ಸುಖೀ ದಾಂಪತ್ಯ ೨೧೯
ವಿವಾಹೇತರ ಲೈಂಗಿಕ ಸಂಪರ್ಕದ ಹೆಚ್ಚಳವನ್ನು ನೋಡಿದರೆ ಲೈಂಗಿಕ ಸಂಬಂಧಗಳು ದಾಂಪತ್ಯದಿಂದ ಕಳಚಿಕೊಳ್ಳುತ್ತಿರುವುದು ಎದ್ದುಕಾಣುತ್ತದೆ.
219: ಆಧುನಿಕ ದಾಂಪತ್ಯಗಳು – 4
ಆಧುನಿಕ ದಾಂಪತ್ಯಗಳು ಹಿಡಿಯುತ್ತಿರುವ ಕವಲುದಾರಿಯ ಬಗೆಗೆ ಚರ್ಚಿಸುತ್ತಿದ್ದೇವೆ. ಈ ಸಲ ಲೈಂಗಿಕ ಕ್ರಿಯೆ ಹಾಗೂ ಬಾಂಧವ್ಯದ ಬಗೆಗೆ ಕೆಲವು ವಿಚಾರಗಳನ್ನು ತಿಳಿಯೋಣ.
ಮುಂಚೆ ದಾಂಪತ್ಯದೊಳಗೆ ನಡೆಯುತ್ತಿದ್ದ ಲೈಂಗಿಕ ಕ್ರಿಯೆಗೆ ಬಾಂಧವ್ಯ ಬೇಕೇಬೇಕು ಎಂದಿರಲಿಲ್ಲ. ವೈವಾಹಿಕ ಸಂಬಂಧ ಬೆಳೆಸುವುದು ಸಂತಾನೋತ್ಪತ್ತಿಗಾಗಿ ಹಾಗೂ ಗಂಡಿನ ಸುಖಕ್ಕಾಗಿ – ಅದಕ್ಕೆಂದೇ ಅಪರಿಚಿತರು ಮದುವೆಯಾದರೂ ಸಂಭೋಗ ನಡೆಯಲೇಬೇಕಿತ್ತು – ಆದುದರಿಂದ, ಮೊದಲ ರಾತ್ರಿ ಹಾಸಿಗೆ ರಕ್ತವಾಗದಿದ್ದರೆ ಏನೇನೋ ಅಂದುಕೊಳ್ಳುವ ಸಮುದಾಯಗಳು ಈಗಲೂ ಇವೆ. ಹಾಗೆಂದು ಹೆಣ್ಣುಗಂಡುಗಳ ನಡುವೆ ಪ್ರೀತಿಯ ವ್ಯವಹಾರ ಇರಲಿಲ್ಲ ಎಂದಲ್ಲ. ಆದರೆ “ಮೈಸೂರು ಮಲ್ಲಿಗೆ”ಯಂಥ ಅರ್ಥವತ್ತಾದ ದಾಂಪತ್ಯಗಳು ಅಪರೂಪವಾಗಿದ್ದುವು. ಮಹತ್ವದ ಅಂಶವೆಂದರೆ, ಆಗಿನ ನವವಿವಾಹಿತರಿಗೆ ಮಾಡಲು ಕೈತುಂಬ ಕೆಲಸವಿತ್ತೇ ವಿನಾ ಈಗಿನವರಿಗೆ ಇರುವಷ್ಟು ಜವಾಬ್ದಾರಿ ಇರಲಿಲ್ಲ. ಯಾಕೆಂದರೆ ಸಂಪಾದನೆಯ ಹೊಣೆ ಇಡೀ ಕುಟುಂಬದ್ದು, ಹೆಂಡತಿಯ ಹೊಣೆ ಅತ್ತೆಯದು, ಸಂತಾನದ ಹೊಣೆ ಎರಡೂ ಕಡೆಯ ಹಿರಿಯರದು ಆಗಿತ್ತು. ಜವಾಬ್ದಾರಿ ಹಾಗೂ ಕರ್ತವ್ಯಗಳು ತೆಗೆದುಹಾಕಿದರೆ ಕೇವಲ ಲೈಂಗಿಕ ಸಂಬಂಧ ಮಾತ್ರ ಉಳಿಯುತ್ತದೆ. ತಾಯ್ತಂದೆಯರಿಗೆ ವಿಧೇಯರಾದರೆ ಸಾಕೇ ಸಾಕಿತ್ತು. ಹಾಗಾಗಿ ಸಂಭೋಗಕ್ಕೆ ಸಾಮರ್ಥ್ಯ ಬಂದರೆ ದಾಂಪತ್ಯ ನಡೆಸುವ ಸಾಮರ್ಥ್ಯ ಬಂದಿದೆ ಎಂದು ತಪ್ಪು ತಿಳಿಯಲಾಗುತ್ತಿತ್ತು.
