ಸುಖೀ ದಾಂಪತ್ಯ ೨೨೩
ಹೆಚ್ಚಿನವರು ಕಾಮಕೂಟದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಹೋಗಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ.
223: ಅನ್ಯೋನ್ಯತೆಗೆ ಹುಡುಕಾಟ – 2
ಬದ್ಧಸಂಬಂಧದಲ್ಲಿ ಅನ್ಯೋನ್ಯತೆಯ ಬಗೆಗೆ ಮಾತು ಶುರುಮಾಡಿದ್ದೇವೆ. ಇದನ್ನು ಮಧ್ಯವಯಸ್ಕ ದಂಪತಿ ಸಲೀಲ್-ಶಾಮಾ ಅವರ ಕಾಮಸಂಬಂಧದ ಮೂಲಕ ಅರ್ಥಮಾಡಿಕೊಳ್ಳುತ್ತಿದ್ದೇವೆ. ಕಾಮಕೂಟದಲ್ಲಿ ಒಬ್ಬರನ್ನೊಬ್ಬರು ಮೆಚ್ಚಿಸಲು ಹೊರಡುವಾಗ, ಹಾಗೂ ಸಂಗಾತಿಯ ಮನ ನೋಯದಂತೆ ನಡೆದುಕೊಳ್ಳುವಾಗ ತಾನು ಬಯಸುವ ಸುಖದೊಡನೆ ಸಂಪರ್ಕ ಸಾಧಿಸಲು ಆಗುವುದಿಲ್ಲ. ಆಗ ತನ್ನತನ ಹಿಂದುಳಿಯುತ್ತ ಸ್ವಂತ ಕಾಮಾಸಕ್ತಿ ಕಾಣೆಯಾಗುತ್ತದೆ ಎಂದು ಗೊತ್ತುಮಾಡಿಕೊಂಡಿದ್ದೇವೆ.
ಸಲೀಲ್–ಶಾಮಾ ದಂಪತಿಗಳ ಬಗೆಗೆ ಇನ್ನಷ್ಟು ಅರಿತುಕೊಳ್ಳೋಣ. ಶಾಮಾಳಿಗೆ ತನ್ನ ಕಲ್ಪನೆಗಳನ್ನು ಕಾಮದಾಟದಲ್ಲಿ ತರಲಾಗದೆ, ತಂದರೆ ತನ್ಮೂಲಕ ಸಲೀಲನಿಗೆ ಬಲವಂತ ಮಾಡುತ್ತಿದ್ದೇನೆ ಎಂದುಕೊಂಡು ಕಾಮಾಸಕ್ತಿಯನ್ನು ಹತ್ತಿಕ್ಕುತ್ತಿದ್ದರೆ, ತನ್ನ ಕ್ಷೀಣಿಸುತ್ತಿರುವ ದೇಹಪ್ರಜ್ಞೆಯಿಂದ ಶಾಮಾಳಿಗೆ ನಿರಾಸೆಯಾಗುತ್ತದೆಂದು ನಂಬಿ, ಅದನ್ನು ಸರಿದೂಗಿಸಲು ಆಕೆಯನ್ನು ಹೆಚ್ಚಾಗಿ ಉದ್ರೇಕಿಸುವ ಹವಣಿಕೆಯಲ್ಲಿ ಸಲೀಲನಿಗೆ ಕಾಮಾಸಕ್ತಿ ಕುಂದುತ್ತಿದೆ. ಇಲ್ಲಿ ಗಮನವು ಸಂಗಾತಿಯ ಕಡೆಗೆ ಇದೆಯೇ ಹೊರತು ತಮ್ಮ ಕಡೆಗಿಲ್ಲ. ಹೀಗೆ ಹೆಚ್ಚಿನವರು ಸಂಗಾತಿಯ ಕಾಮಪ್ರಜ್ಞೆಗೆ ತಕ್ಕಂತೆ ತನ್ನ ಕಾಮಪ್ರಜ್ಞೆಯನ್ನು ಹೊಂದಿಸಿಕೊಳ್ಳಲು ಹೋಗಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ. ಅಥವಾ ತನ್ನ ಕಾಮಪ್ರಜ್ಞೆಗೆ ತಕ್ಕಂತೆ ಸಂಗಾತಿಯ ಕಾಮಪ್ರಜ್ಞೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊರುತ್ತಾರೆ – ಪ್ರೇಕ್ಷಣೀಯ ಪ್ರವಾಸವನ್ನು ಸ್ವಚ್ಛಂದ ತನ್ಮಯತೆಯಿಂದ ಸವಿಯುವುದನ್ನು ಬಿಟ್ಟು ಅದರ ಹೊಣೆಹೊತ್ತು ಕಾರ್ಯ ನಿರ್ವಹಿಸಿದಂತೆ.
