ಸುಖೀ ದಾಂಪತ್ಯ ೨೩೨
ಹಿರಿಯರ ಒತ್ತಾಯದಿಂದ ಮಾಡಿದ ಸಾಧನೆಗಳ ಹಿಂದಿನ ಇತಿಹಾಸವು ಅವರದಲ್ಲದ ನೋವು-ನರಳಿಕೆಗಳಿಂದ ಕೂಡಿರುತ್ತದೆ!
232: ಅನ್ಯೋನ್ಯತೆಗೆ ಹುಡುಕಾಟ – 11
ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಸ್ಥಾಪಿಸುವುದರ ಬಗೆಗೆ ಕಳೆದ ಹತ್ತು ಕಂತುಗಳ ಮೂಲಕ ಚರ್ಚಿಸುತ್ತಿದ್ದೇವೆ. ಇಲ್ಲೊಂದು ಮೂಲಭೂತ ಪ್ರಶ್ನೆ: ಅನ್ಯೋನ್ಯತೆಯು ಮಾನವರಾದ ನಮಗೆ ಸಹಜವಾಗಿ ಬರುವುದಿಲ್ಲವೆ? ಪರಸ್ಪರ ಪ್ರೀತಿಸುವುದನ್ನು, ಅದರಲ್ಲೂ ದಾಂಪತ್ಯದಲ್ಲಿ ಪ್ರೀತಿ ಮಾಡುವುದನ್ನು ಕಲಿಯಬೇಕೆ?
ಮಾನವರು ಮಾತ್ರವಲ್ಲ, ಎಲ್ಲ ಸಸ್ತನಿಗಳಲ್ಲೂ ಪ್ರೀತಿಯೆಂಬ ಭಾವನೆ ಸಹಜವಾಗಿ ಹರಿಯುತ್ತದೆ. ಪುಟ್ಟ ನಾಯಿಮರಿಗಳು ಒಂದರ ಮೇಲೊಂದು ಬಿದ್ದು ಆಟವಾಡುವುದನ್ನು ನೀವು ನೋಡಿರಬಹುದು. ಹುಟ್ಟಿದ ಮಗುವಿಗಂತೂ ಪ್ರೀತಿ ಬೇಕೇಬೇಕು. ಎಷ್ಟೇ ಆಟಿಕೆಗಳನ್ನು ಕೊಟ್ಟರೂ ಅಳುವ ಮಗುವು ಪ್ರೀತಿ ತೋರುವ ಹಿರಿಯರ ತೊಡೆಯಮೇಲೆ ಶಾಂತವಾಗಿ ಮಲಗುತ್ತದೆ. ಪ್ರೀತಿಯೊಂದನ್ನು ಬಿಟ್ಟು ಇತರೆಲ್ಲ ಸೌಲಭ್ಯಗಳನ್ನು ಒದಗಿಸಿದರೂ ಅದು ಬದುಕಲಾರದು. ಹಾಗೆಯೇ, ಇನ್ನೊಬ್ಬರನ್ನು ಪ್ರೀತಿಸುವ ಗುಣವು ಎಲ್ಲ ಮಕ್ಕಳಿಗೂ ಸಹಜವಾಗಿಯೇ ಬರುತ್ತದೆ. ಉದಾಹರಣೆಗೆ, ಶಿಶುವಿಹಾರದ ಮಕ್ಕಳನ್ನು ಗಮನಿಸಿ: ಪರಿಚಯ ಇಲ್ಲದ, ಭಾಷೆ ಗೊತ್ತಿಲ್ಲದ ಮಕ್ಕಳೂ ಕೂಡ ಪರಸ್ಪರ ಸಂಕೋಚವಿಲ್ಲದೆ ಬೆರೆಯುತ್ತ ಸ್ನೇಹ, ಪ್ರೀತಿ ತೋರಿಸುತ್ತ ಅನ್ಯೋನ್ಯತೆಯಿಂದ ಇರುತ್ತಾರೆ. ಜಗಳ ಆಡಿದರೂ ಬಹುಬೇಗ ಒಂದಾಗುತ್ತಾರೆ.
