ಸುಖೀ ದಾಂಪತ್ಯ ೧೬೨
ಕೆಲವು ಕಾಲದ ದಾಂಪತ್ಯದ ನಂತರ ಕಾಮಾಸಕ್ತಿ ಹಾಗೂ ಕಾಮತೃಪ್ತಿ ಕಡಿಮೆಯಾಗಲು ಏನು ಕಾರಣ?
೧೬೨: ವೈವಾಹಿಕ ಲೈಂಗಿಕತೆ
ಎದುರು ಕುಳಿತ ಜೋಡಿಯನ್ನು ನೋಡುತ್ತ ಅವರ ಮುಖಭಾವನೆಗಳನ್ನು ಗಮನಿಸಿದೆ. ಇಬ್ಬರೂ ಸಪ್ಪಗಾಗಿ ಕಂಗೆಟ್ಟು ಮಾತಿಲ್ಲದೆ ಸ್ವಲ್ಪ ಅಂತರವಿಟ್ಟು ಕುಳಿತಿದ್ದರು. ಅವರ ಸಮಸ್ಯೆ ಏನೆಂದರೆ, ಇತ್ತೀಚೆಗೆ ಪರಸ್ಪರರಲ್ಲಿ ಕಾಮಾಸಕ್ತಿ ಬರುತ್ತಿಲ್ಲ. ಒಬ್ಬರು ತಯಾರಾದಾಗ ಇನ್ನೊಬ್ಬರು ಒಲ್ಲೆಯೆನ್ನುತ್ತಾರೆ. ಅಪರೂಪಕ್ಕೆ ಕಾಮಕೂಟ ನಡೆದಾಗಲೂ ಅವನ ಕಾಮ ಅವನಿಗೆ, ಇವಳ ಕಾಮ ಇವಳಿಗೆ ಎನ್ನುವಂತಿದೆ. ಆಸೆ ಬತ್ತಿಹೋಗಿದೆ. ಹಾಗೆಂದು ಕಾಮದಾಸೆ ಇಲ್ಲವೇ ಇಲ್ಲ ಎಂದಿಲ್ಲ. ಆಕರ್ಷಕ ಹೆಣ್ಣನ್ನು ಕಂಡರೆ ಅವನಿಗೂ, ಲಕ್ಷಣವಾದ ಗಂಡನ್ನು ಕಂಡರೆ ಅವಳಿಗೂ ಆಸೆ ಹುಟ್ಟುತ್ತಿದೆ. ಆತಂಕದಿಂದ ನನ್ನ ಹತ್ತಿರ ಬಂದಿದ್ದಾರೆ. ಅನುಕೂಲಕ್ಕಾಗಿ ಅವರನ್ನು ಲವ ಕುಮಾರ ಹಾಗೂ ಲೇಖಾ ಎಂದು ಹೆಸರಿಸೋಣ.
“ನಾಲ್ಕು ವರ್ಷದ ಹಿಂದೆ ಎಷ್ಟು ಚೆನ್ನಾಗಿ ಇದ್ದಿದ್ದು ಈಗ ಸಿಕ್ಕಾಪಟ್ಟೆ ಕಡಿಮೆ ಆಗಿರುವುದು ಬೇಜಾರಾಗಿದೆ.” ಎಂದು ಲವ ಹೇಳಿದ. ಅವನ ಮಾತಿಗೆ ಲೇಖಾ ತಲೆ ಅಲ್ಲಾಡಿಸಿದಳು. ನನಗೆ ನೆನಪಾಯಿತು.
