಿಸಿ ನನ್ನ ಕಡೆಗೆ ನೋಡಿದ. “ಹೋಗುವುದಿಲ್ಲ ಎನ್ನುತ್ತಿದ್ದಾನೆ. ನನ್ನ ಸಹಾಯ ಬೇಡವಾದರೆ ಅಡ್ಡಿಯಿಲ್ಲ, ಸುಮ್ಮನೇ ನನ್ನಷ್ಟಕ್ಕೆ ನಾನಿರುತ್ತೇನೆ, ಎನ್ನುತ್ತಿದ್ದಾನೆ.” ಎಂದ. ಇನ್ನಷ್ಟು ಹೇಳಿಕೊಟ್ಟಮೇಲೆ ಮುಂದುವರೆದ.

“ನೀನಿರುವುದು ನನಗೆ ಅಭ್ಯಂತರವಿಲ್ಲ. ಆದರೆ ನಿನ್ನ ಜಾಗವೀಗ ನನ್ನವಳಿಗೆ ಬೇಕಾಗಿದೆ. ಇಲ್ಲದಿದ್ದರೆ ಆಕೆ ಹತ್ತಿರ ಬರಲಾರಳು. ನಿನ್ನನ್ನು ಇಟ್ಟುಕೊಂಡು ಆಕೆಯ ಮನಸ್ಸನ್ನು ಗೆಲ್ಲಲಾರೆ. ಮಿತ್ರನಾಗಿ ಅರ್ಥಮಾಡಿಕೋ.” ಎಂದ.  ವಿನಂತಿಗೆ ಒಪ್ಪುತ್ತಿಲ್ಲ ಎಂದ. ಬಿಡದೆ ಜಪ್ಪೆಂದು ಕೂತಿರುವವನ ಬಗೆಗೆ ಹೇಗೆನ್ನಿಸುತ್ತದೆ ಎಂದಾಗ ಕೋಪ, ಅಸಹನೆ ಬರುತ್ತಿದೆ ಎಂದ. ಮತ್ತೆ ಹೇಳಿಕೊಟ್ಟಾಗ ಗಟ್ಟಿಯಾದ. “ನನ್ನನ್ನು ಕೈಗೊಂಬೆಯಂತೆ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದೀಯಾ. ಸಂಜೆಯಾದರೆ ಸಾಕು, ಆಟವಾಡಿಸುತ್ತೀಯಾ. ಇದು ನನಗಿಷ್ಟವಿಲ್ಲ. ನಿನಗೆ ಅಂಟಿಕೊಳ್ಳುವಾಗ ನಾನೊಬ್ಬನೇ ಇದ್ದೆ. ನನಗೀಗ ಕುಟುಂಬವಿದೆ. ಕುಟುಂಬಕ್ಕೆ ನನ್ನ ಅಗತ್ಯವಿದೆ. ಸಂಜೆಯಾದರೆ ಕಳೆಯಲು ನಿನಗಾದರೋ ಇತರ ಸ್ನೇಹಿತರಿದ್ದಾರೆ. ಆದರೆ ನನಗೆ ಹೆಂಡತಿ ಒಬ್ಬಳೇ. ನಿನ್ನ ಸಹವಾಸದಿಂದ ಈಗಾಗಲೇ ಕೆಟ್ಟ ಹೆಸರು ತಂದಿದ್ದೀಯಾ. ಇನ್ನೂ ಕೆಡಿಸಲು ನಾನು ಅವಕಾಶ ಕೊಡುವುದಿಲ್ಲ!”  ಅವನ ಸ್ವರದಲ್ಲಿ ಆಶ್ಚರ್ಯವೆನಿಸುವ ದೃಢತೆಯಿತ್ತು. ಸ್ನೇಹಿತನನ್ನು ಬೀಳ್ಕೊಡುವ ರೀತಿಯನ್ನು ಹೇಳಿಕೊಟ್ಟ ನಂತರ ಸುರೇಶ ಮತ್ತೆ ಬಾಟಲಿನೊಡನೆ ಮಾತಾಡಿದ: “ನಿನ್ನನ್ನ ಕಳೆದುಕೊಳ್ಳುತ್ತಿದ್ದೇನೆ ಅಂತ ನನಗೂ  ದುಃಖವಾಗ್ತಿದೆ. ಆದರೇನು, ಉಪಾಯವಿಲ್ಲ. ನನ್ನ ನಿರ್ಧಾರವನ್ನು ಪ್ರಶ್ನಿಸಬೇಡ. ಪ್ರೀತಿಯಿಂದಲೇ ಬೀಳ್ಕೊಡುತ್ತಿದ್ದೇನೆ. ತಿರುಗಿ ಬರಬೇಡ!” ಎಂದು ನಿಷ್ಠುರವಾಗಿ ಹೇಳಿ ಬಾಟಲ್ ಕೈಬಿಟ್ಟ.

ಈಗ ಸ್ನೇಹಿತ ಏನೆನ್ನುತ್ತಾನೆ ಎಂದಾಗ, “ಇವನು ಬಹಳ ಚತುರ! ತನಗೆ ಬೇಕೆಂದಾಗ ಭೇಟಿ ಕೊಡುತ್ತಾನಂತೆ.” ಎಂದ. ಮತ್ತೆ ಹೇಳಿಕೊಟ್ಟೆ. “ಇಷ್ಟು ವರ್ಷ ನನ್ನನ್ನು ರಕ್ಷಿಸಿದ್ದೀಯಾ. ಈಗ ತೊಂದರೆ ಕೊಡಲು ನಿನಗೆ ಹೇಗೆ ಮನಸ್ಸು ಬಂತು? ನನ್ನ ಬೇಡಿಕೆಯನ್ನು ಗೌರವಿಸಿ ಮರ್ಯಾದೆ ಉಳಿಸಿಕೋ. ಇಲ್ಲದಿದ್ದರೆ ನೀನು ನನ್ನ ಬದುಕಿನಲ್ಲಿ ಬಂದ ಉದ್ದೇಶಕ್ಕೇ ಬೆಲೆ ಇಲ್ಲದಂತಾಗುತ್ತದೆ.” ಎಂದ.

