ಸುಖೀ ದಾಂಪತ್ಯ ೨೪೩
ಅಂತರಾಳದಲ್ಲಿ ನಡೆಯುವ ತುಮುಲವನ್ನು ಹೊರತಂದು ಭಾವನೆಗಳನ್ನು ಒಪ್ಪಿಕೊಳ್ಳುವಂತೆ ಸಹಾಯ ಸಿಕ್ಕರೆ ಆಯ್ಕೆಯ ನಿರ್ಧಾರ ಸುಗಮವಾಗುತ್ತದೆ.
243: ಅನ್ಯೋನ್ಯತೆಗೆ ಹುಡುಕಾಟ – 22
ಒಂದೆಡೆ ಅನ್ಯೋನ್ಯತೆಯಲ್ಲಿ ಒಂದಾಗಲು ಕಾಯುತ್ತಿರುವ ಪ್ರಿಯಪತ್ನಿ, ಇನ್ನೊಂದೆಡೆ ಕುಸಿಯುತ್ತಿದ್ದ ತನ್ನನ್ನು ಕೈಹಿಡಿದಿದ್ದ ಕುಡಿತ – ಎರಡರ ನಡುವೆ ತೊಳಲಾಡುತ್ತಿರುವ ಸುರೇಶನ ಕತೆ ಹೇಳುತ್ತಿದ್ದೇನೆ. ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಕಠಿಣ ಪರಿಸ್ಥಿತಿಗೆ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳಬಾರದು ಎಂದೂ ಅರಿವು ಮಾಡಿಕೊಟ್ಟ ನಂತರ ಮುಂದಾದುದನ್ನು ಸಂಕ್ಷಿಪ್ತವಾಗಿ ಹೇಳುತ್ತಿದ್ದೇನೆ.
ಸುರೇಶನ ಕುಡಿಯುವ “ಆಚರಣೆ”ಯು ಅವನ ವ್ಯರ್ಥ ಶ್ರಮ, ಹತಾಶೆ-ನಿರಾಶೆಗಳ ಸ್ಮರಣೆಯ ಸಂಕೇತ ಎಂದು ಅರಿವು ಮಾಡಿಕೊಟ್ಟ ನಂತರ ಮಹತ್ವದ ಪ್ರಶ್ನೆಗೆ ಬಂದೆ. “ಈಗ ಹೇಳಿ: ಕುಡಿತವನ್ನು ಹೇಗೆ ನಿಲ್ಲಿಸಬೇಕು ಎಂದುಕೊಂಡಿದ್ದೀರಿ?” ಅವನು ಒಂದೇ ಮಾತಿನಲ್ಲಿ ತನ್ನ ವಿಚಾರಧಾರೆಯನ್ನು ಸಂಕ್ಷಿಪ್ತಗೊಳಿಸಿದ: “ಕುಡಿತವನ್ನು ಸಾಯಿಸಿಬಿಡುತ್ತೇನೆ, ಆಯಿತಲ್ಲ?”
ಹೆಚ್ಚಿನವರು ಇಲ್ಲಿಯೇ ಎಡವುತ್ತಾರೆ. ತನುಮನದೊಳಗೆ ಆಳವಾಗಿ ಬೇರೂರಿ ಬೆಚ್ಚಗಿನ ಅನುಭವ ಕೊಡುತ್ತಿರುವ ವಿಷಯಗಳ ವಿರುದ್ಧ ಬಾಯಿಮಾತಿನ ನಿರ್ಧಾರ ತೆಗೆದುಕೊಳ್ಳುತ್ತಾರೆ – ಗಾಢಪ್ರೇಮಿಯನ್ನು ಹಿರಿಯರು ಆಕ್ಷೇಪಿಸಿದ ತಕ್ಷಣ ಬಿಟ್ಟುಕೊಡಲು ಒಪ್ಪಿದಂತೆ. ಒಳಗಿನ ಅನುಭವವು ಯೋಚನೆಗೆ ನಿಲುಕದಷ್ಟು ಆಳವಾಗಿರುತ್ತದೆ, ಹಾಗಾಗಿ ಥಟ್ಟನೆಯ ನಿರ್ಧಾರಗಳು ಕೆಲಸ ಮಾಡುವುದಿಲ್ಲ ಎಂಬುದು ತಲೆಗೆ ಹೊಳೆಯುವುದೇ ಇಲ್ಲ. ಅದಕ್ಕೇ ಕೇಳಿದೆ. “ಕುಡಿತವನ್ನು ಹಾಸಿಗೆಗೆ ಕರೆತಂದಿದ್ದು ನೀವು ತಾನೆ? ಇಷ್ಟು ವಿರೋಧದ ನಡುವೆಯೂ ಕುಡಿತದಿಂದ ಅಗಲಿಲ್ಲ ಎಂದರೆ ಸಾಯಿಸುವುದು ಹೇಗೆ ಸಾಧ್ಯ? ಕಷ್ಟಕಾಲದಲ್ಲಿ ನೆರವಾದವನನ್ನು ಕೊಲ್ಲಲು ಮನಸ್ಸಾದರೂ ಹೇಗೆ ಬರುತ್ತದೆ?” ತಪ್ಪಿನ ಅರಿವಾಗಿ ಸುರೇಶ ನಾಲಗೆ ಕಚ್ಚಿಕೊಂಡ. ಮತ್ತೆ ಸಂದಿಗ್ಧತೆಗೆ ಬಿದ್ದ.
