ಸುಖೀ ದಾಂಪತ್ಯ ೨೩೮
ಅನ್ಯೋನ್ಯತೆಯ ಹುಟ್ಟಿನಲ್ಲಿ ಇಬ್ಬರ ನಡುವಿನ ಸೀಮಾರೇಖೆ ಮಹತ್ವದ ಪಾತ್ರ ವಹಿಸುತ್ತದೆ.
238: ಅನ್ಯೋನ್ಯತೆಗೆ ಹುಡುಕಾಟ – 17
ಅನ್ಯೋನ್ಯತೆಯ ಬಗೆಗೆ ಮಾತಾಡುತ್ತ, ಸ್ವಯಂಪ್ರೀತಿ ಎಷ್ಟು ಮುಖ್ಯವಾಗುತ್ತದೆ ಎಂದು ಕಂಡುಕೊಂಡೆವು. ಸ್ವಯಂಪ್ರೀತಿಯ ಕೊರತೆ ಇರುವ ಸಂಗಾತಿಯ ಜೊತೆಗೆ ಅನ್ಯೋನ್ಯತೆಯನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದರ ಬಗೆಗೆ ಈ ಸಲ ಚರ್ಚಿಸೋಣ. ಮೊದಲು, ಒಬ್ಬಳು ತನ್ನ ಗಂಡನೊಡನೆ ನಡೆಸುವ ಸಂಭಾಷಣೆಯ ಈ ತುಣುಕುಗಳನ್ನು ಗಮನಿಸಿ:
“ನಿನ್ನೆ ಗೆಳತಿಯ ಜೊತೆಗೆ ಮಾತಾಡುವಾಗ ಟೀವಿ ಸೀರಿಯಲ್‌ನಲ್ಲಿ ಹೆಣ್ಣನ್ನು ಯಾಕೆ ಈ ತರಹ ಚಿತ್ರಿಸುತ್ತಾರೆ ಅಂತ ಮಾತು ಬಂತು…” “ನಾನು ಟೀವಿ ನೋಡೋದೇ ಇಲ್ಲ. ನೀನುಂಟು, ನಿನ್ನ ಗೆಳತಿ ಉಂಟು.”
“ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ ಹೇಳಿ?” “ಮದುವೆಯಾಗಿ ಹತ್ತು ವರ್ಷ ಆಯಿತು, ಅದೇ ಪ್ರಶ್ನೆಯನ್ನು ಎಷ್ಟು ಸಲ ಕೇಳುತ್ತಿದ್ದೀಯಾ?”
“ಈಗಲೇ ಒಳಗೆ ಹೋಗಬೇಡಿ, ಬೇಗ ಮುಗಿಸಿಬಿಡ್ತೀರಿ. ಸ್ವಲ್ಪ ಹೊತ್ತು ಹೀಗೆಯೇ ಮುದ್ದಾಡುತ್ತ ಇರೋಣ.” “ತಡವಾದರೆ ನನಗೆ ಹೊರಗೇ ಆಗಿಬಿಡುತ್ತದೆ.”
“(ಕಾಮಕೂಟದ ನಂತರ) ರೀ, ಹಾಗೆಯೇ ಸ್ವಲ್ಪ ಹೊತ್ತು ತಬ್ಬಿಕೊಂಡು ಇರೋಣ.” “ಮೈಗೆ ಮೈ ತಾಗುತ್ತಿದ್ದರೆ ನನಗೆ ನಿದ್ರೆ ಬರುವುದಿಲ್ಲ.”
“ಸೃಷ್ಟಿಯ ನಿಯಮಗಳು ಎಷ್ಟು ವಿಚಿತ್ರ ಆಗಿರುತ್ತವೆ ಎಂದರೆ…” “ಅದನ್ನೆಲ್ಲ ತೆಗೆದುಕೊಂಡು ನಮಗೆ ಮಾಡೋದೇನಿದೆ?”
