Please wait...

ಸುಖೀ ದಾಂಪತ್ಯ ೨೪೪

ಎಲ್ಲರಿಂದಲೂ ಹೀನೈಕೆ ಅನುಭವಿಸುವಾಗ ಅನ್ಯೋನ್ಯತೆ ಹುಟ್ಟುವುದಾದರೂ ಹೇಗೆ?

244: ಅನ್ಯೋನ್ಯತೆಗೆ ಹುಡುಕಾಟ – 23

ದಾಂಪತ್ಯದಲ್ಲಿ ವಿವಿಧ ಸಮಸ್ಯೆಗಳಿರುವಾಗ ಅನ್ಯೋನ್ಯತೆಯನ್ನು ತಂದುಕೊಳ್ಳುವುದು ಹೇಗೆ ಎನ್ನುವುದರ ಬಗೆಗೆ ಮಾತಾಡುತ್ತ, ಒಂದೊಂದು ವಿಶಿಷ್ಟ ಸಂದರ್ಭವನ್ನೂ ಮುಂದಿಟ್ಟುಕೊಂಡು ಚರ್ಚಿಸುತ್ತಿದ್ದೇವೆ.

ನಮ್ಮಲ್ಲಿ ಹಿರಿಯರ ವ್ಯವಸ್ಥೆಯಂತೆ ಮದುವೆಯಾಗುವ ಪದ್ಧತಿ ವ್ಯಾಪಕವಾಗಿದೆ. ಅದರಲ್ಲೂ ಸಂಪ್ರದಾಯಸ್ಥ ಹಳ್ಳಿಯ ಜನರಿಗೆ ಮದುವೆ ಎಂದರೆ ಗಂಡನಿಗೆ ಹೆಂಡತಿಯನ್ನು ತರುವುದಕ್ಕಿಂತಲೂ ಅವನ ತಾಯ್ತಂದೆಯರಿಗೆ ಸೊಸೆಯನ್ನು, ಮನೆಗೆ ಹೆಣ್ಣನ್ನು ತರುವುದು ಮುಖ್ಯವಾಗಿರುತ್ತದೆ. ಹೆಣ್ಣಿಗೆ ಸ್ವಾತಂತ್ರ್ಯ ಅಷ್ಟಕ್ಕಷ್ಟೆ ಎನ್ನುವ ಸಂದಿಗ್ಧ ಸನ್ನಿವೇಶದಲ್ಲಿ ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವುದು ಅಸಾಧ್ಯ ಎನ್ನಿಸಿಬಿಡುತ್ತದೆ. ಇಂಥ ಪ್ರಸಂಗದಲ್ಲಿ ಏನಾಗಬಹುದು ಎನ್ನುವುದನ್ನು ದೃಷ್ಟಾಂತದ ಮೂಲಕ ನಿಮ್ಮಮುಂದೆ ಇಡುತ್ತಿದ್ದೇನೆ.

