Please wait...

ಸುಖೀ ದಾಂಪತ್ಯ ೨೫೬

ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿಯುವ, ಬದುಕುವ ಹಕ್ಕಿದೆ! – 1

256: ಮಗು ಬೇಕೆ? ಏಕೆ? – 9

ಮಕ್ಕಳು ಬೇಕೇ ಬೇಡವೇ ಎಂಬುದರ ಬಗೆಗೆ ಚರ್ಚೆ ನಡೆಸುತ್ತಿದ್ದೇವೆ. ಮಗುವನ್ನು ಮಾಡಿಕೊಳ್ಳುವುದು ತನ್ನ ಸಹಜತೆಯನ್ನು ಕಳೆದುಕೊಂಡಿರುವುದರ ಬಗೆಗೆ ಹೋದಸಲ ತಿಳಿದುಕೊಂಡೆವು. ಈಸಲ ಮಕ್ಕಳನ್ನು ಹೆತ್ತು ಸಲಹುವ ತಾಯ್ತನದ ಬಗ್ಗೆ ಮಾತಾಡೋಣ.

ತಾಯ್ತನ ಎಂದರೆ ಹೆಣ್ಣಿಗಿರುವ ಸೌಭಾಗ್ಯ, ಹಾಗೂ ತಾಯ್ತನ ಇಲ್ಲದೆ ಹೆಣ್ಣಿನ ವ್ಯಕ್ತಿತ್ವ ಪರಿಪೂರ್ಣ ಆಗುವುದಿಲ್ಲ ಎನ್ನುವ ನಂಬಿಕೆ ಸಾರ್ವತ್ರಿಕವಾಗಿದೆ (ಇದನ್ನು ನಾನೂ ಸುಮಾರು ಕಾಲ ನಂಬಿದ್ದೆ). ಅದಕ್ಕಾಗಿಯೇ ಗಾದೆಗಳೂ  ಹುಟ್ಟಿಕೊಂಡಿವೆ. ಉದಾಹರಣೆಗೆ, “ಪುಟ್ಟ ಹುಡುಗ ಕೇವಲ ಪುಟ್ಟ ಹುಡುಗ, ಆದರೆ ಪುಟ್ಟ ಹುಡುಗಿ ಪುಟ್ಟ ತಾಯಿ” ಎನ್ನುವುದನ್ನು ಕೇಳಿರಬಹುದು. ಗೊಂಬೆಯನ್ನು ತೊಡೆಯಮೇಲೆ ಮಲಗಿಸಿಕೊಂಡು ಆಟವಾಡುವ ಹುಡುಗಿಯರನ್ನು ನೋಡಿ ಇದು ಹುಟ್ಟಿಕೊಂಡಿರಬಹುದು. ವಾಸ್ತವವಾಗಿ, ಇದು ಆಕೆ ತನ್ನ ತಾಯಿಯ ಜೊತೆ ಗುರುತಿಸಿಕೊಳ್ಳುವ ರೀತಿಯಷ್ಟೆ. ಅವಳ ಈ ವರ್ತನೆಯು ತಾಯಿಯು ತನ್ನನ್ನು ಹೇಗೆ ನೋಡಿಕೊಂಡಿದ್ದಾಳೆ ಎನ್ನುವುದರ ಪ್ರತಿಫಲನವೇ ವಿನಾ ತಾಯ್ತನದ ಹೊಣೆಗಾರಿಕೆಗೆ ತಯಾರಾಗುತ್ತಿದ್ದಾಳೆ ಎಂದರ್ಥವಲ್ಲ.

ಜಗತ್ತಿನಾದ್ಯಂತ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಸರ್ವಸಾಮಾನ್ಯವಾಗಿ ಹೆತ್ತವಳದೇ ಆಗಿರುವುದು ಕಂಡುಬರುತ್ತದೆ. ಹಾಗಾಗಿ ಹೆಣ್ಣು, ತಾಯಿ ಎನ್ನುವ ಪದಗಳ ಜೊತೆಗೆ ಕೆಲವು ತಪ್ಪು ಅನ್ವರ್ಥಕಗಳೂ ಹರಿದುಬಂದಿವೆ: ಉದಾ. ಒಳ್ಳೆಯ ತಾಯಂದಿರು ಮಕ್ಕಳನ್ನು ಬೆಳೆಸುವ ಕಾಲವೆಲ್ಲ ಖುಷಿಯನ್ನು ಅನುಭವಿಸುತ್ತಾರೆ.” ಇದರ ಒಳಾರ್ಥ ಏನು? ತಾಯ್ತನದ ತೃಪ್ತಿಯನ್ನು ಅನುಭವಿಸುತ್ತಿಲ್ಲ ಎಂದರೆ ಅವಳಲ್ಲೇನೋ ತೊಂದರೆಯಿದೆ!

