(ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸುಖೀ ದಾಂಪತ್ಯದ ಅಂಕಣಗಳನ್ನು ಇಲ್ಲಿ ಒಟ್ಟುಗೂಡಿಸಿ ಕೊಡಲಾಗಿದೆ.)
ಸಾಕಷ್ಟು ದಂಪತಿಗಳು ಮಗುವನ್ನು ಹುಟ್ಟಿಸುವುದರ ಮೂಲಕ ತಮ್ಮನ್ನು (ತಪ್ಪಾಗಿ) ಗುರುತಿಸಿಕೊಳ್ಳುತ್ತಾರೆ.
248: ಮಗು ಬೇಕೆ? ಏಕೆ? – 1
ಈ ಸಲದ ವಿಷಯ ನಿಮಗೆ ವಿಚಿತ್ರ ಅನ್ನಿಸುತ್ತಿರಬಹುದು. ಹೌದು, ನನಗೂ ಹಾಗೆಯೇ ಅನ್ನಿಸುತ್ತದೆ. ಅದಕ್ಕೆಂದೇ ಇದನ್ನು ಎತ್ತಿಕೊಂಡಿದ್ದೇನೆ. ಶೀರ್ಷಿಕೆಯಲ್ಲಿ, “ಹೇಗೆ” ಎನ್ನುವುದರ ಬದಲು “ಏಕೆ” ಎಂದು ಕೇಳಲು ಹೊರಟಿದ್ದೇನಲ್ಲ, ಅದರ ಬಗೆಗೆ ಮತ್ತಿನ್ನೇನೋ ಯೋಚನೆ ನಿಮ್ಮ ತಲೆಯಲ್ಲಿ ಬರುವುದಕ್ಕಿಂತ ಮುಂಚೆ ಕೆಲವು ದೃಷ್ಟಾಂತಗಳನ್ನು ನೋಡಿ:
ದೃಷ್ಟಾಂತ 1: ಈ ದಂಪತಿಗೆ ಮದುವೆಯಾಗಿ ಎರಡು ವರ್ಷ ಕಳೆದರೂ ಸರಿಯಾಗಿ ಸಂಭೋಗ ಸಾಧ್ಯವಾಗುತ್ತಿಲ್ಲ (ಮತ್ತದೇ ಗೋಳು ಎನ್ನುತ್ತೀರೇನೋ?). ಅದಕ್ಕಾಗಿ ಅನೇಕ ಸಲ ಪ್ರಯತ್ನಪಟ್ಟು ಸೋತು ಸುಣ್ಣವಾಗಿದ್ದಾರೆ. ಈಗ ಸಂಭೋಗದ ಕೈಬಿಟ್ಟು ಸಹಜವಲ್ಲದ ರೀತಿಯಲ್ಲಿ ಮಗುವನ್ನು ಪಡೆಯಲು ಗರ್ಭಧಾರಣೆಯ ಕೇಂದ್ರಕ್ಕೆ ಹೋಗಿದ್ದಾರೆ. ಗರ್ಭ’ಧಾರಣೆ’ಯನ್ನು ಕೇಳಿ ಅಷ್ಟು ಹಣ ಕೈಲಾಗದೆಂದು ನನ್ನಲ್ಲಿ ಬಂದಿದ್ದಾರೆ. ಅವರ ಪ್ರಶ್ನೆಯಿದು: “ಮೊದಲ ಸಂಭೋಗದಲ್ಲೇ ಗರ್ಭ ಕಟ್ಟುವ ಅವಕಾಶ ಆಗಬೇಕೆಂದರೆ ನಾವೇನು ಮಾಡಬೇಕು?” ಇಬ್ಬರೂ ತಾಳ್ಮೆಗೆಟ್ಟಿದ್ದು ಎದ್ದು ಕಾಣುತ್ತಿದೆ.
ದೃ. 2: ಈ ದಂಪತಿಯೂ ಎರಡು ವರ್ಷಗಳಿಂದ ಕಾಮಕೂಟ ನಡೆಸುತ್ತಿದ್ದು, ಗರ್ಭ ಕಟ್ಟುತ್ತಿಲ್ಲ. ಹೀಗಾಗಿ ಬರಬರುತ್ತ ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೆಂಡತಿಯ ಸ್ತ್ರೀವೈದ್ಯರು ಮಾತ್ರೆ ಕೊಟ್ಟು, ಇಂತಿಂಥ ದಿನ ಸಂಭೋಗಿಸಲು ಹೇಳಿದ್ದಾರೆ. ಪರಿಣಾಮ? ಸಹಜ ಸಮಾಗಮವು “ನಿರ್ದೇಶಿತ” ಸಂಭೋಗದಿಂದ ಪದಚ್ಯುತಗೊಂಡು ಆಸಕ್ತಿ ನಿಂತೇಹೋಗಿದೆ! ವೈದ್ಯರಿಗೆ ಕೇಳಲಾಗಿ ಇನ್ನಷ್ಟು ಹೆಚ್ಚು ಸಮಯ, ಮನಸ್ಸು ಕೊಡಲು ಉಪದೇಶ ಬಂದಿದೆ. ನನ್ನ ಪ್ರಶ್ನೆ ಏನೆಂದರೆ, ಸಹಜ ಸಮಾಗಮದಲ್ಲೇ ಆಸಕ್ತಿ ಇಲ್ಲದಿರುವವರಿಗೆ ನಿರ್ದೇಶಿತ ಸಂಭೋಗದಲ್ಲಿ ಆಸಕ್ತಿ ಹೇಗೆ ಬಂದೀತು?
ದೃ. 3: ಮದುವೆಯಾಗಿ ಎರಡು ತಿಂಗಳೂ ಆಗದ ಇವರು ದಿನಾಲೂ ಕೂಟ ನಡೆಸುತ್ತಿದ್ದಾರೆ. ಇಪ್ಪತ್ತು ದಿನಗಳ ನಂತರ ಗಂಡ ರಾತ್ರಿ ತಡಮಾಡಿ ಮನೆಸೇರಿ ಇವೊತ್ತು ಕೂಟ ಬೇಡವೆಂದ. ಮುಂದಿನ ವಾರ ಇನ್ನೊಂದು ಸಲ ಬೇಡವೆಂದಾಗ ಹೆಂಡತಿ ಏನೆಂದಳು? “ನೀವು ಹೀಗೆ ಸೆಕ್ಸ್ ಮಿಸ್ ಮಾಡುತ್ತಿದ್ದರೆ ನಮಗೆ ಮಗು ಆಗುವುದು ಯಾವಾಗ?” ಅವನ, “ನಾಳೆ ನೋಡೋಣ” ಎನ್ನುವ ಉತ್ತರದಲ್ಲಿ ನಾಳೆಯೂ ಬೇಡ ಎನ್ನುವ ಇಂಗಿತವನ್ನು ಕಂಡು ಆಕೆಗೆ ರೇಗಿದೆ. ಪರಿಣಾಮವಾಗಿ ಗಂಡ ಸಂಭೋಗದಲ್ಲಷ್ಟೇ ಅಲ್ಲ, ಸಂಬಂಧದಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ. ಇದು ಎರಡೂ ಕಡೆಯವರಿಗೆ ತಿಳಿದು ಅವರು ಹಣಾಹಣಿ ನಡೆಸಿದ್ದಾರೆ.
ದೃ. 4: ಒಂದೂವರೆ ವರ್ಷವಾದರೂ ಈ ಜೋಡಿಯಲ್ಲಿ ಸಾಮರಸ್ಯದ ಎಳೆ ಹುಡುಕಿದರೂ ಕಾಣುವುದಿಲ್ಲ. ಯಾಕೆ? ಗಂಡ ವಿಕ್ಷಿಪ್ತ ಸ್ವಭಾವದವನು. ಹೆಂಡತಿಯ ಆಸ್ತಿ ತನ್ನ ಹೆಸರಿಗೆ ಆದಮೇಲೆಯೇ ಮೊದಲ ಸಂಭೋಗವಂತೆ. ಒಂದು ಸಲ ಸೇರಿ ಒಂದು ಮಗುವಾದರೂ ಸಾಕು, ಮತ್ತಿನ್ನೇನೂ ಬೇಡ ಎಂದು ಹೆಂಡತಿಯ ಆಸೆ. ಅಂದಹಾಗೆ ಹೆಂಡತಿ ಸ್ನಾತಕೋತ್ತರ ಪದವೀಧರೆಯಾಗಿ ಉದ್ಯೋಗದಲ್ಲಿದ್ದಾಳೆ. ಗಂಡ ಪಿಯುಸಿ ಓದಿ ಸಾಧಾರಣ ಸರಕಾರಿ ಕೆಲಸದಲ್ಲಿ ಇದ್ದಾನೆ. ಆಕೆ ಗೋಗರೆಯುವಾಗ ಪಶುಗರ್ಭಧಾರಣೆಯ ಕೇಂದ್ರದಲ್ಲಿ ಚೌಕಟ್ಟಿನಲ್ಲಿ ವೀರ್ಯದಾನಕ್ಕಾಗಿ ಕಾಯುತ್ತಿರುವ ಹಸುವಿನ ನೆನಪಾಗುತ್ತಿದೆ.
ಈ ದೃಷ್ಟಾಂತಗಳನ್ನು ಗಮನಿಸಿದರೆ ಕೆಲವು ಪ್ರಶ್ನೆಗಳೂ ಸಂದೇಹಗಳೂ ತಲೆಯೆತ್ತುತ್ತವೆ.
ಈ ದಂಪತಿಗಳಿಗೆ ಮಗುವಿನ ಬಯಕೆ ಎಲ್ಲಿಂದ ಹುಟ್ಟಿತು?
ಸಂತಾನದ ಬಯಕೆ ಮಾನವಪ್ರಾಣಿಗೆ ಸಹಜವಲ್ಲವೆ ಎಂದುಕೊಂಡರೆ ಖಂಡಿತವಾಗಿಯೂ ಸರಿ. ಆದರೆ ಸಂಭೋಗದ ಆಸೆ ಅದಕ್ಕಿಂತ ಸಹಜವಲ್ಲವೆ? ಸಂಭೋಗ ಮಾಡುವಾಗ ಹಸಿಕಾಮದ ಸೆಳೆತ ಇರುತ್ತದೆಯೇ ವಿನಾ ಪರಿಣಾಮಗಳ ಪರಿವೆ ಇರುವುದಿಲ್ಲ (ಒಂದುವೇಳೆ ಹಾಗಿದ್ದರೆ ಹೆಚ್ಚಿನ ಅನಪೇಕ್ಷಿತ ಗರ್ಭಗಳನ್ನು ತಡೆಯಬಹುದಿತ್ತು). ಅಂಥದ್ದರಲ್ಲಿ ಸುಖಾನುಭವ ಬಿಟ್ಟು ಮುಂದಿನ ಘಟ್ಟಕ್ಕೆ ಹಾರುವುದರ ಒಳವುದ್ದೇಶವೇನು? “ಸಂಭೋಗ ನಡೆಯುವಾಗ ನಿಮ್ಮ ತಲೆಯೊಳಗೆ ಏನು ನಡೆಯುತ್ತಿರುತ್ತದೆ?” ಎಂದು ಕೇಳಿದಾಗ ಇವರೇನು ಹೇಳುತ್ತಾರೆ? “ಯೋನಿಯೊಳಗೆ ವೀರ್ಯಸ್ಖಲನವಾದರೆ ಸಾಕೇ ಸಾಕು!” ಸಹಜ ಕಾಮಕೂಟದಲ್ಲಿ ಲಾಸ್ಯವಾಡುವ ಖುಷಿ, ಉನ್ಮಾದ, ರೋಚಕತೆಯ ಬದಲಾಗಿ ಅವಸರ, ಆತುರ, ಆತಂಕ ತಾಂಡವ ಆಡುವುದನ್ನು ನೋಡಿದರೆ ಮಗುವಾಗುವ ಬಯಕೆ ಅವರದ್ದಲ್ಲ, ಅವರ ಮೇಲೆ ಹೇರಲ್ಪಟ್ಟಿದ್ದು ಎನ್ನುವುದು ಸ್ಪಷ್ಟವಾಗುತ್ತದೆ.
ಮಗು ಬೇಕು ಎನ್ನುವವರಿಗೆ ನಾನೊಂದು ವಿಚಿತ್ರ ಪ್ರಶ್ನೆಕೇಳುತ್ತೇನೆ: “ನಿಮಗೆ ಮಗು ಯಾಕೆ ಬೇಕು?” ಹೆಚ್ಚಿನವರು ಆಶ್ಚರ್ಯಾಘಾತದಿಂದ, “ಏನು ಹೀಗೆ ಕೇಳುತ್ತೀರಿ? ಮದುವೆ ಅಂತಾದಮೇಲೆ ಮಗು ಬೇಡವೆ?!” ಎಂದು ಉದ್ದಮುಖದಿಂದ ಉದ್ಗರೆಯುತ್ತಾರೆ. ಮದುವೆಯ ಏಕೈಕ ಗುರಿ ಎಂದರೆ ಸಂತಾನೋತ್ಪತ್ತಿ, ಅದಿಲ್ಲದೆ ಮದುವೆಗೆ ಅರ್ಥವಿಲ್ಲ ಎಂಬುದು ಅವರ ದೃಢನಂಬಿಕೆ. ಅದಕ್ಕೆ ನನ್ನ ಎರಡನೆಯ ಪ್ರಶ್ನೆ: “ಒಂದುವೇಳೆ ಯಾವುದೋ ದೋಷದಿಂದ ಮಗುವಾಗಲು ಅಸಾಧ್ಯವೆಂದು ತಜ್ಞರ ಅಭಿಪ್ರಾಯ ಬಂದರೆ ಏನು ಮಾಡುತ್ತೀರಿ?” ದತ್ತು ತೆಗೆದುಕೊಳ್ಳುತ್ತೇವೆ ಎಂದವರಿಗೆ, “ಸರಿ, ನಂತರ ನೀವಿಬ್ಬರೂ ಹಾಸಿಗೆಯಲ್ಲಿ ಏನು ಮಾಡುತ್ತೀರಿ?” ಎಂದು ಕೇಳುತ್ತೇನೆ. ಆಗ ಅವರಿಗೆ ಹೊಳೆಯುತ್ತದೆ: ನಾವಿಬ್ಬರೂ ಏನೋ ಮಾಡಲು ಹೋಗಿ ಇನ್ನೇನೋ ಮಾಡುತ್ತಿದ್ದೇವೆ!
ನನ್ನ ವೃತ್ತಿಯಲ್ಲಿ ಕಂಡುಬಂದಂತೆ ಸಂತಾನ ಬಯಸುವುದರ ಕಾರಣಗಳಲ್ಲಿ ಇವು ಮುಖ್ಯವಾಗಿವೆ:
- 1) ಮಗು ಸಾಮಾಜಿಕ ಪ್ರತಿಷ್ಠೆಯ ಸಂಕೇತ: ತಮ್ಮ ಸರೀಕರಿಗೆ, ಹಾಗೂ ನಂತರ ಮದುವೆ ಆದವರಿಗೆ ಮಗುವಾಗಿದೆ; ಅಪ್ಪ-ಅಮ್ಮ ತಲೆಯಮೇಲೆ ಕೂತುಕೊಂಡಿದ್ದಾರೆ; ಎಲ್ಲರಿಗೂ ಉತ್ತರಿಸಿ ಸಾಕಾಗಿದೆ; ಉಪದೇಶ ಕೊಡುವವರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ,; ಸಮಾರಂಭಗಳಿಗೆ ಹೋಗಲಾಗುತ್ತಿಲ್ಲ… ಇತ್ಯಾದಿ. ಇದರರ್ಥ ಏನು? ಬೇರೆಯವರ ಕೀಳುಭಾವಕ್ಕೆ ಗುರಿಯಾಗದಿರಲು ಮಗು ಬೇಕು. ಇಲ್ಲಿ ಮಗು ಹುಟ್ಟುತ್ತಲೇ ಒಂದು ಉದ್ದೇಶವನ್ನು ಇಟ್ಟುಕೊಂಡು ಹುಟ್ಟುತ್ತದೆ – ಪುರಾಣದ ಕುಮಾರ ಸಂಭವದಂತೆ! ಇದು ಸರಿಯೆ?
- 2) ಮಗುವು ತಾಯಿಗೆ ಅಸ್ಮಿತೆಯ (identity) ಕೊಡುಗೆ: ಅನೇಕ ತಾಯಂದಿರು ಮಗುವಿನ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ಅವರಿಗೆ ತಮ್ಮದೇ ಆದ ಸ್ವಂತಿಕೆ, ಗುರುತು ಇರುವುದಿಲ್ಲ. ಅಂಥವರು ಮೊದಲು ಆತುರ, ಆತಂಕ ತೋರಿಸುತ್ತಾರೆ. ನಂತರ ತಮ್ಮಷ್ಟಕ್ಕೆ ತಾವಾಗುತ್ತ “ಕನಿಷ್ಟಮಾತೆ” ಆಗುತ್ತಾರೆ.
- 3) ಮಗು ಹುಟ್ಟಿದ ನಂತರದ ಅಸ್ಪಷ್ಟತೆ: ಮಗುವಾದರೆ ಸಾಕು ಎನ್ನುವವರಿಗೆ ಅದಾದಮೇಲೆ ಏನು ಮಾಡಬೇಕು ಎನ್ನುವುದರ ಬಗೆಗೆ ಏನೂ ಕಲ್ಪನೆ ಇರುವುದಿಲ್ಲ – ಇವರ ಅರ್ಹತೆಯ ಅಳತೆಗೋಲು ಶಾರೀರಿಕ ಹಾಗೂ ಆರ್ಥಿಕ ಸಾಮರ್ಥ್ಯ, ಬಾಣಂತನಕ್ಕೆ ಹಿರಿಯರ ನೆರವು ಮಾತ್ರ. ಮಗುವಿಗೆ ಎಷ್ಟೊಂದು ಮಾತಾಪಿತೃವಾತ್ಸಲ್ಯ ಬೇಕು, ಹಾಗೂ ಅದಕ್ಕಾಗಿ ಸಮಯ ಹಾಗೂ ಧಾರಣಾ ಸಾಮರ್ಥ್ಯ ತಮ್ಮಲ್ಲಿದೆಯೆ ಎಂದು ಯೋಚಿಸಿದಂತಿಲ್ಲ. ಇದರ ಬಗೆಗೆ ಕೇಳಿದರೆ ತಮ್ಮ ತಾಯ್ತಂದೆಯರ ಕಡೆಗೆ ಬೆರಳು ತೋರಿಸುತ್ತಾರೆ. ಅವರ ನೆರವು ಒಳ್ಳೆಯದಾದರೂ ಮಕ್ಕಳನ್ನು ಹೆರುವುದು ಮಾತ್ರ ತಮ್ಮ ಕೆಲಸ, ಅವರನ್ನು ನೋಡಿಕೊಳ್ಳುವುದು ಹೆತ್ತವರ ಕೆಲಸ ಎನ್ನುವ ಹೊಣೆಗೇಡಿ ಮನೋಭಾವ ಇರುವುದು ಎದ್ದುಕಾಣುತ್ತದೆ.
ಮಗುವನ್ನು ಬಯಸುವ ದಂಪತಿಗಳ ಬಗೆಗೆ ಬಹಳಷ್ಟು ತಿಳಿದುಕೊಳ್ಳುವುದಿದೆ.
ಗರ್ಭಧಾರಣೆಗೆ ಇಪ್ಪತ್ತೆಂಟಕ್ಕೂ ಮೂವತ್ತೆಂಟಕ್ಕೂ ವಿಶೇಷ ವ್ಯತ್ಯಾಸವಿಲ್ಲ ಎಂದು ಅಧ್ಯಯನ ತಿಳಿಸುತ್ತದೆ.
249: ಮಗು ಬೇಕೆ? ಏಕೆ? – 2
ಮದುವೆಯ ನಂತರ ಬೇಗ ಮಗುವಾದಷ್ಟೂ ಒಳ್ಳೆಯದು ಎನ್ನುವ ಸಾರ್ವಜನಿಕ ನಂಬಿಕೆಯನ್ನು ಒರೆಗಲ್ಲಿಗೆ ಹಚ್ಚುತ್ತಿದ್ದೇವೆ. ಶಿಕ್ಷಣ ಆದಮೇಲೆ ಉದ್ಯೋಗ, ಉದ್ಯೋಗ ಸಿಕ್ಕಮೇಲೆ ಮದುವೆ, ಮದುವೆಯ ನಂತರ ಮಗು, ಮಗುವಾಗುವ ತನಕ ಆತಂಕ, ಅನಿಶ್ಚಿತತೆ, ನಂತರ ಅದನ್ನು ಬೆಳೆಸುವ ಆತಂಕ… ಇದನ್ನೆಲ್ಲ ನೋಡಿದರೆ ನಮ್ಮ ಯುವದಂಪತಿಗಳು ಏನನ್ನು ಬೆನ್ನಟ್ಟಿ ಹೊರಟಿದ್ದಾರೆ, ಹಾಗೂ ಎಲ್ಲಿಗೆ ಮುಟ್ಟಲು ಹೊರಟಿದ್ದಾರೆ ಎಂದು ಯಾರೂ ತಲೆ ಕೆಡಿಸಿಕೊಂಡಂತಿಲ್ಲ.
ಮಗು ಮಾಡಿಕೊಳ್ಳುವ ಅವಸರಕ್ಕೆ ಪರಿಸರದ ಒತ್ತಡವಲ್ಲದೆ ಇನ್ನೊಂದು ಬಲವಾದ ಕಾರಣವೂ ಇದೆ. ಅದನ್ನು ಸ್ಪಷ್ಟಪಡಿಸಲು ನನ್ನದೇ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಮೂವತ್ತೆರಡು ವರ್ಷದ ನನ್ನ ಸಂಬಂಧಿ ಯುವತಿ ಆರು ವರ್ಷದಿಂದ ವಿವಾಹಿತಳಾಗಿದ್ದು, ಮುಟ್ಟಿನ ತೊಂದರೆ ಅನುಭವಿಸುತ್ತಿದ್ದಳು. ಆಕೆಯನ್ನು ನಮ್ಮ ಸ್ನೇಹಿತೆ ಸ್ತ್ರೀವೈದ್ಯರ ಹತ್ತಿರ ಕಳಿಸಿಕೊಟ್ಟೆ. “ಈಕೆಗೆ ಗರ್ಭಧಾರಣೆ ಬೇಕಿಲ್ಲ, ಕೇವಲ ಮುಟ್ಟಿನ ತೊಂದರೆಗೆ ಮಾತ್ರ ಬರುತ್ತಿದ್ದಾಳೆ” ಎಂದು ಮುಂಚೆಯೇ ಎಚ್ಚರಿಸಿದ್ದೆ. ಮರಳಿದ ಯುವತಿ ಅತೀವ ಬೇಸರದಿಂದ ಹೇಳಿಕೊಂಡಳು: ತನಗೆ ಮಗು ಬೇಕಿಲ್ಲ ಎಂದದ್ದನ್ನು ವೈದ್ಯೆ ಕಿವಿಯಮೇಲೆ ಹಾಕಿಕೊಳ್ಳಲೇ ಇಲ್ಲ. ಬದಲಾಗಿ ಫಲವತ್ತತೆಯ ಪರೀಕ್ಷೆಗೆ ಒಳಪಡಿಸಿ ಸಾವಿರಾರು ಕಿತ್ತರು. ನಂತರ ನಿರ್ಣಯ ಕೊಟ್ಟರು: “ನಿನ್ನಲ್ಲಿ ಅಂಡಾಣುಗಳ ಸಂಗ್ರಹ ಕಡಿಮೆ ಆಗುತ್ತಿದೆ. ಹಾಗಾಗಿ ಬೇಗ ಗರ್ಭ ಧರಿಸಿದಷ್ಟೂ ಒಳ್ಳೆಯದು!” ಆಮೇಲೆ ನನಗೆ ನೆನಪಾಯಿತು – ಅವರು ಗರ್ಭಧಾರಣೆಯ ಕೇಂದ್ರವೊಂದರ ಒಡತಿ!
ವೈದ್ಯರ ವ್ಯಾಧಿ:
ನನ್ನ ಪ್ರಕಾರ ವೈದ್ಯರಿಗೆ ಎರಡು ’ಕಾಯಿಲೆ’ಗಳಿವೆ. ಒಂದು: ರೋಗಿಗಳು ಏನೇ ಉದ್ದೇಶದಿಂದ ಬಂದರೂ ಅದೇನೆಂದು ಯೋಚಿಸದೆ ತಮ್ಮ ಪರಿಣಿತಿಯನ್ನು ಹುಡುಕಿಕೊಂಡು ಬಂದಿದ್ದಾರೆ ಎಂದೇ ಭ್ರಮಿಸಿ, ತಜ್ಞಬುದ್ಧಿಯು ತೋರಿಸುವ ದಾರಿಯಲ್ಲೇ ಮುಂದೆ ಸಾಗುವುದು. (ಇದಕ್ಕೆ ನಾನೂ ಹೊರತಲ್ಲ. ಇಪ್ಪತ್ತು ವರ್ಷಗಳ ಹಿಂದೆ ಶಿಶ್ನದೌರ್ಬಲ್ಯವನ್ನು ಮುಂದುಮಾಡಿಕೊಂಡು ಬಂದ ನವವಿವಾಹಿತನಿಗೆ ಔಷಧಿ ಬರೆಯಲು ಹೊರಟಾಗ, ಆತ ನನ್ನನ್ನು ತಡೆದು ಹೇಳಿದ: “ಇಲ್ಲ ಡಾಕ್ಟರ್, ನನಗೆ ಸಂಭೋಗ ಸಾಮರ್ಥ್ಯ ಬೇಕಾಗಿಲ್ಲ. ಸಂಭೋಗಕ್ಕೆ ಅಸಮರ್ಥ ಎಂದು ದೃಢೀಕರಣ ಪತ್ರ ಬೇಕು.” ಯಾಕೆ? ಒತ್ತಾಯದ ಮದುವೆಯಿಂದ ಬಿಡುಗಡೆ ಬೇಕಿದೆ!)
ಎರಡು: ತಜ್ಞರು ತಮ್ಮ ತಜ್ಞತೆಯ ಚೌಕಟ್ಟಿನೊಳಗೆ ಮಾತ್ರ ಯೋಚಿಸುತ್ತಾರೆಯೇ ಹೊರತು ಅದರ ಹೊರಗಲ್ಲ. ಅವರ ಪಾಂಡಿತ್ಯವು ಕೊಡುವ ದೃಢತೆಯು ಅದರಾಚೆಗಿರುವ ಅನಿಶ್ಚಿತೆಯನ್ನು ಎದುರುಹಾಕಿಕೊಳ್ಳಲು ಅವಕಾಶ ಕೊಡುವುದಿಲ್ಲ. ಉದಾಹರಣೆಗೆ, ಸರ್ವಪರೀಕ್ಷೆಗಳ ನಂತರ, “ನಿನಗೇನೂ ತೊಂದರೆಯಿಲ್ಲ, ಹಾಗಾಗಿ ಔಷಧಿ ಬೇಕಾಗಿಲ್ಲ” ಎಂದು ಆತ್ಮವಿಶ್ವಾಸದಿಂದ ಬೆನ್ನುತಟ್ಟಿ ಬರಿಗೈಯಲ್ಲಿ ಬೀಳ್ಕೊಡುವ ವೈದ್ಯರು ಎಷ್ಟಿದ್ದಾರೆ? ಪ್ರತಿ ವೈದ್ಯರನ್ನೂ “ಕಲಿತ ಆತ್ಮಸಾಕ್ಷಿ” ಕಾಡುತ್ತಿದ್ದು, ಕಣ್ತಪ್ಪಿನ ಪರಿಣಾಮದಿಂದ ಅಚಾತುರ್ಯ ಸಂಭವಿಸುವ ಭಯವಿರುತ್ತದೆ (ನಾಳೆ ಏನಾದರೂ ಹೆಚ್ಚುಕಡಿಮೆ ಆದರೆ?!). ಹೀಗಾಗಿ ನವನಿವಾಹಿತರು ಪ್ರಸೂತಿ ತಜ್ಞರಲ್ಲಿ ಹೋದಾಗ, “ಇಪ್ಪತ್ತೆಂಟರೊಳಗೆ ಎರಡು ಮಕ್ಕಳನ್ನು ಮಾಡಿಕೊಂಡುಬಿಡಿ. ಆಮೇಲೆ ನಿರಾಳವಾಗಿ ಇರಬಹುದು” ಎನ್ನುವ ಉಪದೇಶ ಬರುತ್ತದೆ. ಇಲ್ಲಿ ಮಾಡಿಮುಗಿಸಿ ಕೈತೊಳೆದುಕೊಳ್ಳುವ ಸೂಚನೆಯಿದೆ. ಆದರೆ ಮಗು ಹುಟ್ಟಿದಮೇಲೆ ಮುಗಿಯುವುದಲ್ಲ, ಬದುಕಿನ ಹೊಸ ಆಯಾಮ ಶುರುವಾಗುತ್ತದೆ ಎನ್ನುವುದು ಕಟುವಾಸ್ತವ.
ಆದಷ್ಟು ಬೇಗ ಮಗುವಾಗಬೇಕು ಎನ್ನುವುದಕ್ಕೆ ಸಹಜ ಕಾರಣವೊಂದಿದೆ: ಗರ್ಭಧಾರಣೆಗೆ ದೇಹಸ್ಥಿತಿ ಹಾಗೂ ಧಾರಣಾಶಕ್ತಿ ಪ್ರಶಸ್ತವಾಗಿರುತ್ತದೆ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಮಗುವನ್ನು ಬೆಳೆಸಲು ಅಷ್ಟೇ ಅತ್ಯಗತ್ಯವಾದ ಮಾನಸಿಕ ಸಿದ್ಧತೆ ಹಾಗೂ ಭಾವನಾತ್ಮಕ ಪಕ್ವತೆಯನ್ನು ಅಲಕ್ಷಿಸುತ್ತಿದ್ದೇವೆ. ಪರಿಣಾಮ? ಅನೇಕ ಮಕ್ಕಳ ತಾಯ್ತಂದೆಯರು ತಾವೇ ಸ್ವತಃ ಮಕ್ಕಳಂತೆ ಗೊಂದಲದಲ್ಲಿ ಇರುವುದನ್ನು ಕಂಡಿದ್ದೇನೆ – ಅಳುವ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಕೂಡಿಸುವವರು ಇದಕ್ಕೊಂದು ಉದಾಹರಣೆ. ಅಕಾಲದ ಮಗುವು ದಾಂಪತ್ಯದ ಸಂಬಂಧದ ಮೇಲೆ ಅನಿಷ್ಟ ಪರಿಣಾಮ ಉಂಟುಮಾಡುತ್ತದೆ. ಈ ನವದಂಪತಿಯು ವಿದೇಶದಲ್ಲಿ ಕೆಲಸದಲ್ಲಿದ್ದು ಮಧುಚಂದ್ರದ ಲಹರಿಯಲ್ಲಿ ಇರುವಾಗಲೇ ಕಾಂಡೋಮ್ ವಿಫಲಗೊಂಡು ಗರ್ಭಕಟ್ಟಿತು. ಆಘಾತದಿಂದ ಹಿರಿಯರಿಗೆ ಕರೆಮಾಡಲಾಗಿ ಗರ್ಭಪಾತಕ್ಕೆ ಒಪ್ಪದೆ ಮುಂದುವರಿಸಲು ಸೂಚಿಸಿದರು. ಇದಾಗಿ ಏಳು ವರ್ಷಗಳಾಯಿತು, ಇಬ್ಬರೂ ಮಗುವನ್ನು ಇಷ್ಟಪಡಲು “ಕಲಿತಿ”ದ್ದರೂ ಆಘಾತದಿಂದ ಹೊರಬಂದಿಲ್ಲ. ಎಗ್ಗು-ಸಿಗ್ಗಿಲ್ಲದ ಕಾಮಕೂಟಗಳ ಬಿಂದಾಸ್ ಅವಕಾಶವು ಮತ್ತೆಂದೂ ಮರಳಲಾರದು ಎನ್ನುವ ವ್ಯಥೆ ಅವರಿಗಿದೆ. ನನ್ನ ಪ್ರಶ್ನೆ ಏನೆಂದರೆ, ಪ್ರತಿಯೊಂದೂ ಆಯಾ ವಯಸ್ಸಿಗೆ ತಕ್ಕಂತೆ ಆಗಲಿ ಎನ್ನುವುದು ಕಾಮೇಚ್ಛೆಯ ಪೂರೈಕೆಗೆ ಯಾಕೆ ಅನ್ವಯವಾಗುವುದಿಲ್ಲ? ಕಾಮೇಚ್ಛೆಯನ್ನು ದಾಂಪತ್ಯವೊಂದನ್ನು ಬಿಟ್ಟರೆ ಬೇರಾವ ಸಂಬಂಧದಲ್ಲಿ ಪೂರೈಸಿಕೊಳ್ಳಲು ಸಾಧ್ಯವಿದೆ? ಮೊದಲು ಮದುವೆಯಾಗಲು ಒತ್ತಾಯಿಸಿ ನಂತರ ಮನಸೋಯಿಚ್ಛೆ ಕಾಮತೃಪ್ತಿಗೆ ಅವಕಾಶ ಕೊಡದಿರುವ ಹಿರಿಯರ ಈ ನಡವಳಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ವೈದ್ಯರ ಈ ವ್ಯಾಧಿಯು ಅಮೆರಿಕದಂಥ ದೇಶಗಳಲ್ಲೂ ಬಿಟ್ಟಿಲ್ಲ. ಅದಕ್ಕೊಂದು ದೃಷ್ಟಾಂತ: ಅರಿಜ಼ೋನಾದ ಮನಃಶಾಸ್ತ್ರದ ಪ್ರೊಫೆಸರ್ ಜೀನ್ ಟ್ವೆಂಗೆ (Jean Twenge) ತಡಗರ್ಭದ ಬಗೆಗೆ ಯೋಚಿಸುತ್ತಿದ್ದಳು. ಎಲ್ಲೆಡೆಯೂ ಮೂವತ್ತೆರಡರ ನಂತರದ ಗರ್ಭದ ಬಗೆಗೆ ಎಚ್ಚರಿಕೆಯ ಫಲಕಗಳು ಕಂಡುಬರುತ್ತಿರುವಾಗ ಆಕೆಗೇನೋ ಸಂದೇಹ ಬಂತು. ಸಾಮಾನ್ಯಜ್ಞಾನವು ವೈಜ್ಞಾನಿಕ ಸತ್ಯಕ್ಕೆ ಸಮವಲ್ಲ ಎಂದು ಆಕೆಗೆ ಗೊತ್ತು. ಜಗತ್ತಿನಾದ್ಯಂತ ಗರ್ಭಧಾರಣೆಯ ಬಗೆಗಿನ ಮಾಹಿತಿಯನ್ನು ಜಾಲಾಡಿ ಕ್ರೋಢೀಕರಿಸಿ ಪುಸ್ತಕರೂಪದಲ್ಲಿ ದಾಖಲಿಸಿದ್ದಾಳೆ (An Impatient Woman’s Guide to Getting Pregnant). ಅದರಲ್ಲಿನ ಕೆಲವಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ:
- ನಮ್ಮ ಪ್ರಸೂತಿ ತಜ್ಞರು ಹೇಳುವ “35ರಿಂದ 39ರ ವಯಸ್ಸಿನ ಮಹಿಳೆಯರು ಗರ್ಭಧರಿಸುವ ಸಂಭವ 65% ಮಾತ್ರ” ಎನ್ನುವ ಅಂಕಿಸಂಖ್ಯೆಗಳ ಮೂಲ ಯಾವುದು ಗೊತ್ತೆ? ಫ್ರಾನ್ಸ್‌ನ 17ನೇ ಶತಮಾನದ ಜನನದ ದಾಖಲೆಗಳು! ಇತ್ತೀಚಿನ ಲೆಕ್ಕಾಚಾರದ ಪ್ರಕಾರ 80%ಕ್ಕೂ ಮೀರಿ ಗರ್ಭಧಾರಣೆಗಳು ಆಗುತ್ತವೆ.
