Please wait...


ಭಾವನಾತ್ಮಕ ಸಂವಹನ ನಡೆಸುವ ಮುನ್ನ ಪುರುಷರು ತಾವು ಹಾಕಿಕೊಂಡ ಗೋಡೆಯಿಂದ ಈಚೆ ಬರುವುದು ಅತ್ಯಗತ್ಯ.

239: ಅನ್ಯೋನ್ಯತೆಗೆ ಹುಡುಕಾಟ – 18

ಸಂವಹನಕ್ಕೆ ಅಭೇದ್ಯವಾದ ಗೋಡೆ ಕಟ್ಟಿಕೊಂಡಿರುವ ’ಗೋಡಿಗ”ರ ಬಗೆಗೆ ಹೋದಸಲ ಮಾತಾಡುತ್ತಿದ್ದೆವು. ಪ್ರೀತಿಯನ್ನು ಹಂಚಿಕೊಳ್ಳುವ ವಿಷಯ ಬಂದಾಗ ನಮ್ಮನ್ನು ಪ್ರಭಾವ ಬೀರುವ ವ್ಯಕ್ತಿಯಿಂದ ಪ್ರತ್ಯೇಕಿಸುವುದಕ್ಕೆ ಸೀಮಾರೇಖೆ ಅಗತ್ಯವಾಗುತ್ತದೆ ಎಂದು ಹೇಳುತ್ತಿದ್ದೆ.

ಸೀಮಾರೇಖೆ ಅಸ್ಪಷ್ಟವಾಗಿದ್ದರೆ ಏನಾಗುತ್ತದೆ? ಆಗ ನಿಮ್ಮನ್ನು ಕಾಪಾಡಿಕೊಳ್ಳಲು ಏನೂ ಇರುವುದಿಲ್ಲ. ಎಲ್ಲವೂ ನಿಮ್ಮ ಮೇಲೆ ಬಿದ್ದಂತೆ ಅನ್ನಿಸುತ್ತದೆ. ಅಂದರೆ, ನೀವು “ತೆಳ್ಳನೆಯ ಚರ್ಮದ,” “ಸೂಕ್ಷ್ಮ ಪ್ರಕೃತಿಯ”ವರಾಗುತ್ತ ಸ್ವಲ್ಪದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತೀರಿ. ಉದಾಹರಣೆಗೆ, ಸಂಗಾತಿಯು “ನೀನು ಸ್ವಲ್ಪ ದಪ್ಪಗೆ ಕಾಣುತ್ತಿದ್ದೀಯಾ” ಎಂದರೆ ಮನಸ್ಸಿಗೆ ಚುಚ್ಚಿ, ನಿಮ್ಮ ಬೊಜ್ಜನ್ನು “ಪರಕಾಯ”ವಾಗಿ ಕಾಣುತ್ತ  ಅದನ್ನು “ಹೊರದಬ್ಬಲು” ಪಥ್ಯ, ವ್ಯಾಯಾಮ ಶುರುಮಾಡುತ್ತೀರಿ. ಸೀಮಾರೇಖೆ ಸಮರ್ಪಕ ಆಗಿದ್ದರೆ? ನಿಮ್ಮ ಬೊಜ್ಜಿನ ಮೇಲೆ ಕಣ್ಣು ಹಾಯಿಸುತ್ತೀರಿ. ದಪ್ಪಗೆ ಎನ್ನಿಸಿದರೆ  ಒಪ್ಪುತ್ತ, ಕಡಿಮೆ ಮಾಡುವ ಅಗತ್ಯವಿದೆಯೇ ಎಂದು ಯೋಚಿಸುತ್ತೀರಿ. ಸೀಮಾರೇಖೆ ಗಟ್ಟಿಯಾಗಿದ್ದರೆ ದಪ್ಪ ಚರ್ಮದವರಾಗುತ್ತೀರಿ. ಬಂದ ಅಭಿಪ್ರಾಯವನ್ನು ಅಲಕ್ಷಿಸುತ್ತೀರಿ. ಹೆಚ್ಚೆಂದರೆ, “ನಿನಗೇನು ಬೇರೆ ಕೆಲಸ ಇಲ್ಲವೆ?” ಎಂದು ಸೀಮಾರೇಖೆಯ ಆಚೆ ತಳ್ಳುತ್ತೀರಿ. ಈ ಮೂರೂ ಪ್ರತಿಕ್ರಿಯೆಗಳಲ್ಲಿ ಒಂದಿಲ್ಲೊಂದು ರೀತಿಯ ಸ್ಪಂದನೆಯಿದೆ. ಆದರೆ ಗೋಡಿಗರ ವಿಷಯವೇ ಬೇರೆ. ಇವರ ಸೀಮಾರೇಖೆಯ ಜಾಗದಲ್ಲಿ ಗೋಡೆ ಇರುತ್ತದೆ. ಟೆರ್ರಿ ರಿಯಲ್ ಹೇಳುವಂತೆ, ಇವರು “ಗೋಡೆಯ ಆಚೆಯಿಂದ ಕಾರ್ಯ ನಿರ್ವಹಿಸುತ್ತಾರೆ”. ಈ ಗೋಡೆಯು ಸದಾ ಕೆಲಸ, ಸದಾ ವಿಚಾರ, ಸದಾ ಟೀವಿ ವೀಕ್ಷಣೆ, ಸದಾ ಮೊಬೈಲ್… ಯಾವುದೇ ಆಗಿರಬಹುದು. ಇವರನ್ನು ಮುಟ್ಟುವುದೆಂದರೆ ಗಾಜಿನ ಆಕಡೆ ಇರುವುದನ್ನು ಮುಟ್ಟಿದಂತೆ – ಮನಸ್ಸಿನ ಕೈಗೆ ಎಟುಕುವುದೇ ಇಲ್ಲ!

ಗೋಡಿಗರು ನಡೆಸುವ ಸಂವಹನ ಹೇಗಿರಬಹುದು? ಇವಳ ಭಾವೀ ಪತಿ ಇವಳಿಗೋಸ್ಕರ ಹೊಸಕಾರು ಕೊಂಡ. ಇಬ್ಬರೂ ಹತ್ತಿ ಕುಳಿತರು. ಅವನು ಮಾತಿಲ್ಲದೆ ನಡೆಸಲು ಶುರುಮಾಡಿದ. ಇವಳು ಬೇಕೆಂತಲೇ ಬಾಯಿಬಿಡದೆ ಅವನ ಮಾತಿನ ನಿರೀಕ್ಷೆಯಲ್ಲಿ ಕುಳಿತಿದ್ದಳು. ಒಂದೇಸಮನೆ ಮೂರು ಗಂಟೆ ಪ್ರಯಾಣದ ನಂತರ ಗಾಡಿಯನ್ನು ನಿಲ್ಲಿಸಿ, ಇವಳತ್ತ ತಿರುಗಿ, ಇವಳ ಕೈಹಿಡಿದು ನಸುನಕ್ಕ. ಅವನ ಸಂದೇಶ ಏನು? “ಇಷ್ಟೊತ್ತು ಮಾತಿನಿಂದ ಘಾತಿಸದೆ ಹೊಸಕಾರಿನ ಜೊತೆಗೆ ನನ್ನನ್ನು ಬಿಟ್ಟೆಯಲ್ಲ, ಇದು ನನಗಿಷ್ಟವಾಯಿತು!” ನನ್ನ ಮನಸ್ಸು ಆಕೆಗಾಗಿ ಮರುಗಬೇಕು ಎನ್ನುವಾಗಲೇ ಆಕೆ ಅವನನ್ನು ಬಿಟ್ಟಿದ್ದನ್ನೂ ಹೇಳಿದಳು.

ಗೋಡಿಗರು ಹೀಗೆ ಗೋಡೆಯ ಆಚೆಯಿಂದ ಕಾರ್ಯ ನಿರ್ವಹಿಸುವುದರ ಹಿನ್ನೆಲೆ ಏನು? ಇವರೆಲ್ಲ “ಸಾಂಪ್ರದಾಯಿಕ ಪುರುಷ”ರಾಗಿ ಹಿರಿಯರ ಮಾದರಿಯನ್ನು ಅನುಸರಿಸುತ್ತಾರೆ. ಇವರು ಚಿಕ್ಕವರಿರುವಾಗ ಎರಡು ರೀತಿಯ ಕಟ್ಟಪ್ಪಣೆಗಳನ್ನು ಪಡೆದಿರುತ್ತಾರೆ. ಒಂದು: ನಿನ್ನ ಭಾವನೆಗಳನ್ನು ತೋರಿಸುವುದು ಎಂದರೆ ಒಳಚಡ್ಡಿಯನ್ನು ತೋರಿಸಿದಂತೆ (ಬಹುಶಃ ಈ ಕಾರಣದಿಂದಲೇ ಸಾಂಪ್ರದಾಯಿಕ ಪುರುಷರು ಸಂಗಾತಿಗೆ ತಮ್ಮ ಮೆತ್ತಗಿನ ಜನನಾಂಗವನ್ನು ತೋರಿಸಲು ಇಷ್ಟಪಡುವುದಿಲ್ಲ ). ಎರಡು: ಮೆದುಮನಸ್ಸು, ಕೋಮಲ ಭಾವನೆಗಳು ಅಸಹ್ಯಕರ; ಗಡಸುತನವೇ ಪುರುಷತ್ವದ ಸಂಕೇತ. ಇಂಥವರ ಮನೆಗಳಲ್ಲಿ ಮೌನವಾಗಿ ಊಟ ನಡೆಯುವುದೇ ಸಹಜ. ಮಾತಿನಲ್ಲಿ ಸುದ್ದಿಗಳು ಸಂಚರಿಸುತ್ತವಷ್ಟೆ. (ನಿಮ್ಮ ಕುಟುಂಬದಲ್ಲಿ ಪರಸ್ಪರ ಪ್ರೀತಿ ತೋರಿಸುತ್ತೀರಾ ಎಂದು ಒಬ್ಬಳಿಗೆ ಕೇಳಿದಾಗ, “ಹೌದು. ಆದರೆ ಇತರರಂತೆ ತಬ್ಬಿಕೊಳ್ಳುವುದು ನಮ್ಮಲ್ಲಿ ರೂಢಿಯಲ್ಲಿಲ್ಲ” ಎಂದಳು. ರೂಢಿಯಲ್ಲಿ ಇಲ್ಲದ್ದನ್ನು ಯಾಕೆ ಎತ್ತಿಹೇಳಿದಳು ಎಂದು ಯೋಚಿಸಿದರೆ ಅವಳ ಅಂತರಾಳದ ಬಯಕೆ ಏನೆಂಬುದು ಗೊತ್ತಾಗುತ್ತದೆ.) ಇಂಥವರು ಬಿಚ್ಚುಮನಸ್ಸಿನಿಂದ ಪ್ರೀತಿಸಲಾರರು – ಅದಕ್ಕೆಂದೇ ಹಿರಿಯರು ಆರಿಸಿದವರನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಒಬ್ಬಳ ನೆನಪಾಗುತ್ತಿದೆ: ಈಕೆ ಒಬ್ಬನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸಾಕಷ್ಟು ಸಲ ಲೈಂಗಿಕ ಕ್ರಿಯೆಯಲ್ಲಿ ಪಾಲುಗೊಂಡಿದ್ದರು. ಆದರೆ ಮದುವೆಯ ಮಾತೆತ್ತಿದಾಗಲೆಲ್ಲ ಹುಡುಗ ತಳ್ಳಿಹಾಕುತ್ತಿದ್ದ. ಕಾರಣ? ಆಕೆಗೂ ತನಗೂ ಹೊಂದಾಣಿಕೆ ಆಗದೆಂದು ಹೇಳುತ್ತಿದ್ದ. ಆದರೆ ಹೇಗೆಂದು ವಿವರಿಸುತ್ತಿರಲಿಲ್ಲ. ಇಬ್ಬರ ನಡುವೆ ಇಲ್ಲಿಯ ತನಕ ಒಂದುಸಲವೂ ಜಗಳ ಆಗಿದ್ದಿಲ್ಲ. ನನ್ನೊಡನೆ ಮಾತಾಡುವಾಗ ಆಕೆಯ ಒಗಟಿಗೆ ಉತ್ತರ ಸಿಕ್ಕಿತು. ಮೂರು ವರ್ಷದ ಸಂಬಂಧದಲ್ಲಿ ಅವನು ಯಾವೊತ್ತೂ “ಐ ಲವ್ಹ್ ಯು” ಎಂದದ್ದಿಲ್ಲ. ಇವಳು ಹೇಳಿದಾಗಲೆಲ್ಲ ನಸುನಗು ಬೀರುತ್ತಾನಷ್ಟೆ. ಅವನ ರಾಶಿ ಸಂದೇಶಗಳಲ್ಲಿ ಪ್ರೀತಿಯ ಭಾವವೇ ಇರುವುದಿಲ್ಲ. ಪ್ರೀತಿಸಬೇಕಾದರೆ ಹಾಗೂ ಪ್ರೀತಿಗೆ ಸ್ಪಂದಿಸಬೇಕಾದರೆ ಭಾವುಕರಾಗಬೇಕು, ಸೂಕ್ಷ್ಮ ಮನದವರಾಗಬೇಕು. ದಿಟ್ಟತನದಿಂದ ಒಳಗಿರುವುದನ್ನು – ದೌರ್ಬಲ್ಯ ಸಹಿತ – ಹೊರತಂದು ಮುಕ್ತರಾಗಬೇಕು. ಆದರೆ ಸಾಂಪ್ರದಾಯಿಕ ಪುರುಷತ್ವವು ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಅದು ಭಾವನೆ ತೋರಿಸುವುದು ದೌರ್ಬಲ್ಯದ ಲಕ್ಷಣ ಎನ್ನುತ್ತದೆ. ಹಾಗೆಯೇ, ಹೆಣ್ಣಿನ ಬಗೆಗೆ ಔದಾರ್ಯದ ಧೋರಣೆ ತಳೆಯಬೇಕು, ಆಕೆಯನ್ನು ರಕ್ಷಿಸಬೇಕು, ಆಕೆಯ ಜವಾಬ್ದಾರಿ ಹೊರಬೇಕು ಎನ್ನುತ್ತದೆ. ಮೇಲುನೋಟಕ್ಕೆ ಇದೇನೋ ಒಳ್ಳೆಯ ಗುಣ ಎನ್ನಿಸುತ್ತದೆ. ಆದರೆ ಈ ರಕ್ಷಕ-ರಕ್ಷಿತರ ಸಂಬಂಧದಲ್ಲಿ ಯಜಮಾನಿಕೆ-ಊಳಿಗತನ ಇದೆ, ಸಮಾನತೆ ಇಲ್ಲ.  ಅಸಮಾನರ ನಡುವೆ ಅನ್ಯೋನ್ಯತೆ ಹುಟ್ಟಲಾರದು. ಅಷ್ಟಲ್ಲದೆ ಹೆಣ್ಣು ತನ್ನ ಜವಾಬ್ದಾರಿಯನ್ನು ತಾನೇ ಸ್ವತಂತ್ರವಾಗಿ ಹೊತ್ತು ಗಂಡಿನಿಂದ ಕೇವಲ ಸ್ನೇಹ-ಸಾಂಗತ್ಯ ಬಯಸಿದರೆ ಸಾಂಪ್ರದಾಯಿಕ ಗಂಡಿಗೆ ಕೊಡಲು ಏನು ಉಳಿಯುವುದಿಲ್ಲ. ಆಗ ಆಕೆಯ ನಿಲುವನ್ನು ಸೂಕ್ಷ್ಮವಾಗಿ ಹೀಗಳೆಯುವುದು, ಟೀಕಿಸುವುದು ಮುಂತಾದ ಸಹಾವಲಂಬನೆಯ (codependency) ವರ್ತನೆ ಕಾಣಿಸಿಕೊಳ್ಳುತ್ತದೆ – ಅದಕ್ಕೇ ಉದ್ಯೋಗಸ್ಥ ಹೆಣ್ಣನ್ನು ಮದುವೆಯಾಗಲು ಕೆಲವರು ಒಪ್ಪುವುದಿಲ್ಲ. “ಪುರುಷನ ಕರ್ತವ್ಯಗಳನ್ನು ನನಗೊಪ್ಪಿಸಿ ನನ್ನನ್ನು ಅವಲಂಬಿಸು” ಎನ್ನುವುದು ಇವರ ಅಂತರಾಳಲ್ಲಿದೆ. ಹೀಗೆ, ಸಾಂಪ್ರದಾಯಿಕ ಪುರುಷತ್ವದ ನೀತಿಯು ಅನ್ಯೋನ್ಯತೆಗೆ ಪೂರ್ತಿ ವಿರೋಧವಾದುದು. ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬನು ತಾನು ಹೆಂಡತಿಗೆ ವಿಧೇಯನಾಗಿದ್ದೇನೆ, ಹಾಗೂ ಆಕೆ ತನ್ನನ್ನು ರಕ್ಷಿಸುತ್ತಾಳೆ ಎಂದು ಘೋಷಿಸಿದರೆ ಅವನನ್ನು ಅವಮರ್ಯಾದೆಯಿಂದ ನೋಡಲಾಗುತ್ತದೆ. ಒಟ್ಟಿನಲ್ಲಿ, ಗೋಡಿಗರು ಹೆಣ್ಣಿನ ಜವಾಬ್ದಾರಿ ಹೊರುತ್ತ ಭಾವನೆಗಳಿಗೆ ಬೆಲೆಕೊಡದೆ ವ್ಯವಹರಿಸುವಾಗ ಬಾಂಧವ್ಯದಲ್ಲಿ ಅನ್ಯೋನ್ಯತೆ ಹುಟ್ಟುವುದಿಲ್ಲ. 

ಇನ್ನು, ಗೋಡಿಗರಿಗೆ ಅನ್ಯೋನ್ಯತೆಯ ಮೊದಲ ಪಾಠ ಹೇಳಿಕೊಡುವುದು ಹೇಗೆ? ಸಮಸ್ಯೆಯು ಗೋಡಿಗರ ಅರಿವಿನ ಆಚೆಗಿದೆ. ಆದುದರಿಂದ ಅವರನ್ನು ಪ್ರೀತಿಸುವವರು ಅರಿವು ಮೂಡಿಸಲು ಯತ್ನಿಸಬಹುದು: “ನಾನು ಯಾರಿಗೂ ಬೇಕಾಗಿಲ್ಲ, ನನಗೆ ಮಹತ್ವವಿಲ್ಲ, ನನ್ನ ಭಾವನೆಗಳಿಗೆ ಯಾರಲ್ಲೂ ಬೆಲೆಯಿಲ್ಲ” ಎನ್ನುವ ಅಂತರ್ಗತ ವಾಣಿಯನ್ನು ಅನುಸರಿಸುವುದು ಆಗ ಬದುಕಲು ಅನಿವಾರ್ಯ ಆಗಿತ್ತು. ಹಾಗೆಂದು ಈಗದನ್ನು ಪರಿಪಾಲಿಸುವ ಅಗತ್ಯ ಇದೆಯೆ? ಗುಹೆಯಲ್ಲಿ ನೀವೊಬ್ಬರೇ ಆರಾಮವಾಗಿ ಇರಬಹುದು, ಆದರೆ ಗುಹೆಯಾಚೆ ನಿಮ್ಮನ್ನು ನಂಬಿ ಕಾಯುತ್ತಿರುವ ಹೆಂಡತಿ-ಮಕ್ಕಳಿಗೆ ನೀವು ಬೇಕು. ಅವರೊಡನೆ ಬೆರೆತು, ಆಟವಾಡಿ, ತಮಾಷೆಯಾಗಿ ಇದ್ದರೆ ಮನಸ್ಸು ಎಷ್ಟೊಂದು ಪ್ರಸನ್ನ ಆಗುತ್ತದೆ ಗೊತ್ತೆ? ಪ್ರಸನ್ನ ಮನಸ್ಸಿನಿಂದ ಆರೋಗ್ಯ, ಆಯುಸ್ಸು ಹೆಚ್ಚುತ್ತದೆ. ಹಾಗಾಗಿ ನಿಮ್ಮ ಕರ್ತವ್ಯ, ಜವಾಬ್ದಾರಿಗಳಿಂದ ಹೊರಬಂದು ಎಲ್ಲರೊಡನೆ ಬೆರೆಯಬಲ್ಲಿರಾ?”

ಬದಲಾವಣೆ ಸಾಧ್ಯವಿದೆಯಲ್ಲವೆ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅನ್ಯೋನ್ಯತೆಯ ಹುಟ್ಟಿನಲ್ಲಿ ಇಬ್ಬರ ನಡುವಿನ ಸೀಮಾರೇಖೆ ಮಹತ್ವದ ಪಾತ್ರ ವಹಿಸುತ್ತದೆ.

238: ಅನ್ಯೋನ್ಯತೆಗೆ ಹುಡುಕಾಟ – 17

ಅನ್ಯೋನ್ಯತೆಯ ಬಗೆಗೆ ಮಾತಾಡುತ್ತ, ಸ್ವಯಂಪ್ರೀತಿ ಎಷ್ಟು ಮುಖ್ಯವಾಗುತ್ತದೆ ಎಂದು ಕಂಡುಕೊಂಡೆವು. ಸ್ವಯಂಪ್ರೀತಿಯ ಕೊರತೆ ಇರುವ ಸಂಗಾತಿಯ ಜೊತೆಗೆ ಅನ್ಯೋನ್ಯತೆಯನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದರ ಬಗೆಗೆ ಈ ಸಲ ಚರ್ಚಿಸೋಣ. ಮೊದಲು, ಒಬ್ಬಳು ತನ್ನ ಗಂಡನೊಡನೆ ನಡೆಸುವ ಸಂಭಾಷಣೆಯ ಈ ತುಣುಕುಗಳನ್ನು ಗಮನಿಸಿ:

“ನಿನ್ನೆ ಗೆಳತಿಯ ಜೊತೆಗೆ ಮಾತಾಡುವಾಗ ಟೀವಿ ಸೀರಿಯಲ್‌ನಲ್ಲಿ ಹೆಣ್ಣನ್ನು ಯಾಕೆ ಈ ತರಹ ಚಿತ್ರಿಸುತ್ತಾರೆ ಅಂತ ಮಾತು ಬಂತು…” “ನಾನು ಟೀವಿ ನೋಡೋದೇ ಇಲ್ಲ. ನೀನುಂಟು, ನಿನ್ನ ಗೆಳತಿ ಉಂಟು.”

“ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ ಹೇಳಿ?” “ಮದುವೆಯಾಗಿ ಹತ್ತು ವರ್ಷ ಆಯಿತು, ಅದೇ ಪ್ರಶ್ನೆಯನ್ನು  ಎಷ್ಟು ಸಲ ಕೇಳುತ್ತಿದ್ದೀಯಾ?”

“ಈಗಲೇ ಒಳಗೆ ಹೋಗಬೇಡಿ, ಬೇಗ ಮುಗಿಸಿಬಿಡ್ತೀರಿ. ಸ್ವಲ್ಪ ಹೊತ್ತು ಹೀಗೆಯೇ ಮುದ್ದಾಡುತ್ತ ಇರೋಣ.” “ತಡವಾದರೆ ನನಗೆ ಹೊರಗೇ ಆಗಿಬಿಡುತ್ತದೆ.”

 “(ಕಾಮಕೂಟದ ನಂತರ) ರೀ, ಹಾಗೆಯೇ ಸ್ವಲ್ಪ ಹೊತ್ತು ತಬ್ಬಿಕೊಂಡು ಇರೋಣ.”  “ಮೈಗೆ ಮೈ ತಾಗುತ್ತಿದ್ದರೆ ನನಗೆ ನಿದ್ರೆ ಬರುವುದಿಲ್ಲ.”

“ಸೃಷ್ಟಿಯ ನಿಯಮಗಳು ಎಷ್ಟು ವಿಚಿತ್ರ ಆಗಿರುತ್ತವೆ ಎಂದರೆ…” “ಅದನ್ನೆಲ್ಲ ತೆಗೆದುಕೊಂಡು ನಮಗೆ ಮಾಡೋದೇನಿದೆ?”

ಇಲ್ಲೇನು ನಡೆಯುತ್ತಿದೆ? ಹೆಂಡತಿಯು ಹತ್ತಿರವಾಗಲು, ಬೆರೆಯಲು ಹೋದರೆ ಗಂಡ ಒಲ್ಲೆ ಎಂದು ದೂರವಾಗುತ್ತಿದ್ದಾನೆ. ಹಾಗೆಂದು ಇಬ್ಬರ ನಡುವೆ ವ್ಯಾವಹಾರಿಕ ಸಂಪರ್ಕ ನಡೆಯುವುದಿಲ್ಲ ಎಂದಿಲ್ಲ – ಎಲ್ಲವೂ ಒಂದು ಮಿತಿಯೊಳಗೆ ನಡೆಯುತ್ತಿದೆ. ಜಗಳವಂತೂ ಇಲ್ಲವೇ ಇಲ್ಲ. ಆದರೆ ಕಾಮಕೂಟದಂಥ ಮೈಗೆ ಮೈಹಚ್ಚುವ ಸಂಗತಿಯಲ್ಲೂ ಆಕೆಗೆ ಯಾವುದೇ ರೀತಿಯ ಆಳವಾದ ಭಾವನಾತ್ಮಕ ಅಥವಾ ಶಾರೀರಿಕ ಅನುಭವ ಆಗುತ್ತಿಲ್ಲ. ಇಂಥ ಗಂಡನ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲದೆ ತಲೆ ಚಚ್ಚಿಕೊಳ್ಳುವ ಹೆಂಗಸರನ್ನು ನೀವು ನೋಡಿರಬಹುದು. ಇಂಥ ಗಂಡಸರ ಬಗೆಗೆ ತಿಳಿಯೋಣ. (ಇಲ್ಲೊಂದು ಮಾತು: ಇಲ್ಲಿ ವಿವರಿಸುವ ಗಂಡಸರಂತೆ ಹೆಂಗಸರೂ ಇರುತ್ತಾರೆ. ಈ ಸ್ವಭಾವವು ಹೆಚ್ಚಿನಂಶ ಗಂಡಸರಲ್ಲಿ ಕಂಡುಬರುವುದರಿಂದ ಅವರನ್ನು ಗಮನದಲ್ಲಿ ಇಟ್ಟುಕೊಂಡು ಬರೆಯುತ್ತಿದ್ದೇನೆ.)