ಸ್ವಲ್ಪ ಹೊತ್ತಿನ ನಂತರ, “ಇವೊತ್ತು ರಾತ್ರಿಯಾದರೂ ನಿನ್ನೊಂದಿಗೆ ಕಳೆಯುತ್ತೇನೆ ಎನ್ನುತ್ತಿದ್ದಾನೆ.” ಎಂದು ನನಗೆ ಹೇಳಿ, ಬಾಟಲಿನತ್ತ ತಿರುಗಿದ. “ಇನ್ನೊಂದು ರಾತ್ರಿಯಾದರೂ ನಿನ್ನೊಂದಿಗೆ ಕಳೆಯಲು ಇಷ್ಟವಿಲ್ಲ. ಯಾಕೆಂದರೆ ನನ್ನ ಹೆಂಡತಿ ಮಲಗುವ ಹಾಸಿಗೆಯಲ್ಲಿ ನೀನಿರುವುದು ನನಗೆ ಬೇಡ. ನನ್ನನ್ನು ಶಾಂತಿಯಿಂದ ಬಿಟ್ಟುಕೊಟ್ಟರೆ ನಿನ್ನ ಉಪಕಾರವನ್ನು ಸ್ಮರಿಸುತ್ತೇನೆ.” ಎಂದು ಬಾಟಲನ್ನು ದೂರವಿಟ್ಟ. “ನಿನ್ನ ಜೊತೆಗಿದ್ದರೆ ನನ್ನನ್ನು ನಾನೇ ಕ್ಷಮಿಸದೆ ಕೀಳಾಗುತ್ತೇನೆ. ಆತ್ಮವಿಶ್ವಾಸ ಕಳೆದುಕೊಂಡು ನಿರ್ಜೀವ ಆಗುತ್ತೇನೆ.” ಎಂದು ಭಯ-ದೌರ್ಬಲ್ಯಗಳನ್ನು ಹೊರತಂದ!

ಕೆಲವು ಕ್ಷಣ ಬಾಟಲನ್ನು ನೋಡುತ್ತಿದ್ದವನು, “ಈಗವನು ತನ್ನ ಪಾಡಿಗೆ ಸುಮ್ಮನೇ ನಿಂತುಕೊಂಡಿದ್ದಾನೆ.” ಎಂದು ಸ್ವಗತವಾಡಿದ. “ಏನೋ ಯೋಚಿಸುತ್ತಿದ್ದೀಯಾ… ಎಷ್ಟು ಹೊತ್ತಾದರೂ ಸರಿ, ಯೋಚಿಸು. ನಂತರ ಹೊರಡಲೇಬೇಕು. (ನನ್ನ ಸನ್ನೆಯಂತೆ) ನಾನಂತೂ ಹೊರಡುತ್ತೇನೆ. ನಮಸ್ಕಾರ!” ಎಂದು ಕೋಣೆಯಿಂದ ಹೊರಹೋದ. ಕೂಡಲೇ ನಾನು ಬಾಟಲನ್ನು ಮರೆಮಾಡಿದೆ.

ಮರಳಿ ಬಂದವನ ಮುಖಭಾವ ಬದಲಾಗಿತ್ತು. ತಲೆಯೊಳಗಿನ ಗೀಜಗನ ಗೂಡು ಸ್ತಬ್ಧವಾಗಿದೆ, ಸಮಾಧಾನ ಅನ್ನಿಸುತ್ತಿದೆ ಎಂದ. ಬಿಟ್ಟುಹೋದ ಸ್ನೇಹಿತ ಭವಿಷ್ಯದಲ್ಲಿ ಮುಖಾಮುಖಿಯಾದರೆ ಏನು ಮಾಡಬಹುದು? ಬಯ್ಯುವುದಿಲ್ಲ ಅಥವಾ ಓಡಿಹೋಗುವುದಿಲ್ಲ; ಬದಲಾಗಿ ಕರುಣೆಯಿಂದ, “ನಿನ್ನ ಸಹಾಯ ಬೇಕಿಲ್ಲ. ಎಲ್ಲಾದರೂ ದೂರವಿದ್ದು ಸುಖವಾಗಿರು.” ಎಂದು ಹೇಳಲು, ತನ್ಮೂಲಕ ಸ್ವಯಂಪ್ರೀತಿ ವ್ಯಕ್ತಪಡಿಸಲು ತಯಾರಾದ.

ಈ ದೃಷ್ಟಾಂತದ ಬಗೆಗೆ ಯಾಕೆ ಬರೆದೆ? ನಮ್ಮಲ್ಲಿ ಅನೇಕರು ನಮ್ಮ ನೇತ್ಯಾತ್ಮಕ ಭಾವನೆಗಳ ಜೊತೆಗೆ ಸಂಬಂಧವಿಟ್ಟುಕೊಳ್ಳಲು ಹಿಂದೆಗೆಯುತ್ತೇವೆ. ಅವುಗಳನ್ನು ಮರೆಮಾಚಲು ಧನಾತ್ಮಕ ಮುಖವಾಡ ಧರಿಸುತ್ತೇವೆ. ಒಳಗಿನ ತಳಮಳವನ್ನು ಹತ್ತಿಕ್ಕಲು ಕುಡಿತದಂಥ ಚಟಗಳಿಗೆ ಜಾಗ ಕೊಡುತ್ತೇವೆ. ಅಂತರಾಳದಲ್ಲಿ ನಡೆಯುವುದನ್ನು ಹೊರತಂದು ಭಾವನೆಗಳನ್ನು ಒಪ್ಪಿಕೊಳ್ಳುವಂತೆ ಸಹಾಯ ಸಿಕ್ಕರೆ ಸಾಕು, ಆಯ್ಕೆಯ ನಿರ್ಧಾರಕ್ಕೆ ಹಾದಿ ಸುಗಮವಾಗುತ್ತದೆ. (ಇದೀಗ ಮಹಿಳೆಯೊಬ್ಬರು, “ಕುಡಿತವು … ಕುಸಿದು ಬೀಳುವುದರಿಂದ ರಕ್ಷಿಸಿದೆ” ಎನ್ನುವ ನನ್ನ ಮಾತಿಗೆ ಆಕ್ಷೇಪಿಸಿದ್ದಾರೆ. ಧನ್ಯವಾದಗಳು. ಲೇಖನದ ಉತ್ತರಾರ್ಧದಿಂದ ನನ್ನ ಹೇಳಿಕೆಯಲ್ಲಿ ಹೊಸ ಅರ್ಥ ಕಾಣಬಹುದು ಎಂದುಕೊಂಡಿದ್ದೇನೆ.)  

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅನ್ಯೋನ್ಯತೆ ಗಾಢವಾದಷ್ಟೂ ಸಂಗಾತಿಗಳು ಅಂತರಂಗದಲ್ಲಿ ಬೆಳೆಯುತ್ತ ವಿಕಸಿತಗೊಳ್ಳುತ್ತಾರೆ.

242: ಅನ್ಯೋನ್ಯತೆಗೆ ಹುಡುಕಾಟ – 21

ಕೌಟುಂಬಿಕ ಕಟ್ಟುಪಾಡುಗಳು ಅನ್ಯೋನ್ಯತೆಗೆ ಹುಟ್ಟುಹಾಕುವುದರಲ್ಲಿ ಹೇಗೆ ಅಡ್ಡಿಯಾಗುತ್ತವೆ, ಹಾಗೂ ಹಾಗೆ ದೂರವಾದ ಸಂಗಾತಿಯನ್ನು ಹೇಗೆ ಭಾವಾನುಬಂಧದತ್ತ ಸೆಳೆಯಬಹುದು ಎಂಬುದನ್ನು ಹೋದಸಲ ಕಲಿತೆವು. ಈಗ, ಚಟಗಳಿಗೆ ಒಳಗಾಗಿ ಸಂಗಾತಿಯ ಅನ್ಯೋನ್ಯತೆಯನ್ನು ಕಳೆದುಕೊಳ್ಳುವವರ ಕಡೆಗೆ ಗಮನ ಹರಿಸೋಣ. ದುರಭ್ಯಾಸದಿಂದ ಮುಕ್ತರಾಗಿ ದಾಂಪತ್ಯಕ್ಕೆ ಹೇಗೆ ಹತ್ತಿರವಾಗಬೇಕು ಎಂಬುದನ್ನು ಒಂದು ದೃಷ್ಟಾಂತದೊಂದಿಗೆ ವಿವರಿಸುತ್ತೇನೆ.

