Please wait...


ಕಾಮಕ್ರಿಯೆಯ ಮೂಲಕ ಅರ್ಥ ಕಂಡುಕೊಳ್ಳುವುದನ್ನು ಬಿಟ್ಟು, ಪ್ರಬುದ್ಧ ಸಂಬಂಧದಲ್ಲಿ ಅರ್ಥ ಕಂಡುಕೊಳ್ಳಲು ಕಾಮಕ್ರಿಯೆಯನ್ನು ಬಳಸಿಕೊಳ್ಳಬೇಕು.

165: ವೈವಾಹಿಕ ಲೈಂಗಿಕತೆ-4

ಮಕ್ಕಳಿದ್ದರೆ ಅವರಿಂದ ಲೈಂಗಿಕ ಜೀವನಕ್ಕೆ ಅಡ್ಡಿಯಾಗದಂತೆ ಹೇಗೆ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ಹೋದಸಲ ತಿಳಿದುಕೊಂಡೆವು. ಈಗ ವಿವಾಹದ ಕೆಲವು ವರ್ಷಗಳ ನಂತರ ಬರುವ ಲೈಂಗಿಕ ಸಮಸ್ಯೆಗಳ ಕುರಿತು ಯೋಚಿಸೋಣ. ಅದಕ್ಕಾಗಿ ನನ್ನಲ್ಲಿ ಬಂದ ಕೆಲವರ ದೃಷ್ಟಾಂತಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.  

ದೃಷ್ಟಾಂತ 1: ಮೂವತ್ತೈದರ ಇವನು ನನ್ನ ಹತ್ತಿರ ಶೀಘ್ರಸ್ಖಲನದ ಸಮಸ್ಯೆಯನ್ನು ಇಟ್ಟುಕೊಂಡು ಬಂದಿದ್ದಾನೆ. ಇವನ ಹೆಂಡತಿಯು ಮುಂಚೆ ಕಾಮಕೂಟಕ್ಕೆ ಥಟ್ಟನೇ ತಯಾರಾಗುತ್ತಿದ್ದವಳು ಎರಡು ಮಕ್ಕಳಾದ ನಂತರ ಸಮಯ ತೆಗೆದುಕೊಳ್ಳುತ್ತಾಳೆ. ಇವನಿಗೋ ಅಲ್ಲಿಯ ತನಕ ಉದ್ರೇಕವನ್ನು ತಡೆದುಕೊಳ್ಳಲು ಆಗದೆ ಸಂಭೋಗಕ್ಕೆ ಹೊರಟು ಶೀಘ್ರಸ್ಖಲನದಲ್ಲಿ ಮುಗಿಸಿಬಿಡುತ್ತಾನೆ.  ಆಕೆಗೆ ತೃಪ್ತಿ ಆಗದೆ ಮುಂದಿನ ಸಲ ಸಿದ್ಧಳಾಗಲು ಹಿಂದೆಮುಂದೆ ನೋಡುತ್ತಾಳಂತೆ. ಹಾಗಾಗಿ ತನ್ನ ಸಂಭೋಗದ ಅವಧಿಯನ್ನು ಹೆಚ್ಚಿಸಿಕೊಳ್ಳಲು ಉಪಾಯ ತಿಳಿದುಕೊಳ್ಳಲು ಬಯಸಿದ್ದಾನೆ. ಹೆಂಡತಿಯನ್ನು ಕರೆದುಕೊಂಡು ಬರಲು ಹೇಳಿದರೆ, ಸಮಸ್ಯೆ ತನ್ನಲ್ಲಿದೆ, ಹಾಗಾಗಿ ಆಕೆ ಯಾಕೆ ಬೇಕು ಎನ್ನುತ್ತಾನೆ.

ದೃ. 2: ಮದುವೆಯಾದ ಹೊಸದರಲ್ಲಿ ಲೈಂಗಿಕ ಕ್ರಿಯೆ ಚೆನ್ನಾಗಿತ್ತು. ವರ್ಷದೊಳಗೇ ಮಗುವಾಯಿತು. ಆಗ ಮಾಯವಾದ ಗಂಡನ ಕಾಮಾಪೇಕ್ಷೆಯು ಆರು ವರ್ಷವಾದರೂ ಮರಳಿ ಬಂದಿಲ್ಲ. ಕೇಳಿದರೆ ವಯಸ್ಸಾಯಿತು, ಮನಸ್ಸು ಬರುತ್ತಿಲ್ಲ ಎಂದು ಹೇಳುತ್ತಾನೆ. ವ್ಯಾಯಾಮದಿಂದ ಶರೀರವನ್ನು ಸದೃಢವಾಗಿಟ್ಟುಕೊಂಡಿದ್ದಾನೆ. ತಲೆಗೂದಲೂ ಕರ್ರಗೆ ಮಿಂಚುತ್ತಿದೆ. ಹಾಗಿದ್ದರೂ ಕಾಮಾಸಕ್ತಿಯಲ್ಲಿ ಮಾತ್ರ ವಯಸ್ಸಾಗುವುದು ಉಂಟೆ ಎಂದು  ಈ ಮಹಿಳೆ ಗೊಂದಲಕ್ಕೆ ಒಳಗಾಗಿದ್ದಾಳೆ.

ದೃ. 3: ಐವತ್ತು ವಯಸ್ಸಿನ ಇವನು ಹೆಂಡತಿಯನ್ನು ಕೆರಳಿಸಲು ಪ್ರಯತ್ನಪಡುತ್ತಾನೆ. ಆಕೆ, “ರೀ, ನನ್ನನ್ನೇನೋ ಕೆರಳಿಸುತ್ತೀರಿ. ಆದರೆ ಪೂರ್ತಿ ಮಾಡಲು ನಿಮ್ಮ ಕೈಲಾಗುವುದಿಲ್ಲ. ಸುಮ್ಮನೇ  ನನ್ನ ಸ್ತಿಮಿತ ಯಾಕೆ ಹಾಳುಮಾಡುತ್ತೀರಿ? ತೆಪ್ಪಗೆ ಮಲಗಿಕೊಳ್ಳಿ!” ಎಂದಂದು ಇನ್ನೊಂದು ಕಡೆ ತಿರುಗಿ ಮಲಗುತ್ತಾಳೆ. ಗಂಡ ಏನೂ ತೋಚದೆ ತಲೆಯ ಫ್ಯಾನ್ ದಿಟ್ಟಿಸುತ್ತಾನೆ.  ಅವನಿಗೆ ತಾನೊಬ್ಬನೇ ಇರುವಾಗ ಶಿಶ್ನೋದ್ರೇಕವು ಸರಿಯಾಗಿ ಆಗುತ್ತಿದ್ದರೂ ಹೆಂಡತಿಯ ಜೊತೆ ಇರುವಾಗ ಮಾತ್ರ – ಅದೂ ಕೆಲವು ವರ್ಷಗಳಿಂದ – ವಿಫಲವಾಗುತ್ತಿರುವುದು ಅವನ ದೃಢತೆಯನ್ನು ಕಲಕುತ್ತಿದೆ. ವಯಾಗ್ರಾ ನುಂಗಿದರೂ ಉಪಯೋಗವಾಗಿಲ್ಲ.

ದೃ. 4: ಇಲ್ಲಿ ಗಂಡ ಹೆಂಡತಿಯನ್ನು ನೇರವಾಗಿ ಉದ್ರೇಕಗೊಳಿಸುತ್ತಾನೆ. ನಂತರ ಆಕೆಯ ಮೇಲೇರಿ ರಭಸದಿಂದ ಶುರುಮಾಡುತ್ತಾನೆ. ಒಂದೆರಡು ಸಲ ಚಲಿಸುವುದರ ಒಳಗೆ ಶಾರೀರಿಕ ಆಯಾಸದಿಂದ ಸುಸ್ತಾಗಿ ಆಕೆಯ ಮೇಲೆಯೇ ಒರಗುತ್ತಾನೆ. ಅವನ ಹೃದಯ ಸ್ವಲ್ಪ ದುರ್ಬಲವಾಗಿದೆ ಎಂದು ವೈದ್ಯರು ಹೇಳಿದ್ದಾರೆ – ಹಾಗೆಂದು ಲೈಂಗಿಕ ಕ್ರಿಯೆಗೆ ನಿಷೇಧ ಹಾಕಿಲ್ಲ. ಹಾಗೆ ಆಗುವಾಗಲೆಲ್ಲ ಹೆಂಡತಿಯ ಆತಂಕದ ಪ್ರತಿಕ್ರಿಯೆಗೆ ಹೇಗೆ ಸಮಾಧಾನ ಹೇಳಬೇಕು, ಹಾಗೂ ಇಬ್ಬರಿಗೂ ಆಗುತ್ತಿರುವ ನಿರಾಸೆಯ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದು ಅವನಿಗೆ ತಿಳಿಯದಾಗಿದೆ. 

ದೃ. 5: ನಲವತ್ತು ವರ್ಷದ ಈ ಮಹಿಳೆಗೆ ಮುಟ್ಟು ಸರಿಯಾಗಿದ್ದರೂ ಇತ್ತೀಚೆಗೆ ಯೋನಿ ಒದ್ದೆಯಾಗುತ್ತಿಲ್ಲ, ಹಾಗಾಗಿ ಕಾಮಕೂಟವು ಉರಿಕೂಟವಾಗಿದೆ. ಮಹಿಳಾ ವೈದ್ಯರು ಬರೆದುಕೊಟ್ಟ ಲೋಳೆಯಂಥ ಔಷಧಿಯನ್ನು ಹಚ್ಚಿಕೊಳ್ಳಬೇಕೆಂದರೆ ಕೃತಕ ಅನ್ನಿಸುತ್ತಿದೆ. ಗಂಡನ ನಿರಾಸೆಯನ್ನು ನೋಡಲಾಗುತ್ತಿಲ್ಲ.

ಇವೆಲ್ಲ ದೃಷ್ಟಾಂತಗಳಲ್ಲಿ  ಸಾಮಾನ್ಯ ಅಂಶಗಳಿವೆ. ಇವರೆಲ್ಲ ವಿವಾಹಿತರು. ಲೈಂಗಿಕ ಆಸಕ್ತಿ ಹಾಗೂ ಕಾಮಕ್ರಿಯೆಯಲ್ಲಿ ಮುಂಚೆಯೆಲ್ಲ ಸಮರ್ಪಕವಾಗಿ ಇದ್ದವರು, ಸ್ವಲ್ಪ ವರ್ಷಗಳ ನಂತರ ತೊಂದರೆಗೆ ಈಡಾಗಿದ್ದಾರೆ. ಇವರಲ್ಲಿ ಯಾರಿಗೂ ಶಾರೀರಿಕ ತೊಂದರೆಯಾಗಲೀ, ಗಂಭೀರವಾದ ಕಾಯಿಲೆಯಾಗಲೀ  ಇಲ್ಲ. ತಜ್ಞರ ಸಲಹೆಯಂತೆ  ಔಷಧಿ ಉಪಯೋಗಿಸಿದರೂ ಸುಧಾರಣೆ ಕಂಡುಬಂದಿಲ್ಲ. ಇಲ್ಲೇನಾಗುತ್ತಿದೆ?

