ಸುಖೀ ದಾಂಪತ್ಯ ೧೯೦
ಸುಮ್ಮನಿರುವುದಕ್ಕಿಂತ ಜಗಳವಾಡುತ್ತಿದ್ದರೆ ಬಾಂಧವ್ಯವು ಬೆಳೆಯುವ, ಗಟ್ಟಿಯಾಗುವ ಅವಕಾಶ ಹೆಚ್ಚಿಗಿದೆ.
190: ದಾಂಪತ್ಯದಲ್ಲಿ “ಸೇತುಬಂಧನ”
ನೀನಾಸಂ ಶಿಬಿರದ ಮೊದಲ ದಿನ ನಡೆದ “ಸೇತುಬಂಧನ” ಪ್ರದರ್ಶನಕ್ಕಿತ್ತು. ಕೆ. ವಿ. ಅಕ್ಷರ ಅವರ ಗಹನಗಂಭೀರ ಹಾಗೂ ಅರ್ಥಪೂರ್ಣವಾದ ಈ ನಾಟಕದಲ್ಲಿ ಆಪ್ತವೆನೆಸಿದ್ದು ಕಿಟ್ಟು ಹಾಗೂ ಭಾಮೆಯನ್ನು ಒಳಗೊಂಡು ನಡೆದ “ನಾಟಕದೊಳಗಿನ ನಾಟಕ”ದ ದೃಶ್ಯ. ಕಿಟ್ಟು ಭಾಮೆಯ ಸೋದರತ್ತೆಯ ಮಗ. ಭಾಮೆಯ ಅಪ್ಪ ಭಾರತ ಯಾತ್ರೆಗೆಂದು ಹೋದ ದೀರ್ಘಾವಧಿಯಲ್ಲಿ ಇಬ್ಬರೇ ಮನೆಯಲ್ಲಿ ಇರುತ್ತಾರೆ. ಒಮ್ಮೆ ಕಿಟ್ಟು ಕುಡಿದು ಮನೆಗೆ ಬಂದಾಗ ಭಾಮೆ ಮನೆಯೊಳಗೆ ಕರೆದುಕೊಳ್ಳಲು ಇಷ್ಟಪಡುವುದಿಲ್ಲ. ಅದನ್ನರಿತು ಅವನು ಮರುಮಾತಾಡದೆ ಬೇರೆ ಮನೆಯಲ್ಲಿ ಮಲಗುತ್ತ ಕುಡಿದು ಹಾಡುತ್ತ ಇರುತ್ತಾನೆ. ಸ್ವಲ್ಪಕಾಲದ ನಂತರ ಮರಳಿದ ಅಪ್ಪ ನಾಟಕ ಆಡಲು ಕೇಳಿದಾಗ ಅವರು (ತಮಗೆ ಅರಿವಿಲ್ಲದಂತೆ) ಕುಡಿತದ ಸಂದರ್ಭವನ್ನು ಆರಿಸಿಕೊಳ್ಳುತ್ತಾರೆ. ಆದರೆ ಅಭಿನಯದಲ್ಲಿ ಪ್ರಕಟವಾಗಿದ್ದೇ ಬೇರೆ: ಕಿಟ್ಟು ಕುಡಿದು ಬರುವಾಗ ಭಾಮೆ ಅವನನ್ನು ಮನೆಯೊಳಗೆ ಬಿಟ್ಟುಕೊಡುವುದಿಲ್ಲ. ಅವಳನ್ನು ಲೆಕ್ಕಿಸದೆ ಮನೆಯೊಳಗೆ ನುಗ್ಗುವ ಪಾರಮ್ಯ ತೋರಿದರೆ ಹಣಾಹಣಿ ಎದುರಿಸುತ್ತಾಳೆ. ಕೊನೆಗೆ ಒಬ್ಬರ ಮೈಮೇಲೆ ಇನ್ನೊಬ್ಬರು ಏರಿಹೋಗಿ ಮಣಿಸುವ ತನಕ ಮುಂದುವರಿದು, ಕಡೆಗೆ ಇಬ್ಬರೂ ಕಲ್ಲಿನಂತೆ ನಿಂತುಬಿಡುತ್ತಾರೆ. ತಮ್ಮ ವರ್ತನೆಯ ಬಗೆಗೆ ಇಬ್ಬರಿಗೂ ದಿಗ್ಭ್ರಮೆ ಆಗುತ್ತದೆ. ಯಾಕೆ? ನಾಟಕದೊಳಗಿನ ನಾಟಕದಲ್ಲಿ ನಿಜವಾಗಿಯೂ ಏನು ನಡೆಯಿತು ಎಂದು ತೋರಿಸುವುದರ ಬದಲು ಏನು ನಡೆಯಬೇಕಿತ್ತು ಎಂದು ತೋರಿಸುತ್ತಾರೆ. ಘಟನೆಯನ್ನು ಪುನರಾವರ್ತಿಸುವುದರ ಬದಲು ತಮ್ಮ ಕಲ್ಪನೆಗಳನ್ನೇ ಘಟನೆಯೋ ಎಂಬಂತೆ ಹೊರಹಾಕುತ್ತಾರೆ!
