ಸುಖೀ ದಾಂಪತ್ಯ ೨೪೧
ಪ್ರೀತಿಸಲು ಸ್ವಾತಂತ್ರ್ಯ ಬೇಕು, ಮದುವೆಯ ಭದ್ರತೆಯ ಹೆಸರಿನಲ್ಲಿ ಬಂಧನವಲ್ಲ. ಬಂಧನದಲ್ಲಿ ಪ್ರೀತಿ ಅರಳುವುದಿಲ್ಲ.
241: ಅನ್ಯೋನ್ಯತೆಗೆ ಹುಡುಕಾಟ – 20
ಬಾಂಧವ್ಯ ಬೇಡವೆಂದು ಗೋಡೆ ಹಾಕಿಕೊಳ್ಳುವ, ಹಾಗೂ ಸೂಕ್ತ ಸೀಮಾರೇಖೆ ಹೊಂದಿರದೆ ಅಮ್ಮನ ಮಗ ಎನ್ನಿಸಿಕೊಳ್ಳುವ ಗಂಡಸರನ್ನು ಅರ್ಥಮಾಡಿಕೊಳ್ಳುತ್ತ ಇವರ ವರ್ತನೆಯಿಂದ ಅನ್ಯೋನ್ಯತೆ ಕಟ್ಟಿಕೊಳ್ಳುವುದು ಹೇಗೆ ಸಮಸ್ಯೆಯಾಗುತ್ತದೆ ಎಂದು ತಿಳಿದೆವು. ಇಂಥ ಸಂಗಾತಿಯನ್ನು ಹೊಂದಿದ ಹೆಣ್ಣು ಅವನನ್ನು ಹೇಗೆ ಭಾವನಾತ್ಮಕ ನಂಟಿನತ್ತ ಸೆಳೆಯಬಹುದು ಎಂಬುದು ದೊಡ್ಡ ಸವಾಲು. ಇದನ್ನು ನಿರ್ವಹಿಸುವ ಒಂದು ಕಲೆಯನ್ನು ಈ ದೃಷ್ಟಾಂತದ ಮೂಲಕ ವಿವರಿಸುತ್ತೇನೆ:
ಆಶಾಳನ್ನು ಶ್ರವಣ (ಹೆಸರು ಬದಲಿಸಲಾಗಿದೆ) ಇಷ್ಟಪಟ್ಟು ಮದುವೆಯಾಗಿದ್ದಾನೆ. ಕೆಲವು ವರ್ಷಗಳ ನಂತರ ಅವರ ಬಾಂಧವ್ಯ ಕ್ಷೀಣವಾಗುತ್ತಿದೆ ಎಂದು ಆಶಾ ಗಮನಿಸಿದ್ದಾಳೆ. ಇದನ್ನು ಎತ್ತಿತೋರಿಸಿ ಏನಾದರೂ ಮಾಡಬೇಕೆಂದು ಒತ್ತಾಯಿಸಿದಾಗ ಶ್ರವಣ ಕ್ಯಾರೆ ಎನ್ನದೆ ಗೋಡೆ ಹಾಕಿಕೊಂಡು ಕುಳಿತಿದ್ದಾನೆ. ದಾಂಪತ್ಯ ಚಿಕಿತ್ಸೆಗೆ ಕರೆದರೆ, “ನನಗೇನೂ ತಲೆ ಕೆಟ್ಟಿಲ್ಲ!” ಎಂದು ನಿರಾಕರಿಸಿದ್ದಾನೆ. ಹಾಗಾಗಿ ಆಶಾ ಒಬ್ಬಳೇ ನನ್ನಲ್ಲಿ ಬಂದಿದ್ದಾಳೆ. (ಚಿಕಿತ್ಸೆಗೆ ಗಂಡ ಅನಿವಾರ್ಯವೆ? ಇಬ್ಬರೂ ಇದ್ದರೆ ಅತ್ಯುತ್ತಮ; ಇಲ್ಲದಿದ್ದರೆ ಒಬ್ಬರಾದರೂ ನಡೆಯುತ್ತದೆ. ಒಬ್ಬರು ಬದಲಾದರೂ ಮುಂಚಿನ ಸಮಸ್ಥಿತಿ ತಪ್ಪುತ್ತ, ಇನ್ನೊಬ್ಬರೂ ಬದಲಾಗುತ್ತಾರೆ.)