ನಾಲ್ಕು ವರ್ಷದ ಹಿಂದೆ ಇದೇ ತರುಣ ದಂಪತಿ ನನ್ನ ಬಳಿ ಬಂದಿದ್ದರು. ಅದೇ ಹೊಸದಾಗಿ ಮದುವೆಯಾಗಿತ್ತು. ಮಧುಚಂದ್ರದ ನೆಪದಲ್ಲಿ ಇಡೀ ಯೂರೋಪ್ ಸುತ್ತಿದ್ದರು. ಪ್ರವಾಸದ ಅನುಭವ ಅದ್ಭುತವಾದರೂ ಪರಸ್ಪರರ ಅನುಭವ ಪೂರ್ತಿ ಆಗಿರಲಿಲ್ಲ. ಕಾಮೋದ್ರೇಕ ಹುಚ್ಚೇಳುವಷ್ಟು ಇದ್ದರೂ ಸಂಭೋಗ ಹೇಗೆ ಮಾಡಬೇಕೆಂದು ತಿಳಿಯದೆ ಇತರ ರೀತಿಗಳಲ್ಲಿ ತೃಪ್ತಿ ಹೊಂದುತ್ತ, ಊರಿಗೆ ಹಿಂದಿರುಗಿದ ಮರುದಿನವೇ ನನ್ನಲ್ಲಿ ಬಂದಿದ್ದರು. ಆಗ ಅವರಿಬ್ಬರೂ ನನ್ನೆದುರು ಕುಳಿತಿದ್ದ ದೃಶ್ಯ ಕಣ್ಣಮುಂದೆ ಗೋಚರಿಸಿತು. ಲವ ಆತ್ಮವಿಶ್ವಾಸದಿಂದ ನೇರವಾಗಿ ಕುಳಿತು ಲೇಖಾಳ ಕಡೆಗೆ ವಾರೆನೋಟದಿಂದ ನೋಡುವಾಗ ಲೇಖಾ ಲವನ ಭುಜಕ್ಕೆ ಒರಗಿ ಕುಳಿತುಕೊಂಡು ನಾನು ಹೇಳುವುದನ್ನು ಸಂಗೀತ ಕೇಳುವಂತೆ ಕೇಳುತ್ತಿದ್ದಳು. ಹೆಣ್ಣಿನ ಜನನಾಂಗದ ಮಾದರಿಯನ್ನು ಮುಂದಿಟ್ಟುಕೊಂಡು, ಎರಡು ಹೆಣ್ಣುಗಂಡು ಬೊಂಬೆಗಳ ಸಹಾಯದಿಂದ ಆಸನದ ತಿಳಿವಳಿಕೆ ಕೊಡುತ್ತಿರುವಾಗ ಅವರಿಬ್ಬರೂ ಪರಸ್ಪರರ ಬೆರಳುಗಳನ್ನು ಹೆಣೆದುಕೊಂಡು, ನನ್ನ ವಿವರಕ್ಕೆ ತಮ್ಮದೇ ಆದ ಭಾವಾರ್ಥ ಹಚ್ಚುತ್ತ, ರಹಸ್ಯಮಯ ನಸುನಗೆಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ವಿಷಯ ತಿಳಿದುಕೊಂಡ ನಂತರ ಆತುರದಿಂದ ಜಾಗ ಖಾಲಿಮಾಡಿದ್ದರು. ಮರುದಿನವೆ ಕರೆಮಾಡಿ, ತಾವು ಬಂದಿದ್ದ ಉದ್ದೇಶ ಪೂರ್ತಿಯಾಯಿತೆಂದು ಉತ್ಸಾಹದಿಂದ ತಿಳಿಸಿದ್ದರು. ದಿನಕ್ಕೆ ಎಷ್ಟು ಸಲ ಸಂಭೋಗ ಮಾಡಿದರೆ ಪರವಾಗಿಲ್ಲ ಎಂದೂ ಕೇಳಿದ್ದರು. ಆಗ ಹಾಗಿದ್ದವರು ಈಗ ಹೀಗೆ ಆಗಿದ್ದಾರೆ. ಮರುಕವಾಯಿತು.
