ಸುಖೀ ದಾಂಪತ್ಯ ೨೫೫
ತಪ್ಪು ನಂಬಿಕೆಗಳಿದ್ದರೆ ಮಗು ಮಾಡಿಕೊಳ್ಳುವ ಕಾರ್ಯವೂ ದುರ್ಭರ ಅನುಭವ ಕೊಡಲು ಸಾಧ್ಯವಿದೆ.
255: ಮಗು ಬೇಕೆ? ಏಕೆ? – 8
ಮಗು ಬೇಕೆನ್ನುವ ಅನಿಸಿಕೆಯ ಹಿಂದಿನ ಸೂಕ್ತತೆಯ ಬಗೆಗೆ ಚರ್ಚಿಸುತ್ತಿದ್ದೇವೆ. ಮಗುವಿಗೆ ಸೂಕ್ತ ವಾತಾವರಣ ಒದಗಿಸಬೇಕಾದರೆ ಗಂಡ-ಹೆಂಡತಿ ಇಬ್ಬರಿಗೂ ಮಗುವಿನ ಬಯಕೆ ಇರಬೇಕಲ್ಲದೆ ಒಬ್ಬೊಬ್ಬರೂ ಪ್ರತ್ಯೇಕವಾಗಿ ದಾಂಪತ್ಯದ ಸಂಬಂಧಕ್ಕೆ ನಿಷ್ಠರಾಗಿರಬೇಕು ಎಂದು ಹೇಳುತ್ತಿದ್ದೆ.
ಸಂಗಾತಿಯನ್ನು ಅವಲಂಬಿಸದೆ ದಾಂಪತ್ಯಕ್ಕೆ ನಿಷ್ಠೆಯಿಂದ ಇರುವುದು ಒಂದು ಮೌಲ್ಯವಾಯಿತು. ಈ “ಪ್ರತ್ಯೇಕ ನಿಷ್ಠೆ” ಎನ್ನುವ ಮೌಲ್ಯ ಹುಟ್ಟುವುದಕ್ಕೆ ಹಿನ್ನೆಲೆ ಇರುತ್ತದೆ. ಉದಾಹರಣೆಗೆ, ಇವನು ತನ್ನ ಅಪ್ಪ-ಅಮ್ಮ ಯಾವೊತ್ತಿಗೂ ಪರಸ್ಪರ ಮಾತಾಡದಿರುವ ದಾಂಪತ್ಯದಲ್ಲಿ ಹುಟ್ಟಿದ್ದ. ಆಗಾಗ ಅಮ್ಮ ಅವನನ್ನು ತಬ್ಬಿಕೊಂಡು ಅಳುವುದನ್ನೂ ನೋಡುತ್ತಿದ್ದ. ಅಪ್ಪ ತನ್ನನ್ನು ಯಾಕೆ ತಬ್ಬಿಕೊಳ್ಳುವುದಿಲ್ಲ ಎಂದು ಅನೇಕ ಸಲ ಚಿಂತಿಸಿದ್ದ. ದೊಡ್ಡವನಾದಂತೆ ಅಮ್ಮ-ಅಪ್ಪ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸುತ್ತಿದ್ದ. ತಾನು ಮದುವೆಯಾದರೆ ಹೆಂಡತಿಯನ್ನು ಬಿಟ್ಟುಹೋಗದೆ ಸದಾ ತಬ್ಬಿಕೊಂಡು ಇರುತ್ತೇನೆ ಎಂದು ಭಾವನಿರ್ಧಾರ ಮಾಡಿದ್ದ. ಈಗವನು ಮದುವೆಯಾಗಿದ್ದಾನೆ. ಹೆಂಡತಿಯ ಆತಂಕಭಾವದ ಹೊರತಾಗಿಯೂ ಅವರ ದಾಂಪತ್ಯ ಸುಭದ್ರವಾಗಿದ್ದು, ಮಗು ಹುಟ್ಟಿ ವಿಸ್ಮಯಕರವಾಗಿ ಅರಳುತ್ತಿದೆ.
