Please wait...

ಸುಖೀ ದಾಂಪತ್ಯ ೨೫೩

ನನ್ನಂತೆ ನನ್ನ ಮಗು ಕಷ್ಟಪಡಬಾರದು ಎಂದುಕೊಂಡಿದ್ದರೆ ಒಳ್ಳೆಯ ತಾಯ್ತಂದೆಯಾಗುವುದು ನಿಮಗಿನ್ನೂ ಗೊತ್ತಿಲ್ಲ ಎಂದರ್ಥ!

253: ಮಗು ಬೇಕೆ? ಏಕೆ? – 6

ಮಗುವನ್ನು ಬಯಸದೆ ಬೇಕೆನ್ನುವುದರ ಹಿಂದಿನ ನಾನಾ ಕಾರಣಗಳ ಬಗೆಗೆ, ಹಾಗೂ ಒತ್ತಾಯದ ತಾಯ್ತಂದೆತನದಿಂದ ಮಗುವಿನ ಮೇಲೆ ಆಗುವ ದುಷ್ಪರಿಣಾಮಗಳ ಬಗೆಗೆ ಚರ್ಚಿಸುತ್ತಿದ್ದೇವೆ. ಹೆತ್ತವರು ಜವಾಬ್ದಾರಿ ಹೊರದಿದ್ದಾಗ ಮಕ್ಕಳು ಹೇಗೆ ಬೆಳೆಯಬಹುದು ಎಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇವೆ.

ಹೋದಸಲ ಅನಾಥಾಲಯದ ಬಗೆಗೆ ಬರೆಯುತ್ತಿರುವಾಗ ಅದಕ್ಕೆ ಸರಿಯಾಗಿ ತಿರುವು ಮುರುವಾದ ದೃಷ್ಟಾಂತ ನೆನಪಾಯಿತು: ಈ ದಂಪತಿ ನನ್ನೆದುರು ಜಗಳ ಆಡುತ್ತಿರುವಾಗ ಹೇಳಿಕೊಂಡರು; ಅವರ ಆರು ವರ್ಷದ ಮಗ ಓದುವುದರಲ್ಲಿ ದಡ್ಡನಷ್ಟೇ ಅಲ್ಲ, ವಿಪರೀತ ತುಂಟನೂ ಆಗಿದ್ದಾನೆ. ಇತರ ಹುಡುಗರನ್ನು ಹೊಡೆಯುತ್ತಾನೆ. ಶಾಲೆಯ ಆಪ್ತಸಲಹೆಗಾರ್ತಿಯು ಹುಡುಗನ ತಾಯ್ತಂದೆಯರ ಮನಸ್ತಾಪವನ್ನು ಗ್ರಹಿಸಿದ್ದಾಳೆ. “ನಿಮ್ಮ ಜಗಳ ನಿಲ್ಲಿಸಿ, ಮಗುವನ್ನು ಪ್ರೀತಿಸಲು ಕಲಿಯಿರಿ” ಎಂದು ನೇರವಾಗಿ ಹೇಳಲಿಕ್ಕಾಗದೆ ಮಗುವಿನ ಪರಿಸರ ಬದಲಾಗಬೇಕು ಎಂದು ಕ್ಲುಪ್ತವಾಗಿ ಸೂಚಿಸಿದ್ದಾಳೆ. ಅದನ್ನು ಅಪ್ಪ ತನಗೆ ಅನುಕೂಲವಾಗುವಂತೆ ಅರ್ಥೈಸಿಕೊಂಡು ಮಗನನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದ್ದಾನೆ. ಯಾಕೆ? ಅಲ್ಲಿ ಶಿಸ್ತನ್ನು ಚೆನ್ನಾಗಿ ಹೇಳಿಕೊಡುತ್ತಾರಂತೆ (ಹೀಗೆನ್ನುವಾಗ ಅವನ ಮುಖದಲ್ಲಿ ಶಿಕ್ಷಿಸುವ ಕಠೋರತೆಯಿತ್ತು). ಮಗ ವಸತಿ-ಶಾಲೆಯಲ್ಲಿ ಹೊಂದಿಕೊಳ್ಳಲಾಗದೆ ಏಟು ತಿಂದಿದ್ದಾನೆ. ತಾಯಿಯ ನೆನಪಾಗಿ ಯಾರಿಗೂ ಹೇಳದೆ ಬರಿಗೈಯಲ್ಲಿ ನೂರು ಕಿಲೋಮೀಟರ್ ದೂರ ಪಯಣಿಸಿ ಮನೆ ಸೇರಿದ್ದಾನೆ.