ನಾವೆಲ್ಲರೂ ಹೆಚ್ಚಿನಂಶ ಲೈಂಗಿಕವಾಗಿ ಸಮರ್ಥ ವ್ಯಕ್ತಿಗಳೇ ಎನ್ನುವುದರಲ್ಲಿ ಸಂದೇಹವಿಲ್ಲ.  ಸಮಸ್ಯೆ ಏನೆಂದರೆ, ಕಾಮಕ್ರಿಯೆಯನ್ನು ನಾವು “ಚೆನ್ನಾಗಿ ಮಾಡಲು” ಹೊರಡುತ್ತೇವೆ. “ಪರಿಪೂರ್ಣ ತೃಪ್ತಿ ಪಡೆಯಲು“ ಯೋಜಿಸುತ್ತೇವೆ. ಹಾಗಾಗಿ  ಕೆಲವನ್ನು ಉದ್ದೇಶಪೂರ್ವಕ ಮಾಡಲು –ಬೇಗ ತಯಾರಾಗಲು, ಪ್ರತಿ ಕೂಟದಲ್ಲೂ ಮೈ ಜುಮ್ಮೆನ್ನಿಸುವ ರೋಚಕತೆ ಅನುಭವಿಸಲು, ತಾರುಣ್ಯ ಕಾಪಾಡಿಕೊಳ್ಳಲು, ನಮ್ಮ ಹೆಣ್ಣು/ಗಂಡುತನವನ್ನು ಪೂರ್ತಿ ಪ್ರಕಟಪಡಿಸಲು – ಹೆಣಗುತ್ತೇವೆ. ಹಾಗೆಯೆ, ಇನ್ನು ಕೆಲವನ್ನು “ಮಾಡದಿರಲು”– ವಿಫಲವಾಗದಿರಲು, ದೌರ್ಬಲ್ಯ ತಲೆಹಾಕದಿರಲು, ಕೀಳರಿಮೆ ಕಾಡದಿರಲು – ಪ್ರಯತ್ನ ಮಾಡುತ್ತೇವೆ. ಅಷ್ಟಕ್ಕೂ ಇದಕ್ಕಾಗಿ ನಾವು ಅನುಸರಿಸುವ ಮಾದರಿ ಯಾವುದು? ನಾವು ನವತಾರುಣ್ಯದಲ್ಲಿ  ವರ್ತಿಸುತ್ತಿದ್ದ ರೀತಿ, ನಮಗೆ ಗೊತ್ತಿರುವವರು ಬಣ್ಣಿಸುವ ಕಾಮಕೂಟ, ಹಾಗೂ ನೀಲಿಚಿತ್ರಗಳು. ಇದರಲ್ಲೆಲ್ಲ ಯೌವನದ ಹುಚ್ಚು ಆವೇಶ ತುಂಬಿ ತುಳುಕುತ್ತದೆ. ಹಾಗಾಗಿ ವಯಸ್ಸಾಗುತ್ತಿದ್ದರೂ ಯೌವನವನ್ನು ಪ್ರದರ್ಶಿಸಲು ಹೋಗುತ್ತೇವೆ. ಕೂದಲಿಗೆ ಬಣ್ಣ, ಬಿಗಿ ಬಟ್ಟೆಯ ನೆರವು ಪಡೆದುಕೊಳ್ಳುತ್ತೇವೆ. ವಯಾಗ್ರಾ ನುಂಗುತ್ತೇವೆ. ನೀಲಿ ಚಿತ್ರ ಹಾಕಿಕೊಳ್ಳುತ್ತೇವೆ. ನಾನಾ ಭಂಗಿಗಳನ್ನು ಉಪಯೋಗಿಸುತ್ತೇವೆ. ಅಷ್ಟೆಲ್ಲ ಆದರೂ ನಮ್ಮ ಶರೀರವು ಮುಂಚಿನಂತೆ ಸ್ಪಂದಿಸಲಾರದು  ಎಂದು ಗೊತ್ತಿದ್ದರೂ ಕೋತಿಯಾಟ ಆಡಲು ಹೋಗಿ ಕೈಕಾಲು ಮುರಿದುಕೊಳ್ಳುವ ಹಾಗೆ  ಪ್ರಯತ್ನಿಸಿ ಮುಖಭಂಗಕ್ಕೆ ಒಳಗಾಗುತ್ತೇವೆ. ಇದಕ್ಕೆಲ್ಲ ಏನು ಕಾರಣ? ಕಾಮಕೂಟದ “ಸಮಗ್ರ ಸಮಕ್ಷಮತೆಯು ನವತಾರುಣ್ಯದಲ್ಲಿಯೇ ಇದೆ, ನವತಾರುಣ್ಯವನ್ನು ಕಳೆದುಹೋದರೆ ನಾನು ಲೈಂಗಿಕ ವ್ಯಕ್ತಿತ್ವ ಕಳೆದುಕೊಂಡಂತೆ!” ಎಂಬ ಹುಚ್ಚು ನಂಬಿಕೆ. ಹಾಗಾಗಿಯೇ ಇಷ್ಟೆಲ್ಲ ವೃಥಾ ಒದ್ದಾಟ, ವಿಫಲ ಪ್ರಯತ್ನ ಮಾಡುತ್ತೇವೆ. 

ಹಾಗಾದರೆ ಉಪಾಯವೇನು? ನಾವು ಹಾರ್ಮೋನುಗಳ ಮೇಲೆ ಅವಲಂಬಿಸಿದ ಕಾಮಕೂಟದ ಮಾದರಿಯು ವಯಸ್ಸಾದಂತೆ ಕೆಲಸ ಮಾಡುವುದಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಅದನ್ನು ಬಿಟ್ಟುಬಿಸಾಕಿ ನಮ್ಮ ಕೈಲಾಗುವ, ನಮಗಿಷ್ಟವಾಗುವ ಪ್ರಬುದ್ಧ ಲೈಂಗಿಕತೆಯ ಇನ್ನೊಂದು ಮಾದರಿಯನ್ನು ರಚಿಸಿಕೊಳ್ಳಬೇಕು. ವಯಸ್ಸಿನ ಹಾಗೂ ಕಾಯಿಲೆಯ ಕಾರಣದಿಂದ ಶರೀರದಲ್ಲಿ ಬದಲಾವಣೆಗಳು ಆಗುವಾಗ, ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಳ್ಳುತ್ತ ಕಾಮಕ್ರಿಯೆಯಲ್ಲಿ ಜೀವಂತಿಕೆ ಉಳಿಸಿಕೊಳ್ಳಬೇಕು. ಮುಂಚಿನ, “ಕಾಮಕ್ರಿಯೆಯ ಮೂಲಕ ಅರ್ಥ ಕಂಡುಕೊಳ್ಳಬೇಕು” ಎನ್ನುವುದನ್ನು ಬಿಟ್ಟು, “ಪ್ರಬುದ್ಧ ಸಂಬಂಧದಲ್ಲಿ ಅರ್ಥ ಕಂಡುಕೊಳ್ಳಲು ಕಾಮಕ್ರಿಯೆಯನ್ನು ಬಳಸಿಕೊಳ್ಳಬೇಕು” ಎಂಬ ದಿಕ್ಕಿನಲ್ಲಿ ನಮ್ಮ ಮನೋಭಾವ ಬದಲಾಗಬೇಕು!

ಕಾಮಕ್ರಿಯೆಯಲ್ಲಿ ಪ್ರಬುದ್ಧತೆಯನ್ನು ತರುವುದು ಹೇಗೆ? ಅಮೆರಿಕೆಯ ಲೈಂಗಿಕ ತಜ್ಞ ಮಾರ್ಟಿನ್ ಕ್ಲೀನ್ (Martin Klein)  ಲೈಂಗಿಕ ಬುದ್ಧಿಮತ್ತೆ (sexual intelligence) ಎಂಬ ಪದ ಉಪಯೋಗಿಸುತ್ತಾನೆ. ಅವನ ಪ್ರಕಾರ ಭಾವನಾತ್ಮಕ ಬುದ್ದಿಮತ್ತೆ, ಕ್ರೀಡಾತ್ಮಕ ಬುದ್ಧಿಮತ್ತೆ, ಆಧ್ಯಾತಿಕ ಬುದ್ಧಿಮತ್ತೆಗಳ ಹಾಗೆ ಲೈಂಗಿಕ ಕ್ಷಮತೆಯೂ ಬುದ್ಧಿಮತ್ತೆ ಎನ್ನಿಸಿಕೊಳ್ಳುತ್ತದೆ. ಕ್ಲೀನ್ ಪ್ರಕಾರ, ಲೈಂಗಿಕ ಬುದ್ಧಿಮತ್ತೆಯು ಎರಡು ಅಂಶಗಳನ್ನು ಒಳಗೊಂಡಿದೆ: ಕಾಮಕೂಟದಲ್ಲಿ ಏನೇ ನಡೆಯಲಿ (ಅಥವಾ ನಡೆಯದಿರಲಿ), ವೈಯಕ್ತಿಕವಾಗಿ ಹಾಗೂ ಬಾಂಧವ್ಯದಲ್ಲಿ ಲೈಂಗಿಕ ದೃಷ್ಟಿಕೋನವನ್ನು ಸದಾ ಇಟ್ಟುಕೊಂಡಿರುವುದು (ಇದರ ಬಗೆಗೆ ಇನ್ನೊಂದು ಸಲ ವಿವರಿಸುತ್ತೇನೆ.), ಹಾಗೂ, ಕಾಮಕೂಟವನ್ನು ಮನಸಾರೆ ಅನುಭವಿಸಲು ವಯಸ್ಸಿಗೆ ತಕ್ಕಂತೆ ಸದಾ ಬದಲಾವಣೆ ಮಾಡಿಕೊಳ್ಳುತ್ತಿರುವುದು.  ಉದಾಹರಣೆಗೆ, ಇಪ್ಪತ್ತನೇ ವಯಸ್ಸಿನಲ್ಲಿ ಲೈಂಗಿಕ ಜಗತ್ತನ್ನು ಅನ್ವೇಷಿಸಲು,  ಮೂವತ್ತರಲ್ಲಿ ಸಂಗಾತಿಯೊಡನೆ ಭದ್ರವಾದ ಲೈಂಗಿಕ ಬಾಂಧವ್ಯ ಕಟ್ಟಿಕೊಳ್ಳಲು, ನಲವತ್ತರಲ್ಲಿ ಆಗುವ ಶಾರೀರಿಕ ಕುಂದುಕೊರತೆಗಳನ್ನು ತಡೆದುಕೊಳ್ಳುತ್ತ ಸೂಕ್ತ ಮಾರ್ಪಾಟು ಮಾಡಿಕೊಳ್ಳುವುದು, ಐವತ್ತರಲ್ಲಿ ತಾರುಣ್ಯದ ಲೈಂಗಿಕ ಸಾಮರ್ಥ್ಯಕ್ಕೆ ಮಂಗಳ ಹಾಡಿ ಮನೋಭಾವುಕ ಲೈಂಗಿಕತೆಯನ್ನು ಅಪ್ಪಿಕೊಳ್ಳುವುದು, ಅರವತ್ತರಲ್ಲಿ  ಲೈಂಗಿಕತೆಯ ಜೊತೆಗೆ ಆಧ್ಯಾತ್ಮಿಕತೆಯನ್ನು ಬೆರೆಸಲು ಕಲಿತುಕೊಳ್ಳುವುದು… ಹೀಗೆ ಕಾಮಕೂಟವು ವಯಸ್ಸಿಗೆ ತಕ್ಕಂತೆ ವಿವಿಧ ಮಜಲುಗಳನ್ನು ಏರುತ್ತ ವಿವಿಧ ಆಯಾಮಗಳನ್ನು ಕಂಡುಕೊಳ್ಳುತ್ತದೆ.

ಪ್ರಬುದ್ಧ ಲೈಂಗಿಕ ಬುದ್ಧಿಮತ್ತೆಯ ಬಗೆಗೆ ಇನ್ನಷ್ಟನ್ನು ಮುಂದಿನ ಸಲ ತಿಳಿದುಕೊಳ್ಳೋಣ.

ಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕೆಲವು ಕಾಲದ ದಾಂಪತ್ಯದ ನಂತರ ಕಾಮಾಸಕ್ತಿ ಹಾಗೂ ಕಾಮತೃಪ್ತಿ ಕಡಿಮೆಯಾಗಲು ಏನು ಕಾರಣ?

೧೬೨: ವೈವಾಹಿಕ ಲೈಂಗಿಕತೆ

ಎದುರು ಕುಳಿತ ಜೋಡಿಯನ್ನು ನೋಡುತ್ತ ಅವರ ಮುಖಭಾವನೆಗಳನ್ನು ಗಮನಿಸಿದೆ. ಇಬ್ಬರೂ ಸಪ್ಪಗಾಗಿ ಕಂಗೆಟ್ಟು ಮಾತಿಲ್ಲದೆ ಸ್ವಲ್ಪ ಅಂತರವಿಟ್ಟು ಕುಳಿತಿದ್ದರು. ಅವರ ಸಮಸ್ಯೆ ಏನೆಂದರೆ, ಇತ್ತೀಚೆಗೆ ಪರಸ್ಪರರಲ್ಲಿ ಕಾಮಾಸಕ್ತಿ ಬರುತ್ತಿಲ್ಲ. ಒಬ್ಬರು ತಯಾರಾದಾಗ ಇನ್ನೊಬ್ಬರು ಒಲ್ಲೆಯೆನ್ನುತ್ತಾರೆ. ಅಪರೂಪಕ್ಕೆ ಕಾಮಕೂಟ ನಡೆದಾಗಲೂ ಅವನ ಕಾಮ ಅವನಿಗೆ, ಇವಳ ಕಾಮ ಇವಳಿಗೆ ಎನ್ನುವಂತಿದೆ. ಆಸೆ ಬತ್ತಿಹೋಗಿದೆ. ಹಾಗೆಂದು ಕಾಮದಾಸೆ ಇಲ್ಲವೇ ಇಲ್ಲ ಎಂದಿಲ್ಲ. ಆಕರ್ಷಕ ಹೆಣ್ಣನ್ನು ಕಂಡರೆ ಅವನಿಗೂ, ಲಕ್ಷಣವಾದ ಗಂಡನ್ನು ಕಂಡರೆ ಅವಳಿಗೂ ಆಸೆ ಹುಟ್ಟುತ್ತಿದೆ. ಆತಂಕದಿಂದ ನನ್ನ ಹತ್ತಿರ ಬಂದಿದ್ದಾರೆ. ಅನುಕೂಲಕ್ಕಾಗಿ ಅವರನ್ನು ಲವ ಕುಮಾರ ಹಾಗೂ ಲೇಖಾ ಎಂದು ಹೆಸರಿಸೋಣ.

