Please wait...

ಸುಖೀ ದಾಂಪತ್ಯ ೨೫೪

“ನೀನು ಬೇಡವಾದರೂ ದಾಂಪತ್ಯ ಬೇಕು” ಎನ್ನುವುದು ದಾಂಪತ್ಯದೊಡನೆ ಕಟ್ಟಿಕೊಂಡಿರುವ ಸುಸಂಬಂಧದ ದ್ಯೋತಕ.

254: ಮಗು ಬೇಕೆ? ಏಕೆ? – 7

ಒತ್ತಾಯದ ತಾಯ್ತಂದೆತನದ ಬಗೆಗೆ ಮಾತಾಡುತ್ತಿದ್ದೇವೆ. ಮಕ್ಕಳಿಗೆ ಅಗತ್ಯವಾದ ಮಾರ್ಗದರ್ಶನಕ್ಕೆ ಸಿದ್ಧರಾಗದ ಹೊರತೂ ಮಗುವನ್ನು ಮಾಡಿಕೊಳ್ಳುವುದು ಬೇಡವೆಂದು ಹೇಳುತ್ತಿದ್ದೆ. ಮಗು ಬೇಕೆನ್ನುವ ದಿಢೀರ್ ನಿರ್ಧಾರದ ಬಗೆಗೂ ಅಕಸ್ಮಾತ್ತಾಗಿ ಗರ್ಭಧರಿಸುವುದರ ಬಗೆಗೂ ಯೋಚಿಸುತ್ತಿರುವಾಗ ಇನ್ನೊಂದು ಪರಿಕಲ್ಪನೆ ಹೊಳೆಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ದಾಂಪತ್ಯದೊಡನೆಯ ಸಂಬಂಧ