ಅವರ ಕಾಮಾಸಕ್ತಿ ಕಡಿಮೆ ಆಗಿರುವುದಕ್ಕೆ ಏನು ಕಾರಣ ಇರಬಹುದು ಎಂದು ವಿಚಾರಿಸಿದೆ. ಸುಮಾರು ಸಂದೇಹಗಳು ಹೊರಬಂದುವು. ಲವ ತನ್ನ ಡೊಳ್ಳು ಹೊಟ್ಟೆಯ ಮೇಲೆ ಕೈ ಆಡಿಸಿಕೊಳ್ಳುತ್ತ, ಜಿಮ್ಗೆ ಹೋಗಿ ಸುಮಾರು ಕಾಲವಾಯಿತು ಎಂದ. ಲೇಖಾ ತನ್ನ ಬತ್ತಿದ ಎದೆಯನ್ನು ನೋಡಿಕೊಳ್ಳುತ್ತ ಮಗುವಾದ ನಂತರ ತನ್ನ ಮೈಕಟ್ಟು ಬದಲಾಗಿದೆ ಎಂದಳು. ಇದರಿಂದ ಸಂಗಾತಿಯಲ್ಲಿ ಆಕರ್ಷಣೆ ಕಳೆದುಕೊಂಡಿದ್ದೀರಿ ಎಂದು ಅನ್ನಿಸುತ್ತಿದೆಯೇ ಎಂದು ಕೇಳಿದಾಗ, ತಮ್ಮಷ್ಟಕ್ಕೆ ತಾವು ಅಸಹ್ಯವಾಗಿ ಕಾಣುತ್ತಿದ್ದೇವೆ ಎಂದರೇ ವಿನಾ ಸಂಗಾತಿ ಚೆನ್ನಾಗಿ ಕಾಣುತ್ತಿಲ್ಲ ಎನ್ನಲಿಲ್ಲ. ತಮಗಿಂತ ಹೆಚ್ಚಾಗಿ ಆಕಾರ ಕಳೆದುಕೊಂಡ ಅವರ ಸ್ನೇಹಿತರು ಇನ್ನೂ ಕಾಮಕ್ರಿಯೆಯಲ್ಲಿ ಸುಖಪಡುತ್ತಿರುವುದನ್ನೂ ಹೇಳಿಕೊಂಡರು. ಸ್ವಂತ ಶರೀರವು ಇಷ್ಟವಾಗದೆ ಕಾಮಾಸಕ್ತಿ ಮೂಡುತ್ತಿಲ್ಲವೇ, ಅಥವಾ ಕಾಮಾಸಕ್ತಿ ಇಲ್ಲವಾದುದರಿಂದ ಶರೀರವನ್ನು ಇಷ್ಟಪಡುತ್ತಿಲ್ಲವೆ ಎಂಬುದರಲ್ಲಿ ಗೊಂದಲ ಇದ್ದಂತಿತ್ತು. ಒಟ್ಟಿನಲ್ಲಿ ತಮ್ಮ ಮೇಲಿನ ನಂಬಿಕೆ ಕಡಿಮೆ ಆದಂತಿತ್ತು.
ತಮ್ಮ ಸಂಬಂಧವು ನಾಲ್ಕು ವರ್ಷ ಹಳೆಯದು ಆಗಿರುವುದರಿಂದ ಕಾಮಾಸಕ್ತಿ ಕಡಿಮೆ ಆಗಿರಬಹುದು ಎಂಬುದು ಅವರ ಇನ್ನೊಂದು ಸಂದೇಹವಾಗಿತ್ತು. ಇದು ಸಹಜವೇ. ಸರ್ವಸಾಮಾನ್ಯವಾಗಿ ಸಂಬಂಧ ಶುರುವಾದ ಹೊಸದರಲ್ಲಿ ರೋಚಕತೆ ಹೆಚ್ಚಾಗಿ ಇರುತ್ತದೆ. ಸಂಗಾತಿಯಲ್ಲಿ ಇರುವ ಹೊಸತನ, ಹಾಗೂ ಸಂಗಾತಿಯನ್ನು ಒಂದು ಅದ್ಭುತ ವ್ಯಕ್ತಿ ಎಂಬಂತೆ ಕಾಣುವ ಕಾರಣದಿಂದ ಹೀಗಾಗುತ್ತದೆ. ಅದಲ್ಲದೆ, ಸಂಗಾತಿಯ ಪರಿಚಯ ಪೂರ್ತಿ ಆಗದಿರುವಾಗ ಅವರ ಬಗೆಗೆ ಒಂದು ವಿಲಕ್ಷಣತೆ ಇರುತ್ತದೆ. ಅವರನ್ನು ಅರಿತುಕೊಂಡಂತೆ ಈ ರೋಚಕತೆ, ವಿಲಕ್ಷಣತೆ ಹಾಗೂ ಕುತೂಹಲ ಕಡಿಮೆಯಾಗುತ್ತವೆ. ಕ್ರಮೇಣ ಸಂಗಾತಿ ಎಂದರೆ ಇಷ್ಟೇ, ಇದಕ್ಕಿಂತ ಹೆಚ್ಚಿಲ್ಲ ಎನ್ನುವಾಗ ಯಾಂತ್ರಿಕತೆ ಕಾಲಿಡುತ್ತದೆ. ಕಾಮಕ್ರಿಯು ಹಸಿವೆಯನ್ನು ತೀರಿಸಿಕೊಳ್ಳುವ ಚಟುವಟಿಕೆಯಾಗಿ ಉಳಿದುಬಿಡುತ್ತದೆ. ಆಗ ಕಾಮಾಸಕ್ತಿಯು ಕಡಿಮೆ ಆಗಬಹುದು.