“ನಾಲ್ಕು ವರ್ಷದ ಹಿಂದೆ ಎಷ್ಟು ಚೆನ್ನಾಗಿ ಇದ್ದಿದ್ದು ಈಗ ಸಿಕ್ಕಾಪಟ್ಟೆ ಕಡಿಮೆ ಆಗಿರುವುದು ಬೇಜಾರಾಗಿದೆ.” ಎಂದು ಲವ ಹೇಳಿದ. ಅವನ ಮಾತಿಗೆ ಲೇಖಾ ತಲೆ ಅಲ್ಲಾಡಿಸಿದಳು. ನನಗೆ ನೆನಪಾಯಿತು.

ನಾಲ್ಕು ವರ್ಷದ ಹಿಂದೆ ಇದೇ ತರುಣ ದಂಪತಿ ನನ್ನ ಬಳಿ ಬಂದಿದ್ದರು. ಅದೇ ಹೊಸದಾಗಿ ಮದುವೆಯಾಗಿತ್ತು. ಮಧುಚಂದ್ರದ ನೆಪದಲ್ಲಿ ಇಡೀ ಯೂರೋಪ್ ಸುತ್ತಿದ್ದರು. ಪ್ರವಾಸದ ಅನುಭವ ಅದ್ಭುತವಾದರೂ ಪರಸ್ಪರರ ಅನುಭವ ಪೂರ್ತಿ ಆಗಿರಲಿಲ್ಲ. ಕಾಮೋದ್ರೇಕ ಹುಚ್ಚೇಳುವಷ್ಟು ಇದ್ದರೂ ಸಂಭೋಗ ಹೇಗೆ ಮಾಡಬೇಕೆಂದು ತಿಳಿಯದೆ ಇತರ ರೀತಿಗಳಲ್ಲಿ ತೃಪ್ತಿ ಹೊಂದುತ್ತ, ಊರಿಗೆ ಹಿಂದಿರುಗಿದ ಮರುದಿನವೇ ನನ್ನಲ್ಲಿ ಬಂದಿದ್ದರು. ಆಗ ಅವರಿಬ್ಬರೂ ನನ್ನೆದುರು ಕುಳಿತಿದ್ದ ದೃಶ್ಯ ಕಣ್ಣಮುಂದೆ ಗೋಚರಿಸಿತು. ಲವ ಆತ್ಮವಿಶ್ವಾಸದಿಂದ ನೇರವಾಗಿ ಕುಳಿತು ಲೇಖಾಳ ಕಡೆಗೆ ವಾರೆನೋಟದಿಂದ ನೋಡುವಾಗ ಲೇಖಾ ಲವನ ಭುಜಕ್ಕೆ ಒರಗಿ ಕುಳಿತುಕೊಂಡು ನಾನು ಹೇಳುವುದನ್ನು ಸಂಗೀತ ಕೇಳುವಂತೆ ಕೇಳುತ್ತಿದ್ದಳು. ಹೆಣ್ಣಿನ ಜನನಾಂಗದ ಮಾದರಿಯನ್ನು ಮುಂದಿಟ್ಟುಕೊಂಡು, ಎರಡು ಹೆಣ್ಣುಗಂಡು ಬೊಂಬೆಗಳ ಸಹಾಯದಿಂದ ಆಸನದ ತಿಳಿವಳಿಕೆ ಕೊಡುತ್ತಿರುವಾಗ ಅವರಿಬ್ಬರೂ ಪರಸ್ಪರರ ಬೆರಳುಗಳನ್ನು ಹೆಣೆದುಕೊಂಡು, ನನ್ನ ವಿವರಕ್ಕೆ ತಮ್ಮದೇ ಆದ ಭಾವಾರ್ಥ ಹಚ್ಚುತ್ತ, ರಹಸ್ಯಮಯ ನಸುನಗೆಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ವಿಷಯ ತಿಳಿದುಕೊಂಡ ನಂತರ ಆತುರದಿಂದ ಜಾಗ ಖಾಲಿಮಾಡಿದ್ದರು.  ಮರುದಿನವೆ ಕರೆಮಾಡಿ, ತಾವು ಬಂದಿದ್ದ ಉದ್ದೇಶ ಪೂರ್ತಿಯಾಯಿತೆಂದು ಉತ್ಸಾಹದಿಂದ ತಿಳಿಸಿದ್ದರು. ದಿನಕ್ಕೆ ಎಷ್ಟು ಸಲ ಸಂಭೋಗ ಮಾಡಿದರೆ ಪರವಾಗಿಲ್ಲ ಎಂದೂ ಕೇಳಿದ್ದರು. ಆಗ ಹಾಗಿದ್ದವರು ಈಗ ಹೀಗೆ ಆಗಿದ್ದಾರೆ. ಮರುಕವಾಯಿತು.

ಅವರ ಕಾಮಾಸಕ್ತಿ ಕಡಿಮೆ ಆಗಿರುವುದಕ್ಕೆ ಏನು ಕಾರಣ ಇರಬಹುದು ಎಂದು ವಿಚಾರಿಸಿದೆ. ಸುಮಾರು ಸಂದೇಹಗಳು ಹೊರಬಂದುವು. ಲವ ತನ್ನ ಡೊಳ್ಳು ಹೊಟ್ಟೆಯ ಮೇಲೆ ಕೈ ಆಡಿಸಿಕೊಳ್ಳುತ್ತ, ಜಿಮ್‌ಗೆ ಹೋಗಿ ಸುಮಾರು ಕಾಲವಾಯಿತು ಎಂದ. ಲೇಖಾ ತನ್ನ ಬತ್ತಿದ ಎದೆಯನ್ನು ನೋಡಿಕೊಳ್ಳುತ್ತ ಮಗುವಾದ ನಂತರ ತನ್ನ ಮೈಕಟ್ಟು ಬದಲಾಗಿದೆ ಎಂದಳು. ಇದರಿಂದ ಸಂಗಾತಿಯಲ್ಲಿ ಆಕರ್ಷಣೆ ಕಳೆದುಕೊಂಡಿದ್ದೀರಿ ಎಂದು ಅನ್ನಿಸುತ್ತಿದೆಯೇ ಎಂದು ಕೇಳಿದಾಗ, ತಮ್ಮಷ್ಟಕ್ಕೆ ತಾವು ಅಸಹ್ಯವಾಗಿ ಕಾಣುತ್ತಿದ್ದೇವೆ ಎಂದರೇ ವಿನಾ ಸಂಗಾತಿ ಚೆನ್ನಾಗಿ ಕಾಣುತ್ತಿಲ್ಲ ಎನ್ನಲಿಲ್ಲ. ತಮಗಿಂತ ಹೆಚ್ಚಾಗಿ ಆಕಾರ ಕಳೆದುಕೊಂಡ ಅವರ ಸ್ನೇಹಿತರು ಇನ್ನೂ ಕಾಮಕ್ರಿಯೆಯಲ್ಲಿ ಸುಖಪಡುತ್ತಿರುವುದನ್ನೂ ಹೇಳಿಕೊಂಡರು. ಸ್ವಂತ ಶರೀರವು ಇಷ್ಟವಾಗದೆ ಕಾಮಾಸಕ್ತಿ ಮೂಡುತ್ತಿಲ್ಲವೇ, ಅಥವಾ ಕಾಮಾಸಕ್ತಿ ಇಲ್ಲವಾದುದರಿಂದ ಶರೀರವನ್ನು ಇಷ್ಟಪಡುತ್ತಿಲ್ಲವೆ ಎಂಬುದರಲ್ಲಿ ಗೊಂದಲ ಇದ್ದಂತಿತ್ತು. ಒಟ್ಟಿನಲ್ಲಿ ತಮ್ಮ ಮೇಲಿನ ನಂಬಿಕೆ ಕಡಿಮೆ ಆದಂತಿತ್ತು.

ತಮ್ಮ ಸಂಬಂಧವು ನಾಲ್ಕು ವರ್ಷ ಹಳೆಯದು ಆಗಿರುವುದರಿಂದ ಕಾಮಾಸಕ್ತಿ ಕಡಿಮೆ ಆಗಿರಬಹುದು ಎಂಬುದು ಅವರ ಇನ್ನೊಂದು ಸಂದೇಹವಾಗಿತ್ತು. ಇದು ಸಹಜವೇ. ಸರ್ವಸಾಮಾನ್ಯವಾಗಿ ಸಂಬಂಧ ಶುರುವಾದ ಹೊಸದರಲ್ಲಿ ರೋಚಕತೆ ಹೆಚ್ಚಾಗಿ ಇರುತ್ತದೆ. ಸಂಗಾತಿಯಲ್ಲಿ ಇರುವ ಹೊಸತನ, ಹಾಗೂ ಸಂಗಾತಿಯನ್ನು ಒಂದು ಅದ್ಭುತ ವ್ಯಕ್ತಿ ಎಂಬಂತೆ ಕಾಣುವ ಕಾರಣದಿಂದ ಹೀಗಾಗುತ್ತದೆ. ಅದಲ್ಲದೆ, ಸಂಗಾತಿಯ ಪರಿಚಯ ಪೂರ್ತಿ ಆಗದಿರುವಾಗ ಅವರ ಬಗೆಗೆ ಒಂದು ವಿಲಕ್ಷಣತೆ ಇರುತ್ತದೆ. ಅವರನ್ನು ಅರಿತುಕೊಂಡಂತೆ ಈ ರೋಚಕತೆ, ವಿಲಕ್ಷಣತೆ ಹಾಗೂ ಕುತೂಹಲ ಕಡಿಮೆಯಾಗುತ್ತವೆ. ಕ್ರಮೇಣ ಸಂಗಾತಿ ಎಂದರೆ ಇಷ್ಟೇ, ಇದಕ್ಕಿಂತ ಹೆಚ್ಚಿಲ್ಲ ಎನ್ನುವಾಗ ಯಾಂತ್ರಿಕತೆ ಕಾಲಿಡುತ್ತದೆ. ಕಾಮಕ್ರಿಯು ಹಸಿವೆಯನ್ನು ತೀರಿಸಿಕೊಳ್ಳುವ ಚಟುವಟಿಕೆಯಾಗಿ ಉಳಿದುಬಿಡುತ್ತದೆ. ಆಗ ಕಾಮಾಸಕ್ತಿಯು ಕಡಿಮೆ ಆಗಬಹುದು.

ನಿತ್ಯದ ವ್ಯವಹಾರದ ಯಾಂತ್ರಿಕತೆಯ ಪರಿಣಾಮದಿಂದಲೂ ಹೀಗಾಗಬಹುದು. ಮಧುಚಂದ್ರದ ಬಳಿಕ ನಿತ್ಯ ಜೀವನಕ್ಕೆ ಹೊಂದಿಕೊಳ್ಳುವಾಗ ದಿನನಿತ್ಯದ ಆತಂಕ ಶುರುವಾಗಬಹುದು. ರಜೆಯಲ್ಲಿ ಇರುವಾಗ ಇಲ್ಲದ ಉದ್ಯೋಗದ ಒತ್ತಡವು ಕೆಲಸಕ್ಕೆ ಸೇರಿದಾಗ ಪುನಃ ಕಾಣುತ್ತದೆ. ಹೊಸದಾಗಿ ಅಂಟಿರುವ ಮನೆಯ ಜವಾಬ್ದಾರಿ ಹಾಗೂ ಸಂಬಂಧಿಕರ ಜೊತೆ ಹೊಂದಾಣಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುವ ಬೇಡಿಕೆ ಬರುತ್ತದೆ. ಇದು ಸಾಕಷ್ಟು ಆತಂಕಕ್ಕೆ ಹಾದಿಮಾಡಿಕೊಡುತ್ತ, ಮಲಗುವ ಕೋಣೆಗೂ ಕಾಲಿಡುವಾಗ ಕಾಮಾಸಕ್ತಿ ಕಡಿಮೆ ಆಗಬಹುದು.

