Please wait...


ಬಾಂಧವ್ಯ ಬೆಳೆಸುವುದಕ್ಕೆ ನಮ್ಮೊಳಗೆ ಹುಟ್ಟುವ ನೇತ್ಯಾತ್ಮಕ ಭಾವನೆಗಳ ಮೇಲೆ ಹಿಡಿತ ಸಾಧಿಸುವುದು ಅನಿವಾರ್ಯ.

229: ಅನ್ಯೋನ್ಯತೆಗೆ ಹುಡುಕಾಟ – 8  

ಸಂಗಾತಿಯ ಜೊತೆಗೆ ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಬಲು ಸೂಕ್ಷ್ಮ ಮನಸ್ಸನ್ನು ಮುಂದಿಟ್ಟುಕೊಂಡು ಅಂತರ್ಮಥನ ಹೇಗೆ ನಡೆಸಬೇಕು ಎಂಬುದನ್ನು ತಿಳಿದುಕೊಂಡೆವು. ಆಡುವವರು (initiator) ಇಷ್ಟೆಲ್ಲ ಹೆಣಗುತ್ತಿರುವಾಗ ಆಲಿಸುವವರು (inquirer) ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಈಸಲ ತಿಳಿಯೋಣ.

ನಿಮ್ಮ ಸಂಗಾತಿಯು ಆಡುವವರಾಗಿ ತಮ್ಮ ಅಂತರಂಗವನ್ನು ತೋಡಿಕೊಳ್ಳುತ್ತಿದ್ದಾರೆ, ಹಾಗೂ ನೀವು ಆಲಿಸುತ್ತಿದ್ದೀರಿ ಎಂದುಕೊಳ್ಳಿ. ನಿಮಗೆ ಏನೇನು ಅನ್ನಿಸಬಹುದು? ನಿಮ್ಮೆದುರು ಕುಳಿತವರು ವಿಚಿತ್ರವಾಗಿ ಕಾಣುತ್ತಾರೆ. ನನಗೆ ಈಗಾಗಲೇ ಗೊತ್ತಿಲ್ಲದ್ದು ಏನು ಹೇಳಲು ಹೊರಟಿದ್ದಾರೆ ಎಂದು ವಿಸ್ಮಯಗೊಳ್ಳುತ್ತೀರಿ. ಅವರು ದಿಟ್ಟತನದಿಂದ ಮನದ ಸೂಕ್ಷ್ಮ ಪದರಗಳನ್ನು ತೆರೆದುಕೊಳ್ಳುತ್ತ ಹೋದಂತೆ ಇವರೊಳಗೆ ಇಂಥದ್ದೂ ಇದೆಯೇ ಎಂದು ಸಖೇದ ಆಶ್ಚರ್ಯ ಆಗಬಹುದು. ಛೆ, ಇಷ್ಟೊಂದು ಕೆಟ್ಟವರೇ ಎಂದೂ ಅನ್ನಿಸಬಹುದು. ಇಷ್ಟುದಿನ ಬಚ್ಚಿಟ್ಟು ಮೋಸಮಾಡಿ, ಇನ್ನು ನನಗೇ ಗೊತ್ತಾಗಲಿದೆ ಎನ್ನುವಾಗ ನಿಜವನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಅನುಮಾನ ಬರಬಹುದು. ಕಸಿವಿಸಿ, ಸಿಟ್ಟು, ದುಃಖ, ಅಭದ್ರತೆ, ಒಂಟಿತನ… ಏನೇನೋ ಅನ್ನಿಸಹುದು.

ನೀವು ಹೀಗೆ ಅಂದುಕೊಳ್ಳುವುದು ಸಹಜವಾದರೂ ಇಲ್ಲೊಂದು ದೋಷವಿದೆ: ಸಂಗಾತಿಯನ್ನು ನಿಮ್ಮದೇ ಅಳತೆಗೋಲಿನಿಂದ ಅಳೆದು ನಿರ್ಣಯಿಸುತ್ತಿದ್ದೀರಿ! ದಯವಿಟ್ಟು ಅರ್ಥಮಾಡಿಕೊಳ್ಳಿ; ಸಂಗಾತಿಯು ನಿಮ್ಮ ಅವಳಿಯಲ್ಲ! ಅವರ ಮೂಲ ಕುಟುಂಬವು ನಿಮ್ಮದಕ್ಕಿಂತ ಭಿನ್ನವಾಗಿದ್ದು ನಿಮ್ಮಿಬ್ಬರ ಸಂಸ್ಕಾರಗಳು ಬೇರೆಯಾಗಿವೆ. ಅವರೇ ಬೇರೆ, ನೀವೇ ಬೇರೆ. ಹಾಗಾಗಿ ಅವರ ಮಾತು-ವಿಚಾರ-ವರ್ತನೆಯ ಧಾಟಿಯನ್ನು ನಿಮ್ಮದಕ್ಕೆ ಹೋಲಿಸಿಕೊಂಡು ಸರಿ-ತಪ್ಪುಗಳ ನ್ಯಾಯನಿರ್ಣಯ ಮಾಡುವುದು ಸೂಕ್ತವಲ್ಲ. ಅವರನ್ನು ನಿಮಗೆ ಅನ್ವಯಿಸಿಕೊಳ್ಳುವುದು ಬೇಡ (“ನಾನೆಷ್ಟೇ ಮಾಡಿದರೂ ಇವನ/ಳ ಯೋಗ್ಯತೆಯೇ ಇಷ್ಟು!”). ಬದಲಾಗಿ, ಸಂಗಾತಿಯು ಆಡುವುದರ ಹಿಂದಿನ ಇಂಗಿತವನ್ನು ಗಮನಿಸಿ: ಅವರು ನಿಮಗೆ ಹತ್ತಿರವಾಗುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ನಾಚಿಕೆ, ಅವಮಾನ, ಭಯ ಬಿಟ್ಟು ನಿಮ್ಮೆದುರು ಮನಬೆತ್ತಲೆ ಆಗಲು ಹೊರಟಿದ್ದಾರೆ. ಅವರ ಈ ಸದ್ಭಾವನೆಯನ್ನು ಗುರುತಿಸಿ. ಅವರ ಪ್ರಯತ್ನದ ಹಿಂದಿರುವ ಪ್ರಾಮಾಣಿಕತೆಯನ್ನು ಶುದ್ಧಮನದಿಂದ ಒಪ್ಪಿಕೊಳ್ಳಿ. ಆಗ ಮಾತ್ರ ಅವರು ಅನನ್ಯರಾಗಿ ಕಾಣಲು ಸಾಧ್ಯವಿದೆ.

ಆಲಿಸುವುದು ಪರಿಣಾಮಕಾರಿ ಆಗಬೇಕಾದರೆ ನಿಮ್ಮ ನಿಲುವು-ನೆರವು ರೀತಿ ಹೀಗಿರಲಿ:

  • ಸಹಾನುಭೂತಿಯಿಂದ ಆಲಿಸಿ: ಸಂಗಾತಿಯ ಜಾಗದಲ್ಲಿ ನೀವಿದ್ದೀರೆಂದು ಕಲ್ಪಿಸಿಕೊಳ್ಳಿ. ಒಂದುವೇಳೆ ನೀವೇ ಅವರ ಕುಟುಂಬದಲ್ಲಿ ಹುಟ್ಟಿ ಅವರು ಎದುರಿಸಿದ ಸನ್ನಿವೇಶಗಳನ್ನು ಎದುರಿಸಿದ್ದರೆ ನೀವೂ ಅವರಂತೆ ವರ್ತಿಸುತ್ತಿದ್ದಿರಿ! ಆದುದರಿಂದ ನಾವಿಬ್ಬರೂ ಒಂದೇ ಎಂದುಕೊಂಡು ಸಂತಾಪ, ಸಹಾನುಭೂತಿ, ಕರುಣೆಯಿಂದ ಕೇಳಿಸಿಕೊಳ್ಳಿ. ಸಾಧ್ಯವಾದಷ್ಟೂ ಸಹತಾಪದಿಂದ ಪ್ರತಿಫಲಿಸಿ (“ನಿನ್ನಷ್ಟೇ ನನಗೂ ಚುಚ್ಚುತ್ತಿದೆ”). ಸಂಗಾತಿಯು ಮೂಡಿಸಲು ಯತ್ನಿಸುತ್ತಿರುವ ಭಾವಗಳು ನಿಮ್ಮ ಮುಖದ ಮೇಲೆ ಮೂಡಲಿ.
  • ಶಾಂತಭಾವ ಇರಲಿ: ಸಂಗಾತಿಯ ಮಾತುಗಳು ನಿಮಗೆ ಆರೋಪದಂತೆ ಕಾಣಬಹುದು. ಆಗ ನಿಮ್ಮನ್ನು ಸಮರ್ಥಿಸಿಕೊಳ್ಳುವುದು, ರಕ್ಷಿಸಿಕೊಳ್ಳುವುದು, ಪ್ರತ್ಯಾರೋಪ ಮಾಡುವುದು ಬೇಡ. ವಾದ-ಪ್ರತಿವಾದಕ್ಕೆ ನಿಲ್ಲುವ ಸಂದರ್ಭ ಇದಲ್ಲ. ಅವರು ಹೇಳಿದ್ದನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ. ಅಂತಿಮವಾಗಿ ಸಿಗುವ ಪೂರ್ತಿ ಚಿತ್ರಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಟ್ಟುಕೊಂಡು ಶಾಂತವಾಗಿರಲು ಯತ್ನಿಸಿ.
  • ಕುತೂಹಲದಿಂದ ಪ್ರಶ್ನೆ ಕೇಳಿ: ಸಂಗಾತಿಯು ಹೇಳುತ್ತಿರುವಾಗ “ಇವರ ತಲೆಯಲ್ಲಿ ಏನು ನಡೆಯುತ್ತಿರಬಹುದು?” ಎಂದು ಕುತೂಹಲ, ಆಸಕ್ತಿ ಹುಟ್ಟಿಸಿಕೊಳ್ಳಿ. ಅವರ ಅನುಭವಗಳನ್ನೂ ಭಾವನೆಗಳನ್ನೂ ಅರ್ಥೈಸಿಕೊಳ್ಳುವಂತೆ ಪ್ರಶ್ನೆಗಳನ್ನು ರೂಪಿಸಿಕೊಳ್ಳಿ. ಸ್ಪಷ್ಟವಾಗದಿದ್ದರೆ ವಿವರಿಸಲು ಹೇಳಿ. ಅವರನ್ನು ಅರಿಯುವುದಕ್ಕೆ ಸೂಕ್ತವಾದ ದೃಷ್ಟಾಂತಗಳನ್ನು ನಿಮ್ಮ ಅನುಭವದಿಂದ ಆಯ್ದುಕೊಳ್ಳಿ. ಉದಾ. ನಿಮ್ಮಮೇಲೆ ನಡೆದ ದೌರ್ಜನ್ಯವನ್ನು ನೆನಪಿಸಿಕೊಂಡು, “ನನಗೂ ಹಾಗೆಯೇ ಆಗಿದೆ” ಎನ್ನುತ್ತ ಅವರೊಡನೆ ಜೋಡಿಸಿಕೊಳ್ಳಿ.
  • ಪುನರುಚ್ಚರಿಸಿ: ಸಂಗಾತಿಯು ಹೇಳಿದ್ದನ್ನು ಸಾಧ್ಯವಾದಷ್ಟೂ ನಿಖರವಾಗಿ ಮರುವರದಿ (feedback) ಒಪ್ಪಿಸಿ. ಸರಿಯಾಗಿ ಹಾಗೂ ಪೂರ್ತಿಯಾಗಿ ಅರ್ಥಮಾಡಿಕೊಂಡಿರುವುದರ ಬಗೆಗೆ ವಿಚಾರಿಸಿ. ಪೂರ್ತಿ ಅರ್ಥವಾಗಲು ಹಲವು ಪ್ರಯತ್ನಗಳು ಬೇಕಾಗಬಹುದು.
  • ಭಾವನೆಗಳ ಮೇಲೆ ಹತೋಟಿಯಿರಲಿ: ಸಂಗಾತಿಯ ಹೇಳಿಕೆಗಳಿಂದ ನೀವು ಪ್ರಕ್ಷುಬ್ಧರಾಗುವ ಸಂಭವವಿದೆ. ಅದನ್ನು ತೋರಿಸಿದರೆ ಸಂಗಾತಿಯ ಅಭಿವ್ಯಕ್ತಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಗಟ್ಟಿಮನಸ್ಸಿನಿಂದ ತಡೆದುಕೊಳ್ಳಿ. ನಿಮ್ಮ ಮನಃಸ್ಥಿತಿಯನ್ನು ನಿಭಾಯಿಸುವುದು ನಿಮ್ಮದೇ ಹೊಣೆ. “ನನಗೆ ಸರಿಯೆನಿಸುತ್ತಿಲ್ಲ. ಆದರೂ ಮುಂದುವರಿಸು” ಎಂದು ತಾಳ್ಮೆಯಿಂದ ತಿಳಿಸಿ. ಬಾಂಧವ್ಯ ಬೆಳೆಸುವುದಕ್ಕೆ ಕಷ್ಟ ಸಹಿಸುವುದು ಅನಿವಾರ್ಯ ಎಂಬುದು ನೆನಪಿರಲಿ.
  • ವೈಯಕ್ತಿಕತೆಗೆ ಮಹತ್ವ ಕೊಡಿ: ಸಂಗಾತಿಯ ಸಮಸ್ಯೆಗಳ ಹಿಂದೆ ಅವರದೇ ಆದ ವ್ಯಕ್ತಿತ್ವ, ಕೌಟುಂಬಿಕ ಇತಿಹಾಸ,  ಪೂರ್ವಾನುಭವ ಹಾಗೂ ಅವುಗಳ ಹಿನ್ನೆಲೆಯಲ್ಲಿ ಮಾಡಿಕೊಂಡ ನಿರ್ಧಾರಗಳ ರಾಶಿಯಿದೆ. ಅವರು ಹೇಳುತ್ತಿರುವುದು ನಿಮ್ಮ ಬಗೆಗಲ್ಲ, ತಮ್ಮ ಬಗೆಗೆ. ಹಾಗಾಗಿ ನಿಮಗೆ ಅನಿಸುವುದನ್ನು ಅವರದರ ಜೊತೆಗೆ ತಳಕು ಹಾಕುವುದು ಬೇಡ. ಅವರ ವೈಯಕ್ತಿಕತೆಗೆ, ಖಾಸಗಿತನಕ್ಕೆ ಮಹತ್ವ ಕೊಡಿ. ಕೇವಲ ಕೇಳಿಸಿಕೊಳ್ಳುತ್ತಿದ್ದು, ನಿನ್ನೊಡನೆ ನಾನಿದ್ದೇನೆ ಎಂದು ತಿಳಿಯಪಡಿಸಿದರೆ ಸಾಕು.
  • ಸತ್ಯಾನ್ವೇಷಣೆ ಬೇಡ: ಸಂಗಾತಿಯ ಮಾತಿನಲ್ಲಿ ತಪ್ಪಿದೆಯೆಂದು ಅನಿಸಿದರೆ ತಿದ್ದಲು ಹೋಗಬೇಡಿ. ಉದಾಹರಣೆಗೆ, ಅವರು ನಿಮ್ಮ ಬಂಧುಗಳಲ್ಲಿ ಸುರಕ್ಷಿತತೆಯನ್ನು ಕಾಣಲಿಕ್ಕಿಲ್ಲ. ಹಾಗೆಂದು ಅವರ ನಂಬಿಕೆಯನ್ನು ಪ್ರಶ್ನಿಸುವುದು ಉಚಿತವಲ್ಲ. ಯಾಕೆಂದರೆ, ಇದು ಸತ್ಯಾಸತ್ಯತೆಯ, ಅಥವಾ ಸರಿತಪ್ಪುಗಳ ಪ್ರಶ್ನೆಯಲ್ಲ; ಅವರ ಅನಿಸಿಕೆಯನ್ನು ಅನಿಸಿಕೆಯನ್ನಾಗಿ ಮಾತ್ರ ನಂಬುವ ಪ್ರಶ್ನೆ. ಯಾಕೆಂದರೆ ನಿಮ್ಮಿಬ್ಬರ ಸತ್ಯಗಳು ಭಿನ್ನವಾಗಿರುವ ಸಾಧ್ಯತೆಯಿದೆ. ಪ್ರತಿಯೊಬ್ಬರಿಗೂ ಅವರವರ ನೇರಕ್ಕೆ ಯೋಚಿಸುವ ಹಕ್ಕಿದೆ. ಅದನ್ನು ಅಲ್ಲಗಳೆಯುವುದು ಅಥವಾ ನಂಬದಿರುವುದು ನಿಮ್ಮ ಕೆಲಸವಲ್ಲ.
  • ಹೊಣೆ ಹೊರಬೇಡಿ: ಸಂಗಾತಿಯು ಹೇಳುವುದಕ್ಕೆ ಕಿವಿಗೊಡಬೇಕೇ ವಿನಾ ಅದರ ಹೊಣೆ ಹೊರುವುದು ಬೇಡ. ಸಂಗಾತಿಯ ಗ್ರಹಿಕೆಯನ್ನು, ಗ್ರಹಿಕೆಯ ಹಿಂದಿನ ಸಂಗಾತಿಯನ್ನು ಅರ್ಥಮಾಡಿಕೊಳ್ಳಬೇಕೇ ವಿನಾ ಪರಿಹಾರವನ್ನು ಸೂಚಿಸಲೇಕೂಡದು. ಅದಕ್ಕಾಗಿ ಕ್ರಮ ಕೈಗೊಳ್ಳುವುದೂ ಬೇಕಿಲ್ಲ. ಯಾಕೆ? ಇದು ಸಂಗಾತಿಯ ಅಭಿಪ್ರಾಯವಷ್ಟೆ, ನಿಮ್ಮದಲ್ಲ.
  • ನಿಮ್ಮ ಮನ ತೆರೆದಿರಲಿ: ಸಂಗಾತಿಯನ್ನು ಆಲಿಸುವುವಾಗ ಆಗಾಗ ನನ್ನ ಮನಸ್ಸನ್ನು ಸಾಕಷ್ಟು ತೆರೆದುಕೊಂಡಿದ್ದೇನೆಯೆ ಎಂದು ಪರೀಕ್ಷಿಸಿಕೊಳ್ಳಿ. ನಡುನಡುವೆ “ಇಷ್ಟು ಸಾಕು!” ಎಂದೆನಿಸಿದರೆ, ಅಥವಾ ನಡುವೆ ಬಾಯಿಹಾಕುವ ಮನಸ್ಸಾದರೆ ನೀವು ಸಾಕಷ್ಟು ತೆರೆದುಕೊಂಡಿಲ್ಲ ಎಂದರ್ಥ. ಇದರ ಕಾರಣವನ್ನು ನಿಮ್ಮಲ್ಲಿ ಹುಡುಕಿಕೊಳ್ಳಿ. ತಾಳ್ಮೆಯಿಂದ ಕೇಳಿಸಿಕೊಳ್ಳುವುದೇ ಸಂಗಾತಿಗೆ ನಾನು ಮಾಡುವ ಸಹಾಯ ಎಂಬುದನ್ನು ನೆನಪಿಟ್ಟುಕೊಳ್ಳಿ.
  • ತಪ್ಪೊಪ್ಪಿಗೆಗೆ ಕ್ಷಮೆಯಿರಲಿ: ಸಂಗಾತಿಯು ತಪ್ಪೊಪ್ಪಿಗೆಗೆ ಪ್ರಯತ್ನಿಸುತ್ತಿದ್ದರೆ ಟೀಕಿಸುವುದರ ಬದಲು ಅವರ ತಪ್ಪನ್ನು ಮನ್ನಿಸಲು ಪ್ರಯತ್ನಿಸಿ. ಅವರ ತಪ್ಪು ನಿಮ್ಮನ್ನು ಕೆರಳಿಸುವುದು ಸಹಜ. ಆದರೆ ಸಂಬಂಧ ಬೆಳೆಯಬೇಕಾದರೆ ಔದಾರ್ಯತೆ ತೋರಿಸುವುದು ಮುಖ್ಯ.

ಹೀಗೆ ಮುಕ್ತಮನದಿಂದ ಆಡಿ-ಆಲಿಸಿ ನೋಡಿ, ಅನ್ಯೊನ್ಯತೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅಂತರ್ಮಥನ ನಡೆಸುವಾಗ ಮನಸ್ಸು ಬಲು ಸೂಕ್ಷ್ಮವಾಗುತ್ತ ಭೇದನಶೀಲವಾಗಿ, ಮುಟ್ಟಿದರೆ ಮುರಿದು ಬೀಳುವಂತೆ ಇರುತ್ತದೆ.

228: ಅನ್ಯೋನ್ಯತೆಗೆ ಹುಡುಕಾಟ – 7

ಇನ್ನು ದಿಟ್ಟ ಮುಕ್ತತೆಯನ್ನು  (vulnerability)  ದಾಂಪತ್ಯದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಇರುವ ಕೆಲವು ಅಡ್ಡಿ-ಆತಂಕಗಳ ಬಗೆಗೆ ಹೋದಸಲ ತಿಳಿದೆವು. ಇನ್ನು, ಬದ್ಧ ಸಂಗಾತಿಯ ಜೊತೆಗೆ ತನ್ನ ಮನದಾಳದ ಸೂಕ್ಷ್ಮತೆಯನ್ನು ಕಂಡುಕೊಳ್ಳುತ್ತ ಆತ್ಮವಿಶ್ಲೇಷಣೆ ನಡೆಸುವ, ಹಾಗೂ ಅದನ್ನು ಬಿಚ್ಚಿ ಹೊರಗಿಡುವ ಕ್ರಮವೇನೆಂದು ಈಸಲ ನೋಡೋಣ.

