Please wait...

ಸುಖೀ ದಾಂಪತ್ಯ ೨೫೭

ಹೊಸ ಮಕ್ಕಳನ್ನು ಹುಟ್ಟಿಸುವುದರ ಬದಲು ನೋಡಿಕೊಳ್ಳುವ ಕೈಗಳು ಬದಲಾಗಲಿ ಎನ್ನುವುದು ನಿಸ್ವಾರ್ಥ ನೀತಿ!

257: ಮಗು ಬೇಕೆ? ಏಕೆ? – 10

ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿದು ಬದುಕುವ ಹಕ್ಕಿದೆಯೆಂದು ಹೋದಸಲ ಹೇಳುತ್ತಿದ್ದೆ. ಇತ್ತೀಚೆಗೆ ಇದರ ಬಗೆಗೆ ವ್ಯಾಪಕವಾಗಿ ಅರಿವು ಮೂಡುತ್ತಿರುವುದರಿಂದ ಮಗುವನ್ನು ಹೊಂದುವುದರ ಬಗ್ಗೆ ಪ್ರಸ್ತುತ ಸಮಾಜದ ಯುವಕಯುವತಿಯರು ಏನು ಮನೋಭಾವ ಹೊಂದಿದ್ದಾರೆ ಎಂಬುದನ್ನು ಈಸಲ ನೋಡೋಣ.

ನನ್ನ ಬಂಧುವೊಬ್ಬಳು 34 ವರ್ಷದವಳು, ವಿವಾಹಿತೆ. ಮದುವೆಗೆ ಮುಂಚೆಯೇ (ಅಂದಹಾಗೆ ಇದು ಹಿರಿಯರಿಂದ ವ್ಯವಸ್ಥೆಗೊಂಡಿದ್ದು) ಇವಳೂ ಭಾವೀ ಗಂಡನೂ ಮಾತಾಡಿಕೊಂಡು ನಿರ್ಧರಿಸಿದ್ದಾರೆ: ತಮಗೆ ಮಗು ಬೇಡ. ಒಂದುವೇಳೆ ಆಗುವುದಾದರೆ ಇಬ್ಬರೂ ಒಮ್ಮತದಿಂದ ನಿರ್ಧರಿಸಿರಬೇಕು. ಹಾಗಾಗಿ ಒಂಬತ್ತು ವರ್ಷಗಳಾದರೂ ಇವರಲ್ಲಿ ಮಗುವಿನ ಮಾತೇ ಬಂದಿಲ್ಲ. ಇವಳೊಡನೆ ನಡೆದ ಸಂದರ್ಶನದ ವಿವರವನ್ನು ನಿಮ್ಮ ಮುಂದಿಡುತ್ತಿದ್ದೇನೆ:

ಪ್ರಶ್ನೆ: ಮಗು ಬೇಡವೆಂಬ ನಿಮ್ಮ ನಿರ್ಧಾರಕ್ಕೆ ಹಿನ್ನೆಲೆಯೇನು?

ಉತ್ತರ: ಜಗತ್ತಿನಲ್ಲೇ ಬಹುಶಃ ಅತಿಹೆಚ್ಚಿನ ಜನಸಾಂದ್ರತೆ ಇರುವ ದೇಶ ನಮ್ಮದು. ಜನಸಂಖ್ಯೆಯು ಪ್ರತಿಸಲ ದ್ವಿಗುಣವಾಗುತ್ತಿರುವಾಗ ಆಹಾರದ ಮೂಲಗಳು ಕ್ರಮೇಣ ಹೆಚ್ಚುತ್ತಿವೆಯಷ್ಟೆ. ಇದರೊಡನೆ ಅರಣ್ಯನಾಶ, ಪರಿಸರ ಮಾಲಿನ್ಯ, ಸಿಹಿನೀರಿನ ಕೊರತೆ ಇತ್ಯಾದಿ ಸೇರಿಸಿ ನೋಡಿದರೆ ನಾಳಿನ ಮಕ್ಕಳು ಶುದ್ಧ ಗಾಳಿ ಹಾಗೂ ಆಹಾರಕ್ಕಾಗಿಯೇ ಪರದಾಡುವ ಪ್ರಸಂಗವಿದೆ ಎಂದೆನಿಸುತ್ತದೆ. ಇಂಥದ್ದರಲ್ಲಿ ಮಗುವನ್ನು ಹುಟ್ಟಿಸದಿರುವುದೇ ವಿಶ್ವಶಾಂತಿಗೆ ನನ್ನ ಪುಟ್ಟ ಕೊಡುಗೆ ಎಂದುಕೊಳ್ಳುತ್ತೇನೆ. ನಮ್ಮ ಸ್ನೇಹಿತರದೂ ಇದೇ ಅಭಿಮತವಿದೆ.

ಪ್ರಶ್ನೆ: ಮಗು ಇಲ್ಲದಿದ್ದರೆ ಬದುಕಿನಲ್ಲಿ ಏನು ಸಾಧಿಸಬೇಕು ಎಂದುಕೊಂಡಿದ್ದೀರಿ?

ಉ: ನಾನು ವೃತ್ತಿಪರಳು. ನನ್ನ ವೃತ್ತಿಯಲ್ಲಿ ಸಾಧಿಸಬೇಕಾದದ್ದು ಬಹಳಷ್ಟಿದೆ ಅದಕ್ಕಾಗಿ ನನಗೆ ತುಂಬಾ ಸಮಯ ಬೇಕು.

ಪ್ರಶ್ನೆ: ಉದ್ಯೋಗದ ಹೊರತಾಗಿ ನಿಮ್ಮ ಪ್ರಪಂಚದಲ್ಲಿ ಏನು ಇಲ್ಲವೇ?

ಉ: ನೀವು ತಪ್ಪು ತಿಳಿದಿರಿ. ನಿಜ ಹೇಳಬೇಕೆಂದರೆ ಉದ್ಯೋಗ ಬಿಟ್ಟು ನನ್ನ ಪ್ರಪಂಚ ವಿಶಾಲವಾಗಿದೆ. ನನ್ನದೇ ಆದ ಕೆಲವು ಉದ್ದೇಶಗಳನ್ನು ಇಟ್ಟುಕೊಂಡು ಬದುಕುತ್ತಿದ್ದೇನೆ. ಮಹಾಕೃತಿಗಳನ್ನು ಓದುವುದು, ಹೊಸ ವಿಷಯಗಳ ಅಧ್ಯಯನ, ಆಗಾಗ ಧ್ಯಾನದ ಶಿಬಿರದಲ್ಲಿ ವಾಸ,  ಏಕಾಂತದಲ್ಲಿ  ಚಿಂತನೆ, ವಿಶ್ವ ಪರ್ಯಟನ – ಹೀಗೆ ಬದುಕು ನಡೆಸುವ ಇಂಗಿತ ನನ್ನದು. ಹೀಗಾಗಿ ಮಗುವಿಗಾಗಿ ನನ್ನಲ್ಲಿ ಸಮಯವಾಗಲೀ ವ್ಯವಧಾನವಾಗಲೀ ಇಲ್ಲ. ಒಂದುವೇಳೆ ಹುಟ್ಟಿಸುವುದಾದರೆ ಪ್ರೀತಿ, ಕಾಳಜಿ, ಸಮಯ ಇತ್ಯಾದಿ ಮೀಸಲಾಗಿಡಬೇಕು. ಇಲ್ಲದಿದ್ದರೆ ಅದಕ್ಕೆ ಅಗೌರವ ತೋರಿಸಿದಂತೆ!

ಪ್ರಶ್ನೆ: ಮಕ್ಕಳನ್ನು ಕಂಡರೆ ನಿಮಗೇನು ಅನ್ನಿಸುತ್ತದೆ?