ಇಬ್ಬರ ಸಂಬಂಧದಲ್ಲಿ ಏರುಪೇರಾಗಿದೆಯೇ ಎಂದು ವಿಚಾರಿಸಿದೆ. ಎಲ್ಲ ದಂಪತಿಗಳ ನಡುವೆ ಬರುವಂತೆ ಇವರಲ್ಲೂ ಸಾಕಷ್ಟು ತೀವ್ರ ಭಿನ್ನಾಭಿಪ್ರಾಯಗಳು ಬಂದಿದ್ದುವು. ಲೇಖಾಳ ವೃತ್ತಿಯು ಪ್ರವಾಸವನ್ನು ಒಳಗೊಂಡಿತ್ತು. ಆಕೆ ತಿಂಗಳಿಗೆ ಮೂರ್ನಾಲ್ಕು ದಿನ ಮನೆಯಲ್ಲಿ ಇಲ್ಲದೆ ಅವರ ರಾತ್ರಿಗಳಿಗೆ ಅಡ್ಡಿಯಾಗಿತ್ತು. ಅದನ್ನು ಇಬ್ಬರೂ ಜಾಣತನದಿಂದ ಪರಿಹರಿಸಿಕೊಂಡಿದ್ದರು. ಅದಲ್ಲದೆ ನಾಲ್ಕು ವರ್ಷಗಳಲ್ಲಿ ಐದು ಸಲ ಲೇಖಾ ವಿದೇಶಕ್ಕೆ ಹೋಗಿದ್ದಾಗ ಲವ ಮನೆಯನ್ನೂ ಮಗುವನ್ನೂ ನೋಡಿಕೊಂಡಿದ್ದ. ಲೇಖಾ ಮರಳಿದಾಗಲೆಲ್ಲ ಸ್ವಲ್ಪದಿನ ಅವರ ಕಾಮಾಸಕ್ತಿ ಹೆಚ್ಚಿತ್ತು ಎಂದಿದ್ದರೂ ಬಹಳ ಬೇಗ ಮುಂಚಿನ ನೀರಸ ಮಟ್ಟಕ್ಕೆ ಇಳಿದಿತ್ತು. ಇತ್ತೀಚೆಗೆ ಆಕೆಯ ಪ್ರವಾಸ ನಿಂತಿದೆ. ಕೆಲವೊಮ್ಮೆ ಲವನಿಗೆ ಕೆಲಸದ ಒತ್ತಡ ಹೆಚ್ಚಾದಾಗಲೆಲ್ಲ ತಲೆಕೆಟ್ಟುಹೋಗಿ ವಾರಾಂತ್ಯಕ್ಕೆ ಒಂದು ದಿನ ಸೇರಿಸಿ, ಮಗುವನ್ನು ಚಿಕ್ಕಮ್ಮನ ಜೊತೆಗೆ ಬಿಟ್ಟು ಕಾಡಿನಲ್ಲಿ ಕಳೆದಿದ್ದರು. ಅಲ್ಲಿಯ ವಾತಾವರಣ ಸರಿಹೋಗದಿದ್ದಾಗ ಬೇಗ ಮನೆಗೆ ಮರಳಿದ್ದರು.

ತಮಗೆ ವಯಸ್ಸಾಗಿದ್ದು ಕಾರಣವೇ ಎನ್ನುವುದು ಇಬ್ಬರಿಗೂ ಇನ್ನೊಂದು ಪ್ರಶ್ನೆಯಾಗಿತ್ತು. ಲವನಿಗೆ ಮೂವತ್ತೆರಡು, ಲೇಖಾ ಅವನಿಗಿಂತ ಎರಡು ವರ್ಷ ದೊಡ್ಡವಳು. ವಯಸ್ಸಿನ ಮಾತನ್ನು ಹೇಗೆ ಎತ್ತಿದರು ಎಂದರೆ, ಅವರು ಮದುವೆಯಾಗಿ ನಾಲ್ಕು ವರ್ಷವಲ್ಲ, ನಲವತ್ತು ವರ್ಷವಾಗಿದೆ ಎನ್ನುವಂತಿತ್ತು. ವಯಸ್ಸಾದಂತೆ ಶರೀರ ಮುಂಚಿನಂತೆ ಸ್ಪಂದಿಸುವುದಿಲ್ಲವೇನೋ ನಿಜ. ಹದಿವಯಸ್ಸಿನಲ್ಲಿ ಕಾಮವು ಅರಳುತ್ತಿರುವಾಗ ಇರುವ ಶಾರೀರಿಕ ಬಲ, ಚಪಲತೆ ಹಾಗೂ ಸ್ಪಂದನೆ ಕ್ರಮೇಣ ಕಡಿಮೆಯಾಗುತ್ತದೆ. ವಯಸ್ಸು ಜನನಾಂಗಗಳ ಮೇಲೂ ಪರಿಣಾಮ ಆಗುತ್ತದೆ. ಶಿಶ್ನವು ಉದ್ರೇಕಗೊಳ್ಳಲು ಹಾಗೂ ಯೋನಿಯು ಒದ್ದೆಯಾಗಲು ಮುಂಚಿಗಿಂತಲೂ ಹೆಚ್ಚು ಸಮಯ ಹಿಡಿಯುತ್ತದೆ. ನಂತರ ನಡೆಯುವ ಕಾಮಕ್ರಿಯೆಯಲ್ಲಿ ಮುಂಚಿನ ಆತುರ, ಆವೇಗ, ರಭಸ ಇರಲಾರದು. ಹಾಗಾಗಿ ಮುಂಚಿನ “ಸ್ಫೋಟಕ” ಎನಿಸುವ ಕಾಮತೃಪ್ತಿ ಸಿಗಲಾರದು.

ಇದಕ್ಕಿಂತ ಹೆಚ್ಚಾಗಿ ಅವರಿಗೆ ಇನ್ನೊಂದು ಅನಿಸಿಕೆ ಬಲವಾಗಿತ್ತು: ತಮಗಿರುವ – ಅಥವಾ ಇವೆ ಎಂದುಕೊಂಡಿರುವ – ಕೊರತೆಗಳು ಇದ್ದೂ ಕಾಮಸುಖವನ್ನು ಅನುಭವಿಸುತ್ತ ತೃಪ್ತಿಯಿಂದ ಇರುವ ದಂಪತಿಗಳಿದ್ದಾರೆ. ಅವರೆಲ್ಲ ತಮಗಿಂತ ಹೇಗೆ ಭಿನ್ನವಾಗಿದ್ದಾರೆ ಎನ್ನುವುದು ಒಗಟಾಗಿತ್ತು.

ಲವ-ಲೇಖಾರಿಗೆ ಆದ ಅನಿಸಿಕೆ, ಅನುಭವ ನಿಮ್ಮಲ್ಲೂ ಅನೇಕರಿಗೆ ಉಂಟಾಗಿರಬಹುದು. ಇದರ ಬಗೆಗೆ ಇನ್ನಷ್ಟು ವಿವರಗಳನ್ನು ಮುಂದಿನ ಸಲ ತಿಳಿಯೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಚಿಕ್ಕ ಚಿಕ್ಕ ಖುಷಿಯನ್ನೂ ಮನಃಪೂರ್ತಿ ಅನುಭವಿಸುವಂತಾದರೆ ಸಂಗಾತಿಯ ಜೊತೆಗಿನ ಬಾಂಧವ್ಯವು ಭದ್ರವಾಗುತ್ತದೆ!

೧೫೯: ಪರಸಂಬಂಧ–೨೨

ಪರಸಂಬಂಧಗಳ ಬಗೆಗೆ ಚರ್ಚಿಸುತ್ತಿದ್ದೇವೆ. ಹೋದಸಲ ತಪ್ಪಿತಸ್ಥರು ತೆರೆದ ಮನಸ್ಸಿನಿಂದ ಪ್ರಾಂಜಲವಾಗಿ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದರ ಜೊತೆಗೆ, ತನ್ನ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವುದು ಸಾಧ್ಯವೆ ಎಂಬುದನ್ನೂ ಪರಿಶೀಲಿಸಬೇಕು ಎಂದು ಮಾತಾಡಿಕೊಂಡಿದ್ದೆವು. ಬೇಡಿಕೆಗಳನ್ನು ಮುಂದಿಡುವ ನೊಂದ ಸಂಗಾತಿಯ ಮನಸ್ಥಿತಿಯ ಬಗೆಗೆ ಈ ಸಲ ಗಮನ ಕೊಡೋಣ.

ನೊಂದ ಸಂಗಾತಿಯು ತಪ್ಪಿತಸ್ಥ ಸಂಗಾತಿಯ ಮುಂದೆ ತನ್ನ ಬೇಡಿಕೆಗಳನ್ನು ಮುಂದಿಡುವಾಗ ಒಂದು ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಜಾನಿಸ್ ಸ್ಪ್ರಿಂಗ್ ಹೇಳುತ್ತಾಳೆ. ಒಂದುವೇಳೆ ನೀವೇ ನೊಂದ ಸಂಗಾತಿಯಾಗಿದ್ದರೆ, ನಿಮ್ಮ ಕೋಪತಾಪಗಳಿಗೆ ಕಾರಣಗಳು ವಾಸ್ತವವಾಗಿ ತಪ್ಪಿತಸ್ಥ ಸಂಗಾತಿಯಲ್ಲಿ ಇವೆಯೆ, ಅಥವಾ ಇನ್ನಿತರ ಮೂಲಗಳಿಂದ ಬಂದಿವೆಯೆ ಎನ್ನುವುದರ ಬಗೆಗೆ ನಿಮ್ಮ ಒಳಹೊಕ್ಕು ನೋಡಿಕೊಳ್ಳುವುದು ಅಗತ್ಯ. ನಿಮ್ಮ ಬೇಡಿಕೆಗಳು ನ್ಯಾಯವೆ ಎಂದು ವಿಮರ್ಶಿಸುವುದೂ ಅಷ್ಟೇ ಅಗತ್ಯ. ಅದಕ್ಕಾಗಿ ಹೀಗೆ ಯೋಚಿಸಿ:

  • ನನ್ನ ಸಂಗಾತಿ – ಅಥವಾ ಬೇರೆ ಯಾರಾದರೂ ಆಗಲಿ – ಪೂರೈಸಲು ಅಸಾಧ್ಯವೆನ್ನಿಸುವ ಬೇಡಿಕೆಗಳು ನನ್ನಲ್ಲಿವೆಯೆ?
  • ನನ್ನ ಅಸಾಮರ್ಥ್ಯಕ್ಕಾಗಿ ಸಂಗಾತಿಯ ಮೇಲೆ ತಪ್ಪು ಹೊರೆಸುತ್ತಿದ್ದೇನೆಯೆ?
  • “ಯಾವ ಬಾಂಧವ್ಯಕ್ಕೂ ನನ್ನಲ್ಲಿ ಯೋಗ್ಯತೆಯಿಲ್ಲ” ಎಂಬ ಅನಿಸಿಕೆಯನ್ನು ಶುರುವಿನಿಂದಲೂ ಮನದಾಳದಲ್ಲಿ ಇಟ್ಟುಕೊಂಡು ಅಭದ್ರತೆ, ಅಸಂತೋಷ ಅನುಭವಿಸುತ್ತಿದ್ದು, ಅದಕ್ಕೆ ಸಂಗಾತಿಯನ್ನು ಹೊಣೆ ಮಾಡುತ್ತಿದ್ದೇನೆಯೆ?
  • ನಾನು ಸದಾ ಆತಂಕ, ಸಿಡುಕು ತೋರಿಸುತ್ತ ಇರುವುದರಿಂದ ಸಂಗಾತಿಯು ನನ್ನಿಂದ ದೂರ ಸರಿದಿದ್ದಾರೆಯೆ?
  • ನಾನೀಗ ಅನುಭವಿಸುತ್ತಿರುವ ಅತೃಪ್ತಿ, ಪೂರೈಸದ ಬಯಕೆಗಳು, ಅತಿಯಾದ ಆಸೆಗಳು, ಸಂಬಂಧ ಬೇಕೋ ಬೇಡವೋ ಎನ್ನುವ ದ್ವಂದ್ವ, ಸಂಗಾತಿಯ ಬಗೆಗೆ ನನಗಿರುವ ಅಸಹನೀಯತೆ, ಹಾಗೂ ನಮ್ಮಿಬ್ಬರ ನಡುವಿನ ಬಿರುಸಿನ ವಾಗ್ವಾದ – ಇದೆಲ್ಲದರಲ್ಲಿ ನನ್ನ ಕೊಡುಗೆ ಎಷ್ಟಿದೆ?

