Please wait...

ಸುಖೀ ದಾಂಪತ್ಯ ೨೫೮

ಮಕ್ಕಳನ್ನು ಹುಟ್ಟಿಸುವ ವಿಷಯದಲ್ಲಿ ದೇಶದ ಗಡಿದಾಟಿ ಜಾಗತಿಕ ಹಿತಚಿಂತನೆ ಮಾಡುವುದು ಅಗತ್ಯವಿದೆ.

258: ಮಗು ಬೇಕೆ? ಏಕೆ? – 11

ಮಗುವನ್ನು ಮಾಡಿಕೊಳ್ಳುವುದರ ಹಿಂದಿನ ಕಾರಣಗಳನ್ನು ಹುಡುಕುತ್ತ, ಮಗುವು ಬೇಡವೆಂದು ನಿರ್ಧರಿಸಿರುವವರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಹೊರಟಿದ್ದೇವೆ. ಮಕ್ಕಳು ಬೇಡವೆನ್ನುವ ತರುಣಿಯೊಡನೆ ಹೋದಸಲ ನಡೆಸಿದ ಸಂದರ್ಶನದ ಮುಂದುವರಿದ ಭಾಗವಿದು:

ಪ್ರಶ್ನೆ: ವೃದ್ಧಾಶ್ರಮ ಸೇರಿದರೆ ಸ್ವಂತ ಮಕ್ಕಳೊಡನೆ ಇದ್ದಂತೆ ಆದೀತೆ? ಅಲ್ಲಿ ಕುಟುಂಬ ಅಂತ ಎಲ್ಲಿದೆ?

ಉತ್ತರ: ನಾವಿಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟ ಮಾಡಿಕೊಳ್ಳುವುದು ಒಳ್ಳೆಯದು. ಒಂದು: ವೃದ್ಧಾಶ್ರಮಗಳು ಅಸ್ತಿತ್ವಕ್ಕೆ  ಹೇಗೆ ಬಂದವು? ಕುಟುಂಬಗಳು ಚಿಕ್ಕದಾಗುತ್ತ ಹಿರಿಯರನ್ನು ಮಕ್ಕಳು ನೋಡಿಕೊಳ್ಳಲು ಆಗದ ನಿರ್ವಾಹವಿಲ್ಲದ ಸ್ಥಿತಿಯಲ್ಲಿ ಆಶ್ರಯ ತಾಣವಾಗಿ ತಲೆಯೆತ್ತಿದವು. ಮೊದಮೊದಲು ಇವು ಹಾಸ್ಟೆಲ್‌ಗಳಿಗಿಂತ ಉತ್ತಮವಾಗೇನೂ ಇರಲಿಲ್ಲ – ಹಾಗಾಗಿ ವೃದ್ಧಾಶ್ರಮದಲ್ಲಿ ನಿರಾಶ್ರಿತರಂತೆ ಇದ್ದು ಮಕ್ಕಳಿಗಾಗಿ ಕಾಯುತ್ತಿರುವವರ ದುರಂತ ಚಿತ್ರಣ ಹುಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಈಗ ಹಾಗಲ್ಲ. ಅವರವರ ಅಭಿರುಚಿಗೆ ಹಾಗೂ ಆರ್ಥಿಕ ಬಲಕ್ಕೆ ತಕ್ಕಂತೆ ಸರ್ವಾನುಕೂಲಿ ವಿಲ್ಲಾಗಳೂ ಇವೆ. ಇಲ್ಲಿ ವಾಸಿಸುವುದು ಚೈತನ್ಯದಾಯಕ ಅನುಭವ. ಇದರಲ್ಲಿ ಅನಿವಾರ್ಯತೆಯ ಬದಲು ಆಯ್ಕೆಯಿದೆ. ಇತ್ತೀಚೆಗಂತೂ ಏಕಾಂತ ಬಯಸುವ ಹಿರಿಯ ದಂಪತಿಗಳು, ಹಾಗೂ ಬಹುಕಾಲದ ಸ್ನೇಹಿತರು ಒಟ್ಟಿಗಿರಲು ವೃದ್ಧಾಶ್ರಮ ಆರಿಸಿಕೊಳ್ಳುತ್ತಾರೆ.