ಪ್ರೀತಿಸುವುದು ಹಾಗೂ ಪ್ರೀತಿಯನ್ನು ಬಯಸುವುದು ಸಹಜ ಸ್ವಭಾವ ಎಂದಮೇಲೆ ದಾಂಪತ್ಯದಲ್ಲಿ ಪ್ರೀತಿಸುವುದು, ಪ್ರೀತಿ ತೋರುವುದು ಹಾಗೂ ಅನ್ಯೋನ್ಯತೆ ಬೆಳೆಸಿಕೊಳ್ಳುವುದು ಯಾಕೆ ಘನಗಂಭೀರ ಆಗಿಬಿಡುತ್ತದೆ?
ನನಗೆ ಗೊತ್ತಿರುವಂತೆ ಇದಕ್ಕೆ ಮುಖ್ಯವಾಗಿ ನಾಲ್ಕು ಕಾರಣಗಳಿವೆ. ಒಂದು: ಪ್ರತಿಯೊಬ್ಬರೂ ಚಿಕ್ಕವರಿರುವಾಗ ಹಿರಿಯರಿಂದ ಪ್ರೀತಿಯ ನಂಟು (attachment style) ಎಷ್ಟರ ಮಟ್ಟಿಗೆ ಹಾಗೂ ಯಾವ ರೀತಿಯಲ್ಲಿ ಸಿಗುತ್ತದೆ ಎನ್ನುವುದನ್ನು ಅನುಸರಿಸಿ ಪ್ರೀತಿಸುವ ನಮೂನೆಯನ್ನು ಬೆಳೆಸಿಕೊಳ್ಳುತ್ತಾರೆ. ಉದಾಹರಣೆಗೆ, ಸಾಕಷ್ಟು ಪ್ರೀತಿ ಸಿಕ್ಕಿರುವ ಮಕ್ಕಳು ಭದ್ರಭಾವ (secure) ಬೆಳೆಸಿಕೊಳ್ಳುತ್ತಾರೆ. ಅವರು ದೊಡ್ಡವರಾದ ನಂತರ ಸಂಗಾತಿಯನ್ನು ನಿರ್ವ್ಯಾಜ ಮನದಿಂದ ಪ್ರೀತಿಸಲು, ಅವರೊಡನೆ ಅನ್ಯೋನ್ಯತೆಯಿಂದ ವ್ಯವಹರಿಸಲು ಕಲಿಯುತ್ತಾರೆ. ಪ್ರೀತಿ ಸಿಗದಿದ್ದಾಗ ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾರೆ. ಚಿಕ್ಕವರಿರುವಾಗ ಬಯಸಿದಷ್ಟು ಪ್ರೀತಿ ಸಿಗದೆ ಕೊರತೆ ಆದಾಗ, ಸಿಗದಿರುವ ಪ್ರೀತಿಗೆ ಹಪಹಪಿಸುತ್ತ ಆತಂಕಭಾವ (anxious style) ಬೆಳೆಸಿಕೊಳ್ಳುತ್ತಾರೆ. ಇವರು ದೊಡ್ಡವರಾದ ನಂತರ “ಪರಿಪೂರ್ಣ ಪ್ರೀತಿ”ಗೆ ಒದ್ದಾಡುತ್ತಾರೆ. ಸಿಕ್ಕ ಪ್ರೀತಿಯು ಪರಿಪೂರ್ಣ ಆಗಿದೆಯೆ ಎಂದು ಸಂದೇಹದಿಂದ ಪರೀಕ್ಷಿಸುತ್ತಾರೆ. ಚಿಕ್ಕವರಿರುವಾಗ ಪ್ರೀತಿ ಸಿಗದೆ ತಿರಸ್ಕಾರ ನಿರ್ಲಕ್ಷ್ಯಗಳೇ ಹೆಚ್ಚಾಗಿ ಸಿಗುವಾಗ ಮಕ್ಕಳು ಪ್ರೀತಿಯ ಅಗತ್ಯತೆಯಿಂದ ದೂರವಾಗುತ್ತ, ಒಂಟಿತನದಿಂದ ಬದುಕಲು ಭಾವನಿರ್ಧಾರ (emotional decision) ಕೈಗೊಂಡು, ಏಕಾಂಗಿಭಾವವನ್ನು (avoidant