ಸುಖೀ ದಾಂಪತ್ಯ ೨೪೫
ಸಾಕಷ್ಟು ಭದ್ರತೆ, ಸುರಕ್ಷಿತತೆ ಕೊಡುವ ಪರಿಸರವು ಸಿಕ್ಕಾಗ ಎರಗು-ತೊಲಗುಗಳ ಹೋರಾಟ ತಣ್ಣಗಾಗುತ್ತ ಸಹಜ ಕಾಮುಕತೆ ಕೆರಳುತ್ತದೆ.
245: ಅನ್ಯೋನ್ಯತೆಗೆ ಹುಡುಕಾಟ – 24
ಗಂಡನ ಮನೆಯಲ್ಲಿ ಅನ್ಯಾಯಕ್ಕೆ ಒಳಗಾಗಿ ಹೊರಹಾಕಲ್ಪಟ್ಟು, ಮೂಲ ಕುಟುಂಬದಿಂದಲೂ ಪರಿತ್ಯಕ್ತಳಾಗಿ ನಡುಬೀದಿಗೆ ಇಳಿಯಲಿರುವ ಸರಳೆಯ ಬಗೆಗೆ ಮಾತಾಡುತ್ತಿದ್ದೇವೆ. ಭದ್ರತೆ, ಸುರಕ್ಷಿತತೆ ಕೊಡುವ ಏಕೈಕ ವ್ಯಕ್ತಿಯಾದ ಗಂಡನಿಂದಲೂ ದೂರವಾಗಿ ಒಬ್ಬಳೇ ಬದುಕಬೇಕೆಂದು ಬಯಸುವವಳ ಅಂತರಾಳದಲ್ಲಿ ನಡೆಯುತ್ತಿರುವ ಸಂಘರ್ಷದ ಬಗೆಗೆ ತಿಳಿಯೋಣ.
ಸರಳಾ ಗಂಡನಿಂದ ವಿಮುಖಳಾಗುವುದರ ಹಿನ್ನೆಲೆ ಅರ್ಥವಾಗಬೇಕಾದರೆ ಮಾನವರ ಮೂಲಭೂತ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈ ಅಗತ್ಯಗಳನ್ನು ಅಬ್ರಾಹಮ್ ಮ್ಯಾಸ್ಲೋವ್ (Abraham Maslow) ಐದು ಹಂತಗಳಲ್ಲಿ ಪೇರಿಸುತ್ತಾನೆ. ಮೊದಲ ಅಗತ್ಯವೆಂದರೆ ಅನ್ನಾಹಾರ, ವಿಶ್ರಾಂತಿ; ಎರಡನೆಯ ಅಗತ್ಯವು ಭದ್ರತೆ ಹಾಗೂ ಸುರಕ್ಷಿತತೆಯ ಬಗೆಗಿದೆ. ಇವೆರಡೂ ಪೂರೈಕೆ ಆದಮೇಲೆಯೇ ಸಂಗಾತಿಯೊಡನೆ ಸಂಬಂಧ, ಹಾಗೂ ಸಂಬಂಧದಲ್ಲಿ ಸಂತಾನವನ್ನು ಪಡೆಯುವ ಮೂರನೆಯ ಹಂತಕ್ಕೆ ಮನಸ್ಸು ತಯಾರಾಗುತ್ತದೆ. ಇವಿಲ್ಲದಿದ್ದರೆ ಕಟ್ಟಿಕೊಂಡ ಸಂಬಂಧವನ್ನು ನಿರ್ವಹಿಸಲು ಆಗಲಾರದು. (ಅಂದಹಾಗೆ, ಮೊದಲ ಮೂರು ಹಂತಗಳನ್ನು “ಅನಿವಾರ್ಯ ಅಗತ್ಯ”ಗಳೆಂದು ಗಣಿಸಲಾಗುತ್ತದೆ. ಉಳಿದೆರಡು ಹಂತಗಳು ಆತ್ಮಪ್ರತಿಷ್ಠೆ ಆತ್ಮಗೌರವ, ಹಾಗೂ ಆತ್ಮತೃಪ್ತಿಯನ್ನು ಪಡೆಯುವ ಬಗೆಗಿವೆ.) ಇನ್ನು, ಮೊದಲ ಮೂರು ಅಗತ್ಯಗಳನ್ನು ಪೂರೈಸಲು ಪ್ರಾಣಿಗಳಿಗಿರುವಂತೆ ನಮ್ಮಲ್ಲೂ ಮೂರು ಹುಟ್ಟುಪ್ರವೃತ್ತಿಗಳು ಸಜ್ಜಾಗಿ ನಿಂತಿವೆ: ಅಪಾಯದಿಂದ ಸ್ವರಕ್ಷಣೆ, ಆಹಾರ-ನೆಲೆಗಾಗಿ ಹುಡುಕಾಟ, ಹಾಗೂ ಸಂಗಾತಿಯ ಜೊತೆಗೂಡಿ ಸಂತಾನೋತ್ಪತ್ತಿ. ಆಹಾರ, ಭದ್ರನೆಲೆ, ಹಾಗೂ ಸಂಗಾತಿಯ ಹುಡುಕಾಟದಲ್ಲಿ ಹೆಚ್ಚಿನಂಶ ಎರಗು/ತೊಲಗುಗಳ (fight/flight) ಹೋರಾಟವು ಸದಾ ಜಾಗ್ರತವಾಗಿರುತ್ತದೆ (ಉದಾ. ಯೋಗ್ಯ ಸಂಗಾತಿ ಬೇಕಾದರೆ ಒಳ್ಳೆಯ ಉದ್ಯೋಗಕ್ಕೆ ಒದ್ದಾಡಬೇಕು; ಅದಕ್ಕಾಗಿ ಒಲ್ಲದ ಪರೀಕ್ಷೆಗೆ ಸಜ್ಜಾಗಬೇಕು). ಹೋರಾಟಕ್ಕೆ ಹೆಚ್ಚಿನ ಬುದ್ಧಿ ಬೇಕಿಲ್ಲ; ನಮ್ಮ ಮೆದುಳಿನ ಕೆಳಕೇಂದ್ರವಾದ ಅಮಿಗ್ಡ್ಯಾಲಾ (amygdala) ಸಾಕು – ಇದೇ ಹಾದಿಹಿಡಿದು ಹೆಚ್ಚಿನ ವಿವಾಹಗಳು ನಿಶ್ಚಿತಗೊಳ್ಳುತ್ತವೆ. ಬದುಕಿಗೆ ಸಾಕಷ್ಟು ಭದ್ರತೆ, ಸುರಕ್ಷಿತತೆ ಕೊಡುವ ಸ್ಥಿರವಾದ ಪರಿಸರ ಸಿಕ್ಕಾಗ ಎರಗು-ತೊಲಗುಗಳ ಹೋರಾಟ ತಣ್ಣಗಾಗುತ್ತ ಸಹಜ ಕಾಮುಕತೆ ಕೆರಳುತ್ತದೆ (ಉದಾ. ಮನವರಳುವ ಪ್ರವಾಸಕ್ಕೂ ಕಾಮಾಪೇಕ್ಷೆ ಹೆಚ್ಚುವುದಕ್ಕೂ ಸಂಬಂಧವಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು). ಬುದ್ಧಿ-ಕೌಶಲ್ಯಗಳಿಂದ ಕೂಡಿದ ಚೆಲ್ಲಾಟ, ಸರಸ, ಪ್ರಣಯಕೇಳಿ ಶುರುವಾಗುವುದು ಇಲ್ಲಿಂದಲೇ. ಹಾಗೆಂದು ಎರಗು-ತೊಲಗುಗಳ ಹಂತದಲ್ಲಿ ಲೈಂಗಿಕ ಕ್ರಿಯೆ ಸಾಧ್ಯವಿಲ್ಲ ಎಂದಿಲ್ಲ. ಆದರೆ ಆಗ ನಡೆಯುವುದು ಹಸಿಕಾಮದಿಂದ ಪ್ರೇರಿತವಾದ ಮೃಗೀಯ “ಸಂಭೋಗ”ವೇ ವಿನಾ ಬುದ್ಧಿ-ಭಾವನೆ-ಪಾರಸ್ಪರಿಕತೆಗಳು ಮೇಳೈಸುವ “ಕಾಮಕೂಟ”ವಲ್ಲ.
