Please wait...

ಸುಖೀ ದಾಂಪತ್ಯ ೨೫೯

ಮಗುವನ್ನು ಮಾಡಿಕೊಳ್ಳುವುದರ ಹಿಂದೆ ಎಷ್ಟೊಂದು ರಾಜಕೀಯ ಇದೆ ಗೊತ್ತೆ?

259: ಮಗು ಬೇಕೆ? ಏಕೆ? – 12

ಮಕ್ಕಳು ಬೇಕು-ಬೇಡಗಳ ಕುರಿತು ತುರುಸಿನ ಚರ್ಚೆ ನಡೆಸುತ್ತ ಮನಸ್ಸಿನಲ್ಲಿರುವ ಕಿರಿಕಿರಿಗಳನ್ನು ಹೊರತರುತ್ತಿದ್ದೇವೆ. ಇದೆಲ್ಲ ಆಗುವಾಗ ನಮ್ಮ ತಲೆಯಲ್ಲಿ ಕುಳಿತು ನಮ್ಮನ್ನೇ  ಒದೆಯುತ್ತಿರುವ  ಸಮಾಜವನ್ನು ಅಲಕ್ಷಿಸಲಾದೀತೆ? ಮಕ್ಕಳಿಲ್ಲದವರನ್ನು ಸಮಾಜ ಹೇಗೆ ಕಾಣುತ್ತಿದೆ ಎನ್ನುವುದರ ಕಹಿ ಅನುಭವವು ಅನೇಕರಿಗೆ – ಅದರಲ್ಲೂ ಹೆಂಗಸರಿಗೆ – ಆಗಿರಲೂ ಸಾಕು. ಇದಕ್ಕೆ ಗುರಿಯಾಗುತ್ತಿರುವವರು ತಮ್ಮನ್ನು ತಾವು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದರ ಬಗೆಗೆ ಈಸಲ ನೋಡೋಣ.

ಮಕ್ಕಳಿಲ್ಲದ ಹೆಂಗಸರು ಅದರ ಕುರಿತಾದ ಪ್ರಶ್ನಾಘಾತದಿಂದ ತಪ್ಪಿಸಿಕೊಳ್ಳಲು ಮದುವೆ, ಹುಟ್ಟುಹಬ್ಬಗಳಂಥ ಸಮುದಾಯ ಸಮಾರಂಭಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳುತ್ತಿದ್ದೆ. ಇತರರ ಹುಬ್ಬೇರಿದ ದೃಷ್ಟಿಗೆ, ಸಡಿಲ ನಾಲಗೆಗೆ ತುತ್ತಾಗುತ್ತಿರುವ ಇವರಿಗೆ ಹೇಗೆನ್ನಿಸಬಹುದು? (ಜರತಾರಿ ಸೀರೆ, ಆಭರಣಗಳಿಂದ ಥಳುಕಿಸುವವರ ನಡುವೆ ಜೀನ್ಸ್-ಶರ್ಟ್ ತೊಟ್ಟು ಕುಳಿತಂತೆ ಅನಿಸುತ್ತದೆ ಎಂದು ಮಗುವಿಲ್ಲದ ಒಬ್ಬಳು ಹೇಳಿದ್ದು ನೆನಪಿದೆ.) ತನಗೆ ಮಗುವಿಲ್ಲದಿರುವುದರ ಬಗೆಗೆ (ತಾನು ತಾಯಿ ಆಗದಿರುವುದರ ಬಗೆಗಲ್ಲ – ಇದರ ವ್ಯತ್ಯಾಸವನ್ನು ಆಮೇಲೆ ಹೇಳುತ್ತೇನೆ.) ತನ್ನಮೇಲೆ ಹೇರಲ್ಪಟ್ಟ ಭೇದನೀತಿಯ ಕಾರಣದಿಂದ ಯಾರೊಡನೆಯೂ ಬೆರೆಯಲಾಗದ ಪರಕೀಯ ಭಾವ ಹುಟ್ಟುತ್ತದೆ. ಇದಕ್ಕೊಂದು ದೃಷ್ಟಾಂತ:

ಇಪ್ಪತ್ತೆಂಟು ವರ್ಷದ ದೀಪ್ತಿಗೆ (ಹೆಸರು ಬದಲಾಯಿಸಿದೆ) ಮದುವೆಯಾಗಿ ಮೂರು ವರ್ಷವಾಗಿದೆ. ಗಂಡಹೆಂಡಿರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಸಾಮರಸ್ಯ ಅಷ್ಟಾಗಿ ಇಲ್ಲದಿರುವುದರಿಂದ, ಹಾಗೂ ಈಕೆ ರಾತ್ರಿಪಾಳಿಯ ಉದ್ಯೋಗದಲ್ಲಿ ಇರುವುದರಿಂದ ಸಮಾಗಮ ಅಷ್ಟೊಂದು ನಿಯಮಿತವಾಗಿ ನಡೆಯುತ್ತಿಲ್ಲ. ಮಗುವಿಗೆ ಬಗೆಗೆ ಯಾರಾದರೂ ಕೇಳಿದಾಗ ಗೊಂದಲವಾಗಿ, “ವೈದ್ಯರಲ್ಲಿ ತೋರಿಸುತ್ತಿದ್ದೇವೆ, ಆಗುತ್ತದೆ ಎಂದಿದ್ದಾರೆ” ಎಂದು ಕ್ಲುಪ್ತವಾಗಿ ಉತ್ತರಿಸುತ್ತಾಳೆ. “ತಜ್ಞ ವೈದ್ಯರು ಹೌದೋ ಇಲ್ಲವೊ?” ಎಂದು ಜಬರ್ದಸ್ತಿನಿಂದ ಕೇಳುವವರಿಗೆ ಮೌನ ಸಮ್ಮತಿ ಸೂಚಿಸುತ್ತಾಳೆ. ಹೀಗೆ ಥಟ್ಟನೆ ರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುವ ಆಕೆಯ ಅಂತರಂಗದಲ್ಲಿ ಏನಿದೆ? ಇತರರು ನಂಬಿದ “ಮೌಲ್ಯಗಳನ್ನು” ತಾನೂ ನಂಬಿದ್ದೇನೆಂದು ನಟಿಸುತ್ತಿದ್ದಾಳೆ. ಉದಾಹರಣೆಗೆ, ಮಗುವನ್ನು ಮಾಡಿಕೊಳ್ಳುವ ಉದ್ದೇಶಕ್ಕೇ ಮದುವೆ ಆಗಿದ್ದೇನೆ; ಮಗುವಿಗೋಸ್ಕರ ಕಾಯಿಸುತ್ತ ದಾಂಪತ್ಯಕ್ಕೂ ಗಂಡನ ಕುಟುಂಬಕ್ಕೂ ಅನ್ಯಾಯ ಮಾಡುತ್ತಿದ್ದೇನೆಂಬ ಅಳುಕಿದೆ; ಮಗುವನ್ನು ಮಾಡಿಕೊಳ್ಳದೆ ಇರುವುದು ಹೊಣೆಗೇಡಿತನದ ಸಂಕೇತ; ಸರೀಕರ ಸಮ ಎನ್ನಿಸಿಕೊಳ್ಳಬೇಕಾದರೆ ಮಗು ಅಂತ ಒಂದಿರಲೇಬೇಕು; ಮಗು ಆಗದಿರುವುದು ಅಥವಾ ಬೇಡವೆನ್ನುವುದು