ಈ ಮಧ್ಯವಯಸ್ಸಿನ ಕೃಷಿಕನಿಗೆ ಸುರೇಶ ಎಂದು ಹೆಸರಿಸೋಣ. ಸುರೇಶ ನನ್ನಲ್ಲಿ ಬಂದಿದ್ದು ಶಿಶ್ನದೌರ್ಬಲ್ಯವನ್ನು ಸರಿಪಡಿಸಿಕೊಳ್ಳಲು. ಇಪ್ಪತ್ತೈದು ವರ್ಷಗಳಿಂದ ಹೊಗೆಸೊಪ್ಪು, ಮದ್ಯದ ಅಭ್ಯಾಸವಿದೆ. ಅದೇನೂ ಅವನಿಗೆ ಸಮಸ್ಯೆಯಿಲ್ಲ.  ಆದರೆ ಕುಡಿದುಬಂದು ಬರಸೆಳೆಯುವುದನ್ನು ಹೆಂಡತಿ ಇಷ್ಟಪಡುವುದಿಲ್ಲ. ಅವಳೊಡನೆ ಕಾಮಕ್ರಿಯೆ ಏನೋ ನಡೆಯುತ್ತದೆ, ಆದರೆ ಇಬ್ಬರೂ ಒಂದಾದ ಪೂರ್ಣತೃಪ್ತಿ ಸಿಗುವುದಿಲ್ಲ.

ಸುರೇಶನ ದಾಂಪತ್ಯದ ಬಗೆಗೆ ಹೇಳುವುದಾದರೆ, ಮೋಹಿಸಿದವಳನ್ನೇ ಮದುವೆಯಾಗಿದ್ದಾನೆ. ಸಹಬಾಳುವೆ ಚೆನ್ನಾಗಿದೆ. ಕುಡಿತದ ಒಂದೇ ವಿಷಯಕ್ಕೆ ದಂಪತಿಯಲ್ಲಿ ಭಿನ್ನಾಭಿಪ್ರಾಯವಿದೆ. ಕುಡಿತ ನಿಲ್ಲಿಸದೆ ಹೆಂಡತಿಗೆ ಸುಖ ಹೆಚ್ಚು ಕೊಡಬೇಕು. ಶಿಶ್ನದ ಗಡಸುತನ ಹೆಚ್ಚಾದರೆ ಹೆಚ್ಚುಹೊತ್ತು ಸಂಭೋಗಿಸಿ ಹೆಚ್ಚು ತೃಪ್ತಿ ಕೊಡಬಹುದು! ಅದಕ್ಕೆಂದೇ ನನ್ನಲ್ಲಿ ಬಂದಿದ್ದಾನೆ

ಸುರೇಶ ಈಮುಂಚೆ ಶಿಶ್ನದ ಗಡಸುತನಕ್ಕೆ ಮಾತ್ರೆ ಸೇವಿಸಿದ್ದು ಕೆಲಸ ಕೊಟ್ಟಿದೆ. ವಿಚಿತ್ರವೆಂದರೆ, ಕೆಲವೊಮ್ಮೆ ಔಷಧಿ ಇಲ್ಲದೆಯೂ ಸಂಭೋಗ ಸಾಧ್ಯವಾಗಿದೆ, ಹಾಗೂ ಮಾತ್ರೆ ತಿಂದರೂ ಕೆಲವೊಮ್ಮೆ ಪ್ರಯೋಜನವಾಗಿಲ್ಲ. ಇದರರ್ಥ ಏನು? ಶಿಶ್ನವು ಗಡುಸಾಗಬೇಕಾದರೆ ಹೆಚ್ಚಿನ ಕಾಮಾವೇಶ ಬೇಕು – ಕಾಮಾವೇಶ ವಿಪುಲವಾಗಿದ್ದರೆ ಮಾತ್ರೆಯ ಅಗತ್ಯವಿಲ್ಲ. ಕಾಮಾವೇಶದ ಹೆಚ್ಚಳಕ್ಕೆ ಕಾಮದ ವಿಚಾರಗಳು, ಪ್ರಣಯದ ಮಾತುಕತೆ, ಹಾಗೂ ಶಾರೀರಿಕ ಸ್ಪರ್ಶ ಹೆಚ್ಚಾಗಬೇಕು. ಒಬ್ಬರನ್ನೊಬ್ಬರು ಭಾವಾವೇಶದಲ್ಲಿ ಬಂಧಿಸಬೇಕು. ಆದರೆ ಇಷ್ಟರಲ್ಲೇ ಅಡ್ಡಿ ತಲೆಯೆತ್ತುತ್ತಿದೆ. ಹೆಂಡತಿಗೆ ಇವನ ಕುಡಿತದ ವಾಸನೆ ಸಹಿಸಲು ಆಗದೆ ಒಳಗೊಳ್ಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಮನಸ್ಸಿನ ವಿರುದ್ಧ ಗಂಡನಿಗೆ ಮೈ ಒಪ್ಪಿಸುವ ಅನಿವಾರ್ಯತೆಯಿದೆ. ಹಾಗಾಗಿ ಭಾವೈಕ್ಯತೆ ಆಗುವುದಿಲ್ಲ. ಅದಕ್ಕಾಗಿ ಕುಡಿತ ಬಿಡಲು ಆಕೆ ವಿನಂತಿಸಿಕೊಂಡಿದ್ದಾಳೆ. ಅವನು, “ಕುಡಿತ ಬಿಡಲು ಆಗುವುದಿಲ್ಲ. ಹಾಗಾಗಿ ನನ್ನ ಅನಿಸಿಕೆಗೆ ಬೆಲೆಕೊಟ್ಟು ಸಮೀಪಿಸು” ಎನ್ನುತ್ತಾನೆ. ಅದಕ್ಕವಳು  “ಕುಡಿತ ಇಷ್ಟವಿಲ್ಲ ಎನ್ನುವ ನನ್ನ ಭಾವನೆಗೆ ಬೆಲೆಕೊಡು. ಆಗ ನಾನು ಹೆಚ್ಚು ಪ್ರಣಯಭಾವ ತೋರಬಲ್ಲೆ.” ಎನ್ನುತ್ತಾಳೆ. ಅವನು ಬಿಡಲೊಲ್ಲ, ಆಕೆ ಒಳಗಾಗಲು ಒಲ್ಲಳು. ಯಾರಿಗೋಸ್ಕರ ಯಾರು ಬದಲಾಗಬೇಕು ಎನ್ನುವ ಸಂಘರ್ಷದಿಂದ ಸಮಾಗಮದ ನಂತರವೂ ದೂರವಾದಂತೆ ಸುರೇಶನಿಗೆ ಅನಿಸುತ್ತಿದೆ. ಇತ್ತೀಚೆಗೆ, ಪರಸ್ಪರರ ಭಾವನೆಗಳಿಗೆ ಬೆಲೆ ಕೊಡುವುದರಿಂದ ಸಂವೇದನಾಶೀಲತೆ ಹೆಚ್ಚಾಗುತ್ತದೆ, ಅದರಿಂದ ಅನ್ಯೋನ್ಯತೆಯೂ ಹೆಚ್ಚುತ್ತದೆ ಎನ್ನುವ ಅರಿವು ಸುರೇಶನಿಗೆ ಮೂಡಿದೆ. ಹಾಗಾಗಿ ಕುಡಿಯುವುದನ್ನು ನಿಲ್ಲಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ.

