ಸುಖೀ ದಾಂಪತ್ಯ ೨೫೧
ತಾಯ್ತಂದೆಯರು ಮಕ್ಕಳನ್ನು ನಿರಪೇಕ್ಷೆಯಿಂದ, ನಿರ್ವ್ಯಾಜ ಪ್ರೀತಿಯಿಂದ ಬೆಳೆಸಬೇಕು ಎಂದು ಯಾವ ಶಾಸ್ತ್ರದಲ್ಲಿದೆ?
251: ಮಗು ಬೇಕೆ? ಏಕೆ? – 4
ಮಗುವಿನ ಬಯಕೆಯ ಹಿಂದಿನ ನಾನಾ ಕಾರಣಗಳ ಒಳಹೊರಗನ್ನು ತಿರುವಿ ನೋಡುತ್ತಿದ್ದೇವೆ. ಇನ್ನು ಕೆಲವರಿಗೆ ಸಂತಾನದ ಕಾರಣ ಬಹಳಷ್ಟು ವಿಚಿತ್ರವಾಗಿದೆ. ಅದೇನೆಂಬುದನ್ನು ಈ ದಂಪತಿಯಿಂದಲೇ ತಿಳಿಯಿರಿ:
ಇವರಿಬ್ಬರ ಕಲಹಪೂರ್ಣ ದಾಂಪತ್ಯಕ್ಕೆ ನಾಲ್ಕುವರ್ಷ ತುಂಬಿದೆ. ವರ್ಷಗಳು ಹೆಚ್ಚಾದಷ್ಟೂ ಹಣಾಹಣಿ ಹೆಚ್ಚಾಗುತ್ತಿದೆ. ಒಬ್ಬರ ಮಾತು ಇನ್ನೊಬ್ಬರನ್ನು ಗಾಸಿಗೊಳಿಸುವುದರಲ್ಲಿ ಕೊನೆಗೊಳ್ಳುತ್ತಿದೆ. (ದಾಂಪತ್ಯದಲ್ಲಿ ಇಷ್ಟೊಂದು ನೋವು, ರೋಷ ಎಲ್ಲಿಂದ ಬರುತ್ತದೆ ಎನ್ನುವುದು ಕುತೂಹಲಕರ. ಇದರ ಹಿನ್ನೆಲೆಯನ್ನು ಇನ್ನೊಮ್ಮೆ ನೋಡೋಣವಂತೆ.) ದಾಂಪತ್ಯವನ್ನು ಉಳಿಸುವ ಕೊನೆಯ ಪ್ರಯತ್ನವಾಗಿ ಎರಡೂ ಕಡೆಯ ಹಿರಿಯರು ಸೇರಿ ಮದುವೆಗೆ ನಿಶ್ಚಯಿಸಿದಂತೆ ಮಗುವಿಗೂ ನಿಶ್ಚಯಿಸಿದ್ದಾರೆ. ಇದು ದಂಪತಿಗೂ ಸರಿಯೆನಿಸಿದೆ. ಮಗುವಿನ ಲಾಲನೆಪಾಲನೆಯಲ್ಲಿ ತಮ್ಮ ನೋವು ಕಡಿಮೆ ಆಗಬಹುದೆಂದು ಹಾಸಿಗೆ ಸೇರಿದ್ದಾರೆ. ಆದರೆ ಗೋಡೆಯ ಆಚೀಚೆ ಕಾಮವೆಲ್ಲಿ ಹುಟ್ಟೀತು? ಅದಕ್ಕಾಗಿ ನನ್ನಲ್ಲಿ ಬಂದಿದ್ದಾರೆ.
