Please wait...


ಗಂಡಸುತನ ಉಪಯೋಗಿಸಿದರೆ ಸುಖ ಪಡೆದುಕೊಳ್ಳಲು ಆದೀತೇ ವಿನಾ ಬಾಂಧವ್ಯವನ್ನು ಕಟ್ಟಿಕೊಳ್ಳಲು ಆಗುವುದಿಲ್ಲ! 

202: ಪುರುಷರ ನಾಕನರಕ: 11

ಮಧ್ಯವಯಸ್ಸು ದಾಟುತ್ತಿರುವ ಪಂಡಿತ ದಂಪತಿಯಲ್ಲಿ ಕಾಮಕೂಟವು ಸಂತತವಾಗಿ ನಡೆಯುತ್ತಿದ್ದರೂ ಲೈಂಗಿಕ ಸಾಮರಸ್ಯ ಇಲ್ಲದೆ ಹೆಂಡತಿಗೆ ಕಾಮಾಸಕ್ತಿ ಮೂಡಿಸುವ ಉಪಾಯ ಕಂಡುಕೊಳ್ಳಲು ಪಂಡಿತರು ನನ್ನ ಹತ್ತಿರ ಬಂದಿದ್ದಾರೆ.

ನನಗೆ ಸ್ಪಷ್ಟವಾಯಿತು: ಕಾಮೇಚ್ಛೆಯ ಇಂಗಿತ ಅವರದು, ಹೆಂಡತಿಯದಲ್ಲ. ಆಕೆಯ ಇಂಗಿತ ಕಾಮೇಚ್ಛೆ ಬೇಡವಾಗಿ ಇರುವುದು. ಹಾಗಾಗಿ ಪಂಡಿತರ ಧಾವಂತ. ತಟ್ಟೆಯಲ್ಲಿರುವ ಅನ್ನವನ್ನೆಲ್ಲ ಉಣ್ಣಿಸಲೇಬೇಕು ಎಂದು ತಾಯಿಯು ಮಗುವಿನ ಬಾಯಲ್ಲಿ ತುತ್ತು ತುರುಕುವ ದೃಶ್ಯ ನೆನಪಾಯಿತು. ನಾನು ಕೇಳಿದೆ: “ಕಾಮಾಸಕ್ತಿಪೂರೈಸಿಕೊಳ್ಳಬೇಕು ಎನ್ನುವುದುನಿಮ್ಮಗುರಿ, ಆಕೆಯದಲ್ಲ. ಆಕೆಗೇಬೇಡವಾದ ಗುರಿಯ ಬಗೆಗೆ ಆಕೆಯಲ್ಲಿ ಪ್ರೇರಣೆ ತರಿಸಲು ಹೇಗೆ ಸಾಧ್ಯ?” ಅವರಿಗೆ ಅರ್ಥವಾಗಲಿಲ್ಲ. ಉದಾಹರಣೆ ಕೊಟ್ಟೆ. “ನೀವು ಯಾವೊತ್ತಾದರೂ ಕಾಯಿಲೆಯಿಂದ ಹಸಿವೆ ಇಲ್ಲದೆ ಮಲಗಿರಬೇಕಲ್ಲ? ಆಗ ನಿಮ್ಮಾಕೆಯು ಊಟ ತಿನ್ನಲೇಬೇಕೆಂದು ಬಲಾತ್ಕಾರ ಮಾಡಿದರೆ ಅವರಿಗೋಸ್ಕರ ತಿನ್ನಬಲ್ಲಿರಾ?” ಅವರಿಗೆ ಅರ್ಥವಾಯಿತಾದರೂ ಮನಸ್ಸಿಗೆ ತಟ್ಟಲಿಲ್ಲ. ಹೆಂಡತಿಯ ಮನಸ್ಸು ಮುಖ್ಯವಲ್ಲ, ಆಕೆ ಶಾರೀರಿಕವಾಗಿ ಸಹಕರಿಸಿದರೆ ಸಾಕು ಎನ್ನುವ ಮನೋಭಾವ ಇದ್ದಂತಿತ್ತು, ಆದುದರಿಂದ ಸಮಸ್ಯೆಯ ಇನ್ನೊಂದು ಮಗ್ಗಲನ್ನೂ ಅರಿವು ಮಾಡಿಕೊಟ್ಟೆ. ಇವರ ಒತ್ತಾಯಕ್ಕೆ ಒಪ್ಪಿಕೊಂಡು ಸಹಕರಿಸುವಾಗ ನಡೆಯುವ ಕೂಟವು ಆಕೆಯ ಕೂಟವಲ್ಲ. ಇಬ್ಬರದಂತೂ ಖಂಡಿತವಲ್ಲ. ಆಕೆಯ ಮನಸ್ಸಿನ ವಿರುದ್ಧವಾದ ಇವರೊಬ್ಬರದೇ ಕೂಟ ಆಗಿಬಿಡುತ್ತದೆ.ಹಾಗಾಗಿಇದೊಂದು ಪ್ರಾಬಲ್ಯದಾಟ, ಜಿದ್ದಾಜಿದ್ದಿನ ಮೇಲಾಟ. ಒಲ್ಲದವಳ ಮೇಲೆ ಒತ್ತಾಯ ನಡೆಸಿ ಗೆಲ್ಲುವಾಟ. ಇವರು ಗೆದ್ದರೆ ಆಕೆ ಸೋಲುತ್ತಾಳೆ. ಪರಿಣಾಮ? ಇವರುಕಾಮಕೂಟದಲ್ಲಿಆಕೆಯನ್ನುಹಣಿದರೆಆಕೆಆರ್ಥಿಕ ಕೂಟದಲ್ಲಿಇವರನ್ನುಹಣಿಯುತ್ತಿದ್ದಾಳೆ. ಸುಖಎಲ್ಲಿಂದಬಂದೀತು?

ಈ ವಿಚಾರ ಪಂಡಿತರಿಗೆ ಮನದಟ್ಟಾಯಿತು. ಆಗವರು ಇನ್ನೊಂದು ವಿಚಾರವನ್ನು ಮಂಡಿಸಿದರು. ಹೆಂಡತಿಯಲ್ಲಿ ಕಾಮಾಸಕ್ತಿ ಮೂಡಿದರೆ ಫಲಶ್ರುತಿ ಏನಾಗಬಹುದು? ಆಕೆ ಇವರೊಂದಿಗೆ ಅದನ್ನು ಹಂಚಿಕೊಳ್ಳುವುದಕ್ಕೆ ಮನಸ್ಸು ಮಾಡಬಹುದು, ಅಥವಾ ಮಾಡದಿರಬಹುದು. ಮನಸ್ಸು ಮಾಡಿದರೆ ತಾನೇ ಇವರ ಹತ್ತಿರವಾಗಬಹುದು. ಆಗ ಪಂಡಿತರಿಗೆ ಉತ್ಕಟತೆ, ರೋಚಕತೆ ಎನ್ನಿಸುತ್ತದೆ. ಆದರೆ ವಯಸ್ಸಾಗುತ್ತಿದೆ ಎಂಬ ಅನಿಸಿಕೆ ಇದೆಯಲ್ಲ, ಅದರಿಂದ ಸತತವಾಗಿ ಸ್ಪಂದಿಸಲು ಆದೀತೆ ಎಂದು ಆತ್ಮಶಂಕೆ ಕ್ರಮೇಣ ಹುಟ್ಟುತ್ತದೆ. ಆಗ ಗಂಡಸುತನದ ಬಲದಿಂದ ಸ್ವಾಮ್ಯ ಸಾಧಿಸಿರುವ ಏಕೈಕ ಕ್ಷೇತ್ರದಲ್ಲೂ ಪ್ರಾಬಲ್ಯ ಕಳೆದುಕೊಂಡು ಹಿಂತೆಗೆಯುವ ಸಂಭವವಿದೆ. ಹಾಗಾದರೂ ಸಾಮರಸ್ಯ ಬರಲು ಕಠಿಣವಾಗುತ್ತದೆ ಎಂದು ಅರಿವು ಮೂಡಿಸಿದೆ. ಮತ್ತೆ ಅವರಿಗೆ ಬುದ್ಧಿ ತೋಚದೆ ಕುಳಿತರು. ಮುಂದಿನ ಹಾದಿ ಹೇಗೆ?

ಹಾದಿ ಹುಡುಕುವ ನಿಟ್ಟಿನಲ್ಲಿ ಇನ್ನೊಂದು ಪರಿಕಲ್ಪನೆಯನ್ನು ಮುಂದಿಟ್ಟೆ. ಅದು ಅವರ ಗಂಡಸುತನದ ಬಗೆಗೆ. ಬಾಲ್ಯದಲ್ಲಿ ನೋವನ್ನು ಉಂಡು ಬೆಳೆದ ಅವರಿಗೆ ಗಂಡಸಾಗಿ ಹುಟ್ಟಿದ್ದೇ ವರವಾಗಿದೆ. ಗಂಡಸು ಆದುದರಿಂದ ಬೆಳೆಯಲು ಅವಕಾಶಗಳು ಸಿಕ್ಕಿವೆ. ಅದರಿಂದಲೇ ಹೆಣ್ಣು ಹುಡುಕಿಕೊಂಡು ಬಂದಿದ್ದಾಳೆ, ಮದುವೆಯೂ ಆಗಿದೆ. ಪುರುಷ ಪ್ರಾಬಲ್ಯದಿಂದ ಸಂಸಾರವನ್ನೂ ನಡೆಸುತ್ತಿದ್ದಾರೆ. ಆದರೆ ಅದೇ ಗಂಡಸುತನ ಅವರಿಗೀಗ ಅಡ್ಡಿಯಾಗುತ್ತಿದೆ. ಹೇಗೆ? ಹೆಣ್ಣಿನಿಂದ ಕಾಮಸುಖವನ್ನು ಪಡೆದುಕೊಳ್ಳುವ ಅವರ ಗಂಡಸುತನದ ಹಕ್ಕುಬಾಧ್ಯತೆಯೇ ಭಾವನಾತ್ಮಕ ಬಾಂಧವ್ಯವನ್ನು ಕಟ್ಟಿಕೊಳ್ಳಲು ಅಡ್ಡಿಯಾಗುತ್ತಿದೆ. “ನಿಮ್ಮ ಗಂಡಸುತನದಿಂದ ಸುಖ ಪಡೆದುಕೊಳ್ಳಬಹುದೇ ವಿನಾ ನನ್ನನ್ನು ಪಡೆದುಕೊಳ್ಳಲಾರಿರಿ!” ಎಂದು ಹೆಂಡತಿ ಸಂದೇಶ ನೀಡುತ್ತಿದ್ದಾಳೆ!

ಇದನ್ನು ತಿಳಿಸಿ ಹೇಳಿದಾಗ ಪಂಡಿತರಿಗೆ ದಿಗ್ಭ್ರಮೆಯಾಯಿತು. ಗಂಡಸುತನ ತನ್ನ ಹುಟ್ಟುಗುಣ. ಅದರಿಂದಾಗಿಯೇ ಒಂದು ಹೆಣ್ಣು ತನ್ನನ್ನು ಒಪ್ಪಲು, ತನ್ನೊಂದಿಗೆ ಮಲಗಲು ಸಾಧ್ಯವಾಗಿದೆ ಎಂದೆಲ್ಲ ವಾದಿಸಿದರು. “ನಾನು ಗಂಡಸು, ನೀನು ಹೆಣ್ಣು, ಹಾಗಾಗಿ ಸುಖ ಕೊಡಲೇಬೇಕು ಎಂದು ಹೇಳುತ್ತಿದ್ದೀರಷ್ಟೆ. ನಿಮ್ಮವಳು ನಿಮ್ಮನ್ನು ಬಿಟ್ಟು ಯಾರನ್ನೇ ಮದುವೆಯಾದರೂ ಹೆಣ್ಣಾದುದಕ್ಕೆ ಆಕೆಗೆ ಕಾಮಕೂಟದಲ್ಲಿ ಒಪ್ಪಿಸಿಕೊಳ್ಳುವ ಅನಿವಾರ್ಯತೆ ಇದ್ದೇ ಇರುತ್ತಿತ್ತು. ಉಳಿದ ಗಂಡಸರಿಗಿಂತ ನೀವು ಹೇಗೆ ಭಿನ್ನವಾದಿರಿ?” ಎಂದು ಸವಾಲೆಸೆದೆ. ಅದಕ್ಕೆ ಅವರಲ್ಲಿ ಉತ್ತರ ಇರಲಿಲ್ಲ.

“ಪಂಡಿತರೇ, ನಿಮ್ಮ ಗಂಡಸುತನವನ್ನೂ, ಅದರ ಮೂಲಕ ಪಡೆದುಕೊಂಡಿರುವ ಹಕ್ಕುಬಾಧ್ಯತೆಗಳನ್ನೂ, ವಯಸ್ಸಾದಂತೆ ಕ್ಷೀಣಿಸುವ ಲೈಂಗಿಕ ಸಾಮರ್ಥ್ಯದ ಭಯವನ್ನೂ ಮರೆತುಬಿಡಿ. ನೀವು ಆಕೆಯೊಡನೆ ವೈಯಕ್ತಿಕವಾಗಿ ಬೆಳೆಸಿಕೊಂಡು ಬಂದ ಭಾವನೆಗಳಿಂದ, ನಿಮ್ಮ ಮೌಲ್ಯಗಳಿಂದ ಆಕೆಯನ್ನು ಸಮೀಪಿಸಲು ಆದೀತೆ? ಅಂದರೆ, ನಾನು ಗಂಡು, ಆಕೆ ಹೆಣ್ಣು ಎನ್ನುವುದನ್ನು ಬಿಟ್ಟು ಇತರ ಯಾವುದೇ ಸಂಬಂಧಗಳು ನಿಮ್ಮಲ್ಲಿ ಇವೆಯೆ?”

ಪಂಡಿತರಿಗೆ ಥಟ್ಟನೆ ಹೊಳೆಯಿತು: “ಯಾಕಿಲ್ಲ, ಆಕೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ…” ಎಂದರು ಅವರ ಗಂಟಲು ಗದ್ಗದವಾಗಿದ್ದು ಎದ್ದುಕಂಡಿತು. ಅದನ್ನು ಮೆಚ್ಚಿಕೊಳ್ಳುವಷ್ಟರಲ್ಲಿ ಇನ್ನೊಂದು ಮಾತು ಸೇರಿಸಿದರು: “ಆಕೆಯನ್ನು ತಬ್ಬಿಕೊಂಡು ಮಲಗಿದರೆ ಆರಾಮವಾಗಿ ಖುಷಿಯಿಂದ ಮಲಗುತ್ತಾಳೆ.” ಇದರರ್ಥ ಏನೆಂದು ಚರ್ಚಿಸಿದೆವು. ಆಕೆಗೆ ಗಂಡ ಬೇಕು, ಗಂಡನ ಸಾಮೀಪ್ಯ ಬೇಕು, ತಬ್ಬುಗೆ ಬೇಕು, ಆದರೆ ಕಾಮೇಚ್ಛೆಯ ಪೂರೈಕೆಗೆ ಒತ್ತಾಯ ಬೇಡ!

ಇನ್ನೇನು, ತಡವಿಲ್ಲದೆ ಯೋಜನೆ ತಯಾರಾಯಿತು. ಏನದು? ಪಂಡಿತರು ತಮ್ಮ ಹುಟ್ಟುಸ್ವಭಾವದ ಗಂಡಸುತನವನ್ನೂ, ಅದರೊಂದಿಗೆ ಸಮಾಜದಿಂದ ಬಳುವಳಿಯಾಗಿ ಬಂದಿರುವ (ಕಾಮೇಚ್ಛೆಯ ಬೇಡಿಕೆಯನ್ನು ಒಳಗೊಂಡು) ಎಲ್ಲ ಹಕ್ಕುಬಾಧ್ಯತೆಗಳನ್ನು ಬಿಟ್ಟುಕೊಡಬೇಕು. ಬದಲಾಗಿ ತಾವಿಬ್ಬರೂ ನಿರ್ಲಿಂಗಿ ವ್ಯಕ್ತಿಗಳೆಂಬ ಭಾವವನ್ನು ತಂದುಕೊಳ್ಳಬೇಕು. ಲಿಂಗಭೇದವನ್ನು ಬದಿಗಿಟ್ಟು ನಿರ್ವ್ಯಾಜ ಪ್ರೇಮ ಶುರುಮಾಡಬೇಕು. ಶಾರೀರಿಕ ಬಯಕೆಗಳನ್ನು ಮೀರಿ, ಒಂದು ಶುದ್ಧಾತ್ಮವು ಇನ್ನೊಂದು ಶುದ್ಧಾತ್ಮವನ್ನು ಬಯಸುವಂತೆ ಆಗಬೇಕು. ಇದನ್ನು ವರ್ತನೆಯನ್ನುಲ್ಲಿ ಹೇಗೆ ಅಳವಡಿಸಿಕೊಳ್ಳುವುದು ಎಂದು ಚರ್ಚಿಸಿದೆವು.

ಪಂಡಿತರಿಗೆ ಹಳೆಯ ಸಂದೇಹ ಮರುಕಳಿಸಿತು: ವಯಸ್ಸಾದಂತೆ ಗಂಡಸುತನ ಕಡಿಮೆಯಾಗುತ್ತಿದೆ. ಹಾಗಾಗಿ ಕಳೆದುಹೋಗುವುದಕ್ಕಿಂತ ಮುಂಚೆ ಪೂರೈಸಿಕೊಳ್ಳದಿದ್ದರೆ?  ಅದಕ್ಕೆ ನಾನು ವಿವರಿಸಿದೆ. ನಿಜವಾಗಲೂ ಹೇಳಬೇಕೆಂದರೆ ದಂಪತಿಗಳ ನಡುವೆ ನಿರ್ವ್ಯಾಜ ಬಾಂಧವ್ಯ ಹಾಗೂ ಶುದ್ಧ ಅನುಬಂಧ ಶುರುವಾಗುವುದೇ ಅರವತ್ತರ ನಂತರ.

ಇನ್ನು, ಇದನ್ನೆಲ್ಲ ಹೇಗೆ ಜಾರಿಗೆ ತರುವುದು? ಪಂಡಿತರು ಹೆಂಡತಿಯೊಡನೆ ಮನಸ್ಸು ಬಿಚ್ಚಿ ಮಾತಾಡಬೇಕು. ತಮ್ಮ ಬಲವಂತಕ್ಕೆ ಕಾರಣವಾದ ಗಂಡಸುತನವನ್ನು ಬಿಟ್ಟುಕೊಡುವ ನಿರ್ಧಾರವನ್ನು ಪ್ರಕಟಿಸಬೇಕು. ಆಕೆಗೆ ಕರಾರಿಲ್ಲದ ಪ್ರೀತಿಯನ್ನು ಪ್ರಕಟಿಸಬೇಕು. ಅವಳನ್ನು ಗೌರವಿಸಬೇಕು. ದಿನವೂ ತಬ್ಬಿಕೊಂಡು ಪ್ರೀತಿಯ ಮಳೆಗರೆಯಬೇಕು. ಇತ್ಯಾದಿ.

ಇದರ ಫಲಶ್ರುತಿ ಏನಾಗಬಹುದು? ಇದರಿಂದ ಆಕೆಯ ಸಬಲೀಕರಣ ಆಗಲು ಅನುಕೂಲ ಆಗುತ್ತದೆ. ಆಗಾಕೆ ಮುಕ್ತಮನಸ್ಸಿನಿಂದ ಇವರನ್ನು ಬಯಸುತ್ತಾಳೆ. ಇವರ ಹತ್ತಿರವಾಗುತ್ತಾಳೆ. ಇಷ್ಟೆಲ್ಲ ನಡೆಯುವಾಗ ಆಕೆಯಲ್ಲಿ ಕಾಮಾಪೇಕ್ಷೆ ಹುಟ್ಟುತ್ತದೆಯೇ ಎಂದು ಕೇಳಿದ್ದಕ್ಕೆ ನನ್ನ ಉತ್ತರ ಸರಳವಾಗಿತ್ತು: ಹೆಣ್ಣುಗಂಡೆನ್ನದೆ, ಚಿಕ್ಕವರು-ದೊಡ್ಡವರು ಎನ್ನದೆ ಪ್ರತಿಯೊಬ್ಬರಿಗೂ ಕಾಮೇಚ್ಛೆಯಿದೆ. ಕಾಮೇಚ್ಛೆ ಹುಟ್ಟುಗುಣ. ಅದು ಸಹಜವಾಗಿಯೇ ಪ್ರಕಟವಾಗುತ್ತದೆ – ಅದನ್ನು ಹತ್ತಿಕ್ಕುವ ಘಟನೆಗಳು ನಡೆಯದಿದ್ದರೆ! ಎಲ್ಲಕ್ಕಿಂತ ಮುಖ್ಯವಾಗಿ ಕಾಮಕೂಟದಲ್ಲಿ ಒಳಗೊಳ್ಳುವ ನಿರ್ಧಾರ ಆಕೆಯೆದೇ ಆಗಬೇಕು ಎಂದು ನೆನಪುಮಾಡಿಕೊಟ್ಟೆ.

ಹೀಗೆ, ಪುರುಷ ಪ್ರಾಧಾನ್ಯತೆಯ ಕಾಮಕೂಟವನ್ನು ಬಿಡದ ಹೊರತೂ ಅನ್ಯೋನ್ಯತೆಯ ಕಾಮಸಂಬಂಧ ಶುರುವಾಗಲಾರದು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕಾಮಕೂಟವು ಸಂತತವಾಗಿ ನಡೆಯುತ್ತಿರುವ ದೀರ್ಘ ದಾಂಪತ್ಯಗಳಲ್ಲಿ ಲೈಂಗಿಕ ಸಾಮರಸ್ಯ ಇರುತ್ತದೆಯೆ?

201: ಪುರುಷರ ನಾಕನರಕ: 10

ಪುರುಷ ಪ್ರಧಾನ ಸಂಸ್ಕೃತಿಯು ಸ್ತ್ರೀಯರಲ್ಲದೆ ಪುರುಷರನ್ನೂ ಹೇಗೆ ಸಂಕಷ್ಟಕ್ಕೆ ಗುರಿಮಾಡಿದೆ ಎಂದು ಒಂಬತ್ತು ಕಂತುಗಳಲ್ಲಿ ವಿವರಿಸಿದ್ದೇನೆ. ಇಷ್ಟಾದರೂ ಸದ್ಭಾವನೆಯುಳ್ಳ ಕೆಲವರು ಗಂಡಸರು ಇದನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಸತ್ವವಿಲ್ಲದಿದ್ದರೆ ಸಾವಿರಾರು ವರ್ಷಗಳಿಂದ ಜಗತ್ತಿನಾದ್ಯಂತ ಎಲ್ಲ ಪರಂಪರೆಗಳಲ್ಲೂ ಉಳಿದುಬರುತ್ತಿತ್ತೆ ಎಂದು ಪ್ರಶ್ನಿಸಬಹುದು. ಸ್ತ್ರೀಯರ ಹಾಗೂ ಮಕ್ಕಳ ಅತ್ಯಾಚಾರಿಗಳನ್ನು ಬಿಟ್ಟರೆ ಉಳಿದ ಪುರುಷರೆಲ್ಲ ತಾವು ಪ್ರೀತಿಸುವ ಹೆಣ್ಣಿನ ಹಾಗೂ ತಮ್ಮ  ಕುಟುಂಬದ ಸಲುವಾಗಿ ಹಗಲಿರುಳೂ ಪರಿಶ್ರಮ ಪಡುವುದನ್ನು ನೆನೆಸಿಕೊಂಡು ಇದು ಪುರುಷಪ್ರಧಾನ ವ್ಯವಸ್ಥೆಯ ಫಲವಲ್ಲವೆ ಎಂದು ಸವಾಲು ಎಸೆಯಬಹುದು. ಆದರೆ ನಾವೀಗ ಮಾತಾಡುತ್ತಿರುವುದು ದಾಂಪತ್ಯ-ಲೈಂಗಿಕ ಆಯಾಮದಲ್ಲಿ. ದಂಪತಿಗಳ ನಡುವೆ ಲೈಂಗಿಕ ಸಾಮರಸ್ಯವನ್ನು ತಂದುಕೊಳ್ಳುವ ನಿಟ್ಟಿನಲ್ಲಿ ಪುರುಷ ಪ್ರಧಾನತೆಯು ಹೇಗೆ ಪ್ರಭಾವ ಬೀರುತ್ತದೆ? ಪುರುಷ ಪ್ರಧಾನತೆಯ ದಾಂಪತ್ಯ ನಡೆಸುತ್ತ ಲೈಂಗಿಕ ಸುಖವನ್ನು ಸವಿಯಲಿಕ್ಕಾಗದೆ ನೆರವಿಗಾಗಿ ನನ್ನಲ್ಲಿಗೆ ಧಾವಿಸಿದವರು ಸಾವಿರಾರು ಪುರುಷರಿದ್ದಾರೆ. ಅವರಲ್ಲಿ ಒಬ್ಬರ ದೃಷ್ಟಾಂತವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 

ಇವರು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಸರದಿಂದ ಬಂದವರು. ಸ್ವತಃ ಕಷ್ಟಬಿದ್ದು ಅತ್ಯುಚ್ಚ ಶಿಕ್ಷಣ ಪಡೆದು ವಿದ್ವಾಂಸರಾಗಿ, ಸಮಾಜಮುಖೀ ಕಾರ್ಯಕ್ರಮಗಳನ್ನು ಕೈಗೊಂಡಿರುವವರು – ಹಾಗಾಗಿ ಇವರನ್ನು ಪಂಡಿತರು ಎಂದೇ ಕರೆಯೋಣ. ಪಂಡಿತರು ಮದುವೆ ಮಾಡಿಸಿಕೊಂಡು ಮೂರೂವರೆ ದಶಕ ದಾಟಿದ್ದು ಮಕ್ಕಳೂ ಮೊಮ್ಮಕ್ಕಳೂ ಇದ್ದಾರೆ. ಹೆಂಡತಿ ಹತ್ತು ವರ್ಷ ಚಿಕ್ಕವಳಿದ್ದು, ವಿಧೇಯಳಾಗಿ ಸತೀಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾಳೆ. ಇವರಿಗೂ ಲೈಂಗಿಕ ಸಮಸ್ಯೆಯಿದೆ. ಹಾಗೆ ನೋಡಿದರೆ ಸಮಸ್ಯೆ ಇವರದಲ್ಲ, ಇವರ ಹೆಂಡತಿಯದು. ಆಕೆಗೆ ಕಾಮಕೂಟದಲ್ಲಿ ಮೊದಲಿನಿಂದರೂ ಏನೇನೂ ಆಸಕ್ತಿಯಿಲ್ಲ. ಇವರೇ ಮೈಮೇಲೆ ಹೋದರೆ ಹೆಚ್ಚಿನಂಶ ಒಲ್ಲೆನ್ನದೆ ಸಹಕರಿಸುತ್ತಾಳೆ. ಕೆಲವೊಮ್ಮೆ ಸಂಭೋಗದ ಕೊನೆಕೊನೆಗೆ ಇವರು ಆಕೆಯ ಖಾಸಗೀ ಭಗಾಂಕುರಕ್ಕೆ ಬೆರಳು ಆಡಿಸಿದರೆ ಖುಷಿಯಿಂದ ಅನುಭವಿಸುತ್ತಾಳೆ. ವಿಷಾದದ ಸಂಗತಿ ಏನೆಂದರೆ, ಇಲ್ಲಿಯ ತನಕದ ಕಾಮಕೂಟಗಳಲ್ಲಿ ಆಕೆ ಒಮ್ಮೆಯಾದರೂ ಗಂಡನ ಮೈ ಮುಟ್ಟಿಲ್ಲ, ಕೈಯಾಡಿಸಿಲ್ಲ – ತಾನೇ ಆಸಕ್ತಿಯಿಂದ ಹತ್ತಿರ ಬರುವುದಂತೂ ದೂರ ಉಳಿಯಿತು. ಹಾಗಾಗಿ ಪಂಡಿತರಿಗೆ ಮೈಸುಖ ಹಕ್ಕಿನಿಂದ ಸಿಕ್ಕರೂ ತೃಪ್ತಿಯಿಲ್ಲ. ಇನ್ನು ಕೆಲವೊಮ್ಮೆ ಆಕೆ ಗಂಡನನ್ನು ಹತ್ತಿರ ಬರಗೊಡಿಸುವುದಿಲ್ಲ. ಆಗ ಇವರೇ ಬಲವಂತದಿಂದ ಮೈಮೇಲೆ ಬಿದ್ದು, ಏಟುತಿಂದು ಹಿಮ್ಮೆಟ್ಟಿದ್ದಾರೆ. ಕೈಮುಗಿದು ಬೇಡಿಕೊಂಡರೂ, ಕಣ್ಣೀರುಗರೆದರೂ ಆಕೆ ಒಪ್ಪಿಲ್ಲ. ಹಾಗಿದ್ದರೂ ಇವರು ಹೊರಹೆಣ್ಣಿನ ಬಗೆಗೆ ಯೋಚಿಸಿಲ್ಲ. ಹೆಂಡತಿಯನ್ನು ಅಪಾರ ಪ್ರೀತಿಸುತ್ತಿದ್ದು, ಆಕೆಯಿಂದಲೇ ಸುಖಪಡಲು ಹೆಣಗುತ್ತಿದ್ದಾರೆ.