- ಮೂವತ್ತೈದರ ಹೆಣ್ಣು ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗದಲ್ಲಿ ಪಾಲುಗೊಂಡರೆ ಶೇ. 20ರಷ್ಟಲ್ಲ, ಶೇ. 33ರಷ್ಟು ಪ್ರಸಂಗಗಳಲ್ಲಿ ಗರ್ಭಿಣಿಯಾಗುವ ಸಂಭವ ಇರುತ್ತದೆ.
- ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗಿಸಿದರೆ ಎರಡು ವರ್ಷದೊಳಗೆ ಗರ್ಭಧರಿಸುವ ಸಂಭವ ಇಪ್ಪತ್ತೆಂಟರ ಹೆಣ್ಣಿನಲ್ಲಿ ಶೇ. 86ರಷ್ಟಿದೆ. ಅದೇ ಮೂವತ್ತೆಂಟರ ಹೆಣ್ಣಿಗೆ ಶೇ. 82ರಷ್ಟಿದೆ. ಅಂದರೆ ಗರ್ಭಧಾರಣೆಗೆ 28ನೇ ವಯಸ್ಸಿಗೂ 38ನೇ ವಯಸ್ಸಿಗೂ ವಿಶೇಷ ವ್ಯತ್ಯಾಸವಿಲ್ಲ!
- ಗರ್ಭಧಾರಣೆಯ ಅವಧಿಯಲ್ಲಿ ಸಂಭವಿಸುವ ತೊಡಕುಗಳು 20ರ ಹರೆಯದಲ್ಲೂ 38ರ ತಡವಯಸ್ಸಿನಲ್ಲೂ ಒಂದೇ ಆಗಿವೆ. ನಲವತ್ತರ ಮೇಲೆ ಮಾತ್ರ ಇದರ ಸಂಭವ ಗಣನೀಯವಾಗಿ ಹೆಚ್ಚಾಗುತ್ತವೆ.
- ಮಾನಸಿಕ ಒತ್ತಡವು ಗರ್ಭಧರಿಸುವ ಪ್ರಕ್ರಿಯೆಯ ಮೇಲೆ ವಿಶೇಷ ಪ್ರಭಾವ ಬೀರಲಾರದು.
ಇದರಿಂದ ಏನು ತಿಳಿದು ಬರುತ್ತದೆ? ಗರ್ಭಧರಿಸಲು ಮೂವತ್ತೆಂಟರ ವಯಸ್ಸೂ ಸುರಕ್ಷಿತ! ಅಷ್ಟಲ್ಲದೆ, ಹೀಗೆ ಯೋಚಿಸುವುದರಲ್ಲಿ ಪ್ರಯೋಜನವಿದೆ. ಗರ್ಭಧರಿಸುವ ಸಾಮರ್ಥ್ಯ ತನ್ನಲ್ಲಿನ್ನೂ ಜೀವಂತವಾಗಿದೆ ಎನ್ನುವ ಸ್ಥಿತ್ಯಂತರವು ಹೆಣ್ಣಿಗೆ ಅತೀವ ಆತ್ಮವಿಶ್ವಾಸವನ್ನು ಕೊಡುತ್ತದೆ. ಅದಲ್ಲದೆ, ಎಲ್ಲೆಲ್ಲೋ ಕಾಣುವ ತೊಂದರೆಗಳು ತನಗೂ ಬರಬಹುದು ಎಂದು ಅಂತರ್ಗತ ಮಾಡಿಕೊಳ್ಳುವ ಸಂಭವ ಕಡಿಮೆಯಾಗುತ್ತದೆ.
ಮೊದಲ ನಾಲ್ಕೈದು ತಿಂಗಳ ಕಾಲ ಸಿಗುವ ನಿರಂತರ ಸ್ಪರ್ಶವು ಶಿಶುವಿನ ಭವಿಷ್ಯವನ್ನೇ ಬದಲಾಯಿಸುತ್ತದೆ!
250: ಮಗು ಬೇಕೆ? ಏಕೆ? – 3
ಹೋದಸಲ ಗರ್ಭಧಾರಣೆಯ ಕುರಿತಾಗಿ ವೈದ್ಯರ “ಕಲಿತ ಆತ್ಮಸಾಕ್ಷಿ,” ಅದರಿಂದ ಬಿತ್ತಲ್ಪಟ್ಟ ಸಾರ್ವಜನಿಕ ಮಿಥ್ಯೆಗಳ ಜೊತೆಗೆ ವೈಜ್ಞಾನಿಕ ಸತ್ಯಗಳ ಬಗೆಗೆ ತಿಳಿದುಕೊಂಡೆವು. ಅವಸರದಲ್ಲಿ ಅಥವಾ ಅರೆಮನಸ್ಸಿನಿಂದ ಮಗುವನ್ನು ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳ ಬಗೆಗೆ ಈ ಸಲ ಯೋಚಿಸೋಣ.
ಮಗುವಿನ ಅಗತ್ಯಗಳ ಪೂರೈಕೆ?
ಶಿಶುವಿಗೆ ಆಹಾರ, ನಿದ್ರೆಗಳ ಜೊತೆಗೆ ನಿರಂತರ ಬೆಚ್ಚಗಿನ ದೇಹಸಂಪರ್ಕ, ವಾತ್ಸಲ್ಯಧಾರೆ ಹಾಗೂ ಸುಖಸಂವಹನ ಬೇಕೇಬೇಕು. ಇವು ಮಗುವಿನ ಭಾವನಾತ್ಮಕ ಭವಿಷ್ಯದ ಜೀವಾಳ. ಇದನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ ಡಾ. ಎಡ್ವರ್ಡ್ ಟ್ರೋನಿಕ್ ಅವರ ಕಿರುವಿಡಿಯೋ (Still Face Experiment: Edward Tronick) ನೋಡಿ. ತಾಯಿಯ ಬೆಚ್ಚಗಿನ ಮೈಯ ಸಂಪರ್ಕವು ಗರ್ಭಾವಸ್ಥೆಯನ್ನು ಅನುಕರಿಸುವಂತೆ ಸಂತತವಾಗಿ ಇದ್ದರೆ ಶಿಶುವಿನಲ್ಲಿ ಭದ್ರಭಾವಕ್ಕೆ ಹುಟ್ಟುಹಾಕುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನೊಂದು ವಿಷಯ ಏನೆಂದರೆ, ಹೆರಿಗೆಯಾದ ಕೂಡಲೇ ಶಿಶುವನ್ನು ದೀರ್ಘಕಾಲ ಎದೆಗೆ ತೆಗೆದುಕೊಂಡಿದ್ದರೆ ಆಕ್ಸಿಟೋಸಿನ್ ಎಂಬ ಹಾರ್ಮೋನನ್ನು ಪ್ರಚೋದಿಸುವುದರಿಂದ ಎದೆಹಾಲು ಬೇಗ ಬರುತ್ತದೆ. ಇನ್ನು ಸಮಸ್ಯೆಗೆ ಬರೋಣ. ಮೊದಲೇ ದಾಂಪತ್ಯದ ಸಮಸ್ಯೆಗಳು ಬಗೆಹರಿಯದೆ ಹಿಂಸೆ ಅನುಭವಿಸುತ್ತಿರುವ ಹೆಂಗಸರಿಗೆ ಒತ್ತಾಯದ ತಾಯ್ತನಕ್ಕೆ ಅರೆಮನಸ್ಸು ಇರುವುದು ಸಹಜ. ಹಿರಿಯ ಹೆಂಗಸರು ಬಸಿರು-ಬಾಣಂತನದಲ್ಲಿ ನೆರವು ನೀಡಿ ಭಾರ ಹಂಚಿಕೊಳ್ಳುವ ಉತ್ತಮ ಪದ್ದತಿ ನಮ್ಮಲ್ಲಿದ್ದರೂ ಸಾಕಷ್ಟು ಹೆಂಗಸರು ಈ ಅವಧಿಯಲ್ಲೇ ಖಿನ್ನತೆಗೆ ಬಲಿಯಾಗುತ್ತಾರೆ. ಸ್ವಯಂಪ್ರೇರಣೆ ಇಲ್ಲದಿರುವುದರಿಂದ ಶಿಶುವಿನ ಲಾಲನೆ-ಪಾಲನೆಯಲ್ಲಿ ಕ್ರಿಯಾಶೀಲಳಾಗಿ ತೊಡಗಿಸಿಕೊಳ್ಳುವುದು (ಉದಾ. ಅವೇಳೆ, ನಿದ್ದೆಗೆಡುವುದು) ಪ್ರಾಣಸಂಕಟ ಎನಿಸುತ್ತದೆ. ಎಡೆಬಿಡದೆ ಅಳುತ್ತಿರುವ ಮಗುವನ್ನು ಕಿಟಿಕಿಯಿಂದ ಹೊರಗೆ ಎಸೆಯಬೇಕೆಂದು ವಿಚಾರ ಬಂದು, ಅದರ ಹಿಂದೆ ತಪ್ಪಿತಸ್ಥ ಭಾವ ಕಾಡುವುದನ್ನು ಮಹಿಳೆಯೊಬ್ಬಳು ನನ್ನಲ್ಲಿ ಹಂಚಿಕೊಂಡಿದ್ದಾಳೆ.
ಇನ್ನು ಶಿಶುವಿನ ವಿಷಯಕ್ಕೆ ಬರೋಣ. ಅದೇ ಹುಟ್ಟಿ ಇನ್ನೂ ಕಣ್ಣು ಬಿಡದಿರುವ ಶಿಶುವಿನ ಲೋಕದಲ್ಲಿ ಎಷ್ಟೊಂದು ನಡೆಯುತ್ತದೆ ಎಂದು ತಿಳಿದುಕೊಳ್ಳುವುದು ವಿಸ್ಮಯಕರ. ತಾಯಿಯ ಗರ್ಭದಲ್ಲಿಯ ಉಷ್ಣತೆಯು ಒಂದೇಸಮವಾಗಿ ಬೆಚ್ಚಗಿರುತ್ತದೆ. ಹೊರಬಂದ ಕೂಡಲೇ ತಟ್ಟುವ ತಂಗಾಳಿಯ ಸ್ಪರ್ಶವು ಶಿಶುವಿನ ಇಡೀ ದೇಹಕ್ಕೆ ಆಘಾತ ಕೊಡುತ್ತದೆ. (ದೇಹಾಘಾತವನ್ನು ಅರ್ಥಮಾಡಿಕೊಳ್ಳಲು ಹೀಗೆ ಊಹಿಸಿ: ಚಳಿಗಾಲದಲ್ಲಿ ಬಿಸಿನೀರು ಮೈಮೇಲೆ ಸುರಿಯುವುದನ್ನು ಕಣ್ಣುಮುಚ್ಚಿ ಅನುಭವಿಸುತ್ತಿರುವಾಗ ದಿಢೀರೆಂದು ತಣ್ಣೀರು ಮೈಮೇಲೆ ಬೀಳಲು ಶುರುವಾಗಿ, ತಪ್ಪಿಸಿಕೊಳ್ಳಲು ಆಗದಿದ್ದರೆ ಹೇಗಿರುತ್ತದೆ?) ದೇಹಾಘಾತದಿಂದ ಸಂರಕ್ಷಣೆ ಪಡೆಯಲು ಮಗುವು ಹೊರಬಂದ ಕೂಡಲೇ ತಾಯಿಯ ಶರೀರದ ಸಂಪರ್ಕದ ಮಿತಿಯೊಳಗೆ ಭದ್ರವಾಗಬೇಕು (ಅದೇ ಕಾರಣಕ್ಕೆ ಶಿಶುವನ್ನು ಬಟ್ಟೆಯಲ್ಲಿ ಭದ್ರವಾಗಿ ಸುತ್ತಿಡಲಾಗುತ್ತದೆ). ಇದಾಗದಿದ್ದರೆ ಉಂಟಾಗುವ ಕೊರತೆಯು ಅದೇ ರೂಪುಗೊಳ್ಳುತ್ತಿರುವ ದೇಹಪ್ರಜ್ಞೆಯಲ್ಲಿ ವಿಕೃತವಾಗಿ ಅಡಕವಾಗಿ, ಮುಂದೆ ಬದುಕಿನುದ್ದಕ್ಕೂ ಉಳಿದುಬಿಡುತ್ತದೆ ಎಂದು ನಂಬಲು ಮನೋವಿಜ್ಞಾನದಲ್ಲಿ ಸಾಕಷ್ಟು ಆಧಾರವಿದೆ. ಈ ವಿಕೃತಿ ಹೇಗಿರಬಹುದು ಎಂಬುದಕ್ಕೆ ಒಂದು ದೃಷ್ಟಾಂತ: ಇಲ್ಲೊಬ್ಬನು ಪೋಷಕ ಕುಟುಂಬದಲ್ಲಿ ಬೆಳೆದಿದ್ದರೂ ಆತಂಕ-ಅಭದ್ರತೆಯ ಸ್ವಭಾವವನ್ನು ಹೊಂದಿದ್ದಾನೆ. ಬುದ್ಧಿವಂತ ಹಾಗೂ ವಿಚಾರವಾದಿ ಎನ್ನಿಸಿಕೊಂಡರೂ ಒಳಗೊಳಗೇ ನರಳುತ್ತ ಅಸಾಮರ್ಥ್ಯವನ್ನು ಅನುಭವಿಸುತ್ತ ಇರುತ್ತಾನೆ. ಆಗಾಗ ಮೈಕೈ ಭಾರ, ಏನೂ ಮಾಡಲು ಪ್ರೇರಣೆ ಇಲ್ಲದಿರುವುದರಿಂದ ಉದ್ಯೋಗದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ. ಎತ್ತಿಕೊಂಡ ಕೆಲಸವನ್ನು ಅರ್ಧಕ್ಕೇ ಬಿಟ್ಟಿದ್ದು ಎಷ್ಟು ಸಲವೊ! ಚಿಕಿತ್ಸೆಯ ಸಮಯದಲ್ಲಿ ಅವನ ಅಂತರಾಳವನ್ನು ಬಗೆದಾಗ ಅಚ್ಚರಿಯ ವಿಷಯವೊಂದು ಹೊರಬಂತು: ಇವನು ಗರ್ಭದಲ್ಲಿ ಬೆಳೆಯುತ್ತಿದ್ದಾಗ ತಾಯಿಯು ಕೌಟುಂಬಿಕ ಹಿಂಸೆಯನ್ನೂ ಶಾರೀರಿಕ ರೋಗಸ್ಥಿತಿಯನ್ನೂ ಅನುಭವಿಸುತ್ತಿದ್ದಳು. ಬಹುಕಷ್ಟದ ಹೆರಿಗೆಯ ನಂತರ ಸುಮಾರು ಹೊತ್ತು ಪ್ರಜ್ಞೆ ಕಳೆದುಕೊಂಡಿದ್ದಳು. ಈ ಸಂದರ್ಭದಲ್ಲಿ ಬೆಚ್ಚನೆಯ ಶರೀರಸ್ಪರ್ಶ ಹಾಗೂ ಸುಖಸಂಪರ್ಕ ಸಿಗದಿದ್ದುದರಿಂದ ಶಿಶುವು ದೇಹಾಘಾತಕ್ಕೆ ಒಳಗಾಗಿ “ಒಂಟಿತನದ ದೇಹಪ್ರಜ್ಞೆ” ಹುಟ್ಟಿದೆ. ಈ “ಶಾರೀರಿಕ ಅನಾಥಪ್ರಜ್ಞೆ”ಯನ್ನು ಅವನು ಮನೋಭಾವುಕ ರೂಪದಲ್ಲಿ ಅನುಭವಿಸುತ್ತಿದ್ದಾನೆ. ಎತ್ತಣ ಮಾಮರ ಎತ್ತಣ ಕೋಗಿಲೆ?
ಇನ್ನು, ಒಮ್ಮೆ ದಾಕ್ಷಿಣ್ಯಕ್ಕೆ ತಾಯಿಯಾಗಲು ಕಷ್ಟಪಟ್ಟಿರುವವರು ಇನ್ನೊಂದು ಸಲ ಅದನ್ನು ಎದುರುಹಾಕಿಕೊಳ್ಳಲು ಸಹಸಾ ಇಷ್ಟಪಡುವುದಿಲ್ಲ. ಹಾಗಾಗಿ ಇರುವ ಒಂದು ಮಗುವಿನ ಮೂಲಕವೇ ತಮ್ಮೆಲ್ಲ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಹವಣಿಸುತ್ತಾರೆ. ಅದರ ಬೆಳವಣಿಗೆಯ ಬಗೆಗೆ ಅಸಹಜ ಕಾಳಜಿ ತೋರಿಸುತ್ತಾರೆ. ಮಗು ಒಂದು ಘಟ್ಟ ಮುಟ್ಟುವಾಗ ಖುಷಿಯಲ್ಲಿ ಮನಸ್ಸನ್ನು ನೆಲೆಸಗೊಡುವುದಿಲ್ಲ; ಅತೃಪ್ತಿ, ಅಸಹನೆ ತೋರುತ್ತ ಮುಂದಿನ ಘಟ್ಟಕ್ಕೆ (ಉದಾ. ಸಂಸ್ಕಾರ ಕೊಡುವುದು) ಹಾತೊರೆಯುತ್ತಾರೆ. ಇಲ್ಲಿ ವಿಡಂಬನೆಯ ಹೇಳಿಕೆಯೊಂದು ನೆನಪಿಗೆ ಬರುತ್ತಿದೆ: ಮಗುವಿಗೆ ಯಾವಾಗ ಮಾತು, ಕಾಲು ಬರುತ್ತದೋ ಎಂದು ಕಾತುರದಿಂದ ಕಾಯುತ್ತಿರುವವರು ಒಮ್ಮೆ ಮಾತು, ಓಡಾಟ ಶುರುವಾದ ನಂತರ ಬಾಯಿಮುಚ್ಚಿ ಒತ್ತಟ್ಟಿಗೆ ಕುಳಿತುಕೊಳ್ಳಲು ಆಜ್ಞಾಪಿಸುತ್ತಾರೆ! ಪರಿಣಾಮವಾಗಿ ಮಕ್ಕಳ ಬೆಳವಣಿಗೆಯನ್ನು ನೋಡುವ ಸೌಭಾಗ್ಯವನ್ನು ಕಳೆದುಕೊಳ್ಳುವುದಲ್ಲದೆ ಮಗುವು ಬೆಳೆದಮೇಲೆ ನೆನೆಸಿಕೊಳ್ಳಲು ಬಾಲ್ಯದ ಸವಿನೆನಪು ಎನ್ನುವುದು ಇರುವುದಿಲ್ಲ.
ಮಗು ಯಾಕೆ ಬೇಕು?
ಈ ಪ್ರಶ್ನೆಗೆ ಸರ್ವಸಮಾನ್ಯವಾಗಿ ಎಲ್ಲರೂ ಕೊಡುವ ಹಾಗೂ ಸಮಂಜಸ ಎನ್ನಿಸುವ ಉತ್ತರ ಒಂದೇ: ಪ್ರೀತಿಸಲು ಹಾಗೂ ಸುಖಸಂಪರ್ಕಿಸಲು ನನ್ನವರು ಎನ್ನುವವರು ಯಾರಾದರೂ ಬೇಕೇಬೇಕು! ಇದಕ್ಕೆ ಅಸ್ತಿತ್ವವಾದದ ಆಧಾರವಿದೆ. ಅಪ್ಪ, ಅಮ್ಮ, ಸಂಗಾತಿ… ಎಲ್ಲರೂ ತನಗಿಂತ ಮುಂಚೆ ಸಾಯಬಹುದು, ಆದರೆ ಮಗು ತನ್ನನ್ನು ಮೀರಿ ಬದುಕುತ್ತದೆ, ಹಾಗಾಗಿ ಕೊನೆಯ ತನಕ ಸುಖಸಂಪರ್ಕದ ಭರವಸೆ ಇರುತ್ತದೆ ಎನ್ನುವ ಪರಿಕಲ್ಪನೆಯಲ್ಲಿ ಮೇಲುನೋಟದಲ್ಲಿ ಹುರುಳಿದೆ. ಆದರೆ ಒಳಗಿನ ಕತೆಯೇ ಬೇರೆ. “ನನ್ನದೇ ಮಗು” ಎನ್ನುವುದಿದೆಯಲ್ಲ, ಅದರ ಹಿಂದೆ ಒಡೆತನದ ಸ್ವಾರ್ಥವಿದೆ – ನನ್ನ ಮಗು ನನ್ನದೇ ಆಗಿರಬೇಕು, ಇನ್ನಾರದೂ ಆಗಿರಬಾರದು! ಮಗುವಿಗೆ ಜನ್ಮಕೊಡುವಾಗ ಪ್ರೀತಿಯ ಜೊತೆಗೆ ಹಕ್ಕು, ಸ್ವಾಮ್ಯ, ಒಡೆತನ ಬರುತ್ತದೆ – ಕೆಲವೊಮ್ಮೆ ಒಡೆತನದ ಆಳ್ವಿಕೆಯನ್ನೇ ಪ್ರೀತಿಯ ನಂಟೆಂದು ತಪ್ಪಾಗಿ ತಿಳಿಯುವುದೂ ಇದೆ. ಉದಾ. ಕೋಪದಿಂದ ಮಗುವನ್ನು ಶಿಕ್ಷಿಸುವಾಗ ಯಾರಾದರೂ ಅಡ್ಡಿಬಂದರೆ, “ನನ್ನ ಮಗು ಹೇಗೆಂದು ನನಗೆ ಚೆನ್ನಾಗಿ ಗೊತ್ತಿದೆ, ದೂರವಿರು!” ಎನ್ನುವವರನ್ನು ಕೇಳಿದ್ದೇವೆ. ಮಗುವು ಅಪ್ಪನನ್ನು ಹೆಚ್ಚು ಪ್ರೀತಿಸುವಂತೆ ಕಂಡಾಗ ತಾಯಿಗೆ ಮತ್ಸರವಾಗುವುದು ಇದೇ ಕಾರಣಕ್ಕೆ. ದಂಪತಿ ವಿಚ್ಛೇದನ ತೆಗೆದುಕೊಳ್ಳುವಾಗ ಮಗು ನನ್ನಲ್ಲಿರಲಿ ಎನ್ನುವುದಕ್ಕಿಂತ ವಿಚ್ಛೇದಿತ ಸಂಗಾತಿಯ ಬಳಿ ಇರುವುದು ಬೇಡ ಎನ್ನುವ ಕೆಟ್ಟ ಹಂಬಲ ಹೆಚ್ಚಾಗಿರುತ್ತದೆ. ಹೆತ್ತವರ ಇಂಥ “ಸೂಕ್ಷ್ಮ ದುರ್ವರ್ತನೆ”ಯು (micro-abuse) ಮಗುವಿನ ಸ್ವತಂತ್ರ ಬೆಳವಣಿಗೆಗೆ ಹಾಗೂ ಭಾವವಿಕಾಸಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ, ಒಡೆತನಕ್ಕೆ ಒಳಗಾದ ಮಕ್ಕಳು ಬೇರೆಯಾಗಿ ಸ್ವತಂತ್ರ ಬದುಕನ್ನು ಹುಡುಕುತ್ತ ದೂರವಾಗುವಾಗ ಮಕ್ಕಳನ್ನು ಬೆಳೆಸಿದ ತೃಪ್ತಿಗಿಂತ ಕಳೆದುಕೊಂಡ ವ್ಯಥೆ ಹೆಚ್ಚಾಗಿರುತ್ತದೆ. ನನಗೆ ಗೊತ್ತಿರುವ ಒಬ್ಬಳ ಮಗ ಸಕುಟುಂಬ ವಿದೇಶದಲ್ಲಿ ನೆಲೆಸಿದ್ದಾನೆ. ಎರಡು-ಮೂರು ದಿನಗಳಿಗೊಮ್ಮೆ ಆತ ಕರೆಮಾಡುವಾಗ ತಾಯಿಯ ಮೊದಲ ಮಾತು: ”ಏನೋ ನನ್ನನ್ನು ಮರೆತುಬಿಟ್ಟಿದ್ದೀಯಾ ಅಂದುಕೊಂಡಿದ್ದೆ. ಅಂತೂ ನನ್ನ ನೆನಪಾಯಿತಲ್ಲ?” ಹಾಗೆಂದು ವಿದೇಶಕ್ಕೆ ಆಹ್ವಾನಿಸಿದರೆ ಸುತರಾಂ ಒಲ್ಲೆಯೆನ್ನುತ್ತಾಳೆ.
ತಾಯ್ತಂದೆಯರು ಮಕ್ಕಳನ್ನು ನಿರಪೇಕ್ಷೆಯಿಂದ, ನಿರ್ವ್ಯಾಜ ಪ್ರೀತಿಯಿಂದ ಬೆಳೆಸಬೇಕು ಎಂದು ಯಾವ ಶಾಸ್ತ್ರದಲ್ಲಿದೆ?
251: ಮಗು ಬೇಕೆ? ಏಕೆ? – 4
ಮಗುವಿನ ಬಯಕೆಯ ಹಿಂದಿನ ನಾನಾ ಕಾರಣಗಳ ಒಳಹೊರಗನ್ನು ತಿರುವಿ ನೋಡುತ್ತಿದ್ದೇವೆ. ಇನ್ನು ಕೆಲವರಿಗೆ ಸಂತಾನದ ಕಾರಣ ಬಹಳಷ್ಟು ವಿಚಿತ್ರವಾಗಿದೆ. ಅದೇನೆಂಬುದನ್ನು ಈ ದಂಪತಿಯಿಂದಲೇ ತಿಳಿಯಿರಿ:
ಇವರಿಬ್ಬರ ಕಲಹಪೂರ್ಣ ದಾಂಪತ್ಯಕ್ಕೆ ನಾಲ್ಕುವರ್ಷ ತುಂಬಿದೆ. ವರ್ಷಗಳು ಹೆಚ್ಚಾದಷ್ಟೂ ಹಣಾಹಣಿ ಹೆಚ್ಚಾಗುತ್ತಿದೆ. ಒಬ್ಬರ ಮಾತು ಇನ್ನೊಬ್ಬರನ್ನು ಗಾಸಿಗೊಳಿಸುವುದರಲ್ಲಿ ಕೊನೆಗೊಳ್ಳುತ್ತಿದೆ. (ದಾಂಪತ್ಯದಲ್ಲಿ ಇಷ್ಟೊಂದು ನೋವು, ರೋಷ ಎಲ್ಲಿಂದ ಬರುತ್ತದೆ ಎನ್ನುವುದು ಕುತೂಹಲಕರ. ಇದರ ಹಿನ್ನೆಲೆಯನ್ನು ಇನ್ನೊಮ್ಮೆ ನೋಡೋಣವಂತೆ.) ದಾಂಪತ್ಯವನ್ನು ಉಳಿಸುವ ಕೊನೆಯ ಪ್ರಯತ್ನವಾಗಿ ಎರಡೂ ಕಡೆಯ ಹಿರಿಯರು ಸೇರಿ ಮದುವೆಗೆ ನಿಶ್ಚಯಿಸಿದಂತೆ ಮಗುವಿಗೂ ನಿಶ್ಚಯಿಸಿದ್ದಾರೆ. ಇದು ದಂಪತಿಗೂ ಸರಿಯೆನಿಸಿದೆ. ಮಗುವಿನ ಲಾಲನೆಪಾಲನೆಯಲ್ಲಿ ತಮ್ಮ ನೋವು ಕಡಿಮೆ ಆಗಬಹುದೆಂದು ಹಾಸಿಗೆ ಸೇರಿದ್ದಾರೆ. ಆದರೆ ಗೋಡೆಯ ಆಚೀಚೆ ಕಾಮವೆಲ್ಲಿ ಹುಟ್ಟೀತು? ಅದಕ್ಕಾಗಿ ನನ್ನಲ್ಲಿ ಬಂದಿದ್ದಾರೆ.
