ಸುಖೀ ದಾಂಪತ್ಯ ೨೩೦
ಗಂಡಸರಿಗೆ ತಾನು ಗಂಡಸು, ಸಂಗಾತಿ ಹೆಣ್ಣು ಎನ್ನುವುದನ್ನು ಮರೆತರೆ ಮಾತ್ರ ಮುಕ್ತ ಸಲ್ಲಾಪ ಸಾಧ್ಯವಿದೆ!
230: ಅನ್ಯೋನ್ಯತೆಗೆ ಹುಡುಕಾಟ – 9
ಮುಕ್ತಮನದಿಂದ ಹಂಚಿಕೊಳ್ಳುವುದು ಹಾಗೂ ಮುಕ್ತಮನದಿಂದ ಆಲಿಸುವುದು ಹೇಗೆ ಎಂದು ಕಲಿತುಕೊಂಡಿದ್ದೇವೆ. ಈ ಆಡುವ-ಆಲಿಸುವ ಪರಿಕ್ರಮವು ಪ್ರತ್ಯಕ್ಷವಾಗಿ ಹೇಗೆ ನಡೆಯುತ್ತದೆ ಎಂಬುದನ್ನು ಒಂದು ದೃಷ್ಟಾಂತದಿಂದ ಕಂಡುಕೊಳ್ಳೋಣ.
ಮೋಹನ-ಮೋನಿಕಾ (ಹೆಸರು ಬದಲಿಸಿದೆ) ಸಹೋದ್ಯೋಗಿಗಳು. ಪ್ರೀತಿಸಿ ಮದುವೆಯಾಗಿ ಸಾಕಷ್ಟು ವರ್ಷ ಕಳೆದರೂ ಲೈಂಗಿಕ ಸಾಮರಸ್ಯ ಇಲ್ಲವೆಂದು ಕಾದಾಡುತ್ತ ನನ್ನಲ್ಲಿ ಬಂದಿದ್ದಾರೆ. ಹೆಚ್ಚಿನ ದಾಂಪತ್ಯಗಳಲ್ಲಿ ನಡೆಯುವಂತೆ ಪರಸ್ಪರರನ್ನು ಅಪನಂಬಿಕೆಯಿಂದ ಅವಲಂಬಿಸಿದ್ದಾರೆ. ಹಾಗಾಗಿ ಅನ್ಯೋನ್ಯತೆ ಮೂಡುವುದು ಅಸಾಧ್ಯವಾಗಿದೆ. (ದಂಪತಿಗಳಲ್ಲಿ ಅನ್ಯೋನ್ಯತೆಯ ಕೊರತೆಯಿಂದ ಲೈಂಗಿಕ ಸಮಸ್ಯೆಗಳು ಉಂಟಾಗಿದ್ದರೆ ಬೇರೆ ಕ್ರಮವನ್ನು ಅನುಸರಿಸುತ್ತೇನೆ. ಐದು ದಿನಗಳ ಕಾಲ ನಡೆಯುವ ಈ ಕ್ರಮದಲ್ಲಿ ಪ್ರತಿದಿನವೂ 2-6 ತಾಸುಗಳ ದಾಂಪತ್ಯ ಚಿಕಿತ್ಸೆ ನಡೆಯುತ್ತದೆ.) ಚಿಕಿತ್ಸೆಯಲ್ಲಿ ನಡೆದ ಮುಕ್ತಮನದ ಸಲ್ಲಾಪದ ಸಾರಾಂಶವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಒಂದು ಸಲ ಮೋನಿಕಾಳ ಮೊಬೈಲ್ ಕೈಜಾರಿ ಕೆಳಗೆ ಬಿತ್ತು. ಆಗ ಮೋಹನ್ “ಅಬ್ಬಾ, ಅಂತೂ ಅದು ಐಫೋನ್ ಆಗಿಲ್ಲವಲ್ಲ?” ಎಂದು ಉದ್ಗರಿಸಿದ. ಅಷ್ಟಕ್ಕೆ ಬಿಡದೆ, “ನಿನಗೆ ಐಫೋನ್ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ!” ಎಂದು