Please wait...


ಸುಮ್ಮನಿರುವುದಕ್ಕಿಂತ ಜಗಳವಾಡುತ್ತಿದ್ದರೆ ಬಾಂಧವ್ಯವು ಬೆಳೆಯುವ, ಗಟ್ಟಿಯಾಗುವ ಅವಕಾಶ ಹೆಚ್ಚಿಗಿದೆ.

190: ದಾಂಪತ್ಯದಲ್ಲಿ “ಸೇತುಬಂಧನ”

ನೀನಾಸಂ ಶಿಬಿರದ ಮೊದಲ ದಿನ ನಡೆದ “ಸೇತುಬಂಧನ” ಪ್ರದರ್ಶನಕ್ಕಿತ್ತು. ಕೆ. ವಿ. ಅಕ್ಷರ ಅವರ ಗಹನಗಂಭೀರ ಹಾಗೂ ಅರ್ಥಪೂರ್ಣವಾದ ಈ ನಾಟಕದಲ್ಲಿ ಆಪ್ತವೆನೆಸಿದ್ದು ಕಿಟ್ಟು ಹಾಗೂ ಭಾಮೆಯನ್ನು ಒಳಗೊಂಡು ನಡೆದ “ನಾಟಕದೊಳಗಿನ ನಾಟಕ”ದ ದೃಶ್ಯ. ಕಿಟ್ಟು ಭಾಮೆಯ ಸೋದರತ್ತೆಯ ಮಗ. ಭಾಮೆಯ ಅಪ್ಪ ಭಾರತ ಯಾತ್ರೆಗೆಂದು ಹೋದ ದೀರ್ಘಾವಧಿಯಲ್ಲಿ ಇಬ್ಬರೇ ಮನೆಯಲ್ಲಿ ಇರುತ್ತಾರೆ. ಒಮ್ಮೆ ಕಿಟ್ಟು ಕುಡಿದು ಮನೆಗೆ ಬಂದಾಗ ಭಾಮೆ ಮನೆಯೊಳಗೆ ಕರೆದುಕೊಳ್ಳಲು ಇಷ್ಟಪಡುವುದಿಲ್ಲ. ಅದನ್ನರಿತು ಅವನು ಮರುಮಾತಾಡದೆ ಬೇರೆ ಮನೆಯಲ್ಲಿ ಮಲಗುತ್ತ ಕುಡಿದು ಹಾಡುತ್ತ ಇರುತ್ತಾನೆ. ಸ್ವಲ್ಪಕಾಲದ ನಂತರ ಮರಳಿದ ಅಪ್ಪ ನಾಟಕ ಆಡಲು ಕೇಳಿದಾಗ ಅವರು (ತಮಗೆ ಅರಿವಿಲ್ಲದಂತೆ) ಕುಡಿತದ ಸಂದರ್ಭವನ್ನು ಆರಿಸಿಕೊಳ್ಳುತ್ತಾರೆ. ಆದರೆ ಅಭಿನಯದಲ್ಲಿ ಪ್ರಕಟವಾಗಿದ್ದೇ ಬೇರೆ: ಕಿಟ್ಟು ಕುಡಿದು ಬರುವಾಗ ಭಾಮೆ ಅವನನ್ನು ಮನೆಯೊಳಗೆ ಬಿಟ್ಟುಕೊಡುವುದಿಲ್ಲ. ಅವಳನ್ನು ಲೆಕ್ಕಿಸದೆ ಮನೆಯೊಳಗೆ ನುಗ್ಗುವ ಪಾರಮ್ಯ ತೋರಿದರೆ ಹಣಾಹಣಿ ಎದುರಿಸುತ್ತಾಳೆ. ಕೊನೆಗೆ ಒಬ್ಬರ ಮೈಮೇಲೆ ಇನ್ನೊಬ್ಬರು ಏರಿಹೋಗಿ ಮಣಿಸುವ ತನಕ ಮುಂದುವರಿದು, ಕಡೆಗೆ ಇಬ್ಬರೂ ಕಲ್ಲಿನಂತೆ ನಿಂತುಬಿಡುತ್ತಾರೆ. ತಮ್ಮ ವರ್ತನೆಯ ಬಗೆಗೆ ಇಬ್ಬರಿಗೂ ದಿಗ್ಭ್ರಮೆ ಆಗುತ್ತದೆ. ಯಾಕೆ? ನಾಟಕದೊಳಗಿನ ನಾಟಕದಲ್ಲಿ ನಿಜವಾಗಿಯೂ ಏನು ನಡೆಯಿತು ಎಂದು ತೋರಿಸುವುದರ ಬದಲು ಏನು ನಡೆಯಬೇಕಿತ್ತು ಎಂದು ತೋರಿಸುತ್ತಾರೆ. ಘಟನೆಯನ್ನು ಪುನರಾವರ್ತಿಸುವುದರ ಬದಲು ತಮ್ಮ ಕಲ್ಪನೆಗಳನ್ನೇ ಘಟನೆಯೋ ಎಂಬಂತೆ ಹೊರಹಾಕುತ್ತಾರೆ!

ಆಗ ನನಗನಿಸಿದ್ದು: ಸುಮಾರು ದಾಂಪತ್ಯಗಳಲ್ಲಿ ಹೀಗೆಯೇ ನಡೆಯುತ್ತದೆ! ಹೇಗೆಂದು ವಿವರಿಸುತ್ತೇನೆ. ಅದಕ್ಕಾಗಿ ನಿಮ್ಮ ದಾಂಪತ್ಯವನ್ನೇ ತೆಗೆದುಕೊಳ್ಳಿ.

ಯಾವುದೋ ಕಾರಣಕ್ಕಾಗಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಹುಟ್ಟುತ್ತದೆ ಎಂದುಕೊಳ್ಳಿ. ಆಗ ಸಂಗಾತಿಯ ಬಗೆಗೆ ಕೋಪ, ಅಸಹನೆ ಮುಂತಾದ ನೇತ್ಯಾತ್ಮಕ ಭಾವಗಳು ಹುಟ್ಟುವುದು ಸಹಜ. ಆಗ ಹೆಚ್ಚಿನಂಶ ಏನು ಮಾಡುತ್ತೀರಿ? ಮನದಲ್ಲಿರುವುದನ್ನು ತಿಳಿಯಪಡಿಸಿದರೆ ವಿರಸ ಭುಗಿಲೆನ್ನುತ್ತದೆ, ಹಾಗಾಗಿ ಸುಮ್ಮನೆ ಇರುವುದೇ ಸೂಕ್ತ ಎಂದುಕೊಳ್ಳುತ್ತೀರಿ. ಹಾಗೆಂದು ಮೌನಧಾರಣೆಯಿಂದ (ನೆರೆಹೊರೆಯವರ ಹೊರತು!) ಯಾರಿಗೂ ಶಾಂತಿ ಉಂಟಾಗಲಾರದು. ನೀವು ನುಂಗಿಕೊಂಡಿದ್ದು ನಿಮ್ಮೊಳಗೇ ಉಳಿದು ತಳಮಳ ತರುತ್ತ ಕಲ್ಪನಾ ವಿಲಾಸವನ್ನು ಪ್ರಚೋದಿಸುತ್ತದೆ. ಮನದಲ್ಲೇ ದ್ವಿಪಾತ್ರಾಭಿನಯದ ನಾಟಕ ಶುರುವಾಗುತ್ತದೆ. ತಲೆಗೆ ಬಂದದ್ದನ್ನು ಒದರುತ್ತ, ಎಗ್ಗಿಲ್ಲದೆ ಸಂಗಾತಿಯನ್ನು ಹಿಗ್ಗಾಮುಗ್ಗಿ ಬಯ್ಯುತ್ತ ಮನದೊಳಗಿದ್ದುದನ್ನು ಮನದೊಳಗೇ ವಾಂತಿಮಾಡಿಕೊಳುತ್ತ ಮುಗಿಸಿ ಮನದ ಹೊಟ್ಟೆಯನ್ನು ಖಾಲಿ ಮಾಡಿಕೊಳ್ಳುತ್ತೀರಿ. ಇದಾದ ನಂತರ ಇನ್ನೂ ಹೆಚ್ಚಿಗೆ ಮಾಡುವುದು ಅಗತ್ಯವಿಲ್ಲ ಎಂದು ಸಂವಹನ ನಿಲ್ಲಿಸಿಬಿಡುತ್ತೀರಿ. ಸಂವಹನ ನಿಲ್ಲಿಸಿದರೆ ಸೌಹಾರ್ದತೆ ಹೇಗೆ ಬಂದೀತು?

ಇನ್ನು, ಸಂಗಾತಿಯ ಮೇಲಾಗುವ ಪರಿಣಾಮವನ್ನು ನೋಡೋಣ. ನಿಮ್ಮ ಮನದಲ್ಲಿದ್ದುದು ಮೌನದ ರೂಪದಲ್ಲಿ ಹೊರಗೆ ಕಾಣುವಾಗ ಸಂಗಾತಿಯ ಊಹಾಪೋಹೆಗೆ ಎಡೆ ಮಾಡಿಕೊಡುತ್ತದೆ. ಅವರೂ ತಮ್ಮ ಮನೋಭಾವಕ್ಕೆ ತಕ್ಕಂತೆ ನಿಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ. “ನನಗೆ ಪೂರಕವಾದುದು ಇದ್ದರೆ ಮಾತಿನಲ್ಲಿ ಹೊರಬರುತ್ತಿತ್ತು. ಮಾತಿಲ್ಲವಾದರೆ ಪೂರಕವಾದುದು ಏನೂ ಇಲ್ಲ!” ಎಂದುಕೊಳ್ಳುತ್ತಾರೆ. ಅದಕ್ಕೇ, “ಸುಮ್ಮನೆ ಯಾಕಿದ್ದೀಯಾ ಮಾತಾಡು!” ಎಂದು ನಿಮ್ಮ ಮೌನದ ಜೊತೆಗೇ ಕಾದುತ್ತಾರೆ! ಅದಕ್ಕೂ ಉತ್ತರ ಸಿಗದಿರುವಾಗ ಅವರೂ ಮೌನವಾಗಿ ತಮ್ಮ ಮನದೊಳಗೆ ದ್ವಿಪಾತ್ರಾಭಿನಯ ಶುರುಮಾಡುತ್ತಾರೆ. ತಮ್ಮಲ್ಲೇ ಶಾಂತಿ ಕಂಡುಕೊಳ್ಳುತ್ತಾರೆ. ಆಡುಭಾಷೆಯಲ್ಲಿ ಇದಕ್ಕೆ ಹೊಂದಾಣಿಕೆ ಎಂದು ಹೇಳುತ್ತೇವೆ. ಕಿಟ್ಟಿ ಹಾಗೂ ಭಾಮೆ ದೂರವಾದಂತೆ ದೂರವಾಗಿ, ಹೊಂದಾಣಿಕೆಯ ಸಂಬಂಧವನ್ನು ಮಾತ್ರ ಉಳಿಸಿಕೊಳ್ಳುತ್ತೇವೆ. ಹೀಗಾದರೆ ದಾಂಪತ್ಯದಲ್ಲಿ ಸೌಹಾರ್ದತೆ ಹೇಗೆ ಬಂದೀತು?

ನಾವು ನಡೆಸುವ ಸಂವಹನದಲ್ಲೂ ದೋಷವಿದೆ: ಹೆಚ್ಚಿನವರು ಸಂಗಾತಿ ಹೇಳುವುದನ್ನು ಕೇಳಿಸಿಕೊಳ್ಳುವ ಉದ್ದೇಶವು ಅವರನ್ನು ಅರ್ಥಮಾಡಿಕೊಳ್ಳಲಿಕ್ಕಲ್ಲ, ಬದಲಾಗಿ ಅವರಿಗೆ ಸರಿಯಾಗಿ ಉತ್ತರಿಸಲು ತಯಾರಿ ಮಾಡಲಿಕ್ಕೆ – ಒಬ್ಬ ವಕೀಲರು ಇನ್ನೊಬ್ಬ ವಕೀಲರ ವಾದವನ್ನು ಕೇಳಿಸಿಕೊಂಡಂತೆ. ಅಷ್ಟೇ ಅಲ್ಲ, ಮೌನಧಾರಣೆ ಮಾಡಿದ ಮೇಲೂ ಮಾತಾಡಬೇಕಾದರೆ ಸಮಸ್ಯೆ ಬಗೆಹರಿದಿಲ್ಲವೆಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತ ಇರುತ್ತೇವೆ. (“ಪುಟ್ಟನ ಸಾಕ್ಸ್ ಎಲ್ಲಿ?” “ಅದನ್ನ ನಾನೇನೂ ಹಾಕಿಕೊಂಡಿಲ್ಲ!”)

ಮನಸ್ತಾಪದ ಒಂದು ಘಟನೆಯನ್ನು ಮನಸ್ಸಿನಲ್ಲಿಟುಕೊಂಡು ನಂತರ ಪುನಃ ನೆನಪು ಮಾಡಿಕೊಳ್ಳುವುದರಲ್ಲೂ ಒಂದು ತೊಂದರೆಯಿದೆ. ಹಳೆಯದನ್ನು ನೆನಪಿಸಿಕೊಳ್ಳುವಾಗ ನೆನಪಿಗೆ ಬರುವುದು ಮೂಲ ಘಟನೆಯಲ್ಲ; ಘಟನೆಯ ಬಗೆಗೆ ನಾವು ಹೋದಸಲ ಮಾಡಿಕೊಂಡಿರುವ ನೆನಪು ಮಾತ್ರ. ನೆನಪಿನ ನೆನಪನ್ನು ಸ್ಮರಣೆ ಎಂದು ಕರೆದುಕೊಳ್ಳುತ್ತೇವೆ. ಆದರೆ ಪುನಸ್ಮರಣೆಯು ಮೂಲರೂಪದ ಪಡಿಯಚ್ಚಲ್ಲ! ಹಾಗಾಗಿ ಘಟನೆಯನ್ನು ಮತ್ತೆಮತ್ತೆ  ಅಥವಾ ಸುಮಾರು ಕಾಲ ಬಿಟ್ಟು ವಿವರಿಸುತ್ತಿದ್ದರೆ ನಮ್ಮ ಕಲ್ಪನೆಗಳು ಸೇರಿಕೊಳ್ಳುತ್ತ ಮೂಲರೂಪವು ಬದಲಾಗುತ್ತ ಹೋಗುತ್ತದೆ. ಹಾಗಾಗಿಯೇ ಮರೆತುಹೋದ ಜಗಳವನ್ನು ಒಬ್ಬರು ನೆನಪಿಗೆ ತಂದಾಗ ಇನ್ನೊಬ್ಬರಿಗೆ ದಿಗ್ಭಾಂತಿ ಆಗುವುದು.

ಜಾನ್ ಗಾಟ್‌ಮನ್ ಪ್ರಕಾರ ಜಗಳವೇ ಒಂದು ರೀತಿಯ ಸಂವಹನ – ಏರುದನಿಯಲ್ಲಿ ಮುಕ್ತವಾಗಿ ನಡೆಯುತ್ತಿದೆಯಷ್ಟೆ. ಏರುದನಿ ಯಾಕೆ? ಮೆತ್ತಗಿನ ಸ್ವರದಲ್ಲಿ ಹೇಳಿದರೆ ಕೇಳುವವರ ತಲೆಗೆ ಹೋಗುವುದಿಲ್ಲವಲ್ಲ? ಜಗಳವೆಂಬ ಸಂವಹನಕ್ಕೆ ಸಂಬಂಧವಿಲ್ಲದಂತೆ ಸ್ಪಂದಿಸಿದರೆ ಆಗುವ ಅನಾಹುತವು ಪೂರ್ಣಪ್ರಮಾಣದ ಜಗಳದಿಂದ ಆಗುವ ಅನಾಹುತಕ್ಕಿಂತ ಹೆಚ್ಚಾಗಿರುತ್ತದೆ – ಯಾಕೆಂದರೆ ಅದರಲ್ಲಿ ಅವರವರ ಕಲ್ಪನೆಗಳೂ ಸೇರಿಕೊಂಡಿರುತ್ತವೆ. ಕನಿಷ್ಟಪಕ್ಷ ಸುಮ್ಮನಿರುವುದೂ ಕೂಡ ಬಾಂಧವ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸುವುದಕ್ಕೆ ಖಂಡಿತವಾಗಿಯೂ ಅಡ್ಡಿಯಾಗುತ್ತದೆ.

ಹಾಗಾಗಿ ನಾಟಕ ನೋಡಿದ ನಂತರ ದಾಂಪತ್ಯ ಚಿಕಿತ್ಸಕನಾದ ನನಗೆ ಹೊಳೆದದ್ದಿಷ್ಟು: ಬದ್ಧಸಂಬಂಧವಲ್ಲದ ಆಟೋ ಚಾಲಕ, ತರಕಾರಿ ಮಾರುವವ, ಅಥವಾ ರಸ್ತೆಯ ಸಹಸಂಚಾರಿಗಳ ಜೊತೆಗೆ ಜಗಳ ಕಾಯುವುದನ್ನು ಬಿಟ್ಟು ಬದ್ಧಸಂಬಂಧದಲ್ಲಿ ಜಗಳವಾಡಿ. ಜಗಳದ ಪ್ರಸಂಗವನ್ನು ನೆನೆಗುದಿಗೆ ಬಿಡದೆ ಆದಷ್ಟು ಬೇಗನೇ ಕೈಗೆ ತೆಗೆದುಕೊಳ್ಳಿ. ಮನದಲ್ಲಿದ್ದುದನ್ನು ಇದ್ದಂತೆಯೇ ಹೊರಹಾಕಿ. ಆದರೆ ಇದರಲ್ಲೂ ನಿಯಮಪಾಲನೆ ಅಗತ್ಯ: ಹೇಳಲು ಬಯಸುವುದನ್ನು ಸೌಮ್ಯವಾಗಿ ಶುರುಮಾಡಿ. ಸಂಗಾತಿಯನ್ನು ದೂಷಿಸುವುದು, ಹೆಸರಿಡುವುದು, ಉಗ್ರವಾದಿಯಾಗುವುದು, ನಿರಾಕರಿಸುವುದು ಇತ್ಯಾದಿ ಬೇಡ. ಬದಲಾಗಿ, ಇದು ನಾನು, ನನ್ನದು, ನನಗಿದು ಬೇಕು/ಬೇಡ ಎಂದು ಹೇಳಿಕೊಳ್ಳಿ. ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಮ್ಮಾಸೆಯನ್ನು ವ್ಯಕ್ತಪಡಿಸಿ. “ನೀನು ಹೀಗೆ ನೇತ್ಯಾತ್ಮಕ ಆಗಿದ್ದರೆ ಕಷ್ಟ” ಎನ್ನಬೇಡಿ; “ನೀನು ಹೀಗಿದ್ದರೆ ನಾವು ಚೆನ್ನಾಗಿರಬಹುದು” ಎನ್ನಿ. ಸಂಗಾತಿ ಹೇಳುವುದನ್ನು ಉತ್ತಕ ಕೊಡಲಿಕ್ಕಾಗಿ ಕೇಳಿಸಿಕೊಳ್ಳದೆ ಅರ್ಥಮಾಡಿಕೊಳ್ಳಲು ಕೇಳಿಸಿಕೊಳ್ಳಿ. ಆಗ ಮನಸ್ಸಿನಲ್ಲಿ ಕಲ್ಪನೆಗಳಿಗೆ ಅವಕಾಶವಾಗದೆ, ಪರಸ್ಪರ ಮುಖಾಮುಖಿಯಾಗಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತವದ ತಳಹದಿಯ ಮೇಲೆ ಭಾವನಾತ್ಮಕ ಸೇತುಬಂಧನಕ್ಕೆ ಅವಕಾಶ ಆಗುತ್ತದೆ. ಅದರ ಬದಲು, ಕಿಟ್ಟು ಭಾಮೆ ಮಾಡಿದಂತೆ ಮನಸ್ಸಿನಲ್ಲಿ ಇಟ್ಟುಕೊಂಡು ಒಂದುದಿನ ನಾಟಕದ ರೂಪದಲ್ಲಿ ಹೊರತೆಗೆಯಬೇಕೆಂದರೂ ಸ್ಫೋಟವಾಗಿ ಇಬ್ಬರನ್ನೂ ಗಾಸಿಮಾಡುತ್ತದೆ.

ಕೊನೆಯದಾಗಿ, ಅಕ್ಷರ ಅವರ ಮಾತು, “ಭವ ಹಾಗೂ ಅನುಭವಗಳ ನಡುವಿನ ಸೇತುವೆಯೇ ನಾಟಕ” ಎನ್ನುವುದು ಎಷ್ಟೊಂದು ನಿಜ ಎನ್ನುವುದು ದಿನಕಳೆದಂತೆ ಹೆಚ್ಚುಹೆಚ್ಚು ಖಚಿತವಾಗಿ ಹೋಗುತ್ತಿದೆ.

ಉಚಿತ ಸಹಾಯಣಿಗೆ ಕರೆಮಾಡಿ: 8494944888.



ಎಲ್ಲ ಪ್ರಗತಿಪರ ಬೆಳವಣಿಗೆಯ ಮಾರ್ಗಗಳು ಅತಂತ್ರ ಸ್ಠಿತಿಯ ಮೂಲಕವೇ ಹಾಯ್ದು ಹೋಗುತ್ತವೆ!

187: ಸರಿಯಾದ ಸಂದೇಶ-6

ಸಂದೇಶನಲೈಂಗಿಕ ದುಸ್ಸಾಹಸವೇ ಅವನು ಬದಲಾಗಲು ಪ್ರೇರೇಪಿಸುತ್ತಿದೆ. ಹೆಂಡತಿಯ ಮುಂದೆ ಹಂಚಿಕೊಳ್ಳುವ ಪ್ರಕ್ರಿಯೆಗೆ ಧೈರ್ಯಮಾಡುತ್ತ,ಅಲ್ಲಿ ತನಗೆ ಬೇಕಾದುದು ಸಿಗುವ ಖಾತರಿ ಇಲ್ಲದಿದ್ದರೆ ಆಕಡೆಗೆ ಹೋಗಿ ಪ್ರಯೋಜನವೇನು ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾನೆ.

ಸಂದೇಶನ ಸಂದಿಗ್ಧತೆಯು ನಮ್ಮೆಲ್ಲರ ಅಂತರಂಗದಲ್ಲಿ ಆಗಾಗ ನಡೆಯುವ ಉಭಯಸಂಕಟವನ್ನು (ambivalence) ಸೂಚಿಸುತ್ತದೆ. ಇದು ಹೇಗೆಂದರೆ, ಪ್ರತಿಯೊಬ್ಬರ ಬದುಕಿನಲ್ಲೂ ಆಗಾಗ ನಾನು ಹಿಡಿದ ದಾರಿ ಹೇಗೋ ಏನೋ ಎಂಬ ಸಂದಿಗ್ಧತೆ ಮೂಡುತ್ತದೆಯಷ್ಟೆ?  ಉದಾಹರಣೆಗೆ, ಮದುವೆಯಾಗಿ ತವರನ್ನು ಬಿಟ್ಟು ಅತ್ತೆಯ ಮನೆಗೆ ಹೊರಟಿದ್ದೀರಿ, ಅಥವಾ ಹೊಸ ಉದ್ಯೋಗ ಹುಡುಕಿಕೊಂಡು ಹಳ್ಳಿಯಿಂದ ದೊಡ್ಡ ನಗರಕ್ಕೆ, ಪರಿಚಿತ ಭಾಷೆಯ ವಲಯದಿಂದ ಪರಭಾಷೆಯ ವಲಯಕ್ಕೆ, ವಿದೇಶಕ್ಕೆ ಹೊರಟಿದ್ದೀರಿ ಎಂದುಕೊಳ್ಳಿ. ಆಗ ಏನು ಅನ್ನಿಸುತ್ತದೆ? “ಸುಭದ್ರವಾದ ತಾಣವನ್ನು, ಪರಿಚಿತ ಪರಿಸರವನ್ನು ಬಿಟ್ಟಿದ್ದೇನೆ. ಇದುವರೆಗೂ ಕಂಡಿರದ ತಾಣವನ್ನು ಹುಡುಕಿಕೊಂಡು ಅಪರಿಚಿತ ಪರಿಸರದಲ್ಲಿ ಪ್ರಯಾಣ ಶುರುವಾಗಿದೆ. ಮುಂದೆಷ್ಟು ದೂರವಿದೆ ಎಂಬುದು ಸ್ಪಷ್ಟವಾಗಿಲ್ಲ. ದಾರಿಯಲ್ಲಿ ಏನೇನು ಅಡ್ಡಿ ಆತಂಕಗಳು ಎದುರಾಗುತ್ತವೆಯೋ ಗೊತ್ತಿಲ್ಲ. ನಾನು ಮಾಡುತ್ತಿರುವ ಪ್ರಯತ್ನದ ಫಲಶ್ರುತಿಯ ಮೇಲೆ ನನಗೇ ಹಿಡಿತವಿಲ್ಲ!” ಹೀಗೆ ಸಾಗುವಾಗ ಮನದೊಳಗೆ ಏನೇನು ಗೊಂದಲ ನಡೆಯಬಹುದು? ನೀವು ಕಾಣುವುದು, ಕೇಳುವುದು, ಮಾಡುವುದು… ಪ್ರತಿಯೊಂದೂ ನಿಮಗೆ ಮುಂಚೆ ಗೊತ್ತಿರದ ಸಂಗತಿಯಾಗಿದ್ದು, ಮನಸ್ಸಿಗೆ ಆಪ್ತವಾಗದೆ,  ದಿಕ್ಕುಗೆಟ್ಟಂತಾಗುತ್ತದೆ. “ಇದಾವುದೂ ನನ್ನದಲ್ಲ, ನನಗೆ ಸಂಬಂಧಪಟ್ಟಿಲ್ಲ” ಎನ್ನುವ ಅನಿಸಿಕೆ ಪ್ರಬಲವಾಗಿ, “ಇದು ನಾನೇ ಅಲ್ಲ!” ಎನ್ನುವ ಮಟ್ಟಿಗೂ ವಿಲಕ್ಷಣವಾದ ಅರ್ಥವಾಗದ ಅನುಭವವನ್ನು ಕೊಡುತ್ತದೆ (ಇದು ಸ್ಪಷ್ಟವಾಗಬೇಕಾದರೆ ಮೂರು ದಿನಗಳಿಂದ ದಿಕ್ಕುತಪ್ಪಿ ಮರುಭೂಮಿಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ). ಒಳಗೊಳಗೇ ಭಯ, ಆತಂಕ, ಅನಿಶ್ಚಿತತೆ, ಅಸ್ಪಷ್ಟತೆ. ದಾರಿ ಎಲ್ಲಿ ಹೋಗುತ್ತದೋ ಗೊತ್ತಿಲ್ಲ; ಹಾಗೆಂದು ಹಿಂದಿರುಗುವ ಹಾಗೂ ಇಲ್ಲ!  ಬಂದದ್ದನ್ನು ಎದುರಿಸಲೇಬೇಕು ಎನ್ನುವ ಸ್ಥಿತಿಗೆ ಬಂದಿದ್ದೀರಿ. ಹೀಗೆ ನಿಶ್ಚಿತವಾದುದನ್ನು ಬಿಟ್ಟುಕೊಟ್ಟು ಅನಿಶ್ಚಿತತೆಯನ್ನು ಎದುರಿಸುತ್ತ, ಸಿಗಬೇಕಾದುದು ಇನ್ನೂ ಸಿಕ್ಕಿರದೆ ಕಾಯ್ದು ನಿಂತಿರುವ ಕಾಲ್ಪನಿಕ ತಾಣವೇ ಅತಂತ್ರ ತಾಣ (liminal space); ಆಗಿರುವ ಸ್ಥಿತಿಯೇ ಅತಂತ್ರ ಸ್ಥಿತಿ (liminal state). ಮರುಭೂಮಿಯ ನಡುವೆ ಇದ್ದಂತೆ – ಮುಂದೇನೂ ಕಾಣದ, ಆದರೂ ಮುಂದುವರಿಯಲೇಬೇಕಾದ ಸ್ಥಿತಿ!