ಒಂದುವೇಳೆ ಈ ದಂಪತಿಗೆ ಪವಾಡವೆಂಬಂತೆ ಮಗುವಾಯಿತು ಎಂದಿಟ್ಟುಕೊಳ್ಳಿ. ಫಲಶ್ರುತಿ ಏನಾಗಬಹುದು? ಇದನ್ನು ಊಹಿಸುವ ಮುಂಚೆ ಮಗುವಿಗೆ ಎಂಥ ಪರಿಸರ ಬೇಕೆಂದು ನೆನಪಿಸಿಕೊಳ್ಳಿ. ಒಂದು ಕಡೆ ಅಮ್ಮನ, ಇನ್ನೊಂದು ಕಡೆ ಅಪ್ಪನ ಪ್ರೀತಿ ಬೇಕು; ಅಷ್ಟಲ್ಲದೆ, ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಪ್ರೀತಿಸುವುದೂ ಬೇಕು! ಯಾಕೆ? ಒಂದು ಸುಸಂಬಂಧವನ್ನು ಹೇಗೆ ಗುರುತಿಸಿ ತಳಕು ಹಾಕಿಕೊಳ್ಳಬೇಕು ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು ಹೀಗೆಯೇ – ಭವಿಷ್ಯದಲ್ಲಿ ಭದ್ರಬಾಂಧವ್ಯ ಕಟ್ಟಿಕೊಳ್ಳುವುದಕ್ಕೆ ಅತ್ಯಗತ್ಯವಾದ ಕಚ್ಚಾ ಸಾಮಗ್ರಿಯನ್ನು ಇದು ಒದಗಿಸುತ್ತದೆ. ಅದು ಬಿಟ್ಟು, ತಾಯ್ತಂದೆಯರು ಒಬ್ಬರನ್ನೊಬ್ಬರು ಹಣಿಯುತ್ತಿದ್ದರೆ? ತೀವ್ರಭಯ, ಅಭದ್ರತೆ ಹುಟ್ಟುತ್ತದೆ (“ಅಯ್ಯೋ, ನಾನು ಪ್ರೀತಿಸುವ ಒಬ್ಬರನ್ನು ಕಳೆದುಕೊಳ್ಳುತ್ತಿದ್ದೇನೆ!”) ಆಗ ಮಗುವು ಅವರ ಗಮನವನ್ನು ತನ್ನ ಸಂಕಟದೆಡೆಗೆ ಸೆಳೆಯಲು ನೋಡುತ್ತದೆ. ಕಿರುಚಿ ಅಳುವುದು, ಹೊಟ್ಟೆ/ತಲೆನೋವಿನ ನೆಪದಿಂದ ಶಾಲೆ ತಪ್ಪಿಸುವುದು ಇವೆಲ್ಲ ಶುರುವಾಗುತ್ತವೆ (ಪುಟ್ಟನೊಬ್ಬ ಹೇಳಿದ್ದು ಮನಸ್ಸು ಕಲಕುವಂತಿತ್ತು: ಶಾಲೆಗೆ ಹೋದಾಗ ಅಪ್ಪ ಅಮ್ಮನನ್ನು ಕೊಂದುಹಾಕಿದರೆ ಎಂಬ ಭಯದಿಂದ ಅಮ್ಮನನ್ನು ಅವುಚಿಕೊಂಡು ಮನೆಯಲ್ಲೇ ಇರುತ್ತಿದ್ದ.) ಬುದ್ಧಿ ಬೆಳೆದಂತೆ ಗಮನ ಸೆಳೆಯುವ ಚಟುವಟಿಕೆಯ ಧಾಟಿ ಬದಲಾಗುತ್ತದೆ. ಜಗಳಕ್ಕೆ ಅವಕಾಶವೇ ಸಿಗದಂತೆ ಸಲ್ಲದ ಬೇಡಿಕೆಗಳ ಸವಾಲುಗಳನ್ನು ತಂದಿಡುತ್ತದೆ. ಹೆತ್ತವರ ನಡುವೆ ಒಮ್ಮತ ಇಲ್ಲದಿರುವುದನ್ನು ಗಮನಿಸಿ, ಒಬ್ಬರ ವಿರುದ್ಧ ಇನ್ನೊಬ್ಬರ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೌಶಲ್ಯ ಕಲಿಯುತ್ತದೆ. “ಅಪ್ಪಾ, ಅಮ್ಮ ಚಾಕಲೇಟು ಕೇಳಿದ್ದಕ್ಕೆ ಹೊಡೆದಳು!” ಎನ್ನುವಾಗ, “ಹೌದೆ, ಬಾ ನಾನು ಕೊಡಿಸುತ್ತೇನೆ” ಹಾಗೂ, “ಅಮ್ಮಾ, ಮೊಬೈಲ್ ಮುಟ್ಟಿದ್ದಕ್ಕೆ ಅಪ್ಪ ಬಯ್ದ!” ಎನ್ನುವಾಗ, “ಹೌದೆ? ಅವರು ಬಯ್ಯುತ್ತಾರೆಂದು ಗೊತ್ತಿದ್ದರೂ ಅಲ್ಲೇಕೆ ಹೋಗ್ತೀಯಾ, ನನ್ನ ಮೊಬೈಲ್ ತೆಗೆದುಕೋ” ಮುಂತಾದ ಸಂಭಾಷಣೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ಮಗುವಿನ “ಕೃಪೆ”ಗೆ ಒಳಗಾಗುವ ಜಿದ್ದಿನಲ್ಲಿ ಪರಸ್ಪರರ ಬಗೆಗೆ ಅಸಹನೆಯ ಬೀಜ ಬಿತ್ತುತ್ತಾರೆ. ನಾನು ಚಿಕ್ಕವನಿರುವಾಗ ಒಬ್ಬರಿಂದ ಬಯ್ಯಿಸಿಕೊಂಡು ಇನ್ನೊಬ್ಬರ ಬಳಿ ಹೋದಾಗ ಸಿಗುತ್ತಿದ್ದ ಸಾಂತ್ವನದ ರೀತಿ ಇನ್ನೂ ನೆನಪಿದೆ: “ಹೌದಾ, ಅವರಿ/ಳಿಗೆ ಬಿಸಿಲಲ್ಲಿ ಕೂಡಿಸಿ ಮೊಸರನ್ನ ಹಾಕೋಣವಂತೆ, ಅಳಬೇಡ!” ಅದರರ್ಥ ನನಗಿನ್ನೂ ಸ್ಪಷ್ಟವಾಗಿಲ್ಲ; ಆದರೆ ಬೆಚ್ಚಗಿನ ದೇಹಾನುಭವದ ಜೊತೆಗೆ ನನ್ನನ್ನು ಬಯ್ದ ಹಿರಿಯರಿಗೆ ಶಿಕ್ಷೆ ಕೊಡಲಾಗುತ್ತದೆ ಎಂದು ಸಾಮಾಧಾನವೇನೋ ಆಗುತ್ತಿತ್ತು, ಆದರೆ ನನ್ನ ತಪ್ಪೇನೆಂಬುದು ಗೊತ್ತಾಗಲೇ ಇಲ್ಲ ! ಅಥವಾ ನನ್ನಲ್ಲಿ ತಪ್ಪೇ ಇರಲಿಲ್ಲವೇನೋ? ಇದರಿಂದಾದ ಗೊಂದಲವನ್ನು ಅರ್ಥಮಾಡಿಕೊಳ್ಳಲು ಸುಮಾರು ಕಾಲ ಹಿಡಿಯಿತು.
ಜಗಳದ ಪರಿಸರದ ದೀರ್ಘಾವಧಿ ಪರಿಣಾಮವೇನು? ಕೊಟ್ಟು ತೆಗೆದುಕೊಳ್ಳುವ ಸೌಹಾರ್ದದ ಮಾದರಿ ಇಲ್ಲದ ಮಗುವು ಮುಂದೆ ಕೇವಲ ಪಡೆಯಲು ಹೊರಡುತ್ತದೆಯೇ ಹೊರತು ಕೊಡುವುದನ್ನು ಕಲಿಯುವುದಿಲ್ಲ. ಹೀಗೆ, ಸುಳ್ಳುತನ, ಸ್ವಾರ್ಥಚಿಂತನೆ, ಕರಾಮತ್ತು ನಡೆಸಿ (manipulative behavior) ಲಾಭಗಾರಿಕೆ, ತಾಯ್ತಂದೆಯರ ದುಡಿಮೆಯ ದುರುಪಯೋಗ (ಉದಾ. ತರಬೇತಿಗೆ ದೊಡ್ಡ ಶುಲ್ಕ ತೆತ್ತು ಹೋಗದಿರುವುದು) ಮುಂತಾದ ವರ್ತನೆಗಳಿಗೆ ಹಾದಿಯಾಗುತ್ತದೆ.
ಮಗುವಿನ ಮೇಲೆ ಆಸೆ-ಅಪೇಕ್ಷೆಗಳನ್ನು ಹೇರುವುದು ಬಂದಾಗ ಇನ್ನೊಂದು ವಿಷಯ ನೆನಪಾಗುತ್ತದೆ. ಮಕ್ಕಳು ತಾಯ್ತಂದೆಯರಿಗೆ ವಿಧೇಯರಾಗಿರಬೇಕು ಎಂಬ ನಂಬಿಕೆ ನಮ್ಮಲ್ಲಿದೆ. ಇದನ್ನು ಪ್ರತಿಬಿಂಬಿಸಲು ಶ್ರೀರಾಮ, ಶ್ರವಣ ಕುಮಾರ ಮುಂತಾದವರ ಕತೆಗಳು ಪ್ರಚಲಿತವಾಗಿವೆ. ಅದೇನೋ ಸರಿ, ಆದರೆ, ವಿಧೇಯತೆಯು ಪ್ರೀತಿಯನ್ನು ವಿಸ್ತೀರ್ಣಗೊಳಿಸುವ ಅಂಗವಾಗಿ ಬರಬೇಕೇ ಹೊರತು ಕರ್ತವ್ಯ ಪ್ರಜ್ಞೆಯಿಂದಲ್ಲ. ಯಾಕೆಂದರೆ, ಒಂಚೂರೂ ಪ್ರೀತಿಯಿಲ್ಲದೆ ಕರ್ತವ್ಯವನ್ನು ನೆರವೇರಿಸಲು ಸಾಧ್ಯವಿದೆ! – ತಾಯ್ತಂದೆಯರು ಹೇಳುತ್ತಿರುವಾಗ ಮಕ್ಕಳು ಎಲ್ಲೋ ನೋಡುತ್ತ ಹ್ಞೂಂಗುಡುವುದು ಇದಕ್ಕೆ ಮಾದರಿಯ ದೃಷ್ಟಾಂತ. ವಿಪರ್ಯಾಸ ಎಂದರೆ, ಮಕ್ಕಳ ವಿಧೇಯತೆಗೆ ಒತ್ತುಕೊಟ್ಟಂತೆ ತಾಯ್ತಂದೆಯರು ಮಕ್ಕಳನ್ನು ನಿರ್ವ್ಯಾಜವಾಗಿ ಪ್ರೀತಿಸುತ್ತ ನಿರಪೇಕ್ಷೆಯಿಂದ ಬೆಳೆಸಬೇಕು ಎಂದು ಪ್ರತಿಬಿಂಬಿಸುವುದಕ್ಕೆ ನನಗೆ ಗೊತ್ತಿರುವಂತೆ ನೀತಿಕತೆಗಳಿಲ್ಲ! ಕಾರಣ ಸ್ಪಷ್ಟ: ಹೊಟ್ಟೆಯಲ್ಲಿ ಹುಟ್ಟಿದವರನ್ನು ಪ್ರೀತಿಸುವುದು ಹುಟ್ಟುಗುಣ ಎಂಬ ಸಾರ್ವತ್ರಿಕ ನಂಬಿಕೆಯಿದೆ. ಆದರೆ ವಾಸ್ತವ ಅದಕ್ಕೆ ವಿರುದ್ಧವಾಗಿದೆ. ಶಿಸ್ತು, ಶಾಲೆ, ಶ್ರೇಣಿ, ಸಾಮರ್ಥ್ಯ, ಸುಧಾರಣೆ, ಸಂಪಾದನೆ ಮುಂತಾದ ನೆಪದಲ್ಲಿ ಮಗುವನ್ನು ಹೀನೈಸುವ, ಶಿಕ್ಷಿಸುವ, ಹಾಗೂ ಪ್ರೀತಿಯನ್ನು ತಡೆಹಿಡಿಯುವ ತಾಯ್ತಂದೆಯರು ಎಲ್ಲೆಲ್ಲೂ ಇದ್ದಾರೆ. ಮಕ್ಕಳನ್ನು ಬೆಳೆಸುವ ವ್ಯಾವಹಾರಿಕ ಶೈಲಿಯು ಅವರ ಅಂತಃಸತ್ವವನ್ನು ಹೇಗೆ ಹೀರಿಬಿಡುತ್ತದೆ ಎಂಬುದನ್ನು ಎಲಿಸ್ ಮಿಲ್ಲರ್ ಮನಮುಟ್ಟುವಂತೆ ವಿವರಿಸಿದ್ದಾಳೆ (Alice Miller: The Drama of The Gifted Child). ಹಿರಿಯರ ಸ್ವಾರ್ಥಾಪೇಕ್ಷೆಗಳನ್ನು ಪೂರೈಸುವುದಕ್ಕಾಗಿ ಮನಸ್ಸಿಲ್ಲದ ವಿದ್ಯೆಯನ್ನು ಕಲಿಯುವುದರಿಂದ ಹಿಡಿದು ಮನಸ್ಸಿಲ್ಲದ ಸಂಗಾತಿಯನ್ನು ಮದುವೆಯಾಗುವ, ಹಾಗೂ ಮನಸ್ಸಿಲ್ಲದೆ ಮಗುವನ್ನು ಪಡೆಯುವ ತನಕ ಸಾಕಷ್ಟು ಜನರು “ವಿಧೇಯ”ರಾಗಿದ್ದಾರೆ. ಹಾಗೆ ನೋಡಬೇಕೆಂದರೆ ಶುದ್ಧ ಪ್ರೀತಿಯುಂಡು, ಅದನ್ನು ಹೆತ್ತವರಿಗೆ ಮರಳಿಸುವವರ ಮಕ್ಕಳೇ ಕಡಿಮೆ. ಯಾರೋ ಹೇಳಿದಂತೆ, ಮೊದಲ ಅರ್ಧಾಯುಷ್ಯವು ಹೆತ್ತವರ ಬಯಕೆಯನ್ನು ಪೂರೈಸುವುದರಲ್ಲಿ, ಹಾಗೂ ಇನ್ನರ್ಧ ಆಯುಷ್ಯವು ಮಕ್ಕಳ ಬಯಕೆಯನ್ನು ಪೂರೈಸುವುದರಲ್ಲಿ ಕಳೆದುಹೋಗುತ್ತದೆ ಎನ್ನುವಾಗ ತನಗಾಗಿ ಬದುಕಲು ಸಮಯಾವಕಾಶ ಎಲ್ಲಿದೆ? ಹಾಗಾಗಿಯೇ ಗಂಡಸರು ದಾಂಪತ್ಯದ ಪ್ರಣಯದಲ್ಲಿ ಬಹುಬೇಗ ಆಸಕ್ತಿ ಕಳೆದುಕೊಂಡು ಕರ್ತವ್ಯನಿಷ್ಠರಾಗಿ ಉಳಿದುಬಿಡುವುದೂ, ಹೆಂಡಂದಿರು ಅನ್ಯೋನ್ಯತೆಗೆ ಒತ್ತಾಯಿಸಿ ಜಗಳವಾಡಿ ಹತಾಶರಾಗುವುದೂ ಬಹಳ ಸಾಮಾನ್ಯವಾಗಿದೆ.
ನಮ್ಮನಮ್ಮ ಅಪೇಕ್ಷೆಗೆ ತಕ್ಕಂತೆ ಮಗುವನ್ನು ಬೆಳೆಸುವುದರಲ್ಲಿ ತಪ್ಪೇನಿದೆ ಎನ್ನುವವರಿಗೆ ಈ ಮಾತು: ಉದ್ಯಾನದಲ್ಲಿ ಕೆಲವು ಗಿಡಗಳನ್ನು ಕತ್ತರಿಸಿ ಪ್ರಾಣಿಗಳ ಆಕಾರ ಕೊಟ್ಟಿರುವುದನ್ನು ನೋಡಿರಬಹುದು. ಅವುಗಳನ್ನು ಆನೆ, ಜಿರಾಫ್ ಎಂದು ಗುರುತಿಸುತ್ತಾರೆಯೇ ಹೊರತು ಕತ್ತರಿಗೆ ಸಿಕ್ಕು ಮುಕ್ಕಾಗಿ ತನ್ನತನವನ್ನು ಕಳೆದುಕೊಂಡ ಗಿಡಗಳು ಎನ್ನುವುದಿಲ್ಲ. ಹೀಗೆ ಹಿರಿಯರ ಆಸೆಗೆ ಕಟ್ಟುಬಿದ್ದ ಮಕ್ಕಳು ಇತ್ತ ಸಹಜವಾಗೂ ಬೆಳೆಯಲಾಗದೆ, ಅತ್ತ ಹಿರಿಯರ ಅಪೇಕ್ಷೆಗೆ ಮೇರೆಗೂ ಬೆಳೆಯದೆ ಅಸ್ಮಿತೆಯನ್ನೇ ಮರೆತು ಎಡೆಬಿಡಂಗಿ ಆಗಿಬಿಡುತ್ತಾರೆ. ಇದು ನಮ್ಮ ಮಕ್ಕಳಿಗೆ ಬೇಕೆ?
ತಾಯ್ತಂದೆಯರ ಜಾಗದಲ್ಲಿ ಅಜ್ಜಿ-ತಾತಂದಿರ ಪ್ರೀತಿಯನ್ನು ಪಡೆದ ಮಕ್ಕಳು ಒಂದು ಮೂವತ್ತು ವರ್ಷ ಮುಂಚೆಯೇ ಅನಾಥರಾಗುತ್ತಾರೆ!
252: ಮಗು ಬೇಕೆ? ಏಕೆ? – 5
ಮಗು ಬೇಕೆನ್ನುವುದರ ಹಿಂದಿನ ನಾನಾ ಕಾರಣಗಳ ಬಗೆಗೆ, ಹಾಗೂ ಒತ್ತಾಯದ ತಾಯ್ತಂದೆತನದಿಂದ ಮಗುವಿನ ಮೇಲೆ ಆಗುವ ದುಷ್ಪರಿಣಾಮಗಳ ಬಗೆಗೆ ಮಾತಾಡುತ್ತಿದ್ದೇವೆ.
ಇತ್ತೀಚೆಗೆ ಸುದ್ದಿಯೊಂದರಲ್ಲಿ ಕೇಂದ್ರ ದತ್ತುಸ್ವೀಕಾರ ಸಂಪನ್ಮೂಲ ಸಂಸ್ಥೆಯು (ಕಾರಾ CARA) ತನ್ನಿಂದ ದತ್ತು ಪಡೆದುಕೊಂಡ ಮಕ್ಕಳನ್ನು ಕೆಲವರು ಹಿಂತಿರುಗಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ದೇಶದಾದ್ಯಂತ 1100ಕ್ಕೂ ಹೆಚ್ಚು ದತ್ತು ಮಕ್ಕಳನ್ನು ಸಂಸ್ಥೆಗೆ ಮರಳಿಸಲಾಗಿದೆ. ಕೌತುಕದ ಸಂಗತಿ ಏನೆಂದರೆ, ಮರಳಿದವರಲ್ಲಿ ಒಂದಂಶ ಸಾಮಾನ್ಯವಾಗಿದೆ. ಇವರೆಲ್ಲರೂ ದತ್ತುಹೋಗುವಾಗ ಆರು ವರ್ಷಕ್ಕೆ ಮೇಲ್ಪಟ್ಟವರು. ಆರು ವರ್ಷ ಆದವರಿಗೆ ಹೊಸ ಕುಟುಂಬದಲ್ಲಿ ಹೊಂದಾಣಿಕೆ ಕಷ್ಟಸಾಧ್ಯ ಎನ್ನುವುದಕ್ಕೆ ಆಧಾರವಿದೆ. ಯಾಕೆಂದರೆ, ಅಷ್ಟೊತ್ತಿಗೆ ಆಶ್ರಯ ಸಂಸ್ಥೆಯ ನಿರ್ದಿಷ್ಟ ವ್ಯಕ್ತಿಯೊಂದಿಗೆ ಭದ್ರಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಅಲ್ಲದೆ, ಆ ವಯಸ್ಸಿಗೆ ಅವರ ವ್ಯಕ್ತಿತ್ವದ ನೀಲಿನಕ್ಷೆ ಪೂರ್ತಿ ಸಿದ್ಧವಾಗಿರುತ್ತದೆ. ಇಂಥವರನ್ನು ದತ್ತು ಕುಟುಂಬಕ್ಕೆ ಕರೆತಂದರೆ ಬೆಳೆದ ಗಿಡವನ್ನು ಕಿತ್ತು ಇನ್ನೊಂದು ಕಡೆ ನೆಟ್ಟಂತಾಗುತ್ತದೆ. ಇನ್ನೊಂದು ಕಾರಣವೆಂದರೆ, ದತ್ತು ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ “ಎಲ್ಲರಂತೆ” ಬದುಕು ಎದುರಿಸುವುದನ್ನು ನಿರೀಕ್ಷಿಸಲಾಗುತ್ತದೆ. ಅತ್ಯಂತ ಉತ್ಕೃಷ್ಟ ಕಾಳಜಿ ಸಿಕ್ಕರೂ ಬಾಲ್ಯದ ಅನಾಥಪ್ರಜ್ಞೆಯಿಂದ ಹೊರಬರಲು ಕಷ್ಟಸಾಧ್ಯ; ಹಾಗೂ ವರ್ಷಗಟ್ಟಲೆ ಮನೋಚಿಕಿತ್ಸೆಯ ನಂತರವೂ ಹಳವಂಡ ಆಗಾಗ ಕಾಡುತ್ತಿರುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
ಪಾಲಿಗಿಲ್ಲದ ತಾಯ್ತಂದೆಯರು
ದತ್ತು ಮಕ್ಕಳ ವಾಪಸಾತಿಯ ವಿಷಯ ಯಾಕೆ ಎತ್ತುತ್ತಿದ್ದೇನೆ? ಇದಕ್ಕೆ ಕಾರಣವಿದೆ. ಒತ್ತಾಯದಿಂದ ಮಗುವನ್ನು ಮಾಡಿಕೊಂಡವರ ಪೈಕಿ ಸಾಕಷ್ಟು ದಂಪತಿಗಳು ಹೊಣೆಯನ್ನು ತಮ್ಮ ತಾಯ್ತಂದೆಯರಿಗೆ ವರ್ಗಾಯಿಸುತ್ತಾರೆ (“ಮೊಮ್ಮಗು ನಿಮಗೆ ಬೇಕಿತ್ತಲ್ಲವೆ? ನೀವೇ ನೋಡಿಕೊಳ್ಳಿ!”). ಮಗುವಿನ ಸಂಪರ್ಕದಲ್ಲಿ ಇದ್ದರೂ ಅದರ ಭಾವನೆಗಳ ಆಯಾಮದ ಹೊರಗೆ ಉಳಿಯುತ್ತಾರೆ. ಮಗುವು ಅಜ್ಜಿತಾತಂದಿರ ಭಾವಳತೆಯಲ್ಲಿ ಬೆಳೆಯುವುದು ಅದ್ಭುತ ಅನುಭವವೇ ಸರಿ. ಆದರೆ ಹೆಚ್ಚಿನವರು ಮೊಮ್ಮಕ್ಕಳನ್ನು ಪ್ರೀತಿಸಬಲ್ಲರೇ ವಿನಾ ಅವರ ಶಾರೀರಿಕ ಬೆಳವಣಿಗೆಯ ಜೊತೆಗೆ ಹೆಜ್ಜೆಯಿಡಲು ಆಗಲಿಕ್ಕಿಲ್ಲ (ಉದಾ. ಬಾಲಕನೊಬ್ಬ ಕ್ರಿಕೆಟ್ ಆಡಲು ಅಪ್ಪನ ಬದಲು ಅಜ್ಜನನ್ನು ಆರಿಸಿಕೊಂಡರೆ ಹೇಗಿರುತ್ತದೆ?). ಇನ್ನೊಂದು ಬಹುದೊಡ್ಡ ತೊಂದರೆಯೂ ಇದೆ. ಈ ದಂಪತಿಯನ್ನೇ ನೋಡಿ. ಇಬ್ಬರೂ ನಗರದಲ್ಲಿ ಉದ್ಯೋಗಸ್ಥರಾಗಿದ್ದಾರೆ. ನೋಡಿಕೊಳ್ಳಲು ಆಗದೆಂದು ತಮ್ಮ ಎರಡು ವರ್ಷದ ಎರಡನೆಯ ಮಗನನ್ನು ಅಜ್ಜಿ-ತಾತನ ಜೊತೆಗೆ ಬಿಟ್ಟಿದ್ದಾರೆ. ಹಳ್ಳಿಯ ಪರಿಸರದಲ್ಲಿ ಹುಲುಸಾಗಿ ಬೆಳೆದ ಅವನಿಗೆ ಆರು ತುಂಬಿದಾಗ ಶಿಕ್ಷಣಕ್ಕೆಂದು ತಾಯ್ತಂದೆಯರ ಜೊತೆಗೆ ಇರಲು ನಗರಕ್ಕೆ ಎತ್ತಂಗಡಿ ಮಾಡಲಾಗಿದೆ. ಸಹಪಾಠಿಗಳಿಂದ ಹಿಡಿದು ವಾಯುಮಾಲಿನ್ಯದ ತನಕ ಯಾವುದಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಕುಟುಂಬದವರ ಜೊತೆಗೆ ಸುಖಸಂಪರ್ಕವಂತೂ ಇಲ್ಲವೇ ಇಲ್ಲ. ಖಿನ್ನತೆಯಿಂದ ಒಂಟಿಯಾಗಿದ್ದಾನೆ. ನಿದ್ರೆಯಲ್ಲಿ ಬೆಚ್ಚಿಬಿದ್ದೆದ್ದು ಅಜ್ಜಿ-ತಾತ ಎಲ್ಲೆಂದು ಹುಡುಕುತ್ತಾನೆ.ತಾಯ್ತಂದೆಯರು ಶಿಸ್ತು ತರಲು ನೋಡುವಾಗ ತಿರುಗಿಬೀಳುತ್ತಾನೆ. ಪ್ರಕೃತಿಯಲ್ಲಿ ಬೆಳೆದ ಗಿಡವನ್ನು ಕಿತ್ತುತಂದು ಉದ್ಯಾನದಲ್ಲಿ ನೆಟ್ಟು, ನಗರದ ಇಷ್ಟದಂತೆ ಪ್ರಾಣಿಯನ್ನಾಗಿ ವಿನ್ಯಾಸಗೊಳಿಸುವ ಪ್ರಯತ್ನ ವಿಫಲವಾದಾಗ ಅನಿವಾರ್ಯವಾಗಿ ತಂದಲ್ಲಿಗೆ ಮರಳಿಸಲಾಗಿದೆ. ದತ್ತುಸಂಸ್ಥೆಗೆ ಮರಳಿದ ಮಕ್ಕಳು ನೆನಪಾದುದರ ಕಾರಣ ಗೊತ್ತಾಯಿತಲ್ಲ?
ಇದರೊಡನೆ ಇನ್ನೊಂದು ಕತೆ ನೆನಪಾಗುತ್ತಿದೆ. ಹಿರಿಯರೊಬ್ಬರು ಮಗಳು-ಅಳಿಯನ ನಡುವಿನ ಜಗಳವನ್ನು ಬಗೆಹರಿಸಲು ನನ್ನಲ್ಲಿ ಕರೆತಂದಿದ್ದರು. ಆಗಲೇ ಆಕೆ ಗರ್ಭವತಿಯಾಗಿದ್ದು ಬೆಳಕಿಗೆ ಬಂತು. ಸಮಸ್ಯೆಗಳು ಬಗೆಹರಿದು ಸ್ಥಿರಸಂಬಂಧವು ಬೇರೂರುವ ತನಕ ಮಗುವು ಬೇಡವೆಂದು ಸೂಚಿಸಿದೆ. ಮುಂದೇನಾಯಿತು ಗೊತ್ತಾಗಲಿಲ್ಲ. ಮೂರು ವರ್ಷದಮೇಲೆ ಆ ಹಿರಿಯರು ಸಿಕ್ಕಿದ್ದರು. ವಿಚಾರಿಸಿದಾಗ ಖುಷಿಯಿಂದ ಹೇಳಿಕೊಂಡರು: ಅವರೇ ನಿಂತು ಮಗಳಿಗೆ ವಿಚ್ಛೇದನ ಕೊಡಿಸಿ ಮರುಮದುವೆಯನ್ನೂ ಮಾಡಿಸಿದರಂತೆ. ಅವರ ತಂದೆತನವನ್ನು ಮೆಚ್ಚುತ್ತ ಗರ್ಭಧರಿಸಿದ್ದರ ಬಗೆಗೆ ವಿಚಾರಿಸಿದಾಗ ತಿಳಿದುಬಂದಿದ್ದು ಆಘಾತಕಾರಿಯಾಗಿತ್ತು. “ಓಹೋ ಅದಾ? ಗಂಡುಮಗುವಾಯಿತು. ಈಗ ಪುಟ್ಟನಿಗೆ ಎರಡೂವರೆ ವರ್ಷ. ಮದುವೆಗೆ ಮುಂಚೆ ಮಾತಾಡಿದಂತೆ ನಾನೂ ನನ್ನವಳೂ ಸಾಕುತ್ತಿದ್ದೇವೆ. ಮಗಳು ಗಂಡನೊಡನೆ ಹತ್ತಿರದಲ್ಲೇ ಮನೆ ಮಾಡಿದ್ದಾಳೆ. ಆಗಾಗ ಬಂದು ಪುಟ್ಟನನ್ನು ನೋಡಿಕೊಂಡು ಹೋಗುತ್ತಾಳೆ.” ನನಗೇಕೋ ಅರೆಕಾಲೀನ ಸಂದರ್ಶಕ ಪ್ರಾಧ್ಯಾಪಕರ ನೆನಪಾಯಿತು. ಅದಿರಲಿ, ಹೆಂಡತಿ ಮಾತ್ರ ಬೇಕು, ಆಕೆಯ ಮಗು ಬೇಡ ಎನ್ನುವ ಮನೋಭಾವದ, ತಾಯಿಮಕ್ಕಳನ್ನು ಸ್ವಾರ್ಥಕ್ಕಾಗಿ ಅಗಲಿಸಲು ಹೇಸದ ಗಂಡನ್ನು ಈ ಹಿರಿಯರು ಹೇಗೆ ಒಪ್ಪಿಕೊಂಡರೋ ಗೊತ್ತಾಗಲಿಲ್ಲ. ಅಜ್ಜಿ-ತಾತ ಮೊಮ್ಮಕ್ಕಳನ್ನು ತಮ್ಮ ಮಕ್ಕಳಂತೆ ಪೋಷಿಸುವುದರಲ್ಲಿ ಹಲವಾರು ನ್ಯೂನತೆಗಳು ಕಾಣಬಹುದು; ಆದರೆ ಒಂದು ಮಾತ್ರ ಭೀಕರವಾಗಿದೆ: ಮಕ್ಕಳು ಪೋಷಕರನ್ನು ಒಂದು ಮೂವತ್ತು ವರ್ಷ ಮುಂಚೆಯೇ ಕಳೆದುಕೊಳ್ಳುತ್ತಾರೆ! ಪ್ರೀತಿಯ ಸೆಲೆ ಬತ್ತಿದಮೇಲೆ ಹೊಸ ಸೆಲೆ ಸಿಕ್ಕೀತೆ? ಕಳೆದುಕೊಂಡದ್ದನ್ನು ಮಗು ಮಲತಂದೆಯಿಂದ, ಅಥವಾ ಅವನ ಹೆಂಡತಿಯಾಗಲು ತನ್ನನ್ನು ತೊರೆದವಳಿಂದ ಪಡೆಯಲಾದೀತೆ? ಇಂಥ ಮಕ್ಕಳು ಬೆಳೆಯುತ್ತ ಏನಾಗುತ್ತಾರೆ ಎಂಬುದಕ್ಕೆ ಈಇಪ್ಪತ್ತೊಂದರ ಯುವತಿಯ ಕತೆ ಕೇಳಿ: ಈಕೆಗೆ ಜನ್ಮ ಕೊಟ್ಟವರು ವಿಚ್ಛೇದನ ಪಡೆದು ಮರುಮದುವೆ ಆಗಿದ್ದಾರೆ. ಇವಳು ತಾಯಿಯ ಜೊತೆಗಿದ್ದಾಳೆ. ಇವಳೇ ಹೇಳುವಂತೆ, “ತಾಯಿಯ ಗಂಡನು” ಇವಳನ್ನು ಅಸಡ್ಡೆಯಿಂದ ಅಲಕ್ಷಿಸುತ್ತಿದ್ದಾನೆ. ಇತ್ತ ತಾಯಿ ಅಸಹಾಯಕ ಆಗಿದ್ದಾಳೆ. ಹೆತ್ತವಳ ಮೇಲೆ ಹೆಚ್ಚಿನ ಒತ್ತಡ ಹಾಕಲಿಕ್ಕಾಗದೆ, ಅಲ್ಲಿರಲೂ ಮನಸ್ಸಾಗದೆ ಹೊರವಸತಿಯಲ್ಲಿ ಒಂಟಿಯಾಗಿ ಇದ್ದಾಳೆ. ಸಿಗದ ಪ್ರೀತಿಯ ಜಾಗವನ್ನು ಮಾದಕ ದ್ರವ್ಯದಿಂದ ಭರ್ತಿಮಾಡುತ್ತ, ಚೂರು ಪ್ರೀತಿಯನ್ನು ಕೊಡಬಂದ ಹುಡುಗರ ಜೊತೆಗೆ ಮಲಗುತ್ತಿದ್ದಾಳೆ. ಇನ್ನೊಂದು ಪ್ರಸಂಗದಲ್ಲಿ ಸರಕಾರಿ ಕೆಲಸದಲ್ಲಿ ಇರುವ ಸ್ನಾತಕೋತ್ತರ ಪದವೀಧರೆ ಗಂಡನ ಹಿಂಸೆಗೆ ಶರಣುಹೋಗಿ ಅವನಿಚ್ಛೆಯಂತೆ ಗರ್ಭಿಣಿಯಾಗಿದ್ದಾಳೆ. ಹುಟ್ಟಿದ ಹೆಣ್ಣುಮಗು ಅಪ್ಪನ ಹಿಂಸೆಯನ್ನು ಸಹಿಸುತ್ತ ದೊಡ್ಡವಳಾಗಿದ್ದಾಳೆ. ಆಕೆಯ ವ್ಯಕ್ತಿತ್ವವೇ ಹೆಪ್ಪುಗಟ್ಟಿದಂತಾಗಿದೆ. ತನ್ನನ್ನು ಹಾಳುಮಾಡಿದ ಅಪ್ಪನನ್ನು ಆಕೆ ರಾಕ್ಷಸ ಎಂದೇ ಸಂಬೋಧಿಸುತ್ತಾಳೆ.