ಬಾಲ್ಯದಲ್ಲಿ ಶಿಸ್ತಿನ ಅಥವಾ ಉತ್ಕೃಷ್ಟ ಶಿಕ್ಷಣದ ಹೆಸರಿನಲ್ಲಿ ಕುಟುಂಬದಿಂದ ಹೊರಗಿರಿಸುವ ಯಾವುದೇ ಪ್ರಯತ್ನವು ಮೊದಲೇ ವಿರಹಕ್ಕೆ ಒಳಗಾದ (“ನನ್ನನ್ನು ಪ್ರೀತಿಸಬೇಕಾದವರು ದೂರವಾಗಿದ್ದಾರೆ”) ಮಕ್ಕಳನ್ನು ಅನಾಥ ಪ್ರಜ್ಞೆಗೆ (“ನನ್ನನ್ನು ಯಾರೂ ಪ್ರೀತಿಸಲಾರರು, ಯಾಕೆಂದರೆ ನಾನು ಪ್ರೀತಿಗೆ ಅನರ್ಹ”) ತಳ್ಳುತ್ತದೆ. ಇದು ಅವರ ವ್ಯಕ್ತಿತ್ವಕ್ಕೆ ಚೂರಿ ಹಾಕಿದಂತೆ. ಹಾಗಾಗಿ ಸುಭದ್ರತೆ, ಪ್ರೀತಿ-ವಾತ್ಸಲ್ಯಗಳನ್ನು ಸಾಕಷ್ಟು ಕೊಡಲು ಸೋತವರು ಬೋರ್ಡಿಂಗ್ ಶಾಲೆಗೆ ಸೇರಿಸುವುದು ಅನಾಥಾಲಯಕ್ಕೆ ಸೇರಿಸುವುದಕ್ಕಿಂತ ಭಿನ್ನವಾಗಿಲ್ಲ! ಇನ್ನು, ಮಕ್ಕಳಿಂದ ಶಿಸ್ತು ನಿರೀಕ್ಷಿಸುವ ಗಂಡಹೆಂಡಿರೇನು ಶಿಸ್ತಿನಿಂದ ಜಗಳ ಆಡುತ್ತಾರೆಯೆ? ಅನೇಕರು ತಪ್ಪು ತಿಳಿದಿರುವಂತೆ ಶಿಸ್ತು ಎಂದರೆ ಕಂಪ್ಯೂಟರ್ ಕಲಿಕೆಯಂತೆ ಶಾಲೆಯಲ್ಲಿ ಕಲಿಯುವ ವಿಷಯವಸ್ತುವಲ್ಲ. ಅದೊಂದು ಮೌಲ್ಯ. ಮೌಲ್ಯಗಳೆಲ್ಲ ಕುಟುಂಬದ ಸಂಸ್ಕಾರದೊಡನೆ ಬರುತ್ತವೆ. ಇದನ್ನು ಅರಿಯದವರು ಶಿಸ್ತು ತರಲು ಶಿಕ್ಷೆಯ ಪ್ರಯೋಗಕ್ಕೂ ಹಿಂಜರಿಯುವುದಿಲ್ಲ. ಪರಿಣಾಮ? ಇಂಥದ್ದೊಂದು ಪ್ರಕರಣದಲ್ಲಿ ಮಗ ಶಿಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದಾನೆ. ಇಡೀದಿನ ಸಿಗದವನು ಮರುದಿನ ಬೆಳಿಗ್ಗೆ ಮರಳಿದ್ದಾನೆ. ರಾತ್ರಿಯೆಲ್ಲ ಎಲ್ಲಿದ್ದ? ಪೊದೆಯೊಳಗೆ ಅಡಗಿಕೊಂಡಿದ್ದನಂತೆ. ಪ್ರಚಲಿತ ಕಲಿಕಾ ಪದ್ಧತಿಗೆ ಒಳಪಡಿಸುವ ಹುನ್ನಾರದಲ್ಲಿ ಮಕ್ಕಳ ಕೋಮಲ ಮನಸ್ಸನ್ನು ತುಳಿದುಬಿಡಲಾಗುತ್ತದೆ, ಆಗವರು ಕಲ್ಲುಮನದವರಾಗಿ, ಅಸಂಬದ್ಧವಾಗಿ ರೂಪುಗೊಳ್ಳುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಉಪಾಯವೇನು? ಭಾವನಾತ್ಮಕವಾಗಿ ದೂರವಾಗುವ ಪ್ರಸಂಗದಲ್ಲಿ ಹಿರಿಯರಲ್ಲಿ ಒಬ್ಬರಾದರೂ ಮಗುವಿನ ಬೆಂಬಲಕ್ಕೆ ಗಟ್ಟಿಯಾಗಿ ನಿಂತುಕೊಳ್ಳಬೇಕು. ಆದರೆ ಒತ್ತಾಯದಿಂದ ತಾಯಿಯಾದವರಲ್ಲಿ ಸಾಕಷ್ಟು ಮಹಿಳೆಯರು ಶಿಕ್ಷಿಸುವ ಗಂಡನ ವಿರುದ್ಧವಾಗಿ, ಹಾಗೂ ಮಗುವಿನ ಪರವಾಗಿ ತಮ್ಮದೇ ದಿಟ್ಟ ನಿಲುವನ್ನು ತಳೆಯದಷ್ಟು ಹೈರಾಣ ಆಗಿರುತ್ತಾರೆ.

