ಸುಖೀ ದಾಂಪತ್ಯ ೨೪೬
ಕಾಮಸುಖದಲ್ಲಿ ಕೊರತೆಯಾದಾಗ ಗಂಡಸರು ನನಗೂ ಬಯಕೆಯಿಲ್ಲವೆ ಎನ್ನುವುದರ ಬದಲು “ನಾನೂ ಗಂಡಸಲ್ಲವೆ?” ಎನ್ನುವುದರ ಐತಿಹ್ಯ ಏನು?
246: ಅನ್ಯೋನ್ಯತೆಗೆ ಹುಡುಕಾಟ – 25
ಶರೀರದಿಂದ ಹೆಣ್ಣಾದ ಸರಳಾ ಪುರುಷ ಪ್ರಧಾನ ಸಮಾಜದ ಆಘಾತದಿಂದ ಜರ್ಜರಿತಳಾಗಿದ್ದಾಳೆ. ಎಲ್ಲರಿಂದ ದೂರವಾಗಿ ಒಂಟಿತನವನ್ನು ಅಪ್ಪಿಕೊಳ್ಳಲು ಹೊರಟಿದ್ದಾಳೆ. ಈ ಪ್ರಸಂಗದಲ್ಲಿ ಸರಳೆಯ ಗಂಡನ ಪಾತ್ರವೇನು?
ಭೀಮಯ್ಯ (ಹೆಸರು ಬದಲಾಯಿಸಿದೆ) ಸ್ನಾತಕೋತ್ತರ ಪದವೀಧರ, ಸಂಭಾವಿತ. ಮೊದಲು ಕುಟುಂಬದ ಮಗನಾಗಿ, ಎಲ್ಲರೊಂದಿಗನಾಗಿ, ಇತ್ತೀಚೆಗಷ್ಟೆ ಹೆಂಡತಿಗೆ ಗಂಡನಾಗುತ್ತಿದ್ದಾನೆ. ಸರಳೆಯ ಸಮಸ್ಯೆಯಿಂದ ತನಗೂ ಸಮಸ್ಯೆ ಆಗಿದೆ. ಹೆಂಡತಿಯ ಅಪೇಕ್ಷೆಯಂತೆ ಸ್ವಲ್ಪಕಾಲ ಕಾಮಾಪೇಕ್ಷೆಯನ್ನು ತಡೆಹಿಡಿದಿದ್ದಾನೆ – ಅದರ ಬಗೆಗೆ ಹಕ್ಕು ಕಳೆದುಕೊಂಡ ನಿರಾಸೆಯೂ ಹೆಂಡತಿಯ ವಿರುದ್ಧ ಆಕ್ಷೇಪಣೆಯೂ ಇದೆ. ಆಕೆಯನ್ನು ಹೊಡೆದಿದ್ದಕ್ಕೆ ವಿಷಾದತೆಯಿದ್ದು, ಆಗಿನಿಂದ ಸ್ವಲ್ಪ ಹೆಚ್ಚೆನಿಸುವ (ಸರಳೆಯ ಪ್ರಕಾರ “ಮೈಮೇಲೆ ಬಿದ್ದು”) ಪ್ರೀತಿ ತೋರಿಸುತ್ತಿದ್ದಾನೆ. ಅವಳು ಸುಧಾರಿಸುವ ಭರವಸೆ ಸಿಕ್ಕರೆ ಕೂಟದಾಸೆಯನ್ನು ಇನ್ನಷ್ಟು ಕಾಲ ತಡೆದುಕೊಳ್ಳಬಲ್ಲ. ಆದರೆ, ಸರಳಾ ಕಾಮಕೂಟ ಬೇಡವೆನ್ನುವುದರ ಹಿನ್ನೆಲೆಯೇ ಅವನಿಗೆ ಅರ್ಥವಾದಂತೆ ಕಾಣಲಿಲ್ಲ. ಕೆದಕಿ ಕೇಳಿದಾಗ, ”ಆರು ತಿಂಗಳು ಕಾಯ್ದೆ, ಇನ್ನೆಷ್ಟು ದಿನ ಕಾಯಲಿ? ನಾನೂ ಗಂಡಸಲ್ಲವೆ?” ಎಂದ. ಅಂದರೆ, ಆಕೆಗೆ ಕಾಲಾವಕಾಶ ಕೊಡುತ್ತಿರುವುದು ತನಗೆ ಹತ್ತಿರವಾಗಲೆಂದಷ್ಟೆ. ಅವಳ ಗಾಯಮಾಯುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಒಳಗೊಳ್ಳುವುದು ಅವನ ತಲೆಯಲ್ಲಿಲ್ಲ. ಸಾಕಾಗದ್ದಕ್ಕೆ, ತನ್ನ ಮನೆಯವರಿಗೆ ಹೊಂದಿಕೊಳ್ಳುವಂತೆ ತಿದ್ದಿಕೊಳ್ಳುತ್ತಿಲ್ಲ ಎಂದು ಅಸಮಾಧಾನವೂ ಇದೆ.
