ಸುಖೀ ದಾಂಪತ್ಯ ೨೪೮
ಸಾಕಷ್ಟು ದಂಪತಿಗಳು ಮಗುವನ್ನು ಹುಟ್ಟಿಸುವುದರ ಮೂಲಕ ತಮ್ಮನ್ನು (ತಪ್ಪಾಗಿ) ಗುರುತಿಸಿಕೊಳ್ಳುತ್ತಾರೆ.
248: ಮಗು ಬೇಕೆ? ಏಕೆ? – 1
ಈ ಸಲದ ವಿಷಯ ನಿಮಗೆ ವಿಚಿತ್ರ ಅನ್ನಿಸುತ್ತಿರಬಹುದು. ಹೌದು, ನನಗೂ ಹಾಗೆಯೇ ಅನ್ನಿಸುತ್ತದೆ. ಅದಕ್ಕೆಂದೇ ಇದನ್ನು ಎತ್ತಿಕೊಂಡಿದ್ದೇನೆ. ಶೀರ್ಷಿಕೆಯಲ್ಲಿ, “ಹೇಗೆ” ಎನ್ನುವುದರ ಬದಲು “ಏಕೆ” ಎಂದು ಕೇಳಲು ಹೊರಟಿದ್ದೇನಲ್ಲ, ಅದರ ಬಗೆಗೆ ಮತ್ತಿನ್ನೇನೋ ಯೋಚನೆ ನಿಮ್ಮ ತಲೆಯಲ್ಲಿ ಬರುವುದಕ್ಕಿಂತ ಮುಂಚೆ ಕೆಲವು ದೃಷ್ಟಾಂತಗಳನ್ನು ನೋಡಿ:
ದೃಷ್ಟಾಂತ 1: ಈ ದಂಪತಿಗೆ ಮದುವೆಯಾಗಿ ಎರಡು ವರ್ಷ ಕಳೆದರೂ ಸರಿಯಾಗಿ ಸಂಭೋಗ ಸಾಧ್ಯವಾಗುತ್ತಿಲ್ಲ (ಮತ್ತದೇ ಗೋಳು ಎನ್ನುತ್ತೀರೇನೋ?). ಅದಕ್ಕಾಗಿ ಅನೇಕ ಸಲ ಪ್ರಯತ್ನಪಟ್ಟು ಸೋತು ಸುಣ್ಣವಾಗಿದ್ದಾರೆ. ಈಗ ಸಂಭೋಗದ ಕೈಬಿಟ್ಟು ಸಹಜವಲ್ಲದ ರೀತಿಯಲ್ಲಿ ಮಗುವನ್ನು ಪಡೆಯಲು ಗರ್ಭಧಾರಣೆಯ ಕೇಂದ್ರಕ್ಕೆ ಹೋಗಿದ್ದಾರೆ. ಗರ್ಭ’ಧಾರಣೆ’ಯನ್ನು ಕೇಳಿ ಅಷ್ಟು ಹಣ ಕೈಲಾಗದೆಂದು ನನ್ನಲ್ಲಿ ಬಂದಿದ್ದಾರೆ. ಅವರ ಪ್ರಶ್ನೆಯಿದು: “ಮೊದಲ ಸಂಭೋಗದಲ್ಲೇ ಗರ್ಭ ಕಟ್ಟುವ ಅವಕಾಶ ಆಗಬೇಕೆಂದರೆ ನಾವೇನು ಮಾಡಬೇಕು?” ಇಬ್ಬರೂ ತಾಳ್ಮೆಗೆಟ್ಟಿದ್ದಾರೆ.