ಒಳಮನಸ್ಸಿನ ಸೂಕ್ಷ್ಮ ಪದರಗಳನ್ನು ಒಂದೊಂದಾಗಿ ತೆರೆದಿಡುವುದು ಸಾಮಾನ್ಯ ಮಾತಲ್ಲ. ಇದಕ್ಕೆ ಸಾಕಷ್ಟು ದೃಢನಿರ್ಧಾರ ಹಾಗೂ ಪ್ರಯತ್ನಪೂರ್ವಕ ಅಂತರ್ಮಥನ ಬೇಕಾಗುತ್ತದೆ. ಹೀಗೆ ಮಾಡುವಾಗ ಮನಸ್ಸು ಬಲು ಸೂಕ್ಷ್ಮವಾಗುತ್ತ ಭೇದನಶೀಲವಾಗಿ (vulnerable), ಮುಟ್ಟಿದರೆ ಮುರಿದು ಬೀಳುವಂತೆ ಇರುತ್ತದೆ (ಉದಾ: “ನಾನು ಇಷ್ಟೊಂದು ಸ್ವಾರ್ಥಿಯೆ?” ಎಂದು ಥಟ್ಟನೆ ಅರಿವಾಗುವಾಗ ಹೇಗೆ ಅನ್ನಿಸಬಹುದು?) ಹಾಗಾಗಿ, ಆತ್ಮವಿಶ್ಲೇಷಣೆಯನ್ನು ಹೇಗೆ ನಡೆಸುವುದು, ಹಾಗೂ ಅದರ ಮೂಲಕ ಆತ್ಮದರ್ಶನ ಹೇಗೆ ಮಾಡಿಕೊಳ್ಳುವುದು ಎನ್ನುವುದರ ಬಗೆಗೆ ಪ್ರಖ್ಯಾತ ದಾಂಪತ್ಯ ಚಿಕಿತ್ಸಕ ದಂಪತಿ ಎಲ್ಲೆನ್ ಬೇಡರ್ ಹಾಗೂ ಪೀಟರ್ ಪಿಯರ್ಸನ್ (Ellyn Bader & Peter Pearson) ಒಂದು ಪರಿಕ್ರಮವನ್ನು ರೂಪಿಸಿದ್ದಾರೆ. ಇದನ್ನು ನಿಮಗೆ ಅನ್ವಯಿಸುವಂತೆ ನಿಮ್ಮ ಮುಂದಿಡುತ್ತಿದ್ದೇನೆ:

ನಿಮ್ಮ ದಾಂಪತ್ಯದ ಉತ್ಕೃಷ್ಟತೆಯನ್ನು ಹೆಚ್ಚಿಸುವ ಉದ್ದೇಶದಿಂದ ನಿಮ್ಮ ಸಂಗಾತಿಯೊಡನೆ ಅನ್ಯೋನ್ಯತೆ ಬೆಳೆಸಿಕೊಳ್ಳಬೇಕೆಂದು ನಿರ್ಧರಿದ್ದೀರಿ. ಅದಕ್ಕಾಗಿ ಮನಬಿಚ್ಚಿ ಮಾತಾಡಬೇಕು ಎಂದುಕೊಂಡಿದ್ದೀರಿ. ಅದನ್ನು ಹೀಗೆ ಶುರುಮಾಡಿ: ಎರಡು ಗಂಟೆಗಳ ಅವಕಾಶವನ್ನು ಇಟ್ಟುಕೊಳ್ಳಿ. ಇಬ್ಬರೂ ಎದುರುಬದುರು ಕೈಗೆ ಸಿಗುವಂತೆ ಕುಳಿತುಕೊಂಡು ನಿಧಾನವಾಗಿ ಮಾತು ಪ್ರಾರಂಭಿಸಿ. ನಿಮಗೆ ಕಾಡುತ್ತಿರುವ ಸಮಸ್ಯೆಯೊಂದನ್ನು ಎತ್ತಿಕೊಂಡು ಅದರ ಬಗೆಗೆ, ಅದು ನಿಮ್ಮನ್ನು ಕೊರೆಯುತ್ತಿರುವ ಬಗೆಗೆ, ಹಾಗೂ ಅದನ್ನು ಅನುಭವಿಸುವ ನಿಮ್ಮ ಬಗೆಗೆ ಸ್ವಲ್ಪಸ್ವಲ್ಪವಾಗಿ ಬಿಚ್ಚಿಕೊಳ್ಳುತ್ತ ಹೋಗಿ. ಅಂದಹಾಗೆ, ಇಲ್ಲಿ ಹಂಚಿಕೊಳ್ಳುವವರನ್ನು “ಆಡುವವರು” (initiator) ಎಂದೂ, ಇನ್ನೊಬ್ಬರನ್ನು “ಆಲಿಸುವವರು” (inquirer) ಎಂದು ಹೆಸರಿಸೋಣ. ಆಡುವವರು ಹೀಗೆ ಮಾಡಲಿ:

  • ಸಂಭಾಷಣೆಯನ್ನು ಸಾಮಾನ್ಯವಾಗಿ ಒಂದು ಘಟನೆಯಿಂದ (“ನಿನ್ನೆ ಹೀಗಾಯಿತು…”) ಶುರುಮಾಡುತ್ತೀರಷ್ಟೆ? ಅಲ್ಲಿಂದ ಇನ್ನೊಂದು ಘಟನೆಗೆ (“ಅದಕ್ಕೆ ನಾನು ಏನು ಮಾಡಿದೆ ಎಂದರೆ…”) ಹೋಗುವುದರ ಬದಲು, ವಿಷಯವನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಿ. ನಿಮ್ಮ ಮನದ ಮೇಲೆ ಏನು ಪ್ರಭಾವ ಬೀರಿತು ಎಂದು ವಿವರಿಸುತ್ತ ನಿಮಗೆ ಅನ್ನಿಸಿದ್ದನ್ನು ನಿಸ್ಸಂಕೋಚದಿಂದ ಬಾಯಿಬಿಟ್ಟು ಹೇಳಿಕೊಳ್ಳಿ. ನಿಧಾನವಾಗಿ ತೆರೆದುಕೊಳ್ಳಲು ಪ್ರಯತ್ನಿಸುತ್ತ, ಬರುತ್ತಿರುವ ಭಾವನೆಗಳನ್ನು ಹೊರತಂದು ಹಂಚಿಕೊಳ್ಳಿ. ಯಾವುದೇ ವಿಚಾರವನ್ನು ಸೋಸದೆ ಅಥವಾ ಕತ್ತರಿ ಹಾಕದೆ ಹೊರಹಾಕಿ.
  • ಮಾತಾಡುವಾಗ ನಿಧಾನವಾಗಿ ಪದಗಳನ್ನು ಬಿಡಿಬಿಡಿಸಿ ಹೇಳಿ. ಅವಸರ ಬೇಡ. ನಿಂತು ನಿಂತು ಯೋಚಿಸಿ ಹೇಳಿಕೊಳ್ಳಿ. ಒಂದೊಂದಾಗಿ ಹೊರಗೆ ಹಾಕಲು ಯತ್ನಿಸಿ.
  • ನಿಮ್ಮ ಮಾತುಗಳು “ನಾನು, ನನಗೆ, ನನ್ನಲ್ಲಿ…” ಎಂದು ನಿಮ್ಮ ಕುರಿತಾಗಿ, ಹಾಗೂ ನಿಮ್ಮನ್ನೇ ಉದ್ದೇಶಿಸುವಂತೆ ಇರಲಿ. ತನ್ಮೂಲಕ ನಿಮ್ಮನ್ನು ನೀವು ಅರಿತುಕೊಳ್ಳಲು ಯತ್ನಿಸಿ. ನೀವೆಂಥ ವ್ಯಕ್ತಿ, ನೀವೇನಾಗಿದ್ದೀರಿ, ನೀವೇನು ಬಯಸುತ್ತೀರಿ ಎಂದು ಮುಂತಾಗಿ ಅರ್ಥಮಾಡಿಕೊಳ್ಳುತ್ತ ನಿಮ್ಮ ವ್ಯಕ್ತಿಚಿತ್ರಣವನ್ನು ಸ್ವತಃ ರಚಿಸಿಕೊಳ್ಳಿ.
  • ಭಾವನೆಗಳು, ಅನಿಸಿಕೆಗಳು ಸಂಕೀರ್ಣವಾಗಿದ್ದು ಪದಗಳಲ್ಲಿ ಹೇಳಲು ಅಸಾಧ್ಯವೆನ್ನಿಸುತ್ತದೆ. ಹಾಗಾಗಿ, “ಬೇಜಾರಾಯಿತು / ಕೆಟ್ಟೆನಿಸಿತು” ಎಂದಷ್ಟೇ ಹೇಳಿ ನಿಂತುಬಿಡಬೇಡಿ. ಅದರಾಚೆ ಏನಿದೆ ಎಂದು ಇಣುಕಿ. ಒಂದು ಭಾವನೆಯ ಹಿಂದೆ ಬೇರೆ ಭಾವನೆಗಳು ಅಡಗಿಕೊಂಡಿರಬಹುದು.  ಉದಾಹರಣೆಗೆ, ಸಂಗಾತಿಯ ಮೇಲೆ ಸಿಟ್ಟಾದುದರ ಹಿಂದೆ ನಿಮ್ಮ ಅಸಹಾಯಕತೆ ಇರಬಹುದು; ಬೇರೆಯವರ ಮೇಲೆ ಪ್ರಭುತ್ವ ಚಲಾಯಿಸುವುದರ ಹಿಂದೆ ನಿಮ್ಮ ಕೀಳರಿಮೆ ಇರಬಹುದು; ಇನ್ನೊಬ್ಬರನ್ನು ದ್ವೇಷಿಸುವುದರ ಹಿಂದೆ ಅವರನ್ನು ಕಳೆದುಕೊಂಡ ನಿರಾಸೆ ಇರಬಹುದು. ಹಾಗಾಗಿ ಒಂದು ಭಾವನೆಯ ಬೆನ್ನುಹತ್ತಿ, ಅದರ ಹಿಂದಿರುವ ಇನ್ನಿತರ ಭಾವನೆಗಳನ್ನೂ ಹೊರಹಾಕಿ. ಇನ್ನು ಕೆಲವೊಮ್ಮೆ ಭಾವನೆಗಳು ಪರಸ್ಪರ ವಿರುದ್ಧ ಆಗಿರುತ್ತವೆ. (“ನಾನು ನಿನ್ನನ್ನು ಸುಖವಾಗಿ ಇಟ್ಟುಕೊಳ್ಳಬೇಕು ಎಂದುಕೊಳ್ಳುತ್ತೇನೆ, ಆದರೂ ಕಿರಿಕಿರಿ ಮಾಡುತ್ತೇನೆ.”) ಅವುಗಳನ್ನು ಪದಗಳ ರೂಪದಲ್ಲಿ ಹೊರಹಾಕುವುದಕ್ಕೆ ಸಾಕಷ್ಟು ಪ್ರಯತ್ನ ಬೇಕಾಗುತ್ತದೆ.
  • ನೀವು ಪದಗಳನ್ನು ಹುಡುಕಲು ತಡಕಾಡುತ್ತಿದ್ದರೆ, ಮನಸ್ಸನ್ನು ತೆರೆಯಲು ಒದ್ದಾಡುತ್ತಿದ್ದರೆ ಹಾಗೆಂದು ಸಂಗಾತಿಗೆ ತಿಳಿಯಪಡಿಸಿ. ಆಗ ಆಗಾಗ ಮೌನವಾಗಿ ಇರಬೇಕಾಗಬಹುದು.
  • ನಿಮ್ಮ ದುಃಖ, ಅಸಮಾಧಾನ, ಸಂಕಟ, ಭಯ ಎಲ್ಲವನ್ನೂ “ನಾನು” ಭಾಷೆಯಲ್ಲಿ ವ್ಯಕ್ತಪಡಿಸಿ. ಸಂಗಾತಿಯ ಮೇಲೆ ತಪ್ಪು ಹೊರಿಸುವುದು, ಆರೋಪಿಸುವುದು, ಹೆಸರಿಡುವುದು ಮಾಡಬೇಡಿ. ಉದಾ. ನೀನು ಹೀಗೆ ನಡೆದುಕೊಳುತ್ತೀಯಾ, ಅದಕ್ಕೇ ನನಗೆ ಸಹಿಸುತ್ತಿಲ್ಲ” ಎನ್ನುವುದರ ಬದಲು, “ನನ್ನ ಸಹನೆಯ ಸಾಮರ್ಥ್ಯ ಕಡಿಮೆಯಿದೆ, ಹಾಗಾಗಿ ನಿನಗೆ ಗಮನ ಕೊಡಲು ಆಗುತ್ತಿಲ್ಲ.” ಎಂದು ಹೇಳಿ. ಯಾಕೆ? ನಿಮ್ಮ ಕಷ್ಟಗಳಿಗೆ ಪರರನ್ನು ಹೊಣೆ ಮಾಡುತ್ತಿದ್ದರೆ ನಿಮ್ಮನ್ನು ನೀವು ಅರಿತುಕೊಳ್ಳಲು ಆಗುವುದಿಲ್ಲ. ಅಷ್ಟಲ್ಲದೆ, ಸಂಗಾತಿಯು ಕಿವಿಗೊಡುವಂತೆ ಮಾಡುವುದರಲ್ಲಿ ನಿಮ್ಮದೂ ಪಾತ್ರವಿದೆ.
  • ನಿಮ್ಮ ಹಂಚಿಕೊಳ್ಳುವಿಕೆಯಲ್ಲಿ ಅಪ್ಪಟ ಪ್ರಾಮಾಣಿಕತೆಯ ಹೊರತಾಗಿ ಏನೂ ಇರಕೂಡದು. ಈ ಪ್ರಯತ್ನದಲ್ಲಿ ನೀವು ಮುಂಚೆ ಸುಳ್ಳು ಮಾತಾಡಿದ್ದು, ಬಚ್ಚಿಟ್ಟಿದ್ದು, ಮೋಸಮಾಡಿದ್ದು ಹೊರಗೆ ಬರಬಹುದು. ಅದನ್ನು ಕೇಳುತ್ತ ಸಂಗಾತಿಯು “ನೀನು ಹೀಗೂ ಇದ್ದೀಯಾ?” ಎಂದು ದಿಗ್ಭ್ರಮೆಗೊಂಡರೆ ತಲ್ಲಣಿಸಬೇಡಿ. ಸತ್ಯವನ್ನು ಮುಚ್ಚಿಡದೆ ಒಪ್ಪಿಕೊಳ್ಳಿ.
  • ಇದೆಲ್ಲ ಹೇಳಿಕೊಳ್ಳುವಾಗ ಸಂಗಾತಿಯು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಂಡಂತೆ ಅನ್ನಿಸಬಹುದು. ಆಗ ನೀವು ಮುಂದೆ ಹೇಳಿಕೊಳ್ಳುವುದು ವ್ಯರ್ಥ ಅನ್ನಿಸಬಹುದು. ಹಾಗಿದ್ದರೂ ಅವರ ಒಳ್ಳೆಯತನದ ಮೇಲೆ ಸ್ವಲ್ಪವಾದರೂ ಭರವಸೆ ಇಡಲು ಪ್ರಯತ್ನಿಸಿ – ಅವರು ಅಪನಂಬಿಕೆ ತೋರಿಸುತ್ತಿದ್ದರೂ ಅವರನ್ನು ನಂಬುವ ನಿಮ್ಮ ನಿರ್ಧಾರದ ಮೇಲೆ ಭರವಸೆ ಇರಲಿ.
  • ನಿಮ್ಮ ಬಾಲ್ಯದ ನೋವನ್ನು ಹಂಚಿಕೊಂಡಂತೆ ನಿಮ್ಮ ವರ್ತಮಾನದ ಒಲವುಗಳನ್ನೂ ಭವಿಷ್ಯದ ಕನಸುಗಳನ್ನೂ ಹಂಚಿಕೊಳ್ಳಿ.
  • ಭಾವನೆಗಳ ಒತ್ತಡ ಉಂಟಾದರೆ ಅಳಲು ಸಂಕೋಚ ಬೇಡ. ಗಂಡಸರು ಅಳಬಾರದು ಅಥವಾ ಭಯಪಡಬಾರದು ಎನ್ನುವುದನ್ನು ನಂಬಬೇಡಿ.
  • ಸಂದರ್ಭಕ್ಕೆ ತಕ್ಕಂತೆ ಕೆಲವು ಒಳ್ಳೆಯ ಹಾಗೂ ಪ್ರೋತ್ಸಾಹಕ ಅಂಶಗಳು ಕಂಡರೆ ಅವುಗಳನ್ನೂ ತೋರಿಸಿಕೊಳ್ಳಿ.

ಹೀಗೆ ನಿಮ್ಮ ಸಂಗಾತಿಯ ಮುಂದೆ ನಿಮ್ಮ ವೈಯಕ್ತಿಕ ಖಾಸಗಿ ಒಳಪ್ರಪಂಚವನ್ನು ತೆರೆದಿಡಿ. ನಿಮ್ಮೊಳಗೆ ಅಡಗಿರುವ ಭಾವನೆಗಳ ಆಳಕ್ಕೆ ಹೋಗುತ್ತ ಅನುಭವಿಸಿ. ಹಾಗೆ ಮಾಡುವಾಗ ಅದು ನಿಮ್ಮ ಬಗೆಗೆ ಏನು ತಿಳಿಸುತ್ತದೆ… ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ… ಏನು ಭಾವಿಸುತ್ತೀರಿ? ಎಲ್ಲವೂ ಅರಿವಿಗೆ ಬರಲಿ.

ಹೀಗೆ ಒಬ್ಬರು ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವಾಗ  ಅವರ ಸಂಗಾತಿಯು ಹೇಗೆ ಆಲಿಸಬೇಕು? ಇದನ್ನು ಮುಂದಿನ ಸಲ ತಿಳಿಯೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಂಗಾತಿಯೊಂದಿಗೆ ಮನದಿಂದ ಬೆತ್ತಲೆ ಆಗುವುದು ತನುವಿನಿಂದ ಬೆತ್ತಲೆ ಆಗುವಷ್ಟೇ ರೋಚಕ ಆಗಲು ಸಾಧ್ಯವಿದೆ!

227: ಅನ್ಯೋನ್ಯತೆಗೆ ಹುಡುಕಾಟ – 6

ಬದ್ಧಸಂಬಂಧಗಳಲ್ಲಿ ಅನ್ಯೋನ್ಯತೆಯನ್ನು ತರಲು ದಿಟ್ಟಮುಕ್ತತೆಯು (vulnerability) ಸೂಕ್ತ ಸಾಧನ ಎಂದು ಕಂಡುಕೊಂಡೆವು. ಈಗ ಇದನ್ನು ದಾಂಪತ್ಯಕ್ಕೆ ಜೋಡಿಸಿಕೊಳ್ಳುವುದರ ಬಗೆಗೆ ನೋಡೋಣ.

ಬದ್ಧಸಂಬಂಧಕ್ಕೆ ತನ್ನನ್ನು ಜೋಡಿಸಿಕೊಳ್ಳುವಾಗ ಬಹುಶಃ ಪ್ರತಿಯೊಬ್ಬರಿಗೂ ಎರಡು ಭಾವಗಳು ತಲೆಯಲ್ಲಿ ಇರುತ್ತವೆ.  ಒಂದು: ಕಾರಣವೇನೇ ಇರಲಿ, ತಾನು “ಹೀಗೆ” ಇರುವುದರ ಬಗೆಗೆ ಖಜೀಲತನ, ಅವಮಾನ (shame). ಎರಡು: ಆ ಕಾರಣಕ್ಕಾಗಿ ಸಂಗಾತಿಯು ತನ್ನನ್ನು ತಿರಸ್ಕರಿಸುವ ಭಯ (fear of rejection). ಈ ಅವಮಾನ, ಭಯದ ಅನಿಸಿಕೆಯನ್ನು ನಿರ್ವಹಿಸುವ ರೀತಿಯಲ್ಲಿ ಹೆಣ್ಣುಗಂಡುಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ, ಹಾಗೂ ಇದು ಶಿಶುವಿನ ಅವಸ್ಥೆಯಲ್ಲೇ ಕಂಡುಬರುತ್ತದೆ ಎಂದು ಲವ್ಹ್ ಹಾಗೂ ಸ್ಟೋಸ್ನೀ ಅವರ ಅಭಿಪ್ರಾಯ (ಓದಿ: Patricia Love and Steven Stosny: How To Improve Your Marriage Without Talking About It). ಈ ವ್ಯತ್ಯಾಸವು “ನಮ್ಮ ಸಮಸ್ಯೆಗಳ ಬಗೆಗೆ ಮಾತಾಡುವುದೋ ಬೇಡವೋ?” ಎಂಬ ಪ್ರಶ್ನೆ ಎತ್ತಿದಾಗ ಅವರು ಸ್ಪಂದಿಸುವುದರಲ್ಲಿ ಎದ್ದುಕಾಣುತ್ತದೆ. ಸಂಬಂಧವು ಕಡಿದುಹೋದಂತೆ ಅನಿಸುತ್ತಿರುವಾಗ ಹೆಣ್ಣು ಮಾತಿನಲ್ಲಿ ಅಸಮಾಧಾನ, ಹತಾಶೆ ತೋರ್ಪಡಿಸಿದರೂ ಒಳಗೊಳಗೆ ಒಂಟಿತನದ ಭಯ ಅನುಭವಿಸುತ್ತಾಳೆ. ಹೆಣ್ಣಿನ ಮಾತಿಗೆ ಗಂಡು ಸಾಮಾನ್ಯವಾಗಿ ಉತ್ತರಿಸುವುದಿಲ್ಲ. ಅವನ ಮೌನದ ಹಿಂದೆ ಆಕೆಯನ್ನು ತೃಪ್ತಿಗೊಳಿಸಲು ಹೋಗಿ ಸೋತು ಹೈರಾಣಾದ ಭಾವವಿದ್ದು, ಅದರ ಆಳದಲ್ಲಿ ಅವನ (ಬಾಲ್ಯದ) ಅವಮಾನ ಇರುತ್ತದೆ. ಅವನು ಅವಮಾನದಲ್ಲಿ ಮುಳುಗಿರುವಾಗ ಆಕೆಯ ಭಯವನ್ನು ಗಮನಿಸಲು ಆಗುವುದಿಲ್ಲ, ಹಾಗೂ ಆಕೆಯು ತನ್ನ ಭಯದಲ್ಲಿ ಮುಳುಗಿರುವಾಗ ಅವನ ಅವಮಾನವನ್ನು ಗಮನಿಸಲು ಆಗುವುದಿಲ್ಲ. ಹಾಗಾಗಿ, ಸಂವಹನದಲ್ಲಿ ಹೆಣ್ಣು ಮಾತಾಡಿ ಪ್ರಕಟಪಡಿಸಲು ನೋಡಿದರೆ, ಗಂಡು ಮಾತಾಡದೆ ಪ್ರಕಟಪಡಿಸಲು ನೋಡುತ್ತಾನೆ. ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಸೆಣೆಸುವುದರಿಂದ ನಿರಾಶೆ, ನೋವಿನಲ್ಲೇ ಕೊನೆಗಾಣುತ್ತಾರೆ.

ಈ ವಿಚಾರ ಹೇಗೆ ಪ್ರಸ್ತುತವಾಗುತ್ತದೆ? ನಿಮ್ಮ ಮನದ ದುರ್ಬಲ ಭಾಗಗಳ ಜೊತೆಗೆ ಸಂಪರ್ಕಿಸುತ್ತ ನೀವು ಯಾರು, ಎಂಥವರು ಎಂದು ಸಂಗಾತಿಗೆ ತೋರಿಸದ ಹೊರತು ನಿಮ್ಮೊಳಗಿನ ಭಯವೇ ನಿಮ್ಮನ್ನು ಆಳುತ್ತಿದೆ. ಭಯವನ್ನು ಮುಚ್ಚಿಡಲು ಮುಖವಾಡ ಧರಿಸುತ್ತೀರಿ. ಮುಖವಾಡವೇ ಅಡ್ಡಬಂದು ಮುಕ್ತಪ್ರೀತಿಯ ಸ್ಪರ್ಶದಿಂದ ವಂಚಿತರಾಗುತ್ತೀರಿ – ತಬ್ಬಿಕೊಳ್ಳುವವರ ನಡುವೆ ತಲೆದಿಂಬು ಇಟ್ಟುಕೊಂಡಂತೆ. ಇದಕ್ಕೆ ವ್ಯತಿರಿಕ್ತವಾಗಿ, ನೀವು ಒಳಗೆ ಏನೇ ಇದ್ದರೂ ಹೊರತರುವುದರಿಂದ ಅಂತರಂಗದಿಂದ ಸಂಪರ್ಕಕ್ಕೆ ಸಿಗುತ್ತೀರಿ. ಇದಕ್ಕೊಂದು ದೃಷ್ಟಾಂತ: ಇಲ್ಲೊಂದು ದಾಂಪತ್ಯದಲ್ಲಿ ಹೆಂಡತಿಗೆ ಕಾಮಾಸಕ್ತಿ ಇರಲಿಲ್ಲ. ಗರ್ಭಧಾರಣೆಗೆ ಭಯಪಟ್ಟು ಸಂಭೋಗದಿಂದ ದೂರವಿರುತ್ತಿದ್ದಳು. ಗರ್ಭನಿರೋಧ ಕ್ರಮಗಳನ್ನು ಒಪ್ಪುತ್ತಿರಲಿಲ್ಲ. ಅವಳ ಈ ನಿರಾಕರಣೆಯು ಗಂಡನಿಗೆ ಸುಖಪಡಲು ಅರ್ಹತೆಯಿಲ್ಲವೆಂಬ ಸಂದೇಶ ಕೊಟ್ಟು ಆತ್ಮಪ್ರತಿಷ್ಠೆಯನ್ನು ಚುಚ್ಚುತ್ತಿದ್ದುದರಿಂದ ಅವನೂ ಕೂಟದಲ್ಲಿ ಆಸಕ್ತಿ ಕಳೆದುಕೊಂಡಿದ್ದ. ಲೈಂಗಿಕ-ದಾಂಪತ್ಯ ಚಿಕಿತ್ಸೆಯ ಸಂದರ್ಭದಲ್ಲಿ ಇಬ್ಬರನ್ನೂ ದಿಟ್ಟ ಮುಕ್ತತೆಯಿಂದ ಮಾತಾಡಿಸಲು ಹಚ್ಚಿದಾಗ ಏನು ಗೊತ್ತಾಯಿತು? ಆಕೆಗೆ ತಾಯಿಯಾಗುವುದಕ್ಕೆ  ಭಯವೇನಿಲ್ಲ, ಆದರೆ ಮಕ್ಕಳನ್ನು ಬೆಳೆಸಲು ಮನಸ್ಸಿಲ್ಲ (ಆಕೆಯ ಬಾಲ್ಯದ ಗಾಯಗಳು ಇನ್ನೂ ಹಸಿಯಾಗಿದ್ದುದು ಪತ್ತೆಯಾಯಿತು). ಆದರೆ ಹಾಗೆ ಹೇಳಿಕೊಳ್ಳಲು ಆಕೆಯ ಪ್ರಬುದ್ಧ ಹೆಣ್ಣುತನಕ್ಕೆ ಒಪ್ಪಿಗೆ ಇರಲಿಲ್ಲ. ಪರಿಣಾಮವಾಗಿ, ಒಂದುಕಡೆ ಹೆಣ್ಣಾಗಿ ಕಾಮಸುಖ ಪಡೆಯುವುದು, ಇನ್ನೊಂದು ಕಡೆ ಅದರ ಪ್ರತಿಫಲವಾದ ತಾಯ್ತನವನ್ನು ನಿರಾಕರಿಸುವುದು – ಈ ದ್ವಂದ್ವವನ್ನು ಬಹಿರಂಗಕ್ಕೆ ತರಲು ಭಯವಿತ್ತು. ಇದರೊಂದಿಗೆ, ತಂದೆಯಾದರೆ ಮಾತ್ರ ತನ್ನ ಗಂಡಸುತನ ಸಿದ್ಧವಾದಂತೆ ಎನ್ನುವ ಗಂಡನ ಭಯವೂ ಹೊರಬಂತು. ಚಿಕಿತ್ಸೆಯಲ್ಲಿ ಕಾಮಸುಖ ಅನುಭವಿಸುವುದು ಆಕೆಯ ಹಕ್ಕು, ಆದರೆ ತಾಯ್ತನ ಆಕೆಯ ಆಯ್ಕೆ ಎಂದು ಸ್ಪಷ್ಟ ಮಾಡಿಕೊಟ್ಟೆ. ಹೀಗೆ ದಿಟ್ಟ ಮುಕ್ತತೆಯ ಸಾಧನ ಬಳಸಿಕೊಂಡು ಕಾಮಸುಖವನ್ನು ತಾಯ್ತಂದೆತನದಿಂದ ಬೇರ್ಪಡಿಸಿ ನೋಡುವಂತೆ ಆದಾಗ ಇಬ್ಬರೂ ಮುಖವಾಡ ತೆಗೆದುಹಾಕಿ ಅನ್ಯೋನ್ಯತೆಯಿಂದ ಸಮಾಗಮ ನಡೆಸಲು ಸಾಧ್ಯವಾಯಿತು.

