ಸುಖೀ ದಾಂಪತ್ಯ ೨೪೨
ಅನ್ಯೋನ್ಯತೆ ಗಾಢವಾದಷ್ಟೂ ಸಂಗಾತಿಗಳು ಅಂತರಂಗದಲ್ಲಿ ಬೆಳೆಯುತ್ತ ವಿಕಸಿತಗೊಳ್ಳುತ್ತಾರೆ.
242: ಅನ್ಯೋನ್ಯತೆಗೆ ಹುಡುಕಾಟ – 21
ಕೌಟುಂಬಿಕ ಕಟ್ಟುಪಾಡುಗಳು ಅನ್ಯೋನ್ಯತೆಗೆ ಹುಟ್ಟುಹಾಕುವುದರಲ್ಲಿ ಹೇಗೆ ಅಡ್ಡಿಯಾಗುತ್ತವೆ, ಹಾಗೂ ಹಾಗೆ ದೂರವಾದ ಸಂಗಾತಿಯನ್ನು ಹೇಗೆ ಭಾವಾನುಬಂಧದತ್ತ ಸೆಳೆಯಬಹುದು ಎಂಬುದನ್ನು ಹೋದಸಲ ಕಲಿತೆವು. ಈಗ, ಚಟಗಳಿಗೆ ಒಳಗಾಗಿ ಸಂಗಾತಿಯ ಅನ್ಯೋನ್ಯತೆಯನ್ನು ಕಳೆದುಕೊಳ್ಳುವವರ ಕಡೆಗೆ ಗಮನ ಹರಿಸೋಣ. ದುರಭ್ಯಾಸದಿಂದ ಮುಕ್ತರಾಗಿ ದಾಂಪತ್ಯಕ್ಕೆ ಹೇಗೆ ಹತ್ತಿರವಾಗಬೇಕು ಎಂಬುದನ್ನು ಒಂದು ದೃಷ್ಟಾಂತದೊಂದಿಗೆ ವಿವರಿಸುತ್ತೇನೆ.
ಈ ಮಧ್ಯವಯಸ್ಸಿನ ಕೃಷಿಕನಿಗೆ ಸುರೇಶ ಎಂದು ಹೆಸರಿಸೋಣ. ಸುರೇಶ ನನ್ನಲ್ಲಿ ಬಂದಿದ್ದು ಶಿಶ್ನದೌರ್ಬಲ್ಯವನ್ನು ಸರಿಪಡಿಸಿಕೊಳ್ಳಲು. ಇಪ್ಪತ್ತೈದು ವರ್ಷಗಳಿಂದ ಹೊಗೆಸೊಪ್ಪು, ಮದ್ಯದ ಅಭ್ಯಾಸವಿದೆ. ಅದೇನೂ ಅವನಿಗೆ ಸಮಸ್ಯೆಯಿಲ್ಲ. ಆದರೆ ಕುಡಿದುಬಂದು ಬರಸೆಳೆಯುವುದನ್ನು ಹೆಂಡತಿ ಇಷ್ಟಪಡುವುದಿಲ್ಲ. ಅವಳೊಡನೆ ಕಾಮಕ್ರಿಯೆ ಏನೋ ನಡೆಯುತ್ತದೆ, ಆದರೆ ಇಬ್ಬರೂ ಒಂದಾದ ಪೂರ್ಣತೃಪ್ತಿ ಸಿಗುವುದಿಲ್ಲ.
