ಸುಖೀ ದಾಂಪತ್ಯ ೨೨೨
ಹಾಸಿಗೆಯಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವಷ್ಟರಲ್ಲಿ ಕಾಮಾಸಕ್ತಿ ನೆಲಕಚ್ಚಿರುತ್ತದೆ.
222: ಅನ್ಯೋನ್ಯತೆಗೆ ಹುಡುಕಾಟ – 1
ಬದ್ಧಸಂಬಂಧದಲ್ಲಿ ಅನ್ಯೋನ್ಯತೆಯ ಬಗೆಗೆ ಮಾತು ಶುರುಮಾಡಿದ್ದೇವೆ. ಅನ್ಯೋನ್ಯತೆಯು ಸಮರ್ಪಕ ಸಂವಹನದಿಂದ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದರಿಂದ ಆಗಲೀ, ಸಂಗಾತಿಯ ಕಾಳಜಿ ಮಾಡುವುದರಿಂದ ಆಗಲೀ ಬರುವಂಥದ್ದಲ್ಲ, ಸಂಗಾತಿಯ ಸಾನ್ನಿಧ್ಯದಲ್ಲಿ ತನ್ನನ್ನು ತಾನು ಬಯಲಿಗೆ ತಂದುಕೊಳ್ಳುತ್ತ ಆತ್ಮವಿಶ್ಲೇಷಣೆ ನಡೆಸುವುದು, ತನ್ನನ್ನು ತಾನು ಕಂಡುಕೊಳ್ಳುತ್ತ, ಆ ಹೊಸ ವ್ಯಕ್ತಿತ್ವದ ಮೂಲಕ ಸಂಗಾತಿಯೊಡನೆ ಬೆರೆಯುವುದರಿಂದ ಬರುತ್ತದೆ ಎಂದು ಹೇಳುತ್ತಿದ್ದೆ. ಇದು ಹೇಗೆಂದು ಒಂದು ದೃಷ್ಟಾಂತದ ಮೂಲಕ ವಿವರಿಸುತ್ತಿದ್ದೇನೆ – ಇದಕ್ಕೂ ಡೇವಿಡ್ ಸ್ನಾರ್ಷ್‌ನ Passionate Marriage ಪುಸ್ತಕದಲ್ಲಿ ಬರುವ ಒಂದು ದೃಷ್ಟಾಂತಕ್ಕೂ ಬಹಳ ಸಾಮ್ಯವಿದೆ ಎಂದು ಮೊದಲೇ ಹೇಳಿಬಿಡುತ್ತೇನೆ.
ಐವತ್ತರ ಆಸುಪಾಸಿನಲ್ಲಿರುವ ಸಲೀಲ್ ಹಾಗೂ ಶಾಮಾ (ನಿಜವಾದ ಹೆಸರುಗಳಲ್ಲ) ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದಿವೆ. ಬರಬರುತ್ತ ಇಬ್ಬರಿಗೂ ಕಾಮಾಸಕ್ತಿ ಕಡಿಮೆ ಆಗುತ್ತಿದೆ. ಸಲೀಲ್ ಹತ್ತಿರವಾದಾಗ ಶಾಮಾ ಮನಸ್ಸಿಲ್ಲದೆ ಒಪ್ಪುತ್ತಾಳೆ. ಅವನು ಆಕೆಯ ಸ್ತನಗಳೊಂದಿಗೆ ಅಲ್ಪಸ್ಪರ್ಶ ನಡೆಸುತ್ತಾನೆ. ಉದ್ರೇಕವಾದ ಕೂಡಲೇ ನೇರವಾಗಿ ಪ್ರವೇಶ ಮಾಡುತ್ತಾನೆ – ಅಲ್ಲಿಂದ ಆಕೆಗೆ ಬೇಕೆನ್ನಿಸಲು ಶುರುವಾಗುತ್ತದೆ. ಕೆಲವೊಮ್ಮೆ ದ್ರವ ಇಲ್ಲದಿರುವಾಗ ಆತನೇ ಇಬ್ಬರ ಭಾಗಗಳಿಗೆ ಜೆಲ್ಲಿ ಲೇಪಿಸುತ್ತಾನೆ. ಅಷ್ಟೊತ್ತಿಗೆ ಅವನ ಉದ್ರೇಕ ಇಳಿದಿರುತ್ತದೆ. ಕೆಲವೊಮ್ಮೆ ಆಕೆಯನ್ನು “ತೃಪ್ತಿಪಡಿಸಲು” ಎಷ್ಟೇ ಯತ್ನಿಸಿದರೂ ಆಗುವುದಿಲ್ಲ. ಕಾರಣ ತನ್ನ ಕ್ಷೀಣಿಸುತ್ತಿರುವ ಶಾರೀರಿಕ ಸಾಮರ್ಥ್ಯ ಎಂದು ನೊಂದುಕೊಂಡಿದ್ದಾನೆ. ತನ್ನ ಪುರುಷತ್ವವು ಇತ್ತೀಚೆಗೆ ಆಕರ್ಷಣೆ ಕಳೆದುಕೊಂಡಿರುವಾಗ ಆಕೆಯ ಅಂಗಸೌಷ್ಟವವು ಮುಂಚಿನಂತೆ ಇರುವುದು ಅಸಹಾಯಕತೆಯ ಅನಿಸಿಕೆ ತರುತ್ತಿದೆ. ಹಾಗೆಂದು ಬಾಯಿಬಿಟ್ಟು ಮಾತಾಡಲು ಅವನಿಗೆ ವಿಪರೀತ ಸಂಕೋಚವಿದೆ.
ಸಲೀಲನಂತೆ ಶಾಮಾಗೂ ಹೇಳಿಕೊಳ್ಳಲು ಸಂಕೋಚ ಎನಿಸುವ ಸಮಸ್ಯೆಯೊಂದಿದೆ. ಅವಳ ತಲೆಯಲ್ಲಿ ಯಾವ್ಯಾವುದೋ ಗಂಡಸರ ಜೊತೆಗೆ ಏನೇನೋ ಮಾಡುತ್ತಿರುವಂತೆ ಕಾಮದ ಕಲ್ಪನೆಗಳು ಬರುತ್ತಿವೆ. ಕೂಟ ನಡೆಯುತ್ತಿರಬೇಕಾದರೆ ತನಗೆ ಇಷ್ಟವಾದ ದಿಕ್ಕಿನಲ್ಲಿ ಹೋಗದಿರುವಾಗ ಆಕೆಯ ಮನಸ್ಸು ಕಲ್ಪನೆಗಳ ಬೆನ್ನಟ್ಟಿ ಹೋಗುತ್ತದೆ. ಎಷ್ಟೋಸಲ ಕೂಟ ಮುಗಿದಮೇಲೆ ಕಲ್ಪನೆಗಳನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಸ್ವತಃ ಸ್ಪರ್ಶಿಸಿಕೊಳ್ಳುತ್ತ ಭಾವಪ್ರಾಪ್ತಿ ಹೊಂದಿ, ನಂತರ ತಪ್ಪಿತಸ್ಥ ಭಾವ ತಂದುಕೊಳ್ಳುತ್ತಾಳೆ. ಅದರಿಂದ ಆಕೆಯ ಭಾವನೆಗಳು ಅಸ್ತವ್ಯಸ್ತ ಆಗುತ್ತಿವೆ. ಇದರಿಂದ ಪಾರಾಗಲು ಕೂಟದ ಒಂದು ಹಂತದಲ್ಲಿ ಕ್ರಿಯೆಯಿಂದ ಕಳಚಿಕೊಳ್ಳುತ್ತ ತನ್ನಷ್ಟಕ್ಕೆ ತಾನಾಗುತ್ತಾಳೆ. ಶಾಮಾ ಕಳೆದು ಹೋಗುತ್ತಿರುವುದು ಸಲೀಲನ ಅರಿವಿಗೆ ಬರುತ್ತದೆ. ಹಾಗೆಂದು ಅವಳನ್ನು ಉಳಿಸಿಕೊಳ್ಳಲು ಅವನ ಸ್ಥೂಲಕಾಯ, ಅಸಾಮರ್ಥ್ಯ, ಅಸಹಾಯಕತೆ ಅಡ್ದಿಯಾಗುತ್ತ ಕೀಳರಿಮೆ ತರುತ್ತವೆ. ಕೊರತೆಯನ್ನು ತುಂಬಿಕೊಳ್ಳಲು ಆಕೆಯನ್ನು ತನ್ನೆಡೆ ಸೆಳೆಯಲೇಬೇಕು. ಸರಿ, ಆಕೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಲು ಶುರುಮಾಡುತ್ತಾನೆ. ತನಗೆ ಸುಖಕೊಟ್ಟು ಉಳಿಸಿಕೊಳ್ಳುವುದಕ್ಕೆ ಹೆಣಗುವುದನ್ನು ನೋಡಿ ಆಕೆಗೆ ಮರುಕ ಬರುತ್ತದೆ. ಒಲ್ಲೆಯೆನ್ನಲು ಮನಸ್ಸು ಬರುವುದಿಲ್ಲ. ಹೇಗೋ ಕೂಟ ಮುಗಿಯುತ್ತದೆ. ಸಂಗಾತಿಯ ಜೊತೆಗೆ ಬೆರೆಯಲಾರದ ವಿಷಾದಭಾವ ಇಬ್ಬರಿಗೂ ಕಾಡುತ್ತದೆ.