ಈ ದೃಷ್ಟಾಂತದಲ್ಲಿ ಇನ್ನೊಂದು ವಿಷಯ ಗೊತ್ತಾಗುತ್ತದೆ: ದಿಟ್ಟ ಮುಕ್ತತೆಗೂ ಅನ್ಯೋನ್ಯತೆಯ ಕಾಮಕೂಟಕ್ಕೂ ಅವಿನಾಭಾವ ಸಂಬಂಧವಿದೆ! ಇದು ಹೇಗೆಂದರೆ, ಶರೀರದ ಬೆತ್ತಲೆತನಕ್ಕೂ ಮನದ ಬೆತ್ತಲೆತನಕ್ಕೂ ಸಾಮ್ಯವಿದೆ. ತನಗಾಗಿ ಒಲ್ಲದೆ ಸಂಗಾತಿಗಾಗಿ ಬೆತ್ತಲೆ ಆಗುವವರು ಮನದ ವಿಷಯಕ್ಕೆ ಬಂದಾಗಲೂ ಅಷ್ಟೆ: ತನಗೋಸ್ಕರ ಮನಬೆತ್ತಲೆ ಆಗಲು ಭಯಪಡುತ್ತಾರೆ. ಮನದಲ್ಲಿ ಇರುವುದನ್ನು ಮುಚ್ಚಿಡುವಾಗ ಅದನ್ನು ಶರೀರದಿಂದ ಭರ್ತಿ ಮಾಡಲು ನೋಡುತ್ತಾರೆ. ಕೂಟಕ್ಕೆ ಮನಸ್ಸುಗಳು ಇನ್ನೂ ತಯಾರಾಗದೆ ಇರುವಾಗ ಜನನಾಂಗಗಳನ್ನು ಉದ್ರೇಕಗೊಳಿಸಲು ಹೊರಡುವುದು ಮಾದರಿಯ ಉದಾಹರಣೆ – ಇದನ್ನೇ ಸಲೀಲ್ ಶಾಮಾಳಿಗೆ ಮಾಡುವಂತೆ ಅನೇಕ ಗಂಡಂದಿರೂ ಮಾಡುತ್ತಾರೆ. ಸತ್ಯಾಂಶ ಏನೆಂದರೆ, ಮನದಿಂದ ಬೆತ್ತಲೆ ಆಗುವುದು ತನುವಿನಿಂದ ಬೆತ್ತಲೆ ಆಗುವಷ್ಟೇ ರೋಚಕ ಆಗಲು ಸಾಧ್ಯವಿದೆ. ಪರಸ್ಪರರ ಎದುರು ಮನಬೆತ್ತಲೆ ಮಾಡಿಕೊಳ್ಳುವಾಗ ಇನ್ನಷ್ಟು ರೋಚಕತೆ ಅನುಭವಿಸುತ್ತಾರೆ. ಆಗ ಅವರ ಕಾಮಕಾಮತೃಪ್ತಿಯು ಶರೀರಜನ್ಯವಾದ ಭಾವಪ್ರಾಪ್ತಿಯನ್ನು ಮೀರಿ ಹೊಸ ಮಜಲು ಏರುತ್ತದೆ.

ಇನ್ನು ದಿಟ್ಟ ಮುಕ್ತತೆಯನ್ನು ದಾಂಪತ್ಯದಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ಆಗ ತಲೆಯೆತ್ತಬಹುದಾದ ಕೆಲವು ಅಡ್ಡಿಆತಂಕಗಳೂ ಅವುಗಳಿಗೆ ಉಪಾಯಗಳೂ ಇಲ್ಲಿವೆ:

 

  • ಭಯಗಳು: ನನ್ನ ವ್ಯಕ್ತಿತ್ವದ ಭಾಗಗಳನ್ನು ತೆರೆದು ತೋರಿಸುವಾಗ ನನಗೆ ನಾನೇ ಇಷ್ಟವಾಗದೆ ಇರಬಹುದು. ಉಪಾಯ: ನನ್ನನ್ನು ನಾನೇ ಸಹಿಸಿಕೊಳ್ಳದೆ ಸಂಗಾತಿಯು ಸಹಿಸುವಂತೆ ಅಪೇಕ್ಷಿಸುವುದು ಸರಿಯೆ?
  • ಮುಖವಾಡದ ಬಲ: ಮುಖವಾಡವು ನನಗೆ (ಸುಳ್ಳು) ಭರವಸೆ ನೀಡುತ್ತದೆ. ಅದರಿಂದ ಬೇಡದ ಭಾವನೆಗಳನ್ನು ಹಿಡಿತದಲ್ಲಿ ಇಡಬಹುದು. ಉಪಾಯ: ಆಗ ಮಾನಸಿಕ ಶಕ್ತಿ ವಿಪರೀತ ವ್ಯಯವಾಗುತ್ತದೆ. ಇದನ್ನೇ ಪ್ರೀತಿಯ ಹೆಚ್ಚಳಕ್ಕೆ ತಿರುಗಿಸಿಕೊಳ್ಳಬಹುದು.
  • ಅವಹೇಳನದ ಸಾಧ್ಯತೆ: ಬಾಯಿಬಿಟ್ಟರೆ ಅವಹೇಳನಕ್ಕೆ ತುತ್ತಾಗುವ ಸಾಧ್ಯತೆಯಿದೆ. ಉಪಾಯ: ಬಾಳ ಸಂಗಾತಿಯ ಎದುರು ಬೆತ್ತಲಾಗದೆ ಇನ್ನು ಯಾರೆದುರು ಆಗಬೇಕಾಗಿದೆ? ಅನ್ಯೋನ್ಯವಾಗುವ ಮಾರ್ಗ ಹಿತಕರ ಇರಬೇಕೆಂದಿಲ್ಲ.
  • ದೂರೀಕರಣದ ಭಯ: ಇದನ್ನೆಲ್ಲ ತಿಳಿಸಿದರೆ ಸಂಗಾತಿಯನ್ನು ಕಳೆದುಕೊಳ್ಳುವ ಸಂಭವವಿದೆ. ಉಪಾಯ: ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಲು ಅವರದೇ ಭಯ, ಮುಖವಾಡ ಅಡ್ಡಿಯಾಗುತ್ತಿವೆ. ಅದಕ್ಕೆ ನೀವು ಜವಾಬ್ದಾರರಲ್ಲ. ಅವರಿಗೆ ಕಾಲಾವಕಾಶ ಕೊಡಿ. ಇಷ್ಟಕ್ಕೂ ಕಾಯಂಆಗಿ ದೂರವಾದರೆ ಅವರು ಅನ್ಯೋನ್ಯತೆಗೆ ಸಿದ್ಧರಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಇನ್ನು, ಮನದ ದೌರ್ಬಲ್ಯಗಳನ್ನು ತೆರೆದಿಡುವುದರಿಂದ ಸಂಗಾತಿಗೆ ಪ್ರಾಬಲ್ಯ ಮೆರೆಯಲು ಅವಕಾಶ ಕೊಟ್ಟಂತಾಗುತ್ತದೆ ಎನ್ನುವವರಿಗೆ ಈ ಮಾತು: ನಿಜಸ್ವರೂಪ ತೋರುವುದು ನಿಮ್ಮ ವೈಯಕ್ತಿಕ ಮೌಲ್ಯಗಳಿಗೆ ನಿಷ್ಠರಾಗುವುದಕ್ಕಾಗಿ. ಇದನ್ನು ನಿಮಗಾಗಿಯೇ ವಿನಾ ಸಂಗಾತಿಗಾಗಿ ಅಲ್ಲ.  ಸತ್ಯವನ್ನು ಸಹಿಸಲೂ ಶಕ್ತಿ ಇರಬೇಕಾಗುತ್ತದೆ – ಅದಿಲ್ಲದಿರುವವರು ಪ್ರಾಬಲ್ಯ ಮೆರೆಸುತ್ತಾರೆ. ಮೌಲ್ಯಗಳನ್ನು ಬೆಳೆಸುತ್ತ ಆತ್ಮವಿಕಾಸ ಆಗುವ ನಿಷ್ಠಾವಂತ ಪ್ರಯತ್ನದ ಎದುರು ಪ್ರಾಬಲ್ಯ ಸೋಲಲೇಬೇಕು!

 ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ನಾವು ಪ್ರೀತಿಸುವ ಅಪರಿಚಿತರ ಮುಂದೆ ನಮ್ಮ ದೌರ್ಬಲ್ಯಗಳನ್ನು ತೋರಿಸಿಕೊಳ್ಳುತ್ತ ಅವರ ಕೃಪಾಕಟಾಕ್ಷಕ್ಕೆ ಕಾಯುತ್ತೇವೆ!

226: ಅನ್ಯೋನ್ಯತೆಗೆ ಹುಡುಕಾಟ – 5

ಮೂಲ ಕುಟುಂಬದಲ್ಲಿ ಮನಬಿಚ್ಚಿ ಮಾತಾಡಿ ರೂಢಿ ಇಲ್ಲದಿರುವಾಗ ಬದ್ಧ ಸಂಬಂಧಗಳಲ್ಲಿ ಅನ್ಯೋನ್ಯತೆಗೆ ಹುಟ್ಟುಹಾಕಲು ತಿರಸ್ಕೃತರಾಗುವ ಸಂಭವವನ್ನು ಎದುರುಹಾಕಿಕೊಳ್ಳುತ್ತ ಭಾವನಾತ್ಮಕವಾಗಿ ಬೆತ್ತಲೆ ಆಗುವ ಕ್ರಮವಾದ ದಿಟ್ಟ ಮುಕ್ತತೆಯೊಂದೇ (vulnerability) ಏಕೈಕ ಉಪಾಯವೆಂದು ಮಾತಾಡಿಕೊಂಡೆವು. ಇವೊತ್ತು ಇದರ ಬಗೆಗೆ ಇನ್ನಷ್ಟು ತಿಳಿದುಕೊಳ್ಳೋಣ.

ಹಾಗೆ ನೋಡಿದರೆ ದಿಟ್ಟ ಮುಕ್ತತೆ ಎನ್ನುವುದು ಹೊಸ ಪರಿಕಲ್ಪನೆ ಏನಲ್ಲ. ಉದಾಹರಣೆಗೆ, ನೀವು ಒಬ್ಬರನ್ನು ಪ್ರೀತಿಸಲು ಶುರು ಮಾಡಿದ್ದೀರಿ ಎಂದುಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಅವರೇ ತುಂಬಿರುತ್ತಾರಷ್ಟೆ? ಅವರೂ ನನ್ನನ್ನು ಪ್ರೀತಿಸುತ್ತಿರಬಹುದೆ? ಗೊತ್ತಿಲ್ಲ. ನನ್ನ ಪ್ರೀತಿಯನ್ನು ಅವರೆದುರು ಹೇಳಿಕೊಳ್ಳಬೇಕು. ಒಂದುವೇಳೆ ಅವರು ನನ್ನನ್ನು ಒಪ್ಪದಿದ್ದರೆ? ಅಸಹನೀಯ ದುಃಖವಾಗಬಹುದು. ಹಾಗೆಂದು ಸುಮ್ಮನಿದ್ದರೆ ನನ್ನ ಪ್ರೀತಿ ನನ್ನಲ್ಲೇ ಉಳಿಯುತ್ತದೆ… ಹೀಗೆ ಯೋಚಿಸಿ, ಕೊನೆಗೂ ಧೈರ್ಯಮಾಡಿ ಹೇಳಿಕೊಳ್ಳುತ್ತೀರಿ. ಅವರು ಹೌದೆ ಎಂದು ಸುಮ್ಮನಿದ್ದರೆ? ಅನಿಶ್ಚಿತತೆ ಕಾಡುತ್ತದೆ. ಬಾಯಿಗೆ ಬರುತ್ತಿರುವ ಹೃದಯವನ್ನು ಕೆಳಗೆ ತಳ್ಳುತ್ತ, “ನೀನೂ ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳುತ್ತೀರಿ. ಅವರು ಒಂದುವೇಳೆ ಇಲ್ಲವೆಂದರೆ, “ಸ್ಸಾರಿ, ರಾಂಗ್ ನಂಬರ್” ಎನ್ನುವಂತೆ ಸುಮ್ಮನಾಗುವುದಿಲ್ಲ. ನಾನು ಹೇಳಿಕೊಂಡದ್ದು ಸಾಲದು, ಮನಸ್ಸನ್ನು ಇನ್ನಷ್ಟು ಬಿಚ್ಚಿಡಬೇಕು ಎಂದು ನಿರ್ಧರಿಸುತ್ತೀರಿ. ಉಕ್ಕೇರುವ ಭಾವನೆಗಳಿಗೆ ಪದಗಳ ರೂಪ ಕೊಡುತ್ತೀರಿ. “ನನ್ನ ಕನಸು-ಮನಸಿನಲ್ಲಿ ನೀನೇ ತುಂಬಿದ್ದೀಯಾ, ನಾವಿಬ್ಬರೂ ಸುಂದರವಾಗಿ ಬದುಕೋಣ…” ಎಂದೆಲ್ಲ ಹಂಚಿಕೊಳ್ಳುತ್ತ ನಿಮ್ಮ ಸೂಕ್ಷ್ಮಭಾವಗಳನ್ನು ತೆರೆದಿಡುತ್ತೀರಿ. ಪರಿಣಾಮ ಅನಿಶ್ಚಿತ. ಅವರು ನಿಮ್ಮಕಡೆ ವಾಲುವ ಲಕ್ಷಣ ಕಾಣುವುದಿಲ್ಲ. ಆಗ ನೀವು, “ನಿನಗೆ ಬೇಡವಾದರೆ ನನಗೂ ಬೇಡ” ಎಂದು ಹಂಚಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಬದಲು, “ನೀನಿಲ್ಲದ ನನ್ನ ಬದುಕು ಖಾಲಿಖಾಲಿ. ನೀನಿಲ್ಲದೆ ನಾನು ಎಷ್ಟೊಂದು ಬಲಹೀನ ಆಗಬಲ್ಲೆ” ಎಂದು ನಿಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳಲು ಶುರುಮಾಡುತ್ತೀರಿ! ದೌರ್ಬಲ್ಯವನ್ನು ತೆರೆದು ತೋರಿಸಿದಷ್ಟೂ ಅವರನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿಗಿದೆ – ದುರ್ಬಲತೆಯನ್ನು ಯಾರು ತಾನೇ ಮೆಚ್ಚುತ್ತಾರೆ? ಆದರೂ ಅಪಾಯವನ್ನು ಎದುರುಹಾಕಿಕೊಳ್ಳುತ್ತಲೇ ಮನಸ್ಸಿನ ಸೂಕ್ಷ್ಮ ಪದರಗಳನ್ನು ಬಿಡಿಬಿಡಿಸಿ ತೋರಿಸುತ್ತೀರಿ. ಅಪರಿಚಿತರ ಕೈಯಲ್ಲಿ ನಿಮ್ಮನ್ನು ಕೊಟ್ಟು ಅವರ ಅನುಗ್ರಹಕ್ಕಾಗಿ ಕಾಯುತ್ತೀರಿ. ಇದೇ ದಿಟ್ಟ ಮುಕ್ತತೆ. ಇಲ್ಲಿ ಅನಿಶ್ಚಿತತೆ, ನಿರಾಕರಣೆ, ದೂರೀಕರಣ, ಇರುವುದನ್ನು ಕಳೆದುಕೊಳ್ಳುವ ಭಯ, ಅಸಹಾಯಕತೆ, ದುಃಖ, ಅವಮರ್ಯಾದೆ, ಸ್ವಾಭಿಮಾನಕ್ಕೆ ಪೆಟ್ಟು, ದೌರ್ಬಲ್ಯದ ಬಹಿರಂಗ… ಎಲ್ಲವನ್ನೂ ಎದುರುಹಾಕಿಕೊಳ್ಳುತ್ತ ಅಂತರಾತ್ಮವನ್ನು ಬಿಚ್ಚಿ ಬಯಲಿಗೆ ತರುವುದು ನಡೆಯುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಇಲ್ಲೊಂದು ಉದಾಹರಣೆ ನೋಡಿ: ಇಲ್ಲೊಬ್ಬನು ಬುದ್ಧಿವಂತೆಯಾದ ಹಾಗೂ ಅದ್ಭುತ ವ್ಯಕ್ತಿತ್ವವುಳ್ಳ ಸಹಪಾಠಿ ಹುಡುಗಿಗೆ ವರ್ಷಗಟ್ಟಲೆ ಹತ್ತಿರವಾಗಿದ್ದ. ಆಕೆಯೂ ಇವನನ್ನು ಪ್ರೀತಿಸುತ್ತ ಮನಸ್ಸು ತೆರೆದುಕೊಂಡು ಕಾಯುತ್ತಿದ್ದರೂ ಇವನು (ನಿರಾಕರಣೆಯ ಭಯದಿಂದ) ಆತ್ಮನಿವೇದನೆ ಮಾಡಿಕೊಳ್ಳುವ ಸಾಹಸ ಮಾಡಲಿಲ್ಲ. ಕೊನೆಗೆ ಆಕೆ ಕ್ರಮೇಣ ದೂರವಾದಳು. ಆಗ ಇವನೇನು ಮಾಡಿದ? ಹಿರಿಯರ ಮಧ್ಯಸ್ತಿಕೆಯಿಂದ ತನಗಿಂತ ತುಂಬಾ ಚಿಕ್ಕವಳಾದ, ಸಾಧಾರಣ ಬುದ್ಧಿಯ, ವ್ಯಕ್ತಿತ್ವ ಅರಳದ ಅಮಾಯಕ ಹುಡುಗಿಯನ್ನು ಮದುವೆಯಾಗಿ, ಸ್ನೇಹಿತೆಗೆ ತೋರಿಸಲು ಕರೆದುಕೊಂಡು ಬಂದ!  ಅವನ ದಾಂಪತ್ಯವನ್ನು ಗಮನಿಸಿದರೆ ಅವನು ಯಾವೊತ್ತಾದರೂ ಹೆಂಡತಿಯ ಎದುರು ಮನಸ್ಸು ಬಿಚ್ಚಬಾರದೆಂದೇ ಅಮಾಯಕಳನ್ನು ಆರಿಸಿಕೊಂಡಿದ್ದು ಸ್ಪಷ್ಟವಾಗುತ್ತದೆ. ಅಂಥವನು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವುದು ಒತ್ತಟ್ಟಿಗಿರಲಿ, ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೆ?

ಮೇಲಿನ ಉದಾಹರಣೆಗಳನ್ನು ಗಮನಿಸಿದರೆ ದಿಟ್ಟ ಮುಕ್ತತೆಗೆ ಇನ್ನೊಂದು ಉದ್ದೇಶವೂ ಇದೆಯೆಂದು ಗೊತ್ತಾಗುತ್ತದೆ: ಸಂಗಾತಿಯೊಡನೆ ಹಂಚಿಕೊಳ್ಳುವ ಪ್ರಕ್ರಿಯೆ ನಡೆಯುವಾಗ ಜೊತೆಜೊತೆಗೆ ಆತ್ಮಾನ್ವೇಷಣೆಯನ್ನೂ ಮಾಡಿಕೊಳ್ಳುತ್ತ ತನ್ನನ್ನು ತಾನೇ ಅರ್ಥಮಾಡಿಕೊಳ್ಳುವುದು. ಇದು ಹೇಗೆಂದು ವಿವರಿಸುತ್ತೇನೆ. ನಾವು ಮಗುವಾಗಿ ಇರಬೇಕಾದರೆ ಬಂದ ಎಲ್ಲ ಭಾವನೆಗಳನ್ನೂ ಬಂದಂತೆಯೇ ತೋರಿಸಿಕೊಳ್ಳುತ್ತೇವೆ. ಅದು ಕೂಡದೆಂದು ಹಿರಿಯರು ಕಟ್ಟುಪಾಡುಗಳನ್ನು ಹೇರುತ್ತಾರೆ. ಉದಾಹರಣೆಗೆ, ಹಿರಿಯ ಮಗುವೊಂದು ತನ್ನ ಹಿತಾಸಕ್ತಿಯನ್ನು ತೋರಿಸಿಕೊಂಡಾಗ ಸ್ವಾರ್ಥಿಯೆಂದು ಹೆಸರಿಸಲ್ಪಟ್ಟು, ಶಿಕ್ಷೆಗೆ ಒಳಗಾಗಿ ಒಡಹುಟ್ಟಿದವರಿಗಾಗಿ ಬಿಟ್ಟುಕೊಡುವ ಸಂದರ್ಭ ಬರುತ್ತದೆ ಎಂದುಕೊಳ್ಳಿ. ಮುಂದೆ ಇವರು ಚಿಕ್ಕವರಿಗಾಗಿ ತ್ಯಾಗಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. (ತಂದೆ ತೀರಿಕೊಂಡಾಗ ಹಿರಿಯ ಮಗ/ಳು ಕಾಲೇಜು ಶಿಕ್ಷಣ ನಿಲ್ಲಿಸಿ, ಕೆಲಸ ಹಿಡಿದು ತಮ್ಮ-ತಂಗಿಯರ ಓದಿಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿರಬಹುದು.) ಇವರು ತಮ್ಮ ಬಗೆಗೆ ಹೊರಗೆ ಸಾರ್ಥಕತೆಯನ್ನು ಪ್ರಕಟಿಸುವಾಗ ಒಳಗೆ ಏನು ಅನುಭವಿಸುತ್ತಾರೆ? ಮನದೊಳಗೆ ವ್ಯಥೆ, ಹೊಟ್ಟೆಯೊಳಗೆ ಸಂಕಟ ಹಾಗೂ ಶರೀರದಲ್ಲಿ ಜಡತ್ವ! ಈ ಕಾರಣದಿಂದ ಇಂಥವರು ಆಗಾಗ ಕಳೆದುಹೋದಂತಿದ್ದು ಸಂಗಾತಿಯ ಅನ್ಯೋನ್ಯತೆಯ ಆಹ್ವಾನಕ್ಕೆ ಸ್ಪಂದಿಸಲಾರರು. ಇವರು ಒಂದುವೇಳೆ ಮನಸ್ಸು ಮಾಡಿ ಸಂಗಾತಿಯ ಸನ್ನಿಧಿಯಲ್ಲಿ ತಮ್ಮ ಬಗೆಗೆ ಮಾತು ಶುರುಮಾಡುತ್ತಾರೆ ಎಂದುಕೊಳ್ಳಿ. ತನ್ನದಲ್ಲದ ಜವಾಬ್ದಾರಿಯನ್ನು ಹೊತ್ತು ಹರೆಯದ ಉಂಡಾಡಿತನವನ್ನು ಕಳೆದುಕೊಂಡೆ; ಹಾಗಾಗಿ ತಾನು ಪಡೆದಿದ್ದು ಸಂತೋಷ-ತೃಪ್ತಿಗಳಲ್ಲ, ಬದಲಾಗಿ ಬಲಿದಾನದಿಂದ ಅಸ್ತಿತ್ವಹೀನತೆ ಹಾಗೂ ಅವಕಾಶ ತಪ್ಪಿದ ವ್ಯಥೆ ಎಂಬುದು ಅರಿವಿಗೆ ಬರುತ್ತದೆ. ಆತ್ಮದರ್ಶನ ಆಗುವುದೇ ಹೀಗೆ! ವಯಸ್ಸಿಗೆ ಮೀರಿದ ಪ್ರೌಢತೆಯನ್ನು ತೋರಿಸುವ, ಹಾಸ್ಯದ ಲಾಸ್ಯವಿಲ್ಲದೆ ಗಂಭೀರರಾಗಿ ಬದುಕುವ ವ್ಯಕ್ತಿಗಳ ಹಿಂದೆ ದುರಂತ ಕಥಾನಕವಿದೆ. ಇಂಥವರು ಸಂಗಾತಿಯೊಡನೆ ಪ್ರಾಮಾಣಿಕವಾಗಿ ಬಿಚ್ಚಿಡುವಾಗ ಆತ್ಮದರ್ಶನದ ಪ್ರಯತ್ನ ನಡೆಯುತ್ತ ತಮಗೆ ತಾವೇ ಅರ್ಥವಾಗುತ್ತಾರೆ. ಹೀಗೆ ದಿಟ್ಟ ಮುಕ್ತತೆಯ ಅವಿರತ ಯತ್ನವು ಸಂಗಾತಿಗಳನ್ನು ಹತ್ತಿರ ತರುತ್ತ ಅನ್ಯೋನ್ಯತೆಯ ಹುಟ್ಟಿಗೆ ಕಾರಣವಾಗುತ್ತದೆ.