ಎರಡು: ಮಕ್ಕಳೊಡನೆ ಇದ್ದಂತೆ ಆದೀತೇ ಎಂದಿರಿ. ನಿಜ, ಆದರೆ ಇದರ ಇನ್ನೊಂದು ಮಗ್ಗಲನ್ನೂ ನೋಡುವುದೂ ಅಗತ್ಯವಾಗುತ್ತದೆ. ತಾಯ್ತಂದೆಯರ ಹೊಣೆಗಾರಿಕೆಗೆ ಮಕ್ಕಳನ್ನು ಕಟ್ಟಿಹಾಕಿದರೆ ಅವರು ತಮ್ಮ ಭವಿಷ್ಯವನ್ನು ಹುಡುಕಿಕೊಳ್ಳಲು ಮುಕ್ತರಾಗದೆ ಅನ್ಯಾಯ ಆಗುತ್ತದೆ. (ಪರಿಚಿತ ಪರಿಸರವನ್ನು ಬಿಡಲೊಲ್ಲದ ತಾಯ್ತಂದೆಯರ ವಿರುದ್ಧ ಹೋಗಲು ಇಚ್ಛಿಸದ ಮಕ್ಕಳು ಉದ್ಯೋಗಕ್ಕಾಗಿ ದಿನಾಲೂ ಐವತ್ತು ಕಿ.ಮೀ. ಪ್ರಯಾಣಿಸಿ ಮೂರುಗಂಟೆ ವ್ಯರ್ಥವಾಗುತ್ತ ಸಂಗಾತಿಗೆ ಸಿಗದಿರುವುದು ನೆನಪಾಯಿತು. ಅದರೊಂದಿಗೆ ಇಳಿವಯಸ್ಸಿನ ತನಕ ಬೆಳೆದ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ವೃದ್ಧರೂ ಕಣ್ಣಮುಂದೆ ಬಂದರು.) ಇಲ್ಲಿ ಮಕ್ಕಳೊಡನೆ ಹಕ್ಕೊತ್ತಾಯ ಇದೆಯೇ ವಿನಾ ಬಾಂಧವ್ಯ, ಪ್ರೀತಿ ಇರಲಿಕ್ಕಿಲ್ಲ. ಅನ್ಯೋನ್ಯತೆಯ ಬಾಂಧವ್ಯ ಕಟ್ಟಿಕೊಂಡಲ್ಲಿ ಮನೆಯೇ ಸ್ವರ್ಗವಾಗುತ್ತದೆ. ಹಾಗೆ ಸಾಧ್ಯವಿಲ್ಲದಾಗ ವೃದ್ಧಾಶ್ರಮದಲ್ಲಿದ್ದು ಆಗಾಗ ಭೇಟಿಯಾಗುವುದರಿಂದ ಸಂಬಂಧ ಆರೋಗ್ಯಕರ ಆಗುತ್ತದೆ.

ಮೂರು: ಮಕ್ಕಳಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲಿನ ಅವಲಂಬನೆಯನ್ನೂ ಸಹಜವಾಗಿ ತೆಗೆದುಕೊಳ್ಳುತ್ತೇವೆ. ಅದೇ ಮಕ್ಕಳಿಲ್ಲದಿರುವ ವೃದ್ಧರನ್ನು ನೋಡಿ: ಅವರು ಹೆಚ್ಚು ಸ್ವಾವಲಂಬಿಯಾಗಿದ್ದಾರೆ. ಹೇಗೆಂದರೆ ವಯಸ್ಸಾದಂತೆ ಜೀವನಶೈಲಿಯನ್ನು ಮಾರ್ಪಡಿಸುತ್ತ ಹೋಗುತ್ತಾರೆ. ಆದರೆ ಮಕ್ಕಳಿರುವುದು ಒಂದುರೀತಿ ಪರಾವಲಂಬನೆಗೆ ಉತ್ತೇಜನ ಕೊಟ್ಟಂತೆ ಆಗುತ್ತದೆ. ಇದು ನನಗೆ ಇಷ್ಟವಿಲ್ಲ.