ಎಲ್ಲಕ್ಕಿಂತ ಮಹತ್ತರವಾದ ಅಂಶ ಇನ್ನೊಂದಿದೆ. “ನಾನೂ ಗಂಡಸಲ್ಲವೆ?” ಎನ್ನುವ ಅವನ ಧಾಟಿಯನ್ನು ಗಮನಿಸಿ. ಇದರಲ್ಲೇನು ಸಂದೇಶವಿದೆ? “ಹೆಣ್ಣಿಗೆ ಭದ್ರತೆ, ಸುರಕ್ಷಿತತೆ ಒದಗಿಸುವ ಗುತ್ತಿಗೆ ತೆಗೆದುಕೊಂಡಿದ್ದೇನೆ. ಪ್ರತಿಯಾಗಿ ಆಕೆಯ ಶರೀರದ ಮೇಲೆ ಸ್ವಾಮ್ಯ ಪಡೆದುಕೊಂಡಿದ್ದೇನೆ!” ಇದೊಂದೇ ಮಾತಿನಲ್ಲಿ ಐದುಸಾವಿರ ವರ್ಷಗಳ ಉದ್ದಕ್ಕೂ ಗಂಡು ಹೆಣ್ಣನ್ನು ದಾಂಪತ್ಯದ ಹೆಸರಿನಲ್ಲಿ ನಡೆಸಿಕೊಂಡು ಬಂದ ಗುಲಾಮಗಿರಿಯ ಹೆಜ್ಜೆ ಗುರುತುಗಳಿವೆ. ಮಕ್ಕಳನ್ನು ಪೋಷಿಸಲು ನೆರವಾಗುವ ನೆಪದಲ್ಲಿ ಗಂಡಿನ ಭಾವಹೀನ ಪಾರಮ್ಯದ ಐತಿಹ್ಯ ಇಲ್ಲಿ ಎದ್ದುಕಾಣುತ್ತದೆ. ಇದರ ಪರಿಣಾಮ ಸರಳೆಯ ಮೇಲೆ ಏನಾಗುತ್ತಿದೆ ಎಂಬುದನ್ನು ಅವನಿಗೆ ಅರ್ಥಮಾಡಿಸಬೇಕು. ಸರಳೆಗೆ ಭದ್ರತೆ, ಸುರಕ್ಷಿತತೆ ಬೇಕಿಲ್ಲ – ಓದಿರುವ ಆಕೆಗೆ ಸ್ವಾವಲಂಬಿ ಆಗಲು ಸಮಸ್ಯೆಯಿಲ್ಲ. ಗಾಯಗಳದ್ದೇ ಸಮಸ್ಯೆ. ಅವು ದಾಂಪತ್ಯದಲ್ಲಿದ್ದೇ ಮಾಯಬೇಕಾದರೆ ಪುರುಷ ಪಾರಮ್ಯದ ಸೋಂಕಿಲ್ಲದ ಅಪರಿಮಿತ ಆಸರೆ ಹಾಗೂ ನೆರವು ಅತ್ಯಗತ್ಯ.