ಇದು ಹೆಣ್ಣನ್ನು ಕೀಳಾಗಿ ನೋಡುವ (ತಾಯ್ತನದಲ್ಲಿ ಸಂತೋಷ ಕಾಣದಿದ್ದರೆ ನಿನಗೆ ಬದುಕುವ ಅರ್ಹತೆಯಿಲ್ಲ!”), ದಮನಿಸುವ, ಹಾಗೂ ಆಕೆಯ ಬಾಯಿ ಮುಚ್ಚಿಸುವ ಪುರುಷ ಪ್ರಧಾನ ಮಂತ್ರವೇ ಹೊರತು ಇನ್ನೇನಲ್ಲ – ಒಂದುವೇಳೆ ಗಂಡಸರು ಹೆರುವ ಹಾಗಿದ್ದರೆ ಇಂಥ ಅಭಿಪ್ರಾಯ ಬರುತ್ತಿರಲಿಲ್ಲ.  ಪ್ರತಿ ಹೆಣ್ಣಿಗೂ ತಾಯ್ತನ ಇಷ್ಟವೆಂದರೆ ಪ್ರತಿ ಗಂಡಸಿಗೂ ಹೊರಗೆ ಹೋಗಿ ದುಡಿಯುವುದು ಇಷ್ಟ ಎಂದಂತೆ!

ಹೆಣ್ಣಿನ ಮೇಲೆ ಹಿತಚಿಂತರೆಲ್ಲ ಒತ್ತಾಯ ಹೇರುವ ಮಾತೊಂದು ಪ್ರಚಲಿತವಾಗಿದೆ: “ಬೇಗ ಮಗುವನ್ನು ಮಾಡಿಕೋ, ಇಲ್ಲದಿದ್ದರೆ ಆಮೇಲೆ ಅನುಭವಿಸಬೇಕಾಗಿ  ಬರುತ್ತದೆ!” ಈ ಮಾತನ್ನು ಇಪ್ಪತ್ತೆಂಟು ದಾಟಿದ ಬಹುತೇಕ ಹೆಂಗಸರು ಕಿವಿ ತೂತಾಗುವ ತನಕ ಕೇಳಿಸಿಕೊಂಡಿದ್ದಾರೆ. ಸಮಸ್ಯೆ ಏನೆಂದರೆ, ಒಂದುಕಡೆ ತಾಯ್ತನವನ್ನು ತಪ್ಪಿಸಿಕೊಂಡರೆ ಏನೇನು ಅನುಭವಿಸಬೇಕಾಗುತ್ತದೆ, ಹಾಗೂ ಅದರಿಂದ ಏನೇನು ಲಾಭವಿದೆ ಎಂದು ವರ್ಣಿಸುವಾಗ ಇನ್ನೊಂದು ಕಡೆ ತಾಯ್ತನವನ್ನು ಬೆನ್ನಟ್ಟಿ ಬರುವ ತೊಂದರೆಗಳ ಬಗೆಗೆ ಯಾರೂ ತಿಳಿಸುವುದಿಲ್ಲ!

