Please wait...


ವಿವಾಹೇತರ ಲೈಂಗಿಕ ಸಂಪರ್ಕದ ಹೆಚ್ಚಳವನ್ನು ನೋಡಿದರೆ ಲೈಂಗಿಕ ಸಂಬಂಧಗಳು ದಾಂಪತ್ಯದಿಂದ ಕಳಚಿಕೊಳ್ಳುತ್ತಿರುವುದು ಎದ್ದುಕಾಣುತ್ತದೆ.

219: ಆಧುನಿಕ ದಾಂಪತ್ಯಗಳು – 4

ಆಧುನಿಕ ದಾಂಪತ್ಯಗಳು ಹಿಡಿಯುತ್ತಿರುವ ಕವಲುದಾರಿಯ ಬಗೆಗೆ ಚರ್ಚಿಸುತ್ತಿದ್ದೇವೆ. ಈ ಸಲ ಲೈಂಗಿಕ ಕ್ರಿಯೆ ಹಾಗೂ ಬಾಂಧವ್ಯದ ಬಗೆಗೆ ಕೆಲವು ವಿಚಾರಗಳನ್ನು ತಿಳಿಯೋಣ.

ಮುಂಚೆ ದಾಂಪತ್ಯದೊಳಗೆ ನಡೆಯುತ್ತಿದ್ದ ಲೈಂಗಿಕ ಕ್ರಿಯೆಗೆ ಬಾಂಧವ್ಯ ಬೇಕೇಬೇಕು ಎಂದಿರಲಿಲ್ಲ. ವೈವಾಹಿಕ ಸಂಬಂಧ ಬೆಳೆಸುವುದು ಸಂತಾನೋತ್ಪತ್ತಿಗಾಗಿ ಹಾಗೂ ಗಂಡಿನ ಸುಖಕ್ಕಾಗಿ – ಅದಕ್ಕೆಂದೇ ಅಪರಿಚಿತರು ಮದುವೆಯಾದರೂ ಸಂಭೋಗ ನಡೆಯಲೇಬೇಕಿತ್ತು – ಆದುದರಿಂದ, ಮೊದಲ ರಾತ್ರಿ ಹಾಸಿಗೆ ರಕ್ತವಾಗದಿದ್ದರೆ ಏನೇನೋ ಅಂದುಕೊಳ್ಳುವ ಸಮುದಾಯಗಳು ಈಗಲೂ ಇವೆ. ಹಾಗೆಂದು ಹೆಣ್ಣುಗಂಡುಗಳ ನಡುವೆ ಪ್ರೀತಿಯ ವ್ಯವಹಾರ ಇರಲಿಲ್ಲ ಎಂದಲ್ಲ. ಆದರೆ “ಮೈಸೂರು ಮಲ್ಲಿಗೆ”ಯಂಥ ಅರ್ಥವತ್ತಾದ ದಾಂಪತ್ಯಗಳು ಅಪರೂಪವಾಗಿದ್ದುವು. ಮಹತ್ವದ ಅಂಶವೆಂದರೆ, ಆಗಿನ ನವವಿವಾಹಿತರಿಗೆ ಮಾಡಲು ಕೈತುಂಬ ಕೆಲಸವಿತ್ತೇ ವಿನಾ ಈಗಿನವರಿಗೆ ಇರುವಷ್ಟು ಜವಾಬ್ದಾರಿ ಇರಲಿಲ್ಲ. ಯಾಕೆಂದರೆ ಸಂಪಾದನೆಯ ಹೊಣೆ ಇಡೀ ಕುಟುಂಬದ್ದು, ಹೆಂಡತಿಯ ಹೊಣೆ ಅತ್ತೆಯದು, ಸಂತಾನದ ಹೊಣೆ ಎರಡೂ ಕಡೆಯ ಹಿರಿಯರದು ಆಗಿತ್ತು. ಜವಾಬ್ದಾರಿ ಹಾಗೂ ಕರ್ತವ್ಯಗಳು ತೆಗೆದುಹಾಕಿದರೆ ಕೇವಲ ಲೈಂಗಿಕ ಸಂಬಂಧ ಮಾತ್ರ ಉಳಿಯುತ್ತದೆ. ತಾಯ್ತಂದೆಯರಿಗೆ ವಿಧೇಯರಾದರೆ ಸಾಕೇ ಸಾಕಿತ್ತು. ಹಾಗಾಗಿ ಸಂಭೋಗಕ್ಕೆ ಸಾಮರ್ಥ್ಯ ಬಂದರೆ ದಾಂಪತ್ಯ ನಡೆಸುವ ಸಾಮರ್ಥ್ಯ ಬಂದಿದೆ ಎಂದು ತಪ್ಪು ತಿಳಿಯಲಾಗುತ್ತಿತ್ತು.

ಮುಂಚಿನ ದಾಂಪತ್ಯಗಳಲ್ಲಿ ಹೆಣ್ಣಿನ ಸ್ಥಾನ ಏನಿತ್ತು? ಹೆಣ್ಣು ಗಂಡನಿಗೆ ವಿಧೇಯಳಾಗಿ, ಅವನ ಅಗತ್ಯಗಳನ್ನು ಪೂರೈಸುತ್ತ, ಕೇಳಿದಾಗ ಮೈ ಒಪ್ಪಿಸಿಕೊಳ್ಳುತ್ತ, ಮಗು ಹೆರುವ ವ್ಯಕ್ತಿಯೆಂದು ಭಾವಿಸಲಾಗುತ್ತಿತ್ತು (“ಕಾರ್ಯೇಷು ದಾಸಿ…ಶಯನೇಷು ವೇಶ್ಯಾ…”). ಆಕೆಯ ಬದುಕಿನಲ್ಲಿ ಏನೇ ಸಿಗದಿದ್ದರೂ ತಾಯ್ತನ ಒಂದು ಸಿಕ್ಕರೆ ಸಾಕು, ಜನ್ಮ ಸಾರ್ಥಕ ಎಂದು ನಂಬಲಾಗುತ್ತಿತ್ತು. ಆಕೆಗೂ ಪ್ರತ್ಯೇಕವಾದ ಲೈಂಗಿಕ ಬಯಕೆಗಳು ಹಾಗೂ ಸ್ವಂತ ಅಸ್ಮಿತೆ ಇರುವುದು ಅಷ್ಟಾಗಿ ಮಹತ್ವ ಪಡೆದಿರಲಿಲ್ಲ. ಸುಖ ಸಿಗುತ್ತಿಲ್ಲ ಎಂದು ದೂರಿದರೆ, ಮಕ್ಕಳ ಮುಖನೋಡಿ ನುಂಗಿಕೊಳ್ಳಲು ಹೇಳಲಾಗುತ್ತಿತ್ತು.

ಇದಕ್ಕೆ ಹೋಲಿಸಿದರೆ, ಆಧುನಿಕ ಹೆಣ್ಣುಗಂಡುಗಳ ಸಂಬಂಧಗಳಲ್ಲಿ ಅಭೂತಪೂರ್ವ ಬದಲಾವಣೆ ಆಗುತ್ತಿದೆ ಎಂದೆನಿಸುತ್ತದೆ. ಈಗಿನವರು ಹೆಚ್ಚಿನಂಶ ಬಾಂಧವ್ಯವನ್ನು ಬಯಸುತ್ತಾರೆ. ಸಮಾನ ಸ್ನೇಹಪರತೆಯೇ ಇವರನ್ನು ಪರಸ್ಪರ ಸೆಳೆಯುವ ಸೂಜಿಗಲ್ಲಾಗಿದೆ. ಹೆಂಗಸರು ಹೆಚ್ಚು ಹೆಚ್ಚು ಪ್ರಜ್ಞಾವಂತರಾಗುತ್ತ ತಮ್ಮ ಭಾವನೆಗಳೊಂದಿಗೆ ವಿವೇಚನೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.

ಇತ್ತೀಚಿನ ಯುವಕ-ಯುವತಿಯರ ಸಂಬಂಧದಲ್ಲಿ ಲೈಂಗಿಕತೆಯ ಪಾತ್ರವು ವಿಶಿಷ್ಟವಾಗಿದ್ದು, ತನ್ನದೇ ರೀತಿಯ ಮಹತ್ವ ಪಡೆಯುತ್ತಿದೆ. ವಿವಾಹಕ್ಕೆ ಹೊರತಾದ ಲೈಂಗಿಕ ಸಂಬಂಧಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಲೈಂಗಿಕ ಸಂಬಂಧಗಳು ವಿವಾಹದಿಂದ ಕಳಚಿಕೊಳ್ಳುತ್ತಿರುವುದು ಎದ್ದು ಕಾಣುತ್ತದೆ. ಇಲ್ಲಿ ಹೆಣ್ಣಿನ ಆಯ್ಕೆಗೆ ಪ್ರಾಮುಖ್ಯತೆ ಇರುವುದು ವೈಶಿಷ್ಟ್ಯ. ಹುಡುಗಿಯರು ಒಡನಾಟದ (dating) ಶುರುವಿನಲ್ಲೇ ಕಾಮಕೂಟಕ್ಕೆ ಹಾತೊರೆಯುವ ಹುಡುಗರನ್ನು (ತಮಗೆ ಇಷ್ಟವಿಲ್ಲದಿದ್ದರೆ) ದೂರವಿಡುವುದು ಇನ್ನೊಂದು ವೈಶಿಷ್ಟ್ಯ – ಇಷ್ಟೊಂದು ಸ್ವಂತಿಕೆಯು ಹೆಣ್ಣಿಗೆ ಮುಂಚೆಯೆಂದೂ ಇರಲಿಲ್ಲ. ಮೂವತ್ತು ವರ್ಷಗಳ ಹಿಂದೆ ನಮ್ಮ ಕೆಲಸದವಳು ತನ್ನ ಸ್ನೇಹಿತನನ್ನು ಕೂಡಲು ಹೊರಟಿದ್ದಳು. ಗರ್ಭಿಣಿಯಾದರೆ ಏನು ಗತಿ ಎಂದು ಕೇಳಿದಾಗ, ಇನ್ನೇನು ನೇಣು ಹಾಕಿಕೊಳ್ಳಬೇಕಷ್ಟೆ ಎಂದಳು. ಸಂಭೋಗ ಬೇಡ ಎನ್ನಬಹುದಲ್ಲವೆ ಎಂದಿದ್ದಕ್ಕೆ, ಹಾಗೆ ಮಾಡಿದರೆ ಸ್ನೇಹಿತನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದಳು.

ಮುಂಚಿನ ತಲೆಮಾರಿನಲ್ಲಿ ವಿವಾಹಪೂರ್ವ ಲೈಂಗಿಕ ಸಂಪರ್ಕಕ್ಕೆ ನಿಷೇಧವಿದ್ದಂತೆ ಸಂಪರ್ಕ ನಡೆದ ನಂತರ ಮದುವೆಗೆ ಒಪ್ಪದಿರುವುದು ಕೂಡ ಸಮಾಜದ ನಿಯಮಕ್ಕೆ ವಿರುದ್ಧವಾಗಿತ್ತು. ಅಷ್ಟೇ ಅಲ್ಲ, ಹುಡುಗ-ಹುಡುಗಿ ಓಡಾಡಿಕೊಂಡಿದ್ದಲ್ಲಿ ಮದುವೆ ಆಗಲೇಬೇಕು ಎನ್ನುವ ಕಾಲವಿತ್ತು.. ಒಂದೇ ಒಂದು ಸಲ ಲೈಂಗಿಕ ಸಂಪರ್ಕ ನಡೆದಿರುವ ಕಾರಣಕ್ಕಾಗಿ ದಾಂಪತ್ಯಕ್ಕೆ ಅಯೋಗ್ಯರನ್ನು ಮದುವೆ ಆಗುವ ಪ್ರಸಂಗವಿತ್ತು. ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ, ಅವನನ್ನೇ  ಮದುವೆ ಆದವರೂ ಇದ್ದಾರೆ. ನಲವತ್ತು ವರ್ಷಗಳ ಹಿಂದೆ ಸಂಪ್ರದಾಯಸ್ಥ ಕುಟುಂಬದ ಹದಿಹರೆಯದ ಹುಡುಗಿ ಬಂದಿದ್ದಳು. ಆಕೆಗೆ ಮುಟ್ಟು ತಪ್ಪಿತ್ತು. ಸ್ನೇಹಿತ ತನ್ನನ್ನು ಮದುವೆಯಾಗುತ್ತಾನೆ ಎಂದು ಆತ್ಮವಿಶ್ವಾಸದಿಂದ ಹೇಳಿದಳು. ಅವನು ತನ್ನ ತಾಯ್ತಂದೆಯರನ್ನು ಒಪ್ಪಿಸಲು ಹೋದವನು ಮರಳಲೇ ಇಲ್ಲ. ಆಗ ಅವಳು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ವಿರಹ, ಖಿನ್ನತೆ, ರಹಸ್ಯ ಗರ್ಭಪಾತದ ನೋವು, ಮನೆಯವರಿಂದ ತಿರಸ್ಕಾರ, ಒಂಟಿತನ, ಶಿಕ್ಷಣದಲ್ಲಿ ಹಿಂದುಳಿದುದು… ಇದೆಲ್ಲದರಿಂದ ಹೊರಬರಲು ಐದು ವರ್ಷ ತೆಗೆದುಕೊಂಡಳು. ಹೀಗೆ ವಿವಾಹಪೂರ್ವ ಲೈಂಗಿಕ ಕ್ರಿಯೆಯು ಮದುವೆ ಆದರೂ ಆಗದಿದ್ದರೂ ಹೆಣ್ಣಿನ ಸ್ವಂತಿಕೆಗೆ ಮಾರಕವಾಗುತ್ತಿತ್ತು.

ಒಂದುಕಡೆ ವಿವಾಹದ ಹೊರತಾದ ಲೈಂಗಿಕತೆಯ ಅಭಿವ್ಯಕ್ತಿಯು ಹೆಚ್ಚಾಗುತ್ತಿರುವಾಗ ಇನ್ನೊಂದು ಕಡೆ ದಾಂಪತ್ಯಗಳಲ್ಲಿ ಲೈಂಗಿಕ ಬದುಕು ಮಹತ್ವ ಕಳೆದುಕೊಳ್ಳುತ್ತ ಸಾಂಗತ್ಯವು ಹೆಚ್ಚು ಮಹತ್ವದ್ದಾಗುತ್ತಿದೆ. ಮದುವೆಯ ಹೆಸರಿನಲ್ಲಿ ಒತ್ತಾಯದ ಲೈಂಗಿಕ ಕ್ರಿಯೆಗೆ ಒಳಗಾಗುವುದು ತೀರ ಕಡಿಮೆಯಾಗಿದೆ. ಗಂಡುಹೆಣ್ಣುಗಳಿಬ್ಬರೂ ಲೈಂಗಿಕತೆಯ ವಿಷಯದಲ್ಲಿ ಸ್ವಂತಿಕೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮದುವೆ ಆಗಿರುವುದನ್ನು ಪಕ್ಕಕ್ಕಿಟ್ಟು, ತನಗೆ ಲೈಂಗಿಕ ಕ್ರಿಯೆ ಬೇಕೇ ಬೇಡವೆ ಎಂಬ ಆಯ್ಕೆಯನ್ನು ಮಾಡುತ್ತಿದ್ದಾರೆ. ಹಿತ ಎನ್ನಿಸುವ ಲೈಂಗಿಕ ಸಂಪರ್ಕ ಶುರುವಾಗಲು ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಾರೆ. ಒಬ್ಬರು ಸಮಯ ಕೇಳಿದರೆ ಇನ್ನೊಬ್ಬರು ಸ್ನೇಹದಿಂದ ಸ್ಪಂದಿಸುತ್ತಾರೆ. ವಿವಾಹಿತರಲ್ಲಿ ಸಾಂಗತ್ಯ ಭದ್ರವಾಗಿ ಒಂದು ಮಟ್ಟದ ನಂಬಿಕೆ ಬರುವ ತನಕ ಲೈಂಗಿಕ ಸಂಪರ್ಕವನ್ನು ಮುಂದೂಡುವುದು ಸಾಮಾನ್ಯವಾಗಿದೆ. ಹೀಗೆ ಇತ್ತೀಚಿನ ದಂಪತಿಗಳು ಮುಂಚಿನವರಂತೆ ಲೈಂಗಿಕ ಕ್ರಿಯೆಯನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಳ್ಳದಿರುವುದು ಗಮನಾರ್ಹ. ಅದರೆ, ಇದು ಹಿರಿಯರಿಗೆ ನುಂಗಲಾರದ ತುತ್ತಾಗಿದೆ – ಅದನ್ನು ಅವರು ಮಗು ಏಕೆ ಆಗಿಲ್ಲವೆಂದು ಎಂದು ಪರೋಕ್ಷವಾಗಿ ಪ್ರಶ್ನಿಸುತ್ತಿದ್ದಾರೆ. ವಿಚಿತ್ರ ಏನೆಂದರೆ, ಹೊಂದಾಣಿಕೆ ಇರುವ ದಾಂಪತ್ಯಗಳಲ್ಲೂ ಕಾಮಕೂಟದ ಆವೃತ್ತಿ ಇಳಿಮುಖ ಆಗುತ್ತಿದೆ. ಇದಕ್ಕೆ ಹೊತ್ತು ಕಳೆಯುವ ಇತರ ರೀತಿಗಳು ಕಾರಣ ಆಗಿರಬಹುದು.

ಪ್ರೇಮವಿವಾಹಗಳ ಬಗೆಗೆ ಹಿರಿಯರ ಕಲ್ಪನೆಗಳನ್ನು ಸ್ವಲ್ಪ ತಿಳಿಯೋಣ. ಮಕ್ಕಳ ಪ್ರೇಮವಿವಾಹಗಳು ತಮ್ಮ ವಿರುದ್ಧ ನಡೆಯುತ್ತವೆ ಎಂದು ಅನೇಕ ಹಿರಿಯರು ತಿಳಿದಿದ್ದಾರೆ. ಇದು ತಮ್ಮ ವಿರುದ್ಧ ಮಾಡುವ ಮಸಲತ್ತಿನಂತೆ ನೋಡುತ್ತಾರೆ (ಉದಾ. “ಮಾಂಸಾಹಾರಿ ಹುಡುಗಿಯನ್ನು ಪ್ರೀತಿಸಿದ್ದು ನಮ್ಮ ನೀತಿಯನ್ನು ಕೆಡಿಸಲಿಕ್ಕೆ”). ವಾಸ್ತವಿಕತೆ ಹಾಗಿಲ್ಲ. ಮಕ್ಕಳು ತಾವು ಆರಿಸಿದ ಸಂಗಾತಿಯನ್ನು ಹಿರಿಯರು ಒಪ್ಪುವಂತೆ ಮಾಡಲು ಹರಸಾಹಸ ಮಾಡುತ್ತಾರೆ. ಬೆಳಿಗ್ಗೆ ಪಾರ್ಕಿನಲ್ಲಿ ಹಲವು ಪ್ರೇಮಿಗಳು ಮಾತಾಡುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಇವರು ತಮ್ಮ ತಾಯ್ತಂದೆಯರನ್ನು ಮನವೊಲಿಸುವುದರ ಬಗೆಗೆ ತಿಂಗಳುಗಟ್ಟಲೆ ಚರ್ಚೆ ನಡೆಸುತ್ತಾರೆ. ಯಾಕೆ? ಹಿರಿಯರು ಜಾತಿ, ಅಂತಸ್ತು, ಹಾಗೂ ತಮ್ಮ ಹಟಮಾರಿತನಕ್ಕೆ ಮಹತ್ವ ಕೊಡುತ್ತಾರೆ. ಇದರಿಂದ ಏನು ಗೊತ್ತಾಗುತ್ತದೆ? ಹಿರಿಯರು ಮಕ್ಕಳನ್ನು ನಂಬುತ್ತಿಲ್ಲ. ಕಾರಣ? ತಮ್ಮದೇ ಆದ ಗೊಂದಲಮಯ ಸ್ಥಿತಿಯ ಕಾರಣದಿಂದ ಮಕ್ಕಳನ್ನು ಚೆನ್ನಾಗಿ ಬೆಳೆಸಿಲ್ಲ ಎಂಬ ತಪ್ಪಿತಸ್ಥ ಭಾವ ಅವರನ್ನು ಕಾಡುತ್ತದೆ. ಒಂದುವೇಳೆ ಮಕ್ಕಳನ್ನು ಸರಿಯಾಗಿ ಬೆಳೆಸಿದುದರ ಬಗೆಗೆ ಆತ್ಮವಿಶ್ವಾಸ ಇದ್ದರೆ ಅವರನ್ನೂ ಅವರ ಆಯ್ಕೆಯನ್ನೂ ಮೆಚ್ಚುತ್ತಿದ್ದರು.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಅನೇಕ ನವದಂಪತಿಗಳ ಜಗಳಗಳು ಗಂಡಹೆಂಡಿರ ನಡುವೆ ಆಗಿರದೆ ಹಿರಿಯರು ಹಾಗೂ ಕಿರಿಯರ ನಡುವೆ ಆಗುತ್ತವೆ!

218: ಆಧುನಿಕ ದಾಂಪತ್ಯಗಳು – 3

ನವಜನಾಂಗವು ಹಿರಿಯರ ದಾಂಪತ್ಯಗಳ ವೈಫಲ್ಯವನ್ನು ನೋಡಿ ರೂಢಿಗತ ದಾಂಪತ್ಯ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದು, ತಮ್ಮದೇ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದೆ. ವಿಷಯ ಹೀಗಿರುವಾಗ ಹಿರಿಯರ ಹಾಗೂ ಕಿರಿಯರ ನಡುವೆ ಘರ್ಷಣೆ ನಡೆಯದೆ ಇದ್ದೀತೆ? ಇದರ ಮಗ್ಗಲುಗಳನ್ನು ಒಂದು ದೃಷ್ಟಾಂತದಿಂದ ಅರ್ಥಮಾಡಿಕೊಳ್ಳೋಣ:

ಮೂವತ್ತು ದಾಟಿದ ಮನೋಜ-ಮಾನವಿ (ಹೆಸರು ಬದಲಾಯಿಸಲಾಗಿದೆ) ಹಿರಿಯರಿಂದ ವ್ಯವಸ್ಥೆಗೊಂಡು ದಂಪತಿಗಳಾಗಿ ಕೆಲವೇ ತಿಂಗಳಾಗಿದೆ. ತೀವ್ರ ಮನಸ್ತಾಪದಿಂದ ಇಬ್ಬರೂ ಬೇರೆಬೇರೆಯಾಗಿದ್ದಾರೆ. ಕಾರಣ? ಕಾರಣ ಇಲ್ಲಿ ಮುಖ್ಯವಲ್ಲ, ಜಗಳಗಳು ಆಗುತ್ತಿರುವುದು ಮುಖ್ಯ. ಜಗಳ ಯಾವಾಗ ಶುರುವಾಯಿತು? ಹಾಗೆ ನೋಡಿದರೆ ಮದುವೆ ನಿಶ್ಚಯ ಆಗಿ, ಹುಡುಗ-ಹುಡುಗಿ ಮಾತಾಡಲು ಶುರುಮಾಡಿದಾಗಿನಿಂದ ಚಿಕ್ಕಪುಟ್ಟ ವಿಷಯ ಎತ್ತಿಕೊಂಡು ಜಗಳಗಳು ಆಗುತ್ತಲೇ ಇದ್ದುವು. ಎರಡು ಸಲ ಇನ್ನೇನು ಸಂಬಂಧ ಮುರಿಯಬೇಕು ಎನ್ನುವ ಮಟ್ಟಿಗೆ ಹೋಗಿತ್ತಂತೆ. ಯಾಕೆ ಮುರಿಯಲಿಲ್ಲ ಎಂದರೆ, ಛತ್ರ ಹಿಡಿದು, ಲಗ್ನಪತ್ರಿಕೆ ಹಂಚಿಯಾಗಿತ್ತು. ಹಾಗಾಗಿ ಹಿರಿಯರು ಒಪ್ಪಲಿಲ್ಲವಂತೆ. “ಒಂದುಸಲ ಕೂಡಿರಲು ಶುರುವಾದರೆ ಎಲ್ಲವೂ ಕ್ರಮೇಣ ಸರಿಹೋಗುತ್ತದೆ.” ಎಂದು ಧೈರ್ಯ ಕೊಟ್ಟರಂತೆ. ಅದಕ್ಕೆ ವ್ಯತಿರಿಕ್ತವಾಗಿ ಮಧುಚಂದ್ರಕ್ಕೆ ಹೋದವರು ನಡೆಯಬೇಕಾದುದು ನಡೆಯದೆ ಜಗಳ ಆಡಿಕೊಂಡು ಬಂದಿದ್ದು, ಪರಸ್ಪರರಿಂದ ವಿಮುಖರಾಗಿದ್ದಾರೆ. ಈಗ ಇಬ್ಬರ ಕಡೆಯ ಹಿರಿಯರು ಏನೆನ್ನುತ್ತಾರೆ? “ಹುಡುಗ-ಹುಡುಗಿ ನಮ್ಮ ಸಮ್ಮುಖದಲ್ಲಿ ಪರಸ್ಪರ ಮಾತಾಡಿ ಒಪ್ಪಿಕೊಂಡಿದ್ದಾರೆ. ನಂತರವೇ ಮದುವೆಯ ತಾರೀಖು ನಿಶ್ಚಯಿಸಿದ್ದು. ಮೂರು ತಿಂಗಳ ಅವಧಿಯಲ್ಲಿ ವ್ಯವಹರಿಸಿ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲು ಸಾಕಷ್ಟು ಅವಕಾಶ ಕೊಟ್ಟಿದ್ದೆವು. ಅವರು ಮದುವೆ ಬೇಡವೆಂದಾಗ ನಿಲ್ಲಿಸುವುದಕ್ಕೆ ತೀರ ತಡವಾಗಿತ್ತು. ಈಗ ಇಬ್ಬರಿಗೂ ಬುದ್ಧಿ ಹೇಳುತ್ತಿದ್ದೇವೆ, ನೀವೂ ಹೇಳಿ.”