ಭೀಮಯ್ಯನೆದುರು ಎರಡು ಉದ್ದೇಶಗಳನ್ನು ಇಟ್ಟೆ: ಒಂದು, ಸರಳೆ ಗುಣವಾಗಲು ಸಹಾಯ ಮಾಡುವುದು; ಎರಡು, ತನಗೋಸ್ಕರ ಅವಳೊಡನೆ ಅನ್ಯೋನ್ಯತೆಯನ್ನು ಕಟ್ಟಿಕೊಳ್ಳುವುದು. ಆತ ವ್ಯಾವಹಾರಿಕ ತರ್ಕವನ್ನು ಮುಂದಿಟ್ಟ. ಸರಳೆಯನ್ನು ಅಲಕ್ಷಿಸಿದವರು ಆಕೆಯ ಮನೆಯ ಗಂಡಸರು ತಾನೆ? ಅವರ ಹೊಣೆ ತನಗೇಕೆ? ನಾನು ಸ್ಪಷ್ಟಪಡಿಸಬೇಕಾಯಿತು. “ನಾವು ಗಂಡಸರೆಲ್ಲ ಒಂದು” ಎಂಬ ಸಮಷ್ಟಿಪ್ರಜ್ಞೆ (collective consciousness) ಒಂದಿದೆ – ಅವನೂ ಅದರಲ್ಲಿ ಸೇರಿದ್ದಾನೆ. ಉದಾಹರಣೆಗೆ, ಆಕೆಯ ಅಣ್ಣ, ಅಪ್ಪ “ತನ್ನ ಹೆಂಡತಿ”ಯನ್ನು ಹೊಡೆದಿರುವುದಕ್ಕೆ ಆತನ ಪ್ರತಿಕ್ರಿಯೆಯೇ ಇಲ್ಲ. ಹೀಗಾಗಿ, “ನಾವು ಗಂಡಸರು ಸರಿಯಿಲ್ಲ, ಆದರೆ ನಾನು ಸರಿಯಿದ್ದೇನೆ” ಎಂದೆನ್ನುವುದು ಡಾಂಭಿಕತನ. ಒಂದುಕಡೆ ಪುರುಷ ಪ್ರಧಾನತೆಗೆ ಸೈಗುಟ್ಟಿ ಇನ್ನೊಂದು ಕಡೆ ಪ್ರೀತಿ ತೋರಿಸುವುದು ಕುರುಡು ಸ್ವಾರ್ಥವಾಗುತ್ತದೆ. ಅದಲ್ಲದೆ, ಇತರ ಗಂಡಸರು ಕೀಳಾಗಿ ಕಂಡಿರುವ ಹೆಣ್ಣಿಗೆ ಗೌರವ ತೋರಿಸುವುದು ಗಂಡಸಾದ ಅವನ ವೈಯಕ್ತಿಕ ಜವಾಬ್ದಾರಿ. ಹಾಗಾಗಿ ನೇರವಾಗಿಯೇ ಕೇಳಿದೆ: ಗಂಡುಜಾತಿಗೆ ಇತರ ಗಂಡಸರು ಬಳಿದ ಕಲಂಕವನ್ನು ಸ್ವತಃ ಸ್ವಚ್ಛಗೊಳಿಸಲು ತಯಾರಿದ್ದಾನೆಯೆ? ಭೀಮಯ್ಯ ಗೊಂದಲಕ್ಕೆ ಒಳಗಾದ. ಪರಿಹಾರದ ರೂಪುರೇಷೆಯನ್ನು ಮುಂದಿಟ್ಟೆ.
ತುಳಿತಕ್ಕೆ ಒಳಗಾದ ಹೆಣ್ಣಿನ ಸಂಗದಲ್ಲಿ ತಾನು ಗಂಡು ಎನ್ನುವುದನ್ನು ಪೂರ್ತಿ ಮರೆತುಬಿಡಬೇಕು. ತನ್ನಾಸೆಗಳನ್ನು ಪೂರೈಸಲು ಆಕೆಯಿದ್ದಾಳೆ ಎಂಬುದನ್ನೂ ಬದಿಗಿಡಬೇಕು. ಯಾಕೆ? ಪ್ರೀತಿಸುವ ಗಂಡೇ ಆಗಲಿ, ಬಯಸಿದಾಗ ಕೊಡಲು ಸಿದ್ಧಳಿರಬೇಕು ಎನ್ನುವುದು ಆಕೆಯ ದೇಹಪ್ರಜ್ಞೆಯ ವಿರುದ್ಧ ಆಗುತ್ತದೆ. ಆಗಾಕೆಯ ಹಳೆಯ ಗಾಯಗಳು ತೆರೆದುಕೊಳ್ಳುತ್ತವೆ. ಬದಲಾಗಿ ನಿಸ್ವಾರ್ಥ ಸ್ನೇಹ ಸಂಬಂಧವನ್ನು ಅನಿರ್ದಿಷ್ಟ ಕಾಲ ಕೊಡುತ್ತ ಆಕೆಯ ನಂಬಿಕೆಗೆ ಪಾತ್ರನಾಗಬೇಕು. ಆಕೆಗೆ ಇಷ್ಟವಾದ ದಿಕ್ಕಿನಲ್ಲಿ ಸ್ವತಂತ್ರವಾಗಿ ಬೆಳೆಯಲು ಜಾಗ ಬಿಡಬೇಕು. ಜೊತೆಗೆ ಮನೋಚಿಕಿತ್ಸೆಯೂ ಬೇಕು ಎಂದೆ.