ಕೆಲವರಲ್ಲಿ ಒಂದು ಪ್ರಶ್ನೆ ಹುಟ್ಟಬಹುದು: ಪ್ರೀತಿಸುವವರನ್ನು ತನ್ನವರನ್ನಾಗಿ ಮಾಡಿಕೊಳ್ಳಲು ದಿಟ್ಟ ಮುಕ್ತತೆಯು ಸೂಕ್ತ ಉಪಾಯವೇನೋ ಸರಿ, ಆದರೆ ಸಂಗಾತಿಯು ಈಗಾಗಲೇ ತನ್ನವರಾಗಿದ್ದು ಒಂದುರೀತಿ ನೆಮ್ಮದಿಯಿಂದ ಸಂಸಾರ ನಡೆಯುತ್ತಿದ್ದರೆ  ದಿಟ್ಟ ಮುಕ್ತತೆಯ ಹೆಸರಿನಲ್ಲಿ ಶಾಂತಿಯನ್ನು ಯಾಕೆ ಕದಡಬೇಕು? ಒಂದು ಬಾಂಧವ್ಯವನ್ನು ಹೆಚ್ಚುಗೊಳಿಸಲು ಇಷ್ಟೆಲ್ಲ ಮನಸ್ಸು ಬಿಚ್ಚಿಡುವ ಅಗತ್ಯವಿದೆಯೆ? ಉತ್ತರ ನೇರವಾಗಿದೆ. ಗುಡಿಸಲಿನಿಂದ ಹಿಡಿದು ಭವ್ಯ ಸೌಧವೂ “ಮನೆ” ಎನ್ನಿಸಿಕೊಳ್ಳುವಂತೆ ಕೇವಲ ವ್ಯಾವಹಾರಿಕ ಸಂಬಂಧದಿಂದ ಹಿಡಿದು ಆಧ್ಯಾತ್ಮಿಕ ಅನ್ಯೋನ್ಯತೆಯ ತನಕ ಯಾವುದೂ “ದಾಂಪತ್ಯ” ಎನ್ನಿಸಿಕೊಳ್ಳುತ್ತದೆ. ಗಂಡಹೆಂಡಿರು ಮನೆ ಕಟ್ಟುವಾಗ ಇನ್ನಷ್ಟು ಚೆನ್ನಾಗಿರಲಿ ಎಂದು ಮಿತಿಮೀರಿ ವ್ಯಯಿಸುವಂತೆ ದಾಂಪತ್ಯವು ಇನ್ನೂ ಅನ್ಯೋನ್ಯವಾಗಿರಲಿ ಎಂದು ಹೆಚ್ಚು ಪರಿಶ್ರಮ ಯಾಕೆ ಪಡಬಾರದು? ಈ ಕಾರಣದಿಂದ ದಿಟ್ಟ ಮುಕ್ತತೆ ದೈನಂದಿನ ಅಗತ್ಯವಾಗುತ್ತದೆ. ಅಷ್ಟಲ್ಲದೆ ಇಲ್ಲೊಂದು ಅನಿವಾರ್ಯತೆಯೂ ಇದೆ. ಅನ್ಯೋನ್ಯತೆಗೆ ಆಗಾಗ ದಿಟ್ಟ ಮುಕ್ತತೆಯ ಪುಷ್ಟಿಕೊಟ್ಟು ಬೆಳೆಸದಿದ್ದರೆ ಯಾವುದೇ ದಾಂಪತ್ಯದ ಉತ್ಕೃಷ್ಟತೆಯು ಕ್ರಮೇಣ ನಶಿಸುತ್ತದೆ. ಅದರ ದುಷ್ಪರಿಣಾಮವು ಮೊದಲು ಕಾಣಿಸಿಕೊಳ್ಳುವುದು ಲೈಂಗಿಕ ಸಂಬಂಧಗಳ ಮೇಲೆ – ಅದೇ ಸಲೀಲ-ಶಾಮಾ ದಾಂಪತ್ಯದಲ್ಲಿ ನಡೆಯುತ್ತಿದೆ. ಇದಕ್ಕೆ ಉಪಾಯ ಮಾಡದಿದ್ದರೆ ಬಹಳ ಬೇಗ ಸಂಬಂಧದಲ್ಲಿ ಬಿರುಕು, ಮಾನಸಿಕ ಒತ್ತಡ, ಕಾಯಿಲೆಗಳು, ಪರಸಂಬಂಧ ಇತ್ಯಾದಿಗಳಿಗೆ ಹಾದಿ ಆಗುತ್ತದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಂಗಾತಿಯೊಡನೆ ಮನೋದೌರ್ಬಲ್ಯಗಳನ್ನು ತೆರೆದು ಹಂಚಿಕೊಳ್ಳುವುದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ! 

225: ಅನ್ಯೋನ್ಯತೆಗೆ ಹುಡುಕಾಟ – 4

ದಾಂಪತ್ಯದಲ್ಲಿ ಹೆಣ್ಣುಗಂಡುಗಳು ತಮ್ಮನ್ನು ತಾವೇ ಇಷ್ಟಪಡದೆ ಸಂಗಾತಿಯ ಮೂಲಕ ಬೆಲೆ ಅರಿತುಕೊಳ್ಳಲು ತಮ್ಮ ಖಾಸಗಿ ಭಾಗಗಳನ್ನು ದಾಳವಾಗಿ ಬಳಸುತ್ತ ಕೂಟದಾಟದಲ್ಲಿ ಭಾಗವಹಿಸುತ್ತಾರೆ. ಹೀಗೆ ಸಮಗ್ರತೆಯಿಂದ ದೂರವಾಗಿ ಅನ್ಯೋನ್ಯತೆಯ ಕೊರತೆಯನ್ನು ಎದುರುಹಾಕಿಕೊಳ್ಳುತ್ತಾರೆ ಎಂಬುದು ಗೊತ್ತಾಯಿತು.

ಕಾಮಕೂಟ ನಡೆಯುವಾಗ ಶಾಮಾ ಅಲ್ಲಿರದೆ ತನ್ನ ಕಲ್ಪನೆಗಳಲ್ಲಿ ಕಳೆದುಹೋಗುತ್ತಿದ್ದಾಳೆ ಎಂದು ತಿಳಿಸಿದ್ದೆ. ಅವಳು ’ಅಲ್ಲಿ’ ಇಲ್ಲದಿರುವಾಗ ಸಲೀಲನು ಕಾಮಸಂಪರ್ಕವನ್ನು ಮುಂದುವರಿಸುವುದು ಹೇಗೆ ಸಾಧ್ಯವಾಯಿತು? ಒಂದೋ, ಶಾಮಾ ತನಗೆ ಇಷ್ಟವಿದೆಯೆಂದು ಅದ್ಭುತವಾಗಿ ನಟಿಸುತ್ತಿರಬೇಕು, ಅಥವಾ ಸಲೀಲ್ ಆಕೆಯ ಕೆಳಭಾಗಕ್ಕೆ ಎಷ್ಟು ಗಮನ ಕೊಡುತ್ತಿದ್ದಾನೆ ಎಂದರೆ ಅವಳ ಮುಖಭಾವನೆ ಅವನ ಕಣ್ಣಿಗೆ ಬೀಳುತ್ತಿಲ್ಲ! ಮುಖಭಾವನೆಗಳನ್ನು, ಅದರಲ್ಲೂ ಸೂಕ್ಷ್ಮ ಕ್ಷಣಿಕ ಭಾವನೆಗಳನ್ನು ಗಮನಿಸುವುದು ಸುಲಭದ ಮಾತಲ್ಲ. (ಅಂದಹಾಗೆ ಪಾಲ್ ಎಕ್ಮನ್ ಎಂಬ ಮನೋವಿಜ್ಞಾನಿಯು ಮುಖದಲ್ಲಿ ಮೂಡಿ 10 ಮಿಲ್ಲಿಸೆಕೆಂಡ್‌ ತನಕ ಮಾತ್ರ ಇದ್ದು ಮಾಯವಾಗುವ ಭಾವನೆಗಳ ಬಗೆಗೆ ಅಧ್ಯಯನ ಮಾಡಿದ್ದಾನೆ. ಇವೇ ನಮ್ಮ ಸಾಚಾ ಪ್ರಾಮಾಣಿಕ ಭಾವನೆಗಳು. ನಂತರ ಮೂಡುವುದೆಲ್ಲ ಕೃತಕ ಹಾಗೂ ಸಮಯಾನುಕೂಲಿ ಮಾತ್ರ! ದೀರ್ಘಕಾಲ ಚೆನ್ನಾಗಿ ಹೊಂದಿಕೊಂಡ ದಂಪತಿಗಳು ಕ್ಷಣಿಕ ಭಾವನೆಗಳನ್ನು ಓದಬಲ್ಲರು.). ಮುಖವನ್ನು ಓದುವ ಕೌಶಲ್ಯವು ಮುಖಾಮುಖಿಯಾಗಿ ಮಾತಾಡಿ ಅಭ್ಯಾಸ ಇರುವವರಿಗೆ ಮಾತ್ರ ಬರುತ್ತದೆ. ಸಲೀಲನು ಮುಖಭಾವನೆಗಳಿಗೆ ಗಮನ ಕೊಡದೆ ಪ್ರತಿಕ್ರಿಯಿಸುವುದನ್ನು ಎಲ್ಲಿಂದ ಕಲಿತ? ಈ ರೂಢಿ ಅವನ ಮೂಲ ಕುಟುಂಬದಿಂದ  ಬಂದಿರಬೇಕು. ಕುಟುಂಬದ ಹಿರಿಯರೊಡನೆ ಮುಖಾಮುಖಿಯಾಗಿ ರೂಢಿ ಇಲ್ಲದಿರುವವರು ಹೊರಗಿನವರು ತೋರಿಸುವ ಆತ್ಮೀಯತೆಗೆ ಸ್ಪಂದಿಸುವುದು ಹಾಗೂ ಸಂಬಂಧದಲ್ಲಿ ಅನ್ಯೋನ್ಯತೆಗೆ ತೆರೆದುಕೊಳ್ಳುವುದು ಕಷ್ಟಕರ ಎಂಬುದು ಅಧ್ಯಯನಗಳಲ್ಲಿ ಕಂಡುಬಂದಿದೆ.

ವಾಸ್ತವವಾಗಿ ಹೇಳಬೇಕೆಂದರೆ ಸಲೀಲನಿಗೆ ಅಷ್ಟೇ ಅಲ್ಲ, ಅನೇಕ ಕುಟುಂಬಗಳಲ್ಲಿ ಪರಸ್ಪರ ಆತ್ಮೀಯವಾಗಿರುವ ಅಭ್ಯಾಸವೇ ಇಲ್ಲ! ಈ ವಿಷಯವನ್ನು ನಮ್ಮಲ್ಲಿ ಹೆಚ್ಚಿನವರು ಒಪ್ಪಲಿಕ್ಕಿಲ್ಲ. ನಮ್ಮ ಕುಟುಂಬದ ಸದಸ್ಯರ ಜೊತೆಗೆ ಹರಟೆ, ಮಾತು, ತಮಾಷೆ ಇತ್ಯಾದಿ ವಿನಿಮಯ ಮಾಡುತ್ತ ಗಟ್ಟಿಯಾಗಿ ನಗುತ್ತ ಇರುತ್ತೇವೆ, ಅನ್ಯೋನ್ಯತೆ ಬೆಳೆಸಿಕೊಳ್ಳಲು ಇನ್ನೇನು ಬೇಕು ಎಂದು ಸಮರ್ಥಿಸಿಕೊಳ್ಳುತ್ತಾರೆ. ಅದೇನೋ ನಿಜ, ಆದರೆ ಅರ್ಧನಿಜ ಮಾತ್ರ. ಇನ್ನರ್ಧ ಏನೆಂದರೆ, ಈ ಮಾತುಕತೆಗಳಲ್ಲಿ ಹಿತಕರ ಎನ್ನಿಸುವ ಭಾವನೆಗಳನ್ನು ಮಾತ್ರ ವಿನಿಮಯ ಮಾಡುತ್ತೇವೆ. ಅಂತರಂಗದೊಳಗೆ ಅಡಗಿರುವ ಅಹಿತಕರ ಅನಿಸಿಕೆಗಳನ್ನು ಸೋಸಿ ತೆಗೆದುಬಿಡುತ್ತೇವೆ. ಉದಾಹರಣೆಗೆ, ಸಂಗಾತಿಯ ತಮಾಷೆಯ ಮಾತಿನಲ್ಲಿ ನಿಮ್ಮನ್ನು ಸೂಕ್ಷ್ಮವಾಗಿ ಗೇಲಿಮಾಡುವ ಅಥವಾ ಗೋಳಾಡಿಸುವ ಭಾವನೆಯಿದ್ದು, ಅದು ನಿಮ್ಮ ಮನಸ್ಸಿಗೆ ಚುಚ್ಚುತ್ತಿದೆ, ಆದರೂ ಸಹಿಸಿಕೊಂಡು ಸುಮ್ಮನಿರುತ್ತೀರಿ ಎಂದುಕೊಳ್ಳಿ. ಇದರ ಕೆಲವು ಕಾರಣಗಳನ್ನೂ ಅವುಗಳ ಹಿಂದಿರುವ ಅರ್ಥವನ್ನೂ ನೋಡೋಣ.  ಒಂದು: ಇದೊಂದನ್ನು ಬಿಟ್ಟರೆ ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ (ಎಂದುಕೊಂಡಿದ್ದೀರಿ). ಅರ್ಥ:  ಸಂಗಾತಿಯು ಸಂಬಂಧಕ್ಕೆ ಧಕ್ಕೆಕೊಟ್ಟು ಅಲ್ಲಾಡಿಸುತ್ತಿದ್ದರೂ ಅದನ್ನು ಸಮದೂಗಿಸುವ ಏಕಪಕ್ಷೀಯ ಜವಾಬ್ದಾರಿ ಹೊರುತ್ತಿದ್ದೀರಿ. ಎರಡು: ಇದನ್ನೆಲ್ಲ ಹೇಳಿದರೆ ಸುಮ್ಮನೆ ಜಗಳಕ್ಕೆ ದಾರಿಯಾಗುತ್ತದೆ. ಅರ್ಥ: ಒಳಗೆ ತಳಮಳ ಇದ್ದರೂ ಹೊರಗೆ ಶಾಂತಿದೂತನ/ಳ ವೇಷ ಧರಿಸುವ ನಿಮಗೆ ದಿಟ್ಟತನ ಕಡಿಮೆ. ಮೂರು: ಸಂಗಾತಿಯು ನಿಮ್ಮ ಯೋಚನೆಯನ್ನು ಇಡಿಯಾಗಿ ಅಲ್ಲಗಳೆಯುತ್ತ, ನನ್ನ ಇಂಗಿತ ಹಾಗಿಲ್ಲವೆಂದು ಸಾಧಿಸಬಹುದು ಎಂಬ ಅನಿಸಿಕೆಯಿದೆ. ಅರ್ಥ: ತಿರಸ್ಕಾರಕ್ಕೆ ಒಳಗಾಗುವ ಭಯವು ನಿಮ್ಮ ನೋವನ್ನು ಮೀರಿ ಕಾಡುತ್ತಿದೆ. ಅಂದರೆ, ತಿರಸ್ಕಾರದ ಭಯವನ್ನು ಎದುರಿಸಿ ನೋವನ್ನು ಹಂಚಿಕೊಳ್ಳುವ ಸಾಮರ್ಥ್ಯ ನಿಮಗಿಲ್ಲ. ಕಾರಣ ನಿಮ್ಮಲ್ಲೆಲ್ಲೋ  ಒಳದನಿಯಿದ್ದು ಅದು “ನೀನು ಶುದ್ಧ ಸಂಬಂಧಕ್ಕೆ ಅರ್ಹತೆ ಪಡೆದಿಲ್ಲ” ಎಂದು ಅವಮಾನಿಸುತ್ತಿದೆ. ಈ ಹೀನೈಕೆಯ ಒಳದನಿಯ ನಿಮ್ಮ ಮೂಲಕುಟುಂಬವು ದಯಪಾಲಿಸಿದೆ. ಅದನ್ನು ನೀವು “ಕುಟುಂಬದ ಗುರುತು” ಎಂದು ನಂಬಿ, ಮೈಮೇಲೆ ಹೇರಿಕೊಳ್ಳುತ್ತ ಭಾರದಿಂದ ಕುಗ್ಗುತ್ತೀರಿ! (ಎಷ್ಟೋ ಸಲ ಅನಿಷ್ಟಗಳನ್ನೇ ನಮ್ಮ ಕುಟುಂಬದ ಹೆಮ್ಮೆಯೆಂದು ಭ್ರಮಿಸುತ್ತೇವೆ. ಉದಾ: “ನಮ್ಮ ಕುಟುಂಬದಲ್ಲಿ ಪ್ರೀತಿಯಿದೆ ಎಂಬುದು ನಮಗೆಲ್ಲ ಗೊತ್ತಿದೆ. ಹಾಗಾಗಿ ತಬ್ಬಿಕೊಂಡು ಪ್ರದರ್ಶಿಸುವ ಪದ್ಧತಿ ನಮ್ಮಲ್ಲಿಲ್ಲ.” “ನಮ್ಮಲ್ಲಿ ಹಿರಿಯರರಿಗೆ ಮುಖಾಮುಖಿಯಾಗಿ ಮಾತಾಡದೆ ಇರುವುದು ಅವರಿಗೆ ಗೌರವ ತೋರಿಸಿದಂತೆ.” ನಾನು ಚಿಕ್ಕವನಿದ್ದಾಗ ಎದ್ದಕೂಡಲೇ ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕೆಂದು ಹೇಳಿಕೊಡಲಾಗಿತ್ತು. ಸಮಸ್ಯೆ ಏನೆಂದರೆ, ಒಂದು ದಿನ ತಪ್ಪಿದರೆ ಬಯ್ಗಳ ಆಶೀರ್ವಾದ ಸಿಗುತ್ತಿತ್ತು!) ಇಂಥದೇ ಒಳದನಿಯು ಸಲೀಲ್ ಹಾಗೂ ಶಾಮಾ ಇಬ್ಬರನ್ನೂ ಹಿಡಿತದಲ್ಲಿ ಇಟ್ಟುಕೊಂಡು ಆಟವಾಡಿಸುತ್ತಿದೆ. ಹಾಗಾಗಿಯೇ ಅವರು ಅನ್ಯೋನ್ಯರಾಗಲು ಸಾಧ್ಯವಾಗಿಲ್ಲ!  ಅನ್ಯೋನ್ಯತೆ ಬೆಳೆಯಬೇಕಾದರೆ ಮನದಾಳದಲ್ಲಿ ಇರುವುದನ್ನು ತಿರಸ್ಕಾರ, ಭಯ, ಟೀಕೆ, ಕೀಳುಭಾವ, ಅಥವಾ ದೂರೀಕರಣದ ಅಳುಕಿಲ್ಲದೆ ವ್ಯಕ್ತಪಡಿಸಲೇಬೇಕಾಗುತ್ತದೆ.

ಮನದಾಳದಲ್ಲಿ ನಡೆಯುವುದನ್ನು ಬಿಚ್ಚುಮನಸ್ಸಿನಿಂದ ವ್ಯಕ್ತಪಡಿಸುವ ಗುಣಕ್ಕೆ ಇಂಗ್ಲೀಷಿನಲ್ಲಿ ಚೆಂದನೆಯ ಪದವಿದೆ. ಇದಕ್ಕೆ ವಲ್ನರೆಬಿಲಿಟಿ (vulnerability) ಎನ್ನುತ್ತಾರೆ. ಅದಕ್ಕೆ ಕನ್ನಡದಲ್ಲಿ ಸೂಕ್ತ ಪದ ಸಿಗದಿದ್ದುದರಿಂದ ದಿಟ್ಟ ಮುಕ್ತತೆ, ಮುಕ್ತವಾಗಿ ಹಂಚಿಕೊಳ್ಳುವಿಕೆ, ಭಾವನೆಗಳನ್ನು ಬಯಲುಗೊಳಿಸುವುದು, ಭಾವನೆಗಳನ್ನು ಬಿಚ್ಚಿ ಬೆತ್ತಲಾಗುವುದು ಮುಂತಾದ ಪದಗಳನ್ನು ಪರ್ಯಾಯವಾಗಿ ಬಳಸುತ್ತಿದ್ದೇನೆ. ವಲ್ನರೆಬಿಲಿಟಿಯ ಬಗೆಗೆ ಬ್ರಿನೆ ಬ್ರೌನ್ ಎಂಬ ಸಂಶೋಧಕಿ ಬರೆದ ಪುಸ್ತಕವನ್ನು ಎಲ್ಲರೂ ಓದಲೇಬೇಕು (Daring Greatly: Brene Brown).

ಬ್ರೆನೆ ಬ್ರೌನ್ ಪ್ರಕಾರ ಅವಮಾನ ಹಾಗೂ ದಿಟ್ಟ ಮುಕ್ತತೆ ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಅವಮಾನವು ನಾನು ಕೀಳು, ಹಾಗಾಗಿ ಯಾವುದೇ ಬಾಂಧವ್ಯಕ್ಕೆ ಲಾಯಕ್ಕಲ್ಲ ಎನ್ನುವ ಅತ್ಯಂತ ಯಾತನಾಮಯ ಭಾವನೆ. ಇದರೊಡನೆ ತಿರಸ್ಕರಿಸಲ್ಪಡುವ ಭಯವೂ ಸೇರಿಕೊಂಡು ಅದರಿಂದ ಪಾರಾಗಲು ಒದ್ದಾಡುತ್ತೇವೆ. ನನ್ನ ನೋವು ನಿನ್ನದಕ್ಕಿಂತ ಹೆಚ್ಚು ಎಂದು ಸಂಗಾತಿಯ ಜೊತೆಗೆ ಗುದ್ದಾಡುತ್ತೇವೆ. ಇದರಿಂದ ಅನ್ಯೋನ್ಯತೆಗೆ ಹೊಡೆತ ಬೀಳುತ್ತದೆ. ಅನ್ಯೋನ್ಯತೆಯನ್ನು ಕಟ್ಟಿಕೊಳ್ಳುವುದಕ್ಕೆ ಏಕೈಕ ಮಾರ್ಗವೆಂದರೆ ಪ್ರೀತಿಸುವ ಸಂಗಾತಿಯೊಂದಿಗೆ ಮನಸ್ಸನ್ನು ಬಿಚ್ಚಿ ಬೆತ್ತಲೆ ಆಗುವುದು.

ಆದರೆ ದಿಟ್ಟ ಮುಕ್ತತೆಯನ್ನು ಆಚರಣೆಯಲ್ಲಿ ತರಲು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಅಂಕಿ-ಅಂಶಗಳ ಪ್ರಕಾರ ಅರ್ಧಕ್ಕರ್ಧ ಕುಟುಂಬಗಳು ಕಲಹದಿಂದ ಕೂಡಿ ಅನ್ಯೋನ್ಯತೆಯನ್ನು ಕಳೆದುಕೊಂಡಿವೆ. ಇಂಥ ಕುಟುಂಬಗಳಲ್ಲಿ ಬೆಳೆದ ಯುವಕ-ಯುವತಿಯರಿಗೆ ಅನ್ಯೋನ್ಯತೆಯ ಮಾದರಿ ಇಲ್ಲದಿರುವುದರಿಂದ ಅವರಿಗೆ ಭಾವನೆಗಳನ್ನು ಹಂಚಿಕೊಂಡು ಮುಕ್ತರಾಗುವುದು ಗೊತ್ತೇ ಇಲ್ಲ. ಇನ್ನೂ ಹೇಳಬೇಕೆಂದರೆ, ಇವರ ಪ್ರಕಾರ ಭಾವನೆಗಳನ್ನು ವ್ಯಕ್ತಪಡಿಸುವುದು ಎಂದರೆ ದೌರ್ಬಲ್ಯವನ್ನು ತೋರಿಸಿಕೊಟ್ಟಂತೆ. ಹಾಗಾದರೆ ಅನ್ಯೋನ್ಯತೆ ಬೆಳೆಯುವುದು ಹೇಗೆ?

ಆದುದರಿಂದ, ಬದ್ಧ ಸಂಬಂಧಗಳಲ್ಲಿ ಅನ್ಯೋನ್ಯತೆಗೆ ಹುಟ್ಟುಹಾಕಲು  ಅನಿಶ್ಚಿತತೆ, ಅಪಾಯ, ಟೀಕೆ, ತಿರಸ್ಕಾರದ ಭಯವನ್ನು ಎದುರುಹಾಕಿಕೊಳ್ಳುತ್ತ ಭಾವನಾತ್ಮಕವಾಗಿ ಬೆತ್ತಲೆ ಆಗುವುದು.ಅಗತ್ಯವಾಗುತ್ತದೆ. ಅವಮಾನ, ಹೀನೈಕೆಯಿಂದ ಹೊರಬಂದು ಮುಕ್ತರಾಗಲು ಭಾವನೆಗಳನ್ನು ಬಿಚ್ಚಿ ಬಯಲಾಗುವುದೊಂದೇ ದಾರಿ. ದಿಟ್ಟ ಮುಕ್ತತೆಯೊಂದೇ ಸಂಬಂಧವನ್ನು ಜೋಡಿಸುವ ಏಕೈಕ ಅಂಟು.

 ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕಾಮಕೂಟದಲ್ಲಿ ಹೆಣ್ಣಿನ ಶರೀರದಿಂದ ಹೆಣ್ಣಿಗಿಂತ ಗಂಡಿಗೇ ಹೆಚ್ಚು ತೃಪ್ತಿಯಾಗುತ್ತದೆ!

224: ಅನ್ಯೋನ್ಯತೆಗೆ ಹುಡುಕಾಟ – 3

ಶಾಮಾ-ಸಲೀಲ್ ದಂಪತಿಯಲ್ಲಿ ಕಾಮಾಸಕ್ತಿ ಕಡಿಮೆ ಆಗುತ್ತಿದೆ. ಶಾಮಾ ತನ್ನ ಕಲ್ಪನಾ ವಿಲಾಸ ಹಾಗೂ ತಪ್ಪಿತಸ್ಥ ಭಾವದಿಂದ ದೂರವಾಗುತ್ತಿದ್ದರೆ, ತನ್ನ ಶಾರೀರಿಕ ದೌರ್ಬಲ್ಯದ ಕಾರಣದಿಂದ ಶಾಮಾ ನಿರಾಕರಿಸಬಹುದು ಎಂಬ ಯೋಚನೆ ಸಲೀಲನಲ್ಲಿದೆ. ಇಬ್ಬರೂ ಪರಸ್ಪರರ ಬಗೆಗೆ ಗಮನ ಕೊಡುತ್ತ ಸ್ವಂತ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಂಗಾತಿಯ ಸಾನ್ನಿಧ್ಯದಲ್ಲಿ ನಿರಾಕರಣೆಯ ಮುಖದಲ್ಲೂ ಸ್ವಂತಿಕೆಯನ್ನು ಪ್ರಕಟಿಸುವ ಸವಾಲನ್ನು ಎಷ್ಟರ ಮಟ್ಟಿಗೆ ಎದುರಿಸುತ್ತಿದ್ದಾರೆ ಎಂದು ನೋಡೋಣ.

ತನ್ನ ಜನನಾಂಗ ಸ್ವಚ್ಛವಿಲ್ಲ ಎನ್ನುವ ಶಾಮಾಳ ಅನಿಸಿಕೆಗೆ ಬರೋಣ. ಜನನಾಂಗದ ಬಗೆಗಿನ ಈ ಭಾವ ಎಲ್ಲಿಂದ ಬಂತು? ಆಕೆಯ ಮೂಲ ಕುಟುಂಬದಲ್ಲಿ ಮುಟ್ಟಾದ ಹೆಂಗಸನ್ನು ಅಷ್ಟೇನೂ ಗೌರವದಿಂದ ಕಾಣುತ್ತಿರಲಿಲ್ಲ. ಹಾಗಾಗಿ ಆ ದಿನಗಳಲ್ಲಿ ತನ್ನ ಬಗೆಗಲ್ಲದೆ ಇತರರ ಬಗೆಗೂ ಕಿರಿಕಿರಿ ಆಗುತ್ತಿತ್ತು. ಕಾಲೇಜಿನಲ್ಲಿ ಗೆಳೆಯ-ಗೆಳತಿಯರ ಜೊತೆಗೆ ಬೆರೆತು ಲೈಂಗಿಕತೆಯ ಬಗೆಗೆ ಮುಕ್ತವಾಗಿ ಮಾತಾಡುವಾಗ ಒಂದು ಕಲ್ಪನೆ ಕಾಣಿಸಿಕೊಳ್ಳುತ್ತಿತ್ತು: ಆಕೆ ಏನೂ ಧರಿಸದೆ ಹಾಸಿಗೆಯಲ್ಲಿ ಇರುತ್ತಾಳೆ. ಆಗ ಅಪರಿಚಿತ ಗಂಡು ತನ್ನ ಶರೀರದ ಮೇಲೆ  ಅಧಿಕಾರ ನಡೆಸಲು ಬರುತ್ತಾನೆ. ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುತ್ತಾಳೆ. ಆಗಿನಿಂದ ಆಕೆಗೆ ಆಗಾಗ ಏಕಾಂತದಲ್ಲಿ ಬೆತ್ತಲೆ ಇರಬೇಕೆಂಬ ಬಯಕೆ ಆಗುತ್ತಿದೆ.

ಬೆತ್ತಲೆತನದ ಬಗೆಗೆ ಒಂದು ಮಾತು: ಬೆತ್ತಲೆತನವು “ನಾನು ಹೇಗಿದ್ದೇನೋ ಹಾಗೆಯೇ ಕಾಣಿಸಿಕೊಳ್ಳಬೇಕು” ಎನ್ನುವ, ತನ್ನತನವನ್ನು ಇರುವಂತೆಯೇ ತೆರೆದು ತೋರಿಸುತ್ತ ಮನೋಜ್ಞವಾಗಿ ಅನುಭವಿಸುವ ಅತ್ಯಂತ ಸಹಜವಾದ ಸ್ಥಿತಿ. ಪ್ರತಿಯೊಬ್ಬರಲ್ಲೂ ಬೆತ್ತಲೆ ಇರಬೇಕೆಂಬ ಅದಮ್ಯ ಬಯಕೆ ಇರುತ್ತದೆ. ಅನೇಕರು ಏಕಾಂತದಲ್ಲಿ ಹೀಗಿರುತ್ತಾರೆ ಕೂಡ. ಆದರೆ ಶಾಮಾ ಬೆತ್ತಲಾಗುವುದರಲ್ಲಿ ಒಂದು ವೈಚಿತ್ರ್ಯವಿದೆ. ಕಾಮಕ್ರಿಯೆಯ ಹೊರತಾಗಿ ಉಳಿದಂತೆ ಸಲೀಲನೊಡನೆ ಬೆತ್ತಲೆತನವನ್ನು ಹಂಚಿಕೊಳ್ಳಲು ಇಷ್ಟವಿಲ್ಲ. ನಗ್ನತೆಯಿಂದ ಅವನನ್ನು ಆಕರ್ಷಿಸಲು ಒಲ್ಲಳು. “ನನ್ನ ಮೈಯನ್ನು ನೀನು ಬಯಸಿದರೆ ಮಾತ್ರ ತೋರಿಸುತ್ತೇನೆ, ನನಗಾಗಿ ಅಲ್ಲ” ಎಂದಂತೆ. ಒಂದುಕಡೆ ನಗ್ನತೆಯನ್ನು ಬಯಸುವುದು, ಇನ್ನೊಂದು ಕಡೆ ಅದನ್ನು ಸಂಗಾತಿಯೊಡನೆ ಹಂಚಿಕೊಳ್ಳಲು ಹಿಂಜರಿಯುವುದು – ಇದು ತನ್ನ ಬಯಕೆಗೆ ನಿಷ್ಠಳಿಲ್ಲದೆ ಇರುವುದನ್ನು ತೋರಿಸುತ್ತದೆ. ಆಕೆ “ಸಮಗ್ರ” ಆಗುವುದನ್ನು ತಡೆಯುತ್ತದೆ. ಸಮಗ್ರತೆ ಅಂದರೇನು? ತನ್ನ ಶರೀರವನ್ನು ತನ್ನ ಬಯಕೆಯೊಡನೆ ಮೇಳೈಸುವುದು – ಹಾಡಿನ ಜೊತೆ ಸಂಗೀತವನ್ನು ಜೋಡಿಸಿದಂತೆ. ಇಲ್ಲಿ ತಾನೇನು ಆಗಬೇಕೆಂದು (ಬೆತ್ತಲೆ) ಬಯಸುತ್ತೇನೆ, ಹಾಗೂ ತನ್ನ ಬಗೆಗೆ ಏನು ಅಂದುಕೊಂಡಿದ್ದೇನೆ (ಸಂಗಾತಿಯ ಮುಂದೆ ಬೆತ್ತಲೆ ಬೇಡ) ಎನ್ನುವುದರಲ್ಲಿ ಮೇಳವಿಲ್ಲದೆ ಅಸಮಗ್ರತೆ ಇದೆ. ಹಾಗೆಯೆ, ಮುಖಮೈಥುನದಲ್ಲಿ ಶಿಶ್ನದ ದ್ರವವನ್ನು ಒಪ್ಪಿಕೊಳ್ಳುವವಳು ಯೋನಿದ್ರವಕ್ಕೆ ಬೇಡ ಎನ್ನುವುದು ಅಸಮಗ್ರತೆಯ ಸಂಕೇತ. ಇರುವ ತನ್ನದೆಲ್ಲವನ್ನೂ ಇಡಿಯಾಗಿ ನಿರಾಳತೆಯಿಂದ ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುತ್ತಾಳೆ. ಇದರರ್ಥ ಏನು? ಗಂಡಿನ ಶಿಶ್ನವು ಸ್ವಚ್ಛ, ತನ್ನ ಯೋನಿಯು ಕೊಳಕು ಎನ್ನುವುದು ಜನನಾಂಗದ ವಿಷಯವಲ್ಲ, ತನ್ನನ್ನು ತಾನೇ ಒಪ್ಪಿಕೊಳ್ಳದಿರುವ ವಿಷಯ. ಇದು ಸ್ವಚ್ಛತೆಗೆ ಸಂಬಂಧಿಸಿಲ್ಲ, ಸಮಗ್ರತೆಗೆ ಸಂಬಂಧಿಸಿದೆ.

ಇದಕ್ಕೆ ಪೂರಕವಾಗಿ ಇನ್ನೊಂದು ಅಂಶವೂ ಇದೆ. ಗಂಡುಹೆಣ್ಣುಗಳ ನಡುವಿನ ಬಹುತೇಕ ಎಲ್ಲ ಕಾಮಕೂಟಗಳಲ್ಲೂ ಗಂಡಿಗೆ ತೃಪ್ತಿ ಆಗುತ್ತದೆ. ಆದರೆ ಹೆಣ್ಣಿಗೆ ಪ್ರತಿ ಕೂಟದಲ್ಲಿ ತೃಪ್ತಿ ಆಗಲಿಕ್ಕಿಲ್ಲ. ಇದರರ್ಥ ಏನೆಂದರೆ, ಹೆಣ್ಣಿನ ಶರೀರದಿಂದ ಹೆಣ್ಣಿಗಿಂತ ಗಂಡಿಗೇ ಹೆಚ್ಚು ತೃಪ್ತಿ ಸಿಗುತ್ತದೆ! (ಇದನ್ನು ಮನವರಿಕೆ ಮಾಡಿಕೊಳ್ಳಲು ಇದಕ್ಕೆ ವಿರುದ್ಧವಾಗಿ ಕಲ್ಪಿಸಿಕೊಳ್ಳಿ: ಕೂಟದಲ್ಲಿ ಗಂಡು ಇನ್ನೂ ತೃಪ್ತಿಯನ್ನು ಹುಡುಕುತ್ತಿರುವಾಗಲೇ ಹೆಣ್ಣು ಆತನ ಶಿಶ್ನವನ್ನು ಉಪಯೋಗಿಸಿ ತೃಪ್ತಿಹೊಂದಿ ಅವನಿಂದ “ಕಳಚಿ”ಕೊಂಡರೆ ಹೇಗಿರುತ್ತದೆ?) ಶಾಮಾ ತನ್ನ ಶರೀರದ ಮೂಲಕ ಸುಖ ಪಡೆಯುವುದಕ್ಕಿಂತ ಹೆಚ್ಚು ಸುಖವನ್ನು ಸಲೀಲ್ ಅವಳ ಶರೀರದಿಂದ ಪಡೆಯುತ್ತಿದ್ದಾನೆ. ಕೆಲವೊಮ್ಮೆ ತನಗೆ ತೃಪ್ತಿ ಆಗದಿದ್ದರೂ ಅವನಿಗೆ ತೃಪ್ತಿ ಆಗುತ್ತಿರುವುದು ಅವಳಿಗೆ ಅಸಹನೆ ತರುತ್ತಿದೆ. ಇದಕ್ಕಿಂತ ಮಿಗಿಲಾಗಿ, ಆಕೆ ಸಲೀಲನಿಗೆ ಅಷ್ಟೇ ಅಲ್ಲ, ಯಾವುದೇ ಗಂಡಿಗೂ (ಒಂದು ಹೆಣ್ಣಿನಂತೆ) ಅರ್ಹಳಲ್ಲ ಎನ್ನುವ ಕೀಳುಭಾವ ಅವಳಲ್ಲಿದೆ. (ಹೀಗೆ ಸ್ವಂತ ಶರೀರದ ಬಗೆಗೆ ಕೀಳುಭಾವ ಹೊಂದಿರುವ ಹೆಂಗಸರು ನಮ್ಮಲ್ಲಿ ಸಾಕಷ್ಟಿದ್ದಾರೆ. ಉದಾಹರಣೆಗೆ, ಮಗು ಬೇಕೆಂದು ಸಂಭೋಗಕ್ಕೆ ತಯಾರಿ ನಡೆಸುವಾಗ ನೆರವೇರದೆ ಬಹಳಷ್ಟು ದಂಪತಿಗಳು ನನ್ನಲ್ಲಿ ಬಂದಿದ್ದಾರೆ. ಅವರಲ್ಲಿ ಹೆಂಡತಿಗೆ ಒಂದು ಪ್ರಶ್ನೆ ಕೇಳುತ್ತೇನೆ: “ಗಂಡ ನಿಮ್ಮಮೇಲೆ ಬಂದು ಯತ್ನಿಸುತ್ತಿರುವಾಗ ಕೆಳಗಿರುವ ನಿಮಗೆ ಹೇಗೆ ಅನ್ನಿಸುತ್ತದೆ?” ಹೆಂಡಂದಿರ ಉತ್ತರ ಸಾರ್ವತ್ರಿಕವಾಗಿದೆ: “ಸಂಭೋಗ, ಗರ್ಭಧಾರಣೆ ಎನ್ನುವ ಹಿಂಸೆ ನಿಂತರೆ ಸಾಕು ಎಂದು ಕಾಯುತ್ತ ಇರುತ್ತೇನೆ!” ಸಂಭೋಗದ ಸುಖವನ್ನು ಅನುಭವಿಸದೆ ಇರುವವರು ತಮ್ಮ ಶರೀರಕ್ಕೆ ಯಾವ ಮಟ್ಟಿನ ಅನರ್ಹತೆಯನ್ನು ದಯಪಾಲಿಸಿದ್ದಾರೆ ಎನ್ನುವುದು ಯಾರ ಊಹೆಗೂ ನಿಲುಕುವ ಮಾತು. ಅದಕ್ಕೆಂದೇ ತಮ್ಮ ಶರೀರವನ್ನು ಮಕ್ಕಳನ್ನು ಹೆರುವುದಕ್ಕೆ ಉಪಯೋಗಿಸಿಕೊಳ್ಳುವ ಉಪಾಯ ಮಾಡುತ್ತ ಸ್ವಯಂ ದೂಷಣೆಯಿಂದ ಪಾರಾಗುತ್ತಾರೆ.) ಹೀಗೆ ತನಗೇ ಸುಖ ಸಿಗದಿರುವಾಗ ತನ್ನಿಂದ ಇತರರು ಸುಖ ಪಡೆಯುತ್ತಿರುವುದು ಶಾಮಾಳಿಗೆ ಹೊಸ ಸಂಗತಿ ಏನಲ್ಲ. ಇತರರು ತನ್ನ ಉಪಯೋಗ ಪಡೆಯುತ್ತಿದ್ದರೂ ತಾನೇ ತನ್ನ ಉಪಯೋಗ ಪಡೆದುಕೊಳ್ಳುತ್ತಿಲ್ಲ ಎನ್ನುವುದು ಆಗಾಗ ಚುಚ್ಚುತ್ತ, ತನ್ನ ಬಗೆಗೂ ಇತರರ ಬಗೆಗೂ ಸಿಟ್ಟಿದೆ. ಒಟ್ಟಾರೆ ಕಾಮಕೂಟದಲ್ಲಿ ಹಾಗೂ ಅದರ ಹೊರಗೆ ಆಕೆಯದು ಒಂದೇ ಕತೆ. ಒಬ್ಬರು ಕಾಮಕ್ರಿಯೆಯಲ್ಲಿ ಹೇಗೆ ವರ್ತಿಸುತ್ತಾರೆ (ಅಥವಾ ಇಲ್ಲ) ಎನ್ನುವುದರಿಂದ ಅವರು ನಿಜಜೀವನದಲ್ಲಿ ಹೇಗೆ ಬದುಕುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಈ ಮಾತು ಸಲೀಲನಿಗೂ ಅನ್ವಯಿಸುತ್ತದೆ. ಅವನ ಶರೀರವು ಅವಳ ಶರೀರವನ್ನು ಬಯಸುತ್ತದೆಯೇ ಹೊರತು ಅವನು ಅವಳನ್ನಲ್ಲ. ಹಾಗಾಗಿಯೇ ಅವನು ಶಾರೀರಿಕ ಪರಿಪೂರ್ಣತೆಯ ಪರಿಕಲ್ಪನೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದು, ಹಾಗಿರುವುದು ಕಷ್ಟಸಾಧ್ಯವೆಂದು ಅರಿವಾದರೂ ಲೆಕ್ಕಿಸದೆ ಆತಂಕ ಹೊಂದುತ್ತ, ಮತ್ತೆ ಮತ್ತೆ ಅದೇ ದಿಕ್ಕಿನಲ್ಲಿ ವ್ಯರ್ಥ ಪ್ರಯತ್ನ ಮಾಡುತ್ತ ತನಗೆ ತಾನೇ ಬೇಡವಾಗುತ್ತಿದ್ದಾನೆ. ಅದಕ್ಕೆಂದೇ ಶಾಮಾಳ ಜನನಾಂಗವು ತನ್ನ ಜನನಾಂಗಕ್ಕೆ ಸ್ಪಂದಿಸುವ ತನಕ ಕಾಯುತ್ತಾನೆ – ಅಷ್ಟೊತ್ತಿಗೆ ಅವನ ಶರೀರದ ಕಾರ್ಯಕ್ಷಮತೆ ಕೈಕೊಡುತ್ತದೆ. ಒಂದುವೇಳೆ ಅವಳನ್ನು ಬಯಸುವ ಹಾಗಿದ್ದರೆ ಜನನಾಂಗಗಳನ್ನು ಪಕ್ಕಕ್ಕಿಟ್ಟು ಅವಳೊಡನೆ ಮಾತಾಡುತ್ತಿದ್ದ. ಅವಳ ಶರೀರವು ಸೊಬಗು ಉಳಿಸಿಕೊಂಡಿರುವುದನ್ನು ಕೂಟಕ್ಕೆ ಹೊರತಾದ ಸನ್ನಿವೇಶಗಳಲ್ಲಿ ಮೆಚ್ಚಿ ಮುಟ್ಟುತ್ತಿದ್ದ. ಅವಳ ಕಲ್ಪನೆಗಳನ್ನು ಕೇಳಿಸಿಕೊಳ್ಳುವುದರಲ್ಲಿ ಆಸಕ್ತಿ ತೋರಿಸುತ್ತಿದ್ದ.

ಹೀಗೆ ದಾಂಪತ್ಯದಲ್ಲಿ ಅನ್ಯೋನ್ಯತೆ ಇಲ್ಲವೆಂದು ಅಂದುಕೊಳ್ಳುವ ಹೆಣ್ಣುಗಂಡುಗಳು ತಮ್ಮನ್ನು ತಾವೇ ಅನ್ಯೋನ್ಯತೆಯಿಂದ ಬಯಸಲಾಗದೆ ತಮ್ಮಷ್ಟಕ್ಕೆ ತಾವೇ ಪರಕೀಯರಾಗುತ್ತಾರೆ. ಪರಿಣಾಮವಾಗಿ, ತಾನು ಯಾರೆಂದು ಸಂಗಾತಿಯಿಂದ ಗುರುತಿಸಿಕೊಳ್ಳಲು ಕೂಟ ಬಯಸುತ್ತಾರೆ. ಅನ್ಯೋನ್ಯತೆಗೆ ಹುಡುಕಾಟ ಶುರುವಾಗುವುದು ಹೀಗೆ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಚ್ಚಿನವರು ಕಾಮಕೂಟದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಹೋಗಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ.

223: ಅನ್ಯೋನ್ಯತೆಗೆ ಹುಡುಕಾಟ – 2

ಬದ್ಧಸಂಬಂಧದಲ್ಲಿ ಅನ್ಯೋನ್ಯತೆಯ ಬಗೆಗೆ ಮಾತು ಶುರುಮಾಡಿದ್ದೇವೆ. ಇದನ್ನು  ಮಧ್ಯವಯಸ್ಕ ದಂಪತಿ ಸಲೀಲ್-ಶಾಮಾ ಅವರ ಕಾಮಸಂಬಂಧದ ಮೂಲಕ ಅರ್ಥಮಾಡಿಕೊಳ್ಳುತ್ತಿದ್ದೇವೆ. ಕಾಮಕೂಟದಲ್ಲಿ ಒಬ್ಬರನ್ನೊಬ್ಬರು ಮೆಚ್ಚಿಸಲು ಹೊರಡುವಾಗ, ಹಾಗೂ ಸಂಗಾತಿಯ ಮನ ನೋಯದಂತೆ ನಡೆದುಕೊಳ್ಳುವಾಗ ತಾನು ಬಯಸುವ ಸುಖದೊಡನೆ ಸಂಪರ್ಕ ಸಾಧಿಸಲು ಆಗುವುದಿಲ್ಲ. ಆಗ ತನ್ನತನ ಹಿಂದುಳಿಯುತ್ತ ಸ್ವಂತ ಕಾಮಾಸಕ್ತಿ ಕಾಣೆಯಾಗುತ್ತದೆ ಎಂದು ಗೊತ್ತುಮಾಡಿಕೊಂಡಿದ್ದೇವೆ.

ಸಲೀಲ್–ಶಾಮಾ ದಂಪತಿಗಳ ಬಗೆಗೆ ಇನ್ನಷ್ಟು ಅರಿತುಕೊಳ್ಳೋಣ. ಶಾಮಾಳಿಗೆ ತನ್ನ ಕಲ್ಪನೆಗಳನ್ನು ಕಾಮದಾಟದಲ್ಲಿ ತರಲಾಗದೆ, ತಂದರೆ ತನ್ಮೂಲಕ ಸಲೀಲನಿಗೆ ಬಲವಂತ ಮಾಡುತ್ತಿದ್ದೇನೆ ಎಂದುಕೊಂಡು ಕಾಮಾಸಕ್ತಿಯನ್ನು ಹತ್ತಿಕ್ಕುತ್ತಿದ್ದರೆ, ತನ್ನ ಕ್ಷೀಣಿಸುತ್ತಿರುವ ದೇಹಪ್ರಜ್ಞೆಯಿಂದ ಶಾಮಾಳಿಗೆ ನಿರಾಸೆಯಾಗುತ್ತದೆಂದು ನಂಬಿ, ಅದನ್ನು ಸರಿದೂಗಿಸಲು ಆಕೆಯನ್ನು ಹೆಚ್ಚಾಗಿ ಉದ್ರೇಕಿಸುವ ಹವಣಿಕೆಯಲ್ಲಿ ಸಲೀಲನಿಗೆ ಕಾಮಾಸಕ್ತಿ ಕುಂದುತ್ತಿದೆ. ಇಲ್ಲಿ ಗಮನವು ಸಂಗಾತಿಯ ಕಡೆಗೆ ಇದೆಯೇ ಹೊರತು ತಮ್ಮ  ಕಡೆಗಿಲ್ಲ. ಹೀಗೆ ಹೆಚ್ಚಿನವರು ಸಂಗಾತಿಯ ಕಾಮಪ್ರಜ್ಞೆಗೆ ತಕ್ಕಂತೆ ತನ್ನ ಕಾಮಪ್ರಜ್ಞೆಯನ್ನು ಹೊಂದಿಸಿಕೊಳ್ಳಲು ಹೋಗಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ. ಅಥವಾ ತನ್ನ ಕಾಮಪ್ರಜ್ಞೆಗೆ ತಕ್ಕಂತೆ ಸಂಗಾತಿಯ ಕಾಮಪ್ರಜ್ಞೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊರುತ್ತಾರೆ – ಪ್ರೇಕ್ಷಣೀಯ ಪ್ರವಾಸವನ್ನು ಸ್ವಚ್ಛಂದ ತನ್ಮಯತೆಯಿಂದ ಸವಿಯುವುದನ್ನು ಬಿಟ್ಟು ಅದರ ಹೊಣೆಹೊತ್ತು ಕಾರ್ಯ ನಿರ್ವಹಿಸಿದಂತೆ.