“ಸ್ನೇಹಿತನನ್ನು ಕೊಲ್ಲುವುದರ ಬದಲು ಧನ್ಯವಾದಗಳೊಂದಿಗೆ ಬೀಳ್ಕೊಟ್ಟರೆ ಹೇಗಿರುತ್ತದೆ?” ಎಂದೆ. ಇದು ಅವನಿಗೆ ಥಟ್ಟನೆ ಹಿಡಿಸಿತು. ಸರಿ, ಒಂದು ಗಾಜಿನ ಬಾಟಲಿಯನ್ನು ಅವನ ಮುಂದಿಟ್ಟು, “ಇದು ನಿಮ್ಮ ಇಪ್ಪತ್ತೈದು ವರ್ಷಗಳ ಸ್ನೇಹಿತ. ಇವನೊಡನೆ ಮಾತಾಡಿ.” ಎಂದು ಉತ್ತೇಜಿಸಿದೆ. ಅವನು ಬಾಟಲನ್ನು ಮುದ್ದುಮಗುವೋ ಎಂಬಂತೆ ಅಕ್ಕರೆಯಿಂದ ಎತ್ತಿಕೊಂಡು ಮೈಸವರುತ್ತ ಆರಂಭಿಸಿದ. “ಮೂವತ್ತೆರಡು ವರ್ಷಗಳ ಹಿಂದೆ ಸಿಕ್ಕಾಪಟ್ಟೆ ತೊಂದರೆಯಲ್ಲಿದ್ದೆ. ಆಗ ನೀನು ಬಂದು ದೊಡ್ಡ ಸಹಾಯ ಮಾಡಿದೆ. ಹಾಗೆ ನಮ್ಮಿಬ್ಬರ ಸ್ನೇಹ ಗಾಢವಾಯಿತು… ನಿನ್ನನ್ನ ಭೇಟಿಯಾಗದಿದ್ದರೆ ನಿದ್ರೆಯೇ ಬರುವುದಿಲ್ಲ ಎನ್ನುವ ತನಕ ಹತ್ತಿರವಾದೆ. ಬದುಕಿನ ಅರ್ಧಕಾಲ ಜೊತೆಯಾದ ನಿನ್ನನ್ನು ಬಿಟ್ಟುಕೊಡುತ್ತಿದ್ದೇನೆ… ನೀನು ತೊಂದರೆ ಕೊಡ್ತಿದ್ದೀಯಾ ಅಂತ ಕಿತ್ತು ಬಿಸಾಕುತ್ತೇನೆ ಎಂದಲ್ಲ, ಸ್ನೇಹಿತನಾಗಿ ಕಾಪಾಡಿದ್ದೀಯಾ. ನೀನಿಲ್ಲದಿದ್ದರೆ ಆತ್ಮಹತ್ಯೆಯೇ ಗತಿಯಾಗುತ್ತಿತ್ತು. ಅದಕ್ಕೆ ನಾನು ಚಿರರುಣಿ… ಆದರೆ ನನಗೀಗ ಕಷ್ಟಗಳಿಲ್ಲ. ಹಾಗಾಗಿ ನಿನ್ನ ಅಗತ್ಯ ನನಗಿಲ್ಲ. ನಿನ್ನನ್ನು ತಿರಸ್ಕರಿಸುತ್ತಿಲ್ಲ, ಕೃತಜ್ಞತೆಯಿಂದ ಬೀಳ್ಕೊಡುತ್ತಿದ್ದೇನೆ. ನನಗೆ ಸಂಕಟ ಆಗುತ್ತಿದೆ… ಆದರೂ ನಾವು ಅಗಲುವ ಕಾಲ ಬಂದಿದೆ…” ಎಂದು ನಿಲ್ಲಿಸಿ ನನ್ನ ಕಡೆಗೆ ನೋಡಿದ. “ಹೋಗುವುದಿಲ್ಲ ಎನ್ನುತ್ತಿದ್ದಾನೆ. ನನ್ನ ಸಹಾಯ ಬೇಡವಾದರೆ ಅಡ್ಡಿಯಿಲ್ಲ, ಸುಮ್ಮನೇ ನನ್ನಷ್ಟಕ್ಕೆ ನಾನಿರುತ್ತೇನೆ, ಎನ್ನುತ್ತಿದ್ದಾನೆ.” ಎಂದ. ಇನ್ನಷ್ಟು ಹೇಳಿಕೊಟ್ಟಮೇಲೆ ಮುಂದುವರೆದ.
