Please wait...

ಸುಖೀ ದಾಂಪತ್ಯ ೨೫೨

ತಾಯ್ತಂದೆಯರ ಜಾಗದಲ್ಲಿ ಅಜ್ಜಿ-ತಾತಂದಿರ ಪ್ರೀತಿಯನ್ನು ಪಡೆದ ಮಕ್ಕಳು ಒಂದು ಮೂವತ್ತು ವರ್ಷ ಮುಂಚೆಯೇ ಅನಾಥರಾಗುತ್ತಾರೆ!

252: ಮಗು ಬೇಕೆ? ಏಕೆ? – 5

ಮಗು ಬೇಕೆನ್ನುವುದರ ಹಿಂದಿನ ನಾನಾ ಕಾರಣಗಳ ಬಗೆಗೆ, ಹಾಗೂ ಒತ್ತಾಯದ ತಾಯ್ತಂದೆತನದಿಂದ ಮಗುವಿನ ಮೇಲೆ ಆಗುವ ದುಷ್ಪರಿಣಾಮಗಳ ಬಗೆಗೆ  ಮಾತಾಡುತ್ತಿದ್ದೇವೆ.

ಇತ್ತೀಚೆಗೆ ಸುದ್ದಿಯೊಂದರಲ್ಲಿ ಕೇಂದ್ರ ದತ್ತುಸ್ವೀಕಾರ ಸಂಪನ್ಮೂಲ ಸಂಸ್ಥೆಯು (ಕಾರಾ CARA) ತನ್ನಿಂದ ದತ್ತು ಪಡೆದುಕೊಂಡ ಮಕ್ಕಳನ್ನು ಕೆಲವರು ಹಿಂತಿರುಗಿಸುತ್ತಿದ್ದಾರೆ ಎಂದು ವರದಿಯಿತ್ತು. ಕಳೆದ ಐದು ವರ್ಷಗಳಲ್ಲಿ ದೇಶದಾದ್ಯಂತ 1100ಕ್ಕೂ ಹೆಚ್ಚು ದತ್ತು ಮಕ್ಕಳನ್ನು ಸಂಸ್ಥೆಗೆ ಮರಳಿಸಲಾಗಿದೆ. ಕೌತುಕದ ಸಂಗತಿ ಏನೆಂದರೆ, ಮರಳಿದವರಲ್ಲಿ ಒಂದಂಶ ಸಾಮಾನ್ಯವಾಗಿದೆ. ಇವರೆಲ್ಲರೂ ದತ್ತುಹೋಗುವಾಗ ಆರು ವರ್ಷಕ್ಕೆ ಮೇಲ್ಪಟ್ಟವರು. ಆರು ವರ್ಷ ದಾಟಿದವರಿಗೆ ಹೊಸ ಕುಟುಂಬದಲ್ಲಿ ಹೊಂದಾಣಿಕೆ ಕಷ್ಟಸಾಧ್ಯ ಎನ್ನುವುದಕ್ಕೆ ಆಧಾರವಿದೆ. ಯಾಕೆಂದರೆ, ಅಷ್ಟೊತ್ತಿಗೆ ಆಶ್ರಯ ಸಂಸ್ಥೆಯ ನಿರ್ದಿಷ್ಟ ವ್ಯಕ್ತಿಯೊಂದಿಗೆ ಭದ್ರಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಅಲ್ಲದೆ, ಆ ವಯಸ್ಸಿಗೆ ಅವರ ವ್ಯಕ್ತಿತ್ವದ ನೀಲಿನಕ್ಷೆ ಪೂರ್ತಿ ಸಿದ್ಧವಾಗಿರುತ್ತದೆ. ಇಂಥವರನ್ನು ದತ್ತು ಕುಟುಂಬಕ್ಕೆ ಕರೆತಂದರೆ ಬೆಳೆದ ಗಿಡವನ್ನು ಕಿತ್ತು ಇನ್ನೊಂದು ಕಡೆ ನೆಟ್ಟಂತಾಗುತ್ತದೆ. ಇನ್ನೊಂದು ಕಾರಣವೆಂದರೆ, ದತ್ತು ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ  “ಎಲ್ಲರಂತೆ” ಬದುಕು ಎದುರಿಸುವುದನ್ನು ನಿರೀಕ್ಷಿಸಲಾಗುತ್ತದೆ. ಅತ್ಯಂತ ಉತ್ಕೃಷ್ಟ ಕಾಳಜಿಯಿದ್ದರೂ ಮಕ್ಕಳು ಅನಾಥಪ್ರಜ್ಞೆಯಿಂದ ಹೊರಬರಲು ದಶಕಗಳೇ ಹಿಡಿಯುತ್ತವೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಪಾಲಿಗಿಲ್ಲದ ತಾಯ್ತಂದೆಯರು

