ಸುಖೀ ದಾಂಪತ್ಯ ೧೮೪
“ನಾನು ಹೀಗೆ” ಎಂದು ಬಯಲಾಗಿ, ಸಂಗಾತಿಗೆ ಅರ್ಥಮಾಡಿಸದ ಹೊರತು ಅನ್ಯೋನ್ಯತೆಯ ಕೂಟಕ್ಕೆ ಮನಸ್ಸು ಬರುವುದಿಲ್ಲ.
184: ಸರಿಯಾದ ಸಂದೇಶ-3
ಸಂದೇಶ ದಾಂಪತ್ಯದೊಳಗಿದ್ದೂ ಒಂಟಿಯಾಗಿದ್ದಾನೆ, ಹಾಗೂ ಅದನ್ನು ಹೊರಗಿನ ಕಾಮತೃಪ್ತಿಯ ಮೂಲಕ ನೀಗಿಸಿಕೊಳ್ಳುತ್ತಿರುವಾಗ ಕಾಯಿಲೆಯಾಗಿ ಭಯದಿಂದ ನಿಲ್ಲಿಸಿದ್ದಾನೆ. ಹೆಂಡತಿಯೊಡನೆ ಅನ್ಯೋನ್ಯತೆ (intimacy) ಬರಲು ಇದನ್ನು ಹಂಚಿಕೊಳ್ಳುವುದಕ್ಕೆ ಸೂಚಿಸಿದಾಗ ಒಪ್ಪದೆ ಇದ್ದಾನೆ.
ಸಂದೇಶ ಸ್ವಲ್ಪ ವ್ಯಂಗ್ಯವಾಗಿಯೇ ಉದ್ಗರಿಸಿದ: “ಸರಿಯಾಗಿ ಹೇಳಿದಿರಿ! ನಿಜ ಹೇಳಿದರೆ ಹೆಂಡತಿ ನನ್ನನ್ನು ಕೀಳಾಗಿ ಭಾವಿಸಿ, ದೂರ ಮಾಡಿದರೆ ಕೂಡಿ ಬಾಳಲು ಸಾಧ್ಯವೆ? ನನ್ನ ಕುಟುಂಬದ ಸುಖಶಾಂತಿಯನ್ನು ನಾನೇ ಕೈಯಾರೆ ಹಾಳುಮಾಡಿಕೊಳ್ಳುವುದೇ?” ಅವನ ಮಾತಿನಲ್ಲಿದ್ದ ನಿಜ, ಕೀಳು ಹಾಗೂ ಸುಖಶಾಂತಿ ಈ ಮೂರು ಪದಗಳನ್ನು ಉಪಯೋಗಿಸಿದ ರೀತಿಯಲ್ಲಿ ಅವನ ಸಂಕಟ ಅರ್ಥವಾಯಿತು. ಇವುಗಳನ್ನು ಒಂದೊಂದಾಗಿ ಚರ್ಚಿಸುವುದು ಅಗತ್ಯ ಎನ್ನಿಸಿತು.
ದಾಂಪತ್ಯದಲ್ಲಿ ಸರ್ವೇಸಾಮಾನ್ಯವಾದ ಒಂದು ಅನಿಸಿಕೆಯಿದೆ: ತಾನು ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚು ಉತ್ತಮ ಎಂದು ತೋರಿಸಿಕೊಳ್ಳುತ್ತಿದ್ದರೆ ಮಾತ್ರ ಸಂಗಾತಿಯು ತನ್ನನ್ನು ಗೌರವಿಸುತ್ತಾರೆ, ಇರುವುದನ್ನು ಇರುವಂತೆ ತೋರಿಸಿಕೊಂಡರೆ ಬೆಲೆ ಸಿಗುವುದಿಲ್ಲ ಎಂದು ಭಾವಿಸುತ್ತೇವೆ. ಹಾಗಾಗಿಯೇ ಬಿಳಿಸುಳ್ಳುಗಳನ್ನು ಹುಟ್ಟಿಸುತ್ತಲೇ ಇರುತ್ತೇವೆ. (ಅಂದಹಾಗೆ, ಸುಳ್ಳು ಯಾಕೆ ಹೇಳುತ್ತೇವೆ? ಸುಳ್ಳಿಗೂ ಭದ್ರತೆಗೂ ನಂಟಿದೆ. ನಾವಾಡುವ ಸುಳ್ಳುಗಳ ಮೂಲಕ ಹುಸಿಭದ್ರತೆಯನ್ನು ಸಂಗಾತಿಗೆ ಹುಟ್ಟಿಸುತ್ತ, ಸಂಗಾತಿ ನಮ್ಮನ್ನು ನಂಬಿ ಭದ್ರಭಾವವನ್ನು ಹೊಂದುತ್ತಾರೆ ಎಂದು ನಂಬುತ್ತೇವೆ; ಅವರು ನಂಬಿದಂತೆ ತೋರಿಸಿಕೊಂಡು ನಮಗೆ ಭದ್ರಭಾವ ಕೊಡುತ್ತಿರುತ್ತಾರೆ! ) ನೂರು ಸುಳ್ಳುಹೇಳಿ ಒಂದು ಮದುವೆ ಮಾಡು ಎಂಬ ಗಾದೆ ನೀವು ಕೇಳಿರಬಹುದು – ಪುಣ್ಯ, ಅದೀಗ ಅಷ್ಟಾಗಿ ಬಳಕೆಯಲ್ಲಿಲ್ಲ. ಸುಳ್ಳಿನ ಅಡಿಪಾಯ ಒತ್ತಟ್ಟಿಗೆ ಕುಸಿಯಿತು ಎಂದಾಗ ದಾಂಪತ್ಯದ ಸಮತೋಲನೆಯು ಅಲ್ಲಾಡಿ ಅತೀವ ಅಭದ್ರತೆಯಿಂದ ಹೊಯ್ದಾಡುತ್ತೇವೆ. ಸಂದೇಶನಿಗೂ ಇದರ ಭಯವಿದೆ.
ತತ್ವ-ಮನಃಶಾಸ್ತ್ರಜ್ಞ ಯುಜೀನ್ ಜೆಂಡ್ಲಿನ್ (Eugene Gendlin) ಹೇಳಿದ್ದು ನೆನಪಾಯಿತು: ಸತ್ಯವು ಸದಾ ಸತ್ಯವಾಗಿಯೇ ಇರುತ್ತದೆ. ಅದನ್ನು ಒಪ್ಪಿಕೊಂಡು ಹೊಣೆಹೊತ್ತರೆ ಸಹಿಸಲಾರದ ಅನಾಹುತ ಏನೂ ಆಗುವುದಿಲ್ಲ. ಒಪ್ಪಿಕೊಳ್ಳದಿದ್ದರೆ ಅದು ಮಾಯವಾಗುವುದೂ ಇಲ್ಲ. ಆದರೆ ಸುಳ್ಳಿನೊಂದಿಗೆ ಬದುಕುವುದು ಮಾತ್ರ ಅಸಹನೀಯ ಆಗುತ್ತದೆ. ಸತ್ಯವನ್ನು ಹೊರತಂದರೆ ದುಷ್ಪರಿಣಾಮ ಎದುರಿಸಬೇಕಾದೀತು ಎಂದುಕೊಂಡರೆ, ಅದನ್ನು (ಬಚ್ಚಿಟ್ಟ ಕಾರಣದಿಂದ) ಈಗಾಗಲೇ ಎದುರಿಸುತ್ತ ಇರುತ್ತೇವಲ್ಲವೆ? ಹಾಗಾಗಿ ಸಂದೇಶನ ಸುಳ್ಳನ್ನು ನೇರವಾಗಿ ಎದುರಿಸುವುದು ಸೂಕ್ತ ಎನ್ನಿಸಿತು.