ದೃ. 2: ಈ ದಂಪತಿಯೂ ಎರಡು ವರ್ಷಗಳಿಂದ ಕಾಮಕೂಟ ನಡೆಸುತ್ತಿದ್ದು, ಗರ್ಭ ಕಟ್ಟುತ್ತಿಲ್ಲ. ಹೀಗಾಗಿ ಬರಬರುತ್ತ ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೆಂಡತಿಯ ಸ್ತ್ರೀವೈದ್ಯರು ಮಾತ್ರೆ ಕೊಟ್ಟು, ಇಂತಿಂಥ ದಿನ ಸಂಭೋಗಿಸಲು ಹೇಳಿದ್ದಾರೆ. ಪರಿಣಾಮ? ಸಹಜ ಸಮಾಗಮವು “ನಿರ್ದೇಶಿತ” ಸಂಭೋಗದಿಂದ ಪದಚ್ಯುತಗೊಂಡು ಆಸಕ್ತಿ ನಿಂತೇಹೋಗಿದೆ! ವೈದ್ಯರಿಗೆ ಕೇಳಲಾಗಿ ಇನ್ನಷ್ಟು ಹೆಚ್ಚು ಸಮಯ, ಮನಸ್ಸು ಕೊಡಲು ಉಪದೇಶ ಬಂದಿದೆ. ನನ್ನ ಪ್ರಶ್ನೆ ಏನೆಂದರೆ, ಸಹಜ ಸಮಾಗಮದಲ್ಲೇ ಆಸಕ್ತಿ ಇಲ್ಲದಿರುವವರಿಗೆ ನಿರ್ದೇಶಿತ ಸಂಭೋಗದಲ್ಲಿ ಆಸಕ್ತಿ ಹೇಗೆ ಬಂದೀತು?
ದೃ. 3: ಮದುವೆಯಾಗಿ ಎರಡು ತಿಂಗಳೂ ಆಗದ ಇವರು ದಿನಾಲೂ ಕೂಟ ನಡೆಸುತ್ತಿದ್ದಾರೆ. ಇಪ್ಪತ್ತು ದಿನಗಳ ನಂತರ ಗಂಡ ರಾತ್ರಿ ತಡಮಾಡಿ ಮನೆಸೇರಿ ಇವೊತ್ತು ಕೂಟ ಬೇಡವೆಂದ. ಮುಂದಿನ ವಾರ ಇನ್ನೊಂದು ಸಲ ಬೇಡವೆಂದಾಗ ಹೆಂಡತಿ ಏನೆಂದಳು? “ನೀವು ಹೀಗೆ ಸೆಕ್ಸ್ ಮಿಸ್ ಮಾಡುತ್ತಿದ್ದರೆ ನಮಗೆ ಮಗು ಆಗುವುದು ಯಾವಾಗ?” ಅವನ, “ನಾಳೆ ನೋಡೋಣ” ಎನ್ನುವ ಉತ್ತರದಲ್ಲಿ ನಾಳೆಯೂ ಬೇಡ ಎನ್ನುವ ಇಂಗಿತವನ್ನು ಕಂಡು ಆಕೆಗೆ ರೇಗಿದೆ. ಪರಿಣಾಮವಾಗಿ ಗಂಡ ಸಂಭೋಗದಲ್ಲಷ್ಟೇ ಅಲ್ಲ, ಸಂಬಂಧದಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ. ಇದು ಎರಡೂ ಕಡೆಯವರಿಗೆ ತಿಳಿದು ಅವರು ಹಣಾಹಣಿ ನಡೆಸಿದ್ದಾರೆ.