ಮನೋಜ-ಮಾನವಿಯ ನಡುವೆ ನಡೆಯುತ್ತಿರುವುದನ್ನು ನೋಡಿದರೆ ಹಲವು ಪ್ರಶ್ನೆಗಳು ತಲೆಯೆತ್ತುತ್ತವೆ.

ಸಂಬಂಧ ಜೋಡಿಸುವಾಗ ನಿಶ್ಚಿತಾರ್ಥದ ನಂತರ ಮದುವೆಗೆ ಕಾಲಾವಕಾಶ ಕೊಡುವ ಉದ್ದೇಶವೇನು? ನಮ್ಮಲ್ಲಿ “ವಿವಾಹ” ಎನ್ನುವ ಸಾಂಕೇತಿಕ ವಿಧಿಯು ಎಷ್ಟೊಂದು ದೈತ್ಯಾಕಾರವಾಗಿ ಬೆಳೆದಿದೆ ಎಂದರೆ ಈ ಸಮಾರಂಭದ ತಯಾರಿಗೇ ಸಮಯ, ಕೆಲಸ, ಹಣ ಎಲ್ಲವೂ ಕೈಮೀರುತ್ತವೆ. ಇಂಥದ್ದರಲ್ಲಿ ಮದುವೆ ಮುಗಿದರೆ ಸಾಕು ಎಂದು ಹಿರಿಯರು ಒದ್ದಾಡುತ್ತಿರುವಾಗ ರದ್ದುಪಡಿಸಲು ಯಾರು ತಾನೇ ಮನಸ್ಸು ಮಾಡುತ್ತಾರೆ? ಹೀಗಾಗಿ ಹೆಣ್ಣುಗಂಡುಗಳು ಭಾವೀ ಸಂಗಾತಿಯ ಬಗೆಗೆ ಭ್ರಮನಿರಸನ ಹೊಂದಿದರೂ ಹಿರಿಯರ ಇಷ್ಟದ ವಿರುದ್ಧ ಹೋಗಲಾರರು. ಹಾಗೆಂದು ಮದುವೆಯ ನಂತರ ಅರ್ಥವತ್ತಾದ ಸಂಬಂಧವನ್ನೂ ಕಟ್ಟಿಕೊಳ್ಳಲಾರರು. ಇದರರ್ಥ ಏನು? ನಿಶ್ಚಿತಾರ್ಥದ ನಂತರದ ಅವಧಿಯು ವಿವಾಹಕ್ಕೆ ಸಿದ್ಧತೆಗಾಗಿ ಇದೆಯೇ ಹೊರತು ದಾಂಪತ್ಯದ ಸಿದ್ಧತೆಗೆ ಅಲ್ಲ! – ಒಂದುವೇಳೆ ದಾಂಪತ್ಯಕ್ಕೆ ಸಿದ್ಧತೆ ಉದ್ದೇಶವಾದರೆ ಇಬ್ಬರೂ ಒಡನಾಟದಲ್ಲಿ ಸಾಕಷ್ಟು ಕಾಲಕಳೆದು, ಪರಸ್ಪರ ಒಪ್ಪದ ಹೊರತು ನಿಶ್ಚಿತಾರ್ಥ ಮಾಡುತ್ತಿರಲಿಲ್ಲ. ಅಂದರೆ ಇಲ್ಲಿ ಹಿರಿಯರು ಮಕ್ಕಳ ಇಷ್ಟವನ್ನು ಸೂಕ್ಷ್ಮವಾಗಿಯಾದರೂ ಅಲಕ್ಷಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಅನಿವಾರ್ಯವಾಗಿ ಮದುವೆಗೆ ಒಳಗಾಗುವ ಪ್ರಸಂಗದಲ್ಲಿ ಹೆಣ್ಣುಗಂಡುಗಳ ಮನಸ್ಸಿನಲ್ಲಿ ಏನು ನಡೆಯುತ್ತದೆ? ಸಂಬಂಧವನ್ನು ಒಪ್ಪದಿರುವಾಗ ಸಂಗಾತಿಯ ಬಗೆಗೆ ಬೇಡದ ಭಾವ ಇರುತ್ತದೆಯೇ ಹೊರತು ವೈಯಕ್ತಿಕವಾಗಿ ಕೋಪ, ಅಸಹನೆ, ತಿರಸ್ಕಾರ ಇತ್ಯಾದಿ ಇರುವುದಿಲ್ಲ. ಒಂದುವೇಳೆ ಮದುವೆ ಮುರಿದಿದ್ದರೆ “ಆ ವ್ಯಕ್ತಿ”ಯನ್ನು ಮರೆತೇಬಿಡುತ್ತಿದ್ದರು. ಹಿರಿಯರ ವಿರುದ್ಧ ಹೋರಾಡಲು ಆಗದೆ ಒಪ್ಪಬೇಕಾಗಿದೆ. ಅಂದರೆ, ಹಿರಿಯರ ವಿರುದ್ಧ ತೋರಿಸಲಾಗದ ಪ್ರತಿರೋಧವನ್ನು ಸಂಗಾತಿಯ ವಿರುದ್ಧ ತೋರಿಸುತ್ತಿದ್ದಾರೆ. “ಮದುವೆ ನಿಮ್ಮ ಕೈಯಲ್ಲಿದೆ, ಆದರೆ ದಾಂಪತ್ಯ ನನ್ನ ಕೈಯಲ್ಲಿದೆ!” ಎನ್ನುವ ಆಟ ಆಡುತ್ತಿದ್ದಾರೆ. ಬಿಡಿಸಿ ಹೇಳಬೇಕೆಂದರೆ, ಜಗಳದ ಹಿಂದೆ ಆಗಬಾರದ ಸಂಗಾತಿಯಲ್ಲ, ಆಗಬಾರದ ಹಿರಿಯರಿದ್ದಾರೆ! ಸಂಗಾತಿಯ ಬಗೆಗೆ ಕಾರಣಗಳು ಮಾತ್ರವಿದ್ದರೆ ಮಧುಚಂದ್ರದ ಕಾಮಕೂಟವು ಅದನ್ನೆಲ್ಲ ಮರೆಸಿಬಿಡುತ್ತದೆ. ಕಾಮಕ್ಕೆ ಅಂಥ ಸಾಮರ್ಥ್ಯವಿದೆ. ನಂತರ ಜಗಳಗಳ ಜೊತೆ ಕಾಮಕೂಟವೂ ಮುಂದುವರಿಯಬಹುದು.

ಹೀಗೆ ಹಿರಿಯರ ಕಾರಣದಿಂದ ಅನಿವಾರ್ಯ ದಾಂಪತ್ಯವನ್ನು ಒಪ್ಪಿಕೊಂಡು ಸುಖ ಅನುಭವಿಸಲಾಗದ ನೂರಾರು ಹೊಸ ಜೋಡಿಗಳು ಪ್ರತಿವರ್ಷ ಹುಟ್ಟುತ್ತಿದ್ದಾರೆ. ಇವರ ಸಂಬಂಧದ ಸುಧಾರಣೆಗೆ ಉಪಾಯವಿದೆಯೆ?

ಉಪಾಯವನ್ನು ಅರಿಯುವುದಕ್ಕಿಂತ ಮುಂಚೆ ಪ್ರೇಮವಿವಾಹಗಳಲ್ಲಿ ಏನು ನಡೆಯುತ್ತದೆ ಎಂದು ಗಮನಿಸೋಣ. ಪ್ರಾರಂಭದಲ್ಲಿ ಹುಡುಗ ಹುಡುಗಿ ನೋಡುವಾಗ ಆಕರ್ಷಣೆ ಹುಟ್ಟುತ್ತದೆ. ಪರಸ್ಪರರಲ್ಲಿ ಆಸಕ್ತಿ ಹೊಂದಿ ಜೊತೆಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಸಂಗಾತಿಯಲ್ಲಿ ಕಾಣುವ ಗುಣವಿಶೇಷಗಳನ್ನು ಪ್ರೀತಿಸಲು ತೊಡಗುತ್ತಾರೆ. ಒಡನಾಟ ಹೆಚ್ಚಿಸುತ್ತಾರೆ. ಒಡನಾಟ ಹೆಚ್ಚಾದಂತೆ ಭಿನ್ನಾಭಿಪ್ರಾಯಗಳೂ ಹೊರಬರುತ್ತವೆ. ಚೌಕಾಶಿ ಮಾಡುತ್ತಾರೆ. ವಿರಸ ತೀವ್ರವಾದಾಗ ಮಾತುಬಿಟ್ಟು ದೂರವಾಗುತ್ತಾರೆ. ವಿರಹ ಹೆಚ್ಚಾದಾಗ ಮತ್ತೆ ಭೇಟಿಯಾಗುತ್ತಾರೆ. ಹೀಗೆ ಮಿಲನ–ದೂರೀಕರಣದ ಏರಿಳಿತವನ್ನು ಎದುರಿಸುತ್ತ ಹೊಂದಾಣಿಕೆಗೆ ಯತ್ನಿಸುತ್ತಾರೆ. ಪರಿಣಾಮವಾಗಿ ಒಂದೋ, ಭಿನ್ನಾಭಿಪ್ರಾಯ ಇದ್ದರೂ ಕೂಡಿ ಬಾಳಬಲ್ಲೆವು, ಅಥವಾ, ಪ್ರೀತಿಯಿದ್ದರೂ ಕೂಡಿ ಬಾಳಲಾರೆವು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂಥವರ ದಾಂಪತ್ಯದಲ್ಲಿ ಜಗಳಗಳು ಆದರೂ ಅದರೊಳಗೆ ಹೊಂದಾಣಿಕೆಯ ಉದ್ದೇಶವಿರುತ್ತದೆ. ಇಲ್ಲಿ ತಳಮಟ್ಟದ ಅಭಿಪ್ರಾಯ ಭೇದಗಳು ಕಾಣುವುದಿಲ್ಲ. ಒಟ್ಟಿನಲ್ಲಿ, ಪ್ರೇಮ ಪ್ರಕರಣಗಳು ಆಕರ್ಷಣೆಯಿಂದ ಶುರುವಾಗಿ, ಚೌಕಾಶಿ ನಡೆದು, ಹೊಂದಾಣಿಕೆ ಆದಮೇಲೆ ಮದುವೆ ನಡೆಯುತ್ತದೆ; ಇದರ ನಡುವೆ ಸಂಬಂಧ ಮುರಿದುಕೊಳ್ಳುವ ಆಯ್ಕೆಯೂ ಇದೆ. ಆದರೆ ವ್ಯವಸ್ಥಿತ ಪದ್ಧತಿಯು ಇದರ ವಿರುದ್ಧವಾಗಿದೆ. ಮೊದಲು ಮದುವೆ, ನಂತರ ಅನಿವಾರ್ಯ ಹೊಂದಾಣಿಕೆಯ ಪ್ರಯತ್ನದಲ್ಲಿ ಚೌಕಾಶಿ, ಜಗಳ ನಡೆಯುತ್ತದೆ. ಸಂಬಂಧ ಕಡಿದುಕೊಳ್ಳುವುದು ತುಂಬಾ ಕಠಿಣ. ಆಕರ್ಷಣೆ ಹುಟ್ಟುವುದು ಕೊನೆಗೆ! ಅನಿವಾರ್ಯ ಮದುವೆ ಆದವರು ಪ್ರೇಮವಿವಾಹದ ತತ್ವಗಳನ್ನು ಅಳವಡಿಸಿಕೊಳ್ಳಬಹುದು. ಅದು ಹೀಗೆ: ಸ್ವಲ್ಪಕಾಲ ಎರಡೂ ಕಡೆಯ ಸಂಬಂಧಿಕರಿಂದ ದೂರವಾಗಿ ಇಬ್ಬರೇ ಪ್ರತ್ಯೇಕ ವಾಸ ಮಾಡಬೇಕು. ಮದುವೆ ಆಗಿದೆ ಎಂಬುದನ್ನು ಮರೆತುಬಿಟ್ಟು ಸ್ನೇಹಿತರ ರೀತಿ ಸಹ-ವಾಸದಲ್ಲಿ (live-in) ಇರಬೇಕು. ಸಂಬಂಧ ಮುರಿದುಕೊಳ್ಳುವ ಆಯ್ಕೆಯನ್ನು ತೆರೆದಿಟ್ಟುಕೊಂಡೇ ಆಕರ್ಷಣೆಯನ್ನು ಮುಂದಿಟ್ಟುಕೊಂಡು ಹೊಸದಾದ ಸಂಬಂಧ ಹುಟ್ಟುಹಾಕಲು ಸಾಧ್ಯತೆಗಳಿವೆಯೇ ಎಂದು ಯೋಚಿಸಬೇಕು. ಸಾಧ್ಯತೆ ಕಂಡರೆ ಜೌಕಾಶಿ ಮಾಡುತ್ತ ಹೊಂದಾಣಿಕೆಗೆ ಯತ್ನಿಸಬೇಕು.

ಇಲ್ಲಿ ಹಿರಿಯರ ಪಾತ್ರವೇನು? ಅವರು ತಮ್ಮ ಹಿರಿತನವನ್ನು ಬಿಟ್ಟುಕೊಟ್ಟು ಮಕ್ಕಳೊಡನೆ ಸಮಾನಮಟ್ಟದಲ್ಲಿ ಬೆರೆಯಬೇಕು. ಸಂಬಂಧದ ಮೇಲೆ ಹಿರಿತನದ ಪ್ರಭಾವವನ್ನು ಹೇರಿದುದರ ಬಗೆಗೆ ಮಗ/ಮಗಳೊಂದಿಗೆ ಅಲ್ಲದೆ ಅಳಿಯ/ಸೊಸೆಯ ಎದುರೂ ತಪ್ಪು ಒಪ್ಪಿಕೊಳ್ಳಬೇಕು. ಜೊತೆಗೆ ಸರಿಪಡಿಸುವ ಹೊಣೆ ಹೊರಬೇಕು. ನವದಂಪತಿಗಳನ್ನು ಇನ್ನೊಂದು ಸಲ ಮಧುಚಂದ್ರಕ್ಕೆ ಕಳಿಸಬೇಕು. ಈ ಮಧುಚಂದ್ರವು ಪ್ರತ್ಯೇಕ ಮನೆಯಲ್ಲಿ, ಹಾಗೂ ಕನಿಷ್ಟ ಎರಡು ವರ್ಷ ನಡೆಯಲು ವ್ಯವಸ್ಥೆ ಮಾಡಬೇಕು. ನಡುವೆ ಸಂಬಂಧ ಮುರಿಯುವಂತೆ ಕಂಡರೆ ಪ್ರತಿರೋಧಿಸುವ ಬದಲು ಪ್ರೋತ್ಸಾಹಿಸಬೇಕು. ಕೊನೆಯದಾಗಿ, ಒಂದು ಮಗುವಾದರೆ ಎಲ್ಲವೂ ಸರಿಹೋಗುತ್ತದೆ ಎಂಬ ಸಲಹೆಯನ್ನಂತೂ ಕೊಡಲೇ ಕೂಡದು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹಿರಿಯರ ದಾಂಪತ್ಯಗಳ ವೈಫಲ್ಯ ನೋಡಿ ಯುವಜನರು ನಂಬಿಕೆ ಕಳೆದುಕೊಂಡಿದ್ದಾರೆ

217: ಆಧುನಿಕ ದಾಂಪತ್ಯಗಳು – 2

ಬದಲಾಗುತ್ತಿರುವ ದಾಂಪತ್ಯಗಳ ಕುರಿತು ಚರ್ಚೆ ಶುರುಮಾಡುತ್ತ  ಭವಿಷ್ಯದಲ್ಲಿ ದಾಂಪತ್ಯಗಳು ಹೇಗಿರಬಹುದು ಎಂದು ಜಿಜ್ಞಾಸೆ ನಡೆಸಿದ್ದೇವೆ. ಇದಕ್ಕಾಗಿ ಹಿಂದಿನ ಹಾಗೂ ಈಗಿನ ತಲೆಮಾರಿನ ದಾಂಪತ್ಯಗಳನ್ನು  ಹೋಲಿಸಿ ನೋಡುತ್ತ ಎರಡರಲ್ಲೂ ಮದುವೆಯ ಉದ್ದೇಶ ಹಾಗೂ ಸಾಧನೆಯ ಕುರಿತು ಯೋಚಿಸೋಣ.

ಅನಾದಿಕಾಲದಿಂದ ಗಂಡುಹೆಣ್ಣುಗಳ ಸಂಬಂಧವನ್ನು ಜೋಡಿಸಲು ಮನೆತನದ ಉದ್ಯೋಗವೇ ಮುಖ್ಯವಾಗಿತ್ತು. ಈ ಕುಲಕಸಬುಗಳೇ ಮುಂದೆ ಜಾತಿಗಳಾದುವು ಎನ್ನುವುದಕ್ಕೆ ಆಧಾರವಿದೆ. ಸ್ವಜಾತಿಯ ಹೆಣ್ಣನ್ನು ತರುವುದು ಕುಟುಂಬದ ದುಡಿಮೆಗೆ ಕೊಡುಗೆಯಾಗುತ್ತಿತ್ತು. ಮಕ್ಕಳು ಚಿಕ್ಕಂದಿನಿಂದಲೇ ವಂಶವೃತ್ತಿಗೆ ಕೈಜೋಡಿಸುತ್ತಿದ್ದುದರಿಂದ ಹದಿವಯಸ್ಸಿನ ಕೊನೆಗೆ ಪರಿಣಿತಿ ಪಡೆಯುತ್ತಿದ್ದರು. ಜೊತೆಜೊತೆಗೆ ಲೈಂಗಿಕ ಚಟುವಟಿಕೆಗೂ ತಯಾರಾಗುತ್ತಿದ್ದರು. ಆದರೆ ಬುದ್ಧಿಯ ಪರಿಪಕ್ವತೆ ಇಲ್ಲದಿದ್ದುದರಿಂದ ಹಿರಿಯರೇ ಅವರ ಮದುವೆಯ ವ್ಯವಸ್ಥೆ ಮಾಡುತ್ತಿದ್ದರು. ಬೇಗ ಮದುವೆಯಾದಷ್ಟೂ ಬೇಗ ಮಕ್ಕಳಾಗುವುದರಿಂದ ಉದ್ಯೋಗಕ್ಕೆ ಇನ್ನಷ್ಟು ಕೈಗಳು ದೊರಕುತ್ತಿದ್ದುವು. ಪುರುಷ ಪ್ರಾಧಾನ್ಯತೆಯ ದೃಷ್ಟಿಯಿಂದ ಹುಡುಗ-ಹುಡುಗಿಯರ ನಡುವೆ ಐದರಿಂದ ಹತ್ತು ವರ್ಷಗಳ ಅಂತರವಿರುತ್ತಿತ್ತು. ಸಂಗಾತಿಯ ಆಯ್ಕೆ, ದಾಂಪತ್ಯ ಹಾಗೂ ಲೈಂಗಿಕ ವಿಷಯಗಳಲ್ಲೇ ಏಕೆ, ಬದುಕಿನ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲೂ ಹಿರಿಯರ ಮಾತೇ ಅನುಸರಣೆಯಲ್ಲಿತ್ತು. (ಮೂವತ್ತು ವರ್ಷಗಳ ಹಿಂದಿನ ಘಟನೆ: ಅರವತ್ತೈದರ ಹಿರಿಯನೊಬ್ಬನನ್ನು ಹಳ್ಳಿಯ ಸರಪಂಚನ ಸ್ಥಾನವನ್ನು ಒಪ್ಪಿಕೊಳ್ಳಲು ಕೇಳಿದಾಗ ಆತ ತೊಂಬತ್ತು ವರ್ಷದ ತಂದೆಯ ಅನುಮತಿ ಕೇಳಿದ. ತಂದೆ ಬೇಡವೆಂದಾಗ ಎಷ್ಟೇ ಒತ್ತಾಯ ಮಾಡಿದರೂ ಒಪ್ಪಲಿಲ್ಲ.) ಅನುಸರಿಸದಿದ್ದರೆ ಒತ್ತಾಯ ಹೇರಲಾಗುತ್ತಿತ್ತು.

ಹೀಗೆ, ಹಿರಿಯರು ಕಿರಿಯರ ಮದುವೆಗಳನ್ನು ವ್ಯವಸ್ಥೆ ಮಾಡುವುದಕ್ಕೆ ಒಂದು ಹಿನ್ನೆಲೆಯಿತ್ತು. ತದನಂತರ  ಕರ್ತವ್ಯ-ಜವಾಬ್ದಾರಿ-ಸುಖದ ಮಾದರಿಯ ಸಮುದಾಯ ರೂಪದ ದಾಂಪತ್ಯವು ಜಾರಿಯಲ್ಲಿತ್ತು. ಹಾಗಾಗಿ ಮದುವೆಯಾಗಿ ದಶಕಗಳೇ ಕಳೆದು ಹಲವು ಮಕ್ಕಳಾದರೂ ಎಷ್ಟೋ ಕಡೆ ಗಂಡಹೆಂಡಿರು ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಂಡಿರದೆ ಇದ್ದಿದ್ದು ಆಶ್ಚರ್ಯಕರವೇನೂ ಆಗಿರಲಿಲ್ಲ. ಉದಾಹರಣೆಗಾಗಿ, ನನ್ನ ಅಪ್ಪ-ಅಮ್ಮ ಇಪ್ಪತ್ತು ವರ್ಷ ಹಾಗೂ ನಾಲ್ಕು ಮಕ್ಕಳ ನಂತರವೂ ಪರಸ್ಪರ ಅರ್ಥ ಮಾಡಿಕೊಳ್ಳದೆ ಇದ್ದುದು ನನಗೆ ನೆನಪಿದೆ. ಆಗ ದಾಂಪತ್ಯದ ಪ್ರಣಯ ಹಾಗೂ ಅನುಬಂಧಗಳು ಕಾವ್ಯಕ್ಕೆ ಮಾತ್ರ ಮೀಸಲಾಗಿದ್ದವು. ಅನೇಕ ದಾಂಪತ್ಯಗಳು ಮಕ್ಕಳಿಗೋಸ್ಕರ ಮಾತ್ರ ಇಡಿಯಾಗಿ ಉಳಿದಿರುತ್ತಿದ್ದುವು – ಈಗಲೂ ಇವೆ. ಹಾಗೆಯೇ, ಹಿರಿಯರ ಮಾತನ್ನು ನೆರವೇರಿಸುವುದು ಕಿರಿಯರ ಕರ್ತವ್ಯ ಎನ್ನುವ ಸಾಲಿನಲ್ಲಿ ದುರದೃಷ್ಟವಶಾತ್ ಮದುವೆಯೂ ಒಂದಾಗಿ ಬಳಕೆಯಾಗುತ್ತಿತ್ತು. ಹತ್ತು ವರ್ಷಗಳ ಹಿಂದಿನ ಮಾತು: ಹದಿನೆಂಟರ ಹುಡುಗಿಯನ್ನು ಕರೆದುಕೊಂಡು ಆಕೆಯ ಅಮ್ಮ, ಗಂಡ ಬಂದಿದ್ದರು. ಆಕೆ ಗಂಡನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪುತ್ತಿಲ್ಲವಂತೆ. ಓದುವ ಹುಡುಗಿಯನ್ನು ಕಾಲೇಜು ಬಿಡಿಸಿ ಸೋದರ ಮಾವನಿಗೆ ಮದುವೆ ಮಾಡಿದ್ದಾರೆ. ಯಾಕೆಂದರೆ ತೊಂಬತ್ತೆರಡರ ಆಕೆಯ ಅಜ್ಜನಿಗೆ ಸಾಯುವ ಮುಂಚೆ ಇವಳ ಮದುವೆ ನೋಡುವ ಆಸೆಯಂತೆ. ಒತ್ತಾಯದ ಮದುವೆಗಳು ಈಗಲೂ ಸಾಕಷ್ಟು ನಡೆಯುತ್ತಿವೆ. ದಾಂಪತ್ಯ ಸಮಸ್ಯೆ ಇಟ್ಟುಕೊಂಡು ಹೊಂದಾಣಿಕೆ ಆಗದೆ ನನ್ನಲ್ಲಿ ಬಂದವರಲ್ಲಿ ಹೆಚ್ಚಿನ ದಂಪತಿಗಳು  ಹಿರಿಯರಿಂದ ವ್ಯವಸ್ಥಿತ ವಿವಾಹವನ್ನು ಒಪ್ಪಿಕೊಂಡಿರುವುದು ಕಂಡುಬರುತ್ತದೆ. ಹುಡುಗಿಯರಿಗೆ ಮದುವೆಗೆ ಒಪ್ಪಿರುವ ಕಾರಣ ಕೇಳಿದಾಗ, ಹುಡುಗ ಓದಿದ್ದಾನೆ, ಆಕರ್ಷಕ ಇದ್ದಾನೆ, ಸಂಪಾದನೆ ಚೆನ್ನಾಗಿದೆ ಎನ್ನುವ ಹಿರಿಯರ ಒತ್ತಾಸೆಗೆ ಒಪ್ಪಿ, ಸ್ವಭಾವ ಅರಿಯಲು ಸಮಯ ಸಿಗದೆ ಮದುವೆಯಾಗಿ ಅನುಭವಿಸಿದ ದೃಷ್ಟಾಂತಗಳು ಸಾಕಷ್ಟಿವೆ. ವಿಚ್ಛೇದನದ ಹಾದಿಹಿಡಿದ ದಾಂಪತ್ಯಗಳ ಪೈಕಿ ವ್ಯವಸ್ಥಿತ ವಿವಾಹಗಳದು ದೊಡ್ಡ ಪಾಲಿದೆ ಎನ್ನುವುದು ಮೆಡಿಸೆಕ್ಸ್ ಫೌಂಡೇಶನ್‌ಗೆ ಭೇಟಿಕೊಟ್ಟ ಜನರಿಂದ ಗೊತ್ತಾಗುತ್ತದೆ.