ವ್ಯಂಗ್ಯವಾಡಿದ. ಮೋನಿಕಾ ನೊಂದು ಕೋಪದಿಂದ, “ನೋಡ್ತಾ ಇರು, ನನ್ನ ಸಂಪಾದನೆಯಿಂದ ಬೇಗ ಐಫೋನ್ ಖರೀದಿಸಿ ತೋರಿಸುತ್ತೇನೆ!” ಎಂದಳು. ಆಗ ಮೋಹನ ತಮಾಷೆಗೆ ಹಾಗಂದಿದ್ದು ಎಂದು ಜಾರಿಕೊಂಡ. ಈ ವಿಷಯವನ್ನೇ ಮುಕ್ತಮನದ ಸಲ್ಲಾಪಕ್ಕೆ ಆರಿಸಿಕೊಳ್ಳುತ್ತ, ಅದರ ಹಿನ್ನೆಲೆಯಲ್ಲಿ ಇರುವ ವಿಚಾರ-ಭಾವನೆ-ಅನಿಸಿಕೆಗಳನ್ನು ಹಂಚಿಕೊಳ್ಳಲು ಸೂಚಿಸಿದೆ. ಮೋಹನ “ಆಡುವವ”ನಾಗಿ, ತಮಾಷೆಗೆ ಹೇಳಿದೆ ಎಂದು ಶುರುಮಾಡಿದ. “ನಿನಗೆ ತಮಾಷೆ ಅನ್ನಿಸಲಿಲ್ಲ ಎಂದು ಗೊತ್ತಾಯಿತು… ಅಸಮಾಧಾನ ಯಾಕಾಯಿತು ಎಂದು ಹೊಳೆಯುತ್ತಿಲ್ಲ…” ಎಂದ. ಐಫೋನ್ ಹೊಂದುವುದಕ್ಕೆ ಆಕೆಯ ಅನರ್ಹತೆಯ ಬಗೆಗೆ ಯೋಚಿಸಲು ಸೂಚಿಸಿದಾಗ ತನ್ನೊಳಗೆ ಅನಿಸಿಕೆಗಳನ್ನು ಹುಟ್ಟುತ್ತಿರುವಂತೆ ಹೊರಹಾಕುತ್ತ ಹೋದ. ಆಗ ಬಯಲಿಗೆ ಬಂದ ಸಂಗತಿಗಳು ವಿಚಿತ್ರವೂ ವಿಸ್ಮಯಕರವೂ ಆಗಿದ್ದುವು!
ಮೋನಿಕಾ ತಾನು ಐಫೋನ್ ಹೊಂದಿದರೆ ಅವನಿಗೇನು ಅನ್ನಿಸುತ್ತದೆ ಎಂದು ಕುತೂಹಲದಿಂದ ಕೇಳಿದಾಗ “ನನಗೇನೂ ಬೇಜಾರು ಆಗುವುದಿಲ್ಲ” ಎಂದ. ಖುಷಿಯಾಗುತ್ತದೆ ಎನ್ನುವುದರ ಬದಲು ಬೇಸರವಿಲ್ಲ ಎನ್ನುವುದರ ಹಿಂದಿನ ನೇತ್ಯಾತ್ಮಕ ಭಾವವನ್ನು ಕೆದಕಿದೆ. ಸ್ವತಃ ತನಗೇ ಬೆಲೆಬಾಳುವ ವಸ್ತುಗಳನ್ನು ಬಳಸುವ ಯೋಗ್ಯತೆ ಇಲ್ಲವೆಂದೂ, ತನ್ನ ಅನಿಸಿಕೆಯನ್ನು ಮೋನಿಕಾಳ ಮೇಲೆ ಪ್ರಕ್ಷೇಪಿಸಿದ್ದಾನೆ (projection) ಎಂದೂ ಹೇಳಿದ. ಅಲ್ಲಿಂದ ತನ್ನ ಬಾಲ್ಯಕ್ಕೆ ಜಾರಿದ. ಬಾಲಕ ಮೋಹನ ಏನೇ ಬೆಲೆಬಾಳುವ ವಸ್ತುವನ್ನು ಬಯಸಿ ಕೇಳಲಿ, ಹೆತ್ತವರು, “ನೀನು ಗಂಡಸು. ಮೊದಲು ದುಡಿದು ಸಂಪಾದಿಸಲು