ಮದುವೆಯಾಗಲಿರುವ ಬಹುತೇಕ ಗಂಡುಹೆಣ್ಣುಗಳು ಮದುವೆಯಾದ ಸ್ವಲ್ಪಕಾಲ ಗರ್ಭಧಾರಣೆ ಬೇಡವೆಂದು ಮುಂಚೆಯೇ ಮಾತಾಡಿಕೊಳ್ಳುತ್ತಾರೆ. ನಂತರ ನಮಗಿಬ್ಬರಿಗೂ ಬೇಕು ಎನ್ನುವಾಗ ಸಂತಾನಕ್ಕೆ ಸಿದ್ಧರಾಗುತ್ತಾರೆ. ಇದರಲ್ಲೊಂದು ಸಂಕೀರ್ಣತೆಯಿದೆ: “ನಾವಿಬ್ಬರೂ” ಅಷ್ಟೇ ಅಲ್ಲ, “ನಮ್ಮ ದಾಂಪತ್ಯವೂ” ಗರ್ಭಧಾರಣೆಗೆ ಸಿದ್ಧವಾಗಿದೆಯೆ ಎಂದು ಖಚಿತ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಯಾಕೆ? ನಮ್ಮಿಬ್ಬರಲ್ಲಿ ಶರೀರ ಸಂಬಂಧ ನಡೆಯುತ್ತಿದೆ, ಇಬ್ಬರಿಗೂ ತೃಪ್ತಿ ಸಿಗುತ್ತಿದೆ, ಪರಸ್ಪರರ ಸಾನ್ನಿಧ್ಯದಲ್ಲಿ ಹಿತವೆನ್ನಿಸುತ್ತದೆ, ಹಾಗಾಗಿ ಇನ್ನು ಮಗುವಾಗಲು ಅಡ್ಡಿಯಿಲ್ಲ ಎನ್ನುವುದು ಭಾವನಾತ್ಮಕ ಕಾರಣವಷ್ಟೆ (emotional reasoning). ಅಂದರೆ, ನಾನು ಹೀಗೆ ಭಾವಿಸುವುದರಲ್ಲಿ ಸುಖವಿದೆ, ಹಾಗಾಗಿ ಈ ಭಾವನೆಗಳ ಜೊತೆಯಲ್ಲಿ ಬರುವ ಯೋಚನೆಗಳೂ ಸೂಕ್ತವಾಗಿವೆ ಎನ್ನುವ ತರ್ಕವಿಲ್ಲಿದೆ. ಆದರೆ ಭಾವನೆಗಳೇ ಬೇರೆ, ತರ್ಕವೇ ಬೇರೆ; ಎರಡೂ ಪರಸ್ಪರ ವ್ಯತಿರಿಕ್ತವಾಗಲು ಸಾಧ್ಯವಿದೆ! ಉದಾಹರಣೆಗೆ, ಈ ದಾಂಪತ್ಯದ ಹೊಸದರಲ್ಲಿ ಗಂಡನು ಹೆಂಡತಿಗೆ ಪ್ರೀತಿಯಿಂದ ಬಾಯಲ್ಲಿ ತುತ್ತುಹಾಕುತ್ತಿದ್ದ. ತನಗಿಷ್ಟವಾದ ಚಲಚ್ಚಿತ್ರಗಳಿಗೆ ಕರೆದೊಯ್ಯುತ್ತಿದ್ದ. ಆಗಾಕೆ ಅವನನ್ನು ನಂಬಿ, ತಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ ಎಂದು ಭ್ರಮಿಸಿ ಗರ್ಭಿಣಿಯಾದಳು. ಆಗಲೇ ಗಂಡನ ಕ್ಷುಲ್ಲಕತನ ತಲೆಯೆತ್ತಿದ್ದು. ಆಕೆ ಸುಸ್ತಾಗಿ ಒಂಟಿತನ ಬಯಸುವಾಗ ಅವನು ವಾರಗಟ್ಟಲೆ ಮೌನಿಯಾಗಿ ಹತ್ತಿರ ಬರುತ್ತಿರಲಿಲ್ಲ. ನೀನೊಪ್ಪದಿದ್ದರೆ ನಿನ್ನೊಡನೆ ದಾಂಪತ್ಯವೂ ಬೇಡ ಎನ್ನುವ ಧೋರಣೆ ಅವನಲ್ಲಿ ಎದ್ದುಕಾಣುತ್ತಿತ್ತು. ಅದನ್ನು ಪ್ರಶ್ನಿಸಿದಾಗ ಅರ್ಥಮಾಡಿಕೊಳ್ಳದೆ ಇನ್ನಷ್ಟು ದೂರವಾದ. ಈಗ ವಿಚ್ಛೇದನೆಯ ಮಾತಾಡುತ್ತಿದ್ದಾನೆ. ಅವಳ ಅಂದಾಜು ಎಲ್ಲಿ ತಪ್ಪಿತು? ಗಂಡನ ಮುಂಚಿನ ವರ್ತನೆಯು ಆಕೆಯನ್ನು ಉದ್ದೇಶಿಸಿ “ನೀನು ನನಗಿಷ್ಟ” ಎಂದಿತ್ತೇ ವಿನಾ “ನಿನ್ನೊಡನೆ ದಾಂಪತ್ಯ ನನಗಿಷ್ಟ” ಎಂದಿರಲಿಲ್ಲ. ನೀನು ಸರಿಯಿದ್ದೀಯಾ, ಅದಕ್ಕೇ ನಾನೂ ಸರಿಯಿದ್ದೇನೆ; ನೀನು ಸರಿಯಿಲ್ಲದಿದ್ದರೆ ನಾನೂ ಸರಿಯಿರುವುದಿಲ್ಲ ಎನ್ನುವ ಕ್ರಿಯೆ-ಪ್ರತಿಕ್ರಿಯೆಯ ಹಂತದಲ್ಲಿ ಅವನಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ, ನೀನು ಸರಿಯಿಲ್ಲದ್ದರೂ ಅಡ್ಡಿಯಿಲ್ಲ, ನಾನು ದಾಂಪತ್ಯಕ್ಕೆ ನಿಷ್ಠೆಯಿಂದ ಇರುತ್ತೇನೆ ಎನ್ನುವುದು ದಾಂಪತ್ಯದ ಬಗೆಗಿರುವ ಸುಸಂಬಂಧವನ್ನು ತೋರಿಸುತ್ತದೆ.