ಇಲ್ಲೇನು ನಡೆಯುತ್ತಿದೆ? ಸುರೇಶನ ಮನಸ್ಸಿನ ಒಂದು ಭಾಗವು ಕೂಡುವುದಕ್ಕಾಗಿ ಕುಡಿಯುವುದನ್ನು ಬಿಡಬೇಕು ಎನ್ನುತ್ತಿದ್ದರೆ, ಇನ್ನೊಂದು ಭಾಗವು ಕುಡಿಯಲಿಕ್ಕಾಗಿ ಕೂಡುವುದನ್ನು (ಭಾಗಶಃ) ಅಲಕ್ಷಿಸಬೇಕು ಎನ್ನುತ್ತಿದೆ.  ಹೆಂಡತಿಯ ಜೊತೆಗಿನ ಬಾಂಧವ್ಯಕ್ಕಿಂತ ಮದ್ಯದ ಜೊತೆಗಿನ ಬಾಂಧವ್ಯ ಹೆಚ್ಚಾದಂತಿದೆ. ಹೆಂಡತಿ, ಕಾಮಕೂಟ, ಅನ್ಯೋನ್ಯತೆ ಎಲ್ಲ ಎರವಾಗುತ್ತಿದ್ದರೂ ಕುಡಿತವನ್ನು ಬಿಡಲಾಗುವುದಿಲ್ಲ ಎಂದರೆ ಮದ್ಯವು ಅವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿರಬೇಕು. ಏನಿರಬಹುದು? ಕಾಮ ಇಬ್ಬರಿಗೂ ಸೇರಿದ್ದು, ಕುಡಿತ ಒಬ್ಬನಿಗೇ ಸೇರಿದ್ದು. ಥಟ್ಟನೆ ಹೊಳೆಯಿತು. ಪಾರಸ್ಪರಿಕತೆಗಿಂತ ತನ್ನೊಳಗಿನ ಯಾವುದೋ ಸೆಳೆತಕ್ಕೆ ಒಳಗಾಗುತ್ತಿದ್ದಾನೆ. ಏನಿರಬಹುದು? ಅವನು ಕುಡಿಯಲು ಕಲಿತಾಗ ಇದ್ದ ಹಿನ್ನೆಯ ಬಗೆಗೆ ವಿಚಾರಿಸಿದೆ. ವಿವರ ಮನ ಕರಗುವಂತಿತ್ತು.

ಅವನದು ಅಡಕೆ ಬೆಳೆಯುವ ರೈತ ಕುಟುಂಬ. ಬಾಲ್ಯ ಕಡುಬಡತನದಲ್ಲಿ ಕಳೆದಿದೆ. ನಾಲ್ಕು ಮಕ್ಕಳಲ್ಲಿ ಇವನು ಕಡೆಯವನು. ಹಾಗಾಗಿ ಸೌಕರ್ಯ ಎನ್ನುವುದೆಲ್ಲ ಮೂವರಿಗೆ ಸಿಕ್ಕು ಉಳಿದರೆ ಮಾತ್ರ ಇವನ ಪಾಲಿಗೆ. ಇವನು ಚಳಿಗಾಗಿ ಸ್ವೆಟರ್ ಕೊಡಿಸಲು ಬೇಡಿಕೊಂಡರೆ ಸಿಗಲಿಲ್ಲ. ಸೈಕಲ್ ಕೊಳ್ಳಲು ಕಾಸಿಲ್ಲದೆ ಹೈಸ್ಕೂಲಿಗೆ ನಡೆದುಕೊಂಡು ಹೋದ (ಇದನ್ನು ಹೇಳಿಕೊಳ್ಳುವಾಗ ಅವನ ಕಣ್ಣುಗಳಲ್ಲಿ ನೀರಾಡಿತು). ಬೇಸಿಗೆಯ ರಜೆಯಲ್ಲಿ ಬಾಲ್ಯ ಕಾರ್ಮಿಕನಾದ. ಬಡತನದ ನಿವಾರಣೆ ಹೇಗೆ ಎನ್ನುವ ಚಿಂತೆ ಸದಾ ಕೊರೆಯುತ್ತಿತ್ತು. ಪ್ರಬುದ್ಧನಾಗುತ್ತಿರುವಾಗ ಹೊಳೆಯಿತು: ಬೆಳೆದ ಅಡಕೆಯನ್ನು ಮಧ್ಯವರ್ತಿಗಳನ್ನು ದೂರವಿಟ್ಟು ಮಾರಿದರೆ ಹೆಚ್ಚು ಲಾಭವಿದೆ! ಅದಕ್ಕಾಗಿ ರಾಜಧಾನಿಗೆ ಹೋದ. ಅಲ್ಲಿ ಭಾಷೆ ಗೊತ್ತಿಲ್ಲದಾಗ ತಮ್ಮವರು ಎಂದು ನಂಬಿದವರಿಂದ ಮೋಸಹೋದ. ಐದು ವರ್ಷ ಉಳಿಸಿದ ಹಣವನ್ನು ಕಳೆದುಕೊಂಡ. ಅತೀವ ನಿರಾಸೆ ಆಯಿತು. ಭವಿಷ್ಯಹೀನತೆ ಧುತ್ತೆಂದಿತು. ಆಗಲೇ ಕುಡಿಯಲು ಶುರುಮಾಡಿದ್ದು. ಅಲ್ಲೇ ತಪ್ಪು ಮಾಡಿದೆ ಎಂದ. ಅವನನ್ನು ತಡೆದು ಹೇಳಿದೆ: “ನೀವೇನೂ ತಪ್ಪು ಮಾಡಿಲ್ಲ.”