ಹೆಣ್ಣು ತಾಯ್ತನಕ್ಕೆ ರೂಪಾಂತರ ಹೊಂದುವಾಗ ಆಗುವ ಶಾರೀರಿಕ ಬದಲಾವಣೆಗಳ ಬಗೆಗೆ ಎಲ್ಲರಿಗೂ ಗೊತ್ತು. ಆದರೆ ಮಾನಸಿಕ ಹಾಗೂ ಭಾವನಾತ್ಮಕ ವೈಪರೀತ್ಯಗಳು ಹೊರಗೆ ಕಾಣುವುದಿಲ್ಲ. ಅನಿಯಮಿತ ಸಮಯ, ದಿನದ ಇಪ್ಪತ್ತನಾಲ್ಕೂ ತಾಸು ಸಿದ್ಧಳಿರುವ ಒತ್ತಡ, ಅನಿರೀಕ್ಷಿತ ಸಂದರ್ಭಗಳನ್ನು ಸೂಕ್ತವಾಗಿ ನಿರ್ವಹಿಸಲಾಗದ ಅಸಹಾಯತೆ – ಇವೆಲ್ಲ ಎಷ್ಟೊಂದು ಹಿಂಸಾದಾಯಕ ಎಂದರೆ, ಹೆಚ್ಚಿನ ತಾಯಂದಿರಿಗೆ ಮಗುವನ್ನು ಬಿಸಾಕಬೇಕು ಎನ್ನುವ ಅನಿಸಿಕೆ ಒಂದಲ್ಲ ಒಂದು ಸಲ ಬರುತ್ತದೆ ಎನ್ನುವುದನ್ನು ಸವೇಕ್ಷಣೆಗಳು ತಿಳಿಸುತ್ತವೆ. ಹಾಗೆಂದು ಬಾಯಿಬಿಟ್ಟು ಹಂಚಿಕೊಂಡರೆ ಹಾಗೆಲ್ಲ ಅಂದುಕೊಳ್ಳಕೂಡದು ಎಂದು ಬಾಯಿ ಮುಚ್ಚಿಸಲಾಗುತ್ತದೆ. ಎಷ್ಟೋ ಹೆಂಗಸರಿಗೆ ತಾನು ಹೇಗಿದ್ದೆ, ಹೇಗಾದೆ ಎನ್ನುವುದೇ ಭಯಾನಕ ಅನುಭವ. ಹೀಗೆ ಹೆಂಗಸರು ತಾವು ತಾಯಿಯಾಗಿ ಸ್ವಾತಂತ್ರ್ಯ ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ. ಅನೇಕರು ತಮ್ಮನ್ನೇ ತಾವು ದ್ವೇಷಿಸುತ್ತಾರೆ. “ಇದು ನಾನಲ್ಲ!” ಎನ್ನುವ ನಾಸ್ತಿತ್ವದ ಅನಿಸಿಕೆ ಅನುಭವಿಸುತ್ತಾರೆ. ಇದನ್ನು ಪ್ರಕಟವಾಗಿ  ಹೇಳಿಕೊಂಡಾಗ ಇತರರ ಪ್ರತಿಕ್ರಿಯೆ ಏನು? ಮಗುವನ್ನು ತಿರಸ್ಕರಿಸುವುದು ಸ್ವಾರ್ಥಪರತೆ, ಹುಚ್ಚುತನ, ಹೆಣ್ಣುತನದ ದಿವಾಳಿತನ ಮುಂತಾದ ಅಭಿಪ್ರಾಯಗಳು ಇತ್ತೀಚೆಗೆ ನಡೆಸಿದ ಇಂಟರ್ನೆಟ್ ಸರ್ವೇಕ್ಷಣೆಗಳಲ್ಲಿ ಕಂಡುಬಂದಿವೆ.

ಇದರರ್ಥ ಏನು? ತಾಯ್ತನವು ಹೆಂಗಸರಿಗೆ ಅರ್ಥಪೂರ್ಣವಾದ ಅನುಭವವನ್ನು ಕೊಡುತ್ತದೆ, ಹಾಗಾಗಿ ಇದು ಆನಂದದಾಯಕ, ಪ್ರೀತಿಭರಿತ, ಆರಾಮದಾಯಕ ಹಾಗೂ ಹೆಮ್ಮೆಪಡುವಂಥದ್ದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇದೇ ತಾಯ್ತನವು ತಲೆ ಚಿಟ್ಟುಹಿಡಿಸುವ ಸಂಕಷ್ಟಭರಿತ ಕರ್ತವ್ಯವಾಗಿದ್ದು, ಅತೀವ ಒತ್ತಡ, ನಿರಾಸೆ, ಹತಾಶೆ, ತಪ್ಪಿತಸ್ಥ ಭಾವ, ಅವಮಾನ, ನಿಷ್ಠುರತೆ ಮುಂತಾದ ವಿರೋಧ ಭಾವಗಳನ್ನು ತಂದೊಡ್ಡಬಲ್ಲದು ಎನ್ನುವುದು ಹೆಚ್ಚಿನವರಿಗೆ ತಿಳಿಸಿ ಕೊಡಲಾಗುತ್ತಿಲ್ಲ. ತಾಯ್ತನದ ಮೂಲಕ  ಸ್ವಂತಿಕೆ, ಚಲನಶೀಲತೆ ಹಾಗೂ ತಿರುಗಾಟದ ಸ್ವಾತಂತ್ರವನ್ನು ಈಗಾಗಲೇ ಮೊಟಕು ಮಾಡಿಕೊಂಡಿರುವ ಹೆಂಗಸರಿಗೆ ಮಗುವಿನ ಜವಾಬ್ದಾರಿಯು ಹಿಂಸೆ ಎನಿಸುವುದು ಅನಿವಾರ್ಯ ಆಗಿಬಿಡುತ್ತದೆ.