ಒಂದು ಜೋಡಿಯಲ್ಲಿ ಅನ್ಯೋನ್ಯತೆಯ ಅನಿಸಿಕೆ ಹುಟ್ಟುವ ರೀತಿ ಹೇಗೆ? ಸಂಗಾತಿಯ ಜೊತೆಗೆ ಸಂಪರ್ಕ ನಡೆಯುವಾಗ ನಮ್ಮೊಳಗೆ ಅನುಭವ ಸ್ಫುರಿಸುತ್ತದೆ – ಇದಕ್ಕೆ ಅನುಭೂತಿ ಎಂದು ಕರೆಯೋಣ. (ಉದಾಹರಣೆಗೆ, ಮುತ್ತು ಕೊಡುತ್ತಿರುವಾಗ ಆಗುವ ಸ್ಪರ್ಶವು ಒಂದು ಅನುಭವ. ಮುತ್ತಿನ ಕ್ರಿಯೆ ಮುಗಿದ ನಂತರ ಆದ ಅನುಭವವನ್ನು ಅಂತರ್ಗತ ಮಾಡಿಕೊಂಡಾಗ ಒಳಗೊಳಗೆ ಆಗುವ ಬದಲಾವಣೆಯೇ ಅನುಭೂತಿ. ಸ್ವಂತ ಅನುಭವದಿಂದ ಬಂದಂಥ ತಿಳಿವು ಅನುಭೂತಿ. ಅನುಭವಿಸುವ ಕ್ಷಣಗಳು ಮುಗಿದ ನಂತರವೂ ಅನುಭೂತಿ ಉಳಿಯುತ್ತದೆ.) ಪಿಯಾ ಮೆಲ್ಲೋಡಿ ಪ್ರಕಾರ ನಾವು ಐದು ಆಯಾಮಗಳಲ್ಲಿ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ – ಬೌದ್ಧಿಕ, ಭಾವುಕ, ಶಾರೀರಿಕ, ಲೈಂಗಿಕ ಹಾಗೂ ಆಧ್ಯಾತ್ಮಿಕ (ಮೇಲಿನ ಸಂಭಾಷಣೆಯಲ್ಲಿ ಇವುಗಳನ್ನು ಕ್ರಮವಾಗಿ ಗಮನಿಸಿ).

ಅನುಭೂತಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ಇನ್ನೊಂದು ಅಂಶವೂ ಇದೆ: ಎರಡು ವ್ಯಕ್ತಿಗಳು ಸಂವಹನಿಸುವಾಗ ಅವರ ಮಿತಿಮೇರೆಗಳನ್ನು ನಿರ್ಧರಿಸುವ ಸೀಮಾರೇಖೆಯೊಂದು (boundary) ನಡುವೆ ಇರುತ್ತದೆ. ಇದು, “ನಾನು” ಎನ್ನುವುದನ್ನು “ನಾನಲ್ಲದ್ದು” ಎನ್ನುವುದರಿಂದ ಬೇರ್ಪಡಿಸುತ್ತದೆ. ಸೀಮಾರೇಖೆಯನ್ನು ಜಾಲರಿ ಇರುವ ಗೋಡೆಗೆ ಹೋಲಿಸಬಹುದು. ಜಾಲರಿಯ ರಂಧ್ರಗಳನ್ನು ಹೆಚ್ಚುಕಡಿಮೆ ಮಾಡುವುದರ ಮೂಲಕ ಆಚೆಯಿಂದ ಬರುವುದನ್ನು ನಿಯಂತ್ರಿಸುತ್ತೇವೆ. ಇನ್ನೊಬ್ಬರು ನಮಗೆ ಬೇಕಾದಾಗ ಎಲ್ಲ ರಂಧ್ರಗಳನ್ನೂ ವಿಶಾಲವಾಗಿ ತೆರೆಯುತ್ತೇವೆ; ತೀರಾ ಬೇಡ ಎನ್ನಿಸಿದಾಗ ಎಲ್ಲ ರಂಧ್ರಗಳನ್ನೂ ಮುಚ್ಚಿಬಿಡುತ್ತೇವೆ. ಹಾಗಾಗಿ ಈ ಸೀಮಾರೇಖೆಯು ಸಂಪರ್ಕದ ಸೇತುವೆಯೂ ಹೌದು, ಸಂಪರ್ಕದಿಂದ ರಕ್ಷಿಸಿಕೊಳ್ಳುವ ಗೋಡೆಯೂ ಹೌದು. ಒಂದು ಆರೋಗ್ಯಕರ ಸಂಬಂಧಕ್ಕೆ ಸೀಮಾರೇಖೆ ಬೇಕೇಬೇಕು. ಇಲ್ಲದಿದ್ದರೆ ಇನ್ನೊಬ್ಬರು ನಮ್ಮ ಮೇಲೆ ತೆಕ್ಕೆಬಿದ್ದಂತಾಗಿ ಒದ್ದಾಡುವ ಪ್ರಸಂಗ ಬರುತ್ತದೆ.

ಈಗ ಮೇಲಿನ ಸಂಭಾಷಣೆಯಲ್ಲಿ ಸೀಮಾರೇಖೆಯನ್ನು ಗಮನಿಸಿ. ಇಲ್ಲಿ ಗಂಡ “ನಾನು ಇಷ್ಟೇ, ನನ್ನಿಂದ ಹೆಚ್ಚಿನದನ್ನು ಅಪೇಕ್ಷಿಸಬೇಡ” ಎಂದು ಜಾಲರಿಯ ಬದಲಾಗಿ ಗೋಡೆ ಏರಿಸುತ್ತಿರುವುದು ಎದ್ದುಕಾಣುತ್ತದೆ. ಇಂಥವರಿಗೆ ಗೋಡಿಗರು, ಹಾಗೂ ಇವರು ಮಾಡುವುದನ್ನು ಗೋಡೀಕರಣ ಎಂದು ಕರೆಯೋಣ. ಗಮನಿಸಿ: ಇದು, “ನೀನು ಬೇಡ” ಎನ್ನುವ ಸಂಗಾತಿಯ ಬಗೆಗಿನ ತಿರಸ್ಕಾರ ಅಲ್ಲ; ಬದಲಾಗಿ, “ನನಗೇ ಸ್ಪಂದಿಸಲು ಗೊತ್ತಿಲ್ಲ” ಎನ್ನುವುದು ಎದ್ದುಕಾಣುತ್ತದೆ. ಇವರ ಈ ವರ್ತನೆ ಎಲ್ಲಿಂದ ಬರುತ್ತದೆ ಎಂದು ತಿಳಿದುಕೊಳ್ಳಲು ಒಂದು ದೃಷ್ಟಾಂತ: ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಮಾತ್ರ ಇದ್ದಾರೆ. ಅವರು ಪರಸ್ಪರ ಮಾತಾಡುವುದು, ಎದುರು ಕುಳಿತು ಹರಟೆ ಹೊಡೆಯುವುದು, ಯಾವುದೊಂದು ಚಟುವಟಿಕೆಯನ್ನು ಕೂಡಿ ಮಾಡುವುದು ತೀರಾ ಕಡಿಮೆ. ಅವರಿಗೊಂದು ಗಂಡು ಮಗು ಹುಟ್ಟುತ್ತದೆ. ಅದು ಬೆಳೆಯುತ್ತಿರುವಾಗ ತಾಯ್ತಂದೆಯರ ನಡುವಿನ ಸಂವಹನಹೀನತೆಯು ಅನುಭವಕ್ಕೆ ಬರುತ್ತ, ಮಗುವಿನಲ್ಲಿ ಅಂತರ್ಗತಗೊಳ್ಳುತ್ತದೆ. ಹೀಗೆ ಬೆಳೆದವರಲ್ಲಿ ಬಾಲ್ಯದ ಗಾಯಗಳು ಇರುವುದಾದರೂ ಅವುಗಳಲ್ಲಿ ನೋವಿಲ್ಲ – ಅಂದರೆ, “ನೀನು ಹೀಗಿರಕೂಡದು” ಎನ್ನುವ ಒತ್ತಾಯವಿಲ್ಲದೆ, “ನೀನು ಇರುವುದೇ ನಮಗೆ ಲೆಕ್ಕಕ್ಕಿಲ್ಲ” ಎನ್ನುವ ನ್ಯೂನತೆಗಳು. ಇವುಗಳಲ್ಲಿ ಟೀಕಾತ್ಮಕ ನಿರೀಕ್ಷೆ ಇರದೆ ನಿಷ್ಕ್ರಿಯತೆ ಮಾತ್ರವಿದೆ. ಇಲ್ಲಿ ಬೇಡದ/ನೋವಿನ ಅನುಭವಗಳ ಬದಲು ಅನುಭವಗಳೇ ಕಡಿಮೆ. ಹಾಗಾಗಿ ಇವರಲ್ಲಿ ವ್ಯಾವಹಾರಿಕ ಅಸ್ತಿತ್ವ ಮಾತ್ರವಿದೆಯೇ ವಿನಾ ಭಾವನಾತ್ಮಕ ಅಥವಾ ಪಾರಸ್ಪರಿಕ ಅಸ್ತಿತ್ವವಿಲ್ಲ. ಉದಾಹರಣೆಗೆ, ಇವನು ಮಗುವಾಗಿ ಇರುವಾಗ ಜ್ವರದಿಂದ ಮಲಗಿದ್ದರೆ ಅಪ್ಪ ಮುಟ್ಟದೆ ದೂರ ನಿಂತುಕೊಂಡು  ಜ್ವರ ಕಡಿಮೆ ಇದೆಯೋ ಹೆಚ್ಚಿದೆಯೋ ಎಂದು ಕೇಳಿದ್ದಾನೆ. ಇಂಥವರು ಸುತ್ತಲೂ ಗೋಡೆಯಿರುವ ಒಂಟಿತನದ ನಮೂನೆಯನ್ನು ಬೆಳೆಸಿಕೊಳ್ಳುತ್ತಾರೆ. ದೊಡ್ಡವರಾದಾಗ ಸ್ನೇಹಿತರೊಡನೆ ಮಾತಾಡಬಲ್ಲರೇ ಹೊರತು ಮನೆಯೊಳಗೆ ಭಾವನೆಗಳ ವಿನಿಮಯದಿಂದ ದೂರ ಉಳಿಯುತ್ತಾರೆ. (ಹುಡುಗ ಹುಡುಗಿ ನೋಡಲು ಬಂದಾಗ “ನಮ್ಮ ಹುಡುಗನಿಗೆ ಮಾತು ಕಡಿಮೆ” ಎಂದು ಹೇಳುವುದನ್ನು ನೀವು ಗಮನಿಸಿರಬಹುದು.) ಇವರ ಸಂಗಾತಿಯು ಭಾವನಾತ್ಮಕವಾಗಿ ಹತ್ತಿರವಾಗಲು ಬಂದರೆ ಅದನ್ನು ಅಂತರಂಗದಿಂದ ವಿಶ್ಲೇಷಿಸುತ್ತಾರೆ. ಸಂಗಾತಿಯ ಸಂವಹನದ ಅಳಲು ಇವರ ಗೋಡೆಯಾಚೆ ಉಳಿಯುತ್ತದೆ. ಸಂಗಾತಿಯೊಡನೆ ಮಾತಾಡುವುದು ಏನಿರುತ್ತದೆ ಎನ್ನುತ್ತ ಮಾತಿನ ನಂಟನ್ನು ಅಲ್ಲಗಳೆಯುತ್ತಾರೆ. ಮೆಚ್ಚುಗೆ ವ್ಯಕ್ತಪಡಿಸಿದರೆ ಮಿಕಿಮಿಕಿ ಮುಖ ನೋಡುತ್ತಾರೆ. ಸಂಭೋಗದ ಉದ್ದೇಶವಿಲ್ಲದೆ ತಬ್ಬಿಕೊಳ್ಳುವುದರಲ್ಲಿ, ಅಥವಾ ಸಂಭೋಗದ ನಂತರ ಅದರ ಬಗೆಗೆ ಮಾತಾಡುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸುತ್ತಾರೆ. ಅವರಲ್ಲಿ ಆರೋಗ್ಯಕರ ಸಂವಹನದ ಮಾದರಿಯೇ ಇಲ್ಲದಿರುವುದು ಎದ್ದುಕಾಣುತ್ತದೆ. ಹಾಗಾಗಿ ಇವರು ಹಾಕಿಕೊಳ್ಳುವ ಗೋಡೆ ಭದ್ರವಾಗಿದ್ದು, ಸಂವಹನಕ್ಕೆ ಅಭೇದ್ಯವಾಗಿರುತ್ತದೆ. ಇಂಥವರ ಜೊತೆಗೆ ಸಂಗಾತಿಯು ಸಂಹನಿಸಲು ಹೊರಟರೆ ಗೋಡೆಗೆ ತಲೆ ಗಟ್ಟಿಸಿಕೊಂಡಂತೆ ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ!

ಗೋಡಿಗರ ಇನ್ನೊಂದು ನಮೂನೆಯನ್ನು ಮುಂದಿನ ಸಲ ನೋಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಮಗುವನ್ನು ಪ್ರಬುದ್ಧ ವ್ಯಕ್ತಿಯೆಂದು ಗೌರವಿಸಿದಾಗ ಮಾತ್ರ ಸ್ವಯಂಪ್ರೀತಿ ಹುಟ್ಟುತ್ತ ಮುಂದೆ ಸಂಗಾತಿಯನ್ನು ಪ್ರೀತಿಸುವ ಸಾಮರ್ಥ್ಯ ಬರುತ್ತದೆ.

237: ಅನ್ಯೋನ್ಯತೆಗೆ ಹುಡುಕಾಟ – 16

ಸ್ವಯಂಪ್ರೀತಿ ಇಲ್ಲದಿದ್ದರೆ ಸಂಗಾತಿಗೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಬೆಸೆದುಕೊಳ್ಳಲು ಆಗುತ್ತದೆಯೇ ವಿನಾ ಅನ್ಯೋನ್ಯತೆಯನ್ನು ಕಟ್ಟಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದೆ. ಈಗ ಸ್ವಯಂಪ್ರೀತಿಯ ಬಗೆಗೆ ಇನ್ನಷ್ಟು ತಿಳಿದುಕೊಳ್ಳೋಣ.

ಸ್ವಯಂಪ್ರೀತಿ (self-love) ಎಂದರೇನು? ಇನ್ನೊಬ್ಬರನ್ನು ನಿರ್ವ್ಯಾಜವಾಗಿ ಪ್ರೀತಿಸುವಂತೆ ತನ್ನನ್ನು ತಾನು ಪ್ರೀತಿಸುವುದು, ಇತರರಿಗೆ ಬೆಲೆಕೊಡುವಂತೆ ತನಗೂ ಬೆಲೆಕೊಡುವುದು, ತನ್ನ ಭಾವನಾತ್ಮಕ ಯೋಗಕ್ಷೇಮದ ಹೊಣೆಯನ್ನು ತಾನೇ ಹೊರುವುದು, ಇತರರನ್ನು ಮೆಚ್ಚಿಸಲಿಕ್ಕಾಗಿ ತನ್ನ ಬಯಕೆಗಳನ್ನು ಕಡೆಗಣಿಸದೆ ಇರುವುದು ಇದರಲ್ಲಿ ಒಳಗೊಂಡಿದೆ. ತನ್ನ ಅರ್ಹತೆಗೆ ತಕ್ಕದಲ್ಲದ್ದು ಎನ್ನಿಸಿದರೆ ಒಪ್ಪದೆ ಇರುವುದೂ ಸ್ವಯಂಪ್ರೀತಿಯ ಗುರುತು. ಉದಾಹರಣೆಗೆ, ಅಪ್ಪನು ತಾನು ನಿರ್ಲಕ್ಷಿಸುವ ಮಗನಿಗೆಂದು ಹೊಸ ಬಟ್ಟೆಗಳನ್ನು ತಂದು, ಹಾಕಿಕೋ ಎಂದು ಮುಂದಿಡುತ್ತಾನೆ. ಬಟ್ಟೆಗಳು ಎಷ್ಟೇ ಅಗತ್ಯವಾದರೂ ತಂದಿರುವುದು ತನ್ನ  ಆಯ್ಕೆ ಅಲ್ಲದಿರುವುದರಿಂದ ಮಗ ನಿರಾಕರಿಸುತ್ತಾನೆ. ಸ್ವಾಭಿಮಾನ, ಆತ್ಮಗೌರವ, ತನ್ನತನ, ಸ್ವಂತಿಕೆ – ಇವುಗಳಲ್ಲೆಲ್ಲ ಸ್ವಯಂಪ್ರೀತಿಯ ಸೆಲೆಯಿದೆ. ಸ್ವಯಂಪ್ರೀತಿಯ ಅವಳಿ ಸ್ವಕರುಣೆ (self-compassion).

ಸ್ವಯಂಪ್ರೀತಿಯ ಮೂಲವೆಲ್ಲಿ? ಶೈಶವಾವಸ್ಥೆಯಲ್ಲಿ ತಾಯ್ತಂದೆಯರಿಂದ ಸಿಕ್ಕ ಬಾಂಧವ್ಯದ ನಮೂನೆಯನ್ನು ಅನುಸರಿಸಿ ಮಗುವಿನಲ್ಲಿ ಸ್ವಯಂಪ್ರೀತಿಯ ಮೊಳಕೆ ಹುಟ್ಟುತ್ತದೆ. ಮಾರ್ಟಿನ್ ಬ್ಯೂಬರ್ (Martin Buber) ಪ್ರಕಾರ ಮಗುವನ್ನು ಪ್ರಬುದ್ಧ ವ್ಯಕ್ತಿಯೆಂದು ಅಂದುಕೊಳ್ಳುತ್ತ “ನಾನು-ನೀನು” (I-Thou) ಎಂದು ಸರಿಸಮನಾಗಿ ವರ್ತಿಸುತ್ತಿದ್ದರೆ ಮಗುವಿಗೆ ಸ್ವಂತಿಕೆಯ ಅರಿವು ಮೂಡಲು ಶುರುವಾಗುತ್ತದೆ. ಬಾಂಧವ್ಯವು ಪ್ರೋತ್ಸಾಹಕ ಆಗಿದ್ದರೆ ಸ್ವಂತಿಕೆಯು ಸ್ವಷ್ಟವಾಗುತ್ತ ಸ್ವಯಂಪ್ರೀತಿ ಹುಟ್ಟುತ್ತದೆ. ಬಾಂಧವ್ಯದಲ್ಲಿ “ನಾನು ಮೇಲು-ನೀನು ಕೀಳು” ಎನ್ನುವ ತಾರತಮ್ಯ ಇದ್ದರೆ ಮಗುವಿಗೆ ಕೀಳರಿಮೆ ಹುಟ್ಟುತ್ತ ಸ್ವಂತಿಕೆಯ ಪರಿಕಲ್ಪನೆಯು ಅಸ್ಪಷ್ಟವಾಗಿ, ತನ್ನನ್ನು ಪ್ರೀತಿಸಬೇಕು ಎಂದೆನಿಸುವುದಿಲ್ಲ – ನಮ್ಮ ಹೆಚ್ಚಿನ ಸಂಬಂಧಗಳು ಹೀಗಿವೆ. ಇನ್ನು, ಮಗುವನ್ನು ಒಂದು ವಸ್ತುವೆಂದು ಗಣಿಸುತ್ತ “ನಾನು-ಅದು” (I-It) ಎಂಬ ಸಂಬಂಧ ಇಟ್ಟುಕೊಂಡರೆ ಮಗುವಿಗೆ “ನನಗೆ ಸ್ವಂತ ಅಸ್ತಿತ್ವವಿಲ್ಲ” ಎನ್ನುವ ಅಂತರಾಳದ ಭಾವ ಮೂಡುತ್ತ ಸ್ವಯಂಪ್ರೀತಿಯ ಹುಟ್ಟಿಗೆ ಅಡ್ಡಿಯಾಗುತ್ತದೆ.

ಸ್ವಯಂಪ್ರೀತಿಗೂ ಆತ್ಮರತಿಗೂ (narcissism) ವ್ಯತ್ಯಾಸ? ಆತ್ಮರತಿಯಲ್ಲಿ ತನ್ನ ಬಗೆಗೆ ಅಹಂಕಾರ, ಪರಿಪೂರ್ಣತೆಯ ಭ್ರಮೆ, ಹಾಗೂ ವರ್ತನೆಯಲ್ಲಿ ಆಡಂಬರ ಇವೆ. ಆದರೆ ಸ್ವಂಯಪ್ರೀತಿಯಲ್ಲಿ ತನ್ನ ಕುಂದುಕೊರತೆಗಳ ಅರಿವಿದ್ದು, ಅವುಗಳನ್ನು ಒಪ್ಪಿಕೊಳ್ಳುವ ಕರುಣೆಯ ಭಾವವಿದೆ. ಹಾಗಾಗಿ ಸ್ವಯಂಪ್ರೀತಿ ಉಳ್ಳವರು ತಾನೇ ಅತಿ ಬುದ್ಧಿವಂತ, ಚತುರೆ, ಪ್ರತಿಭಾವಂತ, ಸುಂದರಿ ಎಂದು ಮುಂತಾಗಿ ಯೋಚಿಸದೆ ತನ್ನನ್ನು ತಾನಿರುವಂತೆಯೆ ಒಪ್ಪಿಕೊಳ್ಳುತ್ತಾರೆ. ತನ್ನ ದೌರ್ಬಲ್ಯಗಳನ್ನು ತಿರಸ್ಕರಿಸದೆ ಸಹಜ ಗುಣಗಳೆಂದು, ತನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗವೆಂದು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ತಿರುಗಾಟಕ್ಕೆಂದು ಬೇಗ ಏಳಲು ಆಗುವುದಿಲ್ಲ ಎಂದು ಬೇಸರಿಸುವುದರ ಬದಲು, ಬೆಳಗಿನ ತಿರುಗಾಟಕ್ಕಿಂತ ಸಕ್ಕರೆ ನಿದ್ರೆಯೇ ತನಗಿಷ್ಟ ಎಂದು ಒಪ್ಪಿಕೊಳ್ಳುವುದು; ದಪ್ಪ ಮೈಯನ್ನು ದ್ವೇಷಿಸುವುದರ ಬದಲು, ನಾನು ಹೀಗಿದ್ದರೇನಂತೆ ಎಂದು ಒಪ್ಪಿಕೊಳ್ಳುವುದು; ಎಲ್ಲರೂ ಪರೀಕ್ಷೆಯಲ್ಲಿ ಪಾಸಾಗಿ ತಾನೊಬ್ಬನೇ ಆಗಲಿಲ್ಲ ಎಂದು ಹಳಹಳಿಸುವುದರ ಬದಲು, ಎಲ್ಲರಷ್ಟು ಕಷ್ಟಪಡಲು ತನಗೆ ಆಗುವುದಿಲ್ಲ ಎಂದು ಒಪ್ಪಿಕೊಳ್ಳುವುದು.  ಹೀಗೆ ತನ್ನ ಸಾಧಾರಣತೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತ ದ್ವಂದ್ವವಿಲ್ಲದೆ ನಿರಾಳವಾಗಿ ಬದುಕುವುದು ಸ್ವಯಂಪ್ರೀತಿಯ ಲಕ್ಷಣ.

ಸ್ವಯಂಪ್ರೀತಿ ಸ್ವಾರ್ಥವಲ್ಲವೆ? ಖಂಡಿತವಾಗಿಯೂ ಅಲ್ಲ. ಸ್ವಾರ್ಥವೆಂದರೆ ನಮ್ಮ ಸುಖಕ್ಕಾಗಿ ಬೇರೆಯವರ ಸುಖವನ್ನು ಬಲಿಕೊಡುವುದು. ಸ್ವಯಂಪ್ರೀತಿಯಲ್ಲಿ ಸ್ವಹಿತವನ್ನೂ ಪರಹಿತವನ್ನೂ ಸಮನಾಗಿ ತೆಗೆದುಕೊಳ್ಳುತ್ತೇವೆ; ಪರರಿಗೆ ಕೊಟ್ಟು ಸ್ವಂತಕ್ಕೆ ನಷ್ಟ ಮಾಡಿಕೊಳ್ಳುವುದೂ ಇಲ್ಲ.

ಸ್ವಯಂಪ್ರೀತಿಯಲ್ಲಿ ನಮ್ಮನ್ನು ನಾವು ಹೇಗೆ ನಡೆಸಿಕೊಳ್ಳಬೇಕು? ಬಹಳ ತೊಂದರೆ ಎದುರಿಸುತ್ತಿರುವ ಒಬ್ಬರು ಸ್ನೇಹಿತರು ಸಹಾಯಕ್ಕಾಗಿ ನಿಮ್ಮನ್ನೇ ನಂಬಿ ಬಂದಿದ್ದಾರೆ ಎಂದುಕೊಳ್ಳಿ. ಅವರಿಗೆ ಸಾಂತ್ವನ, ಕಾಳಜಿ ಹೇಗೆ ತೋರಿಸುತ್ತೀರಿ? ಧೈರ್ಯ, ನೆರವು ಹೇಗೆ ಕೊಡುತ್ತೀರಿ? ಅದನ್ನೇ ನಿಮಗೆ ನೀವೇ ತೋರಿಸಿಕೊಳ್ಳಲು ಸಾಧ್ಯವಿದೆ. ಯಾಕೆಂದರೆ, ಕಷ್ಟಕಾಲಕ್ಕೆ ನಿಮಗೆ ನೀವೇ ನೆರವಾಗುವಷ್ಟು ಬೇರಾರೂ ಆಗಲಾರರು.

