ಸುಖೀ ದಾಂಪತ್ಯ ೨೪೯
ಗರ್ಭಧಾರಣೆಗೆ ಇಪ್ಪತ್ತೆಂಟಕ್ಕೂ ಮೂವತ್ತೆಂಟಕ್ಕೂ ವಿಶೇಷ ವ್ಯತ್ಯಾಸವಿಲ್ಲ ಎಂದು ಅಧ್ಯಯನ ತಿಳಿಸುತ್ತದೆ.
249: ಮಗು ಬೇಕೆ? ಏಕೆ? – 2
ಮದುವೆಯ ನಂತರ ಬೇಗ ಮಗುವಾದಷ್ಟೂ ಒಳ್ಳೆಯದು ಎನ್ನುವ ಸಾರ್ವಜನಿಕ ನಂಬಿಕೆಯನ್ನು ಒರೆಗಲ್ಲಿಗೆ ಹಚ್ಚುತ್ತಿದ್ದೇವೆ. ಶಿಕ್ಷಣ ಆದಮೇಲೆ ಉದ್ಯೋಗ, ಉದ್ಯೋಗ ಸಿಕ್ಕಮೇಲೆ ಮದುವೆ, ಮದುವೆಯ ನಂತರ ಮಗು, ಮಗುವಾಗುವ ತನಕ ಆತಂಕ, ಅನಿಶ್ಚಿತತೆ, ನಂತರ ಅದನ್ನು ಬೆಳೆಸುವ ಆತಂಕ… ಇದನ್ನೆಲ್ಲ ನೋಡಿದರೆ ನಮ್ಮ ಯುವದಂಪತಿಗಳು ಏನನ್ನು ಬೆನ್ನಟ್ಟಿ ಹೊರಟಿದ್ದಾರೆ, ಹಾಗೂ ಎಲ್ಲಿಗೆ ಮುಟ್ಟುತ್ತಿದ್ದಾರೆ ಎಂದು ಯಾರೂ ತಲೆ ಕೆಡಿಸಿಕೊಂಡಂತಿಲ್ಲ.
ಮಗು ಮಾಡಿಕೊಳ್ಳುವ ಅವಸರಕ್ಕೆ ಪರಿಸರದ ಒತ್ತಡವಲ್ಲದೆ ಇನ್ನೊಂದು ಬಲವಾದ ಕಾರಣವೂ ಇದೆ. ಅದನ್ನು ಸ್ಪಷ್ಟಪಡಿಸಲು ನನ್ನದೇ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಮೂವತ್ತೆರಡು ವರ್ಷದ ನನ್ನ ಸಂಬಂಧಿ ಯುವತಿ ಆರು ವರ್ಷದಿಂದ ವಿವಾಹಿತಳಾಗಿದ್ದು, ಮುಟ್ಟಿನ ತೊಂದರೆ ಅನುಭವಿಸುತ್ತಿದ್ದಳು. ಆಕೆಯನ್ನು ನಮ್ಮ ಸ್ನೇಹಿತೆ ಸ್ತ್ರೀವೈದ್ಯರ ಹತ್ತಿರ ಕಳಿಸಿಕೊಟ್ಟೆ. “ಈಕೆಗೆ ಗರ್ಭಧಾರಣೆ ಬೇಕಿಲ್ಲ, ಕೇವಲ ಮುಟ್ಟಿನ ತೊಂದರೆಗೆ ಮಾತ್ರ ಬರುತ್ತಿದ್ದಾಳೆ” ಎಂದು ಮುಂಚೆಯೇ ಎಚ್ಚರಿಸಿದ್ದೆ. ಮರಳಿದ ಯುವತಿ ಅತೀವ ಬೇಸರದಿಂದ ಹೇಳಿಕೊಂಡಳು: ತನಗೆ ಮಗು ಬೇಕಿಲ್ಲ ಎಂದದ್ದನ್ನು ವೈದ್ಯೆ ಕಿವಿಯಮೇಲೆ ಹಾಕಿಕೊಳ್ಳಲೇ ಇಲ್ಲ. ಬದಲಾಗಿ ಫಲವತ್ತತೆಯ ಪರೀಕ್ಷೆಗೆ ಒಳಪಡಿಸಿ ಸಾವಿರಾರು ಕಿತ್ತರು. ನಂತರ ನಿರ್ಣಯ ಕೊಟ್ಟರು: “ನಿನ್ನಲ್ಲಿ ಅಂಡಾಣುಗಳ ಸಂಗ್ರಹ ಕಡಿಮೆ ಆಗುತ್ತಿದೆ. ಹಾಗಾಗಿ ಬೇಗ ಗರ್ಭ ಧರಿಸಿದಷ್ಟೂ ಒಳ್ಳೆಯದು!” ಆಮೇಲೆ ನನಗೆ ನೆನಪಾಯಿತು – ಅವರು ಇತ್ತೀಚೆಗೆ ಗರ್ಭಧಾರಣೆಯ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ!