ನಾಲ್ಕು: ವಂಶದಲ್ಲಿ ಪ್ರೀತಿ ಕೆಳಮುಖವಾಗಿ ಹರಿಯುತ್ತದೆ. ತಾಯ್ತಂದೆಯರು ನಮ್ಮನ್ನು ಪ್ರೀತಿಸಿದಷ್ಟು ನಾವು ಅವರನ್ನು ಪ್ರೀತಿಸುವುದಿಲ್ಲ, ಅದನ್ನು ನಮ್ಮ ಮಕ್ಕಳಿಗೆ ಕೊಡುತ್ತೇವೆ. ಆದುದರಿಂದ ಮಕ್ಕಳ ಹಿತಹಿಂತನೆ ಮಾಡುವವರು, ಅವರಿಗೆ ಜಾಗ ಮಾಡಿಕೊಡಲು ವೃದ್ಧಾಶ್ರಮದ ಬಗೆಗೆ ಯೋಚಿಸುವುದು ತಪ್ಪೇನಲ್ಲ.

ಪ್ರ: ಹಿರಿಯರು ಕಿರಿಯರೊಂದಿಗೆ ಒಟ್ಟಾಗಿರುವ ಭಾರತೀಯ ಪರಂಪರೆಗೆ ವೃದ್ಧಾಶ್ರಮಗಳು ವಿರುದ್ಧ ಅನ್ನಿಸುವುದಿಲ್ಲವೆ?

ಉ: ತಪ್ಪು ತಿಳಿದಿರಿ. ವಯಸ್ಸಾದಂತೆ ಕುಟುಂಬಸುಖವನ್ನು ತ್ಯಜಿಸಿ ವಾನಪ್ರಸ್ತರಾಗುವುದೂ ನಮ್ಮ ಪರಂಪರೆಯಲ್ಲಿದೆ. ವೃದ್ಧಾಶ್ರಮದ ವಾಸ ಇದಕ್ಕೆ ಪರ್ಯಾಯವಾಗುತ್ತದೆ. (ಇದರಲ್ಲಿ ನನಗೆ ಆಳವಾದ ಅರ್ಥ ಕಂಡಿತು. ಮಕ್ಕಳು, ಮೊಮ್ಮಕ್ಕಳು ಎಂದು ವ್ಯಾವಹಾರಿಕ ಪ್ರಪಂಚದಲ್ಲಿ ಮುಳುಗಿದಷ್ಟೂ ಆಧ್ಯಾತ್ಮಿಕ ಆಯಾಮ ಕಾಣುವುದಿಲ್ಲ.)

ಪ್ರಶ್ನೆ: ಗಂಡಹೆಂಡತಿ ಮಾತ್ರವಿದ್ದು, ಮಕ್ಕಳಿಲ್ಲದಿದ್ದರೆ ಕುಟುಂಬದ ಅನಿಸಿಕೆ ಬಂದೀತೆ?