ಇತ್ತೀಚೆಗೆ ಸಾಮಾಜಿಕ ಸ್ತರದಲ್ಲೂ ತೀವ್ರ ಬದಲಾವಣೆಗಳು ಆಗುತ್ತಿವೆ. ಎಲ್ಲ ಜಾತಿಯ ಜನರು ಎಲ್ಲ ಉದ್ಯೋಗಗಳಲ್ಲಿ ಇರುವುದರಿಂದ “ಸ್ವಜಾತಿಯಲ್ಲಿ ವಿವಾಹ” ಎನ್ನುವುದೇ ಅರ್ಥ ಕಳೆದುಕೊಂಡಿದೆ. ಸಾಕಾಗದ್ದಕ್ಕೆ ಆಧುನಿಕ ಉದ್ಯೋಗಗಳ ಪ್ರಕಾರ ಹೊಸ ಜಾತಿಗಳು ಹುಟ್ಟಿಕೊಂಡಿವೆ – ತಂತ್ರಜ್ಞ, ವೈದ್ಯ, ರಾಜಕಾರಣಿ ಇತ್ಯಾದಿ. ಹೆಣ್ಣು ಉದ್ಯೋಗಸ್ಥಳಾಗಿ ಗಂಡಿನ ಸರಿಸಮ ದುಡಿಯುವುದರಿಂದ ಆರ್ಥಿಕ ಭದ್ರತೆ ಬೇಕಿಲ್ಲ. ಇನ್ನು, ಅನೇಕ ದಂಪತಿಗಳು ಮಗುವೇ ಬೇಡ, ಅನಾಥ ಮಗುವನ್ನು ದತ್ತು ತೆಗೆದುಕೊಳ್ಳೋಣ ಎನ್ನುತ್ತಿದ್ದಾರೆ. ಕೂಡು ಕುಟುಂಬಗಳು ವಿರಳವಾಗುತ್ತಿವೆ. ಹೆಣ್ಣಿಗೆ ಭದ್ರತೆ ಹಾಗೂ ಅವಲಂಬನೆಯ ಅಗತ್ಯ ಕಡಿಮೆಯಾಗುತ್ತ, ಸ್ನೇಹಸಂಬಂಧಕ್ಕೆ ಆದ್ಯತೆ ಹೆಚ್ಚುತ್ತಿದೆ. ಈ ಕಾರಣದಿಂದ ಸಂಗಾತಿಗಳ ನಡುವಿನ ವಯಸ್ಸಿನ ಅಂತರವೂ ಮಾಯವಾಗುತ್ತಿದೆ. ಕರ್ತವ್ಯದ ಮಾದರಿ ದೂರವಾಗುತ್ತ ಸಾಂಗತ್ಯದ ಮಾದರಿ ಹುಟ್ಟಿಕೊಳ್ಳುತ್ತಿದೆ. ತಮಗಿಷ್ಟ ಬಂದಂತೆ ತಕ್ಕ ಬಾಳಸಂಗಾತಿಯನ್ನು ಆರಿಸಿಕೊಳ್ಳುವುದು, ಹಾಗೂ ಅದಕ್ಕಾಗಿ ಸಾಕಷ್ಟು ಸಮಯ ಹಾಗೂ ಭಾವನೆಗಳನ್ನು ತೊಡಗಿಸಿಕೊಳ್ಳುವುದು ಬರಬರುತ್ತ ಹೆಚ್ಚಾಗುತ್ತಿದೆ. ಮುಂಚೆ ಅಪರೂಪವಾದ ಪ್ರೇಮವಿವಾಹಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿದ್ದು, ಸಾರ್ವತ್ರಿಕ ಆಗುವ ದಿನಗಳು ದೂರವಿಲ್ಲ.

ನವಜನಾಂಗದ ಸಂಬಂಧದಲ್ಲಿ ಇನ್ನೊಂದು ಮಹತ್ತರ ಬದಲಾವಣೆ ಆಗುತ್ತಿದೆ. ಅದೇನೆಂದರೆ “ಸಹ”ವಾಸಗಳು (live-in relationship). ಗಂಡುಹೆಣ್ಣುಗಳು ಮದುವೆಯಾಗದೆ ಒಟ್ಟಿಗಿರುವ ಪ್ರಕರಣಗಳು ಹೆಚ್ಚುತ್ತಿವೆ. ನಗರದ ಪರಿಸರದಲ್ಲಿ ಇದು ಹೆಚ್ಚಾಗಿದೆ. ಇವರಲ್ಲಿ ಸಾಂಗತ್ಯ-ಸಂಬಂಧ ಬೇಕು, ಮದುವೆ (ಸದ್ಯಕ್ಕಂತೂ) ಬೇಡ ಎನ್ನುವ ಪ್ರವೃತ್ತಿಯಿದೆ. ಇದೊಂದು ಬೇಜವಾಬ್ದಾರಿ ಸ್ವೈರ ನಡವಳಿಕೆ ಎಂದು ಸಂಪ್ರದಾಯಸ್ಥರಿಗೆ ಅನ್ನಿಸಬಹುದು. ಅದಕ್ಕೆ ಉತ್ತರವಾಗಿ ಸಹ-ವಾಸದಲ್ಲಿರುವ ಒಬ್ಬಳು ನನ್ನೊಡನೆ ಹೀಗೆ ಹಂಚಿಕೊಂಡಿದ್ದಾಳೆ: “ನನ್ನ ತಾಯಿಯು ನನ್ನ ತಂದೆ ಹಾಗೂ ಅಜ್ಜಿಯಿಂದ ದುರ್ನಡತೆಗೆ ಒಳಗಾಗಿ ಸಾಕಷ್ಟು ಅನುಭವಿಸಿದ್ದಾಳೆ. ತಾಯಿಯ ಬವಣೆ ನನಗೆ ಬೇಕಿಲ್ಲ. ನನಗೂ ಮದುವೆಯಾಗಲು ಒತ್ತಾಯ ಬಂತು. ಮದುವೆಯಾದರೆ ಗಂಡನಷ್ಟೇ ಅಲ್ಲ, ಇತರರ ದಿಗ್ಬಂಧನೆಗೆ ಒಳಗಾಗಿ ಸ್ವಂತಿಕೆ ಕಿತ್ತುಕೊಂಡು ಹೋಗುತ್ತದೆ ಎಂದೆನಿಸಿತು. ಎಲ್ಲರನ್ನು ಪ್ರಸನ್ನಗೊಳಿಸುವಾಗ ನನ್ನ ದಾಂಪತ್ಯ ಸುಖದ ತ್ಯಾಗ ಮಾಡಬೇಕಾಗುತ್ತದೆ. ಗಂಡನಾಗುವವನು ತನ್ನ ತಾಯ್ತಂದೆಯರ ವಿರುದ್ಧ ನನ್ನ ರಕ್ಷಣೆಗೆ ನಿಲ್ಲುವನೆಂಬ ಭರವಸೆಯೂ ನನಗಿಲ್ಲ. ಹಾಗಾಗಿ ನಾನೇಕೆ ಮದುವೆ ಆಗಬೇಕು? ಹೀಗೆಯೇ ಸುಖವಾಗಿದ್ದೇನೆ.” ಸಹವಾಸದಲ್ಲಿ ಇರಲು ಇನ್ನಿತರ ಕಾರಣಗಳಿವೆ. ಇನ್ನೊಂದು ಸಂದರ್ಭದಲ್ಲಿ ಒಬ್ಬನು ತಾಯ್ತಂದೆಯರ ಆಯ್ಕೆಯಂತೆ ಮದುವೆಯಾದ. ಹೆಂಡತಿಯ ಕಾಟ ಸಹಿಸದೆ ಅವಳಿಗೆ ವಿಚ್ಛೇದನ ಕೊಡಬೇಕಾಯಿತು. ಕಾನೂನಿನ ಹಾದಿಯಲ್ಲಿ ತನ್ನದಲ್ಲದ ತಪ್ಪಿಗೆ ಅವಮಾನಕ್ಕೆ ಒಳಗಾಗುವುದಲ್ಲದೆ ಲಕ್ಷಗಟ್ಟಲೆ ಕಳೆದುಕೊಳ್ಳಬೇಕಾಯಿತು. ಇಪ್ಪತ್ತೆಂಟು ವರ್ಷಕ್ಕೆ ಆದ ಆಘಾತವು ಮದುವೆಯ ಮೇಲಿನ ಭರವಸೆಯನ್ನೇ  ಕಿತ್ತುಕೊಂಡಿತು. ಐದು ವರ್ಷ ಗೂಡಿನಲ್ಲಿ ಸತ್ತವನು ಕೊನೆಗೊಮ್ಮೆ ಬದುಕಿಬಂದು ತನಗೂ ಲೈಂಗಿಕ ಬದುಕು ಬದುಕಲು ಅರ್ಹತೆಯಿದೆ ಎಂದು ಕಂಡುಕೊಂಡ. ಪರಿಣಾಮವಾಗಿ ಸಹ-ವಾಸದಲ್ಲಿ ಸುಖ ಕಂಡುಕೊಂಡಿದ್ದಾನೆ. (ಇನ್ನು ಕೆಲವರು ದೀರ್ಘಕಾಲೀನ ಶಿಕ್ಷಣ ಪಡೆಯುತ್ತಿರುವಾಗ ತಾತ್ಕಾಲಿಕವಾಗಿ ಸಹ-ವಾಸವನ್ನು ಆಯ್ಕೆ ಮಾಡಿಕೊಂಡಿದ್ದಿದೆ.)

ಇದರರ್ಥ ಏನು? ಮಕ್ಕಳು ಕೆಟ್ಟ ದಾಂಪತ್ಯಗಳ ಮಾದರಿಗಳನ್ನು ನೋಡಿ ಬೇಸತ್ತಿದ್ದಾರೆ. ಇದು ಯುವಜನಾಂಗದ ಸ್ವೈರ ವೃತ್ತಿಯಲ್ಲ, ಹೊರತಾಗಿ ಹಿರಿಯರ ದಾಂಪತ್ಯಗಳ ವೈಫಲ್ಯದ ಬಗೆಗಿನ ಭ್ರಮನಿರಸನ, ಹಾಗೂ ನಂಬಿಕೆ ಕಳೆದುಕೊಂಡು  ಕಂಡುಕೊಂಡ ಸತ್ಯಾಂಶ ಎನ್ನಿಸುತ್ತದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣಿನ ಕಾಮಪ್ರಜ್ಞೆಗೆ ಸ್ಥಾನ ಸಿಗಬೇಕಾದರೆ ಹೆಂಗಸರು ಸಾರ್ವಜನಿಕ ಮೆರವಣಿಗೆ, ಘೋಷಣೆ ಮಾಡುವ ಅಗತ್ಯವಿದೆ.

212: ಹೆಣ್ಣಿನ ಕಾಮಪ್ರಜ್ಞೆ-8

ಹೆಣ್ಣು ಕಾಮಸುಖವನ್ನು ಸವಿಯಬೇಕಾದರೆ ಸಂತಾನೋತ್ಪತ್ತಿಯ ಕಾರ್ಯದಿಂದ ಬೇರ್ಪಡಿಸಲೇಬೇಕು, ಹಾಗೂ ಸಂತಾನವನ್ನು ಬದಿಗಿಟ್ಟು ಪಡೆದುಕೊಳ್ಳುವ ಕಾಮಪ್ರಜ್ಞೆಯ ನಿಲುವು ಹೆಣ್ಣಿನ ಅಸ್ಮಿತೆಯನ್ನು (identity) ಗಾಢಗೊಳಿಸುತ್ತದೆ ಎಂದು ಹೇಳುತ್ತಿದ್ದೆ. ಹೀಗಾದರೂ ಹೆಣ್ಣು ತನ್ನ ಕಾಮಪ್ರಜ್ಞೆಯನ್ನು ಮೆರೆಲಾಗುವುದಿಲ್ಲ. ಇದಕ್ಕೆ ಹಲವು ಬಲುಸೂಕ್ಷ್ಮ ಕಾರಣಗಳಿವೆ. ಅವೇನೆಂದು ನೋಡೋಣ.

ಗಂಡಿಗೆ ವೀರ್ಯಸ್ಖಲನದ ಜೊತೆಜೊತೆಗೇ ಕಾಮತೃಪ್ತಿ /ಭಾವಪ್ರಾಪ್ತಿ ಆಗುತ್ತದೆ. ಇಲ್ಲಿ ವೀರ್ಯಸ್ಖಲನವು ಸಂತಾನೋತ್ಪತ್ತಿಗೆ ಸಂಬಂಧಪಟ್ಟಿದೆ. ಅಂದರೆ ಗಂಡು ಸಂತಾನಕ್ಕಾಗಿ ಬೀಜ ಬಿತ್ತುವುದು ಹಾಗೂ ಕಾಮದಾಸೆ ಪೂರೈಸಿಕೊಳ್ಳುವುದು ಎರಡನ್ನೂ ಜೊತೆಜೊತೆಗೆ ನಡೆಸುತ್ತಾನೆ. ಆದರೆ ಹೆಣ್ಣಿನಲ್ಲಿ ಹಾಗಿಲ್ಲ. ಸಂತಾನಕ್ಕಾಗಿ ಅಂಡ ಬಿಡುಗಡೆ ಆಗುವುದಕ್ಕೂ ಕಾಮತೃಪ್ತಿಗೂ ಏನೇನೂ ಸಂಬಂಧವಿರದೆ ಇವೆರಡೂ ಪ್ರತ್ಯೇಕವಾಗಿವೆ. ಹಾಗಾಗಿ ಗಂಡು ಕಾಮದಾಸೆ ಪೂರೈಸಿಕೊಳ್ಳುವ ಕಾರಣವನ್ನು ಮುಂದಿಟ್ಟುಕೊಂಡು ಕೂಟಕ್ಕೆ ಪೀಠಿಕೆ ಹಾಕಿದರೂ ಅದರೊಳಗೆ ಸಂತಾನೋತ್ಪತ್ತಿಯ ಸಾಧ್ಯತೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಗಂಡು ಸಂಭೋಗದಲ್ಲಿ ರಭಸದಿಂದ ಚಲಿಸುತ್ತಿರುವಾಗ ಖುಷಿ ಹೆಚ್ಚಾಗಿ ಸಿಗುತ್ತಿರುವಾಗ ಸ್ಖಲನದ ಕ್ಷಣಗಳು ಹತ್ತಿರವಾದಷ್ಟೂ ಗರ್ಭಧಾರಣೆಯ ಸಾಧ್ಯತೆ ದಟ್ಟವಾಗುತ್ತದೆ. ಆಗ ತನ್ನ ಕಾಮತೃಪ್ತಿಯ ತುಟ್ಟತುದಿಯನ್ನು ಮುಟ್ಟಬೇಕಾದ ಹಾದಿಗಳನ್ನು ಅನ್ವೇಷಿಸುವುದರ ಬದಲು ಫಲವತ್ತತೆಯ ಪರ ಅಥವಾ ವಿರೋಧವಾದ ಪ್ರಕ್ರಿಯೆಗೆ ಯೋಚಿಸಬೇಕಾಗುತ್ತದೆ. ಅಂದರೆ, ಕಾಮಕೂಟಕ್ಕೆ ಕರೆಬಂದಾಗ ಹೆಣ್ಣಿಗೆ ಮೊಟ್ಟಮೊದಲು ಯೋಚನೆ ಬರುವುದು ಗರ್ಭಧಾರಣೆಯ ಬಗೆಗೆ! ಒಂದುವೇಳೆ ಗರ್ಭ ಧರಿಸಲು ಇಷ್ಟವಿದ್ದರೆ, ಅಥವಾ ಗರ್ಭನಿರೋಧದ ಶಸ್ತ್ರಚಿಕಿತ್ಸೆ ಆಗಿದ್ದರೆ ಪಾಲುಗೊಳ್ಳುವಲ್ಲಿ ನಿರಾಳತೆ ಇರುತ್ತದೆ. ಆದರೆ ಗರ್ಭ ಬೇಡದ ಕೂಟದಲ್ಲಿ ಹೆಣ್ಣಿಗೆ ಏನು ಅನ್ನಿಸಬಹುದು?

ಕೂಟದಲ್ಲಿ ತನ್ನ ಯೋನಿಯನ್ನು ಗಂಡಿಗೆ ಕೊಡುವಾಗಲೆಲ್ಲ ಹೆಣ್ಣು ಗರ್ಭಧಾರಣೆಯ ಆತಂಕವನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜೋಡಿಗಳಲ್ಲಿ ಹುಚ್ಚೆಬ್ಬಿಸುವ ಮುನ್ನಲಿವಿನ ನಂತರ ಇನ್ನೇನು ಯೋನಿಪ್ರವೇಶ ಮಾಡಬೇಕು ಎನ್ನುವಾಗ ಅಲ್ಪವಿರಾಮ ಬರುತ್ತದೆ. ಇತ್ತೀಚೆಗೆ ಆದ ಮುಟ್ಟು ನೆನಪಿಗೆ ಬರುತ್ತ ಕ್ಯಾಲೆಂಡರ್ ಕಣ್ಣಮುಂದೆ ಬರುತ್ತದೆ. ಇಬ್ಬರೂ ಲೆಕ್ಕಾಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದ ನಂತರವೇ ಸಂಭೋಗ ನಡೆಯುತ್ತದೆ. ಇಷ್ಟಾದರೂ ಕಾಂಡೋಮ್ ಹರಿದರೆ, ವೀರ್ಯ ಹೊರಬಿಡುವುದು ಕೈಕೊಟ್ಟರೆ, ತುರ್ತು ಮಾತ್ರೆ ಪರಿಣಾಮಕಾರಿ ಆಗದಿದ್ದರೆ, ಗರ್ಭನಿರೋಧ ಮಾತ್ರೆಯಿಂದ ದಪ್ಪಗಾದರೆ…. ಹೀಗೆ ಒಂದುಕಡೆ ಚಿಂತಿಸುತ್ತಲೇ ಇನ್ನೊಂದು ಕಡೆ ಅವುಗಳ ಸಂದುಗಳ ನಡುವೆ ಅಡಗಿರುವ ಸುಖವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅಷ್ಟರಲ್ಲೇ ಗಂಡು ತಯಾರಾಗಿರುವುದು ಎದ್ದುಕಾಣುತ್ತಿರುವಾಗ ಅವನನ್ನು ಕಾಯಿಸುತ್ತಿದ್ದೇನೆ ಎಂದೆನಿಸಿ, ತಪ್ಪಿತಸ್ಥ ಭಾವ ಕಾಡುತ್ತದೆ. ಇಂಥದ್ದೆಲ್ಲ ಹೆಣ್ಣಿಗೆ ಕಾಮಪ್ರಜ್ಞೆ ಅರಳುವ ಹಾದಿಯಲ್ಲಿ ಇವೆಲ್ಲ ಅಡ್ಡಗಲ್ಲಾಗಿ ನಿಲ್ಲುತ್ತವೆ.

ಹೆಣ್ಣು ಕಾಮತೃಪ್ತಿಯನ್ನು ಅನುಭವಿಸಬೇಕಾದರೆ ಅದನ್ನು ಸಂತಾನೋತ್ಪತ್ತಿಯ ಉದ್ದೇಶ ಹಾಗೂ ಭಯದಿಂದ ಪ್ರತ್ಯೇಕಗೊಳಿಸಬೇಕು ಎಂದು ಹೋದಸಲ ಚರ್ಚಿಸಿದ್ದೆ; ಅದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನೂ ಮುಂದಿಟ್ಟಿದ್ದೆ. ಆದರೆ ಈ ಅಂಶಗಳನ್ನು ಜಾರಿಗೆ ತರುವುದು ಖಂಡಿತವಾಗಿಯೂ ಸುಲಭವಲ್ಲ. ಯಾಕೆಂದರೆ, ವಿಶ್ವದಾದ್ಯಂತ ಹರಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಕಾಮುಕ ಜೀವಿ ಎಂದು ಯಾರೂ ಯೋಚಿಸುವ ಗೊಡವೆಗೇ ಹೋಗಿಲ್ಲ! ವ್ಯತಿರಿಕ್ತವಾಗಿ ಗಂಡು ಮಾತ್ರ ಕಾಮುಕ ಜೀವಿಯೆಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ – ಯಾಕೆಂದರೆ ಉದ್ರಿಕ್ತ ಶಿಶ್ನವು ಎದ್ದು ಕಾಣುತ್ತದಲ್ಲವೆ? ಗಂಡಿನ ಬದುಕಿನಲ್ಲಿ ಶಿಶ್ನೋದ್ರೇಕ, ವೀರ್ಯಸ್ಖಲನ ಶುರುವಾದರೆ ಕಾಮುಕತೆಯ ಮುಕ್ತ ಅಭಿವ್ಯಕ್ತಿಗೆ ಪರವಾನಗಿ ಸಿಕ್ಕಿದಂತೆ – ಮದುವೆಯೂ ಸೇರಿ. ಆದರೆ ಹೆಣ್ಣಿಗೆ ಕಾಮ ಕೆರಳಿದಾಗ ಭಗಾಂಕುರ ನಿಮಿರಿರುವುದು ಕಾಣುವುದಿಲ್ಲವಲ್ಲ? ಹಾಗಾಗಿ ಹೆಣ್ಣನ್ನು ಕಾಮಭಾವನೆಗಳಿಲ್ಲದ, ಗಂಡಿನ ಭೋಗ್ಯಕ್ಕೆ ಯೋನಿಯನ್ನು ನೀಡಲು ಸದಾ ಸಿದ್ಧಳಾಗಬೇಕಾದ ವ್ಯಕ್ತಿಯೆಂದೇ ಲೆಕ್ಕ ಮಾಡಲಾಗುತ್ತದೆ. ಹಾಗಾಗಿಯೇ ಯೋನಿಯಿಲ್ಲದೆ ಹುಟ್ಟಿದ ಹೆಣ್ಣು ಎಷ್ಟೇ ಯೋಗ್ಯಳಾದರೂ ಮದುವೆಯ ಮಾರುಕಟ್ಟೆಯಲ್ಲಿ ಮಾರಾಟವಾಗದ ಸರಕಾಗಿ ಉಳಿಯುತ್ತಾಳೆ. (ಕೆಲವರಲ್ಲಿ ಹುಟ್ಟಿನಿಂದ ಯೋನಿ ಇರುವುದಿಲ್ಲ. ಇವರಿಗೆ ಮದುವೆಗೆ ಅರ್ಹತೆ ಪಡೆಯಲು ಕೃತಕ ಯೋನಿಯನ್ನು ಸೃಷ್ಟಿ ಮಾಡಲಾಗುತ್ತದೆ.) ಯೋನಿಯಿರುವ ಕಾರಣಕ್ಕೇ ವೇಶ್ಯೆಯರ ಅಮಾನುಷ ಕುಲವೇ ಸೃಷ್ಟಿಯಾಗಿದೆ.  ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಹೆಣ್ಣು ತನ್ನ ಕಾಮತೃಪ್ತಿ ಪಡೆಯುವುದಕ್ಕೆ ಯೋಚಿಸುವ ಬಹುಮುಂಚೆ ತಾನೂ ಕಾಮಜೀವಿಯೆಂದು ಫಲಕ ಹಿಡಿದು ಪ್ರದರ್ಶಿಸುತ್ತ, ಅದಕ್ಕೆ “ವಿಶೇಷ ಅರ್ಹತೆ” ಪಡೆದುಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ. ತನ್ನ ಯೋನಿಯನ್ನು ಪ್ರೀತಿಸದೆ ತನ್ನನ್ನು ಮಾತ್ರ ಪ್ರೀತಿಸುವವರು ಯಾರಾದರೂ ಇದ್ದಾರೆಯೇ ಎಂದು ಕೇಳಬೇಕಾಗುತ್ತದೆ.

ಇಲ್ಲೊಂದು ಸಮಸ್ಯೆಯೂ ಇದೆ: ಹೆಣ್ಣು ತಾನು ಕಾಮಜೀವಿಯೆಂದು ಸಾರ್ವತ್ರಿಕವಾಗಿ ಗುರುತಿಸಿಕೊಳ್ಳುವ ಮುಂಚೆ ಕಾಮಕೂಟಕ್ಕೆ ಸಮಾಜದಿಂದ ಅರ್ಹತಾ ಪತ್ರ ಪಡೆಯಬೇಕಾಗುತ್ತದೆ. ಅದಕ್ಕಾಗಿ ದಾಂಪತ್ಯಕ್ಕೆ ತಯಾರೆಂದು ಘೋಷಿಸಬೇಕಾಗುತ್ತದೆ. ಅದಕ್ಕಾಗಿ ತನ್ನ ಸಾಮಾಜಿಕ ಪಾತ್ರನಿರ್ವಹಣೆಯನ್ನು ಮಾಡಬಲ್ಲೆನೆಂದು ತೋರಿಸಿ ಕೊಡಬೇಕಾಗುತ್ತದೆ. ಹಾಗಾಗಿ ಮನಸ್ಸಿಲ್ಲದಿದ್ದರೂ ತನಗೆ ಗಂಡ-ಮಕ್ಕಳ ಜವಾಬ್ದಾರಿ ಹೊರಲು, ಗಂಡನ ಬಂಧುಗಳನ್ನೂ ನೋಡಿಕೊಳ್ಳಲು ತಯಾರಿದ್ದೇನೆ ಎಂದು ತನ್ನನ್ನು ತಾನೇ ನಂಬಿಸಬೇಕಾಗುತ್ತದೆ. ಇಷ್ಟಾದರೂ ಆಕೆಗೆ ಕಾಮಸುಖದ ಭರವಸೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇಲ್ಲೊಂದು ದೃಷ್ಟಾಂತ ಹೇಳಿಕೊಳ್ಳಲೇಬೇಕು. ಈ ದಾಂಪತ್ಯದ ಆರು ತಿಂಗಳಲ್ಲಿ ಎರಡು ಸಲ ಸಂಭೋಗ ನಡೆದು, ಹೆಂಡತಿ ಗರ್ಭಿಣಿಯಾಗಿ ಅವಳಿಗಳನ್ನು ಹೆತ್ತಿದ್ದಾಳೆ ನಂತರ ಗಂಡ ಹೆಂಡತಿಯಲ್ಲಿ ಕಾಮಾಸಕ್ತಿ ಪೂರ್ತಿಯಾಗಿ ಕಳೆದುಕೊಂಡಿದ್ದಾನೆ. ವಿಚ್ಛೇದನಕ್ಕಾಗಿ ಹೆಂಡತಿ ದೂರು ಸಲ್ಲಿಸಿದಾಗ ನ್ಯಾಯಾಧೀಶರು ಹೇಳಿದ್ದೇನು? “ಗಂಡ ಒಳ್ಳೆಯವನೆನ್ನುತ್ತೀರಿ, ಈ ಎರಡು ಮಕ್ಕಳ ಮುಖ ನೋಡಿಕೊಂಡು ನಿಮ್ಮ ಕಾಮಾಸಕ್ತಿಯನ್ನು ಮರೆತು ಬಾಳುವೆ ಮಾಡಬಹುದಲ್ಲವೆ?”  ಇದರರ್ಥ ಏನು? ಒಂದುಸಲ ಮಕ್ಕಳಾದ ನಂತರ ಹೆಣ್ಣಿನ ಕಾಮಾಕಾಂಕ್ಷೆಯೇ ಸಾಮಾಜಿಕವಾಗಿ ಮಹತ್ವ ಕಳೆದುಕೊಳ್ಳುವ ಸಂಭವವಿದೆ.