ಅದಲ್ಲದೆ ಇಬ್ಬರಲ್ಲೂ ಒಂದಂಶ ಎದ್ದುಕಾಣುತ್ತಿದೆ: ಸಂಕೋಚ. ಶಾಮಾಳಿಗೆ ತನ್ನ ಕಲ್ಪನೆಗಳ ಬಗೆಗೆ, ಸಲೀಲನಿಗೆ ತನ್ನ ದೇಹಪ್ರಜ್ಞೆಯ ಬಗೆಗೆ ಬಾಯಿಬಿಟ್ಟು ಹೇಳಿಕೊಳ್ಳುವುದರಲ್ಲಿ  ಸಂಕೋಚವಿದೆ. ಸಂಕೋಚವು ಸಹಜ ಸ್ವಭಾವ ಎಂದು ನಾವೆಲ್ಲ ತಿಳಿದಿದ್ದೇವೆ. ವಾಸ್ತವವಾಗಿ ಇದು ಸಹಜವಲ್ಲ. ಚಿಕ್ಕ ಮಕ್ಕಳನ್ನು ಸ್ವೇಚ್ಛೆಯಾಗಿ ಬೆಳೆಯಲು ಬಿಟ್ಟು ನೋಡಿ, ಅವರು ಸಂಕೋಚ ಬೆಳೆಸಿಕೊಳ್ಳುವುದಿಲ್ಲ. ತಮಗೆ ಬೇಕೆನಿಸಿದ್ದನ್ನು ಬೇಕೆಂದೂ, ಬೇಡವೆನಿಸಿದ್ದನ್ನು ಬೇಡವೆಂದೂ ನಿಸ್ಸಂಕೋಚದಿಂದ ತೋರಿಸುತ್ತಾರೆ. ಬೇಕೆನ್ನಿಸಿದಾಗ ಬೇಡವೆಂದು ತೋರಿಸುವುದೇ ಸಂಕೋಚ. ಈ ವೈಚಿತ್ರ್ಯ ಎಲ್ಲಿಂದ ಬರುತ್ತದೆ? ಬಾಲ್ಯದಲ್ಲಿ ಬೇಕಾದುದನ್ನು ಕಾಡಿಬೇಡಿದರೂ ಸಿಗದಿರುವಾಗ, ಬದಲು ಟೀಕೆ-ಶಿಕ್ಷೆ ಸಿಕ್ಕಾಗ ಮಕ್ಕಳು ಗಾಸಿಕೊಳ್ಳುತ್ತಾರೆ. ಪರಿಣಾಮವಾಗಿ ಅನರ್ಹತೆಯ ಭಾವ ಬೆಳೆಸಿಕೊಳ್ಳುತ್ತಾರೆ. ಅದನ್ನೇ ಒಡಲಲ್ಲಿ ಇಟ್ಟುಕೊಂಡು ಬೆಳೆಯುತ್ತಾರೆ. ಪ್ರಬುದ್ಧರಾದಾಗ ಬೇಕಾದುದನ್ನು ಬೇಕೆಂದು ಹೇಳಿಕೊಳ್ಳಲು ಯೋಚಿಸುವಾಗ, ಸಿಗದಿದ್ದರೆ ಹೇಗೆ ಎಂದು ಕಲ್ಪಿಸಿಕೊಂಡು ಅನರ್ಹತೆಯ ಭಾವವು ಮರುಕಳಿಸುತ್ತದೆ. ಹಳೆಯ ಗಾಯ ಕೆದಕಲ್ಪಟ್ಟು ಹಿಂಸೆಯಾಗುತ್ತದೆ. ಹಾಗಾಗಿ ಬಾಯಿಬಿಡಲು ಹೋದರೆ ಹೃದಯ ಬಾಯಿಗೆ ಬರುತ್ತದೆ. ಇನ್ನೊಂದು ರೀತಿ ಹೇಳಬೇಕೆಂದರೆ, ಸಂಕೋಚವು ಅವಹೇಳನದ ಮರುಕಳಿಕೆ. ಸಂಕೋಚವನ್ನು ಪದೇಪದೇ ತೋರಿಸಿಕೊಳ್ಳುವವರಿಗೆ ಅವಹೇಳನಕ್ಕೆ ಒಳಗಾಗುವ ಭಯ ಪ್ರಬಲವಾಗಿರುತ್ತದೆ.

ಇನ್ನು ಶಾಮಾಳ ಕಾಮಪ್ರಜ್ಞೆಯ ಸುತ್ತಮುತ್ತಲನ್ನು ತಿಳಿಯೋಣ. ಆಕೆ ಕಾಮಾಸಕ್ತಿ ಕುಗ್ಗಿದೆಯೆಂದು ಹೇಳಿಕೊಂಡಿದ್ದಾಳೆ. ಆದರೆ ಆಕೆಯ ಕಲ್ಪನೆಗಳಲ್ಲಿ ಏನು ನಡೆಯುತ್ತದೆ? ಅಪರಿಚಿತ ಗಂಡಸೊಬ್ಬ ಮಾರ್ದವತೆಯಿಂದ ಅವಳನ್ನು ಸಮೀಪಿಸುತ್ತಾನೆ. ಆಕೆಯನ್ನು ಕಣ್ಣಿನಿಂದಲೇ ಕರೆಯುತ್ತಾನೆ.  ಕಣ್ಣಲ್ಲಿ ಕಣ್ಣಿಟ್ಟು, ಮನದಿಂದ ಮನತಟ್ಟಿ, ಮೈಯಿಂದ ಮೈ ಮುಟ್ಟುತ್ತ, ಮುಟ್ಟಿದ ಕಡೆ ಮುತ್ತಿಡುತ್ತ ಆಕೆಯನ್ನು ಅರಳಿಸುತ್ತಾನೆ.  ಆಕೆ ಕ್ರಮೇಣ ತೆರೆದುಕೊಳ್ಳುತ್ತಾಳೆ. ಅವನನ್ನು ಆಹ್ವಾನಿಸುತ್ತಾಳೆ. ಅವನು ಕಾಯಿಸುವಾಗ ಆಕೆ ಕಾತರಗೊಳ್ಳುತ್ತಾಳೆ. ಆತ ಬಂದಾಗ ಬರಮಾಡಿಕೊಳ್ಳುತ್ತ ಸಂಭ್ರಮಿಸುತ್ತಾಳೆ. ಇದರರ್ಥ ಏನು? ಅವಳ ಕುಗ್ಗಿದ ಕಾಮಾಸಕ್ತಿ ಹಾಗೂ ಕಲ್ಪನಾವಿಲಾಸ ಇವೆರಡೂ ಕಾಮಪ್ರಜ್ಞೆಯ ಬೇರೆಬೇರೆ ಮಗ್ಗಲುಗಳು. ಶಾಮಾಗೆ ಕಾಮಾಸಕ್ತಿ ಹೇರಳವಾಗಿದೆ – ಆದರೆ ವೈಯಕ್ತಿಕ ಮಗ್ಗಲಲ್ಲಿದೆ. ಸಂಗಾತಿಯೊಡನೆ ಬೆರೆಯುವಾಗ ಪಾರಸ್ಪರಿಕ ಮಗ್ಗಲಿಗೆ ಹೋಗುವ ಬದಲು ಮಟಾಮಾಯ ಆಗುತ್ತದೆ. ಯಾಕೆ? ಒಂದು ಕಾರಣ ಏನೆಂದರೆ, ಆಕೆ ಅರಳುವ ಮುಂಚೆ ಪ್ರವೇಶ ನಡೆಯುತ್ತದೆ. ಇದರಿಂದ ಆಕೆಯ ಕಲ್ಪನಾ ವಿಲಾಸಕ್ಕೆ ಭಂಗ ಬರುತ್ತದೆ. ಅದಕ್ಕಿಂತ ದೊಡ್ಡ ಕಾರಣ ಏನೆಂದರೆ, ಶಾಮಾಳ ಕಲ್ಪನಾ ವಿಲಾಸವು ಪರಪುರುಷರನ್ನು ಒಳಗೊಳ್ಳುವುದರಿಂದ ಅದರ ಬಗೆಗೆ ಸಂಗಾತಿಯೊಂದಿಗೆ ಹೇಳಿಕೊಳ್ಳಲು ಮುಜುಗರ, ಸಂಕೋಚ ಆಗುತ್ತದೆ. ಆದರೆ ಅದನ್ನು ತನ್ನಷ್ಟಕ್ಕೆ ತಾನೇ ಅನುಭವಿಸಲು ಮುಜುಗರ ಆಗುವುದಿಲ್ಲ! ಹಾಗಾಗಿ ಸಲೀಲನೊಂದಿಗೆ ಹಂಚಿಕೊಳ್ಳುವುದರಲ್ಲಿ ಹಿಂಜರಿಯುತ್ತಾಳೆ. ಒಂದುವೇಳೆ ಹಂಚಿಕೊಂಡು “ನನಗೆ ಇಂತಿಂಥದ್ದು ಬೇಕು” ಎನ್ನುವಾಗ, “ನನಗೆ ಇಂತಿಂಥವರು ಬೇಕು” ಎಂದು ಅರ್ಥ ಬರಬಹುದು. ಅದಕ್ಕೆ ಸಲೀಲನ ಪ್ರತಿಕ್ರಿಯೆ ಏನು? “ಇಂಥದ್ದೆಲ್ಲ ನಿನ್ನ ಮನಸ್ಸಿನಲ್ಲಿ ಇದೆಯೆ? ಇದನ್ನು ಎಲ್ಲಿಂದ ಕಲಿತೆ?” ಎಂಬ ಪ್ರಶ್ನೆ ಎದುರಿಸಿ ಅವಹೇಳನಕ್ಕೆ ಗುರಿಯಾಗುವ ಸಂಭವವಿದೆ – ಯಾಕೆಂದರೆ ಸಲೀಲನ ತಲೆಯಲ್ಲಿ ಏನು ಕಲ್ಪನೆಗಳಿವೆಯೋ ಗೊತ್ತಿಲ್ಲ. ಬಹುಶಃ ಏನೂ ಇರಲಿಕ್ಕಿಲ್ಲ – ಅದಕ್ಕೆಂದೇ ಅವಳು ಮನಸ್ಸು ಮಾಡುವ ತನಕ ಅವನು ಪ್ರೀತಿಯಿಂದ ಕಾಯುತ್ತ ಇರುತ್ತಾನೆ. ಅಲ್ಲದೆ, ತನ್ನ ಕಲ್ಪನಾ ವಿಲಾಸವನ್ನು ಬಹಿರಂಗಪಡಿಸಿದರೆ ತನ್ನಿಷ್ಟ ನೆರವೇರಿಸಲು ಅವನ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ. ಅದಕ್ಕೇ ನಿರುಪಾಯಳಾಗಿದ್ದಾಳೆ.

ಇನ್ನೊಂದು ವಿಷಯ: ಕೆಲವೊಮ್ಮೆ ಸಂಭೋಗ ಸಾಧ್ಯವಾಗದೆ ಇರುವಾಗ ಸಲೀಲ್ ಶಾಮಾಳಿಂದ ಮುಖಮೈಥುನ ಬಯಸುತ್ತಾನೆ. ಅವನ ಶಿಶ್ನವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು ಅವಳಿಗೂ ಇಷ್ಟ. ಆದರೆ ಯೋನಿದ್ರವದಿಂದ ಒದ್ದೆಯಾದ ಶಿಶ್ನದ ರುಚಿ ನೋಡಲು ಬೇಡವೆನ್ನುತ್ತಾಳೆ. ನೇರವಾಗಿ ಶಿಶ್ನದ ದ್ರವ ಅವಳಿಗೆ ಸಮಸ್ಯೆಯಲ್ಲ – ಇತ್ತೀಚೆಗೆ ಒಮ್ಮೆ ಬಾಯಿಯಲ್ಲೇ ಸ್ಖಲನ ಮಾಡಿಕೊಂಡಿದ್ದಾಳೆ. ಕಾರಣ? ಏನೇ ಓದಿ ಎಷ್ಟೇ ಮಾಹಿತಿ ಪಡೆದರೂ ಯೋನಿ ಸ್ವಚ್ಛವಲ್ಲ ಎಂಬ ಅನಿಸಿಕೆ ಬಲವಾಗಿದೆ. ತನ್ನ ಜನನಾಂಗಕ್ಕಿಂತ ಸಂಗಾತಿಯ ಜನನಾಂಗ ಸ್ವಚ್ಛವಾಗಿದೆ ಎಂದು ನಂಬಿದ್ದಾಳೆ. ಇದರರ್ಥ ಏನು? ತನ್ನನ್ನು ತಾನೇ ನಿರಾಕರಿಸುತ್ತ ಇದ್ದಾಳೆ. ತನಗೆ ತಾನೇ ಬೇಡವಾದರೆ ಸ್ವಂತಿಕೆ ಅರಳಲು ಹೇಗೆ ಸಾಧ್ಯ? ಸ್ವಯಂ ನಿರಾಕರಣೆ ಆಕೆಯ ಇನ್ನೊಂದು ಮಗ್ಗಲು.

ಇನ್ನು ಅವರಿಬ್ಬರ ಸ್ವಂತಿಕೆಯ ಬಗೆಗೆ ತಿಳಿಯೋಣ. ಇಬ್ಬರಲ್ಲೂ ತಕ್ಕಮಟ್ಟಿಗೆ ಸ್ವಂತಿಕೆ ಇದೆ. ಶಾಮಾಳ ಸ್ವಂತಿಕೆಯು ಆಕೆಯ ಕಲ್ಪನಾ ವಿಲಾಸದಲ್ಲಿ ಸಮೃದ್ಧವಾಗಿದೆ. ಸಲೀಲನ ಸ್ವಂತಿಕೆಯು ಆತನ ಕಾಮ ಕೆರಳಿದಾಗ ಪ್ರಕಟವಾಗುತ್ತದೆ. ಆಗ ತಾನಾಗಿಯೇ ಆಕೆಯನ್ನು ಬರಸೆಳೆಯುತ್ತಾನೆ. ಆಕೆ ತಯಾರಿಲ್ಲದಿದ್ದರೆ ತಾಳ್ಮೆಯಿಂದ ಕಾಯುತ್ತಾನೆ. ಮನಸ್ಸು ಬಿಚ್ಚಿ  ಪ್ರೀತಿಯ ಮಾತಾಡುತ್ತಾನೆ. ಆಕೆ ಬೇಡವೆಂದರೂ ತನಗೆ ಬೇಕು ಎಂದು ಒಳಗೊಳಗೆ ನಿರಾಸೆಯಾದರೂ ತಡೆದುಕೊಂಡು ಮುಂದುವರಿಯುತ್ತಾನೆ. ಇದೆಲ್ಲ ಶಾಮಾಳಿಗೆ ಅಪ್ಯಾಯಮಾನ ಆಗುತ್ತದೆ. ಅವನ ಆಹ್ವಾನಕ್ಕೆ ಕಾಯದೆ ತಾನೇ ಶುರುಮಾಡಬೇಕು ಎಂಬಾಸೆ ಆಕೆಯಲ್ಲಿ ಹುಟ್ಟುತ್ತದೆ. ಹೀಗೆ ಇಬ್ಬರ ವರ್ತನೆಗಳಲ್ಲಿ ಸ್ವಂತಿಕೆಯಿದ್ದು, ಅದನ್ನು ಪ್ರಕಟಗೊಳಿಸಿ ಕಂಗೊಳಿಸಲು ಕಾಯುತ್ತಿದ್ದಾರೆ. ಆದರೆ ಸಂಗಾತಿಯಿಂದ ಬರುವ ಒಲ್ಲದ ಭಾವವನ್ನು ಹೇಗೆ ಎದುರಿಸಬೇಕು ಎಂದು ಗೊತ್ತಾಗದೆ ಪರಸ್ಪರರ ಬಗೆಗೆ ಕಾಳಜಿ ಮಾಡುತ್ತ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಸಂಗಾತಿಯ ಸಾನ್ನಿಧ್ಯದಲ್ಲಿ ನಿರಾಕರಣೆಯ ಮುಖದಲ್ಲೂ ಸ್ವಂತಿಕೆಯನ್ನು ಪ್ರಕಟಿಸುವ ಸವಾಲನ್ನು ಹೇಗೆ ಎದುರಿಸುವುದು ಎಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹಾಸಿಗೆಯಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವಷ್ಟರಲ್ಲಿ ಕಾಮಾಸಕ್ತಿ ನೆಲಕಚ್ಚಿರುತ್ತದೆ.

222: ಅನ್ಯೋನ್ಯತೆಗೆ ಹುಡುಕಾಟ – 1

ಬದ್ಧಸಂಬಂಧದಲ್ಲಿ ಅನ್ಯೋನ್ಯತೆಯ ಬಗೆಗೆ ಮಾತು ಶುರುಮಾಡಿದ್ದೇವೆ. ಅನ್ಯೋನ್ಯತೆಯು ಸಮರ್ಪಕ ಸಂವಹನದಿಂದ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದರಿಂದ ಆಗಲೀ, ಸಂಗಾತಿಯ ಕಾಳಜಿ ಮಾಡುವುದರಿಂದ ಆಗಲೀ ಬರುವಂಥದ್ದಲ್ಲ, ಸಂಗಾತಿಯ ಸಾನ್ನಿಧ್ಯದಲ್ಲಿ ತನ್ನನ್ನು ತಾನು ಬಯಲಿಗೆ ತಂದುಕೊಳ್ಳುತ್ತ ಆತ್ಮವಿಶ್ಲೇಷಣೆ ನಡೆಸುವುದು, ತನ್ನನ್ನು ತಾನು ಕಂಡುಕೊಳ್ಳುತ್ತ, ಆ ಹೊಸ ವ್ಯಕ್ತಿತ್ವದ ಮೂಲಕ ಸಂಗಾತಿಯೊಡನೆ ಬೆರೆಯುವುದರಿಂದ ಬರುತ್ತದೆ ಎಂದು ಹೇಳುತ್ತಿದ್ದೆ. ಇದು ಹೇಗೆಂದು ಒಂದು ದೃಷ್ಟಾಂತದ ಮೂಲಕ ವಿವರಿಸುತ್ತಿದ್ದೇನೆ – ಇದಕ್ಕೂ ಡೇವಿಡ್ ಸ್ನಾರ್ಷ್‌ನ Passionate Marriage ಪುಸ್ತಕದಲ್ಲಿ ಬರುವ ಒಂದು ದೃಷ್ಟಾಂತಕ್ಕೂ ಬಹಳ ಸಾಮ್ಯವಿದೆ ಎಂದು ಮೊದಲೇ ಹೇಳಿಬಿಡುತ್ತೇನೆ.

ಐವತ್ತರ ಆಸುಪಾಸಿನಲ್ಲಿರುವ ಸಲೀಲ್ ಹಾಗೂ ಶಾಮಾ (ನಿಜವಾದ ಹೆಸರುಗಳಲ್ಲ) ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದಿವೆ. ಬರಬರುತ್ತ ಇಬ್ಬರಿಗೂ ಕಾಮಾಸಕ್ತಿ ಕಡಿಮೆ ಆಗುತ್ತಿದೆ. ಸಲೀಲ್ ಹತ್ತಿರವಾದಾಗ ಶಾಮಾ ಮನಸ್ಸಿಲ್ಲದೆ ಒಪ್ಪುತ್ತಾಳೆ. ಅವನು ಆಕೆಯ ಸ್ತನಗಳೊಂದಿಗೆ ಅಲ್ಪಸ್ಪರ್ಶ ನಡೆಸುತ್ತಾನೆ. ಉದ್ರೇಕವಾದ ಕೂಡಲೇ ನೇರವಾಗಿ ಪ್ರವೇಶ ಮಾಡುತ್ತಾನೆ – ಅಲ್ಲಿಂದ ಆಕೆಗೆ ಬೇಕೆನ್ನಿಸಲು ಶುರುವಾಗುತ್ತದೆ. ಕೆಲವೊಮ್ಮೆ ದ್ರವ ಇಲ್ಲದಿರುವಾಗ ಆತನೇ ಇಬ್ಬರ ಭಾಗಗಳಿಗೆ ಜೆಲ್ಲಿ ಲೇಪಿಸುತ್ತಾನೆ. ಅಷ್ಟೊತ್ತಿಗೆ ಅವನ ಉದ್ರೇಕ ಇಳಿದಿರುತ್ತದೆ. ಕೆಲವೊಮ್ಮೆ ಆಕೆಯನ್ನು “ತೃಪ್ತಿಪಡಿಸಲು” ಎಷ್ಟೇ ಯತ್ನಿಸಿದರೂ ಆಗುವುದಿಲ್ಲ. ಕಾರಣ ತನ್ನ ಕ್ಷೀಣಿಸುತ್ತಿರುವ ಶಾರೀರಿಕ ಸಾಮರ್ಥ್ಯ ಎಂದು ನೊಂದುಕೊಂಡಿದ್ದಾನೆ. ತನ್ನ ಪುರುಷತ್ವವು ಇತ್ತೀಚೆಗೆ ಆಕರ್ಷಣೆ ಕಳೆದುಕೊಂಡಿರುವಾಗ ಆಕೆಯ ಅಂಗಸೌಷ್ಟವವು ಮುಂಚಿನಂತೆ ಇರುವುದು ಅಸಹಾಯಕತೆಯ ಅನಿಸಿಕೆ ತರುತ್ತಿದೆ. ಹಾಗೆಂದು ಬಾಯಿಬಿಟ್ಟು ಮಾತಾಡಲು ಅವನಿಗೆ ವಿಪರೀತ ಸಂಕೋಚವಿದೆ.

ಸಲೀಲನಂತೆ ಶಾಮಾಗೂ ಹೇಳಿಕೊಳ್ಳಲು ಸಂಕೋಚ ಎನಿಸುವ ಸಮಸ್ಯೆಯೊಂದಿದೆ. ಅವಳ ತಲೆಯಲ್ಲಿ ಯಾವ್ಯಾವುದೋ ಗಂಡಸರ ಜೊತೆಗೆ ಏನೇನೋ ಮಾಡುತ್ತಿರುವಂತೆ ಕಾಮದ ಕಲ್ಪನೆಗಳು ಬರುತ್ತಿವೆ. ಕೂಟ ನಡೆಯುತ್ತಿರಬೇಕಾದರೆ ತನಗೆ ಇಷ್ಟವಾದ ದಿಕ್ಕಿನಲ್ಲಿ ಹೋಗದಿರುವಾಗ ಆಕೆಯ ಮನಸ್ಸು ಕಲ್ಪನೆಗಳ ಬೆನ್ನಟ್ಟಿ ಹೋಗುತ್ತದೆ. ಎಷ್ಟೋಸಲ ಕೂಟ ಮುಗಿದಮೇಲೆ ಕಲ್ಪನೆಗಳನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಸ್ವತಃ ಸ್ಪರ್ಶಿಸಿಕೊಳ್ಳುತ್ತ ಭಾವಪ್ರಾಪ್ತಿ ಹೊಂದಿ, ನಂತರ ತಪ್ಪಿತಸ್ಥ ಭಾವ ತಂದುಕೊಳ್ಳುತ್ತಾಳೆ. ಅದರಿಂದ ಆಕೆಯ ಭಾವನೆಗಳು ಅಸ್ತವ್ಯಸ್ತ ಆಗುತ್ತಿವೆ. ಇದರಿಂದ ಪಾರಾಗಲು ಕೂಟದ ಒಂದು ಹಂತದಲ್ಲಿ ಕ್ರಿಯೆಯಿಂದ ಕಳಚಿಕೊಳ್ಳುತ್ತ ತನ್ನಷ್ಟಕ್ಕೆ ತಾನಾಗುತ್ತಾಳೆ. ಶಾಮಾ ಕಳೆದು ಹೋಗುತ್ತಿರುವುದು ಸಲೀಲನ ಅರಿವಿಗೆ ಬರುತ್ತದೆ. ಹಾಗೆಂದು ಅವಳನ್ನು ಉಳಿಸಿಕೊಳ್ಳಲು ಅವನ ಸ್ಥೂಲಕಾಯ, ಅಸಾಮರ್ಥ್ಯ, ಅಸಹಾಯಕತೆ ಅಡ್ದಿಯಾಗುತ್ತ ಕೀಳರಿಮೆ ತರುತ್ತವೆ. ಕೊರತೆಯನ್ನು ತುಂಬಿಕೊಳ್ಳಲು ಆಕೆಯನ್ನು ತನ್ನೆಡೆ ಸೆಳೆಯಲೇಬೇಕು. ಸರಿ, ಆಕೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಲು ಶುರುಮಾಡುತ್ತಾನೆ. ತನಗೆ ಸುಖಕೊಟ್ಟು ಉಳಿಸಿಕೊಳ್ಳುವುದಕ್ಕೆ ಹೆಣಗುವುದನ್ನು ನೋಡಿ ಆಕೆಗೆ ಮರುಕ ಬರುತ್ತದೆ. ಒಲ್ಲೆಯೆನ್ನಲು ಮನಸ್ಸು ಬರುವುದಿಲ್ಲ. ಹೇಗೋ ಕೂಟ ಮುಗಿಯುತ್ತದೆ. ಸಂಗಾತಿಯ ಜೊತೆಗೆ ಬೆರೆಯಲಾರದ ವಿಷಾದಭಾವ ಇಬ್ಬರಿಗೂ ಕಾಡುತ್ತದೆ.