ವೈದ್ಯರ ವ್ಯಾಧಿ:
ನನ್ನ ಪ್ರಕಾರ ವೈದ್ಯರಿಗೆ ಎರಡು ’ಕಾಯಿಲೆ’ಗಳಿವೆ. ಒಂದು: ರೋಗಿಗಳು ಏನೇ ಉದ್ದೇಶದಿಂದ ಬಂದರೂ ಅದೇನೆಂದು ಯೋಚಿಸದೆ ತಮ್ಮ ಪರಿಣಿತಿಯನ್ನು ಹುಡುಕಿಕೊಂಡು ಬಂದಿದ್ದಾರೆ ಎಂದೇ ಭ್ರಮಿಸಿ, ತಜ್ಞಬುದ್ಧಿಯು ತೋರಿಸುವ ದಾರಿಯಲ್ಲೇ ಮುಂದೆ ಸಾಗುವುದು. (ಇದಕ್ಕೆ ನಾನೂ ಹೊರತಲ್ಲ. ಇಪ್ಪತ್ತು ವರ್ಷಗಳ ಹಿಂದೆ ಶಿಶ್ನದೌರ್ಬಲ್ಯವನ್ನು ಮುಂದುಮಾಡಿಕೊಂಡು ಬಂದ ನವವಿವಾಹಿತನಿಗೆ ಔಷಧಿ ಬರೆಯಲು ಹೊರಟಾಗ, ಆತ ನನ್ನನ್ನು ತಡೆದು ಹೇಳಿದ: “ಇಲ್ಲ ಡಾಕ್ಟರ್, ನನಗೆ ಸಂಭೋಗ ಸಾಮರ್ಥ್ಯ ಬೇಕಾಗಿಲ್ಲ. ಸಂಭೋಗಕ್ಕೆ ಅಸಮರ್ಥ ಎಂದು ದೃಢೀಕರಣ ಪತ್ರ ಬೇಕು.” ಯಾಕೆ? ಒತ್ತಾಯದ ಮದುವೆಯಿಂದ ಬಿಡುಗಡೆ ಬೇಕಿದೆ!)