“ವಾಸ್ತವವಾಗಿ, ಕುಡಿತವು ನಿಮ್ಮನ್ನು ಖಿನ್ನತೆ, ಹತಾಶೆಯಿಂದ ಕುಸಿದು ಬೀಳುವುದರಿಂದ ರಕ್ಷಿಸಿದೆ.” ಎಂದು ವಿವರಿಸಿದೆ. ಅಮಲಿನಲ್ಲಿ ಇದ್ದಷ್ಟು ಕಾಲವಾದರೂ ಅವನ ಮನಸ್ಸು ಒತ್ತಡದಿಂದ ಮುಕ್ತವಾಗಿರುತ್ತಿತ್ತು. ಅದಿಲ್ಲದಿದ್ದರೆ ಮಾನಸಿಕ ಸಂತುಲನ ಕಳೆದುಕೊಳ್ಳುವ ಸಂಭವವಿತ್ತು ಎಂದೆ. ಅವನು ಆಶ್ಚರ್ಯದಿಂದ, “ಹೌದು, ಅದು ಸ್ನೇಹಿತನಂತೆ ಸಹಾಯ ಮಾಡಿದೆ!” ಎಂದು ಉದ್ಗರಿಸಿದ. ಕಷ್ಟಕಾಲದಲ್ಲಿ ನೆರವಿಗೆ ಬಂದ ಸ್ನೇಹಿತನನ್ನು ಹೇಗೆ ಮರೆಯಲಾದೀತು? ಅಂದರೆ, ಕುಡಿಯುವ ಆಚರಣೆಯು ಅವನ ವ್ಯರ್ಥವಾದ ಪರಿಶ್ರಮ, ನಂಬಿಕೆ ದ್ರೋಹ, ಆರ್ಥಿಕ ನಷ್ಟ, ಹತಾಶೆ ಹಾಗೂ ಒಂಟಿತನ – ಎಲ್ಲದರ ಭಾವಪೂರ್ಣ ಸ್ಮರಣೆಯ ಸಂಕೇತ. ಪ್ರತಿದಿನ ತನಗೆ ಅರಿವಿಲ್ಲದಂತೆ ತನ್ನೊಳಗಿನ ನೋವನ್ನು ಮರುಕಳಿಸಿಕೊಳ್ಳುತ್ತ ಬದುಕುತ್ತಿದ್ದಾನೆ!

ಒಟ್ಟಿನಲ್ಲಿ, ಒಂದುಕಡೆಗೆ ಆನ್ಯೋನ್ಯತೆಯಲ್ಲಿ ಒಂದಾಗಲು ಕಾಯುತ್ತಿರುವ ಪ್ರಿಯಪತ್ನಿ, ಇನ್ನೊಂದೆಡೆ ಕುಸಿಯುತ್ತಿದ್ದ ತನ್ನನ್ನು ಕೈಹಿಡಿದಿದ್ದ ಪ್ರಾಣಸ್ನೇಹಿತ. ಇಬ್ಬರನ್ನೂ ಆರಿಸಿಕೊಂಡು ಇಬ್ಬಂದಿತನ ಉಂಟಾಗಿದೆ – ಒಂದು ಹಾಸಿಗೆಯಲ್ಲಿ ಪರಸ್ಪರ ಒಪ್ಪದ ಇಬ್ಬರು ಸಂಗಾತಿಗಳೊಡನೆ ಇದ್ದಂತೆ.

ಹಾಗಾದರೆ ಉಪಾಯವೇನು? ಕುಡಿತವನ್ನು ಬಿಟ್ಟುಬಿಡುವುದು. ಆದರೆ ಆಗುತ್ತಿಲ್ಲವಲ್ಲ ಎಂದು ಮತ್ತೆ ಗುಡ್ಡ ಸುತ್ತಿ ಮೈಲಾರಕ್ಕೇ ಬಂದ. ಆಗ ನಾನು, “ಹೇಗಿದ್ದರೂ ಹೆಂಡತಿ ನಿಮ್ಮನ್ನು ತಿರಸ್ಕರಿಸುತ್ತಿಲ್ಲ. ಕುಡಿಯದಿರುವ ಸಮಯದಲ್ಲಿ ಕೂಡಿದರಾಯಿತು. ಹೆಂಡತಿಗೂ ಕಿರಿಕಿರಿ ಇಲ್ಲ.” ಎಂದು ಅವನನ್ನು ಗಮನಿಸಿದೆ. ತನ್ನ ವಾಸನೆ, ವರ್ತನೆ ಆಕೆಗೆ ಹಿಡಿಸುವುದಿಲ್ಲ. ಅವಳಿಗಾಗಿ ಆದರೂ ಬಿಡಬೇಕು ಎಂದ. ಇತರರಿಗಾಗಿ ನೀವು ಗುರಿ ಇಟ್ಟುಕೊಳ್ಳಲಾರಿರಿ ಎಂದೆ. ಇತರರನ್ನು ಮೆಚ್ಚಿಸಲೆಂದು ಉಪವಾಸ ಮಾಡಲು ಆದೀತೆ? ಕುಡಿತದಿಂದ ಖುಷಿ ಸಿಗುತ್ತಿದ್ದರೆ ಅದನ್ನು ಇನ್ನೊಬ್ಬರಿಗೋಸ್ಕರ ಹೇಗೆ ಬಿಡಲಾದೀತು? ಅವನು ಸುಮಾರು ಹೊತ್ತು ಯೋಚನೆಯಲ್ಲಿ ಮುಳುಗಿ ಹೊರಬಂದ. “ಹಾಗಲ್ಲ, ಹೆಂಡತಿಯೊಡನೆ ಅನ್ಯೋನ್ಯತೆ ಬೆಳೆಸಲು ಅಷ್ಟೇ ಅಲ್ಲ,  ಒಳ್ಳೆಯ ಮನುಷ್ಯನಾಗಲು ಕುಡಿತ ಬಿಡಲೇಬೇಕು.” ವಾಹ್, ಈಗವನು ಅನ್ಯೋನ್ಯತೆಗಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸಲು ತಯಾರಾಗಿದ್ದಾನೆ, ಹಾಗೂ ಅನ್ಯೋನ್ಯತೆ ಬೆಳೆದಷ್ಟೂ ತಾನು ಬೆಳೆಯಬಲ್ಲೆ ಎಂದು ಕಂಡುಕೊಂಡಿದ್ದಾನೆ.

ಮುಂದೇನಾಯಿತು ಎಂಬುದನ್ನು ಮುಂದಿನ ಸಲ ವಿವರಿಸುತ್ತೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಪ್ರೀತಿಸಲು ಸ್ವಾತಂತ್ರ್ಯ ಬೇಕು, ಮದುವೆಯ ಭದ್ರತೆಯ ಹೆಸರಿನಲ್ಲಿ ಬಂಧನವಲ್ಲ. ಬಂಧನದಲ್ಲಿ ಪ್ರೀತಿ ಅರಳುವುದಿಲ್ಲ.