ಸುರೇಶನ ದಾಂಪತ್ಯದ ಬಗೆಗೆ ಹೇಳುವುದಾದರೆ, ಮೋಹಿಸಿದವಳನ್ನೇ ಮದುವೆಯಾಗಿದ್ದಾನೆ. ಸಹಬಾಳುವೆ ಚೆನ್ನಾಗಿದೆ. ಕುಡಿತದ ಒಂದೇ ವಿಷಯಕ್ಕೆ ದಂಪತಿಯಲ್ಲಿ ಭಿನ್ನಾಭಿಪ್ರಾಯವಿದೆ. ಕುಡಿತ ನಿಲ್ಲಿಸದೆ ಹೆಂಡತಿಗೆ ಸುಖ ಹೆಚ್ಚು ಕೊಡಬೇಕು. ಶಿಶ್ನದ ಗಡಸುತನ ಹೆಚ್ಚಾದರೆ ಹೆಚ್ಚುಹೊತ್ತು ಸಂಭೋಗಿಸಿ ಹೆಚ್ಚು ತೃಪ್ತಿ ಕೊಡಬಹುದು! ಅದಕ್ಕೆಂದೇ ನನ್ನಲ್ಲಿ ಬಂದಿದ್ದಾನೆ
ಸುರೇಶ ಈಮುಂಚೆ ಶಿಶ್ನದ ಗಡಸುತನಕ್ಕೆ ಮಾತ್ರೆ ಸೇವಿಸಿದ್ದು ಕೆಲಸ ಕೊಟ್ಟಿದೆ. ವಿಚಿತ್ರವೆಂದರೆ, ಕೆಲವೊಮ್ಮೆ ಔಷಧಿ ಇಲ್ಲದೆಯೂ ಸಂಭೋಗ ಸಾಧ್ಯವಾಗಿದೆ, ಹಾಗೂ ಮಾತ್ರೆ ತಿಂದರೂ ಕೆಲವೊಮ್ಮೆ ಪ್ರಯೋಜನವಾಗಿಲ್ಲ. ಇದರರ್ಥ ಏನು? ಶಿಶ್ನವು ಗಡುಸಾಗಬೇಕಾದರೆ ಹೆಚ್ಚಿನ ಕಾಮಾವೇಶ ಬೇಕು – ಕಾಮಾವೇಶ ವಿಪುಲವಾಗಿದ್ದರೆ ಮಾತ್ರೆಯ ಅಗತ್ಯವಿಲ್ಲ. ಕಾಮಾವೇಶದ ಹೆಚ್ಚಳಕ್ಕೆ ಕಾಮದ ವಿಚಾರಗಳು, ಪ್ರಣಯದ ಮಾತುಕತೆ, ಹಾಗೂ ಶಾರೀರಿಕ ಸ್ಪರ್ಶ ಹೆಚ್ಚಾಗಬೇಕು. ಒಬ್ಬರನ್ನೊಬ್ಬರು ಭಾವಾವೇಶದಲ್ಲಿ ಬಂಧಿಸಬೇಕು. ಆದರೆ ಇಷ್ಟರಲ್ಲೇ ಅಡ್ಡಿ ತಲೆಯೆತ್ತುತ್ತಿದೆ. ಹೆಂಡತಿಗೆ ಇವನ ಕುಡಿತದ ವಾಸನೆ ಸಹಿಸಲು ಆಗದೆ ಒಳಗೊಳ್ಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಮನಸ್ಸಿನ ವಿರುದ್ಧ ಗಂಡನಿಗೆ ಮೈ ಒಪ್ಪಿಸುವ ಅನಿವಾರ್ಯತೆಯಿದೆ. ಹಾಗಾಗಿ ಭಾವೈಕ್ಯತೆ ಆಗುವುದಿಲ್ಲ. ಅದಕ್ಕಾಗಿ ಕುಡಿತ ಬಿಡಲು ಆಕೆ ವಿನಂತಿಸಿಕೊಂಡಿದ್ದಾಳೆ. ಅವನು, “ಕುಡಿತ ಬಿಡಲು ಆಗುವುದಿಲ್ಲ. ಹಾಗಾಗಿ ನನ್ನ ಅನಿಸಿಕೆಗೆ ಬೆಲೆಕೊಟ್ಟು ಸಮೀಪಿಸು” ಎನ್ನುತ್ತಾನೆ. ಅದಕ್ಕವಳು “ಕುಡಿತ ಇಷ್ಟವಿಲ್ಲ ಎನ್ನುವ ನನ್ನ ಭಾವನೆಗೆ ಬೆಲೆಕೊಡು. ಆಗ ನಾನು ಹೆಚ್ಚು ಪ್ರಣಯಭಾವ ತೋರಬಲ್ಲೆ.” ಎನ್ನುತ್ತಾಳೆ. ಅವನು ಬಿಡಲೊಲ್ಲ, ಆಕೆ ಒಳಗಾಗಲು ಒಲ್ಲಳು. ಯಾರಿಗೋಸ್ಕರ ಯಾರು ಬದಲಾಗಬೇಕು ಎನ್ನುವ ಸಂಘರ್ಷದಿಂದ ಸಮಾಗಮದ ನಂತರವೂ ದೂರವಾದಂತೆ ಸುರೇಶನಿಗೆ ಅನಿಸುತ್ತಿದೆ. ಇತ್ತೀಚೆಗೆ, ಪರಸ್ಪರರ ಭಾವನೆಗಳಿಗೆ ಬೆಲೆ ಕೊಡುವುದರಿಂದ ಸಂವೇದನಾಶೀಲತೆ ಹೆಚ್ಚಾಗುತ್ತದೆ, ಅದರಿಂದ ಅನ್ಯೋನ್ಯತೆಯೂ ಹೆಚ್ಚುತ್ತದೆ ಎನ್ನುವ ಅರಿವು ಸುರೇಶನಿಗೆ ಮೂಡಿದೆ. ಹಾಗಾಗಿ ಕುಡಿಯುವುದನ್ನು ನಿಲ್ಲಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ.