ಸ್ವಯಂಪ್ರೀತಿಯನ್ನು ಪಡೆದುಕೊಳ್ಳುವುದು ಹೇಗೆ? ಸ್ವಯಂಪ್ರೀತಿ ಎಂದರೆ ಮನಸ್ಸಿಗೆ ಮುದಕೊಡಲು ದಿಢೀರನೆ ಚಾಕಲೇಟು ತಿನ್ನುವುದೋ ಹೊಸ ಬಟ್ಟೆ ಕೊಳ್ಳುವುದೋ ಅಲ್ಲ. ಇದರಿಂದ ತಕ್ಷಣ ಆರಾಮವೆನ್ನಿದರೂ ಪರಿಣಾಮ ಹೆಚ್ಚುಕಾಲ ಉಳಿಯದೆ ತಲ್ಲಣ ಮರಳುತ್ತದೆ. ನಿರಂತರ ವಿಷಯಾಸಕ್ತಿಯಲ್ಲಿ ಒಳಗೊಳ್ಳುವುದು ಸ್ವಯಂಪ್ರೀತಿ ಆಗಲಾರದು. ಬದಲಾಗಿ, ನಮ್ಮ ಮೈ-ಮನಸ್ಸು-ಭಾವನೆಗಳು ಆರೋಗ್ಯದಿಂದ ಇರಲು ಅನುಕೂಲ ಆಗುವಂಥ ವ್ಯಾಯಾಮ, ಯೋಗ, ಧ್ಯಾನ, ಪರೋಪಕಾರ, ಸಜ್ಜನರ ಸಹವಾಸ… ಮುಂತಾದ ಬದುಕಿನ ಸಂಘರ್ಷವನ್ನು ಎದುರಿಸಲು ಸಾಮರ್ಥ್ಯ ಕೊಡುವ ಯಾವುದೇ  ಕೆಲಸಕಾರ್ಯಗಳಲ್ಲಿ ನಿರಂತರವಾಗಿ ತೊಡಗುವುದರಿಂದ ಸ್ವಯಂಪ್ರೀತಿ ಹೆಚ್ಚಾಗುತ್ತದೆ. ಆತ್ಮವಿಕಾಸದ ಮೌಲ್ಯಗಳನ್ನು ಇಟ್ಟುಕೊಳ್ಳುವುದು ಸ್ವಯಂಪ್ರೀತಿಯ ಉನ್ನತ ಸಂಕೇತ.

ಸ್ವಯಂಪ್ರೀತಿಗೂ ಅನ್ಯೋನ್ಯತೆಯ ಕಾಮಕೂಟಕ್ಕೂ ಗಾಢ ಸಂಬಂಧವಿದೆ. ಒಬ್ಬನು ಹೆಂಡತಿಗೆ ಹೆಚ್ಚುಸುಖ ಕೊಡಲಿಕ್ಕಾಗಿ ಸಂಭೋಗ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನನ್ನಲ್ಲಿ ಬಂದಿದ್ದ. ದಾಂಪತ್ಯದಲ್ಲಿ ಕಟ್ಟಿಕೊಳ್ಳಲು ಆಗದ ಅನ್ಯೋನ್ಯತೆಯನ್ನು ಪುರುಷತ್ವದಿಂದ ಭರ್ತಿಮಾಡಿಕೊಳ್ಳಲು ಹೊರಟಿರುವುದು ಎದ್ದುಕಂಡಿತು. ಹಿನ್ನೆಲೆ ಬಗೆದಾಗ ಅವನ ನೇತ್ಯಾತ್ಮಕ ಧೋರಣೆಯು ಕಟ್ಟೆಯೊಡೆದು ಭೋರ್ಗರೆಯಿತು. ಬೆಲೆಕೊಡದ ತಾಯ್ತಂದೆಯರು, ಪರೀಕ್ಷೆಯಲ್ಲಿ ಸೋಲು, ಪ್ರೀತಿಯಲ್ಲಿ ಮೋಸ, ಅಪಘಾತದಲ್ಲಿ ಕಾಲುಮುರಿತ, ಇತರರಿಂದ ಹೀನೈಕೆ, ಉದ್ಯೋಗದಲ್ಲಿ ಅತೃಪ್ತಿ ಇತ್ಯಾದಿ ಹೇಳುತ್ತ ತಾನೆಷ್ಟು ಬದುಕಲು ಅನರ್ಹ ಎಂದು ತನ್ನನ್ನೇ ಬಯ್ದುಕೊಂಡ. ಅದನ್ನು ಆಲಿಸುತ್ತಿದ್ದ ನಾನು ಕೇಳಿದೆ:  “ನಿಮ್ಮೊಬ್ಬ ಸ್ನೇಹಿತನು ನಿಮ್ಮ ಬದುಕನ್ನೇ ಬದುಕುತ್ತಿದ್ದು ನಿಮ್ಮೆದುರು ಹೇಳಿಕೊಳ್ಳುತ್ತಿದ್ದಾನೆ ಎಂದುಕೊಳ್ಳಿ. ಆಗ ನೀವು, ’ನೀನು ನತದೃಷ್ಟ, ನಿನಗೆ ಬದುಕಲು ಅರ್ಹತೆಯಿಲ್ಲ’ ಎಂದು ಬೆರಳು ತೋರಿಸಿ ಹೀಗಳೆದರೆ ಪರಿಣಾಮ ಏನಾಗಬಹುದು?” ಎಂದು ಕೇಳಿದೆ. ಸ್ನೇಹಿತ ಹತಾಶನಾಗಿ ದೂರವಾಗುತ್ತಾನೆ, ಆಗ ತಾನು ಒಂಟಿಯಾಗುತ್ತೇನೆ ಎಂದು ಹೇಳಿದ. ಹಾಗೆಯೇ, ತನ್ನನ್ನು ತಾನೇ ಹಳಿದುಕೊಳ್ಳುವುದರ ಮೂಲಕ ತನ್ನನ್ನು ಕಳೆದುಕೊಂಡು ಒಂಟಿಯಾಗಿಬಿಟ್ಟಿದ್ದಾನೆ ಎಂದು ಮನವರಿಕೆ ಮಾಡಿಕೊಟ್ಟೆ. ಸೋತು ಜರ್ಜರಿತಗೊಂಡಾಗ ಕೋಮಲತೆಯಿಂದ ನಡೆಸಿಕೊಳ್ಳುವುದು ಅಗತ್ಯ; ಮೊದಲು ಸ್ವಯಂಪ್ರೀತಿ, ನಂತರ ಹೆಂಡತಿಯೊಡನೆ ಅನ್ಯೋನ್ಯತೆಯ ಕಾಮಕೂಟ ಎಂದು ವಿವರಿಸಿದಾಗ ಅವನಿಗೆ ಜ್ಞಾನೋದಯವಾಯಿತು.

ಎಷ್ಟೇ ಆತ್ಮವಿಶ್ವಾಸವಿದ್ದರೂ ಸ್ವಯಂಪ್ರೀತಿ ಇಲ್ಲದಿದ್ದರೆ ಬದುಕಿನ ದಾರಿಯೇ ಬದಲಾಗುತ್ತದೆ. ಫೈರ್‌ಬ್ರ್ಯಾಂಡ್ (Firebrand) ಎಂಬ ಹಿಂದೀ ಚಿತ್ರದ ನಾಯಕಿ ವಕೀಲೆಯಾಗಿ ಯಶಸ್ಸು ಪಡೆದಿದ್ದರೂ ಬಾಲ್ಯದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ತನ್ನ ಶರೀರವನ್ನು ಪ್ರೀತಿಸಲು ಆಗದೆ ಕಾಮಕೂಟದಲ್ಲಿ ಹಿಂಸೆ ಅನುಭವಿಸುತ್ತ ಇರುತ್ತಾಳೆ. ಆಕೆಯ ಕಕ್ಷಿಗಾರ ಒಂದು ಆಟ ಕಲಿಸುತ್ತಾನೆ: ಇಬ್ಬರೂ ಸರತಿಯಂತೆ ತಮ್ಮ ಒಂದೊಂದೇ ಸಂಕಟವನ್ನು ಹೇಳಿಕೊಳ್ಳುವುದು, ಅದಕ್ಕೆ ಇನ್ನೊಬ್ಬರು “ಸೋ ವಾಟ್ (ಅದಕ್ಕೇನಂತೆ)?” ಎಂದು ಸ್ಪಂದಿಸುತ್ತ ಅಲಕ್ಷಿಸುವುದು. ಆಟವಾಡುತ್ತ ನಾಯಕಿ, “ನಾನು ಚಿಕ್ಕಂದಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ” ಎನ್ನುವಾಗ ಅವನು, “ಸೋ ವಾಟ್?” ಎನ್ನುತ್ತ ಅವಳ ಅನಿಸಿಕೆಯನ್ನು ಕಿತ್ತು ಬಿಸಾಡುತ್ತಾನೆ. ಆ ಕ್ಷಣವೇ ಆಕೆಗೆ ಕಾಮಕೂಟದ ಬಯಕೆ ಉಕ್ಕುತ್ತದೆ!

ಹೀಗೆ, ಬಾಂಧವ್ಯದಲ್ಲಿ ಅನ್ಯೋನ್ಯತೆ ಹುಟ್ಟಬೇಕಾದರೆ ಸ್ವಯಂಪ್ರೀತಿ ಇರಲೇಬೇಕು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಬಾಂಧವ್ಯವನ್ನು ಬಯಸುವಂತೆ ಒಂಟಿಯಾಗಿ ಸಂಭ್ರಮಿಸುವುದು ಪ್ರತಿಯೊಬ್ಬರ ಹುಟ್ಟುಗುಣ!

236: ಅನ್ಯೋನ್ಯತೆಗೆ ಹುಡುಕಾಟ – 15

ಸಾವಿನ ಹಾಗೂ ಒಂಟಿತನದ ಭಯದಿಂದ ದೂರವಿರುವ ಉದ್ದೇಶದಿಂದ ಮದುವೆ ಆಗುವ ದಾಂಪತ್ಯದಲ್ಲಿ ಅನ್ಯೋನ್ಯತೆ ಹುಟ್ಟುವುದು ಕಷ್ಟಸಾಧ್ಯ, ಹಾಗಾಗಿ ಅನ್ಯೋನ್ಯತೆಗೆ ಪ್ರಯತ್ನಪಡುವ ಮುಂಚೆ ತಮ್ಮ ಒಂಟಿತನವನ್ನು ತಾವೇ ವೈಯಕ್ತಿಕವಾಗಿ ಪರಿಹರಿಸಿಕೊಳ್ಳುವುದು ಅಗತ್ಯ ಎಂದು ಹೋದಸಲ ಹೇಳಿದ್ದೆ.  ಇನ್ನು, ಈ ಒಂಟಿತನದ ಉಗಮ ಹಾಗೂ ಅದು ವ್ಯಕ್ತಿಯ ಹಾಗೂ ದಾಂಪತ್ಯದ ಮೇಲೆ ಬೀರುವ ಪ್ರಭಾವವನ್ನು ತಿಳಿಯೋಣ. ಇದನ್ನು ಮಗುವಿನ ಉದಾಹರಣೆಯಿಂದ ಶುರುಮಾಡೋಣ.

ನಾಲ್ಕು ತಿಂಗಳ ಮಗುವೊಂದನ್ನು ಸ್ನಾನಮಾಡಿಸಿ ಹಾಲು ಕುಡಿಸಿ ನಿದ್ರಿಸಲು ಬಿಡಿ. ಕೆಲವು ತಾಸಿನ ನಂತರ ನೋಡಿದಾಗ ಅದು ನಿದ್ರೆ ಮುಗಿಸಿ ತನ್ನಷ್ಟಕ್ಕೆ ತಾನೇ ಕೂಗುಡುತ್ತ ಎಲ್ಲೆಲ್ಲೋ ನೋಡುತ್ತ ನಗುತ್ತ ಆಟವಾಡುವುದು ಕಂಡುಬರುತ್ತದೆ. ಈ ಮಗುವು ಒಂಟಿಯಾಗಿದ್ದರೂ ಆರಾಮವಾಗಿದೆ. ಅದು ಹೇಗೆ? ಮಗುವಿಗೆ ತನ್ನಷ್ಟಕ್ಕೆ ತಾನಾಗಿ ಸಂತೋಷದಿಂದ ಇರುವ, ಸಂಭ್ರಮಿಸುವ ಸಾಮರ್ಥ್ಯವು ಹುಟ್ಟಿನಿಂದ ಇದೆ; ಶಾರೀರಿಕ ಅಗತ್ಯಗಳು  ಪೂರೈಕೆಯಾದ ನಂತರ ಇದು ಎದ್ದುಕಾಣುತ್ತದೆ. ಇನ್ನು, ಒಂಟಿಯಾಗಿ ಆಟವಾಡುವ ಮಗುವು ಸ್ವಲ್ಪ ಹೊತ್ತಿನ ನಂತರ ಅಳಲು ಶುರುಮಾಡುತ್ತದೆ. ಹಾಲು ಕುಡಿಸಿ ಮಲಗಿಸಲು ನೋಡಿದರೆ ಪ್ರಯೋಜನ ಆಗುವುದಿಲ್ಲ. ಎತ್ತಿಕೊಂಡರೆ ಅಥವಾ ಮಡಿಲಿಗೆ ಹಾಕಿಕೊಂಡರೆ ಅಳು ನಿಲ್ಲಿಸಿ ಸುಮ್ಮನಾಗುತ್ತದೆ. ಇಲ್ಲಿ ಎರಡು ಹುಟ್ಟುವರ್ತನೆಗಳು ಎದ್ದುಕಾಣುತ್ತವೆ. ಒಂದು: ಒಂಟಿಯಾಗಿ ಸಂಭ್ರಮಿಸುವುದು, ಹಾಗೂ ಅದರ ಮೂಲಕ ತನ್ನ ವ್ಯಕ್ತಿ ಪ್ರತ್ಯೇಕತೆಯನ್ನು ಕಂಡುಕೊಳ್ಳುವುದು. ತನ್ನಷ್ಟಕ್ಕೆ ತಾನಾಗಿ ತನ್ನತನದ ಜೊತೆಗೆ ಸಂಬಂಧ ಬೆಳೆಸುವುದು ಇದರಲ್ಲಿದೆ. ಇಲ್ಲಿಂದಲೇ ಸ್ವಂತಿಕೆಯ ಹಾಗೂ ಸ್ವಂತ ವ್ಯಕ್ತಿತ್ವದ ಉಗಮ ಆಗುತ್ತದೆ. ಎರಡು: ಇನ್ನೊಂದು ಜೀವಿಯ ಸ್ಪರ್ಶಕ್ಕೆ ಹಾತೊರೆಯುವುದು, ಹಾಗೂ ಅದರ ಮೂಲಕ ಬಾಂಧವ್ಯ ಬೆಳೆಸುವುದು (ಇದರ ಬಗೆಗೆ ಹೋದಸಲ ಹೇಳಿದ್ದೆ). ಈಗ, ಅಳುವ ಮಗುವನ್ನು ಎತ್ತಿಕೊಂಡು ಮುದ್ದು ಮಾಡುವಾಗ, ಅದರೊಡನೆ ನಗುಮುಖದಿಂದ ಕಣ್ಣಲ್ಲಿ ಕಣ್ಣಿಟ್ಟು ಸಂಪರ್ಕಿಸುವಾಗ  ಏನು ಸಂದೇಶ ಕೊಡುತ್ತೇವೆ? “ನಿನ್ನನ್ನು ಇಷ್ಟಪಡುತ್ತೇನೆ. ನಿನ್ನನ್ನು ಪ್ರೀತಿಸುತ್ತೇನೆ,  ನೀನು ಸ್ವೀಕಾರಾರ್ಹ” ಎನ್ನುತ್ತೇವೆ. ನಿನಗೂ ಬೆಲೆಯಿದೆ, ನೀನೂ ಪ್ರೀತಿಸಲು ಅರ್ಹವ್ಯಕ್ತಿ ಎಂದು ಭಾವನಾತ್ಮಕವಾಗಿ ವ್ಯಕ್ತಪಡಿಸುತ್ತೇವೆ. ಹಿರಿಯರು ಕೊಡುವ ಪ್ರೀತಿಯುತ ಸಂಪರ್ಕವು ಮಗುವಿನ ಬೆಳವಣಿಗೆಯಲ್ಲಿ ಎಷ್ಟೊಂದು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಎಡ್ವರ್ಡ್ ಟ್ರೋನಿಕ್ ಅವರ ಪ್ರಯೋಗವನ್ನು ನೀವು ನೋಡಲೇಬೇಕು (YouTube: Still face Experiment: Dr Edward Tronick). ಪ್ರೀತಿಯ ಸಂಪರ್ಕವನ್ನು ಸಾಕಷ್ಟು ಪಡೆದ ಮಗುವು “ನಾನು ಪ್ರೀತಿಗೆ ಅರ್ಹ” ಎಂದು ತನ್ನಷ್ಟಕ್ಕೆ ಒಪ್ಪಿಕೊಳ್ಳುತ್ತ, “ನಾನು ಸರಿಯಾಗಿದ್ದೇನೆ” ಎಂದು ಸ್ವಯಂ ಸ್ವೀಕೃತಿಯ ಭಾವ ಹುಟ್ಟಿಸಿಕೊಳ್ಳುತ್ತದೆ. ಇದರಿಂದ ತನ್ನ ಮೇಲಿನ ನಂಬಿಕೆ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ. ಇವೆರಡೂ ಕೈಗೆ ಕೈಸೇರಿ ನಡೆಯುವಾಗ ಮಗುವಿನಲ್ಲಿ ಒಂದು ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ: “ನನಗೆ ನಾನು ಇಷ್ಟ” ಎಂದು ತನ್ನನ್ನು ತಾನೇ ಪ್ರೀತಿಸುವುದನ್ನು ಕಲಿಯುತ್ತದೆ – ನಮ್ಮ ಮೈಕೈಗಳನ್ನು ಹಿತವಾಗಿ ಮುಟ್ಟಿಕೊಂಡು ಮೆಚ್ಚಿಕೊಳ್ಳುವಂತೆ. ಇದಕ್ಕೆ ಸ್ವಯಂಪ್ರೀತಿ ಎಂದು ಹೆಸರಿಸೋಣ. (ಇಲ್ಲೊಂದು ಮಾತು: ಸ್ವಯಂಪ್ರೀತಿಯು (self-love) ಅಂತಃಪ್ರಜ್ಞೆಯ ಮೂಲಕ ಹೊರಹೊಮ್ಮುವ ಆರೋಗ್ಯಕರ ಮಾನಸಿಕ ಸ್ಥಿತಿಯೇ ಹೊರತು ತಾನೇ ಶ್ರೇಷ್ಠ ಎನ್ನುವ ಆತ್ಮರತಿಯಲ್ಲ (narcissism). ಸ್ವಯಂಪ್ರೀತಿಯು ಬದುಕಲು ಅಗತ್ಯವಾದ ಪ್ರೇರಕವಾದರೆ ಆತ್ಮರತಿ ಆತ್ಮಘಾತುಕ.) ಹೀಗೆ, ಸ್ವಯಂಪ್ರೀತಿಯನ್ನು ಬೆಳೆಸಿಕೊಂಡವರು ಸಂಗಾತಿಯ ಜೊತೆಗೆ ಇರುವಾಗ ಸ್ನೇಹಭಾವ ತೋರಿಸುತ್ತಾರೆ. ಸಂಗಾತಿಯನ್ನು ಬಿಟ್ಟು ಒಬ್ಬರೇ ಆಗುವಾಗ ತಮ್ಮನ್ನು ತಾವು ಒಪ್ಪಿಕೊಳ್ಳುತ್ತ, ತಮಗಿಷ್ಟವಾದ ಚಟುವಟಿಕೆಗಳಲ್ಲಿ ಆರಾಮವಾಗಿ ತೊಡಗಿಸಿಕೊಳ್ಳುತ್ತ ಸ್ವಯಂತೃಪ್ತಿಯಿಂದ ಇರುತ್ತಾರೆ. ಒಂದು ಕಡೆ ಸ್ನೇಹಭಾವ, ಇನ್ನೊಂದು ಕಡೆ  ಸೃಜನಶೀಲತೆ ಇವರಲ್ಲಿ ಎದ್ದುಕಾಣುತ್ತದೆ. ಇನ್ನು ಕೆಲವೊಮ್ಮೆ ಸಂಗಾತಿಯ ಜೊತೆಗಿದ್ದೂ ಆಗಾಗ ಒಬ್ಬರೇ ಇರಲು ಇಷ್ಟಪಡುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಅಳುವ ಮಗುವನ್ನು ಎತ್ತಿಕೊಳ್ಳಲಿಲ್ಲ ಎಂದುಕೊಳ್ಳಿ. ಆಗ ಮಗು ಅಲಕ್ಷ್ಯಕ್ಕೆ ಒಳಗಾಗುತ್ತದೆ. ಹೀಗೆ ಶೈಶವದಲ್ಲಿ ದೇಹಸ್ಪರ್ಶವಾಗಲೀ, ಪ್ರೀತಿಯ ನೋಟವಾಗಲೀ ಸಾಕಷ್ಟು ಸಿಗದೆ ಬೆಳೆದಿರುವವರು ನಮ್ಮಲ್ಲಿ ಸಾಕಷ್ಟಿದ್ದಾರೆ. ಮೂಲ ಕುಟುಂಬದಲ್ಲಿ ಇವರಿಗೆ ಪ್ರೀತಿಯ ಸ್ಥಾನಮಾನವಾಗಿ, ಬೆಲೆಯಾಗಲೀ ಇರುವುದಿಲ್ಲ. ಏನೇ ಮಾಡಿದರೂ ಇವರನ್ನು ಗುರುತಿಸುವುದಿಲ್ಲ. ಇಂಥವರು ಬೆಳೆದು ದೊಡ್ಡವರಾದಾಗ ಆತ್ಮವಿಶ್ವಾಸದ ತೀವ್ರ ಕೊರತೆಯನ್ನು ಅನುಭವಿಸುತ್ತಾರೆ. ಅವರ ಸ್ವಯಂಪ್ರೀತಿಯ ಜಾಗವನ್ನು ತನ್ನ ಬಗೆಗಿನ ಅಪನಂಬಿಕೆ, ಅಭದ್ರಭಾವಗಳು ಆಕ್ರಮಿಸಿರುತ್ತವೆ. ಸ್ವಂತಿಕೆಯ ಕೊರತೆಯಿಂದಾಗಿ ಇವರು ವಿಧೇಯ ವ್ಯಕ್ತಿ ಆಗಬಲ್ಲರೇ ವಿನಾ ಸೃಜನಶೀಲತೆಯನ್ನು ತೋರಲಾರರು. ಒಬ್ಬರೇ ಇರುವಾಗ ಯಾವುದರಲ್ಲಿ ತೊಡಗಿಸಿಕೊಳ್ಳುವುದು ಎಂದು ಸ್ಪಷ್ಟ ತಿಳಿವಳಿಕೆ ಇರುವುದಿಲ್ಲ. ತನ್ನಂಥ ನೀರಸ ವ್ಯಕ್ತಿಯೊಂದಿಗೆ ಕಾಲ ಕಳೆಯುವುದು ಅಸಾಧ್ಯ ಎನ್ನಿಸಿ ಉದ್ವಿಗ್ನತೆ ಹುಟ್ಟುತ್ತದೆ. ಹಾಗಾಗಿ ಒಂಟಿಯಾಗಿ ಇರುವ ಪ್ರಸಂಗ ಬಂದರೆ ಯಾತನೆ ಶುರುವಾಗುತ್ತದೆ. ನನಗೆ ಗೊತ್ತಿರುವ ಒಬ್ಬರು ದೊಡ್ಡ ಮನೆಯಲ್ಲಿ ಹೆಂಡತಿ-ಮಕ್ಕಳೊಂದಿಗೆ ವಾಸಿಸುತ್ತಾರೆ. ಅವರೆಲ್ಲ ಊರಿಗೆ ಹೋದಾಗ ಮನೆಯೊಳಗೆ ಕಾಲಿಡಲು ಹೋದರೆ ಮನೆಯೇ ಮೈಮೇಲೆ ಬಂದಂತೆ ಆಗುತ್ತದಂತೆ. ಹಾಗಾಗಿ ಆ ರಾತ್ರಿಗಳನ್ನು ಸ್ನೇಹಿತನ ಮನೆಯಲ್ಲಿ ಕಳೆಯುತ್ತಾರೆ.