ತರುಣಿ  ಸರಳಾ (ಹೆಸರು ಬದಲಿಸಿದೆ) ತಾಯಿಯ ಜೊತೆಗೆ ನನ್ನನ್ನು ಭೇಟಿಮಾಡಿದ್ದಾಳೆ. ಸ್ನಾತಕೋತ್ತರ ಪದವೀಧರೆ. ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. ಸಮಸ್ಯೆ ಏನೆಂದರೆ, ಆಕೆಯು ಅತ್ತೆಯ ಮನೆಗೆ ಹೊಂದಿಕೊಳ್ಳುತ್ತಿಲ್ಲವಂತೆ. ಅವರೆಲ್ಲ ಸೇರಿ ಈಕೆಯ ಮೇಲೆ ಕೈಮಾಡಿದ್ದಾರೆ. ಪೋಲೀಸರ ಸಹಾಯದಿಂದ ತವರಿಗೆ ಮರಳಿದ್ದಾಳೆ. ಅಲ್ಲಿ ಆಕೆಯ ಅಣ್ಣನೂ ಅಪ್ಪನೂ ಮನವೊಲಿಸಿ ತಿರುಗಿ ಕಳಿಸಲು ನೋಡಿದ್ದಾರೆ. ಮಾತು ಕೇಳದಿರುವಾಗ ಅವರೂ ಬಯ್ದು ಹೊಡೆದಿದ್ದಾರೆ. ತವರಿನಲ್ಲಿ ಜಾಗವಿಲ್ಲ ಎಂದಿದ್ದಾರೆ. ಎರಡೂ ನೆಲೆಗಳನ್ನು ಕಳೆದುಕೊಂಡು ಅತಂತ್ರಳಾಗುವ ಭಯದಿಂದ ಬುದ್ಧಿಭ್ರಮಣೆಗೊಂಡ ಆಕೆಗೆ ಮನೋವೈದ್ಯರಿಂದ ಮಾತ್ರೆ ಕೊಡಿಸಲಾಗಿದೆ. ಕೆಲಸವಾಗದೆ ನನ್ನಲ್ಲಿ ಬಂದಿದ್ದಾಳೆ. ಆಕೆಯ ನಿಷ್ಪಾಪಿ ಕಣ್ಣುಗಳಲ್ಲಿ ಭಯ, ಮುಖದಲ್ಲಿ ಕಂಗಾಲು ಭಾವ ಹೆಪ್ಪುಗಟ್ಟಿದೆ. ಏಕತಾನದಲ್ಲಿ ಎಚ್ಚರಿಕೆಯಿಂದ ಮಾತಾಡುತ್ತಿದ್ದಾಳೆ – ಬಹುಶಃ ನಾನೂ ಹಿರಿಯ ಗಂಡಸೆಂಬ ಭಯವೇನೊ?