ಈ ಅನಿರ್ದಿಷ್ಟ ವ್ಯವಹಾರ ತನಗೆ ಭಾರವಾಯಿತು ಎಂದ. ನಾನು ಇನ್ನೊಂದು ವಿಚಾರ ಮುಂದಿಟ್ಟೆ. ವಾಸ್ತವವಾಗಿ, ಅವಳ ನೋವಿನ ಮೂಲಕವೇ ಬಾಂಧವ್ಯವನ್ನು ಬೆಳೆಸಬಹುದು. ನಿರಂತರ ನೋವು-ನರಳಿಕೆಗೆ ಪ್ರತಿಯಾಗಿ ಕೊಡುವ ಪ್ರೀತಿ-ಆಸರೆಗಳೂ ನಿರಂತರ ಆಗಿದ್ದರೆ ಆ ಸ್ತರದಲ್ಲೇ ಬಾಂಧವ್ಯದ ನಮೂನೆಯೊಂದು ಹುಟ್ಟುತ್ತದೆ. ಹಾಗಾಗಿ ನರಳಿಕೆಯೆಂದು ದೂರವಿಡದೆ ಬಾಂಧವ್ಯವನ್ನು ನಿರಂತರವಾಗಿ ಜೋಡಿಸುವ ಕೊಂಡಿಯೆಂದು ಬರಮಾಡಿಕೊಳ್ಳಬಹುದು. ಅದಕ್ಕವನು ಇಬ್ಬರ ಕೊಡುಗೆಯೂ ಸಮವಾಗಿ ಇರಬೇಕಲ್ಲವೆ ಎಂದ. ಹಾಗೇನಿಲ್ಲ, ಯಾಕೆಂದರೆ ಎಲ್ಲರ ಶಕ್ತಿಸಾಮರ್ಥ್ಯಗಳು ಸದಾಕಾಲ ಒಂದೇಸಮ ಇರುವುದಿಲ್ಲ. ಹಾಗಾಗಿ ಪಾಲು 50-50 ಬದಲು 60-40, ಅಥವಾ 20-80 ಆಗಬಹುದು, ಕೆಲವೊಮ್ಮೆ 0-100 ಆಗಬಹುದು. ಮತ್ತೆ ತಿರುವುಮುರುವೂ ಆಗಬಹುದು. ಒಬ್ಬರು ನೆಲಕಚ್ಚಿದರೆ ಇನ್ನೊಬ್ಬರು ನೆರವು ನೀಡಬೇಕು. ಇದು ಕರ್ತವ್ಯ ಎನ್ನಬಾರದು. ನಿನಗೆ ಸಹಾಯ ಮಾಡುವುದೇ ನನಗಿಷ್ಟವಾದ ವಿಷಯ ಎನ್ನುವ ಮಟ್ಟಿಗೆ ಹೊಸ ಸ್ವಭಾವಕ್ಕೆ ಹುಟ್ಟುಹಾಕಬೇಕು ಎಂದೆ.
