ಸುಖೀ ದಾಂಪತ್ಯ ೨೩೪
ಸಾಯುವವರಿಗೆ ಆತ್ಮೀಯತೆ ತೋರಿಸುವುದು ಎಂದರೆ ಸಾವಿಗೆ ಆತ್ಮೀಯತೆ ತೋರಿಸಿದಂತೆ. ಅದು ಸ್ವಂತ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ!
234: ಅನ್ಯೋನ್ಯತೆಗೆ ಹುಡುಕಾಟ – 13
ಬಾಲ್ಯದಲ್ಲಿ ಸ್ವಾತಂತ್ರ್ಯ ಮೊಟಕಾಗಿ ಜವಾಬ್ದಾರಿ ಹೆಗಲೇರಿದರೆ ಸೃಜನಶೀಲತೆ ಕಡಿಮೆ ಆಗುವುದೆಂದೂ, ಅದರಿಂದ ಆಘಾತದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಮುಂದೆ ದಾಂಪತ್ಯದ ಅನ್ಯೋನ್ಯತೆಗೆ ಮಾರಕವಾಗುತ್ತದೆ ಎಂದೂ ತಿಳಿದುಕೊಂಡೆವು. ಇನ್ನು ನಾಲ್ಕನೆಯ ಅಡ್ಡಿಯ ಬಗೆಗೆ ನೋಡೋಣ. ಅದಕ್ಕೊಂದು ದೃಷ್ಟಾಂತ:
ನಂದ ಹಾಗೂ ನಂದಿನಿ (ಹೆಸರು ಬದಲಿಸಿದೆ) ಮಧ್ಯವಯಸ್ಸಿನ ದಂಪತಿ. ಇವರಿಗೆ ಎರಡು ಪ್ರತ್ಯೇಕ ಸಮಸ್ಯೆಗಳಿವೆ. ಒಂದು ನಂದನದು. ಅವನಿಗೆ ಕಾಯಿಲೆಯಿಂದ ಜರ್ಜರಿತರಾಗಿ ಈಗಲೋ ಆಗಲೋ ಎನ್ನುವಂತಿರುವ ವೃದ್ಧ ಅಪ್ಪ ಇದ್ದಾರೆ. ನಂದ ಹಜಾರದಲ್ಲಿ ಕೂತಿರುವಾಗ ಕೋಣೆಯ ಬಾಗಿಲಿನಿಂದ ಅಪ್ಪನ ನಿಶ್ಚಲ ಶರೀರವನ್ನು ಕಂಡು ದಿಗಿಲುಪಡುತ್ತಿದ್ದಾನೆ. ಬರಲಿರುವ ಸಾವನ್ನು ಎದುರಿಸಲಾಗದೆ ಭಯಭೀತನಾಗಿದ್ದಾನೆ. ತಲೆಯಲ್ಲಿ ಬಿಟ್ಟೂ ಬಿಡದೆ ವಿಚಾರಗಳ ಸುಳಿ ಸುತ್ತುತ್ತಿದೆ. ಅಪ್ಪ ತೀರಿಹೋದರೆ ಆ ಶರೀರವನ್ನು ಹೇಗೆ ನೋಡುವುದು, ಹೇಗೆ ಮುಟ್ಟುವುದು, ಹೇಗೆ ಮೆಟ್ಟಲಿನಿಂದ ಕೆಳಗೆ ತರುವುದು – ಹೀಗೆ ಕ್ಷಣಗಣನೆ ಮಾಡುತ್ತ ಆಗಾಗ ಎದೆ ಡವಗುಟ್ಟುತ್ತದೆ. ತಲ್ಲಣ ಎದುರಿಸಲು ಆಗದೆ ಕೈಕಾಲು ಕಳೆದುಕೊಳ್ಳುತ್ತಿದ್ದಾನೆ. ಇನ್ನು ನಂದಿನಿಯ ಸಮಸ್ಯೆ: ಗಂಡಹೆಂಡಿರು ಅನ್ಯೋನ್ಯವಾಗಿದ್ದು ಕಾಮಕೂಟ ಸಾಕಷ್ಟು