ಸುಖೀ ದಾಂಪತ್ಯ ೨೩೩
ದಾಂಪತ್ಯದಲ್ಲಿ ಒತ್ತಾಯದ ವಿಧೇಯತೆ ಹೆಚ್ಚಾದಷ್ಟೂ ಸ್ವತಂತ್ರ ವಿಚಾರಪರತೆ ಕಡಿಮೆಯಾಗುತ್ತ ಸೃಜನಶೀಲತೆ ಮಾಯವಾಗುತ್ತದೆ.
233: ಅನ್ಯೋನ್ಯತೆಗೆ ಹುಡುಕಾಟ – 12
ಮಾನವರಲ್ಲಿ ಸಹಜವಾಗಿ ಬರುವ ಅನ್ಯೋನ್ಯತೆಯು ದಾಂಪತ್ಯದಲ್ಲಿ ಸಮಸ್ಯೆಯಾಗುವುದಕ್ಕೆ ಬಾಲ್ಯದಲ್ಲಿ ಹಿರಿಯರೊಂದಿಗೆ ಕಟ್ಟಿಕೊಂಡಿರುವ ನಂಟಿನ ಬಗೆ, ಹಾಗೂ ಅವಮಾನ-ತಪ್ಪಿತಸ್ಥ ಭಾವಗಳು ಕಾರಣ ಎಂದು ವಿವರಿಸುತ್ತಿದ್ದೆ.
ಮಕ್ಕಳು ಹೆತ್ತವರ ಕಟ್ಟಪ್ಪಣೆಗಳಿಗೆ ಒಳಗಾಗಿ ಮಾನಸಿಕ ಆಘಾತ ಅನುಭವಿಸುತ್ತಾರೆ ಎಂದು ಹೇಳುತ್ತಿದ್ದೆ. ಈ ಆಘಾತಗಳು ಎಷ್ಟು ತೀವ್ರವಾಗಿರುತ್ತವೆ ಎಂದರೆ, ಆಡುವ ಮಗುವಿನ ಕೈಯಿಂದ ಆಟಿಕೆಯನ್ನು ಕಿತ್ತುಕೊಂಡರೆ ದೊಡ್ಡವರ ಕೈಯಿಂದ ಉದ್ಯೊಗವನ್ನು ಕಿತ್ತುಕೊಂಡಷ್ಟು ನೋವಾಗುತ್ತದೆ. ಹೆತ್ತವರು ಮಕ್ಕಳ ಆಘಾತಕ್ಕೆ ಸ್ಪಂದಿಸುವುದರಲ್ಲೂ ಸಮಸ್ಯೆಯಿದೆ: “ಉಚಿತ ವರ್ತನೆ” ಎನ್ನುವುದರ ಬಗೆಗೆ ಯಾರಿಗೂ ಸ್ಪಷ್ಟತೆಯಿಲ್ಲ. ಹಾಗಾಗಿ, ಮಗುವು ಆಘಾತಕ್ಕೆ ಒಳಗಾದಾಗ ಪ್ರೀತಿಯ ನೆರಳಲ್ಲಿ ಅನುಭವಿಸಿ ಕಳೆಯಲು ಬಿಡುವುದಿಲ್ಲ. ಆತಂಕದಿಂದ, “ನಿನಗೇನೂ ಆಗಿಲ್ಲ!” ಎಂದು ಆಘಾತವನ್ನು ಅಲ್ಲಗಳೆಯಲು ನೋಡುತ್ತಾರೆ. ಪರಿಣಾಮವಾಗಿ ಮಕ್ಕಳು ಅಂತರಂಗದ ನೋವನ್ನು ಮರೆಯುವುದಕ್ಕಾಗಿ ಹುಚ್ಚಾಪಟ್ಟೆ ಟೀವಿ/ಮೊಬೈಲ್ ವೀಕ್ಷಣೆ, ಮಾದಕವಸ್ತು ಸೇವನೆ ಇತ್ಯಾದಿ ಉಪಾಯ ಹುಡುಕಿಕೊಳ್ಳುತ್ತಾರೆ. ಇಲ್ಲಿ ಇನ್ನೊಂದು ಅನಾಹುತವೂ ನಡೆಯುತ್ತದೆ: ಆಘಾತಗಳು ಹೆಚ್ಚಾದಷ್ಟೂ ಸೃಜನಶೀಲತೆ ಮಾಯವಾಗುತ್ತದೆ!
ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದಕ್ಕೆ ಸೃಜನಶೀಲತೆ (creativity) ಅಗತ್ಯವಾಗಿದೆ. ಕಾಮಕೂಟದಲ್ಲಿ ಸೃಜನಶೀಲತೆಯ (ಅಂದರೆ ತನ್ನಿಷ್ಟದಂತೆ ಲೈಂಗಿಕ ಕಲ್ಪನೆಯನ್ನು ಸೃಷ್ಟಿಸಿಕೊಳ್ಳುತ್ತ ಅನುಭವಿಸುವುದು) ಪಾತ್ರ ಮಹತ್ವದ್ದು. ಕಲ್ಪನೆಗಳು ಇಲ್ಲದಿದ್ದರೆ ಕಾಮಕ್ರಿಯೆಯು ಮನಸ್ಸನ್ನು ಮುಟ್ಟದೆ ಜನನಾಂಗಗಳ ಮಟ್ಟದಲ್ಲೇ ಉಳಿದುಬಿಡುತ್ತದೆ. ಪ್ರೀತಿಯ ಬಗೆಗೆ ಇರುವಂತೆ ಎಲ್ಲ ಮಕ್ಕಳೂ ಹುಟ್ಟಿನಿಂದ ಸೃಜನಶೀಲರಾಗಿದ್ದು, ತಮ್ಮ ಕಲ್ಪನಾಶಕ್ತಿಯಿಂದ ಅದ್ಭುತವನ್ನು ಸಾಧಿಸುತ್ತಾರೆ – ಚಿಕ್ಕವರು ಪವಾಡ ಸದೃಶ ಸಾಧನೆಗಳನ್ನು ಮಾಡುವುದಕ್ಕೆ ಇದೇ ಕಾರಣ. ಸೃಜನಶೀಲತೆಯು ಸಹಜವಾದರೂ ಅದನ್ನು ಮುಕ್ತವಾಗಿ ಹೊರಗೆಡುಹಲು ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕೇಬೇಕು. ಮಕ್ಕಳು ಬೆಳೆಯುವಾಗ ತಾಯ್ತಂದೆಯರು ಕೊಡುವ ಸ್ವಾತಂತ್ರ್ಯವನ್ನು ಅನುಸರಿಸಿ ಸೃಜನಶೀಲತೆಯ ಪ್ರಕಟಣೆಯಲ್ಲಿ ವ್ಯತ್ಯಾಸವಾಗುತ್ತದೆ. ಉದಾ: ತಾಯಿಯು ತಟ್ಟೆತುಂಬ ಅನ್ನ ಕಲಸಿ ಮಗುವಿನ ಮುಂದಿಟ್ಟು, “ನೀನು ಇದೆಲ್ಲ ತಿಂದರೇನೇ ಆಟವಾಡಲು ಬಿಡುತ್ತೇನೆ” ಎನ್ನುತ್ತಾಳೆ. ಇಲ್ಲೇನು ಸಂದೇಶವಿದೆ? ನನಗೆ ವಿಧೇಯ ಆದರೆ ಮಾತ್ರ ನಿನಗೆ ಸ್ವಾತಂತ್ರ್ಯ, ಇಲ್ಲದಿದ್ದರೆ ಸ್ವಾತಂತ್ರ್ಯವಿಲ್ಲ! (ಇಲ್ಲಿ ಪ್ರೀತಿ-ಭದ್ರತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಎರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ ಎಂಬುದನ್ನು ಗಮನಿಸಿ.) ಹೀಗೆ ಸ್ವಾತಂತ್ರ್ಯ ಗಳಿಸಲು ಮಗುವು