ಹೀಗೆ ನೊಂದವರೂ ಕೂಡ ಪರಸಂಬಂಧದಲ್ಲಿ ತನ್ನ ಕೊಡುಗೆಯ ಬಗೆಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ನಾವೆಲ್ಲ ನಮ್ಮ ಸಂಗಾತಿ ಹೇಗೆಲ್ಲ ಬದಲಾದರೆ ನಾನು ಸುಖವಾಗಿರಬಲ್ಲೆ ಎಂದು ಯೋಚಿಸಿ ಬೇಡಿಕೆಗಳನ್ನು ಹೇರುತ್ತೇವೆಯೇ ಹೊರತು ಸಂಗಾತಿಯ ಇತಿಮಿತಿಗಳನ್ನು ಅರಿತು ಬೇಡಿಕೆಗಳನ್ನು ಮಂಡಿಸುವುದಿಲ್ಲ. ಉದಾಹರಣೆಗೆ, ಕಾರು ಇಲ್ಲವೆಂದು ತಕರಾರು ಮಾಡುವ ಹೆಂಡತಿಯನ್ನು ಚಕಿತಗೊಳಿಸಲು ಗಂಡ ಒಂದುದಿನ ಮಾರುತಿ ೮೦೦ನ್ನು ಖರೀದಿಸಿ ಮನೆಯೆದುರು ನಿಲ್ಲಿಸಿ ಹೆಂಡತಿಯನ್ನು ಕರೆದ. ಆಕೆ ಓಡಿಬಂದು ನೋಡಿದವಳು, “ಛೆ, ಇದನ್ನೇಕೆ ಕೊಂಡಿರಿ? ಪಕ್ಕದ ಮನೆಯವರ ಹ್ಯುಂಡೈ ಚೆನ್ನಾಗಿದೆ ಎಂಬುದು ನಿಮಗೆ ಗೊತ್ತಿಲ್ಲವೆ?” ಎಂದು ಉದ್ಗಾರ ಎತ್ತಿದಳು. ಗಂಡನ ಉತ್ಸಾಹ ಠುಸ್ಸೆಂದು ಒಂಟಿಯಾದ. ಪರಿಣಾಮ? ಗಂಡ ಹೊಸಕಾರಿನಲ್ಲಿ ಹೆದ್ದಾರಿಯುದ್ದಕ್ಕೂ ತೇಲುವಾಗ ಅವನರ್ಧ ವಯಸ್ಸಿನ ಸೆಕ್ರೆಟರಿಯು ಅವನ ಹೆಗಲ ಮೇಲೆ ತಲೆಯಿಟ್ಟು ಖುಷಿ ಕೊಡುತ್ತಿರುತ್ತಾಳೆ. ಒಂದುವೇಳೆ ಹೆಂಡತಿಯು ಮಾರುತಿ ಕಾರನ್ನು ಮೆಚ್ಚಿದ್ದರೆ ಗಂಡನ ಜೊತೆಗೆ ಪಯಣಿಸುವ ಖುಷಿ ಅವಳದಾಗಿರುತ್ತಿತ್ತು ಎಂದು ಗಂಡ ನಂತರ ಹೆಂಡತಿಗೆ ಹೇಳುವ ದಿಟ್ಟತನ ತೋರಿದ. ಸದಾ ಅಸಂತೋಷದಿಂದ ಇರಲು ನಿರ್ಧರಿಸಿದಂತೆ ಕಾಣುವ ಸಂಗಾತಿಯನ್ನು ಖುಷಿಪಡಿಸಲು ಹೋಗಿ ವಿಫಲರಾಗುವವರು ತಮ್ಮ ಒಂಟಿತನವನ್ನು  ದೂರಮಾಡಲು ಪರಸಂಬಂಧಕ್ಕೆ ಕೈಹಾಕಬಹುದು. ಇನ್ನೊಂದು ಪ್ರಕರಣದಲ್ಲಿ ಗಂಡ ಹೇಳಿದ: “ತನ್ನ ಆರ್ಥಿಕ ಇತಿಮಿತಿ ಗೊತ್ತಿದ್ದೂ ಹೆಂಡತಿ ಮನಸ್ಸಿಗೆ ಬಂದಿದ್ದನ್ನು ಬೇಡುತ್ತಿರುತ್ತಾಳೆ. ಹಾಗಿದ್ದೂ ಅವುಗಳನ್ನು ಪೂರೈಸುವುದಕ್ಕೆ ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇನೆ.” ಉದಾಹರಣೆಗೆ, ಆಭರಣದ ಅಂಗಡಿಯಲ್ಲಿ ಎರಡು ಲಕ್ಷದ ಕಂಠಾಭರಣಕ್ಕೆ ಆಕೆ ಕಣ್ಣರಳಿಸಿದ್ದನ್ನು ಕಂಡು ಅದನ್ನು ಕೊಡಿಸಬೇಕೆಂದು ಮನಸ್ಸು ಮಾಡಿದ್ದನ್ನು ಹೇಳಿಕೊಂಡ. ಆಗ ಹೆಂಡತಿ ಆಶ್ಚರ್ಯದಿಂದ ಹೇಳಿದಳು: ”ಅಲ್ಲರೀ, ಅವೊತ್ತು ಆ ನೆಕ್‌ಲೇಸನ್ನು ಅಂಗಡಿಯಲ್ಲಿ ಹಾಕಿಕೊಂಡಿದ್ದು ಎರಡು ಕ್ಷಣ ಖುಷಿಪಡಲಿಕ್ಕೆ ಅಷ್ಟೆ. ಕೊಳ್ಳಬೇಕು ಎಂದೇನೂ ಹೇಳಲಿಲ್ಲವಲ್ಲ? ಅಷ್ಟಕ್ಕೂ ನೀವೇನು ಮಾಡಿದಿರಿ? ಇದೆಲ್ಲ ನಮ್ಮ ಮಿತಿಮೀರಿದ್ದು ಎಂದು ಸರವನ್ನು ವಾಪಸ್ ಇಡಲು ಹೇಳಲಿಲ್ಲವೆ?” ಅವನಿಗೆ ತನ್ನ ಪ್ರತಿಕ್ರಿಯೆ ನೆನಪಾಗಲಿಲ್ಲ. ಈ ದ್ವಂದ್ವದ ಆಳವನ್ನು ಅಗೆದಾಗ ಕಂಡುಬಂದಿದ್ದು ವಿಸ್ಮಯಕರವಾಗಿತ್ತು: ಗಂಡನ ಬಾಲ್ಯವು ಕಡುಬಡತನದಲ್ಲಿ ಕಳೆದಿತ್ತು. ತನ್ನ ಸ್ನೇಹಿತರ ಶ್ರೀಮಂತಿಕೆಯನ್ನು ತಾನೂ ಬಯಸುತ್ತ, ಅದು ತನ್ನಿಂದ ಆಗುವುದಿಲ್ಲ ಎನ್ನುತ್ತ ಒಂದು ರೀತಿಯ ಅಸಮರ್ಥತೆಯ ಭಾವವನ್ನು ಹೊಂದುತ್ತ, ಸುಖವನ್ನು ನಿರಾಕರಿಸುವ ಗುಣವನ್ನು ಬೆಳೆಸಿಕೊಂಡಿದ್ದ. ಆಭರಣದ ವಿಷಯದಲ್ಲೂ ಹಾಗೆಯೇ ಆಯಿತು. ಅದನ್ನು ಕೊಳ್ಳಬೇಕು ಬಯಸುತ್ತಲೇ, ಅದಾಗುವುದಿಲ್ಲ ಎಂದು ಅಸಮರ್ಥತೆಯನ್ನೂ ಅನುಭವಿಸಿ, ಅದರಿಂದ ಬರಬಹುದಾದ ಸುಖದ ಕಲ್ಪನೆಯನ್ನು ಅನುಭವಿಸುವುದನ್ನೇ ನಿರಾಕರಿಸಿದ. ಹಾಗಾಗಿಯೇ ಕೊಳ್ಳುವುದು ತನ್ನ ಮಿತಿಮೀರಿದ್ದು ಎಂದಿದ್ದು. ಅಸಾಮರ್ಥ್ಯದ ಅನಿಸಿಕೆಯನ್ನು ತಲೆಯಲ್ಲಿ ಇಟ್ಟುಕೊಂಡರೆ ಹಿಂಸೆಯಾಗುತ್ತದಲ್ಲವೆ? ಅದಕ್ಕೇ ಅವನ ಒಳಮನಸ್ಸು ಅದನ್ನು “ಮರೆತುಬಿಡಲು” ಪ್ರೇರೇಪಿಸಿತು. ಅಂದರೆ, ಇಲ್ಲಿ ಸಮಸ್ಯೆಯು ಹೆಂಡತಿಯ ಅತಿಯಾದ ಬೇಡಿಕೆಗಳಿಂದ ಹುಟ್ಟಿರದೆ, ಗಂಡನ ಅಸಾಮರ್ಥ್ಯದ ಅನಿಸಿಕೆಯಿಂದ ಉಂಟಾದ “ಸುಖಪಡುವುದಕ್ಕೆ ಅನರ್ಹತೆ”ಯಿಂದ ಹುಟ್ಟಿತ್ತು! ಹೆಂಡತಿಯ ಆಭರಣದ ಬಯಕೆಯು ಅವನ ಅನರ್ಹತೆಯ ಭಾವವನ್ನು ತೀವ್ರಗೊಳಿಸಲು ಸಹಾಯ ಮಾಡಿತ್ತೇ ಹೊರತು ಕೊಳ್ಳುವ ವಿಚಾರಕ್ಕೆ ಪ್ರೇರೇಪಿಸಿರಲಿಲ್ಲ! – ಒಂದುವೇಳೆ ಹಾಗಿದ್ದರೆ ಹೆಂಡತಿಯ ಕೊರಳಲ್ಲಿರುವ ಆಭರಣವನ್ನು ಕಣ್ಣುತುಂಬ ನೋಡಿ ಖುಷಿಪಟ್ಟು, ಆನಂತರ ತನ್ನ ಇತಿಮಿತಿಯನ್ನೂ ಹೇಳಿಕೊಳ್ಳುತ್ತಿದ್ದ. ಇಲ್ಲಿ ಗಂಡನ ಆಲೋಚನೆಯ ರೀತಿಯು ಪ್ರಾಮಾಣಿಕ ಆಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇದರ ತಾತ್ಪರ್ಯ ಏನು? ನೀವು ನಿಮ್ಮ ಬಗೆಗೆ ಸಂತೋಷದಿಂದ ಇದ್ದರೆ, ಸಂಬಂಧದಲ್ಲೂ ಸಂತೋಷದಿಂದ ಇರುತ್ತ, ಖುಷಿಕೊಡುವ ಚಿಕ್ಕ ವಿಷಯವನ್ನೂ  ಮನಃಪೂರ್ತಿ ಅನುಭವಿಸುತ್ತೀರಿ. ಆಗ, ಸಂಬಂಧಕ್ಕೆ ನಿಮ್ಮ ಕೊಡುಗೆಯು ಎಷ್ಟೇ ಚಿಕ್ಕದಿದ್ದರೂ ಸಂತೋಷವನ್ನು ತರುತ್ತದೆ ಎಂದುಕೊಳ್ಳುತ್ತೀರಿ. ಆದರೆ ನಿಮ್ಮೊಳಗೆ ಸಂತೋಷವನ್ನು ಬರಮಾಡಿಕೊಳ್ಳುವ ಅಥವಾ ಅನುಭವಿಸುವ ಗುಣದ ಕೊರತೆಯಿದ್ದರೆ, ಸಂಗಾತಿಯು ನೀವು ಒದಗಿಸುವ ಅನುಕೂಲತೆಗಳನ್ನು ಬಯಸುತ್ತಿದ್ದಾರೆಯೇ ವಿನಾ ನಿಮ್ಮನ್ನು ಬಯಸುವುದಿಲ್ಲ ಎಂದುಕೊಳ್ಳುತೀರಿ. ಆಗ ಏನಾಗುತ್ತದೆ? ಸಂಗಾತಿಯನ್ನು ಅರ್ಥಮಾಡಿಕೊಳ್ಳದೆ ದೂರೀಕರಿಸುತ್ತ ಒಂಟಿಯಾಗುತ್ತೀರಿ. ನಿಮ್ಮ ಹೆಣಗಾಟದಲ್ಲಿ ಅರ್ಥಕಾಣದೆ ಸಂಗಾತಿಯು ಒಂಟಿಯಾಗುತ್ತಾರೆ. ಒಂಟಿತನದಿಂದ ಮುಕ್ತಿಪಡೆದು ಬದುಕುವಂತಾಗಲು ಕ್ಷಣಿಕ ಸುಖದ ಅಮಲನ್ನು ಏರಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆಗಲೇ ಪರಸಂಬಂಧದ ಆಶ್ರಯ ಅನಿವಾರ್ಯ ಎನ್ನಿಸುವಂತಾಗುತ್ತದೆ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ತಪ್ಪಿತಸ್ಥರು ಸರಿಯಾದ ದಿಕ್ಕಿನಲ್ಲಿ ಇಡುವ ಒಂದೊಂದು ಪುಟ್ಟ ಹೆಜ್ಜೆಗೂ ಅಗಾಧ ಭವಿಷ್ಯವಿದೆ.

೧೫೮: ಪರಸಂಬಂಧ–೨೧

ಪರಸಂಬಂಧದ ಬಗೆಗೆ ನಿರ್ಧರಿಸುವಾಗ ನೊಂದ ಸಂಗಾತಿಯು ತನ್ನ ಬೇಡಿಕೆಗಳನ್ನು ಹೇಗೆ ಮುಂದಿಡಬೇಕು, ಹಾಗೂ ತಪ್ಪಿತಸ್ಥ ಸಂಗಾತಿಯು ಅದನ್ನು ತನಗೆ ಹೇಗೆ ಅನ್ವಯಿಸಿಕೊಳ್ಳಬೇಕು ಎಂದು ಹೋದಸಲ ತಿಳಿದೆವು. ಇನ್ನು, ತಪ್ಪಿತಸ್ಥ ಸಂಗಾತಿಯು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಈಸಲ ನೋಡೋಣ.