“ಸಂದೇಶ್, ಪಾರ್ಲರ್ ಪ್ರಸಂಗಗಳಿಂದ ಹೊಸ ಸುಖದ ಅರಿವು ಮೂಡಿಸಿಕೊಂಡಿದ್ದೀರಿ. ಕಾಯಿಲೆಯ ಭಯದಿಂದ ಅದನ್ನು ನಿಲ್ಲಿಸಬೇಕಾಯಿತು. ಈಗದನ್ನು ಹೆಂಡತಿಯಿಂದ ಪಡೆಯಲು ಹೊರಟಿದ್ದೀರಿ. ಈಗ, ಪ್ರಸಂಗವನ್ನು ಮುಚ್ಚಿಡುತ್ತ ಅರಿವನ್ನು ಮಾತ್ರ ಹೇಗೆ ಹಂಚಿಕೊಳ್ಳುತ್ತೀರಿ? ಉದಾಹರಣೆಗೆ, ಸಂಭೋಗ ಬೇಡ, ಹಸ್ತಮೈಥುನ ಮಾಡು ಎಂದಂದಾಗ ಆಕೆ ಕೇಳುವ ಮೊದಲ ಪ್ರಶ್ನೆ ಏನು ಗೊತ್ತೆ? “ಇಷ್ಟುದಿನ ಇಲ್ಲದ್ದು ಇದನ್ನು ಎಲ್ಲಿಂದ ಕಲಿತಿರಿ?” ಯಾಕೆಂದರೆ ಆಕೆಯೂ ಹೊಸ ವಿಚಾರವನ್ನು ಸಂದೇಹದಿಂದ ನೋಡುವುದು ಸಹಜ –ಪ್ರಬಲ ಕಾರಣವಿಲ್ಲದೆ ಬದಲಾಗಲು ಆಕೆಗೂ ಮನಸ್ಸು ಬರುವುದಿಲ್ಲ. ಆಗ ಸತ್ಯವನ್ನು ಬಚ್ಚಿಡಲು ಇನ್ನೊಂದು ಕತೆ ಕಟ್ಟಬೇಕಾಗುತ್ತದೆ. ನಾನು ಹಾಗಲ್ಲ ಆದರೂ… ಎನ್ನುತ್ತ ಸಾಚಾತನದ ಮುಖವಾಡ ಧರಿಸಬೇಕಾಗುತ್ತದೆ. ಎಲ್ಲರೂ ತಮ್ಮೆಲ್ಲ ಭಾವನೆಗಳನ್ನು ಎಗ್ಗಿಲ್ಲದಂತೆ ಹರಿಬಿಡುವುದೇ ಕಾಮಕೂಟದಲ್ಲಿ. ಅಂಥದ್ದರಲ್ಲಿ ನೀವು ಒಳಗೊಂದು ಹೊರಗೊಂದು ಆಗಿ ವರ್ತಿಸಲು ಎಷ್ಟೊಂದು ಮಾನಸಿಕ ಶಕ್ತಿ ಖರ್ಚಾಗುತ್ತದೆ ಗೊತ್ತೆ? ಈ ದ್ವಂದ್ವದಲ್ಲಿ ಅನ್ಯೋನ್ಯತೆ ಇರಲಿ, ಹೊಸ ಲೈಂಗಿಕ ಸಮಸ್ಯೆಗಳು ಹುಟ್ಟಿದರೂ ಆಶ್ಚರ್ಯವಿಲ್ಲ.” ಅವನು ಅರ್ಥಮಾಡಿಕೊಂಡು ಮೌನವಾಗಿದ್ದ.
“ಸಂದೇಶ್, ನಿಮ್ಮ ಶಿಶ್ನದ ಸೋಂಕು, ಅದರಿಂದಾದ ಹಿಂಸೆಯನ್ನು ಸ್ವಲ್ಪಕಾಲ ಪಕ್ಕಕ್ಕಿಡೋಣ. ಪಾರ್ಲರ್ ಅನುಭವವನ್ನು ಅನುಸರಿಸಿ ನಿಮ್ಮನ್ನು ಎರಡು ಭಾಗ ಮಾಡೋಣವಂತೆ – ಅನುಭವ ಪಡೆಯುವುದಕ್ಕೆ ಮುಂಚಿನ ಸಂದೇಶ್, ಹಾಗೂ ಅನುಭವ ಪಡೆದಾದ ನಂತರದ ಸಂದೇಶ್. ಮುಂಚೆ ಹೇಗಿದ್ದಿರಿ? ಪಾರ್ಲರ್‌ನಿಂದ ಪಡೆದ ಅನುಭವವು ದಾಂಪತ್ಯದ ಕೂಟದ ಅನುಭವಕ್ಕಿಂತ ಹೇಗೆ ಭಿನ್ನವಾಗಿತ್ತು? ಅದು ನಿಮ್ಮಲ್ಲಿ ಏನು ಬದಲಾವಣೆ ತಂದಿದೆ? ಅದರಿಂದ ನಿಮ್ಮ ಬಗೆಗೆ ಹೊಸದು ಏನು ಅನ್ನಿಸಿದೆ? ವಿವರಿಸಬಹುದಾ?”