ಇನ್ನೊಂದು ವಿಷಯ ಏನೆಂದರೆ, ಹೆಂಡತಿಗೆ ಇವರ ಆರ್ಥಿಕ ವ್ಯವಹಾರದಲ್ಲಿ ಮಾತ್ರ ಏನೇನೂ ನಂಬಿಕೆಯಿಲ್ಲ. ಪಂಡಿತರು ತಿಂಗಳ ಆದಾಯವನ್ನು ಬಿಲ್ ಸಹಿತ ಆಕೆಗೆ ಕೈಯಾರೆ ಒಪ್ಪಿಸಿ, ಖರ್ಚಿಗೆ ಹಣ ಪಡೆದುಕೊಳ್ಳುತ್ತಿದ್ದರೂ, “ಎಷ್ಟು ಗಳಿಸಿದ್ದೀರಿ ಎನ್ನುವುದನ್ನು ಬಿಡಿ, ಎಷ್ಟು ಮಹಾ ಉಳಿಸಿದ್ದೀರಿ?” ಎಂದು ಇವರ ಬಾಯಿ ಕಟ್ಟಿಬಿಡುತ್ತಾಳೆ. ಹೀಗೆ ಪಂಡಿತರ ಜೀವವನ್ನು ಖಜೀಲ ಮಾಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. “ಉಳಿದ ವಿಷಯಗಳಲ್ಲಿ ಆಕೆ ಉತ್ತಮ ಗೃಹಿಣಿ. ಮಕ್ಕಳನ್ನೂ, ಮೊಮ್ಮಕ್ಕಳನ್ನೂ ನನ್ನನ್ನೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾಳೆ – ಹಾಸಿಗೆಸುಖ ಒಂದು ಬಿಟ್ಟು!” ಎಂದು ಪಂಡಿತರು ನಿಟ್ಟುಸಿರು ಬಿಟ್ಟು ಕಣ್ಣು ಒದ್ದೆಮಾಡಿಕೊಳ್ಳುತ್ತಾರೆ. ಅವರ ಸೂಕ್ಷ್ಮ ಮನಸ್ಸು ಒಳಗೊಳಗೇ ನೋವು ತಿನ್ನುತ್ತಿರುವುದು ಎದ್ದುಕಾಣುತ್ತದೆ.

ಪಂಡಿತರ ಬಾಲ್ಯದ ಬಗೆಗೆ ಕೇಳಿದಾಗ ತಿಳಿದದ್ದು ಇದು: ಅವರು ಬೆಳೆದ ಹಳ್ಳಿಯ ದೊಡ್ಡ ಕುಟುಂಬದ ವಾತಾವರಣವು ವೈಯಕ್ತಿಕ ಬೆಳವಣಿಗೆಗೆ ಏನೇನೂ ಪೂರಕ ಆಗಿರಲಿಲ್ಲ. ಅಪ್ಪನಿಂದ ಶಿಕ್ಷೆ, ಬೈಗಳು ಸಿಕ್ಕಿದ್ದೇ ವಿನಾ ಪ್ರೀತಿ, ಕಾಳಜಿ ಸಿಗಲಿಲ್ಲ. ಊಟಗಳಿಗಿಂತ ಏಟುಗಳನ್ನು ಹೆಚ್ಚಾಗಿ ತಿಂದಿದ್ದಿದೆ. ಸಾಕಾಗದ್ದಕ್ಕೆ ಶರೀರವು ಸಣ್ಣಗೆ ಇದ್ದುದರಿಂದ ಗೇಲಿಗೆ ಒಳಗಾಗಿ ಅವಮಾನ ಅನುಭವಿಸಿದ್ದಿದೆ. ಇದ್ದುದರಲ್ಲೇ ಅಜ್ಜನ ಪ್ರೀತಿ ಸುಮಾರು ಸಿಕ್ಕಿದೆ. ಇಂಗ್ಲೀಷ್ ಬರುವುದಿಲ್ಲವೆಂದು ಕೀಳರಿಮೆ ಹುಟ್ಟಿದ್ದರಿಂದ ಆ ಭಾಷೆಯನ್ನು ಕಲಿತು ಪರಿಣಿತಿ ಸಂಪಾದಿಸಿದ್ದಾರೆ. ಪುಣ್ಯ, ಗಂಡಸಾಗಿದ್ದು ಅನುಕೂಲವಾಯಿತು – ಯಾಕೆಂದರೆ ಅವರ ವಾತಾವರಣದಲ್ಲಿ ಹೆಣ್ಣನ್ನು ಕೀಳಾಗಿ ನೋಡಲಾಗುತ್ತದೆ. ಹಾಗಾಗಿ ಗಂಡಸುತನ ಒಂದೇ ಮಹತ್ತರ ಅಂಶವಾಗಿ ಅವರ ನೆರವಿಗೆ ಬಂದಿದೆ. ಅದೇ ಗಂಡಸುತನವೇ ಕಾಮಸುಖಕ್ಕೆ ಅರ್ಹತೆಯನ್ನು ದಯಪಾಲಿಸಿ ಹೆಂಡತಿಯನ್ನು ಭೋಗಿಸುವಂತೆ, ಪ್ರೀತಿಸುವಂತೆ ಪ್ರೇರೇಪಿಸುತ್ತಿದೆ.

ಪಂಡಿತರ ಕಾಮಕೂಟದಲ್ಲಿ ಇನ್ನೊಂದು ಸಮಸ್ಯೆ ಹುಟ್ಟಿಕೊಂಡಿದೆ. ಹಲವು ತಿಂಗಳಿಂದ ಹೆಂಡತಿಗೆ ಮುಟ್ಟು ನಿಂತಿದೆ. ಯೋನಿದ್ರವ ಕಡಿಮೆಯಾಗಿದೆ. ಸಂಭೋಗವೆಂದರೆ ಆಕೆಯ ಮೈಮೇಲೆ ಮುಳ್ಳು ಬರುತ್ತವೆ. ಆದರೂ ನಡೆಯಬೇಕಾದುದು ನಿಂತಿಲ್ಲ. ಅದು ಹೇಗೆ ಎಂದು ಕೇಳುವ ಮುಂಚೆ ಪಂಡಿತರೇ ವಿವರಿಸಿದರು. ಕೆಲವು ವರ್ಷಗಳ ಹಿಂದೆ “ಸುಖೀಭವ” ಅಂಕಣದಲ್ಲಿ ಕೊಟ್ಟ ಸಲಹೆಯನ್ನು ಅನುಸರಿಸುತ್ತಿದ್ದಾರೆ. ಹೆಂಡತಿಯು ಮಲಗಿ ತನ್ನ ಜನನಾಂಗದ ಮುಂದೆ ಮುಷ್ಟಿಯನ್ನು ಸಡಿಲವಾಗಿ ಕಟ್ಟುತ್ತಾಳೆ. ಅವರು ಆಕೆಯ ತೊಡೆಗಳ ನಡುವೆ “ಮುಷ್ಟಿ-ಮೈಥುನ” ನಡೆಸುತ್ತಾರೆ.

ಇವರ ಲೈಂಗಿಕ ಅಸಾಮರಸ್ಯದ ಪರಿಣಾಮ ಎಲ್ಲಿಯ ತನಕ ಹೋಗಿದೆ ಎಂದು ತಿಳಿದುಕೊಂಡೆ. ಇವರಿಬ್ಬರ ಒತ್ತಾಯ-ಪ್ರತಿರೋಧದ ವಿಷಚಕ್ರವು ಮಲಗುವ ಕೋಣೆಯಿಂದ ಹೊರಹರಿದು ಕುಟುಂಬದ ನೆಮ್ಮದಿಯ ಮೇಲೆ ಹಾಯ್ದುಹೋಗಿದೆ. ವಿಪರೀತ ಜಗಳಗಳಾಗಿ ಆಕೆ ತಲೆಕೆಟ್ಟಂತೆ ವರ್ತಿಸಿದಾಗ ಮನೋರೋಗ ತಜ್ಞರಿಂದ ಔಷಧಿ ಕೊಡಿಸಿದ್ದಾರೆ. ಆಕೆಯ ಉಗ್ರತೆ ಕಡಿಮೆಯಾದರೂ ಕಾಮಾಸಕ್ತಿಯನ್ನು ಹುಟ್ಟಿಸಲು ಉಪಯೋಗ ಆಗಲಿಲ್ಲ. ಔಷಧಿಯಿಂದ ಸರಿಹೋಗಲು ಕಾಮಾಸಕ್ತಿಯೇನು ಕಾಯಿಲೆ ಕೆಟ್ಟುಹೋಯಿತೆ?

ನನಗೊಂದು ಪ್ರಶ್ನೆ ಮೂಡಿತು: ಇಷ್ಟುವರ್ಷ ಸುಮ್ಮನಿದ್ದವರು ಈಗ ತಜ್ಞರನ್ನು ಭೇಟಿಮಾಡುವ ಕಾರಣವೇನು? ಪಂಡಿತರು ಅದನ್ನೂ ವಿವರಿಸಿದರು. ಇತ್ತೀಚೆಗೆ ಇನ್ನೊಂದು ವಿಷಯ ಕಾಡತೊಡಗಿದೆ. ಇವರಿಗೆ ಶೀಘ್ರವೇ ಅರವತ್ತು ದಾಟಲಿದೆ. ಆಗ ಶಿಶ್ನದ ದೌರ್ಬಲ್ಯ ಕಾಣಿಸಿಕೊಂಡು ಸಂಭೋಗ ಅಸಾಧ್ಯವಾದರೆ ಸುಖದ ಏಕೈಕ ಹಾದಿಯೂ ಮುಚ್ಚಿಬಿಡಬಹುದು ಎಂಬ ಭಯ ಕಾಡುತ್ತಿದೆ. ಹಾಗಾಗಿ ಸುಖಕ್ಕೋಸ್ಕರ ಹೆಂಡತಿಯನ್ನು ಮುಂಚೆಗಿಂತ ಹೆಚ್ಚು ಒತ್ತಾಯಿಸುತ್ತಿದ್ದಾರೆ. ಒತ್ತಾಯ ಮಾಡಿದಷ್ಟೂ ಆಕೆ ಕಲ್ಲಾಗುತ್ತಿದ್ದಾಳೆ.

ಇಲ್ಲೇನು ನಡೆಯುತ್ತಿದೆ ಎಂಬುದನ್ನು ಗ್ರಹಿಸಲು ಯತ್ನಿಸಿದೆ. ಮಧ್ಯವಯಸ್ಸು ದಾಟುತ್ತಿರುವ ಈ ದಂಪತಿಯಲ್ಲಿ ಮೂರೂವರೆ ದಶಕಗಳಿಂದ ಕಾಮಕೂಟ ಸಂತತವಾಗಿ ನಡೆಯುತ್ತಿದೆ. ಹಾಗಿದ್ದರೂ ಲೈಂಗಿಕ ಸಾಮರಸ್ಯ ಇಲ್ಲ! ದಿಗ್ಭ್ರಮೆ ಆಯಿತು. ಮೈಗಳು ಕೂಡುತ್ತಿದ್ದರೂ ಮನಗಳು ಕೂಡಲಿಲ್ಲವಲ್ಲ ಎಂದು ವಿಷಾದ ಅನ್ನಿಸಿತು.

ಪಂಡಿತರಿಗೆ ನನ್ನಿಂದ ಏನು ಸಹಾಯ ಆಗಬೇಕು ಎಂದು ಕೇಳಿದಾಗ ಅವರ ಉತ್ತರ ನೇರವಾಗಿತ್ತು. ಹೆಂಡತಿಗೆ ಕಾಮಾಸಕ್ತಿ ಬರುವಂತೆ ಮಾಡಬೇಕು. ಆಕೆ ತಮ್ಮೊಡನೆ ಕಾಮಸುಖವನ್ನು ಹಂಚಿಕೊಳ್ಳುವ ಹಾಗೆ ಆಗಬೇಕು. ಅಂದರೆ ಬದಲಾವಣೆ ಹೆಂಡತಿಯಲ್ಲಿ ಆಗಬೇಕು. ಅವರಲ್ಲಿ?

ಅದಿರಲಿ, ಪಂಡಿತರ ಕತೆಗೂ ಪುರುಷ ಪ್ರಾಧಾನ್ಯತೆಗೂ ಏನು ಸಂಬಂಧ? ಅದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಪುರುಷ ಪ್ರಧಾನ ಸಂಸ್ಕೃತಿಯು ಲೈಂಗಿಕ ವಿಜ್ಞಾನದ ಸಂಶೋಧನೆಗಳ ಮೇಲೂ ತನ್ನ ಪ್ರಭಾವ ಬೀರಿದೆ!

199: ಪುರುಷರ ನಾಕನರಕ: 8

ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಕಾಮಕೂಟದಲ್ಲಿ ಪಾರಮ್ಯವನ್ನು ಸಾಧಿಸಲು ಗಂಡಿಗೂ, ಗಂಡಿನ ಪಾರಮ್ಯವನ್ನು ಒಪ್ಪಿಕೊಳ್ಳಲು ಹೆಣ್ಣಿಗೂ ಹೇಳಿಕೊಡಲಾಗಿದೆ; ಹಾಗೂ ಈ ಮಾದರಿಯನ್ನು ಒಪ್ಪಿಕೊಂಡು ಗಂಡು ಕೊಟ್ಟಷ್ಟು ಸುಖಪಡುವ ಹೆಂಗಸರ ದಾಂಪತ್ಯವು ಚೆನ್ನಾಗಿ ನಡೆಯುತ್ತದೆ ಎಂದು ಹೇಳುತ್ತಿದ್ದೆ.

ನನ್ನ ಈ ವಾದವನ್ನು ಪುರುಷ ಪ್ರಧಾನ ದಾಂಪತ್ಯದಲ್ಲಿರುವ ಕೆಲವು ಹೆಂಗಸರೇ ಒಪ್ಪಿಕೊಳ್ಳಲಿಕ್ಕಿಲ್ಲ. ಇಂಥವರ ಆಲೋಚನೆಯು ಎರಡು ದಿಕ್ಕುಗಳಲ್ಲಿ ಸಾಗುತ್ತದೆ. ಒಂದು: ಹೆಂಗಸರಾಗಿ ನಮಗೆ ಕಾಮಕೂಟದಲ್ಲಿ ಸಿಗಲಾರದ ಸುಖವು ಕೌಟುಂಬಿಕ ಭದ್ರತೆಯಲ್ಲಿ ಸಿಗುತ್ತದೆ. ಭದ್ರತೆಯ ಸಲುವಾಗಿ ಸ್ವಂತದ ಕಾಮಸುಖವನ್ನು ತ್ಯಾಗ ಮಾಡುವುದು ದೊಡ್ಡದೇನಲ್ಲ. ಇವರಿಗೆ ನನ್ನ ಪ್ರಶ್ನೆ: ಒಂದುವೇಳೆ ಕೌಟುಂಬಿಕ ಭದ್ರತೆಯ ಜೊತೆಗೆ ಕಾಮತೃಪ್ತಿಯೂ ಸಿಗುತ್ತಿದ್ದರೆ ನಿಮ್ಮ ಬದುಕು ಹೇಗಿರುತ್ತಿತ್ತು? ನಿಜವಾಗಿ ಹೇಳಬೇಕೆಂದರೆ, ಕಾಮತೃಪ್ತಿಯೇ ಬೇರೆ, ಕೌಟುಂಬಿಕ ತೃಪ್ತಿಯೇ ಬೇರೆ. ಒಂದರ ಕೊರತೆಯನ್ನು ಇನ್ನೊಂದನ್ನು ಹೆಚ್ಚಿಸುವುದರ ಮೂಲಕ ಭರ್ತಿ ಮಾಡಲು ಆಗುವುದಿಲ್ಲ. ಹಾಗಾಗಿ ಬಿಟ್ಟುಕೊಟ್ಟಿದ್ದು ತ್ಯಾಗವಲ್ಲ, ಬಲಿದಾನ ಆಗುತ್ತದೆ. ಅಷ್ಟಲ್ಲದೆ, ಕೂಟದಲ್ಲಿ ತನ್ನನ್ನು ಪೂರ್ತಿ ಕೊಟ್ಟುಕೊಂಡರೂ ಮರೀಚಿಕೆಯಾಗುವ ಕಾಮಸುಖವನ್ನು ನೆನಪಿಸಿಕೊಂಡರೆ ಎಂಥದ್ದೇ ಭದ್ರ ಕುಟುಂಬದ ಹೆಣ್ಣಿಗೂ ವ್ಯಗ್ರತೆ, ಸಂಕಟ ಕಾಡುತ್ತದೆ.

ಎರಡು: ಪುರುಷ ಪ್ರಧಾನ ಕುಟುಂಬದ ಕೆಲವರು ಹೆಂಗಸರು ಹೇಳುವುದೇನೆಂದರೆ, ಹೆಣ್ಣಾಗಿ ನನಗೆ ಕೆಲವು ಸಲವಾದರೂ ಕಾಮತೃಪ್ತಿ ಆಗಿದೆ; ಇದನ್ನು ಹೇಗೆ ಅಲ್ಲಗಳೆಯಲಾದೀತು? ನಿಜ. ನಿಮಗೆ ತೃಪ್ತಿ ಸಿಕ್ಕಿದೆ, ಸಂತೋಷ. ಆದರೆ ನನ್ನದೊಂದು ಪ್ರಶ್ನೆ: ನಿಮಗೆ ಸಿಕ್ಕಿದ್ದು ಸಂಪೂರ್ಣ ತೃಪ್ತಿಯೇ ಎಂದು ಹೇಗೆ ಹೇಳಬಲ್ಲಿರಿ? ಹಾಗೂ, ಹೆಚ್ಚಿನ ಸಂಖ್ಯೆಯ ಕೂಟಗಳಲ್ಲಿ ಇದನ್ನು ಅನುಭವಿಸಿದ್ದೀರಾ? ಹೀಗೆ ಪ್ರಶ್ನಿಸುವುದಕ್ಕೆ ಕಾರಣವಿದೆ. ಗಂಡಿನ ಶೀಘ್ರಸ್ಖಲನದ ಅಧ್ಯಯನ ಹಾಗೂ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಲೈಂಗಿಕ ಶಾಸ್ತ್ರಜ್ಞರಾದ ಮಾಸ್ಟರ್ಸ್ ಹಾಗೂ ಜಾನ್ಸನ್ (Masters and Johnson) ದ್ವಯರು ಏನು ತೀರ್ಮಾನಕ್ಕೆ ಬಂದಿದ್ದಾರೆ ಗೊತ್ತೆ? ಶೀಘ್ರಸ್ಖಲನಿಯ ಸಂಗಾತಿಯು ಸುಮಾರು ಶೇ. 50ರಷ್ಟು ಕಾಮಕೂಟಗಳಲ್ಲಿ ತೃಪ್ತಿ ಹೊಂದಿದರೆ ಅದು “ಶೀಘ್ರ”ಸ್ಖಲನ ಎನ್ನಿಸಿಕೊಳ್ಳಲಾರದು! ಬಿಡಿಸಿ ಹೇಳಬೇಕೆಂದರೆ, ನಿಮ್ಮ ಗಂಡ ಸಂಭೋಗದಲ್ಲಿ ನೂರಕ್ಕೆ ನೂರು ಸಲ ತೃಪ್ತಿ ಹೊಂದುವಾಗ ನಿಮಗೆ ಐವತ್ತರಲ್ಲಿ ಸುಖ ಸಿಕ್ಕರೆ ತೆಪ್ಪಗೆ ಒಪ್ಪಿಕೊಳ್ಳಿ! ಇದೇ ಮಾತನ್ನು ತಿರುಗಿಸಿ ಪುರುಷರಿಗೇ ಅನ್ವಯಿಸುವ ಹಾಗಿದ್ದರೆ ಹೇಗಿರುತ್ತದೆ? ಅಂದರೆ, “ಶೇ. 50ರಷ್ಟು ಸಂಭೋಗಗಳಲ್ಲಿ ಗಂಡಸರಿಗೆ ಕಾಮತೃಪ್ತಿ ಹೊಂದಿದರೆ ಪುರುಷರ ಲೈಂಗಿಕ ಜೀವನ ತೃಪ್ತಿಕರ ಎನ್ನಬಹುದು” ಎಂದು ನಾನು ಶಿಫಾರಸು ಮಾಡಿದರೆ ಗಂಡಸರೆಲ್ಲ ನನ್ನೊಡನೆ ಜಗಳಕ್ಕೆ ಬರಬಹುದು! ಹೀಗೆ ವಸ್ತುನಿಷ್ಠವಾದ ವೈಜ್ಞಾನಿಕ ಸಂಶೋಧನೆಗಳಲ್ಲೂ ಪುರುಷ ಪ್ರಧಾನ ಸಂಸ್ಕೃತಿಯ ಪ್ರಭಾವ ಕಾಣುತ್ತಿದ್ದು, ಹೆಂಗಸರ ಬಯಕೆಗಳನ್ನು ಗಂಡಿನ ಕಣ್ಣಿನಿಂದಲೇ ನೋಡಲಾಗಿದೆ ಎಂಬುದು ದುರಂತ. ಹೆಣ್ಣಿಗೆ ವಾಸ್ತವವಾಗಿ ಸಿಗುತ್ತಿರುವುದು ಏನು, ಹಾಗೂ ಎಷ್ಟರ ಮಟ್ಟಿಗೆ ಎನ್ನುವುದರ ಬಗೆಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ವಿಚಿತ್ರ ಎಂದರೆ ಇದೇ ಅಧ್ಯಯನದಲ್ಲಿ ಹೆಣ್ಣು ಒಂದು ಕೂಟದಲ್ಲಿ ಹಲವು ಸಲ ಭಾವಪ್ರಾಪ್ತಿ (orgasm) ಹೊಂದಬಲ್ಲಳು ಎಂದೂ ಕಂಡುಬಂದಿದೆ. ತನ್ನವಳಿಗೆ ಅರ್ಧಕ್ಕರ್ಧ ಸಂಭೋಗಗಳಲ್ಲಿ ತೃಪ್ತಿ ಕೊಡುತ್ತಿದ್ದೇನೆ ಎಂದು ಸಮಾಧಾನ ಪಟ್ಟುಕೊಳ್ಳುವ ಗಂಡಸರು ಯಾವೊತ್ತಾದರೂ ಆಕೆಗೆ ಬಹುಭಾವಪ್ರಾಪ್ತಿ ಸಿಗುವಂತೆ ನೋಡಿದ್ದಾರೆಯೆ?