ಹಾಗಾದರೆ ದುರ್ಬಲ ದಾಂಪತ್ಯದಲ್ಲಿ ಹುಟ್ಟಿದ ಮಗುವಿಗೆ ಭವಿಷ್ಯವಿಲ್ಲವೆ? ಯಾಕಿಲ್ಲ, ಆದರೆ ಇಬ್ಬರ ಪೈಕಿ ಒಬ್ಬರ ನಿರ್ವ್ಯಾಜ ಪ್ರೀತಿ ಇದ್ದರೆ ಮಾತ್ರ ಇದು ಸಾಧ್ಯವಿದೆ. ಅದಕ್ಕೂ ಅಪರೂಪದ ದೃಷ್ಟಾಂತವಿದೆ: ಇವಳು ಬಹಿರಾಡಂಬರದ, ಆತ್ಮಾಸಕ್ತಿಯ (narcissistic), ಹೃದಯಹೀನ ಹುಡುಗನ ಚೆಲುವನ್ನು ಮೆಚ್ಚಿ ಮದುವೆಯಾದಳು. ಮದುವೆಯ ಹೊಸದರಲ್ಲಿ ಅವನ ಕೆಲವು ಅವಗುಣಗಳನ್ನು ಕುರಿತು ಚರ್ಚಿಸಲು ನನ್ನಲ್ಲಿ ಬಂದಿದ್ದಳು. ಆಗಾಕೆ ಗರ್ಭಿಣಿಯಾದರೆ ಏನು ಮಾಡಬಹುದು ಎಂದದ್ದಕ್ಕೆ, ಗಂಡನನ್ನು ಬಿಟ್ಟುಹಾಕಿ ಮಗುವನ್ನು ಒಂಟಿಪೋಷಕಳಾಗಿ ಬೆಳೆಸುವೆನೆಂದು ಹೇಳಿದಳು. ಮುಂದಿನ ವರ್ಷ ಆಕೆ ಗರ್ಭಿಣಿಯಾದಾಗ ನಿರೀಕ್ಷಿಸಿದಂತೆ ಗಂಡ ಅಹಂಭಾವದಿಂದ ದೂರವಾದ. ಆಕೆ ಏನು ಮಾಡಿದಳು? ಗರ್ಭ ಮುಂದುವರಿಸಲು ನಿರ್ಧರಿಸಿದಳು. ಈಗ ಗಂಡನಿಂದ ದೂರವಾಗಿ ಮಗುವನ್ನು ಇನ್ನಿಲ್ಲದಂತೆ ಬೆಳೆಸುತ್ತ ತಾಯ್ತನದ ತೃಪ್ತಿ ಅನುಭವಿಸುತ್ತಿದ್ದಾಳೆ. ಒಂದುವೇಳೆ ಮರುಮದುವೆ ಆಗುವ ಸಂದರ್ಭ ಬಂದರೆ ತನ್ನನ್ನೂ ಮಗುವನ್ನೂ ಸಮಾನವಾಗಿ ಪ್ರೀತಿಸುವವನನ್ನು ಒಪ್ಪಿಕೊಳ್ಳುತ್ತಾಳಂತೆ. ಅವನೇನಾದರೂ ಅಲಕ್ಷಿಸಿದರೆ ಅವನಿಂದರೂ ದೂರವಾಗಲು ಹಿಂಜರಿಯುವದಿಲ್ಲವಂತೆ. ಇವಳಷ್ಟು ಛಾತಿ ಯಾರಿಗಿದೆ?
ನನ್ನಂತೆ ನನ್ನ ಮಗು ಕಷ್ಟಪಡಬಾರದು ಎಂದುಕೊಂಡಿದ್ದರೆ ಒಳ್ಳೆಯ ತಾಯ್ತಂದೆಯಾಗುವುದು ನಿಮಗಿನ್ನೂ ಗೊತ್ತಿಲ್ಲ ಎಂದರ್ಥ!
253: ಮಗು ಬೇಕೆ? ಏಕೆ? – 6
ಮಗುವನ್ನು ಬಯಸದೆ ಬೇಕೆನ್ನುವುದರ ಹಿಂದಿನ ನಾನಾ ಕಾರಣಗಳ ಬಗೆಗೆ, ಹಾಗೂ ಒತ್ತಾಯದ ತಾಯ್ತಂದೆತನದಿಂದ ಮಗುವಿನ ಮೇಲೆ ಆಗುವ ದುಷ್ಪರಿಣಾಮಗಳ ಬಗೆಗೆ ಚರ್ಚಿಸುತ್ತಿದ್ದೇವೆ. ಹೆತ್ತವರು ಜವಾಬ್ದಾರಿ ಹೊರದಿದ್ದಾಗ ಮಕ್ಕಳು ಹೇಗೆ ಬೆಳೆಯಬಹುದು ಎಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇವೆ.
ಹೋದಸಲ ಅನಾಥಾಲಯದ ಬಗೆಗೆ ಬರೆಯುತ್ತಿರುವಾಗ ಅದಕ್ಕೆ ಸರಿಯಾಗಿ ತಿರುವು ಮುರುವಾದ ದೃಷ್ಟಾಂತ ನೆನಪಾಯಿತು: ಈ ದಂಪತಿ ನನ್ನೆದುರು ಜಗಳ ಆಡುತ್ತಿರುವಾಗ ಹೇಳಿಕೊಂಡರು; ಅವರ ಆರು ವರ್ಷದ ಮಗ ಓದುವುದರಲ್ಲಿ ದಡ್ಡನಷ್ಟೇ ಅಲ್ಲ, ವಿಪರೀತ ತುಂಟನೂ ಆಗಿದ್ದಾನೆ. ಇತರ ಹುಡುಗರನ್ನು ಹೊಡೆಯುತ್ತಾನೆ. ಶಾಲೆಯ ಆಪ್ತಸಲಹೆಗಾರ್ತಿಯು ಹುಡುಗನ ತಾಯ್ತಂದೆಯರ ಮನಸ್ತಾಪವನ್ನು ಗ್ರಹಿಸಿದ್ದಾಳೆ. “ನಿಮ್ಮ ಜಗಳ ನಿಲ್ಲಿಸಿ, ಮಗುವನ್ನು ಪ್ರೀತಿಸಲು ಕಲಿಯಿರಿ” ಎಂದು ನೇರವಾಗಿ ಹೇಳಲಿಕ್ಕಾಗದೆ ಮಗುವಿನ ಪರಿಸರ ಬದಲಾಗಬೇಕು ಎಂದು ಕ್ಲುಪ್ತವಾಗಿ ಸೂಚಿಸಿದ್ದಾಳೆ. ಅದನ್ನು ಅಪ್ಪ ತನಗೆ ಅನುಕೂಲವಾಗುವಂತೆ ಅರ್ಥೈಸಿಕೊಂಡು ಮಗನನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದ್ದಾನೆ. ಯಾಕೆ? ಅಲ್ಲಿ ಶಿಸ್ತನ್ನು ಚೆನ್ನಾಗಿ ಹೇಳಿಕೊಡುತ್ತಾರಂತೆ (ಹೀಗೆನ್ನುವಾಗ ಅವನ ಮುಖದಲ್ಲಿ ಶಿಕ್ಷಿಸುವ ಕಠೋರತೆಯಿತ್ತು). ಮಗ ವಸತಿ-ಶಾಲೆಯಲ್ಲಿ ಹೊಂದಿಕೊಳ್ಳಲಾಗದೆ ಏಟು ತಿಂದಿದ್ದಾನೆ. ತಾಯಿಯ ನೆನಪಾಗಿ ಯಾರಿಗೂ ಹೇಳದೆ ಬರಿಗೈಯಲ್ಲಿ ನೂರು ಕಿಲೋಮೀಟರ್ ದೂರ ಪಯಣಿಸಿ ಮನೆ ಸೇರಿದ್ದಾನೆ.
ಬಾಲ್ಯದಲ್ಲಿ ಶಿಸ್ತಿನ ಅಥವಾ ಉತ್ಕೃಷ್ಟ ಶಿಕ್ಷಣದ ಹೆಸರಿನಲ್ಲಿ ಕುಟುಂಬದಿಂದ ಹೊರಗಿರಿಸುವ ಯಾವುದೇ ಪ್ರಯತ್ನವು ಮೊದಲೇ ವಿರಹಕ್ಕೆ ಒಳಗಾದ (“ನನ್ನನ್ನು ಪ್ರೀತಿಸಬೇಕಾದವರು ದೂರವಾಗಿದ್ದಾರೆ”) ಮಕ್ಕಳನ್ನು ಅನಾಥ ಪ್ರಜ್ಞೆಗೆ (“ನನ್ನನ್ನು ಯಾರೂ ಪ್ರೀತಿಸಲಾರರು, ಯಾಕೆಂದರೆ ನಾನು ಪ್ರೀತಿಗೆ ಅನರ್ಹ”) ತಳ್ಳುತ್ತದೆ. ಇದು ಅವರ ವ್ಯಕ್ತಿತ್ವಕ್ಕೆ ಚೂರಿ ಹಾಕಿದಂತೆ. ಹಾಗಾಗಿ ಸುಭದ್ರತೆ, ಪ್ರೀತಿ-ವಾತ್ಸಲ್ಯಗಳನ್ನು ಸಾಕಷ್ಟು ಕೊಡಲು ಸೋತವರು ಬೋರ್ಡಿಂಗ್ ಶಾಲೆಗೆ ಸೇರಿಸುವುದು ಅನಾಥಾಲಯಕ್ಕೆ ಸೇರಿಸುವುದಕ್ಕಿಂತ ಭಿನ್ನವಾಗಿಲ್ಲ! ಇನ್ನು, ಮಕ್ಕಳಿಂದ ಶಿಸ್ತು ನಿರೀಕ್ಷಿಸುವ ಗಂಡಹೆಂಡಿರೇನು ಶಿಸ್ತಿನಿಂದ ಜಗಳ ಆಡುತ್ತಾರೆಯೆ? ಅನೇಕರು ತಪ್ಪು ತಿಳಿದಿರುವಂತೆ ಶಿಸ್ತು ಎಂದರೆ ಕಂಪ್ಯೂಟರ್ ಕಲಿಕೆಯಂತೆ ಶಾಲೆಯಲ್ಲಿ ಕಲಿಯುವ ವಿಷಯವಸ್ತುವಲ್ಲ. ಅದೊಂದು ಮೌಲ್ಯ. ಮೌಲ್ಯಗಳೆಲ್ಲ ಕುಟುಂಬದ ಸಂಸ್ಕಾರದೊಡನೆ ಬರುತ್ತವೆ. ಇದನ್ನು ಅರಿಯದವರು ಶಿಸ್ತು ತರಲು ಶಿಕ್ಷೆಯ ಪ್ರಯೋಗಕ್ಕೂ ಹಿಂಜರಿಯುವುದಿಲ್ಲ. ಪರಿಣಾಮ? ಇಂಥದ್ದೊಂದು ಪ್ರಕರಣದಲ್ಲಿ ಮಗ ಶಿಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದಾನೆ. ಇಡೀದಿನ ಸಿಗದವನು ಮರುದಿನ ಬೆಳಿಗ್ಗೆ ಮರಳಿದ್ದಾನೆ. ರಾತ್ರಿಯೆಲ್ಲ ಎಲ್ಲಿದ್ದ? ಪೊದೆಯೊಳಗೆ ಅಡಗಿಕೊಂಡಿದ್ದನಂತೆ. ಪ್ರಚಲಿತ ಕಲಿಕಾ ಪದ್ಧತಿಗೆ ಒಳಪಡಿಸುವ ಹುನ್ನಾರದಲ್ಲಿ ಮಕ್ಕಳ ಕೋಮಲ ಮನಸ್ಸನ್ನು ತುಳಿದುಬಿಡಲಾಗುತ್ತದೆ, ಆಗವರು ಕಲ್ಲುಮನದವರಾಗಿ, ಅಸಂಬದ್ಧವಾಗಿ ರೂಪುಗೊಳ್ಳುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಉಪಾಯವೇನು? ಭಾವನಾತ್ಮಕವಾಗಿ ದೂರವಾಗುವ ಪ್ರಸಂಗದಲ್ಲಿ ಹಿರಿಯರಲ್ಲಿ ಒಬ್ಬರಾದರೂ ಮಗುವಿನ ಬೆಂಬಲಕ್ಕೆ ಗಟ್ಟಿಯಾಗಿ ನಿಂತುಕೊಳ್ಳಬೇಕು. ಆದರೆ ಒತ್ತಾಯದಿಂದ ತಾಯಿಯಾದವರಲ್ಲಿ ಸಾಕಷ್ಟು ಮಹಿಳೆಯರು ಶಿಕ್ಷಿಸುವ ಗಂಡನ ವಿರುದ್ಧವಾಗಿ, ಹಾಗೂ ಮಗುವಿನ ಪರವಾಗಿ ತಮ್ಮದೇ ದಿಟ್ಟ ನಿಲುವನ್ನು ತಳೆಯದಷ್ಟು ಹೈರಾಣ ಆಗಿರುತ್ತಾರೆ.
ಬಯಸದೆ ಹುಟ್ಟಿಸಿದ ಮಗುವಿಗೆ ಯಾವ ಭವಿಷ್ಯವಿದೆ ಎಂದು ಸಾಕಷ್ಟು ತಿಳಿದಾಯಿತು. ಆದರೂ ಮಗುವೊಂದನ್ನು ಹುಟ್ಟಿಸಿದ್ದೀರಿ ಎಂದುಕೊಳ್ಳಿ. ಅದನ್ನೇನು ಮಾಡುವುದು?
ಮಗುವನ್ನು ಹೇಗೆ ಬೆಳೆಸಬೇಕು?
ಮಕ್ಕಳನ್ನು ಬೆಳೆಸುವುದರ ಬಗೆಗೆ ಒಂದು ರಾಶಿ ಮಾಹಿತಿಯಿದೆ, ಹಾಗೂ ತಜ್ಞರೂ ಇದ್ದಾರೆ. ಹಾಗಾಗಿ ಅದರ ಬಗೆಗೆ ಹೇಳುವುದಿಲ್ಲ. ಆದರೆ ತಾಯ್ತಂದೆಯರು ಮಕ್ಕಳೊಡನೆ ಇಟ್ಟುಕೊಳ್ಳುವ ಸಂಬಂಧ ಹೇಗಿರಬೇಕು ಎನ್ನುವುದರ ಬಗೆಗೆ ಕವಿ ಖಲೀಲ್ ಗಿಬ್ರಾನ್‌ನ (Kahlil Gibran) ಮಾತುಗಳನ್ನು ಉಲ್ಲೇಖಿಸಲೇಬೇಕು: “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಬದುಕು ಬಯಸುವ ಪ್ರತೀಕಗಳು. ಅವರು ನಿಮ್ಮ ಮೂಲಕ ಹುಟ್ಟುತ್ತಾರಷ್ಟೇ ಹೊರತು ನಿಮ್ಮಿಂದ ಹುಟ್ಟುವುದಿಲ್ಲ. ನಿಮ್ಮ ಜೊತೆಗೆ ಇರುತ್ತಾರೆಯೇ ಹೊರತು ನಿಮಗೆ ಸಂಬಂಧಪಟ್ಟವರಲ್ಲ. ಅವರಿಗೆ ನಿಮ್ಮ ಪ್ರೀತಿಯನ್ನು ಕೊಡಬಹುದೇ ವಿನಾ ನಿಮ್ಮ ವಿಚಾರಗಳನ್ನಲ್ಲ. ಯಾಕೆಂದರೆ ಅವರಿಗೆ ತಮ್ಮದೇ ವಿಚಾರಗಳಿವೆ. ಅವರ ಶರೀರಕ್ಕೆ ನೀವು ಆಶ್ರಯ ಕೊಡಬಹುದೇ ವಿನಾ ಅವರ ಚೈತನ್ಯಕ್ಕಲ್ಲ. ಯಾಕೆಂದರೆ ಅವರ ಚೈತನ್ಯವು ನಾಳೆಯ ವಿಶ್ವದಲ್ಲಿ ವಾಸಿಸಲಿದೆ. ನೀವದನ್ನು ಕನಸಿನಲ್ಲೂ ಕಾಣಲು ಸಾಧ್ಯವಿಲ್ಲ. ನೀವು ಅವರಂತಾಗಲು ಶ್ರಮಿಸಬಹುದೇ ವಿನಾ ಅವರನ್ನು ನಿಮ್ಮಂತೆ ಮಾಡುವ ಯತ್ನ ಬೇಡ. ಯಾಕೆಂದರೆ ಬದುಕು ಮುಂದೆ ಹೋಗುತ್ತದೆ, ನಿನ್ನೆಗಳ ಜೊತೆಗಲ್ಲ. ನೀವು ಬಿಲ್ಲು, ಮಕ್ಕಳು ನಿಮ್ಮಿಂದ ಚಿಮ್ಮುವ ಬಾಣಗಳು. ಬಾಣ ಅತಿದೂರ ಹೋಗಲು ಬಿಲ್ಲನ್ನು ಶಕ್ತಿಮೀರಿ ಬಾಗಿಸಿ ಕೈಬಿಡುವುದಷ್ಟೇ ನಿಮ್ಮ ಕೆಲಸ, ಅವುಗಳನ್ನು ಗುರಿಮುಟ್ಟಿಸುವುದಲ್ಲ.” ಎಂಥಾ ಅದ್ಭುತ ಮಾತುಗಳಿವು!
ಬೆಳೆಯುವ ಮಕ್ಕಳಿಗೆ ಸಾಧ್ಯವಾದಷ್ಟೂ ಅನುಕೂಲತೆಗಳನ್ನು ಒದಗಿಸಬೇಕು ಎಂದು ಕರುಣಾಮಯಿ ತಾಯ್ತಂದೆಯರು ಬಯಸುತ್ತಾರೆ. ಯಾಕೆ? ನನ್ನಂತೆ ನನ್ನ ಮಗು ಕಷ್ಟ ಅನುಭವಿಸಬಾರದು! ಈ ಮನೋಭಾವವು ಎಷ್ಟು ಸಮಂಜಸ ಎಂದು ಅರ್ಥಮಾಡಿಕೊಳ್ಳಲು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯನ್ನು ನೋಡಿ: ಆರೋಗ್ಯಕರ ಮನೋಭಾವನೆಯನ್ನು ಬೆಳೆಸಿಕೊಂಡು ತೃಪ್ತಿಕರವಾಗಿ ಬದುಕುತ್ತಿರುವ ವ್ಯಕ್ತಿಗಳ ಬಗೆಗೆ (ಇದರಲ್ಲೊಬ್ಬರು ಮುಂದೆ ಅಮೆರಿಕೆಯ ಅಧ್ಯಕ್ಷರಾಗಿದ್ದಾರೆ) ಕಳೆದ 75 ವರ್ಷಗಳ ಧೀರ್ಘ ಕಾಲದಿಂದ ನಡೆಸಿಕೊಂಡು ಬಂದಿರುವ ಈ ಅಧ್ಯಯನದಲ್ಲಿ ವಿಸ್ಮಯಕರ ಅಂಶವೊಂದು ಕಂಡುಬಂದಿದೆ. ಮಕ್ಕಳನ್ನು ಯಶಸ್ವೀ ವ್ಯಕ್ತಿಗಳಾಗಿ ರೂಪಿಸಲು ತಾಯ್ತಂದೆಯರಿಂದ ಎರಡೇ ಎರಡು ಅಂಶ ಸಾಕು. ಒಂದು, ನಿಸ್ವಾರ್ಥ ಪ್ರೀತಿ; ಇನ್ನೊಂದು – ನೀವು ನಂಬಲಿಕ್ಕಿಲ್ಲ – ಮನೆಗೆಲಸಗಳು! ನಿಮ್ಮ ಮಕ್ಕಳನ್ನು ಎಷ್ಟು ಬೇಗ, ಎಷ್ಟೆಲ್ಲ ವಿಧದ ಮನೆಗೆಲಸದಲ್ಲಿ, ಹಾಗೂ ಎಷ್ಟು ಹೆಚ್ಚಾಗಿ ತೊಡಗಿಸುತ್ತೀರೋ, ಅಷ್ಟು ಖಚಿತವಾಗಿ ಮಕ್ಕಳು ಜೀವನ ಕೌಶಲ್ಯ, ಬದುಕುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಪಡೆದುಕೊಳ್ಳುತ್ತಾರೆ. ಮಗುವನ್ನು ಪ್ರೀತಿಸಿ, ಆದರೆ ಅದನ್ನು ಪ್ರತ್ಯೇಕವಾಗಿ ಇಡದೆ ನಿಮ್ಮೊಡನೆ ಒಂದಾಗಿ ದುಡಿಯುವುದನ್ನು ಕಲಿಸಿ!
ಕೊನೆಯದಾಗಿ, ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದಕ್ಕೊಂದು ಉಪಮೇಯ: ನಿಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುತ್ತೀರಿ ಎಂದುಕೊಳ್ಳಿ. ಅದನ್ನು ನೀರು ಗೊಬ್ಬರ ಹಾಕಿ ಪೋಷಿಸುತ್ತೀರಿ. ಅಪಾಯಗಳಿಂದ ರಕ್ಷಿಸುತ್ತೀರಿ. ಸಸಿಯು ಬೆಳೆಯುತ್ತ ಗಿಡವಾಗಿ ನಿಮ್ಮ ಎತ್ತರ ಮೀರಿ ಆಗಸದತ್ತ ಚಾಚುತ್ತದೆ. ಬರಬರುತ್ತ ಅದು ಹರಡಿಕೊಳ್ಳುವ ದಿಕ್ಕೆಲ್ಲೋ, ಬೀಳುವ ನೆರಳೆಲ್ಲೋ, ಕೊಡುವ ಫಲವೆಲ್ಲೋ ಒಂದೂ ನಿಮ್ಮ ಕೈಯಲ್ಲಿರುವುದಿಲ್ಲ (ನಿಸಾರ್ ಅಹಮ್ಮದ್ ಅವರ ಕವನ ನೆನಪಾಗುತ್ತಿದೆ). ಈ ಮರದ ಪ್ರಯೋಜನ ನಿಮ್ಮನ್ನು ಬಿಟ್ಟು ಯಾರುಯಾರಿಗೋ ಆಗುವುದನ್ನು ತಡೆಯಲಾರಿರಿ. ಇದಕ್ಕೆ ಹುಟ್ಟುಹಾಕಿದ್ದು ಮಾತ್ರ ನಾನು ಎಂಬ ನಿಸ್ವಾರ್ಥ ನೆಮ್ಮದಿ ನಿಮ್ಮದಾಗುವಂತಿದ್ದರೆ ಮಾತ್ರ ಮಗುವಿಗೆ ಯತ್ನಿಸಿ. ಇದನ್ನು ಬಿಟ್ಟು ಬೇರೇನೇ ಉದ್ದೇಶವು ಮಗುವಿನ ಬೆಳವಣಿಗೆಗೆ ಹಾನಿಕಾರಕ. ಫಲಪ್ರದವಾಗಿ ಬೆಳೆಸುವ ಹಾಗಿದ್ದರೆ ಮಾತ್ರ ಮಗುವನ್ನು ಪಡೆಯಿರಿ. ಇಲ್ಲವಾದರೂ ಮಗು ಬೇಕೆ? ಏಕೆ?
“ನೀನು ಬೇಡವಾದರೂ ದಾಂಪತ್ಯ ಬೇಕು” ಎನ್ನುವುದು ದಾಂಪತ್ಯದೊಡನೆ ಕಟ್ಟಿಕೊಂಡಿರುವ ಸುಸಂಬಂಧದ ದ್ಯೋತಕ.
254: ಮಗು ಬೇಕೆ? ಏಕೆ? – 7
ಒತ್ತಾಯದ ತಾಯ್ತಂದೆತನದ ಬಗೆಗೆ ಮಾತಾಡುತ್ತಿದ್ದೇವೆ. ಮಕ್ಕಳಿಗೆ ಅಗತ್ಯವಾದ ಮಾರ್ಗದರ್ಶನಕ್ಕೆ ಸಿದ್ಧರಾಗದ ಹೊರತೂ ಮಗುವನ್ನು ಮಾಡಿಕೊಳ್ಳುವುದು ಬೇಡವೆಂದು ಹೇಳುತ್ತಿದ್ದೆ. ಮಗು ಬೇಕೆನ್ನುವ ದಿಢೀರ್ ನಿರ್ಧಾರದ ಬಗೆಗೂ ಅಕಸ್ಮಾತ್ತಾಗಿ ಗರ್ಭಧರಿಸುವುದರ ಬಗೆಗೂ ಯೋಚಿಸುತ್ತಿರುವಾಗ ಇನ್ನೊಂದು ಪರಿಕಲ್ಪನೆ ಹೊಳೆಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ದಾಂಪತ್ಯದೊಡನೆಯ ಸಂಬಂಧ
ಮದುವೆಯಾಗಲಿರುವ ಬಹುತೇಕ ಗಂಡುಹೆಣ್ಣುಗಳು ಮದುವೆಯಾದ ಸ್ವಲ್ಪಕಾಲ ಗರ್ಭಧಾರಣೆ ಬೇಡವೆಂದು ಮುಂಚೆಯೇ ಮಾತಾಡಿಕೊಳ್ಳುತ್ತಾರೆ. ನಂತರ ನಮಗಿಬ್ಬರಿಗೂ ಬೇಕು ಎನ್ನುವಾಗ ಸಂತಾನಕ್ಕೆ ಸಿದ್ಧರಾಗುತ್ತಾರೆ. ಇದರಲ್ಲೊಂದು ಸಂಕೀರ್ಣತೆಯಿದೆ: “ನಾವಿಬ್ಬರೂ” ಅಷ್ಟೇ ಅಲ್ಲ, “ನಮ್ಮ ದಾಂಪತ್ಯವೂ” ಗರ್ಭಧಾರಣೆಗೆ ಸಿದ್ಧವಾಗಿದೆಯೆ ಎಂದು ಖಚಿತ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಯಾಕೆ? ನಮ್ಮಿಬ್ಬರಲ್ಲಿ ಶರೀರ ಸಂಬಂಧ ನಡೆಯುತ್ತಿದೆ, ಇಬ್ಬರಿಗೂ ತೃಪ್ತಿ ಸಿಗುತ್ತಿದೆ, ಪರಸ್ಪರರ ಸಾನ್ನಿಧ್ಯದಲ್ಲಿ ಹಿತವೆನ್ನಿಸುತ್ತದೆ, ಹಾಗಾಗಿ ಇನ್ನು ಮಗುವಾಗಲು ಅಡ್ಡಿಯಿಲ್ಲ ಎನ್ನುವುದು ಭಾವನಾತ್ಮಕ ಕಾರಣವಷ್ಟೆ (emotional reasoning). ಅಂದರೆ, ನಾನು ಹೀಗೆ ಭಾವಿಸುವುದರಲ್ಲಿ ಸುಖವಿದೆ, ಹಾಗಾಗಿ ಈ ಭಾವನೆಗಳ ಜೊತೆಯಲ್ಲಿ ಬರುವ ಯೋಚನೆಗಳೂ ಸೂಕ್ತವಾಗಿವೆ ಎನ್ನುವ ತರ್ಕವಿಲ್ಲಿದೆ. ಆದರೆ ಭಾವನೆಗಳೇ ಬೇರೆ, ತರ್ಕವೇ ಬೇರೆ; ಎರಡೂ ಪರಸ್ಪರ ವ್ಯತಿರಿಕ್ತವಾಗಲು ಸಾಧ್ಯವಿದೆ! ಉದಾಹರಣೆಗೆ, ಈ ದಾಂಪತ್ಯದ ಹೊಸದರಲ್ಲಿ ಗಂಡನು ಹೆಂಡತಿಗೆ ಪ್ರೀತಿಯಿಂದ ಬಾಯಲ್ಲಿ ತುತ್ತುಹಾಕುತ್ತಿದ್ದ. ತನಗಿಷ್ಟವಾದ ಚಲಚ್ಚಿತ್ರಗಳಿಗೆ ಕರೆದೊಯ್ಯುತ್ತಿದ್ದ. ಆಗಾಕೆ ಅವನನ್ನು ನಂಬಿ, ತಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ ಎಂದು ಭ್ರಮಿಸಿ ಗರ್ಭಿಣಿಯಾದಳು. ಆಗಲೇ ಗಂಡನ ಕ್ಷುಲ್ಲಕತನ ತಲೆಯೆತ್ತಿದ್ದು. ಆಕೆ ಸುಸ್ತಾಗಿ ಒಂಟಿತನ ಬಯಸುವಾಗ ಅವನು ವಾರಗಟ್ಟಲೆ ಮೌನಿಯಾಗಿ ಹತ್ತಿರ ಬರುತ್ತಿರಲಿಲ್ಲ. ನೀನೊಪ್ಪದಿದ್ದರೆ ನಿನ್ನೊಡನೆ ದಾಂಪತ್ಯವೂ ಬೇಡ ಎನ್ನುವ ಧೋರಣೆ ಅವನಲ್ಲಿ ಎದ್ದುಕಾಣುತ್ತಿತ್ತು. ಅದನ್ನು ಪ್ರಶ್ನಿಸಿದಾಗ ಅರ್ಥಮಾಡಿಕೊಳ್ಳದೆ ಇನ್ನಷ್ಟು ದೂರವಾದ. ಈಗ ವಿಚ್ಛೇದನೆಯ ಮಾತಾಡುತ್ತಿದ್ದಾನೆ. ಅವಳ ಅಂದಾಜು ಎಲ್ಲಿ ತಪ್ಪಿತು? ಗಂಡನ ಮುಂಚಿನ ವರ್ತನೆಯು ಆಕೆಯನ್ನು ಉದ್ದೇಶಿಸಿ “ನೀನು ನನಗಿಷ್ಟ” ಎಂದಿತ್ತೇ ವಿನಾ “ನಿನ್ನೊಡನೆ ದಾಂಪತ್ಯ ನನಗಿಷ್ಟ” ಎಂದಿರಲಿಲ್ಲ. ನೀನು ಸರಿಯಿದ್ದೀಯಾ, ಅದಕ್ಕೇ ನಾನೂ ಸರಿಯಿದ್ದೇನೆ; ನೀನು ಸರಿಯಿಲ್ಲದಿದ್ದರೆ ನಾನೂ ಸರಿಯಿರುವುದಿಲ್ಲ ಎನ್ನುವ ಕ್ರಿಯೆ-ಪ್ರತಿಕ್ರಿಯೆಯ ಹಂತದಲ್ಲಿ ಅವನಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ, ನೀನು ಸರಿಯಿಲ್ಲದ್ದರೂ ಅಡ್ಡಿಯಿಲ್ಲ, ನಾನು ದಾಂಪತ್ಯಕ್ಕೆ ನಿಷ್ಠೆಯಿಂದ ಇರುತ್ತೇನೆ ಎನ್ನುವುದು ದಾಂಪತ್ಯದ ಬಗೆಗಿರುವ ಸುಸಂಬಂಧವನ್ನು ತೋರಿಸುತ್ತದೆ.
ದಾಂಪತ್ಯದೊಡನೆ ವೈಯಕ್ತಿಕ ಸಂಬಂಧಕ್ಕೆ ಇನ್ನೊಂದು ಉದಾಹರಣೆ ಎಂದರೆ ಪರಸಂಬಂಧಗಳಲ್ಲಿ ನೊಂದ ಸಂಗಾತಿಯ ಪ್ರತಿಕ್ರಿಯೆ. ಪರಸಂಬಂಧದಲ್ಲಿ ಒಬ್ಬರು ದಾಂಪತ್ಯದೊಡನೆಯ ಸಂಬಂಧವನ್ನು ಅಲಕ್ಷಿಸಿ ವೈಯಕ್ತಿಕ ಇಷ್ಟಕ್ಕೆ ಬೆಲೆಕೊಡುತ್ತಿದ್ದರೆ, ಇನ್ನೊಬ್ಬರು ದಾಂಪತ್ಯವನ್ನು ಮುರಿದುಕೊಳ್ಳುವ ಪ್ರತಿಕ್ರಿಯೆ ತೋರಿಸುವುದರ ಬದಲು ಉಳಿಸಿಕೊಳ್ಳಲು ಹೋರಾಡುತ್ತಾರೆ. ಇದು ದಾಂಪತ್ಯದೊಡನೆ ಇಟ್ಟುಕೊಂಡಿರುವ ಸುಸಂಬಂಧದ ಲಕ್ಷಣ. ನೀನು ಹೇಗೆ ನಡೆದುಕೊಂಡರೂ ನಾನು ದಾಂಪತ್ಯವನ್ನು ಕೆಡಿಸಿಕೊಳ್ಳಲಾರೆ ಎನ್ನುವ ಮೌಲ್ಯ ಇಲ್ಲಿದೆ. ಈ ಪರಿಕಲ್ಪನೆಯು ಇನ್ನೂ ಸ್ಪಷ್ಟವಾಗಬೇಕಾದರೆ ದಾಂಪತ್ಯವನ್ನು ಮಗುವೆಂದು ಕಲ್ಪಿಸಿಕೊಳ್ಳಿ. ಇಬ್ಬರೂ ಸೇರಿ ಮಗುವು ಹುಟ್ಟುವಂತೆ ದಾಂಪತ್ಯವು ಹುಟ್ಟುತ್ತದೆ. ಮಗುವಿಗೆ ಇರುವಂತೆ ದಾಂಪತ್ಯಕ್ಕೆ (ಗಂಡ-ಹೆಂಡತಿ ಇಬ್ಬರನ್ನೂ ಬಿಟ್ಟು) ಅದರದೇ ಅಸ್ತಿತ್ವವಿದೆ. ಗಂಡಹೆಂಡತಿ ಪರಸ್ಪರ ವಿಮುಖರಾದರೂ ಒಬ್ಬೊಬ್ಬರೇ ಮಗುವಿನೊಡನೆ ಪ್ರತ್ಯೇಕ ಸುಸಂಬಂಧವನ್ನು ಹೊಂದುವುದಕ್ಕೆ ಸಾಧ್ಯವಿರುವಂತೆ ಒಬ್ಬೊಬ್ಬರಾಗಿ ದಾಂಪತ್ಯದೊಡನೆ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಏಕಮುಖ ಬದ್ಧತೆ ಎನ್ನಿಸಿಕೊಳ್ಳುತ್ತದೆ. ಏಕಮುಖ ಬದ್ಧತೆಯು ಮಗುವಿನ ಪಾಲನೆ-ಪೋಷಣೆಗೆ ಪೂರಕವಲ್ಲ.