ಮುಂಚಿನ ದಾಂಪತ್ಯಗಳಲ್ಲಿ ಹೆಣ್ಣಿನ ಸ್ಥಾನ ಏನಿತ್ತು? ಹೆಣ್ಣು ಗಂಡನಿಗೆ ವಿಧೇಯಳಾಗಿ, ಅವನ ಅಗತ್ಯಗಳನ್ನು ಪೂರೈಸುತ್ತ, ಕೇಳಿದಾಗ ಮೈ ಒಪ್ಪಿಸಿಕೊಳ್ಳುತ್ತ, ಮಗು ಹೆರುವ ವ್ಯಕ್ತಿಯೆಂದು ಭಾವಿಸಲಾಗುತ್ತಿತ್ತು (“ಕಾರ್ಯೇಷು ದಾಸಿ…ಶಯನೇಷು ವೇಶ್ಯಾ…”). ಆಕೆಯ ಬದುಕಿನಲ್ಲಿ ಏನೇ ಸಿಗದಿದ್ದರೂ ತಾಯ್ತನ ಒಂದು ಸಿಕ್ಕರೆ ಸಾಕು, ಜನ್ಮ ಸಾರ್ಥಕ ಎಂದು ನಂಬಲಾಗುತ್ತಿತ್ತು. ಆಕೆಗೂ ಪ್ರತ್ಯೇಕವಾದ ಲೈಂಗಿಕ ಬಯಕೆಗಳು ಹಾಗೂ ಸ್ವಂತ ಅಸ್ಮಿತೆ ಇರುವುದು ಅಷ್ಟಾಗಿ ಮಹತ್ವ ಪಡೆದಿರಲಿಲ್ಲ. ಸುಖ ಸಿಗುತ್ತಿಲ್ಲ ಎಂದು ದೂರಿದರೆ, ಮಕ್ಕಳ ಮುಖನೋಡಿ ನುಂಗಿಕೊಳ್ಳಲು ಹೇಳಲಾಗುತ್ತಿತ್ತು.
ಇದಕ್ಕೆ ಹೋಲಿಸಿದರೆ, ಆಧುನಿಕ ಹೆಣ್ಣುಗಂಡುಗಳ ಸಂಬಂಧಗಳಲ್ಲಿ ಅಭೂತಪೂರ್ವ ಬದಲಾವಣೆ ಆಗುತ್ತಿದೆ ಎಂದೆನಿಸುತ್ತದೆ. ಈಗಿನವರು ಹೆಚ್ಚಿನಂಶ ಬಾಂಧವ್ಯವನ್ನು ಬಯಸುತ್ತಾರೆ. ಸಮಾನ ಸ್ನೇಹಪರತೆಯೇ ಇವರನ್ನು ಪರಸ್ಪರ ಸೆಳೆಯುವ ಸೂಜಿಗಲ್ಲಾಗಿದೆ. ಹೆಂಗಸರು ಹೆಚ್ಚು ಹೆಚ್ಚು ಪ್ರಜ್ಞಾವಂತರಾಗುತ್ತ ತಮ್ಮ ಭಾವನೆಗಳೊಂದಿಗೆ ವಿವೇಚನೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.