ಇಲ್ಲೇನು ನಡೆಯುತ್ತಿದೆ? ಹೆಂಡತಿಯು ಹತ್ತಿರವಾಗಲು, ಬೆರೆಯಲು ಹೋದರೆ ಗಂಡ ಒಲ್ಲೆ ಎಂದು ದೂರವಾಗುತ್ತಿದ್ದಾನೆ. ಹಾಗೆಂದು ಇಬ್ಬರ ನಡುವೆ ವ್ಯಾವಹಾರಿಕ ಸಂಪರ್ಕ ನಡೆಯುವುದಿಲ್ಲ ಎಂದಿಲ್ಲ – ಎಲ್ಲವೂ ಒಂದು ಮಿತಿಯೊಳಗೆ ನಡೆಯುತ್ತಿದೆ. ಜಗಳವಂತೂ ಇಲ್ಲವೇ ಇಲ್ಲ. ಆದರೆ ಕಾಮಕೂಟದಂಥ ಮೈಗೆ ಮೈಹಚ್ಚುವ ಸಂಗತಿಯಲ್ಲೂ ಆಕೆಗೆ ಯಾವುದೇ ರೀತಿಯ ಆಳವಾದ ಭಾವನಾತ್ಮಕ ಅಥವಾ ಶಾರೀರಿಕ ಅನುಭವ ಆಗುತ್ತಿಲ್ಲ. ಇಂಥ ಗಂಡನ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲದೆ ತಲೆ ಚಚ್ಚಿಕೊಳ್ಳುವ ಹೆಂಗಸರನ್ನು ನೀವು ನೋಡಿರಬಹುದು. ಇಂಥ ಗಂಡಸರ ಬಗೆಗೆ ತಿಳಿಯೋಣ. (ಇಲ್ಲೊಂದು ಮಾತು: ಇಲ್ಲಿ ವಿವರಿಸುವ ಗಂಡಸರಂತೆ ಹೆಂಗಸರೂ ಇರುತ್ತಾರೆ. ಈ ಸ್ವಭಾವವು ಹೆಚ್ಚಿನಂಶ ಗಂಡಸರಲ್ಲಿ ಕಂಡುಬರುವುದರಿಂದ ಅವರನ್ನು ಗಮನದಲ್ಲಿ ಇಟ್ಟುಕೊಂಡು ಬರೆಯುತ್ತಿದ್ದೇನೆ.)
ಒಂದು ಜೋಡಿಯಲ್ಲಿ ಅನ್ಯೋನ್ಯತೆಯ ಅನಿಸಿಕೆ ಹುಟ್ಟುವ ರೀತಿ ಹೇಗೆ? ಸಂಗಾತಿಯ ಜೊತೆಗೆ ಸಂಪರ್ಕ ನಡೆಯುವಾಗ ನಮ್ಮೊಳಗೆ ಅನುಭವ ಸ್ಫುರಿಸುತ್ತದೆ – ಇದಕ್ಕೆ ಅನುಭೂತಿ ಎಂದು ಕರೆಯೋಣ. (ಉದಾಹರಣೆಗೆ, ಮುತ್ತು ಕೊಡುತ್ತಿರುವಾಗ ಆಗುವ ಸ್ಪರ್ಶವು ಒಂದು ಅನುಭವ. ಮುತ್ತಿನ ಕ್ರಿಯೆ ಮುಗಿದ ನಂತರ ಆದ ಅನುಭವವನ್ನು ಅಂತರ್ಗತ ಮಾಡಿಕೊಂಡಾಗ ಒಳಗೊಳಗೆ ಆಗುವ ಬದಲಾವಣೆಯೇ ಅನುಭೂತಿ. ಸ್ವಂತ ಅನುಭವದಿಂದ ಬಂದಂಥ ತಿಳಿವು ಅನುಭೂತಿ. ಅನುಭವಿಸುವ ಕ್ಷಣಗಳು ಮುಗಿದ ನಂತರವೂ ಅನುಭೂತಿ ಉಳಿಯುತ್ತದೆ.) ಪಿಯಾ ಮೆಲ್ಲೋಡಿ ಪ್ರಕಾರ ನಾವು ಐದು ಆಯಾಮಗಳಲ್ಲಿ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ – ಬೌದ್ಧಿಕ, ಭಾವುಕ, ಶಾರೀರಿಕ, ಲೈಂಗಿಕ ಹಾಗೂ ಆಧ್ಯಾತ್ಮಿಕ (ಮೇಲಿನ ಸಂಭಾಷಣೆಯಲ್ಲಿ ಇವುಗಳನ್ನು ಕ್ರಮವಾಗಿ ಗಮನಿಸಿ).
ಅನುಭೂತಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ಇನ್ನೊಂದು ಅಂಶವೂ ಇದೆ: ಎರಡು ವ್ಯಕ್ತಿಗಳು ಸಂವಹನಿಸುವಾಗ ಅವರ ಮಿತಿಮೇರೆಗಳನ್ನು ನಿರ್ಧರಿಸುವ ಸೀಮಾರೇಖೆಯೊಂದು (boundary) ನಡುವೆ ಇರುತ್ತದೆ. ಇದು, “ನಾನು” ಎನ್ನುವುದನ್ನು “ನಾನಲ್ಲದ್ದು” ಎನ್ನುವುದರಿಂದ ಬೇರ್ಪಡಿಸುತ್ತದೆ. ಸೀಮಾರೇಖೆಯನ್ನು ಜಾಲರಿ ಇರುವ ಗೋಡೆಗೆ ಹೋಲಿಸಬಹುದು. ಜಾಲರಿಯ ರಂಧ್ರಗಳನ್ನು ಹೆಚ್ಚುಕಡಿಮೆ ಮಾಡುವುದರ ಮೂಲಕ ಆಚೆಯಿಂದ ಬರುವುದನ್ನು ನಿಯಂತ್ರಿಸುತ್ತೇವೆ. ಇನ್ನೊಬ್ಬರು ನಮಗೆ ಬೇಕಾದಾಗ ಎಲ್ಲ ರಂಧ್ರಗಳನ್ನೂ ವಿಶಾಲವಾಗಿ ತೆರೆಯುತ್ತೇವೆ; ತೀರಾ ಬೇಡ ಎನ್ನಿಸಿದಾಗ ಎಲ್ಲ ರಂಧ್ರಗಳನ್ನೂ ಮುಚ್ಚಿಬಿಡುತ್ತೇವೆ. ಹಾಗಾಗಿ ಈ ಸೀಮಾರೇಖೆಯು ಸಂಪರ್ಕದ ಸೇತುವೆಯೂ ಹೌದು, ಸಂಪರ್ಕದಿಂದ ರಕ್ಷಿಸಿಕೊಳ್ಳುವ ಗೋಡೆಯೂ ಹೌದು. ಒಂದು ಆರೋಗ್ಯಕರ ಸಂಬಂಧಕ್ಕೆ ಸೀಮಾರೇಖೆ ಬೇಕೇಬೇಕು. ಇಲ್ಲದಿದ್ದರೆ ಇನ್ನೊಬ್ಬರು ನಮ್ಮ ಮೇಲೆ ತೆಕ್ಕೆಬಿದ್ದಂತಾಗಿ ಒದ್ದಾಡುವ ಪ್ರಸಂಗ ಬರುತ್ತದೆ.