ವಾಸ್ತವ ಹೀಗಿದ್ದರೂ ಪುರುಷ ಪ್ರಧಾನ ದಾಂಪತ್ಯದಲ್ಲಿ ಹೆಂಗಸರು ತಮಗೆ ಸಾಕಷ್ಟು ಕಾಮತೃಪ್ತಿ ಸಿಗುತ್ತಿದೆ ಎಂದು ಅಂದುಕೊಂಡಿರುವುದಕ್ಕೆ ಕಾರಣವೇನು? ಕ್ಷಮಿಸಿ, ಅತಿರೇಕದ ಉಪಮಾನವನ್ನೇ ಕೊಡುತ್ತಿದ್ದೇನೆ. ನನ್ನ ಪ್ರಕಾರ ಇದೊಂದು ರೀತಿ ಸ್ಟಾಕ್‌ಹೋಮ್ ಸಿಂಡ್ರೋಮ್ (Stockholm syndrome). ಅಂದರೆ ವಿಮಾನ ಅಪಹರಣದ ಪ್ರಕರಣಗಳಲ್ಲಿ ಒತ್ತೆಯಾಳುಗಳಾಗಿ ಬದುಕಿ ಬಂದವರ ಪೈಕಿ ಕೆಲವರು ಅಪಹರಣಕಾರರ ಬಗೆಗೆ ಕೃತಜ್ಞತೆ, ಸಹಾನುಭೂತಿ ತೋರಿಸುವುದು ಕಂಡುಬಂದಿದೆ. ಯಾಕೆ? ಕುಳಿತಲ್ಲಿಂದ ಅಲುಗಾಡಿದರೆ ಬೆದರಿಸುವ ಕ್ರೂರಿಗಳು ಕರುಣೆದೋರಿ ಮಲಮೂತ್ರಕ್ಕೆ ಹೋಗಲು ಅನುಮತಿ ಕೊಟ್ಟು ಮರ್ಯಾದೆ ಉಳಿಸಿದರಲ್ಲ, ಎಂಥ ಮಹಾನುಭಾವರು ಇವರು! ಇದೇ ಮಾತು ಪುರುಷ ಪ್ರಧಾನ ಕುಟುಂಬದಲ್ಲಿ ಬೆಳೆದ ಹೆಣ್ಣಿನ ಬದುಕಿಗೆ ಅನ್ವಯಿಸುತ್ತದೆ. ಇಷ್ಟು ವರ್ಷ ಆಕೆಗೆ ಭದ್ರತೆ, ಪೋಷಣೆ ಕೊಡುತ್ತ ಕಾಮದ ಮುಕ್ತ ಅಭಿವ್ಯಕ್ತಿಯನ್ನು ನಿಷೇಧಿಸಿದ್ದ ಹಿರಿಯರು ಈಗ ಮನಸ್ಸು ಬದಲಾಯಿಸಿ ಒಂದು ಗಂಡಿನ ಎದುರು ಬೆತ್ತಲಾಗಲು ಅವಕಾಶ ಕೊಡುತ್ತಿದ್ದಾರೆ. ಇದು ತೃಪ್ತಿಯಲ್ಲದೆ ಇನ್ನೇನು? ಹೀಗೆ ಕಟ್ಟುಭದ್ರತೆಯಿಂದ ಮುಕ್ತ ಸಾಧ್ಯತೆಯ ಕಡೆಗೆ ಇಡುವ ಮೊದಲ ಹೆಜ್ಜೆ ಹೆಣ್ಣಿಗೆ ಖಂಡಿತವಾಗಿಯೂ ಅಪ್ಯಾಯ ಆಗುತ್ತದೆ. ಇದಕ್ಕೊಂದು ದೃಷ್ಟಾಂತ: ಹಳ್ಳಿಯ ಬಡಕುಟುಂಬದ ನಾಲ್ಕು ಗೋಡೆಗಳ ನಡುವೆ ಇದ್ದ ಇವಳನ್ನು ಕೊಳೆಯುವಷ್ಟು ಸಂಪತ್ತಿರುವ ಗಂಡಿಗೆ ಕೊಡಲಾಗಿದೆ. ಕಾಯಿಲೆ ಆದರೂ ತಡವಾಗಿ ಮಲಗಿ ಬೇಗನೆದ್ದು 20 ಜನರ ಮನೆಯನ್ನು ಒಬ್ಬಳೇ ನಿಭಾಯಿಸುತ್ತಾಳೆ. ಗಂಡ ಹೊರಹೆಣ್ಣುಗಳನ್ನು ಸಂಪರ್ಕಿಸಿ ಅಂಟಾದ ಜನನಾಂಗವನ್ನು ಹತ್ತಿರ ತಂದಾಗ ನಿಷ್ಠೆ ತೋರಿಸದಿದ್ದರೆ ಶಿಕ್ಷೆ ಕಾದಿರುತ್ತದೆ. ಒಮ್ಮೆ ಆಕೆ ಊಟ ಮಾಡುತ್ತಿರುವಾಗ ಮಾವನ ಕುಮ್ಮಕ್ಕಿನಿಂದ ಗಂಡ ಬಡಿಯಲು ಶುರುಮಾಡಿದ. ಬೆನ್ನಮೇಲೆ ಏಟುಗಳ ಸುರಿಮಳೆ ಆಗುತ್ತಿದ್ದರೆ ಆಕೆ ತಟ್ಟೆ ಬಿಟ್ಟೆದ್ದಳೆ? ಇಲ್ಲ, ಬದಲಾಗಿ ಕತ್ತು ಬಗ್ಗಿಸಿ ಗಬಗಬನೇ ತಿನ್ನಲು ಶುರುಮಾಡಿದಳು – ನಾಚಿಕೆ ಇಲ್ಲದವಳು ಎಂದು ಇನ್ನಷ್ಟು ಏಟು ತಿಂದಳು. ಕಾರಣ ತಿಳಿದು ನನ್ನೆದೆ ಕಲ್ಲಾಯಿತು. ಊಟ ಬಿಟ್ಟುಬಿಟ್ಟರೆ ಸುಸ್ತಾಗಿ, ಮರುದಿನ ಕೆಲಸ ಮಾಡಲು ಆಗದಿದ್ದರೆ ಮನೆಬಿಟ್ಟು ಹೊರಗೆ ಹಾಕುತ್ತಾರೆ. ಬೀದಿಗೆ ಬಿದ್ದ ತನ್ನನ್ನು ಹೊರಗಿನ ಗಂಡಸರು ರೇಪ್ ಮಾಡಿದರೆ? ಪರಪುರುಷ ಅನ್ನಿಸುವ ಯಾವುದೇ ವ್ಯಕ್ತಿಯ ಬಗೆಗೆ ಆಕೆಗೆ ಇಷ್ಟೊಂದು ಭಯ ಇರಬೇಕಾದರೆ ಗಂಡನಿಂದ ಆಗುವ ಅತ್ಯಾಚಾರವು ಬಹುಶಃ ಆಕೆಗೆ ಸುಖವೇ ಅನ್ನಿಸೀತು. ಹದಿನೈದು ವರ್ಷದ ನನ್ನಮ್ಮನನ್ನು ಸರಕಾರಿ ನೌಕರ ಎನ್ನುವ ಒಂದೇ ಕಾರಣಕ್ಕೆ ಮೂವತ್ತು ವರ್ಷದ, ನಾಲ್ಕು ಮಕ್ಕಳಿರುವ ವಿಧುರನಿಗೆ ಒತ್ತಾಯದಿಂದ ಮದುವೆ ಮಾಡಿ ಕೊಡಲಾಯಿತು. ಆಕೆಗೆ ಕಾಮಸುಖ ಎಂದು ಗೊತ್ತಾಗಿದ್ದು ಎರಡು ಮಕ್ಕಳು ಹಾಗೂ ಆರು ವರ್ಷ ಆದ ನಂತರವೇ.

ಇದರ ತಾತ್ಪರ್ಯವೇನು? ಪುರುಷ ಪ್ರಧಾನ ಕುಟುಂಬಗಳ ದಂಪತಿಗಳಲ್ಲಿ ಕಾಮಕೂಟ ನಡೆಯುವಾಗ ಗಂಡಿನ ಸುಖವು ಜನನಾಂಗದಿಂದ ಬರುತ್ತಿದ್ದರೆ ಹೆಣ್ಣಿನ ಸುಖವು ಹೆಚ್ಚಿನಂಶ ಗಂಡು ಕೊಡುವ ಕೌಟುಂಬಿಕ ಭದ್ರತೆಯಿಂದ ಬರುತ್ತದೆ. ಹಾಗಾಗಿ ಕಾಮದಲ್ಲಿ ಸಿಕ್ಕಿದ್ದೇ ಚರಮ ತೃಪ್ತಿ ಎಂದು ಹೆಣ್ಣು ಭಾವಿಸುವ ಸಂಭವವಿದೆ.

ಇಷ್ಟಾಗಿಯೂ ತಮಗೆ ತೃಪ್ತಿ ಸಿಕ್ಕಿದೆ ಎಂದು ಸಾಧಿಸುವ ಹೆಂಗಸರಿಗೆ ಒಂದು ಸವಾಲು: ನಿಮಗೆ ಯಾವುದೇ ಒಂದು ಕೂಟದಲ್ಲಿ ಒಂದಕ್ಕಿಂತ ಹೆಚ್ಚು ಸಲ ಭಾವಪ್ರಾಪ್ತಿ ಆಗಿದೆಯೆ? ಹೋಗಲಿ, ಅದಕ್ಕಾಗಿ ಪ್ರಯತ್ನವಾದರೂ ಮಾಡಿದ್ದೀರಾ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಕಾಮಕೂಟದ ಮೂಲಕ ಪಾರಮ್ಯ ಸಾಧಿಸಲು ಗಂಡಿಗೂ, ಗಂಡಿನ ಪಾರಮ್ಯವನ್ನು ಒಪ್ಪಿಕೊಳ್ಳಲು ಹೆಣ್ಣಿಗೂ ಹೇಳಿಕೊಡಲಾಗಿದೆ.

198: ಪುರುಷರ ನಾಕನರಕ: 7

ಗಂಡು ತನ್ನ ಗಂಡಸುತನವನ್ನು ಹೊರಗಿಟ್ಟು “ನಿನ್ನಂತೆ ನಾನು” ಎಂಬ ತತ್ವಮಸಿ ಭಾವವನ್ನು ತಂದರೆ ಮಾತ್ರ ಬಾಂಧವ್ಯದ ಕಾಮಕೂಟವು ಅದ್ಭುತ ಅನುಭವವಾಗಲು ಸಾಧ್ಯವಿದೆ ಎಂದು ಹೇಳುತ್ತಿದ್ದೆ.

ನಾನು ಮುಂದಿಡುತ್ತಿರುವ ಪರಿಕಲ್ಪನೆಗೆ ಹೆಚ್ಚಿನವರು – ಹೆಂಗಸರೂ ಸೇರಿ – ಒಪ್ಪದಿರಬಹುದು. ಮನುಷ್ಯರೇಕೆ, ಪ್ರಾಣಿಪಕ್ಷಿಗಳಲ್ಲೂ ಗಂಡೇ ಸಮೀಪಿಸುತ್ತದೆ, ಹೆಣ್ಣು ಒಪ್ಪಿಕೊಳ್ಳುತ್ತದೆ. ಉದಾಹರಣೆಗೆ, ಗಂಡುನಾಯಿ ಅಪರಿಚಿತ ಹೆಣ್ಣುನಾಯಿಯನ್ನು ಕಂಡರೆ ಆಕ್ರಮಣ ಮಾಡುತ್ತದೆ. ಆದರೆ ಬೆದೆಗೆ ಬಂದಾಗ ಬಾಲ ಆಡಿಸುತ್ತ ಮೇಲೇರುತ್ತದೆ; ಹೆಣ್ಣು ಒಪ್ಪಿಕೊಳ್ಳುತ್ತದೆ. ನವಿಲುಗಳಲ್ಲಿ ಗರಿಗೆದರಿ ಜಂಭ ತೋರುವುದು ಗಂಡು ಮಾತ್ರ. ಹೋರಿ ಹಸುವಿನ ಮೇಲೆ ಏರುತ್ತದೆಯೇ ವಿನಾ ಹಸು ಹೋರಿಯ ಮೇಲೆ ಏರುವುದಿಲ್ಲ. ಹಾಗೆಯೇ ಮಾನವರು ಎಷ್ಟೇ ಬುದ್ಧಿ ಬೆಳೆದವರಾದರೂ ಗಂಡು-ಹೆಣ್ಣು ಸಮನಾದರೂ ಕಾಮಕ್ರಿಯೆಗೆ ಬಂದಾಗ ಗಂಡೇ ಹೆಣ್ಣನ್ನು ಓಲೈಸಬೇಕು, ಹೆಣ್ಣು ಒಪ್ಪಿಕೊಳ್ಳಬೇಕು. ಇದು ಇಬ್ಬರಿಗೂ ಹಿತ. ಒಂದುವೇಳೆ ಗಂಡಿಗೆ ಆಸೆಯಿಲ್ಲದಿದ್ದರೆ ಹೆಣ್ಣು ಅವನನ್ನು ಒಲಿಸಿಕೊಳ್ಳಬೇಕು. ಹೀಗೆ ಪುರುಷರಿಂದ ಆರಂಭ, ಸ್ತ್ರೀಯರಿಂದ ಅನುಸರಣೆ ಪ್ರಕೃತಿಯ ಸಹಜ ಧರ್ಮ ಎಂದು ಹೆಚ್ಚಿನವರು ನಂಬಿಕೊಂಡಿರಬಹುದು.

ಇದೇನೋ ಒಂದು ರೀತಿಯಲ್ಲಿ ಸರಿ. ಆದರೆ ಪ್ರಾಣಿಗಳ ಈ ವರ್ತನೆಯ ಉದ್ದೇಶವೇನು? ಸಂತಾನೋತ್ಪತ್ತಿಯೇ ಎನ್ನುವುದರಲ್ಲಿ ಸಂದೇಹವಿಲ್ಲ. ಸಂತಾನೋತ್ಪತ್ತಿಯ ಸಮಯ ಬಂದಾಗ ಮಾನವರೂ ಪ್ರಾಣಿಗಳಂತೆ ವರ್ತಿಸುವುದರ ಬಗೆಗೆ ಸಂಶೋಧನೆಯ ಆಧಾರವಿದೆ. ಹೆಣ್ಣು ಸರ್ವಕಾಲದಲ್ಲೂ ಸ್ನೇಹಪರನಾದ ಸಂಗಾತಿಯನ್ನು ಬಯಸಿದರೆ, ಗರ್ಭಧಾರಣೆಗೆ ಅಂಡವು ಫಲಿತವಾಗುವ ಎರಡು ದಿನಗಳಲ್ಲಿ ಸಮರ್ಥ ಅಂಗಸೌಷ್ಟವ ಇರುವ ಆಕ್ರಮಣಕಾರಿ ಗಂಡಿಗೆ ಅರಿವಿಲ್ಲದೆ ಆಕರ್ಷಿತರಾಗುತ್ತಾರೆ ಎಂದು ತಿಳಿದುಬಂದಿದೆ. ಇದು ಸಂತಾನೋತ್ಪತ್ತಿಗೆ ಗಂಡುಹೆಣ್ಣುಗಳನ್ನು ಸೆಳೆಯಲು ಸೃಷ್ಟಿಯು ಮಾಡಿರುವ ಉಪಾಯ ಎಂಬುದು ಸ್ಪಷ್ಟ. ಇದೇ ಹೆಚ್ಚಿನ ಜನಪ್ರಿಯ ಚಲಚ್ಚಿತ್ರಗಳ ಹೂರಣ ಕೂಡ – ಬೆನ್ನುಹತ್ತುವ ಸಾಹಸಿ ಗಂಡು, ಅನುಸರಿಸುವ ಅಮಾಯಕ ಹೆಣ್ಣು, ಕೊನೆಗೆ ಮದುವೆಯಾಗಿ ಸುಖವಾಗಿದ್ದರು ಎಂಬ ಸಂದೇಶ. ಎಲ್ಲವೂ ಅಪ್ಯಾಯಮಾನ!

ಅದಿರಲಿ, ಮನುಷ್ಯರ ಕೆಲವು ಕ್ರಮಗಳನ್ನು ಸ್ವಲ್ಪ ಗಮನಿಸಿ: ಸಂತಾನ ನಿಯಂತ್ರಣಕ್ಕಾಗಿ ಗರ್ಭನಿರೋಧ ಕ್ರಮದ ಅನುಸರಣೆ, ಸಂತಾನ ಬೇಡವೆಂದು ಶಸ್ತ್ರಚಿಕಿತ್ಸೆ, ಸಂತಾನ ಸಾಧ್ಯವಿಲ್ಲ ಎಂದಮೇಲೂ ಸಂಭೋಗದ ಮುಂದುವರಿಕೆ – ಇಲ್ಲೇನು ಕಾಣುತ್ತಿದೆ? ಕಾಮಕೂಟದಿಂದ ಸಂತಾನದ ಉದ್ದೇಶವನ್ನು ಹೊರಗೆ ಹಾಕಿದ್ದೇವೆ. ಪ್ರಾಣಿಗಳು ಹೀಗೆ ಮಾಡುವುದಿಲ್ಲ! ಈ ವ್ಯತ್ಯಾಸವೇ ಮಾನವರನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸುತ್ತದೆ. ಆದುದರಿಂದ ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸುವುದನ್ನು ನಿಲ್ಲಿಸಿ ಮನುಷ್ಯರನ್ನಾಗಿಯೇ ನೋಡೋಣ.

ಮಾನವರ ಕಾಮಕೂಟದ ಉದ್ದೇಶವೆಂದರೆ ಕಾಮಸುಖ, ಬಾಂಧವ್ಯ, ಒಡನಾಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಷ್ಟಾಗಿ ಅರಿವಿಗೆ ಬರದಿರುವ ಇನ್ನೊಂದು ಉದ್ದೇಶವೂ ಇದೆ. ಇದು ಅರ್ಥವಾಗಲು ಕೆಲವು ದೃಷ್ಟಾಂತಗಳನ್ನು ಕೊಡುತ್ತಿದ್ದೇನೆ:

ಒಂದು: ಈ ಗಂಡಸಿಗೆ ಶೀಘ್ರಸ್ಖಲನದ ಸಮಸ್ಯೆಯಿದೆ. ಇವನ ಹೆಂಡತಿಗೆ ಕೂಟದಲ್ಲಿ ಬಿಡಿ, ಗಂಡನಲ್ಲೇ ಆಸಕ್ತಿಯಿಲ್ಲ. ಕೂಟಕ್ಕೆ ಹಾತೊರೆದರೆ (ಅವನ ಮಾತಿನಲ್ಲಿ) ಕಜ್ಜಿನಾಯಿಯಂತೆ ದೂರವಿಡುತ್ತಾಳೆ. ಎರಡು-ಮೂರು ತಿಂಗಳಿಗೊಮ್ಮೆ ಕೃಪೆ ತೋರುತ್ತಾಳೆ. ಇವನು ಕ್ರಿಯೆ ಮುಗಿಸುವುದನ್ನೇ ಕಾಯುತ್ತಿದ್ದು, ನಂತರ, ಗಂಡಸರೆಲ್ಲ ಕಚ್ಚೆಹರುಕರು ಎಂದು ತುಚ್ಛೀಕರಿಸುತ್ತಾಳೆ. ಅವನ ಸಂಭೋಗದ ಬಯಕೆಯನ್ನು ಆಕೆ ತಿರಸ್ಕರಿಸುತ್ತ ತನ್ನ ಹೆಚ್ಚುಗಾರಿಕೆ ಸಾಧಿಸುತ್ತಿರುವಾಗ ಹೆಚ್ಚುಹೊತ್ತು ಸಂಭೋಗಿಸುವ ಹಾಗಾದರೆ ಅಪರೂಪಕ್ಕೆ ಸಿಗುವುದನ್ನೇ ಹೆಚ್ಚಾಗಿ ಸವಿಯಬಹುದು ಎಂಬಾಸೆಯಿಂದ ನನ್ನಲ್ಲಿ ಬಂದಿದ್ದಾನೆ.

ಎರಡು: ಈ ಹಳ್ಳಿಯ ಹುಡುಗಿ ಯಾವ ಕಾರಣಕ್ಕೋ ಗೊತ್ತಿಲ್ಲ, ಇತ್ತೀಚೆಗೆ ಗಂಡನ ಮೇಲೆ ಮುನಿಸಿಕೊಂಡು ಸಂಭೋಗಕ್ಕೆ ಒಪ್ಪುತ್ತಿಲ್ಲ. ಅಷ್ಟಕ್ಕೂ ಅವನು ಮೈಮೇಲೆ ಬಂದರೆ ತೊಡೆ ಬಿಗಿಹಿಡಿಯುತ್ತಾಳೆ. ಹಾಗಾಗಿ ಮುಂಚೆ ಸುಲಲಿತವಾಗಿ ನಡೆಯುತ್ತಿದ್ದ ಸಂಭೋಗ ಈಗ ಸಾಧ್ಯವಾಗುತ್ತಿಲ್ಲ.  ಮುಂಚೆ ಗಂಡನ ಆಕ್ರಮಣವನ್ನು ಸುಖದಿಂದ ಒಪ್ಪುವವಳು ಈಗ ಒಲ್ಲೆಯೆನ್ನುತ್ತಿದ್ದಾಳೆ. ಗಂಡನಿಗೆ ದಿಕ್ಕು ತೋಚುತ್ತಿಲ್ಲ.

ಮೂರು: ಈ ತರುಣಿ ನಿರಾಸಕ್ತ ಗಂಡಸರನ್ನು ಕೆರಳಿಸುತ್ತಾಳೆ. ಅವರು ಹತ್ತಿರವಾದಾಗ ಮುಂದುವರಿಯಲು ಬಿಟ್ಟುಕೊಡದೆ ವಿಮುಖಳಾಗುತ್ತಾಳೆ. ಅಂತೂ ಗಂಡಸೊಬ್ಬ ಅವಳನ್ನು ಗೆದ್ದು ಕೂಡಿದ್ದಾನೆ. ನಂತರ ಬೇಗ ಅವಳಿಂದ ವಿಮುಖನಾಗಿದ್ದಾನೆ.

ಇಲ್ಲೆಲ್ಲ ಏನು ಕಾಣುತ್ತಿದೆ? ಗಂಡಸು (ಗಂಡು ಪ್ರಾಣಿಯಂತೆ) ಸಂಭೋಗಕ್ಕೆ ಹಾತೊರೆಯುವುದರ ಹಿಂದೆ ಪಾರಮ್ಯದ ಹಾಜರಿ ಎದ್ದುಕಾಣುತ್ತದೆ. ಇದಕ್ಕೆ ಪ್ರತಿಯಾಗಿ ಹೆಣ್ಣು ಸಂಭೋಗವನ್ನು ನಿರಾಕರಿಸುವುದರ ಅಥವಾ ಒಪ್ಪುವುದರ ಹಿಂದೆಯೂ ಪಾರಮ್ಯದ ಪಾತ್ರವಿದೆ. ಇಂಥ ಜೋಡಿಗಳು ಕಡೆಗೆ ಕೂಟದ ಕುಸ್ತಿಕಣದಲ್ಲಿ ಪರಸ್ಪರ ತೆಕ್ಕೆಬಿದ್ದಾಗ ಯಾರು ಗೆದ್ದರು ಯಾರು ಸೋತರು ಎನ್ನುವುದು ಮುಖ್ಯವಾಗುತ್ತ, ಬಾಂಧವ್ಯ ಹಾಗೂ ಒಡನಾಟಗಳು ಮಲಗುವ ಕೋಣೆಯ ಕಾಲೊರೆಸುಗಳಾಗುತ್ತವೆ. ಇಲ್ಲಿ ಇನ್ನೊಂದು ಸಂಗತಿ ನೆನಪಾಗುತ್ತಿದೆ. ನನ್ನ ಸಹಪಾಠಿಗಳಿಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ಒಮ್ಮೆ ಅವರೊಡನೆ ಹರಟುವಾಗ ಅವರಿಬ್ಬರಲ್ಲಿ ಯಾರು ಮೊದಲು ಪ್ರೀತಿಯ ನಿವೇದನೆ ಮಾಡಿಕೊಂಡರು ಎನ್ನುವ ಮಾತು ಬಂತು. “ನೀನು ಕೇಳಿಕೊಂಡೆ, ಅದಕ್ಕೇ ನಾನು ಒಪ್ಪಿದ್ದು” ಎಂದು ಇಬ್ಬರೂ ವಾದಿಸಿ ಜಗಳ ಮಾಡಿಕೊಂಡರು!

