ಸುಖೀ ದಾಂಪತ್ಯ ೨೦೪
ಸಾಮಾಜಿಕ ನಂಬಿಕೆಗಳಿಂದ ಪ್ರಭಾವಿತವಾದ ಲಿಂಗತ್ವವನ್ನು ಮರೆತಾಗ ಮಾತ್ರ ಲಿಂಗೀಯತೆಯ ಸಮನ್ವಯತೆ ಹುಟ್ಟುತ್ತದೆ.
204: ಲಿಂಗೈಕ್ಯತೆಯ “ಅಕ್ಷಯಾಂಬರ”
ಪುರುಷ ಪ್ರಾಧಾನ್ಯತೆಯ ಬಗೆಗೆ ಬರೆಯುತ್ತ ಗಂಡುಹೆಣ್ಣುಗಳನ್ನು ವಿಭಾಗಿಸುವ ಗೆರೆಯು ಮಸುಕಾಗಿ ಹೋದಷ್ಟೂ, ಪುರುಷರು ತಾವು ಪುರುಷರೆಂದು ಮರೆತಷ್ಟೂ ಸ್ತ್ರೀಪುರುಷರ ಸಂಬಂಧವು ಅಪ್ಯಾಯಮಾನ ಆಗುತ್ತದೆ ಎಂದು ಹೇಳುತ್ತಿದ್ದೆ. ಆದರೆ ಗಂಡು ತನ್ನ ಗಂಡುತನವನ್ನು ಬಿಟ್ಟುಕೊಡುವ ಪ್ರಕ್ರಿಯೆಯೇ ಅತ್ಯಂತ ಸಂಕೀರ್ಣ. ತನ್ನ ಅಸ್ಮಿತೆಯನ್ನು (identity) ಕಳೆದುಕೊಳ್ಳುವಂತೆ ಅನ್ನಿಸುವ ಈ ಪ್ರಕ್ರಿಯೆಯು ಗಂಡಿಗೆ ಏನು ಅನುಭವ ಕೊಡುತ್ತದೆ ಎಂಬುದು ಮೊನ್ನೆ ನೋಡಿದ ನಾಟಕವೊಂದರ ಮೂಲಕ ಸಾಕ್ಷಾತ್ಕಾರವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಎರಡೇ ಪಾತ್ರಗಳಿರುವ “ಅಕ್ಷಯಾಂಬರ” ಎಂಬ ಈ ಸತ್ವಭರಿತ ನಾಟಕವನ್ನು ಬರೆದು ನಿರ್ದೇಶಿಸಿದ ಶರಣ್ಯಾ ರಾಮ್‌ಪ್ರಕಾಶ್ ಅವರೇ ಕೌರವನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನೊಂದು ಪಾತ್ರ ದ್ರೌಪದಿಯದು – ಅದರ ನಿರ್ವಹಣೆ ಪ್ರಸಾದ್ ಚೇರ್ಕಾಡಿ ಅವರದ್ದು. ಗಂಡು ಒಡೆತನ ನಡೆಸುವ (ಯಕ್ಷಗಾನದ) ಕ್ಷೇತ್ರದಲ್ಲಿ ಹೆಣ್ಣು ಕೈಹಾಕಿದಾಗ ಇಬ್ಬರ ನಡುವೆ ನಡೆಯುವ ಸಂಘರ್ಷಗಳ ಹಂದರವಿಲ್ಲಿದೆ. ಸಂಘರ್ಷವನ್ನು ಎತ್ತಿತೋರಿಸಲು ಸ್ತ್ರೀಯು ಪುರುಷನ ಪಾತ್ರವನ್ನೂ, ಪುರುಷನು ಸ್ತ್ರೀಯ ಪಾತ್ರವನ್ನೂ ಮಾಡಿದ್ದಾರೆ.