ನೀವೊಂದುವೇಳೆ ತಪ್ಪಿತಸ್ಥ ಸಂಗಾತಿಯಾಗಿದ್ದಲ್ಲಿ, ನೊಂದ ಸಂಗಾತಿಯು ನಿಮ್ಮ ಮುಂದಿಡುವ ಬೇಡಿಕೆಗಳು ವಿಪರೀತ ಹಾಗೂ ಅನುಸರಿಸಲು ಅಸಾಧ್ಯ, ಹಾಗಾಗಿ ಅವರನ್ನು ಮೆಚ್ಚಿಸಲು ಆಗುವುದೇ ಇಲ್ಲ ಎಂದು ಅನ್ನಿಸುವುದು ಸಹಜ. ಯಾಕೆಂದರೆ ಈ ಬೇಡಿಕೆಗಳ  ಹಿಂದೆ ಯಾರು ಯಾರ ಆಧೀನದಲ್ಲಿ ಇರಬೇಕು ಎನ್ನುವ ಪಾರಮ್ಯದ ಸೆಣಸಾಟ ಇದೆ. ತನ್ನ ಪ್ರಾಬಲ್ಯವನ್ನು ಬಿಟ್ಟುಕೊಟ್ಟರೆ ಸಂಗಾತಿಯು ತಲೆಯಮೇಲೆ ಸವಾರಿ ಮಾಡಬಹುದು ಎಂದು ಭಯವಾಗುತ್ತದೆ. ಆದರೆ ಸ್ವಲ್ಪ ಯೋಚಿಸಿದರೆ ಇದರಲ್ಲಿ ಪ್ರಯೋಜನವೂ ಇರುವುದು ಕಾಣುತ್ತದೆ: ನಿಮ್ಮ ಮುಂಚಿನ ರೀತಿನಡತೆಗಳಲ್ಲಿ ಸ್ವಲ್ಪವಾದರೂ ಬದಲಾವಣೆ ತರಲು ಒಪ್ಪಿಕೊಂಡರೆ ಗಾಸಿಯಾದ ಸಂಗಾತಿಗೆ ನೀವು ಬದಲಾಗಲು ಶುರುವಾಗಿದ್ದು ಅರಿವಾಗುತ್ತದೆ. ಸಂಗಾತಿಯು ನಿಮ್ಮನ್ನು ಪುನಃ ನಂಬಲು ಸಹಾಯ ಮಾಡುತ್ತದೆ. ಅದರ ಫಲಶ್ರುತಿ ನಿಮ್ಮ ಅರಿವಿಗೆ ಬರದಷ್ಟು ಅಗಾಧವಾಗುತ್ತದೆ. ಯಾಕೆ? ಬದಲಾವಣೆಯು ತಪ್ಪಿತಸ್ಥರಾದ ನಿಮ್ಮಿಂದ ಶುರುವಾಗಿದೆ, ಹಾಗೂ ಎಷ್ಟೇ ಚಿಕ್ಕದಾದರೂ ಸರಿಯಾದ ದಿಕ್ಕಿನಲ್ಲೇ ಹೆಜ್ಜೆಯಿಟ್ಟಿದ್ದೀರಿ! ಇದರಿಂದ ನೀವಿಬ್ಬರೂ ಪರಸ್ಪರರನ್ನು ಮನಸ್ಸಿಗೆ ತಂದುಕೊಳ್ಳುವ ರೀತಿಯಲ್ಲೇ ಬದಲಾವಣೆ ಆಗುತ್ತದೆ. ಕಠಿಣವಾದ ಸಂಗಾತಿ ಮೃದುವಾಗುತ್ತಾರೆ. ದುಃಖ, ನಿರಾಕರಣೆ ದೂರವಾಗುತ್ತ ಆಶಯ, ಸ್ವೀಕೃತಿ ಕಾಣುತ್ತದೆ. ಅಗೌರವದ ಜಾಗದಲ್ಲಿ ಕಾಳಜಿ ಕಾಲಿಡುತ್ತದೆ.

ಹೋದಸಲ ಹೇಳಿದ್ದು ನೆನಪಿದೆಯೆ? ಸಂಗಾತಿಯ ಎಂದಿದ್ದೆ. ಈ ಬೇಡದ ವರ್ತನೆಗಳು ನಿಮ್ಮಲ್ಲಿವೆ ಜೊತೆಗೆ ನೀವು ತೋರುವ ಬೇಡವಾದ ವರ್ತನೆಗಳು ಎಲ್ಲಿಂದ ಬಂದುವು ಎನ್ನುವುದರ ಬಗೆಗೆ ಯೋಚಿಸಿ ಎಂದು ನಿಮ್ಮ ಸ್ನೇಹಿತವರ್ಗ, ಬಂಧುಬಳಗ, ಅಥವಾ ಮಾಜಿ ಪ್ರೇಮಿಯು ಹೇಳಿದ್ದು ಇದೆಯೆ ಎಂದು ಪ್ರಶ್ನಿಸಿಕೊಳ್ಳಿ ಎಂದೂ ಹೇಳಿದ್ದೆ. ಇವು ನಿಮ್ಮಲ್ಲಿದ್ದರೆ ನಿಮ್ಮ ಸಂಗಾತಿಯ ಜೊತೆಗಷ್ಟೇ ಅಲ್ಲ, ಯಾರ ಜೊತೆಗಾದಗೂ ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿವೆ ಎಂದಂತಾಯಿತು. ಈ ಗುಣಗಳೇ ನಿಮ್ಮ ದೌರ್ಬಲ್ಯ. ಹಾಗಾಗಿ ಬದಲಾವಣೆಯ ಕಹಿಮಾತ್ರೆಯನ್ನು ನೀವು ನುಂಗಲೇಬೇಕು. ಅಂದರೆ ನೀವು ಸಂಗಾತಿಯ ಜೊತೆಗಷ್ಟೇ ಅಲ್ಲ, ಎಲ್ಲರೊಂದಿಗೂ ಒಳ್ಳೆಯವರಾಗುವ ಸಾಧ್ಯತೆಯಿದೆ.

ಹಾಗೆಂದು ನೊಂದ ಸಂಗಾತಿಯು ಸೂಚಿಸಿದ ಎಲ್ಲ ಬದಲಾವಣೆಗಳನ್ನೂ ಸಾರಾಸಗಟಾಗಿ ಒಪ್ಪಬೇಕೆ? ಖಂಡಿತವಾಗಿಯೂ ಇಲ್ಲ. ಹೀಗೆ ಮಾಡುವುದರಲ್ಲಿ ಅನಾಹುತ ಇದೆ. ಆದರೆ ಅನೇಕರು ಕೇಳಿದ್ದಕ್ಕೆಲ್ಲ ಹಿಂದೆಮುಂದೆ ಯೋಚಿಸದೆ ಒಪ್ಪಿಬಿಡುತ್ತಾರೆ. ಸಂಗಾತಿಯನ್ನು ಕಳೆದುಕೊಳ್ಳುವ ಭಯ, ಅಥವಾ ಸಂಗಾತಿಯು ಒಡ್ಡುವ ಬೆದರಿಕೆಗೆ (“ನನ್ನ ಮಾತನ್ನು ಒಪ್ಪದಿದ್ದರೆ ನಿನ್ನ ಕೃತ್ಯವನ್ನು ಬಯಲಿಗೆ ತಂದು ಮರ್ಯಾದೆ ತೆಗೆಯುತ್ತೇನೆ!”) ಮಣಿಯುತ್ತಾರೆ. ಉದಾಹರಣೆಗೆ, ಒಬ್ಬಳು ಸಹೋದ್ಯೋಗಿಯೊಡನೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಗಂಡನು ಆಕೆಗೆ ಉದ್ಯೋಗ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲು ಅಪ್ಪಣೆ ಕೊಟ್ಟ. ಗಂಡನನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ಆಕೆಯು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಲ್ಲದೆ ಇನ್ನೆಂದೂ ಕೆಲಸಕ್ಕೇ ಹೋಗುವುದಿಲ್ಲ ಎಂದು ಮಾತುಕೊಟ್ಟಳು. ಕೆಲವು ದಿನಗಳ ನಂತರ ಆಕೆಗೆ ಒಂಟಿತನ ಕಾಡುತ್ತ, ಬೆಲೆಕಳೆದುಕೊಂಡು ಮೂಲೆಗುಂಪಾದ ಅನಿಸಿಕೆ ಶುರುವಾಯಿತು. ಅಷ್ಟಲ್ಲದೆ, ಕೇವಲ ಗಂಡನ ಸಂಪಾದನೆಯಲ್ಲಿ ಬದುಕು ಸಾಗಿಸುವುದು ದುಸ್ತರವಾಯಿತು. ಅವನೊಬ್ಬನೇ ಅವಧಿಮೀರಿ ದುಡಿಯುವುದನ್ನು ನೋಡಲು ಆಗದಂತಾಯಿತು. ಹಾಗೆಂದು ಪುನಃ ಕೆಲಸಕ್ಕೆ ಸೇರುವ ಪ್ರಸ್ತಾಪ ಎತ್ತಿದರೆ ಗಂಡನು ಆಕೆಯನ್ನು ಸಂದೇಹಿಸುವ ಸಂಭವವಿತ್ತು.  ಇನ್ನೊಂದು ಪ್ರಕರಣದಲ್ಲಿ ಒಬ್ಬನು ತನ್ನ ಆಫೀಸಿನ ಸ್ವಾಗತಕಾರ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡವನು ಹೆಂಡತಿಯ ಒತ್ತಾಯಕ್ಕೆ ಒಳಗಾಗಿ ಆಕೆಯನ್ನೇ ಸ್ವಾಗತಕಾರ್ತಿಯನ್ನಾಗಿ ನೇಮಿಸಿದ. ಆಕೆಗೆ ಅದರಲ್ಲಿ ತರಬೇತಿ ಇಲ್ಲದಿದ್ದುದರಿಂದ ಅವನ ವ್ಯವಹಾರ ನೆಲಕಚ್ಚಿತು. ಹಾಗೆಂದು ಎಲ್ಲವೂ ತೊಂದರೆ ಆಗಬೇಕೆಂದಿಲ್ಲ. ಮತ್ತೊಂದು ಪ್ರಕರಣದಲ್ಲಿ ಊರೂರು ತಿರುಗುವ ಉದ್ಯೋಗವಿದ್ದ ಗಂಡನು ಪರಸಂಬಂಧದ ಕಾರಣದಿಂದ ರಾಜೀನಾಮೆ ಕೊಡಬೇಕಾಯಿತು. ಆಗವನು ಹೆಂಡತಿಯು ನಡೆಸುವ ಪ್ರವಾಸೋದ್ಯಮಕ್ಕೆ ಸಹಾಯಕನಾಗಿ ಸೇರಿಕೊಂಡ. ಇಬ್ಬರೂ ಕೈಸೇರಿಸಿ ದುಡಿದರು. ಈಗ ಹಲವಾರು ಶಾಖೆಗಳನ್ನು ತೆರೆದಿದ್ದಾರಲ್ಲದೆ ಅವರ ಬಾಂಧವ್ಯವೂ ಅಗಾಧವಾಗಿ ಬೆಳೆದಿದೆ.

ಇಲ್ಲೊಂದು ಮಾತು: ತಪ್ಪಿತಸ್ಥರಾದ ನೀವು ನಿಮ್ಮಲ್ಲಿ ಬದಲಾವಣೆ ತರುವುದು ಸರಿಯೆ. ಹಾಗೆಂದು ನೊಂದ ಸಂಗಾತಿಯಲ್ಲಿ ದೋಷಗಳಿದ್ದರೆ ಅವರು ತಿದ್ದಿಕೊಳ್ಳದೆ ದಾಂಪತ್ಯವು ಸುಧಾರಣೆ ಹೊಂದಲಾರದು. ಕೆಲವೊಮ್ಮೆ ನೊಂದ ಸಂಗಾತಿಯು ತನ್ನಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಂದ ಉಂಟಾಗುತ್ತಿರುವ ಅಸಂತೋಷವನ್ನು ನಿಮ್ಮಿಂದ ಉಂಟಾಯಿತೆಂದು ನಿಮ್ಮನ್ನು ಹೊಣೆಮಾಡುವುದು ಸಾಧ್ಯವಿದೆ. ಒಬ್ಬಳು ಗಂಡನ ಪರಸಂಬಂಧದ ಕಾರಣದಿಂದ ಅಣ್ಣನ ಸಂಬಂಧವನ್ನು ಕಳೆದುಕೊಳ್ಳಬೇಕಾಯಿತು ಎಂದು ಗಂಡನನ್ನು ದೂರಿದಳು. ವಾಸ್ತವವಾಗಿ ಆಕೆಗೂ ಅಣ್ಣನಿಗೂ ಭಿನ್ನಾಭಿಪ್ರಾಯ ಮೊದಲಿನಿಂದಲೂ ಇತ್ತು. ಗಂಡನ ಪರಸಂಬಂಧವನ್ನು ಅಣ್ಣನಲ್ಲಿ ಹೇಳಿಕೊಂಡಾಗ ಆತ, “ನಾನೆಷ್ಟೇ ಬೇಡವೆಂದರೂ ನೀನೇ ಅವನನ್ನು ಮದುವೆಯಾದೆ. ನೀನೇ ಅನುಭವಿಸು!” ಎಂದಿದ್ದ.