ಇದರರ್ಥ ಏನು? ಕಾಮಕೂಟಕ್ಕೆ ಇನ್ನೊಂದು ಉದ್ದೇಶವೂ ಇದೆ: ಯಾರು ಪ್ರಬಲರೆಂದು ನಿರ್ಧರಿಸಲು ಹೂಡುವ ತಂತ್ರ! ಇದು ನೇತ್ಯಾತ್ಮಕವಾಗಿ ಇರಬೇಕೆಂದಿಲ್ಲ. ಉದಾಹರಣೆಗೆ, ಹೆಚ್ಚು ಹೊತ್ತು ಸಂಭೋಗಿಸುವ ಗಂಡಸಿಗೆ ಹೆಣ್ಣಿಗೆ ತೃಪ್ತಿಕೊಟ್ಟ ಸಾರ್ಥಕತೆಗಿಂತ ತನ್ನ ಗಂಡಸುತನದ ಬಗೆಗೆ ಅಹಂಕಾರ ಹೆಚ್ಚಾಗಿ ಇರುತ್ತದೆ.

ನಾನು ಚಿಕ್ಕವನಿರುವಾಗ ಒಮ್ಮೆ ನನ್ನಪ್ಪ ಅಮ್ಮನಿಗೆ ಹೇಳುತ್ತಿದ್ದ: ಅವನ ಸ್ನೇಹಿತ ಪ್ರತಿದಿನ ದೇವಸ್ಥಾನಕ್ಕೆ ಹೋಗಿ, ನಂತರ ಬೆಲೆವೆಣ್ಣಿನ ಮನೆಗೆ ಹೋಗುತ್ತಿದ್ದನಂತೆ. “ಅವನ ಹೆಂಡತಿ ಜಗಳ ನಿಲ್ಲಿಸಿ ಸಾಕಷ್ಟು ಸುಖ ಕೊಟ್ಟಿದ್ದರೆ ಹೀಗೆ ಮಾಡುತ್ತಿರಲಿಲ್ಲ” ಎಂದು ಇಬ್ಬರೂ ಮಾತಾಡಿಕೊಂಡರು. ಆದರೆ ಹೆಂಡತಿಯ ಜಗಳದ ಕಾರಣದ ಬಗೆಗೆ ಯಾರೂ ಯೋಚಿಸಲಿಲ್ಲ ಎನ್ನುವುದು ದುರದೃಷ್ಟಕರ. ಈಗ ವಾಸ್ತವ ಗೊತ್ತಾಗುತ್ತಿದೆ. ತನ್ನ ಕಾಮುಕತೆಗೆ ಶರಣಾಗಬೇಕೆನ್ನುವ ಗಂಡನ ಒತ್ತಾಯವನ್ನು ಧಿಕ್ಕರಿಸುತ್ತ, “ನನ್ನ ಬಯಕೆಗಳನ್ನೂ ಅರ್ಥ ಮಾಡಿಕೋ” ಎಂದು ಜಗಳ ಆಡುವ ಹೆಂಡತಿಗೆ ಪಾಠ ಕಲಿಸಲು ಗಂಡ ಹೊರಗಿನ ಹೆಣ್ಣುಗಳೊಡನೆ ಪಾರಮ್ಯ ಮೆರೆಯುತ್ತಿದ್ದ.

ಇದರ ತಾತ್ಪರ್ಯವೇನು? ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಕಾಮಕೂಟದ ಮೂಲಕ ಪಾರಮ್ಯವನ್ನು ಸಾಧಿಸಲು ಗಂಡಿಗೂ, ಗಂಡಿನ ಪಾರಮ್ಯವನ್ನು ಒಪ್ಪಿಕೊಳ್ಳಲು ಹೆಣ್ಣಿಗೂ ಹೇಳಿಕೊಡಲಾಗಿದೆ. ಈ ಮಾದರಿಯನ್ನು ಒಪ್ಪಿಕೊಂಡು ಗಂಡ ಕೊಟ್ಟಷ್ಟು ಸುಖಪಡುವ ಹೆಂಗಸರ ದಾಂಪತ್ಯ ಚೆನ್ನಾಗಿ ನಡೆಯುತ್ತದೆ, ಹಾಗೂ ಇದನ್ನು ವಿರೋಧಿಸುವವರ ದಾಂಪತ್ಯ ಕೆಡುತ್ತದೆ ಎಂದು ನಂಬಲಾಗುತ್ತದೆ. ಅದಕ್ಕೇ ಹೆಣ್ಣು ಸೋತು ಗೆಲ್ಲಬೇಕು, ಗಂಡು ಗೆದ್ದು ಸೋಲಬೇಕು ಎನ್ನುವ ಗಾದೆ ಹುಟ್ಟಿರಬಹುದು. ಇದು ಗಂಡುಹೆಣ್ಣುಗಳ ಸಮಾಜಲೈಂಗಿಕ ವರ್ತನೆಯ ಮೇಲೂ ಪ್ರತಿಫಲನಗೊಳ್ಳುತ್ತದೆ. ಹೆಚ್ಚು ಕಾಮಾಸಕ್ತಿ ತೋರುವ ಗಂಡಿಗೆ ಮೆಚ್ಚುಗೆ ಬಂದರೆ ಹೆಣ್ಣಿಗೆ ಎಚ್ಚರಿಕೆ ಬರುತ್ತದೆ!

ಈಗ ಹೇಳಿ: ಪ್ರಾಣಿಗಳಿಂದ ಸ್ಫೂರ್ತಿಪಡೆದ ಪುರುಷ ಪ್ರಧಾನ ಸಂಸ್ಕೃತಿ ನಮಗೆ ಒಪ್ಪುತ್ತದೆಯೆ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಗಂಡಸರು ಸಾಂಪ್ರದಾಯಿಕ ಗಂಡು ಮಾದರಿಯನ್ನು ಬಿಟ್ಟುಕೊಟ್ಟು ದಾಂಪತ್ಯಕ್ಕೆ ಒಪ್ಪುವ ಗಂಡಸುತನವನ್ನು ರೂಪಿಸಿಕೊಳ್ಳುವ ಕಾಲ ಬಂದಿದೆ.

197: ಪುರುಷರ ನಾಕನರಕ: 6

ಹೆಣ್ಣನ್ನು – ತಾಯಿಯಾಗಲಿ, ಪ್ರೇಯಸಿಯಾಗಲಿ – ಅರ್ಥೈಸಿಕೊಳ್ಳಬೇಕಾದರೆ ಆಕೆಯ ಲೈಂಗಿಕತೆಯ ವ್ಯಕ್ತಿತ್ವವನ್ನೂ ಲೈಂಗಿಕತೆಗೆ ಹೊರತಾದ ವ್ಯಕ್ತಿತ್ವವನ್ನೂ ಒಟ್ಟೊಟ್ಟಿಗೆ ಅರ್ಥಮಾಡಿಕೊಳ್ಳುವುದು ಯಾವುದೇ ಪುರುಷನಿಗೆ ಅಗತ್ಯವಾಗುತ್ತದೆ, ಹಾಗೂ ಈ ಸಂವೇದನಾಶೀಲ ಸ್ಪಂದನೆಯನ್ನು ಪುರುಷ ಪ್ರಧಾನ ವ್ಯವಸ್ಥೆಯು ಗಂಡಿನಿಂದ ಕಿತ್ತುಕೊಂಡಿದೆ ಎಂದು ಹೇಳುತ್ತಿದ್ದೆ.

ನನ್ನ ವಾದವನ್ನು ಹೆಚ್ಚಿನ ಗಂಡಸರು ಸಾರಾಸಗಟಾಗಿ ತಳ್ಳಿಹಾಕಬಹುದು. ಹೆಣ್ಣುಗಂಡುಗಳ ಶಾರೀರಿಕ ವ್ಯವಸ್ಥೆಯಲ್ಲಿಯೇ ಮೂಲಭೂತ ವ್ಯತ್ಯಾಸ ಇರುವಾಗ ಗಂಡು ಹೆಣ್ಣಿಗಿಂತ ಭಿನ್ನವಾಗಿ – ಕೆಲವೊಮ್ಮೆ ವ್ಯತಿರಿಕ್ತವಾಗಿ – ವರ್ತಿಸುವುದು ಸಹಜವಲ್ಲವೆ ಎಂದು ಪ್ರಶ್ನಿಸಬಹುದು. ಹಾಗಾಗಿ ಗಂಡಿನ ಶರೀರವು ಲೈಂಗಿಕ ಕ್ರಿಯೆಗೆ ಹೇಗೆ ಸಂಬಂಧಪಡುತ್ತದೆ, ಹಾಗೂ ಇದು ಹೆಣ್ಣಿನ ಮೇಲೆ ಪ್ರತಿಫಲಿತಗೊಳ್ಳುತ್ತದೆ ಎನ್ನುವುದರ ಬಗೆಗೇ ಮಾತಾಡೋಣ.

ಶಾರೀರಿಕವಾಗಿ ಹೇಳಬೇಕೆಂದರೆ, ಗಂಡಿನ ಜನನಾಂಗಗಳ ರಚನೆ ಹಾಗೂ ಕಾರ್ಯರೀತಿಗಳು ಟೆಸ್ಟೋಸ್ಟೆರೋನ್ ಎಂಬ ಹಾರ್ಮೋನಿನಿಂದ ರೂಪುಗೊಳ್ಳುತ್ತವೆ. ಈ ಹಾರ್ಮೋನು ಒಂದಾನೊಂದು ಕಾಲದಲ್ಲಿ ಬೇಟೆಗೆ ಹಾಗೂ ಬೇಟೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅನುಕೂಲಕರವಾದ ದೇಹಧಾರ್ಡ್ಯವನ್ನೂ ಆಕ್ರಮಣಶೀಲತೆಯನ್ನೂ (aggression) ಕೊಟ್ಟಿದ್ದಿದೆ. ವೇಗದಲ್ಲಿ ಗಾಡಿ ಓಡಿಸುವುದು ಮುಂತಾದ ಆಕ್ರಮಣಶೀಲ ಚಟುವಟಿಕೆಗಳಲ್ಲಿ ಟೆಸ್ಟೋಸ್ಟೆರೋನಿನ ಛಾಪು ಎದ್ದುಕಾಣುತ್ತದೆ. (ಇಲ್ಲಿ “ಆಕ್ರಮಣ” ಎಂಬ ಪದವನ್ನು “ರಭಸದಿಂದ ಮುಂದುವರಿಯುವುದು” ಎಂಬರ್ಥದಲ್ಲಿ ಮಾತ್ರ ಉಪಯೋಗಿಸುತ್ತಿದ್ದೇನೆ, ದಾಳಿ ಎಂಬರ್ಥದಲ್ಲಿ ಅಲ್ಲ.) ಕೂಟದಲ್ಲಿ ಆಕ್ರಮಣಶೀಲತೆಗೆ ಸ್ವಲ್ಪವೇ ಸ್ಥಾನವಿದೆ. ಸಂಗಾತಿಗಳಿಬ್ಬರೂ ಆಕ್ರಮಣಶೀಲ ಆದರೆ ಕೂಟ ರಸದೌತಣ ಆಗುತ್ತದೆ. ಆದರೆ ಗಂಡು ಮಾತ್ರ ಆಕ್ರಮಣಶೀಲ ಆಗುವಾಗ ನಾಲ್ಕು ತೊಂದರೆಗಳಂತೂ ಕಾಣುತ್ತವೆ.

ಒಂದು: ಗಂಡು ಮುನ್ನುಗ್ಗುವಾಗ ಹೆಣ್ಣು ಅವಕಾಶ ಮಾಡಿಕೊಡಲು ತಟಸ್ಥಳಾಗಿ ಉಳಿಯಬೇಕಾಗುತ್ತದೆ. ಪರಿಣಾಮವಾಗಿ ತಟಸ್ಥಳಾಗಿ ಒಪ್ಪಿಸಿಕೊಳ್ಳುವುದೇ ಸುಖ ಎನ್ನಬೇಕಾಗುತ್ತದೆ. ಅದಲ್ಲದೆ ಸಂಚಲನೆಯು ಗಂಡಿನ ಏಕಪಕ್ಷೀಯ ನಿರ್ಧಾರವಾಗುತ್ತದೆ. ಪುರುಷ ಪ್ರಾಧಾನ್ಯತೆಗೆ ಒಗ್ಗಿಹೋದ ಹೆಂಗಸರಂತೂ ಸಂಚಲನೆ ತೋರಿಸುವುದು ಹೆಣ್ಣಿಗೆ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ನಾನು ನೋಡಿದ ಒಬ್ಬನು ತಟಸ್ಥ ಸ್ಥಿತಿಯ ಹೆಣ್ಣನ್ನು ಗಂಟೆಗಟ್ಟಲೆ ಸಂಭೋಗಿಸುವ ಧಾರಣಶಕ್ತಿ ಹೊಂದಿದ್ದ. ನಡುವೆ ಅವಳು ಸ್ವಲ್ಪ ಚಲಿಸಿದರೂ ಅವನಿಗೆ ಕಿರಿಕಿರಿ ಆಗುತ್ತಿತ್ತು.

ಎರಡು: ಗಂಡು ಮೇಲೇರಿ ದಿಗ್ವಿಜಯ ಆಚರಿಸುತ್ತ ಇರುವಾಗ ತನ್ನ ಕೆಳಗಿರುವ ಹೆಣ್ಣು ಎಷ್ಟು ಸುಖ ಪಡೆಯುತ್ತಿದ್ದಾಳೆ ಎಂದು ಗಮನಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಇಬ್ಬರ ನಡುವಿನ ಭಾವಸಂಪರ್ಕದ ಕೊಂಡಿ ಕಳಚಿಕೊಂಡಿರುವ ಈ ಸ್ಥಿತಿಯಲ್ಲಿ ಹೆಣ್ಣು ಖುಷಿಪಟ್ಟರೂ ಭಾವಪ್ರಾಪ್ತಿ ಆಗದೆ ನಿಸ್ಸಹಾಯಕ ಆಗಬಹುದು. “ಗಂಡಿನ ಭಾರ/ಅವಸರ ತಾಳಲಾರೆ” ಎನ್ನುವ ಹೆಣ್ಣಿನ ಇಂಗಿತ ಕೊಂಡಿ ಕಳಚಿರುವುದೇ ಆಗಿರಬಹುದು.

ಮೂರು: ಮುನ್ನುಗ್ಗುವುದನ್ನು ತಲೆಯಲ್ಲಿ ತುಂಬಿಕೊಂಡ ಗಂಡಂದಿರು ಕೂಟವೆಂದರೆ “ಗಂಡು ಹೆಣ್ಣಿನ ಮೇಲೆ ನಡೆಸುವ ನ್ಯಾಯಬದ್ಧ ಆಕ್ರಮಣ” ಎಂದು ಭಾವಿಸುತ್ತಾರೆ. ಇದರ ಇನ್ನೊಂದು ಹೆಸರು ವೈವಾಹಿಕ ಅತ್ಯಾಚಾರ (marital rape). ಇದನ್ನೇ ನೀಲಿ ಚಿತ್ರಗಳಲ್ಲಿ ಗಂಟೆಗಟ್ಟಲೆ ವೈಭವೀಕರಿಸುತ್ತ, ಆಕ್ರಮಣವು ಹೆಣ್ಣಿಗೆ ಇಷ್ಟವೆಂದು ತಪ್ಪಾಗಿ ಬಿಂಬಿಸಲಾಗುತ್ತದೆ. ಇದರಿಂದ ಗಂಡಂದಿರಿಗೆ ಭ್ರಮೆ ಹಾಗೂ ಹೆಣ್ಣಿಗೆ ಸಂಕಟ ಆಗುತ್ತದೆ. ಅಷ್ಟೇ ಅಲ್ಲ, ಆಕ್ರಮಣ ಬಯಸದ ಪುರುಷನು ತಾನು “ಕಡಿಮೆ ಪುರುಷ” ಎಂದು ಅರ್ಥೈಸಿಕೊಳ್ಳುತ್ತಾನೆ. ಇದೇ ಕಾರಣಕ್ಕೆ ಕಾಮಾಸಕ್ತಿಯನ್ನು ಮೊಟಕು ಮಾಡಿಕೊಂಡಿರುವ ಗಂಡಸರನ್ನು ನಾನು ನೋಡಿದ್ದೇನೆ.

ನಾಲ್ಕು: ಗಂಡಿನ ಆಕ್ರಮಣದಲ್ಲೂ ವಿಡಂಬನೆಯಿದೆ. ಆಕ್ರಮಣವು ಯೋನಿಯ ಆಳದುದ್ದಕ್ಕೂ ನಡೆಯುತ್ತದಷ್ಟೆ? ಆದರೆ ಯೋನಿಯ ಆಳ ಬಿಡಿ, ದ್ವಾರದ ಹೊರತಾಗಿ ಎಲ್ಲೆಲ್ಲೂ ಸ್ಪರ್ಶ ಸಂವೇದನೆಯ ನರತಂತುಗಳೇ ಇಲ್ಲ! ಇರುವುದೆಲ್ಲ ಭಗಾಂಕುರದ ತುದಿಯಲ್ಲಿ – ಅದೂ ಯೋನಿದ್ವಾರದಿಂದ ಒಂದಂಗುಲ ಮೇಲಿದೆ. ರಭಸದಿಂದ ಒಳಹೊಕ್ಕಾಗಲೂ ಭಗಾಂಕುರಕ್ಕೆ ತಾಗುವುದು ಸ್ವಲ್ಪವೆ. ಹೀಗಾಗಿ ಹೆಣ್ಣಿಗೆ ರಭಸದ ಸಂಭೋಗ ಎಂದರೆ ಜಲಪಾತದ ಕೆಳಗೆ ಕೈಚಾಚಿ ಬೊಗಸೆಯಲ್ಲಿ ನೀರು ಹಿಡಿದಂತೆ – ಬಹುಪಾಲು ವ್ಯರ್ಥವೇ ಆಗುತ್ತದೆ. ಇದನ್ನಾಕೆ ಬಾಯಿಬಿಟ್ಟು ಹೇಳಿಕೊಂಡರೆ ಮುಗಿಯಿತು, ಆಕ್ರಮಣಕಾರಿಯ ಮೇಲೆ ಕೀಳರಿಮೆಯ ಆಕ್ರಮಣವಾಗಿ ಮೆತ್ತಗಾಗಿಬಿಡುತ್ತಾನೆ. ಹೆಂಡತಿಯು ಸಂಭೋಗದ ನಂತರ ಬೆರಳಾಡಿಸಿ ತೃಪ್ತಿ ಕೊಡಬೇಕೆಂದು ಕೋರಿಕೊಂಡಾಗ ಮನವೊಪ್ಪದೆ ಪುನಃ ಸಂಭೋಗಕ್ಕೆ ಪ್ರಯತ್ನಪಟ್ಟು, ಗಡಸುತನ ಮರಳದೆ ಮುಖಭಂಗವಾಗಿ, ಚಿಕಿತ್ಸೆಗಾಗಿ ಧಾವಿಸಿಬಂದ ಗಂಡಸರು ಸಾಕಷ್ಟಿದ್ದಾರೆ!

ಇನ್ನು, ಗಂಡಿನ ಮೇಲೆ ಹೆಣ್ಣು “ಆಕ್ರಮಣ” ಮಾಡಿದರೆ ಹೇಗಿರುತ್ತದೆ? ಕೆಲವು ವರ್ಷಗಳ ಹಿಂದೆ “ಸುಖೀಭವ”ದಲ್ಲಿ ಬಂದ ಪ್ರಶ್ನೆ ನೆನಪಿದೆ. ಕಾಮಕೂಟದಲ್ಲಿ ಇಬ್ಬರಿಗೂ ಅತೀವ ಆಸಕ್ತಿಯಿದೆ. ಗಂಡ “ಇಚ್ಛಾ ಸ್ಖಲನಿ”. ಇಷ್ಟಬಂದಷ್ಟೂ ಹೊತ್ತು ಘರ್ಷಿಸುವ ಸಾಮರ್ಥ್ಯ ಅವನಿಗಿದೆ. ಆದರೆ, ಹೆಂಡತಿಗೆ ಬಯಕೆಯಾದಾಗ ಅವನ ಮೇಲೆ ಬಂದು, ಕೆದರಿದ ಮುಡಿಯನ್ನು ಕಟ್ಟಿಕೊಂಡು ಆಕ್ರಮಣಕ್ಕೆ ಸಿದ್ಧವಾದಳೋ, ಅವಳ ಅವತಾರ ಕಂಡು ಇವನ ಉದ್ರೇಕ ಜರ್ರನೆ ಇಳಿದುಹೋಗುತ್ತದೆ.

ಗಂಡು ಆಕ್ರಮಣಶೀಲತೆಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲ ಎನ್ನುವುದಕ್ಕೆ ದೃಷ್ಟಾಂತ: ಇವನು ಹೆತ್ತವರ ಕಟ್ಟುನಿಟ್ಟಿಗೆ ಒಳಪಟ್ಟು ತನ್ನಿಷ್ಟದಂತೆ ಬದುಕಲಾಗದೆ ಗುಮ್ಮನಗುಸಕ (passive aggressive) ವರ್ತನೆಯನ್ನು ಬೆಳೆಸಿಕೊಂಡಿದ್ದಾನೆ. ಹೆಂಡತಿ ರೇಗುವಾಗಲೆಲ್ಲ ಸೂಕ್ತವಾಗಿ ಸ್ಪಂದಿಸದೆ ತಪ್ಪಿಸಿಕೊಂಡು, ಹಾಸಿಗೆಯಲ್ಲಿ ಪ್ರತಿಕ್ರಿಯೆ ತೋರಿಸುತ್ತಾನೆ. ಆಕೆ ಕಾಮಕ್ರಿಯೆಗೆ ಇಷ್ಟಪಟ್ಟು, ಇನ್ನೂ ತಯಾರಾಗುತ್ತ ಇರುವಾಗ ಇವನು ಭರದಿಂದ ಮುಂದುವರಿದು ಸುಖದ ಹೆಸರಲ್ಲಿ ನೋವು ಕೊಡುತ್ತಾನೆ. ಇವನು ಸುಖ ಅನುಭವಿಸುತ್ತಿದ್ದಾನೆ ಎನ್ನುವುದಕ್ಕಿಂತಲೂ ಆಕ್ರಮಣ ಮಾಡುತ್ತಿದ್ದಾನೆ ಎಂದು ಆಕೆಗೆ ಅನ್ನಿಸುತ್ತಿದೆ. ಗಮನಿಸುವುದರ ಬದಲು ದಮನಿಸುವುದು ನಡೆಯುತ್ತಿದೆ. “ಹಗಲು ಮಾತಿನಲ್ಲಿ ನಾನು ತಿವಿಯುವುತ್ತೇನೆ. ರಾತ್ರಿ ಇವನು ತಿವಿಯುತ್ತ ಸೇಡು ತೀರಿಸಿಕೊಳ್ಳುತ್ತಿದ್ದಾನೆ” ಎಂದಾಕೆ ಹೇಳುತ್ತಾಳೆ.

ಇವೆಲ್ಲದರಿಂದ ಏನು ಗೊತ್ತಾಗುತ್ತದೆ? ಗಂಡು ತಾನು ಗಂಡು ಎಂದು ಹೆಮ್ಮೆಪಟ್ಟುಕೊಳ್ಳಲು, ಕೂಟ ಬಯಸಲು ಮೂಲಕಾರಣವಾದ ಟೆಸ್ಟೋಸ್ಟೆರೋನ್ ಕೂಟದ ಸಮಸ್ಯೆಗಳಿಗೆ ಹಾದಿಮಾಡಿಕೊಡುತ್ತದೆ!

ಇದರರ್ಥ ಇಷ್ಟೆ: ಟೆಸ್ಟೋಸ್ಟೆರೋನ್ ವೀರ್ಯೋತ್ಪಾದನೆಗೆ ಅತ್ಯಗತ್ಯ. ವೀರ್ಯವನ್ನು ಯೋನಿಯ ಆದಷ್ಟು ಆಳದಲ್ಲಿ ನೆಟ್ಟು ಕೆಲಸ ಮುಗಿಸಿಬಿಡುವುದೇ ಆಕ್ರಮಣಶೀಲತೆ ಹಾಗೂ ರಭಸದ ಸಂಭೋಗದ ಉದ್ದೇಶ. ಆದರೆ ಕಾಮಸುಖವನ್ನು ಪೂರ್ಣಪ್ರಮಾಣದಲ್ಲಿ ಹೊಂದುವುದು ಎಂದರೆ “ಕೆಲಸ” ಹಾಗೂ “ಮುಗಿಸಿಬಿಡುವುದು” ಎನ್ನದೆ ಪ್ರತಿಕ್ಷಣವನ್ನೂ ಇದೇ ಕೊನೆಯ ಕ್ಷಣವೇನೋ ಎನ್ನುವಂತೆ, ಪ್ರತಿಕ್ಷಣದ ಅನುಭವದಲ್ಲೂ ತಡೆದು ನಿಂತುಕೊಳ್ಳುತ್ತ  ಕ್ಷಣಕ್ಷಣದ ಸಂವೇದನೆಗಳಲ್ಲಿ ಮಗ್ನರಾಗಿ ಅನುಭವಿಸಬೇಕಾದ ವಿದ್ಯಮಾನ. ಹಾಗಾಗಿ ಇದು ಒಬ್ಬರ ಕಾರ್ಯವಲ್ಲದೆ ಇಬ್ಬರೂ ಸೇರಿ ಜೊತೆಜೊತೆಗೆ ಮಾಡಬೇಕಾದ ಕಾರ್ಯ. ಇದೊಂದು ರೀತಿ ಯುಗಳ ಗೀತೆ (duet) ಹಾಡಿದಂತೆ. ಹೆಣ್ಣು ಒಂದು ಸಾಲು ಭಾವಪೂರ್ಣವಾಗಿ ಹೇಳಿದರೆ ಗಂಡು ಇನ್ನೊಂದು ಸಾಲನ್ನು ಅಷ್ಟೇ ಭಾವಪೂರ್ಣವಾಗಿ ಹೇಳುವುದು, ಹಾಗೂ ಒಬ್ಬರು ಹಾಡುತ್ತಿರುವಾಗ ಇನ್ನೊಬ್ಬರು ಅವರೇ ತಾನು ಎನ್ನುವಂತೆ ಮೈದುಂಬಿ ಆಲಿಸುವುದು ಅಗತ್ಯವಾಗುತ್ತದೆ. ಹಾಗಾಗಿ ಇಬ್ಬರಿಗೂ ಕಾಮತೃಪ್ತಿ ಆಗಬೇಕಾದರೆ ಗಂಡು ತನ್ನ ಗಂಡಸುತನವನ್ನು ಕಾಮಕೂಟದಿಂದ ಹೊರಗಿಡಬೇಕಾಗುತ್ತದೆ. “ನಿನ್ನಂತೆ ನಾನು” ಎಂಬ ತತ್ವಮಸಿ ಭಾವವನ್ನು ಕಾಮಕೂಟದಲ್ಲಿ ತರಬೇಕಾಗುತ್ತದೆ. ಆಗ ಮಾತ್ರ ಆಕ್ರಮಣಶೀಲತೆಯು ಇಬ್ಬರಿಗೂ ಅದ್ಭುತ ಆಗಲು ಸಾಧ್ಯವಿದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಮಧ್ಯವಯಸ್ಕ ಗಂಡು ಕಾಮಿಯಾದರೆ ಮಧ್ಯವಯಸ್ಕ ಹೆಣ್ಣು ಕಾಮಿ ಯಾಕಾಗಬಾರದು?