ನಡೆಯುತ್ತಿದ್ದರೂ ಅವಳಿಗೆ ಅನ್ನಿಸುವುದು ಏನೆಂದರೆ ಗಂಡನಿಗೆ ಭಾವನೆಗಳಿಲ್ಲ. ನಂದನಿಗೂ ಹಾಗೆಯೇ ಅನ್ನಿಸುತ್ತದೆ. ತಾನು ಭಾವನೆಗಳಿಲ್ಲದ ವ್ಯಕ್ತಿ; ನಂದಿನಿಯ ಭಾವನಾತ್ಮಕ ಅಗತ್ಯಗಳು ತನಗೆ ಅರ್ಥವಾಗುವುದಿಲ್ಲ. ಹಾಗಾಗಿ ಆಕೆಯ ಅನ್ಯೋನ್ಯತೆಯ ಕರೆಗೆ ಸ್ಪಂದಿಸಲಾಗದೆ ಕರ್ತವ್ಯನಿರತನಾಗಿ ಉಳಿದುಬಿಡುತ್ತಾನೆ – ಕೈಕುಲುಕಲು ಕೈ ಮುಂದೆ ಚಾಚಿದರೆ ನಮಸ್ತೆ ಎಂದು ಕೈಜೋಡಿಸಿದಂತೆ. ಇದರ ಬಗೆಗೆ ನಂದಿನಿಗೆ ಅಸಮಾಧಾನವಿಲ್ಲ, ಆದರೆ ವ್ಯಥೆಯಿದೆ. ಗಂಡ ಭಾವನೆಗಳನ್ನು ಹಂಚಿಕೊಳ್ಳುವ ಹಾಗಾದರೆ ಅದೆಷ್ಟು ಅನ್ಯೋನ್ಯತೆ ಅನುಭವಿಸಬಹುದು ಎಂದು ತಹತಹಿಸುತ್ತಾಳೆ.
ನಂದ ಹಾಗೂ ಅವನ ಅಪ್ಪನ ನಡುವಿನ ಸಂಬಂಧ ಹೇಗಿದೆ? ನಂದ ಅಪ್ಪನ ಹತ್ತಿರ ಹೋಗಲು, ಅವನನ್ನು ಮುಟ್ಟಲು ಹೆದರುತ್ತಾನೆ – ಕಾಯಿಲೆ ಇರುವಾಗ ಮಾತ್ರವಲ್ಲ, ಚಿಕ್ಕಂದಿನಿಂದಲೂ ಅಷ್ಟೆ. ಯಾವೊತ್ತೂ ಅಪ್ಪನೊಡನೆ ಮುಖಾಮುಖಿ ಮಾತಾಡಿಲ್ಲ. ಅವನಿಂದ ಮೈ ತಡವಿಸಿಕೊಂಡಿದ್ದು ಇಲ್ಲವೇ ಇಲ್ಲ. (ಕೆಲವು ಸಲ ಬ್ಯಾಡ್ಮಿಂಟನ್ ಆಡಿದ್ದು ಮಾತ್ರ ನೆನಪಿದೆ.) ಅದು ಹೇಗೆ? ಅಪ್ಪನ ಅಪ್ಪ – ಅಂದರೆ ನಂದನ ಅಜ್ಜ – ಸಾಕಷ್ಟು ಕಾಲ ಬದುಕಿದ್ದರು. ಅವರೆದುರು ಇವನೂ ಇವನಪ್ಪನೂ ಮಕ್ಕಳಂತೆ ವಿಧೇಯರಾಗಿದ್ದರು. ಹಾಗಾಗಿ ಇವರಿಬ್ಬರ ನಡುವೆ ಹಿರಿಯ-ಕಿರಿಯರ ನಡುವೆ ಹುಟ್ಟಬೇಕಾದಂಥ ಮುಕ್ತಪ್ರೀತಿ ಹುಟ್ಟಲು ಅವಕಾಶ ಸಿಗಲೇ ಇಲ್ಲ. ಪರಿಣಾಮವಾಗಿ ನಂದನಿಗೆ ಅಪ್ಪನೆಂದರೆ ಪರಿಚಿತನಾದರೂ ಆತ್ಮೀಯನಲ್ಲದ, ಕರ್ತವ್ಯಪ್ರಜ್ಞೆ ಇದ್ದರೂ ಪ್ರೀತಿಯಿಲ್ಲದ, ಸಂಬಂಧವಿದ್ದರೂ ಬಾಂಧವ್ಯವಿರದ ವಿಲಕ್ಷಣ ನಂಟಿರುವ ವ್ಯಕ್ತಿ. ಆಶ್ಚರ್ಯ ಏನೆಂದರೆ, ನಂದನಿಗೆ ಹದಿವಯಸ್ಸಿನ ಮಗನಿದ್ದಾನೆ. ನಂದ ಅವನನ್ನು ಆಗಾಗ ಸ್ವಯಂಸ್ಫೂರ್ತಿಯಿಂದ ಬಾಚಿ ತಬ್ಬಿಕೊಂಡು ಮುದ್ದಾಡುತ್ತ ಇರುತ್ತಾನೆ. ಇವರಿಬ್ಬರ ನಡುವೆ ವಿನಿಮಯಿಸುವ ಶರೀರಸ್ಪರ್ಶಿತ ಭಾವನೆಗಳು ನಂದ ಹಾಗೂ ಅವನಪ್ಪನ ನಡುವೆ ಯಾವೊತ್ತೂ ವಿನಿಮಯಿಸಿದ್ದಿಲ್ಲ. ಹಾಗಾಗಿ ಅಪ್ಪನಿಗೆ ಮಗುವಾಗಿ ಪ್ರೀತಿಯನ್ನು ಕಾಣದವನು ತನ್ನ ಕರ್ತವ್ಯಗಳನ್ನು ಪೂರೈಸಿದ ನಂತರ ಖಾಲಿತನವನ್ನು ಅನುಭವಿಸುತ್ತಿದ್ದಾನೆ. ಪ್ರೀತಿಯ ಅರಿವಿದ್ದರೂ ತೋರಿಸಿಕೊಳ್ಳದ ಸ್ಥಿತಿಯಲ್ಲಿದ್ದಾನೆ.
ಇನ್ನೊಂದು ವಿಚಿತ್ರ ಏನೆಂದರೆ, ಅಪ್ಪ-ಮಗನ ಸಮಸ್ಯೆಗೂ ಗಂಡ-ಹೆಂಡತಿಯ ಸಮಸ್ಯೆಗೂ ಸಂಬಂಧವಿದ್ದು, ಒಂದಕ್ಕೊಂದು ಹೆಣೆದುಕೊಂಡಿವೆ. ಹೇಗಂತೀರಾ? ನಂದನ ವರ್ತನೆಯು ಪುರುಷ ಪ್ರಧಾನ ಅನಿಸಿಕೆಗಳಿಂದ ಪ್ರಭಾವಿತವಾಗಿದೆ. ಇವನಜ್ಜ ಗಂಡಸಾಗಿದ್ದಕ್ಕೆ ಕುಟುಂಬದ ಪ್ರತಿ ವ್ಯವಹಾರವನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಮೆರೆದ. ಆದರೆ ಪ್ರೀತಿ, ಸ್ನೇಹಪರತೆ ಮುಂತಾದ “ತಾಯ್ತನ”ದ ಕೋಮಲ ಭಾವನೆಗಳಿಗೆ ಜಾಗ ಕೊಡಲಿಲ್ಲ. ತಾನು ಕಲಿತ ಮಾದರಿಯನ್ನು ಅಪ್ಪ ನಂದನಿಗೆ ವರ್ಗಾಯಿಸಿದ್ದಾನೆ. ಹಾಗಾಗಿಯೇ ನಂದ ಕರ್ತವ್ಯ ಪಾರಾಯಣ ಆಗಿದ್ದರೂ ಪ್ರೀತಿಯ ಅನುಭವದಿಂದ ದೂರವಿದ್ದಾನೆ. ಹಾಗಾಗಿ ಸ್ವಂತ ಭಾವನೆಗಳನ್ನು ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವುದಕ್ಕೆ ಅಡ್ಡಿಯಾಗಿ ಅನ್ಯೋನ್ಯತೆ ಹುಟ್ಟುತ್ತಿಲ್ಲ. ಪುರುಷ ಪ್ರಧಾನತೆಯು ಪರಂಪರೆಯ ಭಾಗ ಆಗುವಾಗ ವ್ಯಕ್ತಿ ಪ್ರತ್ಯೇಕತೆ (ಎಲ್ಲರ ನಡುವಿದ್ದು ಹೊಂದಿಕೊಂಡಿದ್ದರೂ ಎಲ್ಲರಿಗಿಂತ ಭಿನ್ನವಾಗಿದ್ದೇನೆ ಎನ್ನುವ ಮನೋಭಾವ) ಕಳೆದು ಹೋಗುತ್ತದೆ. ಆಗ ವ್ಯಕ್ತಿಗಳು ಸ್ವಂತ ಅಸ್ಮಿತೆಯನ್ನು (identity) ಬಿಟ್ಟುಹಾಕಿ ಪರಂಪರೆಯ ಜೊತೆಗೆ ಗುರುತಿಸಿಕೊಳ್ಳುತ್ತಾರೆ. ಹೀಗೆ ನಂದ ಅಪ್ಪನಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳದವನು ಹೆಂಡತಿಯಿಂದಲೂ ಪ್ರತ್ಯೇಕತೆ ಹೊಂದಲಾಗದೆ ಬೆಸೆದುಕೊಂಡು ಇರುತ್ತಾನೆ. ಅದಕ್ಕೇ ಅವರಲ್ಲಿ ಜಗಳಗಳಿಲ್ಲ – ಅಭಿಪ್ರಾಯ ಭೇದವು ಸ್ವಂತಿಕೆಯ ಅಭಿವ್ಯಕ್ತಿಯ ಲಕ್ಷಣ. ಅನ್ಯೋನ್ಯತೆ ಬೆಳೆಸಿಕೊಳ್ಳಲು ಭಿನ್ನಾಭಿಪ್ರಾಯಗಳು ಬಹುಮುಖ್ಯ.
ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣುಗಂಡು ಇಬ್ಬರನ್ನೂ ಘಾತಿಸಿರುವುದರೆ ಬಗೆಗೆ ಈ ಮುಂಚೆ ಬರೆದಿದ್ದೇನೆ (ಕಂತು 192-204: ಪುರುಷರ ನಾಕ-ನರಕ). ಇದು ಅನ್ಯೋನ್ಯತೆಗೆ ಹೇಗೆ ವಿರೋಧ ಎಂದು ಸಾಕಷ್ಟು ವಿವರಿಸಿದ್ದೇನೆ. ಚಿಕ್ಕದಾಗಿ ಹೇಳಬೇಕೆಂದರೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬೆಳೆಯುವವರಿಗೆ ಪ್ರೀತಿಯ ಬದಲು ದೂರೀಕರಣ ಸಿಗುತ್ತದೆ. ಯಾಕೆ? ಪ್ರೀತಿಸುವುದು, ಪರಿತಪಿಸುವುದು, ಅದಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವುದು ದೌರ್ಬಲ್ಯದ ಸಂಕೇತವೆಂದು ಪುರುಷ ಪ್ರಧಾನತೆಯ ನೀತಿಸಂಹಿತೆ ಹೇಳುತ್ತದೆ. ಇಲ್ಲಿ ಪ್ರೀತಿಯನ್ನು ಕರ್ತವ್ಯ ನಿರ್ವಹಣೆಯ ರೂಪದಲ್ಲಿ ತೋರಿಸಲಾಗುತ್ತದೆ. ನಂದನೂ ನಂದಿನಿಗೆ ಅದನ್ನೇ ಮಾಡುತ್ತಿದ್ದಾನೆ. ಆದರೆ ಆಕೆಗೆ ಬೇಕಾಗಿರುವುದು ಪ್ರೀತಿಯ ನೇರವಾದ ಅಭಿವ್ಯಕ್ತಿ. ಅದಿಲ್ಲದೆ ಅವರ ನಡುವೆ ಅನ್ಯೋನ್ಯತೆ ಬೆಳೆಯಲಾರದು.