ದತ್ತು ಮಕ್ಕಳ ವಾಪಸಾತಿಯ ವಿಷಯ ಯಾಕೆ ಎತ್ತುತ್ತಿದ್ದೇನೆ? ಇದಕ್ಕೆ ಕಾರಣವಿದೆ. ಒತ್ತಾಯದಿಂದ ಮಗುವನ್ನು ಮಾಡಿಕೊಂಡವರ ಪೈಕಿ ಸಾಕಷ್ಟು ದಂಪತಿಗಳು ಹೊಣೆಯನ್ನು ತಮ್ಮ ತಾಯ್ತಂದೆಯರಿಗೆ ವರ್ಗಾಯಿಸುತ್ತಾರೆ (“ಮೊಮ್ಮಗು ನಿಮಗೆ ಬೇಕಿತ್ತಲ್ಲವೆ? ನೀವೇ ನೋಡಿಕೊಳ್ಳಿ!”). ಮಗುವಿನ ಸಂಪರ್ಕದಲ್ಲಿ ಇದ್ದರೂ ಅದರ ಭಾವನೆಗಳ ಆಯಾಮದ ಹೊರಗೆ ಉಳಿಯುತ್ತಾರೆ. ಮಗುವು ಅಜ್ಜಿತಾತಂದಿರ ಭಾವಳತೆಯಲ್ಲಿ ಬೆಳೆಯುವುದು ಅದ್ಭುತ ಅನುಭವವೇ ಸರಿ. ಆದರೆ ಹೆಚ್ಚಿನವರು ಮೊಮ್ಮಕ್ಕಳನ್ನು ಪ್ರೀತಿಸಬಲ್ಲರೇ ವಿನಾ ಅವರ ಶಾರೀರಿಕ ಬೆಳವಣಿಗೆಯ ಜೊತೆಗೆ ಹೆಜ್ಜೆಯಿಡಲು ಆಗಲಿಕ್ಕಿಲ್ಲ (ಉದಾ. ಬಾಲಕನೊಬ್ಬ ಕ್ರಿಕೆಟ್ ಆಡಲು ಅಪ್ಪನ ಬದಲು ಅಜ್ಜನನ್ನು ಆರಿಸಿಕೊಂಡರೆ ಹೇಗಿರುತ್ತದೆ?). ಇನ್ನೊಂದು ಬಹುದೊಡ್ಡ ತೊಂದರೆಯೂ ಇದೆ. ಈ ದಂಪತಿಯನ್ನೇ ನೋಡಿ. ಇಬ್ಬರೂ ನಗರದಲ್ಲಿ ಉದ್ಯೋಗಸ್ಥರಾಗಿದ್ದಾರೆ. ನೋಡಿಕೊಳ್ಳಲು ಆಗದೆಂದು ತಮ್ಮ ಎರಡು ವರ್ಷದ ಎರಡನೆಯ ಮಗನನ್ನು ಅಜ್ಜಿ-ತಾತನ ಜೊತೆಗೆ ಬಿಟ್ಟಿದ್ದಾರೆ. ಹಳ್ಳಿಯ ಪರಿಸರದಲ್ಲಿ ಹುಲುಸಾಗಿ ಬೆಳೆದ ಅವನಿಗೆ ಆರು ತುಂಬಿದಾಗ ಶಿಕ್ಷಣಕ್ಕೆಂದು ತಾಯ್ತಂದೆಯರ ಜೊತೆಗೆ ಇರಲು ನಗರಕ್ಕೆ ಎತ್ತಂಗಡಿ ಮಾಡಲಾಗಿದೆ. ಸಹಪಾಠಿಗಳಿಂದ ಹಿಡಿದು ವಾಯುಮಾಲಿನ್ಯದ ತನಕ ಯಾವುದಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಕುಟುಂಬದವರ ಜೊತೆಗೆ ಸುಖಸಂಪರ್ಕವಂತೂ ಇಲ್ಲವೇ ಇಲ್ಲ. ಖಿನ್ನತೆಯಿಂದ ಒಂಟಿಯಾಗಿದ್ದಾನೆ. ನಿದ್ರೆಯಲ್ಲಿ ಬೆಚ್ಚಿಬಿದ್ದೆದ್ದು ಅಜ್ಜಿ-ತಾತ ಎಲ್ಲೆಂದು ಹುಡುಕುತ್ತಾನೆ.