ಈಗ ಮೇಲಿನ ಸಂಭಾಷಣೆಯಲ್ಲಿ ಸೀಮಾರೇಖೆಯನ್ನು ಗಮನಿಸಿ. ಇಲ್ಲಿ ಗಂಡ “ನಾನು ಇಷ್ಟೇ, ನನ್ನಿಂದ ಹೆಚ್ಚಿನದನ್ನು ಅಪೇಕ್ಷಿಸಬೇಡ” ಎಂದು ಜಾಲರಿಯ ಬದಲಾಗಿ ಗೋಡೆ ಏರಿಸುತ್ತಿರುವುದು ಎದ್ದುಕಾಣುತ್ತದೆ. ಇಂಥವರಿಗೆ ಗೋಡಿಗರು, ಹಾಗೂ ಇವರು ಮಾಡುವುದನ್ನು ಗೋಡೀಕರಣ ಎಂದು ಕರೆಯೋಣ. ಗಮನಿಸಿ: ಇದು, “ನೀನು ಬೇಡ” ಎನ್ನುವ ಸಂಗಾತಿಯ ಬಗೆಗಿನ ತಿರಸ್ಕಾರ ಅಲ್ಲ; ಬದಲಾಗಿ, “ನನಗೇ ಸ್ಪಂದಿಸಲು ಗೊತ್ತಿಲ್ಲ” ಎನ್ನುವುದು ಎದ್ದುಕಾಣುತ್ತದೆ. ಇವರ ಈ ವರ್ತನೆ ಎಲ್ಲಿಂದ ಬರುತ್ತದೆ ಎಂದು ತಿಳಿದುಕೊಳ್ಳಲು ಒಂದು ದೃಷ್ಟಾಂತ: ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಮಾತ್ರ ಇದ್ದಾರೆ. ಅವರು ಪರಸ್ಪರ ಮಾತಾಡುವುದು, ಎದುರು ಕುಳಿತು ಹರಟೆ ಹೊಡೆಯುವುದು, ಯಾವುದೊಂದು ಚಟುವಟಿಕೆಯನ್ನು ಕೂಡಿ ಮಾಡುವುದು ತೀರಾ ಕಡಿಮೆ. ಅವರಿಗೊಂದು ಗಂಡು ಮಗು ಹುಟ್ಟುತ್ತದೆ. ಅದು ಬೆಳೆಯುತ್ತಿರುವಾಗ ತಾಯ್ತಂದೆಯರ ನಡುವಿನ ಸಂವಹನಹೀನತೆಯು ಅನುಭವಕ್ಕೆ ಬರುತ್ತ, ಮಗುವಿನಲ್ಲಿ ಅಂತರ್ಗತಗೊಳ್ಳುತ್ತದೆ. ಹೀಗೆ ಬೆಳೆದವರಲ್ಲಿ ಬಾಲ್ಯದ ಗಾಯಗಳು ಇರುವುದಾದರೂ ಅವುಗಳಲ್ಲಿ ನೋವಿಲ್ಲ – ಅಂದರೆ, “ನೀನು ಹೀಗಿರಕೂಡದು” ಎನ್ನುವ ಒತ್ತಾಯವಿಲ್ಲದೆ, “ನೀನು ಇರುವುದೇ ನಮಗೆ ಲೆಕ್ಕಕ್ಕಿಲ್ಲ” ಎನ್ನುವ ನ್ಯೂನತೆಗಳು. ಇವುಗಳಲ್ಲಿ ಟೀಕಾತ್ಮಕ ನಿರೀಕ್ಷೆ ಇರದೆ ನಿಷ್ಕ್ರಿಯತೆ ಮಾತ್ರವಿದೆ. ಇಲ್ಲಿ ಬೇಡದ/ನೋವಿನ ಅನುಭವಗಳ ಬದಲು ಅನುಭವಗಳೇ ಕಡಿಮೆ. ಹಾಗಾಗಿ ಇವರಲ್ಲಿ ವ್ಯಾವಹಾರಿಕ ಅಸ್ತಿತ್ವ ಮಾತ್ರವಿದೆಯೇ ವಿನಾ ಭಾವನಾತ್ಮಕ ಅಥವಾ ಪಾರಸ್ಪರಿಕ ಅಸ್ತಿತ್ವವಿಲ್ಲ. ಉದಾಹರಣೆಗೆ, ಇವನು