ಎರಡು: ತಜ್ಞರು ತಮ್ಮ ತಜ್ಞತೆಯ ಚೌಕಟ್ಟಿನೊಳಗೆ ಮಾತ್ರ ಯೋಚಿಸುತ್ತಾರೆಯೇ ಹೊರತು ಅದರ ಹೊರಗಲ್ಲ. ಅವರ ಪಾಂಡಿತ್ಯವು ಕೊಡುವ ದೃಢತೆಯು ಅದರಾಚೆಗಿರುವ ಅನಿಶ್ಚಿತೆಯನ್ನು ಎದುರುಹಾಕಿಕೊಳ್ಳಲು ಅವಕಾಶ ಕೊಡುವುದಿಲ್ಲ. ಉದಾಹರಣೆಗೆ, ಸರ್ವಪರೀಕ್ಷೆಗಳ ನಂತರ, “ನಿನಗೇನೂ ತೊಂದರೆಯಿಲ್ಲ, ಹಾಗಾಗಿ ಔಷಧಿ ಬೇಕಾಗಿಲ್ಲ” ಎಂದು ಆತ್ಮವಿಶ್ವಾಸದಿಂದ ಬೆನ್ನುತಟ್ಟಿ ಬರಿಗೈಯಲ್ಲಿ ಬೀಳ್ಕೊಡುವ ವೈದ್ಯರು ಎಷ್ಟಿದ್ದಾರೆ? ಪ್ರತಿ ವೈದ್ಯರನ್ನೂ “ಕಲಿತ ಆತ್ಮಸಾಕ್ಷಿ” ಕಾಡುತ್ತಿದ್ದು, ಕಣ್ತಪ್ಪಿನ ಪರಿಣಾಮದಿಂದ ಅಚಾತುರ್ಯ ಸಂಭವಿಸುವ ಭಯವಿರುತ್ತದೆ (ನಾಳೆ ಏನಾದರೂ ಹೆಚ್ಚುಕಡಿಮೆ ಆದರೆ?!). ಹೀಗಾಗಿ ನವನಿವಾಹಿತರು ಪ್ರಸೂತಿ ತಜ್ಞರಲ್ಲಿ ಹೋದಾಗ, “ಇಪ್ಪತ್ತೆಂಟರೊಳಗೆ ಎರಡು ಮಕ್ಕಳನ್ನು ಮಾಡಿಕೊಂಡುಬಿಡಿ. ಆಮೇಲೆ ನಿರಾಳವಾಗಿ ಇರಬಹುದು” ಎನ್ನುವ ಉಪದೇಶ ಬರುತ್ತದೆ. ಇಲ್ಲಿ ಮಾಡಿಮುಗಿಸಿ ಕೈತೊಳೆದುಕೊಳ್ಳುವ ಸೂಚನೆಯಿದೆ. ಆದರೆ ಮಗು ಹುಟ್ಟಿದಮೇಲೆ ಮುಗಿಯುವುದಲ್ಲ, ಬದುಕಿನ ಹೊಸ ಆಯಾಮ ಶುರುವಾಗುತ್ತದೆ ಎನ್ನುವುದು ವಾಸ್ತವ.
ಆದಷ್ಟು ಬೇಗ ಮಗುವಾಗಬೇಕು ಎನ್ನುವುದಕ್ಕೆ ಸಹಜ ಕಾರಣವೊಂದಿದೆ: ಗರ್ಭಧಾರಣೆಗೆ ದೇಹಸ್ಥಿತಿ ಹಾಗೂ ಧಾರಣಾಶಕ್ತಿ ಪ್ರಶಸ್ತವಾಗಿರುತ್ತದೆ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಮಗುವನ್ನು ಬೆಳೆಸಲು ಅತ್ಯಗತ್ಯವಾದ ಮಾನಸಿಕ ಸಿದ್ಧತೆ ಹಾಗೂ ಭಾವನಾತ್ಮಕ ಪಕ್ವತೆಯನ್ನು ಅಲಕ್ಷಿಸುತ್ತಿದ್ದೇವೆ. ಪರಿಣಾಮ? ಅನೇಕ ಮಕ್ಕಳ ತಾಯ್ತಂದೆಯರು ತಾವೇ ಸ್ವತಃ ಮಕ್ಕಳಂತೆ ಗೊಂದಲದಲ್ಲಿ ಇರುವುದನ್ನು ಕಂಡಿದ್ದೇನೆ – ಅಳುವ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಕೂಡಿಸುವವರು ಇದಕ್ಕೊಂದು ಉದಾಹರಣೆ. ಅಕಾಲದ ಮಗುವು ದಾಂಪತ್ಯದ ಸಂಬಂಧದ ಮೇಲೆ ಅನಿಷ್ಟ ಪರಿಣಾಮ ಉಂಟುಮಾಡುತ್ತದೆ. ಈ ನವದಂಪತಿಯು ವಿದೇಶದಲ್ಲಿ ಕೆಲಸದಲ್ಲಿದ್ದು ಮಧುಚಂದ್ರದ ಲಹರಿಯಲ್ಲಿ ಇರುವಾಗಲೇ ಕಾಂಡೋಮ್ ವಿಫಲಗೊಂಡು ಗರ್ಭಕಟ್ಟಿತು. ಆಘಾತದಿಂದ ಹಿರಿಯರಿಗೆ ಕರೆಮಾಡಲಾಗಿ ಗರ್ಭಪಾತಕ್ಕೆ ಒಪ್ಪದೆ ಮುಂದುವರಿಸಲು ಸೂಚಿಸಿದರು. ಇದಾಗಿ ಏಳು ವರ್ಷಗಳಾಯಿತು, ಇಬ್ಬರೂ ಮಗುವನ್ನು ಇಷ್ಟಪಡಲು “ಕಲಿತಿ”ದ್ದರೂ ಆಘಾತದಿಂದ ಹೊರಬಂದಿಲ್ಲ. ಎಗ್ಗು-ಸಿಗ್ಗಿಲ್ಲದ ಕಾಮಕೂಟಗಳ ಬಿಂದಾಸ್ ಅವಕಾಶವು ಮತ್ತೆಂದೂ ಮರಳಲಾರದು ಎನ್ನುವ ವ್ಯಥೆ ಅವರಿಗಿದೆ. ನನ್ನ ಪ್ರಶ್ನೆ ಏನೆಂದರೆ, ಪ್ರತಿಯೊಂದೂ ಆಯಾ ವಯಸ್ಸಿಗೆ ತಕ್ಕಂತೆ ಆಗಲಿ ಎನ್ನುವುದು ಕಾಮೇಚ್ಛೆಯ ಪೂರೈಕೆಗೆ ಯಾಕೆ ಅನ್ವಯವಾಗುವುದಿಲ್ಲ?
ವೈದ್ಯರ ಈ ವ್ಯಾಧಿಯು ಅಮೆರಿಕದಂಥ ದೇಶಗಳಲ್ಲೂ ಬಿಟ್ಟಿಲ್ಲ. ಅದಕ್ಕೊಂದು ದೃಷ್ಟಾಂತ: ಅರಿಜ಼ೋನಾದ ಮನಃಶಾಸ್ತ್ರದ ಪ್ರೊಫೆಸರ್ ಜೀನ್ ಟ್ವೆಂಗೆ (Jean Twenge) ತಡಗರ್ಭದ ಬಗೆಗೆ ಯೋಚಿಸುತ್ತಿದ್ದಳು. ಎಲ್ಲೆಡೆಯೂ ಮೂವತ್ತೆರಡರ ನಂತರದ ಗರ್ಭದ ಬಗೆಗೆ ಎಚ್ಚರಿಕೆಯ ಫಲಕಗಳು ಕಂಡುಬರುತ್ತಿರುವಾಗ ಆಕೆಗೇನೋ ಸಂದೇಹ ಬಂತು. ಸಾಮಾನ್ಯಜ್ಞಾನವು ವೈಜ್ಞಾನಿಕ ಸತ್ಯಕ್ಕೆ ಸಮವಲ್ಲ ಎಂದು ಆಕೆಗೆ ಗೊತ್ತು. ಜಗತ್ತಿನಾದ್ಯಂತ ಗರ್ಭಧಾರಣೆಯ ಬಗೆಗಿನ ಮಾಹಿತಿಯನ್ನು ಜಾಲಾಡಿ ಕ್ರೋಢೀಕರಿಸಿ ಪುಸ್ತಕರೂಪದಲ್ಲಿ ದಾಖಲಿಸಿದ್ದಾಳೆ (An Impatient Woman’s Guide to Getting Pregnant). ಅದರಲ್ಲಿನ ಕೆಲವಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ:
- ನಮ್ಮ ಪ್ರಸೂತಿ ತಜ್ಞರು ಹೇಳುವ “35ರಿಂದ 39ರ ವಯಸ್ಸಿನ ಮಹಿಳೆಯರು ಗರ್ಭಧರಿಸುವ ಸಂಭವ 65% ಮಾತ್ರ” ಎನ್ನುವ ಅಂಕಿಸಂಖ್ಯೆಗಳ ಮೂಲ ಯಾವುದು ಗೊತ್ತೆ? ಫ್ರಾನ್ಸ್ನ 17ನೇ ಶತಮಾನದ ಜನನದ ದಾಖಲೆಗಳು! ಇತ್ತೀಚಿನ ಲೆಕ್ಕಾಚಾರದ ಪ್ರಕಾರ 80%ಕ್ಕೂ ಮೀರಿ ಗರ್ಭಧಾರಣೆಗಳು ಆಗುತ್ತವೆ.