ದೃ. 4: ಒಂದೂವರೆ ವರ್ಷವಾದರೂ ಈ ಜೋಡಿಯಲ್ಲಿ ಸಾಮರಸ್ಯದ ಎಳೆ ಹುಡುಕಿದರೂ ಕಾಣುವುದಿಲ್ಲ. ಯಾಕೆ? ಗಂಡ ವಿಕ್ಷಿಪ್ತ ಸ್ವಭಾವದವನು. ಹೆಂಡತಿಯ ಆಸ್ತಿ ತನ್ನ ಹೆಸರಿಗೆ ಆದಮೇಲೆಯೇ ಮೊದಲ ಸಂಭೋಗವಂತೆ. ಒಂದು ಸಲ ಸೇರಿ ಒಂದು ಮಗುವಾದರೂ ಸಾಕು, ಮತ್ತಿನ್ನೇನೂ ಬೇಡ ಎಂದು ಹೆಂಡತಿಯ ಆಸೆ. ಅಂದಹಾಗೆ ಹೆಂಡತಿ ಸ್ನಾತಕೋತ್ತರ ಪದವೀಧರೆಯಾಗಿ ಉದ್ಯೋಗದಲ್ಲಿದ್ದಾಳೆ. ಗಂಡ ಪಿಯುಸಿ ಓದಿ ಸಾಧಾರಣ ಸರಕಾರಿ ಕೆಲಸದಲ್ಲಿ ಇದ್ದಾನೆ. ಆಕೆ ಗೋಗರೆಯುವಾಗ ಪಶುಗರ್ಭಧಾರಣೆಯ ಕೇಂದ್ರದಲ್ಲಿ ಚೌಕಟ್ಟಿನಲ್ಲಿ ವೀರ್ಯದಾನಕ್ಕಾಗಿ ಕಾಯುತ್ತಿರುವ ಹಸುವಿನ ನೆನಪಾಗುತ್ತಿದೆ.
ಈ ದೃಷ್ಟಾಂತಗಳನ್ನು ಗಮನಿಸಿದರೆ ಕೆಲವು ಪ್ರಶ್ನೆಗಳೂ ಸಂದೇಹಗಳೂ ತಲೆಯೆತ್ತುತ್ತವೆ.
ಈ ದಂಪತಿಗಳಿಗೆ ಮಗುವಿನ ಬಯಕೆ ಎಲ್ಲಿಂದ ಹುಟ್ಟಿತು?
ಸಂತಾನದ ಬಯಕೆ ಮಾನವಪ್ರಾಣಿಗೆ ಸಹಜವಲ್ಲವೆ ಎಂದುಕೊಂಡರೆ ಖಂಡಿತವಾಗಿಯೂ ಸರಿ. ಆದರೆ ಸಂಭೋಗದ ಆಸೆ ಅದಕ್ಕಿಂತ ಸಹಜವಲ್ಲವೆ? ಸಂಭೋಗ ಮಾಡುವಾಗ ಹಸಿಕಾಮದ ಸೆಳೆತ ಇರುತ್ತದೆಯೇ ವಿನಾ ಪರಿಣಾಮಗಳ ಪರಿವೆ ಇರುವುದಿಲ್ಲ (ಒಂದುವೇಳೆ ಹಾಗಿದ್ದರೆ ಹೆಚ್ಚಿನ ಅನಪೇಕ್ಷಿತ ಗರ್ಭಗಳನ್ನು ತಡೆಯಬಹುದಿತ್ತು). ಅಂಥದ್ದರಲ್ಲಿ ಸುಖಾನುಭವ ಬಿಟ್ಟು ಮುಂದಿನ ಘಟ್ಟಕ್ಕೆ ಹಾರುವುದರ ಒಳವುದ್ದೇಶವೇನು? “ಸಂಭೋಗ ನಡೆಯುವಾಗ ನಿಮ್ಮ ತಲೆಯೊಳಗೆ ಏನು ನಡೆಯುತ್ತಿರುತ್ತದೆ?” ಎಂದು ಕೇಳಿದಾಗ ಇವರೇನು ಹೇಳುತ್ತಾರೆ? “ಯೋನಿಯೊಳಗೆ ವೀರ್ಯಸ್ಖಲನವಾದರೆ ಸಾಕೇ ಸಾಕು!” ಸಹಜ ಕಾಮಕೂಟದಲ್ಲಿ ಲಾಸ್ಯವಾಡುವ ಖುಷಿ, ಉನ್ಮಾದ, ರೋಚಕತೆಯ ಬದಲಾಗಿ ಅವಸರ, ಆತುರ, ಆತಂಕ ತಾಂಡವ ಆಡುವುದನ್ನು ನೋಡಿದರೆ ಮಗುವಾಗುವ ಬಯಕೆ ಅವರದ್ದಲ್ಲ , ಅವರ ಮೇಲೆ ಹೇರಲ್ಪಟ್ಟಿದ್ದು ಎನ್ನುವುದು ಸ್ಪಷ್ಟವಾಗುತ್ತದೆ.