ಉ: ಮಕ್ಕಳೆಂದರೆ ಅತಿಶಯ ಪ್ರೀತಿಯಿದೆ. ಕಂಡಕಂಡ ಮಕ್ಕಳನ್ನು ಮುದ್ದಾಡುತ್ತೇನೆ. ನಮ್ಮ ಗೆಳತಿಯರ ಮಕ್ಕಳು ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಹಾಗೆಂದು ಮಕ್ಕಳನ್ನು ಬೆಳೆಸುವ ಸಲುವಾಗಿ ನನ್ನ ವೈಯಕ್ತಿಕ ಬದುಕನ್ನು ಬಿಟ್ಟುಕೊಡಲಾರೆ. ಒಂದುವೇಳೆ ಹಾಗಾದರೆ ನಿರಾಶೆ ಕಾಡುತ್ತ ಮಗುವನ್ನು ಸರಿಯಾಗಿ ನೋಡಿಕೊಳ್ಳಲಾರದೆ ತಪ್ಪಿತಸ್ಥ ಭಾವನೆ ದುಪ್ಪಟ್ಟಾಗುತ್ತದೆ. ಎರಡನೇ ಕಾರಣ ಏನೆಂದರೆ, ನಾವಿಬ್ಬರೂ ಆರಿಸಿಕೊಂಡಿರುವ ಉದ್ಯೋಗಗಳು ನಮ್ಮ ಹೃದಯಗಳಿಗೆ ಹತ್ತಿರವಾಗಿವೆ. ಆದರೆ ಅನಿಶ್ಚಿತತೆ ಇರುವುದರಿಂದ ಮಗುವಿಗೆ ಆರ್ಥಿಕ ಭದ್ರತೆ ಸಿಗಲಾರದು ಎನಿಸುತ್ತದೆ. ಇದಲ್ಲದೆ, ನಾನು ನನ್ನ ಈಗಿರುವ ಉದ್ಯೋಗವನ್ನು ಬಿಟ್ಟು ಮನಃಶಾಸ್ತ್ರವನ್ನು ಕೈಗೆತ್ತಿಕೊಂಡು ಆಪ್ತಸಲಹೆಗಾರಳಾಗಲು ಯೋಚಿಸುತ್ತಿದ್ದೇನೆ. ವೃತ್ತಿ ಬದಲಾವಣೆಗೆ ಮಗು ಅಡ್ಡಿಯಾಗುತ್ತದೆ.

ಪ್ರಶ್ನೆ: ನಿಮ್ಮೊಳಗಿನ ತಾಯ್ತನದ ಪ್ರೀತಿಯನ್ನು ಯಾರಿಗೆ ಧಾರೆ ಎರೆಯುವಿರಿ?

ಉ: ಪ್ರೀತಿ ಕೊಡಲು ನಮ್ಮದೇ ಮಗು ಬೇಕಿಲ್ಲ; ಯಾರದೇ ಮಗು ಆದೀತು. ಯಾರ ಜೊತೆಗೂ ಭಾವನಾತ್ಮಕ ಸಂಬಂಧ ಬೆಳೆಸಲು ಸಾಧ್ಯವಿದೆ. ಮಕ್ಕಳೇಕೆ, ಪ್ರಾಣಿಗಳ ಜೊತೆಗೂ ಬಾಂಧವ್ಯ ಬೆಳೆಸಬಹುದು. ನನಗೆ ನಾಯಿಗಳೆಂದರೆ ಬಲುಪ್ರೀತಿ. ಅಷ್ಟೇಕೆ ಗಿಡಮರಗಳನ್ನೂ ಪ್ರೀತಿಸಬಹುದು. ನನ್ನ ಸ್ನೇಹಿತನೊಬ್ಬ ಮನೆತುಂಬಾ ಗಿಡಗಳನ್ನು ಬೆಳೆಸಿದ್ದಾನೆ. ಹಾಗೆ ನೋಡಿದರೆ ಪ್ರಾಣಿಗಳು ಹಾಗೂ ಗಿಡಮರಗಳಿಗೆ ಪ್ರೀತಿಯನ್ನು ಧಾರೆ ಎರೆಯುವುದರಲ್ಲಿ ಸಿಗುವ ಸಂತೃಪ್ತಿ, ಸಾರ್ಥಕತೆ ಕಡಿಮೆಯೇನಲ್ಲ. ಹಾಗಾಗಿ ನನ್ನವೇ ಮಕ್ಕಳು ಬೇಕೆಂದು ಅನ್ನಿಸಿದ್ದೇ ಇಲ್ಲ.

ಪ್ರಶ್ನೆ: ಇತರರ ಮಕ್ಕಳು ನಿಮ್ಮ ಮಕ್ಕಳು ಹೇಗಾಗುತ್ತಾರೆ?