ಅತಂತ್ರ ತಾಣಗಳು ಬದುಕಿನ ಪ್ರಯಾಣದ ಉದ್ದಕ್ಕೂ ನಿಲ್ದಾಣದಂತಿವೆ. ಇದಕ್ಕೆ ಮಾದರಿ ಎಂದರೆ ಹದಿವಯಸ್ಸು. ಆಗ ಬಾಲ್ಯವನ್ನು ಬಿಟ್ಟು, ಯೌವನವನ್ನು ತಲುಪದೆ ನಡುವೆಯೆಲ್ಲೋ ಕಳೆದು ಹೋಗಿರುತ್ತೇವೆ. ಇನ್ನೊಂದು ದೃಷ್ಟಾಂತ ಉದ್ಯೋಗದ ನಂತರದ ನಿವೃತ್ತಿ. ಸುಖಸೌಕರ್ಯದ ವಲಯವನ್ನು (comfort zone) ಬಿಟ್ಟಿದ್ದೇನೆ, ಮುಂದೇನು ಎಂದು ಅಧೀರತೆ ಕಾಡುತ್ತದೆ. ಶಾಲೆಬಿಟ್ಟು ಕಾಲೇಜಿಗೆ ಹೋದಾಗ, ಕನ್ನಡ ಬಿಟ್ಟು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡಾಗ, ಮನೆಬಿಟ್ಟು ಹಾಸ್ಟೆಲ್‌ ಸೇರಿದಾಗ, ಮಕ್ಕಳು ಬೆಳೆದುನಿಂತು ಮನೆಬಿಟ್ಟು ಹೊರಟಾಗ… ಇವೆಲ್ಲ ತಾಣಗಳಲ್ಲಿ ನಮಗೆ ಕಾಣುವುದು ಅಪರಿಚಿತತೆ, ಅನಿಶ್ಚಿತತೆ, ಹಾಗೂ ಒಂಟಿತನ; ಆದರೂ “ಮುಂದೆ” ಸಾಗಲೇಬೇಕಾದ ಅನಿವಾರ್ಯತೆ.

ದಾಂಪತ್ಯದಲ್ಲಂತೂ ಅತಂತ್ರ ತಾಣಗಳು ಹೆಜ್ಜೆಹೆಜ್ಜೆಗೂ ಇವೆ. ಹೊಂದಾಣಿಕೆಯಂಥ ಸರಳ ವಿಷಯವನ್ನೇ ತೆಗೆದುಕೊಳ್ಳಿ. “ನನ್ನದು” ಎನ್ನುವುದನ್ನು ಬಿಟ್ಟುಕೊಟ್ಟು “ಸಂಗಾತಿಯದನ್ನು” ಅನುಸರಿಸಬೇಕಾಗಿ ಬಂದಾಗ ಎಷ್ಟು ಅತಂತ್ರ ಎನ್ನಿಸುತ್ತದೆ – ತನ್ನ ದೃಷ್ಟಿ ಸರಿಯಾಗಿದ್ದರೂ ಕಣ್ಣು ಕಟ್ಟಿಸಿಕೊಂಡು ಸಂಗಾತಿಯ ಕೈಹಿಡಿದು ನಡೆದಂತೆ! ಅದರಲ್ಲೂ ಲೈಂಗಿಕ ಹೊಂದಾಣಿಕೆಗೆ ಎದುರಿಸುವ ಅನಿಶ್ಚಿತತೆ ಕಡಿಮೆಯೇನಲ್ಲ. ಯಾಕೆ? ವೈಯಕ್ತಿಕ ಲೈಂಗಿಕತೆಯನ್ನು ಕಂಡುಕೊಳ್ಳಲು ನಮ್ಮಲ್ಲಿ ಅವಕಾಶವೇ ಇಲ್ಲವಲ್ಲ? ಎಲ್ಲದಕ್ಕಿಂದ ಹೆಚ್ಚಾಗಿ ಸಂಗಾತಿಯು ಸುಖವನ್ನು ದಾಂಪತ್ಯದ ಹೊರಗೆ ಹುಡುಕಿಕೊಂಡಾಗ (ಇರುವುದೋ ಬಿಡುವುದೋ?), ನಂತರ ಹೊರಗಿನ ಅಪ್ಯಾಯಮಾನ ಸುಖವನ್ನು ದಾಂಪತ್ಯದ ಚೌಕಟ್ಟಿನೊಳಗೆ ಪಡೆಯಬೇಕಾದ ಸ್ಥಿತಿ ಬಂದಾಗ. ಹಾಗಾಗಿ, ಅತಂತ್ರ ಸ್ಥಿತಿಗೆ ಸಂದೇಶನು ದಿಕ್ಕುಗಾಣದಂತೆ ವರ್ತಿಸುವುದು ಸಹಜವೆ!

ಆದರೆ ಅತಂತ್ರತೆಯ ಆಯ್ಕೆಯಲ್ಲಿ ಹಲವು ಪ್ರಯೋಜನಗಳಿವೆ. ಅತಂತ್ರತೆ ಎಂದರೆ ಕೂಡುರಸ್ತೆಗಳ ವೃತ್ತವಿದ್ದಂತೆ. ಎಲ್ಲ ವಿಕಾಸದ, ಬೆಳವಣಿಗೆಯ ಮಾರ್ಗಗಳು ಅತಂತ್ರತೆಯ ತಾಣದ ಮೂಲಕವೇ ಹಾಯ್ದು ಹೋಗುತ್ತವೆ. ಒಂದೊಂದು ಮಾರ್ಗಕ್ಕೂ ನಾನಾ ಕವಲು ದಾರಿಗಳಿವೆ. ಪ್ರತಿಯೊಂದು ಕವಲಿಗೂ ಅದರದೇ ಸಾಧ್ಯತೆಗಳಿದ್ದು, ಪ್ರತಿ ಸಾಧ್ಯತೆಯಲ್ಲೂ ಬದುಕಿನ ಹೊಚ್ಚಹೊಸ ಅನುಭವಗಳು ನಮ್ಮದಾಗಲು ಅವಕಾಶಗಳಿವೆ. ಇಂಥ ಅವಕಾಶಗಳೇ ದಾಂಪತ್ಯದಲ್ಲಿ ಹಳತನ್ನು ತೊಲಗಿಸಿ ಹೊಸದನ್ನು ತರುತ್ತವೆ. ಅದಕ್ಕಾಗಿ ಮೊದಲು ಸುಖವಲಯದಿಂದ ಹೊರಬಂದು ಅತಂತ್ರ ತಾಣದ ಮೂಲಕ ಹಾಯ್ದುಹೋಗಲು ಧೈರ್ಯ ಮಾಡಲೇಬೇಕು. ಚಿಕ್ಕದಾಗಿ ಹೇಳಬೇಕೆಂದರೆ ಅತಂತ್ರ ತಾಣದ ಆಚೆಗೆ ಬೆಳವಣಿಗೆ ಇದೆ, ಆದರೆ ಭದ್ರತೆಯಿಲ್ಲ; ಹಾಗೂ ಅದರ ಈಚೆಗೆ ಭದ್ರತೆಯಿದೆ, ಆದರೆ ಬೆಳವಣಿಗೆ ಇಲ್ಲ! ವಿಚಿತ್ರವೇನೆಂದರೆ, ಪ್ರೇಮ-ಪ್ರಣಯಗಳು ಭದ್ರತೆಯಲ್ಲಿ ಇಲ್ಲದೆ ಅತಂತ್ರ ತಾಣದ ಆಚೆಗಿವೆ – ಅದಕ್ಕೆಂದೇ ದಾಂಪತ್ಯದ ಹೊರಗಿನ ಸುಖಕ್ಕಾಗಿ ಹಾತೊರೆಯುವುದು!

ಅತಂತ್ರ ಸ್ಥಿತಿಗೆ ಬಂದಾಗ ಎಲ್ಲರಿಗೂ ಕಾಡುವ ಪ್ರಶ್ನೆಯನ್ನೇ ಸಂದೇಶ ಕೇಳಿದ: “ಸರಿ, ಈ ದಾರಿ ಅನುಸರಿಸಿದರೆ ಮುಂಚೆಗಿಂತ ಹೆಚ್ಚು ಸುಖ ಸಿಗುತ್ತದೆಯೆ? ನಮ್ಮ ಸಂಬಂಧ ಮುಂಚಿಗಿಂತ ಹೆಚ್ಚು ಚೆನ್ನಾಗಿರುತ್ತದೆಯೆ?”

ಬಾಂಧವ್ಯದ ಬಗೆಗೆ ದಂಪತಿಗಳು ಕೇಳುವ ಪ್ರಶ್ನೆಗಳು ಒಂದು ವಿಧದಲ್ಲಿ ಯಕ್ಷಪ್ರಶ್ನೆಗಳಿಗಿಂತ ಕಠಿಣ ಎಂದು ದಾಂಪತ್ಯ ಚಿಕಿತ್ಸಕನಾದ ನನಗೆ ಅನ್ನಿಸುತ್ತದೆ. ಯಾಕೆ? ಒಬ್ಬೊಬ್ಬರ ಪ್ರಶ್ನೆಗಳು ಅವರವರ ಪರಿಕಲ್ಪನೆಗಳಿಗೆ (concept) ತಕ್ಕಂತೆ ಇರುತ್ತವೆ. ಹಾಗಾಗಿ ಅವುಗಳಿಗೆ ಉತ್ತರಿಸುವುದರ ಬದಲು ಅವರ ಪರಿಕಲ್ಪನೆಗಳನ್ನು ಒಡೆದುಹಾಕುವುದೇ (deconstruction) ಸುಲಭ ಎನ್ನಿಸುತ್ತದೆ. ಹಾಗಾಗಿ ಸಂದೇಶನ ಪ್ರಶ್ನೆಯನ್ನೇ ಪ್ರಶ್ನಿಸಿದೆ: “ಸಂದೇಶ್, ಸುಖ ಎಂದಿರಿ. ನಿಮಗೆ ಸಿಕ್ಕಿರುವುದು ಸುಖವೇ ಎಂದು ಹೇಗೆ ಗೊತ್ತು? ಅದಕ್ಕಿಂತ ಹೆಚ್ಚಿನ ಸುಖ ಎಂದರೇನು?”  ಅವನು ತಬ್ಬಿಬ್ಬಾದ.

“ನಿಮ್ಮನ್ನೇ ನೋಡಿ:  ಪಾರ್ಲರ್ ಸುಖವೇ  ದಾಂಪತ್ಯಕ್ಕಿಂತ ಹೆಚ್ಚು ಎನ್ನುತ್ತಿದ್ದವರು, ಈಗ ಅದೇನೂ ಸುಖವಲ್ಲ ಎಂದು ಬಿಟ್ಟುಕೊಟ್ಟು ದಾಂಪತ್ಯದಲ್ಲೇ ಸುಖ ಹುಡುಕಲು ಹೊರಟಿದ್ದೀರಿ… ಎಷ್ಟೋ ಸಲ ಯಾವುದು ಸುಖ ಕೊಡುತ್ತದೆ ಎನ್ನುವುದೇ ನಮಗೆ ಗೊತ್ತಿರುವುದಿಲ್ಲ. ಮಕ್ಕಳಂತೆ ಇದೇ ಆಟಿಕೆ ಬೇಕು ಎಂದು ಹಟ ಮಾಡುತ್ತೇವೆ. ಸಿಕ್ಕಾಗ ಸ್ವಲ್ಪಹೊತ್ತು ಆಟವಾಡಿ ನಂತರ ಆಸಕ್ತಿ ಕಳೆದುಕೊಂಡು ಕೈಬಿಡುತ್ತೇವೆ! ನಮಗೇನು ಬೇಕು ಎನ್ನುವುದು ಯಾವೊತ್ತೂ ಅರ್ಥವಾಗುವುದಿಲ್ಲ.”  ಅವನಿಗೆ ಅರ್ಥವಾಯಿತು.

“ಮುಂದೆ ಸಿಕ್ಕಿದ್ದು ಮುಂಚಿಗಿಂತ ಹೆಚ್ಚು ಅಥವಾ ಕಡಿಮೆ ಎಂದಿರುವುದಿಲ್ಲ. ಮುಂಚಿಗಿಂತ ಭಿನ್ನವಾಗಿರುತ್ತದೆ, ಹಾಗೂ ಭಿನ್ನವಾದುದರಲ್ಲಿ ಹೆಚ್ಚು ಕಡಿಮೆ ಎಂದಿಲ್ಲದೆ ಹೊಸತನ ಇರುತ್ತದೆ. ಆ ಹೊಸತನಕ್ಕೆ ನೀವಿಬ್ಬರೂ ಹೊಂದಿಕೊಳ್ಳುವಾಗ ಸಿಗುವುದು ಅದ್ಭುತವಾಗಿರುತ್ತದೆ. ನಿಮ್ಮ ಯತ್ನಕ್ಕೆ ನಿಮ್ಮಾಕೆ ಸೊಪ್ಪು ಹಾಕದಿದ್ದರೆ ಇನ್ನೊಂದು ಅತಂತ್ರ ತಾಣಕ್ಕೆ ಹೋಗುತ್ತೀರಿ. ಅಲ್ಲಿಂದ ಇನ್ನೊಂದು ಕವಲುದಾರಿ. ಆ ದಿಕ್ಕಿನಲ್ಲಿ ಮತ್ತಷ್ಟು ಪ್ರಯತ್ನ… ನೀವು ಹೀಗೆ ಯತ್ನಿಸುವಾಗ ನಿಮ್ಮಾಕೆಯೂ ಅನಿಶ್ಚಿತ ಮಾರ್ಗ ಹಿಡಿಯುತ್ತ ತನ್ನ ಸುಖದ ಹುಡುಕಾಟ ತಾನು ನಡೆಸುತ್ತಾರೆ.” ಎಂದು ವಿವರಿಸಿದೆ. ಈಗ ಅವನ ಮುಖದ ಮೇಲೆ ನಿರಾಳತೆ ಮೂಡಿತು.

ಅಂತೂ ಸರಿಯಾದ ಸಂದೇಶ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಸಂಗಾತಿಯ ಬದಲಾದ ವರ್ತನೆಯು ಆತಂಕ ಹುಟ್ಟಿಸುತ್ತದೆ; ಹುಟ್ಟಿದ ಆತಂಕವು ಸ್ವತಃ ಬದಲಾಗುವುದಕ್ಕೆ ಪ್ರೇರಣೆ ಕೊಡುತ್ತದೆ!

185: ಸರಿಯಾದ ಸಂದೇಶ-4

ಕಾಮತೃಪ್ತಿಯನ್ನು ಹೆಚ್ಚಾಗಿ ಅನುಭವಿಸಬಹುದು ಎಂದು ಪಾರ್ಲರ್ ಪ್ರಸಂಗಗಳಿಂದ ಸಂದೇಶನಿಗೆ ಅರ್ಥವಾಗಿದೆ. ಅದನ್ನು ಹೆಂಡತಿಯೊಂದಿಗೆ ಪಡೆಯುವುದಕ್ಕೆ ಮನಸ್ಸು ಮಾಡಿದ್ದಾನೆ.

“ಆಯಿತು, ಹೆಂಡತಿಯೊಂದಿಗೆ ಹೇಳಿಕೊಳ್ಳುತ್ತೇನೆ. ಆಕೆ ಅರ್ಥಮಾಡಿಕೊಂಡರೆ ಸರಿ. ಬದಲಾಗಿ, ತಪ್ಪು ತಿಳಿದುಕೊಂಡು, ನನ್ನ ಬಗೆಗೆ ಅಸಹ್ಯಪಟ್ಟುಕೊಂಡು ಸಂಬಂಧ ಮುರಿದುಕೊಂಡುಬಿಟ್ಟರೆ? ಅಥವಾ ಜೊತೆಗಿದ್ದೂ ನನ್ನ ವಿರೋಧವಾಗಿ ಹಂಗಿಸಿ ಆಡಿಕೊಳ್ಳುತ್ತಿದ್ದರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದ.

ಸಂದೇಶನ ಸಂದೇಹ ನಿಜ ಅನ್ನಿಸಿತು. ದಂಪತಿಯಲ್ಲಿ ಒಬ್ಬರು ತಮ್ಮ ತಪ್ಪನ್ನು ತಾವಾಗಿಯೇ ಬಹಿರಂಗ ಮಾಡುತ್ತಾರೆ ಎಂದುಕೊಳ್ಳಿ. ಅದಕ್ಕೆ ಸಂಗಾತಿಯ ಬಹುತೇಕ ಅನಿಸಿಕೆ ಹೇಗಿರುತ್ತದೆ? ಇಂಥ ವಿಷಯಗಳು ಖಂಡಿತವಾಗಿಯೂ ಮನಸ್ಸಿಗೆ ನೋವು ಕೊಡುತ್ತವೆ. (ಅದಕ್ಕಾಗಿಯೇ “ನಾನೇ ಆ ತಪ್ಪು ಮಾಡಿದ್ದರೆ ನಿನಗೆ ಹೇಗೆ ಅನ್ನಿಸುತ್ತಿತ್ತು?” ಎಂದು ಕೇಳುವುದು.) ಆದರೆ ತಪ್ಪೊಪ್ಪಿಗೆಯ ಹಿಂದಿರುವ ಅಂತರಂಗದ ತೊಳಲಾಟ, ಸಾಚಾತನ, ಹಾಗೂ ತಿದ್ದಿಕೊಂಡು ಹತ್ತಿರವಾಗುವ ಬಯಕೆ –ಇದೆಲ್ಲದರ ಬಗೆಗೆ ಯೋಚಿಸುವುದೂ ಸಂಬಂಧದ ಸೌಖ್ಯದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಆದರೆ ಹೆಚ್ಚಿನವರು ತಪ್ಪಿತಸ್ಥರನ್ನು ಹೀಗಳೆದು ದೂರೀಕರಿಸುತ್ತಾರೆ. ದುಃಖ, ಆಕ್ರೋಶ, ಸಿಟ್ಟು ಅವರ ಮೇಲೆ ಹಾಕುತ್ತ, “ಚೆನ್ನಾಗಿದ್ದ ಸಂಸಾರವನ್ನು ಹಾಳುಮಾಡಿದೆಯಲ್ಲ!” ಎಂದು ಜೊತೆಗಿದ್ದೇ ಗೋಳಾಡುತ್ತಾರೆ.

ನೊಂದವರು ಹೀಗೆ ಪರಿತಪಿಸುವುದಕ್ಕೂ ಕಾರಣವಿದೆ. ಸರಿಯಾಗಿ ಸಂಸಾರ ಮಾಡಿಕೊಂಡಿದ್ದೇವೆಂದು ಭಾವಿಸಿರುವ ಗಂಡಹೆಂಡಿರು ತಮ್ಮದೇ ವಿಶಿಷ್ಟ ರೀತಿಯಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡು (fusion) ಇರುತ್ತಾರೆ. ತನ್ಮೂಲಕ ಒಂದು ಬಗೆಯ “ಸಮಸ್ಥಿತಿ”ಯನ್ನು ಹುಟ್ಟಿಸಿಕೊಂಡಿರುತ್ತಾರೆ. ಈ ಸಮಸ್ಥಿತಿಯೇ ಭದ್ರ, ಶಾಶ್ವತ ಎಂದು ಭಾವಿಸಿರುತ್ತಾರೆ. ಸಮಸ್ಯೆ ಹುಟ್ಟುವುದು ಇಲ್ಲಿಯೇ!

ಸಂಬಂಧಗಳ ಬೆಳವಣಿಗೆ ಹಾಗೂ ವಿಕಾಸದ ಬಗೆಗೆ ಮರ್ರೀ ಬೊವೆನ್ (Murray Bowen) ಎಂಬ ಕುಟುಂಬ ಶಾಸ್ತ್ರಜ್ಞ ಬಹಳ ಸರಿಯಾಗಿ ಹೇಳಿದ್ದಾನೆ. ಸಂಗಾತಿಗಳ ಸಮಸ್ಥಿತಿಯು ಅಷ್ಟೇ ಭದ್ರವಾಗಿದ್ದರೂ ಕೊನೆಯ ತನಕ ಹಾಗೆಯೇ ಉಳಿದುಬರಲು ಸಾಧ್ಯವೇ ಇಲ್ಲ. “ಮದುವೆಯಾಗಿ ಕೊನೆಯ ತನಕ ಸುಖವಾಗಿದ್ದರು” ಎನ್ನುವುದು ರಾಜಕುಮಾರ-ರಾಜಕುಮಾರಿ ಕತೆಗಳಲ್ಲಿ ಮಾತ್ರ. ದಂಪತಿಗಳು ಸಮಾಜದ ಭಾಗವಾಗಿರುವಾಗ ಅವರ ಸಂಬಂಧದ ಮೇಲೆ ಮೂರನೆಯ ವ್ಯಕ್ತಿಯ (ಉದಾ. ಕುಟುಂಬದ ಇತರ ಸದಸ್ಯರು, ಸಂಬಂಧಿಕರು, ಸ್ನೇಹಿತವರ್ಗ) ಪ್ರಭಾವವು ಒಂದಿಲ್ಲೊಂದು ವಿಧದಲ್ಲಿ ಬಿದ್ದೇ ಬೀಳುತ್ತದೆ. ಮೂರನೆಯವರು ಗಂಡಹೆಂಡಿರ ಪೈಕಿ ಒಬ್ಬರಿಗೆ (ಹೆಚ್ಚು) ಹತ್ತಿರವಾಗುವುದರಿಂದ ಅವರು ಮುಂಚಿನಂತೆ ಇರಲಾಗದೆ ಬದಲಾಗುತ್ತಾರೆ. ಆಗ ಎರಡನೆಯ ಸಂಗಾತಿಯು ಬರಬಾರದ್ದು ಬಂದುಬಿಟ್ಟಿದೆ ಎಂದು ಭೀತಿಗೊಂಡು ಮೂರನೆಯ ವ್ಯಕ್ತಿಯನ್ನು ದೂರತಳ್ಳುತ್ತ ಮುಂಚಿನ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಒದ್ದಾಡುತ್ತಾರೆ. ಆದರೆ ಮೊದಲನೆಯ ಸಂಗಾತಿಯು ಈಗಾಗಲೇ ಸಮಸ್ಥಿತಿಯನ್ನು ದಾಟಿ ಮುಂದೆ ಹೋಗಿರುವುದರಿಂದ, ಅವರನ್ನು ಕೂಡಿಕೊಳ್ಳಲು ಇನ್ನೊಬ್ಬರೂ ತಮ್ಮ ಜಾಗವನ್ನು ಬಿಡಲೇಬೇಕಾಗುತ್ತದೆ – ಇಲ್ಲದಿದ್ದರೆ ಇಬ್ಬರೂ ಬೇರೆಬೇರೆ ಜಾಗಗಳಲ್ಲಿ ಉಳಿದು ಸಂಬಂಧವೇ ಇಲ್ಲದಂತಾಗುತ್ತದೆ! ಹೀಗೆ ದಾಂಪತ್ಯದಲ್ಲಿ ಒಬ್ಬರು ಬದಲಾದಾಗ ಇನ್ನೊಬ್ಬರೂ ಅನಿವಾರ್ಯವಾಗಿ ಬದಲಾಗಲೇಬೇಕು. ಆಗ ಹೊಸ ಸಮಸ್ಥಿತಿ ಏರ್ಪಡುತ್ತದೆ; ಇದು ಮುಂಚಿನ ಸ್ಥಿತಿಗಿಂತ ಸುಭದ್ರವಾಗಿರುತ್ತದೆ. ಅದು ಹೇಗೆಂದರೆ, ಮೂರನೆಯವರ ಪ್ರವೇಶದ ಮೂಲಕ ಇಬ್ಬರೂ ತಮ್ಮನ್ನು ಹಾಗೂ – ಅಸಮಾಧಾನವಾದರೂ ಸರಿ – ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಇದಕ್ಕಾಗಿ ದೃಷ್ಟಾಂತ: ಪ್ರೀತಿಯ ಗಂಡನು ಇತ್ತೀಚೆಗೆ ತನ್ನ ಗೆಳತಿಗೆ ಹತ್ತಿರವಾಗಿ, ಹೆಂಡತಿಯೊಂದಿಗೆ ಸಮಯ ಕಡಿಮೆ ಕಳೆಯುತ್ತಿದ್ದಾನೆ ಎಂದುಕೊಳ್ಳಿ. ಇಲ್ಲಿ ಗಂಡ ಬದಲಾಗುತ್ತಿದ್ದಾನೆ. ದಾಂಪತ್ಯದ ಸಮಸ್ಥಿತಿ ಅಲ್ಲಾಡುತ್ತಿದೆ. ಆಗ ಹೆಂಡತಿಯು ಅವನನ್ನು ಎಚ್ಚರಿಸುವಾಗ ಅದು ಗಂಡನಿಗೆ ಚುಚ್ಚಿದಂತಾದರೂ ಅವನು ಅರ್ಥಮಾಡಿಕೊಂಡು, ತಪ್ಪು ತಿದ್ದಿಕೊಂಡು ಹೆಂಡತಿಗೆ ಹತ್ತಿರವಾಗಲು ಯತ್ನಿಸುತ್ತಾನೆ. ಹಾಗೆಯೇ ಹೆಂಡತಿಯೂ ಆತ್ಮವಿಶ್ಲೇಷಣೆ ಮಾಡಿಕೊಳ್ಳುತ್ತಾಳೆ. ತನ್ನ ಅನುಪಯುಕ್ತ ವರ್ತನೆಗಳನ್ನು (ಉದಾ. ತನ್ನ ಅಲಂಕಾರವನ್ನು ಗಂಡ ಮೆಚ್ಚುವುದನ್ನು ಅಲಕ್ಷಿಸಿದ್ದು) ಬದಲಾಯಿಸಿಕೊಳ್ಳುತ್ತ ಗಂಡನಿಗೆ ಹತ್ತಿರವಾಗಲು ಯತ್ನಿಸುತ್ತಾಳೆ. ಹೀಗೆ ಹುಟ್ಟುವ ಅನ್ಯೋನ್ಯತೆಯ ನೆರಳಿನಲ್ಲಿ ಇಬ್ಬರೂ ಸೇರಿ ಹೊಸದಾದ ಹಾಗೂ ಮುಂಚಿಗಿಂತ ಭದ್ರವಾದ ಸಮಸ್ಥಿತಿಯನ್ನು ಕಟ್ಟಿಕೊಳ್ಳುತ್ತಾರೆ.