ಸ್ವಯಂಪ್ರೀತಿ ಇಲ್ಲದಿರುವವರು ಒಳಗೊಳಗೆ ತಮ್ಮನ್ನು ತಾವೇ ಇಷ್ಟಪಡುವುದಿಲ್ಲ. ತಮ್ಮ ಬಗೆಗೆ ತಮಗೇ ಆತ್ಮೀಯತೆ ಇಲ್ಲದೆ ಕೀಳರಿಮೆಯಿಂದ ನರಳುತ್ತಾರೆ. ತಮ್ಮ ರೂಪ, ವರ್ತನೆ, ಗುರಿಸಾಧನೆ, ಮುಂತಾದವುಗಳಲ್ಲಿ ದೋಷವನ್ನು ಕಾಣುತ್ತಾರೆ. ತಮ್ಮಲ್ಲಿ ಇರುವುದನ್ನು ಗುರುತಿಸಿ ಮೆಚ್ಚಲು ಸಂಗಾತಿಯನ್ನು ಅತಿಯಾಗಿ ಅವಲಂಬಿಸುತ್ತಾರೆ. ಸಂಗಾತಿ ಮೆಚ್ಚದಿದ್ದರೆ ತಿರಸ್ಕಾರಕ್ಕೆ ಒಳಗಾದಂತೆ ಭಾವಿಸುತ್ತಾರೆ. ಪರಿಣಾಮವಾಗಿ ಅಸಮಾಧಾನದ ಬದಲು ತೀವ್ರ ಆಕ್ರೋಶಕ್ಕೆ ಒಳಗಾಗುತ್ತಾರೆ. ಇವರನ್ನು ಅರ್ಥಮಾಡಿಕೊಂಡ ಸಂಗಾತಿಯು ಪ್ರೀತಿಯನ್ನೂ ಒಡನಾಟವನ್ನೂ ಹೆಚ್ಚುಹೆಚ್ಚಾಗಿ ಕೊಡಬಹುದೇನೋ ನಿಜ. ಆದರೆ ಅನಿವಾರ್ಯವಾಗಿ ಕೊಡಲೇಬೇಕು ಎನ್ನುವ ಹೊಣೆಗಾರಿಕೆ, ಹಾಗೂ ಕೊಟ್ಟಿದ್ದು ಸಂಗಾತಿಗೆ ಸರಿಬರದಿದ್ದರೆ ಎಂದು ಸಂಗಾತಿಗೆ ಅನ್ನಿಸುತ್ತದೆ. ಇಂಥ ಪ್ರಕ್ರಿಯೆಯನ್ನು ಹೊಂದಿರುವ ದಾಂಪತ್ಯಗಳು ವ್ಯಾವಹಾರಿಕವಾಗಿ ನಡೆಯುತ್ತಿದ್ದರೂ ಅನ್ಯೋನ್ಯವಾಗಿರಲು ಸಾಧ್ಯವಿಲ್ಲ.

ಸ್ವಯಂಪ್ರೀತಿಯ ಕೊರತೆಗೆ ನಮ್ಮ ಕುಟುಂಬಗಳ ಕೊಡುಗೆಯು ಸಾಕಷ್ಟಿದೆ. ಹೆಣ್ಣು ಸಂತಾನವನ್ನು ಕೀಳಾಗಿ ಕಾಣುತ್ತ ನೀನು ಮರ್ಯಾದೆಗೆ ಯೋಗ್ಯಳಲ್ಲ ಎನ್ನುವ ಹಳೆಯ ತಲೆಯವರು ಇನ್ನೂ ನಮ್ಮಲ್ಲಿದ್ದಾರೆ. ಗಂಡು ಓದು-ಉದ್ಯೋಗದಲ್ಲಿ ಉಳಿದವರನ್ನು ಹಿಂದೆ ಹಾಕದಿದ್ದರೆ ತಾಯ್ತಂದೆಯರ ಟೀಕೆಯ ಪ್ರಹಾರವನ್ನು ಎದುರಿಸಬೇಕಾಗುತ್ತದೆ. ನನಗೆ ಗೊತ್ತಿರುವ ಒಬ್ಬನು ಇಂಜನಿಯರಿಂಗ್ ಓದಿದ ನಂತರ ಉದ್ಯೋಗ ಬಿಟ್ಟು ನಟನೆಯ ಕ್ಷೇತ್ರಕ್ಕೆ ಕಾಲಿಟ್ಟು ಹೆಸರು ಮಾಡಲು ಒದ್ದಾಡುತ್ತಿದ್ದರೆ, ಇಷ್ಟುದಿನ ಪ್ರೀತಿಯಿಂದಿದ್ದ ತಾಯ್ತಂದೆಯರು, ಒಂದೋ ಕೆಲಸ ಮಾಡು, ಇಲ್ಲದಿದ್ದರೆ ಮನೆಬಿಡು ಎಂದು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಹೆಂಡತಿ ನೆರವಿಗಿದ್ದರೂ ಅವನೊಳಗೆ ಸ್ವಯಂಪ್ರೀತಿ ಹುಟ್ಟದೆ ಇರುವುದರಿಂದ ದಾಂಪತ್ಯದಲ್ಲಿ ಅನ್ಯೋನ್ಯತೆ ಸ್ಥಾಪಿಸಲಿಕ್ಕಾಗುತ್ತಿಲ್ಲ.

ಸ್ವಯಂಪ್ರೀತಿಯ ಬಗೆಗೆ ನಾವಿನ್ನೂ ಸಾಕಷ್ಟು ತಿಳಿಯುವುದಿದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕೌಟುಂಬಿಕ ಬದುಕಿನಲ್ಲಿ ಎರಡು ವಿಷಯಗಳ ಬಗೆಗೆ ಮುಕ್ತಚರ್ಚೆ ನಡೆಸಲು ಹಿಂಜರಿಯುತ್ತೇವೆ: ಒಂದು ಕಾಮುಕತೆ, ಇನ್ನೊಂದು ಸಾವು.

235: ಅನ್ಯೋನ್ಯತೆಗೆ ಹುಡುಕಾಟ – 14

ದಾಂಪತ್ಯ ಸಂಬಂಧದಲ್ಲಿರುವ ಅನ್ಯೋನ್ಯತೆಯ ಬಗೆಗೆ ಮಾತಾಡುತ್ತಿದ್ದೇವೆ. ಹೋದಸಲ ಒಂದು ಕುಟುಂಬದ ಅಪ್ಪ-ಮಗ ಹಾಗೂ ಗಂಡ-ಹೆಂಡತಿ ಇವರ ಸಂಬಂಧಗಳನ್ನು ಅನ್ವೇಷಿಸುತ್ತ ಎರಡಕ್ಕೂ ಸಾಮಾನ್ಯವಾದ ಅಂಶಗಳನ್ನು ಕಂಡುಕೊಂಡೆವು. ಸಂಬಂಧಗಳ ಬಗೆಗೆ ಇನ್ನೂ ಆಳವಾಗಿ ಯೋಚಿಸಿದರೆ ಇನ್ನೊಂದು ವಿಷಯ ಗೊತ್ತಾಗುತ್ತದೆ: ಎಲ್ಲ ಆತ್ಮೀಯ ಸಂಬಂಧಗಳು ಮೂರು ಸಾಮಾನ್ಯ ಅಂಶಗಳನ್ನು ಹಂಚಿಕೊಂಡಿವೆ: ಸಾವಿನ ಭಯ, ಒಂಟಿತನ, ಹಾಗೂ ಬಾಂಧವ್ಯದ ಬಯಕೆ. ಇದರ ಬಗೆಗೆ ವಿವರವಾಗಿ ಚಿಂತನೆ ನಡೆಸೋಣ.

ಸಾವಿನ ಭಯ: ನಾವೆಲ್ಲ ಹುಟ್ಟುವಾಗ ಒಬ್ಬರೇ ಹುಟ್ಟುತ್ತೇವೆ, ಹಾಗೂ ಸಾಯುವಾಗ ಒಬ್ಬರೇ ಸಾಯುತ್ತೇವೆ. ಆದರೆ ಯಾವಾಗ ಸಾಯುತ್ತೇವೆ ಎಂದಾಗಲೀ, ಸಾವು ಅಂದರೆ ಹೀಗೆಯೇ ಇರುತ್ತದೆ ಎಂದಾಗಲೀ ಗೊತ್ತಿರುವುದಿಲ್ಲ. ಹಾಗಾಗಿ, ಸಾವೆಂದರೆ ಇದೇ ಇರಬಹುದೆನೋ ಎಂಬ ಅನಿಸಿಕೆಯು ಬದುಕಿನ ಪ್ರತಿ ವಿಷಮ ಸ್ಥಿತಿಯಲ್ಲೂ ಮೂಡುತ್ತ ಇರುತ್ತದೆ. ಪರಿಣಾಮವಾಗಿ, ಸಾಯುವುದು ಒಂದೇ ಸಲವಾದರೂ ಸಾವಿನ ಭಯದಿಂದ ದಿನವೂ ಸಾಯುತ್ತ ಇರುತ್ತೇವೆ. ರೋಗ-ರುಜಿನಗಳು, ವೃದ್ಧಾಪ್ಯ, ಆರ್ಥಿಕ ಮುಗ್ಗಟ್ಟು, ಅಗಲಿಕೆ, ಅವಮರ್ಯಾದೆ – ಎಲ್ಲದರಲ್ಲೂ ಸಾವನ್ನು ಕಾಣುತ್ತೇವೆ. ಭಗ್ನಪ್ರೇಮದಲ್ಲಿ ಖಿನ್ನತೆ ಅನುಭವಿಸುವಾಗ ಸಾವೇ ಬಂದಿದ್ದರೆ ಚೆನ್ನಾಗಿತ್ತು ಎನ್ನುತ್ತೇವೆ. ಅಷ್ಟೇಕೆ, ನೋವಾಗಿ “ಅಯ್ಯೋ ಸತ್ತೆ!” ಎಂದು ಬೊಬ್ಬಿಡುವಾಗ ಸಾವಿನ ಸ್ಪರ್ಶಕ್ಕೆ ಒಳಗಾಗುತ್ತೇವೆ. ಬದುಕಿನಲ್ಲಿ ಯಾವುದೂ ನಿಶ್ಚಿತವಲ್ಲ – ಸಾವೊಂದರ ಹೊರತಾಗಿ – ಎಂದು ಗೊತ್ತಿದ್ದರೂ ತಲೆಯ ಮೇಲೆ ತೂಗುವ ಕತ್ತಿಯಿಂದ ದೂರವುಳಿಯಲು ಹರಸಾಹಸ ಮಾಡುತ್ತೇವೆ.

ಸಾವಿನ ಭಯದಿಂದ ದೂರವಿರಲು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಸಾವನ್ನು ಅಲ್ಲಗಳೆಯುವುದು ಅದರಲ್ಲಿ ಒಂದು. ಮರಣವನ್ನು ನೆನಪಿಸುವ ಸಂದರ್ಭಗಳನ್ನು ಪದಗಳ ಚಮತ್ಕಾರದಿಂದ ಮರೆಸುವುದು (ಉದಾ. “ಏನಾದರೂ ಹೆಚ್ಚುಕಡಿಮೆ ಆದರೆ?”; “ಸತ್ತರು” ಬದಲು “ಹೋಗಿಬಿಟ್ಟರು”; “ಹೋಗುತ್ತೇನೆ” ಬದಲು “ಬರುತ್ತೇನೆ, ನಡೆಯುತ್ತೇನೆ”). ಭವಿಷ್ಯದ ಮೇಲೆ ವರ್ತಮಾನದಲ್ಲಿ ಇದ್ದುಕೊಂಡೇ ಪ್ರಭಾವ  ಬೀರಲು ಯತ್ನಿಸುವುದು ಇನ್ನೊಂದು ಕ್ರಮ. ಗ್ರಹಗತಿಗಳು ತರಬಹುದಾದ ಕುತ್ತುಗಳಿಗೆ ಶಾಂತಿ ಮಾಡುವುದು, ದೀರ್ಘಾಯುಷ್ಯಕ್ಕಾಗಿ ದೇವರ ಮೊರೆ ಹೋಗುವುದು, ಹೆಚ್ಚುವರ್ಷ ಬದುಕಲು ಆಹಾರ, ಆರೋಗ್ಯ, ಯೋಗ, ಯಾಗ, ದಾನ-ಧರ್ಮ ಇಂಥವೆಲ್ಲ ಇದರಲ್ಲಿ ಬರುತ್ತವೆ. ಮೂರನೆಯ ಹಾಗೂ ಅತ್ಯಂತ ಪ್ರಚಲಿತ ವ್ಯವಸ್ಥೆ ಎಂದರೆ ಮಕ್ಕಳನ್ನು ಹುಟ್ಟಿಸಿ ನಮ್ಮ ಛಾಪು ಉಳಿಸುವುದು. ಜೀವಶಾಸ್ತ್ರದ ಪ್ರಕಾರ, ಇಬ್ಬರು ಮಕ್ಕಳಾದರೆ ನಮ್ಮ ಡಿಎನ್‌ಎ ಅರ್ಧರ್ಧ ಹಂಚಿಹೋಗಿ ನಾವು ಚಿರಾಯುವಾಗುತ್ತೇವೆ!

ಒಂಟಿತನ: ನಾವೆಲ್ಲ ಒಂಟಿಯಾಗಿ ಹುಟ್ಟುತ್ತೇವೆ, ಹಾಗೂ ಒಂಟಿಯಾಗಿ ಸಾಯುತ್ತೇವೆ. ಅಷ್ಟೇ ಅಲ್ಲ,  ನಮ್ಮ ಬದುಕನ್ನೂ ಹೆಚ್ಚುಕಡಿಮೆ ಒಂಟಿಯಾಗೇ ಕಳೆಯುತ್ತೇವೆ. ಒಂಟಿತನವು ಸಾವಿನ ನೆನಪನ್ನು ತಂದೊಡ್ಡುತ್ತ ಒಂಟಿಯಾದಷ್ಟೂ ಸಾವಿಗೆ ಹತ್ತಿರವಾಗಿದ್ದೇವೆ ಎನ್ನಿಸುತ್ತದೆ. ಅದು ಹೇಗೆ? ಬದುಕಿರುವ ಅನುಭವ ಉಂಟಾಗುವುದು ನಮ್ಮ ಉಸಿರಾಟ ಅಥವಾ ಶಾರೀರಿಕ ಅರಿವಿನಿಂದಲ್ಲ. ಬದಲಾಗಿ, ಇನ್ನೊಬ್ಬರು ನಮ್ಮನ್ನು ಗುರುತಿಸಿದಾಗ ಮಾತ್ರ. ಇದು ಅರ್ಥವಾಗಲು ನನ್ನ ಅನುಭವ: ಹಿಂದೆ ಬ್ಯಾಂಕಾಕ್‌ನ ವಿಶ್ವವಿದ್ಯಾಲಯಕ್ಕೆ ಒಬ್ಬನೇ ಭೇಟಿಕೊಟ್ಟಿದ್ದೆ. ಕಡೆಯ ದಿನ ಬಿಡುವಾದಾಗ ಯಾರದೋ ಸಲಹೆಯಂತೆ  ಪಟ್ಟಾಯ ಎಂಬ ಊರನ್ನು ವೀಕ್ಷಿಸಲು ಹೊರಟೆ. ನಮ್ಮ ಹಡಗು ಎಲ್ಲರನ್ನೂ ಊರಿನಿಂದ ಹಲವು ಮೈಲುಗಳ ದೂರದ ದ್ವೀಪವೊಂದಕ್ಕೆ ತಂದುಬಿಟ್ಟಿತು. ಅಲ್ಲಿಗೆ ಬಂದವರೆಲ್ಲರೂ ಜೋಡಿಗಳೆ. ಯಾರಾದರೂ ಗುರುತಿಸಬಲ್ಲರೋ ಎಂದು ಪ್ರತಿಯೊಬ್ಬರನ್ನೂ ಮಿಕಮಿಕ ನೋಡಿದೆ. ಒಬ್ಬರೂ ಕಾಣದಿದ್ದಾಗ ಅಪರಿಚಿತರ ನಡುವೆ ಕಳೆದುಹೋದೆ. ಬಂಡೆಯೊಂದರ ಮೇಲೆ ಕುಳಿತು ಮೌನವಾಗಿ ಸಮುದ್ರವನ್ನು ಬೇಸರದಿಂದ ನೋಡುತ್ತಿದ್ದೆ. ಎಲ್ಲರೂ ನಲಿಯುತ್ತ ಮೋಜು ಮಾಡುತ್ತ ಫೋಟೋ ಕ್ಲಿಕ್ಕಿಸುತ್ತಿರುವಾಗ ನಾನು ಅನುಭವಿಸುತ್ತಿರುವ ಒಂಟಿತನದ ಬಗೆಗೆ ಹೆಂಡತಿಗೆ ಸುದೀರ್ಘ ಪತ್ರ ಬರೆದು ಮುಗಿಸಿ, ಕ್ಷಣಗಣನೆಗೆ ಶುರುಮಾಡಿದೆ. ಸಂಜೆ ಮುಖ್ಯಭೂಮಿಗೆ ಮರಳಿ ಹೊಟೆಲ್ ಒಳಗೆ ಕಾಲಿಟ್ಟು ಸ್ವಾಗತಕಾರ್ತಿಯ ಮುಗುಳ್ನಗೆಯನ್ನು ನೋಡಿದಾಗಲೇ ಹೋದ ಜೀವ ಮರಳಿ ಬಂತು. ಇದರರ್ಥ ಏನು? “ನೆನೆದವರ ಮನದಲ್ಲಿ” ಎನ್ನುವಂತೆ ನಾವು ಬದುಕಿರುವುದು ಇನ್ನೊಬ್ಬರ ಮನಸ್ಸಿನಲ್ಲಿ. ಕನ್ನಡಿಯು ನಮ್ಮ ಮುಖದರ್ಶನ ಮಾಡಿಸುವಂತೆ ಇತರರು ನಮ್ಮ ಅಸ್ತಿತ್ವದ ದರ್ಶನ ಮಾಡಿಸುತ್ತಾರೆ. ಯಾರೂ ಗುರುತಿಸದಿದ್ದರೆ ನಮ್ಮ ಅಸ್ತಿತ್ವವು ಅನುಭವಕ್ಕೆ ಬರದೆ ಒಂಟಿತನ ಶುರುವಾಗುತ್ತದೆ. ಹೆಚ್ಚು ಜೀವಿಗಳೊಡನೆ ಸಂಪರ್ಕಿಸಿದಷ್ಟೂ ಹೆಚ್ಚು ಸಾರ್ಥಕವಾಗಿ ಬದುಕಿದಂತೆ ಅನ್ನಿಸುತ್ತದೆ. ಜನ್ಮದಿನದ ಶುಭಾಶಯ ಕೋರುವವರ ಸಂಖ್ಯೆ ಹೆಚ್ಚಾದಷ್ಟೂ ಬದುಕಿದ ಖುಷಿ ಹೆಚ್ಚಾಗುತ್ತದೆ. ಬದಲಾಗಿ ಯಾರೂ ಸಂಪರ್ಕಿಸದಿದ್ದರೆ? ನೀವೇ ಊಹಿಸಿ!

ಒಂಟಿತನದಿಂದ ದೂರವಿರಲು ನಾವು ಮಾಡಿಕೊಂಡಿರುವ ವ್ಯವಸ್ಥೆ ಎಂದರೆ ಕುಟುಂಬ, ವಿವಾಹ, ಹಾಗೂ ಸ್ನೇಹಸಂಬಂಧಗಳು. ಹೆಚ್ಚಿನವರ ಗ್ರಹಿಕೆಯಂತೆ ಇವುಗಳಿಂದ ಮನದೊಳಗಿನ ಒಂಟಿತನ ಅಷ್ಟಾಗಿ ಮಾಯವಾಗಲಾರದು. ಉದಾಹರಣೆಗೆ, ಮೆಚ್ಚಿನ ಬಾಳಸಂಗಾತಿಯ ಜೊತೆಗೆ ಕಳೆಯುವ ಸಮಯವು ಹೆಚ್ಚೆಂದರೆ ದಿನದ ಮೂರನೆಯ ಒಂದು ಭಾಗ ಮಾತ್ರ. ಉಳಿದೆರಡು ಭಾಗ ನಮ್ಮಷ್ಟಕ್ಕೆ ನಾವೇ ಆಗಿರುತ್ತೇವೆ. ಅದಲ್ಲದೆ ಹೆಚ್ಚಿನ ಸಂಬಂಧಗಳಲ್ಲಿ ಬಾಂಧವ್ಯವನ್ನು, “ಜೊತೆಗಿರು, ಆದರೆ ತಲೆ ತಿನ್ನಬೇಡ” ಎನ್ನುವಂತೆ ಇಟ್ಟುಕೊಳ್ಳುತ್ತೇವೆ. ಅಂದರೆ ಒಂದುಕಡೆ ಒಂಟಿತನವನ್ನು ಪರಿಹರಿಸಲು ಹೋಗಿ ಇನ್ನೊಂದು ಕಡೆ ಅದನ್ನೇ ಆರಿಸಿಕೊಳ್ಳುವ ಪ್ರಸಂಗ ತಂದುಕೊಳ್ಳುತ್ತೇವೆ.

ಬಾಂಧವ್ಯದ ಬಯಕೆ: ಒಂಟಿತನವು ಸಸ್ತನಿಗಳಾದ ನಮಗೆ ಹೇಳಿಮಾಡಿಸಿದ್ದಲ್ಲ. ಯಾಕೆ? ಜೀವಶಾಸ್ತ್ರದ ಪ್ರಕಾರ ನಮ್ಮ ಮೈಬಿಸಿಯನ್ನು ಉಳಿಸಿಕೊಳ್ಳಲು ಇನ್ನೊಬ್ಬರ ಶರೀರದ ಬಿಸಿಯನ್ನು ಬಯಸುವುದು ಸಹಜ. ಇದರ ಮೊಟ್ಟಮೊದಲ ಅನುಭವವು ತಾಯಿಯ ಗರ್ಭದಲ್ಲಿ, ಆನಂತರ ತಾಯಿಯ ಶರೀರದ ಸ್ಪರ್ಶದಿಂದ ಆಗುತ್ತದೆ. ದೇಹಭಾಷೆಯ ಮೊದಲ ಪದಗಳು ಇಲ್ಲಿಂದಲೇ ಹುಟ್ಟುತ್ತವೆ. ಸ್ಪರ್ಶ, ಅಪ್ಪುಗೆ, ಮುತ್ತು, ಬಾಹುಬಂಧನ, ತೊಡೆಸಂದು, ಮೈಗಳ ಬೆಸೆತ ಮುಂತಾದ ಪದಗಳಿಗೆ “ಬಿಸಿ” ಅಥವಾ “ಬೆಚ್ಚಗಿನ” ಎಂಬ ಪದವನ್ನು ಸೇರಿಸಿ ನೋಡಿ: ಅದರ ಅನುಭವವೇ ಮೈ ಜುಮ್ಮೆನ್ನುವಂತೆ ಬದಲಾಗುತ್ತದೆ! ಸ್ಪರ್ಶ-ಸಂಪರ್ಕದ ಭಾವನಾತ್ಮಕ ರೂಪಗಳಾದ ಪ್ರೀತಿ ಹಾಗೂ ಬಾಂಧವ್ಯದ ಅನುಭವವೂ ಬೆಚ್ಚಗಿರುತ್ತದೆ. ಕಾರಣಾಂತರದಿಂದ ಇದು ಸಿಗದಿರುವಾಗ ಒಂಟಿತನ ಹಾಗೂ ಅನಾಥಪ್ರಜ್ಞೆ (sense of abandonment), ಹಾಗೂ ತನ್ಮೂಲಕ ಸಾವಿನ ಝಳಕು ಹೊಡೆಯುತ್ತದೆ. ಹಾಗಾಗಿ ಒಂಟಿತನ ಹಾಗೂ ಸಾವಿನ ಭಯದಿಂದ ದೂರವಿಡಲು ನಮಗೆಲ್ಲ ಬಾಂಧವ್ಯ ಬೇಕೇಬೇಕು.

ಒಂಟಿಯಾಗಿರುವ ಇಬ್ಬರು ಒಂಟಿತನ ಸಹಿಸದೆ ಮದುವೆಯಾಗುತ್ತಾರೆ ಎಂದಿಟ್ಟುಕೊಳ್ಳಿ. ಪರಸ್ಪರ ಸಮರ್ಪಕ ಸಂಗಾತಿ ಆಗಬಲ್ಲರೆ? ವಿಚಿತ್ರವೆಂದರೆ ಆಗಲಾರರು. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ಒಂಟಿತನವನ್ನು ನಿವಾರಿಸಲು ಇನ್ನೊಬ್ಬರನ್ನು ಅವಲಂಬಿಸುತ್ತಾರೆ – ಕತ್ತಲೆಗೆ ಹೆದರುವ ಇಬ್ಬರು ಪರಸ್ಪರ ಕೈಹಿಡಿದುಕೊಂಡು ನಡೆದಂತೆ. ಇಲ್ಲಿ ಕಾಣುವುದು ಬೆಸುಗೆಯೇ ವಿನಾ ಅನ್ಯೋನ್ಯತೆಯಲ್ಲ. ಬಾಂಧವ್ಯದಲ್ಲಿ ಅನ್ಯೋನ್ಯತೆ ಹುಟ್ಟಬೇಕಾದರೆ ಒಂಟಿತನಕ್ಕೆ ಸಂಗಾತಿಯನ್ನು ಅವಲಂಬಿಸದೆ ತಮ್ಮ ನೆರವಿನ ಅಗತ್ಯವನ್ನು ತಾವೇ ಪೂರೈಸಿಕೊಳ್ಳಬೇಕು. ಇದರ ಬಗೆಗೆ ಮುಂದಿನ ಸಲ ನೋಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಾಯುವವರಿಗೆ ಆತ್ಮೀಯತೆ ತೋರಿಸುವುದು ಎಂದರೆ ಸಾವಿಗೆ ಆತ್ಮೀಯತೆ ತೋರಿಸಿದಂತೆ. ಅದು ಸ್ವಂತ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ!

