ಸುಖೀ ದಾಂಪತ್ಯ ೨೩೫
ಕೌಟುಂಬಿಕ ಬದುಕಿನಲ್ಲಿ ಎರಡು ವಿಷಯಗಳ ಬಗೆಗೆ ಮುಕ್ತಚರ್ಚೆ ನಡೆಸಲು ಹಿಂಜರಿಯುತ್ತೇವೆ: ಒಂದು ಕಾಮುಕತೆ, ಇನ್ನೊಂದು ಸಾವು.
235: ಅನ್ಯೋನ್ಯತೆಗೆ ಹುಡುಕಾಟ – 14
ದಾಂಪತ್ಯ ಸಂಬಂಧದಲ್ಲಿರುವ ಅನ್ಯೋನ್ಯತೆಯ ಬಗೆಗೆ ಮಾತಾಡುತ್ತಿದ್ದೇವೆ. ಹೋದಸಲ ಒಂದು ಕುಟುಂಬದ ಅಪ್ಪ-ಮಗ ಹಾಗೂ ಗಂಡ-ಹೆಂಡತಿ ಇವರ ಸಂಬಂಧಗಳನ್ನು ಅನ್ವೇಷಿಸುತ್ತ ಎರಡಕ್ಕೂ ಸಾಮಾನ್ಯವಾದ ಅಂಶಗಳನ್ನು ಕಂಡುಕೊಂಡೆವು. ಸಂಬಂಧಗಳ ಬಗೆಗೆ ಇನ್ನೂ ಆಳವಾಗಿ ಯೋಚಿಸಿದರೆ ಇನ್ನೊಂದು ವಿಷಯ ಗೊತ್ತಾಗುತ್ತದೆ: ಎಲ್ಲ ಆತ್ಮೀಯ ಸಂಬಂಧಗಳು ಮೂರು ಸಾಮಾನ್ಯ ಅಂಶಗಳನ್ನು ಹಂಚಿಕೊಂಡಿವೆ: ಸಾವಿನ ಭಯ, ಒಂಟಿತನ, ಹಾಗೂ ಬಾಂಧವ್ಯದ ಬಯಕೆ. ಇದರ ಬಗೆಗೆ ವಿವರವಾಗಿ ಚಿಂತನೆ ನಡೆಸೋಣ.
ಸಾವಿನ ಭಯ: ನಾವೆಲ್ಲ ಹುಟ್ಟುವಾಗ ಒಬ್ಬರೇ ಹುಟ್ಟುತ್ತೇವೆ, ಹಾಗೂ ಸಾಯುವಾಗ ಒಬ್ಬರೇ ಸಾಯುತ್ತೇವೆ. ಆದರೆ ಯಾವಾಗ ಸಾಯುತ್ತೇವೆ ಎಂದಾಗಲೀ, ಸಾವು ಅಂದರೆ ಹೀಗೆಯೇ ಇರುತ್ತದೆ ಎಂದಾಗಲೀ ಗೊತ್ತಿರುವುದಿಲ್ಲ. ಹಾಗಾಗಿ, ಸಾವೆಂದರೆ ಇದೇ ಇರಬಹುದೆನೋ ಎಂಬ ಅನಿಸಿಕೆಯು ಬದುಕಿನ ಪ್ರತಿ ವಿಷಮ ಸ್ಥಿತಿಯಲ್ಲೂ ಮೂಡುತ್ತ ಇರುತ್ತದೆ. ಪರಿಣಾಮವಾಗಿ, ಸಾಯುವುದು ಒಂದೇ ಸಲವಾದರೂ ಸಾವಿನ ಭಯದಿಂದ ದಿನವೂ ಸಾಯುತ್ತ ಇರುತ್ತೇವೆ. ರೋಗ-ರುಜಿನಗಳು, ವೃದ್ಧಾಪ್ಯ, ಆರ್ಥಿಕ ಮುಗ್ಗಟ್ಟು, ಅಗಲಿಕೆ, ಅವಮರ್ಯಾದೆ – ಎಲ್ಲದರಲ್ಲೂ ಸಾವನ್ನು ಕಾಣುತ್ತೇವೆ. ಭಗ್ನಪ್ರೇಮದಲ್ಲಿ ಖಿನ್ನತೆ ಅನುಭವಿಸುವಾಗ ಸಾವೇ ಬಂದಿದ್ದರೆ ಚೆನ್ನಾಗಿತ್ತು ಎನ್ನುತ್ತೇವೆ. ಅಷ್ಟೇಕೆ, ನೋವಾಗಿ “ಅಯ್ಯೋ ಸತ್ತೆ!” ಎಂದು ಬೊಬ್ಬಿಡುವಾಗ ಸಾವಿನ ಸ್ಪರ್ಶಕ್ಕೆ ಒಳಗಾಗುತ್ತೇವೆ. ಬದುಕಿನಲ್ಲಿ ಯಾವುದೂ ನಿಶ್ಚಿತವಲ್ಲ – ಸಾವೊಂದರ ಹೊರತಾಗಿ – ಎಂದು ಗೊತ್ತಿದ್ದರೂ ತಲೆಯ ಮೇಲೆ ತೂಗುವ ಕತ್ತಿಯಿಂದ ದೂರವುಳಿಯಲು ಹರಸಾಹಸ ಮಾಡುತ್ತೇವೆ.