ಮಗು ಬೇಕು ಎನ್ನುವವರಿಗೆ ನಾನೊಂದು ವಿಚಿತ್ರ ಪ್ರಶ್ನೆಕೇಳುತ್ತೇನೆ: “ನಿಮಗೆ ಮಗು ಯಾಕೆ ಬೇಕು?” ಹೆಚ್ಚಿನವರು ಆಶ್ಚರ್ಯಾಘಾತದಿಂದ, “ಏನು ಹೀಗೆ ಕೇಳುತ್ತೀರಿ? ಮದುವೆ ಅಂತಾದಮೇಲೆ ಮಗು ಬೇಡವೆ?!” ಎಂದು ಉದ್ದಮುಖದಿಂದ ಉದ್ಗರೆಯುತ್ತಾರೆ. ಮದುವೆಯ ಏಕೈಕ ಗುರಿ ಎಂದರೆ ಸಂತಾನೋತ್ಪತ್ತಿ, ಅದಿಲ್ಲದೆ ಮದುವೆಗೆ ಅರ್ಥವಿಲ್ಲ ಎಂಬುದು ಅವರ ದೃಢನಂಬಿಕೆ. ಅದಕ್ಕೆ ನನ್ನ ಎರಡನೆಯ ಪ್ರಶ್ನೆ: “ಒಂದುವೇಳೆ ಯಾವುದೋ ದೋಷದಿಂದ ಮಗುವಾಗಲು ಅಸಾಧ್ಯವೆಂದು ತಜ್ಞರ ಅಭಿಪ್ರಾಯ ಬಂದರೆ ಏನು ಮಾಡುತ್ತೀರಿ?” ದತ್ತು ತೆಗೆದುಕೊಳ್ಳುತ್ತೇವೆ ಎಂದವರಿಗೆ, “ಸರಿ, ನಂತರ ನೀವಿಬ್ಬರೂ ಹಾಸಿಗೆಯಲ್ಲಿ ಏನು ಮಾಡುತ್ತೀರಿ?” ಎಂದು ಕೇಳುತ್ತೇನೆ. ಆಗ ಅವರಿಗೆ ಹೊಳೆಯುತ್ತದೆ: ನಾವಿಬ್ಬರೂ ಏನೋ ಮಾಡಲು ಹೋಗಿ ಏನೋ ಮಾಡುತ್ತಿದ್ದೇವೆ!
ನನ್ನ ವೃತ್ತಿಯಲ್ಲಿ ಕಂಡುಬಂದಂತೆ ಸಂತಾನ ಬಯಸುವುದರ ಕಾರಣಗಳಲ್ಲಿ ಇವು ಮುಖ್ಯವಾಗಿವೆ:
- ಮಗು ಸಾಮಾಜಿಕ ಪ್ರತಿಷ್ಠೆಯ ಸಂಕೇತ: ತಮ್ಮ ಸರೀಕರಿಗೆ, ಹಾಗೂ ನಂತರ ಮದುವೆ ಆದವರಿಗೆ ಮಗುವಾಗಿದೆ; ಅಪ್ಪ-ಅಮ್ಮ ತಲೆಯಮೇಲೆ ಕೂತುಕೊಂಡಿದ್ದಾರೆ; ಎಲ್ಲರಿಗೂ ಉತ್ತರಿಸಿ ಸಾಕಾಗಿದೆ; ಉಪದೇಶ ಕೊಡುವರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ,; ಸಮಾರಂಭಗಳಿಗೆ ಹೋಗಲಾಗುತ್ತಿಲ್ಲ… ಇತ್ಯಾದಿ. ಇದರರ್ಥ ಏನು? ಬೇರೆಯವರ ಕೀಳುಭಾವಕ್ಕೆ ಗುರಿಯಾಗದಿರಲು ಮಗು ಬೇಕು. ಇಲ್ಲಿ ಮಗು ಹುಟ್ಟುತ್ತಲೇ ಒಂದು ಉದ್ದೇಶವನ್ನು ಇಟ್ಟುಕೊಂಡು ಹುಟ್ಟುತ್ತದೆ – ಪುರಾಣದ ಕುಮಾರ ಸಂಭವದಂತೆ! ಇದು ಸರಿಯೆ?
