ಸುಖೀ ದಾಂಪತ್ಯ ೧೮೩
ಲೈಂಗಿಕ ಸಂಪರ್ಕವು ಸರಿಯಾಗಿ ನಡೆಯುವ ದಾಂಪತ್ಯದಲ್ಲಿ ಅನ್ಯೋನ್ಯತೆ ತಾನಾಗಿಯೇ ಅರಳುತ್ತದೆ ಎಂಬ ನಂಬಿಕೆ ಸಾರ್ವತ್ರಿಕವಾಗಿದೆ.
183: ಸರಿಯಾದ ಸಂದೇಶ-2
ಸಂದೇಶ ದಾಂಪತ್ಯದೊಳಗಿದ್ದೂ ಒಂಟಿಯಾಗಿದ್ದಾನೆ, ಹಾಗೂ ಅದನ್ನು ಹೊರಗಿನ ಕಾಮತೃಪ್ತಿಯ ಮೂಲಕ ನೀಗಿಸಿಕೊಳ್ಳುತ್ತಿದ್ದಾನೆ. ಈ ವಿಷಯವನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳುವ ಸಲಹೆ ಕೊಟ್ಟಾಗ ಸಂಸಾರ ಒಡೆದೀತು ಎಂಬ ಭಯದಿಂದ ಒಪ್ಪದೆ ಇದ್ದಾನೆ.
ನಾನು ಕೇಳಿದೆ: “ಸಂದೇಶ್, ಸಂಸಾರ ಹೇಗೆ ಒಡೆದುಹೋಗುತ್ತದೆ ಎಂಬುದನ್ನು ವಿವರಿಸುತ್ತೀರಾ?”
ಅವನ ತರ್ಕ ಸರಳವಾಗಿತ್ತು. ಲೈಂಗಿಕ ಸಂಬಂಧಗಳು ನಡೆಯಬೇಕಾದುದು ದಾಂಪತ್ಯದ ಚೌಕಟ್ಟಿನೊಳಗೆ ಮಾತ್ರ. ಚೌಕಟ್ಟು ಮೀರಿದ್ದು ಗೊತ್ತಾದರೆ ಹೆಂಡತಿಯು ಸಹಿಸಲಿಕ್ಕಿಲ್ಲ. ಈಗ ನೀಡುತ್ತಿರುವ ಸುಖಸಂಪರ್ಕವನ್ನೂ ನಿರಾಕರಿಸುತ್ತಾಳೆ. ಸಾಕಾಗದ್ದಕ್ಕೆ ಆಕೆಗೆ ತವರಿನ ಬೆಂಬಲ ಇದೆ. ಎಲ್ಲರೂ ಸೇರಿ ತನ್ನನ್ನು ಹೆಣಹಾಕುತ್ತಾರೆ. ಆಗ ತಾನು ಇನ್ನಷ್ಟು ಒಂಟಿಯಾಗುತ್ತೇನೆ. ಇಷ್ಟೆಲ್ಲ ಜಂಜಾಟದ ಬದಲು ಹೊರಗಿನ ಚಾಳಿಯನ್ನು ನಿಲ್ಲಿಸಿ, ಹೆಂಡತಿಯನ್ನೇ ನಂಬಿಕೊಂಡಿದ್ದು, ಅವಳೊಡನೆ ಬೆರೆಯುತ್ತಿದ್ದರೆ ಕ್ರಮೇಣ ಅನ್ಯೋನ್ಯತೆ ಹುಟ್ಟಬಹುದು. ಒಂದುವೇಳೆ ಅದಾಗದಿದ್ದರೆ, ನನ್ನ ಹಣೆಬರಹ ಎಂದು ಬಂದದ್ದನ್ನು ಒಪ್ಪಿಕೊಳ್ಳುವುದು. ಹೊರಗಂತೂ ಹೋಗುವುದಿಲ್ಲ.