ಕಲಿ. ನಂತರ ಇಷ್ಟವಾದುದನ್ನು ಕೊಂಡುಕೋ; ತಂಗಿಗೂ ಕೊಡಿಸು!” ಬಾಯಿಬಡಿದು ಕೂಡಿಸುತ್ತಿದ್ದರು. ಆದರೆ ತಂಗಿ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಅವರಲ್ಲಿ ಪುರುಷ ಪ್ರಧಾನ ಧೋರಣೆ ಎದ್ದುಕಾಣುತ್ತಿತ್ತು. ಪರಿಣಾಮ? ಅವನ ತಲೆಯಲ್ಲಿ ತಾನು ಗಂಡು, ಹೆಂಡತಿ ಹೆಣ್ಣಾಗಿ ತನ್ನನ್ನು ಅವಲಂಬಿಸಿದ್ದಾಳೆ (ಅವನಷ್ಟೇ ಸಂಪಾದಿಸುತ್ತಿದ್ದರೂ!). ಆಕೆಗೆ ಐಫೋನ್ ಕೊಡಿಸಬೇಕೆಂಬ ವಿಚಾರ ಒಂದು ಕ್ಷಣ ಅವನಿಗೆ ಬಂತು. ಕೊಡಿಸುವುದು ತನ್ನ ಕರ್ತವ್ಯ, ಹಾಗಾಗಿ ಕೊಡಿಸುವ ಹೊಣೆ ಹೊತ್ತವನಿಗೆ ಅವಹೇಳನ ಮಾಡುವ ಹಕ್ಕೂ ಬಂತು!
ಇನ್ನು, ಐಫೋನ್ ಕೊಂಡೇ ತೋರಿಸುತ್ತೇನೆ ಎನ್ನುವ ಮೋನಿಕಾಳ ಛಲದ ಹಿನ್ನೆಲೆಯನ್ನು ಕೆದಕಿದೆ. ಆಕೆಯ ಮೂಲಕುಟುಂಬದಲ್ಲೂ ಪುರುಷ ಪ್ರಧಾನತೆಯ ಕರಿನೆರಳಿತ್ತು. ಆಕೆಯ ಪ್ರತಿಭಾವಂತ ಅಣ್ಣನ ಸಾಧನೆಗಳನ್ನು ಹೆತ್ತವರು ಹಾಡಿಹೊಗಳುತ್ತಿದ್ದರು. ಅದೇ ಸಾಧನೆಯನ್ನು ಇವಳು ಮಾಡಿದಾಗ “ಅದೇನು ಮಹಾ, ನಿನ್ನಣ್ಣ ಮಾಡಿದ್ದನ್ನೇ ನೀನು ಮಾಡಿದ್ದೀಯಾ” ಎನ್ನುತ್ತಿದ್ದರು. ಒಮ್ಮೆ ಆಕೆ ಛಲತೊಟ್ಟು, ಅಣ್ಣ ಪಾಸಾಗದಿರುವ ಪರೀಕ್ಷೆಯಲ್ಲಿ ಉತ್ತೀರ್ಣಳಾದಾಗ ಅಪ್ಪ-ಅಮ್ಮ ಸಂಭ್ರಮಾಚರಣೆಗೆ ಹೊರಟವರು, ಮಗನಿಗೆ ನೋವಾಗುತ್ತದೆ ಎಂದು ಕೈಬಿಟ್ಟಿದ್ದು ಈಕೆಗೆ ಆಘಾತ ಉಂಟುಮಾಡಿತ್ತು. “ನೀನು ಹುಡುಗಿ, ಹಾಗಾಗಿ ನಿನ್ನ ಸಾಧನೆಗೆ ಬೆಲೆಯಿಲ್ಲ!” ಎನ್ನುವ ಕುಟುಂಬಕ್ಕೆ ತನ್ನ ಸಂತೋಷವನ್ನು ಬಲಿಕೊಟ್ಟವಳು ತಾನು ಹೆಣ್ಣು, ಅಥವಾ ಕೀಳೆಂದು ತೋರಿಸಿದರೆ ಸಿಡಿದೆದ್ದು ಪ್ರತಿಭಟಿಸುತ್ತಿದ್ದಳು.