ಇದನ್ನು ಸಂದೇಶನಿಗೆ ವಿವರಿಸಿದೆ. ಅವನು ಪಾರ್ಲರ್‌ನಿಂದ ಕಂಡುಕೊಂಡ ಹೊಸ ಸುಖದ ಕಾರಣದಿಂದ ಹೆಂಡತಿಯು ಖಂಡಿತವಾಗಿಯೂ ತಲೆ ಕೆಡಿಸಿಕೊಳ್ಳುತ್ತಾಳೆ; ಹಾಗೂ ಈ ತಲೆಕೆಡುವಿಕೆಯೇ ಆಕೆಯು ಬದಲಾಗಲು ಕಾರಣವಾಗುತ್ತದೆ ಎಂದು ಬಿಡಿಸಿ ಹೇಳಿದೆ. ಸಂಗಾತಿಯ ಬದಲಾದ ವರ್ತನೆಯು ಸಮಸ್ಥಿತಿಯನ್ನು ಅಲ್ಲಾಡಿಸುತ್ತ ಆತಂಕ ಹುಟ್ಟಿಸುತ್ತದೆ. ಹಾಗೂ, ಹುಟ್ಟಿದ ಆತಂಕವು ಸ್ವತಃ ತಾನು ಬದಲಾಗುವುದಕ್ಕೆ ಅಂತಃಪ್ರೇರಣೆ ಕೊಡುತ್ತದೆ ಎಂದು ಒತ್ತಿಹೇಳಿದೆ.

ಸಂದೇಶ ಯೋಚಿಸುತ್ತ ಹೇಳಿದ: “ನೀವು ಹೇಳುವುದೇನೋ ಸರಿ. ಪಾರ್ಲರ್‌ನಲ್ಲಿ ಸಿಕ್ಕ ಸುಖವನ್ನು ಹೆಂಡತಿಯ ಮುಂದೆ ಬಿಚ್ಚಿಟ್ಟು, ನನಗೆ ಹಾಗೆ ಮಾಡು ಹೀಗೆ ಮಾಡು ಎಂದರೆ ಒತ್ತಾಯ ಆಗುತ್ತದೆ. ಅವಳು ಖಂಡಿತಾ ಆಗುವುದಿಲ್ಲ ಎಂದು ಮುಖ ಮುರಿಯುವಂತೆ ಮಾತಾಡುತ್ತಾಳೆ.  ಆಗ ಏನಾಗುತ್ತದೆ? ಒಂದು ಕಡೆ ಹೆಂಡತಿಯೊಡನೆ ಮುಂಚಿನ ಸುಖ – ಅದೆಂಥದ್ದೇ ಇರಲಿ – ಕಿತ್ತುಕೊಂಡು ಹೋಯಿತು. ಹೊಸಸುಖ ಬರುವ ಭರವಸೆಯೂ ಇಲ್ಲವಾಯಿತು! ಇಷ್ಟಲ್ಲದೆ ಆಕೆಯು ಅಸಹ್ಯಪಟ್ಟುಕೊಂಡು ನನ್ನನ್ನು ದೂರ ಮಾಡಲೂ ಬಹುದು. ಹಳೆಯದು ಕಳೆದುಕೊಂಡು, ಹೊಸದು ಬರದೆ, ಹೆಂಡತಿ ದೂರವಾದರೆ ಏನು ಮಾಡಲಿ?” ಅವನ ಹೇಳಿಕೆಯಲ್ಲಿ ಚಿಂತೆ, ಆತಂಕ, ಭವಿಷ್ಯದ ಬಗೆಗೆ ಅನಿಶ್ಚಿತತೆ ಎಲ್ಲವೂ ಎದ್ದುಕಾಣುತ್ತಿದ್ದುವು.

ಸಂದೇಶ ನಿಜವಾಗಲೂ ವಾಸ್ತವವನ್ನು ಎದುರಿಸುವಲ್ಲಿ ಪ್ರಾಮಾಣಿಕನಾಗಿದ್ದಾನೆ ಎಂದೆನಿಸಿತು. ದಾಂಪತ್ಯದಲ್ಲಿ ಕೆಲವು ವರ್ತನೆಗಳಿಗೆ ಬೇಡವೆಂದರೂ ಒಗ್ಗಿಹೋಗಿರುತ್ತೇವೆ.  ಅವುಗಳನ್ನು ತಿದ್ದಿಕೊಳ್ಳದೆ ತಳಕ್ಕೆ ತಳ್ಳಿರುತ್ತೇವೆ. ಸಮಸ್ಥಿತಿಯು ಕದಡಿದಾಗ ರಾಡಿ ಮೇಲೆದ್ದು ಮನಸ್ಸು ಅಸ್ವಸ್ಥಗೊಳ್ಳುತ್ತದೆ. ಮುಂದಿನ ಪರಿಣಾಮ ಹೀಗೆಯೇ ಎಂದು ಖಾತರಿ ಇಲ್ಲದಿರುವಾಗ ಸಮಸ್ಥಿತಿಯನ್ನು ಕದಡಲು ಮನಸ್ಸು ಬರುವುದಿಲ್ಲ. ವಿಪರ್ಯಾಸವೆಂದರೆ, ಈಗಿರುವ ಸುಭದ್ರ ಎಂದೆನಿಸುವ ಸ್ಥಿತಿಯನ್ನು ದಾಟಿ ಅನಿಶ್ಚಿತತೆಗೆ ಕಾಲಿಟ್ಟ ನಂತರವೇ ಅದರಾಚೆ ಇರುವುದನ್ನು ಕಾಣಲು ಸಾಧ್ಯವಿದೆ. ಇದನ್ನು ಹೇಗೆ ತಿಳಿಸಿಕೊಡುವುದು ಎಂದು ಯೋಚಿಸಿದೆ.

 “ಸಂದೇಶ್, ನಿಮಗೆ ಚೌಕಾಬಾರ ಅಥವಾ ಪಗಡೆ ಆಟ ಗೊತ್ತೆ?” ಅವನು ಹೌದೆಂದ. “ಎದುರಾಳಿಯಿಂದ ನಿಮ್ಮ ಕಾಯಿಗಳನ್ನು ರಕ್ಷಿಸಿಕೊಳ್ಳಬೇಕಾದರೆ ಕಟ್ಟೆಯನ್ನು ಹಿಡಿದು ಕುಳಿತುಕೊಳ್ಳುತ್ತೀರಷ್ಟೆ? ಆದರೆ ಭದ್ರತೆಯನ್ನು ನಂಬಿ ಕಟ್ಟೆಮನೆಯಲ್ಲೇ ಕುಳಿತರೆ ಮುಂದುವರಿಯುವುದು ಸಾಧ್ಯವಿಲ್ಲ. ಕಾಯಿಗಳು ಹಣ್ಣಾಗಬೇಕಾದರೆ ಕಟ್ಟೆಯನ್ನು ಬಿಡಲೇಬೇಕು. ಕಟ್ಟೆಯನ್ನು ಬಿಟ್ಟರೆ ಕಾಯಿಗಳು ಏಟುತಿಂದು ಮನೆಗೆ ಮರಳುವ ಅಪಾಯ ಇದ್ದೇ ಇದೆ. ಇದರರ್ಥ ಏನು? ಬೆಳೆಯಬೇಕಾದರೆ ಸ್ಥಿರವಾದ ಭದ್ರತೆಯನ್ನು ಬಿಟ್ಟುಕೊಟ್ಟು ಅಸ್ಥಿರತೆ, ಅಭದ್ರತೆ, ಅನಿಶ್ಚಿತತೆ, ಅನನುಕೂಲತೆ, ಅಪಾಯ ಇತ್ಯಾದಿ ಎದುರಿಸಲೇಬೇಕು. ಇಲ್ಲವಾದರೆ ಕಳಪೆ ಸಂಬಂಧದಲ್ಲೇ ನರಳಬೇಕು. ಏನಂತೀರಿ?” ಅವನಿಗೆ ಅರ್ಥವಾಯಿತು.

ಕೊನೆಗೆ ಅವನೊಂದು ಪ್ರಶ್ನೆ ಕೇಳಿದ: “ಆಯಿತು, ಹೆಂಡತಿಯ ಮುಂದೆ ಹೇಳಿಕೊಳ್ಳಬೇಕು. ಅದಕ್ಕೆ ಧೈರ್ಯವಿಲ್ಲವಲ್ಲ? ಅದನ್ನು ಎಲ್ಲಿಂದ ತರುವುದು?”

ಹೌದು, ಧೈರ್ಯ ಎಲ್ಲಿಂದ ಬರುತ್ತದೆ? ಇದಕ್ಕೆ ಉತ್ತರವನ್ನು ಮುಂದಿನ ಸಲ ಕಂಡುಕೊಳ್ಳೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888



“ನಾನು ಹೀಗೆ”  ಎಂದು ಬಯಲಾಗಿ, ಸಂಗಾತಿಗೆ ಅರ್ಥಮಾಡಿಸದ ಹೊರತು ಅನ್ಯೋನ್ಯತೆಯ ಕೂಟಕ್ಕೆ ಮನಸ್ಸು ಬರುವುದಿಲ್ಲ.

184: ಸರಿಯಾದ ಸಂದೇಶ-3

ಸಂದೇಶ ದಾಂಪತ್ಯದೊಳಗಿದ್ದೂ ಒಂಟಿಯಾಗಿದ್ದಾನೆ, ಹಾಗೂ ಅದನ್ನು ಹೊರಗಿನ ಕಾಮತೃಪ್ತಿಯ ಮೂಲಕ ನೀಗಿಸಿಕೊಳ್ಳುತ್ತಿರುವಾಗ ಕಾಯಿಲೆಯಾಗಿ ಭಯದಿಂದ ನಿಲ್ಲಿಸಿದ್ದಾನೆ. ಹೆಂಡತಿಯೊಡನೆ ಅನ್ಯೋನ್ಯತೆ (intimacy) ಬರಲು ಇದನ್ನು ಹಂಚಿಕೊಳ್ಳುವುದಕ್ಕೆ ಸೂಚಿಸಿದಾಗ ಒಪ್ಪದೆ ಇದ್ದಾನೆ.

ಸಂದೇಶ ಸ್ವಲ್ಪ ವ್ಯಂಗ್ಯವಾಗಿಯೇ ಉದ್ಗರಿಸಿದ: “ಸರಿಯಾಗಿ ಹೇಳಿದಿರಿ! ನಿಜ ಹೇಳಿದರೆ ಹೆಂಡತಿ ನನ್ನನ್ನು ಕೀಳಾಗಿ ಭಾವಿಸಿ, ದೂರ ಮಾಡಿದರೆ ಕೂಡಿ ಬಾಳಲು ಸಾಧ್ಯವೆ? ನನ್ನ ಕುಟುಂಬದ ಸುಖಶಾಂತಿಯನ್ನು ನಾನೇ ಕೈಯಾರೆ ಹಾಳುಮಾಡಿಕೊಳ್ಳುವುದೇ?” ಅವನ ಮಾತಿನಲ್ಲಿದ್ದ ನಿಜ, ಕೀಳು ಹಾಗೂ ಸುಖಶಾಂತಿ ಈ ಮೂರು ಪದಗಳನ್ನು ಉಪಯೋಗಿಸಿದ ರೀತಿಯಲ್ಲಿ ಅವನ ಸಂಕಟ ಅರ್ಥವಾಯಿತು. ಇವುಗಳನ್ನು ಒಂದೊಂದಾಗಿ ಚರ್ಚಿಸುವುದು ಅಗತ್ಯ ಎನ್ನಿಸಿತು.

ದಾಂಪತ್ಯದಲ್ಲಿ ಸರ್ವೇಸಾಮಾನ್ಯವಾದ ಒಂದು ಅನಿಸಿಕೆಯಿದೆ: ತಾನು ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚು ಉತ್ತಮ ಎಂದು  ತೋರಿಸಿಕೊಳ್ಳುತ್ತಿದ್ದರೆ ಮಾತ್ರ ಸಂಗಾತಿಯು ತನ್ನನ್ನು ಗೌರವಿಸುತ್ತಾರೆ, ಇರುವುದನ್ನು ಇರುವಂತೆ ತೋರಿಸಿಕೊಂಡರೆ ಬೆಲೆ ಸಿಗುವುದಿಲ್ಲ ಎಂದು ಭಾವಿಸುತ್ತೇವೆ. ಹಾಗಾಗಿಯೇ ಬಿಳಿಸುಳ್ಳುಗಳನ್ನು ಹುಟ್ಟಿಸುತ್ತಲೇ ಇರುತ್ತೇವೆ. (ಅಂದಹಾಗೆ, ಸುಳ್ಳು ಯಾಕೆ ಹೇಳುತ್ತೇವೆ? ಸುಳ್ಳಿಗೂ ಭದ್ರತೆಗೂ ನಂಟಿದೆ. ನಾವಾಡುವ ಸುಳ್ಳುಗಳ ಮೂಲಕ ಹುಸಿಭದ್ರತೆಯನ್ನು ಸಂಗಾತಿಗೆ ಹುಟ್ಟಿಸುತ್ತ, ಸಂಗಾತಿ ನಮ್ಮನ್ನು ನಂಬಿ ಭದ್ರಭಾವವನ್ನು ಹೊಂದುತ್ತಾರೆ ಎಂದು ನಂಬುತ್ತೇವೆ; ಅವರು ನಂಬಿದಂತೆ ತೋರಿಸಿಕೊಂಡು ನಮಗೆ ಭದ್ರಭಾವ ಕೊಡುತ್ತಿರುತ್ತಾರೆ! ) ನೂರು ಸುಳ್ಳುಹೇಳಿ ಒಂದು ಮದುವೆ ಮಾಡು ಎಂಬ ಗಾದೆ ನೀವು ಕೇಳಿರಬಹುದು – ಪುಣ್ಯ, ಅದೀಗ ಅಷ್ಟಾಗಿ ಬಳಕೆಯಲ್ಲಿಲ್ಲ. ಸುಳ್ಳಿನ ಅಡಿಪಾಯ ಒತ್ತಟ್ಟಿಗೆ ಕುಸಿಯಿತು ಎಂದಾಗ ದಾಂಪತ್ಯದ ಸಮತೋಲನೆಯು ಅಲ್ಲಾಡಿ ಅತೀವ ಅಭದ್ರತೆಯಿಂದ ಹೊಯ್ದಾಡುತ್ತೇವೆ. ಸಂದೇಶನಿಗೂ ಇದರ ಭಯವಿದೆ.

ತತ್ವ-ಮನಃಶಾಸ್ತ್ರಜ್ಞ ಯುಜೀನ್ ಜೆಂಡ್ಲಿನ್ (Eugene Gendlin) ಹೇಳಿದ್ದು ನೆನಪಾಯಿತು: ಸತ್ಯವು ಸದಾ ಸತ್ಯವಾಗಿಯೇ ಇರುತ್ತದೆ. ಅದನ್ನು ಒಪ್ಪಿಕೊಂಡು ಹೊಣೆಹೊತ್ತರೆ ಸಹಿಸಲಾರದ ಅನಾಹುತ ಏನೂ ಆಗುವುದಿಲ್ಲ. ಒಪ್ಪಿಕೊಳ್ಳದಿದ್ದರೆ ಅದು ಮಾಯವಾಗುವುದೂ ಇಲ್ಲ. ಆದರೆ ಸುಳ್ಳಿನೊಂದಿಗೆ ಬದುಕುವುದು ಮಾತ್ರ ಅಸಹನೀಯ ಆಗುತ್ತದೆ. ಸತ್ಯವನ್ನು ಹೊರತಂದರೆ ದುಷ್ಪರಿಣಾಮ ಎದುರಿಸಬೇಕಾದೀತು ಎಂದುಕೊಂಡರೆ, ಅದನ್ನು (ಬಚ್ಚಿಟ್ಟ ಕಾರಣದಿಂದ) ಈಗಾಗಲೇ ಎದುರಿಸುತ್ತ ಇರುತ್ತೇವಲ್ಲವೆ? ಹಾಗಾಗಿ ಸಂದೇಶನ ಸುಳ್ಳನ್ನು ನೇರವಾಗಿ ಎದುರಿಸುವುದು ಸೂಕ್ತ ಎನ್ನಿಸಿತು.

“ಸಂದೇಶ್, ಪಾರ್ಲರ್ ಪ್ರಸಂಗಗಳಿಂದ ಹೊಸ ಸುಖದ ಅರಿವು ಮೂಡಿಸಿಕೊಂಡಿದ್ದೀರಿ. ಕಾಯಿಲೆಯ ಭಯದಿಂದ ಅದನ್ನು ನಿಲ್ಲಿಸಬೇಕಾಯಿತು. ಈಗದನ್ನು ಹೆಂಡತಿಯಿಂದ ಪಡೆಯಲು ಹೊರಟಿದ್ದೀರಿ. ಈಗ, ಪ್ರಸಂಗವನ್ನು ಮುಚ್ಚಿಡುತ್ತ ಅರಿವನ್ನು ಮಾತ್ರ ಹೇಗೆ ಹಂಚಿಕೊಳ್ಳುತ್ತೀರಿ? ಉದಾಹರಣೆಗೆ, ಸಂಭೋಗ ಬೇಡ, ಹಸ್ತಮೈಥುನ ಮಾಡು ಎಂದಂದಾಗ ಆಕೆ ಕೇಳುವ ಮೊದಲ ಪ್ರಶ್ನೆ ಏನು ಗೊತ್ತೆ? “ಇಷ್ಟುದಿನ ಇಲ್ಲದ್ದು ಇದನ್ನು ಎಲ್ಲಿಂದ ಕಲಿತಿರಿ?” ಯಾಕೆಂದರೆ ಆಕೆಯೂ ಹೊಸ ವಿಚಾರವನ್ನು ಸಂದೇಹದಿಂದ ನೋಡುವುದು ಸಹಜ –ಪ್ರಬಲ ಕಾರಣವಿಲ್ಲದೆ ಬದಲಾಗಲು ಆಕೆಗೂ ಮನಸ್ಸು ಬರುವುದಿಲ್ಲ. ಆಗ ಸತ್ಯವನ್ನು ಬಚ್ಚಿಡಲು ಇನ್ನೊಂದು ಕತೆ ಕಟ್ಟಬೇಕಾಗುತ್ತದೆ. ನಾನು ಹಾಗಲ್ಲ ಆದರೂ… ಎನ್ನುತ್ತ ಸಾಚಾತನದ  ಮುಖವಾಡ ಧರಿಸಬೇಕಾಗುತ್ತದೆ. ಎಲ್ಲರೂ ತಮ್ಮೆಲ್ಲ ಭಾವನೆಗಳನ್ನು ಎಗ್ಗಿಲ್ಲದಂತೆ ಹರಿಬಿಡುವುದೇ ಕಾಮಕೂಟದಲ್ಲಿ. ಅಂಥದ್ದರಲ್ಲಿ ನೀವು ಒಳಗೊಂದು ಹೊರಗೊಂದು ಆಗಿ ವರ್ತಿಸಲು ಎಷ್ಟೊಂದು ಮಾನಸಿಕ ಶಕ್ತಿ ಖರ್ಚಾಗುತ್ತದೆ ಗೊತ್ತೆ? ಈ ದ್ವಂದ್ವದಲ್ಲಿ ಅನ್ಯೋನ್ಯತೆ ಇರಲಿ, ಹೊಸ ಲೈಂಗಿಕ ಸಮಸ್ಯೆಗಳು ಹುಟ್ಟಿದರೂ ಆಶ್ಚರ್ಯವಿಲ್ಲ.” ಅವನು ಅರ್ಥಮಾಡಿಕೊಂಡು ಮೌನವಾಗಿದ್ದ.

“ಸಂದೇಶ್, ನಿಮ್ಮ ಶಿಶ್ನದ ಸೋಂಕು, ಅದರಿಂದಾದ ಹಿಂಸೆಯನ್ನು ಸ್ವಲ್ಪಕಾಲ ಪಕ್ಕಕ್ಕಿಡೋಣ. ಪಾರ್ಲರ್ ಅನುಭವವನ್ನು ಅನುಸರಿಸಿ ನಿಮ್ಮನ್ನು ಎರಡು ಭಾಗ ಮಾಡೋಣವಂತೆ – ಅನುಭವ ಪಡೆಯುವುದಕ್ಕೆ ಮುಂಚಿನ ಸಂದೇಶ್, ಹಾಗೂ ಅನುಭವ ಪಡೆದಾದ ನಂತರದ ಸಂದೇಶ್. ಮುಂಚೆ ಹೇಗಿದ್ದಿರಿ? ಪಾರ್ಲರ್‌ನಿಂದ ಪಡೆದ ಅನುಭವವು ದಾಂಪತ್ಯದ ಕೂಟದ ಅನುಭವಕ್ಕಿಂತ ಹೇಗೆ ಭಿನ್ನವಾಗಿತ್ತು? ಅದು ನಿಮ್ಮಲ್ಲಿ ಏನು ಬದಲಾವಣೆ ತಂದಿದೆ? ಅದರಿಂದ ನಿಮ್ಮ ಬಗೆಗೆ ಹೊಸದು ಏನು ಅನ್ನಿಸಿದೆ? ವಿವರಿಸಬಹುದಾ?”

ಸಂದೇಶ ಸುತ್ತುಬಳಸಿ ಹೇಳಿದ್ದಿಷ್ಟು: ಮುಂಚೆ ಅವನಲ್ಲಿ ಸೆಕ್ಸ್ ಎಂದರೆ ಇಷ್ಟೆ ಎನ್ನುವ ನೀರಸಭಾವ ಇತ್ತು. ಅದಕ್ಕೆ ಮೀಸಲಾದ ಸಾಂಗತ್ಯವು ಬೇಸರ ತರಿಸುವಂತೆ ಇತ್ತು. ಇನ್ನು, ಪಾರ್ಲರ್‌ನಲ್ಲಿ ಅವನ ಅನುಭವವು ಪ್ರತಿಸಲವೂ ರೋಚಕವಾಗಿತ್ತು. ಚೈತನ್ಯ ಕೊಡುತ್ತಿತ್ತು. ಒಂದು ಅನುಭವ ಮಾಸಿದಾಗ ಇನ್ನೊಂದು ಅನುಭವವನ್ನು ಪಡೆಯಲು ಕಾತರ ಇರುತ್ತಿತ್ತು.

ನಾನು ಕೇಳಿದೆ: “ ಈಗ ಹೇಳಿ: ಈ ಅನುಭವಗಳು ಮೇಲು-ಕೀಳುತನದ ಅನಿಸಿಕೆ ಕೊಟ್ಟಿವೆಯೆ? ಅಥವಾ ಇದರಿಂದ ದಾಂಪತ್ಯದ ಮೇಲೆ ದುಷ್ಪರಿಣಾಮ ಆಗಬಹುದೇನೋ ಎಂದು ಅನ್ನಿಸಿತ್ತೆ? ” ಅಡ್ಡಡ್ಡ ತಲೆ ಅಲ್ಲಾಡಿಸಿ ಎಲ್ಲವೂ ಚೆನ್ನಾಗಿತ್ತು ಎಂದ. ಒಂದುವೇಳೆ ಸೋಂಕು ಆಗದಿದ್ದರೆ ಮುಂದುವರಿಯುತ್ತಿತ್ತು ಎಂದೂ ಒಪ್ಪಿಕೊಂಡ.

