ಸುಖೀ ದಾಂಪತ್ಯ ೨೨೬
ನಾವು ಪ್ರೀತಿಸುವ ಅಪರಿಚಿತರ ಮುಂದೆ ನಮ್ಮ ದೌರ್ಬಲ್ಯಗಳನ್ನು ತೋರಿಸಿಕೊಳ್ಳುತ್ತ ಅವರ ಕೃಪಾಕಟಾಕ್ಷಕ್ಕೆ ಕಾಯುತ್ತೇವೆ!
226: ಅನ್ಯೋನ್ಯತೆಗೆ ಹುಡುಕಾಟ – 5
ಮೂಲ ಕುಟುಂಬದಲ್ಲಿ ಮನಬಿಚ್ಚಿ ಮಾತಾಡಿ ರೂಢಿ ಇಲ್ಲದಿರುವಾಗ ಬದ್ಧ ಸಂಬಂಧಗಳಲ್ಲಿ ಅನ್ಯೋನ್ಯತೆಗೆ ಹುಟ್ಟುಹಾಕಲು ತಿರಸ್ಕೃತರಾಗುವ ಸಂಭವವನ್ನು ಎದುರುಹಾಕಿಕೊಳ್ಳುತ್ತ ಭಾವನಾತ್ಮಕವಾಗಿ ಬೆತ್ತಲೆ ಆಗುವ ಕ್ರಮವಾದ ದಿಟ್ಟ ಮುಕ್ತತೆಯೊಂದೇ (vulnerability) ಏಕೈಕ ಉಪಾಯವೆಂದು ಮಾತಾಡಿಕೊಂಡೆವು. ಇವೊತ್ತು ಇದರ ಬಗೆಗೆ ಇನ್ನಷ್ಟು ತಿಳಿದುಕೊಳ್ಳೋಣ.
ಹಾಗೆ ನೋಡಿದರೆ ದಿಟ್ಟ ಮುಕ್ತತೆ ಎನ್ನುವುದು ಹೊಸ ಪರಿಕಲ್ಪನೆ ಏನಲ್ಲ. ಉದಾಹರಣೆಗೆ, ನೀವು ಒಬ್ಬರನ್ನು ಪ್ರೀತಿಸಲು ಶುರು ಮಾಡಿದ್ದೀರಿ ಎಂದುಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಅವರೇ ತುಂಬಿರುತ್ತಾರಷ್ಟೆ? ಅವರೂ ನನ್ನನ್ನು ಪ್ರೀತಿಸುತ್ತಿರಬಹುದೆ? ಗೊತ್ತಿಲ್ಲ. ನನ್ನ ಪ್ರೀತಿಯನ್ನು ಅವರೆದುರು ಹೇಳಿಕೊಳ್ಳಬೇಕು. ಒಂದುವೇಳೆ ಅವರು ನನ್ನನ್ನು ಒಪ್ಪದಿದ್ದರೆ? ಅಸಹನೀಯ ದುಃಖವಾಗಬಹುದು. ಹಾಗೆಂದು ಸುಮ್ಮನಿದ್ದರೆ ನನ್ನ ಪ್ರೀತಿ ನನ್ನಲ್ಲೇ ಉಳಿಯುತ್ತದೆ… ಹೀಗೆ ಯೋಚಿಸಿ, ಕೊನೆಗೂ ಧೈರ್ಯಮಾಡಿ ಹೇಳಿಕೊಳ್ಳುತ್ತೀರಿ. ಅವರು ಹೌದೆ ಎಂದು ಸುಮ್ಮನಿದ್ದರೆ? ಅನಿಶ್ಚಿತತೆ ಕಾಡುತ್ತದೆ. ಬಾಯಿಗೆ ಬರುತ್ತಿರುವ ಹೃದಯವನ್ನು ಕೆಳಗೆ ತಳ್ಳುತ್ತ, “ನೀನೂ ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳುತ್ತೀರಿ. ಅವರು ಒಂದುವೇಳೆ ಇಲ್ಲವೆಂದರೆ, “ಸ್ಸಾರಿ, ರಾಂಗ್ ನಂಬರ್” ಎನ್ನುವಂತೆ ಸುಮ್ಮನಾಗುವುದಿಲ್ಲ. ನಾನು ಹೇಳಿಕೊಂಡದ್ದು