ದಾಂಪತ್ಯದೊಡನೆಯ ಸುಸಂಬಂಧವು ಕೆಲವೊಮ್ಮೆ ಅತಿರೇಕಕ್ಕೂ ಹೋಗುವುದಿದೆ. ನಾನು ಕಂಡ ಅನೇಕ ದಾಂಪತ್ಯಗಳಲ್ಲಿ ಗಂಡನಿಗೆ ಕಾಮನಿರಾಸಕ್ತಿ ಇದ್ದರೂ ಹೆಂಡತಿಯು ದಾಂಪತ್ಯಕ್ಕೆ ನಿಷ್ಠೆಯಿಂದ ಇದ್ದಾಳೆ. ಕೆಲವು ಸಂದರ್ಭಗಳಲ್ಲಿ ಗರ್ಭಿಣಿಯಾಗಲು ಒಂದೇ ಒಂದು ಸಂಭೋಗವನ್ನು ಬಯಸಿ, ಅದೂ (ಸಮಯಕ್ಕೆ ಸರಿಯಾಗಿ) ಆಗದಿರಲು ಕೃತಕ ಗರ್ಭಧಾರಣೆಗೆ ಹೋಗಿ, ಅದೂ ಯಶಸ್ವಿಯಾಗದೆ ನನ್ನಲ್ಲಿ ಬಂದ ದಂಪತಿಗಳಿದ್ದಾರೆ. ಇಲ್ಲಿ ಹೆಂಡತಿಯ ಅಹವಾಲು ಏನೆಂದರೆ, ನನಗೊಂದು ಮಗುವಾದರೆ ಸಾಕೇ ಸಾಕು, ತಾಯಿ-ತಂದೆ ಎರಡೂ ಆಗಿ ಮಗುವನ್ನು ನೋಡಿಕೊಳ್ಳುತ್ತೇನೆ. ಆಕೆಯ ಅಳಲನ್ನೂ ಅನಿವಾರ್ಯತೆಯನ್ನೂ ಒಪ್ಪೋಣ. ಆದರೆ ಒಬ್ಬರು ತಯಾರಿದ್ದು ಇನ್ನೊಬ್ಬರು ಇಲ್ಲವೆಂದರೆ ಹುಟ್ಟುವ ಮಗುವಿಗೆ ದಾಂಪತ್ಯದ ಆಸರೆ ಎಲ್ಲಿ ಸಿಕ್ಕಂತಾಯಿತು? ಈ ಮಗುವು ಮುಂದೆ ಹೇಗೆ ಬೆಳೆಯಬಹುದು ಎನ್ನುವುದು ಯಾರ ಊಹೆಗೂ ನಿಲುಕಬಹುದು. ಹಾಗಾಗಿ, ಇಬ್ಬರೂ ಪ್ರತ್ಯೇಕವಾಗಿ ತಯಾರಾಗದ ಹೊರತು, ಹಾಗೂ ಅದಕ್ಕಾಗಿ ದಾಂಪತ್ಯವನ್ನು ತಯಾರು ಮಾಡದ ಹೊರತು ಗರ್ಭಧಾರಣೆಗೆ ಯತ್ನ ಕೂಡದು. ಇಂಥ ದಂಪತಿಗೆ ಒಂದು ಪ್ರಶ್ನೆ ಕೇಳುತ್ತೇನೆ: “ಒಂದುವೇಳೆ ಸಂಗಾತಿಯು ಒಪ್ಪದಿದ್ದರೆ ನೀವೊಬ್ಬರೇ ಮಗುವಿನ ಹೊಣೆಹೊರಲು ತಯಾರಿದ್ದೀರಾ?” ಇಬ್ಬರೂ ಪ್ರತ್ಯೇಕವಾಗಿ ಒಪ್ಪಿಕೊಂಡರೆ ಅವರಿಗೆ ಹುಟ್ಟುವ ಮಗುವಿನ ಆರೈಕೆ ಉತ್ಕೃಷ್ಟವಾಗಿರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಗಂಡ ಮೀನಮೇಷ ಮಾಡಿದರೆ ಅವನ ತಂದೆತನವನ್ನು ಉದ್ದೇಶಿಸಬೇಕಾಗುತ್ತದೆ.
ಇನ್ನು ಕೆಲವರು ಮದುವೆಯಾದ ಹೊಸದರಲ್ಲೇ ಮಗುವನ್ನು ಬಯಸುತ್ತಾರೆ. ಇದರಲ್ಲೇನೂ ತಪ್ಪಿಲ್ಲ. ಆದರೆ ಆಸೆಯ ಜೊತೆಗೆ ಅವಸರ ಇದ್ದರೆ ಒಳವುದ್ದೇಶವು ಸಾಧುವಾಗಿರಲಿಕ್ಕಿಲ್ಲ. ಅದರಲ್ಲಂತೂ ಈಗಲೇ ಮಗು ಬೇಡವೆನ್ನುವವರು ರಾತ್ರೋರಾತ್ರಿ ನಿರ್ಧಾರ ಬದಲಿಸಿ ಮಗುವಿಗೆ ಒತ್ತಾಯ ತರುವುದೂ ಇದೆ. ಉದಾಹರಣೆಗೆ, ಈ ದಂಪತಿಯಲ್ಲಿ ಹೆಂಡತಿ ಪ್ರಬುದ್ಧಳು, ಗಂಡ ಬಾಲಿಶ ಸ್ವಭಾವದವನು. ಚಿಕ್ಕದನ್ನು ದೊಡ್ಡದನ್ನಾಗಿ ಮಾಡಿಕೊಂಡು ಹೆಂಡತಿ ಮರ್ಯಾದೆ ತೋರಿಸುತ್ತಿಲ್ಲವೆಂದು ತಕರಾರು ಮಾಡುತ್ತಿರುತ್ತಾನೆ. ಅಂಥದ್ದೊಂದು ಸಲ ಜಗಳವಾಗಿ ಹೆಂಡತಿ ತವರಿಗೆ ಹೋಗಿ ಮರಳಿದ ರಾತ್ರಿ ಗಂಡ ಹತ್ತಿರವಾದ. ಇವೊತ್ತು ಕಾಂಡೋಮ್ ಬೇಡವೆಂದ. ಯಾಕೆ? ಮಗುವಾದರೆ ನಮ್ಮ ಜಗಳ ನಿಲ್ಲುತ್ತದೆ ಎಂದ. ಆಕೆ ಅವನ ಮನಸ್ಸನ್ನು ಓದಿದಳು: “ನನ್ನಾಸೆಯನ್ನು ಪೂರೈಸುವುದು ನಿನ್ನ ಕರ್ತವ್ಯ. ನಮ್ಮ ದಾಂಪತ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ನಾನು ಯತ್ನಿಸುವುದರ ಬದಲು ನನ್ನ ಮಗು ಯತ್ನಿಸಲಿ.” ಈ ಮನೋಭಾವವು ಅಪರಿಪಕ್ವತೆಯ, ಅಪ್ರಬುದ್ಧತೆಯ ಸಂಕೇತ. ಇಂಥವರು ಸಮರ್ಥ ತಂದೆಯಾಗಲಾರರು.
ಕೆಲವರು ಮದುವೆಯಾದ ಹೊಸದರಲ್ಲಿ ಕಾಮಾವೇಶದಲ್ಲಿ ಮೈಮರೆಯುವಾಗ ಅಕಸ್ಮಾತ್ತಾಗಿ ಗರ್ಭಕಟ್ಟುವ ಸಾಧ್ಯತೆಯಿದೆ. ಒಂದುವೇಳೆ ಹಾಗಾದರೆ ಏನು ಮಾಡಬೇಕು? ನಿಮ್ಮ ತಾಯ್ತಂದೆಯರಿಗೆ ಸುದ್ದಿ ಮುಟ್ಟಿಸುವುದಕ್ಕಿಂತ ಮುಂಚೆ ನೀವಿಬ್ಬರೂ ಕೂತುಕೊಂಡು ಮುಕ್ತಮನಸ್ಸಿನಿಂದ ಚರ್ಚಿಸಿ. ನಾವಿಬ್ಬರೂ ಇದರ ಹೊಣೆಹೊರಲು, ಇದಕ್ಕಾಗಿ ಕಷ್ಟಪಡಲು, ಸುಮಾರು ಕಾಲ ವೈಯಕ್ತಿಕ ಬದುಕನ್ನು ಬಿಟ್ಟುಕೊಡಲು ತಯಾರಿದ್ದೇವೆಯೆ ಎಂದು ಹಲವು ಸಲ ಚರ್ಚೆ ನಡೆಯಲಿ. ಇಬ್ಬರ ಪೈಕಿ ಒಬ್ಬರಿಗೆ ಬೇಡವಾದರೂ ಸರಿ, ಪ್ರಸೂತಿ ತಜ್ಞರ ಬದಲು ಆಪ್ತಸಲಹೆಗಾರರನ್ನೋ ಮನೋಚಿಕಿತ್ಸಕರನ್ನೋ ಭೇಟಿಮಾಡಿ ಸಂಘರ್ಷವನ್ನು ಹಂಚಿಕೊಳ್ಳಿ. ನೀವಿಬ್ಬರೂ ಅಲ್ಲದೆ ನಿಮ್ಮ ದಾಂಪತ್ಯವೂ ಪ್ರತ್ಯೇಕವಾಗಿ ಸಿದ್ದರಿಲ್ಲದ್ದರೆ ಬೇಡದ ಮಗುವನ್ನು ಹುಟ್ಟಿಸಿ ಮುಂದೆ ಪಾಪಪ್ರಜ್ಞೆ ಅನುಭವಿಸುವುದರ ಬದಲು ಅದನ್ನು ತೆಗೆಸಿಹಾಕುವುದರ ಬಗೆಗೆ ಯೋಚಿಸಿ.
ತಪ್ಪು ನಂಬಿಕೆಗಳಿದ್ದರೆ ಮಗು ಮಾಡಿಕೊಳ್ಳುವ ಕಾರ್ಯವೂ ದುರ್ಭರ ಅನುಭವ ಕೊಡಲು ಸಾಧ್ಯವಿದೆ.
255: ಮಗು ಬೇಕೆ? ಏಕೆ? – 8
ಮಗು ಬೇಕೆನ್ನುವ ಅನಿಸಿಕೆಯ ಹಿಂದಿನ ಸೂಕ್ತತೆಯ ಬಗೆಗೆ ಚರ್ಚಿಸುತ್ತಿದ್ದೇವೆ. ಮಗುವಿಗೆ ಸೂಕ್ತ ವಾತಾವರಣ ಒದಗಿಸಬೇಕಾದರೆ ಗಂಡ-ಹೆಂಡತಿ ಇಬ್ಬರಿಗೂ ಮಗುವಿನ ಬಯಕೆ ಇರಬೇಕಲ್ಲದೆ ಒಬ್ಬೊಬ್ಬರೂ ಪ್ರತ್ಯೇಕವಾಗಿ ದಾಂಪತ್ಯದ ಸಂಬಂಧಕ್ಕೆ ನಿಷ್ಠರಾಗಿರಬೇಕು ಎಂದು ಹೇಳುತ್ತಿದ್ದೆ.
ಸಂಗಾತಿಯನ್ನು ಅವಲಂಬಿಸದೆ ದಾಂಪತ್ಯಕ್ಕೆ ನಿಷ್ಠೆಯಿಂದ ಇರುವುದು ಒಂದು ಮೌಲ್ಯವಾಯಿತು. ಈ “ಪ್ರತ್ಯೇಕ ನಿಷ್ಠೆ” ಎನ್ನುವ ಮೌಲ್ಯ ಹುಟ್ಟುವುದಕ್ಕೆ ಹಿನ್ನೆಲೆ ಇರುತ್ತದೆ. ಉದಾಹರಣೆಗೆ, ಇವನು ತನ್ನ ಅಪ್ಪ-ಅಮ್ಮ ಯಾವೊತ್ತಿಗೂ ಪರಸ್ಪರ ಮಾತಾಡದಿರುವ ದಾಂಪತ್ಯದಲ್ಲಿ ಹುಟ್ಟಿದ್ದ. ಆಗಾಗ ಅಮ್ಮ ಅವನನ್ನು ತಬ್ಬಿಕೊಂಡು ಅಳುವುದನ್ನೂ ನೋಡುತ್ತಿದ್ದ. ಅಪ್ಪ ತನ್ನನ್ನು ಯಾಕೆ ತಬ್ಬಿಕೊಳ್ಳುವುದಿಲ್ಲ ಎಂದು ಅನೇಕ ಸಲ ಚಿಂತಿಸಿದ್ದ. ದೊಡ್ಡವನಾದಂತೆ ಅಮ್ಮ-ಅಪ್ಪ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸುತ್ತಿದ್ದ. ತಾನು ಮದುವೆಯಾದರೆ ಹೆಂಡತಿಯನ್ನು ಬಿಟ್ಟುಹೋಗದೆ ಸದಾ ತಬ್ಬಿಕೊಂಡು ಇರುತ್ತೇನೆ ಎಂದು ಭಾವನಿರ್ಧಾರ ಮಾಡಿದ್ದ. ಈಗವನು ಮದುವೆಯಾಗಿದ್ದಾನೆ. ಹೆಂಡತಿಯ ಆತಂಕಭಾವದ ಹೊರತಾಗಿಯೂ ಅವರ ದಾಂಪತ್ಯ ಸುಭದ್ರವಾಗಿದ್ದು, ಮಗು ಹುಟ್ಟಿ ವಿಸ್ಮಯಕರವಾಗಿ ಅರಳುತ್ತಿದೆ.
ದಾಂಪತ್ಯಕ್ಕೆ ಪ್ರತ್ಯೇಕ ನಿಷ್ಠೆಯು ವ್ಯಕ್ತಿ ಪ್ರತ್ಯೇಕತೆಯ ಸಂಕೇತ ಕೂಡ. ನೀನು ಹೇಗಿದ್ದರೂ ನಾನು ನಾನಾಗಿಯೇ ಉಳಿಯುತ್ತೇನೆ ಎನ್ನುವುದು ಗಟ್ಟಿತನವನ್ನು ಸೂಚಿಸುತ್ತದೆ. ಇದು (ಸಂಗಾತಿಯು ಸರಿಯಿಲ್ಲದಿದ್ದರೂ) ಮಕ್ಕಳನ್ನು ಬೆಳೆಸಲು ಸೂಕ್ತ ವಾತಾವರಣಕ್ಕೆ ನಿರ್ಮಿತಿ ಹಾಕುತ್ತದೆ. ಉದಾಹರಣೆಗೆ, ನನ್ನ ಸಂಬಂಧಿ ಒಬ್ಬಳ ಗಂಡ ಸಿಕ್ಕಾಪಟ್ಟೆ ಕುಡಿಯುತ್ತಿದ್ದ. ಅದು ಆಕೆಯ ಮಕ್ಕಳಿಗಷ್ಟೇ ಅಲ್ಲ, ನೆರೆಯವರಿಗೂ ಕಿರಿಕಿರಿಯಾಗಿತ್ತು. ಅವಳೇನು ಮಾಡಿದಳು? ಮೊದಲು ಗಂಡನೊಡನೆ ಜಗಳ ಆಡುವುದನ್ನು ನಿಲ್ಲಿಸಿದಳು. ಅವನ ಕುಡಿತವನ್ನು “ಸ್ವಭಾವ”ವೆಂದು ಒಪ್ಪಿಕೊಂಡು ತಾನೇ ಹಣ ಕೊಡಲು ಶುರುಮಾಡಿದಳು. ಕುಡಿದು ಬಂದಾಗ ಕಿರಿಕಿರಿ ಅನಿಸಿದರೂ ಅವನ ಸ್ವಂತಿಕೆಯನ್ನು ಗೌರವಿಸಲು ಶುರುಮಾಡಿದಳು (“ನಾನು ಪ್ರೀತಿಸಿದವನು ದುರಭ್ಯಾಸವನ್ನು ಆಯ್ದುಕೊಂಡರೆ ಅವನನ್ನು ದೂರವಿಡುವುದು ನನ್ನ ಮೌಲ್ಯವಲ್ಲ”). ಆಗ ಗಂಡನ ಆಟಾಟೋಪ ಕಡಿಮೆಯಾಗಿ ಕುಡಿದರೂ ಶಾಂತವಾಗಿರುತ್ತಿದ್ದ. ಇನ್ನು, ಅವಳು ತನ್ನ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತ, ಆತ್ಮೀಯರ ಜೊತೆಗೆ ಮುಖ ತಪ್ಪಿಸಿಕೊಳ್ಳದೆ ಬೆರೆಯುತ್ತ, ಮಕ್ಕಳೊಡನೆ ಉಲ್ಲಾಸದಿಂದ ಬದುಕು ಕಟ್ಟಿಕೊಳ್ಳಲು ಶುರುಮಾಡಿದಳು. ಇದು ಮಕ್ಕಳ ಮೇಲೆ ಅದ್ಭುತ ಪ್ರಭಾವ ಬೀರಿತು. ಈಗವರು ತಾಯಿಯಂತೆ ಮೌಲ್ಯವಂತರಾಗಿದ್ದಾರೆ.
ಮಗು ಮಾಡಿಕೊಳ್ಳುವ ಭರದಲ್ಲಿ ನಮ್ಮಲ್ಲಿ ಇನ್ನೊಂದು ಅನಾಹುತ ಆಗುತ್ತಿದೆ. ಇಲ್ಲೊಂದು ವಿದ್ಯಾವಂತ ದಂಪತಿಯಲ್ಲಿ ಮಗು ಬೇಕೆಂದು ಮೂರು ಕಾಯುತ್ತಿದ್ದರೂ ಸಂಭೋಗವೇ ನಡೆದಿಲ್ಲ. ಕಾರಣ? ಗಂಡ ಪಕ್ಕಾ ಸಲಿಂಗ ಕಾಮಿ. ಹೆಣ್ಣಿನೊಡನೆ ತನಗಿದ್ದ ಸಾಮಾನ್ಯ ಕುತೂಹಲವನ್ನೇ ಕಾಮಾಸಕ್ತಿಯೆಂದು ಭ್ರಮಿಸಿ ಮದುವೆಯಾಗಿದ್ದಾನೆ. ಹೆಂಡತಿಯ ಜೊತೆಗೆ ಹೆಣಗಿದರೂ ಉದ್ರೇಕ ಬರುತ್ತಿಲ್ಲ. ಆದರೆ ಇತ್ತೀಚೆಗೆ ಸ್ನೇಹಿತನೊಬ್ಬನ ಜೊತೆಗೆ ಕಾಮಸಂಬಂಧ ಶುರುಮಾಡಿದ್ದಾನೆ. ಹೆಂಡತಿಗೆ ಇದೆಲ್ಲ ಗೊತ್ತಿದ್ದು, ಸಲಿಂಗಿಯು ಉಭಯಲಿಂಗಿ (bisexual) ಆಗುವ ಸಾಧ್ಯತೆಯ ಬಗೆಗೆ ನನ್ನಲ್ಲಿ ವಿಚಾರಿಸಿದಳು. ಯಾಕೆ? ಒಂದು ಮಗುವಾದರೆ ಸಾಕು, ಕಾಮಸುಖ ಬೇಕಾಗಿಲ್ಲ ಎಂದು ಮುಗ್ಧಭಾವದಿಂದ ಹೇಳಿದಳು. ಆಕೆಯಂತೆ ಆಕೆಯ ಗಂಡ ಕೂಡ ಕಾಮಸುಖ ಬಿಟ್ಟು ಇರಬಹುದಿತ್ತಲ್ಲವೆ, ಆದರೂ ಯಾಕೆ ಸ್ನೇಹಿತನ ಜೊತೆ ಸುಖಿಸುತ್ತಿದ್ದಾನೆ ಎಂದು ಪ್ರಶ್ನಿಸಿದಾಗ ಸತ್ಯ ಅರಿವಾಯಿತು. ಆಮೇಲೆ ಹಂಚಿಕೊಂಡಳು: ಫಲವಂತಿಕೆಯ ಕೇಂದ್ರವೊಂದಕ್ಕೆ ಹೋಗಿ ಗಂಡನ ವೀರ್ಯದಿಂದ ಗರ್ಭಧರಿಸಬೇಕು ಎಂದುಕೊಂಡಿದ್ದಳಂತೆ.
ಇನ್ನೊಂದು ದಂಪತಿಯ ಸಮಸ್ಯೆ ಪೂರ್ತಿ ಭಿನ್ನವಾಗಿದೆ. ಇವರಲ್ಲಿ ಗಂಡ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಕಾಮಸುಖವನ್ನು ತ್ಯಜಿಸಿದ್ದಾನೆ. ಕಾಮವು ಕೆಟ್ಟದ್ದು, ಹಾಗಾಗಿ ಸಂತಾನಕ್ಕಾಗಿ ಬಳಸಬಹುದೆ ವಿನಾ ಸುಖಕ್ಕಲ್ಲ ಎಂದು ನಂಬಿದ್ದಾನೆ. ಇದಕ್ಕೆ ಹೆಂಡತಿಯ ಅನುಮೋದನೆ ಇದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೂ ಕಾಮಸಂಬಂಧವಿಲ್ಲ. ಈಗ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಗಂಡನಿಗೆ ಕಾಮೋದ್ರೇಕ ಆಗುತ್ತಿಲ್ಲ. ಸಂದರ್ಶನಕ್ಕೆ ಇಬ್ಬರನ್ನೂ ಆಹ್ವಾನಿಸಿದಾಗ ಹೆಂಡತಿ ಒಳಬರಲು ಸವಿನಯವಾಗಿ ನಿರಾಕರಿಸಿ ಹೊರಗೇ ಕುಳಿತುಕೊಂಡಿದ್ದಾಳೆ – ಬಹುಶಃ ಸಂಭೋಗವು ಗಂಡನ ಕೆಲಸ ಅಂದುಕೊಂಡಿರಬೇಕು. ಇತ್ತ, ಗಂಡನ ನೀತಿ-ನಂಬಿಕೆಗಳು ಏನಿವೆ? ಗರ್ಭಕಟ್ಟುವ ತನಕ ಸಂಭೋಗದಲ್ಲಿ ತೊಡಗಬೇಕು, ಹಾಗೂ ನಂತರ ನಿಲ್ಲಿಸಬೇಕು. ಅವನು ಮುಂಚೆ ಹಸ್ತಮೈಥುನ ಮಾಡಿ ಸುಖಪಟ್ಟಿದ್ದು, ಅದರ ಹಿಂದೆ ತಪ್ಪಿತಸ್ಥ ಭಾವವಿದೆ.
ಕಾಮಾಸಕ್ತಿ ಇಲ್ಲದ ಸಂಭೋಗದ ಯತ್ನವು ಹಲವು ಯೋಚನೆಗಳಿಗೆ ಹಾದಿಯಾಗುತ್ತದೆ: ಒಂದು: ಕಾಮಕ್ರಿಯೆಗೆ ಜನನಾಂಗಗಳು ತಯಾರಾಗುವುದಕ್ಕೆ ಸಂಗಾತಿಯ ಬಗೆಗೆ ಕಾಮ ಕೆರಳಬೇಕು. ಆದರೆ ತಾನು ಕಾಮುಕ ವ್ಯಕ್ತಿಯೆಂದು ಒಪ್ಪಿಕೊಳ್ಳಲು ಧಾರ್ಮಿಕತೆ ವಿರುದ್ಧವಾಗಿ ಇಡೀ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ. ಎರಡು: ಕಾಮಕೂಟದಲ್ಲಿ ಸಂಭೋಗದ ಹೊರತಾದ ಮಹತ್ವಪೂರ್ಣ ವಿದ್ಯಮಾನಗಳು ನಡೆಯುತ್ತವೆ. ಪರಸ್ಪರ ಮುತ್ತಿಡುವುದು, ಮೈ ನೇವರಿಸುವುದು ಮುಂತಾದವುಗಳಲ್ಲೆಲ್ಲ ಒಂದು ವಿಶೇಷವಿದೆ: ಇವೆಲ್ಲ ಬಾಲ್ಯದಲ್ಲಿ ಅನುಭವಿಸಿದ ಹಿತಸ್ಪರ್ಶದ ಮರುಕಳಿಕೆಗಳಾಗಿವೆ; ಈಗಾಗುವ ಬೆಚ್ಚಗಿನ ಅನುಭವವು ಬಾಲ್ಯದ ಮರುಕಳಿಕೆಯೇ ಹೊರತಾಗಿ ಬೇರೇನಿಲ್ಲ. ಎಸ್ತೆರ್ ಪೆರೆಲ್ ಪ್ರಕಾರ, ಯಾರೊಬ್ಬರು ಬಾಲ್ಯದಲ್ಲಿ ಹೇಗೆ ಪ್ರೀತಿಸಲ್ಪಟ್ಟಿದ್ದಾರೆ ಎಂಬುದರ ಮೇಲೆ ಅವರು ಪ್ರಬುದ್ಧ ಕಾಮಸಂಬಂಧಗಳಲ್ಲಿ ಹೇಗೆ ಒಳಗೊಳ್ಳುತ್ತಾರೆ ಎಂದು ಹೇಳಬಹುದು! ಮೂರು: ಕಾಮಕೂಟಕ್ಕೆ ಸ್ಪಂದಿಸುವಾಗ ಸೆರೋಟೋನಿನ್, ಎಂಡೋರ್ಫಿನ್, ಆಕ್ಸಿಟೋಸಿನ್ ಮುಂತಾದ ರಾಸಾಯನಿಕಗಳು ಹುಟ್ಟುತ್ತವೆ. ವಿಚಿತ್ರವೆಂದರೆ, ಆಧ್ಯಾತ್ಮಿಕ ಹಾಗೂ ಭಕ್ತಿಯ ಪರಾಕಾಷ್ಠೆಯಲ್ಲಿ ಈ ರಸಸ್ರಾವಗಳೇ ಹುಟ್ಟಿ ಚರಮ ತೃಪ್ತಿಯ ಭಾವವನ್ನು ಕೊಡುತ್ತವೆ. ತಾಯಿಯು ಮಗುವನ್ನು ಎದೆಗೆ ತೆಗೆದುಕೊಂಡಾಗ ಇದೇ ಆಕ್ಸಿಟೋಸಿನ್ ಹಾರ್ಮೋನು ಸ್ತನಗಳಿಂದ ಹಾಲು ಉಕ್ಕಿಸುತ್ತದೆ. ನಾಲ್ಕು: ಕಾಮಕೂಟದ ನಂತರ ಉಳಿಯುವ ಅನುಭವವು ಹೆಣ್ಣುಗಂಡುಗಳಿಗೆ ಸಂತೃಪ್ತ ಭಾವವನ್ನು ಕೊಡುತ್ತವೆ. ಈ ಭಾವವು ಯಾವ ತಪಸ್ಸಿನ ಫಲಕ್ಕೂ ಕಡಿಮೆಯಿಲ್ಲ. ಇದು ಮುಖದ ಮೇಲೆ ತೇಜಸ್ಸಿನ ರೂಪದಲ್ಲಿ ಕಾಣುತ್ತದೆ. ಐದು: ಕಾಮಕೂಟದ ನಂತರ ಸಂತೃಪ್ತರಾದ ದಂಪತಿಗಳು ಅದನ್ನು ತಮಗೆ ಅರಿವಿಲ್ಲದಂತೆ ಮಗುವಿಗೆ ವರ್ಗಾಯಿಸುತ್ತಾರೆ. ಅವರು ಮಗುವನ್ನು ಹಿಡಿದುಕೊಳ್ಳುವ, ಅದರ ಕಣ್ಣಲ್ಲಿ ಕಣ್ಣಿಟ್ಟು ಸಂಭಾಷಿಸುವ ರೀತಿಯೇ ಭಿನ್ನವಾಗುತ್ತದೆ. ಈ ಭಾವವನ್ನು ಮಗುವು ಗ್ರಹಿಸಿ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಆಧಾರಗಳಿವೆ. ಉದಾ. ಗಂಡ-ಹೆಂಡತಿ ಮಗುವಿಗೆ ಕಾಣದಂತೆ ಕಾಮುಕವಾಗಿ ಮುತ್ತಿಟ್ಟು, ನಂತರ ಮಗುವಿನ ಕಡೆಗೆ ತಿರುಗಿದಾಗ, ಕೆಂಪೇರಿ ಅರಳಿದ ಮುಖಭಾವವನ್ನು ಮಗುವು ನಿಚ್ಚಳವಾಗಿ ಗ್ರಹಿಸುತ್ತದೆ. ಇದೇ ಮಗುವಿನಲ್ಲಿ ಕಾಮಪ್ರಜ್ಞೆಯ ಪ್ರೇರೇಪಿಸುತ್ತದೆ. ಇಂಥ ಭಾವಗಳ ಸಮಷ್ಟಿಯೇ ಮಗುವಿಗೆ ಮುಂದೆ ಕಾಮುಕ ವ್ಯಕ್ತಿಯನ್ನಾಗಿ ರೂಪಿಸುತ್ತದೆ.
ಈಗ ನಮ್ಮ ದಂಪತಿಗೆ ಬರೋಣ. ಆಧ್ಯಾತ್ಮಿಕ ಬದುಕು ನಡೆಸುವರು ಕಾಮಕೂಟದ ಅನ್ಯೋನ್ಯತೆಯ, ಆತ್ಮಾನುಭೂತಿಯ ಕ್ಷಣಗಳನ್ನು ಬಿಟ್ಟುಕೊಟ್ಟು ಕೇವಲ ಮೃಗೀಯ ಹಸಿಕಾಮಕ್ಕೆ ಓಗೊಟ್ಟರೆ ಮುಂದೆ ಹುಟ್ಟುವ ಮಗುವಿಗೆ ಯಾವ ಭಾವನೆಗಳನ್ನು ಕೊಡುತ್ತಿದ್ದಾರೆ? ಇಂಥ ಸ್ಥಿತಿಯಲ್ಲಿ ಬೆಳೆಯುವ ಮಕ್ಕಳು ಸಾಧು ಸ್ವಭಾವದವರಾಗಿ ಹಾಗೂ ಕರ್ತವ್ಯನಿಷ್ಠರಾಗಿ, ಬೆಳೆಯಬಹುದೇ ವಿನಾ ಭಾವನಾತ್ಮಕವಾಗಿ ಸಂಪೂರ್ಣವಾಗಿ ಹಾಗೂ ಸಮಗ್ರವಾಗಿ ಬೆಳೆಯಲಾರರು. ಆದುದರಿಂದ ಮಗುವಾಗಲು ಇಬ್ಬರೂ ಕಾಮಾಸಕ್ತರಾಗಬೇಕು, ಅದರಲ್ಲಿ ಮುಳುಗಿ, ಅನುಭವಿಸಿ, ಸಂತೃಪ್ತರಾಗಿ ಅದರ ಮೂಲಕ ತಮ್ಮ ಬಾಂಧವ್ಯವನ್ನು ಸಮೃದ್ಧಗೊಳಿಸಬೇಕು. ತಮ್ಮಿಬ್ಬರ ನಡುವೆ ಹುಟ್ಟುವ ಮಗುವು ತಮ್ಮ ಪ್ರೇಮ-ಕಾಮ-ಮಿಲನದ ದ್ಯೋತಕವೆಂದು ಮೆಚ್ಚಿ ಬಯಸಬೇಕು. ಆಗ ಮಾತ್ರ ಮಗುವು ಸಮೃದ್ಧವಾಗಿ ಬೆಳೆಯಬಲ್ಲದು.
ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿದು ಬದುಕುವ ಹಕ್ಕಿದೆ!
256: ಮಗು ಬೇಕೆ? ಏಕೆ? – 9
ಮಕ್ಕಳು ಬೇಕೇ ಬೇಡವೇ ಎಂಬುದರ ಬಗೆಗೆ ಚರ್ಚೆ ನಡೆಸುತ್ತಿದ್ದೇವೆ. ಮಗುವನ್ನು ಮಾಡಿಕೊಳ್ಳುವ ವಿದ್ಯಮಾನವು ತನ್ನ ಸಹಜತೆಯನ್ನು ಕಳೆದುಕೊಂಡಿರುವುದರ ಬಗೆಗೆ ಹೋದಸಲ ತಿಳಿದುಕೊಂಡೆವು. ಈಸಲ ಮಕ್ಕಳನ್ನು ಹೆತ್ತು ಸಲಹುವ ತಾಯ್ತನದ ಬಗ್ಗೆ ಮಾತಾಡೋಣ.
ತಾಯ್ತನ ಎಂದರೆ ಹೆಣ್ಣಿಗಿರುವ ಸೌಭಾಗ್ಯ, ಹಾಗೂ ತಾಯ್ತನ ಇಲ್ಲದೆ ಹೆಣ್ಣಿನ ವ್ಯಕ್ತಿತ್ವ ಪರಿಪೂರ್ಣ ಆಗಲಾರದು ಎನ್ನುವ ನಂಬಿಕೆ ಸಾರ್ವತ್ರಿಕವಾಗಿದೆ (ಇದನ್ನು ನಾನೂ ಸುಮಾರು ಕಾಲ ನಂಬಿದ್ದೆ). ಅದಕ್ಕಾಗಿಯೇ ಗಾದೆಗಳೂ ಹುಟ್ಟಿಕೊಂಡಿವೆ. ಉದಾಹರಣೆಗೆ, “ಪುಟ್ಟ ಹುಡುಗ ಕೇವಲ ಪುಟ್ಟ ಹುಡುಗ, ಆದರೆ ಪುಟ್ಟ ಹುಡುಗಿ ಪುಟ್ಟ ತಾಯಿ” ಎನ್ನುವುದನ್ನು ಕೇಳಿರಬಹುದು. ಗೊಂಬೆಯನ್ನು ತೊಡೆಯಮೇಲೆ ಮಲಗಿಸಿಕೊಂಡು ಆಟವಾಡುವ ಹುಡುಗಿಯರನ್ನು ನೋಡಿ ಇದು ಹುಟ್ಟಿಕೊಂಡಿರಬಹುದು. ವಾಸ್ತವವಾಗಿ, ಇದು ಆಕೆ ತನ್ನ ತಾಯಿಯ ಜೊತೆ ಗುರುತಿಸಿಕೊಳ್ಳುವ ರೀತಿಯಷ್ಟೆ. ಅವಳ ಈ ವರ್ತನೆಯು ತಾಯಿಯು ತನ್ನನ್ನು ಹೇಗೆ ನೋಡಿಕೊಂಡಿದ್ದಾಳೆ ಎನ್ನುವುದರ ಪ್ರತಿಫಲನವೇ ವಿನಾ ತಾಯ್ತನದ ಹೊಣೆಗಾರಿಕೆಗೆ ತಯಾರಾಗುತ್ತಿದ್ದಾಳೆ ಎಂದರ್ಥವಲ್ಲ.