ತಾಯಿಯ ಅಪ್ಪಣೆಯನ್ನು ಪಾಲಿಸುವುದು ಅನಿವಾರ್ಯ ಆಗುತ್ತದೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಡುವುದೆಂದರೆ ಹಗ್ಗ ಸಡಿಲ ಬಿಟ್ಟಂತೆ. ತಾಯಿಯು ಪ್ರೀತಿಭದ್ರತೆಗಳ ಸಹಿತ ಕ್ರಮೇಣ ಹಗ್ಗ ಸಡಿಲ ಬಿಡುತ್ತಿದ್ದರೆ ಮಗುವಿಗೆ ಸ್ವಾತಂತ್ರ್ಯ ಸಿಗುತ್ತ ಹೋಗುತ್ತದೆ. ಆಗ ಮಕ್ಕಳು ಮನಸೋಯಿಚ್ಛೆ ಜಗತ್ತನ್ನೂ ಸಂಬಂಧಗಳನ್ನೂ ಅನ್ವೇಷಿಸುತ್ತ ಸೃಜನಶೀಲರಾಗಿ ಬೆಳೆಯುತ್ತಾರೆ. ಇವರು ದಾಂಪತ್ಯದಲ್ಲೂ ಸೃಜನಶೀಲರಾಗಿದ್ದು, ಸಂಬಂಧಗಳ ನೇತ್ಯಾತ್ಮಕತೆಗೆ ಥಟ್ಟನೆ ಉಪಾಯ ಕಂಡುಹಿಡಿಯುತ್ತಾರೆ (ಉದಾ. ಸಂಗಾತಿಯ ಕೋಪಕ್ಕೆ ಪ್ರತಿಯಾಗಿ ಕೋಪಗೊಳ್ಳದೆ ಕಾಳಜಿ ತೋರುವುದು, ಸಂದರ್ಭವನ್ನು ಹಾಸ್ಯದಿಂದ ತಿಳಿಯಾಗಿಸುವುದು). ಆದರೆ ಹೆಚ್ಚಿನ ತಾಯ್ತಂದೆಯರು ಹಗ್ಗ ಸಡಿಲಿಸಲು ಹೆದರುತ್ತಾರೆ. ಐದನೆಯ ವಯಸ್ಸಿನಲ್ಲಿ ಊಟದ ಬಗೆಗಿದ್ದ ಹಗ್ಗದ ಬಿಗಿಯು ಹದಿನೈದರಲ್ಲಿ ಅಂಕಗಳ ಬಗೆಗೆ, ಇಪ್ಪತ್ತೈದರಲ್ಲಿ ತಮ್ಮಿಷ್ಟದಂತೆ ಮದುವೆ ಬಗೆಗೆ ಮುಂದುವರಿದು, ನಂತರ ಮಕ್ಕಳನ್ನು ಹೆರುವ ತನಕವೂ ಎಳೆಯುತ್ತದೆ. ಈ ಸಂದರ್ಭಗಳು ವೈಯಕ್ತಿಕ ಬೆಳವಣಿಗೆಗೆ ನಿಷ್ಠುರವಾಗಿದ್ದು ಗಾಸಿ ಮಾಡುವಂತೆ ಇರುತ್ತವೆ. ಅದು ಹೇಗೆಂದು ನೋಡೋಣ.
ತಾಯ್ತನಕ್ಕೆ ತನ್ನದಲ್ಲದ ಕಾರಣಗಳಿಂದ ಒಪ್ಪಿಕೊಂಡ ಯಾವುದೇ ಹೆಂಗಸನ್ನು ತೆಗೆದುಕೊಳ್ಳಿ. ಮಗುವು ಅನ್ನದ ತಟ್ಟೆ ಖಾಲಿ ಮಾಡದಿದ್ದರೆ ಆಕೆ ಆತಂಕಕ್ಕೆ ಒಳಗಾಗುತ್ತಾಳೆ. ಅದರ ಬಾಯಿಯಲ್ಲಿ ತುತ್ತು ತುರುಕುತ್ತ, “ನೀನು (ನಾನು ಒಳ್ಳೆಯ ತಾಯಿಯಲ್ಲ ಎನ್ನುವ) ಆತಂಕವನ್ನು ನಿವಾರಿಸಿದರೆ ಮಾತ್ರ ಧಾರಾಳವಾಗಿ ಪ್ರೀತಿ ಕೊಡುತ್ತೇನೆ.” ಎಂದು ಸಂದೇಶ ಕೊಡುತ್ತಾಳೆ. ಇದು ಮಗುವಿಗೆ ಆಘಾತಕಾರಿ ಆಗಿದೆ – ಯಾಕೆಂದರೆ ಇಲ್ಲಿ ಪ್ರೀತಿ-ಭದ್ರತೆ ಅಥವಾ ಸ್ವಾತಂತ್ರ್ಯ ಎರಡರ ಪೈಕಿ ಒಂದನ್ನು ಮಾತ್ರ ಆರಿಸಿಕೊಳ್ಳುವ ಪ್ರಸಂಗವಿದೆ! ಆಗ ಮಗುವು, “ಅನ್ನ ಖಾಲಿ ಮಾಡದಿದ್ದರೆ ತಾಯಿ ಎದೆ ಒಡೆದುಕೊಳ್ಳುತ್ತಾಳೆ. ಆಕೆಯ ಆತಂಕವನ್ನು ನಾನು ನಿವಾರಿಸಬೇಕು. ಇಲ್ಲದಿದ್ದರೆ ಪ್ರೀತಿಭದ್ರತೆಗಳು ಸಿಗಲಾರವು” ಎಂದು ಭಾವನಿರ್ಧಾರ ಮಾಡುತ್ತದೆ. ಹೀಗೆ ಮಗುವಿನ ಆತಂಕವನ್ನು ತಾಯಿಯು ನಿವಾರಿಸುವ ಬದಲು ತಾಯಿಯ ಆತಂಕ-ಅಸಂತೋಷಗಳನ್ನು ನಿಭಾಯಿಸುವ ಹೊಣೆಯು ಮಗುವಿನ ಹೆಗಲೇರುತ್ತದೆ. ಸಹಜವಾಗಿ ಸಿಗಬೇಕಾದ ಪ್ರೀತಿಭದ್ರತೆಗಳು ಕರ್ತವ್ಯ ಪಾಲನೆಯ ಫಲಶ್ರುತಿ ಆಗಿಬಿಡುತ್ತವೆ. ಹೀಗೆ ತನ್ನದಲ್ಲದ ಹೊಣೆಯನ್ನು ಹೊತ್ತ ಮಕ್ಕಳು ಸ್ವತಂತ್ರವಾಗಿ ಏನೂ ಮಾಡಲಿಕ್ಕಾಗದೆ ಸೃಜನಶೀಲತೆ ಮೊಟಕಾಗುತ್ತದೆ. ಇವರು ದೊಡ್ಡವರಾದಾಗ ಜವಾಬ್ದಾರಿ ಹೊರುತ್ತಾರೆಯೇ ವಿನಾ ಬಾಂಧವ್ಯಕ್ಕೆ ಸೃಜನಶೀಲ ಕೊಡುಗೆ ನೀಡಲಾರರು. ಸಮಸ್ಯೆಗಳನ್ನು ಬಗೆಹರಿಸುವ ಇವರ ಉಪಾಯಗಳಲ್ಲಿ ಕರ್ತವ್ಯ ಇರುತ್ತದೆಯೇ ಹೊರತು ಅಂತಃಪ್ರೇರಣೆ ಇರಲಾರದು. ಇಂಥ ಒಬ್ಬ ಗಂಡ ನನ್ನೆದುರು ಹೆಂಡತಿಗೆ ಹೇಳುತ್ತಾನೆ: “ನೀನು ನನ್ನನ್ನು ಪ್ರೀತಿಸುವ, ನನ್ನ ಕಾಳಜಿ ಮಾಡುವ ಅಗತ್ಯವಿಲ್ಲ. ನನ್ನ ಅಮ್ಮನನ್ನು ಖುಷಿಪಡಿಸು. ಆಗ ನಾನು ನಿನಗೆ ಹತ್ತಿರವಾಗುತ್ತೇನೆ.” ಈ ಅರ್ಥದಲ್ಲಿ ವಿಧೇಯತೆ ಹೆಚ್ಚಾದಷ್ಟೂ ಸ್ವತಂತ್ರ ವಿಚಾರಪರತೆ ಕಡಿಮೆಯಾಗುತ್ತ ಸೃಜನಶೀಲತೆ ಮಾಯವಾಗುತ್ತದೆ. ಇಂಥವರು ಬಾಂಧವ್ಯವನ್ನು ನಾನಾ ರೀತಿಗಳಲ್ಲಿ ಅನ್ವೇಷಿಸಲಾರರು.