ದಾಂಪತ್ಯದೊಡನೆ ವೈಯಕ್ತಿಕ ಸಂಬಂಧಕ್ಕೆ ಇನ್ನೊಂದು ಉದಾಹರಣೆ ಎಂದರೆ ಪರಸಂಬಂಧಗಳಲ್ಲಿ ನೊಂದ ಸಂಗಾತಿಯ ಪ್ರತಿಕ್ರಿಯೆ. ಪರಸಂಬಂಧದಲ್ಲಿ ಒಬ್ಬರು ದಾಂಪತ್ಯದೊಡನೆಯ ಸಂಬಂಧವನ್ನು ಅಲಕ್ಷಿಸಿ ವೈಯಕ್ತಿಕ ಇಷ್ಟಕ್ಕೆ ಬೆಲೆಕೊಡುತ್ತಿದ್ದರೆ, ಇನ್ನೊಬ್ಬರು ದಾಂಪತ್ಯವನ್ನು ಮುರಿದುಕೊಳ್ಳುವ ಪ್ರತಿಕ್ರಿಯೆ ತೋರಿಸುವುದರ ಬದಲು ಉಳಿಸಿಕೊಳ್ಳಲು ಹೋರಾಡುತ್ತಾರೆ. ಇದು ದಾಂಪತ್ಯದೊಡನೆ ಇಟ್ಟುಕೊಂಡಿರುವ ಸುಸಂಬಂಧದ ಲಕ್ಷಣ. ನೀನು ಹೇಗೆ ನಡೆದುಕೊಂಡರೂ ನಾನು ದಾಂಪತ್ಯವನ್ನು ಕೆಡಿಸಿಕೊಳ್ಳಲಾರೆ ಎನ್ನುವ ಮೌಲ್ಯ ಇಲ್ಲಿದೆ. ಈ ಪರಿಕಲ್ಪನೆಯು ಇನ್ನೂ ಸ್ಪಷ್ಟವಾಗಬೇಕಾದರೆ ದಾಂಪತ್ಯವನ್ನು ಮಗುವೆಂದು ಕಲ್ಪಿಸಿಕೊಳ್ಳಿ. ಇಬ್ಬರೂ ಸೇರಿ ಮಗುವು ಹುಟ್ಟುವಂತೆ ದಾಂಪತ್ಯವು ಹುಟ್ಟುತ್ತದೆ. ಮಗುವಿಗೆ ಇರುವಂತೆ ದಾಂಪತ್ಯಕ್ಕೆ (ಗಂಡ-ಹೆಂಡತಿ ಇಬ್ಬರನ್ನೂ ಬಿಟ್ಟು) ಅದರದೇ ಅಸ್ತಿತ್ವವಿದೆ. ಗಂಡಹೆಂಡತಿ ಪರಸ್ಪರ ವಿಮುಖರಾದರೂ ಒಬ್ಬೊಬ್ಬರೇ ಮಗುವಿನೊಡನೆ ಪ್ರತ್ಯೇಕ ಸುಸಂಬಂಧವನ್ನು ಹೊಂದುವುದಕ್ಕೆ ಸಾಧ್ಯವಿರುವಂತೆ ಒಬ್ಬೊಬ್ಬರಾಗಿ ದಾಂಪತ್ಯದೊಡನೆ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಏಕಮುಖ ಬದ್ಧತೆ ಎನ್ನಿಸಿಕೊಳ್ಳುತ್ತದೆ. ಏಕಮುಖ ಬದ್ಧತೆಯು ಮಗುವಿನ ಪಾಲನೆ-ಪೋಷಣೆಗೆ ಪೂರಕವಲ್ಲ.