ಜಗತ್ತಿನಾದ್ಯಂತ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಸರ್ವಸಾಮಾನ್ಯವಾಗಿ ಹೆತ್ತವಳದೇ ಆಗಿರುವುದು ಕಂಡುಬರುತ್ತದೆ. ಹಾಗಾಗಿ ಹೆಣ್ಣು, ತಾಯಿ ಎನ್ನುವ ಪದಗಳ ಜೊತೆಗೆ ಕೆಲವು ತಪ್ಪು ಅನ್ವರ್ಥಕಗಳೂ ಹರಿದುಬಂದಿವೆ: ಉದಾ. “ಒಳ್ಳೆಯ ತಾಯಂದಿರು ಮಕ್ಕಳನ್ನು ಬೆಳೆಸುವ ಕಾಲವೆಲ್ಲ ಖುಷಿಯನ್ನು ಅನುಭವಿಸುತ್ತಾರೆ.” ಇದರ ಒಳಾರ್ಥ ಏನು? ತಾಯ್ತನದ ತೃಪ್ತಿಯನ್ನು ಅನುಭವಿಸುತ್ತಿಲ್ಲ ಎಂದರೆ ಅವಳಲ್ಲೇನೋ ತೊಂದರೆಯಿದೆ!
ಇದು ಹೆಣ್ಣನ್ನು ಕೀಳಾಗಿ ನೋಡುವ (“ತಾಯ್ತನದಲ್ಲಿ ಸಂತೋಷ ಕಾಣದಿದ್ದರೆ ನಿನಗೆ ಬದುಕುವ ಅರ್ಹತೆಯಿಲ್ಲ!”), ದಮನಿಸುವ, ಹಾಗೂ ಆಕೆಯ ಬಾಯಿ ಮುಚ್ಚಿಸುವ ಪುರುಷ ಪ್ರಧಾನ ಮಂತ್ರವೇ ಹೊರತು ಇನ್ನೇನಲ್ಲ – ಒಂದುವೇಳೆ ಗಂಡಸರೂ ಹೆರುವ ಹಾಗಿದ್ದರೆ ಇಂಥ ಅಭಿಪ್ರಾಯ ಬರುತ್ತಿರಲಿಲ್ಲ. ಪ್ರತಿ ಹೆಣ್ಣಿಗೂ ತಾಯ್ತನ ಇಷ್ಟವೆಂದರೆ ಪ್ರತಿ ಗಂಡಸಿಗೂ ಹೊರಗೆ ಹೋಗಿ ದುಡಿಯುವುದು ಇಷ್ಟ ಎಂದಂತೆ!
ಹೆಣ್ಣಿನ ಮೇಲೆ ಹಿತಚಿಂತಕರೆಲ್ಲ ಹೇರುವ ಒತ್ತಾಯದ ಮಾತೊಂದು ಪ್ರಚಲಿತವಾಗಿದೆ: “ಬೇಗ ಮಗುವನ್ನು ಮಾಡಿಕೋ, ಇಲ್ಲದಿದ್ದರೆ ಆಮೇಲೆ ಅನುಭವಿಸಬೇಕಾಗಿ ಬರುತ್ತದೆ!” ಈ ಮಾತನ್ನು ಇಪ್ಪತ್ತೆಂಟು ದಾಟಿದ ಬಹುತೇಕ ಹೆಂಗಸರು ಕಿವಿ ತೂತಾಗುವ ತನಕ ಕೇಳಿಸಿಕೊಂಡಿದ್ದಾರೆ. ಸಮಸ್ಯೆ ಏನೆಂದರೆ, ಒಂದುಕಡೆ ತಾಯ್ತನವನ್ನು ತಪ್ಪಿಸಿಕೊಂಡರೆ ಏನೇನು ಅನುಭವಿಸಬೇಕಾಗುತ್ತದೆ, ಹಾಗೂ ಅದರಿಂದ ಏನೇನು ಲಾಭವಿದೆ ಎಂದು ವರ್ಣಿಸುವಾಗ ಇನ್ನೊಂದು ಕಡೆ ತಾಯ್ತನವನ್ನು ಬೆನ್ನಟ್ಟಿ ಬರುವ ತೊಂದರೆಗಳ ಬಗೆಗೆ ಯಾರೂ ತಿಳಿಸುವುದಿಲ್ಲ!
ಹೆಣ್ಣು ತಾಯ್ತನಕ್ಕೆ ರೂಪಾಂತರ ಹೊಂದುವಾಗ ಆಗುವ ಶಾರೀರಿಕ ಬದಲಾವಣೆಗಳ ಬಗೆಗೆ ಎಲ್ಲರಿಗೂ ಗೊತ್ತು. ಆದರೆ ಮಾನಸಿಕ ಹಾಗೂ ಭಾವನಾತ್ಮಕ ವೈಪರೀತ್ಯಗಳು ಹೊರಗೆ ಕಾಣುವುದಿಲ್ಲ. ಅನಿಯಮಿತ ಸಮಯ, ದಿನದ ಇಪ್ಪತ್ತನಾಲ್ಕೂ ತಾಸು ಸಿದ್ಧಳಿರುವ ಒತ್ತಡ, ಅನಿರೀಕ್ಷಿತ ಸಂದರ್ಭಗಳನ್ನು ಸೂಕ್ತವಾಗಿ ನಿರ್ವಹಿಸಲಾಗದ ಅಸಹಾಯತೆ – ಇವೆಲ್ಲ ಎಷ್ಟೊಂದು ಹಿಂಸಾದಾಯಕ ಎಂದರೆ, ಹೆಚ್ಚಿನ ತಾಯಂದಿರಿಗೆ ಮಗುವನ್ನು ಬಿಸಾಕಬೇಕು ಎನ್ನುವ ಅನಿಸಿಕೆ ಒಂದಲ್ಲ ಒಂದು ಸಲ ಬರುತ್ತದೆ ಎನ್ನುವುದನ್ನು ಸವೇಕ್ಷಣೆಗಳು ತಿಳಿಸುತ್ತವೆ. ಎಷ್ಟೋ ಹೆಂಗಸರಿಗೆ ತಾನು ಹೇಗಿದ್ದೆ, ಹೇಗಾದೆ ಎನ್ನುವುದೇ ಭಯಾನಕ ಅನುಭವ. ಹೀಗೆ ಹೆಂಗಸರು ತಾವು ತಾಯಿಯಾಗಿ ಸ್ವಾತಂತ್ರ್ಯ ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ. ಅನೇಕರು ತಮ್ಮನ್ನೇ ತಾವು ದ್ವೇಷಿಸುತ್ತಾರೆ. “ಇದು ನಾನಲ್ಲ!” ಎನ್ನುವ ನಾಸ್ತಿತ್ವದ (nihilism) ಅನಿಸಿಕೆ ಅನುಭವಿಸುತ್ತಾರೆ. ಹಾಗೆಂದು ಬಾಯಿಬಿಟ್ಟು ಹಂಚಿಕೊಂಡರೆ ಇತರರ ಪ್ರತಿಕ್ರಿಯೆ ಏನು? ಹಾಗೆಲ್ಲ ಅಂದುಕೊಳ್ಳಕೂಡದು ಎಂದು ಬಾಯಿ ಮುಚ್ಚಿಸಲಾಗುತ್ತದೆ. ಮಗುವನ್ನು ತಿರಸ್ಕರಿಸುವುದು ಸ್ವಾರ್ಥಪರತೆ, ಹುಚ್ಚುತನ, ಹೆಣ್ಣುತನದ ದಿವಾಳಿತನ ಮುಂತಾದ ಅಭಿಪ್ರಾಯಗಳು ಇತ್ತೀಚೆಗೆ ನಡೆಸಿದ ಅಂತರ್ಜಾಲದ ಸರ್ವೇಕ್ಷಣೆಗಳಲ್ಲಿ ಕಂಡುಬಂದಿವೆ.
ಇದರ ಫಲಶ್ರುತಿ ಏನು? ತಾಯ್ತನವು ಹೆಂಗಸರಿಗೆ ಅರ್ಥಪೂರ್ಣವಾದ ಅನುಭವವನ್ನು ಕೊಡುತ್ತದೆ, ಹಾಗಾಗಿ ಇದು ಆನಂದದಾಯಕ, ಪ್ರೀತಿಭರಿತ, ಆರಾಮದಾಯಕ ಹಾಗೂ ಹೆಮ್ಮೆಪಡುವಂಥದ್ದು ಎಂದು ಎಲ್ಲರೂ ನಂಬಿದ್ದಾರೆ. ಇದರಲ್ಲಿ ಸತ್ಯಾಂಶವಿದ್ದರೂ ಇದೇ ತಾಯ್ತನವು ತಲೆ ಚಿಟ್ಟುಹಿಡಿಸುವ ಸಂಕಷ್ಟಭರಿತ ಕರ್ತವ್ಯವಾಗಿದ್ದು, ಅತೀವ ಒತ್ತಡ, ನಿರಾಸೆ, ಹತಾಶೆ, ತಪ್ಪಿತಸ್ಥ ಭಾವ, ಅವಮಾನ, ನಿಷ್ಠುರತೆ ಮುಂತಾದ ವಿರೋಧ ಭಾವಗಳನ್ನೂ ತಂದೊಡ್ಡಬಲ್ಲದು ಎನ್ನುವುದು ಹೆಚ್ಚಿನವರಿಗೆ ತಿಳಿಸಿ ಕೊಡಲಾಗುತ್ತಿಲ್ಲ. ಗರ್ಭಧಾರಣೆಯ ಹಾಗೂ ಹೆರಿಗೆಯ ಮೂಲಕ ಶಾರೀರಿಕ ಅನನುಕೂಲತೆಯನ್ನೂ ತಿರುಗಾಟದ ಸ್ವಾತಂತ್ರವನ್ನೂ ಈಗಾಗಲೇ ಮೊಟಕು ಮಾಡಿಕೊಂಡಿರುವ ಹೆಂಗಸರಿಗೆ ಮಗುವಿನ ಜವಾಬ್ದಾರಿಯು ಹಿಂಸೆ ಎನಿಸುವುದು ಅನಿವಾರ್ಯ ಆಗಿಬಿಡುತ್ತದೆ.
ಇದರ ಪರಿಣಾಮ ಎರಡು ರೀತಿಗಳಲ್ಲಿ ಕಾಣುತ್ತದೆ. ಒಂದು: ಸಾಮಾನ್ಯ ಮನುಷ್ಯರಾದ ಅವರು ತಾಯ್ತನದ ವೈಭವೀಕರಿಸಲ್ಪಟ್ಟ ಚಿತ್ರಣದಂತೆ ಬದುಕಲು ಒದ್ದಾಡುತ್ತಾರೆ. ತಾಯ್ತನವು ತನಗೆ ಒದಗಿಬಂದ ಸೌಭಾಗ್ಯ ಎಂದು ನಂಬಲು ಒತ್ತಾಯ ತಂದುಕೊಳ್ಳುತ್ತಾರೆ. ಅದಾಗದಿರುವಾಗ ಅನುಭವಿಸಲೂ ಆಗದೆ, ಹಾಗೆಂದು ಬಾಯಿಬಿಟ್ಟು ಹೇಳಿಕೊಳ್ಳಲೂ ಆಗದೆ ನಿಕೃಷ್ಟಭಾವ ಹೊತ್ತು ಆತ್ಮಹೀನತೆಯಿಂದ ನರಳುತ್ತಾರೆ. ಎರಡು: ಒಲ್ಲದ ತಾಯ್ತನವು ಮಗುವಿನ ಮೇಲೆ ಅಲಕ್ಷ್ಯ, ಅತ್ಯಾಪೇಕ್ಷೆ, ಶಿಕ್ಷೆ, ಹಿಂಸೆ ಮುಂತಾದ ರೀತಿಗಳಲ್ಲಿ ಪ್ರತಿಫಲಿಸುತ್ತದೆ. ಪರಿಣಾಮವಾಗಿ, ಮಕ್ಕಳು ತಮ್ಮ ನಿರೀಕ್ಷೆಯ ಮಟ್ಟಕ್ಕೆ ಬೆಳೆಯದಿರುವಾಗ ಮಕ್ಕಳೇ ಬೇಡವೆನ್ನಿಸಿ, “ಯಾರ ತಾಯಿಯೂ ಆಗದೆ” ಉಳಿಯುವಂಥ ಪ್ರಸಂಗ ಬರುತ್ತದೆ. ಬೆಳೆದ ಮಕ್ಕಳು ದೂರವಾದಾಗ ಹೆಚ್ಚಿನ ತಾಯಂದಿರು ಒಂದಿಲ್ಲೊಂದು ರೀತಿ ಅತೃಪ್ತಿ ತೋರುವುದು ಇದೇ ಕಾರಣದಿಂದ. ಯಾವುದೇ ನಾಡಿನ ಹೆಣ್ಣನ್ನು ತೆಗೆದುಕೊಳ್ಳಿ, ಆಕೆಯು ತಾಯಿಯಾಗುವ ಸಂದರ್ಭದಲ್ಲಿ ವಿಪರೀತ ಕಷ್ಟ ಎದುರಿಸುತ್ತಿದ್ದು, ತಾಯಿಯಾದುದಕ್ಕೆ ವಿಷಾದ ಹಾಗೂ ಪಶ್ಚಾತ್ತಾಪ ಅನುಭವಿಸುತ್ತ, ಅದನ್ನು ಮರೆಮಾಚುತ್ತ ಇರುತ್ತಾಳೆ ಎಂದು ಒರ್ನಾ ದೊನ್ಯಾತ್ ಎಂಬ ಲೇಖಕಿ ತನ್ನ ವಿಸ್ತಾರವಾದ ಅಧ್ಯಯನವನ್ನು ಒಳಗೊಂಡ ಪುಸ್ತಕದಲ್ಲಿ ವಿವರಿಸಿದ್ದಾಳೆ (Orna Donath: Regretting Motherhood: A Study). ಸಾವಿರಾರು ತಾಯಂದಿರ ನಾನಾ ಬವಣೆಗಳೂ, ತಾಯಿಯಾಗಿ ಕಳೆದುಕೊಂಡಿರುವ ಸದವಕಾಶಗಳಿಗೆ ವಿಷಾದ-ಪಶ್ಚಾತ್ತಾಪಗಳೂ ಇದರಲ್ಲಿವೆ. ಈ ಪ್ರಕರಣಗಳು ದೇಶಕಾಲಗಳನ್ನು ಮೀರಿ ಹೆಂಗಸರ ದಮನಿಸ್ಪಟ್ಟ ಧ್ವನಿಗಳನ್ನು ಪ್ರತಿಧ್ವನಿಸುತ್ತವೆ.
ಹೀಗೆ, ಪ್ರತಿ ತಾಯ್ತನದ ಕತೆಯ ಹಿಂದೆ ಕಳೆದುಕೊಂಡ ವ್ಯಥೆಯೂ ಇದೆ. ಆದರೆ ಹೀಗಾಗಬೇಕಾಗಿಲ್ಲ. ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿಯುವ ಹಕ್ಕಿದೆ. ಉದ್ಯೋಗಸ್ಥಳಾಗಿ, ಸಂಶೋಧಕಿಯಾಗಿ, ನೃತ್ಯಗಾತಿಯಾಗಿ, ಪರ್ವತಾರೋಹಿಯಾಗಿ, ಸೈನಿಕಳಾಗಿ, ಪ್ರವಾಸಿಯಾಗಿ ಬದುಕುವ ಹಕ್ಕಿದೆ. ಇದನ್ನು ಒತ್ತಾಯದ ತಾಯ್ತನವು ಖಂಡಿತವಾಗಿಯೂ ಕಸಿದುಕೊಳ್ಳುತ್ತದೆ. ಇನ್ನು, “ಮಾತೃದೇವೋಭವ” ಎನ್ನುವುದು ಮಕ್ಕಳನ್ನು ಉದ್ದೇಶಿಸಿ ಹೇಳಿರುವುದೇ ವಿನಾ ಇದು ತಾಯಂದಿರಿಗೆ ಅನ್ವಯಿಸಬೇಕಾಗಿಲ್ಲ. ತಾಯಂದಿರೇ, ನೀವು ಪಡಲಾರದ ಪಾಡು ಪಟ್ಟಿದ್ದೀರಿ. ನಿಮ್ಮ ನಿರ್ವಹಣೆಗೆ ಯಾವ ನೋಬೆಲ್ ಬಹುಮಾನವೂ ಸಾಟಿಯಲ್ಲ. ಆದರೆ ಮೂಲತಃ ನೀವು ಇತರ ಮನುಷ್ಯರಂತೆಯೇ ಸಹಜವಾಗಿದ್ದೀರಿ. ಮಹಾತಾಯಿಯ ಅಥವಾ ಮಾತೃದೇವತೆಯ ಕಿರೀಟದ ಭಾರ ಹೊತ್ತು, ತೃಪ್ತಿಯ ಮುಖವಾಡ ಧರಿಸಬೇಕಾಗಿಲ್ಲ. ತಾಯ್ತನ ಭಾರವಾದರೆ ನನಗೆ ಭಾರವಾಗಿದೆ, ಸಹಿಸಲು ಅಸಾಧ್ಯವಾಗಿದೆ ಎಂದು ಘೋಷಿಸಿಕೊಳ್ಳುವ ಹಕ್ಕು ನಿಮಗಿದೆ!
ಹೊಸ ಮಕ್ಕಳನ್ನು ಹುಟ್ಟಿಸುವುದರ ಬದಲು ನೋಡಿಕೊಳ್ಳುವ ಕೈಗಳು ಬದಲಾಗಲಿ ಎನ್ನುವುದು ನಿಸ್ವಾರ್ಥ ನೀತಿ!
257: ಮಗು ಬೇಕೆ? ಏಕೆ? – 10
ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿದು ಬದುಕುವ ಹಕ್ಕಿದೆಯೆಂದು ಹೋದಸಲ ಹೇಳುತ್ತಿದ್ದೆ. ಇತ್ತೀಚೆಗೆ ಇದರ ಬಗೆಗೆ ವ್ಯಾಪಕವಾಗಿ ಅರಿವು ಮೂಡುತ್ತಿರುವುದರಿಂದ ಮಗುವನ್ನು ಹೊಂದುವುದರ ಬಗ್ಗೆ ಪ್ರಸ್ತುತ ಸಮಾಜದ ಯುವಕ-ಯುವತಿಯರು ಏನು ಮನೋಭಾವ ಹೊಂದಿದ್ದಾರೆ ಎಂಬುದನ್ನು ಈಸಲ ನೋಡೋಣ.
ನನ್ನ ಬಂಧುವೊಬ್ಬಳು 34 ವರ್ಷದವಳು, ವಿವಾಹಿತೆ. ಮದುವೆಗೆ ಮುಂಚೆಯೇ (ಅಂದಹಾಗೆ ಇದು ಹಿರಿಯರಿಂದ ವ್ಯವಸ್ಥೆಗೊಂಡಿದ್ದು) ಇವಳೂ ಭಾವೀ ಗಂಡನೂ ಮಾತಾಡಿಕೊಂಡು ನಿರ್ಧರಿಸಿದ್ದಾರೆ: ತಮಗೆ ಮಗು ಬೇಡ. ಒಂದುವೇಳೆ ಆಗುವುದಾದರೆ ಇಬ್ಬರೂ ಒಮ್ಮತದಿಂದ ನಿರ್ಧರಿಸಿರಬೇಕು. ಹಾಗಾಗಿ ಒಂಬತ್ತು ವರ್ಷಗಳಾದರೂ ಇವರಲ್ಲಿ ಮಗುವಿನ ಮಾತೇ ಬಂದಿಲ್ಲ. ಇವಳೊಡನೆ ನಡೆದ ಸಂದರ್ಶನದ ವಿವರವನ್ನು ನಿಮ್ಮ ಮುಂದಿಡುತ್ತಿದ್ದೇನೆ:
ಪ್ರಶ್ನೆ: ಮಗು ಬೇಡವೆಂಬ ನಿಮ್ಮ ನಿರ್ಧಾರಕ್ಕೆ ಹಿನ್ನೆಲೆಯೇನು?
ಉತ್ತರ: ಜಗತ್ತಿನಲ್ಲೇ ಬಹುಶಃ ಅತಿಹೆಚ್ಚಿನ ಜನಸಾಂದ್ರತೆ ಇರುವ ದೇಶ ನಮ್ಮದು. ಜನಸಂಖ್ಯೆಯು ಪ್ರತಿಸಲ ದ್ವಿಗುಣವಾಗುತ್ತಿರುವಾಗ ಆಹಾರದ ಮೂಲಗಳು ಕ್ರಮೇಣ ಹೆಚ್ಚುತ್ತಿವೆಯಷ್ಟೆ. ಇದರೊಡನೆ ಅರಣ್ಯನಾಶ, ಪರಿಸರ ಮಾಲಿನ್ಯ, ಸಿಹಿನೀರಿನ ಕೊರತೆ ಇತ್ಯಾದಿ ಸೇರಿಸಿ ನೋಡಿದರೆ ನಾಳಿನ ಮಕ್ಕಳು ಶುದ್ಧ ಗಾಳಿ ಹಾಗೂ ಆಹಾರಕ್ಕಾಗಿಯೇ ಪರದಾಡುವ ಪ್ರಸಂಗವಿದೆ ಎಂದೆನಿಸುತ್ತದೆ. ಇಂಥದ್ದರಲ್ಲಿ ಮಗುವನ್ನು ಹುಟ್ಟಿಸದಿರುವುದೇ ವಿಶ್ವಶಾಂತಿಗೆ ನನ್ನ ಪುಟ್ಟ ಕೊಡುಗೆ ಎಂದುಕೊಳ್ಳುತ್ತೇನೆ. ನಮ್ಮ ಸ್ನೇಹಿತರದೂ ಇದೇ ಅಭಿಮತವಿದೆ.
ಪ್ರ: ಮಗು ಇಲ್ಲದಿದ್ದರೆ ಬದುಕಿನಲ್ಲಿ ಏನು ಸಾಧಿಸಬೇಕು ಎಂದುಕೊಂಡಿದ್ದೀರಿ?
ಉ: ನಾನು ವೃತ್ತಿಪರಳು. ನನ್ನ ವೃತ್ತಿಯಲ್ಲಿ ಸಾಧಿಸಬೇಕಾದದ್ದು ಬಹಳಷ್ಟಿದೆ ಅದಕ್ಕಾಗಿ ನನಗೆ ತುಂಬಾ ಸಮಯ ಬೇಕು.
ಪ್ರ: ಉದ್ಯೋಗದ ಹೊರತಾಗಿ ನಿಮ್ಮ ಪ್ರಪಂಚದಲ್ಲಿ ಏನು ಇಲ್ಲವೇ?
ಉ: ನೀವು ತಪ್ಪು ತಿಳಿದಿರಿ. ನಿಜ ಹೇಳಬೇಕೆಂದರೆ ಉದ್ಯೋಗ ಬಿಟ್ಟು ನನ್ನ ಪ್ರಪಂಚ ವಿಶಾಲವಾಗಿದೆ. ನನ್ನದೇ ಆದ ಕೆಲವು ಉದ್ದೇಶಗಳನ್ನು ಇಟ್ಟುಕೊಂಡು ಬದುಕುತ್ತಿದ್ದೇನೆ. ಮಹಾಕೃತಿಗಳನ್ನು ಓದುವುದು, ಹೊಸ ವಿಷಯಗಳ ಅಧ್ಯಯನ, ಆಗಾಗ ಧ್ಯಾನದ ಶಿಬಿರದಲ್ಲಿ ವಾಸ, ಏಕಾಂತದಲ್ಲಿ ಚಿಂತನೆ, ವಿಶ್ವ ಪರ್ಯಟನ – ಹೀಗೆ ಬದುಕು ನಡೆಸುವ ಇಂಗಿತ ನನ್ನದು. ಹೀಗಾಗಿ ಮಗುವಿಗಾಗಿ ನನ್ನಲ್ಲಿ ಸಮಯವಾಗಲೀ ವ್ಯವಧಾನವಾಗಲೀ ಇಲ್ಲ. ಒಂದುವೇಳೆ ಹುಟ್ಟಿಸುವುದಾದರೆ ಪ್ರೀತಿ, ಕಾಳಜಿ, ಸಮಯ ಇತ್ಯಾದಿ ಮೀಸಲಾಗಿಡಬೇಕು. ಇಲ್ಲದಿದ್ದರೆ ಹುಟ್ಟಿಸಿದ ಮಗುವಿಗೆ ಅಗೌರವ ತೋರಿಸಿದಂತೆ!
ಪ್ರ: ಮಕ್ಕಳನ್ನು ಕಂಡರೆ ನಿಮಗೇನು ಅನ್ನಿಸುತ್ತದೆ?
ಉ: ಮಕ್ಕಳೆಂದರೆ ಅತಿಶಯ ಪ್ರೀತಿಯಿದೆ. ಕಂಡಕಂಡ ಮಕ್ಕಳನ್ನು ಮುದ್ದಾಡುತ್ತೇನೆ. ನಮ್ಮ ಗೆಳತಿಯರ ಮಕ್ಕಳು ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಹಾಗೆಂದು ಮಕ್ಕಳನ್ನು ಬೆಳೆಸುವ ಸಲುವಾಗಿ ನನ್ನ ವೈಯಕ್ತಿಕ ಬದುಕನ್ನು ಬಿಟ್ಟುಕೊಡಲಾರೆ. ಒಂದುವೇಳೆ ಹಾಗಾದರೆ ನಿರಾಶೆ ಕಾಡುತ್ತ ಮಗುವನ್ನು ಸರಿಯಾಗಿ ನೋಡಿಕೊಳ್ಳಲಾರದೆ ತಪ್ಪಿತಸ್ಥ ಭಾವನೆ ದುಪ್ಪಟ್ಟಾಗುತ್ತದೆ. ಎರಡನೇ ಕಾರಣ ಏನೆಂದರೆ, ನಾವಿಬ್ಬರೂ ಆರಿಸಿಕೊಂಡಿರುವ ಉದ್ಯೋಗಗಳು ನಮ್ಮ ಹೃದಯಗಳಿಗೆ ಹತ್ತಿರವಾಗಿವೆ. ಆದರೆ ಅನಿಶ್ಚಿತತೆ ಇರುವುದರಿಂದ ಮಗುವಿಗೆ ಆರ್ಥಿಕ ಭದ್ರತೆ ಸಿಗಲಾರದು ಎನಿಸುತ್ತದೆ. ಇದಲ್ಲದೆ, ನಾನು ನನ್ನ ಈಗಿರುವ ಉದ್ಯೋಗವನ್ನು ಬಿಟ್ಟು ಮನಃಶಾಸ್ತ್ರವನ್ನು ಕೈಗೆತ್ತಿಕೊಂಡು ಆಪ್ತಸಲಹೆಗಾರಳಾಗಲು ಯೋಚಿಸುತ್ತಿದ್ದೇನೆ. ವೃತ್ತಿ ಬದಲಾವಣೆಗೆ ಮಗು ಅಡ್ಡಿಯಾಗುತ್ತದೆ.
ಪ್ರ: ನಿಮ್ಮೊಳಗಿನ ತಾಯ್ತನದ ಪ್ರೀತಿಯನ್ನು ಯಾರಿಗೆ ಧಾರೆ ಎರೆಯುವಿರಿ?
ಉ: ಪ್ರೀತಿ ಕೊಡಲು ನಮ್ಮದೇ ಮಗು ಬೇಕಿಲ್ಲ; ಯಾರದೇ ಮಗು ಆದೀತು. ಯಾರ ಜೊತೆಗೂ ಭಾವನಾತ್ಮಕ ಸಂಬಂಧ ಬೆಳೆಸಲು ಸಾಧ್ಯವಿದೆ. ಮಕ್ಕಳೇಕೆ, ಪ್ರಾಣಿಗಳ ಜೊತೆಗೂ ಬಾಂಧವ್ಯ ಬೆಳೆಸಬಹುದು. ನನಗೆ ನಾಯಿಗಳೆಂದರೆ ಬಲುಪ್ರೀತಿ. ಅಷ್ಟೇಕೆ ಗಿಡಮರಗಳನ್ನೂ ಪ್ರೀತಿಸಬಹುದು. ನನ್ನ ಸ್ನೇಹಿತನೊಬ್ಬ ಮನೆತುಂಬಾ ಗಿಡಗಳನ್ನು ಬೆಳೆಸಿದ್ದಾನೆ. ಹಾಗೆ ನೋಡಿದರೆ ಪ್ರಾಣಿಗಳು ಹಾಗೂ ಗಿಡಮರಗಳಿಗೆ ಪ್ರೀತಿಯನ್ನು ಧಾರೆ ಎರೆಯುವುದರಲ್ಲಿ ಸಿಗುವ ಸಂತೃಪ್ತಿ, ಸಾರ್ಥಕತೆ ಕಡಿಮೆಯೇನಲ್ಲ. ಹಾಗಾಗಿ ನನ್ನವೇ ಮಕ್ಕಳು ಬೇಕೆಂದು ಅನ್ನಿಸಿದ್ದೇ ಇಲ್ಲ.
ಪ್ರಶ್ನೆ: ಇತರರ ಮಕ್ಕಳು ನಿಮ್ಮ ಮಕ್ಕಳು ಹೇಗಾಗುತ್ತಾರೆ?
ಉ: ಪ್ರೀತಿ-ವಾತ್ಸಲ್ಯಗಳನ್ನು ಧಾರೆಯೆರೆಯಲು ಸ್ವಂತ ಮಕ್ಕಳೇ ಬೇಕು ಎನ್ನುವುದು ಸಂಕುಚಿತ ದೃಷ್ಟಿಕೋನ – ಇದು ಇತರ ಮಕ್ಕಳಿಗೆ ಅನ್ಯಾಯ ಮಾಡಿದಂತೆ. ಸರತಿಯ ಸಾಲಿನಲ್ಲಿ ಜಾಗ, ಕಾಲೇಜಿನಲ್ಲಿ ಸೀಟು, ಉದ್ಯೋಗ ಇವೆಲ್ಲ ಇನ್ನೊಬ್ಬರ ಬದಲು ನನ್ನ ಮಗುವಿಗೆ ಸಿಗಲಿ ಎನ್ನುವುದರಲ್ಲಿ ಸ್ವಾರ್ಥವಿದೆ. ಸ್ಪರ್ಧೆಯಲ್ಲಿ “ನನ್ನ ಮಗು ಗೆಲ್ಲಲಿ” ಎಂದರೆ ಇನ್ನೊಂದು ಮಗುವಿಗೆ ಸೋಲನ್ನು ಬಯಸಿದಂತೆ ಆಯಿತು; ನನ್ನ ಮಗು ಸೋತರೆ ನಿರಾಸೆ ಖಂಡಿತ. ಆದರೆ ನಮಗೆ ಸಂಬಂಧಪಡದ ಮಕ್ಕಳನ್ನು ಬೆಳೆಸುವುದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಅಗತ್ಯವಾದರೆ ಅನಾಥ ಮಕ್ಕಳ – ಒಬ್ಬರನ್ನೇಕೆ ನಾಲ್ವರ – ಹೊಣೆ ಹೊರಬಹುದು, ಹೆರಬೇಕೆಂದಿಲ್ಲ. ಪ್ರಾಣಿಗಳನ್ನೂ ಸಾಕಬಹುದು. ಗಿಡಮರಗಳನ್ನು ಬೆಳೆಸಿ ಅರಣ್ಯ ಮಾಡಬಹುದು. ಇವೆಲ್ಲವುಗಳಲ್ಲಿ ಒಂದು ವಿಶೇಷತೆಯಿದೆ: ಇವೆಲ್ಲ ಆತ್ಮವಿಕಾಸಕ್ಕೆ ದಾರಿ. ಇದರಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಇವೆ; ಸ್ವಾರ್ಥವಾಗಲೀ ಅಹಮಿಕೆಯಾಗಲೀ ಅಪೇಕ್ಷೆ-ನಿರೀಕ್ಷೆಗಳಾಗಲೀ ಇಲ್ಲ. ಹಾಗೆ ಹೇಳಬೇಕೆಂದರೆ, ಹೊಸ ಮಕ್ಕಳನ್ನು ಹುಟ್ಟಿಸುವುದರ ಬದಲು ನೋಡಿಕೊಳ್ಳುವ ಕೈಗಳು ಬದಲಾಗಲಿ ಎನ್ನುವುದು ನಿಸ್ವಾರ್ಥ ನೀತಿ. ಇದು ಸ್ವಂತ ಮಕ್ಕಳಿಗೋಸ್ಕರ ತ್ಯಾಗ ಮಾಡುವುದಕ್ಕಿಂತ ಹೆಚ್ಚು ಕರುಣೆಯಿಂದ ಕೂಡಿದ್ದು, ಮಾನವೀಯತೆಗೆ ಹತ್ತಿರವಾಗಿದೆ. ನನ್ನ ಹೊಟ್ಟೆಯಿಂದ ಹುಟ್ಟಿದವರಿಗೆ ಬದುಕುವ ಅರ್ಹತೆ ಹೆಚ್ಚಿಗಿದೆ ಎನ್ನುವುದು ವಿಶ್ವಬಂಧುತ್ವಕ್ಕೆ ವಿರೋಧ. (ಇದನ್ನು ಕೇಳುವಾಗ ಕೋಗಿಲೆಯು ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುವುದು ನೆನಪಾಯಿತು. ಅದು ತನ್ನ ಒಂದು ಮೊಟ್ಟೆಯನ್ನು ಸೇರಿಸುವಾಗ ಕಾಗೆಯ ಒಂದು ಮೊಟ್ಟೆಯನ್ನು ಕೆಳಗೆ ಬೀಳಿಸುತ್ತದೆ!)