ಇಲ್ಲೇನು ನಡೆಯುತ್ತಿದೆ? ಸುರೇಶನ ಮನಸ್ಸಿನ ಒಂದು ಭಾಗವು ಕೂಡುವುದಕ್ಕಾಗಿ ಕುಡಿಯುವುದನ್ನು ಬಿಡಬೇಕು ಎನ್ನುತ್ತಿದ್ದರೆ, ಇನ್ನೊಂದು ಭಾಗವು ಕುಡಿಯಲಿಕ್ಕಾಗಿ ಕೂಡುವುದನ್ನು (ಭಾಗಶಃ) ಅಲಕ್ಷಿಸಬೇಕು ಎನ್ನುತ್ತಿದೆ. ಹೆಂಡತಿಯ ಜೊತೆಗಿನ ಬಾಂಧವ್ಯಕ್ಕಿಂತ ಮದ್ಯದ ಜೊತೆಗಿನ ಬಾಂಧವ್ಯ ಹೆಚ್ಚಾದಂತಿದೆ. ಹೆಂಡತಿ, ಕಾಮಕೂಟ, ಅನ್ಯೋನ್ಯತೆ ಎಲ್ಲ ಎರವಾಗುತ್ತಿದ್ದರೂ ಕುಡಿತವನ್ನು ಬಿಡಲಾಗುವುದಿಲ್ಲ ಎಂದರೆ ಮದ್ಯವು ಅವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿರಬೇಕು. ಏನಿರಬಹುದು? ಕಾಮ ಇಬ್ಬರಿಗೂ ಸೇರಿದ್ದು, ಕುಡಿತ ಒಬ್ಬನಿಗೇ ಸೇರಿದ್ದು. ಥಟ್ಟನೆ ಹೊಳೆಯಿತು. ಪಾರಸ್ಪರಿಕತೆಗಿಂತ ತನ್ನೊಳಗಿನ ಯಾವುದೋ ಸೆಳೆತಕ್ಕೆ ಒಳಗಾಗುತ್ತಿದ್ದಾನೆ. ಏನಿರಬಹುದು? ಅವನು ಕುಡಿಯಲು ಕಲಿತಾಗ ಇದ್ದ ಹಿನ್ನೆಯ ಬಗೆಗೆ ವಿಚಾರಿಸಿದೆ. ವಿವರ ಮನ ಕರಗುವಂತಿತ್ತು.