ದಾಂಪತ್ಯದೊಡನೆಯ ಸುಸಂಬಂಧವು ಕೆಲವೊಮ್ಮೆ ಅತಿರೇಕಕ್ಕೂ ಹೋಗುವುದಿದೆ. ನಾನು ಕಂಡ ಅನೇಕ ದಾಂಪತ್ಯಗಳಲ್ಲಿ ಗಂಡನಿಗೆ ಕಾಮನಿರಾಸಕ್ತಿ ಇದ್ದರೂ ಹೆಂಡತಿಯು ದಾಂಪತ್ಯಕ್ಕೆ ನಿಷ್ಠೆಯಿಂದ ಇದ್ದಾಳೆ. ಕೆಲವು ಸಂದರ್ಭಗಳಲ್ಲಿ ಗರ್ಭಿಣಿಯಾಗಲು ಒಂದೇ ಒಂದು ಸಂಭೋಗವನ್ನು ಬಯಸಿ, ಅದೂ (ಸಮಯಕ್ಕೆ ಸರಿಯಾಗಿ) ಆಗದಿರಲು ಕೃತಕ ಗರ್ಭಧಾರಣೆಗೆ ಹೋಗಿ, ಅದೂ ಯಶಸ್ವಿಯಾಗದೆ ನನ್ನಲ್ಲಿ ಬಂದ ದಂಪತಿಗಳಿದ್ದಾರೆ. ಇಲ್ಲಿ ಹೆಂಡತಿಯ ಅಹವಾಲು ಏನೆಂದರೆ, ನನಗೊಂದು ಮಗುವಾದರೆ ಸಾಕೇ ಸಾಕು, ತಾಯಿ-ತಂದೆ ಎರಡೂ ಆಗಿ ಮಗುವನ್ನು ನೋಡಿಕೊಳ್ಳುತ್ತೇನೆ. ಆಕೆಯ ಅಳಲನ್ನೂ ಅನಿವಾರ್ಯತೆಯನ್ನೂ ಒಪ್ಪೋಣ. ಆದರೆ ಒಬ್ಬರು ತಯಾರಿದ್ದು ಇನ್ನೊಬ್ಬರು ಇಲ್ಲವೆಂದರೆ ಹುಟ್ಟುವ ಮಗುವಿಗೆ ದಾಂಪತ್ಯದ ಆಸರೆ ಎಲ್ಲಿ ಸಿಕ್ಕಂತಾಯಿತು? ಈ ಮಗುವು ಮುಂದೆ ಹೇಗೆ ಬೆಳೆಯಬಹುದು ಎನ್ನುವುದು ಯಾರ ಊಹೆಗೂ ನಿಲುಕಬಹುದು.  ಹಾಗಾಗಿ, ಇಬ್ಬರೂ ಪ್ರತ್ಯೇಕವಾಗಿ ತಯಾರಾಗದ ಹೊರತು, ಹಾಗೂ ಅದಕ್ಕಾಗಿ ದಾಂಪತ್ಯವನ್ನು ತಯಾರು ಮಾಡದ ಹೊರತು ಗರ್ಭಧಾರಣೆಗೆ ಯತ್ನ ಕೂಡದು. ಇಂಥ ದಂಪತಿಗೆ ಒಂದು ಪ್ರಶ್ನೆ ಕೇಳುತ್ತೇನೆ: “ಒಂದುವೇಳೆ ಸಂಗಾತಿಯು ಒಪ್ಪದಿದ್ದರೆ ನೀವೊಬ್ಬರೇ ಮಗುವಿನ ಹೊಣೆಹೊರಲು ತಯಾರಿದ್ದೀರಾ?” ಇಬ್ಬರೂ ಪ್ರತ್ಯೇಕವಾಗಿ ಒಪ್ಪಿಕೊಂಡರೆ ಅವರಿಗೆ ಹುಟ್ಟುವ ಮಗುವಿನ ಆರೈಕೆ ಉತ್ಕೃಷ್ಟವಾಗಿರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಗಂಡ ಮೀನಮೇಷ ಮಾಡಿದರೆ ಅವನ ತಂದೆತನವನ್ನು ಉದ್ದೇಶಿಸಬೇಕಾಗುತ್ತದೆ.