ಉ: ಇತ್ತೀಚೆಗೆ ಕುಟುಂಬದ ಅನಿಸಿಕೆಯೂ ವ್ಯಾಖ್ಯೆಯೂ ಮುಂಚಿನಂತಿಲ್ಲದೆ ಬದಲಾಗುತ್ತಿದೆ. ಕುಟುಂಬವೆಂದರೆ ಮಕ್ಕಳೇ ಆಗಬೇಕೆಂದಿಲ್ಲ, ಸ್ನೇಹಿತರಿಂದಲೂ ಕಟ್ಟಿಕೊಳ್ಳಬಹುದು. ನಮಗೊಪ್ಪುವ ಸಮಕಾಲೀನ ಸ್ನೇಹಿತರು ಬದುಕಿನುದ್ದಕ್ಕೂ ಸಾಂಗತ್ಯ ಕೊಡಬಲ್ಲರು. ನಾನು ಕಟ್ಟಿಕೊಂಡಿರುವ ಸ್ನೇಹ ಸಮೂಹವನ್ನೇ ತೆಗೆದುಕೊಳ್ಳಿ. ಒಂದು ಗುಂಪಿನಲ್ಲಿ ಒಟ್ಟುಸೇರಿ ಧ್ಯಾನ ಮಾಡುತ್ತೇವೆ, ಬುದ್ಧತತ್ವಗಳ ಚಿಂತನೆ ನಡೆಸುತ್ತೇವೆ. ಇನ್ನೊಂದರಲ್ಲಿ ಯಾರದೊಬ್ಬರ ಮನೆಯಲ್ಲಿ ಪಾರ್ಟಿ ಮಾಡುತ್ತ, ಕನಿಷ್ಟ ಸೌಕರ್ಯದಲ್ಲಿ ಹೇಗೆ ಬದುಕುವುದು, ಭೂಮಿಯನ್ನು ಹೇಗೆ ಬದುಕಿಸುವುದು ಎಂದು ಚರ್ಚಿಸುತ್ತೇವೆ. ಮೂರನೆಯದರಲ್ಲಿ ಸಾಹಿತ್ಯವನ್ನೂ ಲಲಿತಕಲೆಗಳನ್ನೂ ಪ್ರೀತಿಸುವವರು ಇದ್ದಾರೆ. ಎಲ್ಲೆಲ್ಲೂ “ತನ್ನಂತೆ ಪರರನ್ನು ಬಗೆ”ಯುತ್ತ ಕಷ್ಟಸುಖಕ್ಕೆ ಸ್ಪಂದಿಸುವವರು ಇದ್ದಾರೆ. ಸಮಾನ ಅಭಿರುಚಿ ಉಳ್ಳವರ ಬಾಂಧವ್ಯವು ಗಟ್ಟಿಯಾಗಿರುತ್ತದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಆಗಾಗ ಹೊಸಬರು ಸೇರುವುದರಿಂದ ಗುಂಪುಗಳು ಚೈತನ್ಯಶೀಲವಾಗಿದ್ದು ಜೀವಂತಿಕೆಯಿಂದ ಕೂಡಿರುತ್ತವೆ. ಇನ್ನೊಂದು ಪ್ರಯೋಜನ ಏನೆಂದರೆ, ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಮಕ್ಕಳನ್ನಲ್ಲ! ಆಯ್ಕೆಯಿಲ್ಲದೆ ಕುಟುಂಬದಲ್ಲಿ ವಾಸಿಸುವ ಹಿರಿಯರನ್ನು ನೋಡಿ: ಮಕ್ಕಳು ಎಷ್ಟೇ ಹತ್ತಿರವಾಗಿದ್ದರೂ ಇಬ್ಬರ ನಡುವೆ ತಲೆಮಾರಿನ ಅಂತರ ಇರುವುದರಿಂದ ಅನುಕೂಲತೆಗಳಿದ್ದರೂ ಹಾರ್ದಿಕತೆ ಅಷ್ಟಕ್ಕಷ್ಟೆ. ಮಾತು ಯಾಕಿಲ್ಲವೆಂದು ಕೇಳಿದರೆ ಮಾತಾಡಲು ಏನಿರುತ್ತದೆ ಎಂದು ಉತ್ತರ ಬರುತ್ತದೆ. ಹಾಗಾಗಿ ಮತ್ತೆ ಹಿರಿಯರು ಸರೀಕರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಓಡಾಡಲು ಇತಿಮಿತಿಯಾದರೆ ಮನೆ ಸೆರೆಮನೆಯಾಗುತ್ತದೆ. ಹಾಗಾಗಿ ಹಿರಿಯರು ವೃದ್ಧಾಶ್ರಮವನ್ನು ಸೇರಿ ಮಕ್ಕಳನ್ನು ಊಳಿಗತನದಿಂದ ಬಿಡುಗಡೆ ಮಾಡುವ ಪ್ರಸಂಗ ಬಂದಿದೆ.

ಪ್ರ: ಮಕ್ಕಳು ಬೇಡವೆನ್ನುತ್ತೀರಿ. ಕಾಲಕ್ರಮೇಣ ಎಲ್ಲರೂ ಹಿರಿಯರಾಗಿ ಚಿಕ್ಕವರಿಲ್ಲದಿದ್ದರೆ ಮುಂದೆ ಗತಿ? ನಮ್ಮ ದೇಶವೂ ಜಪಾನಿನಂತೆ ಆಗಬಹುದಲ್ಲವೆ?