ಇದರ ಪರಿಣಾಮ ಎರಡು ರೀತಿಗಳಲ್ಲಿ ಕಾಣುತ್ತದೆ. ಒಂದು: ಸಾಮಾನ್ಯ ಮನುಷ್ಯರಾದ ಅವರು ತಾಯ್ತನದ ವೈಭವೀಕರಿಸಲ್ಪಟ್ಟ ಚಿತ್ರಣದಂತೆ ಬದುಕಲು ಒದ್ದಾಡುತ್ತಾರೆ. ತಾಯ್ತನವು ತನಗೆ ಒದಗಿಬಂದ ಸೌಭಾಗ್ಯ ಎಂದು ನಂಬಲು ಒತ್ತಾಯ ತಂದುಕೊಳ್ಳುತ್ತಾರೆ. ಅದಾಗದಿರುವಾಗ ಅನುಭವಿಸಲೂ ಆಗದೆ, ಹಾಗೆಂದು ಬಾಯಿಬಿಟ್ಟು ಹೇಳಿಕೊಳ್ಳಲೂ ಆಗದೆ ಸಂಘರ್ಷದಲ್ಲಿ ಬೀಳುತ್ತಾರೆ. ಎರಡು: ಒಲ್ಲದ ತಾಯ್ತನವು ಮಗುವಿನ ಮೇಲೆ ಅಲಕ್ಷ್ಯ, ಶಿಕ್ಷೆ, ಹಿಂಸೆ, ಅತ್ಯಾಪೇಕ್ಷೆ ಮುಂತಾದ ರೀತಿಗಳಲ್ಲಿ ಪ್ರತಿಫಲಿಸುತ್ತದೆ. ಪರಿಣಾಮವಾಗಿ, ಹೆಚ್ಚಿನ ತಾಯಂದಿರು ಕೊನೆಗೆ “ಯಾರ ತಾಯಿಯೂ ಆಗದೆ” ಉಳಿಯುವಂಥ ಪ್ರಸಂಗ ಬರುತ್ತದೆ. ಮಕ್ಕಳು ಬೆಳೆದು ದೂರವಾದ ನಂತರ ಹೆಚ್ಚಿನ ತಾಯಂದಿರು ಒಂದಿಲ್ಲೊಂದು ರೀತಿ ಅತೃಪ್ತಿ ತೋರುವುದು ಇದೇ ಕಾರಣದಿಂದ. ಯಾವುದೇ ನಾಡಿನ ಹೆಣ್ಣನ್ನು ತೆಗೆದುಕೊಳ್ಳಿ, ಆಕೆಯು ತಾಯಿಯಾಗುವ ಸಂದರ್ಭದಲ್ಲಿ ವಿಪರೀತ ಕಷ್ಟ ಎದುರಿಸುತ್ತಿದ್ದು, ತಾಯಿಯಾದುದಕ್ಕೆ ವಿಷಾದ ಹಾಗೂ ಪಶ್ಚಾತ್ತಾಪ ಅನುಭವಿಸುತ್ತ,  ಮರೆಮಾಚುತ್ತ ಇರುತ್ತಾಳೆ ಎಂದು ಒರ್ನಾ ದೊನ್ಯಾತ್ ಎಂಬ ಲೇಖಕಿ ತನ್ನ ವಿಸ್ತಾರವಾದ ಅಧ್ಯಯನವನ್ನು ಒಳಗೊಂಡ ಪುಸ್ತಕದಲ್ಲಿ ವಿವರಿಸಿದ್ದಾಳೆ (Orna Donath: Regretting Motherhood: A Study). ಸಾವಿರಾರು ತಾಯಂದಿರ ನಾನಾ ಬವಣೆಗಳೂ, ತಾಯಿಯಾಗಿ ಕಳೆದುಕೊಂಡಿರು ಸದವಕಾಶಗಳಿಗೆ ವಿಷಾದವೂ ಪಶ್ಚಾತ್ತಾಪವೂ ಇದರಲ್ಲಿದೆ. ಈ ಪ್ರಕರಣಗಳು ದೇಶಕಾಲಗಳನ್ನು ಮೀರಿ ಹೆಂಗಸರ ದಮನಿಸ್ಪಟ್ಟ ಧ್ವನಿಗಳನ್ನು ಪ್ರತಿಧ್ವನಿಸುತ್ತವೆ.