ಇತ್ತೀಚಿನ ಯುವಕ-ಯುವತಿಯರ ಸಂಬಂಧದಲ್ಲಿ ಲೈಂಗಿಕತೆಯ ಪಾತ್ರವು ವಿಶಿಷ್ಟವಾಗಿದ್ದು, ತನ್ನದೇ ರೀತಿಯ ಮಹತ್ವ ಪಡೆಯುತ್ತಿದೆ. ವಿವಾಹಕ್ಕೆ ಹೊರತಾದ ಲೈಂಗಿಕ ಸಂಬಂಧಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಲೈಂಗಿಕ ಸಂಬಂಧಗಳು ವಿವಾಹದಿಂದ ಕಳಚಿಕೊಳ್ಳುತ್ತಿರುವುದು ಎದ್ದು ಕಾಣುತ್ತದೆ. ಇಲ್ಲಿ ಹೆಣ್ಣಿನ ಆಯ್ಕೆಗೆ ಪ್ರಾಮುಖ್ಯತೆ ಇರುವುದು ವೈಶಿಷ್ಟ್ಯ. ಹುಡುಗಿಯರು ಒಡನಾಟದ (dating) ಶುರುವಿನಲ್ಲೇ ಕಾಮಕೂಟಕ್ಕೆ ಹಾತೊರೆಯುವ ಹುಡುಗರನ್ನು (ತಮಗೆ ಇಷ್ಟವಿಲ್ಲದಿದ್ದರೆ) ದೂರವಿಡುವುದು ಇನ್ನೊಂದು ವೈಶಿಷ್ಟ್ಯ – ಇಷ್ಟೊಂದು ಸ್ವಂತಿಕೆಯು ಹೆಣ್ಣಿಗೆ ಮುಂಚೆಯೆಂದೂ ಇರಲಿಲ್ಲ. ಮೂವತ್ತು ವರ್ಷಗಳ ಹಿಂದೆ ನಮ್ಮ ಕೆಲಸದವಳು ತನ್ನ ಸ್ನೇಹಿತನನ್ನು ಕೂಡಲು ಹೊರಟಿದ್ದಳು. ಗರ್ಭಿಣಿಯಾದರೆ ಏನು ಗತಿ ಎಂದು ಕೇಳಿದಾಗ, ಇನ್ನೇನು ನೇಣು ಹಾಕಿಕೊಳ್ಳಬೇಕಷ್ಟೆ ಎಂದಳು. ಸಂಭೋಗ ಬೇಡ ಎನ್ನಬಹುದಲ್ಲವೆ ಎಂದಿದ್ದಕ್ಕೆ, ಹಾಗೆ ಮಾಡಿದರೆ ಸ್ನೇಹಿತನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದಳು.
ಮುಂಚಿನ ತಲೆಮಾರಿನಲ್ಲಿ ವಿವಾಹಪೂರ್ವ ಲೈಂಗಿಕ ಸಂಪರ್ಕಕ್ಕೆ ನಿಷೇಧವಿದ್ದಂತೆ ಸಂಪರ್ಕ ನಡೆದ ನಂತರ ಮದುವೆಗೆ ಒಪ್ಪದಿರುವುದು ಕೂಡ ಸಮಾಜದ ನಿಯಮಕ್ಕೆ ವಿರುದ್ಧವಾಗಿತ್ತು. ಅಷ್ಟೇ ಅಲ್ಲ, ಹುಡುಗ-ಹುಡುಗಿ ಓಡಾಡಿಕೊಂಡಿದ್ದಲ್ಲಿ ಮದುವೆ ಆಗಲೇಬೇಕು ಎನ್ನುವ ಕಾಲವಿತ್ತು.. ಒಂದೇ ಒಂದು ಸಲ ಲೈಂಗಿಕ ಸಂಪರ್ಕ ನಡೆದಿರುವ ಕಾರಣಕ್ಕಾಗಿ ದಾಂಪತ್ಯಕ್ಕೆ ಅಯೋಗ್ಯರನ್ನು ಮದುವೆ ಆಗುವ ಪ್ರಸಂಗವಿತ್ತು. ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ, ಅವನನ್ನೇ ಮದುವೆ ಆದವರೂ ಇದ್ದಾರೆ. ನಲವತ್ತು ವರ್ಷಗಳ ಹಿಂದೆ ಸಂಪ್ರದಾಯಸ್ಥ ಕುಟುಂಬದ ಹದಿಹರೆಯದ ಹುಡುಗಿ ಬಂದಿದ್ದಳು. ಆಕೆಗೆ ಮುಟ್ಟು ತಪ್ಪಿತ್ತು. ಸ್ನೇಹಿತ ತನ್ನನ್ನು ಮದುವೆಯಾಗುತ್ತಾನೆ ಎಂದು ಆತ್ಮವಿಶ್ವಾಸದಿಂದ ಹೇಳಿದಳು. ಅವನು ತನ್ನ ತಾಯ್ತಂದೆಯರನ್ನು ಒಪ್ಪಿಸಲು ಹೋದವನು ಮರಳಲೇ ಇಲ್ಲ. ಆಗ ಅವಳು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ವಿರಹ, ಖಿನ್ನತೆ, ರಹಸ್ಯ ಗರ್ಭಪಾತದ ನೋವು, ಮನೆಯವರಿಂದ ತಿರಸ್ಕಾರ, ಒಂಟಿತನ, ಶಿಕ್ಷಣದಲ್ಲಿ ಹಿಂದುಳಿದುದು… ಇದೆಲ್ಲದರಿಂದ ಹೊರಬರಲು ಐದು ವರ್ಷ ತೆಗೆದುಕೊಂಡಳು. ಹೀಗೆ ವಿವಾಹಪೂರ್ವ ಲೈಂಗಿಕ ಕ್ರಿಯೆಯು ಮದುವೆ ಆದರೂ ಆಗದಿದ್ದರೂ ಹೆಣ್ಣಿನ ಸ್ವಂತಿಕೆಗೆ ಮಾರಕವಾಗುತ್ತಿತ್ತು.