“ನೀನಿರುವುದು ನನಗೆ ಅಭ್ಯಂತರವಿಲ್ಲ. ಆದರೆ ನಿನ್ನ ಜಾಗವೀಗ ನನ್ನವಳಿಗೆ ಬೇಕಾಗಿದೆ. ಇಲ್ಲದಿದ್ದರೆ ಆಕೆ ಹತ್ತಿರ ಬರಲಾರಳು. ನಿನ್ನನ್ನು ಇಟ್ಟುಕೊಂಡು ಆಕೆಯ ಮನಸ್ಸನ್ನು ಗೆಲ್ಲಲಾರೆ. ಮಿತ್ರನಾಗಿ ಅರ್ಥಮಾಡಿಕೋ.” ಎಂದ. ವಿನಂತಿಗೆ ಒಪ್ಪುತ್ತಿಲ್ಲ ಎಂದ. ಬಿಡದೆ ಜಪ್ಪೆಂದು ಕೂತಿರುವವನ ಬಗೆಗೆ ಹೇಗೆನ್ನಿಸುತ್ತದೆ ಎಂದಾಗ ಕೋಪ, ಅಸಹನೆ ಬರುತ್ತಿದೆ ಎಂದ. ಮತ್ತೆ ಹೇಳಿಕೊಟ್ಟಾಗ ಗಟ್ಟಿಯಾದ. “ನನ್ನನ್ನು ಕೈಗೊಂಬೆಯಂತೆ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದೀಯಾ. ಸಂಜೆಯಾದರೆ ಸಾಕು, ಆಟವಾಡಿಸುತ್ತೀಯಾ. ಇದು ನನಗಿಷ್ಟವಿಲ್ಲ. ನಿನಗೆ ಅಂಟಿಕೊಳ್ಳುವಾಗ ನಾನೊಬ್ಬನೇ ಇದ್ದೆ. ನನಗೀಗ ಕುಟುಂಬವಿದೆ. ಕುಟುಂಬಕ್ಕೆ ನನ್ನ ಅಗತ್ಯವಿದೆ. ಸಂಜೆಯಾದರೆ ಕಳೆಯಲು ನಿನಗಾದರೋ ಇತರ ಸ್ನೇಹಿತರಿದ್ದಾರೆ. ಆದರೆ ನನಗೆ ಹೆಂಡತಿ ಒಬ್ಬಳೇ. ನಿನ್ನ ಸಹವಾಸದಿಂದ ಈಗಾಗಲೇ ಕೆಟ್ಟ ಹೆಸರು ತಂದಿದ್ದೀಯಾ. ಇನ್ನೂ ಕೆಡಿಸಲು ನಾನು ಅವಕಾಶ ಕೊಡುವುದಿಲ್ಲ!” ಅವನ ಸ್ವರದಲ್ಲಿ ಆಶ್ಚರ್ಯವೆನಿಸುವ ದೃಢತೆಯಿತ್ತು. ಸ್ನೇಹಿತನನ್ನು ಬೀಳ್ಕೊಡುವ ರೀತಿಯನ್ನು ಹೇಳಿಕೊಟ್ಟ ನಂತರ ಸುರೇಶ ಮತ್ತೆ ಬಾಟಲಿನೊಡನೆ ಮಾತಾಡಿದ: “ನಿನ್ನನ್ನ ಕಳೆದುಕೊಳ್ಳುತ್ತಿದ್ದೇನೆ ಅಂತ ನನಗೂ ದುಃಖವಾಗ್ತಿದೆ. ಆದರೇನು, ಉಪಾಯವಿಲ್ಲ. ನನ್ನ ನಿರ್ಧಾರವನ್ನು ಪ್ರಶ್ನಿಸಬೇಡ. ಪ್ರೀತಿಯಿಂದಲೇ ಬೀಳ್ಕೊಡುತ್ತಿದ್ದೇನೆ. ತಿರುಗಿ ಬರಬೇಡ!” ಎಂದು ನಿಷ್ಠುರವಾಗಿ ಹೇಳಿ ಬಾಟಲ್ ಕೈಬಿಟ್ಟ.