ಅವನದು ಅಡಕೆ ಬೆಳೆಯುವ ರೈತ ಕುಟುಂಬ. ಬಾಲ್ಯ ಕಡುಬಡತನದಲ್ಲಿ ಕಳೆದಿದೆ. ನಾಲ್ಕು ಮಕ್ಕಳಲ್ಲಿ ಇವನು ಕಡೆಯವನು. ಹಾಗಾಗಿ ಸೌಕರ್ಯ ಎನ್ನುವುದೆಲ್ಲ ಮೂವರಿಗೆ ಸಿಕ್ಕು ಉಳಿದರೆ ಮಾತ್ರ ಇವನ ಪಾಲಿಗೆ. ಇವನು ಚಳಿಗಾಗಿ ಸ್ವೆಟರ್ ಕೊಡಿಸಲು ಬೇಡಿಕೊಂಡರೆ ಸಿಗಲಿಲ್ಲ. ಸೈಕಲ್ ಕೊಳ್ಳಲು ಕಾಸಿಲ್ಲದೆ ಹೈಸ್ಕೂಲಿಗೆ ನಡೆದುಕೊಂಡು ಹೋದ (ಇದನ್ನು ಹೇಳಿಕೊಳ್ಳುವಾಗ ಅವನ ಕಣ್ಣುಗಳಲ್ಲಿ ನೀರಾಡಿತು). ಬೇಸಿಗೆಯ ರಜೆಯಲ್ಲಿ ಬಾಲ್ಯ ಕಾರ್ಮಿಕನಾದ. ಬಡತನದ ನಿವಾರಣೆ ಹೇಗೆ ಎನ್ನುವ ಚಿಂತೆ ಸದಾ ಕೊರೆಯುತ್ತಿತ್ತು. ಪ್ರಬುದ್ಧನಾಗುತ್ತಿರುವಾಗ ಹೊಳೆಯಿತು: ಬೆಳೆದ ಅಡಕೆಯನ್ನು ಮಧ್ಯವರ್ತಿಗಳನ್ನು ದೂರವಿಟ್ಟು ಮಾರಿದರೆ ಹೆಚ್ಚು ಲಾಭವಿದೆ! ಅದಕ್ಕಾಗಿ ರಾಜಧಾನಿಗೆ ಹೋದ. ಅಲ್ಲಿ ಭಾಷೆ ಗೊತ್ತಿಲ್ಲದಾಗ ತಮ್ಮವರು ಎಂದು ನಂಬಿದವರಿಂದ ಮೋಸಹೋದ. ಐದು ವರ್ಷ ಉಳಿಸಿದ ಹಣವನ್ನು ಕಳೆದುಕೊಂಡ. ಅತೀವ ನಿರಾಸೆ ಆಯಿತು. ಭವಿಷ್ಯಹೀನತೆ ಧುತ್ತೆಂದಿತು. ಆಗಲೇ ಕುಡಿಯಲು ಶುರುಮಾಡಿದ್ದು. ಅಲ್ಲೇ ತಪ್ಪು ಮಾಡಿದೆ ಎಂದ. ಅವನನ್ನು ತಡೆದು ಹೇಳಿದೆ: “ನೀವೇನೂ ತಪ್ಪು ಮಾಡಿಲ್ಲ.”
“ವಾಸ್ತವವಾಗಿ, ಕುಡಿತವು ನಿಮ್ಮನ್ನು ಖಿನ್ನತೆ, ಹತಾಶೆಯಿಂದ ಕುಸಿದು ಬೀಳುವುದರಿಂದ ರಕ್ಷಿಸಿದೆ.” ಎಂದು ವಿವರಿಸಿದೆ. ಅಮಲಿನಲ್ಲಿ ಇದ್ದಷ್ಟು ಕಾಲವಾದರೂ ಅವನ ಮನಸ್ಸು ಒತ್ತಡದಿಂದ ಮುಕ್ತವಾಗಿರುತ್ತಿತ್ತು. ಅದಿಲ್ಲದಿದ್ದರೆ ಮಾನಸಿಕ ಸಂತುಲನ ಕಳೆದುಕೊಳ್ಳುವ ಸಂಭವವಿತ್ತು ಎಂದೆ. ಅವನು ಆಶ್ಚರ್ಯದಿಂದ, “ಹೌದು, ಅದು ಸ್ನೇಹಿತನಂತೆ ಸಹಾಯ ಮಾಡಿದೆ!” ಎಂದು ಉದ್ಗರಿಸಿದ. ಕಷ್ಟಕಾಲದಲ್ಲಿ ನೆರವಿಗೆ ಬಂದ ಸ್ನೇಹಿತನನ್ನು ಹೇಗೆ ಮರೆಯಲಾದೀತು? ಅಂದರೆ, ಕುಡಿಯುವ ಆಚರಣೆಯು ಅವನ ವ್ಯರ್ಥವಾದ ಪರಿಶ್ರಮ, ನಂಬಿಕೆ ದ್ರೋಹ, ಆರ್ಥಿಕ ನಷ್ಟ, ಹತಾಶೆ ಹಾಗೂ ಒಂಟಿತನ – ಎಲ್ಲದರ ಭಾವಪೂರ್ಣ ಸ್ಮರಣೆಯ ಸಂಕೇತ. ಪ್ರತಿದಿನ ತನಗೆ ಅರಿವಿಲ್ಲದಂತೆ ತನ್ನೊಳಗಿನ ನೋವನ್ನು ಮರುಕಳಿಸಿಕೊಳ್ಳುತ್ತ ಬದುಕುತ್ತಿದ್ದಾನೆ!