ಸರಳಾಳ ಅತ್ತೆ ಮಾವಂದಿರ ಬಗೆಗೆ ವಿಚಾರಿಸಿದೆ. ಮನೆಯಲ್ಲಿ ಅತ್ತೆಯದೇ ದರಬಾರು. ಮೊದಲ ಸೊಸೆಯನ್ನು ಮುಂಚೂಣಿಯಲ್ಲಿಟ್ಟು ಸರಳಾಳನ್ನು ಮೂರನೆಯ ಸ್ಥಾನಕ್ಕೆ ತಳ್ಳಲಾಗಿದೆ. ಅಡುಗೆ ಮನೆಯಲ್ಲಿ ಈಕೆಗೆ ಸ್ವಾಗತವಿಲ್ಲ. ಆಗಾಗ ಈಕೆಯ ತಾಯ್ತಂದೆಯರ ಮಾತೆತ್ತಿ ಚಿಟಕುಮುಳ್ಳು ಆಡಿಸುತ್ತಾರೆ. ಸಲ್ಲದ ನಿಯಮಗಳನ್ನು ಆಕೆಯ ಮೇಲೆ ಹೇರಲಾಗಿದೆ. ಉದಾ. ಒಮ್ಮೆ ಈಕೆ ಮಧ್ಯಾಹ್ನ ಹುಬ್ಬು ತಿದ್ದಿಸಿಕೊಳ್ಳಲು ಹೊರಟಾಗ ಮಾವ ತಡೆದಿದ್ದಾರೆ. ಒಬ್ಬಳೇ ಹೊರಗೆ ಹೋಗುವುದು ಉಚಿತವಲ್ಲ, ಗಂಡ ಬರುವ ತನಕ ಕಾಯ್ದು ಅವನೊಪ್ಪಿದರೆ ಅವನೊಡನೆ ಹೋಗಬಹುದು ಎಂದಿದ್ದಾರೆ. ಮುಂಚೆಯೆಲ್ಲ ಒಬ್ಬಳೇ ಎಲ್ಲ ವ್ಯವಹಾರ ಮಾಡುತ್ತಿದ್ದವಳು, ಮದುವೆಯಾಗಿದೆ ಎಂದಮಾತ್ರಕ್ಕೆ ಸ್ವಚ್ಛಂದತೆಯನ್ನು ಬಿಟ್ಟುಕೊಡಲು ಮನಸ್ಸು ಒಪ್ಪಿಲ್ಲ. ಸಂಜೆ ಗಂಡ ಮರಳಿದಾಗ ಅವನೆದುರು ಇವಳ ಉದ್ಧಟತನವನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು, ಸರಳಾಗೆ ಏಕಾಂತ ಎಂದರೆ ಇಷ್ಟ. ಆಗಾಗ ತನ್ನ ಕೋಣೆಯನ್ನು ಸೇರಿ ಒಂಟಿಯಾಗಿ ಕಳೆಯುತ್ತಾಳೆ. ಅದು ಎಲ್ಲರಿಗೂ ಕಣ್ಣುಕೀಸರಾಗಿದೆ. ಬಂಧುಬಳಗ ಸಂತೆಯಂತೆ ಇವರಲ್ಲಿಗೆ ಬರುತ್ತಾರೆ. ಅವರನ್ನು ಸತ್ಕರಿಸುವ ಹೊಣೆ ಹೊಸ ಸೊಸೆಯದು. ಈಕೆಗೋ ಅಪರಿಚಿತರೊಡನೆ ಬೆರೆತು ನಕ್ಕು ರೂಢಿಯಿಲ್ಲ. ಅವಳ ಹಿಂಜರಿಕೆಯನ್ನು ಎಲ್ಲರೂ ಹೀಗಳೆಯುತ್ತಾರೆ.  ಹಾಗಾಗಿ ಗಂಡನಿಗೆ ಬೇರೆ ಮನೆ ಮಾಡಲೆಂದು ಒತ್ತಾಯಿಸಿದ್ದಾಳೆ. ಅದೇ ದೊಡ್ಡ ಪ್ರಕರಣವಾಗಿ, ಇವಳ ಮೇಲೆ ಸೌಮ್ಯವಾಗಿ ಹಲ್ಲೆ ಮಾಡಲಾಗಿದೆ. ತಾನು ಯಾಕೆ ಹೊಡೆಸಿಕೊಂಡೆ ಎಂಬುದು ಇಲ್ಲಿಯ ತನಕ ಗೊತ್ತಾಗಿಲ್ಲ. ನೋವು ತಿಂದು ಪರಿತ್ಯಕ್ತಳಾಗಿ ತವರಿಗೆ ಮರಳಿದಾಗ ಇಲ್ಲಿಯೂ ಅದೇ ಕತೆ. ಹುಡುಗ ಎಷ್ಟು ಒಳ್ಳೆಯವನು, ಇವಳದೇ ತಪ್ಪು ಎಂದು ಅಣ್ಣ ಅಪ್ಪ ಕೂಡಿ ಹೊಡೆದಿದ್ದಾರೆ. ಮುಂದಿನ ವಾರ ಗಂಡನ ಮನೆಯವರು ಕರೆಯಲು ಬರುತ್ತಾರಂತೆ. ಎಲ್ಲರೆದುರು ಈಕೆ ತಪ್ಪೊಪ್ಪಿಕೊಂಡು, ಒಂದೇ ಮನೆಯಲ್ಲಿ ಎಲ್ಲರೊಡನೆ ಹೊಂದಿಕೊಂಡು ನಡೆಯುತ್ತೇನೆಂದು ಪ್ರಮಾಣ ಮಾಡಬೇಕಂತೆ. ತನ್ನನ್ನು ಅಪರಾಧಿಯಾಗಿ ಮಾಡಿ ಮನೆಯಿಂದ ಗಡಿಪಾರು  ಶಿಕ್ಷೆ ವಿಧಿಸಲಾಗುತ್ತಿದೆ ಎಂದೆನಿಸುತ್ತಿದೆ. ಅದಿರಲಿ, ಇಲ್ಲಿ ಸರಳಾಳ ತಾಯಿಯ ಪಾತ್ರವೇನು? ಅವಳೋ ಕೈಚೆಲ್ಲಿ ಕೂತಿದ್ದಾಳೆ. ಮಗಳ ಬಾಳು ಹಸನಾದರೆ ಸಾಕು ಎನ್ನುತ್ತಾಳಷ್ಟೇ ವಿನಾ ಆಕೆಗೇನು ಬೇಕು, ಹಾಗೂ ಅದನ್ನು ಪಡೆಯಲು ಹೇಗೆ ಸಹಾಯ ಮಾಡಬೇಕು ಎಂದು ನಿರ್ದಿಷ್ಟವಾಗಿ ಯೋಚಿಸುತ್ತಿಲ್ಲ. ದೇವರ ಮೇಲೆ ಭಾರಹಾಕಿ ಕೈಮುಗಿಯುತ್ತಾಳೆ. ಇತರರ ವಿರುದ್ಧ ತನ್ನನ್ನು ರಕ್ಷಿಸದೆ ಇದ್ದುದಕ್ಕಾಗಿ ಮಗಳಿಗೆ ತಾಯಿಯ ಮೇಲೂ ಮುನಿಸಿದೆ. ತಾಯಿ ಗೊಂದಲದಲ್ಲಿದ್ದಾಳೆ.