ಸಾವಿನ ಭಯದಿಂದ ದೂರವಿರಲು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಸಾವನ್ನು ಅಲ್ಲಗಳೆಯುವುದು ಅದರಲ್ಲಿ ಒಂದು. ಮರಣವನ್ನು ನೆನಪಿಸುವ ಸಂದರ್ಭಗಳನ್ನು ಪದಗಳ ಚಮತ್ಕಾರದಿಂದ ಮರೆಸುವುದು (ಉದಾ. “ಏನಾದರೂ ಹೆಚ್ಚುಕಡಿಮೆ ಆದರೆ?”; “ಸತ್ತರು” ಬದಲು “ಹೋಗಿಬಿಟ್ಟರು”; “ಹೋಗುತ್ತೇನೆ” ಬದಲು “ಬರುತ್ತೇನೆ, ನಡೆಯುತ್ತೇನೆ”). ಭವಿಷ್ಯದ ಮೇಲೆ ವರ್ತಮಾನದಲ್ಲಿ ಇದ್ದುಕೊಂಡೇ ಪ್ರಭಾವ ಬೀರಲು ಯತ್ನಿಸುವುದು ಇನ್ನೊಂದು ಕ್ರಮ. ಗ್ರಹಗತಿಗಳು ತರಬಹುದಾದ ಕುತ್ತುಗಳಿಗೆ ಶಾಂತಿ ಮಾಡುವುದು, ದೀರ್ಘಾಯುಷ್ಯಕ್ಕಾಗಿ ದೇವರ ಮೊರೆ ಹೋಗುವುದು, ಹೆಚ್ಚುವರ್ಷ ಬದುಕಲು ಆಹಾರ, ಆರೋಗ್ಯ, ಯೋಗ, ಯಾಗ, ದಾನ-ಧರ್ಮ ಇಂಥವೆಲ್ಲ ಇದರಲ್ಲಿ ಬರುತ್ತವೆ. ಮೂರನೆಯ ಹಾಗೂ ಅತ್ಯಂತ ಪ್ರಚಲಿತ ವ್ಯವಸ್ಥೆ ಎಂದರೆ ಮಕ್ಕಳನ್ನು ಹುಟ್ಟಿಸಿ ನಮ್ಮ ಛಾಪು ಉಳಿಸುವುದು. ಜೀವಶಾಸ್ತ್ರದ ಪ್ರಕಾರ, ಇಬ್ಬರು ಮಕ್ಕಳಾದರೆ ನಮ್ಮ ಡಿಎನ್ಎ ಅರ್ಧರ್ಧ ಹಂಚಿಹೋಗಿ ನಾವು ಚಿರಾಯುವಾಗುತ್ತೇವೆ!