ದಾಂಪತ್ಯಕ್ಕೆ ಇಷ್ಟೆಲ್ಲ ಒದ್ದಾಡಬೇಕೆ ಎಂದುದಕ್ಕೆ, ಬಾಂಧವ್ಯ ಕಟ್ಟಿಕೊಳ್ಳುವುದು ಎಂದರೆ ಅಷ್ಟು ಸುಗಮ ಅಲ್ಲ ಎಂದೆ. ತನ್ನ ಪೈಕಿ ಯಾವ ಹೆಂಗಸರಿಗೂ ಹೀಗಿಲ್ಲ ಎಂದ. ಒಂದೋ ಅವರಿಗೆ ಸರಳೆಯಷ್ಟು ಗಾಯಗಳಾಗಿಲ್ಲ. ಅಥವಾ ಸರಳೆಯಂತೆ ನೋವಿನ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ಹೊರಬರಲು ಪ್ರಯತ್ನಿಸುತ್ತಿಲ್ಲ. ನರಳಿಕೆಯ ಮೇಲೆ ನಗುವಿನ ಮುಖವಾಡ ಧರಿಸಿದ್ದಾರಷ್ಟೆ.
ವಿಷಯ ಆಳಕ್ಕೆ ಹೋದಂತೆ ಅನಿಶ್ಚಿತತೆಯ ಝಂಝಾವಾತದಲ್ಲಿ ಭೀಮಯ್ಯನ ಮುಖದಮೇಲೆ ಅಸಮರ್ಥತೆಯ ಛಾಯೆ ದಟ್ಟವಾಗುತ್ತ ಹೋಯಿತು. ಚಡಪಡಿಸುತ್ತ ಕೇಳಿದ: “ಹಾಗಾದರೆ ಈಗ ನಾನೇನು ಮಾಡಬೇಕು?” ಅವನ ಕುಟುಂಬದ ವಾತಾವರಣದಲ್ಲಿ ಅವರಿಬ್ಬರೇ ಸಂವಹನಿಸಲು ಪ್ರತ್ಯೇಕ ಅವಕಾಶವಿಲ್ಲ. ಅದರಲ್ಲೂ ಭಾವನಾತ್ಮಕವಾಗಿ ವ್ಯವಹರಿಸಲು ಗಂಡಹೆಂಡತಿ ಪರಸ್ಪರರ ತೋಳುಗಳಲ್ಲಿ ಗಂಟೆಗಟ್ಟಲೆ ಇರಬೇಕಾಗುತ್ತದೆ. ಅದು ಈಗಿರುವ ಮನೆಯಲ್ಲಿ ಸಾಧ್ಯವೆ?
ಬೇರೆ ಮನೆಯ ವಿಚಾರ ಭೀಮಯ್ಯನ ಮುಖದಲ್ಲಿ ಥಟ್ಟನೆ ಮೂಡಿತು. ತನ್ನಿಂದ ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ. ಪ್ರತ್ಯೇಕ ಮನೆಯು ಸ್ವಂತಿಕೆಯ ಲಕ್ಷಣ ಎನ್ನುವುದು ಅವನಿಗೆ ಅನಿಸಿದಂತೆ ಕಾಣಲಿಲ್ಲ. ಬೇರೆ ಮನೆಯೆಂದರೆ ದೀರ್ಘಕಾಲದ ಮಧುಚಂದ್ರದಂತೆ ಎಂದು ವಿವರಿಸಿದೆ. ಅವನ ಪ್ರಕಾರ ಅದು ತನ್ನವರನ್ನು ಧಿಕ್ಕರಿಸಿದಂತೆ. ಅವನ ಸಾಂಪ್ರದಾಯಿಕ ಮೌಲ್ಯಗಳ ವಿರುದ್ಧ. ಬಹಳವಾದರೆ ಹೆಂಡತಿಯೊಂದಿಗೆ ಒಂದೆರಡು ಗಂಟೆ ಹೆಚ್ಚಿಗೆ ಕಳೆಯಬಲ್ಲೆ ಎಂದ. ಸರಳೆಗೆ ಅದೇನೂ ಸಾಲದು. ಅಲ್ಲದೆ ಮೈಮೇಲೆ ಬೀಳುವ ಬಂಧುಗಳಿಂದ ಆಕೆಯ ಮನಶ್ಶಾಂತಿ ಭಂಗವಾಗುತ್ತದೆ. ಇಬ್ಬರಿಗೂ ಯೋಚಿಸಲು ಹಚ್ಚಿ ಅನಿಶ್ಚಿತತೆಯಲ್ಲೇ ಬೀಳ್ಕೊಟ್ಟೆ. ಮುಂದೇನಾಯಿತು ಎಂಬುದು ನನಗಿನ್ನೂ ಗೊತ್ತಾಗಿಲ್ಲ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.