ಮೇಲಿನ ಸಿದ್ದಾಂತವನ್ನು ಸರಳೆಯ ದಾಂಪತ್ಯಕ್ಕೆ ಜೋಡಿಸಿ ಸರಳೀಕರಿಸಿದರೆ ಏನು ಗೊತ್ತಾಗುತ್ತದೆ? ಮೂಲ ಕುಟುಂಬದಿಂದ ಆಕೆಗೆ ಭದ್ರತೆ, ಬೆಲೆ ಸಿಗದೆ ಬರೀ ತಿರಸ್ಕಾರ ಸಿಕ್ಕಿದೆ. ಗಂಡನ ಮನೆಯಲ್ಲೂ ಅದು ಸಿಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಅಲ್ಲಿ ನಡೆಸಿದ ಹೋರಾಟವನ್ನೇ ಇಲ್ಲಿ ಮುಂದುವರಿಸಿಕೊಂಡು ಬಂದಿದ್ದಾಳೆ – ಅದನ್ನೇ ಹಟಮಾರಿತನ ಎಂದು ಹೆಸರಿಸಲಾಗುತ್ತಿದೆ. ಪ್ರತಿಯೊಬ್ಬರ ಹಠದ ಹಿಂದೆ ಅವರಿಗೆ ಅರಿವಿಲ್ಲದ ಒಳವುದ್ದೇಶ ಇರುತ್ತದೆ. ಹಟದ ಮೂಲಕ ತನ್ನ ಜೊತೆಗಿನ ಸಂಪರ್ಕವನ್ನು ಇಟ್ಟುಕೊಳ್ಳುತ್ತ “ನಾನು ಬದುಕಿದ್ದೇನೆ” ಎಂದು ಖಚಿತಪಡಿಸಿಕೊಳ್ಳುತ್ತ ಇರುವುದು. ಹಟ ಇಲ್ಲದಿದ್ದರೆ ಖಿನ್ನತೆ, ಖಾಲಿತನ, ಆತ್ಮಹೀನತೆ ಮುಂತಾದವುಗಳಿಗೆ ಬಲಿಯಾಗಬಹುದು. ಒಂದುರೀತಿ ಹೇಳಬೇಕೆಂದರೆ, ಸರಳೆಯ ಹಟಮಾರಿತನಕ್ಕೆ ರಕ್ಷಣಾತ್ಮಕ ಮೌಲ್ಯವಿದೆ.
ಇನ್ನು, ಗಂಡಹೆಂಡಿರ ನಡುವೆ ಏಕಾಂತದಲ್ಲಿ ಏನು ನಡೆಯುತ್ತಿದೆ? ಪ್ರೀತಿಸಲು, ಬೆಲೆಕೊಡಲು ಅನರ್ಹಳು ಎನ್ನುವ ಕಠೋರ ಸಂದೇಶದಿಂದ ಘಾತಿಸಲ್ಪಡುತ್ತಿದ್ದ ಬಂದಿದ್ದ ಆಕೆಗೆ ಮೊಟ್ಟಮೊದಲ ಸಲ ಗಂಡೊಬ್ಬ “ನಾನು ನಿನಗೆ ಬೆಲೆಕೊಡುತ್ತೇನೆ” ಎಂದು ಮುಂದೆಬಂದಿದ್ದಾನೆ. ಅವನ ಅಪ್ಪುಗೆಯಲ್ಲಿ ಭದ್ರತೆಯೂ ಆರಾಮವೂ ಅನಿಸುತ್ತಿದೆ. ಆದರೆ ಇದೆಲ್ಲ ಆಕೆಗೆ ಹೊಚ್ಚಹೊಸದು. ಸುಖವೆನಿಸಿದರೂ ಅಪರಿಚಿತವಾಗಿರುವ, ನಿಜವಾಗಿದ್ದರೂ ವಿಚಿತ್ರ ಅನ್ನಿಸುವ ಇದು ಮನಕ್ಕೆ ಒಗ್ಗಲು, ಮೈಗೂಡಲು ಸಮಯ ಬೇಕು – ಅದಕ್ಕಾಗಿಯೇ ಆರು ತಿಂಗಳು ತೆಗೆದುಕೊಂಡಿದ್ದಾಳೆ. ಭದ್ರತೆಯ ಸೆಲೆ ನಿರಂತರವಾಗಿ ಬೇಕು ಎಂಬಾಸೆ ಮೊಳೆಯುತ್ತಿರುವಾಗಲೇ ಗಂಡ ಥಟ್ಟನೆ ತನ್ನೆದೆಯಿಂದ ಕೆಳಗಿಳಿಸಿ, ಇವಳ ಮೇಲೆ ಬರುತ್ತಾನೆ. ಇಲ್ಲಿಯ ತನಕ ಮೇಲಿದ್ದವಳು ಈಗ ಕೆಳಗಾಗುತ್ತಾಳೆ. ಇವನೇನು ವಿಚಿತ್ರ ನಡೆಸಲು ಹೊರಟಿದ್ದಾನಲ್ಲ ಎಂದು ಯೋಚಿಸುವಷ್ಟರಲ್ಲೇ ಅಲುಗಾಟದ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾಳೆ. ಮೈಗೆ ಒಗ್ಗದಿರುವುದನ್ನು ತಡೆಯಲು ನೋಡುತ್ತಾಳೆ. ಆದರೆ ಅವನ ಮೈಮನಗಳಲ್ಲಿ ಮುಂಚೆಗಿದ್ದ ಕಮನೀಯತೆ ಮಾಯವಾಗಿ ಕಠಿಣತೆ ಕಾಣುತ್ತದೆ. ತನ್ನನ್ನು ತುಳಿದಿರುವ ಎಲ್ಲ ಗಂಡಸರನ್ನೂ ಸಂಕೇತಿಸುವ ದೈತ್ಯರೂಪ ಅವಳ ಕಣ್ಣೆದುರು ಪ್ರತ್ಯಕ್ಷವಾಗುತ್ತ, ನನ್ನನ್ನು ತಡೆಯುವ ಧಾರ್ಷ್ಟ್ಯ ನಿನಗಿದೆಯೆ ಎಂದು ಕೆಣಕುತ್ತದೆ. ವಿರೋಧಿಸಲು ಭಯಪಟ್ಟು ಮೈ ಒಪ್ಪಿಸುತ್ತಾಳೆ. ಅದರಿಂದ ಅವನಿಗೇನು ಸಿಗುತ್ತದೋ ದೇವರೇ ಬಲ್ಲ. ತನಗೆ ಮಾತ್ರ ಆ ಜಾಗ ಒದ್ದೆಯಾಗಿ ಮೂತ್ರಕ್ಕೆ ಹೋಗಬೇಕೆಂದು ಅನ್ನಿಸುತ್ತದೆ ಅಷ್ಟೆ. ತನ್ನನ್ನು ಆಕ್ರಮಿಸಿ ಅವನು ಯಾವ ಸುಖ ಪಡೆದ ಎನ್ನುವುದು ಆಕೆಗೆ ಇದುವರೆಗೂ ಅರ್ಥವಾಗಿಲ್ಲ. ಮತ್ತೆ ತಬ್ಬಿಕೊಳ್ಳುತ್ತಾನೋ ಎಂದರೆ ಅವನು ಮುತ್ತುಕೊಟ್ಟಂತೆ ಮಾಡಿ ಮುಖ ತಿರುಗಿಸಿಕೊಂಡು ಮಲಗುತ್ತಾನೆ. ಕೊನೆಗೆ ತನ್ನ ಪಾಲಿಗೆ ಉಳಿಯುವುದು ಭದ್ರತೆಯಿಂದ ಕಳಚಿಕೊಂಡ ತತ್ತರಿಕೆ, ಖಾಲಿಭಾವ, ಒಂಟಿತನ, ಹಾಗೂ ಅದರದೇ ಪುನರಾವೃತ್ತಿ. (ಈ ಮನಃಸ್ಥಿತಿಗೆ Complex PTSD ಎಂದು ಹೆಸರಿದೆ. ಇದು ಅತ್ಯಾಚಾರ, ಅಪಘಾತ ಮುಂತಾದ ಒಂದುಸಲದ ಆಘಾತಗಳಿಗಿಂತಲೂ ಭಿನ್ನವಾಗಿದೆ. ತಾನು ನಂಬಿದ ವ್ಯಕ್ತಿಗಳಿಂದಲೇ ನಡೆಯುವುದು, ಎಡೆಬಿಡದೆ ನಿರಂತರವಾಗಿ ಮುಂದುವರಿಯುವುದು, ಹಾಗೂ ಎರಗು-ತೊಲಗು ಎರಡೂ ಅಸಾಧ್ಯವಾಗಿ ಆತ್ಮವು