196: ಪುರುಷರ ನಾಕನರಕ: 5

ಗಂಡಸರು ಪುರುಷ ಪ್ರಧಾನ ವ್ಯವಸ್ಥೆಯ ಕೈಗೊಂಬೆಯಾಗಿ ಹೆಣ್ಣನ್ನು ತಾಯಿ, ಸೋದರಿ, ಪ್ರೇಯಸಿ, ಹೆಂಡತಿ, ಕಾಮಪ್ರಚೋದಕಿ ಎಂದು ವಿಭಜಕ ಧೋರಣೆಯಿಂದ ನೋಡುವಾಗ ಹೆಣ್ಣನ್ನು ಇಡಿಯಾಗಿ, ಸಹಜ ಜೀವಿಯಾಗಿ ಕಲ್ಪಿಸಿಕೊಳ್ಳುವುದೇ ಅಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದೆ.

ಪುರುಷರ ಈ ವಿಭಜಕ ಧೋರಣೆಯಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಉದಾಹರಣೆಗೆ, ತಾಯಿಯನ್ನು ತ್ಯಾಗಮಯಿ, ವಾತ್ಸಲ್ಯಮಯಿ ಎನ್ನುವಂತೆ ಕಾಮಮಯಿ ಕೂಡ ಎಂದು ಕಲ್ಪಿಸಿಕೊಳ್ಳುವುದಕ್ಕೆ ಹೆಚ್ಚಿನ ಗಂಡಸರಿಗೆ ಪಾಪಪ್ರಜ್ಞೆ ಕಾಡುತ್ತದೆ. ಇದೇಕೆ ಮುಖ್ಯ ಎನ್ನುವುದಕ್ಕೆ ಒಂದು ದೃಷ್ಟಾಂತ: ಈ ಮನೆಯಲ್ಲಿ ಎರಡು ಮಲಗುವ ಕೋಣೆಗಳಿವೆ. ಒಂದರಲ್ಲಿ ಅಪ್ಪ-ಅಮ್ಮ, ಇನ್ನೊಂದರಲ್ಲಿ ಮಗ-ಸೊಸೆ ಮಲಗುತ್ತಾರೆ. ಒಮ್ಮೆ ಮಗನ ಸ್ನೇಹಿತ ಹೆಂಡತಿಯೊಂದಿಗೆ ಬಂದಿಳಿದ. ಅತಿಥಿಗಳು ಮಲಗುವ ಸಮಯ ಬಂದಾಗ ಮಗ ತಾಯಿಯ ಕಡೆಗೆ ನೋಡಿದ. ಆಕೆ ಕೂಡಲೇ ತಮ್ಮ ಕೋಣೆಯನ್ನು ಬಿಟ್ಟುಕೊಟ್ಟು ಗಂಡನೊಂದಿಗೆ ಹಜಾರದಲ್ಲಿ ಮಲಗಲು ಸಿದ್ಧಳಾದಳು. ಆ ಕ್ಷಣದಲ್ಲಿ ಮಗನಿಗೆ ತನ್ನ ಹೆಂಡತಿಯು ತನ್ನೊಡನೆ ಮಲಗಲು ಬಯಸುವಂತೆ ತಾಯಿಯು ತನ್ನ ಗಂಡನ ಜೊತೆಗೆ ಮಲಗಲು ಬಯಸುತ್ತಾಳೆ ಎಂಬುದು ತೋಚಲಿಲ್ಲ. ವಯಸ್ಸಾದ ಅಪ್ಪನಿಗೆ ಮರುಮದುವೆ ಆಗಲು ಸಲಹೆ ಕೊಡುವ ಮಕ್ಕಳನ್ನು ನೋಡಿದ್ದೇನೆ. ಆದರೆ ವಿಧವೆ ತಾಯಿಯ ಮರುಮದುವೆಯ ಬಗೆಗೆ ಯೋಚಿಸುವ ಮಕ್ಕಳು ಅಪರೂಪ. ಹಾಗಾಗಿಯೇ ಹೆಂಡತಿಯನ್ನು ಕಳೆದುಕೊಂಡ ಹಿರಿಯ ಪುರುಷನೊಬ್ಬ ಹೊರಸಂಬಂಧ ಇಟ್ಟುಕೊಳ್ಳುವುದನ್ನು ಸಹಿಸಲಾಗುತ್ತದೆ. ಆದರೆ ಅವನೊಡನೆ ಇರುವ ಹಿರಿಯ ಹೆಣ್ಣನ್ನು ಮಾತ್ರ ಅಗೌರವದಿಂದ ಕಾಣಲಾಗುತ್ತದೆ.

ಗಂಡಿಗೆ ಮದುವೆ ಯಾಕೆ ಬೇಕು ಎಂದರೆ ಕಾಮತೃಪ್ತಿಗಾಗಿ ಎಂದು ಉತ್ತರ ಥಟ್ಟನೆ ಬರುತ್ತದೆ. ಆದರೆ ಹೆಣ್ಣು ಯಾಕೆ ಮದುವೆಯಾಗುತ್ತಾಳೆ ಎಂದರೆ ಭದ್ರತೆ ಬೇಡವೆ ಎನ್ನುವ ಉತ್ತರ ಸಾಮಾನ್ಯವಾಗಿದೆ. ಆದರೆ ಗಂಡಿಗೂ ಕೌಟುಂಬಿಕ ಭದ್ರತೆ ಬೇಕು, ಹೆಣ್ಣಿಗೂ ಕಾಮತೃಪ್ತಿ ಬೇಕು, ಹಾಗೂ ಸಾಂಗತ್ಯ ಇಬ್ಬರಿಗೂ ಬೇಕು ಎಂದು ಅರ್ಥಮಾಡಿಕೊಂಡರೆ ಮದುವೆಗೆ ಸಂಗಾತಿಯನ್ನು ಹುಡುಕುವ ಕ್ರಮದಲ್ಲೇ ವ್ಯತ್ಯಾಸ ಆಗಬಹುದು.

ತಾಯಿಯ ಬಗೆಗೆ ಯೋಚಿಸುವಂತೆ ಸೋದರಿ ಎನ್ನುವಾಗಲೂ ಹೆಣ್ಣಿನ ಲೈಂಗಿಕ ಆಸೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ದಿಕ್ಕಿನಲ್ಲಿ ಗಂಡು ಬುದ್ಧಿ ಓಡಿಸುವುದಿಲ್ಲ. ಇಲ್ಲೊಬ್ಬ ತರುಣನಿದ್ದಾನೆ. ಕುಟುಂಬದ ಮೇಲೆ ಅಧಿಕಾರ ಚಲಾಯಿಸುವ ಅವನು ಹದಿನೆಂಟರ ತಂಗಿಗೆ ಮದುವೆಗೆ ಬಲವಂತ ಮಾಡುತ್ತಿದ್ದಾನೆ. ಅವಸರ ಯಾಕೆಂದರೆ ಅವನು ಒಬ್ಬಳನ್ನು ಗುಟ್ಟಾಗಿ ಪ್ರೀತಿಸುತ್ತಿದ್ದು, ತಂಗಿಯ ಮದುವೆಗೆ ಮುಂಚೆ ತನ್ನದಾದರೆ ಅವರಿವರ ಟೀಕೆ ಎದುರಿಸಬೇಕಾಗುತ್ತದೆ. ಇಷ್ಟರಲ್ಲೇ ತಂಗಿಗೆ ಪ್ರಿಯಕರ ಇರುವುದು ತಿಳಿಯುತ್ತದೆ. ಅವನೇನು ಮಾಡುತ್ತಾನೆ? ಕೆಂಡಾಮಂಡಲವಾಗಿ, “ಅವನೊಡನೆ ಮಲಗಬೇಕೆನ್ನುವ ಅವಳ ದುರುದ್ದೇಶ”ವನ್ನು ಹೀಗಳೆದು ಶಿಕ್ಷಿಸಿದ್ದಲ್ಲದೆ, ಆಕೆಯ ಸಂಬಂಧಕ್ಕೆ ತನ್ನಿಷ್ಟದ ಹುಡುಗರನ್ನು  ತರುತ್ತಿದ್ದಾನೆ. ಇಲ್ಲಿ ತನ್ನ ಆಯ್ಕೆ ಸರಿ, ತಂಗಿಯ ಆಯ್ಕೆ ತಪ್ಪು! ಹಿರಿತನದ ಹೆಸರಿನಲ್ಲಿ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯಕ್ಕೆ ಖಳನಾಯಕರಾಗುವ ಹಕ್ಕನ್ನು ಪುರುಷ ಪ್ರಧಾನ ವ್ಯವಸ್ಥೆಯು ದಯಪಾಲಿಸಿದೆ.

ಪುರುಷತ್ವದಿಂದ ತಿವಿಯುವುದಕ್ಕೆ ಖಳನಾಯಕರೇ ಆಗಬೇಕೆಂದಿಲ್ಲ. ಹಿತಾಸಕ್ತಿಯ ಲಿಂಗಭೇದವನ್ನು (benevolent sexism) ತಲೆಯಲ್ಲಿ ಇಟ್ಟುಕೊಂಡ ಸುಸ್ವಭಾವಿ ಗಂಡಸರೂ ಆಗಬಹುದು. ಇಲ್ಲೊಂದು ಕುಟುಂಬದಲ್ಲಿ ಹೆಣ್ಣುಮಗು ದೊಡ್ಡವಳಾಗುವಾಗ ಅಪ್ಪ ಮೈಮುಟ್ಟಿ ಮುದ್ದು ಮಾಡುವುದನ್ನು ನಿಲ್ಲಿಸಿಬಿಟ್ಟ. ಮಕ್ಕಳು ಎಷ್ಟು ಬೆಳೆದರೂ ಮಕ್ಕಳೇ ಎನ್ನುವುದನ್ನು ಮರೆತುಬಿಟ್ಟ. ಮಗಳೇ ಹತ್ತಿರ ಬಂದಾಗ, “ನೀನೀಗ ದೊಡ್ಡವಳಾಗಿದ್ದೀಯಾ” ಎಂದು ದೂರ ಸರಿಯುತ್ತ, ಆಕೆಯು ಹೆಣ್ಣುತನ ಹೊಂದಿದ್ದಕ್ಕೆ ತಪ್ಪಿತಸ್ಥ ಭಾವನೆ ದಯಪಾಲಿಸಿದ. ಹೀಗೆ ಅನೇಕರು ಸಹಜ ಹೆಣ್ಣುತನಕ್ಕೆ ತಮ್ಮ ಅನಿಷ್ಟ ಗಂಡುತನವನ್ನು ಜೋಡಿಸುತ್ತಾರೆಯೇ ಹೊರತು ಅವರ ಸಹಜತನಕ್ಕೆ ತಮ್ಮ ಸಹಜತನವನ್ನು ಜೋಡಿಸುವುದಿಲ್ಲ. ಇಂಥವರು ಹೆಂಡತಿಯ ಜೊತೆಗೂ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಸ್ನೇಹಿತರ ಜೊತೆಗೆ ಹಾರಿಸುವ ಕಾಮಪ್ರಚೋದಕ ಹಾಸ್ಯವನ್ನು ಹೆಂಡತಿಯ ಜೊತೆಗೆ ಹಂಚಿಕೊಳ್ಳಲು ಅನೇಕರು ಒಪ್ಪುವುದಿಲ್ಲ. ಯಾಕೆ? ಆಕೆ ತಪ್ಪು ತಿಳಿಯಬಹುದು. ಲೈಂಗಿಕ ಸಂಗಾತಿಯೇ ಲೈಂಗಿಕ ವಿಷಯಗಳ ಬಗೆಗೆ ತಪ್ಪು ತಿಳಿಯಬಹುದು ಎನ್ನುವ ಪುರುಷರ ಗೊಂದಲವನ್ನು ನೀವೇ ಊಹಿಸಿ.

ಕಾಮದ ಸಾರ್ವಜನಿಕ ಜಗತ್ತಿಗೆ ಬಂದರೆ ಹೆಚ್ಚಿಗೇನೂ ಹೇಳಬೇಕಾಗಿಲ್ಲ. ಅಂಗಪ್ರದರ್ಶನ ಮಾಡುವ ಹೆಣ್ಣನ್ನು ವೀಕ್ಷಿಸಿ ಉದ್ರೇಕಗೊಳ್ಳುವ ಗಂಡಸರೇ ಆಕೆಯನ್ನು ವೈಯಕ್ತಿಕವಾಗಿ ಗೌರವದಿಂದ ಕಾಣುವುದಿಲ್ಲ ಎನ್ನುವುದು ವಿಪರ್ಯಾಸ. ಚಿತ್ರತಾರೆ ಸನ್ನಿ ಲಿಯೋನ್ (ಕರಣಜಿತ್ ಕೌರ್ ವೊಹ್ರಾ) ಇದಕ್ಕೆ ಮಾದರಿಯ ದೃಷ್ಟಾಂತ. ಆಕೆ ಮುಂಚೆ ನೀಲಿ ಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಳು. ನಂತರ “ಬಿಗ್ ಬಾಸ್” ಹಾಗೂ ಮುಖ್ಯವಾಹಿನಿಯ ಚಲಚ್ಚಿತ್ರಗಳಲ್ಲಿ ಅಭಿನಯಿಸಲು ಹೊರಟಾಗ, ಮೈ ಮೆಚ್ಚಿದ್ದು ಮತಿಯನ್ನು ಮೆಚ್ಚಲಾಗದ ಗಂಡಸರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆಕೆಯನ್ನು ತಡೆಯಲು ಕೆಲವರು ಕೋರ್ಟ್ ಕಟ್ಟೆಯನ್ನೂ ಹತ್ತಿದರು. ಯಾಕೆ? (ನೀಲಿಚಿತ್ರಗಳಲ್ಲಿ) ಗಂಡಿನ ಕಾಮೇಚ್ಛೆಯಂತೆ ಮೈಒಡ್ಡಿಕೊಳ್ಳುವವಳಿಗೆ ಮೌಲ್ಯಗಳಿರಲು ಸಾಧ್ಯವಿಲ್ಲ! ವಿಪರ್ಯಾಸ ಏನೆಂದರೆ, ಗಂಡಿನ ಇಷ್ಟಕ್ಕೆ ತಕ್ಕಂತೆ ನಮ್ಮ ತಾಯಂದಿರು, ಅಜ್ಜಿಯಂದಿರೆಲ್ಲ ಮಾಡಿದ್ದೂ ಇದೇ! ಒಬ್ಬರಿಗಾಗಿ ಮಾಡಿದರೆ ಪಾತಿವ್ರತ್ಯ, ಹಲವರಿಗಾಗಿ ಮಾಡಿದರೆ ಅಶ್ಲೀಲ. ಎರಡರಲ್ಲೂ ಗಂಡಿನ ಪಾರಮ್ಯ, ಹೆಣ್ಣಿನ ದಾಸ್ಯದ ಛಾಪಿದೆ ಎನ್ನುವುದನ್ನು ಅಲಕ್ಷಿಸುವಂತಿಲ್ಲ.

ಇನ್ನು, ಬೆಲೆವೆಣ್ಣುಗಳ ಪಾಡಂತೂ ಹೇಳತೀರದು. “ಲೈಂಗಿಕ ಕಾರ್ರ್ಯಕರ್ತೆ” ಎಂದು ವೃತ್ತಿಗೌರವ ಗಳಿಸಿಕೊಂಡರೂ ವೈಯಕ್ತಿಕ ಗೌರವ ಗಳಿಸಲಾಗಿಲ್ಲ. ಇಲ್ಲಿ ವಜೈನಲ್ ಮೊನೊಲೋಗ್ಸ್ (Vaginal Monologues) ನಾಟಕ ನೆನಪಾಗುತ್ತದೆ. ಇದರಲ್ಲಿ ವೇಶ್ಯೆಯೊಬ್ಬಳು ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ. ನೂರಾರು ಗಿರಾಕಿಗಳನ್ನು ನಿರ್ಭಾವುಕವಾಗಿ ತಣಿಸಿರುವ ಆಕೆಗೆ ಒಬ್ಬ ಭೇಟಿಯಾಗುತ್ತಾನೆ. ಅವಳ ಮೇಲೆ ಮುಗಿಬೀಳದೆ ಆಕೆಯ ಜನನಾಂಗವನ್ನು ನೋಡುವ ಆಸೆ ವ್ಯಕ್ತಪಡಿಸುತ್ತಾನೆ. ದೂರ ಕುಳಿತು ಹೆಣ್ಣಿನ ಭಾಗಗಳ ಸೌಂದರ್ಯವನ್ನು ಬೆರಗುಗಣ್ಣುಗಳಿಂದ ಆಸ್ವಾದಿಸುವ ಅವನ ತನ್ಮಯತೆಯನ್ನು ಕಂಡು ಆಕೆ ಪುಳಕಗೊಳ್ಳುತ್ತಾಳೆ. ಹೆಣ್ಣುತನವನ್ನು ಕಾಮಿಸದೆ ಗೌರವಿಸುವ ಏಕೈಕ ಗಂಡಸನ್ನು ಕಂಡು ಮೊಟ್ಟಮೊದಲ ಸಲ ಕಾಮೋದ್ರೇಕ ಅನುಭವಿಸುತ್ತಾಳೆ.

ಇದರರ್ಥ ಏನು? ಯಾವುದೇ ಹೆಣ್ಣನ್ನು ಲೈಂಗಿಕತೆಯಿಂದ ಹೊರಗಿಟ್ಟು, ಅಥವಾ ಲೈಂಗಿಕತೆಯನ್ನು ಹೆಣ್ಣಿನಿಂದ ಹೊರಗಿಟ್ಟು ನೋಡುವುದರಿಂದ ಗಂಡಸರಿಗೆ ಸಮಸ್ಯೆ ಆಗುತ್ತದೆ. ಮೆಚ್ಚಿನ ಹೆಂಗಸರೊಡನೆ ಮುಕ್ತ ಬಾಂಧವ್ಯ ಕಟ್ಟಿಕೊಳ್ಳಲು ಅಡ್ಡಿಯಾಗುತ್ತದೆ. ಲೈಂಗಿಕತೆಯ ಅಳವಿನಿಂದ ದೂರವಿಟ್ಟ ಹೆಂಗಸರೊಡನೆ ಲೈಂಗಿಕ ವಿಷಯಗಳನ್ನು ಲೋಕಾಭಿರಾಮವಾಗಿ ಮಾತಾಡಲು ಆಗುವುದಿಲ್ಲ. ನಾನು ಮೆಡಿಕಲ್ ಕಾಲೇಜಿನಲ್ಲಿ ಹುಡುಗಿಯರ ಜೊತೆಗೆ ವ್ಯವಹರಿಸಬೇಕಾದರೆ ಅವರನ್ನು ಲೈಂಗಿಕವಾಗಿ ಅರ್ಥಮಾಡಿಕೊಳ್ಳಲು ಅಸಾಮರ್ಥ್ಯ ಅಡ್ಡಿಯಾಗುತ್ತಿತ್ತು. ವೈದ್ಯನಾಗಿ ಸುಮಾರು ವರ್ಷ ಕಳೆದರೂ ಸಹೋದ್ಯೋಗಿ ಮಹಿಳೆಯರೊಡನೆ ಮನಬಿಚ್ಚಿ ಮಾತಾಡಲು ಸಂಕೋಚ ಆಗುತ್ತಿತ್ತು.

ಒಂದು ಹೆಣ್ಣನ್ನು – ತಾಯಿಯಾಗಲಿ, ಪ್ರೇಯಸಿಯಾಗಲಿ – ಅರ್ಥೈಸಿಕೊಳ್ಳಬೇಕಾದರೆ ಆಕೆಯ ಲೈಂಗಿಕತೆಯ ವ್ಯಕ್ತಿತ್ವವನ್ನೂ ಲೈಂಗಿಕತೆಗೆ ಹೊರತಾದ ವ್ಯಕ್ತಿತ್ವವನ್ನೂ ಒಟ್ಟೊಟ್ಟಿಗೆ ಅರ್ಥಮಾಡಿಕೊಳ್ಳುವುದು ಯಾವುದೇ ಪುರುಷನಿಗೆ ಅಗತ್ಯವಾಗುತ್ತದೆ, ಈ ಸಂವೇದನಾಶೀಲ ಸ್ಪಂದನೆಯನ್ನು ಪುರುಷ ಪ್ರಧಾನ ವ್ಯವಸ್ಥೆಯು ಗಂಡಿನಿಂದ ಕಿತ್ತುಕೊಂಡಿದೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಹೆಣ್ಣನ್ನು ಆಕೆ ಇರುವಂತೆ ಸಹಜವಾಗಿ, ಇಡಿಯಾಗಿ ಗುರುತಿಸುವುದು ಅಗತ್ಯವಿಲ್ಲವೆಂದು ಗಂಡಸರಿಗೆ ಹೇಳಿಕೊಡಲಾಗಿದೆ.

195: ಪುರುಷರ ನಾಕನರಕ: 4

ಪುರುಷರ ಮನೋವೇದನೆಯ ಬಗೆಗೆ ಮಾತಾಡುತ್ತಿದ್ದೇವೆ. ಪುರುಷರು ತಮ್ಮ ನೈಜ ಭಾವನೆಗಳನ್ನು ತೋರಿಸಲು ಹೋಗಿ ಆಘಾತಕ್ಕೊಳಗಾಗಿ ಬದಲಾಗುತ್ತ, ಸಮಾಜವು ಒಪ್ಪುವ ಕೃತಕ ಭಾವನೆಗಳನ್ನು ರೂಢಿಸಿಕೊಳ್ಳುತ್ತಾರೆ, ಹಾಗೂ ತನ್ನತನವನ್ನು ಮರೆಯುತ್ತ ಒಳಗುದಿಗೆ ಶರಣಾಗುತ್ತಾರೆ ಎಂದು ಗೊತ್ತಾಯಿತು.

ಸಹಜ ಭಾವನೆಗಳ ಮೇಲೆ ಸಮಾಜದ ಒತ್ತಡ ಬೀಳುವಾಗ ಇನ್ನು ಕೆಲವರು ಮೂರನೆಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ನಡೆಯುವ ವಿದ್ಯಮಾನದಲ್ಲಿ ತಮ್ಮದೇ ಅರ್ಥವನ್ನು ಕಂಡುಕೊಳ್ಳಲು ಹೊರಡುತ್ತಾರೆ. ಅದು ಹೇಗೆಂದು ನನ್ನ ವೈಯಕ್ತಿಕ ಅನುಭವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿವರಿಸುತ್ತೇನೆ.