ಸಾಲದು, ಮನಸ್ಸನ್ನು ಇನ್ನಷ್ಟು ಬಿಚ್ಚಿಡಬೇಕು ಎಂದು ನಿರ್ಧರಿಸುತ್ತೀರಿ. ಉಕ್ಕೇರುವ ಭಾವನೆಗಳಿಗೆ ಪದಗಳ ರೂಪ ಕೊಡುತ್ತೀರಿ. “ನನ್ನ ಕನಸು-ಮನಸಿನಲ್ಲಿ ನೀನೇ ತುಂಬಿದ್ದೀಯಾ, ನಾವಿಬ್ಬರೂ ಸುಂದರವಾಗಿ ಬದುಕೋಣ…” ಎಂದೆಲ್ಲ ಹಂಚಿಕೊಳ್ಳುತ್ತ ನಿಮ್ಮ ಸೂಕ್ಷ್ಮಭಾವಗಳನ್ನು ತೆರೆದಿಡುತ್ತೀರಿ. ಪರಿಣಾಮ ಅನಿಶ್ಚಿತ. ಅವರು ನಿಮ್ಮಕಡೆ ವಾಲುವ ಲಕ್ಷಣ ಕಾಣುವುದಿಲ್ಲ. ಆಗ ನೀವು, “ನಿನಗೆ ಬೇಡವಾದರೆ ನನಗೂ ಬೇಡ” ಎಂದು ಹಂಚಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಬದಲು, “ನೀನಿಲ್ಲದ ನನ್ನ ಬದುಕು ಖಾಲಿಖಾಲಿ. ನೀನಿಲ್ಲದೆ ನಾನು ಎಷ್ಟೊಂದು ಬಲಹೀನ ಆಗಬಲ್ಲೆ” ಎಂದು ನಿಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳಲು ಶುರುಮಾಡುತ್ತೀರಿ! ದೌರ್ಬಲ್ಯವನ್ನು ತೆರೆದು ತೋರಿಸಿದಷ್ಟೂ ಅವರನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿಗಿದೆ – ದುರ್ಬಲತೆಯನ್ನು ಯಾರು ತಾನೇ ಮೆಚ್ಚುತ್ತಾರೆ? ಆದರೂ ಅಪಾಯವನ್ನು ಎದುರುಹಾಕಿಕೊಳ್ಳುತ್ತಲೇ ಮನಸ್ಸಿನ ಸೂಕ್ಷ್ಮ ಪದರಗಳನ್ನು ಬಿಡಿಬಿಡಿಸಿ ತೋರಿಸುತ್ತೀರಿ. ಅಪರಿಚಿತರ ಕೈಯಲ್ಲಿ ನಿಮ್ಮನ್ನು ಕೊಟ್ಟು ಅವರ ಅನುಗ್ರಹಕ್ಕಾಗಿ ಕಾಯುತ್ತೀರಿ. ಇದೇ ದಿಟ್ಟ ಮುಕ್ತತೆ. ಇಲ್ಲಿ ಅನಿಶ್ಚಿತತೆ, ನಿರಾಕರಣೆ, ದೂರೀಕರಣ, ಇರುವುದನ್ನು ಕಳೆದುಕೊಳ್ಳುವ ಭಯ, ಅಸಹಾಯಕತೆ, ದುಃಖ, ಅವಮರ್ಯಾದೆ, ಸ್ವಾಭಿಮಾನಕ್ಕೆ ಪೆಟ್ಟು, ದೌರ್ಬಲ್ಯದ ಬಹಿರಂಗ… ಎಲ್ಲವನ್ನೂ ಎದುರುಹಾಕಿಕೊಳ್ಳುತ್ತ ಅಂತರಾತ್ಮವನ್ನು ಬಿಚ್ಚಿ ಬಯಲಿಗೆ ತರುವುದು ನಡೆಯುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ ಇಲ್ಲೊಂದು ಉದಾಹರಣೆ ನೋಡಿ: ಇಲ್ಲೊಬ್ಬನು ಬುದ್ಧಿವಂತೆಯಾದ ಹಾಗೂ ಅದ್ಭುತ ವ್ಯಕ್ತಿತ್ವವುಳ್ಳ ಸಹಪಾಠಿ ಹುಡುಗಿಗೆ ವರ್ಷಗಟ್ಟಲೆ ಹತ್ತಿರವಾಗಿದ್ದ. ಆಕೆಯೂ ಇವನನ್ನು ಪ್ರೀತಿಸುತ್ತ ಮನಸ್ಸು ತೆರೆದುಕೊಂಡು ಕಾಯುತ್ತಿದ್ದರೂ ಇವನು (ನಿರಾಕರಣೆಯ ಭಯದಿಂದ) ಆತ್ಮನಿವೇದನೆ ಮಾಡಿಕೊಳ್ಳುವ ಸಾಹಸ ಮಾಡಲಿಲ್ಲ. ಕೊನೆಗೆ ಆಕೆ ಕ್ರಮೇಣ ದೂರವಾದಳು. ಆಗ ಇವನೇನು ಮಾಡಿದ? ಹಿರಿಯರ ಮಧ್ಯಸ್ತಿಕೆಯಿಂದ ತನಗಿಂತ ತುಂಬಾ ಚಿಕ್ಕವಳಾದ, ಸಾಧಾರಣ ಬುದ್ಧಿಯ, ವ್ಯಕ್ತಿತ್ವ ಅರಳದ ಅಮಾಯಕ ಹುಡುಗಿಯನ್ನು ಮದುವೆಯಾಗಿ, ಸ್ನೇಹಿತೆಗೆ ತೋರಿಸಲು ಕರೆದುಕೊಂಡು ಬಂದ! ಅವನ ದಾಂಪತ್ಯವನ್ನು ಗಮನಿಸಿದರೆ ಅವನು ಯಾವೊತ್ತಾದರೂ ಹೆಂಡತಿಯ ಎದುರು ಮನಸ್ಸು ಬಿಚ್ಚಬಾರದೆಂದೇ ಅಮಾಯಕಳನ್ನು ಆರಿಸಿಕೊಂಡಿದ್ದು ಸ್ಪಷ್ಟವಾಗುತ್ತದೆ. ಅಂಥವನು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಹುಟ್ಟಿಸಿಕೊಳ್ಳುವುದು ಒತ್ತಟ್ಟಿಗಿರಲಿ, ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೆ?
ಮೇಲಿನ ಉದಾಹರಣೆಗಳನ್ನು ಗಮನಿಸಿದರೆ ದಿಟ್ಟ ಮುಕ್ತತೆಗೆ ಇನ್ನೊಂದು ಉದ್ದೇಶವೂ ಇದೆಯೆಂದು ಗೊತ್ತಾಗುತ್ತದೆ: ಸಂಗಾತಿಯೊಡನೆ ಹಂಚಿಕೊಳ್ಳುವ ಪ್ರಕ್ರಿಯೆ ನಡೆಯುವಾಗ ಜೊತೆಜೊತೆಗೆ ಆತ್ಮಾನ್ವೇಷಣೆಯನ್ನೂ ಮಾಡಿಕೊಳ್ಳುತ್ತ ತನ್ನನ್ನು ತಾನೇ ಅರ್ಥಮಾಡಿಕೊಳ್ಳುವುದು. ಇದು ಹೇಗೆಂದು ವಿವರಿಸುತ್ತೇನೆ. ನಾವು ಮಗುವಾಗಿ ಇರಬೇಕಾದರೆ ಬಂದ ಎಲ್ಲ ಭಾವನೆಗಳನ್ನೂ ಬಂದಂತೆಯೇ ತೋರಿಸಿಕೊಳ್ಳುತ್ತೇವೆ. ಅದು ಕೂಡದೆಂದು ಹಿರಿಯರು ಕಟ್ಟುಪಾಡುಗಳನ್ನು ಹೇರುತ್ತಾರೆ. ಉದಾಹರಣೆಗೆ, ಹಿರಿಯ ಮಗುವೊಂದು ತನ್ನ ಹಿತಾಸಕ್ತಿಯನ್ನು ತೋರಿಸಿಕೊಂಡಾಗ ಸ್ವಾರ್ಥಿಯೆಂದು