“ಈಗ, ಆ ಸುಖಕೊಡುವ ಪ್ರಸಂಗಗಳನ್ನು ಭಯದಿಂದಲೇ ಆಗಲಿ, ಬಿಟ್ಟುಕೊಟ್ಟಿದ್ದೀರಿ. ಅದನ್ನು ದಾಂಪತ್ಯದಲ್ಲೇ ಹುಡುಕಿಕೊಳ್ಳಲು ಹೊರಟಿದ್ದೀರಿ. ಚೈತನ್ಯ ಕೊಡುವ ನಿಶ್ಚಿತವಾದ ಮೂಲವನ್ನು ಬಿಟ್ಟುಕೊಟ್ಟು, ಅದನ್ನು ಖಾತರಿ ಇಲ್ಲವಾದರೂ ದಾಂಪತ್ಯದಲ್ಲೇ ಹುಡುಕಿಕೊಳ್ಳಲು ಯತ್ನಿಸುತ್ತೇನೆ ಎಂದರೆ ಕೀಳು ಹೇಗಾಗುತ್ತೀರಿ?”

ಸಂದೇಶ ತಬ್ಬಿಬ್ಬಾದ. ನಂತರ ಹೇಳಿಕೊಂಡ. ಹೊರಗಿನ ಸಂಬಂಧವನ್ನು ಕೀಳು ಎಂದು ಹೆಂಡತಿ ಲೆಕ್ಕ ಮಾಡುವುದರಿಂದ ತನಗೂ ಕೀಳು ಎನ್ನಿಸುತ್ತದೆ ಎಂದ. ಅಂದರೆ ಸಂದೇಶನಿಗೆ ಸ್ವಂತಿಕೆಯ ಕೊರತೆಯಿದೆ. “ನಿಮ್ಮ ಬಗೆಗೆ ಹೆಂಡತಿ ಏನೆಂದುಕೊಳ್ಳುತ್ತಾಳೆ ಎನ್ನುವುದು ಮಹತ್ವದ್ದು, ಆದರೆ ನಿಮ್ಮ ಬಗೆಗೆ ನೀವೇ ಏನು ಅಂದುಕೊಳ್ಳುತ್ತೀರಿ ಎನ್ನುವುದು ಅದಕ್ಕಿಂತ ಹೆಚ್ಚು ಮಹತ್ವದ್ದು, ಅಲ್ಲವೆ?” ಅವನು ಒಪ್ಪಿಕೊಂಡ.

ನಾನು ಮುಂದುವರಿಸಿದೆ. “ಕೀಳು-ಮೇಲು ಎಂದು ಭೇದಭಾವಕ್ಕೆ ಒಳಪಡಿಸಿಕೊಳ್ಳುವುದನ್ನು ಬಿಟ್ಟು ಹೀಗೆ ಯೋಚಿಸಿ: ದಾಂಪತ್ಯದಲ್ಲಿ ನನಗೆ ಬೇಕಾದುದು ಸಿಗಲಿಲ್ಲ, ಹಾಗಾಗಿ ಹೊರಗೆ ಹೋಗಿ ಸುಖಪಟ್ಟೆ. ಇದರಿಂದ ನನಗೇನು ಬೇಕು ಎಂಬುದು ಗೊತ್ತಾಗಿದೆ. ಆ ಸುಖಕ್ಕೆ ಹೇಗೆ ತೆರೆದುಕೊಂಡಿದ್ದೇನೆ, ಹಾಗೂ ಅದನ್ನು ದಾಂಪತ್ಯಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು? ಯೋಚಿಸಿ.” ಅವನಿಗೆ ಅರ್ಥವಾಗಲಿಲ್ಲ. ವಿವರಿಸಿದೆ.

“ಪ್ರತಿಯೊಬ್ಬರಿಗೂ ಇರುವಂತೆ ನಿಮಗೂ ಕಾಮಸುಖಕ್ಕೆ ಅರ್ಹತೆಯಿದೆ. ಸುಖ ಹೇಗಿರುತ್ತದೆ ಎಂಬುದರ ಅರಿವೂ ಆಗಿದೆ. ಈಗದನ್ನು ಹೆಂಡತಿಯಿಂದ ಮಾತ್ರ ಪಡೆಯಬೇಕೆಂದು ನಿರ್ಧರಿಸಿದ್ದೀರಿ. ಇದು ಆಗಬೇಕಾದರೆ ಮೊದಲು ನಿಮ್ಮಾಕೆಗೆ ನಿಮ್ಮ ನಿಲುವು ಅರ್ಥವಾಗಬೇಕು. ಅಷ್ಟಲ್ಲದೆ ಆಕೆಯು ಲೈಂಗಿಕ ಸಂಬಂಧವನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕು. ಅದಕ್ಕಾಗಿ ನೀವು ಆಕೆಗೆ ಸಹಾಯ ಮಾಡಬೇಕು. ಒಂದುಕಡೆ ಪಡೆದ ಸುಖವು ಸರಿಯಾಗಿತ್ತು ಎನ್ನುತ್ತಲೇ ಇನ್ನೊಂದು ಕಡೆ ಅದಕ್ಕೆ ಅನುಸರಿಸಿದ ದಾರಿ ಸರಿಯಾಗಿರಲಿಲ್ಲ ಎಂದು ಹಂಚಿಕೊಳ್ಳಬೇಕು. ನಿಮ್ಮ ಈ ತಪ್ಪೊಪ್ಪಿಗೆಯಿಂದ ಮಾತ್ರ ಆಕೆಯ ಅಂತರಂಗದಲ್ಲಿ  ಬದಲಾಗಲು, ಪ್ರೇರಣೆ ಹುಟ್ಟಲು ಸಾಧ್ಯವಿದೆ.”

ಈ ವಿಚಾರ ಸಂದೇಶನಿಗೆ ಹಿಡಿಸಿತು. ಜೊತೆಗೆ ಸಂದೇಹವೂ ಆಯಿತು: ಪರಿಣಾಮ ಇದಕ್ಕೆ ವಿರುದ್ಧವಾದರೆ? ಸಂದೇಶ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೇಗೆ ನೆರವಾದೆ ಎಂದು ಮುಂದಿನ ಸಲ ಹೇಳುತ್ತೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888



ಲೈಂಗಿಕ ಸಂಪರ್ಕವು ಸರಿಯಾಗಿ ನಡೆಯುವ ದಾಂಪತ್ಯದಲ್ಲಿ ಅನ್ಯೋನ್ಯತೆ ತಾನಾಗಿಯೇ ಅರಳುತ್ತದೆ ಎಂಬ ನಂಬಿಕೆ ಸಾರ್ವತ್ರಿಕವಾಗಿದೆ.

183: ಸರಿಯಾದ ಸಂದೇಶ-2

ಸಂದೇಶ ದಾಂಪತ್ಯದೊಳಗಿದ್ದೂ ಒಂಟಿಯಾಗಿದ್ದಾನೆ, ಹಾಗೂ ಅದನ್ನು ಹೊರಗಿನ ಕಾಮತೃಪ್ತಿಯ ಮೂಲಕ ನೀಗಿಸಿಕೊಳ್ಳುತ್ತಿದ್ದಾನೆ. ಈ ವಿಷಯವನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳುವ ಸಲಹೆ ಕೊಟ್ಟಾಗ ಸಂಸಾರ ಒಡೆದೀತು ಎಂಬ ಭಯದಿಂದ ಒಪ್ಪದೆ ಇದ್ದಾನೆ.

ನಾನು ಕೇಳಿದೆ: “ಸಂದೇಶ್, ಸಂಸಾರ ಹೇಗೆ ಒಡೆದುಹೋಗುತ್ತದೆ ಎಂಬುದನ್ನು ವಿವರಿಸುತ್ತೀರಾ?”

ಅವನ ತರ್ಕ ಸರಳವಾಗಿತ್ತು. ಲೈಂಗಿಕ ಸಂಬಂಧಗಳು ನಡೆಯಬೇಕಾದುದು ದಾಂಪತ್ಯದ ಚೌಕಟ್ಟಿನೊಳಗೆ ಮಾತ್ರ. ಚೌಕಟ್ಟು ಮೀರಿದ್ದು ಗೊತ್ತಾದರೆ ಹೆಂಡತಿಯು ಸಹಿಸಲಿಕ್ಕಿಲ್ಲ. ಈಗ ನೀಡುತ್ತಿರುವ ಸುಖಸಂಪರ್ಕವನ್ನೂ ನಿರಾಕರಿಸುತ್ತಾಳೆ. ಸಾಕಾಗದ್ದಕ್ಕೆ ಆಕೆಗೆ ತವರಿನ ಬೆಂಬಲ ಇದೆ. ಎಲ್ಲರೂ ಸೇರಿ ತನ್ನನ್ನು ಹೆಣಹಾಕುತ್ತಾರೆ. ಆಗ ತಾನು ಇನ್ನಷ್ಟು ಒಂಟಿಯಾಗುತ್ತೇನೆ. ಇಷ್ಟೆಲ್ಲ ಜಂಜಾಟದ ಬದಲು ಹೊರಗಿನ ಚಾಳಿಯನ್ನು ನಿಲ್ಲಿಸಿ, ಹೆಂಡತಿಯನ್ನೇ ನಂಬಿಕೊಂಡಿದ್ದು, ಅವಳೊಡನೆ ಬೆರೆಯುತ್ತಿದ್ದರೆ ಕ್ರಮೇಣ ಅನ್ಯೋನ್ಯತೆ ಹುಟ್ಟಬಹುದು. ಒಂದುವೇಳೆ ಅದಾಗದಿದ್ದರೆ, ನನ್ನ ಹಣೆಬರಹ ಎಂದು ಬಂದದ್ದನ್ನು ಒಪ್ಪಿಕೊಳ್ಳುವುದು. ಹೊರಗಂತೂ ಹೋಗುವುದಿಲ್ಲ.

ಸಂದೇಶ ಹೀಗೆ ಯೋಚಿಸುವುದಕ್ಕೆ ಕಾರಣವಿದೆ, ಹಾಗೂ ಅದರಲ್ಲಿ ದೋಷವೂ ಇದೆ. ಎಲ್ಲ ಸಾಂಪ್ರದಾಯಿಕ ದಾಂಪತ್ಯಗಳೂ ಭದ್ರತೆ, ಪರಸ್ಪರ ಅನುಕೂಲತೆ ಹಾಗೂ ಸಂತಾನೋತ್ಪತ್ತಿಗೆ ಹೇಳಿಮಾಡಿಸಿದ್ದೇ ವಿನಾ ಅನ್ಯೋನ್ಯತೆಗಲ್ಲ. ಅದಕ್ಕೆಂದೇ ಸಂಪ್ರದಾಯದಂತೆ ವ್ಯವಸ್ಠೆಗೊಳ್ಳುವ ವಿವಾಹಗಳಲ್ಲಿ ಮೇಲುನೋಟಕ್ಕೆ ಕಾಣುವ ಮನೆತನ, ಶಿಕ್ಷಣ, ನಡವಳಿಕೆ ಮುಂತಾದ ಅರ್ಹತೆಗಳನ್ನು ಆಧರಿಸಿ ಸಂಗಾತಿಯನ್ನು ಆರಿಸಿಕೊಳ್ಳುವ ಪದ್ಧತಿಯಿದೆ –  ಇಂಟರ್ನೆಟ್ ಆಯ್ಕೆಗಳೂ ಇದಕ್ಕೆ ಹೊರತಲ್ಲ. ಆದರೆ ಮದುವೆಗೆ ಮುಂಚೆ ಪರಸ್ಪರ ಹತ್ತಿರವಾಗಲು, ತೆರೆದುಕೊಳ್ಳಲು, ತನ್ಮೂಲಕ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಸಮಾಜದ ಅನುಮತಿ ಅಷ್ಟಾಗಿಲ್ಲ – ಲೈಂಗಿಕ ಸಂಪರ್ಕದ ಅಡ್ಡಪರಿಣಾಮಗಳ ಭಯವೇ ಇದಕ್ಕೆ ಕಾರಣ (“ಅದೆಲ್ಲ ಮದುವೆಯ ನಂತರ”). ಇದೊಂದು ರೀತಿ ಸರಿಯೆ. ಆದರೆ ಇಲ್ಲೂ ಒಂದು ಸಮಸ್ಯೆಯಿದೆ: ಲೈಂಗಿಕ ಸಂಪರ್ಕವೇ ಅಂತಿಮವಾದದ್ದು, ಅದೊಂದು ಸರಿಯಾಗಿ ನಡೆಯುತ್ತಿದ್ದರೆ ಗಂಡುಹೆಣ್ಣಿನ ಸಂಬಂಧ ಭದ್ರವಾದಂತೆ, ಹಾಗೂ ಭದ್ರಸಂಬಂಧದಲ್ಲಿ ನಡೆಯುವ ಲೈಂಗಿಕ ಕ್ರಿಯೆಯ ಮೂಲಕ ಅನ್ಯೋನ್ಯತೆ ತಾನಾಗಿಯೇ ಅರಳುತ್ತದೆ ಎನ್ನುವ ನಂಬಿಕೆ ಇಲ್ಲಿ ಎದ್ದುಕಾಣುತ್ತದೆ. ಆದರೆ ವಾಸ್ತವ ಹಾಗಿಲ್ಲ. ಲೈಂಗಿಕ ಕ್ರಿಯೆಯ ಮೂಲಕ ಅನ್ಯೋನ್ಯತೆ ಹುಟ್ಟುವುದಿಲ್ಲ; ಬದಲಾಗಿ ಅನ್ಯೋನ್ಯತೆ ಇದ್ದರೆ ಸಂಗಾತಿಯೊಡನೆ ಲೈಂಗಿಕ ಕ್ರಿಯೆಗೆ ಮನಸ್ಸಾಗುತ್ತದೆ! (ಹಾಗಾದರೆ ಹೆಚ್ಚಿನ ಸಂಪ್ರದಾಯಸ್ಥ ಸ್ವಸ್ಥ ದಂಪತಿಗಳ ಸಂಬಂಧದಲ್ಲಿ ಏನಿದೆ? ಅದು ನಿರಂತರ ಸಂಪರ್ಕದ ಮೂಲಕ ಅರ್ಥಮಾಡಿಕೊಂಡು ಬರುವ “ನಾನು ನಿನ್ನನ್ನು ಅರಿತಿದ್ದೇನೆ” ಎನ್ನುವ ನಿಕಟಭಾವವೇ (closeness) ಹೊರತು, “ನೀನು ನನ್ನನ್ನು ಅರಿತುಕೊಳ್ಳಲು – ಇಬ್ಬರಿಗೂ ಕಿರಿಕಿರಿಯಾದರೂ ಸರಿ – ನನ್ನೆಲ್ಲ ಅನಿಸಿಕೆಗಳನ್ನೂ ನಿನ್ನೆದುರು ಪ್ರಾಮಾಣಿಕವಾಗಿ ತೆರೆದಿಡುತ್ತೇನೆ” ಎನ್ನುವ ಅನ್ಯೋನ್ಯತೆ (intimacy) ಅಲ್ಲ – ಈ ವಿಚಾರವು ಹೆಚ್ಚಿನ ದಂಪತಿಗಳಿಗೆ ಅಸಮಾಧಾನ ತರಬಹುದೇನೋ? ಇದನ್ನು ಸ್ಪಷ್ಟೀಕರಿಸಲು ಈ ಉದಾಹರಣೆ: ವಯಸ್ಸಾದ ಹೆಂಡತಿಯು ದಿನಾಲೂ ಬೇಗ ಎದ್ದು ಗಂಡನಿಗೆ ಕಾಫಿ ಮಾಡಿಕೊಡುತ್ತಾಳೆ. ಅದನ್ನಾಕೆ ಮನಸ್ಸಿಲ್ಲದಿದ್ದರೂ ಕರ್ತವ್ಯವೆಂದು ತಿಳಿಯುತ್ತಾಳೆ. ಇದನ್ನು ಗಂಡನೊಂದಿಗೆ ಹಂಚಿಕೊಂಡರೆ, ಅವನಿಗೆ ಕಿರಿಕಿರಿಯಾಗಿ ತನ್ನನ್ನು ಮೆಚ್ಚದೆ ಅವಹೇಳನ ಮಾಡಬಹುದು, ಅಥವಾ ಅದು ತನ್ನ ಆಲಸ್ಯತನದ ಹಾಗೂ ಸ್ವಾರ್ಥದ ಲಕ್ಷಣ ಎಂದು ಭಯಪಡುತ್ತಾಳೆ. ಅದಕ್ಕೆಂದೇ ತನಗೆ ವಿಶ್ರಾಂತಿ ಬೇಕೆನಿಸಿದಾಗ, “ರೀ, ನನಗೆ ಮೈಕೈ ನೋವು. ಅದಕ್ಕೆ ಇವೊತ್ತು ನೀವೇ ಕಾಫಿ ಮಾಡಿಕೊಳ್ಳುತ್ತೀರಾ?” ಎಂದು ವಿನಂತಿಸಿಕೊಳ್ಳುತ್ತಾಳೆ – ಹಂಚಿಕೊಳ್ಳುವುದಿಲ್ಲ. ಒಂದುವೇಳೆ ಅನ್ಯೋನ್ಯತೆ ಬೇಕಾಗಿದ್ದರೆ ಆಕೆ, “ನನಗೂ ಬೆಳಗಿನ ಜಾವದ ನಿದ್ರೆಯನ್ನು ಅನುಭವಿಸಲು ಬಹಳ ಇಷ್ಟ” ಎಂದು ಮೃದುವಾಗಿ ಹಂಚಿಕೊಂಡು, ಅವನ ಮನಸ್ಸಿನಲ್ಲಿ “ನನ್ನ ಸುಖಕ್ಕಾಗಿ ನನ್ನವಳಿಗೆ ಕಿರಿಕಿರಿ ಮಾಡುತ್ತಿದ್ದೇನಲ್ಲ, ಇದೆಷ್ಟು ಸರಿ, ಹಾಗೂ ಹೀಗೆ ವರ್ತಿಸುವ ನಾನು ಎಂಥವನು?” ಎಂದು ಆತ್ಮವಿಶ್ಲೇಷಣೆಗೆ ಪ್ರೇರೇಪಿಸಬೇಕು. ಅದು ಅನ್ಯೋನ್ಯತೆ.) ಇದು ಗೊತ್ತಿಲ್ಲದೆ ಗಂಡುಹೆಣ್ಣುಗಳು ಮದುವೆಯಾಗಿ ಕಾಮಜೀವನ ಶುರುಮಾಡುತ್ತ ಅನ್ಯೋನ್ಯತೆಯ ಹುಟ್ಟಿಗಾಗಿ ಕಾಯುತ್ತಾರೆ. ಆದರೆ ಕಾಮದ ಬಯಕೆಯಂತೆ ಅನ್ಯೋನ್ಯತೆಯ ಬಯಕೆಯು ಪ್ರಯತ್ನಪಡದೆ ಸಹಜವಾಗಿ ಬರುವುದಿಲ್ಲ. ಆಗ ಕಾಮಕೂಟವು ಜನನಾಂಗಗಳ ಯಾಂತ್ರಿಕ ಕೂಟವಾಗುತ್ತದೆ. ಮನಸ್ಸುಗಳು ಕೂಡದೆ ನಿರಾಸೆ, ಹತಾಶೆ ಕಾಡುತ್ತದೆ. “ಇದಕ್ಕಿಂತ ಹೆಚ್ಚಿನ ಅನ್ಯೋನ್ಯತೆ ಸಾಧ್ಯವಿಲ್ಲ” ಎಂದು ಸಂಬಂಧವು ಬೆಳೆಯದೆ ಹಾಗೆಯೆ ನಿಂತುಬಿಡುತ್ತದೆ. ಆಗಲೇ ದಾಂಪತ್ಯದ ಬಗೆಗೆ ವ್ಯಂಗ್ಯೋಕ್ತಿಗಳು, ಕುಟುಕುವ ಅವತರಣಿಕೆಗಳು, ನಿರಾಶಾವಾದ, ಭಗ್ನಕಾವ್ಯ, ತತ್ವಜ್ಞಾನ ಹುಟ್ಟುತ್ತವೆ. ವಿವಾಹಬಾಹಿರ ಸಂಬಂಧಗಳಿಗೆ ಹಿನ್ನೆಲೆ ತಯಾರಾಗುತ್ತದೆ. ಸಂದೇಶ ಕೂಡ ಇದಕ್ಕೆ ಹೊರತಾಗಿಲ್ಲ.

ನಾನು ಹೇಳಿದೆ: “ಸಂದೇಶ್, ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವ ನಿಮ್ಮ ವಿಚಾರವನ್ನು ಒಪ್ಪುತ್ತೇನೆ. ಅದಕ್ಕಿಂತ ಮುಂಚೆ ಒಂದು ಪ್ರಶ್ನೆ: ನೀವು ಹೊರಗಿನ ಸುಖಕ್ಕೆ ಕೈಹಾಕಿದ್ದು ಯಾವಾಗ?” ಅವನು ಮೂರು ವರ್ಷಗಳಿಂದ ಎಂದು ಹೇಳಿದ. “ಅಂದರೆ, ಏಳು ವರ್ಷ ಹೆಂಡತಿಯ ಜೊತೆಗೇ ಇದ್ದಿರಿ. ಆಕೆಯನ್ನೇ ನಂಬಿಕೊಂಡಿದ್ದಿರಿ. ಆಕೆಯಿಂದ ಮಾತ್ರ ಕಾಮತೃಪ್ತಿ ಪಡೆಯುತ್ತಿದ್ದಿರಿ. ಆಗ ಅನ್ಯೋನ್ಯತೆ ಎಲ್ಲಿ ಹುಟ್ಟಿತು? ಏಳು ವರ್ಷ ಹುಟ್ಟಲಿಲ್ಲ ಎಂದಾದರೆ ಇನ್ನುಮುಂದೆ ಹುಟ್ಟುವ ಭರವಸೆ ಎಷ್ಟು ಸರಿ? ಒಂದುವೇಳೆ ಅದಾಗದಿದ್ದರೆ ಹಣೆಬರಹ ಎಂದಿರಿ… ನನಗೆ ಅನ್ನಿಸುವ ಪ್ರಕಾರ, ಅನ್ಯೋನ್ಯತೆ ಸಿಗದಿರುವಾಗ ನಿಮಗೆ ಮತ್ತೆ ಹೊರಗಿನ ಸುಖದ ಬಯಕೆ ಆಗಬಹುದು. ಆಗೇನು ಮಾಡುತ್ತೀರಿ? ಈಸಲ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುತ್ತೀರಿ. ಪಾರ್ಲರ್ ಸೆಕ್ಸ್ ಬದಲು ನೀಲಿಚಿತ್ರಗಳು, ಫೋನ್ ಸೆಕ್ಸ್ ಮುಂತಾದ ಸುರಕ್ಷಿತ ದಾರಿಗಳನ್ನು ಹುಡುಕಿಕೊಳ್ಳುತ್ತೀರಿ. ಇಲ್ಲಿ ಅನ್ಯೋನ್ಯತೆ ಎಲ್ಲಿ ಬಂತು, ಏನು ಪ್ರಯೋಜನವಾಯಿತು?” 

ನಾನಾಡಿದ್ದು ಅವನ ತಲೆಯೊಳಗೆ ಬೆರಳುಹಾಕಿ ಕಲಸಿ ಸತ್ಯವನ್ನು ಹೊರತೆಗೆದಂತೆ ಆಗಿತ್ತು. ಅವನ ಮುಖದಲ್ಲಿ ಸಂಕಟ, ಗೊಂದಲ ಎರಡೂ ಕಾಣುತ್ತಿದ್ದುವು. ನಾನು ಮುಂದುವರಿದೆ.

“ಯಾವುದೇ ದಾಂಪತ್ಯದಲ್ಲಿ ಅನ್ಯೋನ್ಯತೆಯು ಕಾಯ್ದುಕೂತರೆ ಬರುವುದಿಲ್ಲ. ಕಟ್ಟಿಕೊಂಡರೆ ಮಾತ್ರ ಬರುತ್ತದೆ. ಅದಕ್ಕಾಗಿ ಇಬ್ಬರೂ ಪ್ರಯತ್ನ ಮಾಡಬೇಕು.” ಸಂದೇಶ ಥಟ್ಟನೆ ಹೇಳಿದ. “ಸರಿ ಹಾಗಾದರೆ ನಾನು ಕಟ್ಟಿಕೊಳ್ಳುವುದಕ್ಕೆ ಇವೊತ್ತೇ ಶುರುಮಾಡುತ್ತೇನೆ. ಹೇಗೆಂತ ಹೇಳಿಕೊಡಿ!” ಎಂದು ನೇರವಾಗಿ ಕುಳಿತ. ನಾನೆಂದ “ಇಬ್ಬರೂ” ಪದ ಅವನ ತಲೆಗೆ ಹೋಗಲಿಲ್ಲವೆಂದು ಕಾಣುತ್ತದೆ.

“ಬಹಳ ಒಳ್ಳೆಯದು, ಹೇಳಿಕೊಡುತ್ತೇನೆ… ಇದರಲ್ಲಿ ಮೊದಲ ಹೆಜ್ಜೆ ಎಂದರೆ ಸಂಗಾತಿಯ ಜೊತೆಗೆ ಬಿಚ್ಚುಮನಸ್ಸಿನ ಮಾತುಕತೆ ನಡೆಸುವುದು. ಅಂದರೆ ನಿಮ್ಮ ಮನದೊಳಗೆ ಅಡಗಿರುವ ಅನಿಸಿಕೆಗಳನ್ನೂ ಭಾವನೆಗಳನ್ನೂ ಇರುವಂತೆಯೇ ಮುಂದಿಡುತ್ತ “ಇದು ನಾನು, ನಾನು ಹೀಗೆ” ಎಂದು ಪ್ರಾಮಾಣಿಕವಾಗಿ ತೆರೆದುಕೊಳ್ಳಬೇಕು – ನಿಮ್ಮಾಕೆಯು ನಿಮ್ಮನ್ನು ಕೀಳಾಗಿ ಕಾಣಬಹುದು ಎಂದೆನಿಸಿದರೂ. ಅಂದರೆ, ನಿಮ್ಮ ಪಾರ್ಲರ್ ಸಂಗತಿಯನ್ನೂ ಹೇಳಿಕೊಳ್ಳುವುದು…” ಎಂದು ಮತ್ತೆ ಮುಂಚಿನ ಮಾತಿಗೇ ಬಂದೆ. ಮತ್ತೆ ಅವನ ಮುಖದಲ್ಲಿ ಪ್ರತಿರೋಧ ಕಂಡಿತು.

ಸಂದೇಶನು ತನ್ನ ಪ್ರತಿರೋಧವನ್ನು ನಿವಾರಿಸಿಕೊಳ್ಳಲು ಹೇಗೆ ನೆರವಾದೆ ಎಂದು ಮುಂದಿನ ಸಲ ಹೇಳುತ್ತೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888



ಹೊರಗಿನಿಂದ ಚಾಳಿ ಇರುವವರು ಅದನ್ನು ನಿಲ್ಲಿಸಿದರೆ ದಾಂಪತ್ಯ ಉದ್ಧಾರವಾಗುತ್ತದೆಯೆ?

182: ಸರಿಯಾದ ಸಂದೇಶ-1

ನಾವೆಲ್ಲರೂ ತಪ್ಪು ಮಾಡುತ್ತೇವೆ. ತಪ್ಪಿನಿಂದ ಬುದ್ಧಿ ಕಲಿಯಬೇಕು ಎಂದುಕೊಳ್ಳುತ್ತೇವೆ. ಆದರೆ ಹೆಚ್ಚಿನವರಿಗೆ ಬುದ್ಧಿ ಕಲಿಯುವ ಮಾರ್ಗೋಪಾಯಗಳು ಗೊತ್ತಿರುವುದಿಲ್ಲ. ಹಾಗಾಗಿ ಹೆಚ್ಚೆಂದರೆ ಮುಂದೆ ತಪ್ಪು ಮಾಡದಂತೆ ಎಚ್ಚರ ವಹಿಸುತ್ತೇವಷ್ಟೆ. ಇದೆಷ್ಟು ಪರಿಣಾಮಕಾರಿ, ಹಾಗೂ ದಾಂಪತ್ಯದ ಸಂಬಂಧಗಳ ಮೇಲೆ ಇದರ ಫಲಶ್ರುತಿ ಏನು ಎಂಬುದಕ್ಕೆ ಸಾಕ್ಷಿಯಾಗಿದೆ ಸಂದೇಶನ ಕಥೆ.

ಸಂದೇಶ (ನಿಜವಾದ ಹೆಸರಲ್ಲ) ಮೂವತ್ತೈದರ ತರುಣ. ಜನನಾಂಗದ ಸೋಂಕು ತಗುಲಿ ಚಿಕಿತ್ಸೆಗಾಗಿ ನನ್ನಲ್ಲಿ ಬಂದಿದ್ದ. ಸೋಂಕು ಹೇಗಾಯಿತು ಎಂದು ವಿಚಾರಿಸಿದಾಗ ವಿವರಿಸಿದ. ಅವನು ಮಸಾಜ್ ಪಾರ್ಲರ್‌ಗೆ ಹೋಗಿದ್ದನಂತೆ. ಅಲ್ಲಿಯ ತರುಣಿ ಮೈಗೆ ಮಸಾಜ್ ಮಾಡುತ್ತ ಅದಕ್ಕೂ ಮಾಡಲೇ ಎಂದು ಕೇಳಿದಳಂತೆ. ಇವನು ಒಪ್ಪಿದ. ಅದಾಗಿ ಎರಡು ವಾರಗಳ ನಂತರ ಶಿಶ್ನಕ್ಕೆ ಸೋಂಕು ತಗುಲಿದ್ದು ಗೊತ್ತಾಗಿದೆ. ಮುಂಚೆ ಯಾವೊತ್ತೂ ಹೀಗಾಗಿರಲಿಲ್ಲ. ಗೂಗಲಿಸಿ, ಎಚ್.ಐ.ವ್ಹಿ. ಅಥವಾ ಮತ್ತೇನಾದರೂ ಲೈಂಗಿಕ ರೋಗ ಇರಬಹುದೆಂದು ಭಯಪಟ್ಟು ನನ್ನಲ್ಲಿ ಧಾವಿಸಿದ್ದಾನೆ.

ಪಾರ್ಲರ್ ತರುಣಿ ಇವನಿಗೆ ಸುಖಕೊಟ್ಟ ರೀತಿಯನ್ನು ವಿಚಾರಿಸಿದೆ. ಆಕೆ ಇವನಿಗೆ ಮುಷ್ಟಿಮೈಥುನ ಮಾಡಿದಳಂತೆ – ಕೈಗವಸು ಧರಿಸದೆ. ಆಗ ಶಿಶ್ನದ ಮುಂದೊಗಲು ಎಳೆದಂತಾಗಿತ್ತೆ ಎಂದು ಕೇಳಿದ್ದಕ್ಕೆ ಹೌದೆಂದ. ಪರೀಕ್ಷೆ ಮಾಡಲಾಗಿ, ಅವನ ಮುಂದೊಗಲು ಮಣಿಯೊಡನೆ ಸೇರುವ ಜಾಗದಲ್ಲಿ ಚರ್ಮ ಹರಿದಂತಾಗಿ ಸೋಂಕು ಆಗಿದ್ದುದು ಕಂಡಿತು. ಅವನಿಗೆ ಆ ಜಾಗವನ್ನು  ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ತಿಳಿಸಿ ಔಷಧಿ ಬರೆದುಕೊಟ್ಟೆ. ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಹೇಳಿ, ವರದಿಯನ್ನು ವಾಟ್ಸಪ್ ಮೂಲಕ ಕಳಿಸಬಹುದು ಎಂದೆ. ಮೂರು ದಿನಗಳ ನಂತರ ಕಳಿಸಿದ ವರದಿಯಲ್ಲಿ ಕಾಯಿಲೆಯ ಗುರುತೇನೂ  ಇರಲಿಲ್ಲ. ಹಾಗಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ ಎಂದು ತಿಳಿಸಿ ಕೈಬಿಟ್ಟೆ.

ಇದಾಗಿ ಎರಡು ವಾರಗಳ ನಂತರ ಸಂದೇಶ ಭೇಟಿಯಾಗಲು ಮತ್ತೆ ಬಂದ. ನನಗೆ ಕುತೂಹಲವಾಯಿತು.  ಸೋಂಕು ಗುಣವಾಗಲಿಲ್ಲವೆ? ಅಥವಾ ಇನ್ನೊಂದು ಸಲ…? ಕಾರಣ ಕೇಳಿದೆ. ಅವನು ನೆಮ್ಮದಿಯಿಂದ ಹೇಳಿದ: “ನಿಮ್ಮ ಚಿಕಿತ್ಸೆಯಿಂದ ಚರ್ಮದ ಸೋಂಕು ಪೂರ್ತಿ ಗುಣವಾಗಿದೆ. ಒಮ್ಮೆ ಭೇಟಿಯಾಗಿ ಕೃತಜ್ಞತೆ ಸಲ್ಲಿಸೋಣ ಎಂದು ಬಂದೆ.” ಅದನ್ನು ಫೋನ್ ಮೂಲಕ ತಿಳಿಸಿದ್ದರೆ ಸಾಕಿತ್ತಲ್ಲ ಎಂದಾಗ, “ರಿಪೋರ್ಟ್ ಪ್ರತ್ಯಕ್ಷವಾಗಿ ತೋರಿಸಿ ಖಾತರಿ ಮಾಡಿಕೊಳ್ಳಬೇಕಿತ್ತು…” ಎನ್ನುತ್ತ ವರದಿಯನ್ನು ನನ್ನೆದುರು ಹರವಿದ. ಇಲ್ಲಿ ವೈದ್ಯಕೀಯ ಕಾರಣವಿರದೆ, ಮರಳಿದ ನೆಮ್ಮದಿಯನ್ನು ನಂಬಿಕಸ್ಥರ ಜೊತೆಗೆ ಹಂಚಿಕೊಂಡು ಹಗುರವಾಗಬೇಕು ಎನ್ನುವ ಸಹಜ ಬಯಕೆ ಎದ್ದುಕಾಣುತ್ತಿತ್ತು. “ಸರಿ, ನಿಮ್ಮ ಚರ್ಮದಲ್ಲೂ  ರಕ್ತದಲ್ಲೂ ಕಾಯಿಲೆಯ ಚಿಹ್ನೆಗಳಿಲ್ಲ. ಎಲ್ಲವೂ ಗುಣವಾಗಿದೆ ಎಂದಾಯಿತಲ್ಲ, ಹೇಗನ್ನಿಸುತ್ತಿದೆ? ಮುಂದೇನು?…” ಎಂದು ಮಾತು ತೇಲಿಬಿಟ್ಟೆ. ನನ್ನ ಅಭಿಪ್ರಾಯವನ್ನು ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಂಡ ನಂತರ ಅವನು ಕೊಟ್ಟ ಉತ್ತರವು ನಾನು ನೆಟ್ಟಗೆ ಕುಳಿತುಕೊಂಡು ಗಮನಿಸುವಂತೆ ಮಾಡಿತು.

“ಮುಂದೆ ಇನ್ನೆಂದೂ ಇಂಥ ತಪ್ಪು ಮಾಡುವುದಿಲ್ಲ!” ಅಪಘಾತವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡ ಭಾವದಲ್ಲಿ ಸಂದೇಶ ನಿಟ್ಟುಸಿರಿಟ್ಟ. “ಈ ಎರಡು ವಾರ ಬೆಂಕಿಯ ಮೇಲೆ ಕಾಲಿಟ್ಟಂತೆ ಒದ್ದಾಡುತ್ತಿದ್ದೆ. ಇನ್ನೊಂದು ಸಲ ಇಂಥದ್ದಕ್ಕೆ ಕೈಹಾಕುವುದಿಲ್ಲ! ಸುಖಪಟ್ಟರೆ ಹೆಂಡತಿಯ ಜೊತೆಗೇ.”

ಅವನ ನಿಟ್ಟುಸಿರು ಅರ್ಥವಾಯಿತು. ಜೊತೆಗೆ ಅವನ ಇತಿಮಿತಿಯೂ ಅರ್ಥವಾಯಿತು. “ಅಂದರೆ ಹೊರಗಿನ ಹವ್ಯಾಸವನ್ನು ನಿಲ್ಲಿಸುವ ನಿಮ್ಮ ನಿರ್ಧಾರವು ಕಾಯಿಲೆಯ  ಭಯದಿಂದ ಹುಟ್ಟಿತು. ಚರ್ಮದ ಸೋಂಕು ಆಗದಿದ್ದರೆ ಪಾರ್ಲರ್ ಅಭ್ಯಾಸವನ್ನು ಮುಂದುವರಿಸುತ್ತಿರಿ, ಅಲ್ಲವೆ?” ಅವನು ಅಪ್ರತಿಭನಾಗಿ ತಲೆ ಅಲ್ಲಾಡಿಸಿದ.

ಇವನಲ್ಲೇನು ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟೆ.  ಲೈಂಗಿಕ ಬಯಕೆ ಸಹಜ. ಅದನ್ನು ತೀರಿಸಿಕೊಳ್ಳಲು ತನಗೆ ಸಿಕ್ಕ ಹಾದಿಯೊಂದನ್ನು ಹಿಡಿದಿದ್ದಾನೆ. ಈ ಹಾದಿಯಲ್ಲಿ ಕಾಯಿಲೆಯ ಭಯ ಎದುರಾದಾಗ ಬಿಟ್ಟುಕೊಟ್ಟು, ಹೆಂಡತಿಯಿಂದ ಮಾತ್ರ ತೀರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾನೆ. ಇವನಿಗೆ ಬೇಕಾದುದು ಹೆಂಡತಿಯಿಂದ ಸಿಗುವಷ್ಟು ಸರಳವಾಗಿದ್ದರೆ ಹೊರಗಿನ ಸಂಪರ್ಕದ ಅಗತ್ಯವಾದರೂ ಏನಿತ್ತು? ಇಲ್ಲಿ, “ನನಗೆ ಬೇಕಾಗಿರುವುದು ನನ್ನ ದಾಂಪತ್ಯದಲ್ಲಿ ಸಿಗುವುದಿಲ್ಲ” ಎನ್ನುವ ಅನಿಸಿಕೆ ಬಲವಾಗಿದೆ. ದಾಂಪತ್ಯದಲ್ಲಿ ಸಿಗದ ಸುಖವನ್ನು ಹೊರಗಿನಿಂದ ಪಡೆದುಕೊಳ್ಳುವುದು ಸೂಕ್ತ ಅಲ್ಲವಾದರೂ ಸಹಜವಾದದ್ದು ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ.  ಪ್ರಕೃತಿ ಸಹಜವಾದ ಕಾಮದಾಸೆಯ ಪೂರೈಕೆಗೆ ಮಾನವರಿಂದ ರೂಪುಗೊಂಡ “ದಾಂಪತ್ಯ” ಎನ್ನುವ ವ್ಯವಸ್ಥೆಯು ಅಸಹಜ ಆಗುತ್ತದೆ. ಯಾಕೆ? ದಾಂಪತ್ಯ ಮಾಡುವುದು ಸಹಜವಾಗಿ ಬರುವುದಿಲ್ಲ! ಹಾಗಾಗಿ ಅದನ್ನು ಪ್ರಯತ್ನಪಟ್ಟು ಕಲಿಯಬೇಕಾಗುತ್ತದೆ. ಹೀಗಿರುವಾಗ ಸಂದೇಶನು ಕಾಮಕ್ಕಾಗಿ ದಾಂಪತ್ಯದ ಗೆರೆ ದಾಟುವುದಿಲ್ಲ ಎನ್ನುತ್ತಿರುವುದು ಅಸಹಜತೆಯಿಂದ ಪ್ರೇರಿತ ನಿರ್ಧಾರವೆನಿಸಿತು.  ಇದೆಷ್ಟು ಗಟ್ಟಿಯಾಗಿದೆ, ಎಷ್ಟುದಿನ ಉಳಿದೀತು ಎಂದು ಹೇಳಲಾಗದು. ಹಾಗಾದರೆ, ಹೊರಗಿನ ಸುಖವನ್ನು ಹುಡುಕಿಕೊಂಡು ಹೋಗುವ ನಿರ್ಧಾರಕ್ಕೆ ಕಾರಣವಾದ ಗಂಡಹೆಂಡಿರ ಬಾಂಧವ್ಯ ಹೇಗಿದೆ? ಇದರ ಬಗೆಗೆ ಸಂದೇಶ ಒಂದು ರಾಶಿ ಹೇಳಿದ.

ಇವನದು ಹೆತ್ತವರು ನಿಶ್ಚಯಿಸಿದ ವಿವಾಹ. ಹುಡುಗಿಯನ್ನು ಮೆಚ್ಚಲು ಇವನಲ್ಲಿ ನಿರ್ದಿಷ್ಟ ಕಾರಣಗಳಿರಲಿಲ್ಲ. ಇತರರು ಮೆಚ್ಚಿದ್ದಾರೆ, ಹಾಗಾಗಿ ತನಗೂ ಮೆಚ್ಚುಗೆಯಾಗಬಹುದು ಎಂದು ಒಪ್ಪಿದ. ಹೆಂಡತಿ ಜಗಳಗಂಟಿ ಏನಲ್ಲ, ತನ್ನಷ್ಟಕ್ಕೆ ತಾನಿರುತ್ತಾಳೆ. ಆದರೆ ಇವನ ಮನಸ್ಸನ್ನು ಯಾವೊತ್ತೂ ಮುಟ್ಟಿಲ್ಲ. ಸಾಲದ್ದಕ್ಕೆ ಆಕೆಗೆ ಸ್ವಚ್ಛತೆಯ, ಒಪ್ಪ-ಓರಣದ ಗೀಳಿದೆ. ಯಾವಾಗಲೂ ಅದರಲ್ಲೇ ತೊಡಗಿರುತ್ತ, ಮಗನ ಮೇಲೂ ಗಂಡನ ಮೇಲೂ ಹೇರುತ್ತ ಇರುತ್ತಾಳೆ. ಇಬ್ಬರ ನಡುವೆ ಪ್ರೇಮಸಲ್ಲಾಪ ಒತ್ತಟ್ಟಿಗಿರಲಿ, ಸ್ವಾರಸ್ಯಕರ ಮಾತುಕತೆಯೇ ನಡೆದದ್ದಿಲ್ಲ. ಎಲ್ಲರ ಮನೆಗಳಲ್ಲಿ ಅಡುಗೆ-ಊಟದ ನೆಪದಲ್ಲಿ ಗಂಡಹೆಂಡಿರ ನಡುವೆ ಒಂದುರೀತಿಯ ಸಂಪರ್ಕ ನಡೆಯುತ್ತದೆ. ಇವರಲ್ಲಿ ಅದೂ ಇಲ್ಲ – ಮೂರೂ ಹೊತ್ತಿನ ಊಟವು ಎರಡು ಬೀದಿಯಾಚೆ ಇರುವ ಆಕೆಯ ತಾಯಿಯ ಮನೆಯಿಂದ ಬರುತ್ತದೆ! ಹಾಗಾಗಿ ಹೆಂಡತಿಯೊಂದಿಗೆ ಆಪ್ತಭಾವವನ್ನು ಕಟ್ಟಿಕೊಳ್ಳಲಾಗದೆ ಸಂಬಂಧವು ವ್ಯವಹಾರ ಮಾತ್ರವಾಗಿ ಉಳಿದಿದೆ. ಲೈಂಗಿಕ ಕ್ರಿಯೆಯೇನೋ ಆಗಾಗ ನಡೆಯುತ್ತಿದೆ – ಆದರೆ ಯಾಂತ್ರಿಕವಾಗಿ. ಅಂದಹಾಗೆ, ಪಾರ್ಲರ್ ಘಟನೆಯ ನಂತರ ಶಿಶ್ನದ ಸೋಂಕು ಕಾಣಿಸಿಕೊಳ್ಳುವ ಮುಂಚೆ ಹೆಂಡತಿಯ ಜೊತೆಗೂ ಸಂಭೋಗ ಮಾಡಿದ್ದಾನೆ – ಕಾಂಡೋಮ್ ಉಪಯೋಗಿಸದೆ.

ಸಂದೇಶನ ಅಂತರಂಗದ ಅರಿವಾಯಿತು. ಇವನು ದಾಂಪತ್ಯದೊಳಗೆ ಒಂಟಿಯಾಗಿದ್ದಾನೆ. ಒಂಟಿತನವನ್ನು ಹೊರಗಿನಿಂದ ನೀಗಿಸಿಕೊಳ್ಳುತ್ತಿದ್ದಾನೆ. ಕಾಮತೃಪ್ತಿಯೇ ಏಕೆಂದರೆ, ಒಂಟಿತನ ಕಾಡುವಾಗ ಶರೀರವು ನಡೆಸುವ ಕಾಮಕ್ರಿಯೆಯು ಆಕ್ಸಿಟೋಸಿನ್, ಎಂಡಾರ್ಫಿನ್ ಇತ್ಯಾದಿಗಳನ್ನು ಬಿಡುಗಡೆ ಮಾಡುವುದರಿಂದ ಮನಸ್ಸು ಹಗುರವಾಗಿ ಮುದಗೊಳ್ಳುತ್ತದೆ. ವಿಷಯ ಹೀಗಿರುವಾಗ ಸಂದೇಶ ಹೊರಗಿನ ಸಂಪರ್ಕವನ್ನು ನಿಲ್ಲಿಸಿದರೆ ದಾಂಪತ್ಯದಲ್ಲಿ ಸಿಗದಿರುವುದು ಮತ್ತೆ ಹಪಹಪಿಯಾಗಿ ಕಾಡುವುದು ಖಂಡಿತ. ಆಗ ಕಾಯಿಲೆಯಿಂದ ಸುರಕ್ಷಿತವಾದ ಇಂಟರ್ನೆಟ್ ಕಾಮ, ಫೋನ್ ಸೆಕ್ಸ್  ಮುಂತಾದವುಗಳನ್ನು ಆರಿಸಿಕೊಳ್ಳಬಹುದು. ಏನು ಪ್ರಯೋಜನವಾಯಿತು?

ಥಟ್ಟನೆ ಏನೋ ಹೊಳೆದು ಹೇಳಿದೆ:  “ಸಂದೇಶ್, ನಿಮ್ಮ ಪಾರ್ಲರ್ ಘಟನೆಯನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳಬಲ್ಲಿರಾ?”

ನನ್ನ ಅನಿರೀಕ್ಷಿತ ಪ್ರಶ್ನೆಗೆ ಅವನು ಬೆಚ್ಚಿಬಿದ್ದ.  ಕಣ್ಣಗಲಿಸಿ, ಬಾಯಿ ತೆರೆದು ಉದ್ಗರಿಸಿದ: “ಏನು ಹೇಳ್ತಿದ್ದೀರಿ ಸಾರ್? ನನ್ನ ಸಂಸಾರ ಒಡೆದು ಹೋಗುತ್ತದಷ್ಟೆ!”

ಮುಂದೇನಾಯಿತು ಎಂಬುದನ್ನು ಮುಂದಿನ ಸಲ ಹೇಳುತ್ತೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888



ಕಾಮಕೂಟದಲ್ಲಿ ತೃಪ್ತಿಪಡಿಸುವುದಕ್ಕಿಂತ ವ್ಯಕ್ತಪಡಿಸುವುದು ಹೆಚ್ಚು ಮಹತ್ವದ್ದು!

             177: ಮಿಲನದಲ್ಲಿ ಬಯಲಾಗುವುದು

ಸಂಗಾತಿಗಳು ಕಾಮಕೂಟದಲ್ಲಿ ಅರ್ಥಭರಿತ ಮೌನ ಸಂವಾದದ ಮೂಲಕ ತಮ್ಮ ಭಾವನೆಗಳನ್ನೂ ಸ್ವಭಾವವನ್ನೂ ಹೊರಗೆಡುಹುತ್ತಾರೆ. ಆದರೆ ಮುಕ್ತವಾಗಿ ಮಾತಾಡದೆ ಆತ್ಮವಂಚನೆ ಮಾಡಿಕೊಳ್ಳುತ್ತಾರೆ ಎಂದು ಕಂಡುಕೊಂಡೆವು.

ಲೈಂಗಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಂದವರಿಗೆ ನಾನು ಸಾಮಾನ್ಯವಾಗಿ ಒಂದು ಪ್ರಶ್ನೆ ಕೇಳುತ್ತೇನೆ: “ಕಾಮಕೂಟದ ನಡೆಯುವಾಗ ನಿಮ್ಮ ಅಂತರಾಳದಲ್ಲಿ  ಏನು ನಡೆಯುತ್ತಿರುತ್ತದೆ?” ಇದಕ್ಕೆ ಉತ್ತರ ಅಷ್ಟು ಸುಲಭವಲ್ಲ. ಅದಕ್ಕೆಂದು ವಿವರಿಸುತ್ತಿದ್ದೇನೆ – ಇದು ನಿಮಗೂ ಅನ್ವಯವಾಗಬಹುದು.

 ನೀವು ಸಂಗಾತಿಯ ಜೊತೆಗೆ ಕಾಮಕೂಟಕ್ಕೆ ಮನಸ್ಸು ಮಾಡಿದ್ದೀರಿ ಎಂದುಕೊಳ್ಳಿ. ಎಲ್ಲಿಂದ ಶುರುಮಾಡುತ್ತೀರಿ? ಯಾವ ರೀತಿ ಶುರುಮಾಡುತ್ತೀರಿ? ನಿಮ್ಮ ಕೈಗಳು ಎಲ್ಲಿರುತ್ತವೆ, ಹಾಗೂ ಏನು ಮಾಡುತ್ತ ಇರುತ್ತವೆ? ಸಂಗಾತಿಯ ಮುಖವನ್ನು ಸ್ಪರ್ಶಿಸುತ್ತೀರಾ? ಮುಖಸ್ಪರ್ಶದಲ್ಲಿ ಜಾದೂ ಏನೂ ಇಲ್ಲ; ಆದರೆ ಹೇಗೆ ಸ್ಪರ್ಶಿಸುತ್ತೀರಿ, ಯಾವ ಭಾವವನ್ನು ತೋರ್ಪಡಿಸುತ್ತೀರಿ ಎನ್ನುವುದರಲ್ಲೇ  ವೈಶಿಷ್ಟ್ಯ ಇದೆ. ಉದಾಹರಣೆಗೆ, ಯಾವೊತ್ತಾದರೂ ಸಂಗಾತಿಯ ಮುಖವನ್ನು ಸ್ಪರ್ಶಿಸುತ್ತಿರುವಾಗ ಅವರು ಕಣ್ಣುಮುಚ್ಚಿ ಅನುಭವಿಸುತ್ತಿದ್ದು, ನಂತರ, ಅದೊಂದು ಅದ್ಭುತ ಅನುಭವ ಎಂದು ಹಂಚಿಕೊಂಡದ್ದು ಇದೆಯೆ? ಸ್ಪರ್ಶದ ಮಾತು ಇತರ ಅಂಗಗಳಿಗೂ ಅನ್ವಯಿಸುತ್ತದೆ. ಕೈಗಳು, ತುಟಿಗಳು, ಸ್ತನ, ಕಿಬ್ಬೊಟ್ಟೆ, ಬೆನ್ನು, ಜನನಾಂಗ, ಪ್ರಷ್ಠ, ತೊಡೆಗಳು… ಯಾವುದೇ ಅಂಗವನ್ನು ಸ್ಪರ್ಶಿಸುವುದರಲ್ಲಿ ವಿಶೇಷವಿಲ್ಲ, ಆದರೆ ಅದನ್ನು ಹೇಗೆ ನಡೆಸುತ್ತೀರಿ ಎನ್ನುವುದರಿಂದ  ಚಮತ್ಕಾರವನ್ನೇ ಸೃಷ್ಟಿಸಬಹುದು. ಹೇಗೆ? ಸಂಗಾತಿ ಮೆಚ್ಚುವಂತೆ ಮಾಡುತ್ತೀರಿ ಎಂಬುದು ಸರಿಯೆ, ಆದರೆ ಸ್ಪರ್ಶದ ಮೂಲಕ “ಇದು ನಾನು, ನಾನು ಹೀಗೆ” ಎಂದು ನಿಮ್ಮನ್ನು ನೀವು ಹೇಗೆ ತೋರ್ಪಡಿಸುತ್ತ ಬಯಲಾಗುತ್ತೀರಿ ಎನ್ನುವುದೇ ಅತ್ಯಂತ ಮಹತ್ವದ್ದು. ಕಾಮಶಾಸ್ತ್ರದ ಬಗೆಗೆ ಅನೇಕ ಪುಸ್ತಕಗಳು ಹೊರಬಂದಿದ್ದು,  ಬಹುತೇಕ ಎಲ್ಲವುಗಳೂ “ಸಂಗಾತಿಯನ್ನು ಹೇಗೆ ತೃಪ್ತಿಪಡಿಸಬೇಕು”  ಎನ್ನುವುದಕ್ಕೆಂದೇ ಬರೆದಂತಿದ್ದು,  ಹೀಗೆ ಮಾಡಿ-ಮಾಡಬೇಡಿ ಎನ್ನುವ ಪಟ್ಟಿಯನ್ನು ಮುಂದಿಡುತ್ತವೆ. ಪ್ರಶ್ನೆ ಏನೆಂದರೆ, “ನಾನು ಹೀಗೆ” ಎಂಬುದನ್ನು ಮುಚ್ಚಿಟ್ಟು “ನಿನಗೆ ಸುಖ ಸಿಕ್ಕರೆ ಸಾಕು, ನನ್ನನ್ನು ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ” ಎನ್ನುವುದರಲ್ಲಿ ಅರ್ಥವಿದೆಯೆ? ಸಂಗಾತಿಯನ್ನು ಮೆಚ್ಚಿಸುವುದಕ್ಕಿಂತ ನಿಮ್ಮ ಅಸ್ಮಿತೆಯನ್ನು (identity) ಬಯಲಿಗೆ ತರುವುದು ಬಲುಮುಖ್ಯ ಎಂಬುದನ್ನು ಹೇಳಿದ ಡೇವಿಡ್ ಸ್ನಾರ್ಷ್‌ಗೆ ಯಾರೂ ಸಾಟಿಯಿಲ್ಲ. ಯಾಕೆಂದರೆ, ನೀವು ಸಂಗಾತಿಯ ಒಡನಾಟದಲ್ಲಿ ಎಷ್ಟು ತೆರೆದುಕೊಳ್ಳುತ್ತೀರೋ ಅಷ್ಟೊಂದು ಅವರಿಗೆ – ಹಾಗೂ ನಿಮಗೆ ನೀವೇ – ಅರ್ಥವಾಗುತ್ತೀರಿ. ಅನ್ಯೋನ್ಯತೆ ಬೆಳೆಸಿಕೊಳ್ಳುವ ರೀತಿಯೇ ಇದು!