ಇತ್ತೀಚೆಗೆ ಶಾಮಾ ಇತರರ ಜೊತೆಗೆ ಬರುವ ಕಾಮಕಲ್ಪನೆಗಳನ್ನು ಸಲೀಲನ ಜೊತೆಗೇ ನೈಜವಾಗಿ ಅನುಭವಿಸಬೇಕು ಎಂದು ಮನಸ್ಸು ಮಾಡಿದ್ದಾಳೆ. ಹಾಗಾಗಿ ಅವಳು ಕೂಟದಲ್ಲಿ ಒಳಗೊಳ್ಳುವುದು ಸ್ವಲ್ಪ ಹೆಚ್ಚಾಗಿದೆ. ಅದರಿಂದ ಕಾಮಕೂಟವೂ ಹೆಚ್ಚುಹೆಚ್ಚಾಗಿ ನಡೆಯುತ್ತಿದೆ. ಹಾಗೆಂದು ತನಗೇನು ಬೇಕು ಅವಳು ಸ್ಪಷ್ಟವಾಗಿ ಹೇಳಿಕೊಳ್ಳದೆ ಇರುವುದರಿಂದ ಇವನಿಗೆ ಗೊತ್ತಾಗದೆ ಇನ್ನಷ್ಟು ಸಂಕಟಪಡುತ್ತಿದ್ದಾನೆ. ಸ್ಪಷ್ಟಪಡಿಸಲು ನೋಡಿದರೆ ಅವನ ಅಸಾಮರ್ಥ್ಯದ ಕಡೆಗೆ ಬೆರಳು ತೋರಿಸಿದಂತೆ ಆಗಿ ಇನ್ನಷ್ಟು ಅಂತರ್ಮುಖಿಯಾಗುತ್ತಾನೆ ಎಂಬುದು ಆಕೆಗೆ ನುಂಗಲಾರದ ತುತ್ತಾಗಿದೆ.

ಇನ್ನೊಂದು ಸಂಗತಿ ಎಂದರೆ, ಸಲೀಲನಿಗೆ ಉದ್ರೇಕವಾಗುವುದು ಬಹಳ ಬೇಗ. ಆಗವನು ಶಾಮಾಳನ್ನು ಬರಸೆಳೆಯುತ್ತಾನೆ. ಎಲ್ಲೆಲ್ಲೋ ಅಲೆಯುವ ಅವಳ ಮನಸ್ಸು ನೆಲೆನಿಲ್ಲುವ ತನಕ ತಾಳ್ಮೆಯಿಂದ ಕಾಯುತ್ತಾನೆ. ಪ್ರೀತಿ, ಕಾಳಜಿ ತೋರಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಅವನು ಮುಟ್ಟುವುದಕ್ಕೆ ಮುಂಚೆಯೇ ತನಗೆ ಉದ್ರೇಕ ಆಗಬೇಕು, ತಾನು ತಯಾರಾಗಿ ಅವನನ್ನು ಎದುರುಗೊಳ್ಳಬೇಕು, ಸಮನಾಗಿ ಸ್ಪಂದಿಸಬೇಕು ಎಂದು ಶಾಮಾಗೆ ಮಹದಾಸೆಯಿದೆ. ಹಾಗಾಗಿ ಅವನು ತನ್ನ ಶರೀರದಲ್ಲಿ ಮಾದಕತೆ (sexy) ಇರುವುದಕ್ಕಿಂತ ಹೆಚ್ಚಿಗಿದೆ ಎಂದು ತೋರಿಸಿಕೊಳ್ಳಲು ಹೊರಡುವಾಗ, ಆಕೆ “ಯೋಚಿಸಬೇಡ, ನನ್ನಲ್ಲೂ ಮಾದಕತೆ ಕಡಿಮೆಯಾಗುತ್ತಿದೆ” ಎಂದು ಭರವಸೆ ಕೊಡಲು ಹೊರಡುತ್ತಾಳೆ. ಒಬ್ಬರ ಆತಂಕಕ್ಕೆ ಇನ್ನೊಬ್ಬರು ಪ್ರತಿಕ್ರಿಯಿಸುವಾಗ ಇಬ್ಬರ ನಡುವೆ ನಡೆಯಬೇಕಾದುದು ನಡೆಯಲಾರದೆ ನರಳುತ್ತಿದೆ. ಇನ್ನು ಕೆಲವೊಮ್ಮೆ ಕೂಟ ಉತ್ಕೃಷ್ಟವಾಗಿ ಇಬ್ಬರೂ ತೃಪ್ತಿ ಹೊಂದಿದಾಗ, ಸಲೀಲ್ ಮುಂದಿನ ಕೂಟಕ್ಕೆ ಮನಸ್ಸು ಮಾಡುವುದಿಲ್ಲ – ಅದು ಮುಂಚಿನಷ್ಟು ಚೆನ್ನಾಗಿರದೆ ನಿರಾಸೆ ಆಗಬಹುದು ಎಂದು ಭಯಪಡುತ್ತಾನೆ. ಒಂದು ಯಶಸ್ವೀ ಕೂಟದ ನಂತರ ಇನ್ನೊಂದು ಯಶಸ್ವೀ ಕೂಟಕ್ಕೆ ಕಾಯುತ್ತ ಶಾಮಾಗೆ ನಿರಾಸೆ ಆಗುತ್ತದೆ.

ಸಲೀಲ್-ಶಾಮಾ ಅವರ ಸ್ಥಿತಿಯು ಅನೇಕ ದಾಂಪತ್ಯಗಳಲ್ಲಿ ಕಂಡುಬರುತ್ತದೆ. ಹೆಚ್ಚಿನವರು ಕೂಟದ ಬಗೆಗೆ ಯೋಚಿಸುತ್ತ, ಅದರಲ್ಲಿ ಏನೇನು ನಡೆಯಬಹುದು ಎಂದು ಕಲ್ಪಿಸಿಕೊಳ್ಳುತ್ತಾರೆ, ಹಾಗೂ ಅದಕ್ಕೆ ತಕ್ಕಂತೆ ತನಗೆ ಆಸಕ್ತಿ ಇಲ್ಲವೆಂದು ನಿರ್ಧರಿಸುತ್ತಾರೆ. ವಾಸ್ತವವಾಗಿ, ಕೂಟದ ಬಗೆಗೆ ಯೋಚಿಸುವುದೇ ಆಸಕ್ತಿ ಇರುವ ಲಕ್ಷಣ – ಯಾಕೆಂದರೆ ಆಗ ವಿಧವಿಧದ ಕಾಮದ ಕಲ್ಪನೆಗಳನ್ನು ತಂದುಕೊಳ್ಳುತ್ತಾರಷ್ಟೆ? ಹೀಗೆ ನಡೆದರೆ ತನಗೆ ಖುಷಿಯಾಗಿರುತ್ತದೆ, ಆದರೆ ಹಾಗೆ ನಡೆಯಲಾರದು ಎಂದುಕೊಳ್ಳುವಾಗ ಆಸಕ್ತಿ ಕುಂದುತ್ತದೆ. ಅಂದರೆ ಕಾಮಾಸಕ್ತಿ ವೈಯಕ್ತಿಕವಾಗಿ ಇರುತ್ತದಾದರೂ ಸಂಗಾತಿಯ ಜೊತೆ ಪ್ರತಿಕ್ರಿಯಿಸುವುದನ್ನು ನೆನೆಸಿಕೊಂಡರೆ ಕುಂದುತ್ತದೆ. ಇಂಥ ಸಂಗಾತಿಗಳು ಪರಸ್ಪರರನ್ನು ಮನದಲ್ಲಿ ಇಟ್ಟುಕೊಂಡು ಹಾಸಿಗೆಗೆ ಬರುತ್ತಾರೆ. ಆದರೆ ತಾನು ಹೇಗೆ ಮೈ ಸಡಿಲಬಿಟ್ಟು ಒಳಗೊಳ್ಳಬೇಕು ಎಂದು ಆರಾಮವಾಗಿ ಯೋಚಿಸುವುದರ ಬದಲು, ಸಂಗಾತಿಗೆ ಹೇಗೆ ಸ್ಪಂದಿಸಬೇಕು ಎಂದು ಬುದ್ಧಿ ಖರ್ಚು ಮಾಡುತ್ತಾರೆ. ಅವರ ಮೂಕ ಸಂವಹನದಲ್ಲಿ “ನೀನು ಹೀಗಿದ್ದೀಯಾ, ಹಾಗಾಗಿ ನಾನು ಹೇಗಿರಲಿ?” ಎಂಬ ನರಳಿಕೆಯಿದೆ.

ಇನ್ನೊಂದು ವಿಷಯ ಏನೆಂದರೆ, ಯಾವುದೇ ಇಬ್ಬರು ವ್ಯಕ್ತಿಗಳಲ್ಲಿ ಕಾಮಾಸಕ್ತಿಯು ಸಮನಾಗಿ ಇರುವುದಿಲ್ಲ. ಒಬ್ಬರಿಗೆ ಇನ್ನೊಬ್ಬರಿಗಿಂತ  ಕಾಮಾಸಕ್ತಿ ಹೆಚ್ಚಿಗಿರುತ್ತದೆ. ಕಡಿಮೆ ಇರುವವರು ತನಗೆ ಬೇಡವೆಂದು ನಿರಾಕರಿಸುವಾಗ ಹೆಚ್ಚಿಗಿರುವವರು ಅವರನ್ನು ತಯಾರು ಮಾಡಲು ಹೊರಡುತ್ತಾರೆ. ಮೈಮೇಲೆ ಬೀಳುವುದು, ಜನನಾಂಗಕ್ಕೆ ಕೈಹಾಕುವುದು ಇತ್ಯಾದಿ ನಡೆಯುತ್ತದೆ. ಕೆಲವೊಮ್ಮೆ ಇದು ಕೆಲಸ ಮಾಡಬಹುದು. ಮುಖ್ಯವಾಗಿ, ಹೆಚ್ಚು ಕಾಮಾಸಕ್ತಿ ಇರುವವರ ಮೇಲೆಯೆ ಸಂಗಾತಿಯನ್ನು ಒಲಿಸುವ ಹೊಣೆ ಬೀಳುತ್ತದೆ. ತನ್ನ ಪ್ರಯತ್ನವನ್ನು ಸಂಗಾತಿ ಒಪ್ಪಿಕೊಳ್ಳದಿದ್ದರೆ? ಆತ್ಮಶಂಕೆಯಿಂದ ಆತಂಕ ಉಂಟಾಗಿ ಅವರ ಕಾಮಾಸಕ್ತಿಯೂ ಕಡಿಮೆ ಆಗುತ್ತದೆ.

ಇದರರ್ಥ ಏನು? ಹೆಚ್ಚಿನ ಜೋಡಿಗಳಲ್ಲಿ ಕಾಮಕೂಟ ಎಂದರೆ ಸಂಗಾತಿಯನ್ನು ಮೆಚ್ಚಿಸುವುದೇ ಆಗುತ್ತದೆ. ಆಗ ತಾನು ಬಯಸುವ ಸುಖದ ಜೊತೆಗೆ ಸಂಪರ್ಕ ಸಾಧಿಸಲು ಆಗುವುದಿಲ್ಲ. ತನ್ನತನ ಹಿಂದುಳಿಯುತ್ತ ಕೊನೆಗೆ ಕಳೆದೇ ಹೋಗುತ್ತದೆ. ಆಗ ಕಾಮಕೂಟವೇ ಬೇಡವೆನ್ನಿಸುತ್ತದೆ.

ಇದರ ಬಗೆಗೆ ಇನ್ನಷ್ಟು ಮುಂದಿನ ಸಲ ತಿಳಿಯೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅಳ್ಳೆದೆಯವರಿಗೆ ಹೇಳಿ ಮಾಡಿಸಿದ್ದಲ್ಲ ಅನ್ಯೋನ್ಯತೆ!

221: ಆಧುನಿಕ ದಾಂಪತ್ಯಗಳು – 6

ಹಳೆಯ ದಂಪತಿಗಳು ಹಾಗೂ ಪ್ರೇಮಿಗಳಲ್ಲಿ ನಡೆಯುವ ಸಂವಹನದ ಬಗೆಗೆ ಹಾಗೂ ಅನ್ಯೋನ್ಯತೆಯ ಅಗತ್ಯತೆಯ ಹೋದಸಲ ಮಾತಾಡುತ್ತಿದ್ದೆವು.

ಸಾಮಾನ್ಯವಾಗಿ ಸಂವಹನ ಹಾಗೂ ಅನ್ಯೋನ್ಯತೆಯ ಬಗೆಗೆ ಸುಮಾರು ತಪ್ಪು ತಿಳಿವಳಿಕೆಗಳಿವೆ. ಅವೇನೆಂದು ಅರಿಯೋಣ.

ಒಂದು: ಸಂವಹನ ಎಂದರೆ ಮಾಹಿತಿಯ ರವಾನೆ. ಅನ್ಯೋನ್ತೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಮನಸ್ಸು ಬಿಚ್ಚಿ ಹಂಚಿಕೊಳ್ಳುತ್ತಾರೆ. ತನ್ನನ್ನೇ ತಾನು ಬಿಚ್ಚಿಕೊಳ್ಳುತ್ತ ಬಯಲಾಗುತ್ತಾರೆ. ಇದಕ್ಕೆ ಆತ್ಮಾವಲೋಕನ, ಆತ್ಮವಿಮರ್ಶೆ ಎಂದೂ ಹೆಸರಿದೆ. ವಿಪರ್ಯಾಸ ಎಂದರೆ, ಸಂವಹನವನ್ನು ಒಂಚೂರೂ ಆತ್ಮಾವಲೋಕನ ಇಲ್ಲದೆ ನಡೆಸಬಹುದು! ಉದಾಹರಣೆಗೆ, ಪರಸ್ಪರ ಕೋಪಗೊಂಡು ರೇಗುತ್ತ ಮಾತಾಡುವುದು ಅನ್ಯೋನ್ಯತೆಯಿಲ್ಲದ ಸಂವಹನ – ಇಲ್ಲಿ ರೇಗುವುದರ ಬಗೆಗೆ ಆತ್ಮಾವಲೋಕನ ಇಲ್ಲ.

ಎರಡು: ಸರಿಯಾದ ಸಂವಹನ ನಡೆಯುತ್ತಿಲ್ಲ ಎನ್ನುವ ಜೋಡಿಗಳ ನಿಜವಾದ ಸಮಸ್ಯೆ ಇರುವುದು ಅವರಲ್ಲಿ ಮಾತುಕತೆ ನಡೆಯುತ್ತಿಲ್ಲ ಅಥವಾ ಸಂದೇಶಗಳು ಮುಟ್ಟುತ್ತಿಲ್ಲ ಎನ್ನುವುದಲ್ಲ. ವ್ಯತಿರಿಕ್ತವಾಗಿ, ಸಂಗಾತಿಗಳ ನಡುವೆ ಬೇಕಾದರೂ ಬೇಡವಾದರೂ ಸದಾ ಸಂವಹನ ನಡೆಯುತ್ತಲೇ ಇದ್ದು ಸಂದೇಶಗಳು ವರಾನೆ ಆಗುತ್ತಲೇ ಇರುತ್ತವೆ. ಇದನ್ನು ಯಾವೊತ್ತೂ ನಿಲ್ಲಿಸಲು ಸಾಧ್ಯವಾಗುವುದಿಲ್ಲ –ಉದಾಹರಣೆಗೆ, “ನನ್ನ ತಲೆ ಸರಿಯಿಲ್ಲವೆಂದು ನೀನು ಅಂದಿದ್ದು ನನಗೆ ಸರಿಯಾಗಿ ಅರ್ಥವಾಗಿದೆ” ಎನ್ನುವುದೂ ಸರಿಯಾದ ಸಂವಹನ ಎನ್ನುವುದರಲ್ಲಿ ಸಂದೇಹವಿಲ್ಲ. ಹಾಗೆಂದು ಇದನ್ನು ನಿಲ್ಲಿಸಲಾಗುತ್ತದೆಯೆ? ಇಂಥ ಸಂವಹನ ನಮ್ಮ ಮನಸ್ಸಿಗೆ ಒಪ್ಪುತ್ತದೆಯೆ? ಹಾಗಾಗಿ ಮುಂದೆ ಮಾತಾಡಲು ಮನಸ್ಸಾಗುವುದಿಲ್ಲ. ಇಂಥದ್ದನ್ನು ಸಹಿಸಲಿಕ್ಕಾಗದೆ ಸಂಬಂಧಗಳು ಮುರಿದುಹೋಗುತ್ತವೆ. ಇದರರ್ಥ ಇಷ್ಟೆ: ಸಂವಹನೆ ಸಾಕಷ್ಟು ನಡೆಯುತ್ತಿದ್ದರೂ ಅದರ ಒಳಾರ್ಥವನ್ನು ಗ್ರಹಿಸಿ ಒಪ್ಪಿಕೊಳ್ಳದಿದ್ದರೆ ಅನ್ಯೋನ್ಯತೆ ಸಾಧ್ಯವಿಲ್ಲ.

ಮೂರು: ಸಂವಹನದ ಬಗೆಗೆ ಇನ್ನೊಂದು ತಪ್ಪು ಅಭಿಪ್ರಾಯ ಇದೆ. ವರ್ತನೆ-ಪ್ರತಿವರ್ತನೆಗಳ ತರುವಾಯ ಸಂಗಾತಿಯು ತಮ್ಮನ್ನು ಅರ್ಥಮಾಡಿಕೊಂಡರೆ, – ಅಥವಾ/ಹಾಗೂ ಅದು ತಮಗೆ ಹಿತವಾದರೆ ಮಾತ್ರ ಸರಿಯಾದ ಸಂವಹನ ಎಂದು ತಪ್ಪಾಗಿ ತಿಳಿಯಲಾಗುತ್ತದೆ.  ಹಾಗಾಗಿ ಹಿತವಾದ ಸಂವಹನವನ್ನು ಮಾತ್ರ ಲೆಕ್ಕಕ್ಕೆ ಹಿಡಿಯಲಾಗುತ್ತದೆ. ಸಂವಹನ ನಡೆಯುತ್ತಿಲ್ಲ ಎಂದರೆ “ನಿನ್ನ ಸಂದೇಶ ನನಗೆ ಹಿತವಾಗುತ್ತಿಲ್ಲ, ಹಾಗಾಗಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಮೆಚ್ಚುವಂಥ ಸಂದೇಶವನ್ನು ಕಳಿಸು. ಕಳಪೆ ಕಳಿಸಲು ನಿನಗೆಷ್ಟು ಧೈರ್ಯ!” ಎಂದಂತೆ. ಇದರರ್ಥ ಏನು? ಸಂಗಾತಿಯು ಸಂವಹನಿಸುವಾಗ ತನ್ನೊಳಗೆ ಉಕ್ಕೇರುವ ಅಹಿತಕರ ಭಾವನೆಗಳನ್ನು ತಡೆದುಕೊಳ್ಳುತ್ತ  ಕೇಳಿಸಿಕೊಳ್ಳದಿದ್ದರೆ ಅನ್ಯೋನ್ಯತೆ ಸಾಧ್ಯವಿಲ್ಲ.

 ನಾಲ್ಕು: ಸಂವಹನದಲ್ಲಿ ಒಂದು ನೀತಿಯಿದೆ. ನೀವು ಹೇಳುವುದು ಇನ್ನೊಬ್ಬರಿಗೆ ಅರ್ಥವಾಗದೆ ಸಮಸ್ಯೆ ಉಂಟಾಗಿದೆ ಎಂದಾಗ ಉಪಾಯ ಸುಲಭ: ನಿಮ್ಮ ಸಂದೇಶವನ್ನು “ನಾನು“ ಭಾಷೆಯಲ್ಲಿ ಕಳಿಸಿದರೆ ಆಯಿತು. ಉದಾಹರಣೆಗಾಗಿ, “ನೀನು ನನಗೇಕೆ ತೊಂದರೆ ಕೊಡುತ್ತಿದ್ದೀಯಾ?” ಎನ್ನುವುದರ ಬದಲು “ಹೀಗೆ ನಡೆಯುವುದರಿಂದ ನನಗೆ ತೊಂದರೆ ಆಗುತ್ತಿದೆ” ಇಲ್ಲಿ ವ್ಯಕ್ತಿಯನ್ನು ಆರೋಪಿಸದೆ ಕೃತ್ಯಕ್ಕೆ ಬೆರಳು ತೋರಿಸುವುದು, ಸ್ವಂತದ ನೋವನ್ನು ಹೇಳಿಕೊಳ್ಳುವುದು, ಹಾಗೂ ಸಂಗಾತಿಯಿಂದ ಬಂದಿದ್ದನ್ನು ಗಮನ ಕೊಟ್ಟು ಕೇಳುವುದು. ನೋಡಲು ಸರಳವಾಗಿ ಕಾಣುವ ಇದರಲ್ಲೂ ಒಂದು ತೊಂದರೆಯಿದೆ. ಸಂಗಾತಿಯ ವರ್ತನೆಯು ನಿಮ್ಮ ವರ್ತನೆಗೇ ಪ್ರತಿಕ್ರಿಯೆಯಾಗಿ ಬಂದಿದ್ದರೆ ಅವರು ಅದನ್ನು ಒಪ್ಪುವ ಸಾಧ್ಯತೆಯಿಲ್ಲ. ಆಗ ಸಂವಹನ ಕೆಲಸ ಕೊಡುವುದಿಲ್ಲ. ಉದಾ. ನಿಮ್ಮ ಅಲಕ್ಷ್ಯದಿಂದ ಸಂಗಾತಿಗೆ ಅನ್ಯಾಯವಾಗಿದೆ ಎಂದಿಟ್ಟುಕೊಳ್ಳಿ. ಆಗ ಅವರು ನಿಮ್ಮಮೇಲೆ ಕಿರಿಚುತ್ತಾರೆ. ಇಂಥ ಕಿರುಚುವಿಕೆಯಿಂದ ನನ್ನ ಶಾಂತಿಭಂಗ ಆಗುತ್ತದೆ ಎಂದು ನೀವೆಂದರೆ, ಅದಕ್ಕೆ ನೀವೇ ಕಾರಣ ಎಂದು ಅವರು ಇನ್ನಷ್ಟು ಕಿರಿಚಬಹುದು. ಯಾಕೆಂದರೆ, “ನಾನು” ಎಂದು ನಿಮ್ಮ ಬಗೆಗೆ ಹೇಳಿಕೊಂಡರೂ ಅದು ನಿಮ್ಮ ಅಂತರಂಗದ ಬಗೆಗೆ ಏನೂ ಹೇಳುವುದಿಲ್ಲ – ಬರೀ ಸಂಗಾತಿಯ ಬಗೆಗೆ, ಅವರಿಂದ ನಿಮ್ಮ ಮೇಲಾಗುವ ಪ್ರಭಾವದ ಬಗೆಗೆ ಹೇಳುತ್ತದೆ.  ಅನ್ಯೋನ್ಯತೆ ಹುಟ್ಟುವುದು ಅಂತರಂಗದಲ್ಲಿ. ಹಾಗಾಗಿ, “ನಿನ್ನಿಂದ ನಾನು ಹೀಗಾಗುತ್ತಿದ್ದೇನೆ/ ಹೀಗಾಗಬೇಕು” ಎನ್ನುವ ಸಂವಹನ ಕ್ರಿಯೆಯನ್ನು ಬಿಟ್ಟು ನಿಮ್ಮ ಅಂತರಂಗದ ಬಗೆಗೆ ಬಹಿರಂಗ ಮಾಡುತ್ತ, “ಇದು ನಾನು” ಎಂದು ಮಾತಾಡುವ ಕೌಶಲ್ಯ ಕಲಿಯಬೇಕಾಗುತ್ತದೆ.

ಇನ್ನು, ಅನ್ಯೋನ್ಯತೆಯ ಬಗೆಗೆ ಸ್ವಲ್ಪ ಅರಿಯೋಣ. ಅನ್ಯೋನ್ಯತೆ ಎಂದರೆ ಹೆಚ್ಚಿನವರ ಪ್ರಕಾರ ಏನು? ಸಾಮೀಪ್ಯತೆ, ಬಂಧನ, , ಒಬ್ಬರ ಸಲುವಾಗಿ ಇನ್ನೊಬ್ಬರು ಚಿಂತಿಸುವುದು, ಪರಸ್ಪರ ಕಾಳಜಿ ತೆಗೆದುಕೊಳ್ಳುವುದು ಇತ್ಯಾದಿಗಳೆ? ಇವೆಲ್ಲ ಮನಸ್ಸನ್ನು ಸಂಕಟದಿಂದ ದೂರವಾಗಿ ಆರಾಮವಾಡುವುದಕ್ಕೆ, ಒಟ್ಟಿಗೆ ವಾಸಮಾಡುವುದಕ್ಕೆ, ಬದುಕು ಮುಂದುವರಿಸುವುದಕ್ಕೆ ಹಾಗೂ ಒಬ್ಬರಿಗೊಬ್ಬರು ಅಂಟಿಕೊಂಡು ಒಂದು ಇತಿಹಾಸವನ್ನು ಸೃಷ್ಟಿಸುವುದಕ್ಕೆ ಖಂಡಿತವಾಗಿಯೂ ನೆರವಾಗುತ್ತವೆ. ಪ್ರಸ್ತುತ ಸಮಾಜದಲ್ಲಿ ಇರುವ ನಂಬಿಕೆಗಳು ಹಾಗೂ ಕಟ್ಟುಪಾಡುಗಳು (ಉದಾ. ಹಿರಿಯರಿಂದ ವ್ಯವಸ್ಥೆಗೊಂಡ ವಿವಾಹಗಳು) ಭಾವನೆಯಿಂದ ಅಪ್ರಬುದ್ಧರನ್ನೂ ದಾಂಪತ್ಯ ನಡೆಸಲು ಹಚ್ಚುತ್ತವೆ. ಬಹುಸಂಖ್ಯೆಯ ದಾಂಪತ್ಯಗಳು ನಡೆಯುವುದೇ ಹೀಗೆ. ತಾವು ಹೇಗಿದ್ದೇವೆ ಎಂದು ಸ್ವಯಂ ಅರಿವಿಲ್ಲದಿರುವ ದಂಪತಿಗಳೂ ಇಂಥ ಸಾಧಾರಣ ದಾಂಪತ್ಯವನ್ನು ನಡೆಸಿಕೊಂಡು ಹೋಗಬಲ್ಲರು. ಆದರೆ ಭಾವನಾತ್ಮಕವಾಗಿ ಮಾಗದಿರುವ ಇವ್ಯಾವುದೂ ಅನ್ಯೋನ್ಯತೆಯಲ್ಲ.