ಇತ್ತೀಚೆಗೆ ಶಾಮಾ ಇತರರ ಜೊತೆಗೆ ಬರುವ ಕಾಮಕಲ್ಪನೆಗಳನ್ನು ಸಲೀಲನ ಜೊತೆಗೇ ನೈಜವಾಗಿ ಅನುಭವಿಸಬೇಕು ಎಂದು ಮನಸ್ಸು ಮಾಡಿದ್ದಾಳೆ. ಹಾಗಾಗಿ ಅವಳು ಕೂಟದಲ್ಲಿ ಒಳಗೊಳ್ಳುವುದು ಸ್ವಲ್ಪ ಹೆಚ್ಚಾಗಿದೆ. ಅದರಿಂದ ಕಾಮಕೂಟವೂ ಹೆಚ್ಚುಹೆಚ್ಚಾಗಿ ನಡೆಯುತ್ತಿದೆ. ಹಾಗೆಂದು ತನಗೇನು ಬೇಕು ಅವಳು ಸ್ಪಷ್ಟವಾಗಿ ಹೇಳಿಕೊಳ್ಳದೆ ಇರುವುದರಿಂದ ಇವನಿಗೆ ಗೊತ್ತಾಗದೆ ಇನ್ನಷ್ಟು ಸಂಕಟಪಡುತ್ತಿದ್ದಾನೆ. ಸ್ಪಷ್ಟಪಡಿಸಲು ನೋಡಿದರೆ ಅವನ ಅಸಾಮರ್ಥ್ಯದ ಕಡೆಗೆ ಬೆರಳು ತೋರಿಸಿದಂತೆ ಆಗಿ ಇನ್ನಷ್ಟು ಅಂತರ್ಮುಖಿಯಾಗುತ್ತಾನೆ ಎಂಬುದು ಆಕೆಗೆ ನುಂಗಲಾರದ ತುತ್ತಾಗಿದೆ.
ಇನ್ನೊಂದು ಸಂಗತಿ ಎಂದರೆ, ಸಲೀಲನಿಗೆ ಉದ್ರೇಕವಾಗುವುದು ಬಹಳ ಬೇಗ. ಆಗವನು ಶಾಮಾಳನ್ನು ಬರಸೆಳೆಯುತ್ತಾನೆ. ಎಲ್ಲೆಲ್ಲೋ ಅಲೆಯುವ ಅವಳ ಮನಸ್ಸು ನೆಲೆನಿಲ್ಲುವ ತನಕ ತಾಳ್ಮೆಯಿಂದ ಕಾಯುತ್ತಾನೆ. ಪ್ರೀತಿ, ಕಾಳಜಿ ತೋರಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಅವನು ಮುಟ್ಟುವುದಕ್ಕೆ ಮುಂಚೆಯೇ ತನಗೆ ಉದ್ರೇಕ ಆಗಬೇಕು, ತಾನು ತಯಾರಾಗಿ ಅವನನ್ನು ಎದುರುಗೊಳ್ಳಬೇಕು, ಸಮನಾಗಿ ಸ್ಪಂದಿಸಬೇಕು ಎಂದು ಶಾಮಾಗೆ ಮಹದಾಸೆಯಿದೆ. ಹಾಗಾಗಿ ಅವನು ತನ್ನ ಶರೀರದಲ್ಲಿ ಮಾದಕತೆ (sexy) ಇರುವುದಕ್ಕಿಂತ ಹೆಚ್ಚಿಗಿದೆ ಎಂದು ತೋರಿಸಿಕೊಳ್ಳಲು ಹೊರಡುವಾಗ, ಆಕೆ “ಯೋಚಿಸಬೇಡ, ನನ್ನಲ್ಲೂ ಮಾದಕತೆ ಕಡಿಮೆಯಾಗುತ್ತಿದೆ” ಎಂದು ಭರವಸೆ ಕೊಡಲು ಹೊರಡುತ್ತಾಳೆ. ಒಬ್ಬರ ಆತಂಕಕ್ಕೆ ಇನ್ನೊಬ್ಬರು ಪ್ರತಿಕ್ರಿಯಿಸುವಾಗ ಇಬ್ಬರ ನಡುವೆ ನಡೆಯಬೇಕಾದುದು