ನಿತ್ಯದ ವ್ಯವಹಾರದ ಯಾಂತ್ರಿಕತೆಯ ಪರಿಣಾಮದಿಂದಲೂ ಹೀಗಾಗಬಹುದು. ಮಧುಚಂದ್ರದ ಬಳಿಕ ನಿತ್ಯ ಜೀವನಕ್ಕೆ ಹೊಂದಿಕೊಳ್ಳುವಾಗ ದಿನನಿತ್ಯದ ಆತಂಕ ಶುರುವಾಗಬಹುದು. ರಜೆಯಲ್ಲಿ ಇರುವಾಗ ಇಲ್ಲದ ಉದ್ಯೋಗದ ಒತ್ತಡವು ಕೆಲಸಕ್ಕೆ ಸೇರಿದಾಗ ಪುನಃ ಕಾಣುತ್ತದೆ. ಹೊಸದಾಗಿ ಅಂಟಿರುವ ಮನೆಯ ಜವಾಬ್ದಾರಿ ಹಾಗೂ ಸಂಬಂಧಿಕರ ಜೊತೆ ಹೊಂದಾಣಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುವ ಬೇಡಿಕೆ ಬರುತ್ತದೆ. ಇದು ಸಾಕಷ್ಟು ಆತಂಕಕ್ಕೆ ಹಾದಿಮಾಡಿಕೊಡುತ್ತ, ಮಲಗುವ ಕೋಣೆಗೂ ಕಾಲಿಡುವಾಗ ಕಾಮಾಸಕ್ತಿ ಕಡಿಮೆ ಆಗಬಹುದು.
ಇಬ್ಬರ ಸಂಬಂಧದಲ್ಲಿ ಏರುಪೇರಾಗಿದೆಯೇ ಎಂದು ವಿಚಾರಿಸಿದೆ. ಎಲ್ಲ ದಂಪತಿಗಳ ನಡುವೆ ಬರುವಂತೆ ಇವರಲ್ಲೂ ಸಾಕಷ್ಟು ತೀವ್ರ ಭಿನ್ನಾಭಿಪ್ರಾಯಗಳು ಬಂದಿದ್ದುವು. ಲೇಖಾಳ ವೃತ್ತಿಯು ಪ್ರವಾಸವನ್ನು ಒಳಗೊಂಡಿತ್ತು. ಆಕೆ ತಿಂಗಳಿಗೆ ಮೂರ್ನಾಲ್ಕು ದಿನ ಮನೆಯಲ್ಲಿ ಇಲ್ಲದೆ ಅವರ ರಾತ್ರಿಗಳಿಗೆ ಅಡ್ಡಿಯಾಗಿತ್ತು. ಅದನ್ನು ಇಬ್ಬರೂ ಜಾಣತನದಿಂದ ಪರಿಹರಿಸಿಕೊಂಡಿದ್ದರು. ಅದಲ್ಲದೆ ನಾಲ್ಕು ವರ್ಷಗಳಲ್ಲಿ ಐದು ಸಲ ಲೇಖಾ ವಿದೇಶಕ್ಕೆ ಹೋಗಿದ್ದಾಗ ಲವ ಮನೆಯನ್ನೂ ಮಗುವನ್ನೂ ನೋಡಿಕೊಂಡಿದ್ದ. ಲೇಖಾ ಮರಳಿದಾಗಲೆಲ್ಲ ಸ್ವಲ್ಪದಿನ ಅವರ ಕಾಮಾಸಕ್ತಿ ಹೆಚ್ಚಿತ್ತು ಎಂದಿದ್ದರೂ ಬಹಳ ಬೇಗ ಮುಂಚಿನ ನೀರಸ ಮಟ್ಟಕ್ಕೆ ಇಳಿದಿತ್ತು. ಇತ್ತೀಚೆಗೆ ಆಕೆಯ ಪ್ರವಾಸ ನಿಂತಿದೆ. ಕೆಲವೊಮ್ಮೆ ಲವನಿಗೆ ಕೆಲಸದ ಒತ್ತಡ ಹೆಚ್ಚಾದಾಗಲೆಲ್ಲ ತಲೆಕೆಟ್ಟುಹೋಗಿ ವಾರಾಂತ್ಯಕ್ಕೆ ಒಂದು ದಿನ ಸೇರಿಸಿ, ಮಗುವನ್ನು ಚಿಕ್ಕಮ್ಮನ ಜೊತೆಗೆ ಬಿಟ್ಟು ಕಾಡಿನಲ್ಲಿ ಕಳೆದಿದ್ದರು. ಅಲ್ಲಿಯ ವಾತಾವರಣ ಸರಿಹೋಗದಿದ್ದಾಗ ಬೇಗ ಮನೆಗೆ ಮರಳಿದ್ದರು.