ದಾಂಪತ್ಯಕ್ಕೆ ಪ್ರತ್ಯೇಕ ನಿಷ್ಠೆಯು ವ್ಯಕ್ತಿ ಪ್ರತ್ಯೇಕತೆಯ ಸಂಕೇತ ಕೂಡ. ನೀನು ಹೇಗಿದ್ದರೂ ನಾನು ನಾನಾಗಿಯೇ ಉಳಿಯುತ್ತೇನೆ ಎನ್ನುವುದು ಗಟ್ಟಿತನವನ್ನು ಸೂಚಿಸುತ್ತದೆ. ಇದು (ಸಂಗಾತಿಯು ಸರಿಯಿಲ್ಲದಿದ್ದರೂ) ಮಕ್ಕಳನ್ನು ಬೆಳೆಸಲು ಸೂಕ್ತ ವಾತಾವರಣಕ್ಕೆ ನಿರ್ಮಿತಿ ಹಾಕುತ್ತದೆ. ಉದಾಹರಣೆಗೆ, ನನ್ನ ಸಂಬಂಧಿ ಒಬ್ಬಳ ಗಂಡ ಸಿಕ್ಕಾಪಟ್ಟೆ ಕುಡಿಯುತ್ತಿದ್ದ. ಅದು ಆಕೆಯ ಮಕ್ಕಳಿಗಷ್ಟೇ ಅಲ್ಲ, ನೆರೆಯವರಿಗೂ ಕಿರಿಕಿರಿಯಾಗಿತ್ತು. ಅದಕ್ಕವಳು ಜಗಳ ಆಡುವುದನ್ನು ನಿಲ್ಲಿಸಿದಳು. ಅವನ ಕುಡಿತವನ್ನು “ಸ್ವಭಾವ”ವೆಂದು ಒಪ್ಪಿಕೊಂಡು ತಾನೇ ಹಣ ಕೊಡಲು ಶುರುಮಾಡಿದಳು. ಅವನು ಕುಡಿದು ಬಂದಾಗ ಕಿರಿಕಿರಿಯಾದರೂ ಅವನ ಸ್ವಂತಿಕೆಯನ್ನು ಗೌರವಿಸಲು ಶುರುಮಾಡಿದಳು (“ನಾನು ಪ್ರೀತಿಸಿದವನು ದುರಭ್ಯಾಸವನ್ನು ಆಯ್ದುಕೊಂಡರೆ ಅವನನ್ನು ದೂರವಿಡುವುದು ನನ್ನ ಮೌಲ್ಯವಲ್ಲ”). ಆಗ ಗಂಡನ ಆಟಾಟೋಪ ಕಡಿಮೆಯಾಗಿ ಕುಡಿದರೂ ಶಾಂತವಾಗಿರುತ್ತಿದ್ದ. ಇನ್ನು, ಅವಳು ತನ್ನ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತ, ಆತ್ಮೀಯರ ಜೊತೆಗೆ ಮುಖ ತಪ್ಪಿಸಿಕೊಳ್ಳದೆ ಬೆರೆಯುತ್ತ, ಮಕ್ಕಳೊಡನೆ ಉಲ್ಲಾಸದಿಂದ ಬದುಕಲು ಶುರುಮಾಡಿದಳು. ಇದು ಮಕ್ಕಳ ಮೇಲೆ ಅದ್ಭುತ ಪ್ರಭಾವ ಬೀರಿತು. ಈಗವರು ತಾಯಿಯಂತೆ ಮೌಲ್ಯವಂತರಾಗಿದ್ದಾರೆ.