ತಾಯ್ತಂದೆಯರು ಶಿಸ್ತು ತರಲು ನೋಡುವಾಗ ತಿರುಗಿಬೀಳುತ್ತಾನೆ. ಪ್ರಕೃತಿಯಲ್ಲಿ ಬೆಳೆದ ಗಿಡವನ್ನು ಕಿತ್ತುತಂದು ಉದ್ಯಾನದಲ್ಲಿ ನೆಟ್ಟು, ನಗರದ ಇಷ್ಟದಂತೆ ಪ್ರಾಣಿಯನ್ನಾಗಿ ವಿನ್ಯಾಸಗೊಳಿಸುವ ಪ್ರಯತ್ನ ವಿಫಲವಾದಾಗ ಅನಿವಾರ್ಯವಾಗಿ ತಂದಲ್ಲಿಗೆ ಮರಳಿಸಲಾಗಿದೆ. ದತ್ತುಸಂಸ್ಥೆಗೆ ಮರಳಿದ ಮಕ್ಕಳು ನೆನಪಾದುದರ ಕಾರಣ ಗೊತ್ತಾಯಿತಲ್ಲ?

ಇದರೊಡನೆ ಇನ್ನೊಂದು ಕತೆ ನೆನಪಾಗುತ್ತಿದೆ. ಹಿರಿಯರೊಬ್ಬರು ಮಗಳು-ಅಳಿಯನ ನಡುವಿನ ಜಗಳವನ್ನು ಬಗೆಹರಿಸಲು ನನ್ನಲ್ಲಿ ಕರೆತಂದಿದ್ದರು. ಆಗಲೇ ಆಕೆ ಗರ್ಭವತಿಯಾಗಿದ್ದು ಬೆಳಕಿಗೆ ಬಂತು. ಸಮಸ್ಯೆಗಳು ಬಗೆಹರಿದು ಸ್ಥಿರಸಂಬಂಧವು ಬೇರೂರುವ ತನಕ ಮಗುವು ಬೇಡವೆಂದು ಸೂಚಿಸಿದೆ. ಮುಂದೇನಾಯಿತು ಗೊತ್ತಾಗಲಿಲ್ಲ. ಮೂರು ವರ್ಷದಮೇಲೆ ಆ ಹಿರಿಯರು ಸಿಕ್ಕಿದ್ದರು. ವಿಚಾರಿಸಿದಾಗ ಖುಷಿಯಿಂದ ಹೇಳಿಕೊಂಡರು: ಅವರೇ ನಿಂತು ಮಗಳಿಗೆ ವಿಚ್ಛೇದನ ಕೊಡಿಸಿ ಮರುಮದುವೆಯನ್ನೂ ಮಾಡಿಸಿದರಂತೆ. ಅವರ ತಂದೆತನವನ್ನು ಮೆಚ್ಚುತ್ತ ಗರ್ಭಧರಿಸಿದ್ದರ ಬಗೆಗೆ ವಿಚಾರಿಸಿದಾಗ ತಿಳಿದುಬಂದಿದ್ದು ಆಘಾತಕಾರಿಯಾಗಿತ್ತು. “ಓಹೋ ಅದಾ? ಗಂಡುಮಗುವಾಯಿತು. ಈಗ ಪುಟ್ಟನಿಗೆ ಎರಡೂವರೆ ವರ್ಷ. ಮದುವೆಗೆ ಮುಂಚೆ ಮಾತಾಡಿದಂತೆ ನಾನೂ ನನ್ನವಳೂ ಸಾಕುತ್ತಿದ್ದೇವೆ. ಮಗಳು ಗಂಡನೊಡನೆ ಹತ್ತಿರದಲ್ಲೇ ಮನೆ ಮಾಡಿದ್ದಾಳೆ. ಆಗಾಗ ಬಂದು ಪುಟ್ಟನನ್ನು ನೋಡಿಕೊಂಡು ಹೋಗುತ್ತಾಳೆ.” ನನಗೇಕೋ ಅರೆಕಾಲೀನ ಸಂದರ್ಶಕ ಪ್ರಾಧ್ಯಾಪಕರ ನೆನಪಾಯಿತು. ಅದಿರಲಿ, ಹೆಂಡತಿ ಮಾತ್ರ ಬೇಕು, ಆಕೆಯ ಮಗು ಬೇಡ ಎನ್ನುವ ಮನೋಭಾವದ, ತಾಯಿಮಕ್ಕಳನ್ನು