ಸುಮಾರು 60-70 ವರ್ಷಗಳ  ಹಿಂದಿನ ಮಾತು. ಈಗ “ಹಿರಿಯರು” ಅನ್ನಿಸಿಕೊಳ್ಳುವ ನಾವೆಲ್ಲ ಆಗ ತಾನೇ ಕಣ್ಣು ತೆರೆಯುತ್ತಿದ್ದೆವು. ಆಗ ಪುರುಷ ಪ್ರಧಾನ ಸಮಾಜವೇ ಎಲ್ಲೆಡೆಯಲ್ಲೂ ವಿಜೃಂಭಿಸುತ್ತಿತ್ತು. ಹೆಣ್ಣುಗಂಡುಗಳ ನಡುವೆ ಅಡ್ಡಗೋಡೆಯಂಥ ನಿರ್ಬಂಧವು ಕೈಚಾಚಿದರೆ ಎಟುಕುವಂತ್ತಿತ್ತು. ಹೆಣ್ಣುಗಂಡುಗಳ ದಾಂಪತ್ಯಕ್ಕೆ ಹೊರತಾದ ಯಾವುದೇ ಸಂಬಂಧವನ್ನು ಸಮಾಜವು ಮಾನ್ಯ ಮಾಡುತ್ತಿರಲಿಲ್ಲ. ಹೆಣ್ಣುಗಂಡುಗಳು ಕೇವಲ ಸ್ನೇಹದಿಂದ ಇರಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆಯಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ, ಕಿಶೋರ-ಕಿಶೋರಿಯರು ನಿರ್ಮಲ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದರೆ ಹಿರಿಯರು ಸಹಿಸುತ್ತಿರಲಿಲ್ಲ. “ಏನ್ರೋ ನೀವಿಬ್ಬರೂ ಮದುವೆ ಆಗಬೇಕೆಂದಿದ್ದೀರಾ?” ಎಂದು ತಮಾಷೆಯ ನೆಪದಲ್ಲಿ ತಮ್ಮ ಮನದ ಹುಳುಕನ್ನು ತೋರಿಸಿಕೊಳ್ಳುತ್ತಿದ್ದರು. ಕುಂಟಬಿಲ್ಲೆ ಮುಂತಾದ ಆಟಗಳನ್ನು ಬಾಲಕರೂ, ಮರಕೋತಿ, ಕ್ರಿಕೆಟ್‌ನಂಥ ಆಟಗಳನ್ನು ಹೆಣ್ಣುಮಕ್ಕಳೂ ಆಡುವುದಕ್ಕೆ ನಿರ್ಬಂಧವಿರುತ್ತಿತ್ತು. ಮಾತು ಮೀರಿದರೆ ಹೆಣ್ಣಿಗ/ಗಂಡುಬೀರಿ ಎಂದು ಅಡ್ಡಹೆಸರು ಇಡಲಾಗುತ್ತಿತ್ತು. ಒಟ್ಟಾರೆ ಪುರುಷ ಪ್ರಾಧಾನ್ಯತೆಯು ಹೆಣ್ಣನ್ನು ಆಳುವಂತೆ ಗಂಡಸರನ್ನೂ ಆಳುತ್ತಿತ್ತು.

ಇಂಥ ವಾತಾವರಣದಲ್ಲಿ ಬೆಳೆದವರಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಅಳವಿನೊಡನೆ ಬಂದ ಹೆಣ್ಣು ಜಾತಿಯನ್ನು ನನ್ನ ಸಮಕಾಲೀನರು ಮಾಡುವಂತೆ ನನ್ನದೇ ತಿಳಿವಳಿಕೆಯ ಚೌಕಟ್ಟಿನೊಳಗೆ ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟೆ. ಕ್ರಮೇಣ ಹೆಂಗಸರನ್ನು (ನನ್ನ ಅರಿವಿಗೆ ಬರದಂತೆ) ಮೂರು ಮೂಲಮಾದರಿಗಳಲ್ಲಿ ಗುರುತಿಸಲು ಶುರುಮಾಡಿದೆ. ಮೊದಲ ಮಾದರಿಯೆಂದರೆ, ರಕ್ತಸಂಬಂಧವಿರದ ಹಿರಿಯ ಹೆಣ್ಣನ್ನು ತಾಯಿ ಅಥವಾ ಅಕ್ಕ ತಿಳಿಯುವುದು – ಈಗ ಹಿರಿಯ ಹೆಂಗಸನ್ನು ಆಂಟೀ ಎನ್ನುವಂತೆ. ಹಾಗೆಯೇ ಕಿರಿಯ ಹೆಣ್ಣನ್ನು ತಂಗಿ ಎಂದು ಅಂದುಕೊಳ್ಳುವುದು. ಹೀಗೇಕೆ? ಮಾತೃ/ಸೋದರಭಾವದಿಂದ ನೋಡುವುದು ಲೈಂಗಿಕ ಭಾವನೆಗಳಿಂದ ದೂರವಿಡುತ್ತದೆ ಎಂಬ ನಂಬಿಕೆ ಪ್ರಚಲಿತವಾಗಿತ್ತು. (ಆಗ ಶಾಲೆಯ ಮುಖ್ಯ ಶಿಕ್ಷಕರು ಭಾಷಣ ಮಾಡುವಾಗ “ಬಂಧುಭಗಿನಿಯರೇ…” ಎಂದು ಶುರುಮಾಡಿ, “ಒಬ್ಬರನ್ನು ಬಿಟ್ಟು” ಎಂದು ಸೇರಿಸಿ ತನ್ನ ಹೆಂಡತಿಯ ಕಡೆ ನೋಡುತ್ತಿದ್ದರೆ ಜನರೆಲ್ಲರೂ ನಗುತ್ತಿದ್ದರು.) ಈ ಸಂದರ್ಭದಲ್ಲಿ ಒಬ್ಬಳು ನೆನಪಾಗುತ್ತಿದ್ದಾಳೆ. ಈಕೆ ರಕ್ಷಾ ಬಂಧನದ ದಿನದಂದು ಕೈಗೆ ಸಿಕ್ಕ ಹುಡುಗರಿಗೆಲ್ಲ ರಾಖಿ ಕಟ್ಟುತ್ತಿದ್ದಳು. ಆಕೆಯ ಸೋದರಭಾವವನ್ನು ಮೆಚ್ಚಿದಾಗ ಆಕೆ ಹೇಳಿದ್ದೇನು? “ನಾನು ರಾಖಿ ಕಟ್ಟುವುದು ಬಾಂಧವ್ಯ ಬೆಳೆಸಲು ಅಲ್ಲ, ನನ್ನ ಬಗೆಗೆ ಕಾಮಭಾವನೆ ಬರದಂತೆ ದೂರವಿಡಲಿಕ್ಕೆ.”  ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಸಂದರ್ಭದಲ್ಲಿ ನನಗೂ ನನ್ನ ಸ್ನೇಹಿತನಿಗೂ ಒಬ್ಬಳು ರಾಖಿ ಕಟ್ಟಿದವಳು ನಂತರ ನನ್ನ ಸ್ನೇಹಿತನನ್ನು ಮದುವೆಯಾಗಿದ್ದೂ ಇದೆ. ಇಂಥ ಸಂಗತಿಗಳು ಸಾಮಾಜಿಕ ನಂಬಿಕೆಯ ಕಣ್ಣಿಗೆ ಬೀಳದೆ ಮರೆಯಾಗಿರುವ ಹೆಣ್ಣುಗಂಡಿನ ಸಂಬಂಧಗಳ ಸಂಕೀರ್ಣತೆಯ ಮೇಲೆ ಬೆಳಕು ಚೆಲ್ಲುತ್ತವೆ.

ಹೆಂಗಸರನ್ನು ಸೋದರ ಭಾವದಿಂದ ನೋಡುತ್ತ ಹದಿವಯಸ್ಸಿಗೆ ಕಾಲಿಟ್ಟಾಗ ಸಹಜವಾದ ಕಾಮೇಚ್ಛೆ ಹುಟ್ಟಲು ಶುರುವಾಯಿತು. ಆದರೆ ಅದಕ್ಕೆ ಪ್ರತೀಕವಾಗಿ ಯಾರನ್ನು ಕಲ್ಪಿಸಿಕೊಳ್ಳುವುದು ಎಂದು ಗಲಿಬಿಲಿ ಆಯಿತು. ಯಾಕೆಂದರೆ ಮದುವೆಯಾಗುವ ತನಕ ಯಾವುದೇ ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡಕೂಡದು ಎಂಬ ನೀತಿ ತಲೆಯಲ್ಲಿ ಬೇರೂರಿತ್ತು! ಹಾಗಾಗಿ ಪರಿಚಿತ ಹೆಣ್ಣಿನ ಬಗೆಗೆ ಕಾಮಭಾವನೆ ಮೂಡಿದಾಗ ತೀವ್ರವಾದ ತಪ್ಪಿತಸ್ಥ ಭಾವ ಹುಟ್ಟಲು ಶುರುವಾಗಿ ನಿಲ್ಲಿಸಬೇಕಾಯಿತು. ಇದಕ್ಕೆ ಪರಿಹಾರವೋ ಎಂಬಂತೆ ಹೆಣ್ಣಿನ ಎರಡನೆಯ ಮಾದರಿ ಹುಟ್ಟಿಕೊಂಡಿತು: ನಾಟಕ, ಚಲಚ್ಚಿತ್ರ, ಜಾಹೀರಾತು ಮುಂತಾದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ, ಹಾಗೂ ವೈಯಕ್ತಿಕವಾಗಿ ಪರಿಚಯವಿಲ್ಲದ ಹೆಣ್ಣುಗಳನ್ನು ಕಾಮಿಸಲು ಅಡ್ಡಿಯಿಲ್ಲ! ಹೀಗೆ ಆಕರ್ಷಕ ಹೆಣ್ಣುಗಳನ್ನು ಕದ್ದು ನೋಡುತ್ತ ಭೋಗವಸ್ತುವನ್ನಾಗಿ ಕಲ್ಪಿಸಿಕೊಳ್ಳುವ ಅಭ್ಯಾಸ ಬೆಳೆಯಿತು. ಆಗಿನ ಕಾಲದಲ್ಲಿ ಶ್ರೀಮಂತರು ಇಷ್ಟಪಡುವ ಹೆಣ್ಣನ್ನು “ಇಟ್ಟುಕೊಳ್ಳು”ತ್ತಿದ್ದರೇ ವಿನಾ ಮದುವೆಯಾಗಿ ಸಂಸಾರ ಹೂಡಲು ಮನಸ್ಸು ಮಾಡುತ್ತಿರಲಿಲ್ಲ. ಹೀಗೆ ಪ್ರೀತಿಸುವುದು ಒಬ್ಬರನ್ನು, ಮದುವೆ ಆಗುವುದು ಇನ್ನೊಬ್ಬರನ್ನು ಎಂಬ ವಿಭಜನಾತ್ಮಕ ಧೋರಣೆ ಬೆಳೆಯಲು ಕಾರಣವಾಯಿತು.

ಇನ್ನು, ದೊಡ್ಡವರಾದ ನಂತರ ಮಾಡಿಕೊಂಡ ಮೂರನೆಯ ಮಾದರಿಯೆಂದರೆ ಹೆಂಡತಿ. ಮದುವೆಗೆ ದೊಡ್ಡ ಉದ್ದೇಶವೆಂದರೆ ಸಂತಾನೋತ್ಪತ್ತಿ. ಇದರ ಹಿಂದೆ ಕಾಮವೆಂದರೆ ಕೆಟ್ಟದ್ದು, ಹಾಗಾಗಿ ಅದನ್ನು ನಿಗ್ರಹಿಸಬೇಕು ಎಂಬ ವಿಚಾರವೂ ಇತ್ತಲ್ಲವೆ? ಪರಿಣಾಮವಾಗಿ ಗಂಡಹೆಂಡಿರ ನಡುವೆ ಕಾಮಕ್ರಿಯೆ ನಡೆಯುತ್ತಿದ್ದರೂ ಅದರಲ್ಲಿ ಪ್ರೇರಣಾತ್ಮಕವಾದುದು ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಏನೂ ಇರುತ್ತಿರಲಿಲ್ಲ. ಮಕ್ಕಳಾದ ನಂತರವಂತೂ ಗಂಡಹೆಂಡಿರ ಕಾಮಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಇನ್ನು ದಾಂಪತ್ಯದಲ್ಲಿ ಬೌದ್ಧಿಕ ಸಾಂಗತ್ಯ ಹೇಗಿತ್ತು? ನೀವು ನಂಬುತ್ತೀರೋ ಇಲ್ಲವೋ – ಆಗ “ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ” ಎನ್ನುವ ಗಾದೆಯನ್ನು ಹೆಚ್ಚಿನವರು ನಂಬುತ್ತಿದ್ದರು!

ಇದಲ್ಲದೆ ನಾಲ್ಕನೆಯ ಮಾದರಿಯೂ ಅಪರೂಪಕ್ಕೆ ಕಾಣುತ್ತಿತ್ತು: ಹೆಣ್ಣನ್ನು ಪ್ರೇಯಸಿಯನ್ನಾಗಿ ಕಾಣುವುದು. ಆಕೆಯನ್ನು ಕವಿಕಲ್ಪನೆಯಿಂದ ವೈಭವೀಕರಿಸುವುದು. ಆಗ ಪ್ರೇಮವಿವಾಹಗಳನ್ನು (ಹಿರಿಯರ ಆಯ್ಕೆ ಅಲ್ಲವಾದುದರಿಂದ) ಸಮಾಜ ವಿರೋಧಿಯಾಗಿ ಕಾಣಲಾಗುತ್ತಿತ್ತು. ವಿಚಿತ್ರವೆಂದರೆ ಪ್ರೇಯಸಿಯನ್ನು ಮದುವೆಯಾಗದಿದ್ದರೆ ಕಲ್ಪನೆಗಳು ಶ್ರೀಮಂತವಾಗಿಯೇ ಉಳಿಯುತ್ತಿದ್ದುವು. ಒಂದುವೇಳೆ ಹೆಂಡತಿಯಾಗಿ ಮನೆಗೆ ಕಾಲಿಟ್ಟಳೋ ಸಾಧಾರಣ ಹೆಣ್ಣಾಗಿ ಮೂಲೆಗುಂಪಾಗುತ್ತಿದ್ದಳು.

ಮೇಲೆ ಹೇಳಿದ ಸಂಬಂಧದ ಮಾದರಿಗಳು ಒಂದು ತಲೆಮಾರು ಕಳೆದಮೇಲೆ ಈಗಲೂ ಜೀವಂತವಾಗಿದ್ದು ದಾಂಪತ್ಯದ ಮೇಲೆ ಪ್ರಭಾವ ಬೀರುತ್ತಿವೆ. ದೃಷ್ಟಾಂತಕ್ಕಾಗಿ ಈ ಹೇಳಿಕೆಗಳನ್ನು ತೆಗೆದುಕೊಳ್ಳಿ:

  • ನನ್ನ ಗಂಡನಿಗೆ ಸೆಕ್ಸ್ ಬೇಕು, ಆದರೆ ರಸಿಕತನ ಬೇಡ.
  • ಇವನು ಪ್ರೀತಿಸಿ ಗೋಗರೆದು ನನ್ನನ್ನು ಒಪ್ಪಿಸಿ ಮದುವೆಯಾದ. ಈಗ ಕಸಕ್ಕಿಂತ ಕೀಳಾಗಿ ಕಾಣುತ್ತಿದ್ದಾನೆ.
  • ನನ್ನ ಪ್ರತಿಭೆಯನ್ನು ಉದ್ಯೋಗವನ್ನು ಮೆಚ್ಚಿ ಮದುವೆಯಾದವರು ಸಂತಾನೋತ್ಪತ್ತಿಯ ಯಂತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನೀಗ ಮನೆಯಲ್ಲಿದ್ದೇನೆ.
  • “ನನ್ನ ತಂಗಿಯ ತರಹ” ಎನ್ನುತ್ತ ನನ್ನ ತಂಗಿಯ ಜೊತೆಗೆ ಸಂಬಂಧ ಬೆಳೆಸಿದ್ದಾರೆ.

ಇದರರ್ಥ ಏನು? ಇವಳು ತಾಯಿ, ಇವಳು ಸೋದರಿ, ಇವಳು ಭೋಗವಸ್ತು, ಇವಳು ಹೆಂಡತಿ, ಇವಳು ಪ್ರೇಯಸಿ ಎಂದು ಹೆಣ್ಣನ್ನು ವಿಭಜನೆಯ ದೃಷ್ಟಿಯಿಂದ ನೋಡುವಾಗ ಹೆಣ್ಣನ್ನು ಇಡಿಯಾಗಿ, ಸಹಜ ಜೀವಿಯಾಗಿ ಕಲ್ಪಿಸಿಕೊಳ್ಳುವುದೇ ಗಂಡಿಗೆ ಅಸಾಧ್ಯವಾಗುತ್ತಿದೆ. ಇನ್ನು ಸಾಹಚರ್ಯೆ, ಸಾಂಗತ್ಯ, ಅನ್ಯೋನ್ಯತೆ ದೂರ ಉಳಿದುವು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ವಿಧೇಯ, ಗಂಭೀರ ಎನಿಸಿಕೊಂಡು ಮೇಲಕ್ಕೇರಿರುವ ಪ್ರತಿ ಗಂಡಿನ ಹಿಂದೆ ದುರ್ವರ್ತನೆಗೆ ಒಳಗಾದ ನೋವಿನ ರಾಶಿಯಿದೆ.

194: ಪುರುಷರ ನಾಕನರಕ: 3

ಪುರುಷರು ಪುರುಷರಾಗಿ ಗುರುತಿಸಿಕೊಳ್ಳುವ ಸಲುವಾಗಿ ತಮ್ಮೊಳಗಿನ ವೈಯಕ್ತಿಕವಾದ ಸಹಜ ಭಾವನೆಗಳನ್ನು ಕಟ್ಟಿಟ್ಟು ಇತರರು ಒಪ್ಪುವ ಕೃತಕ ಭಾವನೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಿದ್ದೆ. ಪುರುಷತ್ವದ ಪರಿಕಲ್ಪನೆಯ ಪರಿಣಾಮಗಳ ಬಗೆಗೆ ಇನ್ನಷ್ಟು ತಿಳಿಯೋಣ.

ಎರಡು: ಒತ್ತಡಕ್ಕೆ ಶರಣಾಗಿ ತನ್ನತನವನ್ನು ಮರೆಯುವುದು: ಇದು ಅರ್ಥವಾಗಲು ಎಲ್ಲಿಯೋ ಓದಿದ್ದನ್ನು ಉದಾಹರಿಸುತ್ತಿದ್ದೇನೆ. ಈ ಬಾಲಕನಿಗೆ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪನ ನೆರಳನ್ನೇ ಅನುಸರಿಸಿ ಗಂಡಸಾಗಲು ಹೊರಟಿದ್ದ. ಮನೆಯಲ್ಲಿದ್ದ ಕುರಿಮರಿಯ ಜೊತೆಗೆ ಅವನ ಒಡನಾಟ ಇತ್ತು. ಒಮ್ಮೆ ಹಬ್ಬಕ್ಕಾಗಿ ದೇವರಿಗೆ ಅರ್ಪಿಸಲೆಂದು ಕುರಿಮರಿಯನ್ನು ಸಜ್ಜುಗೊಳಿಸಲಾಯಿತು. ತನ್ನ ಕಣ್ಣೆದುರು ಅಪ್ಪ ಕುರಿ ಕೊಯ್ಯುವ ದೃಶ್ಯವನ್ನು ನೋಡಿ ಬಾಲಕ ಮರಗಟ್ಟಿ ಹೋದ. “ಧೈರ್ಯ” ತೋರಿಸಿದ್ದಕ್ಕಾಗಿ ಅಪ್ಪನಿಂದ ಶಾಬಾಶ್ ಎನಿಸಿಕೊಂಡ. ತಾನು ಅಪ್ಪನಂತೆ ಆಗಬೇಕೆಂದರೆ ಇಂಥದ್ದನ್ನು ಮಾಡಲೇಬೇಕು ಎಂದು ವಿಧಿಗಳಲ್ಲಿ ಪಾಲುಗೊಂಡ. ಮುಂದೆ ದೊಡ್ಡವನಾಗಿ ಬುದ್ಧಿ ಬೆಳೆಸಿಕೊಂಡು ಸಮುದಾಯದಲ್ಲಿ ದೈವಭಕ್ತನೆಂದು ಹೆಸರು ಗಳಿಸಿದರೂ ಸೂಕ್ಷ್ಮ ಭಾವನೆಗಳು ಬೆಳೆಯಲೇ ಇಲ್ಲ. ಭಾವನೆಗಳಿಗೆ ಸ್ಪಂದಿಸಲು ಹೋದರೆ ತಲೆಯಲ್ಲಿದ್ದ ಅಪ್ಪ ಕೆಣಕುತ್ತಿದ್ದ: “(ನನ್ನಂತೆ) ಗಂಡಸಾಗುವುದೇ ಆದರೆ ನಿನ್ನಲ್ಲಿ ಹೆಂಗರುಳಿಗೆ ಅವಕಾಶ ಇರಕೂಡದು!“

ಭೀಕರವೆನಿಸುವ ಈ ದೃಷ್ಟಾಂತದ ಸೌಮ್ಯ ರೂಪಗಳು ಸಾಕಷ್ಟಿವೆ. ಮಾರ್ಗದರ್ಶನ, ಉಪದೇಶ, ಬುದ್ಧಿವಾದ, ನೀತಿಬೋಧೆ, ಕರ್ತವ್ಯ ಮುಂತಾದ ಹೆಸರಿನಲ್ಲಿ ಗಂಡುಮಕ್ಕಳ ಮೇಲೆ ಧೋರಣೆಗಳನ್ನು ಹೇರಿ, “ನೀವು ಹೀಗಿದ್ದರೇನೇ ನಾವು ಒಪ್ಪಿಕೊಳ್ಳುತ್ತೇವೆ” ಎಂದೆನ್ನಲಾಗುತ್ತದೆ, ಉದಾ. ಮಗನ ಇಷ್ಟಕ್ಕೆ ವಿರುದ್ಧವಾಗಿ ವೈದ್ಯನನ್ನಾಗಿ ಮಾಡಿದ ಅಪ್ಪ. ಯಾಕೆ? ವಯಸ್ಸಾದಾಗ ತನ್ನ ಆರೈಕೆಗೆ ಬೇಕಲ್ಲವೆ? ಆದರೆ ಮಗನ ಪ್ರತಿಭೆಗೆ ವಿದೇಶದಲ್ಲಿ ಅವಕಾಶ ಸಿಕ್ಕು ಹೊರಟಾಗ ಅಪ್ಪ ಬಿಲ್ಕುಲ್ ಒಪ್ಪಲಿಲ್ಲ. ನಮ್ಮನ್ನು ನೋಡಿಕೊಳ್ಳುವ ಕರ್ತವ್ಯ ಬಿಟ್ಟು ಹೇಗೆ ಹೋಗುತ್ತೀಯಾ ಎಂದ. ಮಗಳು ನೋಡಿಕೊಳ್ಳುವ ಹೊಣೆಹೊತ್ತರೂ ಹೆಣ್ಣೆಂದು ತಿರಸ್ಕರಿಸಿದ ಭವಿಷ್ಯ ಮೊಟಕಾದ ಮಗನಿಗೆ ಎಷ್ಟು ಗಾಸಿಯಾಗಿರಬೇಡ?

ಹಿರಿಯರನ್ನು ಪ್ರತಿಭಟಿಸಲು ಆಗದ ಅಸಹಾಯಕ ಮಕ್ಕಳು ಏನು ಮಾಡಬಲ್ಲರು? ಆಗವರ ಮನಸ್ಸು ಒಂದು ಹೊಂದಾಣಿಕೆಗೆ ಬರುತ್ತದೆ. ಹಿರಿಯರು ಬಯಸುವುದೇ ತಮಗೂ ಇಷ್ಟವೆಂದು “ನಂಬಲು” ಶುರುಮಾಡುತ್ತಾರೆ! ಬೇಡದ್ದನ್ನು ತನ್ನದೇ ಆಯ್ಕೆ ಎಂದು ಒಪ್ಪಿಕೊಳ್ಳುವುದು ಹೀಗೆಯೇ. “ನನಗೆ ಒತ್ತಾಯದ ಮದುವೆ ಏನೂ ಇಷ್ಟವಿರಲಿಲ್ಲ. ಈಗ ಅದರಲ್ಲೇ ಸುಖ ಕಾಣುತ್ತಿದ್ದೇನೆ” ಎಂದು ಕೆಲವರು ಹೇಳುವುದರ ಹಿಂದೆ ಪರಿಸ್ಥಿತಿಗೆ ಶರಣಾಗತಿ, ಭಾವನೆಗಳ ಬಲಿ, ಹಾಗೂ ಹೊಂದಾಣಿಕೆ ಎಷ್ಟಾಗಿದೆಯೆಂದು ಅನುಭವಿಸಿದವರೇ ಬಲ್ಲರು. ಹೀಗೆ ವಿಧೇಯ ಮಕ್ಕಳನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ ನೊಂದವರ ಮನದೊಳಗೆ ಏನು ನಡೆಯುತ್ತದೆ? ಇದರ ಬಗೆಗೆ ಆಪ್ತಸಲಹೆಗಾರ್ತಿ ಪದ್ಮಶ್ರೀ ಹಂಚಿಕೊಂಡ ಸಂಗತಿ ಸ್ವಾರಸ್ಯಕರವಾಗಿದೆ. ಸಂಪ್ರದಾಯಸ್ಥ ಹದಿವಯಸ್ಕರ ಕಾರ್ಯಾಗಾರದಲ್ಲಿ ಆಕೆ ಸವಾಲು ಹಾಕಿದರು: “ದೇವರು ಒಂದೇ ಒಂದು ಪ್ರಾರ್ಥನೆಯನ್ನು ನೆರವೇರಿಸುವುದಾದರೆ ಏನು ಕೇಳಿಕೊಳ್ಳುತ್ತೀರಿ?” ಅದಕ್ಕೆ ಕೆಲವರ ಉತ್ತರ: “ಬೆಳಗಿನ ಜಾವ ಸಿಹಿನಿದ್ದೆಯಲ್ಲಿ ಇರುವಾಗ ಬಡಿದೆಬ್ಬಿಸಿ, ಸ್ನಾನ-ಸಂಧ್ಯಾವಂದನೆ ಮಾಡೆಂದು ಅಪ್ಪ-ಅಮ್ಮ ಒತ್ತಾಯಿಸುತ್ತಾರಲ್ಲ, ಅದನ್ನು ನಿಲ್ಲಿಸಲು ದೇವರೇ ಅವರಿಗೆ ಬುದ್ಧಿಕೊಡು!” ಅಂತರ್ಜಾತೀಯ ಅಥವಾ ಅಂತರ್ಧರ್ಮೀಯ ವಿವಾಹವನ್ನು ಆಯ್ಕೆ ಮಾಡಿಕೊಂಡಾಗ ಹಿರಿಯರು ಮಕ್ಕಳ ಭಾವನೆಗಳನ್ನು ಹೊಸಕಿಹಾಕುವ ಜೊತೆಗೆ ಮಕ್ಕಳನ್ನೂ ಹೊಸಕಿಹಾಕಿದ ಪ್ರಕರಣಗಳು ಸಾಕಷ್ಟಿವೆ.