ಈಗ ಸ್ನೇಹಿತ ಏನೆನ್ನುತ್ತಾನೆ ಎಂದಾಗ, “ಇವನು ಬಹಳ ಚತುರ! ತನಗೆ ಬೇಕೆಂದಾಗ ಭೇಟಿ ಕೊಡುತ್ತಾನಂತೆ.” ಎಂದ. ಮತ್ತೆ ಹೇಳಿಕೊಟ್ಟೆ. “ಇಷ್ಟು ವರ್ಷ ನನ್ನನ್ನು ರಕ್ಷಿಸಿದ್ದೀಯಾ. ಈಗ ತೊಂದರೆ ಕೊಡಲು ನಿನಗೆ ಹೇಗೆ ಮನಸ್ಸು ಬಂತು? ನನ್ನ ಬೇಡಿಕೆಯನ್ನು ಗೌರವಿಸಿ ಮರ್ಯಾದೆ ಉಳಿಸಿಕೋ. ಇಲ್ಲದಿದ್ದರೆ ನೀನು ನನ್ನ ಬದುಕಿನಲ್ಲಿ ಬಂದ ಉದ್ದೇಶಕ್ಕೇ ಬೆಲೆ ಇಲ್ಲದಂತಾಗುತ್ತದೆ.” ಎಂದ.
ಸ್ವಲ್ಪ ಹೊತ್ತಿನ ನಂತರ, “ಇವೊತ್ತು ರಾತ್ರಿಯಾದರೂ ನಿನ್ನೊಂದಿಗೆ ಕಳೆಯುತ್ತೇನೆ ಎನ್ನುತ್ತಿದ್ದಾನೆ.” ಎಂದು ನನಗೆ ಹೇಳಿ, ಬಾಟಲಿನತ್ತ ತಿರುಗಿದ. “ಇನ್ನೊಂದು ರಾತ್ರಿಯಾದರೂ ನಿನ್ನೊಂದಿಗೆ ಕಳೆಯಲು ಇಷ್ಟವಿಲ್ಲ. ಯಾಕೆಂದರೆ ನನ್ನ ಹೆಂಡತಿ ಮಲಗುವ ಹಾಸಿಗೆಯಲ್ಲಿ ನೀನಿರುವುದು ನನಗೆ ಬೇಡ. ನನ್ನನ್ನು ಶಾಂತಿಯಿಂದ ಬಿಟ್ಟುಕೊಟ್ಟರೆ ನಿನ್ನ ಉಪಕಾರವನ್ನು ಸ್ಮರಿಸುತ್ತೇನೆ.” ಎಂದು ಬಾಟಲನ್ನು ದೂರವಿಟ್ಟ. “ನಿನ್ನ ಜೊತೆಗಿದ್ದರೆ ನನ್ನನ್ನು ನಾನೇ ಕ್ಷಮಿಸದೆ ಕೀಳಾಗುತ್ತೇನೆ. ಆತ್ಮವಿಶ್ವಾಸ ಕಳೆದುಕೊಂಡು ನಿರ್ಜೀವ ಆಗುತ್ತೇನೆ.” ಎಂದು ಭಯ-ದೌರ್ಬಲ್ಯಗಳನ್ನು ಹೊರತಂದ!