- ಮಗುವು ತಾಯಿಗೆ ಅಸ್ಮಿತೆಯ (identity) ಕೊಡುಗೆ: ಅನೇಕ ತಾಯಂದಿರು ಮಗುವಿನ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ಅವರಿಗೆ ತಮ್ಮದೇ ಆದ ಸ್ವಂತಿಕೆ, ಗುರುತು ಇರುವುದಿಲ್ಲ. ಅಂಥವರು ಮೊದಲು ಆತುರ, ಆತಂಕ ತೋರಿಸುತ್ತಾರೆ. ನಂತರ ತಮ್ಮಷ್ಟಕ್ಕೆ ತಾವಾಗುತ್ತ “ಕನಿಷ್ಟಮಾತೆ” ಆಗುತ್ತಾರೆ.
- ಮಗು ಹುಟ್ಟಿದ ನಂತರದ ಅಸ್ಪಷ್ಟತೆ: ಮಗುವಾದರೆ ಸಾಕು ಎನ್ನುವವರಿಗೆ ಅದಾದಮೇಲೆ ಏನು ಮಾಡಬೇಕು ಎನ್ನುವುದರ ಬಗೆಗೆ ಏನೂ ಕಲ್ಪನೆ ಇರುವುದಿಲ್ಲ – ಇವರ ಅರ್ಹತೆಯ ಅಳತೆಗೋಲು ಶಾರೀರಿಕ ಹಾಗೂ ಆರ್ಥಿಕ ಸಾಮರ್ಥ್ಯ, ಬಾಣಂತನಕ್ಕೆ ಹಿರಿಯರ ನೆರವು ಮಾತ್ರ. ಮಗುವಿಗೆ ಎಷ್ಟೊಂದು ಮಾತಾಪಿತೃವಾತ್ಸಲ್ಯ ಬೇಕು, ಹಾಗೂ ಅದಕ್ಕಾಗಿ ಸಮಯ ಹಾಗೂ ಧಾರಣಾ ಸಾಮರ್ಥ್ಯ ತಮ್ಮಲ್ಲಿದೆಯೆ ಎಂದು ಯೋಚಿಸಿದಂತಿಲ್ಲ. ಇದರ ಬಗೆಗೆ ಕೇಳಿದರೆ ತಮ್ಮ ತಾಯ್ತಂದೆಯರ ಕಡೆಗೆ ಬೆರಳು ತೋರಿಸುತ್ತಾರೆ. ಅವರ ನೆರವು ಒಳ್ಳೆಯದಾದರೂ ಮಕ್ಕಳನ್ನು ಹೆರುವುದು ಮಾತ್ರ ತಮ್ಮ ಕೆಲಸ, ಅವರನ್ನು ನೋಡಿಕೊಳ್ಳುವುದು ಹೆತ್ತವರ ಕೆಲಸ ಎನ್ನುವ ಹೊಣೆಗೇಡಿ ಮನೋಭಾವ ಇರುವುದು ಎದ್ದುಕಾಣುತ್ತದೆ.
ಮಗುವನ್ನು ಬಯಸುವ ದಂಪತಿಗಳ ಬಗೆಗೆ ಬಹಳಷ್ಟು ತಿಳಿದುಕೊಳ್ಳುವುದಿದೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.