ಕಾಮುಕತೆ ಹಾಗೂ ಅದರ ಅಭಿವ್ಯಕ್ತಿಯ ಅಗತ್ಯವು ಊಟ ನಿದ್ರೆಗಳಷ್ಟೇ ಸಾಮಾನ್ಯವಾಗಿದೆ. ಆದರೆ ಇದಕ್ಕೆ ಮಹತ್ವ ಬಂದಿದ್ದು ಮಕ್ಕಳನ್ನು ಹುಟ್ಟಿಸುವ ಗುಣ ಇದರಲ್ಲಿದೆ ಎಂಬುದಕ್ಕೆ – ಹಾಗಾಗಿಯೇ ಕಾಮಕ್ರಿಯೆಯ ಕಡತವು ದಾಂಪತ್ಯ ಎನ್ನುವ ತಪ್ಪು ಇಲಾಖೆಯಲ್ಲಿ ಸೇರಿಹೋಗಿದೆ. ಒಂದು ಮದುವೆಗೆ ಏನೆಲ್ಲ ಖರ್ಚು ಹಾಗೂ ರೀತಿ-ರಿವಾಜುಗಳು ಇರುವುದಾದರೂ, ನಂತರ ನಡೆಯುವ ಕಾಮಕ್ರಿಯೆ ಮಾತ್ರ ಊಟ-ನಿದ್ರೆಗಳಷ್ಟೇ ಸಾಮಾನ್ಯವಾಗಿ ನಡೆಯುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆಯ ಸಹಜತೆಯನ್ನೂ ಸಾಧಾರಣತೆಯನ್ನೂ ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ವಿಚಿತ್ರವೆಂದರೆ, ಏನೇನೂ ಬುದ್ಧಿಯಿಲ್ಲದ ಪ್ರಾಣಿಗಳೂ ಆರಾಮವಾಗಿ ನಡೆಸುವ ಕ್ರಿಯೆಯನ್ನು ನಾವು ಮಾನವರು ಬುದ್ಧಿ ಖರ್ಚುಮಾಡಿ ಎಷ್ಟೊಂದು ಸಂಕೀರ್ಣವನ್ನಾಗಿ ಪರಿವರ್ತಿಸಿ, ಅನುಸರಿಸಲು ಕಷ್ಟಕರವನ್ನಾಗಿ ಮಾಡಿಕೊಂಡಿದ್ದೇವೆ! ಇದನ್ನು ಪ್ರತಿ ಹೆಣ್ಣೂ ಅರ್ಥ ಮಾಡಿಕೊಳ್ಳಬೇಕು. ನನಗೆ ಮಲಗಲು ಸಮಯ ಬೇಕು ಎಂದು ಹೇಳುವಷ್ಟೇ ಸಹಜವಾಗಿ ನನಗೆ ಕಾಮಸುಖ ಸವಿಯಲು ಸಮಯ ಬೇಕು, ಅದಕ್ಕೇ ಬೇಗ ಮನೆಗೆ ಬಾ ಎಂದು ಗಂಡನಿಗೆ ಹೇಳುವ ಛಾತಿಯನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಬ್ಬಳು ಹೇಳಿದ್ದು ನೆನಪಿಗೆ ಬರುತ್ತದೆ: “ಇವೊತ್ತು ರಾತ್ರಿ ಹತ್ತು ಗಂಟೆಗೆ ನಮ್ಮ ಹಾಸಿಗೆಯಲ್ಲಿ ಸೆಕ್ಸ್ ನಡೆಯಲಿದೆ – ನೀನಿರಲಿ, ಇಲ್ಲದಿರಲಿ.”

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣು ಕಾಮಸುಖವನ್ನು ಸವಿಯಲು ಸಂತಾನೋತ್ಪತ್ತಿಯ ಕಾರ್ಯದಿಂದ ಬೇರ್ಪಡಿಸಲೇಬೇಕು.

211: ಹೆಣ್ಣಿನ ಕಾಮಪ್ರಜ್ಞೆ-7

ಬೆಳೆಯುವ ಹಂತದಲ್ಲಿ ಹೆಣ್ಣಿನ ಕಾಮದ ಅಭಿವ್ಯಕ್ತಿಯು ಹತ್ತಿಕ್ಕಲ್ಪಡುವುದರ ಬಗೆಗೆ ಮಾತಾಡುತ್ತ, ಕಾಮುಕತೆಯ ಅರ್ಹತೆಯು ಕೇವಲ ಸುಂದರ ಎನ್ನಿಸಿಕೊಳ್ಳುವ ಶರೀರಗಳಿಗಷ್ಟೇ ಅಲ್ಲ, ಎಲ್ಲ ಶರೀರಗಳಿಗೂ ಇದೆಯೆಂದು ಹೇಳುತ್ತಿದ್ದೆ. ಈಸಲ ಹೆಣ್ಣಿನ ಸಂತಾನೋತ್ಪತ್ತಿಗೂ ಕಾಮಪ್ರಜ್ಞೆಗೂ ಇರುವ ಸಂಬಂಧದ ಬಗೆಗಿನ ಸತ್ಯಗಳನ್ನು ಕಂಡುಕೊಳ್ಳೋಣ.

ಮದುವೆಯಾದ ಮೇಲೆಯೆ ಕಾಮಕ್ರಿಯೆ ಶುರುಮಾಡುವ ರೂಢಿ ನಮ್ಮಲ್ಲಿದೆ. ಯಾಕೆಂದರೆ, ದಾಂಪತ್ಯದ ಚೌಕಟ್ಟಿನಲ್ಲಿ ನಡೆಯುವ  ಕಾಮಕ್ರಿಯೆಯಿಂದ ಸಂತಾನೋತ್ಪತ್ತಿಗೆ ಹಾಗೂ ಸಂತಾನದ ಜವಾಬ್ದಾರಿಯುತ ನಿರ್ವಹಣೆಗೆ ಅತ್ಯನುಕೂಲ. ವಿಪರ್ಯಾಸ ಎಂದರೆ, ದಾಂಪತ್ಯದ ಚೌಕಟ್ಟಿನೊಳಗೆ ನಡೆಯಬೇಕಾದ ಕಾಮಕ್ರಿಯೆಯು ಸಾಕಷ್ಟು ನಡೆಯದಿರುವುದೇ ಹೆಚ್ಚಾಗಿದೆ! ನಂಬುವುದಿಲ್ಲವೆ? ಹೀಗೆ ಯೋಚಿಸಿ: ಮದುವೆಗೆ ಮುಂಚೆ ಕಾಮಸುಖದ ಬಗೆಗೆ (ಸಂಭೋಗವೇ ಆಗಬೇಕೆಂದಿಲ್ಲ) ಕಟ್ಟಿಕೊಂಡ ಕಲ್ಪನೆಗಳನ್ನು ಎಷ್ಟರ ಮಟ್ಟಿಗೆ  ಈಡೇರಿಸಿಕೊಂಡಿದ್ದೀರಿ ಎಂದು ಅಳೆದುಕೊಂಡರೆ ಹೆಚ್ಚಿನಂಶ ಇಲ್ಲವೆಂದೇ ಅನಿಸುತ್ತದೆ. ಅಷ್ಟೇಕೆ, ಕೆಲವರು ಸಹ-ವಾಸದಲ್ಲಿ (live-in) ಇರುವಾಗ, ಅಥವಾ ಡೇಟಿಂಗ್ ಮಾಡುತ್ತಿರುವಾಗ ಅನುಭವಿಸಿದಷ್ಟು ಕಾಮಸುಖವನ್ನು ದಾಂಪತ್ಯದಲ್ಲಿ ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ನನ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗೇಕೆ?

ಇತ್ತೀಚಿನ ದಶಕಗಳಲ್ಲಿ ದಾಂಪತ್ಯದ ಬದುಕಿನಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ವಿದ್ಯಾಭ್ಯಾಸವು ದಡಮುಟ್ಟಲು ಹೆಚ್ಚು ಸಮಯ ಹಿಡಿಯುವುದರಿಂದ ದಾಂಪತ್ಯಗಳು ಶುರುವಾಗುವುದು ತಡವಾಗುತ್ತಿದೆ. ಮದುವೆ ತಡವಾದಷ್ಟೂ ಮಕ್ಕಳು ಬೇಗ ಆಗಲಿ ಎನ್ನುವ ಅನಿಸಿಕೆ ಹೆಚ್ಚಿನ ದಂಪತಿಗಳಲ್ಲಿ ಮೂಡುತ್ತಿದೆ. ಸಾಕಾಗದ್ದಕ್ಕೆ, ವಯಸ್ಸಾದಂತೆ ಸಂತಾನ ಸಾಮರ್ಥ್ಯವು ಕಡಿಮೆಯಾಗುತ್ತದೆ ಎಂಬ ಅನಿಸಿಕೆಯನ್ನು ಇವರ ಮೇಲೆ ಹೇರಲಾಗುತ್ತಿದೆ. ಪಿ.ಸಿ.ಓ.ಎಸ್. ಹಾಗೂ ಸ್ಥೂಲಕಾಯ ಇದ್ದರಂತೂ ಸಂತಾನವು ಕಷ್ಟಸಾಧ್ಯ ಎಂದು ನಿರ್ಣಯಿಸುವ ವೈದ್ಯರಿದ್ದಾರೆ (ಇಂಥ ದೇಹಸ್ಥಿತಿಗಳಿಗೆ ಮನೋಭಾವುಕ ಕಾರಣಗಳಿದ್ದು, ಇದಕ್ಕೆ ಮನೋಚಿಕಿತ್ಸೆ ನೆರವಾಗಬಹುದು ಎನ್ನುವುದು ಅನೇಕರಿಗೆ ಗೊತ್ತಿಲ್ಲ). ಹಾಗಾಗಿ ಮಗುವು ಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಇರುವವರು, ಹಾಗೂ ಮಗುವು ಈಗಲೇ ಬೇಡವೆನ್ನುವವರು ಉದ್ದೇಶ ಬದಲಿಸಿ, “ಮಗುವೊಂದು ಬೇಗ ಆಗಲಿ” ಎಂದು ತರಾತುರಿಯಲ್ಲಿ ಗರ್ಭಧಾರಣೆಯ ಯತ್ನಕ್ಕೆ ತೊಡಗುತ್ತಾರೆ. ಕಾಮಬಾಂಧವ್ಯವನ್ನು ನೆಲೆಗೊಳಿಸುವ ಸಮಯದಲ್ಲಿ ಗರ್ಭಧಾರಣೆಗೆ ಆದ್ಯತೆ ಕೊಡುವುದರ ಪರಿಣಾಮವು ನೇರವಾಗಿ ಆಗುವುದು ಗಂಡಹೆಂಡಿರ ಅನ್ಯೋನ್ಯತೆಯ ಮೇಲೆ. ಇಬ್ಬರೂ ಪಾರಸ್ಪರಿಕ ಕಾಮಸುಖವನ್ನು ಬದಿಗಿಟ್ಟು ವ್ಯವಸ್ಥೆಯ ಬಂದಿಗಳಾಗಿ, ಸಂತಾನದ ಯಂತ್ರಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಆಗ ನಡೆಯುವ “ಸಂಕಟ ಸಂಭೋಗ”ವು ಲೈಂಗಿಕ ಸಮಸ್ಯೆಗಳಿಗೆ ಹುಟ್ಟುಹಾಕುತ್ತ, ಕೊನೆಗೆ ಕಾಮಕ್ರಿಯೆಯೇ ಬೇಡವೆನಿಸುತ್ತದೆ. ಕಾಮಕ್ರಿಯೆಗಾಗಿಯೇ ಕಟ್ಟಿಕೊಳ್ಳುವ ದಾಂಪತ್ಯದಲ್ಲಿ ಕಾಮತೃಪ್ತಿಯೇ ಲೋಪವಾಗುವುದು ಎಂಥ ವಿಪರ್ಯಾಸ! (ಮೊದಲು ಸಹ-ವಾಸದಲ್ಲಿದ್ದು ನಂತರ ಮದುವೆಯಾಗಿ ಮಗುವಿಗಾಗಿ ಯತ್ನಿಸುವ ಒಂದು ದಂಪತಿಗೆ ಅವರ ಕಾಮಜೀವನದ ಬಗೆಗೆ ಕೇಳಿದಾಗ ಬಂದ ಉತ್ತರ: “ಸ್ಸಾರಿ, ನಮಗೀಗ ಮದುವೆ ಆಗಿದೆ!” ಇಲ್ಲಿ ಹಾಸ್ಯದಲ್ಲಿ ಕಟುಸತ್ಯವೂ ಇದೆ.) ಇದೆಲ್ಲದರ ಪರಿಣಾಮ ಹೆಣ್ಣಿನ ಮೇಲೆ ಹೆಚ್ಚಾಗಿ ಆಗುತ್ತದೆ. ಏಕಾಂತದಲ್ಲಿ ಗಂಡನೊಡನೆ ಮಲಗಿ ವೀರ್ಯ ಪಡೆಯಬೇಕಾದವಳು ಅದನ್ನೇ ಆಸ್ಪತ್ರೆಯಲ್ಲಿ ನಾಲ್ಕು ಜನರ ನಡುವೆ ಬೆತ್ತಲೆಯಾಗಿ ತೊಡೆಯಗಲಿಸಿ ಮಲಗಿ ನಿಸ್ಸಹಾಯಕ ಪಶುವಿನಂತೆ ಪಡೆಯಬೇಕಾದ ಪ್ರಸಂಗವು ಯಾವ ಅತ್ಯಾಚಾರಕ್ಕೂ ಕಡಿಮೆಯಿಲ್ಲ. ಇಂಥ ಭಾವನಾತ್ಮಕ ದಿವಾಳಿತವನ್ನೂ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಎಲ್ಲೆಲ್ಲೂ ತಲೆಯೆತ್ತಿ ಸಂತಾನದ ವ್ಯಾಪಾರೀಕರಣ ನಡೆಸುವ ಫಲವತ್ತತೆಯ ಕೇಂದ್ರಗಳೇ ಸಾಕ್ಷಿ.

ಒತ್ತಾಯದ ಗರ್ಭಧಾರಣೆಯಲ್ಲಿ ಹಿರಿಯರ ಪಾತ್ರವೂ ಸಾಕಷ್ಟಿದೆ. “ಮೊದಲು ಮಗುವಾಗಲಿ, ನಂತರ ಸುಖಪಡುವುದು ಇದ್ದೇ ಇದೆ” ಎನ್ನುವುದು ಮೇಲುನೋಟಕ್ಕೆ ಯುವದಂಪತಿಯ ಹಿತಚಿಂತನೆಯಂತೆ ಕಂಡರೂ ಒಳಗೊಳಗೆ ಹಿರಿಯರ ಸ್ವಾರ್ಥವಿದೆ. (ಉದಾ. “ನಿನ್ನ ಮಗುವನ್ನು ನೋಡಿಯೇ ನಾನು ಕಣ್ಣು ಮುಚ್ಚಬೇಕು” ಎನ್ನುವಲ್ಲಿ ಯಾರ ಹಿತವಿದೆ?). ಮಗುವಾದರೆ ಅದೇ ಕಾರಣದಿಂದ ಕಾಮಸುಖವು ಇನ್ನೂ ದುರ್ಲಭವಾಗುತ್ತದೆ ಎಂಬುದು ಎಲ್ಲ ಹಿರಿಯರಿಗೂ ಆದ ಅನುಭವ.

ಇನ್ನು, ಸ್ವಂತ ಕಾಮಸುಖಕ್ಕೆ ಬೆನ್ನು ತಿರುಗಿಸಿ ಸಂತಾನಕ್ಕೆ ಕೈಹಾಕುವ ಹೆಣ್ಣಿನ ಮನಸ್ಸಿನೊಳಗೆ ಏನು ನಡೆಯುತ್ತದೆ? ಗಂಡು ಕಾಮಜೀವಿ, ಹೆಣ್ಣಾಗಿ ಅವನಾಸೆ ಪೂರೈಸಿ, ಮಗುವನ್ನು ಹೆತ್ತುಕೊಟ್ಟು ಕುಟುಂಬದ ಅಂತಸ್ತನ್ನು ಹೆಚ್ಚಿಸಬೇಕು. ಇಲ್ಲವಾದರೆ ತನಗೆ ಬೆಲೆಯಿರುವುದಿಲ್ಲ ಎಂದುಕೊಳ್ಳುವ ಹೆಣ್ಣಿಗೆ ಸ್ವಂತಿಕೆ ಎಷ್ಟಿದೆ ಎನ್ನುವುದು ಯಾರೇ ಊಹಿಸಬಹುದು. ಹೆಣ್ಣಿಗೂ ಕಾಮುಕತೆಯಿದೆ ಎಂದು ಒಪ್ಪಲು ಯಾವ ಗಂಡಸೂ ತಯಾರಿಲ್ಲ. ಯಾಕೆ? ಒಪ್ಪಿಕೊಂಡರೆ ಪೂರೈಸುವ ಹೊಣೆ ಹೊರಬೇಕಾಗುತ್ತದೆ! ನಮ್ಮಲ್ಲಿ ಹೆಂಗಸನ್ನು ಅರ್ಥಮಾಡಿಕೊಳ್ಳಲು ಗಂಡಸು ಪ್ರಯತ್ನಪಡಬೇಕಾಗಿಲ್ಲ, ಗಂಡನನ್ನು ಅರ್ಥಮಾಡಿಕೊಳ್ಳುವುದು ಹೆಂಡತಿಯ ಜವಾಬ್ದಾರಿ ಎಂಬ ತಪ್ಪು ನಂಬಿಕೆಯಿದೆ.

ಇಲ್ಲೇನು ನಡೆಯುತ್ತಿಲ್ಲ? ಸಂತಾನಕ್ಕೆ ವಯಸ್ಸು ತಡವಾಗುತ್ತಿದೆ ಎಂದರೆ ಕಾಮಕ್ರಿಯೆಗೂ ತಡವಾಗುತ್ತಿದೆ ಎಂದು ಯಾರೂ ಯೋಚಿಸುತ್ತಿಲ್ಲ! ಇಪ್ಪತ್ತೆಂಟರೊಳಗೆ ಮಗು ಬೇಕು ಎನ್ನುವವರು ಹದಿನೆಂಟರೊಳಗೆ ಹುಟ್ಟಿದ ಕಾಮೇಚ್ಛೆಯ ಬಗೆಗೆ ಏನು ಹೇಳುತ್ತಾರೆ? ಮದುವೆಯ ತನಕ ಕಾಮೇಚ್ಛೆಯನ್ನು ನಿಯಂತ್ರಿಸಬೇಕು ಎಂದೆನ್ನುವ ಹಿರಿಯರು ಮದುವೆಯ ನಂತರ (ಸಂತಾನಾಪೇಕ್ಷೆಯನ್ನು ಬದಿಗಿಟ್ಟು) ಅದರ ಪುಟ್ಟಪೂರಾ ಹರಿವಿಗೆ ಆದ್ಯತೆ ಏಕೆ ಕೊಡುವುದಿಲ್ಲ? ಕಾಮತೃಪ್ತಿಯ ಸಾಮರಸ್ಯ ಸಾಧಿಸಿದ ಅನ್ಯೋನ್ಯತೆಯ ದಾಂಪತ್ಯವು ಅದಿಲ್ಲದೆ ಸಂತಾನ ಪಡೆದ ದಾಂಪತ್ಯಕ್ಕಿಂತಲೂ ಅತ್ಯಂತ ಸ್ವಸ್ಥವಾಗಿರುತ್ತದೆ ಎಂದೇಕೆ ಯೋಚಿಸುವುದಿಲ್ಲ?

ಪರಿಹಾರವೇನು? ಯಥೇಷ್ಟ ಕಾಮಜೀವನವನ್ನು ಬಯಸುವ ಹೆಣ್ಣಿಗೆ ಈ ಆಯ್ಕೆಗಳಿವೆ:

  1. ಮದುವೆಗೆ ಮುಂಚೆ ಗಂಡಿನೊಡನೆ ಲೈಂಗಿಕ ವಿಷಯಗಳನ್ನಷ್ಟೇ ಅಲ್ಲ, ತನ್ನ ಕಾಮಸುಖದ ಅಗತ್ಯವನ್ನೂ ಹೇಳಿಕೊಳ್ಳುತ್ತ, ಮುಕ್ತವಾಗಿ ಚರ್ಚಿಸಬೇಕು. ತನ್ನ ಭಾವನಾತ್ಮಕ ಸಾಂಗತ್ಯವನ್ನು ಸ್ಥಿರವಾಗಿ ಪೂರೈಸಿಕೊಳ್ಳುವ ಲಕ್ಷಣ ಕಾಣದಿದ್ದರೆ ಸಂಬಂಧವನ್ನು ಕೊನೆಯ ಕ್ಷಣದಲ್ಲಿಯೂ ಕೊನೆಗಾಣಿಸಲು ತಯಾರಿರಬೇಕು.
  2. ನವದಾಂಪತ್ಯದಲ್ಲಿ ತೃಪ್ತಿಕರ ಕಾಮಸಂಬಂಧ ಬೆಳೆಯುವ ತನಕ ಎಷ್ಟೇ ತಡವಾಗಲಿ, ಗರ್ಭಧಾರಣೆಗೆ ಒಪ್ಪಿಕೊಳ್ಳಕೂಡದು. ಸಂತಾನವು ಆಯ್ಕೆಯೇ ವಿನಾ ಅನಿವಾರ್ಯವಲ್ಲ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು. ಇದರ ಬಗೆಗೆ ಭಾವೀ ಅತ್ತೆಮಾವಂದಿರನ್ನು ಮುಂಚೆಯೇ ಒಪ್ಪಿಸಬೇಕು.
  3. ಮೊದಲ ಸಮಾಗಮವನ್ನು ನಿಶ್ಚಯ ಮಾಡುವಾಗಲೇ ಶಿಸ್ತುಬದ್ಧ ಗರ್ಭನಿರೋಧ ಕ್ರಮಗಳನ್ನು ಕೈಗೊಂಡಿರಬೇಕು. (ನಿಯಮಿತವಾಗಿ ಸೇವಿಸುವ ಗರ್ಭನಿರೋಧ ಮಾತ್ರೆಗಳು ಹೆಚ್ಚು ಪರಿಣಾಮಕಾರಿ.) ಅಕಸ್ಮಾತ್ತಾಗಿ ಗರ್ಭ ಧರಿಸುವ ಆತಂಕವಿದ್ದರೆ ಸುಖಪಡಲು ಆಗುವುದಿಲ್ಲ.
  4. ಸಂಗಾತಿಯು ಗರ್ಭಧಾರಣೆಯ ವಿಚಾರವನ್ನು ಹೇರುವ ಹಾಗಿದ್ದರೆ ಯೋನಿಶಿಶ್ನದ ಸಂಭೋಗವನ್ನು ನಿರ್ದಾಕ್ಷಿಣ್ಯವಾಗಿ ದೂರವಿಟ್ಟು ಇನ್ನಿತರ ವಿಧಗಳಲ್ಲಿ ಸುಖಪಡೆಯಲು ಆಹ್ವಾನಿಸಬೇಕು.
  5. ಮನಃಪೂರ್ತಿ ಕಾಮಕೂಟಕ್ಕೆ ಒಪ್ಪಿದರೂ ಗರ್ಭಧರಿಸುವ ಸಾಧ್ಯತೆಯುಳ್ಳ “ಯೋನಿಯೊಳಗೆ ಸ್ಖಲನ”ವನ್ನು ವಿರೋಧಿಸುವ ಹಕ್ಕು ಪ್ರತಿ ಹೆಣ್ಣಿಗೂ ಇದೆ. ಇದು ಆತ್ಮರಕ್ಷಣೆಯೇ ವಿನಾ ದಾಂಪತ್ಯದ ಸಾಮರಸ್ಯಕ್ಕೆ ವಿರೋಧವಲ್ಲ, ಹಾಗಾಗಿ ತಪ್ಪಿತಸ್ಥ ಭಾವ ಬೇಡ. ಹಾಗೆಯೇ ಹೆಣ್ಣಿನ ಅನುಮತಿ ಇಲ್ಲದೆ ಯೋನಿಯಲ್ಲಿ ವೀರ್ಯವನ್ನು ಬಿಡುವುದು ಹೆಣ್ಣಿನ ಭಾವನೆಗಳನ್ನು ಗೌರವಿಸದೆ ಮಾಡುವ ದಬ್ಬಾಳಿಕೆಯ ಸಂಕೇತ ಎನ್ನುವುದನ್ನು ಗಂಡಿಗೆ ಅರ್ಥಮಾಡಿಸುವುದೂ ಅತ್ಯಗತ್ಯ.