ಮಗುವಾಗಿ ಇರುವಾಗ ಜ್ವರದಿಂದ ಮಲಗಿದ್ದರೆ ಅಪ್ಪ ಮುಟ್ಟದೆ ದೂರ ನಿಂತುಕೊಂಡು ಜ್ವರ ಕಡಿಮೆ ಇದೆಯೋ ಹೆಚ್ಚಿದೆಯೋ ಎಂದು ಕೇಳಿದ್ದಾನೆ. ಇಂಥವರು ಸುತ್ತಲೂ ಗೋಡೆಯಿರುವ ಒಂಟಿತನದ ನಮೂನೆಯನ್ನು ಬೆಳೆಸಿಕೊಳ್ಳುತ್ತಾರೆ. ದೊಡ್ಡವರಾದಾಗ ಸ್ನೇಹಿತರೊಡನೆ ಮಾತಾಡಬಲ್ಲರೇ ಹೊರತು ಮನೆಯೊಳಗೆ ಭಾವನೆಗಳ ವಿನಿಮಯದಿಂದ ದೂರ ಉಳಿಯುತ್ತಾರೆ. (ಹುಡುಗ ಹುಡುಗಿ ನೋಡಲು ಬಂದಾಗ “ನಮ್ಮ ಹುಡುಗನಿಗೆ ಮಾತು ಕಡಿಮೆ” ಎಂದು ಹೇಳುವುದನ್ನು ನೀವು ಗಮನಿಸಿರಬಹುದು.) ಇವರ ಸಂಗಾತಿಯು ಭಾವನಾತ್ಮಕವಾಗಿ ಹತ್ತಿರವಾಗಲು ಬಂದರೆ ಅದನ್ನು ಅಂತರಂಗದಿಂದ ವಿಶ್ಲೇಷಿಸುತ್ತಾರೆ. ಸಂಗಾತಿಯ ಸಂವಹನದ ಅಳಲು ಇವರ ಗೋಡೆಯಾಚೆ ಉಳಿಯುತ್ತದೆ. ಸಂಗಾತಿಯೊಡನೆ ಮಾತಾಡುವುದು ಏನಿರುತ್ತದೆ ಎನ್ನುತ್ತ ಮಾತಿನ ನಂಟನ್ನು ಅಲ್ಲಗಳೆಯುತ್ತಾರೆ. ಮೆಚ್ಚುಗೆ ವ್ಯಕ್ತಪಡಿಸಿದರೆ ಮಿಕಿಮಿಕಿ ಮುಖ ನೋಡುತ್ತಾರೆ. ಸಂಭೋಗದ ಉದ್ದೇಶವಿಲ್ಲದೆ ತಬ್ಬಿಕೊಳ್ಳುವುದರಲ್ಲಿ, ಅಥವಾ ಸಂಭೋಗದ ನಂತರ ಅದರ ಬಗೆಗೆ ಮಾತಾಡುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸುತ್ತಾರೆ. ಅವರಲ್ಲಿ ಆರೋಗ್ಯಕರ ಸಂವಹನದ ಮಾದರಿಯೇ ಇಲ್ಲದಿರುವುದು ಎದ್ದುಕಾಣುತ್ತದೆ. ಹಾಗಾಗಿ ಇವರು ಹಾಕಿಕೊಳ್ಳುವ ಗೋಡೆ ಭದ್ರವಾಗಿದ್ದು, ಸಂವಹನಕ್ಕೆ ಅಭೇದ್ಯವಾಗಿರುತ್ತದೆ. ಇಂಥವರ ಜೊತೆಗೆ ಸಂಗಾತಿಯು ಸಂಹನಿಸಲು ಹೊರಟರೆ ಗೋಡೆಗೆ ತಲೆ ಗಟ್ಟಿಸಿಕೊಂಡಂತೆ ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ!
ಗೋಡಿಗರ ಇನ್ನೊಂದು ನಮೂನೆಯನ್ನು ಮುಂದಿನ ಸಲ ನೋಡೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.