ಆಗ ನನಗನಿಸಿದ್ದು: ಸುಮಾರು ದಾಂಪತ್ಯಗಳಲ್ಲಿ ಹೀಗೆಯೇ ನಡೆಯುತ್ತದೆ! ಹೇಗೆಂದು ವಿವರಿಸುತ್ತೇನೆ. ಅದಕ್ಕಾಗಿ ನಿಮ್ಮ ದಾಂಪತ್ಯವನ್ನೇ ತೆಗೆದುಕೊಳ್ಳಿ.
ಯಾವುದೋ ಕಾರಣಕ್ಕಾಗಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಹುಟ್ಟುತ್ತದೆ ಎಂದುಕೊಳ್ಳಿ. ಆಗ ಸಂಗಾತಿಯ ಬಗೆಗೆ ಕೋಪ, ಅಸಹನೆ ಮುಂತಾದ ನೇತ್ಯಾತ್ಮಕ ಭಾವಗಳು ಹುಟ್ಟುವುದು ಸಹಜ. ಆಗ ಹೆಚ್ಚಿನಂಶ ಏನು ಮಾಡುತ್ತೀರಿ? ಮನದಲ್ಲಿರುವುದನ್ನು ತಿಳಿಯಪಡಿಸಿದರೆ ವಿರಸ ಭುಗಿಲೆನ್ನುತ್ತದೆ, ಹಾಗಾಗಿ ಸುಮ್ಮನೆ ಇರುವುದೇ ಸೂಕ್ತ ಎಂದುಕೊಳ್ಳುತ್ತೀರಿ. ಹಾಗೆಂದು ಮೌನಧಾರಣೆಯಿಂದ (ನೆರೆಹೊರೆಯವರ ಹೊರತು!) ಯಾರಿಗೂ ಶಾಂತಿ ಉಂಟಾಗಲಾರದು. ನೀವು ನುಂಗಿಕೊಂಡಿದ್ದು ನಿಮ್ಮೊಳಗೇ ಉಳಿದು ತಳಮಳ ತರುತ್ತ ಕಲ್ಪನಾ ವಿಲಾಸವನ್ನು ಪ್ರಚೋದಿಸುತ್ತದೆ. ಮನದಲ್ಲೇ ದ್ವಿಪಾತ್ರಾಭಿನಯದ ನಾಟಕ ಶುರುವಾಗುತ್ತದೆ. ತಲೆಗೆ ಬಂದದ್ದನ್ನು ಒದರುತ್ತ, ಎಗ್ಗಿಲ್ಲದೆ ಸಂಗಾತಿಯನ್ನು ಹಿಗ್ಗಾಮುಗ್ಗಿ ಬಯ್ಯುತ್ತ ಮನದೊಳಗಿದ್ದುದನ್ನು ಮನದೊಳಗೇ ವಾಂತಿಮಾಡಿಕೊಳುತ್ತ ಮುಗಿಸಿ ಮನದ ಹೊಟ್ಟೆಯನ್ನು ಖಾಲಿ ಮಾಡಿಕೊಳ್ಳುತ್ತೀರಿ. ಇದಾದ ನಂತರ ಇನ್ನೂ ಹೆಚ್ಚಿಗೆ ಮಾಡುವುದು ಅಗತ್ಯವಿಲ್ಲ ಎಂದು ಸಂವಹನ ನಿಲ್ಲಿಸಿಬಿಡುತ್ತೀರಿ. ಸಂವಹನ ನಿಲ್ಲಿಸಿದರೆ ಸೌಹಾರ್ದತೆ ಹೇಗೆ ಬಂದೀತು?