ಒಂದುವೇಳೆ ಈ ದಂಪತಿಗೆ ಪವಾಡವೆಂಬಂತೆ ಮಗುವಾಯಿತು ಎಂದಿಟ್ಟುಕೊಳ್ಳಿ. ಫಲಶ್ರುತಿ ಏನಾಗಬಹುದು? ಇದನ್ನು ಊಹಿಸುವ ಮುಂಚೆ ಮಗುವಿಗೆ ಎಂಥ ಪರಿಸರ ಬೇಕೆಂದು ನೆನಪಿಸಿಕೊಳ್ಳಿ. ಒಂದು ಕಡೆ ಅಮ್ಮನ, ಇನ್ನೊಂದು ಕಡೆ ಅಪ್ಪನ ಪ್ರೀತಿ ಬೇಕು; ಅಷ್ಟಲ್ಲದೆ, ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಪ್ರೀತಿಸುವುದೂ ಬೇಕು! ಯಾಕೆ? ಒಂದು ಸುಸಂಬಂಧವನ್ನು ಹೇಗೆ ಗುರುತಿಸಿ ತಳಕು ಹಾಕಿಕೊಳ್ಳಬೇಕು ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು ಹೀಗೆಯೇ – ಭವಿಷ್ಯದಲ್ಲಿ ಭದ್ರಬಾಂಧವ್ಯ ಕಟ್ಟಿಕೊಳ್ಳುವುದಕ್ಕೆ ಅತ್ಯಗತ್ಯವಾದ ಕಚ್ಚಾ ಸಾಮಗ್ರಿಯನ್ನು ಇದು ಒದಗಿಸುತ್ತದೆ. ಅದು ಬಿಟ್ಟು, ತಾಯ್ತಂದೆಯರು ಒಬ್ಬರನ್ನೊಬ್ಬರು ಹಣಿಯುತ್ತಿದ್ದರೆ? ತೀವ್ರಭಯ, ಅಭದ್ರತೆ ಹುಟ್ಟುತ್ತದೆ (“ಅಯ್ಯೋ, ನಾನು ಪ್ರೀತಿಸುವ ಒಬ್ಬರನ್ನು ಕಳೆದುಕೊಳ್ಳುತ್ತಿದ್ದೇನೆ!”) ಆಗ ಮಗುವು ಅವರ ಗಮನವನ್ನು ತನ್ನ ಸಂಕಟದೆಡೆಗೆ ಸೆಳೆಯಲು ನೋಡುತ್ತದೆ. ಕಿರುಚಿ ಅಳುವುದು, ಹೊಟ್ಟೆ/ತಲೆನೋವಿನ ನೆಪದಿಂದ ಶಾಲೆ ತಪ್ಪಿಸುವುದು ಇವೆಲ್ಲ ಶುರುವಾಗುತ್ತವೆ (ಪುಟ್ಟನೊಬ್ಬ ಹೇಳಿದ್ದು ಮನಸ್ಸು ಕಲಕುವಂತಿತ್ತು: ಶಾಲೆಗೆ ಹೋದಾಗ ಅಪ್ಪ ಅಮ್ಮನನ್ನು ಕೊಂದುಹಾಕಿದರೆ ಎಂಬ ಭಯದಿಂದ ಅಮ್ಮನನ್ನು ಅವುಚಿಕೊಂಡು ಮನೆಯಲ್ಲೇ ಇರುತ್ತಿದ್ದ.) ಬುದ್ಧಿ ಬೆಳೆದಂತೆ ಗಮನ ಸೆಳೆಯುವ ಚಟುವಟಿಕೆಯ ಧಾಟಿ ಬದಲಾಗುತ್ತದೆ. ಜಗಳಕ್ಕೆ ಅವಕಾಶವೇ ಸಿಗದಂತೆ ಸಲ್ಲದ ಬೇಡಿಕೆಗಳ ಸವಾಲುಗಳನ್ನು ತಂದಿಡುತ್ತದೆ. ಹೆತ್ತವರ ನಡುವೆ ಒಮ್ಮತ ಇಲ್ಲದಿರುವುದನ್ನು ಗಮನಿಸಿ, ಒಬ್ಬರ ವಿರುದ್ಧ ಇನ್ನೊಬ್ಬರ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೌಶಲ್ಯ ಕಲಿಯುತ್ತದೆ. “ಅಪ್ಪಾ, ಅಮ್ಮ ಚಾಕಲೇಟು ಕೇಳಿದ್ದಕ್ಕೆ ಹೊಡೆದಳು!” ಎನ್ನುವಾಗ, “ಹೌದೆ, ಬಾ ನಾನು ಕೊಡಿಸುತ್ತೇನೆ” ಹಾಗೂ, “ಅಮ್ಮಾ, ಮೊಬೈಲ್ ಮುಟ್ಟಿದ್ದಕ್ಕೆ ಅಪ್ಪ ಬಯ್ದ!” ಎನ್ನುವಾಗ, “ಹೌದೆ? ಅವರು ಬಯ್ಯುತ್ತಾರೆಂದು ಗೊತ್ತಿದ್ದರೂ ಅಲ್ಲೇಕೆ ಹೋಗ್ತೀಯಾ, ನನ್ನ ಮೊಬೈಲ್ ತೆಗೆದುಕೋ” ಮುಂತಾದ ಸಂಭಾಷಣೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ಮಗುವಿನ “ಕೃಪೆ”ಗೆ ಒಳಗಾಗುವ ಜಿದ್ದಿನಲ್ಲಿ ಪರಸ್ಪರರ ಬಗೆಗೆ ಅಸಹನೆಯ ಬೀಜ ಬಿತ್ತುತ್ತಾರೆ. ನಾನು ಚಿಕ್ಕವನಿರುವಾಗ ಒಬ್ಬರಿಂದ ಬಯ್ಯಿಸಿಕೊಂಡು ಇನ್ನೊಬ್ಬರ ಬಳಿ ಹೋದಾಗ ಸಿಗುತ್ತಿದ್ದ ಸಾಂತ್ವನದ ರೀತಿ ಇನ್ನೂ ನೆನಪಿದೆ: “ಹೌದಾ, ಅವರಿ/ಳಿಗೆ ಬಿಸಿಲಲ್ಲಿ ಕೂಡಿಸಿ ಮೊಸರನ್ನ ಹಾಕೋಣವಂತೆ, ಅಳಬೇಡ!” ಅದರರ್ಥ ನನಗಿನ್ನೂ ಸ್ಪಷ್ಟವಾಗಿಲ್ಲ; ಆದರೆ ಬೆಚ್ಚಗಿನ ದೇಹಾನುಭವದ ಜೊತೆಗೆ ನನ್ನನ್ನು ಬಯ್ದ ಹಿರಿಯರಿಗೆ ಶಿಕ್ಷೆ ಕೊಡಲಾಗುತ್ತದೆ ಎಂದು ಸಾಮಾಧಾನವೇನೋ ಆಗುತ್ತಿತ್ತು, ಆದರೆ ನನ್ನ ತಪ್ಪೇನೆಂಬುದು ಗೊತ್ತಾಗಲೇ ಇಲ್ಲ ! ಅಥವಾ ನನ್ನಲ್ಲಿ ತಪ್ಪೇ ಇರಲಿಲ್ಲವೇನೋ? ಇದರಿಂದಾದ ಗೊಂದಲವನ್ನು ಅರ್ಥಮಾಡಿಕೊಳ್ಳಲು ಸುಮಾರು ಕಾಲ ಹಿಡಿಯಿತು.
ಜಗಳದ ಪರಿಸರದ ದೀರ್ಘಾವಧಿ ಪರಿಣಾಮವೇನು? ಕೊಟ್ಟು ತೆಗೆದುಕೊಳ್ಳುವ ಸೌಹಾರ್ದದ ಮಾದರಿ ಇಲ್ಲದ ಮಗುವು ಮುಂದೆ ಕೇವಲ ಪಡೆಯಲು ಹೊರಡುತ್ತದೆಯೇ ಹೊರತು ಕೊಡುವುದನ್ನು ಕಲಿಯುವುದಿಲ್ಲ. ಹೀಗೆ, ಸುಳ್ಳುತನ, ಸ್ವಾರ್ಥಚಿಂತನೆ, ಕರಾಮತ್ತು ನಡೆಸಿ (manipulative behavior) ಲಾಭಗಾರಿಕೆ, ತಾಯ್ತಂದೆಯರ ದುಡಿಮೆಯ ದುರುಪಯೋಗ (ಉದಾ. ತರಬೇತಿಗೆ ದೊಡ್ಡ ಶುಲ್ಕ ತೆತ್ತು ಹೋಗದಿರುವುದು) ಮುಂತಾದ ವರ್ತನೆಗಳಿಗೆ ಹಾದಿಯಾಗುತ್ತದೆ.