ನೊಂದ ಸಂಗಾತಿಯ ದೋಷಗಳನ್ನು ಪತ್ತೆಹಚ್ಚುವುದು ಹೇಗೆ? ಅದಕ್ಕಾಗಿ ಕೆಲವು ಅಂಶಗಳು ಸಹಾಯ ಮಾಡಬಹುದು ಎಂದು ಜಾನಿಸ್ ಸ್ಪ್ರಿಂಗ್ ಹೇಳುತ್ತಾಳೆ:

  • ನಿಮ್ಮ ಸಂಗಾತಿಯು ಯಾವ ಗುಣಗಳನ್ನು ಮೆಚ್ಚಿ ನಿಮ್ಮನ್ನು ಆರಿಸಿಕೊಂಡಿದ್ದರೋ ಅವುಗಳನ್ನೇ ಈಗ ತಿರಸ್ಕರಿಸುತ್ತ ಬೈದುಕೊಳ್ಳುವುದು. ಉದಾ. ನಿಮ್ಮ ಚೂಟಿತನ ಹಾಗೂ ಯಾವುದಕ್ಕೂ ತಕ್ಷಣ ಸ್ಪಂದಿಸುವ ಗುಣವನ್ನು ಸಂಗಾತಿಯು ಮೆಚ್ಚಿದ್ದಾರೆ ಎಂದುಕೊಳ್ಳಿ. ಪರಸಂಗದ ನಂತರ ಇದನ್ನು ಮುಂದಾಲೋಚನೆ ಇಲ್ಲದ ಬೇಜವಾಬ್ದಾರಿ ಗುಣ ಎಂದು ಟೀಕಿಸಬಹುದು.
  • ನೊಂದ ಸಂಗಾತಿಯಲ್ಲಿ ಇಲ್ಲದಿರುವ ಕೆಲವು ಗುಣಗಳು ನಿಮ್ಮಲ್ಲಿದ್ದು, ಅದರ ಬಗೆಗೆ ಅವರಿಗೆ ಮತ್ಸರ ಇರುವುದು. ಉದಾ. ನೀವು ಇತರರನ್ನು ಮೆಚ್ಚಿಸುವಂಥ ಮಾತುಗಾರರಾಗಿದ್ದು, ನೊಂದ ಸಂಗಾತಿಯು ಹಾಗಿಲ್ಲ ಎಂದುಕೊಳ್ಳಿ. ನೀವು ದೂರವಾಣಿಯಲ್ಲಿ ನಗುತ್ತ ಮಾತಾಡುವಾಗ ನೊಂದ ಸಂಗಾತಿಯು “ಮತ್ತ್ಯಾರನ್ನೋ ಬಲೆಗೆ ಹಾಕಿಕೊಳ್ಳುತ್ತಿದ್ದೀಯಾ” ಎಂದು ಸಂದೇಹಿಸುವುದು.
  •  ತಪ್ಪಿತಸ್ಥರಾದ ನಿಮ್ಮನ್ನು ಹೀನಾಯವಾಗಿ ಕಾಣುತ್ತ, ನಿಮ್ಮ ಹುಟ್ಟಡಗಿಸುವಂತೆ ದಬ್ಬಾಳಿಕೆ ಮಾಡುತ್ತ ಗುಲಾಮನ/ಳಂತೆ ನಡೆಸಿಕೊಳ್ಳುವುದು. ಉದಾ. ಒಬ್ಬಳು ಪಕ್ಕದ ಮನೆಯವನನ್ನು ಇಷ್ಟಪಟ್ಟಿರುವ ಕಾರಣಕ್ಕೆ ಗಂಡನು ಮನೆಯ ಎಲ್ಲ ಕಿಟಿಕಿಗಳಿಗೆ ಮೊಳೆ ಹೊಡೆದು ಮುಚ್ಚಿಬಿಟ್ಟಿದ್ದಾನೆ. ಇನ್ನೊಬ್ಬಳ ಗಂಡನು ಪರಸಂಬಂಧದ ನಂತರ ಹೆಂಡತಿಗೆ ಪ್ರತಿ ಗಂಟೆಗೂ ಕರೆಮಾಡಿ ತನ್ನ ಚಲನವಲನದ ಮಾಹಿತಿಯನ್ನು ಕೊಡದಿದ್ದರೆ ಅವಳೇ ಕರೆಮಾಡಿ ಇವನ ಮರ್ಯಾದೆ ತೆಗೆಯುತ್ತಾಳೆ.
  • ನೊಂದ ಸಂಗಾತಿಯನ್ನು ಕಳೆದುಕೊಳ್ಳುವ ಭಯದಿಂದ ಅವರು ಪಾಲಿಸಲಿಕ್ಕೆ ಆಗದ ಕಟ್ಟಪ್ಪಣೆಗಳನ್ನು ಅನುಸರಿಸುವುದು. ಉದಾ. ಇವನು ಕೆಲಸದವಳಿಗೆ ಹತ್ತಿರವಾಗಿದ್ದನ್ನು ಕಂಡ ಹೆಂಡತಿಯು ಆಕೆಯನ್ನು ಬಿಡಿಸಿ ಇವನಿಗೇ ಮನೆಗೆಲಸ ಹಚ್ಚಿದ್ದಾಳೆ. ಇವನು ಒಪ್ಪಿಕೊಂಡು ಮಾಡುವಾಗ ಕೆಲಸಕ್ಕೆ ತಡವಾಗಿ ಹೋಗುತ್ತ ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದ್ದಾನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಂಗಾತಿಯ ವೈಯಕ್ತಿಕತೆಗೆ ಬೆಲೆ ಕೊಡದಿರುವವರು ಪರಸಂಬಂಧಕ್ಕೆ ಮತ್ತೆ ಕೈಹಾಕುವ ಸಂಭವ ಹೆಚ್ಚು.  

೧೫೬: ಪರಸಂಬಂಧ-೧೯

ಪರಸಂಬಂಧದಿಂದ ಕುಸಿದುಬಿದ್ದ ದಾಂಪತ್ಯವನ್ನು ಪುನಃ ಕಟ್ಟುವಾಗ ಮುಂಚೆ ಹೇಗೆ ಚೆನ್ನಾಗಿತ್ತು ಎಂದು ನೆನಪಿಸಿಕೊಂಡರೆ ಪ್ರೇರಣೆ ಉಂಟಾಗಬಹುದು ಎಂದು ತಿಳಿದುಕೊಂಡೆವು.

ಪರಸಂಬಂಧ ಬಿಟ್ಟು ಮನೆಗೆ ಮರಳಿದ ಸಂಗಾತಿಯು “ಇನ್ನೊಂದು ಸಲ ಇಂಥ ಕೆಟ್ಟ ಕೆಲಸ ಮಾಡುವುದಿಲ್ಲ. ನನ್ನನ್ನು ದಯವಿಟ್ಟು ನಂಬು!” ಎಂದು ಕೇಳಿಕೊಳ್ಳುತ್ತಿರುವಾಗ ಅವರನ್ನು ಪುನಃ ನಂಬುವುದು ಹೇಗೆ ಎಂಬ ಸಮಸ್ಯೆಯು ಪ್ರತಿ ನೊಂದ ಸಂಗಾತಿಯನ್ನೂ ಹಿಂಸಿಸುತ್ತದೆ. ವಿಶ್ವಾಸಘಾತದಿಂದ ಎಷ್ಟೊಂದು ಭಯಭೀತಿ ಆಗಿರುತ್ತದೆ ಎಂದರೆ, ಇನ್ನೊಂದು ಸಲ ನಂಬುವುದಕ್ಕೂ ಎಂಟೆದೆ ಬೇಕಾಗುತ್ತದೆ.. ಹಾಗಾಗಿ, ಮತ್ತೆ ಮೋಸ ಹೋಗುವುದಿಲ್ಲ ಎನ್ನಲು ಆಧಾರ ಹುಡುಕುವುದರಲ್ಲಿ ಮನಸ್ಸು ತೊಡಗುತ್ತದೆ.

ಮನೋವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ, ಪರಸಂಬಂಧವನ್ನು ಹೊಕ್ಕು ಹೊರಬಂದ ಸಂಗಾತಿಯು ಪುನಃ ಅದಕ್ಕೆ ಕೈಹಾಕಬಹುದು ಅಥವಾ ಇಲ್ಲ ಎನ್ನುವುದಕ್ಕೆ ಯಾವುದೇ ಗಟ್ಟಿ ಆಧಾರವಿಲ್ಲ! ಹಾಗಿದ್ದರೂ ಜಾನಿಸ್ ಸ್ಪ್ರಿಂಗ್ ಐದು ಅಂಶಗಳನ್ನು ಮುಂದಿಟ್ಟು ಯೋಚನೆ ಮಾಡಲು ಹಚ್ಚುತ್ತಾಳೆ: 

೧) ಸಂಗಾತಿಯ ಧೋರಣೆ ಹಾಗೂ ಮನೋಭಾವ: ಪರಸಂಬಂಧದಿಂದ ಹೊರಬಂದವರು ಸಂಗಾತಿಯೊಡನೆ  ವರ್ತಿಸುವ ರೀತಿಯಿಂದ ಮುಂದಾಗುವ ಪರಸಂಬಂಧದ ಸಾಧ್ಯತೆಯನ್ನು ಅಳೆಯಬಹುದು. ಪಶ್ಚಾತ್ತಾಪ ಪಡುವವರು ಅದನ್ನು ಮಾತು, ದೇಹಭಾಷೆ, ಹಾಗೂ ಕೃತ್ಯದಲ್ಲಿ ಆಗಾಗ ತೋರಿಸುತ್ತ ಇರುತ್ತಾರೆ. ಅದು ಸಂಬಂಧವನ್ನು ಸರಿಪಡಿಸುವ ಲಕ್ಷಣ. ಅದುಬಿಟ್ಟು, “ನೀನು ಕಂಡುಹಿಡಿಯುತ್ತೀಯಾ ಎಂದು ನನಗೆ ಅನ್ನಿಸಿರಲಿಲ್ಲ” ಎನ್ನುವವರೂ ಇದ್ದಾರೆ. ಅದರರ್ಥ ಏನೆಂದರೆ, ಸಿಕ್ಕಿಹಾಕಿಕೊಳ್ಳದಿದ್ದರೆ ಪರಸಂಬಂಧ ಮುಂದುವರಿಯುತ್ತಿತ್ತು! ಹಾಗೆಯೇ, “ನಿನಗಿಷ್ಟು ನೋವಾಗುತ್ತದೆ (ಅಥವಾ ಪರಿಣಾಮ ಭೀಕರವಾಗುತ್ತದೆ) ಎಂದು ಗೊತ್ತಿದ್ದರೆ ಹೀಗೆ ಮಾಡುತ್ತಲೇ ಇರಲಿಲ್ಲ” ಎನ್ನುವುದೂ ಸ್ವಲ್ಪ ಮಟ್ಟಿಗೆ ಅದೇ ಅರ್ಥಕೊಡುತ್ತದೆ. ಯಾಕೆಂದರೆ, ಪರಸಂಬಂಧವು ಮೌಲ್ಯಾಧಾರಿತ ಕೃತ್ಯವೇ ಹೊರತು ಪರಿಣಾಮವನ್ನು ಅನುಸರಿಸಿ ಮಾಡುವ ಕೆಲಸವಲ್ಲ. ಇನ್ನು, ತಪ್ಪಿತಸ್ಥರ ಕೆಲವು ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ:

  • ಸಂಗಾತಿಗೆ ಗೊತ್ತಿಲ್ಲದಂತೆ ಪರಸಂಬಂಧ ಮಾಡಿದರೆ ನಡೆಯುತ್ತದೆ.
  • ನನಗಿರುವ ಒಂದೇ ಬದುಕಿನಲ್ಲಿ ಎಲ್ಲವನ್ನೂ – ಹೇಗೇ ಆಗಲಿ – ಅನುಭವಿಸಿ ಮುಗಿಸಬೇಕು ಎನ್ನುವ ಅದಮ್ಯ ಬಯಕೆಯಿದೆ.
  • ಕುಟುಂಬ ಹಾಗೂ ಮಕ್ಕಳಿಂದ ದೂರವಾಗದೆ ಸ್ವಂತಸುಖ ಪಡೆಯಲು ಪರಸಂಬಂಧವು ಸೂಕ್ತ ಉಪಾಯ.
  • ನೀನು ಹೀಗಿದ್ದರೆ (ಜಗಳಗಂಟರು, ಕೈಲಾಗದವರು, ಕುಡುಕರು, ಹೊಣೆಗೇಡಿ, ಕಾಮನಿರಾಸಕ್ತರು) ನಾನಿನ್ನೇನು ಮಾಡಲಿ?
  • ಬಹುಸಂಗಾತಿಗಳನ್ನು ಬಯಸುವುದು ಗಂಡಸರ ರಕ್ತಗುಣ.
  • ನನಗಿದೆಲ್ಲ ತಪ್ಪೆಂದು ಗೊತ್ತು. ಆದರೆ ಆಕರ್ಷಕ ವ್ಯಕ್ತಿ ಸಿಕ್ಕಾಗ ತಡೆದುಕೊಳ್ಳಲು ಆಗುವುದಿಲ್ಲ.
  • ನಾನೇನೂ ಪರಿಪೂರ್ಣ ಎನ್ನುತ್ತಿಲ್ಲ; ನನಗೂ ಬಯಕೆಗಳಿವೆ.
  • ನಾನು ಯಾವೊತ್ತೂ ನಿನಗೇ ಬದ್ಧನಾ/ಳಾಗಿರುತ್ತೇನೆ ಎಂದು ಮಾತು ಕೊಟ್ಟಿಲ್ಲವಲ್ಲ?
  • ಪರಸಂಬಂಧದ ಬಗೆಗೆ ಗೊತ್ತಾದಾಗ ನೀನು ಪ್ರತಿಭಟಿಸದೆ ಇದ್ದುದರಿಂದ ನಿನ್ನ ಒಪ್ಪಿಗೆಯಿದೆ ಎಂದುಕೊಂಡೆ.