ಹೀಗೆ ವ್ಯವಸ್ಥೆಗೆ ಹೊಂದಿಕೊಳ್ಳುವುದಕ್ಕಾಗಿ ಕೋಮಲ ಭಾವನೆಗಳನ್ನು ದಮನಿಸುವ ಭಾವನಾತ್ಮಕ ದುರ್ವರ್ತನೆಗೆ (emotional abuse) ಬಲಿಯಾಗುವವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಎಂದು ಅನಿಸುತ್ತದೆ. ಇದರ ಫಲಶ್ರುತಿ ಏನಾಗಬಹುದು? ಈ ದಂಪತಿ ಇಷ್ಟಪಟ್ಟು ಮದುವೆಯಾಗಿ ಆರು ವರ್ಷಗಳಾದರೂ ಸೌಹಾರ್ದತೆ ಬೆಳೆದಿಲ್ಲ. ಕಾಮಕೂಟ ನಿಂತು ಸಾಕಷ್ಟು ಕಾಲವಾಗಿದೆ. ಇದರ ಹಿನ್ನೆಲೆಯೇನು? ಗಂಡನ ಬಾಲ್ಯದಲ್ಲಿ ಹೆತ್ತವರು ಇವನ ಮೈದಡವದೆ ದೂರದಿಂದಲೇ ಶಿಸ್ತು ಕಲಿಸುತ್ತಿದ್ದರು. ಮೂರು ವರ್ಷದವನಾದಾಗ ಇವನ ತಂಗಿ ಹುಟ್ಟಿದಳು. ತೋರುವ ಅಲ್ಪಪ್ರೀತಿಯನ್ನೂ ನಿಲ್ಲಿಸಿ ಅವರೆಂದರು: “ತಂಗಿಯ ಕಾಳಜಿ ನಿನ್ನ ಕರ್ತವ್ಯ. ಗಂಡಸಾಗಿ ಅವಳ ಜವಾಬ್ದಾರಿಯನ್ನು ನೀನೇ ಹೊರಬೇಕು!” ಪ್ರೀತಿಯನ್ನು ಕಳೆದುಕೊಂಡಿದ್ದಕ್ಕೆ ರೋದಿಸಲೂ ಆಗದೆ ಹಿರಿಯರ ಜೊತೆಗೆ “ಕಿರಿಯ-ಹಿರಿಯ”ನಾಗಿ ತಂಗಿಯ ಬಗೆಗೆ “ಪ್ರೀತಿ”ಯನ್ನು ತಂದುಕೊಳ್ಳಬೇಕಾಯಿತು. ಹೀಗೆ ಅಂತಃಕರಣದ ಸೆಲೆ ಬತ್ತಿಹೋಗಿ ಬೆಳೆದವನಿಗೆ ಜವಾಬ್ದಾರಿ ಬಂತೇ ವಿನಾ ಸ್ವಯಂಸ್ಫೂರ್ತಿಯಿಂದ ಪ್ರೀತಿಸುವುದು ಬರಲಿಲ್ಲ. ಇದು ಅವನ ದಾಂಪತ್ಯದಲ್ಲೂ ಇಳಿದಿದೆ. ಹೆಂಡತಿಯ ಸಕಲ ಜವಾಬ್ದಾರಿಗಳನ್ನು ಅನನ್ಯ ಕರ್ತವ್ಯ ಪ್ರಜ್ಞೆಯಿಂದ ಮಾಡುತ್ತಾನೆ – ಲೈಂಗಿಕ ಕ್ರಿಯೆಯನ್ನೂ ಕೂಡ. ಆದರೆ ಅವನು ಮಾಡಿದ್ದು ಯಾವುದೂ ಅವಳ ಹೃದಯ ಮುಟ್ಟುವುದಿಲ್ಲ. ತನ್ನ ಯಾಂತ್ರಿಕತೆಯ ಕಾರಣದಿಂದ ಹೆಂಡತಿಯನ್ನು ಕಳೆದುಕೊಳ್ಳುತ್ತಿದ್ದರೂ ದೋಷವೆಲ್ಲಿದೆ ಎಂದು ಗೊತ್ತಾಗುತ್ತಿಲ್ಲ.

ಹೀಗೆ “ಯಂತ್ರಪುರುಷ”ರಲ್ಲಿ ಭಾವನೆಯ ಬಡತನದ ಜೊತೆಗೆ ಬಹುಕಾಲದ ಖಿನ್ನತೆಯೂ ಹೆಚ್ಚಿಗಿದೆ. ಆದರೆ ಇಲ್ಲಿ ಖಿನ್ನತೆ ಸಮಸ್ಯೆಯಲ್ಲ, ಅದನ್ನು ತೋರಿಸಕೂಡದು ಎನ್ನುವುದೇ ಸಮಸ್ಯೆ. ಯಾಕೆ? ಎಷ್ಟೆಂದರೂ ನಾವು ಗಂಡಸರು, ಅತ್ತು ದುಃಖ ಹೊರಹಾಕಲು ಹೆಂಗಸು ಕೆಟ್ಟುಹೋದೆವೆ? ಹಾಗಾಗಿ ಎದೆಯಲ್ಲಿ ಕಲ್ಲಿಟ್ಟುಕೊಂಡು ಬದುಕಬೇಕು! ಪರಿಣಾಮವಾಗಿ ಸಂತತ ಭಾವನಾತ್ಮಕ ದಣಿವು (chronic emotional exhaustion) ಇವರ ಬದುಕಿನಲ್ಲಿ ಎಲ್ಲೆಲ್ಲೂ ಕಾಣುತ್ತದೆ. ಕಲಿತ ಬುದ್ಧಿಗೆ ಗುಲಾಮನಾದ ಶರೀರವು ಕುಸಿದು ಬೀಳುವ ತನಕ ದುಡಿಯುತ್ತದೆ. ಈ ಗುಂಪಿಗೆ ರೈತರೂ ಸೇರುತ್ತಾರೆ. ರೈತರ ಆತ್ಮಹತ್ಯೆಗೆ ಒಳಗಿನ ಕಾರಣ ಇದು. ಬದಲಾಗಿ ಕೈಲಾಗುವುದಿಲ್ಲ ಎಂದು ಗೋಳಿಟ್ಟು (ಹೆಂಗಸರಂತೆ) ಅತ್ತಿದ್ದರೆ ಫಲಶ್ರುತಿ ಬೇರೆಯೇ ಆಗಿರುತ್ತಿತ್ತು. ಈ ಸಂದರ್ಭದಲ್ಲಿ  ಅರವತ್ತೆರಡು ವರ್ಷಗಳ ಹಿಂದಿನ ಘಟನೆ ನೆನಪಿಗೆ ಬರುತ್ತಿದೆ. ನಾನಾಗ ಒಂಬತ್ತರ ಬಾಲಕ. ದೊಡ್ಡಣ್ಣನ ಪ್ರೇಮವಿವಾಹ ನಡೆಯುತ್ತಿತ್ತು. ಆಗ ನಮ್ಮಪ್ಪನನ್ನು ಅಲಕ್ಷ್ಯಕ್ಕೆ ಒಳಪಡಿಸಲಾಗಿ ಅವಮಾನ ಆಯಿತು. ಆಗಿನ ಕಾಲದ ಗಂಡಸರಂತೆ ಅವನು ಕೋಪದಿಂದ ಕೂಗಾಡಿ ಮದುವೆಯನ್ನು ನಿಲ್ಲಿಸಲು ಹೋಗಲಿಲ್ಲ. ಬದಲಾಗಿ, ಮೌನವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ. ನಂತರ ತನ್ನ ಕೋಣೆಗೆ ಬಂದು ದೊಡ್ಡ ದನಿತೆಗೆದು ಮನಃಪೂರ್ತಿ ಅತ್ತ. ಹಾಗೆ ಭಾವನೆಗಳನ್ನು ಪ್ರಕಟಪಡಿಸುವುದು ದೀರ್ಘಾಯುಷ್ಯಕ್ಕೆ ಸಹಾಯ ಮಾಡುತ್ತದೆ ಎಂದು ನನಗೆ ಆಮೇಲೆ ಗೊತ್ತಾಗಿದ್ದು.

ಹೀಗೆ ವಿಧೇಯ, ಗಂಭೀರ ಎನಿಸಿಕೊಂಡು ಮೇಲಕ್ಕೇರಿರುವ ಬಹುತೇಕ ಪ್ರತಿ ಯಶಸ್ವೀ ಗಂಡಿನ ಹಿಂದೆಯೂ ಒಂದು ರಾಶಿ ದುರ್ವರ್ತನೆಗೆ ಒಳಗಾದ ನೋವಿರುತ್ತದೆ. ಅವನ ಬಾಲಪ್ರತಿಭೆ, ಸ್ವಂತದ ಆಯ್ಕೆ, ಸ್ವಯಂಸ್ಫೂರ್ತಿ, ಆತ್ಮಗೌರವ – ಎಲ್ಲದರ ಸಮಾಧಿಯಾಗಿ, ಮೇಲೆ ಸಾಧನೆಯ ಹೂವುಗಳು ಅರಳಿರುತ್ತವೆ. ಅವನು ಕೊಡಬಹುದಾದ ಆರ್ಥಿಕ ಹಾಗೂ ಕೌಟುಂಬಿಕ ಭದ್ರತೆಯನ್ನು ದಾಂಪತ್ಯಕ್ಕೆ ಅರ್ಹತೆಯಾಗಿ ತೆಗೆದುಕೊಳ್ಳುವಾಗ ಭಾವನಾತ್ಮಕ ಬಡತನವನ್ನು ಅಲಕ್ಷಿಸಲಾಗುತ್ತಿದೆ ಎನ್ನುವುದು ದುರಂತ.

ಹೆಣ್ಣಿನ ಪ್ರೀತಿಯನ್ನು ಅರ್ಥಮಾಡಿಕೊಳ್ಳದ ಗಂಡಸು ನಿಷ್ಕರುಣಿ ಅಲ್ಲ, ಬದಲಾಗಿ ಸ್ಪಂದಿಸಲು ಹೋಗಿ, ಆಘಾತಕ್ಕೊಳಗಾಗಿ ನೊಂದು ಹತಾಶನಾಗಿ ಕೊನೆಗೆ ಭಾವನೆಗಳನ್ನು ಕಟ್ಟಿಟ್ಟವ ಅಷ್ಟೆ! 

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಗಂಡಸರು ಸಹಜವಾಗಿ ಬಂದ ಪುರುಷತ್ವವನ್ನು ಸವಾಲೆಂದು ಒಪ್ಪಿಕೊಂಡು ಆಗಾಗ ಸಾಬೀತು ಪಡಿಸಬೇಕಾಗುತ್ತದೆ.

193: ಪುರುಷರ ನಾಕನರಕ: 2

ಪುರುಷರ ಬಗೆಗೆ ಮಾತಾಡುತ್ತಿದ್ದೇವೆ. ಗಂಡಸಾಗಿದ್ದೇನೆ ಎಂದು ಗೊತ್ತಿದ್ದರೂ ಹೆಚ್ಚು ಗಂಡಸಾಗಲು, ಸಂಗಾತಿಯ ಜೊತೆಗೆ ಕಾಮಕೂಟದಲ್ಲೂ ಒಂಟಿಯಾಗಲು, ಸಂಗಾತಿಯ ಸಮಸ್ಯೆಯನ್ನು ತನ್ನ ಗಂಡಸುತನದಿಂದ ಸರಿದೂಗಿಸಲು ಹಿಂದಿರುವ ಕಾರಣಗಳನ್ನು ಈ ಸಲ ನೋಡೋಣ. ಇದಕ್ಕಾಗಿ ಒಂದು ನಿತ್ಯದೃಷ್ಟಾಂತ:

ಗಂಡ ಕೆಲಸದಿಂದ ಮನೆಗೆ ಬರುತ್ತಾನೆ. ಬಟ್ಟೆ ಬದಲಿಸಿ ಕಾಫಿ ಕೇಳುತ್ತಾನೆ. ಹೆಂಡತಿ ಕಪ್ ಮುಂದೆ ಚಾಚುತ್ತ, “ಇವೊತ್ತು ಬೆಳಿಗ್ಗೆ ಅವಸರದಲ್ಲಿ ಹಾಲೆಲ್ಲ ಉಕ್ಕಿ ಚೆಲ್ಲಿಹೋಯಿತು.”

ಗಂಡ: (ಕಾಫಿಯೊಳಗೆ ಇಣುಕಿ ನೋಡುತ್ತ ಗೊಂದಲದಿಂದ) “ಮತ್ತೆ ಇದರಲ್ಲಿ ಹಾಲು ಹಾಕಿದೆಯಲ್ಲ?”

“ನಾನು ಇನ್ನೊಮ್ಮೆ ಕೊಂಡುಕೊಂಡು ಬಂದೆ.”

ಗಂ; (ಇನ್ನೂ ಗೊಂದಲದಿಂದ) “…ಹಾಗಾದರೆ ನನಗೆ ಹೇಳುವ ಅಗತ್ಯ ಏನಿತ್ತು?“

ಹೆಂ; (ಮುಖ ಗಂಟು ಹಾಕಿ) “ನಿಮಗೇನೂ ಅರ್ಥವಾಗುವುದಿಲ್ಲ! ಗಂಡಸರ ಸ್ವಭಾವವೇ ಹೀಗೆ!”

ಗಂಡ ಅವಮಾನವಾದಂತೆ ಅವಳನ್ನೇ ದಿಟ್ಟಿಸುತ್ತಾನೆ. ಹೆಂಗಸರನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅವನೂ, ಗಂಡಸರನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅವಳೂ ಅಂದುಕೊಳ್ಳುತ್ತಾರೆ. ಹತ್ತಿರವಾಗಲು ಹೊರಟವರು ದೂರ ಸರಿಯುತ್ತಾರೆ.

ಇಲ್ಲೇನು ನಡೆಯುತ್ತಿದೆ? ಹೆಂಡತಿಯು ಭಾವನಾತ್ಮಕವಾಗಿ ಹಂಚಿಕೊಳ್ಳಲು ನೋಡಿದರೆ ಗಂಡ ಸಮಸ್ಯೆ-ಪರಿಹಾರದ ದೃಷ್ಟಿಯಿಂದ ಯೋಚಿಸುತ್ತಿದ್ದಾನೆ. ಹೆಣ್ಣುಗಂಡುಗಳ ವಿಚಾರ, ಭಾವನೆ, ಸ್ಪಂದನೆ, ಹಾಗೂ ವರ್ತನೆಗಳಲ್ಲಿ ನಡುವೆ ವ್ಯತ್ಯಾಸಗಳು ಎಷ್ಟಿವೆ ಎಂದರೆ ಹೆಣ್ಣುಗಂಡುಗಳು ಬೇರೆಬೇರೆ ಗ್ರಹಗಳಿಂದ ಬಂದ ಜೀವಿಗಳೆಂದು ಭಾಸವಾಗುತ್ತದೆ ಎಂದು ಜಾನ್ ಗ್ರೇ ಹೇಳುತ್ತಾನೆ (Men Are From Mars, Women Are From Venus: John Gray). ಈ ವ್ಯತ್ಯಾಸಗಳು ಹುಟ್ಟಿನಿಂದ ಬಂದಿವೆಯೆಂದು ಅವನ ಸಿದ್ಧಾಂತ. ಇದನ್ನು ಅನೇಕರು ನಂಬುತ್ತಾರೆ, ಆದರೆ ನಾನಿದನ್ನು ಒಪ್ಪುವುದಿಲ್ಲ. ಸ್ವಭಾವತಃ ಎಲ್ಲ ಹೆಂಗಸರೂ ಒಂದು ತರಹ, ಎಲ್ಲ ಗಂಡಸರೂ ಇನ್ನೊಂದು ತರಹ ಇದ್ದರೆ ಯಾವ ದಾಂಪತ್ಯವೂ ಸರಿಯಾಗಿ ಇರುತ್ತಿರಲಿಲ್ಲ -ಆದರೆ ಕೆಲವು ದಾಂಪತ್ಯಗಳು ಯಶಸ್ವಿ ಆಗಿವೆಯಲ್ಲ? ಅದಿರಲಿ, ಹೆಂಗಸರಲ್ಲಿ ಅನೇಕ ವಿಚಾರವಾದಿಗಳು, ವಿಜ್ಞಾನಿಗಳು, ವ್ಯವಹಾರ ತಜ್ಞರು ಇರುವಂತೆ ಗಂಡಸರಲ್ಲಿ ಕವಿಗಳು, ಸಾಹಿತಿಗಳಂಥ ಭಾವಜೀವಿಗಳು ಇದ್ದಾರೆ. ಆದುದರಿಂದ ಹುಟ್ಟುಸ್ವಭಾವದ  ಸಿದ್ಧಾಂತವನ್ನು ಬದಿಗಿಟ್ಟು, ಈ ಭಿನ್ನ ಸ್ವಭಾವಗಳು ಎಲ್ಲಿಂದ ಬಂದಿರಬಹುದು ಎಂದು ನೋಡೋಣ. ಅದಕ್ಕಾಗಿ ಒಂದು ದೃಷ್ಟಾಂತ:

ಎರಡು ವರ್ಷದ ಅವಳಿಗಳು – ಒಂದು ಹೆಣ್ಣು, ಇನ್ನೊಂದು ಗಂಡು – ನನ್ನೆದುರು ಆಟವಾಡುತ್ತಿದ್ದರು. ಆಡುತ್ತ ಆಡುತ್ತ ಇಬ್ಬರೂ ಒಂದೇಸಲ ಬಿದ್ದು ಅಳಲು ಶುರುಮಾಡಿದರು. ನಾನು ನೋಡುತ್ತಿದ್ದಂತೆ, ಅವರಮ್ಮ ಧಾವಿಸಿ ಬಂದವಳೇ ಅಯ್ಯೋ ಎನ್ನುತ್ತ ಹೆಣ್ಣುಮಗುವನ್ನು ಎತ್ತಿ ತಬ್ಬಿಕೊಂಡಳು. ಎದುರಿರುವ ಗಂಡುಮಗುವನ್ನು ಉದ್ದೇಶಿಸಿ ದೃಢವಾಗಿ ಹೇಳಿದಳು: “ಅಳಬೇಡ, ನಿನಗೇನೂ ಆಗಿಲ್ಲ!” ಕಿಶೋರ ಥಟ್ಟನೆ ಅಳು ನಿಲ್ಲಿಸಿ ದಿಗ್ಭ್ರಮೆಯಿಂದ ಅವಳನ್ನೇ ದಿಟ್ಟಿಸಿದ. ಆ ಒಂದು ಕ್ಷಣದಲ್ಲಿ ಏನೇನು ನಡೆಯಿತು? ತಾಯಿಯು ಹೆಣ್ಣುಮಗುವಿನ ಭಾವನಾತ್ಮಕ ಅಗತ್ಯಕ್ಕೆ ಸ್ಪಂದಿಸುತ್ತ ಗಂಡಿನ ಭಾವನಾತ್ಮಕ ಅಗತ್ಯವನ್ನು ಅಲ್ಲಗಳೆದಳು! ನಾನು ಕೇಳಿದಾಗ ಉತ್ತರ ಸ್ಪಷ್ಟವಾಗಿತ್ತು: “ಅವನು ಹುಡುಗ. ಹುಡುಗರು ಹುಡುಗಿಯರಿಗಿಂತ ಗಟ್ಟಿಯಾಗಿರುತ್ತಾರೆ. ಅವರಿಗೆ ಧೈರ್ಯ, ನೋವು ಸಹಿಸುವ ಶಕ್ತಿ ಹೆಚ್ಚಿಗಿರುತ್ತದೆ.” ಎಂದು ಮಗನ ಕಡೆಗೆ ಅರ್ಧ ಹೆಮ್ಮೆ, ಅರ್ಧ ಅಸಮಾಧಾನದಿಂದ ನೋಡಿದಳು. ಹೆರಿಗೆಯ ನೋವು ತಡೆದುಕೊಳ್ಳುವವರು ಯಾರು ಎಂದು ಕೇಳಬೇಕೆಂದವನು ಸುಮ್ಮನಿದ್ದೆ. ಇಲ್ಲಿ ಪ್ರಶ್ನೆ ನೋವಿನದಲ್ಲ, ಆಘಾತದ್ದು. ಬಿದ್ದುದರಿಂದ ಹುಡುಗಿಗೆ ಆಗುವಂತೆ ಮಾನಸಿಕ ಆಘಾತ ಹುಡುಗನಿಗೂ ಆಗಿತ್ತು. ಅದಕ್ಕೆಂದೇ ಅವನು ಅತ್ತಿದ್ದು. ಆದರೆ ತಾಯಿಯು ಹುಡುಗಿಯ ಭಾವನೆಗಳಿಗೆ ಬೆಲೆ ಕೊಡುತ್ತ, ಹುಡುಗನ ಭಾವನೆಗಳನ್ನು ಅಲ್ಲಗಳೆದಳು. ಜೊತೆಗೆ ಅವನಿಗೊಂದು ಸಂದೇಶವನ್ನೂ ನೀಡಿದಳು: “ನೀನು ಗಂಡಾಗಿ ಹುಟ್ಟಿರುವುದರಿಂದ ನಿನ್ನ ಭಾವನೆಗಳಿಗೆ ನಾನು ಬೆಲೆ ಕೊಡುತ್ತಿಲ್ಲ – ನೀನೂ ಬೆಲೆ ಕೊಡಕೂಡದು!”  

ಈ ಗಂಡುಮಗುವಿಗೆ ಕೊಟ್ಟ ಸಂದೇಶವನ್ನು ಬಹುತೇಕ ಎಲ್ಲ ಗಂಡುಮಕ್ಕಳಿಗೂ ಕೊಡಲಾಗುತ್ತದೆ. “ಗಂಡಾಗಿರುವುದರಿಂದ ನೀನು ಅಳಕೂಡದು, ಭಯಪಡಕೂಡದು. ನಿನ್ನೊಳಗೆ ಹುಟ್ಟುವ ಸೂಕ್ಷ್ಮ ಭಾವನೆಗಳನ್ನು ಕಟ್ಟಿಡಬೇಕು. ನೋವನ್ನು ನುಂಗಿಕೊಳ್ಳಬೇಕು. ಜಗತ್ತು ನಿನ್ನಿಂದ ಅಪೇಕ್ಷಿಸುವುದನ್ನು ಸಾಧಿಸಿ ತೋರಿಸಬೇಕು. ಧೈರ್ಯದಿಂದ ಮುನ್ನುಗ್ಗಬೇಕು, ಕಷ್ಟಪಡಬೇಕು. ಮುಂದೆ ಬರಬೇಕು. ಹೆಣ್ಣಿಗೆ ನೆರವಾಗಬೇಕು – ಯಾಕೆಂದರೆ ಅವಳು ಅಬಲೆ. ಅವಳ ಜವಾಬ್ದಾರಿ ನಿನ್ನದು. ಒಟ್ಟಾರೆ ನೀನು ನೀನಾಗಿರಕೂಡದು. ಸಮಾಜದ ನಿರೀಕ್ಷೆಯಂತೆ ಗಂಡಾಗಿ, ನಡೆದು ತೋರಿಸಬೇಕು.” ಹೀಗೊಂದು “ಗಂಡು ಮಾದರಿ”ಯನ್ನು ರಚಿಸಿ ಅನುಸರಿಸಲು ಕಟ್ಟಪ್ಪಣೆ ಕೊಡಲಾಗುತ್ತದೆ. ಇಲ್ಲಿ ಭಾವನೆಗಳಿಗೆ ಸ್ಥಾನವಿಲ್ಲ. ಕ್ರಿಯಾಶೀಲತೆಗಿದೆ. ಅದೇ ಗಂಡಸುತನದ ಲಕ್ಷಣ. ಹಾಗಾಗಿ ಪುರುಷರು ತಮಗೆ ಸಹಜವಾಗಿ ಬಂದ ಪುರುಷತ್ವವನ್ನು ಸವಾಲೆಂದು ಸ್ವೀಕರಿಸಿ ಆಗಾಗ ಸಾಬೀತು ಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಹೆಣ್ಣಿಗ, ಹೇಡಿ, ಕೈಲಾಗದವನು, ಪುಕ್ಕಲು, ಅಪಾತ, ಹೇತಲಾಂಡಿ ಎಂದು ಹೆಸರಿಸಿ ಹೀಗಳೆದು ದೂರೀಕರಿಸಲಾಗುತ್ತದೆ. ಅದಕ್ಕಾಗಿಯೇ, “ಗಂಡಸಾದರೆ ಮುನ್ನುಗ್ಗು” ಎನ್ನುವ ಸವಾಲು, “ಗಂಡಸು ಕೂತು ಕೆಟ್ಟ…” ಎನ್ನುವ ಗಾದೆ ಹುಟ್ಟಿಕೊಂಡಿವೆ. ಹೀಗೆಯೇ “ಹೆಣ್ಣನ್ನು ಕಾಮಕ್ರಿಯೆಯಲ್ಲಿ ತೃಪ್ತಿ ಪಡಿಸದೆ ಇರುವವನು ಗಂಡಸಲ್ಲ” ಎಂಬ ನಂಬಿಕೆಯೂ ಪ್ರಚಲಿತವಾಗಿದೆ.