ಇನ್ನು, ಸಂಗಾತಿಯ ಮೇಲಾಗುವ ಪರಿಣಾಮವನ್ನು ನೋಡೋಣ. ನಿಮ್ಮ ಮನದಲ್ಲಿದ್ದುದು ಮೌನದ ರೂಪದಲ್ಲಿ ಹೊರಗೆ ಕಾಣುವಾಗ ಸಂಗಾತಿಯ ಊಹಾಪೋಹೆಗೆ ಎಡೆ ಮಾಡಿಕೊಡುತ್ತದೆ. ಅವರೂ ತಮ್ಮ ಮನೋಭಾವಕ್ಕೆ ತಕ್ಕಂತೆ ನಿಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ. “ನನಗೆ ಪೂರಕವಾದುದು ಇದ್ದರೆ ಮಾತಿನಲ್ಲಿ ಹೊರಬರುತ್ತಿತ್ತು. ಮಾತಿಲ್ಲವಾದರೆ ಪೂರಕವಾದುದು ಏನೂ ಇಲ್ಲ!” ಎಂದುಕೊಳ್ಳುತ್ತಾರೆ. ಅದಕ್ಕೇ, “ಸುಮ್ಮನೆ ಯಾಕಿದ್ದೀಯಾ ಮಾತಾಡು!” ಎಂದು ನಿಮ್ಮ ಮೌನದ ಜೊತೆಗೇ ಕಾದುತ್ತಾರೆ! ಅದಕ್ಕೂ ಉತ್ತರ ಸಿಗದಿರುವಾಗ ಅವರೂ ಮೌನವಾಗಿ ತಮ್ಮ ಮನದೊಳಗೆ ದ್ವಿಪಾತ್ರಾಭಿನಯ ಶುರುಮಾಡುತ್ತಾರೆ. ತಮ್ಮಲ್ಲೇ ಶಾಂತಿ ಕಂಡುಕೊಳ್ಳುತ್ತಾರೆ. ಆಡುಭಾಷೆಯಲ್ಲಿ ಇದಕ್ಕೆ ಹೊಂದಾಣಿಕೆ ಎಂದು ಹೇಳುತ್ತೇವೆ. ಕಿಟ್ಟಿ ಹಾಗೂ ಭಾಮೆ ದೂರವಾದಂತೆ ದೂರವಾಗಿ, ಹೊಂದಾಣಿಕೆಯ ಸಂಬಂಧವನ್ನು ಮಾತ್ರ ಉಳಿಸಿಕೊಳ್ಳುತ್ತೇವೆ. ಹೀಗಾದರೆ ದಾಂಪತ್ಯದಲ್ಲಿ ಸೌಹಾರ್ದತೆ ಹೇಗೆ ಬಂದೀತು?
ನಾವು ನಡೆಸುವ ಸಂವಹನದಲ್ಲೂ ದೋಷವಿದೆ: ಹೆಚ್ಚಿನವರು ಸಂಗಾತಿ ಹೇಳುವುದನ್ನು ಕೇಳಿಸಿಕೊಳ್ಳುವ ಉದ್ದೇಶವು ಅವರನ್ನು ಅರ್ಥಮಾಡಿಕೊಳ್ಳಲಿಕ್ಕಲ್ಲ, ಬದಲಾಗಿ ಅವರಿಗೆ ಸರಿಯಾಗಿ ಉತ್ತರಿಸಲು ತಯಾರಿ ಮಾಡಲಿಕ್ಕೆ – ಒಬ್ಬ ವಕೀಲರು ಇನ್ನೊಬ್ಬ ವಕೀಲರ ವಾದವನ್ನು ಕೇಳಿಸಿಕೊಂಡಂತೆ. ಅಷ್ಟೇ ಅಲ್ಲ, ಮೌನಧಾರಣೆ ಮಾಡಿದ ಮೇಲೂ ಮಾತಾಡಬೇಕಾದರೆ ಸಮಸ್ಯೆ ಬಗೆಹರಿದಿಲ್ಲವೆಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತ ಇರುತ್ತೇವೆ. (“ಪುಟ್ಟನ ಸಾಕ್ಸ್ ಎಲ್ಲಿ?” “ಅದನ್ನ ನಾನೇನೂ ಹಾಕಿಕೊಂಡಿಲ್ಲ!”)
ಮನಸ್ತಾಪದ ಒಂದು ಘಟನೆಯನ್ನು ಮನಸ್ಸಿನಲ್ಲಿಟುಕೊಂಡು ನಂತರ ಪುನಃ ನೆನಪು ಮಾಡಿಕೊಳ್ಳುವುದರಲ್ಲೂ ಒಂದು ತೊಂದರೆಯಿದೆ. ಹಳೆಯದನ್ನು ನೆನಪಿಸಿಕೊಳ್ಳುವಾಗ ನೆನಪಿಗೆ ಬರುವುದು ಮೂಲ ಘಟನೆಯಲ್ಲ; ಘಟನೆಯ ಬಗೆಗೆ ನಾವು ಹೋದಸಲ ಮಾಡಿಕೊಂಡಿರುವ ನೆನಪು ಮಾತ್ರ. ನೆನಪಿನ ನೆನಪನ್ನು ಸ್ಮರಣೆ ಎಂದು ಕರೆದುಕೊಳ್ಳುತ್ತೇವೆ. ಆದರೆ ಪುನಸ್ಮರಣೆಯು ಮೂಲರೂಪದ ಪಡಿಯಚ್ಚಲ್ಲ! ಹಾಗಾಗಿ ಘಟನೆಯನ್ನು ಮತ್ತೆಮತ್ತೆ ಅಥವಾ ಸುಮಾರು ಕಾಲ ಬಿಟ್ಟು ವಿವರಿಸುತ್ತಿದ್ದರೆ ನಮ್ಮ ಕಲ್ಪನೆಗಳು ಸೇರಿಕೊಳ್ಳುತ್ತ ಮೂಲರೂಪವು ಬದಲಾಗುತ್ತ ಹೋಗುತ್ತದೆ. ಹಾಗಾಗಿಯೇ ಮರೆತುಹೋದ ಜಗಳವನ್ನು ಒಬ್ಬರು ನೆನಪಿಗೆ ತಂದಾಗ ಇನ್ನೊಬ್ಬರಿಗೆ ದಿಗ್ಭಾಂತಿ ಆಗುವುದು.
ಜಾನ್ ಗಾಟ್‌ಮನ್ ಪ್ರಕಾರ ಜಗಳವೇ ಒಂದು ರೀತಿಯ ಸಂವಹನ – ಏರುದನಿಯಲ್ಲಿ ಮುಕ್ತವಾಗಿ ನಡೆಯುತ್ತಿದೆಯಷ್ಟೆ. ಏರುದನಿ ಯಾಕೆ? ಮೆತ್ತಗಿನ ಸ್ವರದಲ್ಲಿ ಹೇಳಿದರೆ ಕೇಳುವವರ ತಲೆಗೆ ಹೋಗುವುದಿಲ್ಲವಲ್ಲ? ಜಗಳವೆಂಬ ಸಂವಹನಕ್ಕೆ ಸಂಬಂಧವಿಲ್ಲದಂತೆ ಸ್ಪಂದಿಸಿದರೆ ಆಗುವ ಅನಾಹುತವು ಪೂರ್ಣಪ್ರಮಾಣದ ಜಗಳದಿಂದ ಆಗುವ ಅನಾಹುತಕ್ಕಿಂತ ಹೆಚ್ಚಾಗಿರುತ್ತದೆ – ಯಾಕೆಂದರೆ ಅದರಲ್ಲಿ ಅವರವರ ಕಲ್ಪನೆಗಳೂ ಸೇರಿಕೊಂಡಿರುತ್ತವೆ. ಕನಿಷ್ಟಪಕ್ಷ ಸುಮ್ಮನಿರುವುದೂ ಕೂಡ ಬಾಂಧವ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸುವುದಕ್ಕೆ ಖಂಡಿತವಾಗಿಯೂ ಅಡ್ಡಿಯಾಗುತ್ತದೆ.