ನಡೆಯಲಾರದೆ ನರಳುತ್ತಿದೆ. ಇನ್ನು ಕೆಲವೊಮ್ಮೆ ಕೂಟ ಉತ್ಕೃಷ್ಟವಾಗಿ ಇಬ್ಬರೂ ತೃಪ್ತಿ ಹೊಂದಿದಾಗ, ಸಲೀಲ್ ಮುಂದಿನ ಕೂಟಕ್ಕೆ ಮನಸ್ಸು ಮಾಡುವುದಿಲ್ಲ – ಅದು ಮುಂಚಿನಷ್ಟು ಚೆನ್ನಾಗಿರದೆ ನಿರಾಸೆ ಆಗಬಹುದು ಎಂದು ಭಯಪಡುತ್ತಾನೆ. ಒಂದು ಯಶಸ್ವೀ ಕೂಟದ ನಂತರ ಇನ್ನೊಂದು ಯಶಸ್ವೀ ಕೂಟಕ್ಕೆ ಕಾಯುತ್ತ ಶಾಮಾಗೆ ನಿರಾಸೆ ಆಗುತ್ತದೆ.
ಸಲೀಲ್-ಶಾಮಾ ಅವರ ಸ್ಥಿತಿಯು ಅನೇಕ ದಾಂಪತ್ಯಗಳಲ್ಲಿ ಕಂಡುಬರುತ್ತದೆ. ಹೆಚ್ಚಿನವರು ಕೂಟದ ಬಗೆಗೆ ಯೋಚಿಸುತ್ತ, ಅದರಲ್ಲಿ ಏನೇನು ನಡೆಯಬಹುದು ಎಂದು ಕಲ್ಪಿಸಿಕೊಳ್ಳುತ್ತಾರೆ, ಹಾಗೂ ಅದಕ್ಕೆ ತಕ್ಕಂತೆ ತನಗೆ ಆಸಕ್ತಿ ಇಲ್ಲವೆಂದು ನಿರ್ಧರಿಸುತ್ತಾರೆ. ವಾಸ್ತವವಾಗಿ, ಕೂಟದ ಬಗೆಗೆ ಯೋಚಿಸುವುದೇ ಆಸಕ್ತಿ ಇರುವ ಲಕ್ಷಣ – ಯಾಕೆಂದರೆ ಆಗ ವಿಧವಿಧದ ಕಾಮದ ಕಲ್ಪನೆಗಳನ್ನು ತಂದುಕೊಳ್ಳುತ್ತಾರಷ್ಟೆ? ಹೀಗೆ ನಡೆದರೆ ತನಗೆ ಖುಷಿಯಾಗಿರುತ್ತದೆ, ಆದರೆ ಹಾಗೆ ನಡೆಯಲಾರದು ಎಂದುಕೊಳ್ಳುವಾಗ ಆಸಕ್ತಿ ಕುಂದುತ್ತದೆ. ಅಂದರೆ ಕಾಮಾಸಕ್ತಿ ವೈಯಕ್ತಿಕವಾಗಿ ಇರುತ್ತದಾದರೂ ಸಂಗಾತಿಯ ಜೊತೆ ಪ್ರತಿಕ್ರಿಯಿಸುವುದನ್ನು ನೆನೆಸಿಕೊಂಡರೆ ಕುಂದುತ್ತದೆ. ಇಂಥ ಸಂಗಾತಿಗಳು ಪರಸ್ಪರರನ್ನು ಮನದಲ್ಲಿ ಇಟ್ಟುಕೊಂಡು ಹಾಸಿಗೆಗೆ ಬರುತ್ತಾರೆ. ಆದರೆ ತಾನು ಹೇಗೆ ಮೈ ಸಡಿಲಬಿಟ್ಟು ಒಳಗೊಳ್ಳಬೇಕು ಎಂದು ಆರಾಮವಾಗಿ ಯೋಚಿಸುವುದರ ಬದಲು, ಸಂಗಾತಿಗೆ ಹೇಗೆ ಸ್ಪಂದಿಸಬೇಕು ಎಂದು ಬುದ್ಧಿ ಖರ್ಚು ಮಾಡುತ್ತಾರೆ. ಅವರ ಮೂಕ ಸಂವಹನದಲ್ಲಿ “ನೀನು ಹೀಗಿದ್ದೀಯಾ, ಹಾಗಾಗಿ ನಾನು ಹೇಗಿರಲಿ?” ಎಂಬ ನರಳಿಕೆಯಿದೆ.