ಒಂದುಕಡೆ ವಿವಾಹದ ಹೊರತಾದ ಲೈಂಗಿಕತೆಯ ಅಭಿವ್ಯಕ್ತಿಯು ಹೆಚ್ಚಾಗುತ್ತಿರುವಾಗ ಇನ್ನೊಂದು ಕಡೆ ದಾಂಪತ್ಯಗಳಲ್ಲಿ ಲೈಂಗಿಕ ಬದುಕು ಮಹತ್ವ ಕಳೆದುಕೊಳ್ಳುತ್ತ ಸಾಂಗತ್ಯವು ಹೆಚ್ಚು ಮಹತ್ವದ್ದಾಗುತ್ತಿದೆ. ಮದುವೆಯ ಹೆಸರಿನಲ್ಲಿ ಒತ್ತಾಯದ ಲೈಂಗಿಕ ಕ್ರಿಯೆಗೆ ಒಳಗಾಗುವುದು ತೀರ ಕಡಿಮೆಯಾಗಿದೆ. ಗಂಡುಹೆಣ್ಣುಗಳಿಬ್ಬರೂ ಲೈಂಗಿಕತೆಯ ವಿಷಯದಲ್ಲಿ ಸ್ವಂತಿಕೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮದುವೆ ಆಗಿರುವುದನ್ನು ಪಕ್ಕಕ್ಕಿಟ್ಟು, ತನಗೆ ಲೈಂಗಿಕ ಕ್ರಿಯೆ ಬೇಕೇ ಬೇಡವೆ ಎಂಬ ಆಯ್ಕೆಯನ್ನು ಮಾಡುತ್ತಿದ್ದಾರೆ. ಹಿತ ಎನ್ನಿಸುವ ಲೈಂಗಿಕ ಸಂಪರ್ಕ ಶುರುವಾಗಲು ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಾರೆ. ಒಬ್ಬರು ಸಮಯ ಕೇಳಿದರೆ ಇನ್ನೊಬ್ಬರು ಸ್ನೇಹದಿಂದ ಸ್ಪಂದಿಸುತ್ತಾರೆ. ವಿವಾಹಿತರಲ್ಲಿ ಸಾಂಗತ್ಯ ಭದ್ರವಾಗಿ ಒಂದು ಮಟ್ಟದ ನಂಬಿಕೆ ಬರುವ ತನಕ ಲೈಂಗಿಕ ಸಂಪರ್ಕವನ್ನು ಮುಂದೂಡುವುದು ಸಾಮಾನ್ಯವಾಗಿದೆ. ಹೀಗೆ ಇತ್ತೀಚಿನ ದಂಪತಿಗಳು ಮುಂಚಿನವರಂತೆ ಲೈಂಗಿಕ ಕ್ರಿಯೆಯನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಳ್ಳದಿರುವುದು ಗಮನಾರ್ಹ. ಅದರೆ, ಇದು ಹಿರಿಯರಿಗೆ ನುಂಗಲಾರದ ತುತ್ತಾಗಿದೆ – ಅದನ್ನು ಅವರು ಮಗು ಏಕೆ ಆಗಿಲ್ಲವೆಂದು ಎಂದು ಪರೋಕ್ಷವಾಗಿ ಪ್ರಶ್ನಿಸುತ್ತಿದ್ದಾರೆ. ವಿಚಿತ್ರ ಏನೆಂದರೆ, ಹೊಂದಾಣಿಕೆ ಇರುವ ದಾಂಪತ್ಯಗಳಲ್ಲೂ ಕಾಮಕೂಟದ ಆವೃತ್ತಿ ಇಳಿಮುಖ ಆಗುತ್ತಿದೆ. ಇದಕ್ಕೆ ಹೊತ್ತು ಕಳೆಯುವ ಇತರ ರೀತಿಗಳು ಕಾರಣ ಆಗಿರಬಹುದು.