ನಂದ-ನಂದಿನಿಯರ ನಡುವೆ ಅನ್ಯೋನ್ಯತೆ ತರಲು ಉಪಾಯವೇನು? ಮೊದಲು ನಂದ ಹಾಗೂ ಅಪ್ಪನ ನಡುವೆ ಮನೋಭಾವುಕ ಸಂಪರ್ಕ ನೆಲೆಗೊಳ್ಳಬೇಕು. ಅದಕ್ಕೊಂದು ಚಟುವಟಿಕೆಯನ್ನು ಸೂಚಿಸಿದೆ: ನಂದ ಅಪ್ಪನ ಬದಿಗೆ ಕುಳಿತುಕೊಂಡು ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಸವರಬೇಕು. ಆಗ ನಂದನ ಪುಟ್ಟ ಮಗನೂ ಜೊತೆಗಿದ್ದರೆ ಇನ್ನೂ ಸೂಕ್ತ. ಹೀಗೆ ಪ್ರತಿನಿತ್ಯ ಸಾಕಷ್ಟು ಹೊತ್ತು ಮಾತಿಲ್ಲದೆ ದೇಹಭಾಷೆಯಲ್ಲಿ ಭಾವನೆಗಳ ವಿನಿಮಯ ನಡೆಸಬೇಕು. ಸಾಯುವವರಿಗೆ ಆತ್ಮೀಯತೆ ತೋರಿಸುವುದು ಎಂದರೆ ಸಾವಿಗೆ ಆತ್ಮೀಯತೆ ತೋರಿಸಿದಂತೆ. ಅದು ಸ್ವಂತ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ! ಹಾಗಾಗಿ ಮೊದಮೊದಲು ಈ ಕೆಲಸ ಇರುಸುಮುರುಸು ಅನ್ನಿಸುವುದು ನಂತರ ಬೆಚ್ಚಗಿನ ಅನುಭವ ಕೊಡುತ್ತದೆ. (ಈ ಸಂದರ್ಭದಲ್ಲಿ ನಾನು ನಂದನ ಮನೆಗೆ ಹೋಗಿ ವೃದ್ಧ ಅಪ್ಪನನ್ನು ಸಂದರ್ಶಿಸಿದ್ದೆ. ಆಗ ಅಪ್ಪ-ಮಗ ಕೈಹಿಡಿದುಕೊಂಡು ದುಃಖಿಸಿದ್ದು, ನಂದ ಬಾಲ್ಯಕ್ಕೆ ಹೋಗಿ ಅಪ್ಪನೊಂದಿಗೆ ಆಟವಾಡುತ್ತಿದ್ದ ನೆನಪನ್ನು ಹಂಚಿಕೊಂಡಿದ್ದು ಹೃದಯಸ್ಪರ್ಶಿ ಆಗಿತ್ತು.)
ಇತ್ತೀಚಿನ ಸುದ್ದಿಯ ಪ್ರಕಾರ, ನಂದ ನಂದಿನಿಯ ಜೊತೆಗೆ ಮಾತಾಡುತ್ತ ಆಗಾಗ ಭಾವಪರವಶ ಆಗುತ್ತಾನೆ. ನಂದಿನಿ ಅವನನ್ನು ಸಂತೈಸುತ್ತಾಳೆ. ನಂತರ ನಡೆಯುವ ಕಾಮಕೂಟದಲ್ಲಿ, ಹಾಗೂ ಅದರ ನಂತರ ನಂದ ಮಾತಾಡುತ್ತ ಭಾವನೆಗಳನ್ನು ಹಂಚಿಕೊಳ್ಳುತ್ತಾನೆ. ಇನ್ನೊಂದು ವಿಶೇಷ ಏನೆಂದರೆ ಮಗನನ್ನು ಮುದ್ದಿಸುವಂತೆ ಹೆಂಡತಿಯನ್ನೂ ಸ್ವಯಂಸ್ಫೂರ್ತಿಯಿಂದ ಮುದ್ದಿಸುವುದನ್ನು ಕಲಿತಿದ್ದಾನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.