ಉ: ನಾವಿಲ್ಲಿ ದೇಶಗಳ ಗಡಿದಾಟಿ ಜಾಗತಿಕ ಹಿತಚಿಂತನೆ ಮಾಡುವುದು ಅಗತ್ಯ. ಜನಸಂಖ್ಯೆ ಕಡಿಮೆ ಆದರೆ ಭೂಮಿಯ ಭಾರ ಕಡಿಮೆ ಆಗುತ್ತದೆ, ಪರಿಸರ ಚೇತರಿಸಿಕೊಳ್ಳುತ್ತದೆ. ಇನ್ನು, ಜಪಾನಿನಲ್ಲಿ ಆರೋಗ್ಯದ ಸೌಲಭ್ಯಗಳು ಹೆಚ್ಚಾದಂತೆ ಆಯುಸ್ಸೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಹಿರಿಯ ನಾಗರಿಕರಿಗೆ ಸೌಲಭ್ಯಗಳೂ ಹೆಚ್ಚಾಗಿವೆ. ನಮ್ಮಲ್ಲಿ ಚಿಕ್ಕವರೂ ತರುಣರೂ ಮಧ್ಯವಯಸ್ಕರೂ ವೃದ್ಧರೂ ಇದ್ದಾರೆ. ಹಾಗೆಂದು ಚಿಕ್ಕವರಿಗೆ ಇರುವಷ್ಟು ಅನುಕೂಲತೆಗಳು ಹಿರಿಯರಿಗೆ ಇವೆಯೆ? ಉದಾ. ನಮ್ಮ ರಸ್ತೆಯ ಪುಟ್ಟಪಥಗಳು ವೃದ್ಧಸ್ನೇಹಿ ಆಗಿಲ್ಲ. ವಿಕಲಚೇತನರ ವಾಹನಗಳಿಗೆ ಪ್ರತ್ಯೇಕ ಪಥಗಳಿಲ್ಲ. ಯಾಕಿಲ್ಲವೆಂದರೆ, ಮಕ್ಕಳಿಗೆ, ಯುವಜನತೆಗೆ ಸೌಲಭ್ಯಗಳಿಗೇ ಎಲ್ಲ ಖರ್ಚಗುತ್ತಿದೆ. ಹಾಗಾಗಿ ಹಿರಿಯರು ಮಕ್ಕಳ ಹೆಗಲಮೇಲೆ  ಏರಿದ್ದು, ಚೆನ್ನಾಗಿ ನೋಡಿಕೊಳ್ಳುವ ಭರವಸೆ ಹೊಂದಿದ್ದಾರೆ. ಆದರೆ ಇಪ್ಪತ್ತು ವರ್ಷಗಳ ನಂತರ ಮಕ್ಕಳ ಸಂಖ್ಯೆ ಕಡಿಮೆ ಆದಾಗ ಹೇಗಿರುತ್ತದೆ? ಸಂಪನ್ಮೂಲಗಳು ಹಿರಿಯರತ್ತ ತಿರುಗುತ್ತವೆ. ಸ್ವತಂತ್ರವಾಗಿ ಬದುಕುವವರಿಗೆ ಅನುಕೂಲತೆಗಳು ಹೆಚ್ಚುತ್ತವೆ. ಸಮಾಜದ ನವಜಾಗೃತಿಗೆ ಹಾದಿಯಾಗುತ್ತದೆ.

ಪ್ರ: ಕ್ರಮೇಣ ನಿಮಗೂ ತಾಯ್ತಂದೆತನಕ್ಕೆ ಮನಸ್ಸು ಬರಬಹುದಲ್ಲವೆ?

ಉ: ಖಂಡಿತವಾಗಿಯೂ. ಆಗ ನಾನು ದತ್ತು ತೆಗೆದುಕೊಳ್ಳಬಹುದು. ಅಥವಾ ಅನಾಥಾಲಯದ ಮಕ್ಕಳ ಜವಾಬ್ದಾರಿ ಹೊರಬಹುದು. ನನ್ನ ಗರ್ಭದಲ್ಲೂ ಮಗು ಹುಟ್ಟಬಹುದು. ಏನೇ ಆಗಲಿ, ನಾನು ಸಲಹುವ ಮಕ್ಕಳು ನನ್ನನ್ನು ಸಲಹಬೇಕು ಎನ್ನುವ ಅಪೇಕ್ಷೆ ಇಲ್ಲದೆ ಬೆಳೆಸುತ್ತೇನೆ. ಹಾಗೂ ಬೆಳೆದ ಮಕ್ಕಳ ಮೇಲೆ ನನ್ನನ್ನು ನೋಡಿಕೊಳ್ಳಲು ಯಾವೊತ್ತೂ ಹಕ್ಕೊತ್ತಾಯ ತರಲಾರೆ. ಆದಷ್ಟು ಸ್ವತಂತ್ರವಾಗಿಯೇ ಬದುಕುತ್ತೇನೆ.” 

ಯುವಜನಾಂಗದಿಂದ ನಾವು ಹಿರಿಯಲು ಕಲಿಯಲು ಎಷ್ಟೊಂದು ಇದೆಯಲ್ಲವೆ?  

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.