ಹೀಗೆ ಸಂತಾನವನ್ನು ಬದಿಗಿಟ್ಟು ಪಡೆಯುವ ಕಾಮಪ್ರಜ್ಞೆಯ ನಿಲುವು ಹೆಣ್ಣಿನ ಅಸ್ಮಿತೆಗೆ ಭೂಷಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣಿನ ಜನನಾಂಗದ ಬಗೆಗೆ ನಮಗೆಷ್ಟು ಗೊತ್ತಿದೆ?

209: ಹೆಣ್ಣಿನ ಕಾಮಪ್ರಜ್ಞೆ-5

ತಾನು ಮೆಚ್ಚಿದ ಗಂಡಿನೊಡನೆ ಸುಖಿಸುವ ಹೆಣ್ಣಿಗೂ ಕೂಡ ಅವಳದೇ ಆದ ಪ್ರತ್ಯೇಕ ಸುಖವಿದೆ, ಅಷ್ಟಲ್ಲದೆ ಹೆಣ್ಣಿನ ಕಾಮಪ್ರಜ್ಞೆಯಲ್ಲೂ ಬೆರಗುಗೊಳ್ಳುವ ವೈವಿಧ್ಯ ಇದೆಯೆಂದು ಹೇಳುತ್ತಿದ್ದೆ. ಈ ಸಲ ಹೆಣ್ಣಿನ ಜನನಾಂಗ ಕೇಂದ್ರೀಕೃತ ಕಾಮಪ್ರಜ್ಞೆಯ ಬಗೆಗೆ ಮಾತಾಡೋಣ.

ಗಂಡಿನ ಶಿಶ್ನಕ್ಕೆ ಸಮಾನವಾದ ಕಾಮಾಂಗ ಹೆಣ್ಣಿನಲ್ಲಿ ಯಾವುದು? ಹೆಚ್ಚಿನವರ ತಲೆಗೆ ಥಟ್ಟನೆ ಹೊಳೆಯುವುದು ಯೋನಿಯೆ. ಯಾಕೆ? ಶಿಶ್ನವು ಕೂಡುವುದು ಯೋನಿಯ ಜೊತೆಗೆ. ವಾಸ್ತವವಾಗಿ, ಶಿಶ್ನಕ್ಕೆ ಸಮಾನವಾದ ಹೆಣ್ಣಿನ ಕಾಮಾಂಗವು ಭಗಾಂಕುರ. ಹಾಗಾಗಿ ಮೊದಲು ಭಗಾಂಕುರದ  ಬಗೆಗೆ ಒಂದಷ್ಟು ಮಾಹಿತಿ:

ಭಗಾಂಕುರವು ಹೆಣ್ಣಿನ ಜನನಾಂಗದ ಒಳತುಟಿಗಳು ಸೇರುವಲ್ಲಿ ಮೇಲ್ಗಡೆ ಇದೆ. ಇದರ ರಚನೆಯೂ ಶಿಶ್ನದ ರಚನೆಯೂ ಥೇಟ್ ಒಂದೇ: ಮಣಿ, ಮುಂದೊಗಲು, ಗಡಸುಗೊಳ್ಳುವ ಸ್ಪಂಜುಗಳು, ಸ್ನಾಯುಗಳು ಎಲ್ಲವೂ ಇದರಲ್ಲಿವೆ – ಮೂತ್ರನಾಳ ಒಂದಿಲ್ಲ ಅಷ್ಟೆ,  ಇನ್ನು ಕಾರ್ಯ? ಭಗಾಂಕುರಕ್ಕೆ ಕಾಮಸ್ಪರ್ಶವನ್ನು ಗ್ರಹಿಸುವುದರ ಹೊರತು ಬೇರೇನೂ ಕೆಲಸವಿಲ್ಲ! ಉದ್ರೇಕವಾದಾಗ ಭಗಾಂಕುರವು 3-4.5 ಅಂಗುಲಗಳಷ್ಟು ದೊಡ್ಡದಾಗುತ್ತದೆ. ಅಷ್ಟಾದರೂ ಮುಕ್ಕಾಲು ಭಾಗ ಬಚ್ಚಿಟ್ಟುಕೊಂಡಿರುತ್ತದೆ. ಹಾಗಾಗಿ ಇದರ ಇರುವಿಕೆಯನ್ನು ಹುಡುಕಬೇಕಾಗುತ್ತದೆ. ಇದರ ಮಣಿಯಲ್ಲಿಯು 8000 ಸ್ಪರ್ಶತಂತುಗಳನ್ನು ಹೊಂದಿದ್ದು ಶಿಶ್ನದ ದುಪ್ಪಟ್ಟು ಸಂವೇದನಾಶೀಲ ಆಗಿದೆ. ಕೆಲವರಿಗೆ ಅತಿಕಡಿಮೆ ಸ್ಪರ್ಶವು ಸಾಕಾದರೆ ಇನ್ನು ಕೆಲವರಿಗೆ ಬಲವಾದ ಘರ್ಷಣೆ ಅಗತ್ಯವಾಗುತ್ತದೆ. ಶೇ 50-75% ಹೆಂಗಸರಿಗೆ ಯೋನಿಸಂಭೋಗದ ಮೂಲಕ ಭಾವಪ್ರಾಪ್ತಿ ಆಗುವುದಿಲ್ಲ. ಅವರಿಗೆಲ್ಲ ಭಗಾಂಕುರದ ಸಂವೇದನೆ ಬೇಕೇಬೇಕು. ಕೆಲವು ಹೆಂಗಸರು ತಮ್ಮ ಭಗಾಂಕುರದ (ತುದಿಯನ್ನಲ್ಲ) ಆಳದ ಭಾಗವನ್ನು ಉತ್ತೇಜಿಸಿದಾಗ ಸುಖಪಡುತ್ತಾರೆ. ಭಗಾಂಕುರವು ವಯಸ್ಸಾದಂತೆ ಅಳತೆಯಲ್ಲಿ ದೊಡ್ಡದಾಗುತ್ತದೆ. ಹದಿವಯಸ್ಸಿನವರಿಗಿಂತ ಮುಟ್ಟುನಿಂತ ಹೆಣ್ಣಿನ ಭಗಾಂಕುರವು ಎರಡರಷ್ಟು ದೊಡ್ಡದೂ ದಪ್ಪಗೂ ಆಗುತ್ತದೆ. (ಹಾಗೆಂದು ಯಾರೂ ಕೊಚ್ಚಿಕೊಳ್ಳುವುದಿಲ್ಲ!)

ವಿಪರ್ಯಾಸ ಏನೆಂದರೆ, ಜಗತ್ತಿನ ಅರ್ಧಕ್ಕರ್ಧ ಜನರು ಭಗಾಂಕುರವನ್ನು ಹೊತ್ತಿದ್ದರೂ ಅದನ್ನು ಯಾರೂ ಗುರುತಿಸುವವರಿಲ್ಲ. ಅದೇ ಶಿಶ್ನದ ಅಹಮಿಕೆ ನೋಡಿ. ಮಾನವರ ಸಂಸ್ಕೃತಿಗಳಲ್ಲಿ ಶಿಶ್ನದ ಸಂಕೇತಗಳು (ಉದಾ. ಭೂತಾನಿನಲ್ಲಿ ಶಿಶ್ನದ ಪ್ರತಿಕೃತಿಗಳು) ಎಲ್ಲೆಡೆ ರಾರಾಜಿಸುತ್ತಿವೆ. ನಮ್ಮ ಶಿವಲಿಂಗದ ಕೆಳಗೆ ಯೋನಿಯಿದೆಯೇ ಹೊರತು ಭಗಾಂಕುರವಿಲ್ಲ. ಹೀಗೆ ರಚನೆ ಹಾಗೂ ಕಾರ್ಯರೀತಿಯಲ್ಲಿ ಶಿಶ್ನಕ್ಕೆ ಸಮಾನವಾದರೂ ಭಗಾಂಕುರವು ದುರ್ಲಕ್ಷ್ಯಕ್ಕೆ ಈಡಾಗಿದೆ.

ಕಲಾಕಾರ್ತಿ ಸೋಫಿಯಾ ವ್ಯಾಲೇಸ್ ನ್ಯೂಯಾರ್ಕ್‌ನಲ್ಲಿ ಒಂದು ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಗೋಡೆಯ ತುಂಬ ಹರಡಿಕೊಂಡು ಬರಹದ ರೂಪದಲ್ಲಿ ಇರುವ ಇದರ ಹೆಸರು ಕ್ಲಿಟರಸಿ (Cliteracy, 100 Natural Laws). ಕ್ಲಿಟರಸಿ ಎಂದರೆ ಭಗಾಂಕುರದ ಬಗೆಗಿನ ಸಾಕ್ಷರತೆ. ಇದರಲ್ಲಿರುವ ನೂರು ಹೇಳಿಕೆಗಳಲ್ಲಿ ಕೆಲವನ್ನು ನನಗೆ ತಿಳಿದಂತೆ ಗುಂಪಾಗಿ ಮಾಡಿ ನಿಮ್ಮೆದುರು ಇಟ್ಟಿದ್ದೇನೆ:

  • ಯೋನಿ-ಶಿಶ್ನದ ಸಂಭೋಗದಲ್ಲಿ (ಭಗಾಂಕುರದ ಪಾತ್ರ ಇಲ್ಲದಿದ್ದರೂ) ಹೆಣ್ಣಿಗೆ ತೃಪ್ತಿಯಾಗುತ್ತದೆ ಎಂಬ ತಪ್ಪುನಂಬಿಕೆ ಸಾರ್ವತ್ರಿಕವಾಗಿದೆ. ಭಗಾಂಕುರವು ಸಕ್ರಿಯವಾಗಿ ಪಾಲುಗೊಂಡರೆ ಮಾತ್ರ ಭಾವಪ್ರಾಪ್ತಿ ಆಗುತ್ತದೆ – ಶಿಶ್ನ ಇಲ್ಲದಿದ್ದರೂ ಸರಿ.
  • ನಿನ್ನ ಜನನಾಂಗವು ಅಸಹ್ಯವೆಂದು ಹೇಳಿಕೊಟ್ಟು, ನಂತರ ಅದನ್ನೇ ನಿನ್ನನ್ನು ಪ್ರೀತಿಸುವ ಗಂಡಿನೊಡನೆ ಹಂಚಿಕೊಳ್ಳಬೇಕೆಂಬ ದ್ವಂದ್ವವನ್ನು ಹೆಣ್ಣಿನ ಮೇಲೆ ಹೇರಲಾಗಿದೆ.
  • ನೀಲಿಚಿತ್ರಗಳಲ್ಲಿ ಹೆಣ್ಣಿಗೆ ನೋವು, ಉದ್ದೇಶಪೂರ್ವಕ ಅವಹೇಳನ ಮಾತ್ರ ಆಗುತ್ತದೆ. ಗಂಡಿನ ತೃಪ್ತಿಯನ್ನು ತೋರಿಸಿ ಹೆಣ್ಣಿನ ತೃಪ್ತಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ.
  • ವೈದ್ಯ ವಿಜ್ಞಾನದಲ್ಲಿ ಭಗಾಂಕುರಕ್ಕೆ ಪ್ರಾಶಸ್ತ್ಯ ಕೊಡದಿರುವುದು ಹೆಣ್ಣನ್ನು ತಿರಸ್ಕರಿಸುವುದರ ಸಂಕೇತ. ಯೋನಿಯ ಮೂಲಕ ಹೆಣ್ಣಿನ ಕಾಮತೃಪ್ತಿ ಎಂದು ಸಿಗ್ಮಂಡ್ ಫ್ರಾಯ್ಡ್ ದೊಡ್ಡ ಸುಳ್ಳು ಸೃಷ್ಟಿಸಿದ್ದಾನೆ. ಉಬ್ಬುಗಳಿರುವ ಕಾಂಡೋಮ್‌ಗಳು ಹೆಣ್ಣಿಗಾಗಿ ಅಲ್ಲ, ಹೆಣ್ಣಿಗೆ ಸುಖಕೊಡುವ ನೆಪದಲ್ಲಿ ಗಂಡು ಯೋನಿಯನ್ನು ಉಪಯಗಿಸಲಿಕ್ಕಾಗಿ. ಹೆಂಗಸರಿಗೂ ವಯಾಗ್ರಾ ಕಂಡುಹಿಡಿಯುವ ನೆಪದಲ್ಲಿ ಔಷಧಿ ಸಂಸ್ಥೆಗಳು “ಹೆಣ್ಣಿನ ಲೈಂಗಿಕ ಅಸಾಮರ್ಥ್ಯ” ಎನ್ನುವ ಕಾಯಿಲೆಯನ್ನು ಸೃಷ್ಟಿಸಿವೆ.
  • ಕಾನೂನಿನಲ್ಲಿ ಹೆಣ್ಣನ್ನು ಲಿಂಗದಿಂದ ಗುರುತಿಸಲಾಗುತ್ತದೆ, ಲೈಂಗಿಕತೆಯಿಂದಲ್ಲ. ಕಾಮಕೂಟ ಬೇಡವೆನ್ನುವ ಹೆಣ್ಣಿನ ಮೇಲೆ ದಾಂಪತ್ಯದ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತದೆ. ನ್ಯಾಯಾಧೀಶೆಯರೆ, ಕಾಮತೃಪ್ತಿ ಆಗದಿದ್ದರೆ ದಾಂಪತ್ಯದ ಕಾಮಕೂಟಕ್ಕೆ ಅರ್ಥವೇನಿದೆ? ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕದಂತೆ ಕಳೆದ ಹತ್ತು ವರ್ಷಗಳಲ್ಲಿ 3-4 ಕೋಟಿ ಹೆಂಗಸರ ಭಗಾಂಕುರವನ್ನು ಕಿತ್ತುಹಾಕಿ ಗಂಡಸರ ಸುಖದ ಗುಲಾಮರನ್ನಾಗಿ ಮಾಡಲಾಗಿದೆ.
  • ಒಂದುವೇಳೆ ಹುಡುಗರಿಗೆ ವೃಷಣ ಬೀಜಗಳ ಬಗೆಗೆ ಹೇಳಿಕೊಟ್ಟು ಶಿಶ್ನವನ್ನು ಬಿಟ್ಟುಬಿಟ್ಟರೆ ಹೇಗಿರುತ್ತದೆ? ಯೋನಿ, ಗರ್ಭಕೋಶದ ಬಗೆಗೆ ಹೇಳಿಕೊಟ್ಟು ಭಗಾಂಕುರವನ್ನು ನಿರ್ಲಕ್ಷ್ಯ ಮಾಡಲಾಗಿದೆ.
  • ಹುಡುಗಿಯರು ಲೈಂಗಿಕ ಶಿಕ್ಷಣಕ್ಕೆ ಕಾಲಿಡುವ ಮುಂಚೆಯೇ ಲೈಂಗಿಕತೆಯ ಅರಿವನ್ನು ಮೂಡಿಸಿಕೊಂಡಿರುತ್ತಾರೆ. ನಿಮ್ಮ ಹೆಣ್ಣುಮಕ್ಕಳಿಗೆ ಭಗಾಂಕುರವನ್ನು ಸ್ಪರ್ಶಿಸಿ ಸುಖಪಡುವುದನ್ನು ಹೇಳಿಕೊಟ್ಟರೆ ಮುಂದೆ ತಮ್ಮ ದಾಂಪತ್ಯದಲ್ಲಿ ತಪ್ಪಿತಸ್ಥ ಭಾವ ಇಲ್ಲದೆ ಏನು ಅಪೇಕ್ಷಿಸಬೇಕೆಂದು ಗೊತ್ತಾಗುತ್ತದೆ.
  • ಶಿಶ್ನದ ಪ್ರವೇಶಕ್ಕೆ ಮಹತ್ವಕೊಟ್ಟು ಭಗಾಂಕುರವನ್ನು ಮರೆಯುವುದು ಎಂದರೆ ಕಾಮಕೂಟವಲ್ಲ, ಶರಣಾಗತಿ. ನಿಮ್ಮ ಒಪ್ಪಿಗೆಯಿಲ್ಲದೆ ನೋವಾಗುತ್ತಿದ್ದರೆ ಸಹಿಸುವುದು ಬೇಕಿಲ್ಲ. ಕಾಮತೃಪ್ತಿ ಪಡೆಯದೆ ಮಕ್ಕಳನ್ನು ಹೆರುವುದು ಎಂದರೆ ನಿಮ್ಮ ಶರೀರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದರ್ಥ. ಹೆಚ್ಚುಹೆಚ್ಚಾಗಿ ಕಾಮತೃಪ್ತಿ ಪಡೆಯಬೇಕೆಂದರೆ ಸಂತಾನಕ್ಕಾಗಿ ಎನ್ನದೆ ಸುಖಕ್ಕಾಗಿ ಕೂಟ ಬಯಸಿರಿ. ಹೆಂಗಸರು ತಮ್ಮ ಕಾಮತೃಪ್ತಿಯ ಬಗೆಗೆ ಮುಕ್ತವಾಗಿ ಹಂಚಿಕೊಳ್ಳುವುದು ಸ್ವಸ್ಥಸ್ವತಂತ್ರ ಸಮಾಜದ ಲಕ್ಷಣ.
  • ನಿಮ್ಮ ಸಂಗಾತಿಯು ಕಾಮತೃಪ್ತಿ ಕೊಡದೆ ಸತಾಯಿಸಿದ್ದಾರೆಯೆ? ಗಂಡು ತೃಪ್ತಿಯಾಗದೆ ಹೆಣ್ಣಿನ ಮೇಲಿನಿಂದ ಏಳುವುದಿಲ್ಲವಾದರೆ ಅತೃಪ್ತ ಹೆಣ್ಣೇಕೆ ಸುಮ್ಮನಿರಬೇಕು? ಕಾಮತೃಪ್ತಿ ಆಗದ ಕಾಮಕೂಟಕ್ಕೆ ಅರ್ಥವೇನಿದೆ?
  • ನಮಗೆ ನೋವಿಲ್ಲದೆ ಬಹುಕಾಮತೃಪ್ತಿ (multiple orgasms) ಆಗಬೇಕು ಎನ್ನುವುದೇ ನಮ್ಮ ಸರಳ ಬೇಡಿಕೆ. ಹೆಣ್ಣಿಗೆ ಹಸ್ತಮೈಥುನದಿಂದ ತೃಪ್ತಿಯಾಗಲು ನಾಲ್ಕು ನಿಮಿಷಗಳು ಸಾಕು. ತೃಪ್ತಿಪಡಿಸಲು ಉಗುರು ಕತ್ತರಿಸಿದ ಬೆರಳು, ಸ್ವಚ್ಛವಾದ ಕೈಗಳು, ಒದ್ದೆಯಾದ ನಾಲಿಗೆ-ತುಟಿಗಳು ಇದ್ದರೆ ಸಾಕೇಸಾಕು, ಶಿಶ್ನ ಬೇಕಾಗಿಲ್ಲ. ಹೊಸ ಪ್ರಿಯಕರ ಸಿಕ್ಕರೆ ಅವನು ಬಾಯಿಯಿಂದ ಹಾಗೂ ಬೆರಳಿನಿಂದ ಸುಖ ಕೊಡುತ್ತಾನೋ (ಶಿಶ್ನದಿಂದಲ್ಲ) ಎಂದು ಮೊದಲು ಪರೀಕ್ಷಿಸಿ,
  • ಬಹುವಿಧಗಳ ಸಂಭೋಗಗಳಲ್ಲಿ ಶಿಶ್ನಯೋನಿಯ ವಿಧವೂ ಒಂದಷ್ಟೆ. ಯೋನಿ ಒದ್ದೆಯಾಗುವುದು ಹೆಣ್ಣು ಸಂಭೋಗಕ್ಕೆ ತಯಾರಾದ ಲಕ್ಷಣ ಎಂದೇನಲ್ಲ. ಒದ್ದೆಯಾಗಲಿ ಆಗದಿರಲಿ, ಹೆಣ್ಣಿಗೆ ಸಂಭೋಗದಲ್ಲಿ ಆಸಕ್ತಿ ಇರಲಿಕ್ಕಿಲ್ಲ.
  • ಭಗಾಂಕುರವು ಅಷ್ಟೊಂದು ಜನಪರಿಚಿತ ಆಗಿದ್ದರೆ ಅದರ ಪ್ರತಿಕೃತಿಗಳೇಕೆ ಎಲ್ಲಿಯೂ ಕಾಣುತ್ತಿಲ್ಲ?

ಕ್ಲಿಟರಸಿಯಲ್ಲಿ ಉಪಯೋಗಿಸುವ ಭಾಷೆಯೇ ಹೊಸದು. ಹೆಣ್ಣಿನ ಕಾಮದ ಅಭಿವ್ಯಕ್ತಿಯನ್ನು ಅಸಹ್ಯ, ರೋಗಿಷ್ಟ, ನಾಚಿಕೆಗೇಡು ಎನ್ನುವವರನ್ನು ಇದು ಪ್ರಶ್ನಿಸುತ್ತದೆ. ಲಿಂಗ ತಾರತಮ್ಯವಿಲ್ಲದೆ, ಹೆಣ್ಣುಗಂಡೆಂಬ ವಿಭಜನೆಯಿಲ್ಲದೆ ಪ್ರತಿಯೊಬ್ಬರ ಶರೀರವೂ ಲೈಂಗಿಕ ಸುಖಕ್ಕೆ ಅರ್ಹತೆಯಿದೆ ಎಂದು ಪ್ರತಿಪಾದಿಸುತ್ತದೆ.

ನಮಗೆಲ್ಲ ಕ್ಲಿಟರಸಿ ಬೇಕು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣು ಪ್ರೀತಿಯಿಲ್ಲದೆ ಕೇವಲ ಕಾಮಕ್ಕಾಗಿ ಗಂಡನ್ನು ಕೂಡಬಲ್ಲಳೆ?

207: ಹೆಣ್ಣಿನ ಕಾಮಪ್ರಜ್ಞೆ-3

ಗಂಡಿಗಿರುವಂತೆ ಹೆಣ್ಣಿನ ಕಾಮುಕತೆಯೂ ಗಂಡಿನಿಂದ ಪ್ರತ್ಯೇಕವಾಗಿದ್ದು ವೈಯಕ್ತಿಕವಾಗಿದೆ, ಹಾಗೂ ಇದು ಸಂಗಾತಿಯನ್ನು ಬಿಟ್ಟು ಬೇರೆಡೆಗೆ ಹರಿಯದಂತೆ ಸಮಾಜದ ನೀತಿನಿಯಮಗಳು ಕಡಿವಾಣ ಹಾಕುತ್ತವೆ ಎಂದು ಹೇಳುತ್ತಿದ್ದೆ.

ಹೋದಸಲದ ದೃಷ್ಟಾಂತದಲ್ಲಿ ಗಂಡನು ಹೆಂಡತಿಗೆ ಬದ್ಧನಾಗಿದ್ದೂ ತನ್ನ ಕಾಮುಕತೆಯ ಬಗೆಗೆ ನಾನಾ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದು ಹೇಳಿದ್ದೆ. ಅವನದು ದಾಂಪತ್ಯಕ್ಕೆ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದುವೇಳೆ ಅವನು ಅವಿವಾಹಿತನಾಗಿದ್ದರೆ? ಆಗ ಅವನ ವರ್ತನೆಗೆ ಸರಿ-ತಪ್ಪುಗಳ ಅಳತೆಗೋಲು ಅನ್ವಯವಾಗುವುದಿಲ್ಲ – ಯಾಕೆಂದರೆ ಈ ಅಳತೆಗೋಲು ಹುಟ್ಟಿಕೊಂಡಿದ್ದೇ ವಿವಾಹದ ಜೊತೆಗಿನ ಬದ್ಧತೆಯಿಂದ! ಇದನ್ನೇ ಹೆಣ್ಣಿಗೆ ಅನ್ವಯಿಸೋಣ. ಸ್ವಲ್ಪಹೊತ್ತು ಹೆಣ್ಣನ್ನು ಆಕೆಯ ಬದ್ಧತೆಯ, ಹಾಗೂ ಅದಕ್ಕಂಟಿರುವ ನೀತಿನಿಯಮಗಳ ಚೌಕಟ್ಟಿನ ಹೊರತಾಗಿ ಯೋಚಿಸೋಣ: ಒಂದು ಹೆಣ್ಣು – ಮದುವೆಯಾಗಲಿ ಆಗದಿರಲಿ – ತನ್ನ ಕಾಮುಕತೆಯನ್ನು ಸ್ವಚ್ಛಂದತೆಯಿಂದ ಪ್ರಕಟಪಡಿಸುತ್ತಿದ್ದರೆ ಹೇಗಿರುತ್ತದೆ?

ಮೂರು ದಶಕಗಳ ಹಿಂದಿನ ಮಾತು. ಹಾಸ್ಟೆಲ್‌ನಲ್ಲಿರುವ ಹುಡುಗ-ಹುಡುಗಿಯರ ಲೈಂಗಿಕ ಅಭಿವ್ಯಕ್ತಿಯ ಕುರಿತು ನಡೆಸಿದ ಸರ್ವೇಕ್ಷಣೆಯ ವರದಿ ನೋಡಿದ್ದೆ: ಹಾಸ್ಟೆಲ್‌ನ ಹುಡುಗರು ಕಾಮುಕತೆಯನ್ನು ಎಗ್ಗಿಲ್ಲದೆ ಬಹಿರಂಗವಾಗಿ ಪ್ರಕಟಪಡಿಸುತ್ತಾರೆ. ಆದರೆ ಹುಡುಗಿಯರು ಪ್ರೀತಿ-ಪ್ರೇಮಗಳ ಬಗೆಗೆ ಬಹಿರಂಗವಾಗಿ ಮಾತಾಡುತ್ತಾರೆ; ಕಾಮುಕತೆಯನ್ನು ಅಂತರಂಗದ ಗೆಳತಿಯೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ. ಈ ಸರ್ವೇಕ್ಷಣೆಯನ್ನು ಬುಡಮೇಲು ಮಾಡುವಂಥ ಸಂಗತಿಗಳು ಒಂದೊಂದಾಗಿ ಕಂಡುವು.