೨) ಇತರ ವಿಷಯಗಳಲ್ಲೂ ಮೋಸ ಮಾಡುವವರು: ಒಳಗೊಂದು ಹೊರಗೊಂದು ನಡೆದುಕೊಳ್ಳುವ ಸ್ವಭಾವದರು, ಸುಳ್ಳು ಮಾತಾಡುವವರು, ಮಾತು ಪಾಲಿಸದೆ ಇರುವವರು, ತನ್ನ ಲಾಭಕ್ಕಾಗಿ ಇತರರನ್ನು ಮೋಸ ಮಾಡುವವರು, ತನ್ನ ಸ್ವೇಚ್ಛೆಗಾಗಿ ಸಂಗಾತಿಗೆ ಕಟ್ಟುಪಾಡು ಹಾಕುವವರು ಮುಂತಾದವರು ಪರಸಂಬಂಧಕ್ಕೆ ಪುನಃ ಕೈಹಾಕುವ ಸಾಧ್ಯತೆಯಿದೆ. ಇಲ್ಲೊಬ್ಬ ತಾನು ದೊಡ್ಡ ಕೆಲಸದಲ್ಲಿ ಇದ್ದೇನೆಂದು ನಂಬಿಸಿ ಮದುವೆಯಾದ. ಆದರೆ ಅವನು ಕೆಲಸ ಅಲ್ಪಕಾಲಿಕವಾಗಿತ್ತು. ಹಾಗಾದರೂ ಅಡ್ಡಿಯಿಲ್ಲ ಎಂದು ಮದುವೆಯಾದ ನಂತರ ಗೊತ್ತಾಗಿದ್ದು ಏನೆಂದರೆ ಅವನಿಗೆ ಒಬ್ಬಳು ಪ್ರೇಯಸಿಯಿದ್ದಾಳೆ. ತಮ್ಮ ಊರು, ಹೆತ್ತವರು, ಹಾಗೂ ಕುಟುಂಬದವರ ಬಗೆಗೆ ಮುಖ್ಯ ಮಾಹಿತಿಯನ್ನು ಬಚ್ಚಿಡುವವರು ಪರಸಂಬಂಧವನ್ನು ಇನ್ನೊಂದು ಸಲ ಮಾಡುವುದಿಲ್ಲ ಎನ್ನಲಾಗದು. ಬುದ್ದಿವಂತಿಕೆಯಿಂದ ಮಾತಾಡಿ ನುಣುಚಿಕೊಳ್ಳುವವರೂ ಈ ಗುಂಪಿಗೇ ಸೇರುತ್ತಾರೆ. ಇಲ್ಲೊಬ್ಬಳು ತನ್ನ ಪ್ರೇಮಿಯ ಸಂಬಂಧವನ್ನು ಕಡಿದುಕೊಂಡ ಸ್ವಲ್ಪ ಕಾಲದ ನಂತರ ಅವನಿಗೆ ಪುನಃ ಸಂದೇಶಗಳನ್ನು ಕಳಿಸಿದ್ದು ಬಯಲಿಗೆ ಬಂತು. ಅವುಗಳಲ್ಲಿ ಸಂದೇಹ ಪಡುವಂಥದ್ದು ಏನೂ ಇಲ್ಲವಾದರೂ ಗಂಡನು ಪ್ರಶ್ನಿಸಿದಾಗ ಬಂದ ಉತ್ತರ ಏನು? “ಅವನನ್ನು ಭೇಟಿಮಾಡುವುದಿಲ್ಲ ಎಂದಿದ್ದೆನೇ ಹೊರತು ಅವನೊಡನೆ ಮಾಮೂಲೀ ಮೆಸೇಜ್ ಮಾಡುವುದಿಲ್ಲ ಎಂದೇನೂ ಪ್ರಾಮೀಸ್ ಮಾಡಿರಲಿಲ್ಲ.” ಹೀಗೆ ಚಾಪೆಯ ಕೆಳಗೆ ತೂರುವ ಮಾತು ಓಲಾಡುವ ನಿಷ್ಠೆಯನ್ನು ತೋರಿಸುತ್ತದೆ. ಇದರರ್ಥ ಒಂದೇ ಪರಸಂಬಂಧಕ್ಕೆ ನಿಲ್ಲಿಸುವವರು ಹತ್ತು ಮಾಡುವವರಿಗಿಂತ ಒಳ್ಳೆಯವರು ಎಂದೇನೂ ಅಲ್ಲ. ಆದರೆ ಸುಳ್ಳು, ಮೋಸ, ಕಪಟ, ವಂಚನೆ, ಧೂರ್ತತನ ಮುಂತಾದ ಸ್ವಭಾವ ಹೊಂದಿರುವವರು ಪರಸಂಬಂಧಕ್ಕೆ ಹಿಂತಿರುಗುವ ಸಂಭವ ಅತಿಹೆಚ್ಚು ಎಂದು ಹೇಳಬಹುದು.

೩) ಬಾಯಿಬಿಟ್ಟು ಮಾತಾಡದವರು: ಪರಸಂಬಂಧದಿಂದ ಮರಳಿದ ನಂತರ ದಾಂಪತ್ಯವನ್ನು ಸರಿಪಡಿಸಿಕೊಳ್ಳಲು ಸಂಗಾತಿಯ ಜೊತೆಗೇ ಹೆಚ್ಚುಹೆಚ್ಚಾಗಿ ಬೆರೆಯಬೇಕಷ್ಟೆ? ಮುಂಚೆ ಸಂಗಾತಿಯ ಜೊತೆಗೆ ಧಾರಾಳವಾಗಿ ಬೆರೆಯುತ್ತಿದ್ದವರು, ಪ್ರಕರಣದ ನಂತರ ಮಗುಮ್ಮಾಗಿ ಅಷ್ಟಕ್ಕಷ್ಟೇ ಆಡುವುದು, ಹತ್ತಿರವಾಗಲು ಹೋದರೆ ತಿರಸ್ಕರಿಸುವುದು, ತೆರೆದ ಮಾತುಕತೆಗೆ ಆಹ್ವಾನಿಸಿದರೆ ಮಾತಾಡಲು ಏನೂ ಇಲ್ಲವೆಂದು ತಪ್ಪಿಸಿಕೊಳ್ಳುವುದು, ನೋವು ತಿಂದ ಸಂಗಾತಿಯೇ ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಪೇಕ್ಷಿಸುವುದು – ಇವು ಅನುಕೂಲಕರ ನಡತೆಗಳಲ್ಲ.  ಒಬ್ಬನು ತನ್ನ ಪ್ರೇಮಿಯ ಜೊತೆಗೆ ಫೋನ್ ಮೇಲೆ “ಎಲ್ಲವನ್ನೂ” ಚಿತ್ರಸಹಿತ ಹಂಚಿಕೊಂಡಿದ್ದ. ಅದನ್ನು ಕಂಡುಹಿಡಿದ ಹೆಂಡತಿಯ ಉದ್ಧಟತನವನ್ನೇ ಬೈಯುತ್ತ ಅವಳಿಂದ ದೂರವಾದ. (ಎಚ್ಚರಿಕೆ: ಒಳಗೊಳಗೇ ಪಶ್ಚಾತ್ತಾಪ ಪಡುವವರೂ ಮಾತಿಲ್ಲದೆ ಮೌನವಾಗಿರುವ, ಹತ್ತಿರ ಬಂದರೆ ಸಿಡಿಮಿಡಿಗೊಳ್ಳುವ ಸಾಧ್ಯತೆಯಿದೆ!)

೪) ಸಂಗಾತಿಯ ನೋವನ್ನು ಅರ್ಥಮಾಡಿಕೊಳ್ಳದವರು: ತಪ್ಪಿತಸ್ಥರು ಸಂಗಾತಿಗೆ ಕೊಟ್ಟ ನೋವನ್ನು ಅರ್ಥಮಾಡಿಕೊಳ್ಳಲು ಸಂಗಾತಿಯ ಅನಿಸಿಕೆಗಳಿಗೇ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ತನ್ನ ಅಗತ್ಯಗಳಿಗೇ ಮಹತ್ವ ಕೊಡುವವರು, ಸಂಗಾತಿಯ ವೈಯಕ್ತಿಕತೆಯನ್ನು ಕಡೆಗಣಿಸುವವರು ಮತ್ತೆ ಪರಸಂಬಂಧಕ್ಕೆ ಕೈಹಾಕುವ ಸಂಭವ ಹೆಚ್ಚು.

೫) ಪರಸಂಬಂಧದಿಂದ ಏನನ್ನೂ ಕಲಿಯದವರು: ಪರಸಂಬಂಧದಿಂದ ಹೊರಬಂದವರು ಅದರ ಹಿಂದಿರುವ ತನ್ನ ಲೋಪದೋಷಗಳನ್ನು ಅರ್ಥಮಾಡಿಕೊಳ್ಳಲು, ತಿದ್ದಿಕೊಳ್ಳಲು ಮನಸ್ಸು ಮಾಡುವುದು ಅಗತ್ಯವಿದೆ. ತನ್ನಿಂದಾದ ನಷ್ಟವನ್ನು ಸರಿಪಡಿಸುವ ಹೊಣೆಯನ್ನು ಹೊರುವ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾಗಿ ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳುವವರು, ಪರಸಂಬಂಧವನ್ನು “ಕಳೆದುಕೊಂಡ” ವ್ಯಥೆಯನ್ನು ಭರ್ತಿಮಾಡಲು  ಸಂಗಾತಿಯ ಮೇಲೆಯೇ ಒತ್ತಡ ಹೇರುವವರು ಪರಸಂಬಂಧಕ್ಕೆ ಮತ್ತೆ ಕೈಹಾಕಬಹುದು. ಉದಾಹರಣೆಗೆ, ಕಾಮದಾಸೆ ವಿಪರೀತ ಇರುವ ಒಬ್ಬನು ಹೆಂಡತಿಯನ್ನು ಮುಟ್ಟಾದಾಗಲೂ ಬಿಡುತ್ತಿರಲಿಲ್ಲ. ಪರವೂರಲ್ಲಿ ಒಂದುರಾತ್ರಿ ಕಳೆಯಬೇಕಾದರೂ ಬೆಲೆವೆಣ್ಣುಗಳ ಸಹವಾಸ ಮಾಡುತ್ತಿದ್ದ. ಹೆಂಡತಿಯು ಬೇಸತ್ತು ಅವನನ್ನು ಬಿಡಲು ಹೊರಟಾಗ, “ನಾನು ಗಂಡಸು, ಹಾಗಾಗಿ ಕಾಮವನ್ನು ತಡೆಯಲು ಆಗುವುದಿಲ್ಲ” ಎಂದು ಹಂಚಿಕೊಂಡ. ಹೆಂಡತಿಯು, ತನ್ನಪ್ಪ ಹಾಗೂ ಅಣ್ಣಂದಿರು ಹೀಗೆ ಮಾಡುವುದಿಲ್ಲ ಎಂದಾಗ ನಂಬಲೇ ಇಲ್ಲ. ಮನೆಯವರ ಕಣ್ಣುತಪ್ಪಿಸಿ ಹೊರಗೆ ಹೆಂಗಸರನ್ನು ಅನುಭವಿಸುತ್ತಾರೆ ಎಂದು ವಾದಿಸಿದ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.