ಅದಲ್ಲದೆ ಇಬ್ಬರಲ್ಲೂ ಒಂದಂಶ ಎದ್ದುಕಾಣುತ್ತಿದೆ: ಸಂಕೋಚ. ಶಾಮಾಳಿಗೆ ತನ್ನ ಕಲ್ಪನೆಗಳ ಬಗೆಗೆ, ಸಲೀಲನಿಗೆ ತನ್ನ ದೇಹಪ್ರಜ್ಞೆಯ ಬಗೆಗೆ ಬಾಯಿಬಿಟ್ಟು ಹೇಳಿಕೊಳ್ಳುವುದರಲ್ಲಿ ಸಂಕೋಚವಿದೆ. ಸಂಕೋಚವು ಸಹಜ ಸ್ವಭಾವ ಎಂದು ನಾವೆಲ್ಲ ತಿಳಿದಿದ್ದೇವೆ. ವಾಸ್ತವವಾಗಿ ಇದು ಸಹಜವಲ್ಲ. ಚಿಕ್ಕ ಮಕ್ಕಳನ್ನು ಸ್ವೇಚ್ಛೆಯಾಗಿ ಬೆಳೆಯಲು ಬಿಟ್ಟು ನೋಡಿ, ಅವರು ಸಂಕೋಚ ಬೆಳೆಸಿಕೊಳ್ಳುವುದಿಲ್ಲ. ತಮಗೆ ಬೇಕೆನಿಸಿದ್ದನ್ನು ಬೇಕೆಂದೂ, ಬೇಡವೆನಿಸಿದ್ದನ್ನು ಬೇಡವೆಂದೂ ನಿಸ್ಸಂಕೋಚದಿಂದ ತೋರಿಸುತ್ತಾರೆ. ಬೇಕೆನ್ನಿಸಿದಾಗ ಬೇಡವೆಂದು ತೋರಿಸುವುದೇ ಸಂಕೋಚ. ಈ ವೈಚಿತ್ರ್ಯ ಎಲ್ಲಿಂದ ಬರುತ್ತದೆ? ಬಾಲ್ಯದಲ್ಲಿ ಬೇಕಾದುದನ್ನು ಕಾಡಿಬೇಡಿದರೂ ಸಿಗದಿರುವಾಗ, ಬದಲು ಟೀಕೆ-ಶಿಕ್ಷೆ ಸಿಕ್ಕಾಗ ಮಕ್ಕಳು ಗಾಸಿಕೊಳ್ಳುತ್ತಾರೆ. ಪರಿಣಾಮವಾಗಿ ಅನರ್ಹತೆಯ ಭಾವ ಬೆಳೆಸಿಕೊಳ್ಳುತ್ತಾರೆ. ಅದನ್ನೇ ಒಡಲಲ್ಲಿ ಇಟ್ಟುಕೊಂಡು ಬೆಳೆಯುತ್ತಾರೆ. ಪ್ರಬುದ್ಧರಾದಾಗ ಬೇಕಾದುದನ್ನು ಬೇಕೆಂದು ಹೇಳಿಕೊಳ್ಳಲು ಯೋಚಿಸುವಾಗ, ಸಿಗದಿದ್ದರೆ ಹೇಗೆ ಎಂದು ಕಲ್ಪಿಸಿಕೊಂಡು ಅನರ್ಹತೆಯ ಭಾವವು ಮರುಕಳಿಸುತ್ತದೆ. ಹಳೆಯ ಗಾಯ ಕೆದಕಲ್ಪಟ್ಟು ಹಿಂಸೆಯಾಗುತ್ತದೆ. ಹಾಗಾಗಿ ಬಾಯಿಬಿಡಲು ಹೋದರೆ ಹೃದಯ ಬಾಯಿಗೆ ಬರುತ್ತದೆ. ಇನ್ನೊಂದು ರೀತಿ ಹೇಳಬೇಕೆಂದರೆ, ಸಂಕೋಚವು ಅವಹೇಳನದ ಮರುಕಳಿಕೆ. ಸಂಕೋಚವನ್ನು ಪದೇಪದೇ ತೋರಿಸಿಕೊಳ್ಳುವವರಿಗೆ ಅವಹೇಳನಕ್ಕೆ ಒಳಗಾಗುವ ಭಯ ಪ್ರಬಲವಾಗಿರುತ್ತದೆ.
ಇನ್ನು ಶಾಮಾಳ ಕಾಮಪ್ರಜ್ಞೆಯ ಸುತ್ತಮುತ್ತಲನ್ನು ತಿಳಿಯೋಣ. ಆಕೆ ಕಾಮಾಸಕ್ತಿ ಕುಗ್ಗಿದೆಯೆಂದು ಹೇಳಿಕೊಂಡಿದ್ದಾಳೆ. ಆದರೆ ಆಕೆಯ ಕಲ್ಪನೆಗಳಲ್ಲಿ ಏನು ನಡೆಯುತ್ತದೆ? ಅಪರಿಚಿತ ಗಂಡಸೊಬ್ಬ ಮಾರ್ದವತೆಯಿಂದ ಅವಳನ್ನು ಸಮೀಪಿಸುತ್ತಾನೆ. ಆಕೆಯನ್ನು ಕಣ್ಣಿನಿಂದಲೇ ಕರೆಯುತ್ತಾನೆ. ಕಣ್ಣಲ್ಲಿ ಕಣ್ಣಿಟ್ಟು, ಮನದಿಂದ ಮನತಟ್ಟಿ, ಮೈಯಿಂದ ಮೈ ಮುಟ್ಟುತ್ತ, ಮುಟ್ಟಿದ ಕಡೆ ಮುತ್ತಿಡುತ್ತ ಆಕೆಯನ್ನು ಅರಳಿಸುತ್ತಾನೆ. ಆಕೆ ಕ್ರಮೇಣ ತೆರೆದುಕೊಳ್ಳುತ್ತಾಳೆ. ಅವನನ್ನು ಆಹ್ವಾನಿಸುತ್ತಾಳೆ. ಅವನು ಕಾಯಿಸುವಾಗ ಆಕೆ ಕಾತರಗೊಳ್ಳುತ್ತಾಳೆ. ಆತ ಬಂದಾಗ ಬರಮಾಡಿಕೊಳ್ಳುತ್ತ ಸಂಭ್ರಮಿಸುತ್ತಾಳೆ. ಇದರರ್ಥ ಏನು? ಅವಳ ಕುಗ್ಗಿದ ಕಾಮಾಸಕ್ತಿ ಹಾಗೂ ಕಲ್ಪನಾವಿಲಾಸ ಇವೆರಡೂ ಕಾಮಪ್ರಜ್ಞೆಯ ಬೇರೆಬೇರೆ ಮಗ್ಗಲುಗಳು. ಶಾಮಾಗೆ ಕಾಮಾಸಕ್ತಿ ಹೇರಳವಾಗಿದೆ – ಆದರೆ ವೈಯಕ್ತಿಕ ಮಗ್ಗಲಲ್ಲಿದೆ. ಸಂಗಾತಿಯೊಡನೆ ಬೆರೆಯುವಾಗ ಪಾರಸ್ಪರಿಕ ಮಗ್ಗಲಿಗೆ ಹೋಗುವ ಬದಲು ಮಟಾಮಾಯ ಆಗುತ್ತದೆ. ಯಾಕೆ? ಒಂದು ಕಾರಣ ಏನೆಂದರೆ, ಆಕೆ ಅರಳುವ ಮುಂಚೆ ಪ್ರವೇಶ ನಡೆಯುತ್ತದೆ. ಇದರಿಂದ ಆಕೆಯ ಕಲ್ಪನಾ ವಿಲಾಸಕ್ಕೆ ಭಂಗ ಬರುತ್ತದೆ. ಅದಕ್ಕಿಂತ ದೊಡ್ಡ ಕಾರಣ ಏನೆಂದರೆ, ಶಾಮಾಳ ಕಲ್ಪನಾ ವಿಲಾಸವು ಪರಪುರುಷರನ್ನು ಒಳಗೊಳ್ಳುವುದರಿಂದ ಅದರ ಬಗೆಗೆ ಸಂಗಾತಿಯೊಂದಿಗೆ ಹೇಳಿಕೊಳ್ಳಲು ಮುಜುಗರ, ಸಂಕೋಚ ಆಗುತ್ತದೆ. ಆದರೆ ಅದನ್ನು ತನ್ನಷ್ಟಕ್ಕೆ ತಾನೇ ಅನುಭವಿಸಲು ಮುಜುಗರ ಆಗುವುದಿಲ್ಲ! ಹಾಗಾಗಿ ಸಲೀಲನೊಂದಿಗೆ ಹಂಚಿಕೊಳ್ಳುವುದರಲ್ಲಿ ಹಿಂಜರಿಯುತ್ತಾಳೆ. ಒಂದುವೇಳೆ ಹಂಚಿಕೊಂಡು “ನನಗೆ ಇಂತಿಂಥದ್ದು