ಒಟ್ಟಿನಲ್ಲಿ, ಒಂದುಕಡೆಗೆ ಆನ್ಯೋನ್ಯತೆಯಲ್ಲಿ ಒಂದಾಗಲು ಕಾಯುತ್ತಿರುವ ಪ್ರಿಯಪತ್ನಿ, ಇನ್ನೊಂದೆಡೆ ಕುಸಿಯುತ್ತಿದ್ದ ತನ್ನನ್ನು ಕೈಹಿಡಿದಿದ್ದ ಪ್ರಾಣಸ್ನೇಹಿತ. ಇಬ್ಬರನ್ನೂ ಆರಿಸಿಕೊಂಡು ಇಬ್ಬಂದಿತನ ಉಂಟಾಗಿದೆ – ಒಂದು ಹಾಸಿಗೆಯಲ್ಲಿ ಪರಸ್ಪರ ಒಪ್ಪದ ಇಬ್ಬರು ಸಂಗಾತಿಗಳೊಡನೆ ಇದ್ದಂತೆ.
ಹಾಗಾದರೆ ಉಪಾಯವೇನು? ಕುಡಿತವನ್ನು ಬಿಟ್ಟುಬಿಡುವುದು. ಆದರೆ ಆಗುತ್ತಿಲ್ಲವಲ್ಲ ಎಂದು ಮತ್ತೆ ಗುಡ್ಡ ಸುತ್ತಿ ಮೈಲಾರಕ್ಕೇ ಬಂದ. ಆಗ ನಾನು, “ಹೇಗಿದ್ದರೂ ಹೆಂಡತಿ ನಿಮ್ಮನ್ನು ತಿರಸ್ಕರಿಸುತ್ತಿಲ್ಲ. ಕುಡಿಯದಿರುವ ಸಮಯದಲ್ಲಿ ಕೂಡಿದರಾಯಿತು. ಹೆಂಡತಿಗೂ ಕಿರಿಕಿರಿ ಇಲ್ಲ.” ಎಂದು ಅವನನ್ನು ಗಮನಿಸಿದೆ. ತನ್ನ ವಾಸನೆ, ವರ್ತನೆ ಆಕೆಗೆ ಹಿಡಿಸುವುದಿಲ್ಲ. ಅವಳಿಗಾಗಿ ಆದರೂ ಬಿಡಬೇಕು ಎಂದ. ಇತರರಿಗಾಗಿ ನೀವು ಗುರಿ ಇಟ್ಟುಕೊಳ್ಳಲಾರಿರಿ ಎಂದೆ. ಇತರರನ್ನು ಮೆಚ್ಚಿಸಲೆಂದು ಉಪವಾಸ ಮಾಡಲು ಆದೀತೆ? ಕುಡಿತದಿಂದ ಖುಷಿ ಸಿಗುತ್ತಿದ್ದರೆ ಅದನ್ನು ಇನ್ನೊಬ್ಬರಿಗೋಸ್ಕರ ಹೇಗೆ ಬಿಡಲಾದೀತು? ಅವನು ಸುಮಾರು ಹೊತ್ತು ಯೋಚನೆಯಲ್ಲಿ ಮುಳುಗಿ ಹೊರಬಂದ. “ಹಾಗಲ್ಲ, ಹೆಂಡತಿಯೊಡನೆ ಅನ್ಯೋನ್ಯತೆ ಬೆಳೆಸಲು ಅಷ್ಟೇ ಅಲ್ಲ, ಒಳ್ಳೆಯ ಮನುಷ್ಯನಾಗಲು ಕುಡಿತ ಬಿಡಲೇಬೇಕು.” ವಾಹ್, ಈಗವನು ಅನ್ಯೋನ್ಯತೆಗಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸಲು ತಯಾರಾಗಿದ್ದಾನೆ, ಹಾಗೂ ಅನ್ಯೋನ್ಯತೆ ಬೆಳೆದಷ್ಟೂ ತಾನು ಬೆಳೆಯಬಲ್ಲೆ ಎಂದು ಕಂಡುಕೊಂಡಿದ್ದಾನೆ.
ಮುಂದೇನಾಯಿತು ಎಂಬುದನ್ನು ಮುಂದಿನ ಸಲ ವಿವರಿಸುತ್ತೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.