241: ಅನ್ಯೋನ್ಯತೆಗೆ ಹುಡುಕಾಟ – 20

ಬಾಂಧವ್ಯ ಬೇಡವೆಂದು ಗೋಡೆ ಹಾಕಿಕೊಳ್ಳುವ, ಹಾಗೂ ಸೂಕ್ತ ಸೀಮಾರೇಖೆ ಹೊಂದಿರದೆ ಅಮ್ಮನ ಮಗ ಎನ್ನಿಸಿಕೊಳ್ಳುವ ಗಂಡಸರನ್ನು ಅರ್ಥಮಾಡಿಕೊಳ್ಳುತ್ತ ಇವರ ವರ್ತನೆಯಿಂದ ಅನ್ಯೋನ್ಯತೆ ಕಟ್ಟಿಕೊಳ್ಳುವುದು ಹೇಗೆ ಸಮಸ್ಯೆಯಾಗುತ್ತದೆ ಎಂದು ತಿಳಿದೆವು. ಇಂಥ ಸಂಗಾತಿಯನ್ನು ಹೊಂದಿದ ಹೆಣ್ಣು ಅವನನ್ನು ಹೇಗೆ ಭಾವನಾತ್ಮಕ ನಂಟಿನತ್ತ ಸೆಳೆಯಬಹುದು ಎಂಬುದು ದೊಡ್ಡ ಸವಾಲು. ಇದನ್ನು ನಿರ್ವಹಿಸುವ ಒಂದು ಕಲೆಯನ್ನು ಈ ದೃಷ್ಟಾಂತದ ಮೂಲಕ ವಿವರಿಸುತ್ತೇನೆ:

ಆಶಾಳನ್ನು ಶ್ರವಣ (ಹೆಸರು ಬದಲಿಸಲಾಗಿದೆ) ಇಷ್ಟಪಟ್ಟು ಮದುವೆಯಾಗಿದ್ದಾನೆ. ಕೆಲವು ವರ್ಷಗಳ ನಂತರ ಅವರ ಬಾಂಧವ್ಯ ಕ್ಷೀಣವಾಗುತ್ತಿದೆ ಎಂದು ಆಶಾ ಗಮನಿಸಿದ್ದಾಳೆ. ಇದನ್ನು ಎತ್ತಿತೋರಿಸಿ ಏನಾದರೂ ಮಾಡಬೇಕೆಂದು ಒತ್ತಾಯಿಸಿದಾಗ ಶ್ರವಣ ಕ್ಯಾರೆ ಎನ್ನದೆ ಗೋಡೆ ಹಾಕಿಕೊಂಡು ಕುಳಿತಿದ್ದಾನೆ. ದಾಂಪತ್ಯ ಚಿಕಿತ್ಸೆಗೆ ಕರೆದರೆ, “ನನಗೇನೂ ತಲೆ ಕೆಟ್ಟಿಲ್ಲ!” ಎಂದು ನಿರಾಕರಿಸಿದ್ದಾನೆ. ಹಾಗಾಗಿ ಆಶಾ ಒಬ್ಬಳೇ ನನ್ನಲ್ಲಿ ಬಂದಿದ್ದಾಳೆ. (ಚಿಕಿತ್ಸೆಗೆ ಗಂಡ ಅನಿವಾರ್ಯವೆ? ಇಬ್ಬರೂ ಇದ್ದರೆ ಅತ್ಯುತ್ತಮ; ಇಲ್ಲದಿದ್ದರೆ ಒಬ್ಬರಾದರೂ ನಡೆಯುತ್ತದೆ. ಒಬ್ಬರು ಬದಲಾದರೂ ಮುಂಚಿನ ಸಮಸ್ಥಿತಿ ತಪ್ಪುತ್ತ, ಇನ್ನೊಬ್ಬರೂ ಬದಲಾಗುತ್ತಾರೆ.)

ಅವರಿಬ್ಬರ ಹಿನ್ನೆಲೆಯೇನು? ಇಬ್ಬರೂ ಕಟ್ಟಾ ಧಾರ್ಮಿಕ ಸಂಪ್ರದಾಯದ ಹಿನ್ನೆಲೆ ಹೊಂದಿದ್ದಾರೆ. ಹಾಗಿದ್ದರೂ ಆಶಾಳ ಸ್ವತಂತ್ರ ವಿಚಾರ ಧಾರೆಯನ್ನೂ ಅದನ್ನು ಪ್ರಾಮಾಣಿಕವಾಗಿ ಅನುಸರಿಸುವ ಕೆಚ್ಚನ್ನೂ ಶ್ರವಣ ಮೆಚ್ಚಿದ್ದಾನೆ (ಸಂಪ್ರದಾಯದ ವಿರುದ್ಧ ಹೋಗಲು ಅವನಲ್ಲಿ ಧೈರ್ಯವಿಲ್ಲ). ಮದುವೆಯಾಗಿ ಎರಡನೆಯ ಮಗು ತಾಯಿಯ ಸೊಂಟವನ್ನು ಬಿಡುವಂತಾದಾಗ, ಮಕ್ಕಳನ್ನು ಅತ್ತೆಮಾವಂದಿರಿಗೆ ಒಪ್ಪಿಸಿ ಆಕೆ ಸಾಂಸ್ಕೃತಿಕ ಸಮ್ಮೇಳನಕ್ಕೆ ಹೋಗಲು ಉತ್ಸುಕತೆ ತೋರಿಸಿದ್ದಾಳೆ. ಇದು ಮನೆಯವರಿಗೆ ನುಂಗಲಾರದ ತುತ್ತಾಗಿದೆ. ಹಾಗಿದ್ದರೂ ಅವರ (ಅರೆ)ಮನವೊಲಿಸಿ ಸಮ್ಮೇಳನಕ್ಕೆ ಬಂದಾಗಿದೆ. ಐದು ದಿನದ ಕಾರ್ಯಕ್ರಮದಲ್ಲಿ ಮೂರನೆಯ ದಿನವೇ ಗಂಡನಿಂದ ಬುಲಾವ್ ಬಂದಿದೆ. ಯಾಕೆ? ಮನೆಯ ಬಿಸಿಯನ್ನು ಅವನೊಬ್ಬನೇ ಎದುರಿಸಲು ಸಾಧ್ಯವಾಗಿಲ್ಲ. ಸೊಸೆಯಾಗಿ ಜವಾಬ್ದಾರಿಯನ್ನು ಕೈಬಿಟ್ಟ ಅವಳನ್ನು ಅತ್ತೆಮಾವ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಬಲಕ್ಕಾಗಿ ಆಶಾ ಗಂಡನನ್ನು ನೋಡಿದರೆ ಅವನು ಗೋಡೆ ನೋಡುತ್ತಿದ್ದಾನೆ. ಪ್ರತ್ಯೇಕವಾಗಿ ಮಾತಾಡಿಸಿದಾಗ ಏನೆನ್ನುತ್ತಾನೆ? ತಾಯ್ತಂದೆಯರನ್ನು ಎದುರಿಸಲು ಆಗುವುದಿಲ್ಲ, ಅವರಿಗೆ ವಯಸ್ಸಾಗಿದೆ, ನೀನೇ ಹೊಂದಿಕೋ ಎಂದಿದ್ದಾನೆ. ಆಕೆಗಿದು ವಿಶ್ವಾಸದ್ರೋಹ ಎನ್ನಿಸಿದೆ. ಬುದ್ಧಿ ತೋಚದೆ ನನ್ನಲ್ಲಿ ಧಾವಿಸಿದ್ದಾಳೆ.

