ಸುಖೀ ದಾಂಪತ್ಯ ೧೮೫
ಸಂಗಾತಿಯ ಬದಲಾದ ವರ್ತನೆಯು ಆತಂಕ ಹುಟ್ಟಿಸುತ್ತದೆ; ಹುಟ್ಟಿದ ಆತಂಕವು ಸ್ವತಃ ಬದಲಾಗುವುದಕ್ಕೆ ಪ್ರೇರಣೆ ಕೊಡುತ್ತದೆ!
185: ಸರಿಯಾದ ಸಂದೇಶ-4
ಕಾಮತೃಪ್ತಿಯನ್ನು ಹೆಚ್ಚಾಗಿ ಅನುಭವಿಸಬಹುದು ಎಂದು ಪಾರ್ಲರ್ ಪ್ರಸಂಗಗಳಿಂದ ಸಂದೇಶನಿಗೆ ಅರ್ಥವಾಗಿದೆ. ಅದನ್ನು ಹೆಂಡತಿಯೊಂದಿಗೆ ಪಡೆಯುವುದಕ್ಕೆ ಮನಸ್ಸು ಮಾಡಿದ್ದಾನೆ.
“ಆಯಿತು, ಹೆಂಡತಿಯೊಂದಿಗೆ ಹೇಳಿಕೊಳ್ಳುತ್ತೇನೆ. ಆಕೆ ಅರ್ಥಮಾಡಿಕೊಂಡರೆ ಸರಿ. ಬದಲಾಗಿ, ತಪ್ಪು ತಿಳಿದುಕೊಂಡು, ನನ್ನ ಬಗೆಗೆ ಅಸಹ್ಯಪಟ್ಟುಕೊಂಡು ಸಂಬಂಧ ಮುರಿದುಕೊಂಡುಬಿಟ್ಟರೆ? ಅಥವಾ ಜೊತೆಗಿದ್ದೂ ನನ್ನ ವಿರೋಧವಾಗಿ ಹಂಗಿಸಿ ಆಡಿಕೊಳ್ಳುತ್ತಿದ್ದರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದ.
ಸಂದೇಶನ ಸಂದೇಹ ನಿಜ ಅನ್ನಿಸಿತು. ದಂಪತಿಯಲ್ಲಿ ಒಬ್ಬರು ತಮ್ಮ ತಪ್ಪನ್ನು ತಾವಾಗಿಯೇ ಬಹಿರಂಗ ಮಾಡುತ್ತಾರೆ ಎಂದುಕೊಳ್ಳಿ. ಅದಕ್ಕೆ ಸಂಗಾತಿಯ ಬಹುತೇಕ ಅನಿಸಿಕೆ ಹೇಗಿರುತ್ತದೆ? ಇಂಥ ವಿಷಯಗಳು ಖಂಡಿತವಾಗಿಯೂ ಮನಸ್ಸಿಗೆ ನೋವು ಕೊಡುತ್ತವೆ. (ಅದಕ್ಕಾಗಿಯೇ “ನಾನೇ ಆ ತಪ್ಪು ಮಾಡಿದ್ದರೆ ನಿನಗೆ ಹೇಗೆ ಅನ್ನಿಸುತ್ತಿತ್ತು?” ಎಂದು ಕೇಳುವುದು.) ಆದರೆ ತಪ್ಪೊಪ್ಪಿಗೆಯ ಹಿಂದಿರುವ ಅಂತರಂಗದ ತೊಳಲಾಟ, ಸಾಚಾತನ, ಹಾಗೂ ತಿದ್ದಿಕೊಂಡು ಹತ್ತಿರವಾಗುವ ಬಯಕೆ –ಇದೆಲ್ಲದರ ಬಗೆಗೆ ಯೋಚಿಸುವುದೂ ಸಂಬಂಧದ ಸೌಖ್ಯದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಆದರೆ ಹೆಚ್ಚಿನವರು ತಪ್ಪಿತಸ್ಥರನ್ನು ಹೀಗಳೆದು ದೂರೀಕರಿಸುತ್ತಾರೆ. ದುಃಖ, ಆಕ್ರೋಶ, ಸಿಟ್ಟು ಅವರ ಮೇಲೆ ಹಾಕುತ್ತ, “ಚೆನ್ನಾಗಿದ್ದ ಸಂಸಾರವನ್ನು ಹಾಳುಮಾಡಿದೆಯಲ್ಲ!” ಎಂದು ಜೊತೆಗಿದ್ದೇ ಗೋಳಾಡುತ್ತಾರೆ.
ನೊಂದವರು ಹೀಗೆ ಪರಿತಪಿಸುವುದಕ್ಕೂ ಕಾರಣವಿದೆ. ಸರಿಯಾಗಿ ಸಂಸಾರ ಮಾಡಿಕೊಂಡಿದ್ದೇವೆಂದು ಭಾವಿಸಿರುವ ಗಂಡಹೆಂಡಿರು ತಮ್ಮದೇ ವಿಶಿಷ್ಟ ರೀತಿಯಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡು (fusion) ಇರುತ್ತಾರೆ. ತನ್ಮೂಲಕ ಒಂದು ಬಗೆಯ “ಸಮಸ್ಥಿತಿ”ಯನ್ನು ಹುಟ್ಟಿಸಿಕೊಂಡಿರುತ್ತಾರೆ. ಈ ಸಮಸ್ಥಿತಿಯೇ ಭದ್ರ, ಶಾಶ್ವತ ಎಂದು ಭಾವಿಸಿರುತ್ತಾರೆ. ಸಮಸ್ಯೆ ಹುಟ್ಟುವುದು ಇಲ್ಲಿಯೇ!
ಸಂಬಂಧಗಳ ಬೆಳವಣಿಗೆ ಹಾಗೂ ವಿಕಾಸದ ಬಗೆಗೆ ಮರ್ರೀ ಬೊವೆನ್ (Murray Bowen) ಎಂಬ ಕುಟುಂಬ ಶಾಸ್ತ್ರಜ್ಞ ಬಹಳ ಸರಿಯಾಗಿ ಹೇಳಿದ್ದಾನೆ. ಸಂಗಾತಿಗಳ ಸಮಸ್ಥಿತಿಯು ಅಷ್ಟೇ ಭದ್ರವಾಗಿದ್ದರೂ ಕೊನೆಯ ತನಕ ಹಾಗೆಯೇ ಉಳಿದುಬರಲು ಸಾಧ್ಯವೇ ಇಲ್ಲ. “ಮದುವೆಯಾಗಿ ಕೊನೆಯ ತನಕ ಸುಖವಾಗಿದ್ದರು” ಎನ್ನುವುದು ರಾಜಕುಮಾರ-ರಾಜಕುಮಾರಿ ಕತೆಗಳಲ್ಲಿ ಮಾತ್ರ. ದಂಪತಿಗಳು ಸಮಾಜದ ಭಾಗವಾಗಿರುವಾಗ ಅವರ ಸಂಬಂಧದ ಮೇಲೆ ಮೂರನೆಯ ವ್ಯಕ್ತಿಯ (ಉದಾ. ಕುಟುಂಬದ ಇತರ ಸದಸ್ಯರು, ಸಂಬಂಧಿಕರು, ಸ್ನೇಹಿತವರ್ಗ) ಪ್ರಭಾವವು ಒಂದಿಲ್ಲೊಂದು ವಿಧದಲ್ಲಿ ಬಿದ್ದೇ ಬೀಳುತ್ತದೆ. ಮೂರನೆಯವರು ಗಂಡಹೆಂಡಿರ ಪೈಕಿ ಒಬ್ಬರಿಗೆ (ಹೆಚ್ಚು) ಹತ್ತಿರವಾಗುವುದರಿಂದ ಅವರು ಮುಂಚಿನಂತೆ ಇರಲಾಗದೆ ಬದಲಾಗುತ್ತಾರೆ. ಆಗ ಎರಡನೆಯ ಸಂಗಾತಿಯು ಬರಬಾರದ್ದು ಬಂದುಬಿಟ್ಟಿದೆ ಎಂದು ಭೀತಿಗೊಂಡು ಮೂರನೆಯ ವ್ಯಕ್ತಿಯನ್ನು ದೂರತಳ್ಳುತ್ತ ಮುಂಚಿನ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಒದ್ದಾಡುತ್ತಾರೆ. ಆದರೆ ಮೊದಲನೆಯ ಸಂಗಾತಿಯು ಈಗಾಗಲೇ ಸಮಸ್ಥಿತಿಯನ್ನು ದಾಟಿ ಮುಂದೆ ಹೋಗಿರುವುದರಿಂದ, ಅವರನ್ನು ಕೂಡಿಕೊಳ್ಳಲು ಇನ್ನೊಬ್ಬರೂ ತಮ್ಮ ಜಾಗವನ್ನು ಬಿಡಲೇಬೇಕಾಗುತ್ತದೆ – ಇಲ್ಲದಿದ್ದರೆ ಇಬ್ಬರೂ ಬೇರೆಬೇರೆ ಜಾಗಗಳಲ್ಲಿ ಉಳಿದು ಸಂಬಂಧವೇ ಇಲ್ಲದಂತಾಗುತ್ತದೆ! ಹೀಗೆ ದಾಂಪತ್ಯದಲ್ಲಿ ಒಬ್ಬರು ಬದಲಾದಾಗ ಇನ್ನೊಬ್ಬರೂ ಅನಿವಾರ್ಯವಾಗಿ ಬದಲಾಗಲೇಬೇಕು. ಆಗ ಹೊಸ ಸಮಸ್ಥಿತಿ ಏರ್ಪಡುತ್ತದೆ; ಇದು ಮುಂಚಿನ ಸ್ಥಿತಿಗಿಂತ ಸುಭದ್ರವಾಗಿರುತ್ತದೆ. ಅದು ಹೇಗೆಂದರೆ, ಮೂರನೆಯವರ ಪ್ರವೇಶದ ಮೂಲಕ ಇಬ್ಬರೂ ತಮ್ಮನ್ನು ಹಾಗೂ – ಅಸಮಾಧಾನವಾದರೂ ಸರಿ – ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಇದಕ್ಕಾಗಿ ದೃಷ್ಟಾಂತ: ಪ್ರೀತಿಯ ಗಂಡನು ಇತ್ತೀಚೆಗೆ ತನ್ನ ಗೆಳತಿಗೆ ಹತ್ತಿರವಾಗಿ, ಹೆಂಡತಿಯೊಂದಿಗೆ ಸಮಯ ಕಡಿಮೆ ಕಳೆಯುತ್ತಿದ್ದಾನೆ ಎಂದುಕೊಳ್ಳಿ. ಇಲ್ಲಿ ಗಂಡ ಬದಲಾಗುತ್ತಿದ್ದಾನೆ. ದಾಂಪತ್ಯದ ಸಮಸ್ಥಿತಿ ಅಲ್ಲಾಡುತ್ತಿದೆ. ಆಗ ಹೆಂಡತಿಯು ಅವನನ್ನು ಎಚ್ಚರಿಸುವಾಗ ಅದು ಗಂಡನಿಗೆ ಚುಚ್ಚಿದಂತಾದರೂ ಅವನು ಅರ್ಥಮಾಡಿಕೊಂಡು, ತಪ್ಪು ತಿದ್ದಿಕೊಂಡು ಹೆಂಡತಿಗೆ ಹತ್ತಿರವಾಗಲು ಯತ್ನಿಸುತ್ತಾನೆ. ಹಾಗೆಯೇ ಹೆಂಡತಿಯೂ ಆತ್ಮವಿಶ್ಲೇಷಣೆ ಮಾಡಿಕೊಳ್ಳುತ್ತಾಳೆ. ತನ್ನ ಅನುಪಯುಕ್ತ ವರ್ತನೆಗಳನ್ನು (ಉದಾ. ತನ್ನ ಅಲಂಕಾರವನ್ನು ಗಂಡ ಮೆಚ್ಚುವುದನ್ನು ಅಲಕ್ಷಿಸಿದ್ದು) ಬದಲಾಯಿಸಿಕೊಳ್ಳುತ್ತ ಗಂಡನಿಗೆ ಹತ್ತಿರವಾಗಲು ಯತ್ನಿಸುತ್ತಾಳೆ. ಹೀಗೆ ಹುಟ್ಟುವ ಅನ್ಯೋನ್ಯತೆಯ ನೆರಳಿನಲ್ಲಿ ಇಬ್ಬರೂ ಸೇರಿ ಹೊಸದಾದ ಹಾಗೂ ಮುಂಚಿಗಿಂತ ಭದ್ರವಾದ ಸಮಸ್ಥಿತಿಯನ್ನು ಕಟ್ಟಿಕೊಳ್ಳುತ್ತಾರೆ.