ಸಂದೇಶ ಹೀಗೆ ಯೋಚಿಸುವುದಕ್ಕೆ ಕಾರಣವಿದೆ, ಹಾಗೂ ಅದರಲ್ಲಿ ದೋಷವೂ ಇದೆ. ಎಲ್ಲ ಸಾಂಪ್ರದಾಯಿಕ ದಾಂಪತ್ಯಗಳೂ ಭದ್ರತೆ, ಪರಸ್ಪರ ಅನುಕೂಲತೆ ಹಾಗೂ ಸಂತಾನೋತ್ಪತ್ತಿಗೆ ಹೇಳಿಮಾಡಿಸಿದ್ದೇ ವಿನಾ ಅನ್ಯೋನ್ಯತೆಗಲ್ಲ. ಅದಕ್ಕೆಂದೇ ಸಂಪ್ರದಾಯದಂತೆ ವ್ಯವಸ್ಠೆಗೊಳ್ಳುವ ವಿವಾಹಗಳಲ್ಲಿ ಮೇಲುನೋಟಕ್ಕೆ ಕಾಣುವ ಮನೆತನ, ಶಿಕ್ಷಣ, ನಡವಳಿಕೆ ಮುಂತಾದ ಅರ್ಹತೆಗಳನ್ನು ಆಧರಿಸಿ ಸಂಗಾತಿಯನ್ನು ಆರಿಸಿಕೊಳ್ಳುವ ಪದ್ಧತಿಯಿದೆ – ಇಂಟರ್ನೆಟ್ ಆಯ್ಕೆಗಳೂ ಇದಕ್ಕೆ ಹೊರತಲ್ಲ. ಆದರೆ ಮದುವೆಗೆ ಮುಂಚೆ ಪರಸ್ಪರ ಹತ್ತಿರವಾಗಲು, ತೆರೆದುಕೊಳ್ಳಲು, ತನ್ಮೂಲಕ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಸಮಾಜದ ಅನುಮತಿ ಅಷ್ಟಾಗಿಲ್ಲ – ಲೈಂಗಿಕ ಸಂಪರ್ಕದ ಅಡ್ಡಪರಿಣಾಮಗಳ ಭಯವೇ ಇದಕ್ಕೆ ಕಾರಣ (“ಅದೆಲ್ಲ ಮದುವೆಯ ನಂತರ”). ಇದೊಂದು ರೀತಿ ಸರಿಯೆ. ಆದರೆ ಇಲ್ಲೂ ಒಂದು ಸಮಸ್ಯೆಯಿದೆ: ಲೈಂಗಿಕ ಸಂಪರ್ಕವೇ ಅಂತಿಮವಾದದ್ದು, ಅದೊಂದು ಸರಿಯಾಗಿ ನಡೆಯುತ್ತಿದ್ದರೆ ಗಂಡುಹೆಣ್ಣಿನ ಸಂಬಂಧ ಭದ್ರವಾದಂತೆ, ಹಾಗೂ ಭದ್ರಸಂಬಂಧದಲ್ಲಿ ನಡೆಯುವ ಲೈಂಗಿಕ ಕ್ರಿಯೆಯ ಮೂಲಕ ಅನ್ಯೋನ್ಯತೆ ತಾನಾಗಿಯೇ ಅರಳುತ್ತದೆ ಎನ್ನುವ ನಂಬಿಕೆ ಇಲ್ಲಿ ಎದ್ದುಕಾಣುತ್ತದೆ. ಆದರೆ ವಾಸ್ತವ ಹಾಗಿಲ್ಲ. ಲೈಂಗಿಕ ಕ್ರಿಯೆಯ ಮೂಲಕ ಅನ್ಯೋನ್ಯತೆ ಹುಟ್ಟುವುದಿಲ್ಲ; ಬದಲಾಗಿ ಅನ್ಯೋನ್ಯತೆ ಇದ್ದರೆ ಸಂಗಾತಿಯೊಡನೆ ಲೈಂಗಿಕ ಕ್ರಿಯೆಗೆ ಮನಸ್ಸಾಗುತ್ತದೆ! (ಹಾಗಾದರೆ ಹೆಚ್ಚಿನ ಸಂಪ್ರದಾಯಸ್ಥ ಸ್ವಸ್ಥ ದಂಪತಿಗಳ ಸಂಬಂಧದಲ್ಲಿ ಏನಿದೆ? ಅದು ನಿರಂತರ ಸಂಪರ್ಕದ ಮೂಲಕ ಅರ್ಥಮಾಡಿಕೊಂಡು ಬರುವ “ನಾನು ನಿನ್ನನ್ನು ಅರಿತಿದ್ದೇನೆ” ಎನ್ನುವ ನಿಕಟಭಾವವೇ (closeness) ಹೊರತು, “ನೀನು ನನ್ನನ್ನು ಅರಿತುಕೊಳ್ಳಲು – ಇಬ್ಬರಿಗೂ ಕಿರಿಕಿರಿಯಾದರೂ ಸರಿ – ನನ್ನೆಲ್ಲ ಅನಿಸಿಕೆಗಳನ್ನೂ ನಿನ್ನೆದುರು ಪ್ರಾಮಾಣಿಕವಾಗಿ ತೆರೆದಿಡುತ್ತೇನೆ” ಎನ್ನುವ ಅನ್ಯೋನ್ಯತೆ (intimacy) ಅಲ್ಲ – ಈ ವಿಚಾರವು ಹೆಚ್ಚಿನ ದಂಪತಿಗಳಿಗೆ ಅಸಮಾಧಾನ ತರಬಹುದೇನೋ? ಇದನ್ನು ಸ್ಪಷ್ಟೀಕರಿಸಲು ಈ ಉದಾಹರಣೆ: ವಯಸ್ಸಾದ ಹೆಂಡತಿಯು ದಿನಾಲೂ ಬೇಗ ಎದ್ದು ಗಂಡನಿಗೆ ಕಾಫಿ ಮಾಡಿಕೊಡುತ್ತಾಳೆ. ಅದನ್ನಾಕೆ ಮನಸ್ಸಿಲ್ಲದಿದ್ದರೂ ಕರ್ತವ್ಯವೆಂದು ತಿಳಿಯುತ್ತಾಳೆ. ಇದನ್ನು ಗಂಡನೊಂದಿಗೆ ಹಂಚಿಕೊಂಡರೆ, ಅವನಿಗೆ ಕಿರಿಕಿರಿಯಾಗಿ ತನ್ನನ್ನು ಮೆಚ್ಚದೆ ಅವಹೇಳನ ಮಾಡಬಹುದು, ಅಥವಾ ಅದು ತನ್ನ ಆಲಸ್ಯತನದ ಹಾಗೂ ಸ್ವಾರ್ಥದ ಲಕ್ಷಣ ಎಂದು ಭಯಪಡುತ್ತಾಳೆ. ಅದಕ್ಕೆಂದೇ ತನಗೆ ವಿಶ್ರಾಂತಿ ಬೇಕೆನಿಸಿದಾಗ, “ರೀ, ನನಗೆ ಮೈಕೈ ನೋವು. ಅದಕ್ಕೆ ಇವೊತ್ತು ನೀವೇ ಕಾಫಿ ಮಾಡಿಕೊಳ್ಳುತ್ತೀರಾ?” ಎಂದು ವಿನಂತಿಸಿಕೊಳ್ಳುತ್ತಾಳೆ – ಹಂಚಿಕೊಳ್ಳುವುದಿಲ್ಲ. ಒಂದುವೇಳೆ ಅನ್ಯೋನ್ಯತೆ ಬೇಕಾಗಿದ್ದರೆ ಆಕೆ, “ನನಗೂ ಬೆಳಗಿನ ಜಾವದ ನಿದ್ರೆಯನ್ನು ಅನುಭವಿಸಲು ಬಹಳ ಇಷ್ಟ” ಎಂದು ಮೃದುವಾಗಿ ಹಂಚಿಕೊಂಡು, ಅವನ ಮನಸ್ಸಿನಲ್ಲಿ “ನನ್ನ ಸುಖಕ್ಕಾಗಿ ನನ್ನವಳಿಗೆ ಕಿರಿಕಿರಿ ಮಾಡುತ್ತಿದ್ದೇನಲ್ಲ, ಇದೆಷ್ಟು ಸರಿ, ಹಾಗೂ ಹೀಗೆ ವರ್ತಿಸುವ ನಾನು ಎಂಥವನು?” ಎಂದು ಆತ್ಮವಿಶ್ಲೇಷಣೆಗೆ ಪ್ರೇರೇಪಿಸಬೇಕು. ಅದು ಅನ್ಯೋನ್ಯತೆ.) ಇದು ಗೊತ್ತಿಲ್ಲದೆ ಗಂಡುಹೆಣ್ಣುಗಳು ಮದುವೆಯಾಗಿ ಕಾಮಜೀವನ ಶುರುಮಾಡುತ್ತ ಅನ್ಯೋನ್ಯತೆಯ ಹುಟ್ಟಿಗಾಗಿ ಕಾಯುತ್ತಾರೆ. ಆದರೆ ಕಾಮದ ಬಯಕೆಯಂತೆ ಅನ್ಯೋನ್ಯತೆಯ ಬಯಕೆಯು ಪ್ರಯತ್ನಪಡದೆ ಸಹಜವಾಗಿ ಬರುವುದಿಲ್ಲ. ಆಗ ಕಾಮಕೂಟವು ಜನನಾಂಗಗಳ ಯಾಂತ್ರಿಕ ಕೂಟವಾಗುತ್ತದೆ. ಮನಸ್ಸುಗಳು ಕೂಡದೆ ನಿರಾಸೆ, ಹತಾಶೆ ಕಾಡುತ್ತದೆ. “ಇದಕ್ಕಿಂತ ಹೆಚ್ಚಿನ ಅನ್ಯೋನ್ಯತೆ ಸಾಧ್ಯವಿಲ್ಲ” ಎಂದು ಸಂಬಂಧವು ಬೆಳೆಯದೆ ಹಾಗೆಯೆ ನಿಂತುಬಿಡುತ್ತದೆ. ಆಗಲೇ ದಾಂಪತ್ಯದ ಬಗೆಗೆ ವ್ಯಂಗ್ಯೋಕ್ತಿಗಳು, ಕುಟುಕುವ ಅವತರಣಿಕೆಗಳು, ನಿರಾಶಾವಾದ, ಭಗ್ನಕಾವ್ಯ, ತತ್ವಜ್ಞಾನ ಹುಟ್ಟುತ್ತವೆ. ವಿವಾಹಬಾಹಿರ ಸಂಬಂಧಗಳಿಗೆ ಹಿನ್ನೆಲೆ ತಯಾರಾಗುತ್ತದೆ. ಸಂದೇಶ ಕೂಡ ಇದಕ್ಕೆ ಹೊರತಾಗಿಲ್ಲ.
ನಾನು ಹೇಳಿದೆ: “ಸಂದೇಶ್, ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವ ನಿಮ್ಮ ವಿಚಾರವನ್ನು ಒಪ್ಪುತ್ತೇನೆ. ಅದಕ್ಕಿಂತ ಮುಂಚೆ ಒಂದು ಪ್ರಶ್ನೆ: ನೀವು ಹೊರಗಿನ ಸುಖಕ್ಕೆ ಕೈಹಾಕಿದ್ದು ಯಾವಾಗ?” ಅವನು ಮೂರು ವರ್ಷಗಳಿಂದ ಎಂದು ಹೇಳಿದ. “ಅಂದರೆ, ಏಳು ವರ್ಷ ಹೆಂಡತಿಯ ಜೊತೆಗೇ ಇದ್ದಿರಿ. ಆಕೆಯನ್ನೇ ನಂಬಿಕೊಂಡಿದ್ದಿರಿ. ಆಕೆಯಿಂದ ಮಾತ್ರ ಕಾಮತೃಪ್ತಿ ಪಡೆಯುತ್ತಿದ್ದಿರಿ. ಆಗ ಅನ್ಯೋನ್ಯತೆ ಎಲ್ಲಿ ಹುಟ್ಟಿತು? ಏಳು ವರ್ಷ ಹುಟ್ಟಲಿಲ್ಲ ಎಂದಾದರೆ ಇನ್ನುಮುಂದೆ ಹುಟ್ಟುವ ಭರವಸೆ ಎಷ್ಟು ಸರಿ? ಒಂದುವೇಳೆ ಅದಾಗದಿದ್ದರೆ ಹಣೆಬರಹ ಎಂದಿರಿ… ನನಗೆ ಅನ್ನಿಸುವ ಪ್ರಕಾರ, ಅನ್ಯೋನ್ಯತೆ ಸಿಗದಿರುವಾಗ ನಿಮಗೆ ಮತ್ತೆ ಹೊರಗಿನ ಸುಖದ ಬಯಕೆ ಆಗಬಹುದು. ಆಗೇನು ಮಾಡುತ್ತೀರಿ? ಈಸಲ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುತ್ತೀರಿ. ಪಾರ್ಲರ್ ಸೆಕ್ಸ್ ಬದಲು ನೀಲಿಚಿತ್ರಗಳು, ಫೋನ್ ಸೆಕ್ಸ್ ಮುಂತಾದ ಸುರಕ್ಷಿತ ದಾರಿಗಳನ್ನು ಹುಡುಕಿಕೊಳ್ಳುತ್ತೀರಿ. ಇಲ್ಲಿ ಅನ್ಯೋನ್ಯತೆ ಎಲ್ಲಿ ಬಂತು, ಏನು ಪ್ರಯೋಜನವಾಯಿತು?”