ಅನ್ಯೋನ್ಯತೆ ಎಂದರೆ ಭಾವನಾಪೂರ್ವಕವಾಗಿ ಹಾಗೂ ಬುದ್ಧಿಪೂರ್ವಕವಾಗಿ ತನ್ನ ಹಾಗೂ ಸಂಗಾತಿಯ ನಡುವಿನ ಅಂತರ ಕಾಪಾಡಿಕೊಳ್ಳುತ್ತಲೇ ಬಾಂಧವ್ಯಕ್ಕೆ ಹುಟ್ಟುಹಾಕುವ ಪ್ರಕ್ರಿಯೆ. ತನ್ನನ್ನು ತಾನು ಸ್ಪಷ್ಟೀಕರಿಸಿಕೊಳ್ಳುವುದು  ಇದರ ಮುಖ್ಯಾಂಶ. ಇದರಲ್ಲಿ ಸ್ವಯಂ ಅರಿವು, ಆತ್ಮವೀಕ್ಷಣೆ, ಆತ್ಮಚಿಂತನೆ ಸೇರಿಕೊಳ್ಳುತ್ತವೆ. ಸಂಗಾತಿಯೊಡನೆ “ಇದು ನಾನು” ಎಂದು ಬಯಲುಮಾಡುವುದು ಇಲ್ಲಿ ನಡೆಯುತ್ತದೆ. ಅನ್ಯೋನ್ಯತೆ ಎನ್ನುವುದು ಮಾನವರು ಮಾತ್ರ ಬೆಳೆಸಿಕೊಳ್ಳಲು ಸಾಧ್ಯವಾಗುವ, ಮೇಧಾವಿತನದಿಂದ ಕೂಡಿದ ಪ್ರಜ್ಞಾಪೂರ್ವಕ ಪ್ರಕ್ರಿಯೆ. (ಇದನ್ನು ಮುಂದಿನ ಕಂತುಗಳಲ್ಲಿ ಸ್ಪಷ್ಟೀಕರಿಸುತ್ತೇನೆ.)

ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದು ಹೇಗೆ? ಸಂಗಾತಿಗಳ ನಡುವಿನ ಹಲವು ವರ್ಷಗಳ ನಂಬಿಕೆ, ಪರಸ್ಪರ ಸ್ವೀಕಾರ (acceptance), ಸಹಾನುಭೂತಿ (empathy) ಪರಸ್ಪರ ಬೆಲೆಕೊಡುವುದು, ಇಬ್ಬರೂ ಪರಸ್ಪರ ಮನಸ್ಸು ತೆರೆದುಕೊಳ್ಳುವುದು – ಇಂಥವುಗಳಿಂದ ಅನ್ಯೋನ್ಯತೆ ಬೆಳೆಯುತ್ತದೆ ಎಂದು ಅನೇಕ ಮನೋವಿಜ್ಞಾನಿಗಳು ಹಾಗೂ ಮನೋಚಿಕಿತ್ಸಕರ ಅಭಿಪ್ರಾಯವಿದೆ. ಆದರೆ ಅನೇಕ ದಂಪತಿಗಳು ಹೀಗೆ ಯತ್ನಿಸಿದರೂ ಅವರಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲಾಗಿಲ್ಲ. ಡೇವಿಡ್ ಸ್ನಾರ್ಷ್ ಪ್ರಕಾರ ಅನ್ಯೋನ್ಯತೆ ಬೆಳೆಯುವುದು ಸಂಘರ್ಷಗಳು, ತನಗೆ ತಾನು ಬೆಲೆ ಕೊಡುವುದು, ಹಾಗೂ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುವ ಆಯ್ಕೆ ಮಾಡುವುದು – ಇವುಗಳಿಂದ ಸಾಧ್ಯವಿದೆ. ಅದಕ್ಕಾಗಿ ಬುದ್ಧಿ ಹಾಗೂ ಭಾವನೆಗಳಲ್ಲಿ ನಿರಂತರ ಸಮತೋಲನ ತರಬೇಕಾಗುತ್ತದೆ. ಆಗ ಸಿಗುವ ದಾಂಪತ್ಯದ ಅನ್ಯೋನ್ಯತೆಯು ಬೆಸುಗೆಗಿಂತ ಅದ್ಭುತವಾಗಿರುತ್ತದೆ. ಒಂದು ಕಡೆಗೆ ತಾನು ಯಾರು ಎಂದರಿತು, ಇನ್ನೊಂದು ಕಡೆ ಸಂಗಾತಿಗೆ ಅರಿವನ್ನು ಬೆಳೆಸಿಕೊಳ್ಳಲು ಆಸ್ಪದ ಕೊಟ್ಟು, ಇಬ್ಬರೂ ಸೇರಿ ದಾಂಪತ್ಯ ಎನ್ನುವ ಆಯಾಮದಲ್ಲಿ ತಮ್ಮ ಭಾವನಾತ್ಮಕ ಕಾಲುಗಳ ಮೇಲೆ ತಾವು ನಿಂತುಕೊಂಡು ಅನ್ಯೋನ್ಯತೆಯ ನೃತ್ಯ ಮಾಡುತ್ತಿದ್ದರೆ ಹೇಗಿರುತ್ತದೆ?

ಇಷ್ಟೆಲ್ಲ ಹೇಳಿದರೂ ಅನ್ಯೋನ್ಯತೆಯ ತಲೆಬಾಲ ಅರ್ಥವಾಗದಿದ್ದರೆ ಯೋಚಿಸಬೇಡಿ. ಅದರ ಬಗೆಗೆ ಬಹಳ ಹೇಳುವುದಿದೆ. ಅದನ್ನು ಮುಂದಿನ ಸಲದಿಂದ ಶುರುಮಾಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಮೌನದ ದಾಂಪತ್ಯಗಳಲ್ಲಿ ಒಬ್ಬರು ಹೇಳಬೇಕೆಂದಿರುವುದನ್ನು ಕೇಳಿಸಿಕೊಳ್ಳಲು ಇನ್ನೊಬ್ಬರು ತಯಾರಿಲ್ಲ!

220: ಆಧುನಿಕ ದಾಂಪತ್ಯಗಳು – 5

ಆಧುನಿಕ ದಾಂಪತ್ಯಗಳ ಬಗೆಗೆ ಚರ್ಚೆ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಅಮೆರಿಕದ ಲೈಂಗಿಕ-ದಾಂಪತ್ಯ ಚಿಕಿತ್ಸಕ ಡೇವಿಡ್ ಸ್ನಾರ್ಷ್ ನಡೆಸುವ ಕಾರ್ಯಾಗಾರಗಳ ಬಗೆಗೆ ಸ್ವಲ್ಪ ಹೇಳಬೇಕು. ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವವರಿಗೆ ಸ್ನಾರ್ಷ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಅವು ಬಹಳ ರಸವತ್ತಾಗಿ ಅರ್ಥಗರ್ಭಿತವಾಗಿವೆ.

ಅವನ ಮೊದಲ ಪ್ರಶ್ನೆಯಿದು: “ರೆಸ್ಟಾರೆಂಟ್‌ನಲ್ಲಿ ಕುಳಿತ ಜೋಡಿಗಳು ಮದುವೆ ಆಗಿದ್ದಾರೆ ಎಂದು ಹೇಗೆ ಕಂಡುಹಿಡಿಯುತ್ತೀರಿ?” ಪಾಲ್ಗೊಳ್ಳುವವರು ಸ್ವಲ್ಪ ಸಮಯ ಯೋಚನೆಯಲ್ಲಿ ಮುಳುಗುತ್ತಾರೆ. ಥಟ್ಟನೇ ಹೊಳೆಯುತ್ತದೆ: “ಮದುವೆಯಾದವರು ಪರಸ್ಪರ ಮಾತಾಡುವುದಿಲ್ಲ!”

ಅವನ ಮುಂದಿನ ಪ್ರಶ್ನೆ: “ಹಾಗಾದರೆ ಮದುವೆ ಆಗದ ಜೋಡಿಗಳನ್ನು ಹೇಗೆ ಕಂಡುಹಿಡಿಯುವಿರಿ?” ಥಟ್ಟನೆ ಹೋಲಿಕೆಯ ಉತ್ತರ ಬರುತ್ತದೆ. “ಅವರು ಪರಸ್ಪರ ತುಂಬಾ ಮಾತಾಡುತ್ತಾರೆ!” ಬೆನ್ನಹಿಂದೆ ಇನ್ನಷ್ಟು ಉತ್ತರಗಳು ಸರಸರನೇ ಬರುತ್ತವೆ. ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ… ಪರಸ್ಪರ ಸ್ಪರ್ಶಿಸುತ್ತಾರೆ. ಒಂದೇ ತಟ್ಟೆಯಿಂದ ತಿನ್ನುತ್ತಾರೆ. ಹೆಚ್ಚಾಗಿ ನಗುತ್ತ ಇರುತ್ತಾರೆ ಇತ್ಯಾದಿ.

ನಿಜ. ಸಾಕಷ್ಟು ವಿವಾಹಿತರು – ಅದರಲ್ಲಂತೂ ದಾಂಪತ್ಯದಲ್ಲಿ ಸುಮಾರು ವರ್ಷ ಕಳೆದವರು ಆರಾಮವಾಗಿರಬೇಕಾದ ಜಾಗದಲ್ಲಿ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳುತ್ತ ಮೊಬೈಲನ್ನೋ ಹತ್ತಿರವಿರುವ ಟೀವಿಯನ್ನು ನೋಡುತ್ತಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಒಡನಾಡಿಗಳು ಹಾಗೂ ಪ್ರೇಮಿಗಳು ಒಂದೇಸಮನೆ ಹರಟೆ ಹೊಡೆಯುತ್ತ, ನಗುತ್ತ ಒಂದು ಕಫ್ ಕಾಫಿಯ ಮೇಲೆ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಇವರು ಭೇಟಿಯ ಶೇ. 85ರಷ್ಟು ಹೊತ್ತು ಮುಖಾಮುಖಿಯಾಗಿ ನೋಡುತ್ತ ಸಮಯ ಕಳೆಯುವುದು ಕಂಡುಬಂದಿದೆ. ಅದಿರಲಿ, ಯುವಪ್ರೇಮಿಗಳು ಯಾಕೆ ಹೀಗೆ ಮಾಡುತ್ತಾರೆ? ಏನು ಪಡೆಯುತ್ತಾರೆ? ಆ ವಯಸ್ಸಿನಲ್ಲಿ ಅವರಿಗೆ ತಮ್ಮ ಸ್ವಂತಿಕೆಯ ಬಗೆಗೆ ವಿಶೇಷ ಅರಿವಿರುವುದಿಲ್ಲ. ಅದಕ್ಕೇ ಅಷ್ಟೊಂದು ಅಲಂಕಾರ ಮಾಡಿಕೊಂಡು ಸಂಗಾತಿಯ ಜೊತೆಗೆ ಇರುತ್ತಾರೆ. ಪ್ರೇಮಿಗಳು ಮನಸ್ಸಿನ ಆತಂಕ, ಭೀತಿಗಳನ್ನು ತೆಗೆದುಹಾಕಿ ಬೇಕಾದ ಸಂಭಾಷಣೆಯನ್ನಷ್ಟೇ ಕೈಗೆತ್ತಿಕೊಳ್ಳುತ್ತ, ಪರಸ್ಪರರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತ ಮಹತ್ವ ಪಡೆದುಕೊಳ್ಳುತ್ತಾರೆ. ತಮ್ಮಿಬ್ಬರಲ್ಲಿರುವ ಸಮಾನ ಗುಣಗಳನ್ನೂ ಅಭಿರುಚಿಗಳನ್ನೂ ಮುಂದಿಡುತ್ತ ಹತ್ತಿರವಾಗುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತ, ಭಿನ್ನಾಭಿಪ್ರಾಯಗಳನ್ನು ಎಚ್ಚರಿಕೆಯಿಂದ ದೂರವಿಡುತ್ತಾರೆ – ಮುಂದಿನ ಸಲ ಭೇಟಿಯಾಗುವ ಅವಕಾಶ ಉಳಿಸಿಕೊಳ್ಳಬೇಕಲ್ಲವೆ? ಹಾಗಾಗಿಯೇ ಒಂದೇಸಮನೆ ಗಂಟೆಗಟ್ಟಲೆ ಹರಟುತ್ತ, ಮುಖಕ್ಕೆ ಮುಖ ಕೊಟ್ಟು ನಗುತ್ತ ಇರುತ್ತಾರೆ.

ಮುಂದಿನ ಪ್ರಶ್ನೆ: “ಮದುವೆಯಾದವರು ಯಾಕೆ ಮಾತಾಡುವುದಿಲ್ಲ?” ಉತ್ತರಗಳು ಒಂದೊಂದಾಗಿ ತೊಟ್ಟಿಕ್ಕುತ್ತವೆ. ಪಾಲ್ಗೊಳ್ಳುವವರಲ್ಲಿ ಕೆಲವರು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುತ್ತಾರೆ. ಹೌದು, ನಾವೇಕೆ ಮದುವೆಯಾದ ಮೇಲೆ ಮಾತು ಬಿಟ್ಟಿದ್ದೇವೆ? ಮೊದಲು ಹೊಳೆಯುವುದು: ಮಾತಾಡಲು ಏನಿರುತ್ತದೆ? ಎಲ್ಲಾ ಮಾತು ಮುಗಿದಿರುತ್ತದೆ. ಇನ್ನು ಕೆಲವರು ಬುದ್ಧಿವಂತರ ಪ್ರಕಾರ ಅವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ, ಹಾಗಾಗಿ ಏನೂ ಮಾತು ಉಳಿದಿರುವುದಿಲ್ಲ. ಆದರೆ ಅವರ ತಣ್ಣಗಿನ ಮುಖಭಾವವನ್ನು ನೋಡಿದರೆ ಅರ್ಥಮಾಡಿಕೊಂಡಿರುವಂತೆ ಅನ್ನಿಸುವುದಿಲ್ಲ. ತಮ್ಮ ನಡುವಿನ ಮೌನವನ್ನು  ಅವರೇ ಹುಟ್ಟುಹಾಕಿರುವಂತೆ ಕಾಣುತ್ತದೆಯೇ ವಿನಾ ಬೆಚ್ಚಗಿನ ಶಾಂತಿ ಕಾಣುವುದಿಲ್ಲ. ಇಬ್ಬರ ನಡುವೆ ಸಂವಹನ (communication) ವಿಫಲವಾಗಿ ಮಾತು ಸೋತು ನೆಲಕಚ್ಚಿ ಮೌನವಾಗಿದ್ದಾರೆ.

ಈಗ ನೀವೇ ಈ ಪ್ರಶ್ನೆಯನ್ನು ಕೇಳಿಕೊಳ್ಳಿ: ಮದುವೆಯಾದವರು ಯಾಕೆ ಮಾತಾಡುವುದಿಲ್ಲ? ನೀವೊಂದುವೇಳೆ ಮದುವೆ ಆಗಿದ್ದರೆ ನಿಮ್ಮ ಅನುಭವದಿಂದ ಒಂದು ಸಲ ಪರೀಕ್ಷಿಸಿ. ನಿಮ್ಮಿಬ್ಬರ ನಡುವೆ ಮೌನ ಇರುವುದು ಎಲ್ಲ ಮಾತು ಮುಗಿದಿರುವುದರಿಂದ ಅಲ್ಲ. ಅದಕ್ಕೆ ಇನ್ನೊಂದು ಕಾರಣವಿದೆ: ಸಂಗಾತಿ ಹೇಳಬೇಕೆಂದಿರುವುದನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲ!

ಈಗ ಅತಿಮುಖ್ಯ ಪ್ರಶ್ನೆ: “ನಿಮ್ಮ ಸಂಗಾತಿ ಹೇಳುವುದನ್ನು ಕೇಳಲು ಇಷ್ಟವಿಲ್ಲವೆಂದು ನಿಮಗೆ ಹೇಗೆ ಗೊತ್ತು?” ಅದಕ್ಕೆ ನೀವು, “ಯಾಕೆಂದರೆ ನನಗೆ ಈಗಾಗಲೇ ಗೊತ್ತು ನಮ್ಮಲ್ಲಿ ಸಂವಹನ ನಡೆಯುತ್ತಿಲ್ಲ ಅಂತ.” ಎನ್ನುತ್ತೀರಿ. ಸಂವಹನ ನಿಜವಾಗಲೂ ನಡೆಯದಿದ್ದಲ್ಲಿ ನೀವು ಕೇಳಿಸಿಕೊಳ್ಳಲು ಇಷ್ಟವಿಲ್ಲ ಎಂದು ಹೇಗೆ ಗೊತ್ತಾಗುತ್ತದೆ? ಇದರರ್ಥ ಏನೆಂದರೆ, ಇಲ್ಲಿ ಸಂವಹನ ನಡೆಯುತ್ತಿಲ್ಲ ಅಂತಲ್ಲ, ಬದಲಾಗಿ ಮೌನ ಸಂಭಾಷಣೆ ನಡೆಯುತ್ತಿದೆ. ಮೌನವೂ ಒಂದು ಒಳ್ಳೆಯ ಸಂವಹನ.  “ನನ್ನ ಮನದಲ್ಲಿ ಇರುವುದನ್ನು ಕೇಳಿಸಿಕೊಳ್ಳಲು ಸಂಗಾತಿ ತಯಾರಿಲ್ಲ ಎನ್ನುವುದು ನನಗೆ ಗೊತ್ತು” ಎಂಬ ಮಾತು ಇಲ್ಲಿ ಸುತ್ತುತ್ತಿದೆ.

ಈಗ ನವದಾಂಪತ್ಯಗಳಿಗೆ ಬರೋಣ. ಸಂಗಾತಿಯ ಆಯ್ಕೆಗೆ ವೈಯಕ್ತಿಕ ವೃತ್ತಿ ಹಾಗೂ ಆರ್ಥಿಕ-ಸಾಮಾಜಿಕ ಅಂಶಗಳ ಜೊತೆಗೆ ಸಮಾನ ಗುಣಗಳೂ ಅಭಿರುಚಿಗಳೂ ಆಧಾರವಾಗುತ್ತಿವೆ. ಇದರ ತಳ ಸೋಸಿದರೆ ಸಿಗಬಹುದು? ಮದುವೆ ಎಂದರೆ ಏನೂ ಎಡವಟ್ಟು ಆಗಬಾರದು, ಎಲ್ಲವೂ ಸುರಕ್ಷಿತ, ಸುಖಕರ ಆಗಬೇಕು ಎನ್ನುವ ಅಭಿಮತ ಜನರಲ್ಲಿದೆ – ಇದರ ಹಿಂದೆ ನಿಶ್ಚಿತತೆ ಇಲ್ಲದಿದ್ದರೆ ಸಂಬಂಧ ಮುರಿದು ಬೀಳಬಹುದು ಎಂಬ ಭಯವಿದೆ. ಆದರೆ ನನ್ನ ಪ್ರಶ್ನೆ ಏನೆಂದರೆ, ಎಲ್ಲವೂ ಸುರಕ್ಷಿತ, ಸುಖಕರ ಎಂದು ನಿರೀಕ್ಷೆಯ ಪ್ರಕಾರ ಕೂಟ, ಜವಾಬ್ದಾರಿ, ಮಕ್ಕಳು ಎಂದು ಹೊರಟರೆ ಹೊಸದನ್ನು ಮಾಡಲು, ಮಾತಾಡಲು ಏನು ಉಳಿಯಿತು? ಅದಕ್ಕೇ ಮದುವೆಯಾದವರು ರೆಸ್ಟಾರೆಂಟ್‌ನಲ್ಲಿ  ಹಾಗೆ ವರ್ತಿಸುವುದು!

ಇಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಮದುವೆಯು ಲೈಂಗಿಕ ಕ್ರಿಯೆಗೆ ಅರ್ಹತಾ ಪತ್ರ ಕೊಡುತ್ತದೆ. ಹಾಗಾಗಿ ಮದುವೆಯ ನಂತರ ಲೈಂಗಿಕ ಕ್ರಿಯೆ ನಡೆದೇ ನಡೆಯುತ್ತದೆ ಎಂದು ನಂಬುತ್ತ ಒಂದು ರೀತಿಯ ನಿಶ್ಚಿತತೆ ಅಥವಾ ಖಾತರಿತನದ ವಿಶ್ವಾಸದಿಂದ ಮುಂದುವರಿಯುತ್ತೇವೆ. ಲೈಂಗಿಕ ಕ್ರಿಯೆ ನಡೆಯುತ್ತದೇನೋ  ನಿಜ, ಆದರೆ ಅದರಲ್ಲಿ ಸಿಗುವ ಸುಖ ಮೆಚ್ಚುವಂಥದ್ದು, ಹಾಗೂ ತನಗೆ ಬೇಕಾದುದೇ ಆಗಿರುತ್ತದೆ ಎಂಬುದು ಏನು ಖಾತರಿ? ಉದಾಹರಣೆಗೆ, ಗಂಡ ನಾವೀಗ ಕೂಡಬೇಕು ಎಂದು ಪ್ರಕಟಪಡಿಸಿದರೆ ಹೆಂಡತಿಗೆ ಏನು ಆಯ್ಕೆಯಿದೆ? ಒಂದು, ಅವನಿಗೆ ನೇರವಾದ ಸೆಕ್ಸ್ ಬೇಕು – ಅದು ಇವಳಿಗಾಗದು. ಇವಳಿಗೆ ಕೂಟದ ಮುನ್ನ ಭಾವಬಾಂಧವ್ಯ ಬೆಳೆಸಿಕೊಳ್ಳಬೇಕು. ಅಷ್ಟೊತ್ತಿಗೆ ಅವನಿಗೆ ಉದ್ರೇಕ ಇಳಿದುಬಿಡುತ್ತದೆ. ಹಾಗಾಗಿ ಕೂಟ ನಿಶ್ಚಿತವಾಗಿ ನಡೆದರೂ ತನಗೇನು ಬೇಕೋ ಅದು ಸಿಗುವುದಿಲ್ಲ. ಒಬ್ಬರು ಬದಲಾವಣೆ ಸೂಚಿಸಿದರೆ ಇನ್ನೊಬ್ಬರು ಮುರುಟಿಕೊಳ್ಳುತ್ತಾರೆ. ಆಗ ಏನೂ ನಡೆಯದೆ ಇರುವುದನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೇ ನಡೆಯುವುದನ್ನೇ ಅರೆಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.  ಇಂಥವರು ಮಗುವಿನ ಸಹಿತ ರೆಸ್ಟಾರೆಂಟ್‌ನಲ್ಲಿ ಕುಳಿತರೆ ಮುಖಾಮುಖಿ ಕೂತು ನಗಲು ಸಾಧ್ಯವಿದೆಯೆ?

ಇದರರ್ಥ ಏನು? ಒಂದುಸಲ ನೀವು ಮದುವೆ ಅಂತ ಆಗಿಬಿಟ್ಟರೆ ನಿಶ್ಚಿತವಾದ ಕೆಲವು ಕೊಡುಗೆಗಳು ಸಿಗುತ್ತವೆ. ಆದರೆ ಬಾಂಧವ್ಯವು ಬಳುವಳಿಯಾಗಿ ಬರುವುದಿಲ್ಲ. ಅದನ್ನು ಪ್ರಯತ್ನಪಟ್ಟು ಕಟ್ಟಿಕೊಳ್ಳಬೇಕಾಗುತ್ತದೆ. ಬಾಂಧವ್ಯಕ್ಕೆ ಅಡಿಪಾಯವಾಗಿ ಮೊದಲು ಅನ್ಯೋನ್ಯತೆಯನ್ನು (intimacy) ಬೆಳೆಸಿಕೊಳ್ಳ ಬೇಕಾಗುತ್ತದೆ. ಅನ್ಯೋನ್ಯತೆಯನ್ನು ಸಾಧಿಸಿದ  ಸಂಗಾತಿಗಳು ರೆಸ್ಟಾರೆಂಟ್‌ನಲ್ಲಿ ಕುಳಿತುಕೊಂಡು ಮುಂಚಿನ ರಾತ್ರಿ ನಡೆಸಿದ ಕಾಮಕೂಟದ ಬಗೆಗೆ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಾರೆ. ನಗುತ್ತಾರೆ.  

ಆಧುನಿಕ ದಾಂಪತ್ಯಗಳಲ್ಲಿ ಅನ್ಯೋನ್ಯತೆಯ ಬಗೆಗೆ ಮುಂದಿನ ಸಲ ತಿಳಿಯೋಣವಂತೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.