ಪ್ರ: ಮಗುವನ್ನು ಹೆರುವುದು, ಬೆಳೆಯುವುದನ್ನು ಕಣ್ತುಂಬ ನೋಡುವುದು ಇವೆಲ್ಲವೂ ಅದ್ಭುತ ಅನುಭವಗಳಲ್ಲವೆ?
ಉ: ಇರಬಹುದು. ಆದರೆ ಮಕ್ಕಳಿಲ್ಲದಿರುವಾಗ ಸಿಗುವ ಏಕಾಂಗಿತನದಲ್ಲಿ ವೈಯಕ್ತಿಕ ವಿಕಾಸಕ್ಕೆ ಸಾಕಷ್ಟು ಅವಕಾಶವಿದೆ. ಅದು ಸಂಸಾರದಲ್ಲಿ ಇಲ್ಲ. ಮಕ್ಕಳು ಇಲ್ಲದಿದ್ದರೆ ಹೆಚ್ಚಿನ ಗಳಿಕೆಯ ಯೋಚನೆಯಿಲ್ಲದೆ ನಮಗೆ ಇಷ್ಟವಾದ ಹಾದಿಯಲ್ಲಿ ಮುಂದುವರಿಯಲು ಅನುಕೂಲವಿದೆ. ಮಕ್ಕಳನ್ನು ಬೆಳೆಸುವುದು ಒಂದು ಆಧ್ಯಾತ್ಮಿಕ ಅನುಭವದಂತೆ. ಸಂಗಾತಿಯೊಡನೆ, ಸ್ನೇಹಿತರೊಡನೆ ಬದುಕುವುದೂ ಒಂದು ಆಧ್ಯಾತ್ಮಿಕ ಅನುಭವ. ಸಸ್ಯ-ಪ್ರಾಣಿಗಳೊಡನೆ ಅಥವಾ ಏಕಾಂಗಿಯಾಗಿ ಬದುಕುವುದು ಇನ್ನೊಂದು ಅಧ್ಯಾತ್ಮಿಕ ಅನುಭವ. ಅವುಗಳನ್ನು ಒಂದಕ್ಕೊಂದು ಹೋಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಗಂಡಸರು ಗರ್ಭದಲ್ಲಿ ಮಗುವನ್ನು ಹೊರಲಾರರು – ಹಾಗೆಂದು ವ್ಯಥಿಸುತ್ತಿದ್ದಾರೆಯೆ? ನಾನು, ನನ್ನ ಮಕ್ಕಳು ಎನ್ನುವ ಅಹಮಿಕೆಯನ್ನು ಬಿಟ್ಟು ಬೆಳೆಸಿದರೆ ಅನುಭವವೇ ಬೇರೆಯಾದೀತು. ನನಗೆ ಸಂಬಂಧಪಡದವರನ್ನು ಕುಟುಂಬದ ಭಾಗವಾಗಿ ನೋಡಿಕೊಳ್ಳುವುದರಲ್ಲಿ ದೈವಸದೃಶವಾದ ಆಧ್ಯಾತ್ಮಿಕ ಮೌಲ್ಯವಿದೆ.
ಪ್ರ: ವಯಸ್ಸಾದ ಮೇಲೆ ನಿಮ್ಮನ್ನು ಯಾರು ನೋಡಿಕೊಳ್ಳುವರು?
ಉ: ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಉದ್ದೇಶ ಇಟ್ಟುಕೊಂಡು ಮಗು ಮಾಡಿಕೊಳ್ಳುವುದು ನನ್ನ ಮೌಲ್ಯಗಳಿಗೆ ವಿರೋಧವಾದುದು. ಅದರ ಬದಲು ಹೆಚ್ಚು ಹಣ ಸಂಪಾದಿಸಿ, ವೃದ್ಧಾಪ್ಯದ ಖರ್ಚಿಗೆ ಮೀಸಲಿಡುವುದು ಸೂಕ್ತ ಎನ್ನಿಸುತ್ತದೆ. ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದು, ಹಾಗೂ ಉತ್ಕೃಷ್ಟವಾದ ವೃದ್ಧಾಶ್ರಮವನ್ನು ಸೇರುವುದು ನಮಗಿಬ್ಬರಿಗೂ ಇಷ್ಟ.
ಮಕ್ಕಳನ್ನು ಹುಟ್ಟಿಸುವ ವಿಷಯದಲ್ಲಿ ದೇಶದ ಗಡಿದಾಟಿ ಜಾಗತಿಕ ಹಿತಚಿಂತನೆ ಮಾಡುವುದು ಅಗತ್ಯವಿದೆ.
258: ಮಗು ಬೇಕೆ? ಏಕೆ? – 11
ಮಗುವನ್ನು ಮಾಡಿಕೊಳ್ಳುವುದರ ಹಿಂದಿನ ಕಾರಣಗಳನ್ನು ಹುಡುಕುತ್ತ, ಮಗುವು ಬೇಡವೆಂದು ನಿರ್ಧರಿಸಿರುವವರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಹೊರಟಿದ್ದೇವೆ. ಮಕ್ಕಳು ಬೇಡವೆನ್ನುವ ತರುಣಿಯೊಡನೆ ಹೋದಸಲ ನಡೆಸಿದ ಸಂದರ್ಶನದ ಮುಂದುವರಿದ ಭಾಗವಿದು:
ಪ್ರಶ್ನೆ: ವೃದ್ಧಾಶ್ರಮ ಸೇರಿದರೆ ಸ್ವಂತ ಮಕ್ಕಳೊಡನೆ ಇದ್ದಂತೆ ಆದೀತೆ? ಅಲ್ಲಿ ಕುಟುಂಬ ಅಂತ ಎಲ್ಲಿದೆ?
ಉತ್ತರ: ನಾವಿಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟ ಮಾಡಿಕೊಳ್ಳುವುದು ಒಳ್ಳೆಯದು. ಒಂದು: ವೃದ್ಧಾಶ್ರಮಗಳು ಅಸ್ತಿತ್ವಕ್ಕೆ ಹೇಗೆ ಬಂದವು? ಕುಟುಂಬಗಳು ಚಿಕ್ಕದಾಗುತ್ತ ಹಿರಿಯರನ್ನು ಮಕ್ಕಳು ನೋಡಿಕೊಳ್ಳಲು ಆಗದ ನಿರ್ವಾಹವಿಲ್ಲದ ಸ್ಥಿತಿಯಲ್ಲಿ ಆಶ್ರಯ ತಾಣವಾಗಿ ತಲೆಯೆತ್ತಿದವು. ಮೊದಮೊದಲು ಇವು ಹಾಸ್ಟೆಲ್‌ಗಳಿಗಿಂತ ಉತ್ತಮವಾಗೇನೂ ಇರಲಿಲ್ಲ – ಹಾಗಾಗಿ ವೃದ್ಧಾಶ್ರಮದಲ್ಲಿ ನಿರಾಶ್ರಿತರಂತೆ ಇದ್ದು ಮಕ್ಕಳಿಗಾಗಿ ಕಾಯುತ್ತಿರುವವರ ದುರಂತ ಚಿತ್ರಣ ಹುಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಈಗ ಹಾಗಲ್ಲ. ಅವರವರ ಅಭಿರುಚಿಗೆ ಹಾಗೂ ಆರ್ಥಿಕ ಬಲಕ್ಕೆ ತಕ್ಕಂತೆ ಸರ್ವಾನುಕೂಲಿ ವಿಲ್ಲಾಗಳೂ ಇವೆ. ಇಲ್ಲಿ ವಾಸಿಸುವುದು ಚೈತನ್ಯದಾಯಕ ಅನುಭವ. ಇದರಲ್ಲಿ ಅನಿವಾರ್ಯತೆಯ ಬದಲು ಆಯ್ಕೆಯಿದೆ. ಇತ್ತೀಚೆಗಂತೂ ಏಕಾಂತ ಬಯಸುವ ಹಿರಿಯ ದಂಪತಿಗಳು, ಹಾಗೂ ಬಹುಕಾಲದ ಸ್ನೇಹಿತರು ಒಟ್ಟಿಗಿರಲು ವೃದ್ಧಾಶ್ರಮ ಆರಿಸಿಕೊಳ್ಳುತ್ತಾರೆ.
ಎರಡು: ಮಕ್ಕಳೊಡನೆ ಇದ್ದಂತೆ ಆದೀತೇ ಎಂದಿರಿ. ನಿಜ, ಆದರೆ ಇದರ ಇನ್ನೊಂದು ಮಗ್ಗಲನ್ನೂ ನೋಡುವುದೂ ಅಗತ್ಯವಾಗುತ್ತದೆ. ತಾಯ್ತಂದೆಯರ ಹೊಣೆಗಾರಿಕೆಗೆ ಮಕ್ಕಳನ್ನು ಕಟ್ಟಿಹಾಕಿದರೆ ಅವರು ತಮ್ಮ ಭವಿಷ್ಯವನ್ನು ಹುಡುಕಿಕೊಳ್ಳಲು ಮುಕ್ತರಾಗದೆ ಅನ್ಯಾಯ ಆಗುತ್ತದೆ. (ಪರಿಚಿತ ಪರಿಸರವನ್ನು ಬಿಡಲೊಲ್ಲದ ತಾಯ್ತಂದೆಯರ ವಿರುದ್ಧ ಹೋಗಲು ಇಚ್ಛಿಸದ ಮಕ್ಕಳು ಉದ್ಯೋಗಕ್ಕಾಗಿ ದಿನಾಲೂ ಐವತ್ತು ಕಿ.ಮೀ. ಪ್ರಯಾಣಿಸಿ ಮೂರುಗಂಟೆ ವ್ಯರ್ಥವಾಗುತ್ತ ಸಂಗಾತಿಗೆ ಸಿಗದಿರುವುದು ನೆನಪಾಯಿತು. ಅದರೊಂದಿಗೆ ಇಳಿವಯಸ್ಸಿನ ತನಕ ಬೆಳೆದ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ವೃದ್ಧರೂ ಕಣ್ಣಮುಂದೆ ಬಂದರು.) ಇಲ್ಲಿ ಮಕ್ಕಳೊಡನೆ ಹಕ್ಕೊತ್ತಾಯ ಇದೆಯೇ ವಿನಾ ಬಾಂಧವ್ಯ, ಪ್ರೀತಿ ಇರಲಿಕ್ಕಿಲ್ಲ. ಅನ್ಯೋನ್ಯತೆಯ ಬಾಂಧವ್ಯ ಕಟ್ಟಿಕೊಂಡಲ್ಲಿ ಮನೆಯೇ ಸ್ವರ್ಗವಾಗುತ್ತದೆ. ಹಾಗೆ ಸಾಧ್ಯವಿಲ್ಲದಾಗ ವೃದ್ಧಾಶ್ರಮದಲ್ಲಿದ್ದು ಆಗಾಗ ಭೇಟಿಯಾಗುವುದರಿಂದ ಸಂಬಂಧ ಆರೋಗ್ಯಕರ ಆಗುತ್ತದೆ. ಮೂರು: ಮಕ್ಕಳಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲಿನ ಅವಲಂಬನೆಯನ್ನೂ ಸಹಜವಾಗಿ ತೆಗೆದುಕೊಳ್ಳುತ್ತೇವೆ. ಅದೇ ಮಕ್ಕಳಿಲ್ಲದಿರುವ ವೃದ್ಧರನ್ನು ನೋಡಿ: ಅವರು ಹೆಚ್ಚು ಸ್ವಾವಲಂಬಿಯಾಗಿದ್ದಾರೆ. ಹೇಗೆಂದರೆ ವಯಸ್ಸಾದಂತೆ ಜೀವನಶೈಲಿಯನ್ನು ಮಾರ್ಪಡಿಸುತ್ತ ಹೋಗುತ್ತಾರೆ. ಆದರೆ ಮಕ್ಕಳಿರುವುದು ಒಂದುರೀತಿ ಪರಾವಲಂಬನೆಗೆ ಉತ್ತೇಜನ ಕೊಟ್ಟಂತೆ ಆಗುತ್ತದೆ. ಇದು ನನಗೆ ಇಷ್ಟವಿಲ್ಲ. ನಾಲ್ಕು: ವಂಶದಲ್ಲಿ ಪ್ರೀತಿ ಕೆಳಮುಖವಾಗಿ ಹರಿಯುತ್ತದೆ. ತಾಯ್ತಂದೆಯರು ನಮ್ಮನ್ನು ಪ್ರೀತಿಸಿದಷ್ಟು ನಾವು ಅವರನ್ನು ಪ್ರೀತಿಸುವುದಿಲ್ಲ, ಅದನ್ನು ನಮ್ಮ ಮಕ್ಕಳಿಗೆ ಕೊಡುತ್ತೇವೆ. ಆದುದರಿಂದ ಮಕ್ಕಳ ಹಿತಹಿಂತನೆ ಮಾಡುವವರು, ಅವರಿಗೆ ಜಾಗ ಮಾಡಿಕೊಡಲು ವೃದ್ಧಾಶ್ರಮದ ಬಗೆಗೆ ಯೋಚಿಸುವುದು ತಪ್ಪೇನಲ್ಲ.
ಪ್ರ: ಹಿರಿಯರು ಕಿರಿಯರೊಂದಿಗೆ ಒಟ್ಟಾಗಿರುವ ಭಾರತೀಯ ಪರಂಪರೆಗೆ ವೃದ್ಧಾಶ್ರಮಗಳು ವಿರುದ್ಧ ಅನ್ನಿಸುವುದಿಲ್ಲವೆ?
ಉ: ತಪ್ಪು ತಿಳಿದಿರಿ. ವಯಸ್ಸಾದಂತೆ ಕುಟುಂಬಸುಖವನ್ನು ತ್ಯಜಿಸಿ ವಾನಪ್ರಸ್ತರಾಗುವುದೂ ನಮ್ಮ ಪರಂಪರೆಯಲ್ಲಿದೆ. ವೃದ್ಧಾಶ್ರಮದ ವಾಸ ಇದಕ್ಕೆ ಪರ್ಯಾಯವಾಗುತ್ತದೆ. (ಇದರಲ್ಲಿ ನನಗೆ ಆಳವಾದ ಅರ್ಥ ಕಂಡಿತು. ಮಕ್ಕಳು, ಮೊಮ್ಮಕ್ಕಳು ಎಂದು ವ್ಯಾವಹಾರಿಕ ಪ್ರಪಂಚದಲ್ಲಿ ಮುಳುಗಿದಷ್ಟೂ ಆಧ್ಯಾತ್ಮಿಕ ಆಯಾಮ ಕಾಣುವುದಿಲ್ಲ.)
ಪ್ರಶ್ನೆ: ಗಂಡ-ಹೆಂಡತಿ ಮಾತ್ರವಿದ್ದು, ಮಕ್ಕಳಿಲ್ಲದಿದ್ದರೆ ಕುಟುಂಬದ ಅನಿಸಿಕೆ ಬಂದೀತೆ?
ಉ: ಇತ್ತೀಚೆಗೆ ಕುಟುಂಬದ ಅನಿಸಿಕೆಯೂ ವ್ಯಾಖ್ಯೆಯೂ ಮುಂಚಿನಂತಿಲ್ಲದೆ ಬದಲಾಗುತ್ತಿದೆ. ಕುಟುಂಬವೆಂದರೆ ಮಕ್ಕಳೇ ಆಗಬೇಕೆಂದಿಲ್ಲ, ಸ್ನೇಹಿತರಿಂದಲೂ ಕಟ್ಟಿಕೊಳ್ಳಬಹುದು. ನಮಗೊಪ್ಪುವ ಸಮಕಾಲೀನ ಸ್ನೇಹಿತರು ಬದುಕಿನುದ್ದಕ್ಕೂ ಸಾಂಗತ್ಯ ಕೊಡಬಲ್ಲರು. ನಾನು ಕಟ್ಟಿಕೊಂಡಿರುವ ಸ್ನೇಹ ಸಮೂಹವನ್ನೇ ತೆಗೆದುಕೊಳ್ಳಿ. ಒಂದು ಗುಂಪಿನಲ್ಲಿ ಒಟ್ಟುಸೇರಿ ಧ್ಯಾನ ಮಾಡುತ್ತೇವೆ, ಬುದ್ಧತತ್ವಗಳ ಚಿಂತನೆ ನಡೆಸುತ್ತೇವೆ. ಇನ್ನೊಂದರಲ್ಲಿ ಯಾರದೊಬ್ಬರ ಮನೆಯಲ್ಲಿ ಪಾರ್ಟಿ ಮಾಡುತ್ತ, ಕನಿಷ್ಟ ಸೌಕರ್ಯದಲ್ಲಿ ಹೇಗೆ ಬದುಕುವುದು, ಭೂಮಿಯನ್ನು ಹೇಗೆ ಬದುಕಿಸುವುದು ಎಂದು ಚರ್ಚಿಸುತ್ತೇವೆ. ಮೂರನೆಯದರಲ್ಲಿ ಸಾಹಿತ್ಯವನ್ನೂ ಲಲಿತಕಲೆಗಳನ್ನೂ ಪ್ರೀತಿಸುವವರು ಇದ್ದಾರೆ. ಎಲ್ಲೆಲ್ಲೂ “ತನ್ನಂತೆ ಪರರನ್ನು ಬಗೆ”ಯುತ್ತ ಕಷ್ಟಸುಖಕ್ಕೆ ಸ್ಪಂದಿಸುವವರು ಇದ್ದಾರೆ. ಸಮಾನ ಅಭಿರುಚಿ ಉಳ್ಳವರ ಬಾಂಧವ್ಯವು ಗಟ್ಟಿಯಾಗಿರುತ್ತದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಆಗಾಗ ಹೊಸಬರು ಸೇರುವುದರಿಂದ ಗುಂಪುಗಳು ಚೈತನ್ಯಶೀಲವಾಗಿದ್ದು ಜೀವಂತಿಕೆಯಿಂದ ಕೂಡಿರುತ್ತವೆ. ಇನ್ನೊಂದು ಪ್ರಯೋಜನ ಏನೆಂದರೆ, ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಮಕ್ಕಳನ್ನಲ್ಲ! ಆಯ್ಕೆಯಿಲ್ಲದೆ ಕುಟುಂಬದಲ್ಲಿ ವಾಸಿಸುವ ಹಿರಿಯರನ್ನು ನೋಡಿ: ಮಕ್ಕಳು ಎಷ್ಟೇ ಹತ್ತಿರವಾಗಿದ್ದರೂ ಇಬ್ಬರ ನಡುವೆ ತಲೆಮಾರಿನ ಅಂತರ ಇರುವುದರಿಂದ ಅನುಕೂಲತೆಗಳಿದ್ದರೂ ಹಾರ್ದಿಕತೆ ಅಷ್ಟಕ್ಕಷ್ಟೆ. ಮಾತು ಯಾಕಿಲ್ಲವೆಂದು ಕೇಳಿದರೆ ಮಾತಾಡಲು ಏನಿರುತ್ತದೆ ಎಂದು ಉತ್ತರ ಬರುತ್ತದೆ. ಹಾಗಾಗಿ ಮತ್ತೆ ಹಿರಿಯರು ಸರೀಕರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಓಡಾಡಲು ಇತಿಮಿತಿಯಾದರೆ ಮನೆ ಸೆರೆಮನೆಯಾಗುತ್ತದೆ. ಹಾಗಾಗಿ ಹಿರಿಯರು ವೃದ್ಧಾಶ್ರಮವನ್ನು ಸೇರಿ ಮಕ್ಕಳನ್ನು ಊಳಿಗತನದಿಂದ ಬಿಡುಗಡೆ ಮಾಡುವ ಪ್ರಸಂಗ ಬಂದಿದೆ.
ಪ್ರ: ಮಕ್ಕಳು ಬೇಡವೆನ್ನುತ್ತೀರಿ. ಕಾಲಕ್ರಮೇಣ ಎಲ್ಲರೂ ಹಿರಿಯರಾಗಿ ಚಿಕ್ಕವರಿಲ್ಲದಿದ್ದರೆ ಮುಂದೆ ಗತಿ? ನಮ್ಮ ದೇಶವೂ ಜಪಾನಿನಂತೆ ಆಗಬಹುದಲ್ಲವೆ?
ಉ: ನಾವಿಲ್ಲಿ ದೇಶಗಳ ಗಡಿದಾಟಿ ಜಾಗತಿಕ ಹಿತಚಿಂತನೆ ಮಾಡುವುದು ಅಗತ್ಯ. ಜನಸಂಖ್ಯೆ ಕಡಿಮೆ ಆದರೆ ಭೂಮಿಯ ಭಾರ ಕಡಿಮೆ ಆಗುತ್ತದೆ, ಪರಿಸರ ಚೇತರಿಸಿಕೊಳ್ಳುತ್ತದೆ. ಇನ್ನು, ಜಪಾನಿನಲ್ಲಿ ಆರೋಗ್ಯದ ಸೌಲಭ್ಯಗಳು ಹೆಚ್ಚಾದಂತೆ ಆಯುಸ್ಸೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಹಿರಿಯ ನಾಗರಿಕರಿಗೆ ಸೌಲಭ್ಯಗಳೂ ಹೆಚ್ಚಾಗಿವೆ. ನಮ್ಮಲ್ಲಿ ಚಿಕ್ಕವರೂ ತರುಣರೂ ಮಧ್ಯವಯಸ್ಕರೂ ವೃದ್ಧರೂ ಇದ್ದಾರೆ. ಹಾಗೆಂದು ಚಿಕ್ಕವರಿಗೆ ಇರುವಷ್ಟು ಅನುಕೂಲತೆಗಳು ಹಿರಿಯರಿಗೆ ಇವೆಯೆ? ಉದಾ. ನಮ್ಮ ರಸ್ತೆಯ ಪುಟ್ಟಪಥಗಳು ವೃದ್ಧಸ್ನೇಹಿ ಆಗಿಲ್ಲ. ವಿಕಲಚೇತನರ ವಾಹನಗಳಿಗೆ ಪ್ರತ್ಯೇಕ ಪಥಗಳಿಲ್ಲ. ಯಾಕಿಲ್ಲವೆಂದರೆ, ಮಕ್ಕಳಿಗೆ, ಯುವಜನತೆಗೆ ಸೌಲಭ್ಯಗಳಿಗೇ ಎಲ್ಲ ಖರ್ಚಾಗುತ್ತಿದೆ. ಹಾಗಾಗಿ ಹಿರಿಯರು ಮಕ್ಕಳ ಹೆಗಲ ಮೇಲೇರಿ, ಆರೈಕೆಯನ್ನು ಕರ್ತವ್ಯ ರೂಪದಲ್ಲಿ ನಿರೀಕ್ಷಿಸುತ್ತಿದ್ದಾರೆ. ಆದರೆ ಇಪ್ಪತ್ತು ವರ್ಷಗಳ ನಂತರ ಮಕ್ಕಳ ಸಂಖ್ಯೆ ಕಡಿಮೆ ಆದಾಗ ಹೇಗಿರುತ್ತದೆ? ಸಂಪನ್ಮೂಲಗಳು ಹಿರಿಯರತ್ತ ತಿರುಗುತ್ತವೆ. ಸ್ವತಂತ್ರವಾಗಿ ಬದುಕುವವರಿಗೆ ಅನುಕೂಲತೆಗಳು ಹೆಚ್ಚುತ್ತವೆ. ಸಮಾಜದ ನವಜಾಗೃತಿಗೆ ಹಾದಿಯಾಗುತ್ತದೆ.
ಪ್ರ: ಕ್ರಮೇಣ ನಿಮಗೂ ತಾಯ್ತಂದೆತನಕ್ಕೆ ಮನಸ್ಸು ಬರಬಹುದಲ್ಲವೆ?
ಉ: ಖಂಡಿತವಾಗಿಯೂ. ಆಗ ನಾನು ದತ್ತು ತೆಗೆದುಕೊಳ್ಳಬಹುದು. ಅಥವಾ ಅನಾಥಾಲಯದ ಮಕ್ಕಳ ಜವಾಬ್ದಾರಿ ಹೊರಬಹುದು. ನನ್ನ ಗರ್ಭದಲ್ಲೂ ಮಗು ಹುಟ್ಟಬಹುದು. ಏನೇ ಆಗಲಿ, ನಾನು ಸಲಹುವ ಮಕ್ಕಳು ನನ್ನನ್ನು ಸಲಹಬೇಕು ಎನ್ನುವ ಅಪೇಕ್ಷೆ ಇಲ್ಲದೆ ಬೆಳೆಸುತ್ತೇನೆ. ಹಾಗೂ ಬೆಳೆದ ಮಕ್ಕಳ ಮೇಲೆ ನನ್ನನ್ನು ನೋಡಿಕೊಳ್ಳಲು ಯಾವೊತ್ತೂ ಹಕ್ಕೊತ್ತಾಯ ತರಲಾರೆ. ಆದಷ್ಟು ಸ್ವತಂತ್ರವಾಗಿಯೇ ಬದುಕುತ್ತೇನೆ.”
ಯುವಜನಾಂಗದಿಂದ ನಾವು ಹಿರಿಯಲು ಕಲಿಯಲು ಎಷ್ಟೊಂದು ಇದೆಯಲ್ಲವೆ?
ಮಗುವನ್ನು ಮಾಡಿಕೊಳ್ಳುವುದರ ಹಿಂದೆ ಎಷ್ಟೊಂದು ರಾಜಕೀಯ ಇದೆ ಗೊತ್ತೆ?
259: ಮಗು ಬೇಕೆ? ಏಕೆ? – 12
ಮಕ್ಕಳು ಬೇಕು-ಬೇಡಗಳ ಕುರಿತು ತುರುಸಿನ ಚರ್ಚೆ ನಡೆಸುತ್ತ ಮನಸ್ಸಿನಲ್ಲಿರುವ ಕಿರಿಕಿರಿಗಳನ್ನು ಹೊರತರುತ್ತಿದ್ದೇವೆ. ಇದೆಲ್ಲ ಆಗುವಾಗ ನಮ್ಮ ತಲೆಯಲ್ಲಿ ಕುಳಿತು ನಮ್ಮನ್ನೇ ಒದೆಯುತ್ತಿರುವ ಸಮಾಜವನ್ನು ಅಲಕ್ಷಿಸಲಾದೀತೆ? ಮಕ್ಕಳಿಲ್ಲದವರನ್ನು ಸಮಾಜವು ಹೇಗೆ ಕಾಣುತ್ತಿದೆ ಎನ್ನುವುದರ ಕಹಿ ಅನುಭವವು ಅನೇಕರಿಗೆ – ಅದರಲ್ಲೂ ಹೆಂಗಸರಿಗೆ – ಆಗಿರಲೂ ಸಾಕು. ಇದಕ್ಕೆ ಗುರಿಯಾಗುತ್ತಿರುವವರು ತಮ್ಮನ್ನು ತಾವು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದರ ಬಗೆಗೆ ಈಸಲ ನೋಡೋಣ.
ಮಕ್ಕಳಿಲ್ಲದ ಹೆಂಗಸರು ಅದರ ಕುರಿತಾದ ಪ್ರಶ್ನಾಘಾತದಿಂದ ತಪ್ಪಿಸಿಕೊಳ್ಳಲು ಮದುವೆ, ಹುಟ್ಟುಹಬ್ಬಗಳಂಥ ಸಮುದಾಯ ಸಮಾರಂಭಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳುತ್ತಿದ್ದೆ. ಇತರರ ಹುಬ್ಬೇರಿದ ದೃಷ್ಟಿಗೆ, ಸಡಿಲ ನಾಲಗೆಗೆ ತುತ್ತಾಗುತ್ತಿರುವ ಇವರಿಗೆ ಹೇಗೆನ್ನಿಸಬಹುದು? (ಜರತಾರಿ ಸೀರೆ, ಆಭರಣಗಳಿಂದ ಥಳುಕಿಸುವವರ ನಡುವೆ ಜೀನ್ಸ್-ಶರ್ಟ್ ತೊಟ್ಟು ಕುಳಿತಂತೆ ಅನಿಸುತ್ತದೆ ಎಂದು ಮಗುವಿಲ್ಲದ ಒಬ್ಬಳು ಹೇಳಿದ್ದು ನೆನಪಿದೆ.) ತನಗೆ ಮಗುವಿಲ್ಲದಿರುವುದರ ಬಗೆಗೆ (ತಾನು ತಾಯಿ ಆಗದಿರುವುದರ ಬಗೆಗಲ್ಲ – ಇದರ ವ್ಯತ್ಯಾಸವನ್ನು ಆಮೇಲೆ ಹೇಳುತ್ತೇನೆ.) ತನ್ನಮೇಲೆ ಹೇರಲ್ಪಟ್ಟ ಭೇದನೀತಿಯ ಕಾರಣದಿಂದ ಯಾರೊಡನೆಯೂ ಬೆರೆಯಲಾಗದ ಪರಕೀಯ ಭಾವ ಹುಟ್ಟುತ್ತದೆ. ಇದಕ್ಕೊಂದು ದೃಷ್ಟಾಂತ:
ಇಪ್ಪತ್ತೆಂಟು ವರ್ಷದ ದೀಪ್ತಿಗೆ (ಹೆಸರು ಬದಲಾಯಿಸಿದೆ) ಮದುವೆಯಾಗಿ ಮೂರು ವರ್ಷವಾಗಿದೆ. ಗಂಡಹೆಂಡಿರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಸಾಮರಸ್ಯ ಅಷ್ಟಾಗಿ ಇಲ್ಲದಿರುವುದರಿಂದ, ಹಾಗೂ ಈಕೆ ರಾತ್ರಿಪಾಳಿಯ ಉದ್ಯೋಗದಲ್ಲಿ ಇರುವುದರಿಂದ ಸಮಾಗಮ ಅಷ್ಟೊಂದು ನಿಯಮಿತವಾಗಿ ನಡೆಯುತ್ತಿಲ್ಲ. ಮಗುವಿಗೆ ಬಗೆಗೆ ಯಾರಾದರೂ ಕೇಳಿದಾಗ ಗೊಂದಲವಾಗಿ, “ವೈದ್ಯರಲ್ಲಿ ತೋರಿಸುತ್ತಿದ್ದೇವೆ, ಆಗುತ್ತದೆ ಎಂದಿದ್ದಾರೆ” ಎಂದು ಕ್ಲುಪ್ತವಾಗಿ ಉತ್ತರಿಸುತ್ತಾಳೆ. “ವೈದ್ಯರು ತಜ್ಞರು ಹೌದೋ ಇಲ್ಲವೊ?” ಎಂದು ಜಬರ್ದಸ್ತಿನಿಂದ ಕೇಳುವವರಿಗೆ ಮೌನ ಸಮ್ಮತಿ ಸೂಚಿಸುತ್ತ ಹಿಮ್ಮೆಟ್ಟುತ್ತಾಳೆ. ಹೀಗೆ ಥಟ್ಟನೆ ರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುವ ಆಕೆಯ ಅಂತರಂಗದಲ್ಲಿ ಏನಿದೆ? ಇತರರು ನಂಬಿರುವ “ಮೌಲ್ಯಗಳನ್ನು” ತಾನೂ ನಂಬಿದ್ದೇನೆಂದು ನಟಿಸುತ್ತಿದ್ದಾಳೆ. ಉದಾಹರಣೆಗೆ, ಮಗುವನ್ನು ಮಾಡಿಕೊಳ್ಳುವ ಉದ್ದೇಶಕ್ಕೇ ಮದುವೆ ಆಗಿದ್ದೇನೆ; ಮಗುವಿಗೋಸ್ಕರ ಕಾಯಿಸುತ್ತ ದಾಂಪತ್ಯಕ್ಕೂ ಗಂಡನ ಕುಟುಂಬಕ್ಕೂ ಅನ್ಯಾಯ ಮಾಡುತ್ತಿದ್ದೇನೆಂಬ ಅಳುಕಿದೆ; ಮಗುವನ್ನು ಮಾಡಿಕೊಳ್ಳದೆ ಇರುವುದು ಹೊಣೆಗೇಡಿತನದ ಸಂಕೇತ; ಸರೀಕರ ಸಮ ಎನ್ನಿಸಿಕೊಳ್ಳಬೇಕಾದರೆ ಮಗು ಅಂತ ಒಂದಿರಲೇಬೇಕು; ಮಗು ಆಗದಿರುವುದು ಅಥವಾ ಬೇಡವೆನ್ನುವುದು ಹೆಣ್ಣುತನಕ್ಕೆ ಅವಮಾನ; ಗರ್ಭಧರಿಸುವ ದಿನ ಬಂದಾಗ ದಾಂಪತ್ಯದ ಎಡೆಬಿಡದ ಕಲಹಕ್ಕೆ ಅಲ್ಪವಿರಾಮ ಕೊಟ್ಟು, ನಗುವಿನ ಮುಖವಾಡ ಧರಿಸಿ ಸಂಭೋಗಕ್ಕಾಗಿ ಗಂಡನನ್ನು ಮರುಳು ಮಾಡುವ ಒನಪು ವಯ್ಯಾರ ಇರಬೇಕು… ಇತ್ಯಾದಿ. ಇಷ್ಟೆಲ್ಲ ಯಾಕೆಂದರೆ, ಮಗು ಆಗದಿರುವುದಕ್ಕೆ ಶಾರೀರಿಕ ಕಾರಣಗಳು ಮಾತ್ರ ಸಮಾಜ ಸಮ್ಮತವೇ ಹೊರತು ಆಂತರಂಗಿಕ ಅಥವಾ ಪಾರಸ್ಪರಿಕ ಕಾರಣಗಳಲ್ಲ! ಹಾಗಾಗಿಯೇ ಪಾರಸ್ಪರಿಕ ಸಮಸ್ಯೆಗಳಿಗೂ (ವೈದ್ಯರನ್ನು ನಡುವೆ ತರುತ್ತ) ಶಾರೀರಿಕ ಸಮಸ್ಯೆಯ ಬಣ್ಣ ಬಳಿಯುತ್ತಿದ್ದಾಳೆ – ಒಂದುವೇಳೆ ಶಾರೀರಿಕ ದೋಷವಿದ್ದರೆ ಅದಕ್ಕೂ ತಾನೇ ಹೊಣೆಗಾರಳು! ಇನ್ನು, ಕೇಳುವವರು ಹಿರಿಯರಾಗಿದ್ದರೆ ಮುಗಿದೇ ಹೋಯಿತು, ಮರೆತಿದ್ದನ್ನು ನೆನಪಿಸಿದಾಗ ಹೇಳುವಂತೆ “ಥ್ಯಾಂಕ್ಯೂ ಆಂಟೀ!” ಎಂದು ಕೃತಜ್ಞತೆ ಸೂಚಿಸುತ್ತ ಪ್ರಶ್ನಿಸುವವರ ಕೈಯಲ್ಲಿ ಪರಮಾಧಿಕಾರ ಕೊಡುತ್ತಾಳೆ. ಹೀಗೆ ಮಗುವಿಲ್ಲದ ಹಾಗೂ ಮಗುವು (ಸದ್ಯಕ್ಕಂತೂ) ಬೇಡವಾದ ಬಹುತೇಕ ಪ್ರತಿಹೆಣ್ಣೂ ನಟಿಸಬೇಕಾದ ಪ್ರಸಂಗ ಇರುವಾಗ ಸ್ತ್ರೀ ಸಮುದಾಯದ ಅಂತರಾಳದೊಳಗೆ ಅಡಗಿರುವ ಸತ್ಯ ಬಯಲಿಗೆ ಹೇಗೆ ಬಂದೀತು? ಹಾಗಾಗಿ ಮಗುವಿಲ್ಲದವರಿಗೆ ಸಮಾಜವು “ದಯಪಾಲಿಸುವ” ಒಂಟಿಭಾವವು ಸಾರ್ವತ್ರಿಕವಾಗಿ ಇರುವುದಾದರೂ ಬಹಿರಂಗವಾಗಿ ವಿನಿಮಯಿಸಲು ಸಾಧ್ಯವಾಗದಿರುವ ಕಾರಣದಿಂದ ಪ್ರತಿ ಹೆಣ್ಣನ್ನೂ ಪ್ರತ್ಯೇಕವಾಗಿ ಕಾಡುತ್ತದೆ. ಅದಕ್ಕೆಂದೇ, ಒಂದು ಮಗುವಾದರೆ ಸಾಕು, ಎಲ್ಲವೂ ಸರಿಹೋಗುತ್ತದೆ ಎನ್ನುವ ತಪ್ಪು ನಂಬಿಕೆಯೂ ಅಷ್ಟೇ ಸಾರ್ವತ್ರಿಕವಾಗಿದೆ.