ಬಯಸದೆ ಹುಟ್ಟಿಸಿದ ಮಗುವಿಗೆ ಯಾವ ಭವಿಷ್ಯವಿದೆ ಎಂದು ಸಾಕಷ್ಟು ತಿಳಿದಾಯಿತು. ಆದರೂ ಮಗುವೊಂದನ್ನು ಹುಟ್ಟಿಸಿದ್ದೀರಿ ಎಂದುಕೊಳ್ಳಿ. ಅದನ್ನೇನು ಮಾಡುವುದು?

ಮಗುವನ್ನು ಹೇಗೆ ಬೆಳೆಸಬೇಕು?

ಮಕ್ಕಳನ್ನು ಬೆಳೆಸುವುದರ ಬಗೆಗೆ ಒಂದು ರಾಶಿ ಮಾಹಿತಿಯಿದೆ, ಹಾಗೂ ತಜ್ಞರೂ ಇದ್ದಾರೆ. ಹಾಗಾಗಿ ಅದರ ಬಗೆಗೆ ಹೇಳುವುದಿಲ್ಲ. ಆದರೆ ತಾಯ್ತಂದೆಯರು ಮಕ್ಕಳೊಡನೆ ಇಟ್ಟುಕೊಳ್ಳುವ ಸಂಬಂಧ ಹೇಗಿರಬೇಕು ಎನ್ನುವುದರ ಬಗೆಗೆ ಕವಿ ಖಲೀಲ್ ಗಿಬ್ರಾನ್‌ನ (Kahlil Gibran) ಮಾತುಗಳನ್ನು ಉಲ್ಲೇಖಿಸಲೇಬೇಕು: “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಬದುಕು ಬಯಸುವ ಪ್ರತೀಕಗಳು. ಅವರು ನಿಮ್ಮ ಮೂಲಕ ಹುಟ್ಟುತ್ತಾರಷ್ಟೇ ಹೊರತು ನಿಮ್ಮಿಂದ ಹುಟ್ಟುವುದಿಲ್ಲ. ನಿಮ್ಮ ಜೊತೆಗೆ ಇರುತ್ತಾರೆಯೇ ಹೊರತು ನಿಮಗೆ ಸಂಬಂಧಪಟ್ಟವರಲ್ಲ. ಅವರಿಗೆ ನಿಮ್ಮ ಪ್ರೀತಿಯನ್ನು ಕೊಡಬಹುದೇ ವಿನಾ ನಿಮ್ಮ ವಿಚಾರಗಳನ್ನಲ್ಲ. ಯಾಕೆಂದರೆ ಅವರಿಗೆ ತಮ್ಮದೇ ವಿಚಾರಗಳಿವೆ. ಅವರ ಶರೀರಕ್ಕೆ ನೀವು ಆಶ್ರಯ ಕೊಡಬಹುದೇ ವಿನಾ ಅವರ ಚೈತನ್ಯಕ್ಕಲ್ಲ. ಯಾಕೆಂದರೆ ಅವರ ಚೈತನ್ಯವು ನಾಳೆಯ ವಿಶ್ವದಲ್ಲಿ ವಾಸಿಸಲಿದೆ. ನೀವದನ್ನು ಕನಸಿನಲ್ಲೂ ಕಾಣಲು ಸಾಧ್ಯವಿಲ್ಲ. ನೀವು ಅವರಂತಾಗಲು ಶ್ರಮಿಸಬಹುದೇ ವಿನಾ ಅವರನ್ನು ನಿಮ್ಮಂತೆ ಮಾಡುವ ಯತ್ನ ಬೇಡ. ಯಾಕೆಂದರೆ ಬದುಕು ಮುಂದೆ ಹೋಗುತ್ತದೆ, ನಿನ್ನೆಗಳ ಜೊತೆಗಲ್ಲ. ನೀವು ಬಿಲ್ಲು, ಮಕ್ಕಳು ನಿಮ್ಮಿಂದ ಚಿಮ್ಮುವ ಬಾಣಗಳು. ಬಾಣ ಅತಿದೂರ ಹೋಗಲು ಬಿಲ್ಲನ್ನು ಶಕ್ತಿಮೀರಿ ಬಾಗಿಸಿ ಕೈಬಿಡುವುದಷ್ಟೇ ನಿಮ್ಮ ಕೆಲಸ, ಅವುಗಳನ್ನು ಗುರಿಮುಟ್ಟಿಸುವುದಲ್ಲ.” ಎಂಥಾ ಅದ್ಭುತ ಮಾತುಗಳಿವು!