234: ಅನ್ಯೋನ್ಯತೆಗೆ ಹುಡುಕಾಟ – 13

ಬಾಲ್ಯದಲ್ಲಿ ಸ್ವಾತಂತ್ರ್ಯ ಮೊಟಕಾಗಿ ಜವಾಬ್ದಾರಿ ಹೆಗಲೇರಿದರೆ ಸೃಜನಶೀಲತೆ ಕಡಿಮೆ ಆಗುವುದೆಂದೂ, ಅದರಿಂದ ಆಘಾತದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಮುಂದೆ ದಾಂಪತ್ಯದ ಅನ್ಯೋನ್ಯತೆಗೆ ಮಾರಕವಾಗುತ್ತದೆ ಎಂದೂ ತಿಳಿದುಕೊಂಡೆವು. ಇನ್ನು ನಾಲ್ಕನೆಯ ಅಡ್ಡಿಯ ಬಗೆಗೆ ನೋಡೋಣ. ಅದಕ್ಕೊಂದು ದೃಷ್ಟಾಂತ:

ನಂದ ಹಾಗೂ ನಂದಿನಿ (ಹೆಸರು ಬದಲಿಸಿದೆ) ಮಧ್ಯವಯಸ್ಸಿನ ದಂಪತಿ. ಇವರಿಗೆ ಎರಡು ಪ್ರತ್ಯೇಕ ಸಮಸ್ಯೆಗಳಿವೆ. ಒಂದು ನಂದನದು. ಅವನಿಗೆ ಕಾಯಿಲೆಯಿಂದ ಜರ್ಜರಿತರಾಗಿ ಈಗಲೋ ಆಗಲೋ ಎನ್ನುವಂತಿರುವ ವೃದ್ಧ ಅಪ್ಪ ಇದ್ದಾರೆ. ನಂದ ಹಜಾರದಲ್ಲಿ ಕೂತಿರುವಾಗ ಕೋಣೆಯ ಬಾಗಿಲಿನಿಂದ ಅಪ್ಪನ ನಿಶ್ಚಲ ಶರೀರವನ್ನು ಕಂಡು ದಿಗಿಲುಪಡುತ್ತಿದ್ದಾನೆ. ಬರಲಿರುವ ಸಾವನ್ನು ಎದುರಿಸಲಾಗದೆ ಭಯಭೀತನಾಗಿದ್ದಾನೆ. ತಲೆಯಲ್ಲಿ ಬಿಟ್ಟೂ ಬಿಡದೆ ವಿಚಾರಗಳ ಸುಳಿ ಸುತ್ತುತ್ತಿದೆ. ಅಪ್ಪ ತೀರಿಹೋದರೆ ಆ ಶರೀರವನ್ನು ಹೇಗೆ ನೋಡುವುದು, ಹೇಗೆ ಮುಟ್ಟುವುದು, ಹೇಗೆ ಮೆಟ್ಟಲಿನಿಂದ ಕೆಳಗೆ ತರುವುದು – ಹೀಗೆ ಕ್ಷಣಗಣನೆ ಮಾಡುತ್ತ ಆಗಾಗ ಎದೆ ಡವಗುಟ್ಟುತ್ತದೆ. ತಲ್ಲಣ ಎದುರಿಸಲು ಆಗದೆ ಕೈಕಾಲು ಕಳೆದುಕೊಳ್ಳುತ್ತಿದ್ದಾನೆ. ಇನ್ನು ನಂದಿನಿಯ ಸಮಸ್ಯೆ: ಗಂಡಹೆಂಡಿರು ಅನ್ಯೋನ್ಯವಾಗಿದ್ದು ಕಾಮಕೂಟ ಸಾಕಷ್ಟು ನಡೆಯುತ್ತಿದ್ದರೂ ಅವಳಿಗೆ ಅನ್ನಿಸುವುದು ಏನೆಂದರೆ ಗಂಡನಿಗೆ ಭಾವನೆಗಳಿಲ್ಲ. ನಂದನಿಗೂ ಹಾಗೆಯೇ ಅನ್ನಿಸುತ್ತದೆ. ತಾನು ಭಾವನೆಗಳಿಲ್ಲದ ವ್ಯಕ್ತಿ; ನಂದಿನಿಯ ಭಾವನಾತ್ಮಕ ಅಗತ್ಯಗಳು ತನಗೆ ಅರ್ಥವಾಗುವುದಿಲ್ಲ. ಹಾಗಾಗಿ ಆಕೆಯ ಅನ್ಯೋನ್ಯತೆಯ ಕರೆಗೆ ಸ್ಪಂದಿಸಲಾಗದೆ ಕರ್ತವ್ಯನಿರತನಾಗಿ ಉಳಿದುಬಿಡುತ್ತಾನೆ – ಕೈಕುಲುಕಲು ಕೈ ಮುಂದೆ ಚಾಚಿದರೆ ನಮಸ್ತೆ ಎಂದು ಕೈಜೋಡಿಸಿದಂತೆ. ಇದರ ಬಗೆಗೆ ನಂದಿನಿಗೆ ಅಸಮಾಧಾನವಿಲ್ಲ, ಆದರೆ ವ್ಯಥೆಯಿದೆ. ಗಂಡ ಭಾವನೆಗಳನ್ನು ಹಂಚಿಕೊಳ್ಳುವ ಹಾಗಾದರೆ ಅದೆಷ್ಟು ಅನ್ಯೋನ್ಯತೆ ಅನುಭವಿಸಬಹುದು ಎಂದು ತಹತಹಿಸುತ್ತಾಳೆ.

ನಂದ ಹಾಗೂ ಅವನ ಅಪ್ಪನ ನಡುವಿನ ಸಂಬಂಧ ಹೇಗಿದೆ? ನಂದ ಅಪ್ಪನ ಹತ್ತಿರ ಹೋಗಲು, ಅವನನ್ನು ಮುಟ್ಟಲು ಹೆದರುತ್ತಾನೆ – ಕಾಯಿಲೆ ಇರುವಾಗ ಮಾತ್ರವಲ್ಲ, ಚಿಕ್ಕಂದಿನಿಂದಲೂ ಅಷ್ಟೆ. ಯಾವೊತ್ತೂ ಅಪ್ಪನೊಡನೆ ಮುಖಾಮುಖಿ ಮಾತಾಡಿಲ್ಲ. ಅವನಿಂದ ಮೈ ತಡವಿಸಿಕೊಂಡಿದ್ದು ಇಲ್ಲವೇ ಇಲ್ಲ. (ಕೆಲವು ಸಲ ಬ್ಯಾಡ್ಮಿಂಟನ್ ಆಡಿದ್ದು ಮಾತ್ರ ನೆನಪಿದೆ.) ಅದು ಹೇಗೆ? ಅಪ್ಪನ ಅಪ್ಪ – ಅಂದರೆ ನಂದನ ಅಜ್ಜ – ಸಾಕಷ್ಟು ಕಾಲ ಬದುಕಿದ್ದರು. ಅವರೆದುರು ಇವನೂ ಇವನಪ್ಪನೂ ಮಕ್ಕಳಂತೆ ವಿಧೇಯರಾಗಿದ್ದರು. ಹಾಗಾಗಿ ಇವರಿಬ್ಬರ ನಡುವೆ ಹಿರಿಯ-ಕಿರಿಯರ ನಡುವೆ ಹುಟ್ಟಬೇಕಾದಂಥ ಮುಕ್ತಪ್ರೀತಿ ಹುಟ್ಟಲು ಅವಕಾಶ ಸಿಗಲೇ ಇಲ್ಲ. ಪರಿಣಾಮವಾಗಿ ನಂದನಿಗೆ ಅಪ್ಪನೆಂದರೆ ಪರಿಚಿತನಾದರೂ ಆತ್ಮೀಯನಲ್ಲದ, ಕರ್ತವ್ಯಪ್ರಜ್ಞೆ ಇದ್ದರೂ ಪ್ರೀತಿಯಿಲ್ಲದ, ಸಂಬಂಧವಿದ್ದರೂ ಬಾಂಧವ್ಯವಿರದ ವಿಲಕ್ಷಣ ನಂಟಿರುವ ವ್ಯಕ್ತಿ. ಆಶ್ಚರ್ಯ ಏನೆಂದರೆ, ನಂದನಿಗೆ ಹದಿವಯಸ್ಸಿನ ಮಗನಿದ್ದಾನೆ. ನಂದ ಅವನನ್ನು ಆಗಾಗ ಸ್ವಯಂಸ್ಫೂರ್ತಿಯಿಂದ ಬಾಚಿ ತಬ್ಬಿಕೊಂಡು ಮುದ್ದಾಡುತ್ತ ಇರುತ್ತಾನೆ. ಇವರಿಬ್ಬರ ನಡುವೆ ವಿನಿಮಯಿಸುವ ಶರೀರಸ್ಪರ್ಶಿತ ಭಾವನೆಗಳು ನಂದ ಹಾಗೂ ಅವನಪ್ಪನ ನಡುವೆ ಯಾವೊತ್ತೂ ವಿನಿಮಯಿಸಿದ್ದಿಲ್ಲ. ಹಾಗಾಗಿ ಅಪ್ಪನಿಗೆ ಮಗುವಾಗಿ ಪ್ರೀತಿಯನ್ನು ಕಾಣದವನು ತನ್ನ ಕರ್ತವ್ಯಗಳನ್ನು ಪೂರೈಸಿದ ನಂತರ ಖಾಲಿತನವನ್ನು ಅನುಭವಿಸುತ್ತಿದ್ದಾನೆ. ಪ್ರೀತಿಯ ಅರಿವಿದ್ದರೂ ತೋರಿಸಿಕೊಳ್ಳದ ಸ್ಥಿತಿಯಲ್ಲಿದ್ದಾನೆ.

ಇನ್ನೊಂದು ವಿಚಿತ್ರ ಏನೆಂದರೆ, ಅಪ್ಪ-ಮಗನ ಸಮಸ್ಯೆಗೂ ಗಂಡ-ಹೆಂಡತಿಯ ಸಮಸ್ಯೆಗೂ ಸಂಬಂಧವಿದ್ದು, ಒಂದಕ್ಕೊಂದು ಹೆಣೆದುಕೊಂಡಿವೆ. ಹೇಗಂತೀರಾ? ನಂದನ ವರ್ತನೆಯು ಪುರುಷ ಪ್ರಧಾನ ಅನಿಸಿಕೆಗಳಿಂದ ಪ್ರಭಾವಿತವಾಗಿದೆ. ಇವನಜ್ಜ ಗಂಡಸಾಗಿದ್ದಕ್ಕೆ ಕುಟುಂಬದ ಪ್ರತಿ ವ್ಯವಹಾರವನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಮೆರೆದ. ಆದರೆ ಪ್ರೀತಿ, ಸ್ನೇಹಪರತೆ ಮುಂತಾದ “ತಾಯ್ತನ”ದ ಕೋಮಲ ಭಾವನೆಗಳಿಗೆ ಜಾಗ ಕೊಡಲಿಲ್ಲ. ತಾನು ಕಲಿತ ಮಾದರಿಯನ್ನು ಅಪ್ಪ ನಂದನಿಗೆ ವರ್ಗಾಯಿಸಿದ್ದಾನೆ. ಹಾಗಾಗಿಯೇ ನಂದ ಕರ್ತವ್ಯ ಪಾರಾಯಣ ಆಗಿದ್ದರೂ ಪ್ರೀತಿಯ ಅನುಭವದಿಂದ ದೂರವಿದ್ದಾನೆ. ಹಾಗಾಗಿ ಸ್ವಂತ ಭಾವನೆಗಳನ್ನು ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವುದಕ್ಕೆ ಅಡ್ಡಿಯಾಗಿ ಅನ್ಯೋನ್ಯತೆ ಹುಟ್ಟುತ್ತಿಲ್ಲ. ಪುರುಷ ಪ್ರಧಾನತೆಯು ಪರಂಪರೆಯ ಭಾಗ ಆಗುವಾಗ ವ್ಯಕ್ತಿ ಪ್ರತ್ಯೇಕತೆ (ಎಲ್ಲರ ನಡುವಿದ್ದು ಹೊಂದಿಕೊಂಡಿದ್ದರೂ ಎಲ್ಲರಿಗಿಂತ ಭಿನ್ನವಾಗಿದ್ದೇನೆ ಎನ್ನುವ ಮನೋಭಾವ) ಕಳೆದು ಹೋಗುತ್ತದೆ. ಆಗ ವ್ಯಕ್ತಿಗಳು ಸ್ವಂತ ಅಸ್ಮಿತೆಯನ್ನು (identity) ಬಿಟ್ಟುಹಾಕಿ ಪರಂಪರೆಯ ಜೊತೆಗೆ ಗುರುತಿಸಿಕೊಳ್ಳುತ್ತಾರೆ. ಹೀಗೆ ನಂದ ಅಪ್ಪನಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳದವನು ಹೆಂಡತಿಯಿಂದಲೂ ಪ್ರತ್ಯೇಕತೆ ಹೊಂದಲಾಗದೆ ಬೆಸೆದುಕೊಂಡು ಇರುತ್ತಾನೆ. ಅದಕ್ಕೇ ಅವರಲ್ಲಿ ಜಗಳಗಳಿಲ್ಲ – ಅಭಿಪ್ರಾಯ ಭೇದವು ಸ್ವಂತಿಕೆಯ ಅಭಿವ್ಯಕ್ತಿಯ ಲಕ್ಷಣ. ಅನ್ಯೋನ್ಯತೆ ಬೆಳೆಸಿಕೊಳ್ಳಲು ಭಿನ್ನಾಭಿಪ್ರಾಯಗಳು ಬಹುಮುಖ್ಯ.

ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣುಗಂಡು ಇಬ್ಬರನ್ನೂ ಘಾತಿಸಿರುವುದರೆ ಬಗೆಗೆ ಈ ಮುಂಚೆ ಬರೆದಿದ್ದೇನೆ (ಕಂತು 192-204: ಪುರುಷರ ನಾಕ-ನರಕ). ಇದು ಅನ್ಯೋನ್ಯತೆಗೆ ಹೇಗೆ ವಿರೋಧ ಎಂದು ಸಾಕಷ್ಟು ವಿವರಿಸಿದ್ದೇನೆ. ಚಿಕ್ಕದಾಗಿ ಹೇಳಬೇಕೆಂದರೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ  ಬೆಳೆಯುವವರಿಗೆ ಪ್ರೀತಿಯ ಬದಲು ದೂರೀಕರಣ ಸಿಗುತ್ತದೆ. ಯಾಕೆ? ಪ್ರೀತಿಸುವುದು, ಪರಿತಪಿಸುವುದು, ಅದಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವುದು ದೌರ್ಬಲ್ಯದ ಸಂಕೇತವೆಂದು ಪುರುಷ ಪ್ರಧಾನತೆಯ ನೀತಿಸಂಹಿತೆ ಹೇಳುತ್ತದೆ. ಇಲ್ಲಿ ಪ್ರೀತಿಯನ್ನು ಕರ್ತವ್ಯ ನಿರ್ವಹಣೆಯ ರೂಪದಲ್ಲಿ ತೋರಿಸಲಾಗುತ್ತದೆ. ನಂದನೂ ನಂದಿನಿಗೆ ಅದನ್ನೇ ಮಾಡುತ್ತಿದ್ದಾನೆ. ಆದರೆ ಆಕೆಗೆ ಬೇಕಾಗಿರುವುದು ಪ್ರೀತಿಯ ನೇರವಾದ ಅಭಿವ್ಯಕ್ತಿ. ಅದಿಲ್ಲದೆ ಅವರ ನಡುವೆ ಅನ್ಯೋನ್ಯತೆ ಬೆಳೆಯಲಾರದು.

ನಂದ-ನಂದಿನಿಯರ ನಡುವೆ ಅನ್ಯೋನ್ಯತೆ ತರಲು ಉಪಾಯವೇನು? ಮೊದಲು ನಂದ ಹಾಗೂ ಅಪ್ಪನ ನಡುವೆ ಮನೋಭಾವುಕ ಸಂಪರ್ಕ ನೆಲೆಗೊಳ್ಳಬೇಕು. ಅದಕ್ಕೊಂದು ಚಟುವಟಿಕೆಯನ್ನು ಸೂಚಿಸಿದೆ: ನಂದ ಅಪ್ಪನ ಬದಿಗೆ ಕುಳಿತುಕೊಂಡು ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಸವರಬೇಕು. ಆಗ ನಂದನ ಪುಟ್ಟ ಮಗನೂ ಜೊತೆಗಿದ್ದರೆ ಇನ್ನೂ ಸೂಕ್ತ. ಹೀಗೆ ಪ್ರತಿನಿತ್ಯ ಸಾಕಷ್ಟು ಹೊತ್ತು ಮಾತಿಲ್ಲದೆ ದೇಹಭಾಷೆಯಲ್ಲಿ ಭಾವನೆಗಳ ವಿನಿಮಯ ನಡೆಸಬೇಕು. ಸಾಯುವವರಿಗೆ ಆತ್ಮೀಯತೆ ತೋರಿಸುವುದು ಎಂದರೆ ಸಾವಿಗೆ ಆತ್ಮೀಯತೆ ತೋರಿಸಿದಂತೆ. ಅದು ಸ್ವಂತ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ! ಹಾಗಾಗಿ ಮೊದಮೊದಲು ಈ ಕೆಲಸ ಇರುಸುಮುರುಸು ಅನ್ನಿಸುವುದು ನಂತರ ಬೆಚ್ಚಗಿನ ಅನುಭವ ಕೊಡುತ್ತದೆ. (ಈ ಸಂದರ್ಭದಲ್ಲಿ ನಾನು ನಂದನ ಮನೆಗೆ ಹೋಗಿ ವೃದ್ಧ ಅಪ್ಪನನ್ನು ಸಂದರ್ಶಿಸಿದ್ದೆ. ಆಗ ಅಪ್ಪ-ಮಗ ಕೈಹಿಡಿದುಕೊಂಡು ದುಃಖಿಸಿದ್ದು, ನಂದ ಬಾಲ್ಯಕ್ಕೆ ಹೋಗಿ ಅಪ್ಪನೊಂದಿಗೆ ಆಟವಾಡುತ್ತಿದ್ದ ನೆನಪನ್ನು ಹಂಚಿಕೊಂಡಿದ್ದು ಹೃದಯಸ್ಪರ್ಶಿ ಆಗಿತ್ತು.)

ಇತ್ತೀಚಿನ ಸುದ್ದಿಯ ಪ್ರಕಾರ, ನಂದ ನಂದಿನಿಯ ಜೊತೆಗೆ ಮಾತಾಡುತ್ತ ಆಗಾಗ ಭಾವಪರವಶ ಆಗುತ್ತಾನೆ. ನಂದಿನಿ ಅವನನ್ನು ಸಂತೈಸುತ್ತಾಳೆ. ನಂತರ ನಡೆಯುವ ಕಾಮಕೂಟದಲ್ಲಿ, ಹಾಗೂ ಅದರ ನಂತರ ನಂದ ಮಾತಾಡುತ್ತ ಭಾವನೆಗಳನ್ನು ಹಂಚಿಕೊಳ್ಳುತ್ತಾನೆ. ಇನ್ನೊಂದು ವಿಶೇಷ ಏನೆಂದರೆ ಮಗನನ್ನು ಮುದ್ದಿಸುವಂತೆ ಹೆಂಡತಿಯನ್ನೂ ಸ್ವಯಂಸ್ಫೂರ್ತಿಯಿಂದ ಮುದ್ದಿಸುವುದನ್ನು ಕಲಿತಿದ್ದಾನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ದಾಂಪತ್ಯದಲ್ಲಿ ಒತ್ತಾಯದ ವಿಧೇಯತೆ ಹೆಚ್ಚಾದಷ್ಟೂ ಸ್ವತಂತ್ರ ವಿಚಾರಪರತೆ ಕಡಿಮೆಯಾಗುತ್ತ ಸೃಜನಶೀಲತೆ ಮಾಯವಾಗುತ್ತದೆ.

233: ಅನ್ಯೋನ್ಯತೆಗೆ ಹುಡುಕಾಟ – 12

ಮಾನವರಲ್ಲಿ ಸಹಜವಾಗಿ ಬರುವ ಅನ್ಯೋನ್ಯತೆಯು ದಾಂಪತ್ಯದಲ್ಲಿ ಸಮಸ್ಯೆಯಾಗುವುದಕ್ಕೆ ಬಾಲ್ಯದಲ್ಲಿ ಹಿರಿಯರೊಂದಿಗೆ ಕಟ್ಟಿಕೊಂಡಿರುವ ನಂಟಿನ ಬಗೆ, ಹಾಗೂ ಅವಮಾನ-ತಪ್ಪಿತಸ್ಥ ಭಾವಗಳು ಕಾರಣ ಎಂದು ವಿವರಿಸುತ್ತಿದ್ದೆ.

ಮಕ್ಕಳು ಹೆತ್ತವರ ಕಟ್ಟಪ್ಪಣೆಗಳಿಗೆ ಒಳಗಾಗಿ ಮಾನಸಿಕ ಆಘಾತ ಅನುಭವಿಸುತ್ತಾರೆ ಎಂದು ಹೇಳುತ್ತಿದ್ದೆ. ಈ ಆಘಾತಗಳು ಎಷ್ಟು ತೀವ್ರವಾಗಿರುತ್ತವೆ ಎಂದರೆ, ಆಡುವ ಮಗುವಿನ ಕೈಯಿಂದ ಆಟಿಕೆಯನ್ನು ಕಿತ್ತುಕೊಂಡರೆ ದೊಡ್ಡವರ ಕೈಯಿಂದ ಉದ್ಯೊಗವನ್ನು ಕಿತ್ತುಕೊಂಡಷ್ಟು ನೋವಾಗುತ್ತದೆ. ಹೆತ್ತವರು ಮಕ್ಕಳ ಆಘಾತಕ್ಕೆ ಸ್ಪಂದಿಸುವುದರಲ್ಲೂ ಸಮಸ್ಯೆಯಿದೆ: “ಉಚಿತ ವರ್ತನೆ” ಎನ್ನುವುದರ ಬಗೆಗೆ ಯಾರಿಗೂ ಸ್ಪಷ್ಟತೆಯಿಲ್ಲ. ಹಾಗಾಗಿ, ಮಗುವು ಆಘಾತಕ್ಕೆ ಒಳಗಾದಾಗ ಪ್ರೀತಿಯ ನೆರಳಲ್ಲಿ ಅನುಭವಿಸಿ ಕಳೆಯಲು ಬಿಡುವುದಿಲ್ಲ. ಆತಂಕದಿಂದ, “ನಿನಗೇನೂ ಆಗಿಲ್ಲ!” ಎಂದು ಆಘಾತವನ್ನು ಅಲ್ಲಗಳೆಯಲು ನೋಡುತ್ತಾರೆ. ಪರಿಣಾಮವಾಗಿ ಮಕ್ಕಳು ಅಂತರಂಗದ ನೋವನ್ನು ಮರೆಯುವುದಕ್ಕಾಗಿ ಹುಚ್ಚಾಪಟ್ಟೆ ಟೀವಿ/ಮೊಬೈಲ್ ವೀಕ್ಷಣೆ, ಮಾದಕವಸ್ತು ಸೇವನೆ ಇತ್ಯಾದಿ ಉಪಾಯ ಹುಡುಕಿಕೊಳ್ಳುತ್ತಾರೆ. ಇಲ್ಲಿ ಇನ್ನೊಂದು ಅನಾಹುತವೂ ನಡೆಯುತ್ತದೆ: ಆಘಾತಗಳು ಹೆಚ್ಚಾದಷ್ಟೂ ಸೃಜನಶೀಲತೆ ಮಾಯವಾಗುತ್ತದೆ!

 ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದಕ್ಕೆ ಸೃಜನಶೀಲತೆ (creativity) ಅಗತ್ಯವಾಗಿದೆ. ಕಾಮಕೂಟದಲ್ಲಿ ಸೃಜನಶೀಲತೆಯ (ಅಂದರೆ ತನ್ನಿಷ್ಟದಂತೆ ಲೈಂಗಿಕ ಕಲ್ಪನೆಯನ್ನು ಸೃಷ್ಟಿಸಿಕೊಳ್ಳುತ್ತ ಅನುಭವಿಸುವುದು) ಪಾತ್ರ ಮಹತ್ವದ್ದು. ಕಲ್ಪನೆಗಳು ಇಲ್ಲದಿದ್ದರೆ ಕಾಮಕ್ರಿಯೆಯು ಮನಸ್ಸನ್ನು ಮುಟ್ಟದೆ ಜನನಾಂಗಗಳ ಮಟ್ಟದಲ್ಲೇ ಉಳಿದುಬಿಡುತ್ತದೆ. ಪ್ರೀತಿಯ ಬಗೆಗೆ ಇರುವಂತೆ ಎಲ್ಲ ಮಕ್ಕಳೂ ಹುಟ್ಟಿನಿಂದ ಸೃಜನಶೀಲರಾಗಿದ್ದು, ತಮ್ಮ ಕಲ್ಪನಾಶಕ್ತಿಯಿಂದ ಅದ್ಭುತವನ್ನು ಸಾಧಿಸುತ್ತಾರೆ – ಚಿಕ್ಕವರು ಪವಾಡ ಸದೃಶ ಸಾಧನೆಗಳನ್ನು ಮಾಡುವುದಕ್ಕೆ ಇದೇ ಕಾರಣ. ಸೃಜನಶೀಲತೆಯು ಸಹಜವಾದರೂ ಅದನ್ನು ಮುಕ್ತವಾಗಿ ಹೊರಗೆಡುಹಲು ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕೇಬೇಕು. ಮಕ್ಕಳು ಬೆಳೆಯುವಾಗ ತಾಯ್ತಂದೆಯರು ಕೊಡುವ ಸ್ವಾತಂತ್ರ್ಯವನ್ನು ಅನುಸರಿಸಿ ಸೃಜನಶೀಲತೆಯ ಪ್ರಕಟಣೆಯಲ್ಲಿ ವ್ಯತ್ಯಾಸವಾಗುತ್ತದೆ. ಉದಾ: ತಾಯಿಯು ತಟ್ಟೆತುಂಬ ಅನ್ನ ಕಲಸಿ ಮಗುವಿನ ಮುಂದಿಟ್ಟು, “ನೀನು ಇದೆಲ್ಲ ತಿಂದರೇನೇ ಆಟವಾಡಲು ಬಿಡುತ್ತೇನೆ” ಎನ್ನುತ್ತಾಳೆ. ಇಲ್ಲೇನು ಸಂದೇಶವಿದೆ? ನನಗೆ ವಿಧೇಯ ಆದರೆ ಮಾತ್ರ ನಿನಗೆ ಸ್ವಾತಂತ್ರ್ಯ, ಇಲ್ಲದಿದ್ದರೆ ಸ್ವಾತಂತ್ರ್ಯವಿಲ್ಲ! (ಇಲ್ಲಿ ಪ್ರೀತಿ-ಭದ್ರತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಎರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ ಎಂಬುದನ್ನು ಗಮನಿಸಿ.) ಹೀಗೆ ಸ್ವಾತಂತ್ರ್ಯ ಗಳಿಸಲು ಮಗುವು ತಾಯಿಯ ಅಪ್ಪಣೆಯನ್ನು ಪಾಲಿಸುವುದು ಅನಿವಾರ್ಯ ಆಗುತ್ತದೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಡುವುದೆಂದರೆ ಹಗ್ಗ ಸಡಿಲ ಬಿಟ್ಟಂತೆ. ತಾಯಿಯು ಪ್ರೀತಿಭದ್ರತೆಗಳ ಸಹಿತ ಕ್ರಮೇಣ ಹಗ್ಗ ಸಡಿಲ ಬಿಡುತ್ತಿದ್ದರೆ ಮಗುವಿಗೆ ಸ್ವಾತಂತ್ರ್ಯ ಸಿಗುತ್ತ ಹೋಗುತ್ತದೆ. ಆಗ ಮಕ್ಕಳು ಮನಸೋಯಿಚ್ಛೆ ಜಗತ್ತನ್ನೂ ಸಂಬಂಧಗಳನ್ನೂ ಅನ್ವೇಷಿಸುತ್ತ ಸೃಜನಶೀಲರಾಗಿ ಬೆಳೆಯುತ್ತಾರೆ. ಇವರು ದಾಂಪತ್ಯದಲ್ಲೂ ಸೃಜನಶೀಲರಾಗಿದ್ದು, ಸಂಬಂಧಗಳ ನೇತ್ಯಾತ್ಮಕತೆಗೆ ಥಟ್ಟನೆ ಉಪಾಯ ಕಂಡುಹಿಡಿಯುತ್ತಾರೆ (ಉದಾ. ಸಂಗಾತಿಯ ಕೋಪಕ್ಕೆ ಪ್ರತಿಯಾಗಿ ಕೋಪಗೊಳ್ಳದೆ ಕಾಳಜಿ ತೋರುವುದು, ಸಂದರ್ಭವನ್ನು ಹಾಸ್ಯದಿಂದ ತಿಳಿಯಾಗಿಸುವುದು). ಆದರೆ ಹೆಚ್ಚಿನ ತಾಯ್ತಂದೆಯರು ಹಗ್ಗ ಸಡಿಲಿಸಲು ಹೆದರುತ್ತಾರೆ. ಐದನೆಯ ವಯಸ್ಸಿನಲ್ಲಿ ಊಟದ ಬಗೆಗಿದ್ದ ಹಗ್ಗದ ಬಿಗಿಯು ಹದಿನೈದರಲ್ಲಿ ಅಂಕಗಳ ಬಗೆಗೆ, ಇಪ್ಪತ್ತೈದರಲ್ಲಿ ತಮ್ಮಿಷ್ಟದಂತೆ ಮದುವೆ ಬಗೆಗೆ ಮುಂದುವರಿದು, ನಂತರ ಮಕ್ಕಳನ್ನು ಹೆರುವ ತನಕವೂ ಎಳೆಯುತ್ತದೆ. ಈ ಸಂದರ್ಭಗಳು ವೈಯಕ್ತಿಕ ಬೆಳವಣಿಗೆಗೆ ನಿಷ್ಠುರವಾಗಿದ್ದು ಗಾಸಿ ಮಾಡುವಂತೆ ಇರುತ್ತವೆ. ಅದು ಹೇಗೆಂದು ನೋಡೋಣ.

ತಾಯ್ತನಕ್ಕೆ ತನ್ನದಲ್ಲದ ಕಾರಣಗಳಿಂದ ಒಪ್ಪಿಕೊಂಡ ಯಾವುದೇ ಹೆಂಗಸನ್ನು ತೆಗೆದುಕೊಳ್ಳಿ. ಮಗುವು ಅನ್ನದ ತಟ್ಟೆ ಖಾಲಿ ಮಾಡದಿದ್ದರೆ ಆಕೆ ಆತಂಕಕ್ಕೆ ಒಳಗಾಗುತ್ತಾಳೆ. ಅದರ ಬಾಯಿಯಲ್ಲಿ ತುತ್ತು ತುರುಕುತ್ತ, “ನೀನು (ನಾನು ಒಳ್ಳೆಯ ತಾಯಿಯಲ್ಲ ಎನ್ನುವ) ಆತಂಕವನ್ನು  ನಿವಾರಿಸಿದರೆ ಮಾತ್ರ ಧಾರಾಳವಾಗಿ ಪ್ರೀತಿ ಕೊಡುತ್ತೇನೆ.” ಎಂದು ಸಂದೇಶ ಕೊಡುತ್ತಾಳೆ. ಇದು ಮಗುವಿಗೆ ಆಘಾತಕಾರಿ ಆಗಿದೆ – ಯಾಕೆಂದರೆ ಇಲ್ಲಿ ಪ್ರೀತಿ-ಭದ್ರತೆ ಅಥವಾ ಸ್ವಾತಂತ್ರ್ಯ ಎರಡರ ಪೈಕಿ ಒಂದನ್ನು ಮಾತ್ರ ಆರಿಸಿಕೊಳ್ಳುವ ಪ್ರಸಂಗವಿದೆ! ಆಗ ಮಗುವು, “ಅನ್ನ ಖಾಲಿ ಮಾಡದಿದ್ದರೆ ತಾಯಿ ಎದೆ ಒಡೆದುಕೊಳ್ಳುತ್ತಾಳೆ. ಆಕೆಯ ಆತಂಕವನ್ನು ನಾನು ನಿವಾರಿಸಬೇಕು. ಇಲ್ಲದಿದ್ದರೆ ಪ್ರೀತಿಭದ್ರತೆಗಳು ಸಿಗಲಾರವು” ಎಂದು ಭಾವನಿರ್ಧಾರ ಮಾಡುತ್ತದೆ. ಹೀಗೆ ಮಗುವಿನ ಆತಂಕವನ್ನು ತಾಯಿಯು ನಿವಾರಿಸುವ ಬದಲು ತಾಯಿಯ ಆತಂಕ-ಅಸಂತೋಷಗಳನ್ನು ನಿಭಾಯಿಸುವ ಹೊಣೆಯು ಮಗುವಿನ ಹೆಗಲೇರುತ್ತದೆ. ಸಹಜವಾಗಿ ಸಿಗಬೇಕಾದ ಪ್ರೀತಿಭದ್ರತೆಗಳು ಕರ್ತವ್ಯ ಪಾಲನೆಯ ಫಲಶ್ರುತಿ ಆಗಿಬಿಡುತ್ತವೆ. ಹೀಗೆ ತನ್ನದಲ್ಲದ ಹೊಣೆಯನ್ನು ಹೊತ್ತ ಮಕ್ಕಳು ಸ್ವತಂತ್ರವಾಗಿ ಏನೂ ಮಾಡಲಿಕ್ಕಾಗದೆ ಸೃಜನಶೀಲತೆ ಮೊಟಕಾಗುತ್ತದೆ. ಇವರು ದೊಡ್ಡವರಾದಾಗ ಜವಾಬ್ದಾರಿ ಹೊರುತ್ತಾರೆಯೇ ವಿನಾ ಬಾಂಧವ್ಯಕ್ಕೆ  ಸೃಜನಶೀಲ ಕೊಡುಗೆ ನೀಡಲಾರರು. ಸಮಸ್ಯೆಗಳನ್ನು ಬಗೆಹರಿಸುವ ಇವರ ಉಪಾಯಗಳಲ್ಲಿ ಕರ್ತವ್ಯ ಇರುತ್ತದೆಯೇ ಹೊರತು ಅಂತಃಪ್ರೇರಣೆ ಇರಲಾರದು. ಇಂಥ ಒಬ್ಬ ಗಂಡ ನನ್ನೆದುರು ಹೆಂಡತಿಗೆ ಹೇಳುತ್ತಾನೆ: “ನೀನು ನನ್ನನ್ನು ಪ್ರೀತಿಸುವ, ನನ್ನ ಕಾಳಜಿ ಮಾಡುವ ಅಗತ್ಯವಿಲ್ಲ. ನನ್ನ ಅಮ್ಮನನ್ನು ಖುಷಿಪಡಿಸು. ಆಗ ನಾನು ನಿನಗೆ ಹತ್ತಿರವಾಗುತ್ತೇನೆ.” ಈ ಅರ್ಥದಲ್ಲಿ ವಿಧೇಯತೆ ಹೆಚ್ಚಾದಷ್ಟೂ ಸ್ವತಂತ್ರ ವಿಚಾರಪರತೆ ಕಡಿಮೆಯಾಗುತ್ತ ಸೃಜನಶೀಲತೆ ಮಾಯವಾಗುತ್ತದೆ. ಇಂಥವರು ಬಾಂಧವ್ಯವನ್ನು ನಾನಾ ರೀತಿಗಳಲ್ಲಿ ಅನ್ವೇಷಿಸಲಾರರು.

ಇಲ್ಲಿ ಮೂರನೆಯ ಸಾಧ್ಯತೆಯೂ ಇದೆ. ತಾಯಿಯು ತನ್ನ ಆತಂಕವನ್ನು ಮಗುವಿನ ಮೇಲೆ ಹೇರಿದಾಗ ಮಗುವು ಆಘಾತಕ್ಕೆ ಒಳಗಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ತನ್ನ ಸೃಜನಶೀಲತೆಯನ್ನು ಸೂಕ್ತವಲ್ಲದ ರೀತಿಗಳಲ್ಲಿ ಉಪಯೋಗಿಸಲು ಕಲಿಯುತ್ತದೆ. (ಉದಾ. ಅನ್ನವನ್ನು ಸೋಫಾ ಕೆಳಗೆ ಬಚ್ಚಿಡುವುದು, ಹೊಟ್ಟೆನೋವಿನ ನೆಪ ಹೇಳುವುದು). ಇಲ್ಲಿ ಮಗುವು ಏನು ನಿರ್ಧರಿಸುತ್ತದೆ? “ನನಗೆ ತಿಳಿದಂತೆ ಜಗತ್ತನ್ನು ಅನ್ವೇಷಿಸುತ್ತೇನೆ. ಆದರೆ ಇದರ ಬಗೆಗೆ ಯಾರಿಗೂ ಹೇಳುವುದಿಲ್ಲ!” ಇಂಥ ಮಕ್ಕಳು ನಿಯಮಗಳನ್ನು ರಹಸ್ಯವಾಗಿ ಮುರಿಯುತ್ತಾರೆ. ಮನೆಗೆ ತಡವಾಗಿ ಬರುತ್ತ ಕುಂಟುನೆಪ ಹೇಳುತ್ತಾರೆ. ತಾಯಿ ಹಜಾರದಲ್ಲಿ ಕಾಯುತ್ತಿರುವಾಗ ಒಬ್ಬರೇ ಕೋಣೆಯಲ್ಲಿ ಬಾಗಿಲು ಹಾಕಿಕೊಳ್ಳುತ್ತಾರೆ. ತಮ್ಮನ್ನು ತಾವೇ ಇಷ್ಟಪಡದೆ (“ನಾನು ಹೀಗೆ ಬದುಕುವುದು ಸರಿಯಲ್ಲ!”) ಒಂದಿಲ್ಲೊಂದು ರೀತಿಯಲ್ಲಿ ಬೇಸರ, ವ್ಯಗ್ರತೆ, ಖಿನ್ನತೆ ಅನುಭವಿಸುತ್ತ ಇರುತ್ತಾರೆ. ಇವರು ದೊಡ್ಡವರಾಗಿ ಅನ್ಯೋನ್ಯತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ದ್ವಂದ್ವಭಾವವು ಎದ್ದುಕಾಣುತ್ತದೆ. ಸಂಗಾತಿ ಹತ್ತಿರ ಇರುವಾಗ ಬಾಂಧವ್ಯ ಬೆಳೆಸಲು ಉತ್ಸುಕತೆ ತೋರದೆ ಅಷ್ಟಕ್ಕಷ್ಟೆ ಇರುತ್ತಾರೆ. ಸಂಗಾತಿ ದೂರವಾದಾಗ ಹಲುಬುತ್ತ “ಹೇಳಿದಂತೆ ಕೇಳಲು, ಏನು ಬೇಕಾದರೂ ಮಾಡಲು” ತಯಾರಾಗುತ್ತಾರೆ. ಇಲ್ಲಿ ತನಗೇನು ಬೇಕು ಎನ್ನುವುದನ್ನು ಸಂಗಾತಿಯಿಂದ ಗುಟ್ಟಾಗಿ ಇಟ್ಟಿದ್ದು, ಅದನ್ನು ಕಾಪಾಡಿಕೊಳ್ಳಲು ಸೃಜನಶೀಲತೆಯನ್ನು ಉಪಯೋಗಿಸುವ ಸಾಧ್ಯತೆಯಿದೆ. ಸುಳ್ಳು ಹೇಳುವುದು, ಹಾಗೂ ಪರಸಂಬಂಧಕ್ಕೆ ಮನಸ್ಸು ಮಾಡುವುದರಲ್ಲಿ ಸೃಜನಶೀಲತೆಯ ದುರುಪಯೋಗ ಎದ್ದುಕಾಣುತ್ತದೆ.

ಸೃಜನಶೀಲತೆ ಇಲ್ಲದಿದ್ದರೆ ಏನಾಗುತ್ತದೆ? ಆಘಾತದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಇಳಿಮುಖ ಆಗುತ್ತದೆ. ನರಳಿಕೆ ಉಳಿಯುತ್ತದೆ. ಇದು ಖಂಡಿತವಾಗಿಯೂ ದಾಂಪತ್ಯದಲ್ಲಿ ಅನ್ಯೋನ್ಯತೆಗೆ ಮಾರಕ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹಿರಿಯರ ಒತ್ತಾಯದಿಂದ ಮಾಡಿದ ಸಾಧನೆಗಳ ಹಿಂದಿನ ಇತಿಹಾಸವು ಅವರದಲ್ಲದ ನೋವು-ನರಳಿಕೆಗಳಿಂದ ಕೂಡಿರುತ್ತದೆ!

232: ಅನ್ಯೋನ್ಯತೆಗೆ ಹುಡುಕಾಟ – 11  

ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಸ್ಥಾಪಿಸುವುದರ ಬಗೆಗೆ ಕಳೆದ ಹತ್ತು ಕಂತುಗಳ ಮೂಲಕ ಚರ್ಚಿಸುತ್ತಿದ್ದೇವೆ. ಇಲ್ಲೊಂದು ಮೂಲಭೂತ ಪ್ರಶ್ನೆ: ಅನ್ಯೋನ್ಯತೆಯು ಮಾನವರಾದ ನಮಗೆ ಸಹಜವಾಗಿ ಬರುವುದಿಲ್ಲವೆ? ಪರಸ್ಪರ ಪ್ರೀತಿಸುವುದನ್ನು, ಅದರಲ್ಲೂ ದಾಂಪತ್ಯದಲ್ಲಿ ಪ್ರೀತಿ ಮಾಡುವುದನ್ನು ಕಲಿಯಬೇಕೆ?

ಮಾನವರು ಮಾತ್ರವಲ್ಲ, ಎಲ್ಲ ಸಸ್ತನಿಗಳಲ್ಲೂ ಪ್ರೀತಿಯೆಂಬ ಭಾವನೆ ಸಹಜವಾಗಿ ಹರಿಯುತ್ತದೆ. ಪುಟ್ಟ ನಾಯಿಮರಿಗಳು ಒಂದರ ಮೇಲೊಂದು ಬಿದ್ದು ಆಟವಾಡುವುದನ್ನು ನೀವು ನೋಡಿರಬಹುದು. ಹುಟ್ಟಿದ ಮಗುವಿಗಂತೂ ಪ್ರೀತಿ ಬೇಕೇಬೇಕು. ಎಷ್ಟೇ ಆಟಿಕೆಗಳನ್ನು ಕೊಟ್ಟರೂ ಅಳುವ ಮಗುವು ಪ್ರೀತಿ ತೋರುವ ಹಿರಿಯರ ತೊಡೆಯಮೇಲೆ ಶಾಂತವಾಗಿ ಮಲಗುತ್ತದೆ. ಪ್ರೀತಿಯೊಂದನ್ನು ಬಿಟ್ಟು ಇತರೆಲ್ಲ ಸೌಲಭ್ಯಗಳನ್ನು ಒದಗಿಸಿದರೂ ಅದು ಬದುಕಲಾರದು. ಹಾಗೆಯೇ, ಇನ್ನೊಬ್ಬರನ್ನು ಪ್ರೀತಿಸುವ ಗುಣವು ಎಲ್ಲ ಮಕ್ಕಳಿಗೂ ಸಹಜವಾಗಿಯೇ ಬರುತ್ತದೆ. ಉದಾಹರಣೆಗೆ, ಶಿಶುವಿಹಾರದ ಮಕ್ಕಳನ್ನು ಗಮನಿಸಿ: ಪರಿಚಯ ಇಲ್ಲದ, ಭಾಷೆ ಗೊತ್ತಿಲ್ಲದ ಮಕ್ಕಳೂ ಕೂಡ ಪರಸ್ಪರ ಸಂಕೋಚವಿಲ್ಲದೆ ಬೆರೆಯುತ್ತ ಸ್ನೇಹ, ಪ್ರೀತಿ ತೋರಿಸುತ್ತ ಅನ್ಯೋನ್ಯತೆಯಿಂದ ಇರುತ್ತಾರೆ. ಜಗಳ ಆಡಿದರೂ ಬಹುಬೇಗ ಒಂದಾಗುತ್ತಾರೆ.

ಪ್ರೀತಿಸುವುದು ಹಾಗೂ ಪ್ರೀತಿಯನ್ನು ಬಯಸುವುದು ಸಹಜ ಸ್ವಭಾವ ಎಂದಮೇಲೆ ದಾಂಪತ್ಯದಲ್ಲಿ ಪ್ರೀತಿಸುವುದು, ಪ್ರೀತಿ ತೋರುವುದು ಹಾಗೂ ಅನ್ಯೋನ್ಯತೆ ಬೆಳೆಸಿಕೊಳ್ಳುವುದು ಯಾಕೆ ಘನಗಂಭೀರ ಆಗಿಬಿಡುತ್ತದೆ? 

ನನಗೆ ಗೊತ್ತಿರುವಂತೆ ಇದಕ್ಕೆ ಮುಖ್ಯವಾಗಿ ನಾಲ್ಕು ಕಾರಣಗಳಿವೆ. ಒಂದು: ಪ್ರತಿಯೊಬ್ಬರೂ ಚಿಕ್ಕವರಿರುವಾಗ ಹಿರಿಯರಿಂದ ಪ್ರೀತಿಯ ನಂಟು (attachment style) ಎಷ್ಟರ ಮಟ್ಟಿಗೆ ಹಾಗೂ ಯಾವ ರೀತಿಯಲ್ಲಿ ಸಿಗುತ್ತದೆ ಎನ್ನುವುದನ್ನು ಅನುಸರಿಸಿ ಪ್ರೀತಿಸುವ ನಮೂನೆಯನ್ನು ಬೆಳೆಸಿಕೊಳ್ಳುತ್ತಾರೆ. ಉದಾಹರಣೆಗೆ, ಸಾಕಷ್ಟು ಪ್ರೀತಿ ಸಿಕ್ಕಿರುವ ಮಕ್ಕಳು ಭದ್ರಭಾವ (secure) ಬೆಳೆಸಿಕೊಳ್ಳುತ್ತಾರೆ. ಅವರು ದೊಡ್ಡವರಾದ ನಂತರ ಸಂಗಾತಿಯನ್ನು ನಿರ್ವ್ಯಾಜ ಮನದಿಂದ ಪ್ರೀತಿಸಲು, ಅವರೊಡನೆ ಅನ್ಯೋನ್ಯತೆಯಿಂದ ವ್ಯವಹರಿಸಲು ಕಲಿಯುತ್ತಾರೆ. ಪ್ರೀತಿ ಸಿಗದಿದ್ದಾಗ ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾರೆ. ಚಿಕ್ಕವರಿರುವಾಗ ಬಯಸಿದಷ್ಟು ಪ್ರೀತಿ ಸಿಗದೆ ಕೊರತೆ ಆದಾಗ, ಸಿಗದಿರುವ ಪ್ರೀತಿಗೆ ಹಪಹಪಿಸುತ್ತ ಆತಂಕಭಾವ (anxious style) ಬೆಳೆಸಿಕೊಳ್ಳುತ್ತಾರೆ. ಇವರು ದೊಡ್ಡವರಾದ ನಂತರ “ಪರಿಪೂರ್ಣ ಪ್ರೀತಿ”ಗೆ ಒದ್ದಾಡುತ್ತಾರೆ. ಸಿಕ್ಕ ಪ್ರೀತಿಯು ಪರಿಪೂರ್ಣ ಆಗಿದೆಯೆ ಎಂದು ಸಂದೇಹದಿಂದ ಪರೀಕ್ಷಿಸುತ್ತಾರೆ. ಚಿಕ್ಕವರಿರುವಾಗ ಪ್ರೀತಿ ಸಿಗದೆ ತಿರಸ್ಕಾರ ನಿರ್ಲಕ್ಷ್ಯಗಳೇ ಹೆಚ್ಚಾಗಿ ಸಿಗುವಾಗ ಮಕ್ಕಳು ಪ್ರೀತಿಯ ಅಗತ್ಯತೆಯಿಂದ ದೂರವಾಗುತ್ತ, ಒಂಟಿತನದಿಂದ ಬದುಕಲು ಭಾವನಿರ್ಧಾರ (emotional decision) ಕೈಗೊಂಡು, ಏಕಾಂಗಿಭಾವವನ್ನು (avoidant style) ಬೆಳೆಸಿಕೊಳ್ಳುತ್ತಾರೆ. ಇವರಿಗೆ ದಾಂಪತ್ಯದಲ್ಲಿ ಪ್ರೀತಿಯನ್ನು ಕೊಡಮಾಡಿದಾಗ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ದೂರ ಉಳಿಯುತ್ತ ಸಂಗಾತಿಯಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಇನ್ನು, ಚಿಕ್ಕವರಿರುವಾಗ ಪ್ರೀತಿ ಸಿಗದೆ ತಿರಸ್ಕಾರ ಹಾಗೂ ಅಲಕ್ಷ್ಯಕ್ಕೆ ಒಳಪಟ್ಟದ್ದಲ್ಲದೆ ಹಿಂಸೆ ಹಾಗೂ ದುರ್ವರ್ತನೆಗೆ ಈಡಾಗಿದ್ದರೆ ಕ್ಷೋಭಾಭಾವವನ್ನು (disorganised) ಬೆಳೆಸಿಕೊಳ್ಳುತ್ತಾರೆ. ದೊಡ್ಡವರಾದಾಗ ಸದಾ ಪ್ರೀತಿಗಾಗಿ ಹಪಹಪಿಸುತ್ತ, ಅದು ಸಿಕ್ಕಾಗ ಸಂದೇಹದಿಂದ ನೋಡಿ ತಿರಸ್ಕರಿಸಿ, ಏಕಾಂಗಿಯಾಗಿ ಉಳಿಯುತ್ತ ನರಳುತ್ತಾರೆ. ಒಟ್ಟಿನಲ್ಲಿ ಭದ್ರಭಾವದವರನ್ನು ಬಿಟ್ಟು ಉಳಿದವರಿಗೆ ಪ್ರೀತಿಯನ್ನು ಕೊಡತೆಗೆದುಕೊಳ್ಳುವುದು ಕಬ್ಬಿಣದ ಕಡಲೆ ಆಗುವುದರಿಂದ ಅನ್ಯೋನ್ಯತೆಯ ಪರಿಕಲ್ಪನೆಯನ್ನು ಗ್ರಹಿಸಲು, ಹಾಗೂ ಅದನ್ನು ದಾಂಪತ್ಯದಲ್ಲಿ ಅಳವಡಿಸಿಕೊಳ್ಳಲು ಹೆಚ್ಚುಹೆಚ್ಚಾಗಿ ಪ್ರಯತ್ನ ಹಾಕಬೇಕಾಗುತ್ತದೆ.