ಕೆಲವು ಕ್ಷಣ ಬಾಟಲನ್ನು ನೋಡುತ್ತಿದ್ದವನು, “ಈಗವನು ತನ್ನ ಪಾಡಿಗೆ ಸುಮ್ಮನೇ ನಿಂತುಕೊಂಡಿದ್ದಾನೆ.” ಎಂದು ಸ್ವಗತವಾಡಿದ. “ಏನೋ ಯೋಚಿಸುತ್ತಿದ್ದೀಯಾ… ಎಷ್ಟು ಹೊತ್ತಾದರೂ ಸರಿ, ಯೋಚಿಸು. ನಂತರ ಹೊರಡಲೇಬೇಕು. (ನನ್ನ ಸನ್ನೆಯಂತೆ) ನಾನಂತೂ ಹೊರಡುತ್ತೇನೆ. ನಮಸ್ಕಾರ!” ಎಂದು ಕೋಣೆಯಿಂದ ಹೊರಹೋದ. ಕೂಡಲೇ ನಾನು ಬಾಟಲನ್ನು ಮರೆಮಾಡಿದೆ.
ಮರಳಿ ಬಂದವನ ಮುಖಭಾವ ಬದಲಾಗಿತ್ತು. ತಲೆಯೊಳಗಿನ ಗೀಜಗನ ಗೂಡು ಸ್ತಬ್ಧವಾಗಿದೆ, ಸಮಾಧಾನ ಅನ್ನಿಸುತ್ತಿದೆ ಎಂದ. ಬಿಟ್ಟುಹೋದ ಸ್ನೇಹಿತ ಭವಿಷ್ಯದಲ್ಲಿ ಮುಖಾಮುಖಿಯಾದರೆ ಏನು ಮಾಡಬಹುದು? ಬಯ್ಯುವುದಿಲ್ಲ ಅಥವಾ ಓಡಿಹೋಗುವುದಿಲ್ಲ; ಬದಲಾಗಿ ಕರುಣೆಯಿಂದ, “ನಿನ್ನ ಸಹಾಯ ಬೇಕಿಲ್ಲ. ಎಲ್ಲಾದರೂ ದೂರವಿದ್ದು ಸುಖವಾಗಿರು.” ಎಂದು ಹೇಳಲು, ತನ್ಮೂಲಕ ಸ್ವಯಂಪ್ರೀತಿ ವ್ಯಕ್ತಪಡಿಸಲು ತಯಾರಾದ.
ಈ ದೃಷ್ಟಾಂತದ ಬಗೆಗೆ ಯಾಕೆ ಬರೆದೆ? ನಮ್ಮಲ್ಲಿ ಅನೇಕರು ನಮ್ಮ ನೇತ್ಯಾತ್ಮಕ ಭಾವನೆಗಳ ಜೊತೆಗೆ ಸಂಬಂಧವಿಟ್ಟುಕೊಳ್ಳಲು ಹಿಂದೆಗೆಯುತ್ತೇವೆ. ಅವುಗಳನ್ನು ಮರೆಮಾಚಲು ಧನಾತ್ಮಕ ಮುಖವಾಡ ಧರಿಸುತ್ತೇವೆ. ಒಳಗಿನ ತಳಮಳವನ್ನು ಹತ್ತಿಕ್ಕಲು ಕುಡಿತದಂಥ ಚಟಗಳಿಗೆ ಜಾಗ ಕೊಡುತ್ತೇವೆ. ಅಂತರಾಳದಲ್ಲಿ ನಡೆಯುವುದನ್ನು ಹೊರತಂದು ಭಾವನೆಗಳನ್ನು ಒಪ್ಪಿಕೊಳ್ಳುವಂತೆ ಸಹಾಯ ಸಿಕ್ಕರೆ ಸಾಕು, ಆಯ್ಕೆಯ ನಿರ್ಧಾರಕ್ಕೆ ಹಾದಿ ಸುಗಮವಾಗುತ್ತದೆ. (ಇದೀಗ ಮಹಿಳೆಯೊಬ್ಬರು, “ಕುಡಿತವು … ಕುಸಿದು ಬೀಳುವುದರಿಂದ ರಕ್ಷಿಸಿದೆ” ಎನ್ನುವ ನನ್ನ ಮಾತಿಗೆ ಆಕ್ಷೇಪಿಸಿದ್ದಾರೆ. ಧನ್ಯವಾದಗಳು. ಲೇಖನದ ಉತ್ತರಾರ್ಧದಿಂದ ನನ್ನ ಹೇಳಿಕೆಯಲ್ಲಿ ಹೊಸ ಅರ್ಥ ಕಾಣಬಹುದು ಎಂದುಕೊಂಡಿದ್ದೇನೆ.)
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.