ಆದರೆ ಕೂಟದಲ್ಲಿ ಸಂಗಾತಿಗೆ ತನ್ನನ್ನು ತಾನು ಪ್ರಾಮಾಣಿಕವಾಗಿ ತೋರ್ಪಡಿಸುವುದು ಹೆಚ್ಚಿನವರಿಗೆ ದೊಡ್ಡ ಸವಾಲು. ಉದಾಹರಣೆಗೆ, ಮುತ್ತು ಕೊಡುವಂಥ ಸರಳಾತಿಸರಳ ವಿಷಯವನ್ನೇ ತೆಗೆದುಕೊಳ್ಳಿ. (ಮುತ್ತಿನ ಬಗೆಗೆ ಮುಂಚೆ ಹೇಳಿದ್ದೆ: ಕಂತು ೧೭೧ ನೋಡಿ). ಬದ್ಧಸಂಗಾತಿಗೆ ಯಾವ ರೀತಿ ಮುತ್ತುಕೊಡುತ್ತೀರಿ ಎನ್ನುವುದು ನಿಮ್ಮ ಬಗೆಗೆ ಸಾಕಷ್ಟು ತಿಳಿಸುತ್ತದೆ – ಹಾಗೆಯೇ ಮುತ್ತು ತಪ್ಪಿಸಿಕೊಳ್ಳುವುದೂ ಕೂಡ. ಉದಾ. ಒಬ್ಬಳು ತನ್ನ ಪ್ರೇಮಿಯೊಡನೆ ಅಧರಗಳ ಬೆಸುಗೆಯನ್ನು ಎಷ್ಟು ಹೊತ್ತಾದರೂ ಅನುಭವಿಸುತ್ತಾಳೆ; ಆದರೆ ಅವನ ನಾಲಿಗೆ ತನ್ನ ಬಾಯೊಳಗೆ ಹೋಗದಿರಲಿ ಎಂದು ಹಲ್ಲು ಕಚ್ಚಿಕೊಂಡಿರುತ್ತಾಳೆ – ಇದನ್ನು ದಾಟಿ ನಿನಗೆ ಪ್ರವೇಶವಿಲ್ಲ ಎನ್ನುವಂತೆ.  ಕೆಲವರು “ಹಳೆಯ” ದಂಪತಿಗಳು ಕೂಟವನ್ನು ಮುಂದುವರಿಸಿದರೂ ಕ್ರಮೇಣ ಮುತ್ತು ನಿಲ್ಲಿಸಿಬಿಡುತ್ತಾರೆ – ನಿನ್ನೊಡನೆ ಮುಖಾಮುಖಿ ಆಗಲಾರೆ ಎನ್ನುವಂತೆ. ಇಲ್ಲೊಬ್ಬನು ಹೆಂಡತಿ ಮುತ್ತು ಕೊಡಲು ಬಂದರೆ ಅದನ್ನು ತಳ್ಳಿಹಾಕುತ್ತ ಆಕೆಯ ಬಟ್ಟೆಯೊಳಗೆ ಸೇರಲು ನೋಡುತ್ತಾನೆ – ನಿನ್ನಿಂದ ಸುಖ ಬೇಕು, ಆದರೆ ಬಾಂಧವ್ಯ ಬೇಡ ಎನ್ನುವಂತೆ. ಇಂಥವರಲ್ಲಿ ಸಂಭೋಗ ನಡೆಯುತ್ತಿದ್ದರೂ ಬಗೆಹರಿಸಲಾಗದೆ ಮೂಲೆಗೆ ತಳ್ಳಿದ ಸಮಸ್ಯೆಗಳು ರಾಶಿಯಾಗಿದ್ದರೆ ಆಶ್ಚರ್ಯವಿಲ್ಲ.

ಕೆಲವರಿಗೆ ದೀರ್ಘ ಚುಂಬನವು ಸಮಸ್ಯೆಯಾಗಿ ಕಾಡುತ್ತದೆ. ತುಟಿಗಳ ಮಿಲನದಲ್ಲಿ ಹೆಚ್ಚುಹೊತ್ತು ತೊಡಗಿರಲು ಇವರಿಗಾಗದು. ಹಾಗಾಗಿ, ಒಂದೋ ಆತುರದಿಂದ ಮುತ್ತು ಮುರಿಯುತ್ತ “ಮುಂದಿನದಕ್ಕೆ” ಧಾವಿಸುತ್ತಾರೆ;  ಅಥವಾ ನಡುವೆಯೇ ಇಷ್ಟು ಸಾಕೆಂದು ವಿಮುಖರಾಗುತ್ತಾರೆ.  ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ದೀರ್ಘ ಚುಂಬನ ಯಾಕೆ ಸುಲಭವಲ್ಲ ಎಂದರೆ, ನಿಮ್ಮ ಗಮನವನ್ನು ಒಂದೇ ಕಡೆ ಬಹುಕಾಲ ಕೇಂದ್ರೀಕರಿಸಬೇಕಾಗುತ್ತದೆ. ಅದಕ್ಕಾಗಿ ಮೊದಲು ಮನಸ್ಸನ್ನು ತೆರೆದುಕೊಳ್ಳಬೇಕಾಗುತ್ತದೆ. ಸಂಗಾತಿಯನ್ನು ನಿಮ್ಮೊಳಗೆ ಬರಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮೇರೆಗಳ ಅತಿಕ್ರಮಣವಾಗಲು ಒಪ್ಪಬೇಕಾಗುತ್ತದೆ. ಒಬ್ಬರ ಮೇಲುಗೈಗೆ ಇನ್ನೊಬ್ಬರು ಶರಣಾಗಬೇಕಾಗುತ್ತದೆ. ಪ್ರಜ್ಞಾವಂತರಿಗೆ ಇದೆಲ್ಲ ರೋಚಕವಾದರೂ ಸಾಮಾನ್ಯರಿಗೆ ಸುಲಭವಲ್ಲ. ಯಾಕೆಂದರೆ, ಪರರ ಆಕ್ರಮಣದಿಂದ (ಅಥವಾ ಪ್ರಭಾವದಿಂದ) ಕಾಪಾಡಿಕೊಳ್ಳುವುದು ನಮ್ಮ ಜೀವವಾಹಿಗಳಲ್ಲಿ ಲಕ್ಷಾಂತರ ವರ್ಷಗಳಿಂದ ಹಾಸುಹೊಕ್ಕಾಗಿದೆ. ಈ “ಎರಗು ಅಥವಾ ತೊಲಗು” ಎನ್ನುವ ಪ್ರತಿಕ್ರಿಯೆಯು (flight or fight response) ನಿಶ್ಚಿತವಾದುದನ್ನೇ ಬೇಡುತ್ತದೆ. ಅನಿಶ್ಚಿತತೆಯ ಆಚೆಗಿರುವ ಸುಖವನ್ನು ಹುಡುಕಲು ಅವಕಾಶ ಕೊಡುವುದಿಲ್ಲ (ಸುಖ, ಸುರಕ್ಷಿತತೆ, ಅನಿಶ್ಚಿತತೆಗಳ ಬಗೆಗೆ ಇನ್ನೊಂದು ಸಲ ಮಾತಾಡೋಣ). ಸಂಗಾತಿ ಮೈಚಳಿ ಬಿಟ್ಟು ಮುಂದುವರಿದರೆ ಮನಸ್ಸು ಎಚ್ಚರಿಕೆಯಿಂದ ಗಮನಿಸುತ್ತ, ಮುಂಬರುವ ಅನಿಶ್ಚಿತತೆಯನ್ನು ಎದುರಿಸಲು ಅಥವಾ ತಪ್ಪಿಸಿಕೊಳ್ಳಲು ತಂತ್ರ ಹೂಡುತ್ತದೆ. ಇದು ಮುತ್ತಿನಲ್ಲಷ್ಟೇ ಅಲ್ಲ, ಕೂಟದ ಯಾವುದೇ ಸಂದರ್ಭದಲ್ಲೂ ಆಗುವ ಸಂಭವವಿದೆ.  ಅನಿಶ್ಚಿತತೆಯನ್ನು ಎದುರು ಹಾಕಿಕೊಳ್ಳಲು ಇಷ್ಟಪಡದವರು ಸರಳವಾದ ಎರಡು ನಿಮಿಷದ ಕಾರ್ಯಕ್ರಮದಲ್ಲೇ ಅಲ್ಪತೃಪ್ತರಾಗುತ್ತಾರೆ. ಈ ದೃಷ್ಟಾಂತ ನೋಡಿ: ಇವಳು ಮದುವೆಯ ಮೊದಲ ರಾತ್ರಿಯಿಂದಲೇ  ಪ್ರತಿದಿನ ಸಂಭೋಗ ಬೇಕೆಂದು ಒತ್ತಾಯ ಮಾಡಿದ್ದಾಳೆ. ಆದರೆ ಮುತ್ತು ಎಂದರೆ ಆಗದು. ಯಾವೊತ್ತೂ ಪೂರ್ತಿ ನಗ್ನಳಾಗಿಲ್ಲ. ಸಂಭೋಗದಲ್ಲಿ ವೀರ್ಯಸ್ಖಲನದ ನಂತರ ಗಂಡನನ್ನು ದೂರತಳ್ಳುತ್ತ ಬಚ್ಚಲಿಗೆ ಧಾವಿಸುತ್ತಾಳೆ. ಬಸಿರಾದ ನಂತರ ಕೂಟದಿಂದ ದೂರವಿದ್ದಾಳೆ.  ಮಗುವಾದ ನಂತರ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಗಂಡನನ್ನು ಹತ್ತಿರ ಬಿಟ್ಟುಕೊಳ್ಳದೆ ಗಂಡನಿಗೆ ಪ್ರಶ್ನೆಯಾಗಿದ್ದಾಳೆ. ಪ್ರೇಮಕಾಮದ ವಿಷಯದಲ್ಲಿ ಪ್ರಾಮಾಣಿಕವಾಗಿ ತೆರೆದುಕೊಳ್ಳಲು ಆಗದಿದ್ದರೆ ದಾಂಪತ್ಯ ಶಿಥಿಲವಾಗುತ್ತದೆ.

ಸಂಗಾತಿಯೊಡನೆ ತೆರೆದುಕೊಳ್ಳುವುದನ್ನು ಕಲಿಯುವುದು ಹೇಗೆ? ಅದಕ್ಕಾಗಿ ಈ ಪ್ರಯೋಗ ಮಾಡಿ:

ಸಂಗಾತಿಯೊಡನೆ ತುಟಿಗಳಿಗೆ ತುಟಿಗಳನ್ನು  ಸೇರಿಸಿ ನಿಧಾನವಾಗಿ, ಆಳವಾಗಿ ಮುತ್ತುಕೊಡುವುದರಲ್ಲಿ ತೊಡಗಿಕೊಳ್ಳಿ. ಕಣ್ಣುಗಳು ಮುಚ್ಚಿಕೊಂಡಿದ್ದು, ಗಮನವು ಸಂಗಾತಿಯ ಕಡೆಗಿರದೆ ನಿಮ್ಮ ಎದೆಯಾಳದೊಳಗೆ ಇರಲಿ… ಈಗ, ಬರುವ ಸ್ಪರ್ಶವನ್ನು ಸ್ವೀಕರಿಸುತ್ತ ನಿಮ್ಮ ಅಂತರಂಗವನ್ನು ಅನ್ವೇಷಿಸಿ. ನಿಮ್ಮೊಳಗೆ ಏನೇನು ಅನಿಸಿಕೆಗಳು, ವಿಚಾರಗಳು ಬರುತ್ತಿವೆ? ಏನೇನು ಭಾವನೆಗಳು ಹುಟ್ಟುತ್ತಿವೆ? ಏನು ಅನುಭವ ಆಗುತ್ತಿದೆ? ಒಟ್ಟಾರೆ ಗಮನವನ್ನು ನಿಮ್ಮ ಕಡೆಗೇ  ಕೇಂದ್ರೀಕರಿಸಿ. ನಿಮ್ಮಲ್ಲೊಬ್ಬರು ಮುತ್ತಿನಿಂದ ಬೇರ್ಪಟ್ಟಾಗ ಎಷ್ಟು ಸಮಯ ಕಳೆದಿರಿ ಎಂದು ನೋಡಿ. ಐದು ಸೆಕೆಂಡ್ ಒಳಗೆ ಬೇರ್ಪಟ್ಟರೆ ಬೇರ್ಪಡುವ ಮುಂಚೆ ನಿಮ್ಮೊಳಗೆ ಯಾವ ಭಾವವಿತ್ತು ಎಂದು ಯೋಚಿಸಿ. ಈಗ ಮತ್ತೆ ಶುರುಮಾಡಿ, ಮುಂಚಿಗಿಂತ ಹೆಚ್ಚುಹೊತ್ತು ಒಳಗೊಳ್ಳಲು ಪ್ರಯತ್ನಿಸಿ. ಕಸಿವಿಸಿ ಎನಿಸಿದರೂ, ಮನಸ್ಸು ಎಲ್ಲೆಲ್ಲೋ ಅಲೆದರೂ ಬಿಡದೆ ಮುಂದುವರಿಸಿ. ಎರಡು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಮುತ್ತಿನಲ್ಲಿ ತೊಡಗಿದ ನಂತರ ನಿಮ್ಮ ಅನುಭವವನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.

ಉಚಿತ ಸಹಾಯವಾಣಿಗೆ ಸಂಪರ್ಕಿಸಿ: 8494944888.



ಲೈಂಗಿಕ ಸಮಸ್ಯೆಗಳು ಅಂತರಾಳದಿಂದ ಹುಟ್ಟಿದ್ದರೆ ಸಲಹೆ ಸೂಚನೆಗಳು ಕೆಲಸ ಕೊಡುವುದಿಲ್ಲ!

             178: ಕಾಮಸಂಬಂಧಕ್ಕೆ ಮರುಜೀವ

ಮಿಲನದಲ್ಲಿ ತನ್ನನ್ನು ತಾನು ತೆರೆದುಕೊಂಡು ಬಯಲಾಗದಿದ್ದರೆ ತನಗೆ ತಾನೇ ಅರ್ಥವಾಗದೆ ಅನ್ಯೋನ್ಯತೆಯ ಬೆಳವಣಿಗೆಗೆ ಅವಕಾಶ ಆಗುವುದಿಲ್ಲ ಎಂದು ಹೋದಸಲ ತಿಳಿದುಕೊಂಡೆವು.

ವಯಸ್ಸಾದಂತೆ ಸವೆಯುತ್ತಿರುವ ಕಾಮಸಂಬಂಧಕ್ಕೆ ಜೀವಂತಿಕೆಯನ್ನು ತುಂಬುವುದು ಹೇಗೆ ಎಂದು ಹದಿನಾರು ಕಂತುಗಳಿಂದ ಬರೆಯುತ್ತಿದ್ದೇನೆ. ಇದರ ಬಗೆಗೆ ಓದುಗರಾದ ನಿಮ್ಮ ತಲೆಯಲ್ಲಿ ಏನು ನಡೆಯುತ್ತಿರಬಹುದು ಎಂದು ಯೋಚಿಸುತ್ತಿದ್ದೆ. ಕೆಲವರು, “ವಾಹ್, ಎಂಥ ಅದ್ಭುತ ಅನುಭವ!” ಎಂದು ಬೆರಗುಪಟ್ಟರೆ, ಇನ್ನು ಕೆಲವರು “ಐದು ನಿಮಿಷದ ಕಾರ್ಯಕ್ಕೆ ಇಷ್ಟೆಲ್ಲ ತೊಂದರೆ ತೆಗೆದುಕೊಳ್ಳಬೇಕೆ?” ಎಂದು ತಾತ್ಸಾರ ತೋರಿಸುತ್ತಿಬಹುದು. ಹಲವರು “ಇದೆಲ್ಲ ನಮ್ಮ ಕೈಯಲ್ಲಿ ಆಗುವುದಿಲ್ಲ” ಎಂದು ಹಿಂಜರಿದರೆ ಇನ್ನು ಹಲವರು, “ನೀವು ಹೇಳುವುದೆಲ್ಲ ಸರಿ, ಆದರೆ ಸಂಗಾತಿಯ ಜೊತೆಗೆ ಅನ್ವಯಿಸಿಕೊಳ್ಳುವುದು ಹೇಗೆ?” ಎಂದು ಗೊಂದಲದಲ್ಲಿರಬಹುದು, ಅಥವಾ, “ನಮ್ಮ ದಾಂಪತ್ಯದ ವಿಷಯ ನಿಮಗೆ ಗೊತ್ತಿಲ್ಲ ಬಿಡಿ!” ಎಂದು ಸಾರಾಸಗಟಾಗಿ ತಳ್ಳಿಹಾಕಬಹುದು. ಒಬ್ಬರಂತೂ, “ಸೆಕ್ಸ್ ಎಂದರೆ ಎಷ್ಟು ಕಾಂಪ್ಲಿಕೇಟ್ ಮಾಡ್ತೀರಾ, ಅದರಲ್ಲಂತೂ ನಿಮ್ಮ ಕನ್ನಡ ನಮಗೆ ಕಷ್ಟ. ಇದನ್ನು ಬಿಟ್ಟು ಸುಲಭದ ದಾರಿಯಿಲ್ಲವೆ? ಮುಂಚೆಯೆಲ್ಲ ಎಷ್ಟು ಸರಳವಾಗಿ ಬರೆಯುತ್ತಿದ್ದಿರಿ!” ಎಂದು ನೇರವಾಗೇ ಕೇಳಿದ್ದಾರೆ!

ಹೌದು, ಲೈಂಗಿಕ ಸಮಸ್ಯೆಯಿಂದ ಸುಖಕ್ಕೆ ಸುಲಭವಾದ ಹಾದಿಯನ್ನು “ಸುಖೀಭವ”ದ ಮೂಲಕ ದಶಕಕ್ಕೂ ಹೆಚ್ಚು ಕಾಲ ವಿವರಿಸಿದ್ದೆ. ಮೂಢ ನಂಬಿಕೆಗಳಿಂದ ಮೊದಲು ಮಾಡಿಕೊಂಡು ಲೈಂಗಿಕ ಶಿಕ್ಷಣ, ಮನೋಲೈಂಗಿಕ, ಪಾರಸ್ಪರಿಕ ಹಾಗೂ ಸಮಾಜ-ಲೈಂಗಿಕ ವಿಷಯಗಳ ಬಗೆಗೆ ಸರಳವಾಗಿ ವಿವರಿಸುತ್ತ ನೀವು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೆ. ಆಗ ನಿಮ್ಮ ಸ್ಪಂದನೆಯೂ ಮನಸ್ಸಿಗೆ ತಟ್ಟುವಂತಿತ್ತು. ಆದರೆ “ಸುಖೀಭವ”ದ ಮಾಹಿತಿಗೆ ಮಿತಿಯಿತ್ತು: ಅದೆಲ್ಲ ಹೆಚ್ಚಿನಂಶ ಜನನಾಂಗಗಳ ಸುಖಕ್ಕೆ ಸಂಬಂಧಪಟ್ಟಿದ್ದು, ಪ್ರಾಥಮಿಕ ಜ್ಞಾನದಂತೆ ಅರ್ಥಮಾಡಿಕೊಳ್ಳಲು ಸುಲಭವಾಗಿತ್ತು. ಆದರೆ ಈಗಿನ ವಿಷಯವೇ ಬೇರೆ. ಇದು ಜನನಾಂಗಗಳ ಹಿಂದಿರುವ ವ್ಯಕ್ತಿಗಳ ಪ್ರಜ್ಞಾವಂತಿಕೆಯ ಬಗೆಗೆ, ಕಾಮಸುಖದ ಆಚೆಯ ಅನ್ಯೋನ್ಯತೆಯ ಬಗೆಗೆ. ಇದೊಂದು ಉಚ್ಚ ಶಿಕ್ಷಣದ ಅಧ್ಯಯನದಂತೆ. ಹೀಗಾಗಿ ಅನೇಕರಿಗೆ ಕಬ್ಬಿಣದ ಕಡಲೆಯಾಗಿ ಬೇಸರ ತರಿಸುವುದು ನನಗೆ ಅರ್ಥವಾಗುತ್ತಿದೆ – ಚಂದಮಾಮ ಓದಿ ಖುಷಿಪಡುವವರಿಗೆ ವೈಚಾರಿಕ ಲೇಖನಗಳನ್ನು ಕೊಟ್ಟಂತೆ!

ವಾಸ್ತವ ಏನೆಂದರೆ, ದಾಂಪತ್ಯದ ಕಾಮಸಂಬಂಧವು ಮಗುವಿನಂತೆ. ಚಿಕ್ಕದಿರುವಾಗ ಮುದ್ದಾಗಿರುತ್ತದೆ ಎಂದು ಹಾಗೆಯೆ ಉಳಿಸಿಕೊಳ್ಳಲು ಆಗುವುದಿಲ್ಲ. ಮಗು ಬೆಳೆದು ಪ್ರಬುದ್ಧವಾಗುವಂತೆ ಕಾಮಸಂಬಂಧವೂ ನಮಗಿಷ್ಟ ಇರಲಿ ಇಲ್ಲದಿರಲಿ, ತನ್ನಷ್ಟಕ್ಕೆ ಬೆಳೆಯುತ್ತದೆ, ಬದಲಾಗುತ್ತದೆ. ಇದನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಆದರೆ ಬದಲಾವಣೆ ಯಾವ ದಿಕ್ಕಿನಲ್ಲಿ ಮತ್ತು ಏನು ಆಗಬೇಕು ಎನ್ನುವುದು ನಮ್ಮ ಕೈಯಲ್ಲಿದೆ. ಇಲ್ಲವಾದರೆ ದುಷ್ಪರಿಣಾಮ ಖಂಡಿತ. ಇದನ್ನು ಅರ್ಥಮಾಡಿಕೊಳ್ಳಲು ಒಂದು ದೃಷ್ಟಾಂತ:

ಕಲೀಮನಿಗೆ (ನಿಜವಾದ ಹೆಸರಲ್ಲ) ಮೂವತ್ತೇಳು ವರ್ಷ. ಮದುವೆಯಾಗಿ ಹತ್ತು ವರ್ಷದ ಮಗ ಇದ್ದಾನೆ. ಸಮಸ್ಯೆ ಏನೆಂದರೆ ತನ್ನ ಶಿಶ್ನ ಚಿಕ್ಕದು, ಸರಿಯಾಗಿ ಗಡಸಾಗುವುದಿಲ್ಲ, ಹೆಂಡತಿಯನ್ನು ತೃಪ್ತಿಪಡಿಸಲು ಆಗುತ್ತಿಲ್ಲ ಎಂದು ಗೀಳು ಹಚ್ಚಿಕೊಂಡಿದ್ದಾನೆ. ತಜ್ಞರ ಪರೀಕ್ಷೆಗಳು, ಮಾತ್ರೆಗಳು, ಶಿಶ್ನಕ್ಕೆ ಇಂಜಕ್ಷನ್ ಆದರೂ ಸುಧಾರಣೆಯಿಲ್ಲ. ಪರಿಣಾಮವಾಗಿ ಖಿನ್ನತೆಯಾಗಿ ಮನೋವೈದ್ಯರಿಂದ ಮಾತ್ರೆ ಸೇವಿಸಿ, ಅದೂ ಬೇಸರವಾಗಿ ನಿಲ್ಲಿಸಿದ್ದಾನೆ. ಬರಬರುತ್ತ ಕಾಮಾಸಕ್ತಿ ಕುಂದುತ್ತಿದೆ. ಅವನ ಹೆಂಡತಿಯನ್ನು ವಿಚಾರಿಸಲಾಗಿ ತನಗೆ ಅತ್ಯಂತ ತೃಪ್ತಿಯಿದೆ ಎಂದೂ, ಗಂಡ ಚಿಂತಿಸುವುದೇ ತನ್ನ ಚಿಂತೆಯೆಂದೂ ಸ್ಪಷ್ಟವಾಗಿ ಹೇಳಿದ್ದಾಳೆ. ಆದರೂ ಕಲೀಮ ಸರಿಹೋಗಿಲ್ಲ.