ಸಂಗಾತಿಯೊಡನೆ ಪ್ರೀತಿ, ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಅಡ್ಡಿಯಾಗುವ ಎರಡನೆಯ ಕಾರಣವೆಂದರೆ ಬೆಳವಣಿಗೆಯ ಹೆಸರಿನಲ್ಲಿ ಆಗಿರುವ ಅವಮಾನ ಹಾಗೂ ಮಾನಸಿಕ ಗಾಯಗಳು. ಇದು ಹೇಗೆಂದು ವಿವರಿಸುತ್ತೇನೆ. ಮಕ್ಕಳ ಬೆಳವಣಿಗೆಗೆ ತಾಯ್ತಂದೆಯರು ತರಬೇತಿ ನೀಡುವುದು ಆವಶ್ಯಕ. (ಸಸ್ತನಿ ಪ್ರಾಣಿಗಳಲ್ಲೂ ತರಬೇತಿಯಿದೆ: ಅಪಾಯಗಳಿಂದ ಸುರಕ್ಷಿತವಾಗಿ ಬದುಕುವ ಹಾಗೂ ಆಹಾರ ಸಂಪಾದಿಸುವ ಕೌಶಲ್ಯಗಳೇ ಇವು. ಲೈಂಗಿಕ ವರ್ತನೆಯ ಬಗೆಗೆ ಯಾವ ಪ್ರಾಣಿಗಳೂ ತರಬೇತಿ ಕೊಡುವುದಿಲ್ಲ – ಮಾನವರ ಹೊರತಾಗಿ!) ಈ ತರಬೇತಿಯು ಮಾನವರಲ್ಲಿ  ಸಂಸ್ಕಾರದ ಹೆಸರಿನಲ್ಲಿದ್ದು, ಇದನ್ನು “ಮಾಡು/ಮಾಡಬೇಡ” ಎನ್ನುವ ಕಟ್ಟಪ್ಪಣೆಗಳ ಮೂಲಕ ಬರುತ್ತದೆ. ವಿದ್ಯುತ್ತು ಹರಿಯುವ ತಂತಿಯನ್ನು ಮುಟ್ಟಕೂಡದು ಎನ್ನುವಂಥ ಅಪ್ಪಣೆಗಳಲ್ಲಿ ಅರ್ಥವಿದೆ, ಆದರೆ ಹೆಚ್ಚಿನವುಗಳು ಸಂಪತ್ತು ಹಾಗೂ ಸುಳ್ಳುಪ್ರತಿಷ್ಠೆಗೆ ಕುಮ್ಮಕ್ಕು ಕೊಡುವಂತಿದ್ದು, ಅನುಸರಿಸದಿದ್ದರೆ ಸಮಾಜದಿಂದ ತಿರಸ್ಕೃತಗೊಳ್ಳುವ ಭಯ ಹಿರಿಯರಲ್ಲಿದೆ. “ನಮ್ಮನ್ನು ಕೆರಳಿಸುವ ಭಾವನೆಗಳನ್ನು ತೋರ್ಪಡಿಸಬೇಡ, ನಮ್ಮ ಕೈಲಾಗದ್ದನ್ನು ಕೇಳಬೇಡ” ಎನ್ನುವಲ್ಲಿಂದ ಶುರುವಾಗಿ, “ತಮಾಷೆಯಾಗಿ ಇರಬೇಡ, ಸಲಿಗೆಯಿಂದ ದೂರವಿರು, ಸ್ವಚ್ಛಂದವಾಗಿ ನಗಬೇಡ, ಯಾರಿಗೂ ಹತ್ತಿರವಾಗಬೇಡ…” ಹಾಗೂ, “ನಿನಗೇನೂ ಅರ್ಥವಾಗುವುದಿಲ್ಲ, ನಿನಗೆ ಬುದ್ಧಿಯಿಲ್ಲ” ಎನ್ನುವ ತನಕ ಮುಂದುವರಿಯುತ್ತವೆ. ಇದರ ಒಳಾರ್ಥ ಏನು? “ನಿನ್ನನ್ನು ನೀನು ನಂಬಕೂಡದು, ನೀನು ನೀನಾಗಿ ಇರಕೂಡದು. ಇದ್ದೂ ಇಲ್ಲದಂತೆ ಇರು!” ಇತ್ಯಾದಿ. ಇವುಗಳನ್ನು ಪಾಲಿಸದಿದ್ದರೆ ತಾಯ್ತಂದೆಯರ ವಿರುದ್ಧ ಸಂಘರ್ಷ ಖಂಡಿತ.  ಹಾಗಾಗಿ ಮಕ್ಕಳು ತಮ್ಮ ಒಳದನಿಯನ್ನು ಹತ್ತಿಕ್ಕುತ್ತ ತಾಯ್ತಂದೆಯರ ಇಷ್ಟದಂತೆ ನಡೆದುಕೊಳ್ಳುತ್ತಾರೆ. ಪರಿಣಾಮ ಖಿನ್ನತೆ, ಒಂಟಿತನ, ಅನಾಥಪ್ರಜ್ಞೆ ಅಮರಿಕೊಳ್ಳುತ್ತದೆ. ಅನೇಕರು “ತಾಯ್ತಂದೆಯರ ಅಪೇಕ್ಷೆಗೆ ತಕ್ಕಂತೆ ನಡೆಯಲಿಲ್ಲ; ನಡೆದುಕೊಂಡಿದ್ದರೆ ಅವರು ನನ್ನನ್ನು ಪ್ರೀತಿಸಬಹುದಿತ್ತು” ಎಂದು ತಪ್ಪಿತಸ್ಥ ಭಾವ, ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಹೀಗೆ, ಹೀನೈಕೆ ಹಾಗೂ ತಪ್ಪಿತಸ್ಥಭಾವದ ಹಿಂದೆ ಹುಟ್ಟುಸ್ವಭಾವವಾದ ಪ್ರೀತಿಸುವ ಹಾಗೂ ಅನ್ಯೋನ್ಯವಾಗಿರುವ ಸಾಮರ್ಥ್ಯ ಮರೆಯಾಗುತ್ತದೆ.

ಇದರರ್ಥ ಏನು? ಹೆಚ್ಚು ಓದಿದವರ ಅಥವಾ ಹೆಚ್ಚು ಸಂಪಾದನೆ ಮಾಡುವವರ ಇತಿಹಾಸವು ಹೆಚ್ಚು ನೋವು-ನರಳಿಕೆಗಳಿಂದ ಕೂಡಿರುತ್ತದೆ! ಭಾವನಾತ್ಮಕ ಮಟ್ಟದಲ್ಲಿ ಹೇಳುವುದಾದರೆ, ವ್ಯವಸ್ಥೆಗೆ ಹೊಂದಿಕೊಳ್ಳುವ ಧಾವಂತದಲ್ಲಿ ಮಾನಸಿಕ ಗಾಯಗಳು ಹೆಚ್ಚಾಗುತ್ತವೆ. ಗಾಯಗಳು ಹೆಚ್ಚಾದಷ್ಟೂ ತನ್ನತನ ಕಡಿಮೆಯಾಗುತ್ತ ಸ್ವಂತಿಕೆ ಕಳೆದುಹೋಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ನಮ್ಮ ವ್ಯವಸ್ಥಿತ ವಿವಾಹಗಳು. ಹುಡುಗ-ಹುಡುಗಿಯರು ಆಯ್ಕೆ ಮಾಡಿಕೊಳ್ಳುವ ಒರೆಗಲ್ಲು ಪ್ರೀತಿ-ಅನ್ಯೋನ್ಯತೆ ಅಲ್ಲ, ಲೈಂಗಿಕ ಆಕರ್ಷಣೆಯೂ ಅಲ್ಲ. ವೃತ್ತಿ ನೈಪುಣ್ಯ, ಸಂಪಾದನೆ ಹಾಗೂ ಅಂತಸ್ತು. ಇಲ್ಲೊಬ್ಬ ಬುದ್ಧಿವಂತ ಹುಡುಗ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಕೊನೆಯ ವರ್ಷ ಅವನು ನಪಾಸಾಗಿ ಆಕೆ ಉಚ್ಚ ಶ್ರೇಣಿಯಲ್ಲಿ ಪಾಸಾದಳು. ಆಕೆಯ ಹೆತ್ತವರು ಅವಳ ಮನಸ್ಸಿಗೆ ವಿರುದ್ಧವಾಗಿ ಪ್ರೇಮಿಯನ್ನು ದೂರಮಾಡಿ ಡಾಕ್ಟರೇಟ್ ಮಾಡಿಕೊಂಡ ಹುಡುಗನಿಗೆ ಮದುವೆ ಮಾಡಿಸಿದರು. ಮೂರು ವರ್ಷದ ತರುವಾಯ ಏನಾಗಿದೆ? ನಪಾಸಾದ ಹುಡುಗ ದೊಡ್ಡ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಧಾರಾಳವಾಗಿ ಸಂಪಾದಿಸುತ್ತಿದ್ದಾನೆ. ಇತ್ತ ಗಂಡನಿಂದ ಸಾಕಷ್ಟು ಅನುಕೂಲ ಇದ್ದರೂ ಒಂಚೂರೂ ಪ್ರೀತಿ ಸಿಗದ ಹುಡುಗಿಯ ಪರಿಸ್ಥಿತಿಯು ವಿಚ್ಛೇದನಕ್ಕೆ ಪ್ರೇರೇಪಿಸುತ್ತಿದೆ.

ಮಕ್ಕಳು ಹೀಗೆ ಕಟ್ಟಪ್ಪನೆಗಳಿಗೆ ಒಳಗಾಗಿ ಬೆಳೆಯುವಾಗ ಹುಟ್ಟಿನಿಂದ ಸಹಜವಾಗಿ ಬಂದಿರುವ ಪ್ರೀತಿ-ಪ್ರೇಮಗಳಿಂದ ಬಾಂಧವ್ಯ ಕಟ್ಟಿಕೊಳ್ಳುವ ವರದಾನವು ಹಿರಿಯರ ಸಂಸ್ಕಾರದ ಪ್ರಭಾವಕ್ಕೆ ಒಳಗಾಗಿ ಶಾಪಗ್ರಸ್ತ ಆಗುತ್ತದೆ. ಪರಿಣಾಮವಾಗಿ ಅವರು ತಮ್ಮನ್ನೇ ತಾವು ಇಷ್ಟಪಡಲಾರರು. ಸ್ವತಃ  ಪ್ರೀತಿಸಿಕೊಳ್ಳದಿದ್ದರೆ ಸಂಗಾತಿಯನ್ನೂ ಪ್ರೀತಿಸಲಾರರು. ಆಗ ಅನ್ಯೋನ್ಯತೆಯೇ ಹುಟ್ಟಲಾರದು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಆತ್ಮವಿಕಾಸಕ್ಕೆ ಅವಿರತ ಪ್ರಯತ್ನವೇ ಅನ್ಯೋನ್ಯತೆಯ ಮೂಲ; ಆತ್ಮದರ್ಶನವಾಗುತ್ತ ಅನ್ಯೋನ್ಯತೆಯೂ ಬೆಳೆಯುತ್ತದೆ!

231: ಅನ್ಯೋನ್ಯತೆಗೆ ಹುಡುಕಾಟ – 10  

ಸಂಗಾತಿಯೊಂಡನೆ ಮನಬೆತ್ತಲೆ ಆಗುವಾಗ ಕೋಮಲ ಪ್ರೀತಿಯು ಕಾಲಿಡುತ್ತ ಅನ್ಯೋನ್ಯತೆಗೆ ಹಾದಿಯಾಗುತ್ತದೆ ಎಂದು ಕಂಡುಕೊಂಡೆವು. ಹಾಗೂ ಹಂಚಿಕೊಳ್ಳುವ ವಿಧಾನವನ್ನೂ ತಿಳಿದುಕೊಂಡೆವು. ಈ ಆಡುವ-ಆಲಿಸುವ ಪ್ರಕ್ರಿಯೆಯೊಳಗೆ ಅಡಕವಾಗಿರುವ ಕೆಲವು ಸೂಕ್ಷ್ಮತೆಗಳನ್ನು ಗೊತ್ತುಮಾಡಿಕೊಳ್ಳುತ್ತ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳೋಣ.

ಸಂದೇಹ: ಹಂಚಿಕೊಳ್ಳುವುದನ್ನು ಎಲ್ಲಿಂದ ಶುರುಮಾಡುವುದು, ಹಾಗೂ ಹೇಗೆ ಮುಂದುವರಿಸುವುದು?

ನಿಮ್ಮ ತಲೆತಿನ್ನುತ್ತಿರುವ ಯಾವುದೇ ಘಟನೆಯಿಂದ ಶುರುಮಾಡಿ. ಅದಕ್ಕೆ ಸಂಬಂಧಪಟ್ಟಂತೆ ಬರುವ ವಿಚಾರ-ಭಾವನೆ-ಕಲ್ಪನೆಗಳನ್ನು ನೆನಪು ಮಾಡಿಕೊಳ್ಳಿ. (“ಆಗ ನನಗೆ ಸಿಟ್ಟು ಬಂದಿತ್ತು”) ಈ ಅನಿಸಿಕೆಗಳು ಆಗಾಗ ಬರುತ್ತವೆಯೇ ಎಂದು ನೆನಪಿಸಿಕೊಳ್ಳಿ. (“ಇಂಥದ್ದು ನಡೆದಾಗಲೆಲ್ಲ ನಿನ್ನಮೇಲೆ ಸಿಟ್ಟು ಬರುತ್ತದೆ.”) ಹಾಗೆಯೇ ಅದರ ಹಿಂದಿನ ಭಾವನೆಗಳನ್ನು ಗುರುತಿಸಿಕೊಳ್ಳಿ (“ನನ್ನಲ್ಲೆಲ್ಲಿ ತಪ್ಪು ತಿಳಿಯುತ್ತೀಯೋ ಅಂತ ಭಯವಾಗುತ್ತದೆ”). ಈ ಭಾವನೆಗಳ ಬೆನ್ನುಹತ್ತಿ ಭೂತಕಾಲಕ್ಕೆ, ಅಲ್ಲಿಂದ ಬಾಲ್ಯಕ್ಕೆ ಹೋಗುತ್ತ, ಅವು ನಿಮ್ಮ ಮೂಲ ಕುಟುಂಬದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಸಂಬಂಧಪಟ್ಟಿದ್ದೆ ಎಂದು ಯೋಚಿಸಿ. (“ಬಾಲ್ಯದಲ್ಲಿ ನಮ್ಮ ಅಮ್ಮ/ಪ್ಪ ಹೀಗೆ ಅಂದಾಗಲೆಲ್ಲ ನನಗೆ ಅಲಕ್ಷಕ್ಕೆ ಒಳಗಾಗುವಂತೆ ಆಗಿ ಭಯ ಆಗುತ್ತಿತ್ತು. ಸಿಟ್ಟು ತೋರಿಸುತ್ತಿದ್ದೆ”). ನಂತರ ಅದರ ಆಳಗಲಗಳನ್ನು ಕೆದಕುತ್ತ ನಿಮಗಾದ ನೋವು-ನರಳಿಕೆಯ ಬಗೆಗೆ ಮುಕ್ತವಾಗಿ ನೆನಪಿಸಿಕೊಳ್ಳಿ. ಆಗ ನಿಮಗಾಗುತ್ತಿದ್ದ ಅವಮಾನ, ಹೀನೈಕೆ, ಖಜೀಲತನ ಅದರಿಂದ ನಿಮ್ಮ ಮೇಲಾಗುತ್ತಿದ್ದ ಪರಿಣಾಮ, ಹಾಗೂ ಅದರಿಂದ ರಕ್ಷಿಸಿಕೊಳ್ಳಲು ನೀವು ಸಿಟ್ಟಾಗುವುದು, ಮರೆಮಾಚುವುದು, ಸುಳ್ಳಾಡುವುದು ಕಲಿತಿದ್ದು, ಅದನ್ನು ಮುಂದುವರಿಸಿದ್ದು ಹಂಚಿಕೊಳ್ಳಿ. ನಂತರ ಇನ್ನೊಂದು ವಿಷಯ ಸೇರಿಸಿ: ನಿಮ್ಮ ಬಾಲ್ಯವು ಹಾಗಿಲ್ಲದೆ ಹಿತಕರವಾಗಿದ್ದರೆ ಹೇಗಿರುತ್ತಿತ್ತು, ಅದರ ಪರಿಣಾಮವಾಗಿ ನೀವು ಈಗ ಹೇಗಿರುತ್ತಿದ್ದಿರಿ ಎಂಬುದನ್ನು ಕಲ್ಪಿಸಿಕೊಳ್ಳಿ. (“ಅವರು ನನಗೆ ಬೆಲೆಕೊಟ್ಟು ಪ್ರೀತಿಸಿದ್ದರೆ ಸಿಟ್ಟಿಲ್ಲದೆ ಪ್ರಸನ್ನವಾಗಿರುತ್ತಿದ್ದೆ; ಅಭದ್ರತೆಯ ಬದಲು ಆತ್ಮವಿಶ್ವಾಸ ಇರುತ್ತಿತ್ತು. ನನಗೆ ಬೇಕಾದ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಿದ್ದೆ”). ನೆನಪಿಡಿ: ಈ ಸಂದರ್ಭದಲ್ಲಿ ತಾಯ್ತಂದೆಯರಿಂದ ನಿಮಗಾದ ಅನ್ಯಾಯವನ್ನು ಹಂಚಿಕೊಳ್ಳಲು ಹಿಂತೆಗೆಯಬೇಡಿ. ಯಾಕೆ? ತಾಯ್ತಂದೆಯರೂ ತಪ್ಪು ಮಾಡಿರುತ್ತಾರೆ!

ಸಂದೇಹ: ಭಾವನೆಗಳು ಬರದಿದ್ದರೆ, ಅಥವಾ ಭಾವನೆಗಳು ಉಕ್ಕಿಹರಿದು ಮಾತಾಡಲು ಆಗದಿದ್ದರೆ?

ಸ್ವಲ್ಪಹೊತ್ತು ಮಾತು ನಿಲ್ಲಿಸಿ ದೇಹಪ್ರಜ್ಞೆಗೆ ಗಮನ ಕೊಡಿ. ನಿಮ್ಮ ದೇಹದಲ್ಲಿ ಹುಟ್ಟುವ ಸಂವೇದನೆಗಳನ್ನು ಗಮನಿಸಿ. ಅಲ್ಲಲ್ಲಿ ಬಿಗಿತ, ನೋವು, ಜಡತ್ವ ಇದೆಯೇ ನೋಡಿ. ಭುಜದ ಸೆಳೆತ, ಹೊಟ್ಟೆಯಲ್ಲಿ ಸಂಕಟ, ಎದೆ ತುಂಬಿಬರುವುದು, ಗಂಟಲು ಕಟ್ಟುವುದು ಇತ್ಯಾದಿ ಅನುಭವಕ್ಕೆ ಬರಬಹುದು. ಅವುಗಳನ್ನು ಅರಿವಿಗೆ ತಂದುಕೊಳ್ಳುತ್ತ, ಅವು ನಿಮಗೇನು ತಿಳಿಸಲು ಬಯಸುತ್ತಿವೆ ಎಂದು ಮಾತಿನಲ್ಲಿ ಹೇಳಲು ಪ್ರಯತ್ನಿಸಿ. ಹಾಗೆಯೆ ಈ ಸಂವೇದನೆಗಳು ಮುಂಚೆ ಹುಟ್ಟುತ್ತಿದ್ದುವೆ? ಹೌದಾದರೆ ಯಾವ ಸನ್ನಿವೇಶದಲ್ಲಿ? ಅದರ ಬಗೆಗೂ ಹೇಳಿಕೊಳ್ಳಿ.

ಸಂದೇಹ: ಆಲಿಸುವವರಾಗಿ ವಿಶೇಷವಾಗಿ ಏನಾದರೂ ಮಾಡಬೇಕೆ?

ನೀವು ಮಾಡುವುದಿಷ್ಟೆ: ಸಂಗಾತಿಯನ್ನು ಭಾವಪೂರ್ಣವಾಗಿ ಆಲಿಸಿ. ಕಣ್ಣಲ್ಲಿ ಕಣ್ಣಿಟ್ಟು ಅವರ ಅಂತರಾಳದಲ್ಲಿ ಇಣುಕಿನೋಡಿ. ಅವರ ಕೈಬೆರಳಗಳ ಜೊತೆಗೆ ನಿಮ್ಮ ಕೈಬೆರಳುಗಳು ಹೆಣೆದುಕೊಂಡಿರಲಿ. ನಿನ್ನಲ್ಲಿ, ನಿನ್ನ ನರಳಿಕೆಯಲ್ಲಿ ನಾನೂ ಒಂದಾಗಿದ್ದೇನೆ ಎಂಬ ತಾದಾತ್ಮ್ಯತೆಯ (attunement) ಭಾವ ನಿಮ್ಮ ಮುಖದಲ್ಲಿ ಮೂಡಲಿ. ನೀನು ಒಂಟಿಯಲ್ಲ, ನಿನ್ನೊಡನೆ ನಾನಿದ್ದೇನೆ ಎನ್ನುವ ಭರವಸೆ ಕೊಡಿ. ಹೀಗೆ ಕೇಳಿಸಿಕೊಳ್ಳುವುದರಿಂದಲೇ ಹಳೆಯ ಗಾಯಗಳು ವಾಸಿಯಾಗುತ್ತವೆ! ಎಚ್ಚರಿಕೆ: ಸಂಗಾತಿಯು ತನ್ನ ಬಗೆಗೆ ಅಹಿತಕರ ಸಂಗತಿಯನ್ನು ಕಂಡುಕೊಂಡಾಗ, “ಇದು ನನಗೆ ಮುಂಚೆಯೇ ಗೊತ್ತಿತ್ತು, ಅದರಿಂದ ನನಗೆಷ್ಟು ಹಿಂಸೆಯಾಗುತ್ತಿತ್ತು ಗೊತ್ತೆ?” ಎಂದು ನಿಮ್ಮ ಬಗೆಗೆ ಶುರುಮಾಡಿದರೆ ಆಡುವವರ ಮನಸ್ಥಿತಿ ಕದಡುವ ಸಂಭವವಿದೆ! – ಇಂಥದ್ದನ್ನು ಹೇಳಿಕೊಳ್ಳುವುದು ಆಡುವವರ ಸ್ಥಾನದಿಂದ ಮಾತ್ರ. ಇನ್ನೊಂದು ವಿಷಯ: ಆಡುವಾಗ ಮಡುಗಟ್ಟಿದ ಭಾವನೆಗಳು ಉಕ್ಕೇರಿ ಹರಿಯುವುದರಿಂದ ಮನಸ್ಸು ಬಹಳ ಸೂಕ್ಷ್ಮವಾಗುತ್ತ, ಕಾಯಿಲೆಯ ನಂತರ ಆಗುವಂತೆ ನಿಶ್ಶಕ್ತಿ, ನಿರ್ವಿಣ್ಣತೆ ಆಕ್ರಮಿಸಿರುತ್ತದೆ. ಆಗ ವಿಶ್ರಾಂತಿ ಅಗತ್ಯವಾಗುತ್ತದೆ. ಸಾಧ್ಯವಾದರೆ ನಿದ್ರಿಸುವುದು ಸೂಕ್ತ. ನೊಂದ ಸಂಗಾತಿಗೆ ಏಕಾಂತಕ್ಕೆ ಅವಕಾಶ ಮಾಡಿಕೊಡಿ. ಅವರಿಗೆ ಇಷ್ಟವಾದರೆ ತಬ್ಬಿಕೊಂಡು ಮಲಗಿ, ಅಥವಾ ಅವರನ್ನು ತೊಡೆಯಮೇಲೆ ಮಲಗಿಸಿಕೊಂಡು ಹಿತವಾಗಿ ಮೈ ಸವರುತ್ತಿರಿ.

ಸಂದೇಹ: ಆಡುವ-ಆಲಿಸುವ ವಿಧಾನವು ಸಂವಹನಕ್ಕಿಂತ ಪರಿಣಾಮಕಾರಿಯೆ?

ಖಂಡಿತವಾಗಿಯೂ. ಇದು ಹೇಗೆಂದು ವಿವರಿಸುತ್ತೇನೆ. ನಮ್ಮ ಮೆದುಳಿನ ನಡುವೆ ಅಮಿಗ್ಡ್ಯಾಲ ಎಂಬ ಭಾಗವಿದೆ. ಸಂದರ್ಭಕ್ಕೆ ತಕ್ಕಂತೆ ಎರಗು ಇಲ್ಲವೆ ತೊಲಗು (flight/fight) ಎಂಬ ಪ್ರತಿಕ್ರಿಯೆ ಹುಟ್ಟುವುದು ಇಲ್ಲಿಂದಲೇ – ನಂತರ ನಮ್ಮನ್ನು ಸಮರ್ಥಿಸಿಕೊಳ್ಳಲು ಮೆದುಳಿನ ತರ್ಕಬುದ್ದಿಯನ್ನು ಬಳಸುತ್ತೇವೆ. ಆದರೆ ಆಡುವ-ಆಲಿಸುವ ವಿಧಾನದಲ್ಲಿ ಅಮಿಗ್ಡ್ಯಾಲವನ್ನು ಕೈಬಿಟ್ಟು ನೇರವಾಗಿ ಮೆದುಳಿನಿಂದ ಕೆಲಸ ತೆಗೆದುಕೊಳ್ಳುತ್ತೇವೆ. ಹಾಗಾಗಿ ನಮ್ಮ ವರ್ತನೆಯಾದ “ಸಂದಭಕ್ಕೆ ತಕ್ಕಂತೆ ಪ್ರತಿಕ್ರಿಯೆ”ಯ ಬದಲು, “ಸಂದರ್ಭವೇನೇ ಇರಲಿ, ನಾನು ಹೇಗಿರಬೇಕು?” ಎಂದು ಮೌಲ್ಯಾಧಾರಿತ ಆತ್ಮಾನ್ವೇಷಣೆ ನಡೆಸುತ್ತೇವೆ. ಸಂವಹನದಲ್ಲಿ ನಡೆಯುವ “ನನ್ನನ್ನು ಅರ್ಥ ಮಾಡಿಕೋ” ಎಂದು ಸಂಗಾತಿಯ ಮೇಲೆ ಹೊಣೆ ಹೊರಿಸುವುದರ ಬದಲು, “ನಿನ್ನ ಸಮಕ್ಷಮದಲ್ಲಿ ನನ್ನನ್ನೇ ನಾನು ಅರ್ಥ ಮಾಡಿಕೊಳ್ಳುತ್ತೇನೆ” ಎನ್ನುವ ಪ್ರವೃತ್ತಿಗೆ ಇದು ಹುಟ್ಟುಹಾಕುತ್ತದೆ. ಹೀಗೆ ಅನ್ಯೋನ್ಯತೆಯ ಹುಡುಕಾಟವು ತನ್ನಿಂದಲೇ ಹಾಗೂ ತನ್ನೊಳಗಿನಿಂದಲೇ ಶುರುವಾಗುತ್ತದೆ. ಆತ್ಮದರ್ಶನವಾಗುತ್ತ ತನ್ನತನ ಬೆಳೆಯುತ್ತದೆ. ಜೊತೆಜೊತೆಗೆ ಅನ್ಯೋನ್ಯತೆಯೂ ಬೆಳೆಯುತ್ತದೆ. ಇನ್ನೊಂದು ರೀತಿ ಹೇಳಬೇಕೆಂದರೆ, ಆತ್ಮವಿಕಾಸಕ್ಕೆ ಅವಿರತ ಪ್ರಯತ್ನವೇ ಅನ್ಯೋನ್ಯತೆಯ ಮೂಲ!