ಇತ್ತ ಮೋಹನ ತನ್ನೊಳಗೆ ಹೊಕ್ಕು ಪುಂಖಾನುಪುಂಖ ಆತ್ಮವಿಶ್ಲೇಷಣೆ ಮಾಡುತ್ತ, ಬಂದದ್ದನ್ನು ಹೊರಗೆಡುಹುತ್ತ ಹೋದ. ತಾನು ಸ್ತ್ರೀಯರನ್ನು ಸಮಾನಭಾವದಿಂದ ನಡೆಸಿಕೊಳ್ಳುತ್ತಿದ್ದೇನೆ ಎಂದು ಭ್ರಮಿಸಿದ್ದ. ಆದರೆ ವಾಸ್ತವ ಪೂರ್ತಿ ವಿರುದ್ಧವಾಗಿದ್ದುದು ಅರಿವಾಗಿ ಅಪ್ರತಿಭನಾದ. ಹೀಗಿರುವುದು ಅವನಿಗೆ ಏನೇನೂ ಇಷ್ಟವಾಗಲಿಲ್ಲ. ಹೆಂಗಸರ ಧ್ವನಿಗೆ ಕಿವುಡುತನವಿರುವ ಕುಟುಂಬದಿಂದ ಬಂದವನಿಗೆ ಹೆಂಡತಿ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದು ಹಿಡಿಸುತ್ತಿರಲಿಲ್ಲ. ಅದಕ್ಕೇ “ನನಗೇನೂ ಬೇಸರವಿಲ್ಲ” ಎಂದಿದ್ದು. ಅಲ್ಲದೆ, ಹೆಣ್ಣಿನ ಪ್ರಭಾವಕ್ಕೆ ಒಳಗಾಗುವುದು ಅಪಾಯಕರ; ಹೆಂಗಸರು ಅನ್ಯೋನ್ಯತೆಯ ನಂಟನ್ನು ಬಯಸಕೂಡದು, ಅದಕ್ಕೆ ಅವರು ಅರ್ಹರಲ್ಲ ಎನ್ನುವ ಅಭಿಮತ ಅವನ ಒಳಮನದಲ್ಲಿ ಮನೆಮಾಡಿತ್ತು. ಆದುದರಿಂದಲೇ ಮೋನಿಕಾ ಹಾರ್ದಿಕತೆ ಬಯಸಿ ಬಂದಾಗ ಆಕೆಗೆ ಜೋಡಿಸಿಕೊಳ್ಳಬೇಕೇ ಬೇಡವೆ ಎಂದು ಮೀನಮೇಷ ಮಾಡುತ್ತಿದ್ದುದು. ಒಂದುವೇಳೆ ಜೋಡಿಸಿಕೊಂಡರೂ ತನ್ನ ಪಾರಮ್ಯವನ್ನು ಬಿಡುತ್ತಿರಲಿಲ್ಲ (ಪುರುಷರ ಅಹಂಭಾವ ಎಂದರೆ ಇದೇ!). ಹಾಗಾಗಿ, ಮೋನಿಕಾ ಬಯಸಿದ್ದನ್ನು ಮಂಜೂರು ಮಾಡುವುದೋ ಬೇಡವೊ ಎಂದು ನಿರ್ಧರಿಸುವುದನ್ನು ಮೋಹನ ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತಿದ್ದ. ಹಾಗೆಯೇ, ಆಕೆ ಪ್ರೀತಿಯನ್ನು ಬಯಸಿದರೆ ಕೊಡಬೇಕೋ ಬೇಡವೊ ಎನ್ನುವುದನ್ನೂ ಅವನ ಪುರುಷ ಪ್ರಧಾನ ಮನವೇ ನಿರ್ಧರಿಸುತ್ತಿತ್ತು. ಒಂದುವೇಳೆ ಕೊಟ್ಟರೂ ಆಕೆ ತನ್ನನ್ನು ಎಷ್ಟು ಪ್ರಸನ್ನಗೊಳಿಸಿದಳು ಎನ್ನುವುದನ್ನು ಅನುಸರಿಸಿ, ಪ್ರೀತಿಯ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡುತ್ತ ಪ್ರಾಬಲ್ಯ ತೋರುತ್ತಿದ್ದ. ಪ್ರೀತಿಯಿಲ್ಲದೆ ಕೇವಲ ಕರ್ತವ್ಯದ ಹೊಣೆ ಹೊತ್ತರೆ ಮನಬಿಚ್ಚಿ ವ್ಯಕ್ತಪಡಿಸುವುದು ಅಸಾಧ್ಯವಾಗುತ್ತದೆ. ಹಾಗಾಗಿ ಅನ್ಯೋನ್ಯತೆ ಬೆಳೆಸಿಕೊಳ್ಳಲು ಆಗಿಲ್ಲ ಎಂಬುದು ಹೊರಬಂತು.