ಬೇಕು” ಎನ್ನುವಾಗ, “ನನಗೆ ಇಂತಿಂಥವರು ಬೇಕು” ಎಂದು ಅರ್ಥ ಬರಬಹುದು. ಅದಕ್ಕೆ ಸಲೀಲನ ಪ್ರತಿಕ್ರಿಯೆ ಏನು? “ಇಂಥದ್ದೆಲ್ಲ ನಿನ್ನ ಮನಸ್ಸಿನಲ್ಲಿ ಇದೆಯೆ? ಇದನ್ನು ಎಲ್ಲಿಂದ ಕಲಿತೆ?” ಎಂಬ ಪ್ರಶ್ನೆ ಎದುರಿಸಿ ಅವಹೇಳನಕ್ಕೆ ಗುರಿಯಾಗುವ ಸಂಭವವಿದೆ – ಯಾಕೆಂದರೆ ಸಲೀಲನ ತಲೆಯಲ್ಲಿ ಏನು ಕಲ್ಪನೆಗಳಿವೆಯೋ ಗೊತ್ತಿಲ್ಲ. ಬಹುಶಃ ಏನೂ ಇರಲಿಕ್ಕಿಲ್ಲ – ಅದಕ್ಕೆಂದೇ ಅವಳು ಮನಸ್ಸು ಮಾಡುವ ತನಕ ಅವನು ಪ್ರೀತಿಯಿಂದ ಕಾಯುತ್ತ ಇರುತ್ತಾನೆ. ಅಲ್ಲದೆ, ತನ್ನ ಕಲ್ಪನಾ ವಿಲಾಸವನ್ನು ಬಹಿರಂಗಪಡಿಸಿದರೆ ತನ್ನಿಷ್ಟ ನೆರವೇರಿಸಲು ಅವನ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ. ಅದಕ್ಕೇ ನಿರುಪಾಯಳಾಗಿದ್ದಾಳೆ.
ಇನ್ನೊಂದು ವಿಷಯ: ಕೆಲವೊಮ್ಮೆ ಸಂಭೋಗ ಸಾಧ್ಯವಾಗದೆ ಇರುವಾಗ ಸಲೀಲ್ ಶಾಮಾಳಿಂದ ಮುಖಮೈಥುನ ಬಯಸುತ್ತಾನೆ. ಅವನ ಶಿಶ್ನವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು ಅವಳಿಗೂ ಇಷ್ಟ. ಆದರೆ ಯೋನಿದ್ರವದಿಂದ ಒದ್ದೆಯಾದ ಶಿಶ್ನದ ರುಚಿ ನೋಡಲು ಬೇಡವೆನ್ನುತ್ತಾಳೆ. ನೇರವಾಗಿ ಶಿಶ್ನದ ದ್ರವ ಅವಳಿಗೆ ಸಮಸ್ಯೆಯಲ್ಲ – ಇತ್ತೀಚೆಗೆ ಒಮ್ಮೆ ಬಾಯಿಯಲ್ಲೇ ಸ್ಖಲನ ಮಾಡಿಕೊಂಡಿದ್ದಾಳೆ. ಕಾರಣ? ಏನೇ ಓದಿ ಎಷ್ಟೇ ಮಾಹಿತಿ ಪಡೆದರೂ ಯೋನಿ ಸ್ವಚ್ಛವಲ್ಲ ಎಂಬ ಅನಿಸಿಕೆ ಬಲವಾಗಿದೆ. ತನ್ನ ಜನನಾಂಗಕ್ಕಿಂತ ಸಂಗಾತಿಯ ಜನನಾಂಗ ಸ್ವಚ್ಛವಾಗಿದೆ ಎಂದು ನಂಬಿದ್ದಾಳೆ. ಇದರರ್ಥ ಏನು? ತನ್ನನ್ನು ತಾನೇ ನಿರಾಕರಿಸುತ್ತ ಇದ್ದಾಳೆ. ತನಗೆ ತಾನೇ ಬೇಡವಾದರೆ ಸ್ವಂತಿಕೆ ಅರಳಲು ಹೇಗೆ ಸಾಧ್ಯ? ಸ್ವಯಂ ನಿರಾಕರಣೆ ಆಕೆಯ ಇನ್ನೊಂದು ಮಗ್ಗಲು.