ಇವಳು ಹದಿನೆಂಟು ವರ್ಷದವಳು. ಹುಡುಗರನ್ನು ಕಾಮಿಸುವ ಆಕೆಗೆ ಸಲಿಂಗಕಾಮದ ವಿಚಾರ ಕಾಡುತ್ತ ಅಸಹನೀಯ ಆಗಿ ನನ್ನಲ್ಲಿ  ಬಂದಿದ್ದಾಳೆ. ಅವಳು ಹೇಳಿಕೊಂಡಿದ್ದು ಹೀಗೆ: ಇತ್ತೀಚೆಗೆ ಯಾವುದೇ ಹೆಣ್ಣನ್ನು ನೋಡಲಿ, ಆಕೆಯ ದೃಷ್ಟಿಯು ಅವಳ ಖಾಸಗಿ ಭಾಗಗಳ ಕಡೆಗೆ ಹೋಗುತ್ತದೆ. ಅದರೊಡನೆ ತನ್ನ ಬಗೆಗೆ ಹೀನಭಾವ ಉಂಟಾಗುತ್ತದೆ. ಸಲಿಂಗಕಾಮ ಸಹಜವೆಂದು ಒತ್ತಿಹೇಳಿದಾಗ ಸ್ಪಷ್ಟೀಕರಿಸಿದಳು: ಆಕೆಗೆ ಸಲಿಂಗಕಾಮ ಸಂಪೂರ್ಣ ಸ್ವೀಕೃತ. ಅದರ ಬಗೆಗೆ ಜಿಗುಪ್ಸೆಯಾಗಲೀ ಒಲ್ಲದ ಅನಿಸಿಕೆಯಾಗಲೀ ಇಲ್ಲ. (ಹಾಗೆ ಹೇಳಬೇಕೆಂದರೆ ಆಕೆಗೆ ಹಲವರು ಕಟ್ಟಾ ಸಲಿಂಗಕಾಮಿ ಗೆಳತಿಯರಿದ್ದು, ಅವರೊಂದಿಗೆ ಆರಾಮವಾಗಿದ್ದಾಳೆ.) ಸಮಸ್ಯೆ ಅದಲ್ಲ. ಆಕೆಗೆ ಐದಾರು (ಸಲಿಂಗಿ ಅಲ್ಲದ) ಗೆಳತಿಯರಿದ್ದಾರೆ. ಇವರು ಆಗಾಗ ಕಲೆತು ಆಟ ಆಡುತ್ತಾರೆ – ಇಬ್ಬರು ಪರಸ್ಪರ ತುಟಿಗೆ ತುಟಿಹಚ್ಚಿ ಮುತ್ತಿಡುವುದು. ಹೆಚ್ಚು ಹೊತ್ತು ಮುತ್ತಿನಲ್ಲಿ ಇದ್ದವರು ಗೆದ್ದಂತೆ. ಇನ್ನು, ಕೆಲವೊಮ್ಮೆ ಅರೆಬೆತ್ತಲೆಯಾಗಿ ಒಟ್ಟಿಗೆ ಮಲಗುತ್ತಾರೆ. ಆಗ ಒಬ್ಬರು ಇನ್ನೊಬ್ಬರ ಮೈಯನ್ನು ತಬ್ಬಿರುತ್ತಾರೆ. ಹಗುರವಾಗಿ ಮುತ್ತಿಡುವುದೂ ಉಂಟು. ಈ ಹುಡುಗಿ ಒಂದುರಾತ್ರಿ ಅವರೊಡನೆ ಉಳಿದುಕೊಂಡಾಗ, ಅವರು ಹೀಗೆ ವರ್ತಿಸುವುದನ್ನು ನೋಡಿ, ಅವರೊಡನೆ ಗುರುತಿಸಿಕೊಂಡು, ತಾನೂ ಅವರಂತೆ ಸಲಿಂಗಕಾಮಿ ಆಗಿಬಿಡುತ್ತೇನೋ ಎಂದು ಹೆದರಿಕೊಂಡಿದ್ದಾಳೆ. ಅದನ್ನು ಗಮನಿಸಿದರು ಭರವಸೆ ಕೊಟ್ಟಿದ್ದಾರೆ. “ಕಮಾನ್, ರಿಲ್ಯಾಕ್ಸ್. ನಾವು ಯಾರೂ ಲೆಸ್ಬಿಯನ್ ಅಲ್ಲ. ನಮಗೆಲ್ಲರಿಗೂ ಬಾಯ್‌ಫ್ರೆಂಡ್ಸ್ ಇದ್ದಾರೆ. ಅವರೊಂದಿಗೆ ಸೆಕ್ಸ್‌ನಲ್ಲಿ ಸುಖವಾಗಿದ್ದೇವೆ. ಆದರೆ ನಮ್ಮನಮ್ಮಲ್ಲಿ ಕಾಮೋದ್ರೇಕ ಆಗುವುದಿಲ್ಲ.” ಅವರಲ್ಲೊಬ್ಬಳು ಮಾತಿನ ಭರದಲ್ಲಿ ಮುಖವನ್ನು ಈಕೆಯ ಮುಖದ ತೀರ ಹತ್ತಿರ ತಂದಾಗ ಈಕೆ ದೂರ ಸರಿದಳಂತೆ. ಆಗಾಕೆ ಹೇಳಿದ್ದು: “ಭಯಪಡಬೇಡ, ನಾವಿಬ್ಬರೂ ಲೆಸ್ಬಿಯನ್ ಅಲ್ಲ ಎಂದು ನನಗೆ ಗೊತ್ತು!”

ಈ ಹುಡುಗಿಯರು ಗಂಡಿನೊಂದಿಗೆ ಬೆರೆಯುತ್ತಿದ್ದರೂ ಹೆಣ್ಣಿನೊಂದಿಗೆ ಮುತ್ತಿಡುವ, ತಬ್ಬಿ ಮಲಗುವುದರ ಹಿನ್ನೆಲೆ ಏನು? ಅವರ ಅನುಭವದ ಪ್ರಕಾರ ಗಂಡಿನ ಶರೀರದಿಂದ ಸಿಗುವ ಸುಖವೇ ಬೇರೆ, ಹೆಣ್ಣಿನ ಶರೀರದಿಂದ ಸಿಗುವ ಸುಖವೇ ಬೇರೆ. ಗಂಡಿನೊಡನೆ ಕಾಮಕೂಟ ನಡೆಸುವಾಗ ಭೋರ್ಗರೆಯುವ ಹಸಿಕಾಮಕ್ಕೆ ಸಿಗುವ ಭಾವಪ್ರಾಪ್ತಿಯು ಒಂದು ಬಗೆಯಾದರೆ, ಹೆಣ್ಣಿನ ಮೃದು ಶರೀರದಿಂದ ಸಿಗುವ ಸಂತತವಾದ ಬೆಚ್ಚಗಿನ ನಂಟು-ಪ್ರೀತಿ ಇನ್ನೊಂದು ಬಗೆ. ಇದಕ್ಕೆ ವಿಶೇಷ ಮಹತ್ವ ಹಾಗೂ ಇತಿಹಾಸವಿದೆ. ಮಾನವರಲ್ಲಿ ಒಂದು ಭಾಷೆಯು ದೇಶಕಾಲಗಳನ್ನು ಮೀರಿ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿದೆ. ಅದುವೆ ದೇಹಭಾಷೆ. ಮೃದುವಾದ ಬೆಚ್ಚಗಿನ ಸ್ಪರ್ಶದಲ್ಲಿ ನಿರಂತರ ಪ್ರೀತಿಯಿದೆ. ಅಳುತ್ತಿರುವ ಅಮೆರಿಕನ್ ಬಿಳಿಯ ಶಿಶುವನ್ನು ಆಫ್ರಿಕನ್ ಹೆಂಗಸು ತಬ್ಬಿಕೊಂಡಾಗ ಸುಮ್ಮನಾಗುವುದು ಇದೇ ಕಾರಣಕ್ಕೆ. ಈ ದೇಹಭಾಷೆಯನ್ನು ನಾವೆಲ್ಲರೂ ಹುಟ್ಟಾ ಕಲಿತಿರುತ್ತೇವೆ. ನೂರು ಪ್ರೀತಿಯ ಮಾತುಗಳಿಗಿಂದ ಒಂದು ಅಪ್ಪುಗೆಯು ಹೆಚ್ಚು ಭದ್ರಬಾಂಧವ್ಯದ ಅನುಭವ ಕೊಡುತ್ತದೆ. ಗಂಡಿನ ಸ್ಪರ್ಶ-ಕೂಟಗಳು ಈ ಹುಡುಗಿಯರಿಗೆ ಇಂಥ ಪ್ರೀತಿಯನ್ನು ಕೊಡಲಾರವು. ಅದಕ್ಕೆಂದೇ ಒಂದು ಹೆಣ್ಣು ಇನ್ನೊಂದು ಹೆಣ್ಣಿನಿಂದ ಬಯಸುತ್ತಾಳೆ.

ಮೃದುಸ್ಪರ್ಶದ ಹಿತ ಬಯಸುವುದಕ್ಕೆ ಆಧಾರಗಳು ಎಲ್ಲೆಲ್ಲೂ ಕಂಡುಬರುತ್ತವೆ. ಯಾವುದೇ ಮದುವೆ ಅಥವಾ ಪಾರ್ಟಿಯಲ್ಲಿ ನೋಡಿ. ಅಲ್ಲಿ ಆತ್ಮೀಯ ಗಂಡಸರು ಹೆಚ್ಚಿನಂಶ ಪರಸ್ಪರ ಕೈ ಕುಲುಕುತ್ತಾರೆ, ಹಾಗೂ ಎದುರೆದುರು ಕುಳಿತು ಮಾತಾಡುತ್ತಾರೆ. ಆದರೆ ಆತ್ಮೀಯ ಹೆಂಗಸರು ಹೆಚ್ಚಿನಂಶ ತಬ್ಬಿಕೊಳ್ಳುತ್ತಾರೆ, ಹಾಗೂ ಅಕ್ಕಪಕ್ಕದಲ್ಲಿ ಕುಳಿತು ಮಾತಾಡುತ್ತ, ಆಗಾಗ ಪರಸ್ಪರ ಹಿತವಾಗಿ ಸ್ಪರ್ಶಿಸುತ್ತ ಇರುತ್ತಾರೆ – ವ್ಯತಿರಿಕ್ತ ಸಾಂದರ್ಭಿಕ ಕಾರಣಗಳು ಇಲ್ಲದಿದ್ದರೆ.

ಇಲ್ಲೊಂದು ಪ್ರಶ್ನೆ: ಗಂಡು ಹೆಣ್ಣನ್ನು ಪ್ರೀತಿಯ ಭಾವನೆ ಇಲ್ಲದೆ ಭೋಗಿಸಬಲ್ಲ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಹೆಣ್ಣು ಒಂದು ಗಂಡನ್ನು ಭಾವನೆಗಳಿಲ್ಲದೆ ಕೇವಲ ಕಾಮಕ್ಕಾಗಿ ಬಯಸಬಲ್ಲಳೆ? ಸಾಧ್ಯವಿಲ್ಲವೆಂದು ಮೊದಲಿನಿಂದಲೂ ಅಂದುಕೊಂಡಿದ್ದೆ. ಇದನ್ನು ಸುಳ್ಳುಮಾಡುವ ಸಂಗತಿ ಹದಿನೈದು ವರ್ಷಗಳ ಹಿಂದೆ ನಡೆಯಿತು. ಮಹಿಳಾ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿಯಿಂದ ಈಮೈಲ್ ಬಂತು. ಆಕೆಯ ಪ್ರಶ್ನೆ: ಗುದಸಂಭೋಗ ನಡೆಸುವುದು ಹೇಗೆ? ವಿವರ ಕೇಳಲಾಗಿ ತಿಳಿದಿದ್ದು ಇದು: ಆಕೆಯ ಗೆಳತಿಯರದು ಗುಂಪಿದೆ. ಅವರೆಲ್ಲರಿಗೂ ಸಮಯಕ್ಕೆ ತಕ್ಕಂತೆ ಒದಗುವ ಗಂಡು ಸ್ನೇಹಿತರಿದ್ದಾರೆ. ಅವರೆಲ್ಲ ಆಗಾಗ ದೂರದ ರಿಸಾರ್ಟ್‌ಗೆ ಹೋಗುತ್ತಾರೆ. ಅಲ್ಲಿ ತಮ್ಮಿಷ್ಟವಾದ ಸಂಗಾತಿಯನ್ನು ಆರಿಸಿಕೊಂಡು ಅವನೊಂದಿಗೆ ಯಥೇಷ್ಟ ಕಾಮಕೇಳಿ ನಡೆಸುತ್ತಾರೆ. ಅಂಥ ಒಂದು ಸಂದರ್ಭದಲ್ಲಿ ಒಬ್ಬನು ಇವಳೊಡನೆ ಕೂಡುವಾಗ ಈಕೆಯ ಯೋನಿ ಸಡಿಲವಾಗಿದೆ ಎಂದೆನ್ನಿಸಿ ಗುದಸಂಭೋಗಕ್ಕೆ ಇಷ್ಟಪಟ್ಟನಂತೆ. ಅದೇನೆಂದು ಈಕೆಗೆ ಗೊತ್ತಿಲ್ಲ. ಅದಕ್ಕೆಂದೇ ನನ್ನನ್ನು ಸಂಪರ್ಕಿಸಿದ್ದು. ಗುದಸಂಭೋಗದ ಕೌಶಲ್ಯವನ್ನು ಕಲಿಯಲು ಸಂಗಾತಿಗಳಿಬ್ಬರೂ ಬೇಕು, ಹಾಗಾಗಿ ಇಬ್ಬರನ್ನೂ ಭೇಟಿಮಾಡಲು ಕರೆದಾಗ ಆಕೆ ಹೇಳಿದ್ದೇನು? “ಓಹ್, ಅವನೊಬ್ಬ ಅದ್ಭುತವಾಗಿ ಕಾಮಕೇಳಿ ನಡೆಸುತ್ತಾನೆ. ಆದರೆ ಅವನ ಹೆಸರು ನೆನಪಿಲ್ಲ. ಅವನು ಇನ್ನೊಂದು ಸಲ ಸಿಗುತ್ತಾನೆ ಎಂಬ ಭರವಸೆ ಇಲ್ಲ. ಆದರೂ ಮುಂದೆ ಯಾರಾದರೂ ಬಯಸಿದರೆ ನಾನು ತಯಾರಿರಬೇಕಲ್ಲವೆ? ಅದಕ್ಕಾಗಿ ಕೇಳುತ್ತಿದ್ದೇನೆ, ಅಷ್ಟೆ.”

ಇಲ್ಲೇನು ಅರ್ಥವಾಗುತ್ತಿದೆ? ಸ್ವಚ್ಛಂದ ಹೆಣ್ಣು ಪ್ರೇಮವಿಲ್ಲದೆ ಕೇವಲ ಕಾಮಕ್ಕಾಗಿ ಗಂಡನ್ನು ಕೂಡಬಲ್ಲಳು. ಹಾಗೂ ಪ್ರೇಮದಿಂದ ಕಾಮವನ್ನು ಪ್ರತ್ಯೇಕಿಸಿ ಕೇವಲ ಪ್ರೇಮ ಸಂಬಂಧವನ್ನೂ ಹೊಂದಬಲ್ಲಳು. ನಿಷ್ಕಾಮ ಪ್ರೀತಿಯನ್ನು ಬದ್ಧ ಗಂಡಿನಿಂದ ಸಿಗದಿದ್ದರೆ ಇತರ ಗಂಡು/ಹೆಣ್ಣು ಸ್ನೇಹಿತರಿಂದ ಪಡೆಯುವ ಯತ್ನವನ್ನೂ ಮಾಡಬಲ್ಲಳು. ಹಾಗೆಯೇ, ಬಾಂಧವ್ಯ ಇಲ್ಲದ ಕಾಮಕೂಟ ಮಾತ್ರ ಬೇಕೆಂದರೆ ಅದಕ್ಕೂ ಸೈ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ತನಗೂ ಕಾಮುಕತೆ ಇದೆಯೆಂದು ಎಷ್ಟು ಜನ ಹೆಂಗಸರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ?

206: ಹೆಣ್ಣಿನ ಕಾಮಪ್ರಜ್ಞೆ-2

ಹೆಣ್ಣಿನ ಕಾಮಪ್ರಜ್ಞೆಯ ಬಗೆಗಿನ ನನ್ನ ಅಧ್ಯಯನದ ಬಗೆಗೆ ಹಂಚಿಕೊಳ್ಳುತ್ತಿದ್ದೆ. ಹೆಂಗಸರು ನನ್ನನ್ನು ನೇರವಾಗಿ ಸಂಪರ್ಕಿಸುವ ತನಕ ಎಲೆಮರೆಯ ಕಾಯಿಯಂತೆ ಇದ್ದರು ಎಂದು ಹೇಳುತ್ತಿದ್ದೆ. ಈ ಸಲ ಇವರ ವೈಯಕ್ತಿಕ ಕಾಮುಕತೆಯ (libido) ಬಗೆಗೆ ಸ್ವಲ್ಪ ತಿಳಿಯೋಣ. (ಇಲ್ಲಿ “ಕಾಮುಕತೆ” ಎಂಬ ಪದವನ್ನು ಪೂರ್ವಾಗ್ರಹ ಇಲ್ಲದೆ ಉತ್ಸುಕತೆ ಎಂಬ ಪದದಷ್ಟೇ ಆರೋಗ್ಯಕರ ಅರ್ಥದಲ್ಲಿ ಬಳಸಿದ್ದೇನೆ.) ಅದಕ್ಕಾಗಿ ಒಂದು ದೃಷ್ಟಾಂತ:

ಮಧ್ಯವಯಸ್ಸಿನ ಇವಳು ಗಂಡನೊಡನೆ ನನ್ನಲ್ಲಿ ಧಾವಿಸಿದ್ದಾಳೆ. ಅವನಿಲ್ಲದೆ ತನ್ನ ಪ್ರಪಂಚವಿಲ್ಲ ಎನ್ನುತ್ತಿದ್ದವಳಿಗೆ, ಅವನೊಡನೆ ಕಾಮಸುಖದಲ್ಲಿ ಸಂತೃಪ್ತಳಾಗಿ ಇದ್ದವಳಿಗೆ ಆಘಾತವಾಗಿದೆ. ಯಾಕೆ? ಚಿಕ್ಕ ದೇಶವೊಂದರ ದೊಡ್ಡ ಹುದ್ದೆಯಲ್ಲಿ ಇರುವವನು ಕಳೆದ ಮೂರು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚುಸಲ ಬಾಡಿಗೆ ಹೆಣ್ಣುಗಳನ್ನು ಭೋಗಿಸಿದ್ದಾನೆ ಎಂದು ತಿಳಿದುಬಂದಿದೆ – ಅಲ್ಲೆಲ್ಲ ಒಂದು ಹೊತ್ತಿನ ಊಟಕ್ಕೂ ಮಲಗಲು ಬರುತ್ತಾರಂತೆ. ಮೊದಮೊದಲು ಅಲ್ಲಗಳೆದವನು ಆಧಾರ ತೋರಿಸಿದಾಗ ಸಿಕ್ಕಿಹಾಕಿಕೊಂಡು ಒಪ್ಪಿಕೊಂಡಿದ್ದಾನೆ. ತಾನು ಪತಿವ್ರತೆಯೆಂದು ಅಭಿಮಾನದಿಂದ ಬೀಗುತ್ತಿರುವವಳು ಕಂಗಾಲಾಗಿದ್ದಾಳೆ. “ಪತಿವ್ರತೆ” ಎಂದು  ಆಕೆ ಎರಡನೆಯ ಸಲ ಅಂದಾಗ ಆ ಪದದ ಆರ್ಥವನ್ನು ವಿವರಿಸಲು ಕೇಳಿದೆ. ಆಗ ವಿಶೇಷವೊಂದು ಹೊರಕಂಡಿತು.

ಸುಂದರಿಯಾದ ಆಕೆಯನ್ನು ಮದುವೆಗಿಂತ ಮುಂಚೆ ಹಲವು ತರುಣರು ಇಷ್ಟಪಟ್ಟಿದ್ದರಂತೆ. ಅವರನ್ನು ತನ್ನ ಕಲ್ಪನೆಯಲ್ಲೂ ಬರಗೊಟ್ಟಿರಲಿಲ್ಲವಂತೆ, ಮದುವೆಯಾದ ದಿನದಿಂದ ಪತಿಗೆ ಕಾಯಾ ವಾಚಾ ಮನಸಾ ನಿಷ್ಠಳಾಗಿದ್ದು, ಅವನು ಕೇಳಿದಾಗಲೆಲ್ಲ  ತನ್ನನ್ನು ಸಮರ್ಪಿಸುತ್ತ, ಅವನು ಕೊಟ್ಟಾಗ ಕೊಟ್ಟಷ್ಟನ್ನು ಸ್ವೀಕರಿಸುತ್ತ  ತೃಪ್ತಿಯಿಂದ ಇರುವವಳೆಂದು ವಿವರಿಸಿದಳು. ನನಗೆ ಕುತೂಹಲವಾಯಿತು. ಕಾಮುಕ ಯೋಚನೆಗಳಿಂದ ದೂರವಿದ್ದವಳಿಗೆ ಕೊರಳಿಗೆ ಮಾಂಗಲ್ಯ ಬಿದ್ದ ಕೂಡಲೇ ಅದೇ ಕಾಮುಕತೆಯು – ಅದೂ ಪೂರ್ಣಪ್ರಮಾಣದಲ್ಲಿ – ಜಾಗೃತಗೊಳ್ಳಲು ಹೇಗೆ ಸಾಧ್ಯವಾಯಿತು? ಈ ರೂಪಾಂತರ ಅರ್ಥವಾಗದೆ ಗೊಂದಲವಾಗಿ ಕೇಳಿದೆ: ಮದುವೆಗೆ ಮುಂಚೆ ಆಕೆಗೆ ವೈಯಕ್ತಿಕ ಕಾಮಸುಖ ಎನ್ನುವುದರ ಕಲ್ಪನೆಯಿತ್ತೆ? ಆಕೆಗೆ ಗೊತ್ತಾಗಲಿಲ್ಲ. ಅದನ್ನು ಬಿಡಿಸಿ ಹೇಳುತ್ತ, ತನ್ನ ಜನನಾಂಗವನ್ನು ಸುಖದ ಅನ್ವೇಷಣೆಯ ಉದ್ದೇಶದಿಂದ ಸ್ಪರ್ಶಿಸಿಕೊಂಡಿದ್ದು ಇದೆಯೆ ಎಂದಾಗ ದೃಢವಾಗಿ ನಿರಾಕರಿಸಿದಳು. “ಹೋಗಲಿ, ಮದುವೆಗೆ ಮುಂಚೆ ಯಾವೊತ್ತಾದರೂ ಗಂಡಿನ ಕಲ್ಪನೆ ಅಕಸ್ಮಾತ್ತಾಗಿ ಬಂದಿತ್ತೆ? ಆ ಕಲ್ಪನೆಯು ಮೈಮನಗಳಿಗೆ ಹಿತವಾಗಿತ್ತೆ?” ಎಂದಾಗ, ನನ್ನ ಪ್ರಶ್ನೆಯನ್ನೇ ಪ್ರಶ್ನಿಸುತ್ತ ಸಿಡಿದೆದ್ದಳು. ಆಕೆಯ ಪ್ರತಿಕ್ರಿಯೆಯನ್ನು ಬದಿಗಿಟ್ಟು ಆಕೆಯ “ಮದುವೆಗೆ ಮುಂಚೆ ಎಲ್ಲ ಕಾಮವೂ ನಿಷೇಧ; ನಂತರ ಪ್ರತಿಯೊಂದೂ ಮುಕ್ತ” ಎನ್ನುವ ನೀತಿ-ನಿಲುವಿನ ಕುರಿತು ಯೋಚಿಸಿದರೆ ಇದು ಹಲವು ಸಂದೇಹಗಳಿಗೆ ಹುಟ್ಟುಹಾಕುತ್ತದೆ.