ಇಲ್ಲೇನು ನಡೆಯುತ್ತಿದೆ? ಜನರು ಸಂಗಾತಿಯನ್ನು ಆರಿಸಿಕೊಳ್ಳುವಾಗ ಸಮಸ್ಯೆಯನ್ನೂ ಆರಿಸಿಕೊಳ್ಳುತ್ತಾರೆ ಎಂದು ದಾಂಪತ್ಯ ತಜ್ಞ ಡ್ಯಾನ್ ವೈಲ್ ಹೇಳುತ್ತಾನೆ. ಆಶಾಳ ಅಸಾಂಪ್ರದಾಯಿಕ ನಿಲುವನ್ನು ಮೆಚ್ಚಿ ಮದುವೆಯಾದ ಶ್ರವಣನಿಗೆ ಮದುವೆಯ ನಂತರ ಆಕೆಯ ಅಸಾಂಪ್ರದಾಯಿಕ ಧೋರಣೆಯೇ ಸರಿಬರುತ್ತಿಲ್ಲ. ಪರಿಹಾರವೇನು? ಸಮಸ್ಯೆಗೆ ಶ್ರವಣನ ಒಳಗಣ್ಣನ್ನು ತೆರೆಸುವುದು. ಇದನ್ನು ಹೇಳಲು ಹೊರಟರೆ ಆತ ಆಕೆಯ ಮಾತನ್ನು ಪೂರ್ತಿಮಾಡಲು ಅವಕಾಶ ಕೊಡುವುದಿಲ್ಲ.  ಸುಮಾರು ಚರ್ಚೆಯ ನಂತರ ಗಂಡನಿಗೆ ಬರೆದು ತಿಳಿಸಲು ಆಶಾ ನಿರ್ಧರಿಸಿದ್ದಾಳೆ. ವಿಷಯ ಏನಿರಬೇಕು?

“ನಮ್ಮಿಬ್ಬರ ಸಂಬಂಧವನ್ನು ಪುನರ್ವಿಮರ್ಶೆ ಮಾಡುವ ಕಾಲ ಬಂದಿದೆ. ಸ್ವಲ್ಪಕಾಲ ನಾವು ಪತಿಪತ್ನಿಯರು ಅಲ್ಲವೆಂದುಕೋ. ನನ್ನನ್ನು ಯಾವುದೋ ಸಂದರ್ಭದಲ್ಲಿ ಮೊಟ್ಟಮೊದಲು ನೋಡುತ್ತಿದ್ದೀಯಾ ಎಂದುಕೋ. ನನ್ನನ್ನು ಇಷ್ಟಪಡುತ್ತೀಯಾ? ಹೌದಾದರೆ ಏನೇನು ಇಷ್ಟವಾಗುತ್ತದೆ? ಈ ಹುಡುಗಿಯೊಡನೆ ಪ್ರೀತಿಯ ಸಂಬಂಧವನ್ನು ಕಟ್ಟಿಕೊಳ್ಳಬೇಕು ಎಂದು ಆಸೆಯಿದೆಯೆ? ಹೌದಾದರೆ ಒಡನಾಟ ಹೇಗಿರಬೇಕು ಎಂದು ಕನಸು ಕಾಣುತ್ತೀಯಾ? ಆಗ ನಿನಗೆ ತೃಪ್ತಿ, ಸಾರ್ಥಕತೆ ಹೇಗಿರುತ್ತದೆ? ಇವಳೊಡನೆ ಬದುಕು ಕಾಯಂ ಆದರೆ ಸಾಕು, ಸುಖವಾಗಿರಬಲ್ಲೆ ಎನ್ನುವಷ್ಟೇ ಕಲ್ಪನೆ ಸುಖವಾಗಿರುವುದಕ್ಕೆ ಸಾಕಲ್ಲವೆ?

“ನಮ್ಮ ಪರಿಣಯದಲ್ಲಿ ಯಾವ ಕಟ್ಟುಪಾಡುಗಳೂ ಇರಲಿಲ್ಲ. ನಾವಿಬ್ಬರೂ ಒಟ್ಟಿಗಿರುವ ಕಾಲವು ನನ್ನ ಬಿಡುವನ್ನು ಅವಲಂಬಿಸಿ ಇರುತ್ತಿತ್ತು. ನಾನು ಹಾಕಿದ ನಿಯಮಗಳನ್ನು ಒಪ್ಪಿಕೊಂಡು ನನ್ನನ್ನು ಮುಟ್ಟುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಮದುವೆಯಾಗು ಎಂದು ಗೋಗರೆಯುತ್ತಿದ್ದೆ. ಯಾಕೆ? ಸೆಕ್ಸ್‌ಗೋಸ್ಕರ. ಒಂದುವೇಳೆ ನಾನು ಒಪ್ಪಿದ್ದರೆ ಮದುವೆಯಿಲ್ಲದೆ ಮಲಗುವುದಕ್ಕೂ ತಯಾರಿದ್ದೆ. ಇಲ್ಲೊಂದು ವೈಚಿತ್ರ್ಯ ಗಮನಿಸಿದೆಯಾ? ನಮ್ಮಿಬ್ಬರ ಸಂಬಂಧವು ಹಿರಿಯರ ಪ್ರಭಾವಕ್ಕೆ ಒಳಗಾಗದೆ, ಸಂಪ್ರದಾಯದ ಕಟ್ಟುಪಾಡುಗಳನ್ನು ಅಲಕ್ಷಿಸಿ ಮೆರೆಯುತ್ತಿತ್ತು.

“ಸರಿ, ಮದುವೆಯಾಯಿತು. ಅದರೊಡನೆ ಕಟ್ಟುಪಾಡುಗಳು ನನ್ನಮೇಲೆ ಹೇರಲ್ಪಟ್ಟವು. ನಾನು ನಿಮ್ಮವರೊಂದಿಗೆ ಹೊಂದಿಕೊಳ್ಳಬೇಕು, ಸರಿ. ಆದರೆ ನಿನ್ನ ತಾಯ್ತಂದೆಯರನ್ನು ನೀನೇ ಎದುರಿಸಲು ಆಗುತ್ತಿಲ್ಲ ಎನ್ನುವ, ಹಾಗೂ ಅವರನ್ನು ನಾನು ಒಲಿಸಿಕೊಳ್ಳುವ ಕಾರಣದಿಂದ ನನ್ನ ಸ್ವಾತಂತ್ರ್ಯ ಮೊಟಕಾಯಿತು. ನನ್ನ ಬೆಳವಣಿಗೆ ನಿಂತುಹೋಯಿತು. ಅಂದರೆ, ಯಾವ ಗುಣವನ್ನು ಮೆಚ್ಚಿ ನನ್ನನ್ನು ವರಿಸಿದೆಯೋ ಅದನ್ನೇ ನನ್ನಿಂದ ಕಿತ್ತುಕೊಂಡು ಬದುಕು ಎನ್ನುತ್ತಿದ್ದೀಯಾ. ಒಂದುವೇಳೆ ನನ್ನ ಗುಣವನ್ನು ಬದಲಿಸಿದರೆ ಒಳಗೊಳಗೆ ಸಾಯುತ್ತೇನೆ. ನೀನು ನನ್ನನ್ನು ಕಳೆದುಕೊಳ್ಳುತ್ತೀಯಾ. ಇದು ನಿನಗಿಷ್ಟವೆ? ಯೋಚಿಸು.