ಪ್ರೇಮವಿವಾಹಗಳ ಬಗೆಗೆ ಹಿರಿಯರ ಕಲ್ಪನೆಗಳನ್ನು ಸ್ವಲ್ಪ ತಿಳಿಯೋಣ. ಮಕ್ಕಳ ಪ್ರೇಮವಿವಾಹಗಳು ತಮ್ಮ ವಿರುದ್ಧ ನಡೆಯುತ್ತವೆ ಎಂದು ಅನೇಕ ಹಿರಿಯರು ತಿಳಿದಿದ್ದಾರೆ. ಇದು ತಮ್ಮ ವಿರುದ್ಧ ಮಾಡುವ ಮಸಲತ್ತಿನಂತೆ ನೋಡುತ್ತಾರೆ (ಉದಾ. “ಮಾಂಸಾಹಾರಿ ಹುಡುಗಿಯನ್ನು ಪ್ರೀತಿಸಿದ್ದು ನಮ್ಮ ನೀತಿಯನ್ನು ಕೆಡಿಸಲಿಕ್ಕೆ”). ವಾಸ್ತವಿಕತೆ ಹಾಗಿಲ್ಲ. ಮಕ್ಕಳು ತಾವು ಆರಿಸಿದ ಸಂಗಾತಿಯನ್ನು ಹಿರಿಯರು ಒಪ್ಪುವಂತೆ ಮಾಡಲು ಹರಸಾಹಸ ಮಾಡುತ್ತಾರೆ. ಬೆಳಿಗ್ಗೆ ಪಾರ್ಕಿನಲ್ಲಿ ಹಲವು ಪ್ರೇಮಿಗಳು ಮಾತಾಡುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಇವರು ತಮ್ಮ ತಾಯ್ತಂದೆಯರನ್ನು ಮನವೊಲಿಸುವುದರ ಬಗೆಗೆ ತಿಂಗಳುಗಟ್ಟಲೆ ಚರ್ಚೆ ನಡೆಸುತ್ತಾರೆ. ಯಾಕೆ? ಹಿರಿಯರು ಜಾತಿ, ಅಂತಸ್ತು, ಹಾಗೂ ತಮ್ಮ ಹಟಮಾರಿತನಕ್ಕೆ ಮಹತ್ವ ಕೊಡುತ್ತಾರೆ. ಇದರಿಂದ ಏನು ಗೊತ್ತಾಗುತ್ತದೆ? ಹಿರಿಯರು ಮಕ್ಕಳನ್ನು ನಂಬುತ್ತಿಲ್ಲ. ಕಾರಣ? ತಮ್ಮದೇ ಆದ ಗೊಂದಲಮಯ ಸ್ಥಿತಿಯ ಕಾರಣದಿಂದ ಮಕ್ಕಳನ್ನು ಚೆನ್ನಾಗಿ ಬೆಳೆಸಿಲ್ಲ ಎಂಬ ತಪ್ಪಿತಸ್ಥ ಭಾವ ಅವರನ್ನು ಕಾಡುತ್ತದೆ. ಒಂದುವೇಳೆ ಮಕ್ಕಳನ್ನು ಸರಿಯಾಗಿ ಬೆಳೆಸಿದುದರ ಬಗೆಗೆ ಆತ್ಮವಿಶ್ವಾಸ ಇದ್ದರೆ ಅವರನ್ನೂ ಅವರ ಆಯ್ಕೆಯನ್ನೂ ಮೆಚ್ಚುತ್ತಿದ್ದರು.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.