ಉ: ಪ್ರೀತಿ-ವಾತ್ಸಲ್ಯಗಳನ್ನು ಧಾರೆಯೆರೆಯಲು ಸ್ವಂತ ಮಕ್ಕಳೇ ಬೇಕು ಎನ್ನುವುದು ಸಂಕುಚಿತ ದೃಷ್ಟಿಕೋನ – ಇದು ಇತರ ಮಕ್ಕಳಿಗೆ ಅನ್ಯಾಯ ಮಾಡಿದಂತೆ. ಸರತಿಯ ಸಾಲಿನಲ್ಲಿ ಜಾಗ, ಕಾಲೇಜಿನಲ್ಲಿ ಸೀಟು, ಹಾಗೂ ಉದ್ಯೋಗವು ಇನ್ನೊಬ್ಬರ ಬದಲು ನನ್ನ ಮಗುವಿಗೆ ಸಿಗಲಿ ಎನ್ನುವುದರಲ್ಲಿ ಸ್ವಾರ್ಥವಿದೆ. ಸ್ಪರ್ಧೆಯಲ್ಲಿ “ನನ್ನ ಮಗು ಗೆಲ್ಲಲಿ” ಎಂದರೆ ಇನ್ನೊಂದು ಮಗುವಿಗೆ ಸೋಲನ್ನು ಬಯಸಿದಂತೆ ಆಯಿತು; ನನ್ನ ಮಗು ಸೋತರೆ ನಿರಾಸೆ ಖಂಡಿತ. ಆದರೆ ನಮಗೆ ಸಂಬಂಧಪಡದ ಮಕ್ಕಳನ್ನು ಬೆಳೆಸುವುದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಅಗತ್ಯವಾದರೆ ಅನಾಥ ಮಕ್ಕಳ – ಒಬ್ಬರನ್ನೇಕೆ ನಾಲ್ವರ – ಹೊಣೆ ಹೊರಬಹುದು, ಹೆರಬೇಕೆಂದಿಲ್ಲ. ಪ್ರಾಣಿಗಳನ್ನೂ ಸಾಕಬಹುದು. ಗಿಡಮರಗಳನ್ನು ಬೆಳೆಸಿ ಅರಣ್ಯ ಮಾಡಬಹುದು. ಇವೆಲ್ಲವುಗಳಲ್ಲಿ ಒಂದು ವಿಶೇಷತೆಯಿದೆ: ಇವೆಲ್ಲ ಆತ್ಮವಿಕಾಸಕ್ಕೆ ದಾರಿ. ಇದರಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಇವೆ; ಸ್ವಾರ್ಥವಾಗಲೀ ಅಹಮಿಕೆಯಾಗಲೀ ಇಲ್ಲ.  ಹಾಗೆ ಹೇಳಬೇಕೆಂದರೆ, ಹೊಸ ಮಕ್ಕಳನ್ನು ಹುಟ್ಟಿಸುವುದರ ಬದಲು ನೋಡಿಕೊಳ್ಳುವ ಕೈಗಳು ಬದಲಾಗಲಿ ಎನ್ನುವುದು ನಿಸ್ವಾರ್ಥ ನೀತಿ. ಇದು ಸ್ವಂತ ಮಕ್ಕಳಿಗೋಸ್ಕರ ತ್ಯಾಗ ಮಾಡುವುದಕ್ಕಿಂತ ಹೆಚ್ಚು ಕರುಣೆಯಿಂದ ಕೂಡಿದ್ದು, ಮಾನವೀಯತೆಗೆ ಹತ್ತಿರವಾಗಿದೆ. ನನ್ನ ಹೊಟ್ಟೆಯಿಂದ ಹುಟ್ಟಿದವರಿಗೆ ಮಾತ್ರ ಬದುಕುವ ಅರ್ಹತೆಯಿದೆ ಎನ್ನುವುದು ವಿಶ್ವಬಂಧುತ್ವಕ್ಕೆ ವಿರೋಧ.

ಪ್ರಶ್ನೆ: ಮಗುವನ್ನು ಹೆರುವುದು,  ಬೆಳೆಯುವುದನ್ನು ಕಣ್ತುಂಬ ನೋಡುವುದು ಇವೆಲ್ಲವೂ ಅದ್ಭುತ ಅನುಭವಗಳಲ್ಲವೆ?

ಉ: ಇರಬಹುದು. ಆದರೆ ಮಕ್ಕಳಿಲ್ಲದಿರುವಾಗ ಸಿಗುವ ಏಕಾಂಗಿತನದಲ್ಲಿ ವೈಯಕ್ತಿಕ ವಿಕಾಸಕ್ಕೆ ಸಾಕಷ್ಟು ಅವಕಾಶವಿದೆ. ಅದು ಸಂಸಾರದಲ್ಲಿ ಇಲ್ಲ. ಮಕ್ಕಳು ಇಲ್ಲದಿದ್ದರೆ ಹೆಚ್ಚಿನ ಗಳಿಕೆಯ ಯೋಚನೆಯಿಲ್ಲದೆ ನಮಗೆ ಇಷ್ಟವಾದ ಹಾದಿಯಲ್ಲಿ ಮುಂದುವರಿಯಲು ಅನುಕೂಲವಿದೆ. ಮಕ್ಕಳನ್ನು ಬೆಳೆಸುವುದು ಒಂದು ಆಧ್ಯಾತ್ಮಿಕ ಅನುಭವದಂತೆ. ಸಂಗಾತಿಯೊಡನೆ, ಸ್ನೇಹಿತರೊಡನೆ ಬದುಕುವುದೂ ಒಂದು ಆಧ್ಯಾತ್ಮಿಕ ಅನುಭವ. ಸಸ್ಯ-ಪ್ರಾಣಿಗಳೊಡನೆ ಅಥವಾ ಏಕಾಂಗಿಯಾಗಿ ಬದುಕುವುದು ಇನ್ನೊಂದು ಅಧ್ಯಾತ್ಮಿಕ ಅನುಭವ. ಅವುಗಳನ್ನು ಒಂದಕ್ಕೊಂದು ಹೋಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಗಂಡಸರು ಗರ್ಭದಲ್ಲಿ ಮಗುವನ್ನು ಹೊರಲಾರರು – ಹಾಗೆಂದು ವ್ಯಥಿಸುತ್ತಿದ್ದಾರೆಯೆ? ನಾನು, ನನ್ನ ಮಕ್ಕಳು ಎನ್ನುವ ಅಹಮಿಕೆಯನ್ನು ಬಿಟ್ಟು ಬೆಳೆಸಿದರೆ ಅನುಭವವೇ ಬೇರೆಯಾದೀತು. ನನಗೆ ಸಂಬಂಧಪಡದವರನ್ನು ಕುಟುಂಬದ ಭಾಗವಾಗಿ ನೋಡಿಕೊಳ್ಳುವುದರಲ್ಲಿ ದೈವಸದೃಶವಾದ ಆಧ್ಯಾತ್ಮಿಕ ಮೌಲ್ಯವಿದೆ.

ಪ್ರಶ್ನೆ: ವಯಸ್ಸಾದ ಮೇಲೆ ನಿಮ್ಮನ್ನು ಯಾರು ನೋಡಿಕೊಳ್ಳುವರು?

ಉತ್ತರ: ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಉದ್ದೇಶ ಇಟ್ಟುಕೊಂಡು ಮಗು ಮಾಡಿಕೊಳ್ಳುವುದು ನನ್ನ ಮೌಲ್ಯಗಳಿಗೆ ವಿರೋಧವಾದುದು. ಅದರ ಬದಲು ಹೆಚ್ಚು ಹಣ ಸಂಪಾದಿಸಿ, ವೃದ್ಧಾಪ್ಯದ ಖರ್ಚಿಗೆ ಮೀಸಲಿಡುವುದು ಸೂಕ್ತ ಎನ್ನಿಸುತ್ತದೆ. ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದು, ಹಾಗೂ ಉತ್ಕೃಷ್ಟವಾದ ವೃದ್ಧಾಶ್ರಮವನ್ನು ಸೇರುವುದು ನಮಗಿಬ್ಬರಿಗೂ ಇಷ್ಟ.

(ಸಂಭಾಷಣೆ ಮರುವಾರಕ್ಕೆ ಮುಂದುವರಿಯುತ್ತದೆ.)

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.