ಸ್ವಾರ್ಥಕ್ಕಾಗಿ ಅಗಲಿಸಲು ಹೇಸದ ಗಂಡನ್ನು ಈ ಹಿರಿಯರು ಹೇಗೆ ಒಪ್ಪಿಕೊಂಡರೋ ಗೊತ್ತಾಗಲಿಲ್ಲ. ಅಜ್ಜಿ-ತಾತ ಮೊಮ್ಮಕ್ಕಳನ್ನು ತಮ್ಮ ಮಕ್ಕಳಂತೆ ಪೋಷಿಸುವುದರಲ್ಲಿ ಹಲವಾರು ನ್ಯೂನತೆಗಳು ಕಾಣಬಹುದು; ಆದರೆ ಒಂದು ಮಾತ್ರ ಭೀಕರವಾಗಿದೆ: ಮಕ್ಕಳು ಪೋಷಕರನ್ನು ಒಂದು ಮೂವತ್ತು ವರ್ಷ ಮುಂಚೆಯೇ ಕಳೆದುಕೊಳ್ಳುತ್ತಾರೆ! ಪ್ರೀತಿಯ ಸೆಲೆ ಬತ್ತಿದಮೇಲೆ ಹೊಸ ಸೆಲೆ ಸಿಕ್ಕೀತೆ? ಕಳೆದುಕೊಂಡದ್ದನ್ನು ಮಗು ಮಲತಂದೆಯಿಂದ, ಅಥವಾ ಅವನ ಹೆಂಡತಿಯಾಗಲು ತನ್ನನ್ನು ತೊರೆದವಳಿಂದ ಪಡೆಯಲಾದೀತೆ? ಇಂಥ ಮಕ್ಕಳು ಬೆಳೆಯುತ್ತ  ಏನಾಗುತ್ತಾರೆ ಎಂಬುದಕ್ಕೆ ಈ ಇಪ್ಪತ್ತೊಂದರ ಯುವತಿಯ ಕತೆ ಕೇಳಿ: ಈಕೆಗೆ ಜನ್ಮ ಕೊಟ್ಟವರು ವಿಚ್ಛೇದನ ಪಡೆದು ಮರುಮದುವೆ ಆಗಿದ್ದಾರೆ. ಇವಳು ತಾಯಿಯ ಜೊತೆಗಿದ್ದಾಳೆ. ಇವಳೇ ಹೇಳುವಂತೆ, “ತಾಯಿಯ ಗಂಡನು” ಇವಳನ್ನು ಅಸಡ್ಡೆಯಿಂದ ಅಲಕ್ಷಿಸುತ್ತಿದ್ದಾನೆ. ಇತ್ತ ತಾಯಿ ಅಸಹಾಯಕ ಆಗಿದ್ದಾಳೆ. ಹೆತ್ತವಳ ಮೇಲೆ ಹೆಚ್ಚಿನ ಒತ್ತಡ ಹಾಕಲಿಕ್ಕಾಗದೆ, ಅಲ್ಲಿರಲೂ ಮನಸ್ಸಾಗದೆ ಹೊರವಸತಿಯಲ್ಲಿ ಒಂಟಿಯಾಗಿ ಇದ್ದಾಳೆ. ಸಿಗದ ಪ್ರೀತಿಯ ಜಾಗವನ್ನು ಮಾದಕ ದ್ರವ್ಯದಿಂದ ಭರ್ತಿಮಾಡುತ್ತ, ಚೂರು ಪ್ರೀತಿಯನ್ನು ಕೊಡಬಂದ ಹುಡುಗರ ಜೊತೆಗೆ ಮಲಗುತ್ತಿದ್ದಾಳೆ. ಇನ್ನೊಂದು ಪ್ರಸಂಗದಲ್ಲಿ ಸರಕಾರಿ ಕೆಲಸದಲ್ಲಿ ಇರುವ ಸ್ನಾತಕೋತ್ತರ ಪದವೀಧರೆ ಗಂಡನ ಹಿಂಸೆಗೆ ಶರಣುಹೋಗಿ ಅವನಿಚ್ಛೆಯಂತೆ ಗರ್ಭಿಣಿಯಾಗಿದ್ದಾಳೆ. ಹುಟ್ಟಿದ ಹೆಣ್ಣುಮಗು ಅಪ್ಪನ ಹಿಂಸೆಯನ್ನು ಸಹಿಸುತ್ತ ದೊಡ್ಡವಳಾಗಿದ್ದಾಳೆ. ಆಕೆಯ ವ್ಯಕ್ತಿತ್ವವೇ ಹೆಪ್ಪುಗಟ್ಟಿದಂತಾಗಿದೆ. ತನ್ನನ್ನು ಹಾಳುಮಾಡಿದ ಅಪ್ಪನನ್ನು ಆಕೆ ರಾಕ್ಷಸ ಎಂದೇ ಸಂಬೋಧಿಸುತ್ತಾಳೆ.