ಒಂಟಿತನ: ನಾವೆಲ್ಲ ಒಂಟಿಯಾಗಿ ಹುಟ್ಟುತ್ತೇವೆ, ಹಾಗೂ ಒಂಟಿಯಾಗಿ ಸಾಯುತ್ತೇವೆ. ಅಷ್ಟೇ ಅಲ್ಲ, ನಮ್ಮ ಬದುಕನ್ನೂ ಹೆಚ್ಚುಕಡಿಮೆ ಒಂಟಿಯಾಗೇ ಕಳೆಯುತ್ತೇವೆ. ಒಂಟಿತನವು ಸಾವಿನ ನೆನಪನ್ನು ತಂದೊಡ್ಡುತ್ತ ಒಂಟಿಯಾದಷ್ಟೂ ಸಾವಿಗೆ ಹತ್ತಿರವಾಗಿದ್ದೇವೆ ಎನ್ನಿಸುತ್ತದೆ. ಅದು ಹೇಗೆ? ಬದುಕಿರುವ ಅನುಭವ ಉಂಟಾಗುವುದು ನಮ್ಮ ಉಸಿರಾಟ ಅಥವಾ ಶಾರೀರಿಕ ಅರಿವಿನಿಂದಲ್ಲ. ಬದಲಾಗಿ, ಇನ್ನೊಬ್ಬರು ನಮ್ಮನ್ನು ಗುರುತಿಸಿದಾಗ ಮಾತ್ರ. ಇದು ಅರ್ಥವಾಗಲು ನನ್ನ ಅನುಭವ: ಹಿಂದೆ ಬ್ಯಾಂಕಾಕ್ನ ವಿಶ್ವವಿದ್ಯಾಲಯಕ್ಕೆ ಒಬ್ಬನೇ ಭೇಟಿಕೊಟ್ಟಿದ್ದೆ. ಕಡೆಯ ದಿನ ಬಿಡುವಾದಾಗ ಯಾರದೋ ಸಲಹೆಯಂತೆ ಪಟ್ಟಾಯ ಎಂಬ ಊರನ್ನು ವೀಕ್ಷಿಸಲು ಹೊರಟೆ. ನಮ್ಮ ಹಡಗು ಎಲ್ಲರನ್ನೂ ಊರಿನಿಂದ ಹಲವು ಮೈಲುಗಳ ದೂರದ ದ್ವೀಪವೊಂದಕ್ಕೆ ತಂದುಬಿಟ್ಟಿತು. ಅಲ್ಲಿಗೆ ಬಂದವರೆಲ್ಲರೂ ಜೋಡಿಗಳೆ. ಯಾರಾದರೂ ಗುರುತಿಸಬಲ್ಲರೋ ಎಂದು ಪ್ರತಿಯೊಬ್ಬರನ್ನೂ ಮಿಕಮಿಕ ನೋಡಿದೆ. ಒಬ್ಬರೂ ಕಾಣದಿದ್ದಾಗ ಅಪರಿಚಿತರ ನಡುವೆ ಕಳೆದುಹೋದೆ. ಬಂಡೆಯೊಂದರ ಮೇಲೆ ಕುಳಿತು ಮೌನವಾಗಿ ಸಮುದ್ರವನ್ನು ಬೇಸರದಿಂದ ನೋಡುತ್ತಿದ್ದೆ. ಎಲ್ಲರೂ ನಲಿಯುತ್ತ ಮೋಜು ಮಾಡುತ್ತ ಫೋಟೋ ಕ್ಲಿಕ್ಕಿಸುತ್ತಿರುವಾಗ ನಾನು ಅನುಭವಿಸುತ್ತಿರುವ ಒಂಟಿತನದ ಬಗೆಗೆ ಹೆಂಡತಿಗೆ ಸುದೀರ್ಘ ಪತ್ರ ಬರೆದು ಮುಗಿಸಿ, ಕ್ಷಣಗಣನೆಗೆ ಶುರುಮಾಡಿದೆ. ಸಂಜೆ ಮುಖ್ಯಭೂಮಿಗೆ ಮರಳಿ ಹೊಟೆಲ್ ಒಳಗೆ ಕಾಲಿಟ್ಟು