ಮಗು ಮಾಡಿಕೊಳ್ಳುವ ಭರದಲ್ಲಿ ನಮ್ಮಲ್ಲಿ ಇನ್ನೊಂದು ಅನಾಹುತ ಆಗುತ್ತಿದೆ. ಇಲ್ಲೊಂದು ವಿದ್ಯಾವಂತ ದಂಪತಿಯಲ್ಲಿ ಮಗು ಬೇಕೆಂದು ಮೂರು ಕಾಯುತ್ತಿದ್ದರೂ ಸಂಭೋಗವೇ ನಡೆದಿಲ್ಲ. ಕಾರಣ? ಗಂಡ ಪಕ್ಕಾ ಸಲಿಂಗ ಕಾಮಿ. ಹೆಣ್ಣಿನೊಡನೆ ತನಗಿದ್ದ ಸಾಮಾನ್ಯ ಆಸಕ್ತಿಯನ್ನೇ ಕಾಮಾಸಕ್ತಿಯೆಂದು ಭ್ರಮಿಸಿ ಮದುವೆಯಾಗಿದ್ದಾನೆ. ಹೆಂಡತಿಯ ಜೊತೆಗೆ ಹೆಣಗಿದರೂ ಉದ್ರೇಕ ಬರುತ್ತಿಲ್ಲ. ಆದರೆ ಇತ್ತೀಚೆಗೆ ಸ್ನೇಹಿತನೊಬ್ಬನ ಜೊತೆಗೆ ಕಾಮಸಂಬಂಧ ಶುರುಮಾಡಿದ್ದಾನೆ. ಹೆಂಡತಿಗೆ ಇದೆಲ್ಲ ಗೊತ್ತಿದ್ದು, ಸಲಿಂಗಿಯು ಉಭಯಲಿಂಗಿ (bisexual) ಆಗುವ ಸಾಧ್ಯತೆಯ ಬಗೆಗೆ ನನ್ನಲ್ಲಿ ವಿಚಾರಿಸಿದಳು. ಒಂದು ಮಗುವಾದರೆ ಸಾಕು, ಕಾಮಸುಖ ಬೇಕಾಗಿಲ್ಲ ಎಂದು ಮುಗ್ಧ ಮನಸ್ಸಿನಿಂದ ಹೇಳಿದಳು. ನಾನು, ಆಕೆಯ ಗಂಡ ಕೂಡ ಕಾಮಸುಖ ಬಿಟ್ಟು ಇರಬಹುದಿತ್ತಲ್ಲವೆ, ಆದರೂ ಯಾಕೆ ಸ್ನೇಹಿತನ ಜೊತೆಗಿದ್ದಾನೆ ಎಂದು ಪ್ರಶ್ನಿಸಿದಾಗ ಸತ್ಯ ಅರಿವಾಯಿತು. ಆಮೇಲೆ ಹಂಚಿಕೊಂಡಳು: ಫಲವಂತಿಕೆಯ ಕೇಂದ್ರವೊಂದಕ್ಕೆ ಹೋಗಿ ಗಂಡನ ವೀರ್ಯದಿಂದ ಗರ್ಭಧರಿಸಬೇಕು ಎಂದುಕೊಂಡಿದ್ದಳಂತೆ.
ಇನ್ನೊಂದು ದಂಪತಿಯ ಸಮಸ್ಯೆ ಪೂರ್ತಿ ಭಿನ್ನವಾಗಿದೆ. ಇವರಲ್ಲಿ ಗಂಡ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಕಾಮಸುಖವನ್ನು ತ್ಯಜಿಸಿದ್ದಾನೆ. ಕಾಮವು ಕೆಟ್ಟದ್ದು, ಹಾಗಾಗಿ ಸಂತಾನಕ್ಕಾಗಿ ಬಳಸಬಹುದೆ ವಿನಾ ಸುಖಕ್ಕಲ್ಲ ಎಂದು ನಂಬಿದ್ದಾನೆ. ಇದಕ್ಕೆ ಹೆಂಡತಿಯ ಅನುಮೋದನೆ ಇದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೂ ಕಾಮಸಂಬಂಧವಿಲ್ಲ. ಈಗ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಗಂಡನಿಗೆ ಕಾಮೋದ್ರೇಕ ಆಗುತ್ತಿಲ್ಲ. ಸಂದರ್ಶನಕ್ಕೆ ಇಬ್ಬರನ್ನೂ ಆಹ್ವಾನಿಸಿದಾಗ ಹೆಂಡತಿ ಒಳಬರಲು ಸವಿನಯವಾಗಿ ನಿರಾಕರಿಸಿ ಹೊರಗೇ ಕುಳಿತುಕೊಂಡಿದ್ದಾಳೆ – ಬಹುಶಃ ಸಂಭೋಗವು ಗಂಡನ ಕೆಲಸ ಅಂದುಕೊಂಡಿರಬೇಕು. ಇತ್ತ, ಗಂಡನ ನೀತಿ-ನಂಬಿಕೆಗಳು ಏನಿವೆ? ಗರ್ಭಕಟ್ಟುವ ತನಕ ಸಂಭೋಗದಲ್ಲಿ ತೊಡಗಬೇಕು, ಹಾಗೂ ನಂತರ ನಿಲ್ಲಿಸಬೇಕು. ಅವನು ಮುಂಚೆ ಹಸ್ತಮೈಥುನ ಮಾಡಿ ಸುಖಪಟ್ಟಿದ್ದು, ಅದರ ಹಿಂದೆ ತಪ್ಪಿತಸ್ಥ ಭಾವವಿದೆ.