ಅವರಿಬ್ಬರ ಹಿನ್ನೆಲೆಯೇನು? ಇಬ್ಬರೂ ಕಟ್ಟಾ ಧಾರ್ಮಿಕ ಸಂಪ್ರದಾಯದ ಹಿನ್ನೆಲೆ ಹೊಂದಿದ್ದಾರೆ. ಹಾಗಿದ್ದರೂ ಆಶಾಳ ಸ್ವತಂತ್ರ ವಿಚಾರ ಧಾರೆಯನ್ನೂ ಅದನ್ನು ಪ್ರಾಮಾಣಿಕವಾಗಿ ಅನುಸರಿಸುವ ಕೆಚ್ಚನ್ನೂ ಶ್ರವಣ ಮೆಚ್ಚಿದ್ದಾನೆ (ಸಂಪ್ರದಾಯದ ವಿರುದ್ಧ ಹೋಗಲು ಅವನಲ್ಲಿ ಧೈರ್ಯವಿಲ್ಲ). ಮದುವೆಯಾಗಿ ಎರಡನೆಯ ಮಗು ತಾಯಿಯ ಸೊಂಟವನ್ನು ಬಿಡುವಂತಾದಾಗ, ಮಕ್ಕಳನ್ನು ಅತ್ತೆಮಾವಂದಿರಿಗೆ ಒಪ್ಪಿಸಿ ಆಕೆ ಸಾಂಸ್ಕೃತಿಕ ಸಮ್ಮೇಳನಕ್ಕೆ ಹೋಗಲು ಉತ್ಸುಕತೆ ತೋರಿಸಿದ್ದಾಳೆ. ಇದು ಮನೆಯವರಿಗೆ ನುಂಗಲಾರದ ತುತ್ತಾಗಿದೆ. ಹಾಗಿದ್ದರೂ ಅವರ (ಅರೆ)ಮನವೊಲಿಸಿ ಸಮ್ಮೇಳನಕ್ಕೆ ಬಂದಾಗಿದೆ. ಐದು ದಿನದ ಕಾರ್ಯಕ್ರಮದಲ್ಲಿ ಮೂರನೆಯ ದಿನವೇ ಗಂಡನಿಂದ ಬುಲಾವ್ ಬಂದಿದೆ. ಯಾಕೆ? ಮನೆಯ ಬಿಸಿಯನ್ನು ಅವನೊಬ್ಬನೇ ಎದುರಿಸಲು ಸಾಧ್ಯವಾಗಿಲ್ಲ. ಸೊಸೆಯಾಗಿ ಜವಾಬ್ದಾರಿಯನ್ನು ಕೈಬಿಟ್ಟ ಅವಳನ್ನು ಅತ್ತೆಮಾವ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಬಲಕ್ಕಾಗಿ ಆಶಾ ಗಂಡನನ್ನು ನೋಡಿದರೆ ಅವನು ಗೋಡೆ ನೋಡುತ್ತಿದ್ದಾನೆ. ಪ್ರತ್ಯೇಕವಾಗಿ ಮಾತಾಡಿಸಿದಾಗ ಏನೆನ್ನುತ್ತಾನೆ? ತಾಯ್ತಂದೆಯರನ್ನು ಎದುರಿಸಲು ಆಗುವುದಿಲ್ಲ, ಅವರಿಗೆ ವಯಸ್ಸಾಗಿದೆ, ನೀನೇ ಹೊಂದಿಕೋ ಎಂದಿದ್ದಾನೆ. ಆಕೆಗಿದು ವಿಶ್ವಾಸದ್ರೋಹ ಎನ್ನಿಸಿದೆ. ಬುದ್ಧಿ ತೋಚದೆ ನನ್ನಲ್ಲಿ ಧಾವಿಸಿದ್ದಾಳೆ.