ಸ್ವಾಗತಕಾರ್ತಿಯ ಮುಗುಳ್ನಗೆಯನ್ನು ನೋಡಿದಾಗಲೇ ಹೋದ ಜೀವ ಮರಳಿ ಬಂತು. ಇದರರ್ಥ ಏನು? “ನೆನೆದವರ ಮನದಲ್ಲಿ” ಎನ್ನುವಂತೆ ನಾವು ಬದುಕಿರುವುದು ಇನ್ನೊಬ್ಬರ ಮನಸ್ಸಿನಲ್ಲಿ. ಕನ್ನಡಿಯು ನಮ್ಮ ಮುಖದರ್ಶನ ಮಾಡಿಸುವಂತೆ ಇತರರು ನಮ್ಮ ಅಸ್ತಿತ್ವದ ದರ್ಶನ ಮಾಡಿಸುತ್ತಾರೆ. ಯಾರೂ ಗುರುತಿಸದಿದ್ದರೆ ನಮ್ಮ ಅಸ್ತಿತ್ವವು ಅನುಭವಕ್ಕೆ ಬರದೆ ಒಂಟಿತನ ಶುರುವಾಗುತ್ತದೆ. ಹೆಚ್ಚು ಜೀವಿಗಳೊಡನೆ ಸಂಪರ್ಕಿಸಿದಷ್ಟೂ ಹೆಚ್ಚು ಸಾರ್ಥಕವಾಗಿ ಬದುಕಿದಂತೆ ಅನ್ನಿಸುತ್ತದೆ. ಜನ್ಮದಿನದ ಶುಭಾಶಯ ಕೋರುವವರ ಸಂಖ್ಯೆ ಹೆಚ್ಚಾದಷ್ಟೂ ಬದುಕಿದ ಖುಷಿ ಹೆಚ್ಚಾಗುತ್ತದೆ. ಬದಲಾಗಿ ಯಾರೂ ಸಂಪರ್ಕಿಸದಿದ್ದರೆ? ನೀವೇ ಊಹಿಸಿ!
ಒಂಟಿತನದಿಂದ ದೂರವಿರಲು ನಾವು ಮಾಡಿಕೊಂಡಿರುವ ವ್ಯವಸ್ಥೆ ಎಂದರೆ ಕುಟುಂಬ, ವಿವಾಹ, ಹಾಗೂ ಸ್ನೇಹಸಂಬಂಧಗಳು. ಹೆಚ್ಚಿನವರ ಗ್ರಹಿಕೆಯಂತೆ ಇವುಗಳಿಂದ ಮನದೊಳಗಿನ ಒಂಟಿತನ ಅಷ್ಟಾಗಿ ಮಾಯವಾಗಲಾರದು. ಉದಾಹರಣೆಗೆ, ಮೆಚ್ಚಿನ ಬಾಳಸಂಗಾತಿಯ ಜೊತೆಗೆ ಕಳೆಯುವ ಸಮಯವು ಹೆಚ್ಚೆಂದರೆ ದಿನದ ಮೂರನೆಯ ಒಂದು ಭಾಗ ಮಾತ್ರ. ಉಳಿದೆರಡು ಭಾಗ ನಮ್ಮಷ್ಟಕ್ಕೆ ನಾವೇ ಆಗಿರುತ್ತೇವೆ. ಅದಲ್ಲದೆ ಹೆಚ್ಚಿನ ಸಂಬಂಧಗಳಲ್ಲಿ ಬಾಂಧವ್ಯವನ್ನು, “ಜೊತೆಗಿರು, ಆದರೆ ತಲೆ ತಿನ್ನಬೇಡ” ಎನ್ನುವಂತೆ ಇಟ್ಟುಕೊಳ್ಳುತ್ತೇವೆ. ಅಂದರೆ ಒಂದುಕಡೆ ಒಂಟಿತನವನ್ನು ಪರಿಹರಿಸಲು ಹೋಗಿ ಇನ್ನೊಂದು ಕಡೆ ಅದನ್ನೇ ಆರಿಸಿಕೊಳ್ಳುವ ಪ್ರಸಂಗ ತಂದುಕೊಳ್ಳುತ್ತೇವೆ.