ಗಂಡಹೆಂಡಿರ ಕಾಮಸಂಬಂಧ ಹೇಗಿದೆ? ಮದುವೆಗೆ ಮುಂಚೆ ಇಬ್ಬರ ನಡುವೆ ವಿಶೇಷ ವ್ಯವಹಾರ ನಡೆದಿಲ್ಲ. ಮೊದಲ ರಾತ್ರಿ ಗಂಡ ಕಾಮಕ್ರಿಯೆಗೆ ಮುಂದುವರಿದಾಗ ಆಕೆ ಒಪ್ಪದೆ ಆರು ತಿಂಗಳ ಕಾಲಾವಧಿ ಕೇಳಿದ್ದಾಳೆ, ಗಂಡ ಒಪ್ಪಿದ್ದಾನೆ. ಆರು ತಿಂಗಳ ನಂತರವೇ ಅವರ ಲೈಂಗಿಕ ಸಂಬಂಧ ಶುರುವಾಗಿದೆ. ಆದರೆ ಇವಳಿಗೆ ಕಾಮಕೂಟದಲ್ಲಿ, ಸಂಭೋಗದಲ್ಲಿ ಆಸಕ್ತಿಯಿಲ್ಲ. ಗಂಡನಿಗೆ ಅಸಮಾಧಾನ ಆಗಿ ಸರಿಪಡಿಸಿಕೊಳ್ಳಲು ಈಕೆಗೆ ಜಬರಿಸಿದ್ದಾನೆ. ಒಮ್ಮೆ ಬಸಿರಾಗಿ ಗರ್ಭಪಾತವೂ ಆಗಿದೆ. ಇನ್ನೊಂದು ಬಸಿರು ಬೇಗ ಆಗಲೆಂದು ಹಿರಿಯರಿಂದ ಒತ್ತಾಯ ಬಂದಿದೆ. ಅಷ್ಟರಲ್ಲೇ ಜಗಳವಾಗಿ ತವರು ಸೇರಿದ್ದಾಳೆ.

ಗಂಡನ ಸ್ವಭಾವ ಹೇಗಿದೆ? ಆತ ಇವಳನ್ನು ಪ್ರೀತಿಸುತ್ತಾನೆ. ಆದರೆ ಆಕೆ ತನ್ನ ತಾಯ್ತಂದೆಯರಿಗೆ ವಿರೋಧವಾಗಿ ನಡೆದುಕೊಳ್ಳುವುದು ಇಷ್ಟವಿಲ್ಲ. ಅತ್ತೆಯ ಬಗೆಗೆ ತಕರಾರು ಹೇಳಿದರೆ ನೀನೇ ಹೊಂದಿಕೋ ಎಂದು ಬಾಯಿ ಮುಚ್ಚಿಸುತ್ತಾನೆ. ಹಾಸಿಗೆಯಲ್ಲಿ ಪ್ರೀತಿ ತೋರಿಸುತ್ತ ಹತ್ತಿರ ಬರುತ್ತಾನೆ. ಗಂಡನೆಂದರೆ ಆಕೆಗೆ ಇಷ್ಟವಿದೆ. ಅವನ ಎದೆಯ ಮೇಲೆ ತಲೆಯಿಟ್ಟು ಅವನ ತೋಳುಗಳಿಂದ ತಬ್ಬಿಸಿಕೊಂಡು ಮಲಗುವುದು ಹಿತವೆನಿಸುತ್ತದೆ. ಅದನ್ನೇ ಅನುಭವಿಸುತ್ತಿರಬೇಕು ಎನ್ನಿಸುತ್ತದೆ. ಅಷ್ಟರಲ್ಲೇ ಗಂಡ ಕಾಮಸುಖಕ್ಕಾಗಿ ತಡಕಾಡುತ್ತಾನೆ. ಆಕೆಯ ಹಿತಕ್ಕೆ ಭಂಗಬಂದು, ಕೂಟಕ್ಕೆ ನಿರಾಕರಿಸುತ್ತಾಳೆ. ಅವನು ಸುಮ್ಮನಿದ್ದರೆ ಸರಿ; ಮುನಿಸಿಕೊಂಡರೆ ಅನಿವಾರ್ಯವಾಗಿ ಒಪ್ಪಿಸಿಕೊಳ್ಳುತ್ತಾಳೆ. ಒಟ್ಟಾರೆ ಸಂಭೋಗ ನಡೆದರೂ ಇಬ್ಬರಿಗೂ ತೃಪ್ತಿ ಇಲ್ಲವಾಗಿದೆ.