ನಾನಾಡಿದ್ದು ಅವನ ತಲೆಯೊಳಗೆ ಬೆರಳುಹಾಕಿ ಕಲಸಿ ಸತ್ಯವನ್ನು ಹೊರತೆಗೆದಂತೆ ಆಗಿತ್ತು. ಅವನ ಮುಖದಲ್ಲಿ ಸಂಕಟ, ಗೊಂದಲ ಎರಡೂ ಕಾಣುತ್ತಿದ್ದುವು. ನಾನು ಮುಂದುವರಿದೆ.
“ಯಾವುದೇ ದಾಂಪತ್ಯದಲ್ಲಿ ಅನ್ಯೋನ್ಯತೆಯು ಕಾಯ್ದುಕೂತರೆ ಬರುವುದಿಲ್ಲ. ಕಟ್ಟಿಕೊಂಡರೆ ಮಾತ್ರ ಬರುತ್ತದೆ. ಅದಕ್ಕಾಗಿ ಇಬ್ಬರೂ ಪ್ರಯತ್ನ ಮಾಡಬೇಕು.” ಸಂದೇಶ ಥಟ್ಟನೆ ಹೇಳಿದ. “ಸರಿ ಹಾಗಾದರೆ ನಾನು ಕಟ್ಟಿಕೊಳ್ಳುವುದಕ್ಕೆ ಇವೊತ್ತೇ ಶುರುಮಾಡುತ್ತೇನೆ. ಹೇಗೆಂತ ಹೇಳಿಕೊಡಿ!” ಎಂದು ನೇರವಾಗಿ ಕುಳಿತ. ನಾನೆಂದ “ಇಬ್ಬರೂ” ಪದ ಅವನ ತಲೆಗೆ ಹೋಗಲಿಲ್ಲವೆಂದು ಕಾಣುತ್ತದೆ.
“ಬಹಳ ಒಳ್ಳೆಯದು, ಹೇಳಿಕೊಡುತ್ತೇನೆ… ಇದರಲ್ಲಿ ಮೊದಲ ಹೆಜ್ಜೆ ಎಂದರೆ ಸಂಗಾತಿಯ ಜೊತೆಗೆ ಬಿಚ್ಚುಮನಸ್ಸಿನ ಮಾತುಕತೆ ನಡೆಸುವುದು. ಅಂದರೆ ನಿಮ್ಮ ಮನದೊಳಗೆ ಅಡಗಿರುವ ಅನಿಸಿಕೆಗಳನ್ನೂ ಭಾವನೆಗಳನ್ನೂ ಇರುವಂತೆಯೇ ಮುಂದಿಡುತ್ತ “ಇದು ನಾನು, ನಾನು ಹೀಗೆ” ಎಂದು ಪ್ರಾಮಾಣಿಕವಾಗಿ ತೆರೆದುಕೊಳ್ಳಬೇಕು – ನಿಮ್ಮಾಕೆಯು ನಿಮ್ಮನ್ನು ಕೀಳಾಗಿ ಕಾಣಬಹುದು ಎಂದೆನಿಸಿದರೂ. ಅಂದರೆ, ನಿಮ್ಮ ಪಾರ್ಲರ್ ಸಂಗತಿಯನ್ನೂ ಹೇಳಿಕೊಳ್ಳುವುದು…” ಎಂದು ಮತ್ತೆ ಮುಂಚಿನ ಮಾತಿಗೇ ಬಂದೆ. ಮತ್ತೆ ಅವನ ಮುಖದಲ್ಲಿ ಪ್ರತಿರೋಧ ಕಂಡಿತು.
ಸಂದೇಶನು ತನ್ನ ಪ್ರತಿರೋಧವನ್ನು ನಿವಾರಿಸಿಕೊಳ್ಳಲು ಹೇಗೆ ನೆರವಾದೆ ಎಂದು ಮುಂದಿನ ಸಲ ಹೇಳುತ್ತೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888