ಹೊಟ್ಟೆಪಾಡಿಗಾಗಿ ಗಂಡೊಬ್ಬ ಯಕ್ಷಗಾನದಲ್ಲಿ ದ್ರೌಪದಿಯ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾನೆ. ಹವ್ಯಾಸಿ ಕಲಾವಿದೆಯೊಬ್ಬಳು ಕೌರವನ ಪಾತ್ರ ಮಾಡಲು ಬರುತ್ತಾಳೆ. ಗಂಡಿಗೆ ಮೀಸಲಾದ ಕೇತ್ರದಲ್ಲಿ ಹೆಣ್ಣು ಕಾಲಿಡುವ ಕಲ್ಪನೆಯೇ ಅವನಿಗೆ ಹಿಡಿಸುವುದಿಲ್ಲ. ಶಿಷ್ಯತ್ವಕ್ಕಾಗಿ ಅಂಗಲಾಚುವವಳನ್ನು ತಿರಸ್ಕರಿಸುತ್ತ, ಹೀಗಳೆಯುತ್ತ, ಹೆಚ್ಚುಕಡಿಮೆ ಕತ್ತು ಹಿಡಿದೇ ಹೊರಗೆ ದಬ್ಬುತ್ತಾನೆ. ಅಷ್ಟಾದರೂ ಆಕೆಯ (ಕೌರವನ) ಪಾತ್ರಾಭಿನಯ ಯಶಸ್ವಿಯಾದಾಗ ಮತ್ಸರದಿಂದ ಗೇಲಿಮಾಡುತ್ತಾನೆ. ಕ್ರಮೇಣ ಆಕೆ ಪಳಗುತ್ತ ಮೆರೆಯುತ್ತ ಪ್ರಬಲಳಾದಂತೆ ಅವನ ಗಂಡುಭಾವನೆಗಳಿಗೆ ಗಂಡಾಗಿ ಪ್ರತಿಭಟಿಸುತ್ತಾಳೆ. ಅವನ ಗಂಡುತನಕ್ಕೆ ಪೆಟ್ಟುಕೊಡಲು ಶುರುಮಾಡುತ್ತಾಳೆ. ಆಗ ಅವನು (ಮುಂಚೆ ಆಕೆಯನ್ನು ನಾನಾರೀತಿಗಳಲ್ಲಿ ತಿರಸ್ಕರಿಸಿದ್ದನ್ನು ಮರೆತು) ನಾನೇನು ಅನ್ಯಾಯ ಮಾಡಿದ್ದೇನೆ ಎಂದು ಕೇಳುತ್ತಾನೆ (ಅವನ ದೃಷ್ಟಿಯಲ್ಲಿ ಹೆಣ್ಣಿನ ಮೇಲೆ ಕೈಯೆತ್ತುವುದು ಮಾತ್ರ ಪುರುಷನಿಗೆ ನಿಷೇಧ!) ಹೆಣ್ಣಾಗಿ ನೀನು ಹೀಗೆ ಮಾಡಬಹುದೆ ಎಂದು ಪ್ರಶ್ನಿಸುತ್ತಾನೆ. ಆಗವಳು “ಹೆಣ್ಣು ನಾನೋ ನೀನೋ?!” ಎಂದು ವೀರಗಚ್ಚೆ ಹಾಕಿಕೊಂಡು ಕಿರೀಟ ಧರಿಸುತ್ತ ಅಬ್ಬರಿಸುವಾಗ, ಸೀರೆ ಉಟ್ಟುಕೊಳ್ಳುತ್ತಿರುವವನಿಗೆ ಉತ್ತರ ಕೊಡಲಿಕ್ಕಾಗದೆ ಕುಪ್ಪಸದೊಳಗಿನ ಅವನ ಗಂಡೆದೆ ನಡುಗುತ್ತದೆ. ರಂಗಭೂಮಿಯ ಮೇಲಿಗಿಂತ ನೇಪಥ್ಯದಲ್ಲೇ ಹೆಚ್ಚಿನ ಸಂವಾದ ನಡೆಯುವುದು ಈ ನಾಟಕದ ವೈಶಿಷ್ಟ್ಯ. ಮುಂದೆ ದ್ರೌಪದಿಯ ವಸ್ತ್ರಾಹರಣದ ದೃಶ್ಯವಂತೂ ಕಳಸಪ್ರಾಯ ಆಗಿದೆ. ಅಷ್ಟೊತ್ತಿಗೆ ಒಬ್ಬರನ್ನೊಬ್ಬರು ಸಾಕಷ್ಟು ಗಾಸಿ ಮಾಡಿರುತ್ತಾರೆ. ಕೌರವನು ಕ್ರೌರ್ಯದರ್ಪಗಳಿಂದ ಸೀರೆ ಸೆಳೆಯಲು ಉದ್ಯುಕ್ತನಾದಾಗ ದ್ರೌಪದಿಯೊಳಗಿನ ಗಂಡೆದೆಯು ಹೆಣ್ಣಿನ ಬಲಪ್ರಯೋಗಕ್ಕೆ ಮಣಿಯಲೇಬೇಕಾಗುತ್ತದೆ. ಆಗ ಆಶ್ಚರ್ಯ ಘಟಿಸುತ್ತದೆ. ಗಂಡು ಮರ್ಯಾದೆ ಹೋಗುವ ಭಯದಿಂದ ತನ್ನ ಸೆರಗನ್ನು ಎದೆಗಪ್ಪಿ ಹಿಡಿದುಕೊಂಡು ಆರ್ತಭಾವದಿಂದ ಹೆಣ್ಣಿನ ಕಡೆ ನೋಡುತ್ತಾನೆ. ಹೆಣ್ಣು ಸೀರೆ ಎಳೆಯಲೆಂದು ಹೊರಟವಳು, ತಾನು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ಅವಮಾನ ಮಾಡಲಾಗದೆ ನಿಂತುಬಿಡುತ್ತಾಳೆ. ಕೆಲವು ಕ್ಷಣ ಇಬ್ಬರೂ ಪರಸ್ಪರ ನೋಡುತ್ತ ಸ್ತಬ್ಧರಾಗುತ್ತಾರೆ. ನಾಟಕದ ಭಾಗವೆಂದು ನೆನಪಾಗಿ ಆಕೆ ಸೆಳೆಯುವ ಶಾಸ್ತ್ರ ಮುಗಿಸಿ ನಿಲ್ಲದೆ ನಿಷ್ಕ್ರಮಿಸುತ್ತಾಳೆ. ಗಂಡು ಎದೆ ಮುಚ್ಚಿಕೊಂಡು ದಿಗ್ಭ್ರಮೆಯಿಂದ ಅವಳನ್ನೇ ನೋಡುತ್ತ ನಿಲ್ಲುತ್ತಾನೆ!
ಈ ನಾಟಕಕ್ಕೆ ಹಲವಾರು ಹೊಳಹುಗಳಿವೆ. ಇಲ್ಲಿ ಗಹನಗೂಢವಾದ ಮನೋಲಿಂಗೀಯತೆಯ ಉತ್ಖನನ ನಡೆಯುವುದನ್ನು ಸಂದರ್ಭೋಚಿತವಾಗಿ ಬಿಡಿಬಿಡಿಸಿ ತೋರಿಸಲಾಗಿದೆ. ಉದಾಹರಣೆಗೆ, ಗಂಡು ಮಾಡುವ ಹೆಣ್ಣಿನ ಪಾತ್ರವು ತಾನು ಹೆಣ್ಣನ್ನು ಚೆನ್ನಾಗಿ ಅರಿತಿರುವಂತೆ ತೋರಿದರೂ, ಅದರ ಜೊತೆಗಿನ ಅಹಮಿಕೆಯು ಅದರ ಪೊಳ್ಳುತನವನ್ನು ಎತ್ತಿತೋರಿಸುತ್ತದೆ. ಹಾಗೆಯೇ, “ನಾನು ಹೆಣ್ಣಾದಷ್ಟು ನೀನು ಗಂಡಾಗಲು ಸಾಧ್ಯವಿಲ್ಲ, ಹಾಗಾಗಿ ನಾನೇ ಶ್ರೇಷ್ಠ!” ಎನ್ನುತ್ತ ಪುರುಷ ಪ್ರಧಾನತೆಯು ಹೆಜ್ಜೆಹೆಜ್ಜೆಗೂ ಮೆರೆದಿದೆ. ಅದಕ್ಕೆ ವಿರುದ್ಧವಾಗಿ ಹೆಣ್ಣಿನ ಅಸ್ತಿತ್ವದ ಉಳಿವಿನ ಸೆಟಸಾಟ ಕೂಡ ಅಷ್ಟೇ ಪ್ರಖರವಾಗಿದೆ. ಆಕೆಯ ವಿರೋಧವು ತನ್ನೊಳಗಿನ ಹೆಣ್ಣುತನದ ಬಗೆಗೆ ಎಂದೆನಿಸುತ್ತದೆ. ಆಕೆಯು ಮಾಡುವ ಕೌರವನ ಪಾತ್ರಕ್ಕೂ, ತನ್ನೊಳಗಿನ ಹೆಣ್ಣುತನಕ್ಕೂ ಘರ್ಷಣೆ ನಡೆಯುವುದು ಎದ್ದುಕಾಣುತ್ತದೆ. ಆತ ಹೆಣ್ಣುಪಾತ್ರ ಬಯಸುತ್ತಲೇ ಹೆಣ್ಣನ್ನು ತಿರಸ್ಕರಿಸುವುದು, ಆಕೆ ಗಂಡುಪಾತ್ರ ಮಾಡುತ್ತ ಗಂಡನ್ನು ಎದುರಿಸುವುದು, ಇಬ್ಬರೂ ಪರಸ್ಪರರನ್ನು ಗಾಸಿ ಮಾಡುತ್ತ ಸಾಕಷ್ಟು ಕೆಟ್ಟವರಾಗುವುದು – ಇವೆಲ್ಲ ಹೆಣ್ಣುಗಂಡುಗಳ ನಡುವೆ ನಡೆಯುವ ನಿರಂತರ ಸಂಘರ್ಷದ ಸಂಕೇತವಾಗಿವೆ.
ಈ ನಾಟಕವು ದಾಂಪತ್ಯಕ್ಕೆ ಹೇಗೆ ಪ್ರಸ್ತುತವಾಗುತ್ತದೆ? ಒಂದು ದೃಷ್ಟಿಯಲ್ಲಿ ಇಡೀ ನಾಟಕವೇ ಪುರುಷ ಪ್ರಧಾನ ದಾಂಪತ್ಯದ ರೂಪಕ ಎಂದೆನಿಸುತ್ತದೆ. ಇಲ್ಲಿ ಶುರುವಿಗೆ ಪುರುಷನ ಹಿಂಸೆಗೊಳಗಾದ ಹೆಣ್ಣಿನ ಆರ್ತತೆಯಿದೆ. ವಯಸ್ಸಾದಂತೆ ಸ್ತ್ರೀಯ ಹಿಂಸೆಗೊಳಗಾದ ಪುರುಷನ ನರಳುವಿಕೆಯಿದೆ. ಗಂಡಿನ ಹಿಂಸೆಗೆ ಪ್ರತಿಭಟಿಸಿ ಮುಯ್ಯಿಗೆ ಮುಯ್ಯಿ ತೀರಿಸುವಾಗ ಸ್ವಂತ ಮೌಲ್ಯಗಳಿಗೆ ವಿರುದ್ಧವಾಗಿ ಗಂಡಿನಂತೆ ವರ್ತಿಸುತ್ತ ತನ್ನೊಳಗಿನ ಹೆಣ್ಣುತನದ ಮೇಲೆ ತಾನೇ ದಬ್ಬಾಳಿಕೆ ಮಾಡುವಂತಾಗುತ್ತದೆ. (ಉದಾಹರಣೆಗೆ, ತನ್ನನ್ನು ಹೊಡೆಯುತ್ತಿರುವ ಗಂಡನನ್ನು ಹೆಂಡತಿ ತಿರುಗಿ ಹೊಡೆಯಬೇಕಾದರೆ ಅವಳ ಮನಸ್ಥಿತಿ ಹೇಗಿರುತ್ತದೆ?) ಇನ್ನು, ದಾಂಪತ್ಯದ ಶುರುವಿನಲ್ಲಿ ಪುರುಷರಾಗಿ ಪ್ರಾಬಲ್ಯ ಸಾಧಿಸಿದವರು ಮುಂದೊಂದು ಕಾಲಕ್ಕೆ ಅದನ್ನು ಬಿಟ್ಟುಕೊಡಲೇ ಬೇಕಾಗುತ್ತದೆ. ಹಿಂಸೆಯೆಂದರೆ ಕೇವಲ ಶಾರೀರಿಕ ಹಿಂಸೆಯಲ್ಲ, ಸೂಕ್ಷ್ಮ ಭಾವನೆಗಳನ್ನು ಅಲಕ್ಷಿಸುವುದೂ ಹಿಂಸೆಯೆ ಎನ್ನುವ ಅರಿವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಹೆಣ್ಣಿಗಾಗುವ ಭಾವನಾತ್ಮಕ ಹಿಂಸೆಯನ್ನು ಅರ್ಥಮಾಡಿಕೊಳ್ಳಲು ತಾನು ಸ್ವತಃ ಹೆಣ್ಣಾಗಿ ಅವಮಾನಕ್ಕೆ ತೆರೆದುಕೊಳ್ಳಬೇಕಾಗುತ್ತದೆ. ಪರಲಿಂಗೀಯತೆಯ ಜೊತೆಗೆ ಸಂಪರ್ಕ ಸಾಧಿಸಬೇಕಾದರೆ ಸ್ವಲಿಂಗೀಯತೆಯನ್ನು ಕಳೆದುಕೊಳ್ಳಲೇಬೇಕು. ಗಂಡು ಗಂಡಸುತನವನ್ನು ಮರೆಯುವಂತೆ ಆದಾಗಲೆಲ್ಲ ಹೆಣ್ಣಿನ ಹೆಣ್ಣುತನ ನಿಚ್ಚಳಗೊಳ್ಳುತ್ತ ಹೋಗುತ್ತದೆ. ಗಂಡು ತನ್ನ ಗಂಡಸುತನವನ್ನು ಕಳೆದುಕೊಂಡಾಗ ಮಾತ್ರ ಹೆಣ್ಣು ಅವನನ್ನು ಒಪ್ಪಿಕೊಳ್ಳುತ್ತಾಳೆ. ಇದರಿಂದ ತಾನೇನೂ ಹಟ ಸಾಧಿಸಬೇಕಾಗಿಲ್ಲ ಎಂದು ಮನವರಿಕೆಯಾಗಿ, ಗಂಡಿನ ಮನಸ್ಸೂ ಹಗುರವಾಗುತ್ತದೆ. ಹೀಗೆ, ಪರಸ್ಪರರಲ್ಲಿ ಸಮನ್ವಯ ಬರಲು ಇಬ್ಬರೂ ತಮ್ಮ ಸುಳ್ಳು ಅಸ್ಮಿತೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಆಗ ಮಾತ್ರ ಲಿಂಗತಾರತಮ್ಯದ ಗೆರೆ ಮಸುಕಾಗಿ ಲಿಂಗೀಯ ಸಾಮರಸ್ಯ ಹುಟ್ಟಲು ಸಾಧ್ಯವಿದೆ ಎಂಬ ಚಿಂತನತೆಯ ಸಂದೇಶ ಇದರಲ್ಲಿದೆ.
ಇನ್ನು ಲೈಂಗಿಕ ವರ್ತನೆಗೆ ಬಂದರೆ, ಬದ್ಧ ದಾಂಪತ್ಯದಲ್ಲಿ ಕಾಮಕೂಟವೂ ಎಷ್ಟೋ ಸಲ ಸೀರೆ ಸೆಳೆದಂತೆ ಬಲಾತ್ಕಾರ ಆಗುತ್ತದೆ. ಒಬ್ಬರು ಕಾಮಕ್ರಿಯೆಗೆ ಒಪ್ಪದಿರುವಾಗ, ಒತ್ತಾಯಿಸುತ್ತ ಒಡೆತನ ತೋರುವ ಇನ್ನೊಬ್ಬರೂ ತಮ್ಮೊಳಗೆ ಅಸಹಾಯಕತೆಯನ್ನು ಅನುಭವಿಸುತ್ತ ಇರುತ್ತಾರೆ. ಆತ್ಮಗೌರವಕ್ಕೆ ಚ್ಯುತಿ, ಶರಣಾಗತಿ, ಕರ್ತವ್ಯ ಪಾಲನೆ, ಮುಯ್ಯಿಗೆ ಮುಯ್ಯಿ ಮುಂತಾದವುಗಳೆಲ್ಲ ಕಾಮಕೂಟದ ಭಾಗಗಳಾದಾಗ ಸಾಮರಸ್ಯ ಕಿತ್ತುಕೊಂಡು ಹೋಗುತ್ತದೆ.
ದಾಂಪತ್ಯದಲ್ಲಿ ಸಂಗಾತಿಗಳು ಹುಟ್ಟಿನಿಂದ ಬಂದ ಹಾಗೂ ಸಾಮಾಜಿಕ ನಂಬಿಕೆಗಳಿಂದ ಪ್ರಭಾವಿತವಾದ ವೈಯಕ್ತಿಕ ಲಿಂಗೀಯತೆಯನ್ನು ಮರೆಯಬೇಕು. ಗಂಡಿನೊಳಗಿನ ಹೆಣ್ಣನ್ನೂ ಹೆಣ್ಣಿನೊಳಗಿನ ಗಂಡನ್ನೂ ಮುಕ್ತಗೊಳಿಸಬೇಕು. ಆಗ ಮಾತ್ರ ಸೂಕ್ಷ್ಮ ಹಾಗೂ ಕಮನೀಯತೆಯ ಭಾವನೆಗಳಿಂದ ಕೂಡಿದ ಲಿಂಗೀಯತೆಯ ಸಮನ್ವಯದ ಆವಾಹನೆ ಸಾಧ್ಯವಾದೀತು.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.