ಇಲ್ಲೇನು ನಡೆಯುತ್ತಿದೆ? ಜನರು ಸಂಗಾತಿಯನ್ನು ಆರಿಸಿಕೊಳ್ಳುವಾಗ ಸಮಸ್ಯೆಯನ್ನೂ ಆರಿಸಿಕೊಳ್ಳುತ್ತಾರೆ ಎಂದು ದಾಂಪತ್ಯ ತಜ್ಞ ಡ್ಯಾನ್ ವೈಲ್ ಹೇಳುತ್ತಾನೆ. ಆಶಾಳ ಅಸಾಂಪ್ರದಾಯಿಕ ನಿಲುವನ್ನು ಮೆಚ್ಚಿ ಮದುವೆಯಾದ ಶ್ರವಣನಿಗೆ ಮದುವೆಯ ನಂತರ ಆಕೆಯ ಅಸಾಂಪ್ರದಾಯಿಕ ಧೋರಣೆಯೇ ಸರಿಬರುತ್ತಿಲ್ಲ. ಪರಿಹಾರವೇನು? ಸಮಸ್ಯೆಗೆ ಶ್ರವಣನ ಒಳಗಣ್ಣನ್ನು ತೆರೆಸುವುದು. ಇದನ್ನು ಹೇಳಲು ಹೊರಟರೆ ಆತ ಆಕೆಯ ಮಾತನ್ನು ಪೂರ್ತಿಮಾಡಲು ಅವಕಾಶ ಕೊಡುವುದಿಲ್ಲ. ಸುಮಾರು ಚರ್ಚೆಯ ನಂತರ ಗಂಡನಿಗೆ ಬರೆದು ತಿಳಿಸಲು ಆಶಾ ನಿರ್ಧರಿಸಿದ್ದಾಳೆ. ವಿಷಯ ಏನಿರಬೇಕು?
“ನಮ್ಮಿಬ್ಬರ ಸಂಬಂಧವನ್ನು ಪುನರ್ವಿಮರ್ಶೆ ಮಾಡುವ ಕಾಲ ಬಂದಿದೆ. ಸ್ವಲ್ಪಕಾಲ ನಾವು ಪತಿಪತ್ನಿಯರು ಅಲ್ಲವೆಂದುಕೋ. ನನ್ನನ್ನು ಯಾವುದೋ ಸಂದರ್ಭದಲ್ಲಿ ಮೊಟ್ಟಮೊದಲು ನೋಡುತ್ತಿದ್ದೀಯಾ ಎಂದುಕೋ. ನನ್ನನ್ನು ಇಷ್ಟಪಡುತ್ತೀಯಾ? ಹೌದಾದರೆ ಏನೇನು ಇಷ್ಟವಾಗುತ್ತದೆ? ಈ ಹುಡುಗಿಯೊಡನೆ ಪ್ರೀತಿಯ ಸಂಬಂಧವನ್ನು ಕಟ್ಟಿಕೊಳ್ಳಬೇಕು ಎಂದು ಆಸೆಯಿದೆಯೆ? ಹೌದಾದರೆ ಒಡನಾಟ ಹೇಗಿರಬೇಕು ಎಂದು ಕನಸು ಕಾಣುತ್ತೀಯಾ? ಆಗ ನಿನಗೆ ತೃಪ್ತಿ, ಸಾರ್ಥಕತೆ ಹೇಗಿರುತ್ತದೆ? ಇವಳೊಡನೆ ಬದುಕು ಕಾಯಂ ಆದರೆ ಸಾಕು, ಸುಖವಾಗಿರಬಲ್ಲೆ ಎನ್ನುವಷ್ಟೇ ಕಲ್ಪನೆ ಸುಖವಾಗಿರುವುದಕ್ಕೆ ಸಾಕಲ್ಲವೆ?
“ನಮ್ಮ ಪರಿಣಯದಲ್ಲಿ ಯಾವ ಕಟ್ಟುಪಾಡುಗಳೂ ಇರಲಿಲ್ಲ. ನಾವಿಬ್ಬರೂ ಒಟ್ಟಿಗಿರುವ ಕಾಲವು ನನ್ನ ಬಿಡುವನ್ನು ಅವಲಂಬಿಸಿ ಇರುತ್ತಿತ್ತು. ನಾನು ಹಾಕಿದ ನಿಯಮಗಳನ್ನು ಒಪ್ಪಿಕೊಂಡು ನನ್ನನ್ನು ಮುಟ್ಟುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಮದುವೆಯಾಗು ಎಂದು ಗೋಗರೆಯುತ್ತಿದ್ದೆ. ಯಾಕೆ? ಸೆಕ್ಸ್ಗೋಸ್ಕರ. ಒಂದುವೇಳೆ ನಾನು ಒಪ್ಪಿದ್ದರೆ ಮದುವೆಯಿಲ್ಲದೆ ಮಲಗುವುದಕ್ಕೂ ತಯಾರಿದ್ದೆ. ಇಲ್ಲೊಂದು ವೈಚಿತ್ರ್ಯ ಗಮನಿಸಿದೆಯಾ? ನಮ್ಮಿಬ್ಬರ ಸಂಬಂಧವು ಹಿರಿಯರ ಪ್ರಭಾವಕ್ಕೆ ಒಳಗಾಗದೆ, ಸಂಪ್ರದಾಯದ ಕಟ್ಟುಪಾಡುಗಳನ್ನು ಅಲಕ್ಷಿಸಿ ಮೆರೆಯುತ್ತಿತ್ತು.