ಇದನ್ನು ಸಂದೇಶನಿಗೆ ವಿವರಿಸಿದೆ. ಅವನು ಪಾರ್ಲರ್‌ನಿಂದ ಕಂಡುಕೊಂಡ ಹೊಸ ಸುಖದ ಕಾರಣದಿಂದ ಹೆಂಡತಿಯು ಖಂಡಿತವಾಗಿಯೂ ತಲೆ ಕೆಡಿಸಿಕೊಳ್ಳುತ್ತಾಳೆ; ಹಾಗೂ ಈ ತಲೆಕೆಡುವಿಕೆಯೇ ಆಕೆಯು ಬದಲಾಗಲು ಕಾರಣವಾಗುತ್ತದೆ ಎಂದು ಬಿಡಿಸಿ ಹೇಳಿದೆ. ಸಂಗಾತಿಯ ಬದಲಾದ ವರ್ತನೆಯು ಸಮಸ್ಥಿತಿಯನ್ನು ಅಲ್ಲಾಡಿಸುತ್ತ ಆತಂಕ ಹುಟ್ಟಿಸುತ್ತದೆ. ಹಾಗೂ, ಹುಟ್ಟಿದ ಆತಂಕವು ಸ್ವತಃ ತಾನು ಬದಲಾಗುವುದಕ್ಕೆ ಅಂತಃಪ್ರೇರಣೆ ಕೊಡುತ್ತದೆ ಎಂದು ಒತ್ತಿಹೇಳಿದೆ.
ಸಂದೇಶ ಯೋಚಿಸುತ್ತ ಹೇಳಿದ: “ನೀವು ಹೇಳುವುದೇನೋ ಸರಿ. ಪಾರ್ಲರ್‌ನಲ್ಲಿ ಸಿಕ್ಕ ಸುಖವನ್ನು ಹೆಂಡತಿಯ ಮುಂದೆ ಬಿಚ್ಚಿಟ್ಟು, ನನಗೆ ಹಾಗೆ ಮಾಡು ಹೀಗೆ ಮಾಡು ಎಂದರೆ ಒತ್ತಾಯ ಆಗುತ್ತದೆ. ಅವಳು ಖಂಡಿತಾ ಆಗುವುದಿಲ್ಲ ಎಂದು ಮುಖ ಮುರಿಯುವಂತೆ ಮಾತಾಡುತ್ತಾಳೆ. ಆಗ ಏನಾಗುತ್ತದೆ? ಒಂದು ಕಡೆ ಹೆಂಡತಿಯೊಡನೆ ಮುಂಚಿನ ಸುಖ – ಅದೆಂಥದ್ದೇ ಇರಲಿ – ಕಿತ್ತುಕೊಂಡು ಹೋಯಿತು. ಹೊಸಸುಖ ಬರುವ ಭರವಸೆಯೂ ಇಲ್ಲವಾಯಿತು! ಇಷ್ಟಲ್ಲದೆ ಆಕೆಯು ಅಸಹ್ಯಪಟ್ಟುಕೊಂಡು ನನ್ನನ್ನು ದೂರ ಮಾಡಲೂ ಬಹುದು. ಹಳೆಯದು ಕಳೆದುಕೊಂಡು, ಹೊಸದು ಬರದೆ, ಹೆಂಡತಿ ದೂರವಾದರೆ ಏನು ಮಾಡಲಿ?” ಅವನ ಹೇಳಿಕೆಯಲ್ಲಿ ಚಿಂತೆ, ಆತಂಕ, ಭವಿಷ್ಯದ ಬಗೆಗೆ ಅನಿಶ್ಚಿತತೆ ಎಲ್ಲವೂ ಎದ್ದುಕಾಣುತ್ತಿದ್ದುವು.