ಉದಾಹರಣೆಗೆ, ಮದುವೆಗೆ ಮುಂಚೆ ಕಾಮಸುಖ ಎಂದರೆ ಏನೆಂದು ಕಲ್ಪನೆಗೂ ಎಟುಕದೆ ಇರುವವಳಿಗೆ ಗಂಡ ಕೊಟ್ಟದ್ದೇ ಪ(ಚ)ರಮಸುಖ, ಅದರಾಚೆಗೆ ಏನೂ ಇಲ್ಲ ಎಂದು ಭಾವಿಸಿರಲಿಕ್ಕೆ ಸಾಧ್ಯವಿದೆ. ಗಂಡನೇನೋ ದಿನಾಲೂ ಇವಳೊಡನೆ ಒಂದು ಗಂಟೆ ಹೊತ್ತು ಸುಖಪಡುತ್ತಾನೆ; ಬದಲಾಗಿ ಎರಡು ತಿಂಗಳಿಗೊಮ್ಮೆ ಎರಡು ನಿಮಿಷಗಳ ಕಾಲ ಇವಳನ್ನು ಬಳಸಿಕೊಂಡಿದ್ದರೆ ಅದೇ ಸುಖ ಎಂದೇ ತೃಪ್ತಿ ಹೊಂದಿರುತ್ತಿದ್ದಳು – ಇಂಥದ್ದನ್ನೇ ಸರ್ವಸ್ವವೆಂದು ನಂಬಿ ಬದುಕುತ್ತಿರುವ ಹೆಂಗಸರು ನಮ್ಮಲ್ಲಿದ್ದಾರೆ. ಇವರಿಗೆ ಸಾಧ್ವಿಯ ಪಟ್ಟಗಟ್ಟಿ ಕಿರೀಟವಿಟ್ಟಿದ್ದೇವೆ ಕೂಡ. ಪ್ರಶ್ನೆ ಏನೆಂದರೆ, ಈ ಹೆಂಗಸರಿಗೆ ತಮ್ಮದೇ ಎನ್ನುವ, ಸ್ವಂತವಾದ, ಸಂಗಾತಿಗಿಂತ ಪ್ರತ್ಯೇಕವಾದ ಕಾಮುಕತೆ ಎನ್ನುವುದು ಇದೆಯೆ ಎಂದು ಯೋಚಿಸಿದ್ದಾರೆಯೆ? ಈ ಪ್ರಶ್ನೆ ಯಾಕೆಂದರೆ, ಹೆಂಡತಿಯು ಗಂಡನೊಂದಿಗೆ ಪಡುವ ಸುಖವು ಅವನ ಸುಖಕ್ಕೆ ಆಕೆ ಸಹಕರಿಸುವುದು, ಪ್ರತಿಕ್ರಿಯಿಸುವುದು – ಹೆಚ್ಚೆಂದರೆ ಸ್ಪಂದಿಸುವುದು – ಆಗುತ್ತದೆಯೇ ಹೊರತು ಆಕೆಯ ಸ್ವಂತ ಅಭಿವ್ಯಕ್ತಿ ಆಗಲಾರದು. ಸಹಕರಿಸುವುದರಲ್ಲಿ ಸುಖವಿದೆ; ಆದರೆ ಈ ಸುಖವು ತನಗೇ ಬೇಕೆಂದು ಮುಗಿಬಿದ್ದು ಪಡೆಯುವ ಸುಖಕ್ಕಿಂತ ಪೂರ್ತಿ ಭಿನ್ನವಾಗಿದೆ. ಒಪ್ಪಿಸಿಕೊಳ್ಳುವುದರಲ್ಲಿ ಕಾಮುಕತೆಯಿಲ್ಲ, ಬದ್ಧತೆಯಿದೆ ಅಷ್ಟೆ. ಬದ್ಧತೆಯಲ್ಲಿ ಆಸಕ್ತಿ, ಮನಸ್ಸು ಇಷ್ಟ, ಪ್ರೇರಣೆ, ಸ್ಫೂರ್ತಿ, ತವಕ, ತಯಾರಿ, ಕಾತುರತೆ, ಉದ್ವೇಗ ಇತ್ಯಾದಿ ಇರಬೇಕೆಂದಿಲ್ಲ!

ಹೆಣ್ಣಿಗೂ ಪ್ರತ್ಯೇಕವಾದ, ಖಾಸಗಿಯಾದ ಕಾಮದ ಬಯಕೆಗಳು ಇರುತ್ತವೆ, ಹಾಗೂ ಅವು ವಿವಾಹ, ಗಂಡ, ಬದ್ಧತೆ ಮುಂತಾದ ಪರಿಕಲ್ಪನೆಗಳನ್ನು ಮೀರಿ ಇರುತ್ತವೆ ಎಂದು ಈ ಹೆಂಗಸಿಗೆ ಹೇಗೆ ತಿಳಿಸಿಕೊಡುವುದು ಎಂದು ಯೋಚಿಸುತ್ತಿರುವಾಗಲೇ ಆಕೆ ಗಂಡನ ಸ್ವೈರ ವರ್ತನೆಯ ಬಗೆಗೆ ಇನ್ನೊಂದು ಘಟನೆಯನ್ನು ಸಂಕಟಪಡುತ್ತ ವಿವರಿಸಿದಳು: ನಿನ್ನೆಯಷ್ಟೇ ಅವನಿಗೆ ತನ್ನ ಗೆಳತಿಯ ಪರಿಚಯ ಮಾಡಿಕೊಟ್ಟಳಂತೆ. ಆಗವನು ಕುಲುಕಲು ಆಕೆಯ ಕೈ ಹಿಡಿದವನು ಸುಮಾರು ಹೊತ್ತು ಬಿಡಲಿಲ್ಲವಂತೆ. ನಡುನಡುವೆ ಆಕೆಯ ಎದೆಯ ಮೇಲೆ ಕಣ್ಣು ಹಾಯಿಸಿದ್ದನ್ನು ಇವಳು ಗಮನಿಸದೆ ಇರಲಿಲ್ಲ. ನಂತರ ಎದುರಿಸಿ ಪ್ರಶ್ನಿಸಿದಾಗ ಅವನು, “ಆಕೆಯ ಕೈಯನ್ನು ಮಾತ್ರ ಹಿಡಿದುಕೊಂಡಿದ್ದೆ. ’ಮತ್ತೇನನ್ನೂ’ ಹಿಡಿದಿರಲಿಲ್ಲವಲ್ಲ?” ಎಂದು ವ್ಯಂಗ್ಯದಿಂದ ಆಡಿದನಂತೆ ಎಂದು ಹೇಳಿಕೊಂಡು ಅತ್ತಳು. ಪರಸಂಬಂಧದಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಹೆಂಡತಿಯ ಸಮಕ್ಷಮದಲ್ಲಿ ಇನ್ನೊಂದು ಹೆಣ್ಣಿನ ಮೇಲೆ ಕಣ್ಣು ಹಾಯಿಸಿದ್ದಲ್ಲದೆ ಅದನ್ನು ಸಮರ್ಥಿಸಿಕೊಳ್ಳುವ ಗಂಡನ ನಡತೆಯು ಧಿಕ್ಕರಿಸಬೇಕಾದದ್ದೇ. ಆದರೆ ಅವನ ಈ ವರ್ತನೆಯು ಇನ್ನೊಂದು ವಿಷಯವನ್ನೂ ಹೊರಗೆಡುಹುತ್ತದೆ: ಅವನ ಕಾಮುಕತೆಯು ಹೆಂಡತಿಯ ಜೊತೆಗೂಡಿ ಅನುಭವಿಸುವ ಕಾಮಾಪೇಕ್ಷೆಗಿಂತ ಪ್ರತ್ಯೇಕವಾಗಿದೆ, ಹಾಗೂ ಅದಕ್ಕೂ ಹೆಂಡತಿಯೊಡನೆಯ ಬದ್ಧತೆಗೂ ಸಂಬಂಧವಿಲ್ಲ! ದಾಂಪತ್ಯದ ಬುಡವನ್ನೇ ಅಲ್ಲಾಡಿಸುವ ಈ ವಿಷಯವು ಆಘಾತಕರ ಎನ್ನಿಸಿದರೂ ಸತ್ಯವಾಗಿದೆ.

ಕಾಮುಕತೆ ಎನ್ನುವ ಭಾವವು ಆಂತರಂಗಿಕವಾಗಿದ್ದು ವೈಯಕ್ತಿಕವಾಗಿದೆ. ಇದು ಹುಟ್ಟು ಪ್ರವೃತ್ತಿಯಾಗಿದ್ದು ಲಿಂಗ ವಯಸ್ಸುಗಳನ್ನು ಮೀರಿ ನಿರಂತರವಾಗಿದೆ. ಇದೊಂದು ಶಕ್ತಿಯ ರೂಪದಲ್ಲಿ ನಮ್ಮೊಳಗೆ ಸದಾ ಪ್ರವಹಿಸುತ್ತಿದ್ದು, ಆಗಾಗ ಖಾಸಗಿಯಾದ ಅನುಭೂತಿಯಾಗಿ ಆವರಿಸುತ್ತ ಇರುತ್ತದೆ. (ಉದಾ. ಹಿರಿಯರೊಡನೆ ಟೀವಿ ನೋಡುತ್ತಿರುವಾಗ ಕಾಮದ ದೃಶ್ಯ ಬಂದಾಗ ಏನು ಅರಿವಿಗೆ ಬರುತ್ತದೆ?) ಕಾಮಕೂಟದಲ್ಲಿ ವೈಯಕ್ತಿಕ ಕಾಮುಕತೆಯು ಸಂಗಾತಿಯ ಕಡೆಗೆ ಕೇಂದ್ರೀಕೃತವಾಗುತ್ತ ಸಂಗಾತಿಯ ಬಗೆಗಿನ ಕಾಮಾಪೇಕ್ಷೆಯಾಗಿ ಅಭಿವ್ಯಕ್ತಿಗೊಳ್ಳುತ್ತದೆ. ಹಾಗೆಯೇ ಅದು ಸಂಗಾತಿಯನ್ನು ಬಿಟ್ಟು ಇತರೆಡೆಯೂ ಹರಿಯಬಹುದು. ಅದಕ್ಕೂ ದಾಂಪತ್ಯದ ಬದ್ಧತೆಗೂ ಸಂಬಂಧವಿಲ್ಲ. ಬದ್ಧತೆಯಿದ್ದೂ ಕಾಮುಕತೆಯು ಕಲ್ಪನೆಯಲ್ಲಿ ಕ್ರಿಯಾಶೀಲವಾಗಿರುತ್ತದೆ. ಅದನ್ನು ನಮ್ಮ ಜಾಗೃತ ಮನಸ್ಸು ಅದುಮಿಡುತ್ತದೆ.

ಮೇಲಿನ ದೃಷ್ಟಾಂತದಲ್ಲಿ ಗಂಡಿನಂತೆ ಹೆಣ್ಣಿಗೂ ತನ್ನದೇ ಕಾಮುಕತೆಯ ಬಗೆಗೆ ಯೋಚಿಸಲು ಆಹ್ವಾನಿಸಿದಾಗ ತನ್ನ ಸಾಧ್ವೀತನಕ್ಕೆ ಒಪ್ಪುವುದಿಲ್ಲ ಎಂದಳು. ಇದರರ್ಥ ಏನು? ಹೆಣ್ಣಿನ ಕಾಮುಕತೆಯು ಗಂಡಿನ ಕಾಮುಕತೆಗೆ ಬೆಸುಗೆಗೊಂಡು ಪ್ರತ್ಯೇಕ ಅಸ್ತಿತ್ವ ಕಳೆದುಕೊಂಡಿದೆ. ಹಾಗಾಗಿ ಗಂಡನೊಡನೆ ಪ್ರತಿಫಲಿಸಿ ಕಾಣುತ್ತದಷ್ಟೆ. ಅಸ್ತಿತ್ವ ಹೇಗೆ ಕಳೆದು ಹೋಯಿತು ಎಂದು ಸ್ವಲ್ಪ ಯೋಚಿಸಿದರೆ ಗೊತ್ತಾಗುತ್ತದೆ: ನಮ್ಮ ಪರಂಪರೆಯಲ್ಲಿ ಹರಿದುಬಂದು ಸಂಸ್ಕಾರದ ರೂಪದಲ್ಲಿ ಎಲ್ಲ ಹೆಂಗಸರಿಗೂ ಹೇಳಿಕೊಡಲಾಗಿದೆ: ಹೆಂಗಸರಾಗಿ ತಮ್ಮ ಕಾಮುಕತೆಯನ್ನು ಅಂತರಂಗದಲ್ಲೇ ಅದುಮಿಟ್ಟು ಗಂಡನೊಡನೆ ಮಾತ್ರ ತೋರ್ಪಡಿಸಬೇಕು.

ಹೀಗಿರುವಾಗ ಹೆಣ್ಣಿನಲ್ಲಿ ಸ್ವತಂತ್ರ ಕಾಮಪ್ರಜ್ಝೆ ಅರಳಲು ಹೇಗೆ ಸಾಧ್ಯ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಾಮಾಜಿಕ ನಂಬಿಕೆಗಳಿಂದ ಪ್ರಭಾವಿತವಾದ ಲಿಂಗತ್ವವನ್ನು ಮರೆತಾಗ ಮಾತ್ರ ಲಿಂಗೀಯತೆಯ ಸಮನ್ವಯತೆ ಹುಟ್ಟುತ್ತದೆ.

204: ಲಿಂಗೈಕ್ಯತೆಯ “ಅಕ್ಷಯಾಂಬರ”

ಪುರುಷ ಪ್ರಾಧಾನ್ಯತೆಯ ಬಗೆಗೆ ಬರೆಯುತ್ತ ಗಂಡುಹೆಣ್ಣುಗಳನ್ನು ವಿಭಾಗಿಸುವ ಗೆರೆಯು ಮಸುಕಾಗಿ ಹೋದಷ್ಟೂ, ಪುರುಷರು ತಾವು ಪುರುಷರೆಂದು ಮರೆತಷ್ಟೂ ಸ್ತ್ರೀಪುರುಷರ ಸಂಬಂಧವು ಅಪ್ಯಾಯಮಾನ ಆಗುತ್ತದೆ ಎಂದು ಹೇಳುತ್ತಿದ್ದೆ. ಆದರೆ ಗಂಡು ತನ್ನ ಗಂಡುತನವನ್ನು ಬಿಟ್ಟುಕೊಡುವ ಪ್ರಕ್ರಿಯೆಯೇ ಅತ್ಯಂತ ಸಂಕೀರ್ಣ. ತನ್ನ ಅಸ್ಮಿತೆಯನ್ನು (identity) ಕಳೆದುಕೊಳ್ಳುವಂತೆ ಅನ್ನಿಸುವ ಈ ಪ್ರಕ್ರಿಯೆಯು ಗಂಡಿಗೆ ಏನು ಅನುಭವ ಕೊಡುತ್ತದೆ ಎಂಬುದು ಮೊನ್ನೆ ನೋಡಿದ ನಾಟಕವೊಂದರ ಮೂಲಕ ಸಾಕ್ಷಾತ್ಕಾರವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 

ಎರಡೇ ಪಾತ್ರಗಳಿರುವ “ಅಕ್ಷಯಾಂಬರ” ಎಂಬ ಈ ಸತ್ವಭರಿತ ನಾಟಕವನ್ನು ಬರೆದು ನಿರ್ದೇಶಿಸಿದ ಶರಣ್ಯಾ ರಾಮ್‌ಪ್ರಕಾಶ್ ಅವರೇ ಕೌರವನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನೊಂದು ಪಾತ್ರ ದ್ರೌಪದಿಯದು – ಅದರ ನಿರ್ವಹಣೆ ಪ್ರಸಾದ್ ಚೇರ್ಕಾಡಿ ಅವರದ್ದು. ಗಂಡು ಒಡೆತನ ನಡೆಸುವ (ಯಕ್ಷಗಾನದ) ಕ್ಷೇತ್ರದಲ್ಲಿ ಹೆಣ್ಣು ಕೈಹಾಕಿದಾಗ ಇಬ್ಬರ ನಡುವೆ ನಡೆಯುವ ಸಂಘರ್ಷಗಳ ಹಂದರವಿಲ್ಲಿದೆ. ಸಂಘರ್ಷವನ್ನು ಎತ್ತಿತೋರಿಸಲು ಸ್ತ್ರೀಯು ಪುರುಷನ ಪಾತ್ರವನ್ನೂ, ಪುರುಷನು ಸ್ತ್ರೀಯ ಪಾತ್ರವನ್ನೂ ಮಾಡಿದ್ದಾರೆ.

ಹೊಟ್ಟೆಪಾಡಿಗಾಗಿ ಗಂಡೊಬ್ಬ ಯಕ್ಷಗಾನದಲ್ಲಿ ದ್ರೌಪದಿಯ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾನೆ. ಹವ್ಯಾಸಿ ಕಲಾವಿದೆಯೊಬ್ಬಳು ಕೌರವನ ಪಾತ್ರ ಮಾಡಲು ಬರುತ್ತಾಳೆ. ಗಂಡಿಗೆ ಮೀಸಲಾದ ಕೇತ್ರದಲ್ಲಿ ಹೆಣ್ಣು ಕಾಲಿಡುವ ಕಲ್ಪನೆಯೇ ಅವನಿಗೆ ಹಿಡಿಸುವುದಿಲ್ಲ. ಶಿಷ್ಯತ್ವಕ್ಕಾಗಿ ಅಂಗಲಾಚುವವಳನ್ನು ತಿರಸ್ಕರಿಸುತ್ತ, ಹೀಗಳೆಯುತ್ತ, ಹೆಚ್ಚುಕಡಿಮೆ ಕತ್ತು ಹಿಡಿದೇ ಹೊರಗೆ ದಬ್ಬುತ್ತಾನೆ. ಅಷ್ಟಾದರೂ ಆಕೆಯ (ಕೌರವನ) ಪಾತ್ರಾಭಿನಯ ಯಶಸ್ವಿಯಾದಾಗ ಮತ್ಸರದಿಂದ ಗೇಲಿಮಾಡುತ್ತಾನೆ. ಕ್ರಮೇಣ ಆಕೆ ಪಳಗುತ್ತ ಮೆರೆಯುತ್ತ ಪ್ರಬಲಳಾದಂತೆ ಅವನ ಗಂಡುಭಾವನೆಗಳಿಗೆ ಗಂಡಾಗಿ ಪ್ರತಿಭಟಿಸುತ್ತಾಳೆ. ಅವನ ಗಂಡುತನಕ್ಕೆ ಪೆಟ್ಟುಕೊಡಲು ಶುರುಮಾಡುತ್ತಾಳೆ. ಆಗ ಅವನು (ಮುಂಚೆ ಆಕೆಯನ್ನು ನಾನಾರೀತಿಗಳಲ್ಲಿ ತಿರಸ್ಕರಿಸಿದ್ದನ್ನು ಮರೆತು) ನಾನೇನು ಅನ್ಯಾಯ ಮಾಡಿದ್ದೇನೆ ಎಂದು ಕೇಳುತ್ತಾನೆ (ಅವನ ದೃಷ್ಟಿಯಲ್ಲಿ ಹೆಣ್ಣಿನ ಮೇಲೆ ಕೈಯೆತ್ತುವುದು ಮಾತ್ರ ಪುರುಷನಿಗೆ ನಿಷೇಧ!) ಹೆಣ್ಣಾಗಿ ನೀನು ಹೀಗೆ ಮಾಡಬಹುದೆ ಎಂದು ಪ್ರಶ್ನಿಸುತ್ತಾನೆ. ಆಗವಳು “ಹೆಣ್ಣು ನಾನೋ ನೀನೋ?!” ಎಂದು ವೀರಗಚ್ಚೆ ಹಾಕಿಕೊಂಡು ಕಿರೀಟ ಧರಿಸುತ್ತ ಅಬ್ಬರಿಸುವಾಗ, ಸೀರೆ ಉಟ್ಟುಕೊಳ್ಳುತ್ತಿರುವವನಿಗೆ ಉತ್ತರ ಕೊಡಲಿಕ್ಕಾಗದೆ ಕುಪ್ಪಸದೊಳಗಿನ ಅವನ ಗಂಡೆದೆ ನಡುಗುತ್ತದೆ. ರಂಗಭೂಮಿಯ ಮೇಲಿಗಿಂತ ನೇಪಥ್ಯದಲ್ಲೇ ಹೆಚ್ಚಿನ ಸಂವಾದ ನಡೆಯುವುದು ಈ ನಾಟಕದ ವೈಶಿಷ್ಟ್ಯ. ಮುಂದೆ ದ್ರೌಪದಿಯ ವಸ್ತ್ರಾಹರಣದ ದೃಶ್ಯವಂತೂ ಕಳಸಪ್ರಾಯ ಆಗಿದೆ. ಅಷ್ಟೊತ್ತಿಗೆ ಒಬ್ಬರನ್ನೊಬ್ಬರು ಸಾಕಷ್ಟು ಗಾಸಿ ಮಾಡಿರುತ್ತಾರೆ. ಕೌರವನು ಕ್ರೌರ್ಯದರ್ಪಗಳಿಂದ ಸೀರೆ ಸೆಳೆಯಲು ಉದ್ಯುಕ್ತನಾದಾಗ ದ್ರೌಪದಿಯೊಳಗಿನ ಗಂಡೆದೆಯು ಹೆಣ್ಣಿನ ಬಲಪ್ರಯೋಗಕ್ಕೆ ಮಣಿಯಲೇಬೇಕಾಗುತ್ತದೆ.  ಆಗ ಆಶ್ಚರ್ಯ ಘಟಿಸುತ್ತದೆ. ಗಂಡು ಮರ್ಯಾದೆ ಹೋಗುವ ಭಯದಿಂದ ತನ್ನ ಸೆರಗನ್ನು ಎದೆಗಪ್ಪಿ ಹಿಡಿದುಕೊಂಡು ಆರ್ತಭಾವದಿಂದ ಹೆಣ್ಣಿನ ಕಡೆ ನೋಡುತ್ತಾನೆ. ಹೆಣ್ಣು ಸೀರೆ ಎಳೆಯಲೆಂದು ಹೊರಟವಳು, ತಾನು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ಅವಮಾನ ಮಾಡಲಾಗದೆ ನಿಂತುಬಿಡುತ್ತಾಳೆ. ಕೆಲವು ಕ್ಷಣ ಇಬ್ಬರೂ ಪರಸ್ಪರ ನೋಡುತ್ತ ಸ್ತಬ್ಧರಾಗುತ್ತಾರೆ. ನಾಟಕದ ಭಾಗವೆಂದು ನೆನಪಾಗಿ ಆಕೆ ಸೆಳೆಯುವ ಶಾಸ್ತ್ರ ಮುಗಿಸಿ ನಿಲ್ಲದೆ ನಿಷ್ಕ್ರಮಿಸುತ್ತಾಳೆ. ಗಂಡು ಎದೆ ಮುಚ್ಚಿಕೊಂಡು ದಿಗ್ಭ್ರಮೆಯಿಂದ ಅವಳನ್ನೇ ನೋಡುತ್ತ ನಿಲ್ಲುತ್ತಾನೆ! 

ಈ ನಾಟಕಕ್ಕೆ ಹಲವಾರು ಹೊಳಹುಗಳಿವೆ. ಇಲ್ಲಿ ಗಹನಗೂಢವಾದ ಮನೋಲಿಂಗೀಯತೆಯ ಉತ್ಖನನ ನಡೆಯುವುದನ್ನು ಸಂದರ್ಭೋಚಿತವಾಗಿ ಬಿಡಿಬಿಡಿಸಿ ತೋರಿಸಲಾಗಿದೆ. ಉದಾಹರಣೆಗೆ, ಗಂಡು ಮಾಡುವ ಹೆಣ್ಣಿನ ಪಾತ್ರವು ತಾನು ಹೆಣ್ಣನ್ನು ಚೆನ್ನಾಗಿ ಅರಿತಿರುವಂತೆ ತೋರಿದರೂ, ಅದರ ಜೊತೆಗಿನ ಅಹಮಿಕೆಯು ಅದರ ಪೊಳ್ಳುತನವನ್ನು ಎತ್ತಿತೋರಿಸುತ್ತದೆ. ಹಾಗೆಯೇ, “ನಾನು ಹೆಣ್ಣಾದಷ್ಟು ನೀನು ಗಂಡಾಗಲು ಸಾಧ್ಯವಿಲ್ಲ, ಹಾಗಾಗಿ ನಾನೇ ಶ್ರೇಷ್ಠ!” ಎನ್ನುತ್ತ ಪುರುಷ ಪ್ರಧಾನತೆಯು ಹೆಜ್ಜೆಹೆಜ್ಜೆಗೂ ಮೆರೆದಿದೆ. ಅದಕ್ಕೆ ವಿರುದ್ಧವಾಗಿ ಹೆಣ್ಣಿನ ಅಸ್ತಿತ್ವದ ಉಳಿವಿನ ಸೆಟಸಾಟ ಕೂಡ ಅಷ್ಟೇ ಪ್ರಖರವಾಗಿದೆ. ಆಕೆಯ ವಿರೋಧವು ತನ್ನೊಳಗಿನ ಹೆಣ್ಣುತನದ ಬಗೆಗೆ ಎಂದೆನಿಸುತ್ತದೆ. ಆಕೆಯು ಮಾಡುವ ಕೌರವನ ಪಾತ್ರಕ್ಕೂ, ತನ್ನೊಳಗಿನ ಹೆಣ್ಣುತನಕ್ಕೂ ಘರ್ಷಣೆ ನಡೆಯುವುದು ಎದ್ದುಕಾಣುತ್ತದೆ. ಆತ ಹೆಣ್ಣುಪಾತ್ರ ಬಯಸುತ್ತಲೇ ಹೆಣ್ಣನ್ನು ತಿರಸ್ಕರಿಸುವುದು, ಆಕೆ ಗಂಡುಪಾತ್ರ ಮಾಡುತ್ತ ಗಂಡನ್ನು ಎದುರಿಸುವುದು, ಇಬ್ಬರೂ ಪರಸ್ಪರರನ್ನು ಗಾಸಿ ಮಾಡುತ್ತ ಸಾಕಷ್ಟು ಕೆಟ್ಟವರಾಗುವುದು – ಇವೆಲ್ಲ ಹೆಣ್ಣುಗಂಡುಗಳ ನಡುವೆ ನಡೆಯುವ ನಿರಂತರ ಸಂಘರ್ಷದ ಸಂಕೇತವಾಗಿವೆ.