ನನ್ನಿಂದ ಏನಾಗಬೇಕು ಎಂದು ಸರಳಾಗೆ ಕೇಳಿದಾಗ ಬಂದ ಉತ್ತರ ಸರಳವಾಗಿತ್ತು: ತಾನು ಸ್ವತಂತ್ರವಾಗಿ ಬದುಕಬೇಕು, ಕೆಲಸ ಹುಡುಕಿಕೊಳ್ಳಬೇಕು. ಅದಕ್ಕಾಗಿ ಇಂಗ್ಲೀಷಿನಲ್ಲಿ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕು, ಇದಕ್ಕೆಲ್ಲ ಸಹಾಯ ಬೇಕು ಎಂದಳು. ದಾಂಪತ್ಯದ ಬಗೆಗೆ ಸೂಚ್ಯವಾಗಿ  ಕೇಳಿದಾಗ ಸ್ಪಷ್ಟಪಡಿಸಿದಳು: ನನಗೆ ದಾಂಪತ್ಯ ಸಾಕೇಸಾಕು! ಅಷ್ಟಲ್ಲದೆ ಇನ್ನೊಂದು ಮಾತು ಸೇರಿಸಿದಳು: ಎಲ್ಲ ಬಂಧುಬಳಗದಿಂದಲೂ ದೂರವಾಗಿ ತನ್ನ ಪಾಡಿಗೆ ತಾನಿರಬೇಕು!

ಸರಳಾಳ ಕತೆ ಕೇಳುತ್ತಿರುವಾಗ ನನ್ನ ತಲೆಯೊಳಗೆ ಹಲವು ಪ್ರಶ್ನೆಗಳು ಹುಟ್ಟುತ್ತಿದ್ದುವು. ಇವಳು ಒಂಟಿಯಾಗಿ ಬದುಕಲು ಬಯಸುವುದರ ಕಾರಣವೇನು? ಇವಳ ಹಟಮಾರಿತನದ ಹಿನ್ನೆಲೆ ಏನಿದೆ? ಗಂಡನ ಮನೆಯವರು ಬೇಡ ಎನ್ನುವುದು ಅರ್ಥವಾಗುತ್ತದೆ, ಆದರೆ ತಮ್ಮ ಮನೆಯವರೂ ಬೇಡವಾದ ಕಾರಣವೇನು? ಗಂಡನ ತಬ್ಬುಗೆಯಲ್ಲಿ ಸುಖ ಅನುಭವಿಸುವವಳಿಗೆ ಕಾಮಕೂಟ ಹೇಗೆ ಬೇಡವಾಗುತ್ತಿದೆ? ಬೇರೆ ಮನೆ ಮಾಡುವ ಬೇಡಿಕೆಯ ಹಿಂದಿನ ಉದ್ದೇಶ ಏನಿದೆ? ತವರಿನವರು ನೆರವಾಗದಿರುವಾಗ ಅವಳೇಕೆ ಪ್ರತಿಭಟಿಸದೆ ಸುಮ್ಮನಿದ್ದಾಳೆ?

ಈ ಪ್ರಶ್ನೆಗಳು ನಿಮಗೂ ಬಂದಿರಬಹುದು. ಉತ್ತರಕ್ಕಾಗಿ ಮರುವಾರದ ತನಕ ಯೋಚಿಸಿ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.