style) ಬೆಳೆಸಿಕೊಳ್ಳುತ್ತಾರೆ. ಇವರಿಗೆ ದಾಂಪತ್ಯದಲ್ಲಿ ಪ್ರೀತಿಯನ್ನು ಕೊಡಮಾಡಿದಾಗ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ದೂರ ಉಳಿಯುತ್ತ ಸಂಗಾತಿಯಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಇನ್ನು, ಚಿಕ್ಕವರಿರುವಾಗ ಪ್ರೀತಿ ಸಿಗದೆ ತಿರಸ್ಕಾರ ಹಾಗೂ ಅಲಕ್ಷ್ಯಕ್ಕೆ ಒಳಪಟ್ಟದ್ದಲ್ಲದೆ ಹಿಂಸೆ ಹಾಗೂ ದುರ್ವರ್ತನೆಗೆ ಈಡಾಗಿದ್ದರೆ ಕ್ಷೋಭಾಭಾವವನ್ನು (disorganised) ಬೆಳೆಸಿಕೊಳ್ಳುತ್ತಾರೆ. ದೊಡ್ಡವರಾದಾಗ ಸದಾ ಪ್ರೀತಿಗಾಗಿ ಹಪಹಪಿಸುತ್ತ, ಅದು ಸಿಕ್ಕಾಗ ಸಂದೇಹದಿಂದ ನೋಡಿ ತಿರಸ್ಕರಿಸಿ, ಏಕಾಂಗಿಯಾಗಿ ಉಳಿಯುತ್ತ ನರಳುತ್ತಾರೆ. ಒಟ್ಟಿನಲ್ಲಿ ಭದ್ರಭಾವದವರನ್ನು ಬಿಟ್ಟು ಉಳಿದವರಿಗೆ ಪ್ರೀತಿಯನ್ನು ಕೊಡತೆಗೆದುಕೊಳ್ಳುವುದು ಕಬ್ಬಿಣದ ಕಡಲೆ ಆಗುವುದರಿಂದ ಅನ್ಯೋನ್ಯತೆಯ ಪರಿಕಲ್ಪನೆಯನ್ನು ಗ್ರಹಿಸಲು, ಹಾಗೂ ಅದನ್ನು ದಾಂಪತ್ಯದಲ್ಲಿ ಅಳವಡಿಸಿಕೊಳ್ಳಲು ಹೆಚ್ಚುಹೆಚ್ಚಾಗಿ ಪ್ರಯತ್ನ ಹಾಕಬೇಕಾಗುತ್ತದೆ.
ಸಂಗಾತಿಯೊಡನೆ ಪ್ರೀತಿ, ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಅಡ್ಡಿಯಾಗುವ ಎರಡನೆಯ ಕಾರಣವೆಂದರೆ ಬೆಳವಣಿಗೆಯ ಹೆಸರಿನಲ್ಲಿ ಆಗಿರುವ ಅವಮಾನ ಹಾಗೂ ಮಾನಸಿಕ ಗಾಯಗಳು. ಇದು ಹೇಗೆಂದು ವಿವರಿಸುತ್ತೇನೆ. ಮಕ್ಕಳ ಬೆಳವಣಿಗೆಗೆ ತಾಯ್ತಂದೆಯರು ತರಬೇತಿ ನೀಡುವುದು ಆವಶ್ಯಕ. (ಸಸ್ತನಿ ಪ್ರಾಣಿಗಳಲ್ಲೂ ತರಬೇತಿಯಿದೆ: ಅಪಾಯಗಳಿಂದ ಸುರಕ್ಷಿತವಾಗಿ ಬದುಕುವ ಹಾಗೂ ಆಹಾರ ಸಂಪಾದಿಸುವ ಕೌಶಲ್ಯಗಳೇ ಇವು. ಲೈಂಗಿಕ ವರ್ತನೆಯ ಬಗೆಗೆ ಯಾವ ಪ್ರಾಣಿಗಳೂ ತರಬೇತಿ ಕೊಡುವುದಿಲ್ಲ – ಮಾನವರ ಹೊರತಾಗಿ!) ಈ ತರಬೇತಿಯು ಮಾನವರಲ್ಲಿ ಸಂಸ್ಕಾರದ ಹೆಸರಿನಲ್ಲಿದ್ದು, ಇದನ್ನು “ಮಾಡು/ಮಾಡಬೇಡ” ಎನ್ನುವ ಕಟ್ಟಪ್ಪಣೆಗಳ ಮೂಲಕ ಬರುತ್ತದೆ. ವಿದ್ಯುತ್ತು ಹರಿಯುವ ತಂತಿಯನ್ನು ಮುಟ್ಟಕೂಡದು ಎನ್ನುವಂಥ ಅಪ್ಪಣೆಗಳಲ್ಲಿ ಅರ್ಥವಿದೆ, ಆದರೆ ಹೆಚ್ಚಿನವುಗಳು ಸಂಪತ್ತು ಹಾಗೂ ಸುಳ್ಳುಪ್ರತಿಷ್ಠೆಗೆ ಕುಮ್ಮಕ್ಕು ಕೊಡುವಂತಿದ್ದು, ಅನುಸರಿಸದಿದ್ದರೆ ಸಮಾಜದಿಂದ ತಿರಸ್ಕೃತಗೊಳ್ಳುವ ಭಯ ಹಿರಿಯರಲ್ಲಿದೆ. “ನಮ್ಮನ್ನು ಕೆರಳಿಸುವ ಭಾವನೆಗಳನ್ನು ತೋರ್ಪಡಿಸಬೇಡ, ನಮ್ಮ ಕೈಲಾಗದ್ದನ್ನು ಕೇಳಬೇಡ” ಎನ್ನುವಲ್ಲಿಂದ ಶುರುವಾಗಿ, “ತಮಾಷೆಯಾಗಿ ಇರಬೇಡ, ಸಲಿಗೆಯಿಂದ ದೂರವಿರು, ಸ್ವಚ್ಛಂದವಾಗಿ ನಗಬೇಡ, ಯಾರಿಗೂ ಹತ್ತಿರವಾಗಬೇಡ…” ಹಾಗೂ, “ನಿನಗೇನೂ ಅರ್ಥವಾಗುವುದಿಲ್ಲ, ನಿನಗೆ ಬುದ್ಧಿಯಿಲ್ಲ” ಎನ್ನುವ ತನಕ ಮುಂದುವರಿಯುತ್ತವೆ. ಇದರ ಒಳಾರ್ಥ ಏನು? “ನಿನ್ನನ್ನು ನೀನು ನಂಬಕೂಡದು, ನೀನು ನೀನಾಗಿ ಇರಕೂಡದು. ಇದ್ದೂ ಇಲ್ಲದಂತೆ ಇರು!” ಇತ್ಯಾದಿ. ಇವುಗಳನ್ನು ಪಾಲಿಸದಿದ್ದರೆ ತಾಯ್ತಂದೆಯರ ವಿರುದ್ಧ ಸಂಘರ್ಷ ಖಂಡಿತ. ಹಾಗಾಗಿ ಮಕ್ಕಳು ತಮ್ಮ ಒಳದನಿಯನ್ನು ಹತ್ತಿಕ್ಕುತ್ತ ತಾಯ್ತಂದೆಯರ ಇಷ್ಟದಂತೆ ನಡೆದುಕೊಳ್ಳುತ್ತಾರೆ. ಪರಿಣಾಮ ಖಿನ್ನತೆ, ಒಂಟಿತನ, ಅನಾಥಪ್ರಜ್ಞೆ ಅಮರಿಕೊಳ್ಳುತ್ತದೆ. ಅನೇಕರು “ತಾಯ್ತಂದೆಯರ ಅಪೇಕ್ಷೆಗೆ ತಕ್ಕಂತೆ ನಡೆಯಲಿಲ್ಲ; ನಡೆದುಕೊಂಡಿದ್ದರೆ ಅವರು ನನ್ನನ್ನು ಪ್ರೀತಿಸಬಹುದಿತ್ತು” ಎಂದು ತಪ್ಪಿತಸ್ಥ ಭಾವ, ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಹೀಗೆ, ಹೀನೈಕೆ ಹಾಗೂ ತಪ್ಪಿತಸ್ಥಭಾವದ ಹಿಂದೆ ಹುಟ್ಟುಸ್ವಭಾವವಾದ ಪ್ರೀತಿಸುವ ಹಾಗೂ ಅನ್ಯೋನ್ಯವಾಗಿರುವ ಸಾಮರ್ಥ್ಯ ಮರೆಯಾಗುತ್ತದೆ.