ಹಾಗಾದರೆ ದುರ್ಬಲ ದಾಂಪತ್ಯದಲ್ಲಿ ಹುಟ್ಟಿದ ಮಗುವಿಗೆ ಭವಿಷ್ಯವಿಲ್ಲವೆ? ಯಾಕಿಲ್ಲ, ಆದರೆ ಇಬ್ಬರ ಪೈಕಿ ಒಬ್ಬರ ನಿರ್ವ್ಯಾಜ ಪ್ರೀತಿ ಇದ್ದರೆ ಮಾತ್ರ ಇದು ಸಾಧ್ಯವಿದೆ. ಅದಕ್ಕೂ ಅಪರೂಪದ ದೃಷ್ಟಾಂತವಿದೆ: ಇವಳು ಬಹಿರಾಡಂಬರದ, ಆತ್ಮಾಸಕ್ತಿಯ (narcissistic), ಹೃದಯಹೀನ ಹುಡುಗನ ಚೆಲುವನ್ನು ಮೆಚ್ಚಿ ಮದುವೆಯಾದಳು. ಮದುವೆಯ ಹೊಸದರಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ನನ್ನಲ್ಲಿ ಬಂದಿದ್ದಳು. ಆಗಾಕೆ ಗರ್ಭಿಣಿಯಾದರೆ ಏನು ಮಾಡಬಹುದು ಎಂದದ್ದಕ್ಕೆ, ಗಂಡನನ್ನು ಬಿಟ್ಟುಹಾಕಿ ಮಗುವನ್ನು ಒಂಟಿಪೋಷಕಳಾಗಿ ಬೆಳೆಸುವೆನೆಂದು ಹೇಳಿದಳು. ಮುಂದಿನ ವರ್ಷ ಆಕೆ ಗರ್ಭಿಣಿಯಾದಾಗ ನಿರೀಕ್ಷಿಸಿದಂತೆ ಗಂಡ ಅಹಂಭಾವದಿಂದ ದೂರವಾದ. ಆಕೆ ಏನು ಮಾಡಿದಳು? ಗರ್ಭ ಮುಂದುವರಿಸಲು ನಿರ್ಧರಿಸಿದಳು. ಈಗ ಗಂಡನಿಂದ ದೂರವಾಗಿ ಮಗುವನ್ನು ಇನ್ನಿಲ್ಲದಂತೆ ಬೆಳೆಸುತ್ತ ತಾಯ್ತನದ ತೃಪ್ತಿ ಅನುಭವಿಸುತ್ತಿದ್ದಾಳೆ. ಒಂದುವೇಳೆ ಮರುಮದುವೆ ಆಗುವ ಸಂದರ್ಭ ಬಂದರೆ ತನ್ನನ್ನೂ ಮಗುವನ್ನೂ ಸಮಾನವಾಗಿ ಪ್ರೀತಿಸುವವನನ್ನು ಒಪ್ಪಿಕೊಳ್ಳುತ್ತಾಳಂತೆ. ಅವನೇನಾದರೂ ಅಲಕ್ಷಿಸಿದರೆ ಅವನಿಂದರೂ ದೂರವಾಗಲು ಹಿಂಜರಿಯುವದಿಲ್ಲವಂತೆ. ಇವಳಷ್ಟು ಛಾತಿ ಯಾರಿಗಿದೆ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.