ಕಾಮಾಸಕ್ತಿ ಇಲ್ಲದ ಸಂಭೋಗದ ಯತ್ನವು ಹಲವು ಯೋಚನೆಗಳಿಗೆ ಹಾದಿಯಾಗುತ್ತದೆ: ಒಂದು: ಕಾಮಕ್ರಿಯೆಗೆ ಜನನಾಂಗಗಳು ತಯಾರಾಗುವುದಕ್ಕೆ ಸಂಗಾತಿಯ ಬಗೆಗೆ ಕಾಮ ಕೆರಳಬೇಕು. ಆದರೆ ತಾನು ಕಾಮುಕ ವ್ಯಕ್ತಿಯೆಂದು ಒಪ್ಪಿಕೊಳ್ಳಲು ಧಾರ್ಮಿಕತೆ ವಿರುದ್ಧವಾಗಿ ಇಡೀ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ. ಎರಡು: ಕಾಮಕೂಟದಲ್ಲಿ ಸಂಭೋಗದ ಹೊರತಾದ ಮಹತ್ವಪೂರ್ಣ ವಿದ್ಯಮಾನಗಳು ನಡೆಯುತ್ತವೆ. ಪರಸ್ಪರ ಮುತ್ತಿಡುವುದು, ಮೈ ನೇವರಿಸುವುದು ಮುಂತಾದವುಗಳಲ್ಲೆಲ್ಲ ಒಂದು ವಿಶೇಷವಿದೆ: ಇವೆಲ್ಲ ಬಾಲ್ಯದಲ್ಲಿ ಅನುಭವಿಸಿದ ಹಿತಸ್ಪರ್ಶದ ಮರುಕಳಿಕೆಗಳಾಗಿವೆ; ಈಗಾಗುವ ಬೆಚ್ಚಗಿನ ಅನುಭವವು ಬಾಲ್ಯದ ಮರುಕಳಿಕೆಯೇ ಹೊರತಾಗಿ ಬೇರೇನಿಲ್ಲ. ಎಸ್ತೆರ್ ಪೆರೆಲ್ ಪ್ರಕಾರ, ಯಾರೊಬ್ಬರು ಬಾಲ್ಯದಲ್ಲಿ ಹೇಗೆ ಪ್ರೀತಿಸಲ್ಪಟ್ಟಿದ್ದಾರೆ ಎಂಬುದರ ಮೇಲೆ ಅವರು ಪ್ರಬುದ್ಧ ಕಾಮಸಂಬಂಧಗಳಲ್ಲಿ ಹೇಗೆ ಒಳಗೊಳ್ಳುತ್ತಾರೆ ಎಂದು ಹೇಳಬಹುದು! ಮೂರು: ಕಾಮಕೂಟಕ್ಕೆ ಸ್ಪಂದಿಸುವಾಗ ಸೆರೋಟೋನಿನ್, ಎಂಡೋರ್ಫಿನ್, ಆಕ್ಸಿಟೋಸಿನ್ ಮುಂತಾದ ರಾಸಾಯನಿಕಗಳು ಹುಟ್ಟುತ್ತವೆ. ವಿಚಿತ್ರವೆಂದರೆ, ಆಧ್ಯಾತ್ಮಿಕ ಹಾಗೂ ಭಕ್ತಿಯ ಪರಾಕಾಷ್ಟೆಯಲ್ಲಿ ಈ ರಸಸ್ರಾವಗಳೇ ಹುಟ್ಟಿ ಚರಮ ತೃಪ್ತಿಯ ಭಾವವನ್ನು ಕೊಡುತ್ತವೆ. ತಾಯಿಯು ಮಗುವನ್ನು ಎದೆಗೆ ತೆಗೆದುಕೊಂಡಾಗ ಇದೇ ಆಕ್ಸಿಟೋಸಿನ್ ಹಾರ್ಮೋನು ಸ್ತನಗಳಿಂದ ಹಾಲು ಉಕ್ಕಿಸುತ್ತದೆ. ನಾಲ್ಕು: ಕಾಮಕೂಟದ ನಂತರ ಉಳಿಯುವ ಅನುಭವವು ಹೆಣ್ಣುಗಂಡುಗಳಿಗೆ ಸಂತೃಪ್ತ ಭಾವವನ್ನು ಕೊಡುತ್ತವೆ. ಈ ಭಾವವು ಯಾವ ತಪಸ್ಸಿನ ಫಲಕ್ಕೂ ಕಡಿಮೆಯಿಲ್ಲ. ಇದು ಮುಖದ ಮೇಲೆ ತೇಜಸ್ಸಿನ ರೂಪದಲ್ಲಿ ಕಾಣುತ್ತದೆ. ಐದು: ಕಾಮಕೂಟದ ನಂತರ ಸಂತೃಪ್ತರಾದ ದಂಪತಿಗಳು ಅದನ್ನು ತಮಗೆ ಅರಿವಿಲ್ಲದಂತೆ ಮಗುವಿಗೆ ವರ್ಗಾಯಿಸುತ್ತಾರೆ. ಅವರು ಮಗುವನ್ನು ಹಿಡಿದುಕೊಳ್ಳುವ, ಅದರ ಕಣ್ಣಲ್ಲಿ ಕಣ್ಣಿಟ್ಟು ಸಂಭಾಷಿಸುವ ರೀತಿಯೇ ಭಿನ್ನವಾಗುತ್ತದೆ. ಈ ಭಾವವನ್ನು ಮಗುವು ಗ್ರಹಿಸಿ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಆಧಾರಗಳಿವೆ. ಉದಾ. ಗಂಡ-ಹೆಂಡತಿ ಮಗುವಿಗೆ ಕಾಣದಂತೆ ಕಾಮುಕವಾಗಿ ಮುತ್ತಿಟ್ಟು, ನಂತರ ಮಗುವಿನ ಕಡೆಗೆ ತಿರುಗಿದಾಗ, ಕೆಂಪೇರಿ ಅರಳಿದ ಮುಖಭಾವವನ್ನು ಮಗುವು ನಿಚ್ಚಳವಾಗಿ ಗ್ರಹಿಸುತ್ತದೆ. ಇದೇ ಮಗುವಿನಲ್ಲಿ ಕಾಮಪ್ರಜ್ಞೆಯ ಪ್ರೇರೇಪಿಸುತ್ತದೆ. ಇಂಥ ಭಾವಗಳ ಸಮಷ್ಟಿಯೇ ಮಗುವಿಗೆ ಮುಂದೆ ಕಾಮುಕ ವ್ಯಕ್ತಿಯನ್ನಾಗಿ ರೂಪಿಸುತ್ತದೆ.
ಈಗ ನಮ್ಮ ದಂಪತಿಗೆ ಬರೋಣ. ಆಧ್ಯಾತ್ಮಿಕ ಬದುಕು ನಡೆಸುವರು ಕಾಮಕೂಟದ ಅನ್ಯೋನ್ಯತೆಯ, ಆತ್ಮಾನುಭೂತಿಯ ಕ್ಷಣಗಳನ್ನು ಬಿಟ್ಟುಕೊಟ್ಟು ಕೇವಲ ಮೃಗೀಯ ಹಸಿಕಾಮಕ್ಕೆ ಓಗೊಟ್ಟರೆ ಮುಂದೆ ಹುಟ್ಟುವ ಮಗುವಿಗೆ ಯಾವ ಭಾವನೆಗಳನ್ನು ಕೊಡುತ್ತಿದ್ದಾರೆ? ಇಂಥ ಸ್ಥಿತಿಯಲ್ಲಿ ಬೆಳೆಯುವ ಮಕ್ಕಳು ಸಾಧುಸ್ವಭಾವರಾಗಿ ಹಾಗೂ ಕರ್ತವ್ಯನಿಷ್ಠರಾಗಿ, ಬೆಳೆಯಬಹುದೇ ವಿನಾ ಭಾವನಾತ್ಮಕವಾಗಿ ಸಂಪೂರ್ಣವಾಗಿ ಹಾಗೂ ಸಮಗ್ರವಾಗಿ ಬೆಳೆಯಲಾರರು.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.