ಹೆಣ್ಣುತನಕ್ಕೆ ಅವಮಾನ; ಗರ್ಭಧರಿಸುವ ದಿನ ಬಂದಾಗ ದಾಂಪತ್ಯದ ಎಡೆಬಿಡದ ಕಲಹಕ್ಕೆ ಅಲ್ಪವಿರಾಮ ಕೊಟ್ಟು, ನಗುವಿನ ಮುಖವಾಡ ಧರಿಸಿ ಸಂಭೋಗಕ್ಕಾಗಿ ಗಂಡನನ್ನು ಮರುಳು ಮಾಡುವ ಒನಪು ವಯ್ಯಾರ ಇರಬೇಕು… ಇತ್ಯಾದಿ. ಇಷ್ಟೆಲ್ಲ ಯಾಕೆಂದರೆ, ಮಗು ಆಗದಿರುವುದಕ್ಕೆ ಶಾರೀರಿಕ ಕಾರಣಗಳು ಮಾತ್ರ ಸಮಾಜ ಸಮ್ಮತವೇ ಹೊರತು ಆಂತರಂಗಿಕ ಅಥವಾ ಪಾರಸ್ಪರಿಕ ಕಾರಣಗಳಲ್ಲ! ಹಾಗಾಗಿಯೇ ಪಾರಸ್ಪರಿಕ ಸಮಸ್ಯೆಗಳಿಗೂ (ವೈದ್ಯರನ್ನು ನಡುವೆ ತಂದು) ಶಾರೀರಿಕ ಸಮಸ್ಯೆಯ ಬಣ್ಣ ಬಳಿಯುತ್ತಿದ್ದಾಳೆ – ಒಂದುವೇಳೆ ಶಾರೀರಿಕ ದೋಷವಿದ್ದರೆ ಅದಕ್ಕೂ ತಾನೇ ಹೊಣೆಗಾರಳು! ಇನ್ನು, ಕೇಳುವವರು ಹಿರಿಯರಾಗಿದ್ದರೆ ಮುಗಿದೇ ಹೋಯಿತು, ಮರೆತಿದ್ದನ್ನು ನೆನಪಿಸಿದಾಗ ಹೇಳುವಂತೆ “ಥ್ಯಾಂಕ್ಯೂ ಆಂಟೀ!” ಎಂದು ಕೃತಜ್ಞತೆ ಸೂಚಿಸುತ್ತ ಪ್ರಶ್ನಿಸುವವರ ಕೈಯಲ್ಲಿ ಪರಮಾಧಿಕಾರ ಕೊಡುತ್ತಾಳೆ. ಹೀಗೆ ಮಗುವಿಲ್ಲದ ಹಾಗೂ ಮಗುವು (ಸದ್ಯಕ್ಕಂತೂ) ಬೇಡವಾದ ಬಹುತೇಕ ಪ್ರತಿಹೆಣ್ಣೂ ನಟಿಸಬೇಕಾದ ಪ್ರಸಂಗ ಇರುವಾಗ ಸಮುದಾಯದ ಅಂತರಾಳದೊಳಗೆ ಅಡಗಿರುವ ಸತ್ಯ ಬಯಲಿಗೆ ಹೇಗೆ ಬಂದೀತು? ಹಾಗಾಗಿ ಮಗುವಿಲ್ಲದವರಿಗೆ ಸಮಾಜವು “ದಯಪಾಲಿಸುವ” ಒಂಟಿಭಾವವು ಸಾರ್ವತ್ರಿಕವಾಗಿ ಇರುವುದಾದರೂ ಬಹಿರಂಗವಾಗಿ ವಿನಿಮಯಿಸಲು ಸಾಧ್ಯವಾಗದಿರುವ ಕಾರಣದಿಂದ ಪ್ರತಿ ಹೆಣ್ಣನ್ನೂ ಪ್ರತ್ಯೇಕವಾಗಿ ಕಾಡುತ್ತದೆ. ಅದಕ್ಕೆಂದೇ,  ಒಂದು ಮಗುವಾದರೆ ಸಾಕು, ಎಲ್ಲವೂ ಸರಿಹೋಗುತ್ತದೆ ಎನ್ನುವ ತಪ್ಪು ನಂಬಿಕೆಯೂ ಅಷ್ಟೇ ಸಾರ್ವತ್ರಿಕವಾಗಿದೆ.