ಇದರರ್ಥ ಏನು? ಹೆಚ್ಚು ಓದಿದವರ ಅಥವಾ ಹೆಚ್ಚು ಸಂಪಾದನೆ ಮಾಡುವವರ ಇತಿಹಾಸವು ಹೆಚ್ಚು ನೋವು-ನರಳಿಕೆಗಳಿಂದ ಕೂಡಿರುತ್ತದೆ! ಭಾವನಾತ್ಮಕ ಮಟ್ಟದಲ್ಲಿ ಹೇಳುವುದಾದರೆ, ವ್ಯವಸ್ಥೆಗೆ ಹೊಂದಿಕೊಳ್ಳುವ ಧಾವಂತದಲ್ಲಿ ಮಾನಸಿಕ ಗಾಯಗಳು ಹೆಚ್ಚಾಗುತ್ತವೆ. ಗಾಯಗಳು ಹೆಚ್ಚಾದಷ್ಟೂ ತನ್ನತನ ಕಡಿಮೆಯಾಗುತ್ತ ಸ್ವಂತಿಕೆ ಕಳೆದುಹೋಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ನಮ್ಮ ವ್ಯವಸ್ಥಿತ ವಿವಾಹಗಳು. ಹುಡುಗ-ಹುಡುಗಿಯರು ಆಯ್ಕೆ ಮಾಡಿಕೊಳ್ಳುವ ಒರೆಗಲ್ಲು ಪ್ರೀತಿ-ಅನ್ಯೋನ್ಯತೆ ಅಲ್ಲ, ಲೈಂಗಿಕ ಆಕರ್ಷಣೆಯೂ ಅಲ್ಲ. ವೃತ್ತಿ ನೈಪುಣ್ಯ, ಸಂಪಾದನೆ ಹಾಗೂ ಅಂತಸ್ತು. ಇಲ್ಲೊಬ್ಬ ಬುದ್ಧಿವಂತ ಹುಡುಗ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಕೊನೆಯ ವರ್ಷ ಅವನು ನಪಾಸಾಗಿ ಆಕೆ ಉಚ್ಚ ಶ್ರೇಣಿಯಲ್ಲಿ ಪಾಸಾದಳು. ಆಕೆಯ ಹೆತ್ತವರು ಅವಳ ಮನಸ್ಸಿಗೆ ವಿರುದ್ಧವಾಗಿ ಪ್ರೇಮಿಯನ್ನು ದೂರಮಾಡಿ ಡಾಕ್ಟರೇಟ್ ಮಾಡಿಕೊಂಡ ಹುಡುಗನಿಗೆ ಮದುವೆ ಮಾಡಿಸಿದರು. ಮೂರು ವರ್ಷದ ತರುವಾಯ ಏನಾಗಿದೆ? ನಪಾಸಾದ ಹುಡುಗ ದೊಡ್ಡ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಧಾರಾಳವಾಗಿ ಸಂಪಾದಿಸುತ್ತಿದ್ದಾನೆ. ಇತ್ತ ಗಂಡನಿಂದ ಸಾಕಷ್ಟು ಅನುಕೂಲ ಇದ್ದರೂ ಒಂಚೂರೂ ಪ್ರೀತಿ ಸಿಗದ ಹುಡುಗಿಯ ಪರಿಸ್ಥಿತಿಯು ವಿಚ್ಛೇದನಕ್ಕೆ ಪ್ರೇರೇಪಿಸುತ್ತಿದೆ.
ಮಕ್ಕಳು ಹೀಗೆ ಕಟ್ಟಪ್ಪನೆಗಳಿಗೆ ಒಳಗಾಗಿ ಬೆಳೆಯುವಾಗ ಹುಟ್ಟಿನಿಂದ ಸಹಜವಾಗಿ ಬಂದಿರುವ ಪ್ರೀತಿ-ಪ್ರೇಮಗಳಿಂದ ಬಾಂಧವ್ಯ ಕಟ್ಟಿಕೊಳ್ಳುವ ವರದಾನವು ಹಿರಿಯರ ಸಂಸ್ಕಾರದ ಪ್ರಭಾವಕ್ಕೆ ಒಳಗಾಗಿ ಶಾಪಗ್ರಸ್ತ ಆಗುತ್ತದೆ. ಪರಿಣಾಮವಾಗಿ ಅವರು ತಮ್ಮನ್ನೇ ತಾವು ಇಷ್ಟಪಡಲಾರರು. ಸ್ವತಃ ಪ್ರೀತಿಸಿಕೊಳ್ಳದಿದ್ದರೆ ಸಂಗಾತಿಯನ್ನೂ ಪ್ರೀತಿಸಲಾರರು. ಆಗ ಅನ್ಯೋನ್ಯತೆಯೇ ಹುಟ್ಟಲಾರದು!
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.