ಮಗುವಿನ ಮೇಲೆ ಆಸೆ-ಅಪೇಕ್ಷೆಗಳನ್ನು ಹೇರುವುದು ಬಂದಾಗ ಇನ್ನೊಂದು ವಿಷಯ ನೆನಪಾಗುತ್ತದೆ. ಮಕ್ಕಳು ತಾಯ್ತಂದೆಯರಿಗೆ ವಿಧೇಯರಾಗಿರಬೇಕು ಎಂಬ ನಂಬಿಕೆ ನಮ್ಮಲ್ಲಿದೆ. ಇದನ್ನು ಪ್ರತಿಬಿಂಬಿಸಲು ಶ್ರೀರಾಮ, ಶ್ರವಣ ಕುಮಾರ ಮುಂತಾದವರ ಕತೆಗಳು ಪ್ರಚಲಿತವಾಗಿವೆ. ಅದೇನೋ ಸರಿ, ಆದರೆ, ವಿಧೇಯತೆಯು ಪ್ರೀತಿಯನ್ನು ವಿಸ್ತೀರ್ಣಗೊಳಿಸುವ ಅಂಗವಾಗಿ ಬರಬೇಕೇ ಹೊರತು ಕರ್ತವ್ಯ ಪ್ರಜ್ಞೆಯಿಂದಲ್ಲ. ಯಾಕೆಂದರೆ, ಒಂಚೂರೂ ಪ್ರೀತಿಯಿಲ್ಲದೆ ಕರ್ತವ್ಯವನ್ನು ನೆರವೇರಿಸಲು ಸಾಧ್ಯವಿದೆ! – ತಾಯ್ತಂದೆಯರು ಹೇಳುತ್ತಿರುವಾಗ ಮಕ್ಕಳು ಎಲ್ಲೋ ನೋಡುತ್ತ ಹ್ಞೂಂಗುಡುವುದು ಇದಕ್ಕೆ ಮಾದರಿಯ ದೃಷ್ಟಾಂತ. ವಿಪರ್ಯಾಸ ಎಂದರೆ, ಮಕ್ಕಳ ವಿಧೇಯತೆಗೆ ಒತ್ತುಕೊಟ್ಟಂತೆ ತಾಯ್ತಂದೆಯರು ಮಕ್ಕಳನ್ನು ನಿರ್ವ್ಯಾಜವಾಗಿ ಪ್ರೀತಿಸುತ್ತ ನಿರಪೇಕ್ಷೆಯಿಂದ ಬೆಳೆಸಬೇಕು ಎಂದು ಪ್ರತಿಬಿಂಬಿಸುವುದಕ್ಕೆ ನನಗೆ ಗೊತ್ತಿರುವಂತೆ ನೀತಿಕತೆಗಳಿಲ್ಲ! ಕಾರಣ ಸ್ಪಷ್ಟ: ಹೊಟ್ಟೆಯಲ್ಲಿ ಹುಟ್ಟಿದವರನ್ನು ಪ್ರೀತಿಸುವುದು ಹುಟ್ಟುಗುಣ ಎಂಬ ಸಾರ್ವತ್ರಿಕ ನಂಬಿಕೆಯಿದೆ. ಆದರೆ ವಾಸ್ತವ ಅದಕ್ಕೆ ವಿರುದ್ಧವಾಗಿದೆ. ಶಿಸ್ತು, ಶಾಲೆ, ಶ್ರೇಣಿ, ಸಾಮರ್ಥ್ಯ, ಸುಧಾರಣೆ, ಸಂಪಾದನೆ ಮುಂತಾದ ನೆಪದಲ್ಲಿ ಮಗುವನ್ನು ಹೀನೈಸುವ, ಶಿಕ್ಷಿಸುವ, ಹಾಗೂ ಪ್ರೀತಿಯನ್ನು ತಡೆಹಿಡಿಯುವ ತಾಯ್ತಂದೆಯರು ಎಲ್ಲೆಲ್ಲೂ ಇದ್ದಾರೆ. ಮಕ್ಕಳನ್ನು ಬೆಳೆಸುವ ವ್ಯಾವಹಾರಿಕ ಶೈಲಿಯು ಅವರ ಅಂತಃಸತ್ವವನ್ನು ಹೇಗೆ ಹೀರಿಬಿಡುತ್ತದೆ ಎಂಬುದನ್ನು ಎಲಿಸ್ ಮಿಲ್ಲರ್ ಮನಮುಟ್ಟುವಂತೆ ವಿವರಿಸಿದ್ದಾಳೆ (Alice Miller: The Drama of The