ಇತರರ ಚುಚ್ಚುವರ್ತನೆಯಿಂದ ವೈಯಕ್ತಿಕವಾಗಿ ಹಿಂಸೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ಯಾಕೆ ಸಹಜವಾಗಿ ಬರುವುದಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲೊಂದು ಕಾರಣ ತನ್ನ ಬಗೆಗೆ ತನ್ನಲ್ಲೇ ಗೌರವ ಇಲ್ಲದಿರುವುದು – ಇದಕ್ಕೂ ಬಾಲ್ಯದಲ್ಲಿ ಪ್ರೀತಿಯ ನಂಟು ಸಾಕಷ್ಟು ಸಿಗದಿರುವುದಕ್ಕೂ ಸಂಬಂಧವಿದೆ. ಎರಡನೆಯದು, ಹೆಂಗಸರು ತಮ್ಮ ತಾಯಿಯ ಮೌಲ್ಯಗಳನ್ನು ಒರೆಗೆ ಹಚ್ಚಿ ಪರೀಕ್ಷಿಸದೆ ತನ್ನವನ್ನಾಗಿ ಮಾಡಿಕೊಂಡಿರುವುದು. ಇದೆಲ್ಲಿಂದ ಹುಟ್ಟಿಕೊಳ್ಳುತ್ತದೆ ಎಂಬುದನ್ನು ದೀಪ್ತಿಯ ಇತಿಹಾಸದಿಂದ ತಿಳಿದುಕೊಳ್ಳಬಹುದು. ದೀಪ್ತಿಯ ತಾಯಿಯು ದಾಂಪತ್ಯದಲ್ಲಿ ಸ್ವತಃ ದುರ್ಲಕ್ಷ್ಯಕ್ಕೆ ಈಡಾಗಿದ್ದಾಳೆ. ದರ್ಪದ ಗಂಡನಿಂದ ಮೂರು ಮಕ್ಕಳನ್ನು ಪಡೆದು, ಅವರ ಪೋಷಣೆಯನ್ನು ಅರೆಮನಸ್ಸಿನಿಂದ ಹೊತ್ತುಕೊಂಡಿದ್ದಾಳೆ. ದೀಪ್ತಿಯು ಹೆಣ್ಣಾಗಿರುವುದರಿಂದ ಅವಳ ಭವಿಷ್ಯದಲ್ಲಿ ತನ್ನ ನೋವನ್ನು ಕಾಣುತ್ತಿದ್ದಾಳೆ (“ನೀನೂ ಹೆಣ್ಣು, ಹಾಗಾಗಿ ನನ್ನಂತೆ ಅನುಭವಿಸಬೇಕಾಗುತ್ತದೆ, ಗೊತ್ತಿರಲಿ!”), ತನ್ನ ಹೆಣ್ಣುತನವನ್ನು ತಾನೇ ಇಷ್ಟಪಡದಿರುವಾಗ, ಅದನ್ನು ಮಗಳ ಮೇಲೆ ಪ್ರಕ್ಷೇಪಿಸಿ ಅವಳ ಲಿಂಗೀಯತೆಯೂ ಇಷ್ಟಪಡುವಂಥದ್ದಲ್ಲ ಎಂದು ಸಂಕೇತ ಕೊಡುತ್ತ ಬೆಳೆಸಿದ್ದಾಳೆ. ಇದರಿಂದ ದೀಪ್ತಿಗೆ ಗೊಂದಲವಾಗಿ ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ಅಂದರೆ, ತಾಯಿ-ಮಗಳ ಬಾಂಧವ್ಯವು ಹೊರನೋಟದಲ್ಲಿ ಸಹಜವಾಗಿ ಕಂಡರೂ ಒಳವೊಳಗೆ ಪರಸ್ಪರ ಕೆಸರು ಎರಚಾಟವಿದ್ದು, ಒತ್ತಟ್ಟಿಗೆ ಅನರ್ಹತೆ ಹಾಗೂ ನಿರಾಕರಣೆಯ ಒಳಸೆಲೆ ಇಬ್ಬರಲ್ಲೂ ಇದೆ. ದೀಪ್ತಿಯ ಮದುವೆಯ ನಂತರ ಇದೆಲ್ಲ ಸ್ಪಷ್ಟರೂಪದಲ್ಲಿ ಹೊರಬರುತ್ತಿದೆ. ತಾಯಿಯು, “ನಾನು