ಸಂದೇಶ ನಿಜವಾಗಲೂ ವಾಸ್ತವವನ್ನು ಎದುರಿಸುವಲ್ಲಿ ಪ್ರಾಮಾಣಿಕನಾಗಿದ್ದಾನೆ ಎಂದೆನಿಸಿತು. ದಾಂಪತ್ಯದಲ್ಲಿ ಕೆಲವು ವರ್ತನೆಗಳಿಗೆ ಬೇಡವೆಂದರೂ ಒಗ್ಗಿಹೋಗಿರುತ್ತೇವೆ. ಅವುಗಳನ್ನು ತಿದ್ದಿಕೊಳ್ಳದೆ ತಳಕ್ಕೆ ತಳ್ಳಿರುತ್ತೇವೆ. ಸಮಸ್ಥಿತಿಯು ಕದಡಿದಾಗ ರಾಡಿ ಮೇಲೆದ್ದು ಮನಸ್ಸು ಅಸ್ವಸ್ಥಗೊಳ್ಳುತ್ತದೆ. ಮುಂದಿನ ಪರಿಣಾಮ ಹೀಗೆಯೇ ಎಂದು ಖಾತರಿ ಇಲ್ಲದಿರುವಾಗ ಸಮಸ್ಥಿತಿಯನ್ನು ಕದಡಲು ಮನಸ್ಸು ಬರುವುದಿಲ್ಲ. ವಿಪರ್ಯಾಸವೆಂದರೆ, ಈಗಿರುವ ಸುಭದ್ರ ಎಂದೆನಿಸುವ ಸ್ಥಿತಿಯನ್ನು ದಾಟಿ ಅನಿಶ್ಚಿತತೆಗೆ ಕಾಲಿಟ್ಟ ನಂತರವೇ ಅದರಾಚೆ ಇರುವುದನ್ನು ಕಾಣಲು ಸಾಧ್ಯವಿದೆ. ಇದನ್ನು ಹೇಗೆ ತಿಳಿಸಿಕೊಡುವುದು ಎಂದು ಯೋಚಿಸಿದೆ.
“ಸಂದೇಶ್, ನಿಮಗೆ ಚೌಕಾಬಾರ ಅಥವಾ ಪಗಡೆ ಆಟ ಗೊತ್ತೆ?” ಅವನು ಹೌದೆಂದ. “ಎದುರಾಳಿಯಿಂದ ನಿಮ್ಮ ಕಾಯಿಗಳನ್ನು ರಕ್ಷಿಸಿಕೊಳ್ಳಬೇಕಾದರೆ ಕಟ್ಟೆಯನ್ನು ಹಿಡಿದು ಕುಳಿತುಕೊಳ್ಳುತ್ತೀರಷ್ಟೆ? ಆದರೆ ಭದ್ರತೆಯನ್ನು ನಂಬಿ ಕಟ್ಟೆಮನೆಯಲ್ಲೇ ಕುಳಿತರೆ ಮುಂದುವರಿಯುವುದು ಸಾಧ್ಯವಿಲ್ಲ. ಕಾಯಿಗಳು ಹಣ್ಣಾಗಬೇಕಾದರೆ ಕಟ್ಟೆಯನ್ನು ಬಿಡಲೇಬೇಕು. ಕಟ್ಟೆಯನ್ನು ಬಿಟ್ಟರೆ ಕಾಯಿಗಳು ಏಟುತಿಂದು ಮನೆಗೆ ಮರಳುವ ಅಪಾಯ ಇದ್ದೇ ಇದೆ. ಇದರರ್ಥ ಏನು? ಬೆಳೆಯಬೇಕಾದರೆ ಸ್ಥಿರವಾದ ಭದ್ರತೆಯನ್ನು ಬಿಟ್ಟುಕೊಟ್ಟು ಅಸ್ಥಿರತೆ, ಅಭದ್ರತೆ, ಅನಿಶ್ಚಿತತೆ, ಅನನುಕೂಲತೆ, ಅಪಾಯ ಇತ್ಯಾದಿ ಎದುರಿಸಲೇಬೇಕು. ಇಲ್ಲವಾದರೆ ಕಳಪೆ ಸಂಬಂಧದಲ್ಲೇ ನರಳಬೇಕು. ಏನಂತೀರಿ?” ಅವನಿಗೆ ಅರ್ಥವಾಯಿತು.
ಕೊನೆಗೆ ಅವನೊಂದು ಪ್ರಶ್ನೆ ಕೇಳಿದ: “ಆಯಿತು, ಹೆಂಡತಿಯ ಮುಂದೆ ಹೇಳಿಕೊಳ್ಳಬೇಕು. ಅದಕ್ಕೆ ಧೈರ್ಯವಿಲ್ಲವಲ್ಲ? ಅದನ್ನು ಎಲ್ಲಿಂದ ತರುವುದು?”
ಹೌದು, ಧೈರ್ಯ ಎಲ್ಲಿಂದ ಬರುತ್ತದೆ? ಇದಕ್ಕೆ ಉತ್ತರವನ್ನು ಮುಂದಿನ ಸಲ ಕಂಡುಕೊಳ್ಳೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888