ಈ ನಾಟಕವು ದಾಂಪತ್ಯಕ್ಕೆ ಹೇಗೆ ಪ್ರಸ್ತುತವಾಗುತ್ತದೆ? ಒಂದು ದೃಷ್ಟಿಯಲ್ಲಿ ಇಡೀ ನಾಟಕವೇ ಪುರುಷ ಪ್ರಧಾನ ದಾಂಪತ್ಯದ ರೂಪಕ ಎಂದೆನಿಸುತ್ತದೆ. ಇಲ್ಲಿ ಶುರುವಿಗೆ ಪುರುಷನ ಹಿಂಸೆಗೊಳಗಾದ ಹೆಣ್ಣಿನ ಆರ್ತತೆಯಿದೆ. ವಯಸ್ಸಾದಂತೆ ಸ್ತ್ರೀಯ ಹಿಂಸೆಗೊಳಗಾದ ಪುರುಷನ ನರಳುವಿಕೆಯಿದೆ. ಗಂಡಿನ ಹಿಂಸೆಗೆ ಪ್ರತಿಭಟಿಸಿ ಮುಯ್ಯಿಗೆ ಮುಯ್ಯಿ ತೀರಿಸುವಾಗ ಸ್ವಂತ ಮೌಲ್ಯಗಳಿಗೆ ವಿರುದ್ಧವಾಗಿ ಗಂಡಿನಂತೆ ವರ್ತಿಸುತ್ತ ತನ್ನೊಳಗಿನ ಹೆಣ್ಣುತನದ ಮೇಲೆ ತಾನೇ ದಬ್ಬಾಳಿಕೆ ಮಾಡುವಂತಾಗುತ್ತದೆ. (ಉದಾಹರಣೆಗೆ, ತನ್ನನ್ನು ಹೊಡೆಯುತ್ತಿರುವ ಗಂಡನನ್ನು ಹೆಂಡತಿ ತಿರುಗಿ ಹೊಡೆಯಬೇಕಾದರೆ ಅವಳ ಮನಸ್ಥಿತಿ ಹೇಗಿರುತ್ತದೆ?) ಇನ್ನು, ದಾಂಪತ್ಯದ ಶುರುವಿನಲ್ಲಿ ಪುರುಷರಾಗಿ ಪ್ರಾಬಲ್ಯ ಸಾಧಿಸಿದವರು ಮುಂದೊಂದು ಕಾಲಕ್ಕೆ ಅದನ್ನು ಬಿಟ್ಟುಕೊಡಲೇ ಬೇಕಾಗುತ್ತದೆ. ಹಿಂಸೆಯೆಂದರೆ ಕೇವಲ ಶಾರೀರಿಕ ಹಿಂಸೆಯಲ್ಲ, ಸೂಕ್ಷ್ಮ ಭಾವನೆಗಳನ್ನು ಅಲಕ್ಷಿಸುವುದೂ ಹಿಂಸೆಯೆ ಎನ್ನುವ ಅರಿವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಹೆಣ್ಣಿಗಾಗುವ ಭಾವನಾತ್ಮಕ ಹಿಂಸೆಯನ್ನು ಅರ್ಥಮಾಡಿಕೊಳ್ಳಲು ತಾನು ಸ್ವತಃ ಹೆಣ್ಣಾಗಿ ಅವಮಾನಕ್ಕೆ ತೆರೆದುಕೊಳ್ಳಬೇಕಾಗುತ್ತದೆ. ಪರಲಿಂಗೀಯತೆಯ ಜೊತೆಗೆ ಸಂಪರ್ಕ ಸಾಧಿಸಬೇಕಾದರೆ ಸ್ವಲಿಂಗೀಯತೆಯನ್ನು ಕಳೆದುಕೊಳ್ಳಲೇಬೇಕು. ಗಂಡು ಗಂಡಸುತನವನ್ನು ಮರೆಯುವಂತೆ ಆದಾಗಲೆಲ್ಲ ಹೆಣ್ಣಿನ ಹೆಣ್ಣುತನ ನಿಚ್ಚಳಗೊಳ್ಳುತ್ತ ಹೋಗುತ್ತದೆ. ಗಂಡು ತನ್ನ ಗಂಡಸುತನವನ್ನು ಕಳೆದುಕೊಂಡಾಗ ಮಾತ್ರ ಹೆಣ್ಣು ಅವನನ್ನು ಒಪ್ಪಿಕೊಳ್ಳುತ್ತಾಳೆ. ಇದರಿಂದ ತಾನೇನೂ ಹಟ ಸಾಧಿಸಬೇಕಾಗಿಲ್ಲ ಎಂದು ಮನವರಿಕೆಯಾಗಿ, ಗಂಡಿನ ಮನಸ್ಸೂ ಹಗುರವಾಗುತ್ತದೆ. ಹೀಗೆ, ಪರಸ್ಪರರಲ್ಲಿ ಸಮನ್ವಯ ಬರಲು ಇಬ್ಬರೂ ತಮ್ಮ ಸುಳ್ಳು ಅಸ್ಮಿತೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಆಗ ಮಾತ್ರ ಲಿಂಗತಾರತಮ್ಯದ ಗೆರೆ ಮಸುಕಾಗಿ ಲಿಂಗೀಯ ಸಾಮರಸ್ಯ ಹುಟ್ಟಲು ಸಾಧ್ಯವಿದೆ ಎಂಬ ಚಿಂತನತೆಯ ಸಂದೇಶ ಇದರಲ್ಲಿದೆ.

ಇನ್ನು  ಲೈಂಗಿಕ ವರ್ತನೆಗೆ ಬಂದರೆ, ಬದ್ಧ ದಾಂಪತ್ಯದಲ್ಲಿ ಕಾಮಕೂಟವೂ ಎಷ್ಟೋ ಸಲ ಸೀರೆ ಸೆಳೆದಂತೆ ಬಲಾತ್ಕಾರ ಆಗುತ್ತದೆ. ಒಬ್ಬರು ಕಾಮಕ್ರಿಯೆಗೆ ಒಪ್ಪದಿರುವಾಗ, ಒತ್ತಾಯಿಸುತ್ತ ಒಡೆತನ ತೋರುವ ಇನ್ನೊಬ್ಬರೂ ತಮ್ಮೊಳಗೆ ಅಸಹಾಯಕತೆಯನ್ನು ಅನುಭವಿಸುತ್ತ ಇರುತ್ತಾರೆ. ಆತ್ಮಗೌರವಕ್ಕೆ ಚ್ಯುತಿ, ಶರಣಾಗತಿ, ಕರ್ತವ್ಯ ಪಾಲನೆ, ಮುಯ್ಯಿಗೆ ಮುಯ್ಯಿ ಮುಂತಾದವುಗಳೆಲ್ಲ ಕಾಮಕೂಟದ ಭಾಗಗಳಾದಾಗ ಸಾಮರಸ್ಯ ಕಿತ್ತುಕೊಂಡು ಹೋಗುತ್ತದೆ.

ದಾಂಪತ್ಯದಲ್ಲಿ ಸಂಗಾತಿಗಳು ಹುಟ್ಟಿನಿಂದ ಬಂದ ಹಾಗೂ ಸಾಮಾಜಿಕ ನಂಬಿಕೆಗಳಿಂದ ಪ್ರಭಾವಿತವಾದ ವೈಯಕ್ತಿಕ ಲಿಂಗೀಯತೆಯನ್ನು ಮರೆಯಬೇಕು. ಗಂಡಿನೊಳಗಿನ ಹೆಣ್ಣನ್ನೂ ಹೆಣ್ಣಿನೊಳಗಿನ ಗಂಡನ್ನೂ ಮುಕ್ತಗೊಳಿಸಬೇಕು. ಆಗ ಮಾತ್ರ ಸೂಕ್ಷ್ಮ ಹಾಗೂ ಕಮನೀಯತೆಯ ಭಾವನೆಗಳಿಂದ ಕೂಡಿದ ಲಿಂಗೀಯತೆಯ ಸಮನ್ವಯದ ಆವಾಹನೆ ಸಾಧ್ಯವಾದೀತು.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣಿನ ಮನಸ್ಸಿನಲ್ಲಿ ಇರುವುದನ್ನು ಆಕೆಯ ಗಂಡಿನ ಅನುಭವದ ಮೂಲಕ ತಿಳಿಯಲಾದೀತೆ?

205: ಹೆಣ್ಣಿನ ಕಾಮಪ್ರಜ್ಞೆ-1

ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಆಗ ತಾನೇ ಲೈಂಗಿಕ ಶಾಸ್ತ್ರದ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಅದರಲ್ಲಿ ಮೊದಲ ಪಾಠ ಏನೆಂದರೆ, ನನ್ನಲ್ಲಿ ಬರುವ ರೋಗಿಗಳಿಗೆ ಅವರ ಲೈಂಗಿಕ ಬದುಕಿನ ಬಗೆಗೆ ಮಾಹಿತಿ ಕೇಳುವುದು – ನಾನೇ ಯಾಕೆ ಕೇಳಬೇಕೆಂದರೆ, ಕೇಳದೆ ತಾವೇ ಹೇಳಿಕೊಳ್ಳುವಂಥ ವಿಷಯವಾಗಲೀ ಅದಕ್ಕೆ ಮುಕ್ತವಾದ ಕಾಲವಾಗಲೀ ಅದಾಗಿರಲಿಲ್ಲ. ಅದರಂತೆ ಒಬ್ಬರು ಮಧ್ಯವಯಸ್ಕ ಗಂಡಸು ಯಾವುದೋ ಕಾಯಿಲೆಯ ವಿಷಯವಾಗಿ ಬಂದಾಗ ಅವರ ಲೈಂಗಿಕ ಬದುಕು ಹೇಗಿದೆ ಎಂದು ವಿಚಾರಿಸಿದೆ. ಅವರು ಒಂದು ಕ್ಷಣ ಯೋಚಿಸಿ, “ಬಹಳ ಚೆನ್ನಾಗಿದೆ ಡಾಕ್ಟರೆ. ಉದ್ರೇಕ ಆದಾಗಲೆಲ್ಲ ಹೆಂಡತಿಯ ಬಳಿಗೆ ಹೋಗುತ್ತೇನೆ. ಒಂದೆರಡು ಸಲ ಚಲಿಸುವುದರಲ್ಲಿ ಸಲೀಸಾಗಿ ವೀರ್ಯಸ್ಖಲನ ಆಗಿಬಿಡುತ್ತದೆ. ಈಕಡೆ ಬಂದುಬಿಡುತ್ತೇನೆ.” ಎಂದು ತೃಪ್ತಿಯ ನಗೆ ಬೀರಿದರು. ಅವರು ಹೇಳಿದ್ದು ಕೇಳಿದರೆ, ಮಲ ವಿಸರ್ಜನೆಗೂ ವೀರ್ಯ ವಿಸರ್ಜನೆಗೂ ವ್ಯತ್ಯಾಸ ಇರಲಿಲ್ಲ. ನಾನು ಹೌದಲ್ಲವೆ ಎಂದುಕೊಂಡು ಟಿಪ್ಪಣಿ ಮಾಡಿಕೊಂಡೆ.

ನಂತರದ ವರ್ಷಗಳಲ್ಲಿ ಕಂಡುಬಂದಿದ್ದು ಇದಕ್ಕೆ ಪೂರ್ತಿ ವಿರುದ್ಧವಾಗಿತ್ತು. ಲೈಂಗಿಕ ಸಮಸ್ಯೆಯನ್ನು ಕಟ್ಟಿಕೊಂಡು ನನ್ನಲ್ಲಿ ಬಂದ ಸಾವಿರಾರು ಗಂಡಸರ ಪೈಕಿ ಬಹುಪಾಲು ಜನರ ಸಮಸ್ಯೆ ಏನು? “ಒಂದೆರಡು ಸಲ ಚಲಿಸುವುದರಲ್ಲಿ ಸ್ಖಲನ ಆಗಿಬಿಡುತ್ತದೆ!” ಅಂದರೆ, ಆ ಮಧ್ಯವಯಸ್ಕ ಗಂಡಸಿಗೆ ಆರಾಮವಾಗಿ ಆಗುವುದು ಇವರಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ! ವೀರ್ಯಸ್ಖಲನ ಆದಾಗ ಶಾರೀರಿಕ ತೃಪ್ತಿ ಆಗೇ ಆಗುತ್ತದೆ. ಆದರೂ ಕಿರಿಕಿರಿಯ ಅನಿಸಿಕೆ ಯಾಕೆಂದು ಕೆದರಿ ಕೇಳಿದಾಗ ಹೊರಗೆ ಬಂದಿದ್ದು ವಿಸ್ಮಯಕರವಾಗಿತ್ತು: ತನ್ನ ಸಂಗಾತಿಯನ್ನು ಕಾಮಕ್ರಿಯೆ ಮೂಲಕ ತೃಪ್ತಿಪಡಿಸಬೇಕು. ಸಂಗಾತಿಯನ್ನು “ತೃಪ್ತಿಪಡಿಸಬೇಕು” ಎಂದರೇನು ಎಂದು ಕೇಳಿದರೆ ಸ್ಪಷ್ಟ ಉತ್ತರವಿಲ್ಲ. ಅದರ ಹಿಂದಿರುವುದು ತನ್ನ ಕಾಲಿಗೆ ತಾನೇ ನಮಸ್ಕರಿಸಬೇಕು ಎನ್ನುವ ಹಪಹಪಿ ಎಂಬುದು ಹೇಳದಿದ್ದರೂ ಎದ್ದುಕಾಣುತ್ತಿತ್ತು. ಅಷ್ಟೊತ್ತಿಗೆ ಒಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೆ. ಕಾಮಕೂಟ ಎಂದರೆ ಗಂಡು ಹೆಣ್ಣಿಗೆ ಮಾಡಿ ತೃಪ್ತಿಪಡಿಸುವ ಕಾರ್ಯಕ್ರಮವಲ್ಲ. ಗಂಡುಹೆಣ್ಣು ಇಬ್ಬರೂ ಸಮಸಮವಾಗಿ ಭಾಗವಹಿಸಿ ಹಂಚಿಕೊಂಡು ಅನುಭವಿಸುವ ವಿಷಯ. ಹಾಗಾಗಿ ಸಮಸ್ಯೆಗೆ ಸಂಬಂಧಪಟ್ಟ ಸಂಗಾತಿಯನ್ನೂ ಕರೆತರಲು ಹೇಳಿದಾಗ ಅವರ ಉತ್ತರ ತಯಾರು: “ಆಕೆ ಕರೆದರೆ ಬರುವುದಿಲ್ಲ! ನನಗೇ ಟ್ರೀಟ್‌ಮೆಂಟ್ ಕೊಡಿ.” ಅದಕ್ಕಿಂತ ಹೆಚ್ಚು ಮಾತಾಡಲು ಅವಕಾಶವೇ ಇರಲಿಲ್ಲ. ಸಮಸ್ಯೆ ಇರುವ ಹೆಂಗಸರು ಸಹಾಯಕ್ಕಾಗಿ ಹೇಗೆ ಬರಲಾರರು ಎಂದು ಗೊಂದಲವಾಗುತ್ತಿತ್ತು. ತೃಪ್ತಿಯಾಗಿಲ್ಲ ಎಂದು ಸಂಗಾತಿ ಬಾಯಿಬಿಟ್ಟು ಹೇಳಿದ್ದಾರೆಯೇ ಎಂದು ಕೇಳಿದಾಗ, “ಆಕೆ ಹೇಳುವುದೇನು ಬಂತು, ಮುಖ ನೋಡಿದರೆ ಗೊತ್ತಾಗುವುದಿಲ್ಲವೆ?” ಎಂದು ಮರುಸವಾಲು ಎಸೆದು ನನ್ನ ಬಾಯಿ ಮುಚ್ಚಿಸಿದ್ದಿದೆ. ನಾನು ಗತ್ಯಂತರ ಇಲ್ಲದೆ ಔಷಧಿ ಬರೆದು ಕೊಟ್ಟಿದ್ದಿದೆ – ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿತು ಎಂಬುದು ಗೊತ್ತಿಲ್ಲ. ಸುಮಾರು ವರ್ಷಗಳ ನಂತರ ಗೊತ್ತಾಗಿದ್ದು ಏನೆಂದರೆ, ಇದರ ಹಿಂದೆ ಇರುವುದು ಹೆಣ್ಣಿನ ಲೈಂಗಿಕ ಸಮಸ್ಯೆಯಲ್ಲ, ಹೊರತಾಗಿ ಗಂಡಸಿನ ಮನೋಲೈಂಗಿಕ ದೌರ್ಬಲ್ಯ. ಹಾಗಾಗಿ ಈ ಗಂಡಸರ ಜೊತೆಗೆ ಮಲಗುವ ಹೆಂಗಸರ ತಲೆಯೊಳಗೆ ಏನು ನಡೆಯುತ್ತ ಇರುತ್ತದೆ, ಹಾಗೂ ಈ ಗಂಡಸರನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಾಗಲಿಲ್ಲ. ಕಾಮಕೂಟದಲ್ಲಿ ಹೆಂಗಸರ ಅನುಭವ ಏನು, ಹಾಗೂ ಅದನ್ನು ಅವರು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಬಗೆಗೆ ಪ್ರತ್ಯಕ್ಷ ಮಾಹಿತಿ ಸಿಗುವ ಲಕ್ಷಣ ಕಾಣಲಿಲ್ಲ. ಪ್ರತ್ಯಕ್ಷ ಮಾಹಿತಿ ಕೇಳಿಕೊಂಡು ಬಂದವರು ಇರಲಿಲ್ಲ ಎಂದಲ್ಲ. ಉದಾಹರಣೆಗೆ, ನನ್ನ ಬಂಧುಗಳ ಪೈಕಿ ಇಬ್ಬರು ತರುಣಿಯರು ಮದುವೆಯಾದ ಮೊದಲ ತಿಂಗಳಲ್ಲಿ ಜನನಾಂಗದ ಪರೀಕ್ಷೆ ಮಾಡಿಸಿಕೊಳ್ಳಲೆಂದು ಬಂದಿದ್ದರು. ಪರೀಕ್ಷೆ ಮುಗಿಸಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿ, ಅವರು ಬಂದ ಕಾರಣ ಕೇಳಿದೆ. ಈಗಾಗಲೇ ಸಂಭೋಗದಲ್ಲಿ ಪಾಲುಗೊಳ್ಳುತ್ತಿರುವ ಅವರಿಗೆ ಗರ್ಭಿಣಿಯಾಗಲು ಅಡ್ಡಿಯೇನೂ ಇಲ್ಲವೆಂದು ಖಚಿತ ಮಾಡಿಕೊಳ್ಳುವುದು ಬೇಕಾಗಿತ್ತಂತೆ. ಸಂಭೋಗವನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ನನ್ನ ನಾಲಗೆಯ ಮೇಲೆಯೇ ಉಳಿಯಿತು. ಇನ್ನು, ಶಾರೀರಿಕ ಚಿಕಿತ್ಸೆಗೆಂದು ಬಂದ ಮಹಿಳೆಯರಿಗೆ ಇಂಥದ್ದನ್ನು ಕೇಳುವುದಕ್ಕೆ ನನಗೇ ಸಂಕೋಚವಾಯಿತು. ಒಬ್ಬರು ಹಿರಿಯ ಲೈಂಗಿಕ ಶಾಸ್ತ್ರಜ್ಞರನ್ನು ಕೇಳಿದಾಗ, ನೀರಿನಲ್ಲಿ ಮೀನಿನ ಹೆಜ್ಜೆಯ ಗುರುತನ್ನೂ ಹೆಣ್ಣಿನ ಮನಸ್ಸನ್ನೂ ತಿಳಿಯಲು ಸಾಧ್ಯವಿಲ್ಲ ಎಂದರ್ಥ ಬರುವ ಸುಭಾಷಿತ ಉದುರಿಸಿದರು. ಇನ್ನು ನನ್ನ ಪರಿಚಯದ ಲೈಂಗಿಕ ಶಾಸ್ತ್ರಜ್ಞೆಗೆ ಕೇಳಿದಾಗ ಆಕೆಗೆ ಬರುವ ಪತ್ರಗಳಲ್ಲಿ ಹೆಚ್ಚಿನವು ಮುಟ್ಟು ಹಾಗೂ ಗರ್ಭಧಾರಣೆಗೆ ಸಂಬಂಧಪಟ್ಟಿದ್ದು ಎಂದು ಗೊತ್ತಾಯಿತು, ಹೀಗೆ ಗಂಡಸರ ಕಾಮದಾಟದಲ್ಲಿ ಭಾಗಿಯಾಗಿಯೂ ಎಲೆಮರೆಯ ಕಾಯಿಯಂತಿರುವ ಹೆಂಗಸರ ಲೈಂಗಿಕ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಏನನ್ನೂ ಸಾಧಿಸಲಾಗದೆ ನಿರುಪಾಯನಾಗಿದ್ದೆ. ಅಷ್ಟರಲ್ಲೇ ಒಂದು ಅದ್ಭುತ ವಿದ್ಯಮಾನ ನಿಧಾನವಾಗಿ ಬಿಚ್ಚಿಕೊಳ್ಳಲು ತೊಡಗಿತು.

ನಾನು 1999ನಲ್ಲಿ ಲೈಂಗಿಕ ಸಮಸ್ಯೆ-ಪರಿಹಾರಗಳ ಕುರಿತು ಎರಡು ಪತ್ರಿಕೆಗಳ ಅಂಕಣದಲ್ಲಿ ಬರೆಯಲು ಶುರುಮಾಡಿದೆ. ಕನ್ನಡದಲ್ಲಿ ಕಾಮೋದ್ದೀಪನೆಯ ಉದ್ದೇಶವಿಲ್ಲದ, ಅವೈಜ್ಞಾನಿಕ ನಂಬಿಕೆಗಳಿಂದ ಹೊರತಾದ, ವೈದ್ಯಕೀಯ ಹಾಗೂ ಮನೋವೈಜ್ಞಾನಿಕ ದೃಷ್ಟಿಕೋನದಿಂದ ಕೂಡಿದ ವಸ್ತುತಃ ಮಾಹಿತಿಯನ್ನು ಒದಗಿಸುವ ಗಂಭೀರ ಪ್ರಯತ್ನವಿದು. ಪ್ರತಿಕ್ರಿಯೆಯ ರೂಪದಲ್ಲಿ ಓದುಗರಿಂದ ಪತ್ರಗಳ ಮಹಾಪೂರವೇ ಹರಿದುಬಂತು. ಅದರಲ್ಲಿ ಶೇ. 90ರಷ್ಟು ಪ್ರಶ್ನೆಗಳು ಗಂಡಸರಿಂದಲೇ ಬಂದಿದ್ದು, ಮುಷ್ಟಿಮೈಥುನ ಹಾಗೂ ಶೀಘ್ರಸ್ಖಲನಕ್ಕೆ ಸಂಬಂಧಪಟ್ಟಿದ್ದು ಇರುತ್ತಿದ್ದುವು. ಆದರೆ ಉಳಿದ ಪತ್ರಗಳಲ್ಲಿ ನನಗೆ ಬೇಕಾದುದು ಅಡಗಿತ್ತು! ಅಂತೂ ಹೆಂಗಸರ ಅನುಭವಗಳನ್ನು ಪ್ರತ್ಯಕ್ಷವಾಗಿ ಅವರಿಂದಲೇ ಕೇಳುವಂತಾಯಿತು. ಕೆಲವರು ತಮ್ಮ ಸಮಸ್ಯೆಗಳ ವಿಷಯವಾಗಿ, ಇನ್ನು ಕೆಲವರು ತಮಗೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವುದಕ್ಕಾಗಿ ಭೇಟಿಮಾಡಲು ಶುರುಮಾಡಿದರು. ಅರ್ಧ ಕಾತುರ ಹಾಗೂ ಅರ್ಧ ಕೃತಜ್ಞತೆಯ ಭಾವದಿಂದ ಅವರನ್ನು ಸಂದರ್ಶಿಸುತ್ತ ಚರ್ಚಿಸಿದೆ. ತನ್ನ ಜನನಾಂಗಗಳು ಎಲ್ಲಿವೆ ಎಂದು ತೋರಿಸಿ ಎಂದು ಬಂದವರಿಂದ ಹಿಡಿದು, ಜನನಾಂಗದಲ್ಲಿ ಪರವಸ್ತುವನ್ನು ಹಾಕಿಕೊಂಡು ಸುಖಪಡುವ ಹೆಣ್ಣಿನ ತನಕ, ಗಂಡಸನ್ನು ತಬ್ಬಿಕೊಂಡರೆ ಗರ್ಭಿಣಿ ಆಗುತ್ತಾರೆ ಎಂದು ನಂಬಿದವರಿಂದ ಹಿಡಿದು, ವಿವಿಧ ನೀಲಿಚಿತ್ರಗಳನ್ನು ನೋಡಿರುವವರ ತನಕ  ನಾನಾ ರೀತಿಯ ಹೆಂಗಸರು ನನ್ನಲ್ಲಿ ಬಂದಿದ್ದಾರೆ. ಇವರನ್ನು ಅತ್ಯಂತ ಸಮೀಪದಿಂದ ಹಾಗೂ ಮನಸ್ಸನ್ನು ಹೊಕ್ಕು ಅರ್ಥೈಸಿಕೊಳ್ಳುವ ವಿಶೇಷ ಸೌಭಾಗ್ಯ ನನ್ನದಾಗಿದೆ. ಅದರಲ್ಲಿ ಕಂಡುಬಂದ ಸಂಗತಿಗಳಲ್ಲಿ ಕೆಲವು ವಿಸ್ಮಯಕಾರಿ ಆಗಿದ್ದರೆ ಇನ್ನು ಕೆಲವು ಕುತೂಹಲ ಕೆರಳಿಸುವಂತಿವೆ, ಕೆಲವು ಗೊಂದಲಕ್ಕೆ ಈಡುಮಾಡುವಂತಿದ್ದರೆ ಇನ್ನು ಕೆಲವು ಹೃದಯವನ್ನು ಕರಗಿಸುವಂತಿವೆ. ಹೀಗೆ ಹೆಣ್ಣಿನ ಕಾಮಪ್ರಜ್ಞೆಯನ್ನೇ ವಿಶೇಷವಾಗಿ ಅಧ್ಯಯನ ಮಾಡಲು ಶುರುವಾಗಿದ್ದು. ಇದು ಕ್ರಮೇಣ ಒಂದು ವ್ಯವಸ್ಥಿತವಾದ ರೂಪ ತಳೆದಿದೆ.

ಅದನ್ನೇ ನಿಮ್ಮ ಮುಂದಿಡಲು ಹೊರಟಿದ್ದೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.