ಗಟ್ಟಿಮುಟ್ಟಾಗಿ ಇರುವಾಗಲೇ ಬೇಗ ಮಗುವನ್ನು ಮಾಡಿಕೋ!” ಎಂದು ಒತ್ತಾಯ ಮಾಡಿದ್ದಾಳೆ. ಅದಕ್ಕೆ ದೀಪ್ತಿ ಒಪ್ಪಿಲ್ಲ. ಯಾಕೆ? ನೀನು ಮಗುವನ್ನು ಹೆರಲೇಬೇಕು ಎನ್ನುವ ತಾಯಿಯ ಸಂದೇಶದ ಹಿಂದೆ, “ನಿನ್ನಿಂದ ಮಗುವನ್ನು ಹುಟ್ಟಿಸುವ ತನಕ ನಾನು ತಾಯಿಯ ಅರ್ಹತೆಯನ್ನು ಪೂರ್ತಿಯಾಗಿ ಪಡೆಯಲಾರೆ” ಎನ್ನುವ ಒಳಮಾತಿದೆ! ಹೀಗೆ ತಾಯಿಯು ತನ್ನ ಆತಂಕವನ್ನು ಮಗಳ ಮೇಲೆ ಹೇರಿದ್ದಾಳೆ; ಹಾಗೂ ಮಗಳು ಪ್ರತಿಭಟಿಸಿದ್ದಾಳೆ! (ಒಂದು ಮಗುವಾದರೆ ಸಾಕು, ಗಂಡಹೆಂಡಿರ ಜಗಳ ಕಡಿಮೆ ಆಗುತ್ತದೆ ಎಂದು ಹಿರಿಯರ ಸಲಹೆ ಬರುವುದು ಇಂಥ ಹಿನ್ನೆಲೆಯಲ್ಲೇ.) ಅಂದರೆ ಇಲ್ಲಿ ಮಗು ಹುಟ್ಟುವುದರ ಉದ್ದೇಶವು ಹೆಣ್ಣುಮಗಳಿಗೆ ತಾಯ್ತನದ ಅನುಭವ ಆಗಲಿ ಎಂದಲ್ಲ, ಬದಲಾಗಿ ತನ್ನ (ಸಮಾಜ ನಿರೀಕ್ಷಿತ) ತಾಯ್ತನದ ಪಾತ್ರ-ಕರ್ತವ್ಯ ಪೂರ್ತಿಯಾಗುತ್ತದೆ ಎಂದಿದೆ. ಒಂದು ಮಗುವನ್ನು ಮಾಡಿಕೊಳ್ಳುವುದರ ಹಿಂದೆ ಎಷ್ಟೊಂದು ರಾಜಕೀಯ ಇದೆ ಎಂಬುದು ಗೊತ್ತಾಯಿತಲ್ಲ? ಈಕಡೆ ದೀಪ್ತಿಯು ತಾಯ್ತನದ ಅನುಭವ ಪಡೆಯಲು ತಯಾರಾಗುವುದು ಒತ್ತಟ್ಟಿಗಿರಲಿ, ಒಳ್ಳೆಯ ದಾಂಪತ್ಯ ನಡೆಸಲು ಒದ್ದಾಡುತ್ತಿದ್ದಾಳೆ. ಇಂಥ ಹಿನ್ನೆಲೆಯಲ್ಲಿ ಮಗುವು ಹುಟ್ಟಿದರೆ ಅದರ ಭವಿಷ್ಯದಲ್ಲಿ ಏನು ಕಾದಿರುತ್ತದೆ ಎಂಬುದು ಯಾರ ಊಹೆಗೂ ನಿಲುಕಬಹುದು.

ಈಗ, ಮಗುವನ್ನು ಮಾಡಿಕೊಳ್ಳಲು ಹೊರಟಿರುವ ಹೆಂಗಸರಿಗೆ ಈ ಪ್ರಶ್ನೆ: ನೀವೇಕೆ ಮಗುವನ್ನು ಮಾಡಿಕೊಳ್ಳಲು ಹೊರಟಿದ್ದೀರಿ? ನಿಮಗೂ ಮಗುವನ್ನು ಪಡೆಯುವ ಸಾಮರ್ಥ್ಯವಿದೆ ಎಂದು ಎಲ್ಲರಿಗೂ ತೋರಿಸುವುದಕ್ಕೋ, ಅಥವಾ ಸ್ವತಃ ತಾಯ್ತನದ ಅನುಭವ ಪಡೆಯಲಿಕ್ಕೋ?  ಇದರ ಮೇಲೆ ನಿಮಗೆ ಮಗುವು ಬೇಕೋ ಬೇಡವೋ ಎಂದು ನಿರ್ಧರಿಸಿ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.