ತತ್ತರಿಸಿ ಹೆಪ್ಪುಗಟ್ಟುವುದು ಇದರ ಲಕ್ಷಣಗಳು.) ಇಷ್ಟರಲ್ಲಿ ಸರಳಾಗೆ ಒಂದಂಶ ಮನದಟ್ಟಾಗಿದೆ: ಅವಳನ್ನು ಬಳಸಿಕೊಳ್ಳುವುದಕ್ಕಾಗಿ ಆತ ತನ್ನೆದೆಯ, ಅಪ್ಪುಗೆಯ ಗಾಳ ಹಾಕುತ್ತಿದ್ದಾನೆ. ವಾಸ್ತವವಾಗಿ ಅವನಿಗೆ ತಾನಿಷ್ಟವಿಲ್ಲ. ತನ್ನೊಳಗಿರುವ ಜಾಗವನ್ನು ಇಷ್ಟಪಡುತ್ತಿದ್ದಾನೆ, ಅಷ್ಟೆ. ತನ್ನ ಬದಲು ಇನ್ನೊಂದು ಹೆಣ್ಣಿದ್ದರೂ ಅವನು ಮಾಡುವುದು ಅಷ್ಟೆ… ಮುಂದೆ ತರ್ಕವನ್ನು ಇತರ ಗಂಡಸರಿಗೆ ವಿಸ್ತರಿಸುತ್ತಾಳೆ. ತನ್ನ ಅಪ್ಪ, ಅಣ್ಣ, ಮಾವ ಮುಂತಾದವರೂ ಇದನ್ನೇ ಮಾಡುತ್ತಿದ್ದಾರೆ. ಅಮ್ಮನ ಮೇಲೂ ಇದೇ ನಡೆದಿದೆ. ಮದುವೆ ಎಂದರೆ ಹೆಣ್ಣಿನಮೇಲೆ ಹಕ್ಕು ಸ್ಥಾಪನೆಗೆ, ಹಾಗೂ ಇಷ್ಟಬಂದಂತೆ ಬಳಸಿಕೊಳ್ಳುವುದಕ್ಕೆ. ಅದಕ್ಕೇ ಅಪ್ಪ, ಅಣ್ಣ ಗಂಡನ ಮನೆಗೆ ತಳ್ಳಲು ನೋಡಿದ್ದಾರೆ. ಅವರಿಗಿಂತ ಗಂಡ ಹೇಗೆ ಭಿನ್ನವಾಗುತ್ತಾನೆ? ಅವರು ಕೊಟ್ಟ ಸಂದೇಶವನ್ನೇ ಇವನೂ ಕೊಡುತ್ತಿದ್ದಾನೆ: “ನನ್ನ ಬಳಕೆಗೆ ಒಪ್ಪಿದರೆ ಮಾತ್ರ ನಿನಗೆ ಸ್ಥಾನವಿದೆ. ಇಲ್ಲದಿದ್ದರೆ ನನ್ನ ಪ್ರೀತಿಗೆ ಅರ್ಹಳಲ್ಲ!” ಚೂರುಪಾರು ಪ್ರೀತಿ-ಭದ್ರತೆಯ ಆಸೆಗೆ ಗಂಡುಜಾತಿಯನ್ನು ಅವಲಂಬಿಸುವ ಬದಲು ಅದರಾಸೆಯನ್ನೇ ಕೈಬಿಟ್ಟು ಒಂಟಿಯಾಗಿ ಬದುಕುವುದು ಹೆಚ್ಚು ಸುರಕ್ಷಿತ. ಅದರಲ್ಲಿ ನಿಶ್ಚಿತತೆಯೂ ಇದೆ. ಬಲಿಗೆ ತುತ್ತಾಗುವ ಪ್ರೀತಿ-ಭದ್ರತೆಗಿಂತಲೂ ಅದಿಲ್ಲದ ಖಾಲಿ ನಿಶ್ಚಿತತೆ ಎಷ್ಟೋ ಮಿಗಿಲು. ಆಗ ಏನೇ ಆಗಲಿ, ಎಲ್ಲವೂ ತನ್ನ ಕೈಯಲ್ಲಿದೆ, ತನ್ನಿಷ್ಟದಂತೆ ಬದುಕಬಹುದು.
ಸರಳೆಯ ಅಂತರಾಳ ಅರ್ಥವಾಯಿತಷ್ಟೆ? ಆಕೆಯ ಗಂಡನ ಅಂತರಾಳವನ್ನು ಮುಂದಿನ ಸಲ ನೋಡೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.