ದಂಪತಿಯ ಕಾಮಕೂಟ ಹೇಗಿದೆ? ಕಲೀಮ ಹೆಂಡತಿಗೆ ಮುಖಮೈಥುನದಿಂದ ಶುರುಮಾಡುತ್ತಾನೆ. ಇನ್ನೇನು ತುತ್ತತುದಿ ಮುಟ್ಟುತ್ತಿದ್ದಾಳೆ ಎನ್ನುವಾಗ ಆಕೆಯ ಮೈಮೇಲೇರಿ ನಾಲ್ಕೈದು ಸಲ ಚಲಿಸುತ್ತಾನೆ. ಇಬ್ಬರಿಗೂ ತೃಪ್ತಿಯಾಗುತ್ತದೆ. ಹಾಗಾದರೆ ಸಮಸ್ಯೆ ಎಲ್ಲಿದೆ? ಶಿಶ್ನದ ಘರ್ಷಣೆಯಿಂದಲೇ ತೃಪ್ತಿಕೊಡುವ ಒತ್ತಾಸೆ ಅವನದು. ಸುಮಾರು ಶೇ. 70ರಷ್ಟು ಹೆಂಗಸರು ಶಿಶ್ನದ ಘರ್ಷಣೆಯ ಮೂಲಕ ತೃಪ್ತಿ ಹೊಂದಲಾರರು, ಹಾಗಾಗಿ ಭಗಾಂಕುರದ ಸ್ಪರ್ಶ ಬೇಕೇಬೇಕು ಎಂದುದಕ್ಕೆ ಅವನ ಉತ್ತರ ಏನು? “ಅದು ನನಗೂ ಗೊತ್ತು. ಆಕೆಗೆ ತೃಪ್ತಿಯಾದರೂ ಆಕೆಗೆ ತೃಪ್ತಿ ಕೊಟ್ಟದ್ದಕ್ಕೆ ನನಗೆ ತೃಪ್ತಿಯಾಗುವುದಿಲ್ಲ. ಹಾಗಾಗಿ ಹೆಚ್ಚಿನ ತೃಪ್ತಿ ಕೊಡುತ್ತ ಅದನ್ನು ಸ್ವೀಕರಿಸಲು ಒತ್ತಾಯಿಸುತ್ತೇನೆ.” ಆಕೆ ಬೇಡವೆಂದಾಗ ತಿರಸ್ಕೃತನಾಗಿ ಒಂಟಿಯಾಗುತ್ತಾನೆ. ಖಿನ್ನತೆ ಆವರಿಸಿಕೊಳ್ಳುತ್ತದೆ. ಸಂಬಂಧದಲ್ಲಿ ಅರ್ಥವಿಲ್ಲದಾಗಿ ಬದುಕುವ ಬಯಕೆ ಕಮರುತ್ತಿದೆ.

ಪ್ರತಿಯೊಬ್ಬರು ಕಾಮಕೂಟದಲ್ಲಿ ತೋರುವ ವರ್ತನೆಗೂ ಅವರ ವ್ಯಕ್ತಿತ್ವಕ್ಕೂ ನಿಕಟ ಸಂಬಂಧವಿದೆ ಎಂದು ಹೇಳುತ್ತಿದ್ದೆ ಅಲ್ಲವೆ? ಇದು ಕಲೀಮನಲ್ಲೂ ಕಾಣುತ್ತದೆ. ಅವನು ಕೂಡುಕುಟುಂಬದಲ್ಲಿ ಹನ್ನೆರಡರಲ್ಲಿ ಒಬ್ಬನಾಗಿ ಇದ್ದಾನೆ. ಮೂವರು ಸೋದರರಲ್ಲಿ ನಡುವಿನವನು. ಅಪ್ಪನನ್ನು ಹಿಡಿದು ಯಾರೂ ಇವನನ್ನು ಈಗಲೂ ಮಾತಾಡಿಸುವುದಿಲ್ಲ. ತಾನು ಯಾರೆಂದು ಗುರುತಿಸಲ್ಪಡದೆ ಗುಂಪಿನಲ್ಲಿ ಕಳೆದುಹೋದ ಅನಾಥನಂತೆ ಬೆಳೆದಿದ್ದಾನೆ. ಇವನಿಗೆ ಪ್ರೀತಿ ತೋರಿಸಿದ್ದು ಅಜ್ಜಿ ಮಾತ್ರ. ಆಕೆಯ ಜೊತೆಗೆ ಆತನ ಹರಟೆ, ಹಂಚಿಕೊಳ್ಳುವುದು ಎಲ್ಲ ನಡೆಯುತ್ತ ಆತನ ಆತ್ಮಗೌರವ ಹುಟ್ಟಿದೆ. ದುರದೃಷ್ಟಕ್ಕೆ ಇವನಿಗೆ ಮಗುವಾದ ನಂತರ ಆಕೆ ತೀರಿಕೊಂಡಿದ್ದಾಳೆ. ಅದರೊಂದಿಗೆ ಅವನ ಪ್ರೀತಿಯ ಸೆಲೆಯೂ ಬತ್ತಿ ಖಾಲಿತನ ಉಂಟಾಗಿದೆ. ಅದನ್ನು ಭರ್ತಿ ಮಾಡಬೇಕಾದವಳು ಹೆಂಡತಿ ಒಬ್ಬಳೇ. ಅವಳಿಂದ ಪಡೆದುಕೊಳ್ಳಲು ಏನಾದರೂ ಕೊಡಬೇಕಲ್ಲವೆ? ಅದಕ್ಕಾಗಿಯೇ ದೊಡ್ಡ ಶಿಶ್ನ, ಹೆಚ್ಚಿನ ಕಾಮಕ್ಷಮತೆಯನ್ನು ಬಯಸುತ್ತಿದ್ದಾನೆ. ಕಾಮಕೂಟದಲ್ಲಿ ಹೆಂಡತಿಯನ್ನು ಮೆಚ್ಚಿಸಿ ಬದುಕಲು ಅರ್ಹತೆಯನ್ನು ಪಡೆಯುವ ಹವಣಿಕೆ. ವಿಚಿತ್ರವೆಂದರೆ, ಅಜ್ಜಿ ತೀರಿಕೊಂಡ ನಂತರವೇ ಅವನ ಲೈಂಗಿಕ ಸಮಸ್ಯೆ ಹುಟ್ಟಿದೆ.

ಕಲೀಮನ ಅಂತರಾಳದ ಪ್ರಕ್ರಿಯೆಯನ್ನು ನೋಡೋಣ: ಲೈಂಗಿಕತೆಯು ಇಡೀ ವ್ಯಕ್ತಿತ್ವದ ಭಾಗ ಎಂದು ಹೇಳುತ್ತಿದ್ದೆನಲ್ಲವೆ? ಇಲ್ಲಿ ಶಿಶ್ನವು ಅವನ ವ್ಯಕ್ತಿತ್ವದ ಸಂಕೇತ. ಅವನಿಗಿರುವ ವ್ಯಕ್ತಿತ್ವಕ್ಕೆ ಮಹತ್ವವಿಲ್ಲ; ಹಾಗೆಯೇ ಅವನಿಗಿರುವ ಶಿಶ್ನವೂ ಲೆಕ್ಕಕ್ಕಿಲ್ಲ. ತಾನು ಕ್ಷುಲ್ಲಕ ಎಂದು ನಂಬಿರುವಂತೆ ತನ್ನ ಶಿಶ್ನವೂ ಕ್ಷುಲ್ಲಕ ಎಂದು ನಂಬಿದ್ದಾನೆ.

ಶಿಶ್ನವನ್ನು ದೊಡ್ಡದು ಮಾಡಲು ಉಪಾಯವಿಲ್ಲ, ಅದಕ್ಕೇನು ಮಾಡಬಲ್ಲ ಎಂದು ಕೇಳಿದಾಗ ಅವನ ಉತ್ತರ ಯಾರನ್ನೂ ಬೆಚ್ಚಿಬೀಳಿಸುವಂತಿದೆ: ಮಗ ದೊಡ್ಡವನಾಗುವ ತನಕ ಕಾಯುವುದು, ನಂತರ ತನ್ನ ಬದುಕನ್ನು ಕೊನೆಗೊಳಿಸುವುದು! ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವವರ ಪೈಕಿ ಇಂಥವರು ಎಷ್ಟಿದ್ದಾರೋ?

ಈಗ ಹೇಳಿ: ಕಲೀಮನಂಥ ವ್ಯಕ್ತಿತ್ವ ಉಳ್ಳವರಿಗೆ ಕಾಮಕೂಟದ ವಿಶೇಷ ಕೌಶಲ್ಯಗಳನ್ನು (ಉದಾ. ಉದ್ರೇಕಿಸುವ ವಿಧಾನ, ವಿಶೇಷ ಆಸನಗಳು, ಸ್ಖಲನ ಮುಂದೂಡುವ ಕ್ರಮ) ಹೇಳಿಕೊಟ್ಟರೆ ಉಪಯೋಗವಿದೆಯೆ? ಹೌದಾದರೆ “ಸುಖೀಭವ”ದ ನಂತರ ಇನ್ನೊಂದು ಸಲ ಬರವಣಿಗೆಯನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ.

ಹಾಗಾದರೆ ಪರಿಹಾರ? ಲೈಂಗಿಕ ಸಮಸ್ಯೆಯು ಅಂತರಾಳದಿಂದ ಬಂದಿರುವವರ ಸ್ವಂತಿಕೆಯನ್ನು ಬಡಿದೆಬ್ಬಿಸಿ, ವ್ಯಕ್ತಿತ್ವವನ್ನು ಸಬಲಗೊಳಿಸಬೇಕು. ಆಗ ಮಾತ್ರ ಅವರು ಕಾಮಕ್ರಿಯೆಯಲ್ಲಿ ಮರುಜೀವ ತುಂಬಬಲ್ಲರು. ಇರುವ ಜನನಾಂಗಗಳನ್ನು ಸಮರ್ಪಕವಾಗಿ ಉಪಯೋಗಿಸುತ್ತ ಸಂಗಾತಿಯೊಡನೆ ಹೆಚ್ಚಿನ ಸ್ತರದಲ್ಲಿ ಅನ್ಯೋನ್ಯತೆಯನ್ನು ಸಾಧಿಸಬಲ್ಲರು. ಇದೇ ಲೈಂಗಿಕತೆಯ ಪುನರುಜ್ಜೀವನ. ಇದೇ ನನ್ನ ಲೇಖನಮಾಲೆಯ ಉದ್ದೇಶ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888



ಪ್ರಣಯಕೂಟದಲ್ಲಿ ಸಂವಹನ ಎಲ್ಲಿಂದ ಶುರುವಾಗುತ್ತದೆ?

171: ಕಾಮಕ್ರಿಯೆಗೆ ಪ್ರಸ್ತಾಪ

ಸಂಗಾತಿಗಳ ನಡುವೆ ನಡೆಯುವ ಸಂವಹನ ಎಷ್ಟು ಮಹತ್ವದ್ದು ಎಂದು ಹೋದಸಲ ಕಂಡುಕೊಂಡೆವು. ಈ ಸಲ ಸಂವಹನದಿಂದ ಶುರುಮಾಡೋಣ. ಕಾಮಕೂಟವನ್ನು ಬಯಸುವವರು ತಮಗೆ ಹೇಗೆ ಬೇಕೆಂದು ತಿಳಿಸುವ ಬಗೆ ಹೇಗೆ?

ಕಾಮೇಚ್ಛೆಯ ಬಗೆಗೆ ಪ್ರಾಮಾಣಿಕವಾಗಿ ಹೇಳಿಕೊಳ್ಳುವುದು ಅಂದುಕೊಂಡಷ್ಟು ಸುಲಭವಾಗಿಲ್ಲ. ನನ್ನ ಊಟ ಹೀಗಿರಬೇಕು ಎಂದು ಹೇಳುವಷ್ಟು ಆರಾಮವಾಗಿ ನಮ್ಮ ಕೂಟ ಹೀಗಿರಬೇಕು ಎಂದು ಹೇಳಲಾರೆವು – ಬಾಳ ಸಂಗಾತಿಯೊಂದಿಗೂ! ಯಾಕೆ? ಬಾಲ್ಯದಿಂದ ರೂಢಿಸಿಕೊಂಡು ಬಂದ ನಂಬಿಕೆಗಳು ನಮ್ಮನ್ನು ಕಟ್ಟಿಹಾಕಿವೆ. ನಂಬುವುದಿಲ್ಲವೆ? ಕಾಮಕೂಟವು ನಡೆಯುತ್ತಿಲ್ಲವೆಂದು ಹೇಳಿಕೊಂಡು ನನ್ನನ್ನು ಭೇಟಿಮಾಡಿದ ದಂಪತಿಗಳು ಪ್ರಸ್ತಾಪಿಸುವ ನಮೂನೆಗಳನ್ನು ನೋಡಿ:

  • “ಅತ್ತೆ ಹೇಳುತ್ತಿದ್ದರು, ನಮಗಿನ್ನೂ ಯಾಕೆ ಮಗುವಾಗಿಲ್ಲ ಅಂತ.” (ಸ್ವಂತಿಕೆಯ ತೀವ್ರ ಕೊರತೆ)
  • “ನನ್ನ ಸ್ನೇಹಿತ/ತೆ ದಿನಾಲೂ ಸುಖಿಸುತ್ತೇನೆಂದು ಹೇಳುತ್ತಾನೆ/ಳೆ.” (ಸಂಗಾತಿಯ ಅವಹೇಳನ)
  •  “ಇನ್ನೊಬ್ಬರನ್ನು ಮದುವೆಯಾಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿದ್ದೆ.” (ಕೀಳರಿಮೆ, ತಕರಾರು)
  • “ಸೆಕ್ಸ್ ಬೇಡವೆಂದರೆ ಮದುವೆ ಯಾಕೆ ಆಗಬೇಕಾಗಿತ್ತು?” (ದೋಷಾರೋಪಣೆ)
  • “ಸೆಕ್ಸ್ ಇಲ್ಲದಿದ್ದರೆ ನಿನ್ನನ್ನು ಬಿಡಬೇಕಾಗುತ್ತದೆ.” (ಹಕ್ಕುಸಾಧನೆ)

ಇವುಗಳಲ್ಲಿ ಯಾವುದೂ ತಪ್ಪಲ್ಲ ಎನ್ನುವುದು ಸರಿಯೆನ್ನುವಷ್ಟೇ ಇದಾವುದೂ ಕೆಲಸ ಮಾಡುವುದಿಲ್ಲ ಎನ್ನುವುದೂ ಅಷ್ಟೇ ಸರಿ! ಯಾಕೆ? ಇವು ನಿರುತ್ಸಾಹದಿಂದ ಕೂಡಿದ್ದು ಸಂಗಾತಿಯನ್ನು ಕೆಣಕುವಂತಿವೆ. ಇದರ ನಿರ್ವಹಣೆ ಹೇಗೆ ಎಂದು ನೋಡೋಣ:

ಪ್ರಸ್ತಾಪವು ನೇರ ಹಾಗೂ ಪ್ರಾಮಾಣಿಕ ಆಗಿರಲಿ: ನಿಮ್ಮ ಪ್ರಸ್ತಾಪವು ನೇರವಾಗಿದ್ದು ಸ್ಪಷ್ಟವಾಗಿರಲಿ. ಪ್ರಾಮಾಣಿಕವಾಗಿದ್ದು ಸದ್ಭಾವನೆಯಿಂದ ತುಂಬಿರಲಿ. ಮನದಾಳದಿಂದ ಬಂದಿದ್ದು ಸಂಗಾತಿಯ ಮನಕ್ಕೆ ಮುಟ್ಟುವಂತಿರಲಿ. ಸ್ವಂತದ ಬಯಕೆಯ ಪೂರೈಕೆಯಲ್ಲದೆ ಸಂಗಾತಿಯ ಸಖ್ಯವನ್ನೂ ಬಯಸುವಂತಿರಲಿ. ಉದಾ. ಕಾರಣಾಂತರದಿಂದ ಇವರಲ್ಲಿ ಕಾಮಕೂಟ ನಿಂತುಹೋಗಿತ್ತು. ಇದರ ಬಗೆಗೆ ಮಾತಾಡಬೇಕು ಎಂದಿದ್ದರೂ ಸಂಗಾತಿಯು ತಿರಸ್ಕರಿಸುವ ಸಂಭವವನ್ನು ನೆನೆಸಿಕೊಂಡು “ಸಂಗಾತಿಗೇ ಬೇಡವಾದರೆ ನನಗೇಕೆ?” ಎಂದು ಇಬ್ಬರೂ ಸುಮ್ಮನಿದ್ದರು. ಕೆಲವೊಮ್ಮೆ ಮಾತೆತ್ತಿದ್ದರೂ ಬೆಚ್ಚಗಿನ ಸಂವಹನ ಇರದೆ ಕೇವಲ ಮಾಹಿತಿಯ ರವಾನೆ ಆಗಿತ್ತು. ಆಗ, “ಹೌದು, ನನಗೂ ಬೇಕು. ಪ್ರಯತ್ನಿಸುತ್ತಿದ್ದೇನೆ, ಆದರೆ ಆಗುತ್ತಿಲ್ಲ. ನೋಡೋಣ.” ಎನ್ನುವ ಅಳುಕಿನ ಅನಿಶ್ಚಿತ ಉತ್ತರ ಸಿಕ್ಕಿತ್ತು. ಕೊನೆಗೊಮ್ಮೆ ಹೆಂಡತಿ ಹೀಗೆಂದಳು: “ನಮ್ಮಿಬ್ಬರ ನಡುವೆ ನನ್ನ ಬಯಕೆಯಂತೆ ಕಾಮಕೂಟ ನಡೆಯುತ್ತಿಲ್ಲ. ಇದರಿಂದ ನನಗೆ ವ್ಯಥೆಯಾಗಿದೆ (ತೃಪ್ತಿ ಆಗುತ್ತಿಲ್ಲ ಎನ್ನಲಿಲ್ಲ). ನಮ್ಮ ಬಾಂಧವ್ಯ ಕರಗುತ್ತಿದೆ ಎನ್ನಿಸುತ್ತದೆ. ನನಗೆ ನಿನ್ನ ಜೊತೆಗೇ ಸುಖಿಸಬೇಕು ಎಂದಾಸೆ. ಇತ್ತೀಚೆಗೆ ಬೇರೆಯವರ ಮೇಲೆ ಮನಸ್ಸು ಬರುತ್ತ ಅದರ ಬಗೆಗೆ ಭಯವಾಗುತ್ತಿದೆ (ಇಲ್ಲಿ ಪ್ರಾಮಾಣಿಕತೆ ಇದೆ). ಇದು ನನ್ನ ಶರೀರದ ಬಯಕೆಯ ಪ್ರಶ್ನೆಯಷ್ಟೇ ಅಲ್ಲ, ನಮ್ಮಿಬ್ಬರ ಸಾಂಗತ್ಯದ ಪ್ರಶ್ನೆ. ಯಾಕೆಂದರೆ ನನಗೆ ನಿನ್ನ ಶರೀರವಷ್ಟೇ ಅಲ್ಲ, ನೀನು ಪೂರ್ತಿಯಾಗಿ ಬೇಕು. ಅದಕ್ಕಾಗಿ ನಾನು ತಯಾರಿದ್ದೇನೆ. ನೀನು ಮನಸ್ಸು ಮಾಡಬೇಕು.” ಹೀಗೆ ಹೇಳುವಾಗ ಗಂಡನ ಕಣ್ಣಲ್ಲಿ ಕಣ್ಣಿಟ್ಟು ನಿಧಾನವಾಗಿ, ಆರೋಪ ಹೊರಿಸದೆ, ಬೆದರಿಕೆ ಹಾಕದೆ ಹೇಳಿದಳು. ಆಕೆಯ ಕಣ್ಣುಗಳಲ್ಲಿ ಎಷ್ಟು ನಿಷ್ಕಪಟತೆ ಇತ್ತು ಎಂದರೆ, ಗಂಡನಿಗೆ ಮಾತು ಬರದೆ ಭಾವನಾ ಪರವಶನಾಗಿ ಆಕೆಯ ಕೈಗಳನ್ನು ಹಿಡಿದುಕೊಂಡ –  ಬಿಟ್ಟರೆ ಎಲ್ಲಿ ಅವಳನ್ನು ಕಳೆದುಕೊಳ್ಳುವೆನೋ ಎನ್ನುವಂತೆ! ಪರಿಣಾಮ? ಬಹುಕಾಲ ನೆನಪಿಡಬೇಕಾದಂಥ ಕಾಮಕೂಟ ನಡೆಯಿತು. ಹೀಗೆ ನೇರವಾದ ಪ್ರಾಮಾಣಿಕ ಸಂವಹನದಿಂದ ಭಾವನಾತ್ಮಕ ಸಂವೇದನೆಗಳು ಹೆಚ್ಚಿ “ನನಗೂ ಕಾಮ ಬೇಕು” ಎಂಬ ಅಂತರಂಗದ ಸೆಳೆತ ಉಂಟಾಗುತ್ತದೆ.

ನೇರವಾದ ಕಾಮಪ್ರಚೋದನೆ ಬೇಡ: ಸುಮಾರು ದಂಪತಿಗಳು ಪ್ರಣಯದಾಟವನ್ನು ಸಂಭೋಗಕ್ಕೆ ಒಕ್ಕಣೆ ಎನ್ನುವಂತೆ ಶುರುಮಾಡುತ್ತಾರೆ. ಒಮ್ಮೆಲೇ ಆಳವಾದ ಚುಂಬನ, ಖಾಸಗಿ ಭಾಗಗಳನ್ನು ಉದ್ದೀಪನಗೊಳಿಸುವ ಸ್ಪರ್ಶ… ಇದು ಒಂದು ತರಹ ಕೊನೆಯಿಂದ ಶುರುಮಾಡಿದಂತೆ – ಶುರುವಿನಿಂದ ಶುರುಮಾಡುವುದಲ್ಲ. ಶುರುವಿನಿಂದ ಶುರುಮಾಡಬೇಕೆಂದರೆ ಮೊದಲು ಭಾವನೆಗಳ ಸಮ್ಮಿಳಿತವಾಗಬೇಕು. ಇದು ಕೈಗಳಿಂದ ಶುರುವಾಗುತ್ತದೆ. ಹೆಚ್ಚಿನವರಿಗೆ ಕೈಗಳಲ್ಲಿ, ಕೈಗಳ ಜೊತೆಗೆ ಆಟವಾಡುವುದರಲ್ಲಿ ಬಾಂಧವ್ಯವನ್ನು ಬಿಗಿಗೊಳಿಸುವ ಶಕ್ತಿಯಿದೆಯೆಂಬುದು ಗೊತ್ತಿಲ್ಲ. ಇದಕ್ಕಾಗಿ ಈ ಉದಾಹರಣೆಯನ್ನು ತೆಗೆದುಕೊಳ್ಳಿ. ನಿಮಗೆ ಯಾವೊತ್ತಾದರೂ ಆಕರ್ಷಕ ಎನ್ನಿಸುವ ವ್ಯಕ್ತಿಯ ಜೊತೆಗೆ ಹಸ್ತಲಾಘವ (handshake) ಮಾಡಿದ್ದು ನೆನಪಿದೆಯೆ? ಆ ಹಸ್ತಲಾಘವವು ಒಂದುವೇಳೆ ಕೈಬಿಡದೆ ಮುಂದುವರಿದಿದ್ದರೆ – ಅದರಲ್ಲೂ ಖಾಸಗಿಯಾಗಿ – ಎಷ್ಟು ರೋಚಕವಾಗಿ ಇರುತ್ತಿತ್ತು, ಅಲ್ಲವೆ? ಇದನ್ನೇ ನಿಮ್ಮ ಸಂಗಾತಿಯ ಜೊತೆಗೂ ಪ್ರಯೋಗ ಮಾಡಿ ನೋಡಬಹುದು. ಅದು ಹೀಗೆ: ಸಂಗಾತಿಯ ಎದುರು ಕುಳಿತುಕೊಂಡು ಅವರ ಕೈಗಳನ್ನು ನಿಮ್ಮ ಕೈಗಳಲ್ಲಿ ಆರಾಮವಾಗಿ ಹಿಡಿದುಕೊಳ್ಳಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಕೈಗಳ ಹಿಡಿತವನ್ನು ಸ್ವಲ್ಪ ಬಿಗಿಮಾಡಿ. ನಂತರ ನಿಧಾನವಾಗಿ ಸಡಿಲಿಸಿ. ಈಗ ನೋಡಿ, ಯಾರ ಕೈಗಳನ್ನು ಯಾರು ಹಿಡಿದುಕೊಂಡಿದ್ದಾರೆ?