ಸಂದೇಶ ಸುತ್ತುಬಳಸಿ ಹೇಳಿದ್ದಿಷ್ಟು: ಮುಂಚೆ ಅವನಲ್ಲಿ ಸೆಕ್ಸ್ ಎಂದರೆ ಇಷ್ಟೆ ಎನ್ನುವ ನೀರಸಭಾವ ಇತ್ತು. ಅದಕ್ಕೆ ಮೀಸಲಾದ ಸಾಂಗತ್ಯವು ಬೇಸರ ತರಿಸುವಂತೆ ಇತ್ತು. ಇನ್ನು, ಪಾರ್ಲರ್‌ನಲ್ಲಿ ಅವನ ಅನುಭವವು ಪ್ರತಿಸಲವೂ ರೋಚಕವಾಗಿತ್ತು. ಚೈತನ್ಯ ಕೊಡುತ್ತಿತ್ತು. ಒಂದು ಅನುಭವ ಮಾಸಿದಾಗ ಇನ್ನೊಂದು ಅನುಭವವನ್ನು ಪಡೆಯಲು ಕಾತರ ಇರುತ್ತಿತ್ತು.
ನಾನು ಕೇಳಿದೆ: “ ಈಗ ಹೇಳಿ: ಈ ಅನುಭವಗಳು ಮೇಲು-ಕೀಳುತನದ ಅನಿಸಿಕೆ ಕೊಟ್ಟಿವೆಯೆ? ಅಥವಾ ಇದರಿಂದ ದಾಂಪತ್ಯದ ಮೇಲೆ ದುಷ್ಪರಿಣಾಮ ಆಗಬಹುದೇನೋ ಎಂದು ಅನ್ನಿಸಿತ್ತೆ? ” ಅಡ್ಡಡ್ಡ ತಲೆ ಅಲ್ಲಾಡಿಸಿ ಎಲ್ಲವೂ ಚೆನ್ನಾಗಿತ್ತು ಎಂದ. ಒಂದುವೇಳೆ ಸೋಂಕು ಆಗದಿದ್ದರೆ ಮುಂದುವರಿಯುತ್ತಿತ್ತು ಎಂದೂ ಒಪ್ಪಿಕೊಂಡ.
“ಈಗ, ಆ ಸುಖಕೊಡುವ ಪ್ರಸಂಗಗಳನ್ನು ಭಯದಿಂದಲೇ ಆಗಲಿ, ಬಿಟ್ಟುಕೊಟ್ಟಿದ್ದೀರಿ. ಅದನ್ನು ದಾಂಪತ್ಯದಲ್ಲೇ ಹುಡುಕಿಕೊಳ್ಳಲು ಹೊರಟಿದ್ದೀರಿ. ಚೈತನ್ಯ ಕೊಡುವ ನಿಶ್ಚಿತವಾದ ಮೂಲವನ್ನು ಬಿಟ್ಟುಕೊಟ್ಟು, ಅದನ್ನು ಖಾತರಿ ಇಲ್ಲವಾದರೂ ದಾಂಪತ್ಯದಲ್ಲೇ ಹುಡುಕಿಕೊಳ್ಳಲು ಯತ್ನಿಸುತ್ತೇನೆ ಎಂದರೆ ಕೀಳು ಹೇಗಾಗುತ್ತೀರಿ?”
ಸಂದೇಶ ತಬ್ಬಿಬ್ಬಾದ. ನಂತರ ಹೇಳಿಕೊಂಡ. ಹೊರಗಿನ ಸಂಬಂಧವನ್ನು ಕೀಳು ಎಂದು ಹೆಂಡತಿ ಲೆಕ್ಕ ಮಾಡುವುದರಿಂದ ತನಗೂ ಕೀಳು ಎನ್ನಿಸುತ್ತದೆ ಎಂದ. ಅಂದರೆ ಸಂದೇಶನಿಗೆ ಸ್ವಂತಿಕೆಯ ಕೊರತೆಯಿದೆ. “ನಿಮ್ಮ ಬಗೆಗೆ ಹೆಂಡತಿ ಏನೆಂದುಕೊಳ್ಳುತ್ತಾಳೆ ಎನ್ನುವುದು ಮಹತ್ವದ್ದು, ಆದರೆ ನಿಮ್ಮ ಬಗೆಗೆ ನೀವೇ ಏನು ಅಂದುಕೊಳ್ಳುತ್ತೀರಿ ಎನ್ನುವುದು ಅದಕ್ಕಿಂತ ಹೆಚ್ಚು ಮಹತ್ವದ್ದು, ಅಲ್ಲವೆ?” ಅವನು ಒಪ್ಪಿಕೊಂಡ.
ನಾನು ಮುಂದುವರಿಸಿದೆ. “ಕೀಳು-ಮೇಲು ಎಂದು ಭೇದಭಾವಕ್ಕೆ ಒಳಪಡಿಸಿಕೊಳ್ಳುವುದನ್ನು ಬಿಟ್ಟು ಹೀಗೆ ಯೋಚಿಸಿ: ದಾಂಪತ್ಯದಲ್ಲಿ ನನಗೆ ಬೇಕಾದುದು ಸಿಗಲಿಲ್ಲ, ಹಾಗಾಗಿ ಹೊರಗೆ ಹೋಗಿ ಸುಖಪಟ್ಟೆ. ಇದರಿಂದ ನನಗೇನು ಬೇಕು ಎಂಬುದು ಗೊತ್ತಾಗಿದೆ. ಆ ಸುಖಕ್ಕೆ ಹೇಗೆ ತೆರೆದುಕೊಂಡಿದ್ದೇನೆ, ಹಾಗೂ ಅದನ್ನು ದಾಂಪತ್ಯಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು? ಯೋಚಿಸಿ.” ಅವನಿಗೆ ಅರ್ಥವಾಗಲಿಲ್ಲ. ವಿವರಿಸಿದೆ.
“ಪ್ರತಿಯೊಬ್ಬರಿಗೂ ಇರುವಂತೆ ನಿಮಗೂ ಕಾಮಸುಖಕ್ಕೆ ಅರ್ಹತೆಯಿದೆ. ಸುಖ ಹೇಗಿರುತ್ತದೆ ಎಂಬುದರ ಅರಿವೂ ಆಗಿದೆ. ಈಗದನ್ನು ಹೆಂಡತಿಯಿಂದ ಮಾತ್ರ ಪಡೆಯಬೇಕೆಂದು ನಿರ್ಧರಿಸಿದ್ದೀರಿ. ಇದು ಆಗಬೇಕಾದರೆ ಮೊದಲು ನಿಮ್ಮಾಕೆಗೆ ನಿಮ್ಮ ನಿಲುವು ಅರ್ಥವಾಗಬೇಕು. ಅಷ್ಟಲ್ಲದೆ ಆಕೆಯು ಲೈಂಗಿಕ ಸಂಬಂಧವನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕು. ಅದಕ್ಕಾಗಿ ನೀವು ಆಕೆಗೆ ಸಹಾಯ ಮಾಡಬೇಕು. ಒಂದುಕಡೆ ಪಡೆದ ಸುಖವು ಸರಿಯಾಗಿತ್ತು ಎನ್ನುತ್ತಲೇ ಇನ್ನೊಂದು ಕಡೆ ಅದಕ್ಕೆ ಅನುಸರಿಸಿದ ದಾರಿ ಸರಿಯಾಗಿರಲಿಲ್ಲ ಎಂದು ಹಂಚಿಕೊಳ್ಳಬೇಕು. ನಿಮ್ಮ ಈ ತಪ್ಪೊಪ್ಪಿಗೆಯಿಂದ ಮಾತ್ರ ಆಕೆಯ ಅಂತರಂಗದಲ್ಲಿ ಬದಲಾಗಲು, ಪ್ರೇರಣೆ ಹುಟ್ಟಲು ಸಾಧ್ಯವಿದೆ.”
ಈ ವಿಚಾರ ಸಂದೇಶನಿಗೆ ಹಿಡಿಸಿತು. ಜೊತೆಗೆ ಸಂದೇಹವೂ ಆಯಿತು: ಪರಿಣಾಮ ಇದಕ್ಕೆ ವಿರುದ್ಧವಾದರೆ? ಸಂದೇಶ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೇಗೆ ನೆರವಾದೆ ಎಂದು ಮುಂದಿನ ಸಲ ಹೇಳುತ್ತೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888