Gifted Child). ಹಿರಿಯರ ಸ್ವಾರ್ಥಾಪೇಕ್ಷೆಗಳನ್ನು ಪೂರೈಸುವುದಕ್ಕಾಗಿ ಮನಸ್ಸಿಲ್ಲದ ವಿದ್ಯೆಯನ್ನು ಕಲಿಯುವುದರಿಂದ ಹಿಡಿದು ಮನಸ್ಸಿಲ್ಲದ ಸಂಗಾತಿಯನ್ನು ಮದುವೆಯಾಗುವ, ಹಾಗೂ ಮನಸ್ಸಿಲ್ಲದೆ ಮಗುವನ್ನು ಪಡೆಯುವ ತನಕ ಸಾಕಷ್ಟು ಜನರು “ವಿಧೇಯ”ರಾಗಿದ್ದಾರೆ. ಹಾಗೆ ನೋಡಬೇಕೆಂದರೆ ಶುದ್ಧ ಪ್ರೀತಿಯುಂಡ ಮಕ್ಕಳೇ ಕಡಿಮೆ. ಯಾರೋ ಹೇಳಿದಂತೆ, ಮೊದಲ ಅರ್ಧಾಯುಷ್ಯವು ಹೆತ್ತವರ ಬಯಕೆಯನ್ನು ಪೂರೈಸುವುದರಲ್ಲಿ, ಹಾಗೂ ಇನ್ನರ್ಧ ಆಯುಷ್ಯವು ಮಕ್ಕಳ ಬಯಕೆಯನ್ನು ಪೂರೈಸುವುದರಲ್ಲಿ ಕಳೆದುಹೋಗುತ್ತದೆ ಎನ್ನುವಾಗ ತನಗಾಗಿ ಬದುಕಲು ಸಮಯಾವಕಾಶ ಎಲ್ಲಿದೆ? ಹಾಗಾಗಿಯೇ ಗಂಡಸರು ದಾಂಪತ್ಯದ ಪ್ರಣಯದಲ್ಲಿ ಬಹುಬೇಗ ಆಸಕ್ತಿ ಕಳೆದುಕೊಂಡು ಕರ್ತವ್ಯನಿಷ್ಠರಾಗಿ ಉಳಿದುಬಿಡುವುದೂ, ಹೆಂಡಂದಿರು ಅವರನ್ನು ಅನ್ಯೋನ್ಯತೆಗೆ ಒತ್ತಾಯಿಸಿ ಹತಾಶೆಯಿಂದ ಜಗಳವಾಡುವುದು ಬಹಳ ಸಾಮಾನ್ಯವಾಗಿದೆ.
ನಮ್ಮ ಅಪೇಕ್ಷೆಗೆ ತಕ್ಕಂತೆ ಮಗುವನ್ನು ಬೆಳೆಸುವುದರಲ್ಲಿ ತಪ್ಪೇನಿದೆ ಎನ್ನುವವರಿಗೆ ಈ ಮಾತು: ಉದ್ಯಾನದಲ್ಲಿ ಕೆಲವು ಗಿಡಗಳನ್ನು ಕತ್ತರಿಸಿ ಪ್ರಾಣಿಗಳ ಆಕಾರ ಕೊಟ್ಟಿರುವುದನ್ನು ನೋಡಿರಬಹುದು. ಅವುಗಳನ್ನು ಆನೆ, ಜಿರಾಫ್ ಎಂದು ಗುರುತಿಸುತ್ತಾರೆಯೇ ಹೊರತು ಕತ್ತರಿಗೆ ಸಿಕ್ಕು ಮುಕ್ಕಾದ ಗಿಡಗಳು ಎನ್ನುವುದಿಲ್ಲ. ಹೀಗೆ ಹಿರಿಯರ ಆಸೆಗೆ ಕಟ್ಟುಬಿದ್ದ ಮಕ್ಕಳು ಇತ್ತ ಸಹಜವಾಗೂ ಬೆಳೆಯಲಾಗದೆ, ಅತ್ತ ಹಿರಿಯರ ಅಪೇಕ್ಷೆಗೆ ಮೇರೆಗೂ ಬೆಳೆಯದೆ ಅಸ್ಮಿತೆಯನ್ನೇ ಮರೆತು ಎಡೆಬಿಡಂಗಿ ಆಗಿಬಿಡುತ್ತಾರೆ. ಇದು ನಿಮಗೆ ಬೇಕೆ?
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.