ಬೆಳೆಯುವ ಮಕ್ಕಳಿಗೆ ಸಾಧ್ಯವಾದಷ್ಟೂ ಅನುಕೂಲತೆಗಳನ್ನು ಒದಗಿಸಬೇಕು ಎಂದು ಕರುಣಾಮಯಿ ತಾಯ್ತಂದೆಯರು ಬಯಸುತ್ತಾರೆ. ಯಾಕೆ? ನನ್ನಂತೆ ನನ್ನ ಮಗು ಕಷ್ಟ ಅನುಭವಿಸಬಾರದು! ಈ ಮನೋಭಾವವು ಎಷ್ಟು ಸಮಂಜಸ ಎಂದು ಅರ್ಥಮಾಡಿಕೊಳ್ಳಲು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯನ್ನು ನೋಡಿ: ಆರೋಗ್ಯಕರ ಮನೋಭಾವನೆಯನ್ನು ಬೆಳೆಸಿಕೊಂಡು ತೃಪ್ತಿಕರವಾಗಿ ಬದುಕುತ್ತಿರುವ ವ್ಯಕ್ತಿಗಳ ಬಗೆಗೆ (ಇದರಲ್ಲೊಬ್ಬರು ಮುಂದೆ ಅಮೆರಿಕೆಯ ಅಧ್ಯಕ್ಷರಾಗಿದ್ದಾರೆ) ಕಳೆದ 75 ವರ್ಷಗಳ ಧೀರ್ಘ ಕಾಲದಿಂದ ನಡೆಸಿಕೊಂಡು ಬಂದಿರುವ ಈ ಅಧ್ಯಯನದಲ್ಲಿ  ವಿಸ್ಮಯಕರ  ಅಂಶವೊಂದು ಕಂಡುಬಂದಿದೆ. ಮಕ್ಕಳನ್ನು ಯಶಸ್ವೀ ವ್ಯಕ್ತಿಗಳಾಗಿ ರೂಪಿಸಲು ತಾಯ್ತಂದೆಯರಿಂದ ಎರಡೇ ಎರಡು ಅಂಶ ಸಾಕು. ಒಂದು, ನಿಸ್ವಾರ್ಥ ಪ್ರೀತಿ; ಇನ್ನೊಂದು – ನೀವು ನಂಬಲಿಕ್ಕಿಲ್ಲ – ಮನೆಗೆಲಸಗಳು! ನಿಮ್ಮ ಮಕ್ಕಳನ್ನು ಎಷ್ಟು ಬೇಗ, ಎಷ್ಟೆಲ್ಲ ವಿಧದ ಮನೆಗೆಲಸದಲ್ಲಿ, ಹಾಗೂ ಎಷ್ಟು ಹೆಚ್ಚಾಗಿ ತೊಡಗಿಸುತ್ತೀರೋ, ಅಷ್ಟು ಖಚಿತವಾಗಿ ಮಕ್ಕಳು ಜೀವನ ಕೌಶಲ್ಯ, ಬದುಕುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಪಡೆದುಕೊಳ್ಳುತ್ತಾರೆ. ಮಗುವನ್ನು ಪ್ರೀತಿಸಿ, ಆದರೆ ನಿಮ್ಮೊಡನೆ ಒಂದಾಗಿ ದುಡಿಯುವುದನ್ನು ಕಲಿಸಿ!