ಇಲ್ಲಿ ಮೂರನೆಯ ಸಾಧ್ಯತೆಯೂ ಇದೆ. ತಾಯಿಯು ತನ್ನ ಆತಂಕವನ್ನು ಮಗುವಿನ ಮೇಲೆ ಹೇರಿದಾಗ ಮಗುವು ಆಘಾತಕ್ಕೆ ಒಳಗಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ತನ್ನ ಸೃಜನಶೀಲತೆಯನ್ನು ಸೂಕ್ತವಲ್ಲದ ರೀತಿಗಳಲ್ಲಿ ಉಪಯೋಗಿಸಲು ಕಲಿಯುತ್ತದೆ. (ಉದಾ. ಅನ್ನವನ್ನು ಸೋಫಾ ಕೆಳಗೆ ಬಚ್ಚಿಡುವುದು, ಹೊಟ್ಟೆನೋವಿನ ನೆಪ ಹೇಳುವುದು). ಇಲ್ಲಿ ಮಗುವು ಏನು ನಿರ್ಧರಿಸುತ್ತದೆ? “ನನಗೆ ತಿಳಿದಂತೆ ಜಗತ್ತನ್ನು ಅನ್ವೇಷಿಸುತ್ತೇನೆ. ಆದರೆ ಇದರ ಬಗೆಗೆ ಯಾರಿಗೂ ಹೇಳುವುದಿಲ್ಲ!” ಇಂಥ ಮಕ್ಕಳು ನಿಯಮಗಳನ್ನು ರಹಸ್ಯವಾಗಿ ಮುರಿಯುತ್ತಾರೆ. ಮನೆಗೆ ತಡವಾಗಿ ಬರುತ್ತ ಕುಂಟುನೆಪ ಹೇಳುತ್ತಾರೆ. ತಾಯಿ ಹಜಾರದಲ್ಲಿ ಕಾಯುತ್ತಿರುವಾಗ ಒಬ್ಬರೇ ಕೋಣೆಯಲ್ಲಿ ಬಾಗಿಲು ಹಾಕಿಕೊಳ್ಳುತ್ತಾರೆ. ತಮ್ಮನ್ನು ತಾವೇ ಇಷ್ಟಪಡದೆ (“ನಾನು ಹೀಗೆ ಬದುಕುವುದು ಸರಿಯಲ್ಲ!”) ಒಂದಿಲ್ಲೊಂದು ರೀತಿಯಲ್ಲಿ ಬೇಸರ, ವ್ಯಗ್ರತೆ, ಖಿನ್ನತೆ ಅನುಭವಿಸುತ್ತ ಇರುತ್ತಾರೆ. ಇವರು ದೊಡ್ಡವರಾಗಿ ಅನ್ಯೋನ್ಯತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ದ್ವಂದ್ವಭಾವವು ಎದ್ದುಕಾಣುತ್ತದೆ. ಸಂಗಾತಿ ಹತ್ತಿರ ಇರುವಾಗ ಬಾಂಧವ್ಯ ಬೆಳೆಸಲು ಉತ್ಸುಕತೆ ತೋರದೆ ಅಷ್ಟಕ್ಕಷ್ಟೆ ಇರುತ್ತಾರೆ. ಸಂಗಾತಿ ದೂರವಾದಾಗ ಹಲುಬುತ್ತ “ಹೇಳಿದಂತೆ ಕೇಳಲು, ಏನು ಬೇಕಾದರೂ ಮಾಡಲು” ತಯಾರಾಗುತ್ತಾರೆ. ಇಲ್ಲಿ ತನಗೇನು ಬೇಕು ಎನ್ನುವುದನ್ನು ಸಂಗಾತಿಯಿಂದ ಗುಟ್ಟಾಗಿ ಇಟ್ಟಿದ್ದು, ಅದನ್ನು ಕಾಪಾಡಿಕೊಳ್ಳಲು ಸೃಜನಶೀಲತೆಯನ್ನು ಉಪಯೋಗಿಸುವ ಸಾಧ್ಯತೆಯಿದೆ. ಸುಳ್ಳು ಹೇಳುವುದು, ಹಾಗೂ ಪರಸಂಬಂಧಕ್ಕೆ ಮನಸ್ಸು ಮಾಡುವುದರಲ್ಲಿ ಸೃಜನಶೀಲತೆಯ ದುರುಪಯೋಗ ಎದ್ದುಕಾಣುತ್ತದೆ.
ಸೃಜನಶೀಲತೆ ಇಲ್ಲದಿದ್ದರೆ ಏನಾಗುತ್ತದೆ? ಆಘಾತದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಇಳಿಮುಖ ಆಗುತ್ತದೆ. ನರಳಿಕೆ ಉಳಿಯುತ್ತದೆ. ಇದು ಖಂಡಿತವಾಗಿಯೂ ದಾಂಪತ್ಯದಲ್ಲಿ ಅನ್ಯೋನ್ಯತೆಗೆ ಮಾರಕ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.