ತಮಗೆ ವಯಸ್ಸಾಗಿದ್ದು ಕಾರಣವೇ ಎನ್ನುವುದು ಇಬ್ಬರಿಗೂ ಇನ್ನೊಂದು ಪ್ರಶ್ನೆಯಾಗಿತ್ತು. ಲವನಿಗೆ ಮೂವತ್ತೆರಡು, ಲೇಖಾ ಅವನಿಗಿಂತ ಎರಡು ವರ್ಷ ದೊಡ್ಡವಳು. ವಯಸ್ಸಿನ ಮಾತನ್ನು ಹೇಗೆ ಎತ್ತಿದರು ಎಂದರೆ, ಅವರು ಮದುವೆಯಾಗಿ ನಾಲ್ಕು ವರ್ಷವಲ್ಲ, ನಲವತ್ತು ವರ್ಷವಾಗಿದೆ ಎನ್ನುವಂತಿತ್ತು. ವಯಸ್ಸಾದಂತೆ ಶರೀರ ಮುಂಚಿನಂತೆ ಸ್ಪಂದಿಸುವುದಿಲ್ಲವೇನೋ ನಿಜ. ಹದಿವಯಸ್ಸಿನಲ್ಲಿ ಕಾಮವು ಅರಳುತ್ತಿರುವಾಗ ಇರುವ ಶಾರೀರಿಕ ಬಲ, ಚಪಲತೆ ಹಾಗೂ ಸ್ಪಂದನೆ ಕ್ರಮೇಣ ಕಡಿಮೆಯಾಗುತ್ತದೆ. ವಯಸ್ಸು ಜನನಾಂಗಗಳ ಮೇಲೂ ಪರಿಣಾಮ ಆಗುತ್ತದೆ. ಶಿಶ್ನವು ಉದ್ರೇಕಗೊಳ್ಳಲು ಹಾಗೂ ಯೋನಿಯು ಒದ್ದೆಯಾಗಲು ಮುಂಚಿಗಿಂತಲೂ ಹೆಚ್ಚು ಸಮಯ ಹಿಡಿಯುತ್ತದೆ. ನಂತರ ನಡೆಯುವ ಕಾಮಕ್ರಿಯೆಯಲ್ಲಿ ಮುಂಚಿನ ಆತುರ, ಆವೇಗ, ರಭಸ ಇರಲಾರದು. ಹಾಗಾಗಿ ಮುಂಚಿನ “ಸ್ಫೋಟಕ” ಎನಿಸುವ ಕಾಮತೃಪ್ತಿ ಸಿಗಲಾರದು.
ಇದಕ್ಕಿಂತ ಹೆಚ್ಚಾಗಿ ಅವರಿಗೆ ಇನ್ನೊಂದು ಅನಿಸಿಕೆ ಬಲವಾಗಿತ್ತು: ತಮಗಿರುವ – ಅಥವಾ ಇವೆ ಎಂದುಕೊಂಡಿರುವ – ಕೊರತೆಗಳು ಇದ್ದೂ ಕಾಮಸುಖವನ್ನು ಅನುಭವಿಸುತ್ತ ತೃಪ್ತಿಯಿಂದ ಇರುವ ದಂಪತಿಗಳಿದ್ದಾರೆ. ಅವರೆಲ್ಲ ತಮಗಿಂತ ಹೇಗೆ ಭಿನ್ನವಾಗಿದ್ದಾರೆ ಎನ್ನುವುದು ಒಗಟಾಗಿತ್ತು.
ಲವ-ಲೇಖಾರಿಗೆ ಆದ ಅನಿಸಿಕೆ, ಅನುಭವ ನಿಮ್ಮಲ್ಲೂ ಅನೇಕರಿಗೆ ಉಂಟಾಗಿರಬಹುದು. ಇದರ ಬಗೆಗೆ ಇನ್ನಷ್ಟು ವಿವರಗಳನ್ನು ಮುಂದಿನ ಸಲ ತಿಳಿಯೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.