“ಸರಿ, ಮದುವೆಯಾಯಿತು. ಅದರೊಡನೆ ಕಟ್ಟುಪಾಡುಗಳು ನನ್ನಮೇಲೆ ಹೇರಲ್ಪಟ್ಟವು. ನಾನು ನಿಮ್ಮವರೊಂದಿಗೆ ಹೊಂದಿಕೊಳ್ಳಬೇಕು, ಸರಿ. ಆದರೆ ನಿನ್ನ ತಾಯ್ತಂದೆಯರನ್ನು ನೀನೇ ಎದುರಿಸಲು ಆಗುತ್ತಿಲ್ಲ ಎನ್ನುವ, ಹಾಗೂ ಅವರನ್ನು ನಾನು ಒಲಿಸಿಕೊಳ್ಳುವ ಕಾರಣದಿಂದ ನನ್ನ ಸ್ವಾತಂತ್ರ್ಯ ಮೊಟಕಾಯಿತು. ನನ್ನ ಬೆಳವಣಿಗೆ ನಿಂತುಹೋಯಿತು. ಅಂದರೆ, ಯಾವ ಗುಣವನ್ನು ಮೆಚ್ಚಿ ನನ್ನನ್ನು ವರಿಸಿದೆಯೋ ಅದನ್ನೇ ನನ್ನಿಂದ ಕಿತ್ತುಕೊಂಡು ಬದುಕು ಎನ್ನುತ್ತಿದ್ದೀಯಾ. ಒಂದುವೇಳೆ ನನ್ನ ಗುಣವನ್ನು ಬದಲಿಸಿದರೆ ಒಳಗೊಳಗೆ ಸಾಯುತ್ತೇನೆ. ನೀನು ನನ್ನನ್ನು ಕಳೆದುಕೊಳ್ಳುತ್ತೀಯಾ. ಇದು ನಿನಗಿಷ್ಟವೆ? ಯೋಚಿಸು.
“ಮುಂಚೆ ಸಂಪ್ರದಾಯದ ಕಟ್ಟುಪಾಡುಗಳಿಲ್ಲದೆ ಅತ್ಯಂತ ಸುಖವಾಗಿದ್ದೆವು. ಮದುವೆಯ ನಿಯಮಗಳಿಗೆ ಒಳಗಾಗಿ ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರರ್ಥ ಏನು? ಮದುವೆಯು ಪ್ರೀತಿಗೆ ಅಡ್ಡಿಯಾಗುತ್ತಿದೆ. ಹಾಗೂ, ಪ್ರೀತಿಯಿಂದ ಇರಬೇಕಾದರೆ ಮದುವೆಯ ಭದ್ರತೆ ಬೇಕಾಗಿಲ್ಲ. ಪ್ರೀತಿಸಲು ಸ್ವಾತಂತ್ರ್ಯ ಬೇಕು, ಭದ್ರತೆಯ ಹೆಸರಿನಲ್ಲಿ ಬಂಧನವಲ್ಲ. ಬಂಧನದಲ್ಲಿ ಪ್ರೀತಿ ಅರಳುವುದಿಲ್ಲ. ಗಾಲಿಬ್ನ ಶೇರ್, “ಗಿರೀ ಥೀ ಜಿಸ್ಪೆ ಕಲ್ ಬಿಜಲೀ ವೊ ಮೇರಾ ಆಶಿಯಾ ಕ್ಯೋಂ” ಶೇರ್ ನೆನಪಿಸಿಕೋ. (ಪಂಜರದಲ್ಲಿ ಬಂಧಿಸಲ್ಪಟ್ಟ ಗಿಳಿಗೆ ಮರಿಗಳು ಸತ್ತು ಹೋದದ್ದನ್ನು ಸಂಗಾತಿ ಗಿಳಿ ಹಾರಿಬಂದು ತಿಳಿಸಿದಾಗ, “ಸತ್ತವರು ನನ್ನವರು ಹೇಗಾದರು?” ಎನ್ನುತ್ತದೆ. ಸ್ವಾತಂತ್ರ್ಯ ಕಳೆದುಕೊಂಡ ನಂತರ ಏನೇ ಕಳೆದುಕೊಂಡರೂ ವ್ಯತ್ಯಾಸವಾಗುವುದಿಲ್ಲ ಎಂದಿದರ ತಾತ್ಪರ್ಯ.)