ಹೆಸರಿಸಲ್ಪಟ್ಟು, ಶಿಕ್ಷೆಗೆ ಒಳಗಾಗಿ ಒಡಹುಟ್ಟಿದವರಿಗಾಗಿ ಬಿಟ್ಟುಕೊಡುವ ಸಂದರ್ಭ ಬರುತ್ತದೆ ಎಂದುಕೊಳ್ಳಿ. ಮುಂದೆ ಇವರು ಚಿಕ್ಕವರಿಗಾಗಿ ತ್ಯಾಗಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. (ತಂದೆ ತೀರಿಕೊಂಡಾಗ ಹಿರಿಯ ಮಗ/ಳು ಕಾಲೇಜು ಶಿಕ್ಷಣ ನಿಲ್ಲಿಸಿ, ಕೆಲಸ ಹಿಡಿದು ತಮ್ಮ-ತಂಗಿಯರ ಓದಿಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿರಬಹುದು.) ಇವರು ತಮ್ಮ ಬಗೆಗೆ ಹೊರಗೆ ಸಾರ್ಥಕತೆಯನ್ನು ಪ್ರಕಟಿಸುವಾಗ ಒಳಗೆ ಏನು ಅನುಭವಿಸುತ್ತಾರೆ? ಮನದೊಳಗೆ ವ್ಯಥೆ, ಹೊಟ್ಟೆಯೊಳಗೆ ಸಂಕಟ ಹಾಗೂ ಶರೀರದಲ್ಲಿ ಜಡತ್ವ! ಈ ಕಾರಣದಿಂದ ಇಂಥವರು ಆಗಾಗ ಕಳೆದುಹೋದಂತಿದ್ದು ಸಂಗಾತಿಯ ಅನ್ಯೋನ್ಯತೆಯ ಆಹ್ವಾನಕ್ಕೆ ಸ್ಪಂದಿಸಲಾರರು. ಇವರು ಒಂದುವೇಳೆ ಮನಸ್ಸು ಮಾಡಿ ಸಂಗಾತಿಯ ಸನ್ನಿಧಿಯಲ್ಲಿ ತಮ್ಮ ಬಗೆಗೆ ಮಾತು ಶುರುಮಾಡುತ್ತಾರೆ ಎಂದುಕೊಳ್ಳಿ. ತನ್ನದಲ್ಲದ ಜವಾಬ್ದಾರಿಯನ್ನು ಹೊತ್ತು ಹರೆಯದ ಉಂಡಾಡಿತನವನ್ನು ಕಳೆದುಕೊಂಡೆ; ಹಾಗಾಗಿ ತಾನು ಪಡೆದಿದ್ದು ಸಂತೋಷ-ತೃಪ್ತಿಗಳಲ್ಲ, ಬದಲಾಗಿ ಬಲಿದಾನದಿಂದ ಅಸ್ತಿತ್ವಹೀನತೆ ಹಾಗೂ ಅವಕಾಶ ತಪ್ಪಿದ ವ್ಯಥೆ ಎಂಬುದು ಅರಿವಿಗೆ ಬರುತ್ತದೆ. ಆತ್ಮದರ್ಶನ ಆಗುವುದೇ ಹೀಗೆ! ವಯಸ್ಸಿಗೆ ಮೀರಿದ ಪ್ರೌಢತೆಯನ್ನು ತೋರಿಸುವ, ಹಾಸ್ಯದ ಲಾಸ್ಯವಿಲ್ಲದೆ ಗಂಭೀರರಾಗಿ ಬದುಕುವ ವ್ಯಕ್ತಿಗಳ ಹಿಂದೆ ದುರಂತ ಕಥಾನಕವಿದೆ. ಇಂಥವರು ಸಂಗಾತಿಯೊಡನೆ ಪ್ರಾಮಾಣಿಕವಾಗಿ ಬಿಚ್ಚಿಡುವಾಗ ಆತ್ಮದರ್ಶನದ ಪ್ರಯತ್ನ ನಡೆಯುತ್ತ ತಮಗೆ ತಾವೇ ಅರ್ಥವಾಗುತ್ತಾರೆ. ಹೀಗೆ ದಿಟ್ಟ ಮುಕ್ತತೆಯ ಅವಿರತ ಯತ್ನವು ಸಂಗಾತಿಗಳನ್ನು ಹತ್ತಿರ ತರುತ್ತ ಅನ್ಯೋನ್ಯತೆಯ ಹುಟ್ಟಿಗೆ ಕಾರಣವಾಗುತ್ತದೆ.