ಮುತ್ತಿನ ಮಹತ್ವ: ಸಂವೇದನಾಶೀಲತೆಯನ್ನು ಕೆರಳಿಸುವುದರಲ್ಲಿ ಮುತ್ತಿನ ಪಾತ್ರ ಮಹತ್ವದ್ದು. ಪ್ರಣಯಕೇಳಿಯಲ್ಲಿ ತೃಪ್ತಿಹೊಂದಿರುವ ಅನೇಕರು ಮುತ್ತಿಡುವ ಕ್ರಿಯೆಯಲ್ಲಿ ಅಳುಕು ತೋರಿಸುತ್ತಾರೆ. ಕೆಲವು ದಂಪತಿಗಳಲ್ಲಿ ಮುತ್ತು ಕೊಡುವ ಪದ್ಧತಿಯೇ ಇಲ್ಲವೆಂದರೆ ಆಶ್ಚರ್ಯವಿಲ್ಲ. ಇನ್ನೂ ಕೆಲವರಲ್ಲಿ ಮಕ್ಕಳಿಗೆ ಕೊಡುವ ಮುತ್ತಿಗೂ ಸಂಗಾತಿಗೆ ಕೊಡುವ ಮುತ್ತಿಗೂ ವ್ಯತ್ಯಾಸ ಇರುವುದಿಲ್ಲ. ಸಂಗಾತಿಯ ಬಾಯಿಯ ಒದ್ದೆ ತಾಗಿದರೆ ಮುರುಟಿಕೊಳ್ಳುವವರು ಇದ್ದಾರೆ. ಒಬ್ಬಳ ಪ್ರಕಾರ ಆಕೆಯ ಗಂಡನ ಮುತ್ತು “ಕೋಳಿಗಳು ಕೊಕ್ಕು ಮುಟ್ಟಿಸಿದಂತೆ” ಇರುತ್ತದೆ. ಮುತ್ತಿಡುವ ರೀತಿಯು ಸಂಗಾತಿಗಳ ನಡುವಿನ ಬಾಂಧವ್ಯದ ಬಗೆಗೆ ವಿಶೇಷ ಮಾಹಿತಿಯನ್ನು ನೀಡುತ್ತದೆ. ಇನ್ನು, ಬಾಯಿಗೆ ಬಾಯಿ ಸೇರಿಸಿ ಆಳವಾದ ಚುಂಬನ ಕೊಡುವುದು ಅದ್ಭುತ ಉನ್ಮಾದತೆಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೂ ಆಳವಾಗಿ ಮುತ್ತು ಕೊಡುವುದರಲ್ಲೂ ಒಂದು ಮುಖ್ಯಾಂಶ ಗಮನಿಸಿದ್ದೇನೆ. ಇದೇನೆಂಬುದನ್ನು ನಿಮ್ಮ ಸಂಗಾತಿಯ ಜೊತೆಗೆ ಪ್ರಯೋಗಿಸಿ ನೋಡಿ:

ಸಂಗಾತಿಯ ಜೊತೆ ಆರಾಮವಾಗಿ ಒರಗಿಕೊಂಡು ಬಾಯಿಗೆ ಬಾಯಿ ಸೇರಿಸಿ ಮುತ್ತು ಕೊಡಲು ಶುರುಮಾಡಿ. ಕೆಲವು ಕ್ಷಣಗಳ ನಂತರ ಇಬ್ಬರಲ್ಲಿ ಒಬ್ಬರು ಸಂಪರ್ಕವನ್ನು ಥಟ್ಟನೇ ಮುರಿದುಕೊಳ್ಳುತ್ತೀರಿ! ಅದು ನೀವಾಗಿದ್ದರೆ ಹೀಗೆ ಯೋಚಿಸಿ: “ ಸಂಪರ್ಕ ಕಡಿದುಕೊಳ್ಳುವ ಮುಂಚೆ ನನ್ನಲ್ಲಿ ಯಾವ ಭಾವನೆ ಬಂತು? ಏನು ಅನ್ನಿಸಿತು?” ಹೆಚ್ಚಿನವರಿಗೆ ಆಗ ಆತಂಕದ ಭಾವ ಬರುತ್ತದೆ. ಇದೆಲ್ಲಿಂದ ಬರುತ್ತದೆ ಎಂದು ಯೋಚಿಸಿದರೆ ನಿಮ್ಮ ಬಗೆಗೆ ಅನೇಕ ವಿಷಯಗಳು ಹೊಳೆಯುತ್ತವೆ. ಅದರಲ್ಲಿ ಮುಖ್ಯವಾದುದು, ಇನ್ನು ಮುಂದೆ ಬರುವ ಸಂಭೋಗ ನನಗೆ ಬೇಡ, ನನಗಿಷ್ಟೇ ಸುಖ ಸಾಕು ಎನ್ನುವ ಅನಿಸಿಕೆ. ಇದಕ್ಕೂ ನಿಮ್ಮ ಬಾಲ್ಯದಲ್ಲಿ ದೊಡ್ಡವರು ನಿಮಗೆ ಕೊಟ್ಟಿರುವ “ನಿನಗೆ ಹೆಚ್ಚಿನ ಅರ್ಹತೆಯಿಲ್ಲ” ಎನ್ನುವ ಸಂದೇಶಕ್ಕೂ ಸಂಬಂಧವಿದೆ! ಇದಕ್ಕೆ ನಿವಾರಣೆಯ ಉಪಾಯ? ಸುಲಭ. ಮುಂಚೆಯೇ ಸಂಗಾತಿಯೊಡನೆ ಮಾತಾಡಿ, ಮುತ್ತು ಕೊಡುವುದರಲ್ಲೇ ತೊಡಗಿ. ಬೇರ್ಪಡಬೇಕು ಎಂದು ಅನ್ನಿಸಿದಾಗಲೆಲ್ಲ ಪ್ರತಿಭಟಿಸುತ್ತ ಮುಂದುವರಿಯಲು ಯತ್ನಿಸಿ. ಹೀಗೆ  ಮಾಡಿ ಪರಿಣಾಮ ನೋಡಿ: ಸಂಭೋಗ ಬೇಡ ಅನ್ನುವವರು ಮನಸ್ಸು ಬದಲಾಯಿಸುತ್ತೀರಿ! 



ತೃಪ್ತಿಕರ ಕಾಮಕೂಟಕ್ಕೆ ಮೊದಲು ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

166: ಕಾಮಕ್ಷಮತೆಯಲ್ಲಿ ಶರೀರ

ವಯಸ್ಸಾದಂತೆ ಹಾಗೂ ಸಮಯ-ಸಂದರ್ಭಗಳು ಬದಲಾದಂತೆ ನಮ್ಮ ಮನೋಭಾವನೆಗಳಲ್ಲಿ ಬದಲಾವಣೆಗಳನ್ನು ತಂದುಕೊಂಡಲ್ಲಿ ಕಾಮಕೂಟವು ತೃಪ್ತಿಕರ ಆಗಬಲ್ಲುದು ಎಂಬುದರ ಬಗೆಗೆ ಮಾತಾಡಿಕೊಳ್ಳುತ್ತಿದ್ದೇವೆ. ಈ ಬದಲಾವಣೆಗಳು ಯಾವುವು, ಹಾಗೂ ಇವುಗಳನ್ನು ತಂದುಕೊಳ್ಳುವುದು ಹೇಗೆ ಎನ್ನುವುದನ್ನು ಅರಿತುಕೊಳ್ಳೋಣ.

ತೃಪ್ತಿಕರ ಕಾಮಕೂಟಕ್ಕೆ ಅಗತ್ಯವಾದ ಸಾಮರ್ಥ್ಯವನ್ನು – ಇದನ್ನು ನಾನು ಕಾಮಕ್ಷಮತೆ ಎಂದು ಕರೆಯುತ್ತಿದ್ದೇನೆ – ಪಡೆಯುವುದಕ್ಕೆ ಮೂರು ಅಂಶಗಳು ಅತ್ಯಗತ್ಯವಾಗಿವೆ. ಒಂದು: ಶಾರೀರಿಕ ಕಾರ್ಯಕ್ಷಮತೆ; ಎರಡು: ತಡೆಯಿಲ್ಲದೆ ಹರಿದು ಬರುವ ಮನೋದೈಹಿಕ ಸಂವೇದನೆಗಳು; ಮೂರು: ಅರ್ಥಮಾಡಿಕೊಂಡು ಸಹಕರಿಸುವ ಸಂಗಾತಿ. ಇವು ಮೂರೂ ಅತ್ಯುತ್ಕೃಷ್ಟವಾಗಿ ಮೇಳೈಸಿದರೆ ಕಾಮಕ್ಷಮತೆ ಅದ್ಭುತವಾಗಿರುತ್ತದೆ. ಇವುಗಳನ್ನು ತಯಾರು ಮಾಡಿಕೊಳ್ಳುವುದು ಹೇಗೆ ಎಂದು ಒಂದೊಂದಾಗಿ ತಿಳಿದುಕೊಳ್ಳೋಣ.

ಶಾರೀರಿಕ ಕಾರ್ಯಕ್ಷಮತೆ ಎಷ್ಟು ಮಹತ್ವದ್ದು ಎಂಬುದಕ್ಕೆ ಒಂದು ಉದಾಹರಣೆ: ಕಾಮಕೂಟವನ್ನು ಶುರುಮಾಡಬೇಕು ಎಂಬ ವಿಚಾರ ನಿಮ್ಮ ತಲೆಯಲ್ಲಿ ಬರುತ್ತದೆ ಎಂದಿಟ್ಟುಕೊಳ್ಳಿ. ಆಗ ಶರೀರವು ಅದಕ್ಕೆ ತಯಾರಾಗಿದೆಯೇ ಎಂದು ಸ್ಕ್ಯಾನ್ ಮಾಡುತ್ತೀರಿ. ಆಗ ಸ್ವಲ್ಪ ಸುಸ್ತೋ ಆಯಾಸವೋ ಅಲಸ್ಯವೋ ಕಾಣುತ್ತದೆ. ಅಷ್ಟಕ್ಕೇ “ಇವೊತ್ತು ಬೇಡ” ಎಂದು ನಿರ್ಧರಿಸಿಬಿಡುತ್ತೀರಿ! ಸ್ವಲ್ಪ ಯೋಚಿಸಿ. ಇಂಥ ನೆಪಗಳಿಂದ ನೀವು ಎಷ್ಟೊಂದು ಸುಖರಾತ್ರಿಗಳನ್ನು ಕಳೆದುಕೊಂಡಿದ್ದೀರಿ? ಹೀಗಾಗಬಾರದು ಎಂದಿದ್ದರೆ ನಿಮಗೆ ಕೆಲವು ಸಲಹೆಗಳು:

೧. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಕೊಳ್ಳಿ: ಯಾವುದೇ ಶಾರೀರಿಕ ಕಾಯಿಲೆಯು ಕಾಲಿಡುವಾಗ ಬರುವ ಪ್ರಾರಂಭಿಕ ಲಕ್ಷಣಗಳಿಗೂ, ದಿನನಿತ್ಯದ ಕಾರ್ಯಭಾರದಿಂದ ಆಗುವ ಪರಿಣಾಮಗಳಿಗೂ ವ್ಯತ್ಯಾಸ ಇರುವುದಿಲ್ಲ. ಉದಾಹರಣೆಗಾಗಿ, ಥೈರಾಯ್ಡ್ ಗ್ರಂಥಿಯ ರೋಗವು ಶೀಘ್ರಾಯಾಸ, ಸದಾ ಸುಸ್ತು, ಲವಲವಿಕೆ ಇಲ್ಲದಿರುವಿಕೆ, ಬುದ್ಧಿ ಮಂಕಾಗಿರುವುದು, ನಿದ್ರಾನಾಶ ಇತ್ಯಾದಿ ಸಾಮಾನ್ಯ ಲಕ್ಷಣಗಳ ರೂಪದಲ್ಲಿ ಕಾಣುತ್ತವೆ. ಇದರಿಂದ ಕಾಮದಲ್ಲಿ  ಆಸಕ್ತಿ ಮೂಡದಿರುವುದು ಸಹಜ. ಇದನ್ನು ಅಲಕ್ಷಿಸಿ ಕಾಮಕ್ರಿಯೆಗೆ ಒತ್ತಾಯ ತಂದುಕೊಂಡರೆ ಶರೀರವು ಸ್ಪಂದಿಸಲಾರದು. ಶಿಶ್ನವು ಸರಿಯಾಗಿ ಉದ್ರೇಕಗೊಳ್ಳಲಿಕ್ಕಿಲ್ಲ, ಯೋನಿ ತೇವಗೊಳ್ಳಲಿಕ್ಕಿಲ್ಲ. ಪರಿಣಾಮವಾಗಿ ಕಾಮಕ್ರಿಯೆ ಸರಿಯಾಗಿ ನಡೆಯಲಿಕ್ಕಿಲ್ಲ. ಆಗ ನೀವೇನು ಮಾಡುತ್ತೀರಿ? ಜನನಾಂಗಗಳ ಮೇಲೆ ದೋಷ ಹೊರೆಸುತ್ತೀರಿ. ಪರಿಹಾರ? ಒಂದೇ ಒಂದು ಸಲ ನಿಮ್ಮ ಶರೀರದ ಮೇಲೆ ಕೃಪೆಮಾಡಿ. ಒಂದು ದಿನ ರಜೆ ಹಾಕಿ ಸಂಗಾತಿಯೊಡನೆ ವೈದ್ಯರನ್ನು ಭೇಟಿಮಾಡಿ. ಅವರು ಸೂಚಿಸುವ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಅವರು ಸೂಚಿಸಿದ ಕ್ರಮಗಳನ್ನು ಅನುಸರಿಸಿ. ಒಂದುಸಲ “ಶಾರೀರಿಕವಾಗಿ ಚೆನ್ನಾಗಿದ್ದೇನೆ!” ಎಂದು ಅನುಭವ ಬಂದರೆ ಸಾಕು, ಮನಸ್ಸು ಉಲ್ಲಸಿತವಾಗಿ ಕಾಮಭಾವವು ತನ್ನಷ್ಟಕ್ಕೆ ತಾನೇ ಜಾಗ್ರತವಾಗುತ್ತದೆ.

೨. ವೈದ್ಯರೊಡನೆ ಲೈಂಗಿಕ ಸಮಸ್ಯೆಯನ್ನು ಹಂಚಿಕೊಳ್ಳಿ: ಕೆಲವು ಔಷಧಿಗಳ ಅಡ್ಡಪರಿಣಾಮಗಳು ಲೈಂಗಿಕ ಸಮಸ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ರಕ್ತದ ಏರೊತ್ತಡಕ್ಕೆ ಸೇವಿಸುವ ಔಷಧಿಗಳು ಶಿಶ್ನವು ಗಡುಸಾಗಲು ಅಡ್ಡಿಯಾಗಬಹುದು. ಆತಂಕ ನಿವಾರಕಗಳು ಕಾಮಾಸಕ್ತಿಯನ್ನು ಕುಂದಿಸಬಹುದು. ಖಿನ್ನತೆಗೆ ತೆಗೆದುಕೊಳ್ಳುವ ಔಷಧಿಗಳು ವೀರ್ಯಸ್ಖಲನಕ್ಕೆ ಅಡ್ಡಿ ಬರಬಹುದು. ಮಾನಸಿಕ ಅಸ್ವಸ್ಥತೆಗೆ ಅಥವಾ ಅಪಸ್ಮಾರಕ್ಕೆ ಸೇವಿಸುವ ಮಾತ್ರೆಗಳು ಕಾಮಕ್ಷಮತೆಯನ್ನು ಕುಂಠಿತಗೊಳಿಸಬಹುದು. ಇಂಥದ್ದು ಅನುಭವ ಆಗುತ್ತಿದ್ದರೆ ವೈದ್ಯರ ಮುಂದೆ ಸಂಕೋಚ ಬಿಟ್ಟು ಹಂಚಿಕೊಳ್ಳಿ. (ಇಲ್ಲದಿದ್ದರೆ ಅವರಿಗೂ ಸಂಕೋಚವಾಗಿ ಇದರ ಮಾತೇ ಎತ್ತುವುದಿಲ್ಲ!) ಔಷಧಿಗಳಲ್ಲಿ ಸೂಕ್ತ ಬದಲಾವಣೆ ಮಾಡುವುದರ ಮೂಲಕ ನಿಮ್ಮ  ಕಾಮಕ್ಷಮತೆಯು ಮರಳುವುದರಲ್ಲಿ ಸಹಾಯ ಆಗಬಹುದು.

೩. ಕಾಯಿಲೆಯ ನೆಪ ಬೇಡ: ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಿರುವ ಗಂಡಸರಲ್ಲಿ ಒಂದು ವೈಚಿತ್ರ್ಯವನ್ನು ಗಮನಿಸಿದ್ದೇನೆ. ಅದೇನೆಂದರೆ, ಶಿಶ್ನದೌರ್ಬಲ್ಯದ ಸಂದೇಹವನ್ನು ಇಟ್ಟುಕೊಂಡು ಬಂದವರಿಗೆ “ಎಲ್ಲವೂ ಸರಿಯಾಗಿದೆ” ಎಂದು ಹೇಳಿದ ನಂತರವೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತ, ತಮ್ಮ ಕಾಯಿಲೆಯ ನಂಬಿಕೆಗೇ ಅಂಟಿಕೊಳ್ಳುತ್ತಾರೆ. ಇವರಲ್ಲಿ ದೇಹಸ್ಥಿತಿಯನ್ನು ಗುಣಪಡಿಸಿಕೊಂಡು ಆರೋಗ್ಯದಿಂದ ಬದುಕುವ ಉದ್ದೇಶವಿರದೆ, ಕಾಯಿಲೆಯ ನೆಪದಿಂದ (ಮನಸ್ಸಿಲ್ಲದ) ಲೈಂಗಿಕ ಕ್ರಿಯೆಯಿಂದ ತಪ್ಪಿಸಿಕೊಳ್ಳುವ “ತಂತ್ರ” ಹೂಡುವುದು ಕಂಡುಬರುತ್ತದೆ. ಹೀಗೇಕೆ? ಸಾಮಾನ್ಯವಾಗಿ ಗಂಡಸರು ಮಾನಸಿಕ ಅನಾರೋಗ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಸಹಜವಾದ ಅಸಾಮರ್ಥ್ಯದ ಅನಿಸಿಕೆ ಆದಾಗ ಮನಸ್ಸಿನಿಂದ ಶರೀರವನ್ನು ಬೇರ್ಪಡಿಸಿ, ತೊಂದರೆಯನ್ನು ಶರೀರದ ಮೇಲೆ ಹಾಕಿ ಮಾನಸಿಕ ಅಸಾಮರ್ಥ್ಯವನ್ನು ಬಚ್ಚಿಡುತ್ತಾರೆ. ಆದರೆ ಹೆಂಗಸರು ಹಾಗಲ್ಲ. ಮಾನಸಿಕ ಅನಾರೋಗ್ಯ (ಉದಾ. ಖಿನ್ನತೆ) ಇದೆಯೆಂದು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಆ ಕಾರಣದಿಂದ ಲೈಂಗಿಕ ಕ್ರಿಯೆಯಿಂದ ತಪ್ಪಿಸಿಕೊಳ್ಳಲು ಆಗದೆ ಸೊಂಟನೋವು, ತಲೆನೋವು ಮುಂತಾದ ಶಾರೀರಿಕ ಸಮಸ್ಯೆಗಳ ನೆಪ ಹೂಡುತ್ತಾರೆ.  ಹಾಗಾದರೆ ಉಪಾಯವೇನು? “ನನಗನಿಸುವುದೇ ಸತ್ಯ” ಎಂಬ ನಂಬಿಕೆಗೆ ಅಂಟಿಕೊಳ್ಳದೆ ಮನಸ್ಸನ್ನು ಮುಕ್ತವಾಗಿಡಿ. ಯಾವುದೊಂದು ಕಾಯಿಲೆಯಿಂದ, ಔಷಧಿಯಿಂದ, ಅಥವಾ ಮಾನಸಿಕ ಸ್ಥಿತಿಯಿಂದ ಹೀಗಾಗಿದೆ ಎಂದು ಅನ್ನಿಸಿದರೆ ಕಾಮಕ್ರಿಯೆಗೆ ರಾಜೀನಾಮೆ ಕೊಟ್ಟುಬಿಡಬೇಡಿ. ಬದಲಾಗಿ, ಇಂಥ ಕಾಯಿಲೆ /ಔಷಧಿ/ಮನಸ್ಥಿತಿ ಇದ್ದರೂ ಹೇಗೆ ಕಾಮಸುಖವನ್ನು ಸವಿಯಬಲ್ಲೆ ಎಂದು ಯೋಚಿಸಿ. ಅನೇಕರು ಮನಸ್ಸು ಸರಿಯಾಗಿಲ್ಲದೆ ಇರುವಾಗ ತಮ್ಮ ಹಳೆಯ ಬದುಕಿಗೆ ಹೋಗಿ ಅಲ್ಲಿಂದ “ಹೂಳೆತ್ತಲು” ಶುರುಮಾಡುತ್ತಾರೆ. ಇದು ಕೂಡ ಕಾಮಾಸಕ್ತಿಯನ್ನು ಮೊಟಕುಮಾಡುತ್ತದೆ ಎಂಬುದು ನೆನಪಿನಲ್ಲಿರಲಿ.

೪. ಗೊರಕೆಯು ಕಾಮಕ್ಷಮತೆಯ ಶತ್ರು: ಹೆಚ್ಚಿನವರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ – ಗೊರಕೆ ಹೊಡೆಯುವುದು ಅನಾರೋಗ್ಯದ ಲಕ್ಷಣ. ಯಾಕೆಂದರೆ, ಗೊರಕೆಯವರು ನಿದ್ರಿಸುವಾಗ ನಾಲಿಗೆಯು ಶ್ವಾಸನಾಳವನ್ನು ಮುಚ್ಚುವುದರಿಂಗ ಉಸಿರಾಟ ಸರಿಯಾಗದೆ ಗೊರಕೆಯ ಶಬ್ದ ಉಂಟಾಗುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಕದ ಕೊರತೆ ಆಗುತ್ತದೆ. ಗೊರಕೆ ಹೊಡೆಯುವವರಿಗೆ ನಿದ್ರೆ ಯಾವಾಗಲೂ ಅರ್ಧಮರ್ಧ ಆಗುತ್ತದೆ. ಹಾಗಾಗಿ ಅವರು ಸ್ವಲ್ಪ ಬಿಡುವಾದರೂ ತೂಕಡಿಸುತ್ತಾರೆ, ಹಾಸಿಗೆ ಸೇರಿದ ಕೆಲವೇ ನಿಮಿಷಗಳಲ್ಲಿ ನಿದ್ರಿಸುತ್ತಾರೆ. ಗಾಡಿ ನಡೆಸುವಾಗಲೂ ಮಲಗಿದವರಿದ್ದಾರೆ. ನನಗೆ ಗೊತ್ತಿರುವ ಕೆಲವರು ಹೆಂಡತಿಯ ಮೇಲೆ ಮಲಗಿ ಸಂಭೋಗ ಮಾಡುವಾಗಲೇ ನಿದ್ರಿಸಿದ್ದು ಇದೆ. ಗೊರಕೆಯಿಂದ ಕಾಮಕ್ಷಮತೆಗೆ ಶರೀರವನ್ನು ತಯಾರು ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುತ್ತದೆ. ಪರಿಹಾರ? ಗೊರಕೆಯ ನಿವಾರಣೆಗೆ ಉಪಾಯಗಳಿವೆ. ಮುಖ ಮೇಲಾಗಿ ನೇರವಾಗಿ ಮಲಗದೆ ಒಂದು ಬದಿಗೆ ಹೊರಳಿ ಮಲಗುವುದು, ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳುವುದು, ರಾತ್ರಿಯ ಊಟವನ್ನು ಸಂಜೆಯೇ ಮಾಡುವುದು ಇತ್ಯಾದಿ. ಹೆಚ್ಚಿನ ಚಿಕಿತ್ಸೆಗಾಗಿ ಕಿವಿ-ಮೂಗು-ಗಂಟಲಿನ ಅಥವಾ ಎದೆರೋಗಗಳ ತಜ್ಞರನ್ನು ಭೇಟಿಮಾಡಿ.

೫. ಕಾಮಕ್ಷಮತೆಯು ತನುಮನಗಳ ಸಮ್ಮಿಲನ:  ಒಂದು ರೀತಿ ನೋಡಿದರೆ ಎಲ್ಲ ಲೈಂಗಿಕ ಸಮಸ್ಯೆಗಳೂ ಶಾರೀರಿಕವೆ. ಯಾಕೆಂದರೆ, ದೋಷಗಳು ಭಾವನೆಗಳಲ್ಲಿ, ಶರೀರದಲ್ಲಿ, ಅಥವಾ ಸಂಗಾತಿಯ ಜೊತೆಗಿನ ಸಂವಹನದಲ್ಲಿ ಇದ್ದರೂ ಪರಿಣಾಮ ಕಾಣುವುದು ಅಂತಿಮವಾಗಿ ಶರೀರದ ಮೂಲಕವೆ. ದೋಷವು ಜನನಾಂಗಗಲ್ಲಿ ಇದ್ದರಂತೂ ಸರಿಯೆ. ಹಾಗಾಗಿ, ಶಾರೀರಿಕ ಕಾಯಿಲೆ ಇದ್ದರೂ, ಜನನಾಂಗಗಳಲ್ಲಿ ದೋಷವಿದ್ದರೂ, ಔಷಧಿಗಳ ಅಡ್ಡಪರಿಣಾಮವಾದರೂ ಇಲ್ಲಿ ಬುದ್ಧಿ ಹಾಗೂ ವಿವೇಚನೆಯಿಂದ ನಿರ್ವಹಿಸುವುದು ಅತ್ಯಗತ್ಯ. ಉದಾಹರಣೆಗೆ, ರಕ್ತದ ಏರೊತ್ತಡಕ್ಕೆ ಸೇವಿಸುವ ಮಾತ್ರೆಯಿಂದ ಅಷ್ಟು ಸರಿಯಾಗಿ ಶಿಶ್ನ ಗಡುಸಾಗಲಿಲ್ಲ ಎಂದುಕೊಂಡರೆ ಅದಕ್ಕೆ ಏನು ಉಪಾಯ ಎಂದು ತಲೆ ಓಡಿಸದಿದ್ದರೆ ಕಾಮಕ್ಷಮತೆಗೆ ಅಡ್ಡಿಯಾಗುತ್ತದೆ. ಅಲ್ಲದೆ, ಸಂಗಾತಿಯೊಡನೆಯ ಬಾಂಧವ್ಯಕ್ಕೂ ಕಾಮಕ್ಷಮತೆಗೂ ಸಂಬಂಧವಿದೆ. ಉದಾ. ನಿಮ್ಮ ಶಾರೀರಿಕ ಕಾಯಿಲೆಯಿಂದ ಬದಲಾದ ಸ್ಥಿತಿಯನ್ನು ಸಂಗಾತಿಯು ಅರ್ಥಮಾಡಿಕೊಂಡರೆ ನಿಮ್ಮ ಕಾಮಕ್ಷಮತೆಗೆ ಹೊಸ ಅರ್ಥ ಬರುತ್ತದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.