ಇನ್ನೊಂದು ವಿಷಯ ಏನೆಂದರೆ, ಯಾವುದೇ ಇಬ್ಬರು ವ್ಯಕ್ತಿಗಳಲ್ಲಿ ಕಾಮಾಸಕ್ತಿಯು ಸಮನಾಗಿ ಇರುವುದಿಲ್ಲ. ಒಬ್ಬರಿಗೆ ಇನ್ನೊಬ್ಬರಿಗಿಂತ ಕಾಮಾಸಕ್ತಿ ಹೆಚ್ಚಿಗಿರುತ್ತದೆ. ಕಡಿಮೆ ಇರುವವರು ತನಗೆ ಬೇಡವೆಂದು ನಿರಾಕರಿಸುವಾಗ ಹೆಚ್ಚಿಗಿರುವವರು ಅವರನ್ನು ತಯಾರು ಮಾಡಲು ಹೊರಡುತ್ತಾರೆ. ಮೈಮೇಲೆ ಬೀಳುವುದು, ಜನನಾಂಗಕ್ಕೆ ಕೈಹಾಕುವುದು ಇತ್ಯಾದಿ ನಡೆಯುತ್ತದೆ. ಕೆಲವೊಮ್ಮೆ ಇದು ಕೆಲಸ ಮಾಡಬಹುದು. ಮುಖ್ಯವಾಗಿ, ಹೆಚ್ಚು ಕಾಮಾಸಕ್ತಿ ಇರುವವರ ಮೇಲೆಯೆ ಸಂಗಾತಿಯನ್ನು ಒಲಿಸುವ ಹೊಣೆ ಬೀಳುತ್ತದೆ. ತನ್ನ ಪ್ರಯತ್ನವನ್ನು ಸಂಗಾತಿ ಒಪ್ಪಿಕೊಳ್ಳದಿದ್ದರೆ? ಆತ್ಮಶಂಕೆಯಿಂದ ಆತಂಕ ಉಂಟಾಗಿ ಅವರ ಕಾಮಾಸಕ್ತಿಯೂ ಕಡಿಮೆ ಆಗುತ್ತದೆ.
ಇದರರ್ಥ ಏನು? ಹೆಚ್ಚಿನ ಜೋಡಿಗಳಲ್ಲಿ ಕಾಮಕೂಟ ಎಂದರೆ ಸಂಗಾತಿಯನ್ನು ಮೆಚ್ಚಿಸುವುದೇ ಆಗುತ್ತದೆ. ಆಗ ತಾನು ಬಯಸುವ ಸುಖದ ಜೊತೆಗೆ ಸಂಪರ್ಕ ಸಾಧಿಸಲು ಆಗುವುದಿಲ್ಲ. ತನ್ನತನ ಹಿಂದುಳಿಯುತ್ತ ಕೊನೆಗೆ ಕಳೆದೇ ಹೋಗುತ್ತದೆ. ಆಗ ಕಾಮಕೂಟವೇ ಬೇಡವೆನ್ನಿಸುತ್ತದೆ.
ಇದರ ಬಗೆಗೆ ಇನ್ನಷ್ಟು ಮುಂದಿನ ಸಲ ತಿಳಿಯೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.