- ಮೂವತ್ತೈದರ ಹೆಣ್ಣು ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗದಲ್ಲಿ ಪಾಲುಗೊಂಡರೆ ಶೇ. 20ರಷ್ಟಲ್ಲ, ಶೇ. 33ರಷ್ಟು ಪ್ರಸಂಗಗಳಲ್ಲಿ ಗರ್ಭಿಣಿಯಾಗುವ ಸಂಭವ ಇರುತ್ತದೆ.
- ಅಂಡಫಲಿತದ ದಿನವನ್ನು ಅನುಸರಿಸಿ ಸಂಭೋಗಿಸಿದರೆ ಎರಡು ವರ್ಷದೊಳಗೆ ಗರ್ಭಧರಿಸುವ ಸಂಭವ ಇಪ್ಪತ್ತೆಂಟರ ಹೆಣ್ಣಿನಲ್ಲಿ ಶೇ. 86ರಷ್ಟಿದೆ. ಅದೇ ಮೂವತ್ತೆಂಟರ ಹೆಣ್ಣಿಗೆ ಶೇ. 82ರಷ್ಟಿದೆ. ಅಂದರೆ ಗರ್ಭಧಾರಣೆಗೆ 28ನೇ ವಯಸ್ಸಿಗೂ 38ನೇ ವಯಸ್ಸಿಗೂ ವಿಶೇಷ ವ್ಯತ್ಯಾಸವಿಲ್ಲ!
- ಗರ್ಭಧಾರಣೆಯ ಅವಧಿಯಲ್ಲಿ ಸಂಭವಿಸುವ ತೊಡಕುಗಳು 20ರ ಹರೆಯದಲ್ಲೂ 38ರ ತಡವಯಸ್ಸಿನಲ್ಲೂ ಒಂದೇ ಆಗಿವೆ. ನಲವತ್ತರ ಮೇಲೆ ಮಾತ್ರ ಇದರ ಸಂಭವ ಗಣನೀಯವಾಗಿ ಹೆಚ್ಚಾಗುತ್ತವೆ.
- ಮಾನಸಿಕ ಒತ್ತಡವು ಗರ್ಭಧರಿಸುವ ಪ್ರಕ್ರಿಯೆಯ ಮೇಲೆ ವಿಶೇಷ ಪ್ರಭಾವ ಬೀರಲಾರದು.
ಇದರಿಂದ ಏನು ತಿಳಿದು ಬರುತ್ತದೆ? ಗರ್ಭಧರಿಸಲು ಮೂವತ್ತೆಂಟರ ವಯಸ್ಸೂ ಸುರಕ್ಷಿತ! ಅಷ್ಟಲ್ಲದೆ, ಹೀಗೆ ಯೋಚಿಸುವುದರಲ್ಲಿ ಪ್ರಯೋಜನವಿದೆ. ಗರ್ಭಧರಿಸುವ ಸಾಮರ್ಥ್ಯ ತನ್ನಲ್ಲಿನ್ನೂ ಜೀವಂತವಾಗಿದೆ ಎನ್ನುವ ಸ್ಥಿತ್ಯಂತರವು ಹೆಣ್ಣಿಗೆ ಅತೀವ ಆತ್ಮವಿಶ್ವಾಸವನ್ನು ಕೊಡುತ್ತದೆ. ಅದಲ್ಲದೆ, ಎಲ್ಲೆಲ್ಲೋ ಕಾಣುವ ತೊಂದರೆಗಳು ತನಗೂ ಬರಬಹುದು ಎಂದು ಅಂತರ್ಗತ ಮಾಡಿಕೊಳ್ಳುವ ಸಂಭವ ಕಡಿಮೆಯಾಗುತ್ತದೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.