ಕೊನೆಯದಾಗಿ, ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದಕ್ಕೊಂದು ಉಪಮೇಯ: ನಿಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುತ್ತೀರಿ ಎಂದುಕೊಳ್ಳಿ. ಅದನ್ನು ನೀರು ಗೊಬ್ಬರ ಹಾಕಿ ಪೋಷಿಸುತ್ತೀರಿ. ಅಪಾಯಗಳಿಂದ ರಕ್ಷಿಸುತ್ತೀರಿ. ಸಸಿಯು ಬೆಳೆಯುತ್ತ ಗಿಡವಾಗಿ ನಿಮ್ಮ ಎತ್ತರ ಮೀರಿ ಆಗಸದತ್ತ ಚಾಚುತ್ತದೆ. ಬರಬರುತ್ತ ಅದು ಹರಡಿಕೊಳ್ಳುವ ದಿಕ್ಕೆಲ್ಲೋ, ಬೀಳುವ ನೆರಳೆಲ್ಲೋ, ಕೊಡುವ ಫಲವೆಲ್ಲೋ ಒಂದೂ ನಿಮ್ಮ ಕೈಯಲ್ಲಿರುವುದಿಲ್ಲ (ನಿಸಾರ್ ಅಹಮ್ಮದ್ ಅವರ ಕವನ ನೆನಪಾಗುತ್ತಿದೆ). ಈ ಮರದ ಪ್ರಯೋಜನ ನಿಮ್ಮನ್ನು ಬಿಟ್ಟು ಯಾರ‍್ಯಾರಿಗೋ ಆಗುವುದನ್ನು ತಡೆಯಲಾರಿರಿ. ಇದಕ್ಕೆ ಹುಟ್ಟುಹಾಕಿದ್ದು ಮಾತ್ರ ನಾನು ಎಂಬ ನಿಸ್ವಾರ್ಥ ನೆಮ್ಮದಿ ನಿಮ್ಮದಾಗುವಂತಿದ್ದರೆ ಮಾತ್ರ ಮಗುವಿಗೆ ಯತ್ನಿಸಿ. ಇದನ್ನು ಬಿಟ್ಟು ಬೇರೇನೇ ಉದ್ದೇಶವು ಮಗುವಿನ ಬೆಳವಣಿಗೆಗೆ ಹಾನಿಕಾರಕ. ಫಲಪ್ರದವಾಗಿ ಬೆಳೆಸುವ ಹಾಗಿದ್ದರೆ ಮಾತ್ರ ಮಗುವನ್ನು ಪಡೆಯಿರಿ. ಇಲ್ಲವಾದರೂ ಮಗು ಬೇಕೆ? ಏಕೆ?

 ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.