“ಮುಂಚೆ ಸಂಪ್ರದಾಯದ ಕಟ್ಟುಪಾಡುಗಳಿಲ್ಲದೆ ಅತ್ಯಂತ ಸುಖವಾಗಿದ್ದೆವು. ಮದುವೆಯ ನಿಯಮಗಳಿಗೆ ಒಳಗಾಗಿ ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರರ್ಥ ಏನು? ಮದುವೆಯು ಪ್ರೀತಿಗೆ ಅಡ್ಡಿಯಾಗುತ್ತಿದೆ. ಹಾಗೂ, ಪ್ರೀತಿಯಿಂದ ಇರಬೇಕಾದರೆ ಮದುವೆಯ ಭದ್ರತೆ ಬೇಕಾಗಿಲ್ಲ. ಪ್ರೀತಿಸಲು ಸ್ವಾತಂತ್ರ್ಯ ಬೇಕು, ಭದ್ರತೆಯ ಹೆಸರಿನಲ್ಲಿ ಬಂಧನವಲ್ಲ. ಬಂಧನದಲ್ಲಿ ಪ್ರೀತಿ ಅರಳುವುದಿಲ್ಲ. ಗಾಲಿಬ್‌ನ ಶೇರ್, “ಗಿರೀ ಥೀ ಜಿಸ್‌ಪೆ ಕಲ್ ಬಿಜಲೀ ವೊ ಮೇರಾ ಆಶಿಯಾ ಕ್ಯೋಂ” ಶೇರ್ ನೆನಪಿಸಿಕೋ. (ಪಂಜರದಲ್ಲಿ ಬಂಧಿಸಲ್ಪಟ್ಟ ಗಿಳಿಗೆ ಮರಿಗಳು ಸತ್ತು ಹೋದದ್ದನ್ನು ಸಂಗಾತಿ ಗಿಳಿ ಹಾರಿಬಂದು ತಿಳಿಸಿದಾಗ, “ಸತ್ತವರು ನನ್ನವರು ಹೇಗಾದರು?” ಎನ್ನುತ್ತದೆ. ಸ್ವಾತಂತ್ರ್ಯ ಕಳೆದುಕೊಂಡ ನಂತರ ಏನೇ ಕಳೆದುಕೊಂಡರೂ ವ್ಯತ್ಯಾಸವಾಗುವುದಿಲ್ಲ ಎಂದಿದರ ತಾತ್ಪರ್ಯ.)

“ನಮ್ಮ ದಾಂಪತ್ಯ ತೀರಾ ಕೆಟ್ಟಿಲ್ಲ. ನಮ್ಮ ಪ್ರೀತಿಯನ್ನು ಮರಳಿ ತರಲು ದಾರಿಯಿದೆ – ನೀನೂ ಮನಸ್ಸು ಮಾಡಿದರೆ. ಏನದು? ಸ್ವಲ್ಪಕಾಲ ನಾವಿಬ್ಬರೂ ಮದುವೆ ಆಗಿದ್ದೇವೆ ಎಂಬುದನ್ನೇ ಮರೆತುಬಿಡೋಣ. ಮುಂಚಿನಂತೆ ಪ್ರೇಮಿಗಳಾಗಿ ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಿ ಸಮೀಪಿಸಲು ಶುರುಮಾಡೋಣ. ನಾವಿಬ್ಬರು ಒಂದುಕಡೆ, ನಮ್ಮಿಬ್ಬರ ವಿರುದ್ಧ ಕಟ್ಟುಪಾಡುಗಳು ಇನ್ನೊಂದೆಡೆ ಎನ್ನೋಣ. ವಾಡಿಕೆಯ ದಾಂಪತ್ಯದಿಂದ ಹೊರಬಂದು ನಮ್ಮದೇ ನಂಬಿಕೆಗಳ ದಾಂಪತ್ಯವನ್ನು ಕಟ್ಟಿಕೊಳ್ಳೋಣ.

“ಸ್ವತಂತ್ರಳಾಗಿ, ಸ್ವಚ್ಛಂದವಾಗಿದ್ದ ನನ್ನನ್ನು ಪ್ರೀತಿಸಿದ್ದೆ ಎಂದರೆ ನನ್ನ ಸ್ವಚ್ಛಂದತೆಯನ್ನೂ ಪ್ರೀತಿಸಿದ್ದೀಯಾ. ಗಿಡದಲ್ಲಿರುವ ಹೂವನ್ನು ನೋಡಿ, ಮುಟ್ಟಿ, ಮೂಸಿ ಆಸ್ವಾದಿಸಬೇಕು. ಬದಲು ಕಿತ್ತುಕೊಂಡರೆ ಬಾಡುತ್ತದೆ. ನನ್ನ ಸ್ವಾತಂತ್ರ್ಯಕ್ಕೆ ನನ್ನನ್ನು ಬಿಡು. ಸ್ವಾತಂತ್ರ್ಯ ಸಿಕ್ಕಷ್ಟೂ ನಾನು ನಾನೇ ಆಗುತ್ತೇನೆ, ಆಗ ನನ್ನಲ್ಲಿ ಹೊಸತನ ಹೆಚ್ಚಾಗುತ್ತ ನಿನ್ನ ಕುತೂಹಲ ಅರಳಿ ನಮ್ಮಿಬ್ಬರ ನಡುವಿನ ಆಕರ್ಷಣೆಗೆ ಜೀವ ಬರುತ್ತದೆ. ಇದು ಬೇಡವಾದರೆ ಸಂಪ್ರದಾಯಕ್ಕೆ ಬಲಿಯಾಗುತ್ತೇನೆ. ನೀನು ನನ್ನನ್ನು ಕಳೆದುಕೊಳ್ಳುತ್ತೀಯಾ. ನಿನಗೇನು ಬೇಕೆಂದು ಯೋಚಿಸು.”

ಗಂಡುಹೆಣ್ಣುಗಳು ಮದುವೆ ಆಗಿದ್ದನ್ನು ಮರೆತು ಪ್ರೇಮಿಗಳಂತೆ ವರ್ತಿಸಿದರೆ ಹೆಚ್ಚಿನ ದಾಂಪತ್ಯಗಳು ಅನ್ಯೋನ್ಯತೆಯ ಕಡೆಗೆ ಹೆಜ್ಜೆಯಿಡುತ್ತವೆ. 

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.