ಇನ್ನು ಅವರಿಬ್ಬರ ಸ್ವಂತಿಕೆಯ ಬಗೆಗೆ ತಿಳಿಯೋಣ. ಇಬ್ಬರಲ್ಲೂ ತಕ್ಕಮಟ್ಟಿಗೆ ಸ್ವಂತಿಕೆ ಇದೆ. ಶಾಮಾಳ ಸ್ವಂತಿಕೆಯು ಆಕೆಯ ಕಲ್ಪನಾ ವಿಲಾಸದಲ್ಲಿ ಸಮೃದ್ಧವಾಗಿದೆ. ಸಲೀಲನ ಸ್ವಂತಿಕೆಯು ಆತನ ಕಾಮ ಕೆರಳಿದಾಗ ಪ್ರಕಟವಾಗುತ್ತದೆ. ಆಗ ತಾನಾಗಿಯೇ ಆಕೆಯನ್ನು ಬರಸೆಳೆಯುತ್ತಾನೆ. ಆಕೆ ತಯಾರಿಲ್ಲದಿದ್ದರೆ ತಾಳ್ಮೆಯಿಂದ ಕಾಯುತ್ತಾನೆ. ಮನಸ್ಸು ಬಿಚ್ಚಿ ಪ್ರೀತಿಯ ಮಾತಾಡುತ್ತಾನೆ. ಆಕೆ ಬೇಡವೆಂದರೂ ತನಗೆ ಬೇಕು ಎಂದು ಒಳಗೊಳಗೆ ನಿರಾಸೆಯಾದರೂ ತಡೆದುಕೊಂಡು ಮುಂದುವರಿಯುತ್ತಾನೆ. ಇದೆಲ್ಲ ಶಾಮಾಳಿಗೆ ಅಪ್ಯಾಯಮಾನ ಆಗುತ್ತದೆ. ಅವನ ಆಹ್ವಾನಕ್ಕೆ ಕಾಯದೆ ತಾನೇ ಶುರುಮಾಡಬೇಕು ಎಂಬಾಸೆ ಆಕೆಯಲ್ಲಿ ಹುಟ್ಟುತ್ತದೆ. ಹೀಗೆ ಇಬ್ಬರ ವರ್ತನೆಗಳಲ್ಲಿ ಸ್ವಂತಿಕೆಯಿದ್ದು, ಅದನ್ನು ಪ್ರಕಟಗೊಳಿಸಿ ಕಂಗೊಳಿಸಲು ಕಾಯುತ್ತಿದ್ದಾರೆ. ಆದರೆ ಸಂಗಾತಿಯಿಂದ ಬರುವ ಒಲ್ಲದ ಭಾವವನ್ನು ಹೇಗೆ ಎದುರಿಸಬೇಕು ಎಂದು ಗೊತ್ತಾಗದೆ ಪರಸ್ಪರರ ಬಗೆಗೆ ಕಾಳಜಿ ಮಾಡುತ್ತ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.
ಸಂಗಾತಿಯ ಸಾನ್ನಿಧ್ಯದಲ್ಲಿ ನಿರಾಕರಣೆಯ ಮುಖದಲ್ಲೂ ಸ್ವಂತಿಕೆಯನ್ನು ಪ್ರಕಟಿಸುವ ಸವಾಲನ್ನು ಹೇಗೆ ಎದುರಿಸುವುದು ಎಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.