“ನಮ್ಮ ದಾಂಪತ್ಯ ತೀರಾ ಕೆಟ್ಟಿಲ್ಲ. ನಮ್ಮ ಪ್ರೀತಿಯನ್ನು ಮರಳಿ ತರಲು ದಾರಿಯಿದೆ – ನೀನೂ ಮನಸ್ಸು ಮಾಡಿದರೆ. ಏನದು? ಸ್ವಲ್ಪಕಾಲ ನಾವಿಬ್ಬರೂ ಮದುವೆ ಆಗಿದ್ದೇವೆ ಎಂಬುದನ್ನೇ ಮರೆತುಬಿಡೋಣ. ಮುಂಚಿನಂತೆ ಪ್ರೇಮಿಗಳಾಗಿ ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಿ ಸಮೀಪಿಸಲು ಶುರುಮಾಡೋಣ. ನಾವಿಬ್ಬರು ಒಂದುಕಡೆ, ನಮ್ಮಿಬ್ಬರ ವಿರುದ್ಧ ಕಟ್ಟುಪಾಡುಗಳು ಇನ್ನೊಂದೆಡೆ ಎನ್ನೋಣ. ವಾಡಿಕೆಯ ದಾಂಪತ್ಯದಿಂದ ಹೊರಬಂದು ನಮ್ಮದೇ ನಂಬಿಕೆಗಳ ದಾಂಪತ್ಯವನ್ನು ಕಟ್ಟಿಕೊಳ್ಳೋಣ.
“ಸ್ವತಂತ್ರಳಾಗಿ, ಸ್ವಚ್ಛಂದವಾಗಿದ್ದ ನನ್ನನ್ನು ಪ್ರೀತಿಸಿದ್ದೆ ಎಂದರೆ ನನ್ನ ಸ್ವಚ್ಛಂದತೆಯನ್ನೂ ಪ್ರೀತಿಸಿದ್ದೀಯಾ. ಗಿಡದಲ್ಲಿರುವ ಹೂವನ್ನು ನೋಡಿ, ಮುಟ್ಟಿ, ಮೂಸಿ ಆಸ್ವಾದಿಸಬೇಕು. ಬದಲು ಕಿತ್ತುಕೊಂಡರೆ ಬಾಡುತ್ತದೆ. ನನ್ನ ಸ್ವಾತಂತ್ರ್ಯಕ್ಕೆ ನನ್ನನ್ನು ಬಿಡು. ಸ್ವಾತಂತ್ರ್ಯ ಸಿಕ್ಕಷ್ಟೂ ನಾನು ನಾನೇ ಆಗುತ್ತೇನೆ, ಆಗ ನನ್ನಲ್ಲಿ ಹೊಸತನ ಹೆಚ್ಚಾಗುತ್ತ ನಿನ್ನ ಕುತೂಹಲ ಅರಳಿ ನಮ್ಮಿಬ್ಬರ ನಡುವಿನ ಆಕರ್ಷಣೆಗೆ ಜೀವ ಬರುತ್ತದೆ. ಇದು ಬೇಡವಾದರೆ ಸಂಪ್ರದಾಯಕ್ಕೆ ಬಲಿಯಾಗುತ್ತೇನೆ. ನೀನು ನನ್ನನ್ನು ಕಳೆದುಕೊಳ್ಳುತ್ತೀಯಾ. ನಿನಗೇನು ಬೇಕೆಂದು ಯೋಚಿಸು.”
ಗಂಡುಹೆಣ್ಣುಗಳು ಮದುವೆ ಆಗಿದ್ದನ್ನು ಮರೆತು ಪ್ರೇಮಿಗಳಂತೆ ವರ್ತಿಸಿದರೆ ಹೆಚ್ಚಿನ ದಾಂಪತ್ಯಗಳು ಅನ್ಯೋನ್ಯತೆಯ ಕಡೆಗೆ ಹೆಜ್ಜೆಯಿಡುತ್ತವೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.