ಇನ್ನು ಕೆಲವರು ಮದುವೆಯಾದ ಹೊಸದರಲ್ಲೇ ಮಗುವನ್ನು ಬಯಸುತ್ತಾರೆ. ಇದರಲ್ಲೇನೂ ತಪ್ಪಿಲ್ಲ. ಆದರೆ ಆಸೆಯ ಜೊತೆಗೆ ಅವಸರ ಇದ್ದರೆ ಒಳವುದ್ದೇಶವು ಸಾಧುವಾಗಿರಲಿಕ್ಕಿಲ್ಲ. ಅದರಲ್ಲಂತೂ ಈಗಲೇ ಮಗು ಬೇಡವೆನ್ನುವವರು ರಾತ್ರೋರಾತ್ರಿ ನಿರ್ಧಾರ ಬದಲಿಸಿ ಮಗುವಿಗೆ ಒತ್ತಾಯ ತರುವುದೂ ಇದೆ. ಉದಾಹರಣೆಗೆ, ಈ ದಂಪತಿಯಲ್ಲಿ ಹೆಂಡತಿ ಪ್ರಬುದ್ಧಳು, ಗಂಡ ಬಾಲಿಶ ಸ್ವಭಾವದವನು. ಚಿಕ್ಕದನ್ನು ದೊಡ್ಡದನ್ನಾಗಿ ಮಾಡಿಕೊಂಡು ಹೆಂಡತಿ ಮರ್ಯಾದೆ ತೋರಿಸುತ್ತಿಲ್ಲವೆಂದು ತಕರಾರು ಮಾಡುತ್ತಿರುತ್ತಾನೆ. ಅಂಥದ್ದೊಂದು ಸಲ ಜಗಳವಾಗಿ ಹೆಂಡತಿ ತವರಿಗೆ ಹೋಗಿ ಮರಳಿದ ರಾತ್ರಿ ಗಂಡ ಹತ್ತಿರವಾದ. ಇವೊತ್ತು ಕಾಂಡೋಮ್ ಬೇಡವೆಂದ. ಯಾಕೆ? ಮಗುವಾದರೆ ನಮ್ಮ ಜಗಳ ನಿಲ್ಲುತ್ತದೆ ಎಂದ. ಆಕೆ ಅವನ ಮನಸ್ಸನ್ನು ಓದಿದಳು: “ನನ್ನಾಸೆಯನ್ನು ಪೂರೈಸುವುದು ನಿನ್ನ ಕರ್ತವ್ಯ. ನಮ್ಮ ದಾಂಪತ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ನಾನು ಯತ್ನಿಸುವುದರ ಬದಲು ನನ್ನ ಮಗು ಯತ್ನಿಸಲಿ.” ಈ ಮನೋಭಾವವು ಅಪರಿಪಕ್ವತೆಯ, ಅಪ್ರಬುದ್ಧತೆಯ ಸಂಕೇತ. ಇಂಥವರು ಸಮರ್ಥ ತಂದೆಯಾಗಲಾರರು.

ಕೆಲವರು ಮದುವೆಯಾದ ಹೊಸದರಲ್ಲಿ ಕಾಮಾವೇಶದಲ್ಲಿ ಮೈಮರೆಯುವಾಗ ಅಕಸ್ಮಾತ್ತಾಗಿ ಗರ್ಭಕಟ್ಟುವ ಸಾಧ್ಯತೆಯಿದೆ. ಒಂದುವೇಳೆ ಹಾಗಾದರೆ ಏನು ಮಾಡಬೇಕು? ನಿಮ್ಮ ತಾಯ್ತಂದೆಯರಿಗೆ ಸುದ್ದಿ ಮುಟ್ಟಿಸುವುದಕ್ಕಿಂತ ಮುಂಚೆ ನೀವಿಬ್ಬರೂ ಕೂತುಕೊಂಡು ಮುಕ್ತಮನಸ್ಸಿನಿಂದ ಚರ್ಚಿಸಿ. ನಾವಿಬ್ಬರೂ ಇದರ ಹೊಣೆಹೊರಲು, ಇದಕ್ಕಾಗಿ ಕಷ್ಟಪಡಲು, ಸುಮಾರು ಕಾಲ ವೈಯಕ್ತಿಕ ಬದುಕನ್ನು ಬಿಟ್ಟುಕೊಡಲು ತಯಾರಿದ್ದೇವೆಯೆ ಎಂದು ಹಲವು ಸಲ ಚರ್ಚೆ ನಡೆಯಲಿ. ಇಬ್ಬರ ಪೈಕಿ ಒಬ್ಬರಿಗೆ ಬೇಡವಾದರೂ ಸರಿ, ಪ್ರಸೂತಿ ತಜ್ಞರ ಬದಲು ಆಪ್ತಸಲಹೆಗಾರರನ್ನೋ ಮನೋಚಿಕಿತ್ಸಕರನ್ನೋ ಭೇಟಿಮಾಡಿ ಸಂಘರ್ಷವನ್ನು ಹಂಚಿಕೊಳ್ಳಿ. ನೀವಿಬ್ಬರೂ ಅಲ್ಲದೆ ನಿಮ್ಮ ದಾಂಪತ್ಯವೂ ಪ್ರತ್ಯೇಕವಾಗಿ ಸಿದ್ದರಿಲ್ಲದ್ದರೆ ಬೇಡದ ಮಗುವನ್ನು ಹುಟ್ಟಿಸಿ ಮುಂದೆ ಪಾಪಪ್ರಜ್ಞೆ ಅನುಭವಿಸುವುದರ ಬದಲು ಅದನ್ನು ತೆಗೆಸಿಹಾಕುವುದರ ಬಗೆಗೆ ಯೋಚಿಸಿ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.