ಬಾಂಧವ್ಯದ ಬಯಕೆ: ಒಂಟಿತನವು ಸಸ್ತನಿಗಳಾದ ನಮಗೆ ಹೇಳಿಮಾಡಿಸಿದ್ದಲ್ಲ. ಯಾಕೆ? ಜೀವಶಾಸ್ತ್ರದ ಪ್ರಕಾರ ನಮ್ಮ ಮೈಬಿಸಿಯನ್ನು ಉಳಿಸಿಕೊಳ್ಳಲು ಇನ್ನೊಬ್ಬರ ಶರೀರದ ಬಿಸಿಯನ್ನು ಬಯಸುವುದು ಸಹಜ. ಇದರ ಮೊಟ್ಟಮೊದಲ ಅನುಭವವು ತಾಯಿಯ ಗರ್ಭದಲ್ಲಿ, ಆನಂತರ ತಾಯಿಯ ಶರೀರದ ಸ್ಪರ್ಶದಿಂದ ಆಗುತ್ತದೆ. ದೇಹಭಾಷೆಯ ಮೊದಲ ಪದಗಳು ಇಲ್ಲಿಂದಲೇ ಹುಟ್ಟುತ್ತವೆ. ಸ್ಪರ್ಶ, ಅಪ್ಪುಗೆ, ಮುತ್ತು, ಬಾಹುಬಂಧನ, ತೊಡೆಸಂದು, ಮೈಗಳ ಬೆಸೆತ ಮುಂತಾದ ಪದಗಳಿಗೆ “ಬಿಸಿ” ಅಥವಾ “ಬೆಚ್ಚಗಿನ” ಎಂಬ ಪದವನ್ನು ಸೇರಿಸಿ ನೋಡಿ: ಅದರ ಅನುಭವವೇ ಮೈ ಜುಮ್ಮೆನ್ನುವಂತೆ ಬದಲಾಗುತ್ತದೆ! ಸ್ಪರ್ಶ-ಸಂಪರ್ಕದ ಭಾವನಾತ್ಮಕ ರೂಪಗಳಾದ ಪ್ರೀತಿ ಹಾಗೂ ಬಾಂಧವ್ಯದ ಅನುಭವವೂ ಬೆಚ್ಚಗಿರುತ್ತದೆ. ಕಾರಣಾಂತರದಿಂದ ಇದು ಸಿಗದಿರುವಾಗ ಒಂಟಿತನ ಹಾಗೂ ಅನಾಥಪ್ರಜ್ಞೆ (sense of abandonment), ಹಾಗೂ ತನ್ಮೂಲಕ ಸಾವಿನ ಝಳಕು ಹೊಡೆಯುತ್ತದೆ. ಹಾಗಾಗಿ ಒಂಟಿತನ ಹಾಗೂ ಸಾವಿನ ಭಯದಿಂದ ದೂರವಿಡಲು ನಮಗೆಲ್ಲ ಬಾಂಧವ್ಯ ಬೇಕೇಬೇಕು.
ಒಂಟಿಯಾಗಿರುವ ಇಬ್ಬರು ಒಂಟಿತನ ಸಹಿಸದೆ ಮದುವೆಯಾಗುತ್ತಾರೆ ಎಂದಿಟ್ಟುಕೊಳ್ಳಿ. ಪರಸ್ಪರ ಸಮರ್ಪಕ ಸಂಗಾತಿ ಆಗಬಲ್ಲರೆ? ವಿಚಿತ್ರವೆಂದರೆ ಆಗಲಾರರು. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ಒಂಟಿತನವನ್ನು ನಿವಾರಿಸಲು ಇನ್ನೊಬ್ಬರನ್ನು ಅವಲಂಬಿಸುತ್ತಾರೆ – ಕತ್ತಲೆಗೆ ಹೆದರುವ ಇಬ್ಬರು ಪರಸ್ಪರ ಕೈಹಿಡಿದುಕೊಂಡು ನಡೆದಂತೆ. ಇಲ್ಲಿ ಕಾಣುವುದು ಬೆಸುಗೆಯೇ ವಿನಾ ಅನ್ಯೋನ್ಯತೆಯಲ್ಲ. ಬಾಂಧವ್ಯದಲ್ಲಿ ಅನ್ಯೋನ್ಯತೆ ಹುಟ್ಟಬೇಕಾದರೆ ಒಂಟಿತನಕ್ಕೆ ಸಂಗಾತಿಯನ್ನು ಅವಲಂಬಿಸದೆ ತಮ್ಮ ನೆರವಿನ ಅಗತ್ಯವನ್ನು ತಾವೇ ಪೂರೈಸಿಕೊಳ್ಳಬೇಕು. ಇದರ ಬಗೆಗೆ ಮುಂದಿನ ಸಲ ನೋಡೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.