ಗಂಡು ತನ್ನ ಸಹಜ ಭಾವನೆಗಳನ್ನು ಹತ್ತಿಕ್ಕುವ ಪರಿಣಾಮವು ಮೂರು ರೂಪಗಳಲ್ಲಿ ಕಾಣುತ್ತದೆ:

ಒಂದು: ನೈಜ ಭಾವನೆಗಳನ್ನು ಸಮಾಜವು ಒಪ್ಪುವ “ಕೃತಕ” ಭಾವನೆಗಳನ್ನಾಗಿ ಮಾರ್ಪಡಿಸುವುದು. ಉದಾ. ಭಯವನ್ನು ಆಕ್ರಮಣವನ್ನಾಗಿ, ಅಭದ್ರತೆಯನ್ನು ತಿರಸ್ಕಾರವನ್ನಾಗಿ, ಪ್ರೀತಿಯ ಕೋರೈಕೆಯನ್ನು ಹಕ್ಕೊತ್ತಾಯವಾಗಿ, ಸೂಕ್ಷ್ಮತೆಯನ್ನು ಕಾಠಿಣ್ಯವಾಗಿ ಬದಲಿಸಿ ಪ್ರಕಟಪಡಿಸುವುದು. ಉದಾಹರಣೆಗೆ, ಹೆಂಡತಿ ಮನೆಬಿಟ್ಟು ಹೋಗುತ್ತೇನೆ ಎನ್ನುವಾಗ, “ಮದುವೆಯಾದ ಹೆಂಡತಿ, ಅದುಹೇಗೆ ಬಿಟ್ಟುಹೋಗುತ್ತೀಯಾ?” ಎಂದು ನಿರ್ಬಂಧಿಸುತ್ತಾರೆಯೇ ಹೊರತು, “ನೀನಿಲ್ಲದೆ ನನಗೆ ಬದುಕಲು ಆಗುವುದಿಲ್ಲ” ಎಂದು ಮನಸ್ಸು ಬಿಚ್ಚಿ ಬೆತ್ತಲಾಗಲು ಒಪ್ಪುವುದಿಲ್ಲ – ಹಾಗೆ ಮಾಡಿದರೆ ಅವಲಂಬನೆ ತೋರಿಸಿದಂತಾಗಿ ಆಕೆ ತನ್ನ ಮೇಲೆ ಸವಾರಿ ಮಾಡಬಹುದು ಎಂಬ ಆತಂಕ ಇದಕ್ಕೆ ಕಾರಣ. ಇಲ್ಲಿ ಒಂದು ದಂಪತಿ ನೆನಪಾಗುತ್ತಿದ್ದಾರೆ. ಇವರ ಕಾಮಕ್ರಿಯೆಯಲ್ಲಿ ಹೆಂಡತಿಯು ಮೇಲೆ ಬಂದು ಚಲಿಸಿದರೆ ಮಾತ್ರ ಭಾವಪ್ರಾಪ್ತಿ ಆಗುತ್ತಿತ್ತು, ಆದರೆ ಅದಕ್ಕೆ ಗಂಡ ಒಪ್ಪುತ್ತಿರಲಿಲ್ಲ. ಬದಲಾಗಿ ತಾನೇ ಮೇಲೆಬಂದು ಎಷ್ಟೇ ಹೊತ್ತಾದರೂ ಘರ್ಷಿಸಲು ಇಷ್ಟಪಡುತ್ತಿದ್ದ. ಹೆಣ್ಣನ್ನು ಸಂಭೋಗದ ಮೂಲಕ ತೃಪ್ತಿ ಪಡಿಸದೆ ಹೋದರೆ ಆಕೆ ತನ್ನನ್ನು ಕೀಳಾಗಿ ಕಾಣುತ್ತಾಳೆ ಎಂಬ ಭಯ ಅವನಲ್ಲಿತ್ತು. ಅದನ್ನು ಭಯದ ಮೂಲಕ ತೋರಿಸದೆ (ಕಾಮಕೂಟದಲ್ಲಿ) ಹೆಚ್ಚಾಗಿ ಕ್ರಿಯಾಶೀಲ ಆಗುವುದರ ಮೂಲಕ ತೋರ್ಪಡಿಸಿಕೊಳ್ಳುತ್ತಿದ್ದ. ಹೀಗೆ ಚಿಂತೆಗಳು ಹೆಚ್ಚಾದಾಗ ಗಂಡಸರು ಸಂಗಾತಿಯೊಡನೆ ಹಂಚಿಕೊಳ್ಳುವುದು, ಅಥವಾ ಎಲ್ಲದಕ್ಕೂ ವಿರಾಮ ಕೊಟ್ಟು ಆತ್ಮವಿಶ್ಲೇಷಣೆಯಲ್ಲಿ ತೊಡಗುವುದು ಮಾಡುವುದಿಲ್ಲ. ಬದಲಾಗಿ ಒಬ್ಬೊಂಟಿಗರಾಗಿ ಅವಸರದಿಂದ “ಏನಾದರೂ ಮಾಡಬೇಕು” ಎಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಅನೇಕ ಗಂಡಸರು ಒಂದಾದ ನಂತರ ಒಂದು ವ್ಯವಹಾರಕ್ಕೆ ಕೈಹಾಕಿ ಸರಣಿ ನಷ್ಟ ಅನುಭವಿಸಿದ್ದು ಇದೆ. 

ಇನ್ನುಳಿದ ಪರಿಣಾಮಗಳನ್ನು ಮುಂದಿನ ಸಲ ನೋಡೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.



ಪುರುಷರ ಹಾಗೂ ಪುರುಷತ್ವದ ನಡುವೆ ದಿಗ್ಭ್ರಮೆ ಆಗುವಷ್ಟು ವಿರೋಧಾಭಾಸ ಇದೆ!

192: ಪುರುಷರ ನಾಕನರಕ: 1

ಕೆಲವು ವರ್ಷಗಳಿಂದ ಮಹಿಳೆಯರ ಮೇಲಿನ ಅತ್ಯಾಚಾರಗಳು ಸುದ್ದಿಯ ಮುಂಚೂಣಿಯಲ್ಲಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಇತ್ತೀಚಿನ #MeToo ಪ್ರಕರಣಗಳಲ್ಲಿ ಸಭ್ಯರೆಂದು ಅನ್ನಿಸಿಕೊಳ್ಳುವ ಹೆಸರಾಂತರೆಲ್ಲ ಬಯಲಿಗೆ ಬರುತ್ತಿದ್ದಾರೆ. ಮುಂದುವರಿದ ದೇಶಗಳಲ್ಲೂ ಮಹಿಳೆಯನ್ನು ದುರುಪಯೋಗ ಪಡಿಸಿಕೊಳ್ಳಲು ಪುರುಷರು ಹಿಂದೆ ಬಿದ್ದಿಲ್ಲ. ಆದರೆ ನಾನೀಗ ಹೇಳಲು ಹೊರಟಿರುವುದು ಅವರ ಬಗೆಗಲ್ಲ. ಬದಲಾಗಿ, ಅಪರಾಧಿ ಮನೋಭಾವ ಇಲ್ಲದ ಪುರುಷರ ಬಗೆಗೆ. ಯಾವುದೇ ಹೆಣ್ಣಿನ ಸಂಪರ್ಕಕ್ಕೆ ಬರುವ, ಅವಳ ಬದುಕಿನ ಭಾಗವಾಗುವ ಗಂಡಸರು, ಸ್ನೇಹಿತರು, ಸಹೋದ್ಯೋಗಿಗಳು, ಪ್ರಿಯಕರ, ಗಂಡ, ತಂದೆ, ಮಗ ಹೀಗೆ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುವ ಸರ್ವೇಸಾಮಾನ್ಯ ಪುರುಷರ ಬಗೆಗೆ ಮಾತಾಡುತ್ತಿದ್ದೇನೆ. ಕಾರಣ ಏನೆಂದರೆ, ನನ್ನ ವೃತ್ತಿಯಲ್ಲಿ ಸಾವಿರಾರು ಪುರುಷರನ್ನು ತೀರಾ ಹತ್ತಿರದಿಂದ ಕಂಡಿದ್ದೇನೆ. ಅವರೆಲ್ಲ ಗಂಡಸಾಗಿರುವುದಕ್ಕೆ ತಮ್ಮ ಅಂತರಂಗದ ತೊಳಲಾಟವನ್ನು‌ – ಬಹುಶಃ ಮೊಟ್ಟಮೊದಲ ಸಲ – ಹೊರಹಾಕಿದ್ದಾರೆ. ಗಂಡಸಾಗಿ ಕರ್ತವ್ಯದ ಹೊರೆ, ತಿರಸ್ಕಾರ, ಅವಮಾನ, ಆಘಾತ, ಪ್ರೇಮ-ಕಾಮ, ಬಯಕೆ-ನಿರಾಸೆ, ಭಗ್ನಪ್ರಣಯ, ಮುಂತಾಗಿ ಹೃದಯದ ನೋವನ್ನು ಹಂಚಿಕೊಂಡಿದ್ದಾರೆ. ಅದರಿಂದ ನಾನು ಮೂಕ ವಿಸ್ಮಿತನಾಗಿದ್ದೇನೆ. ದಿಗ್ಭ್ರಮೆಗೊಂಡಿದ್ದೇನೆ. ಸಾಮಾನ್ಯವಾಗಿ ಬೆಳಕಿಗೆ ಬಾರದ ಗಂಡಸರ ಮನದಾಳವನ್ನು ಕೆಲವು ದೃಷ್ಟಾಂತಗಳ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ.

ದೃಷ್ಟಾಂತ ಒಂದು: ಹತ್ತೊಂಬತ್ತರ ನವತರುಣ ಸಲಹೆ ಕೇಳಿದ್ದಾನೆ: ಹಿರಿಯ ಮಹಿಳೆಯನ್ನು ಲೈಂಗಿಕವಾಗಿ ತೃಪ್ತಿಪಡಿಸುವುದು ಹೇಗೆ? ವಿವರ ಕೇಳಿದಾಗ ಗೊತ್ತಾಗಿದ್ದು ಇದು: ಮೂವತ್ತು  ವರ್ಷದ ಸಂಸಾರಸ್ಥ ಮಹಿಳೆಯು ಇವನನ್ನು ಕೂಟಕ್ಕೆ ಆಹ್ವಾನಿಸಿದ್ದಾಳೆ. ಇಲ್ಲಿಯ ತನಕ ಹಸ್ತಮೈಥುನದ ಅನುಭವ ಮಾತ್ರ ಇರುವ ಇವನಿಗೆ ಹೆಣ್ಣನ್ನು – ಅದರಲ್ಲೂ ಅನುಭವಸ್ಥ ಹೆಣ್ಣನ್ನು – ತೃಪ್ತಿಪಡಿಸುವ, ಅವಳಿಂದ ಭಲೇ ಅನ್ನಿಸಿಕೊಳ್ಳುವ, ತನ್ನ ಕಾಲಿಗೆ ತಾನೇ ನಮಸ್ಕರಿಸುವ ಮಹದಾಸೆ. ಈ ವಿಚಾರ ಹೇಗೆ ಹುಟ್ಟಿತು ಎಂದುದಕ್ಕೆ ಅವನು ಮುಂದಿಟ್ಟ ತರ್ಕ ವಿಲಕ್ಷಣವಾಗಿತ್ತು. ಮಹಿಳೆಯು ತನ್ನ ಗಂಡನ ಜಾಗದಲ್ಲಿ ಇವನನ್ನು ಆರಿಸಿಕೊಂಡಿರಬೇಕಾದರೆ ಗಂಡ ಕೊಡುವುದಕ್ಕಿಂತ ಹೆಚ್ಚಿನ ಸುಖವನ್ನು ಇವನು ಕೊಡಬೇಕು! ನನ್ನ ಪ್ರಶ್ನೆ ಏನೆಂದರೆ, ಏನೇನೂ ತಿಳುವಳಿಕೆ ಇಲ್ಲದ ಅವನಿಗೆ ಅನುಭವಸ್ಥಳಿಂದ ಕಲಿತುಕೊಳ್ಳಬೇಕು ಎಂಬ ವಿಚಾರ ಯಾಕೆ ಬರಲಿಲ್ಲ? ಗಂಡಸಾಗಿ ಹುಟ್ಟಿದ ತನಗೆ “ಎಲ್ಲವೂ” ಗೊತ್ತಿರಬೇಕು ಎಂಬ ನಂಬಿಕೆಯೇ ಇದರ ಹಿಂದೆ ಇರುವುದು ಸ್ಪಷ್ಟವಾಗುತ್ತದೆ. ನಮ್ಮ ಸಂಸ್ಕೃತಿಯ ಭಾಷೆಯಲ್ಲಿ ಹೇಳಬೇಕೆಂದರೆ, ಸೀತೆಯು ಪಾತಿವ್ರತ್ಯವನ್ನು ಸಿದ್ಧಪಡಿಸಲು ಅಗ್ನಿಪರೀಕ್ಷೆಗೆ ಒಳಗಾದಂತೆ ಗಂಡು ತನ್ನ ಗಂಡಸುತನವನ್ನು ಸಿದ್ಧಪಡಿಸಿಕೊಳ್ಳಲು ಆಗಾಗ ಅಗ್ನಿಪರೀಕ್ಷೆಗೆ ಒಳಪಡುತ್ತ ಇರುತ್ತಾನೆ. ಗೆದ್ದರೇನೋ ಬದುಕಿದ, ಆದರೆ ಸೋತರೆ ಏನಾಗಬಹುದು? ಅದಕ್ಕೆ ಇನ್ನೊಂದು ದೃಷ್ಟಾಂತ:

ದೃ. ಎರಡು: ಮದುವೆಯನ್ನು ನಿರಾಕರಿಸುತ್ತ ಬಂದಿದ್ದ ಈ ಸಂಭಾವಿತನನ್ನು ತಾಯ್ತಂದೆಯರು ನನ್ನಲ್ಲಿ ಕರೆದುಕೊಂಡು ಬಂದಿದ್ದರು. ಇವನ ಸಮಸ್ಯೆ ಏನೆಂದರೆ ಶೀಘ್ರಸ್ಖಲನ. (ಅಂದಹಾಗೆ ಲೈಂಗಿಕ ತಜ್ಞರ ವೃತ್ತಿಯಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಮುಕ್ಕಾಲು ಪಾಲು ಶೀಘ್ರಸ್ಖಲನಕ್ಕೇ ಸಂಬಂಧಪಟ್ಟಿವೆ ಎಂದರೆ ಹೆಚ್ಚಿನ ಗಂಡಸರ ತಲೆಯಲ್ಲಿ ಏನಿರಬಹುದು ಎಂದು ನೀವೇ ಊಹಿಸಿ!) ಅದನ್ನು ಬಗೆಹರಿಸಿಕೊಳ್ಳುವ ತನಕ ಮದುವೆ ಬೇಡವೆಂದು ಇವನ ವಿಚಾರ. ನಂಬಿಕಸ್ಥಳಾಗಿ ನೆರವು ನೀಡುವ ಸಂಗಾತಿ ಇಲ್ಲದೆ ಅವನ ಸಮಸ್ಯೆ ಸರಿಹೋಗುವುದಾದರೂ ಹೇಗೆ ಎಂದು ನನ್ನ ಸವಾಲು. ತನ್ನ ಆತಂಕವನ್ನು ಹೆಂಡತಿ ಆಗುವವಳ ಜೊತೆಗೆ ಮುಂಚೆಯೇ ಹಂಚಿಕೊಂಡರೆ ಅವಳು ಅರ್ಥಮಾಡಿಕೊಂಡು ಸಹಕರಿಸುತ್ತಾಳೆ, ಶೀಘ್ರಸ್ಖಲನ ಕ್ರಮೇಣ ಸರಿಹೋಗುತ್ತದೆ ಎಂದು ಸಲಹೆ ಕೊಟ್ಟೆ. ಆದರೆ, ಇವನು ಹೇಳಿಕೊಳ್ಳಲು ಧೈರ್ಯ ಮಾಡಲೇ ಇಲ್ಲ. ಮೊದಲ ರಾತ್ರಿ ಹೆಂಡತಿಯ ಹತ್ತಿರ ಹೋಗುವಾಗ ಎಷ್ಟೊಂದು ಆತಂಕ ಇತ್ತೆಂದರೆ ಬಟ್ಟೆ ಬಿಚ್ಚುವ ಮುಂಚೆಯೇ ಸ್ಖಲನವಾಯಿತು. ತನ್ನ ಅವತಾರ ಮುಗಿಯಿತು ಎಂದುಕೊಂಡು ತೆಪ್ಪಗೆ ಆಕಡೆ ತಿರುಗಿ ಮಲಗಿಕೊಂಡ. ಹೆಂಡತಿ ಕಾಳಜಿಯಿಂದ ಮುಟ್ಟಲು ಬಂದಾಗ ತಣ್ಣಗಾದ ಶಿಶ್ನದ ಅಸಹಾಯಕತೆಯನ್ನು ನೆನೆಸಿಕೊಂಡು ದೂರಸರಿದ. ತಾನು ಅವನಿಗೆ ಇಷ್ಟವಿಲ್ಲವೆಂದು ಆಕೆ ಅ(ಪಾ)ರ್ಥ ಮಾಡಿಕೊಂಡಳು. ಪರಿಣಾಮ? ಷಂಡತನದ ಅಪಾದನೆ ಹೊತ್ತು ಕಟಕಟೆಯಲ್ಲಿ ನಿಲ್ಲಬೇಕಾಯಿತು. ಈ ಆಘಾತದಿಂದ ಚೇತರಿಸಿಕೊಂಡನೋ ಹೇಗೆ ಎಂದು ಗೊತ್ತಾಗಲಿಲ್ಲ. 

ಈ ದೃಷ್ಟಾಂತಗಳಿಂದ ಏನು ತಿಳಿದುಬರುತ್ತದೆ? ಕಾಮಕ್ರಿಯೆಗೆ ಬಂದಾಗ ಸಂಗಾತಿಯೊಡನೆ ಮಾಡಬೇಕೆಂದಿದ್ದರೂ ಬಹುಶಃ ಎಲ್ಲ ಪುರುಷರೂ ಒಂಟಿಯೇ! (ಸಲಿಂಗಿಗಳೂ ಇದಕ್ಕೆ ಹೊರತಲ್ಲ.) ಹೇಗೆ? ತಾನು ಗಂಡಸೆಂದು ಹೆಣ್ಣಿಗೆ ತೋರಿಸಿ ಕೊಡಬೇಕು, ಹಾಗೂ ಆಕೆಯಿಂದ ಮೆಚ್ಚುಗೆ ಪಡೆಯಬೇಕು (ಅಥವಾ ಅವಳ ಟೀಕೆಯಿಂದ ತಪ್ಪಿಸಿಕೊಳ್ಳಬೇಕು) ಎಂದು ಹೆಚ್ಚಿನವರು ಆತ್ಮವೀಕ್ಷಣೆ ನಡೆಸುತ್ತಾರೆ. ಇದು ಎರಡು ಸಾಧ್ಯತೆಗಳಿಗೆ ಎಡೆಮಾಡಿಕೊಡುತ್ತದೆ. ಒಂದು: ಸಾಮರ್ಥ್ಯ ಕಡಿಮೆಯೆಂದು ಭ್ರಮಿಸಿ ಭಯಪಟ್ಟು ತನ್ನನ್ನು ಬಯಸುವ ಹೆಣ್ಣಿನಿಂದ ದೂರ ಉಳಿಯುವುದು, ಎರಡು: ಹೆಚ್ಚಿನ ಸಾಮರ್ಥ್ಯ ಇದೆಯೆಂದು ಭ್ರಮಿಸಿ ಅತ್ಯಾತುರದಿಂದ ತನ್ನನ್ನು ಬಯಸದ ಹೆಣ್ಣಿನ ಹತ್ತಿರವಾಗುತ್ತ ಪ್ರಾಬಲ್ಯ ತೋರುವುದು – ಹೆಣ್ಣಿಗಾಗುವ ಲೈಂಗಿಕ ಕಿರುಕಳದಲ್ಲಿ ಈ ಕಾರಣವೂ ಇದೆಯೆಂದು ಅನಿಸುತ್ತದೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ “ನಾನು ಅವಳಿಗೆ…” ಎನ್ನುವುದಿದೆಯೇ ಹೊರತು “ನಾವಿಬ್ಬರೂ” ಎನ್ನುವ ಮನೋಭಾವ ಕಾಣುವುದಿಲ್ಲ. ಅದಕ್ಕೆಂದೇ ಲೈಂಗಿಕ ಸಮಸ್ಯೆಗಳು ಎದುರಾದರೆ ಗಂಡಸರು ಸಂಗಾತಿಯ ಜೊತೆಗೆ ಹಂಚಿಕೊಳ್ಳಲು ಮನಸ್ಸು ಮಾಡದೆ ಒಂಟಿಯಾಗಿಯೇ ಉಳಿದು ಸಹಾಯ ಹುಡುಕುತ್ತಾರೆ. “ಲೈಂಗಿಕ ಸಮಸ್ಯೆಗಳು ಇಬ್ಬರ ನಡುವೆ ಹುಟ್ಟುತ್ತವೆ, ಪರಿಹಾರಕ್ಕೆ ಸಂಗಾತಿಯೂ ಅಗತ್ಯ” ಎಂದು ತಿಳಿಸಿಕೊಟ್ಟರೂ ಒಂದೇ ಸಲಕ್ಕೆ ಅರ್ಥಮಾಡಿಕೊಳ್ಳುವವರು ವಿರಳ.

ಅಷ್ಟಲ್ಲದೆ ಇದಕ್ಕೆ ಇನ್ನೆರಡು ಮಗ್ಗಲುಗಳೂ ಇವೆ. ಹೆಚ್ಚಿನ ಗಂಡಸರು ತಮ್ಮ ಲೈಂಗಿಕ ಸಮಸ್ಯೆಯನ್ನು “ಸಮಸ್ಯೆ” ಎನ್ನದೆ “ಲೈಂಗಿಕ ದೌರ್ಬಲ್ಯ” ಎಂದು ವರ್ಗೀಕರಿಸುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಬದಲು ದೌರ್ಬಲ್ಯವನ್ನು ತಮ್ಮ ವ್ಯಕ್ತಿತ್ವಕ್ಕೆ ಅನ್ವಯಿಸಿಕೊಂಡು ನರಳುತ್ತಾರೆ. ಸಾಕಾಗದ್ದಕ್ಕೆ, ಸಂಗಾತಿಗೆ ಸಮಸ್ಯೆಯಿದ್ದರೆ ಅದನ್ನೂ ತಮ್ಮ ತಲೆಯ ಮೇಲೆ ಹೇರಿಕೊಂಡು ಒದ್ದಾಡುತ್ತಾರೆ. ಉದಾಹರಣೆಗೆ, ಹೆಣ್ಣಿಗೆ ಯೋನಿಸೆಡೆತ ಇರುವಾಗ ಸಂಭೋಗ ಅಸಾಧ್ಯವಾಗುತ್ತದಷ್ಟೆ? ಅದಕ್ಕೆ ನೋವಿನ ಭಯ, ಲೈಂಗಿಕತೆಯ ಸೋಂಕಿಲ್ಲದ ಸಂಸ್ಕಾರ, ಲೈಂಗಿಕ ದುರ್ವರ್ತನೆಗೆ ಒಳಗಾದ ಅನುಭವ ಮುಂತಾದ ಅವಳದೇ ಕಾರಣಗಳಿದ್ದರೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ ತಮ್ಮ ಶಿಶ್ನದ ಗಡಸುತನವನ್ನು ಹೆಚ್ಚಿಸಿಕೊಳ್ಳಲು, ಹೆಚ್ಚುಹೊತ್ತು ಉಳಿಸಿಕೊಳ್ಳಲು ಒದ್ದಾಡುತ್ತಾರೆ. (ಓದಿ; ವ್ಯವಸ್ಥೆಯ ಬಲಿಪಶು, 110-112) ಹೆಂಡತಿಯ ಯೋನಿಸೆಡೆತಕ್ಕೆ ವಯಾಗ್ರಾ ನುಂಗಿದ ಗಂಡಂದಿರು ಸಾಕಷ್ಟಿದ್ದಾರೆ. ಪರಿಣಾಮವಾಗಿ ಸಮಾಗಮ ಆಗುವುದು ಒತ್ತಟ್ಟಿಗಿರಲಿ, ಸಮಸ್ಯೆಯು ಅವರ ಜನನಾಂಗಗಳನ್ನು ದಾಟಿ ಸಂಬಂಧಕ್ಕೂ ಹರಡುತ್ತದೆ.

ಪುರುಷರು ಲೈಂಗಿಕ ಸಾಮರ್ಥ್ಯಕ್ಕೆ ಇಷ್ಟೇಕೆ ಮಹತ್ವ ಕೊಡುತ್ತಾರೆ? ಗಂಡಸಾದರೂ “ಇನ್ನೂ ಹೆಚ್ಚು ಗಂಡಸಾಗಲು” ಏಕೆ ಹಪಹಪಿಸುತ್ತಾರೆ? ಸಂಗಾತಿಯ ಸಮಸ್ಯೆಯನ್ನು ತಮ್ಮ ತಲೆಯ ಮೇಲೆ ಯಾಕೆ ಹೊತ್ತುಕೊಳ್ಳುತ್ತಾರೆ? ಸಂಗಾತಿಯಿದ್ದರೂ ಯಾಕೆ ಒಂಟಿಯಾಗುತ್ತಾರೆ? ಇದಕ್ಕೆಲ್ಲ ರಾಶಿ ಕಾರಣಗಳಿವೆ. ಇವುಗಳನ್ನು ಮುಂದಿನ ಸಲ ಕೆದಕೋಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.


About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.