ಇತರರ ಚುಚ್ಚುವರ್ತನೆಯಿಂದ ವೈಯಕ್ತಿಕವಾಗಿ ಹಿಂಸೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ಯಾಕೆ ಸಹಜವಾಗಿ ಬರುವುದಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲೊಂದು ಕಾರಣ ತನ್ನ ಬಗೆಗೆ ತನ್ನಲ್ಲೇ ಗೌರವ ಇಲ್ಲದಿರುವುದು – ಇದಕ್ಕೂ ಬಾಲ್ಯದಲ್ಲಿ ಪ್ರೀತಿಯ ನಂಟು ಸಾಕಷ್ಟು ಸಿಗದಿರುವುದಕ್ಕೂ ಸಂಬಂಧವಿದೆ. ಎರಡನೆಯದು, ಹೆಂಗಸರು ತಮ್ಮ ತಾಯಿಯ ಮೌಲ್ಯಗಳನ್ನು ಒರೆಗೆ ಹಚ್ಚಿ ಪರೀಕ್ಷಿಸದೆ ತನ್ನವನ್ನಾಗಿ ಮಾಡಿಕೊಂಡಿರುವುದು. ಇದೆಲ್ಲಿಂದ ಹುಟ್ಟಿಕೊಳ್ಳುತ್ತದೆ ಎಂಬುದನ್ನು ದೀಪ್ತಿಯ ಇತಿಹಾಸದಿಂದ ತಿಳಿದುಕೊಳ್ಳಬಹುದು. ದೀಪ್ತಿಯ ತಾಯಿಯು ದಾಂಪತ್ಯದಲ್ಲಿ ಸ್ವತಃ ದುರ್ಲಕ್ಷ್ಯಕ್ಕೆ ಈಡಾಗಿದ್ದಾಳೆ. ದರ್ಪದ ಗಂಡನಿಂದ ಮೂರು ಮಕ್ಕಳನ್ನು ಪಡೆದು, ಅವರ ಪೋಷಣೆಯನ್ನು ಅರೆಮನಸ್ಸಿನಿಂದ ಹೊತ್ತುಕೊಂಡಿದ್ದಾಳೆ. ದೀಪ್ತಿಯು ಹೆಣ್ಣಾಗಿರುವುದರಿಂದ ಅವಳ ಭವಿಷ್ಯದಲ್ಲಿ ತನ್ನ ನೋವನ್ನು ಕಾಣುತ್ತಿದ್ದಾಳೆ (“ನೀನೂ ಹೆಣ್ಣು, ಹಾಗಾಗಿ ನನ್ನಂತೆ ಅನುಭವಿಸಬೇಕಾಗುತ್ತದೆ, ಗೊತ್ತಿರಲಿ!”), ತನ್ನ ಹೆಣ್ಣುತನವನ್ನು ತಾನೇ ಇಷ್ಟಪಡದಿರುವಾಗ, ಅದನ್ನು ಮಗಳ ಮೇಲೆ ಪ್ರಕ್ಷೇಪಿಸಿ ಅವಳ ಲಿಂಗೀಯತೆಯೂ ಇಷ್ಟಪಡುವಂಥದ್ದಲ್ಲ ಎಂದು ಸಂಕೇತ ಕೊಡುತ್ತ ಬೆಳೆಸಿದ್ದಾಳೆ. ಇದರಿಂದ ದೀಪ್ತಿಗೆ ಗೊಂದಲವಾಗಿ ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ಅಂದರೆ, ತಾಯಿ-ಮಗಳ ಬಾಂಧವ್ಯವು ಹೊರನೋಟದಲ್ಲಿ ಸಹಜವಾಗಿ ಕಂಡರೂ ಒಳವೊಳಗೆ ಪರಸ್ಪರ ಕೆಸರು ಎರಚಾಟವಿದ್ದು, ಒತ್ತಟ್ಟಿಗೆ ಅನರ್ಹತೆ ಹಾಗೂ ನಿರಾಕರಣೆಯ ಒಳಸೆಲೆ ಇಬ್ಬರಲ್ಲೂ ಇದೆ. ದೀಪ್ತಿಯ ಮದುವೆಯ ನಂತರ ಇದೆಲ್ಲ ಸ್ಪಷ್ಟರೂಪದಲ್ಲಿ ಹೊರಬರುತ್ತಿದೆ. ತಾಯಿಯು, “ನಾನು ಗಟ್ಟಿಮುಟ್ಟಾಗಿ ಇರುವಾಗಲೇ ಬೇಗ ಮಗುವನ್ನು ಮಾಡಿಕೋ!” ಎಂದು ಒತ್ತಾಯ ಮಾಡಿದ್ದಾಳೆ. ಅದಕ್ಕೆ ದೀಪ್ತಿ ಒಪ್ಪಿಲ್ಲ. ಯಾಕೆ? ನೀನು ಮಗುವನ್ನು ಹೆರಲೇಬೇಕು ಎನ್ನುವ ತಾಯಿಯ ಸಂದೇಶದ ಹಿಂದೆ, “ನಿನ್ನಿಂದ ಮಗುವನ್ನು ಹುಟ್ಟಿಸುವ ತನಕ ನಾನು ತಾಯಿಯ ಅರ್ಹತೆಯನ್ನು ಪೂರ್ತಿಯಾಗಿ ಪಡೆಯಲಾರೆ” ಎನ್ನುವ ಒಳಮಾತಿದೆ! ಹೀಗೆ ತಾಯಿಯು ತನ್ನ ಬೇಡಿಕೆಯನ್ನು ಮಗಳ ಮೇಲೆ ಹೇರಿದ್ದಾಳೆ; ಹಾಗೂ ಮಗಳು ಪ್ರತಿಭಟಿಸಿದ್ದಾಳೆ! (ಒಂದು ಮಗುವಾದರೆ ಸಾಕು, ಗಂಡಹೆಂಡಿರ ಜಗಳ ಕಡಿಮೆ ಆಗುತ್ತದೆ ಎಂದು ಹಿರಿಯರ ಸಲಹೆ ಬರುವುದು ಇಂಥ ಹಿನ್ನೆಲೆಯಲ್ಲೇ.) ಅಂದರೆ ಇಲ್ಲಿ ಮಗು ಹುಟ್ಟುವುದರ ಉದ್ದೇಶವು ಹೆಣ್ಣುಮಗಳಿಗೆ ತಾಯ್ತನದ ಅನುಭವ ಆಗಲಿ ಎಂದಲ್ಲ, ಬದಲಾಗಿ ತನ್ನ (ಸಮಾಜ ನಿರೀಕ್ಷಿತ) ತಾಯ್ತನದ ಪಾತ್ರ-ಕರ್ತವ್ಯ ಪೂರ್ತಿಯಾಗುತ್ತದೆ ಎಂದಿದೆ. ಒಂದು ಮಗುವನ್ನು ಮಾಡಿಕೊಳ್ಳುವುದರ ಹಿಂದೆ ಎಷ್ಟೊಂದು ರಾಜಕೀಯ ಇದೆ ಎಂಬುದು ಗೊತ್ತಾಯಿತಲ್ಲ? (ಕೆಲವು ಕುಟುಂಬಗಳಲ್ಲಿ ಹೆತ್ತ ಸೊಸೆಗೆ ವಿಶೇಷ ಸ್ಥಾನವಿದ್ದು, ಹೆರದ ಸೊಸೆಯನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ.) ಈಕಡೆ ದೀಪ್ತಿಯು ತಾಯ್ತನದ ಅನುಭವ ಪಡೆಯಲು ತಯಾರಾಗುವುದು ಒತ್ತಟ್ಟಿಗಿರಲಿ, ಒಳ್ಳೆಯ ದಾಂಪತ್ಯ ನಡೆಸಲು ಒದ್ದಾಡುತ್ತಿದ್ದಾಳೆ. ಇಂಥ “ಕುಟುಂಬ ರಾಜಕೀಯ”ದ ಹಿನ್ನೆಲೆಯಲ್ಲಿ ಮಗುವು ಹುಟ್ಟಿದರೆ ಭವಿಷ್ಯದಲ್ಲಿ ಏನು ಕಾದಿರುತ್ತದೆ ಎಂಬುದು ಯಾರ ಊಹೆಗೂ ನಿಲುಕಬಹುದು.
ಈಗ, ಮಗುವನ್ನು ಮಾಡಿಕೊಳ್ಳಲು ಹೊರಟಿರುವ ಹೆಂಗಸರಿಗೆ ಈ ಪ್ರಶ್ನೆ: ನೀವೇಕೆ ಮಗುವನ್ನು ಮಾಡಿಕೊಳ್ಳಲು ಹೊರಟಿದ್ದೀರಿ? ನಿಮಗೂ ಮಗುವನ್ನು ಪಡೆಯುವ ಸಾಮರ್ಥ್ಯವಿದೆ ಎಂದು ಎಲ್ಲರಿಗೂ ತೋರಿಸುವುದಕ್ಕೋ, ಅಥವಾ ಸ್ವತಃ ತಾಯ್ತನದ ಅನುಭವ ಪಡೆಯಲಿಕ್ಕೋ? ಇದರ ಮೇಲೆ ನಿಮಗೆ ಮಗುವು ಬೇಕೋ ಬೇಡವೋ ಎಂದು ನಿರ್ಧರಿಸಿ!
ತಾಯ್ತಂದೆತನದ ಭಾವವು ಸಾರ್ವತ್ರಿಕ: ಯಾರದೇ ಮಕ್ಕಳನ್ನು ಕಂಡರೂ ಮಾತೃತ್ವ ಭಾವ ಸ್ಫುರಿಸುತ್ತದೆ.
260: ಮಗು ಬೇಕೆ? ಏಕೆ? – 13
ಹೋದಸಲ ಕುಟುಂಬ ರಾಜಕೀಯದ ಹಿನ್ನೆಲೆಯಲ್ಲಿ ಮಗುವನ್ನು ಮಾಡಿಕೊಳ್ಳಲು ಹೊರಟಿರುವ ಉದ್ದೇಶವನ್ನು ಪ್ರಶ್ನಿಸುತ್ತ, ಇತರರಿಂದ ಗುರುತಿಸಿಕೊಳ್ಳುವುದಕ್ಕೂ ತಾಯ್ತನದ ಅನುಭವ ಪಡೆಯಲು ತಯಾರಾಗುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳುತ್ತಿದ್ದೆ.
ಮಗುವನ್ನು ಹೊಂದುವ ಹಿಂದಿನ ರಾಜಕೀಯದ ಬಗೆಗೆ ಯೋಚಿಸುವಾಗ ಇನ್ನೊಂದು ವಿಷಯ ನೆನಪಾಯಿತು: ಮಕ್ಕಳಿಲ್ಲದವರನ್ನು ಸಾರ್ವಜನಿಕರು ಹೇಗೆ ಕಾಣುತ್ತಿದ್ದಾರೆ? ಮಕ್ಕಳಿರದ ಸ್ಥಿತಿಯು ಬಡತನದಷ್ಟೇ ಸರ್ವಕಾಲಿಕವೂ ಸಾರ್ವತ್ರಿಕವೂ ಆಗಿದೆ! ಹಾಗಾದರೆ ಇದಕ್ಕೆ ವಿಶೇಷ ಮಾನ್ಯತೆ ಹೇಗೆ ಬಂತು? ಮಕ್ಕಳಿರುವವರು ಇಲ್ಲದವರನ್ನು ಕೀಳಾಗಿಕಾಣುತ್ತಾರೆ ಎನ್ನುವುದೇ ಇದಕ್ಕೆ ಕಾರಣ! ಹಾಗಾಗಿ ಇದೂ ಧರ್ಮ, ವರ್ಣ, ಜನಾಂಗ ಭೇದಗಳ ಸಾಲಿಗೆ ಸೇರಿದೆ. ಮಕ್ಕಳಿದವರು ಹಾಗೂ ಮದುವೆ ಬೇಡವೆನ್ನುವವರು – ಅದರಲ್ಲೂ ಹೆಂಗಸರು – ಲೈಂಗಿಕ ಅಲ್ಪಸಂಖ್ಯಾತರಂತೆ ಗಣಿಸಲ್ಪಡುತ್ತಾರೆ. ಅದಕ್ಕಾಗಿ ರ್ಯಾಚೆಲ್ ಕ್ರ್ಯಾಸ್ಟಿಲ್‌ನಂಥವರು ಮಕ್ಕಳಿಲ್ಲದವರ ಪರವಾಗಿಯಲ್ಲದೆ ಮದುವೆಯಾಗದೆ ಒಂಟಿಯಾಗಿ ಬದುಕುವವರ ಪರವಾಗಿಯೂ ಹೋರಾಡುತ್ತಿದ್ದಾರೆ.
ಮಗುವಾದರೆ ಸಾಕು ಎನ್ನುವ ಆತಂಕ ಗಂಡಸರಲ್ಲೂ ಸಾಕಷ್ಟಿದೆ. ವೀರ್ಯದ ದೋಷದಿಂದ ಗರ್ಭಧಾರಣೆ ಅಸಾಧ್ಯ ಎನ್ನುವುದು ಗಂಡಸುತನಕ್ಕೆ ಕಳಂಕವೆಂದು (ಏನೂ ಸಂಬಂಧವಿಲ್ಲದಿದ್ದರೂ) ಹೆಚ್ಚಿನವರು ಭಾವಿಸುತ್ತಾರೆ. ಅದನ್ನು ಸಂಗಾತಿಯೊಡನೆ ಹಂಚಿಕೊಳ್ಳದೆ ಗುಟ್ಟಾಗಿ ಸರಿಪಡಿಸಿಕೊಳ್ಳಲು ಹೆಣಗುತ್ತಾರೆ. (ಕೆಲವು ವರ್ಷಗಳ ಹಿಂದೆ ಕೃತಕ ಗರ್ಭಧಾರಣೆಯ ಕೇಂದ್ರವನ್ನು ನಡೆಸುತ್ತಿರುವಾಗ ವೀರ್ಯದೋಷವಿರುವ ಗಂಡಸರು ಹೆಂಡತಿಗೆ ತಿಳಿಯದಂತೆ ಅಜ್ಞಾತ ಪುರುಷನ ವೀರ್ಯದಿಂದ ಗರ್ಭಧಾರಣೆ ಮಾಡಲು ಕೇಳಿಕೊಂಡಿದ್ದು ನೆನಪಿದೆ.) ಇನ್ನು, ಶೀಘ್ರಸ್ಖಲನದಂಥ ಲೈಂಗಿಕ ಸಮಸ್ಯೆಯಿರುವಾಗ ಅನಗತ್ಯವಾಗಿ ವೀರ್ಯಪರೀಕ್ಷೆ ಮಾಡಿಸಿಕೊಂಡು, ಅದರಲ್ಲಿ ಕಂಡ ಸಹಜ ವ್ಯತ್ಯಾಸಗಳನ್ನು ನ್ಯೂನ್ಯತೆಯೆಂದು ತಪ್ಪಾಗಿ ನಿರ್ಣಯಿಸಿ ಮದುವೆಯ ವಿಚಾರವನ್ನೇ ಕೈಬಿಟ್ಟ ಯುವಕರನ್ನು ಕಂಡಿದ್ದೇನೆ. (ವೀರ್ಯದ ದೋಷಕ್ಕೂ ಲೈಂಗಿಕ ಕಾರ್ಯಕ್ಷಮತೆಗೂ ಏನೇನೂ ಸಂಬಂಧವಿಲ್ಲ!) ಇನ್ನು, ವೀರ್ಯದಲ್ಲಿ ದೋಷ ಕಂಡುಬಂದಾಗ ಮುಂಚೆಯಿರದ ಶಿಶ್ನದೌರ್ಬಲ್ಯ ಪ್ರತ್ಯಕ್ಷವಾಗಿ ಸಂಭೋಗ ಅಸಾಧ್ಯವಾಗಿರುವುದು ಅನೇಕರ ಅನುಭವ. ವೀರ್ಯದೋಷದಿಂದ ಖಿನ್ನತೆಗೆ ಒಳಗಾದ ಗಂಡಸರಿಗೆ ಒಂದು ಮಾತು: ದಾಂಪತ್ಯದಲ್ಲಿ ಲೈಂಗಿಕ ಸಾಮರಸ್ಯದ ಬಗೆಗೆ ಭರವಸೆ ಕೊಡಬಹುದೇ ವಿನಾ ಸಂತಾನೋತ್ಪತ್ತಿಯ ಬಗೆಗೆ ಕೊಡಲು ಸಾಧ್ಯವಿಲ್ಲ – ಯಾಕೆಂದರೆ ಅದು ಯಾರ ಕೈಯಲ್ಲೂ ಇಲ್ಲ. ಹಾಗೆ ನೋಡಿದರೆ ದಾಂಪತ್ಯದಲ್ಲಿ ಸಂತಾನಕ್ಕೆ ಮೊದಲ ಆದ್ಯತೆ ಇಲ್ಲವೇ ಇಲ್ಲ – ಒಂದುವೇಳೆ ಹಾಗಿದ್ದಲ್ಲಿ ಮೊದಲು ಗಂಡು-ಹೆಣ್ಣು ಸಂಭೋಗದಲ್ಲಿ ತೊಡಗಿ, ಮಗುವಾದ ನಂತರವೇ ಮದುವೆಯಾಗುವುದು ರೂಢಿಯಲ್ಲಿ ಇರುತ್ತಿತ್ತು! ಇನ್ನೊಂದು ಕುತೂಹಲಕರ ವಿಷಯವೆಂದರೆ, ಹೆಣ್ಣು ಗರ್ಭಿಣಿಯಾಗಲು ಯತ್ನಿಸುತ್ತಿರುವಾಗ ಗಂಡು ಹೆಚ್ಚುಹೆಚ್ಚಾಗಿ ಹಾಗೂ ದೀರ್ಘಕಾಲ ಸಂಭೋಗ ನಡೆಸುವ ಜವಾಬ್ದಾರಿ ಹೊರುವುದೂ ಇದೆ. ಇದರಿಂದ ಗರ್ಭಕಟ್ಟುವ ಸಂಭವ ಹೆಚ್ಚು ಎಂದು ತಪ್ಪು ನಂಬಿಕೆಯಿದೆ (ವೈಜ್ಞಾನಿಕವಾಗಿ, ದಿನಬಿಟ್ಟು ದಿನ ಸಂಭೋಗ ಹೆಚ್ಚು ಸೂಕ್ತ). ಹೀಗೆ, ದಿನಕ್ಕೆ ನಾಲ್ಕೈದು ಸಲ ಸಂಭೋಗ ನಡೆಸಿದ ಗಂಡಸರು ಸಾಕಷ್ಟಿದ್ದಾರೆ. ಇದರಿಂದ ಹೆಣ್ಣಿನ ಮೇಲೆ ಏನು ಪರಿಣಾಮ ಆದೀತು? ಗೊತ್ತಿಲ್ಲ, ಆದರೆ “ನಿನ್ನೊಡನೆ ನಾನಿದ್ದೇನೆ” ಎನ್ನುವ ಅನಿಸಿಕೆ ಅವಳ ಮನಸ್ಸನ್ನು ಆಳವಾಗಿ ತಟ್ಟುತ್ತದೆ. ಹಾಗಾಗಿ ಅವಳು ಪ್ರತಿಕೂಟವನ್ನೂ ಸವಿಯುತ್ತಾಳೆ ಎಂದೆನಿಸುತ್ತದೆ. ಹೆಚ್ಚುಹೆಚ್ಚಾದ ಕಾಮಕೂಟವು ಪ್ರಣಯಭರಿತವಾಗಿದ್ದು ಮನೋಲೈಂಗಿಕ ಆರೋಗ್ಯದೊಡನೆ ತಳಕು ಹಾಕಿಕೊಂಡಿರುತ್ತದೆ ಎನ್ನುವುದಕ್ಕೆ ಮನಶ್ಶಾಸ್ತ್ರದಲ್ಲಿ ಆಧಾರವಿದೆ. ಇನ್ನು, ಹೆಣ್ಣು ಹೆರಿಗೆಯಲ್ಲಿ ತೊಡಗಿದಾಗ ಆಗುವ ಅನುಭವವು ಆಕೆಯ ಗಂಡನಿಗೂ ಆದುದರ ಬಗೆಗೆ ಕೆಲವೆಡೆ ಉಲ್ಲೇಖವಿದೆ. ಗಂಡಹೆಂಡಿರ ನಡುವಿನ ಅನ್ಯೋನ್ಯತೆಯು ಗಾಢವಾದಷ್ಟೂ, ಹಾಗೂ ಗಂಡಿನ ಸಂವೇದನಾಶೀಲತೆಯು ಉತ್ಕಟವಾಗುತ್ತ ಇಬ್ಬರ ನಡುವೆ ತಾದಾತ್ಮ್ಯತೆ (attunement) ಹುಟ್ಟುತ್ತದೆ. ಆಗ (ಸಮನಾಗಿ ಶ್ರುತಿಗೊಳಿಸಿದ ಎರಡು ತಂತಿಗಳಲ್ಲಿ ಒಂದನ್ನು ಮೀಟಿದಾಗ ಇನ್ನೊಂದೂ ಕಂಪಿಸುವಂತೆ) ಹೆಣ್ಣಿನ ಶಾರೀರಿಕ ಅನುಭವವನ್ನು ಗಂಡು ಅನುಭವಿಸಬಲ್ಲ.
ಸಹಜ ಹಾಗೂ ಮುಕ್ತ ತಾಯ್ತನ
ಹೆಣ್ಣು ತಾಯಿಯಾಗಲು ಬಯಸುವುದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ. ಸಹಜವಾದ ತಾಯ್ತನ ಹೇಗಿರುತ್ತದೆ? ಗರ್ಭಿಣಿಯೆಂದು ಗೊತ್ತಾದಾಗ ಹರ್ಷ, ಮಗುವಿಗೆ ಉತ್ಸಾಹದಿಂದ ತಯಾರಿ, ಗರ್ಭಸ್ಥ ಶಿಶುವಿನ ಮೊದಲ ಚಲನೆಯನ್ನು ಅನುಭವಿಸುವಾಗ ಪುಳಕ, ಹಾಗೂ ಹೆರಿಗೆಯ ನಂತರ ನವಜಾತ ಶಿಶುವು ಪಕ್ಕದಲ್ಲಿ ಮಲಗಿದಾಗ ಅನಿರ್ವಚನೀಯ ತೃಪ್ತಿ ಹಾಗೂ ಸಾರ್ಥಕತೆ – ಇವೆಲ್ಲ ಅನುಭವಿಸಿದವರಿಗೇ ಗೊತ್ತು. (ಒಂದುವೇಳೆ ಹೆಣ್ಣಾಗಿದ್ದರೆ ಈ ಅನುಭವವನ್ನು ನಾನೂ ಪಡೆಯಬಹುದಿತ್ತು ಎಂದು ವೈಯಕ್ತಿಕವಾಗಿ ಅನಿಸಿದ್ದಿದೆ.) ಇನ್ನೊಂದು ವಿಷಯ ಏನೆಂದರೆ, ತಾಯ್ತನದ ಭಾವ ಸಾರ್ವತ್ರಿಕ: ಯಾರದೇ ಮಕ್ಕಳನ್ನು ಕಂಡರೂ ಮಾತೃತ್ವ ಭಾವ ಸ್ಫುರಿಸುತ್ತದೆ. ಅದಕ್ಕೊಂದು ದೃಷ್ಟಾಂತ:
ನಾಲ್ಕು ದಶಕಗಳ ಹಿಂದಿನ ಸಂಗತಿ. ರೈಲು ಪ್ರಯಾಣದಲ್ಲಿದ್ದೆ. ನನ್ನೆದುರು ಆಧುನಿಕ ಮಹಿಳೆಯೊಬ್ಬಳು ಶಿಶುವಿನೊಂದಿಗೆ ಕುಳಿತಿದ್ದಳು. ಮುಂದಿನ ನಿಲ್ದಾಣದಲ್ಲಿ ಹಳ್ಳಿಯ ಹೆಂಗಸೊಬ್ಬಳು ಗಾಡಿಹತ್ತಿ ಮಹಿಳೆಯ ಪಕ್ಕದ ಜಾಗವನ್ನು ಆಕ್ರಮಿಸಿದಳು. ಆಕೆಯ ಕೈಯಲ್ಲೂ ಒಂದು ಹಸುಗೂಸಿತ್ತು. ಅದು ಕಿರಿಕಿರಿ ಮಾಡಿದಾಗ ಆಕೆ ಎಳ್ಳಷ್ಟೂ ಸಂಕೋಚವಿಲ್ಲದೆ ಎಲ್ಲರೆದುರು ಎದೆತೆರೆದು ಹಾಲು ಕುಡಿಸಲು ಶುರುಮಾಡಿದಳು. ಇದನ್ನು ಗಮನಿಸಿದ ಮಹಿಳೆ ಮುಖ ಸಿಂಡರಿಸಿಕೊಂಡು ಕಿಟಕಿಯ ಹೊರಗೆ ನೋಡುತ್ತಿದ್ದಳು. ಸ್ವಲ್ಪ ಹೊತ್ತಿನ ತರುವಾಯ ಮಹಿಳೆಯ ಶಿಶು ಎದ್ದು ಅಳಹತ್ತಿತು. ಆಕೆ ಹಾಲು ಸಿದ್ಧಪಡಿಸಿ ಬಾಟಲನ್ನು ಶಿಶುವಿನ ಬಾಯಲ್ಲಿಡಲು ನೋಡಿದಾಗ ಕುಡಿಯದೆ ಹಠ ಮಾಡಿತು. ಯಾವುದೇ ಯತ್ನಕ್ಕೂ ಅದರ ತಾರಕ ಸ್ವರ ನಿಲ್ಲಲಿಲ್ಲ. ಸಮಾಧಾನ ಮಾಡಲು ತಿಳಿಯದ ಮಹಿಳೆ ಕಂಗೆಟ್ಟಿದ್ದು ಸ್ಪಷ್ಟವಾಗಿತ್ತು. ಆಗ ಹಳ್ಳಿಯ ಹೆಂಗಸು, “ಆ ಕೂಸನ್ನ ಇತ್ಲಾಗ್ ಕೊಡ್ರವ್ವ…” ಎನ್ನುತ್ತಾ ಹೆಚ್ಚುಕಡಿಮೆ ಮಹಿಳೆಯಿಂದ ಕಸಿದುಕೊಂಡು ತನ್ನೆದೆಗೆ ಇಟ್ಟುಕೊಂಡಳು. ಎದೆಯ ಸ್ಪರ್ಶವಾದದ್ದೇ ತಡ, ಆ ಪುಟ್ಟಜೀವಿಯು ಅತ್ಯಂತ ಅವಸರದಿಂದ ಹಾಲುಹೀರಲು ಶುರುಮಾಡಿತು! ಇದನ್ನು ನೋಡುತ್ತಿದ್ದ ಮಹಿಳೆಗೆ ಏನು ಅನುಭವ ಆಯಿತೋ ಗೊತ್ತಿಲ್ಲ. ನಂತರವೂ ಆಕೆ ಕಿಟಕಿಯ ಹೊರಗೆ ನೋಡುತ್ತಿದ್ದಳು – ಈ ಸಲ ಆಕೆಯ ಕಣ್ಣಲ್ಲಿ ನೀರಿತ್ತು. ಅಂತಃಕರಣದಿಂದ ಸ್ಫುರಿಸುವ ತಾಯ್ತನ ಹೇಗಿರುತ್ತದೆ ಎಂದು ಗೊತ್ತಾಯಿತಲ್ಲ? ಇತ್ತೀಚೆಗೆ ರಾಜಕಾರಣಿ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಎದೆಹಾಲು ಕುಡಿಸಿದ್ದು ಸುದ್ದಿಯಾಗಿತ್ತು.
ಒಟ್ಟಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವುದಕ್ಕಿಂತಲೂ ತಾಯ್ತಂದೆತನದ ಅನುಭವವು ಮುಖ್ಯವಾಗಿದ್ದು ಬದುಕಿಗೆ ಹೆಚ್ಚು ಅರ್ಥ ಕೊಡುತ್ತದೆ. ಆದುದರಿಂದ ಮಗುವನ್ನು ಬಯಸುವ ದಂಪತಿಗಳು ಈ ವಿಷಯದಲ್ಲಿ ನಿಚ್ಚಳವಾದ ಅಭಿಪ್ರಾಯವನ್ನು ಹೊಂದುವುದು ಅಗತ್ಯ. ಮಗು ಬೇಡ ಎನ್ನುವವರ ಅಭಿಪ್ರಾಯವನ್ನು ಅವರ ಹಿರಿಯರು ಗೌರವಿಸುವುದೂ ಅತ್ಯಗತ್ಯ. ಹಾಗೆ ಗೌರವಿಸದ ಹಿರಿಯರನ್ನು ಯುವಕ-ಯುವತಿಯರು ದೃಢವಿಶ್ವಾಸದಿಂದ ಎದುರಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಸಂತಾನೋತ್ಪತ್ತಿಯು ಖಾಸಗಿ ವಿಷಯ. ತಾಯ್ತಂದೆತನವನ್ನು ಬಲವಂತದಿಂದ ಹೇರಕೂಡದು. ತಾಯ್ತಂದೆತನವು ಹೆಣ್ಣುಗಂಡುಗಳ ಲಿಂಗೀಯತೆಯನ್ನು ಅಳೆಯುವ ಅಳತೆಗೋಲು ಎಂದಿಗೂ ಆಗಕೂಡದು. ಹೆಣ್ಣುಗಂಡುಗಳಿಗೆ ತಾಯಿತಂದೆಯಾಗದೆ ಕೇವಲ ದಂಪತಿಯಾಗಿ ಬದುಕಲು ಹಕ್ಕಿದೆ.
ಈಗ ಸಮಗ್ರವಾಗಿ ಯೋಚಿಸಿ: ನಿಮಗೆ ಮಗುವು ಬೇಕೆ? ಏಕೆ?
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.