ಆಡುವ-ಆಲಿಸುವ ವಿಧಾನವು ಪ್ರತಿ ದಾಂಪತ್ಯಕ್ಕೂ ಅನಿವಾರ್ಯ ಅಗತ್ಯ ಎನ್ನುವುದಕ್ಕೆ ಹಿನ್ನೆಲೆಯಿದೆ. ನಾವೆಲ್ಲರೂ ಮೂಲ ಕುಟುಂಬದಲ್ಲಿ ಅರ್ಧಮರ್ಧ ಆಗಿರುವ ಕೆಲವು ಅನುಭವಗಳನ್ನೂ, ಪೂರೈಸದ  ಆಸೆ-ಅನಿಸಿಕೆಗಳನ್ನು ದಾಂಪತ್ಯದಲ್ಲಿ ತಂದು ಪೂರ್ತಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಅಂದರೆ, ಮೂಲ ಕುಟುಂಬದಲ್ಲಿ ನಡೆಯುತ್ತಿರುವುದನ್ನು ದಾಂಪತ್ಯದಲ್ಲಿ ಮುಂದುವರಿಸುತ್ತೇವೆ. ಹಾಗಾಗಿ ಹಂಚಿಕೊಳ್ಳುವುದು ಎಂದರೆ ಸಾಮಾನ್ಯವಾಗಿ ನಂಬಿರುವಂತೆ “ನಿನ್ನಿಂದ ನನಗೆ ತೊಂದರೆ ಆಗುತ್ತದೆ” ಎಂದು ಸೌಮ್ಯವಾಗಿ ಹೇಳುವುದಲ್ಲ; “ಈ ತೊಂದರೆಗಳು ನನ್ನನ್ನು ಮೂಲ ಕುಟುಂಬಕ್ಕೆ ಕರೆದೊಯ್ಯುತ್ತಿವೆ, ಹಾಗೂ ನನ್ನ ಕತೆ ಹೀಗಿದೆ” ಎನ್ನುವ ತಾತ್ಪರ್ಯ. ಇದರರ್ಥ ಏನು? ಒಂದು ಸಂಬಂಧವು ನಮ್ಮನ್ನು ಗಾಸಿಗೊಳಿಸಿದರೆ ಇನ್ನೊಂದು ಸಂಬಂಧವು ಅದನ್ನು ವಾಸಿಮಾಡಬಲ್ಲುದು!

ಈ ಸಂದರ್ಭದಲ್ಲಿ ಹಾರ್ವಿಲ್ ಹೆಂಡ್ರಿಕ್ಸ್‌ನ (Harville Hendrix) ಹೇಳಿಕೆಯೊಂದು ನೆನಪಾಗುತ್ತಿದೆ: “(ದಾಂಪತ್ಯದ) ಬದುಕು ನಮ್ಮನ್ನು ಬೆಳೆಸಲು ನೋಡುತ್ತದೆ. ಆದರೆ ಬೆಳೆಯುವುದು ಹಿತಕರ ಎಂದಿಲ್ಲ. ದಾಂಪತ್ಯ ಎಂದರೆ ಇಬ್ಬರೂ ಕೂಡಿರುವ ಸ್ಥಿರವಾದ ಸ್ಥಾನವಲ್ಲ. ಇದೊಂದು ಮನೋಭಾವುಕ ಹಾಗೂ ಆಧ್ಯಾತ್ಮಿಕ ಜೋಡಿ ಪಯಣ. ಈ ಪಯಣವು ಶಾರೀರಿಕ ಆಕರ್ಷಣೆಯ ರೋಚಕ ಅನುಭವದಿಂದ ಶುರುವಾಗಿ ಆತ್ಮಾನ್ವೇಷಣೆಯ ದುರ್ಗಮ ದಾರಿಯಲ್ಲಿ ಅನ್ಯೋನ್ಯತೆಯನ್ನು ಅರಸುತ್ತ ಸಾಗುತ್ತದೆ. ಅಲ್ಲಿಂದ ಬದುಕಿನ ಕೊನೆಯ ತನಕ ಆನಂದ-ತೃಪ್ತಿಗಳನ್ನು ಕೊಡುತ್ತದೆ.”

ಈ ವಿಷಯಕ್ಕೆ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಗಂಡಸರಿಗೆ ತಾನು ಗಂಡಸು, ಸಂಗಾತಿ ಹೆಣ್ಣು ಎನ್ನುವುದನ್ನು ಮರೆತರೆ ಮಾತ್ರ ಮುಕ್ತ ಸಲ್ಲಾಪ ಸಾಧ್ಯವಿದೆ!

230: ಅನ್ಯೋನ್ಯತೆಗೆ ಹುಡುಕಾಟ – 9  

ಮುಕ್ತಮನದಿಂದ ಹಂಚಿಕೊಳ್ಳುವುದು ಹಾಗೂ ಮುಕ್ತಮನದಿಂದ  ಆಲಿಸುವುದು ಹೇಗೆ ಎಂದು ಕಲಿತುಕೊಂಡಿದ್ದೇವೆ. ಈ ಆಡುವ-ಆಲಿಸುವ ಪರಿಕ್ರಮವು ಪ್ರತ್ಯಕ್ಷವಾಗಿ ಹೇಗೆ ನಡೆಯುತ್ತದೆ ಎಂಬುದನ್ನು ಒಂದು ದೃಷ್ಟಾಂತದಿಂದ ಕಂಡುಕೊಳ್ಳೋಣ.

ಮೋಹನ-ಮೋನಿಕಾ (ಹೆಸರು ಬದಲಿಸಿದೆ) ಸಹೋದ್ಯೋಗಿಗಳು. ಪ್ರೀತಿಸಿ ಮದುವೆಯಾಗಿ ಸಾಕಷ್ಟು ವರ್ಷ ಕಳೆದರೂ ಲೈಂಗಿಕ ಸಾಮರಸ್ಯ ಇಲ್ಲವೆಂದು ಕಾದಾಡುತ್ತ ನನ್ನಲ್ಲಿ ಬಂದಿದ್ದಾರೆ. ಹೆಚ್ಚಿನ ದಾಂಪತ್ಯಗಳಲ್ಲಿ ನಡೆಯುವಂತೆ ಪರಸ್ಪರರನ್ನು ಅಪನಂಬಿಕೆಯಿಂದ ಅವಲಂಬಿಸಿದ್ದಾರೆ. ಹಾಗಾಗಿ ಅನ್ಯೋನ್ಯತೆ ಮೂಡುವುದು ಅಸಾಧ್ಯವಾಗಿದೆ. (ದಂಪತಿಗಳಲ್ಲಿ ಅನ್ಯೋನ್ಯತೆಯ ಕೊರತೆಯಿಂದ ಲೈಂಗಿಕ ಸಮಸ್ಯೆಗಳು ಉಂಟಾಗಿದ್ದರೆ ಬೇರೆ ಕ್ರಮವನ್ನು ಅನುಸರಿಸುತ್ತೇನೆ. ಐದು ದಿನಗಳ ಕಾಲ ನಡೆಯುವ ಈ ಕ್ರಮದಲ್ಲಿ ಪ್ರತಿದಿನವೂ 2-6 ತಾಸುಗಳ ದಾಂಪತ್ಯ ಚಿಕಿತ್ಸೆ ನಡೆಯುತ್ತದೆ.) ಚಿಕಿತ್ಸೆಯಲ್ಲಿ ನಡೆದ ಮುಕ್ತಮನದ ಸಲ್ಲಾಪದ ಸಾರಾಂಶವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಒಂದು ಸಲ ಮೋನಿಕಾಳ ಮೊಬೈಲ್ ಕೈಜಾರಿ ಕೆಳಗೆ ಬಿತ್ತು. ಆಗ ಮೋಹನ್ “ಅಬ್ಬಾ, ಅಂತೂ ಅದು ಐಫೋನ್ ಆಗಿಲ್ಲವಲ್ಲ?” ಎಂದು ಉದ್ಗರಿಸಿದ. ಅಷ್ಟಕ್ಕೆ ಬಿಡದೆ, “ನಿನಗೆ ಐಫೋನ್ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ!” ಎಂದು ವ್ಯಂಗ್ಯವಾಡಿದ. ಮೋನಿಕಾ ನೊಂದು ಕೋಪದಿಂದ, “ನೋಡ್ತಾ ಇರು, ನನ್ನ ಸಂಪಾದನೆಯಿಂದ ಬೇಗ ಐಫೋನ್ ಖರೀದಿಸಿ ತೋರಿಸುತ್ತೇನೆ!” ಎಂದಳು. ಆಗ ಮೋಹನ ತಮಾಷೆಗೆ ಹಾಗಂದಿದ್ದು ಎಂದು ಜಾರಿಕೊಂಡ. ಈ ವಿಷಯವನ್ನೇ ಮುಕ್ತಮನದ ಸಲ್ಲಾಪಕ್ಕೆ ಆರಿಸಿಕೊಳ್ಳುತ್ತ, ಅದರ ಹಿನ್ನೆಲೆಯಲ್ಲಿ ಇರುವ ವಿಚಾರ-ಭಾವನೆ-ಅನಿಸಿಕೆಗಳನ್ನು ಹಂಚಿಕೊಳ್ಳಲು ಸೂಚಿಸಿದೆ. ಮೋಹನ “ಆಡುವವ”ನಾಗಿ, ತಮಾಷೆಗೆ ಹೇಳಿದೆ ಎಂದು ಶುರುಮಾಡಿದ. “ನಿನಗೆ ತಮಾಷೆ ಅನ್ನಿಸಲಿಲ್ಲ ಎಂದು ಗೊತ್ತಾಯಿತು… ಅಸಮಾಧಾನ ಯಾಕಾಯಿತು ಎಂದು ಹೊಳೆಯುತ್ತಿಲ್ಲ…” ಎಂದ. ಐಫೋನ್ ಹೊಂದುವುದಕ್ಕೆ ಆಕೆಯ ಅನರ್ಹತೆಯ ಬಗೆಗೆ ಯೋಚಿಸಲು ಸೂಚಿಸಿದಾಗ ತನ್ನೊಳಗೆ ಅನಿಸಿಕೆಗಳನ್ನು ಹುಟ್ಟುತ್ತಿರುವಂತೆ ಹೊರಹಾಕುತ್ತ ಹೋದ. ಆಗ ಬಯಲಿಗೆ ಬಂದ ಸಂಗತಿಗಳು ವಿಚಿತ್ರವೂ ವಿಸ್ಮಯಕರವೂ ಆಗಿದ್ದುವು!

ಮೋನಿಕಾ ತಾನು ಐಫೋನ್ ಹೊಂದಿದರೆ ಅವನಿಗೇನು ಅನ್ನಿಸುತ್ತದೆ ಎಂದು ಕುತೂಹಲದಿಂದ ಕೇಳಿದಾಗ “ನನಗೇನೂ ಬೇಜಾರು ಆಗುವುದಿಲ್ಲ” ಎಂದ. ಖುಷಿಯಾಗುತ್ತದೆ ಎನ್ನುವುದರ ಬದಲು ಬೇಸರವಿಲ್ಲ ಎನ್ನುವುದರ ಹಿಂದಿನ ನೇತ್ಯಾತ್ಮಕ ಭಾವವನ್ನು ಕೆದಕಿದೆ. ಸ್ವತಃ ತನಗೇ ಬೆಲೆಬಾಳುವ ವಸ್ತುಗಳನ್ನು ಬಳಸುವ ಯೋಗ್ಯತೆ ಇಲ್ಲವೆಂದೂ, ತನ್ನ ಅನಿಸಿಕೆಯನ್ನು ಮೋನಿಕಾಳ ಮೇಲೆ ಪ್ರಕ್ಷೇಪಿಸಿದ್ದಾನೆ (projection) ಎಂದೂ ಹೇಳಿದ. ಅಲ್ಲಿಂದ ತನ್ನ ಬಾಲ್ಯಕ್ಕೆ ಜಾರಿದ. ಬಾಲಕ ಮೋಹನ ಏನೇ ಬೆಲೆಬಾಳುವ ವಸ್ತುವನ್ನು ಬಯಸಿ ಕೇಳಲಿ, ಹೆತ್ತವರು, “ನೀನು ಗಂಡಸು. ಮೊದಲು ದುಡಿದು ಸಂಪಾದಿಸಲು ಕಲಿ. ನಂತರ ಇಷ್ಟವಾದುದನ್ನು ಕೊಂಡುಕೋ; ತಂಗಿಗೂ ಕೊಡಿಸು!” ಬಾಯಿಬಡಿದು ಕೂಡಿಸುತ್ತಿದ್ದರು. ಆದರೆ ತಂಗಿ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಅವರಲ್ಲಿ ಪುರುಷ ಪ್ರಧಾನ ಧೋರಣೆ ಎದ್ದುಕಾಣುತ್ತಿತ್ತು. ಪರಿಣಾಮ? ಅವನ ತಲೆಯಲ್ಲಿ ತಾನು ಗಂಡು, ಹೆಂಡತಿ ಹೆಣ್ಣಾಗಿ ತನ್ನನ್ನು ಅವಲಂಬಿಸಿದ್ದಾಳೆ (ಅವನಷ್ಟೇ ಸಂಪಾದಿಸುತ್ತಿದ್ದರೂ!). ಆಕೆಗೆ ಐಫೋನ್ ಕೊಡಿಸಬೇಕೆಂಬ ವಿಚಾರ ಒಂದು ಕ್ಷಣ ಅವನಿಗೆ ಬಂತು. ಕೊಡಿಸುವುದು ತನ್ನ ಕರ್ತವ್ಯ, ಹಾಗಾಗಿ ಕೊಡಿಸುವ ಹೊಣೆ ಹೊತ್ತವನಿಗೆ ಅವಹೇಳನ ಮಾಡುವ ಹಕ್ಕೂ ಬಂತು!

ಇನ್ನು, ಐಫೋನ್ ಕೊಂಡೇ ತೋರಿಸುತ್ತೇನೆ ಎನ್ನುವ ಮೋನಿಕಾಳ ಛಲದ ಹಿನ್ನೆಲೆಯನ್ನು ಕೆದಕಿದೆ. ಆಕೆಯ ಮೂಲಕುಟುಂಬದಲ್ಲೂ ಪುರುಷ ಪ್ರಧಾನತೆಯ ಕರಿನೆರಳಿತ್ತು. ಆಕೆಯ ಪ್ರತಿಭಾವಂತ ಅಣ್ಣನ ಸಾಧನೆಗಳನ್ನು ಹೆತ್ತವರು ಹಾಡಿಹೊಗಳುತ್ತಿದ್ದರು. ಅದೇ ಸಾಧನೆಯನ್ನು ಇವಳು ಮಾಡಿದಾಗ “ಅದೇನು ಮಹಾ, ನಿನ್ನಣ್ಣ ಮಾಡಿದ್ದನ್ನೇ ನೀನು ಮಾಡಿದ್ದೀಯಾ” ಎನ್ನುತ್ತಿದ್ದರು. ಒಮ್ಮೆ ಆಕೆ ಛಲತೊಟ್ಟು, ಅಣ್ಣ ಪಾಸಾಗದಿರುವ ಪರೀಕ್ಷೆಯಲ್ಲಿ ಉತ್ತೀರ್ಣಳಾದಾಗ ಅಪ್ಪ-ಅಮ್ಮ ಸಂಭ್ರಮಾಚರಣೆಗೆ ಹೊರಟವರು, ಮಗನಿಗೆ ನೋವಾಗುತ್ತದೆ ಎಂದು ಕೈಬಿಟ್ಟಿದ್ದು ಈಕೆಗೆ ಆಘಾತ ಉಂಟುಮಾಡಿತ್ತು. “ನೀನು ಹುಡುಗಿ, ಹಾಗಾಗಿ ನಿನ್ನ ಸಾಧನೆಗೆ ಬೆಲೆಯಿಲ್ಲ!” ಎನ್ನುವ ಕುಟುಂಬಕ್ಕೆ ತನ್ನ ಸಂತೋಷವನ್ನು ಬಲಿಕೊಟ್ಟವಳು ತಾನು ಹೆಣ್ಣು, ಅಥವಾ ಕೀಳೆಂದು ತೋರಿಸಿದರೆ ಸಿಡಿದೆದ್ದು ಪ್ರತಿಭಟಿಸುತ್ತಿದ್ದಳು. 

ಇತ್ತ ಮೋಹನ ತನ್ನೊಳಗೆ ಹೊಕ್ಕು ಪುಂಖಾನುಪುಂಖ ಆತ್ಮವಿಶ್ಲೇಷಣೆ ಮಾಡುತ್ತ, ಬಂದದ್ದನ್ನು ಹೊರಗೆಡುಹುತ್ತ ಹೋದ. ತಾನು ಸ್ತ್ರೀಯರನ್ನು ಸಮಾನಭಾವದಿಂದ ನಡೆಸಿಕೊಳ್ಳುತ್ತಿದ್ದೇನೆ ಎಂದು ಭ್ರಮಿಸಿದ್ದ. ಆದರೆ ವಾಸ್ತವ ಪೂರ್ತಿ ವಿರುದ್ಧವಾಗಿದ್ದುದು ಅರಿವಾಗಿ ಅಪ್ರತಿಭನಾದ. ಹೀಗಿರುವುದು ಅವನಿಗೆ ಏನೇನೂ ಇಷ್ಟವಾಗಲಿಲ್ಲ. ಹೆಂಗಸರ ಧ್ವನಿಗೆ ಕಿವುಡುತನವಿರುವ ಕುಟುಂಬದಿಂದ ಬಂದವನಿಗೆ ಹೆಂಡತಿ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದು ಹಿಡಿಸುತ್ತಿರಲಿಲ್ಲ. ಅದಕ್ಕೇ “ನನಗೇನೂ ಬೇಸರವಿಲ್ಲ” ಎಂದಿದ್ದು. ಅಲ್ಲದೆ, ಹೆಣ್ಣಿನ ಪ್ರಭಾವಕ್ಕೆ ಒಳಗಾಗುವುದು ಅಪಾಯಕರ; ಹೆಂಗಸರು ಅನ್ಯೋನ್ಯತೆಯ ನಂಟನ್ನು ಬಯಸಕೂಡದು, ಅದಕ್ಕೆ ಅವರು ಅರ್ಹರಲ್ಲ ಎನ್ನುವ ಅಭಿಮತ ಅವನ ಒಳಮನದಲ್ಲಿ ಮನೆಮಾಡಿತ್ತು. ಆದುದರಿಂದಲೇ ಮೋನಿಕಾ ಹಾರ್ದಿಕತೆ ಬಯಸಿ ಬಂದಾಗ ಆಕೆಗೆ ಜೋಡಿಸಿಕೊಳ್ಳಬೇಕೇ ಬೇಡವೆ ಎಂದು ಮೀನಮೇಷ ಮಾಡುತ್ತಿದ್ದುದು. ಒಂದುವೇಳೆ ಜೋಡಿಸಿಕೊಂಡರೂ ತನ್ನ ಪಾರಮ್ಯವನ್ನು ಬಿಡುತ್ತಿರಲಿಲ್ಲ (ಪುರುಷರ ಅಹಂಭಾವ ಎಂದರೆ ಇದೇ!). ಹಾಗಾಗಿ, ಮೋನಿಕಾ ಬಯಸಿದ್ದನ್ನು ಮಂಜೂರು ಮಾಡುವುದೋ ಬೇಡವೊ ಎಂದು ನಿರ್ಧರಿಸುವುದನ್ನು ಮೋಹನ ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತಿದ್ದ. ಹಾಗೆಯೇ, ಆಕೆ ಪ್ರೀತಿಯನ್ನು ಬಯಸಿದರೆ ಕೊಡಬೇಕೋ ಬೇಡವೊ ಎನ್ನುವುದನ್ನೂ ಅವನ ಪುರುಷ ಪ್ರಧಾನ ಮನವೇ ನಿರ್ಧರಿಸುತ್ತಿತ್ತು. ಒಂದುವೇಳೆ ಕೊಟ್ಟರೂ ಆಕೆ ತನ್ನನ್ನು ಎಷ್ಟು ಪ್ರಸನ್ನಗೊಳಿಸಿದಳು ಎನ್ನುವುದನ್ನು ಅನುಸರಿಸಿ, ಪ್ರೀತಿಯ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡುತ್ತ ಪ್ರಾಬಲ್ಯ ತೋರುತ್ತಿದ್ದ. ಪ್ರೀತಿಯಿಲ್ಲದೆ ಕೇವಲ ಕರ್ತವ್ಯದ ಹೊಣೆ ಹೊತ್ತರೆ ಮನಬಿಚ್ಚಿ ವ್ಯಕ್ತಪಡಿಸುವುದು ಅಸಾಧ್ಯವಾಗುತ್ತದೆ. ಹಾಗಾಗಿ ಅನ್ಯೋನ್ಯತೆ  ಬೆಳೆಸಿಕೊಳ್ಳಲು ಆಗಿಲ್ಲ ಎಂಬುದು ಹೊರಬಂತು.

ಇಲ್ಲಿ ಮೋಹನ ಕಂಡುಕೊಂಡ ಸತ್ಯಗಳು ಏನೇನು?

“ಪುರುಷ ಪ್ರಧಾನತೆಯು ವ್ಯಕ್ತಿಯಲ್ಲಿರುವ ದೌರ್ಬಲ್ಯಗಳನ್ನು ಅಲ್ಲಗಳೆದು ಬದುಕಲು ಹಚ್ಚುತ್ತದೆ. ಹಾಗಾಗಿ ಆ ಭಾಗಗಳಿಂದ ಕಳಚಿಕೊಂಡು ಬದುಕಲು ಕಲಿತಿದ್ದೆ. ಈ ಹುಸಿನಂಬಿಕೆಗಳಿಂದ ಹೊರಬಂದ ನಂತರವೇ ದಾಂಪತ್ಯದಲ್ಲಿ ಅನ್ಯೋನ್ಯತೆ ಹುಟ್ಟಲು ಅವಕಾಶ ಆಗುತ್ತಿದೆ… ಪುರುಷ ಪ್ರಧಾನತೆಯ ಪ್ರಕಾರ ಪ್ರೀತಿಯೊಂದು ದೌರ್ಬಲ್ಯ; ಪ್ರೀತಿಯನ್ನು ಬಯಸುವುದು ಹಾಗೂ ಪ್ರೀತಿಯನ್ನು ಕೊಡುವುದು ಎರಡೂ ದೌರ್ಬಲ್ಯದ ಲಕ್ಷಣಗಳು. ಪುರುಷ ಪ್ರಧಾನತೆಯು ಪ್ರೀತಿಗೆ ಅನರ್ಹತೆಯ ಅನಿಸಿಕೆಯನ್ನು ಕೊಡುತ್ತದೆ. ಗಂಡಸಾದರೆ ಪ್ರೀತಿಯನ್ನು ಬಿಟ್ಟುಕೊಟ್ಟು ಜವಾಬ್ದಾರಿಯನ್ನು ಹೊರಬೇಕು. ಹಾಗಾಗಿ ಪುರುಷ ಪ್ರಧಾನತೆಯನ್ನು ಬಿಟ್ಟುಕೊಡಬೇಕಾದರೆ ಮೊದಲು ತನ್ನನ್ನು ತಾನು ಪ್ರೀತಿಸುವುದನ್ನೂ, ಸಂಗಾತಿಯಿಂದ ತಾನು ಬೇರೆಯಾಗಿದ್ದೇನೆ ಎನ್ನುವ ವ್ಯಕ್ತಿ ಪ್ರತ್ಯೇಕತೆಯನ್ನೂ ಕಲಿಯಬೇಕು… ಮನಸ್ಸು ಕೋಮಲಗೊಂಡರೆ ಮಾತ್ರ ಪ್ರೀತಿ ಕಾಲಿಡುತ್ತದೆ. ಅದಕ್ಕಾಗಿ ಮನಬೆತ್ತಲೆ ಆಗಬೇಕು…” ಇತ್ಯಾದಿ.

ಆಡುವ-ಆಲಿಸುವ ಕ್ರಮದ ಅನುಭವ ಹೇಗಿತ್ತು? ಮೋಹನನೇ ಹೇಳುವಂತೆ, “ಜಡಗಟ್ಟಿದ ಮನಸ್ಸನ್ನು ಹೋಳುಹೋಳಾಗಿ ಮಾಡಿ ಬೇಯಿಸಿ ಹದಕ್ಕೆ ತಂದಹಾಗಿತ್ತು!”

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.