ಇಲ್ಲಿ ಮೋಹನ ಕಂಡುಕೊಂಡ ಸತ್ಯಗಳು ಏನೇನು?
“ಪುರುಷ ಪ್ರಧಾನತೆಯು ವ್ಯಕ್ತಿಯಲ್ಲಿರುವ ದೌರ್ಬಲ್ಯಗಳನ್ನು ಅಲ್ಲಗಳೆದು ಬದುಕಲು ಹಚ್ಚುತ್ತದೆ. ಹಾಗಾಗಿ ಆ ಭಾಗಗಳಿಂದ ಕಳಚಿಕೊಂಡು ಬದುಕಲು ಕಲಿತಿದ್ದೆ. ಈ ಹುಸಿನಂಬಿಕೆಗಳಿಂದ ಹೊರಬಂದ ನಂತರವೇ ದಾಂಪತ್ಯದಲ್ಲಿ ಅನ್ಯೋನ್ಯತೆ ಹುಟ್ಟಲು ಅವಕಾಶ ಆಗುತ್ತಿದೆ… ಪುರುಷ ಪ್ರಧಾನತೆಯ ಪ್ರಕಾರ ಪ್ರೀತಿಯೊಂದು ದೌರ್ಬಲ್ಯ; ಪ್ರೀತಿಯನ್ನು ಬಯಸುವುದು ಹಾಗೂ ಪ್ರೀತಿಯನ್ನು ಕೊಡುವುದು ಎರಡೂ ದೌರ್ಬಲ್ಯದ ಲಕ್ಷಣಗಳು. ಪುರುಷ ಪ್ರಧಾನತೆಯು ಪ್ರೀತಿಗೆ ಅನರ್ಹತೆಯ ಅನಿಸಿಕೆಯನ್ನು ಕೊಡುತ್ತದೆ. ಗಂಡಸಾದರೆ ಪ್ರೀತಿಯನ್ನು ಬಿಟ್ಟುಕೊಟ್ಟು ಜವಾಬ್ದಾರಿಯನ್ನು ಹೊರಬೇಕು. ಹಾಗಾಗಿ ಪುರುಷ ಪ್ರಧಾನತೆಯನ್ನು ಬಿಟ್ಟುಕೊಡಬೇಕಾದರೆ ಮೊದಲು ತನ್ನನ್ನು ತಾನು ಪ್ರೀತಿಸುವುದನ್ನೂ, ಸಂಗಾತಿಯಿಂದ ತಾನು ಬೇರೆಯಾಗಿದ್ದೇನೆ ಎನ್ನುವ ವ್ಯಕ್ತಿ ಪ್ರತ್ಯೇಕತೆಯನ್ನೂ ಕಲಿಯಬೇಕು… ಮನಸ್ಸು ಕೋಮಲಗೊಂಡರೆ ಮಾತ್ರ ಪ್ರೀತಿ ಕಾಲಿಡುತ್ತದೆ. ಅದಕ್ಕಾಗಿ ಮನಬೆತ್ತಲೆ ಆಗಬೇಕು…” ಇತ್ಯಾದಿ.
ಆಡುವ-ಆಲಿಸುವ ಕ್ರಮದ ಅನುಭವ ಹೇಗಿತ್ತು? ಮೋಹನನೇ ಹೇಳುವಂತೆ, “ಜಡಗಟ್ಟಿದ ಮನಸ್ಸನ್ನು ಹೋಳುಹೋಳಾಗಿ ಮಾಡಿ ಬೇಯಿಸಿ ಹದಕ್ಕೆ ತಂದಹಾಗಿತ್ತು!”
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.