ಹಾಗಾಗಿ ನಾಟಕ ನೋಡಿದ ನಂತರ ದಾಂಪತ್ಯ ಚಿಕಿತ್ಸಕನಾದ ನನಗೆ ಹೊಳೆದದ್ದಿಷ್ಟು: ಬದ್ಧಸಂಬಂಧವಲ್ಲದ ಆಟೋ ಚಾಲಕ, ತರಕಾರಿ ಮಾರುವವ, ಅಥವಾ ರಸ್ತೆಯ ಸಹಸಂಚಾರಿಗಳ ಜೊತೆಗೆ ಜಗಳ ಕಾಯುವುದನ್ನು ಬಿಟ್ಟು ಬದ್ಧಸಂಬಂಧದಲ್ಲಿ ಜಗಳವಾಡಿ. ಜಗಳದ ಪ್ರಸಂಗವನ್ನು ನೆನೆಗುದಿಗೆ ಬಿಡದೆ ಆದಷ್ಟು ಬೇಗನೇ ಕೈಗೆ ತೆಗೆದುಕೊಳ್ಳಿ. ಮನದಲ್ಲಿದ್ದುದನ್ನು ಇದ್ದಂತೆಯೇ ಹೊರಹಾಕಿ. ಆದರೆ ಇದರಲ್ಲೂ ನಿಯಮಪಾಲನೆ ಅಗತ್ಯ: ಹೇಳಲು ಬಯಸುವುದನ್ನು ಸೌಮ್ಯವಾಗಿ ಶುರುಮಾಡಿ. ಸಂಗಾತಿಯನ್ನು ದೂಷಿಸುವುದು, ಹೆಸರಿಡುವುದು, ಉಗ್ರವಾದಿಯಾಗುವುದು, ನಿರಾಕರಿಸುವುದು ಇತ್ಯಾದಿ ಬೇಡ. ಬದಲಾಗಿ, ಇದು ನಾನು, ನನ್ನದು, ನನಗಿದು ಬೇಕು/ಬೇಡ ಎಂದು ಹೇಳಿಕೊಳ್ಳಿ. ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಮ್ಮಾಸೆಯನ್ನು ವ್ಯಕ್ತಪಡಿಸಿ. “ನೀನು ಹೀಗೆ ನೇತ್ಯಾತ್ಮಕ ಆಗಿದ್ದರೆ ಕಷ್ಟ” ಎನ್ನಬೇಡಿ; “ನೀನು ಹೀಗಿದ್ದರೆ ನಾವು ಚೆನ್ನಾಗಿರಬಹುದು” ಎನ್ನಿ. ಸಂಗಾತಿ ಹೇಳುವುದನ್ನು ಉತ್ತಕ ಕೊಡಲಿಕ್ಕಾಗಿ ಕೇಳಿಸಿಕೊಳ್ಳದೆ ಅರ್ಥಮಾಡಿಕೊಳ್ಳಲು ಕೇಳಿಸಿಕೊಳ್ಳಿ. ಆಗ ಮನಸ್ಸಿನಲ್ಲಿ ಕಲ್ಪನೆಗಳಿಗೆ ಅವಕಾಶವಾಗದೆ, ಪರಸ್ಪರ ಮುಖಾಮುಖಿಯಾಗಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತವದ ತಳಹದಿಯ ಮೇಲೆ ಭಾವನಾತ್ಮಕ ಸೇತುಬಂಧನಕ್ಕೆ ಅವಕಾಶ ಆಗುತ್ತದೆ. ಅದರ ಬದಲು, ಕಿಟ್ಟು ಭಾಮೆ ಮಾಡಿದಂತೆ ಮನಸ್ಸಿನಲ್ಲಿ ಇಟ್ಟುಕೊಂಡು ಒಂದುದಿನ ನಾಟಕದ ರೂಪದಲ್ಲಿ ಹೊರತೆಗೆಯಬೇಕೆಂದರೂ ಸ್ಫೋಟವಾಗಿ ಇಬ್ಬರನ್ನೂ ಗಾಸಿಮಾಡುತ್ತದೆ.
ಕೊನೆಯದಾಗಿ, ಅಕ್ಷರ ಅವರ ಮಾತು, “ಭವ ಹಾಗೂ ಅನುಭವಗಳ ನಡುವಿನ ಸೇತುವೆಯೇ ನಾಟಕ” ಎನ್ನುವುದು ಎಷ್ಟೊಂದು ನಿಜ ಎನ್ನುವುದು ದಿನಕಳೆದಂತೆ ಹೆಚ್ಚುಹೆಚ್ಚು ಖಚಿತವಾಗಿ ಹೋಗುತ್ತಿದೆ.
ಉಚಿತ ಸಹಾಯಣಿಗೆ ಕರೆಮಾಡಿ: 8494944888.