ಕೆಲವರಲ್ಲಿ ಒಂದು ಪ್ರಶ್ನೆ ಹುಟ್ಟಬಹುದು: ಪ್ರೀತಿಸುವವರನ್ನು ತನ್ನವರನ್ನಾಗಿ ಮಾಡಿಕೊಳ್ಳಲು ದಿಟ್ಟ ಮುಕ್ತತೆಯು ಸೂಕ್ತ ಉಪಾಯವೇನೋ ಸರಿ, ಆದರೆ ಸಂಗಾತಿಯು ಈಗಾಗಲೇ ತನ್ನವರಾಗಿದ್ದು ಒಂದುರೀತಿ ನೆಮ್ಮದಿಯಿಂದ ಸಂಸಾರ ನಡೆಯುತ್ತಿದ್ದರೆ ದಿಟ್ಟ ಮುಕ್ತತೆಯ ಹೆಸರಿನಲ್ಲಿ ಶಾಂತಿಯನ್ನು ಯಾಕೆ ಕದಡಬೇಕು? ಒಂದು ಬಾಂಧವ್ಯವನ್ನು ಹೆಚ್ಚುಗೊಳಿಸಲು ಇಷ್ಟೆಲ್ಲ ಮನಸ್ಸು ಬಿಚ್ಚಿಡುವ ಅಗತ್ಯವಿದೆಯೆ? ಉತ್ತರ ನೇರವಾಗಿದೆ. ಗುಡಿಸಲಿನಿಂದ ಹಿಡಿದು ಭವ್ಯ ಸೌಧವೂ “ಮನೆ” ಎನ್ನಿಸಿಕೊಳ್ಳುವಂತೆ ಕೇವಲ ವ್ಯಾವಹಾರಿಕ ಸಂಬಂಧದಿಂದ ಹಿಡಿದು ಆಧ್ಯಾತ್ಮಿಕ ಅನ್ಯೋನ್ಯತೆಯ ತನಕ ಯಾವುದೂ “ದಾಂಪತ್ಯ” ಎನ್ನಿಸಿಕೊಳ್ಳುತ್ತದೆ. ಗಂಡಹೆಂಡಿರು ಮನೆ ಕಟ್ಟುವಾಗ ಇನ್ನಷ್ಟು ಚೆನ್ನಾಗಿರಲಿ ಎಂದು ಮಿತಿಮೀರಿ ವ್ಯಯಿಸುವಂತೆ ದಾಂಪತ್ಯವು ಇನ್ನೂ ಅನ್ಯೋನ್ಯವಾಗಿರಲಿ ಎಂದು ಹೆಚ್ಚು ಪರಿಶ್ರಮ ಯಾಕೆ ಪಡಬಾರದು? ಈ ಕಾರಣದಿಂದ ದಿಟ್ಟ ಮುಕ್ತತೆ ದೈನಂದಿನ ಅಗತ್ಯವಾಗುತ್ತದೆ. ಅಷ್ಟಲ್ಲದೆ ಇಲ್ಲೊಂದು ಅನಿವಾರ್ಯತೆಯೂ ಇದೆ. ಅನ್ಯೋನ್ಯತೆಗೆ ಆಗಾಗ ದಿಟ್ಟ ಮುಕ್ತತೆಯ ಪುಷ್ಟಿಕೊಟ್ಟು ಬೆಳೆಸದಿದ್ದರೆ ಯಾವುದೇ ದಾಂಪತ್ಯದ ಉತ್ಕೃಷ್ಟತೆಯು ಕ್ರಮೇಣ ನಶಿಸುತ್ತದೆ. ಅದರ ದುಷ್ಪರಿಣಾಮವು ಮೊದಲು ಕಾಣಿಸಿಕೊಳ್ಳುವುದು ಲೈಂಗಿಕ ಸಂಬಂಧಗಳ ಮೇಲೆ – ಅದೇ ಸಲೀಲ-ಶಾಮಾ ದಾಂಪತ್ಯದಲ್ಲಿ ನಡೆಯುತ್ತಿದೆ. ಇದಕ್ಕೆ ಉಪಾಯ ಮಾಡದಿದ್ದರೆ ಬಹಳ ಬೇಗ ಸಂಬಂಧದಲ್ಲಿ ಬಿರುಕು, ಮಾನಸಿಕ ಒತ್ತಡ, ಕಾಯಿಲೆಗಳು, ಪರಸಂಬಂಧ ಇತ್ಯಾದಿಗಳಿಗೆ ಹಾದಿ ಆಗುತ್ತದೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.