ಪ್ರತಿ ತಾಯ್ತನದ ಕತೆಯೊಡನೆ ಕಳೆದುಕೊಂಡ ವ್ಯಥೆಯೂ ಇದೆ. ಹಾಗಾಗಿ ಹೆಣ್ಣಿಗೆ ತಾಯ್ತನವನ್ನು ಆಯ್ಕೆಮಾಡಿಕೊಳ್ಳದೆ ಕೇವಲ ಹೆಣ್ಣಾಗಿ ಉಳಿಯುವ ಹಕ್ಕಿದೆ. ಉದ್ಯೋಗಸ್ಥಳಾಗಿ, ಸಂಶೋಧಕಿಯಾಗಿ, ನೃತ್ಯಗಾತಿಯಾಗಿ, ಪರ್ವತಾರೋಹಿಯಾಗಿ, ಸೈನಿಕಳಾಗಿ ಬದುಕುವ ಹಕ್ಕಿದೆ. ಇದನ್ನು ಒತ್ತಾಯದ ತಾಯ್ತನವು ಕಸಿದುಕೊಳ್ಳುವ ಸಂಭವ ಖಂಡಿತವಾಗಿಯೂ ಇದೆ. “ಮಾತೃದೇವೋಭವ” ಎನ್ನುವುದು ಮಕ್ಕಳನ್ನು ಉದ್ದೇಶಿಸಿ ಹೇಳಿರುವುದೇ ವಿನಾ ಇದು ತಾಯಂದಿರಿಗೆ ಅನ್ವಯಿಸಬೇಕಾಗಿಲ್ಲ. ತಾಯಂದಿರೇ, ನೀವು ಈಗಾಗಲೇ ಪಡಲಾರದ ಪಾಡು ಪಟ್ಟಿದ್ದೀರಿ. ನಿಮ್ಮ ಸಾಮರ್ಥ್ಯಕ್ಕೆ ಯಾವ ನೋಬೆಲ್ ಬಹುಮಾನವೂ ಸಾಟಿಯಲ್ಲ. ಆದರೆ ಮೂಲತಃ ನೀವು ಇತರ ಮನುಷ್ಯರಂತೆಯೇ ಸಹಜವಾಗಿದ್ದೀರಿ. ಮಹಾತಾಯಿಯ, ಮಾತೃದೇವತೆಯ ಕಿರೀಟದ ಭಾರ ಹೊತ್ತು, ತೃಪ್ತಿಯ ಮುಖವಾಡ ಧರಿಸಬೇಕಾಗಿಲ್ಲ. ತಾಯ್ತನ ಭಾರವಾದರೆ ಭಾರವಾಗಿದೆ, ಸಹಿಸಲು ಅಸಾಧ್ಯವಾಗಿದೆ ಎಂದು ಘೋಷಿಸಿಕೊಳ್ಳುವ ಹಕ್ಕು ನಿಮಗಿದೆ!  

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

(ಕಂತು ೨೫೬; ಪದಗಳು ೫೫೭; ತಾ. ೨೦-೨-೨೦೨೦ರಂದು ಪ್ರಕಟವಾಗಲು ಕಳಿಸಲಾಗಿದೆ.)

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.