ಸುಖೀ ದಾಂಪತ್ಯ ೨೨೦
ಮೌನದ ದಾಂಪತ್ಯಗಳಲ್ಲಿ ಒಬ್ಬರು ಹೇಳಬೇಕೆಂದಿರುವುದನ್ನು ಕೇಳಿಸಿಕೊಳ್ಳಲು ಇನ್ನೊಬ್ಬರು ತಯಾರಿಲ್ಲ!
220: ಆಧುನಿಕ ದಾಂಪತ್ಯಗಳು – 5
ಆಧುನಿಕ ದಾಂಪತ್ಯಗಳ ಬಗೆಗೆ ಚರ್ಚೆ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಅಮೆರಿಕದ ಲೈಂಗಿಕ-ದಾಂಪತ್ಯ ಚಿಕಿತ್ಸಕ ಡೇವಿಡ್ ಸ್ನಾರ್ಷ್ ನಡೆಸುವ ಕಾರ್ಯಾಗಾರಗಳ ಬಗೆಗೆ ಸ್ವಲ್ಪ ಹೇಳಬೇಕು. ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವವರಿಗೆ ಸ್ನಾರ್ಷ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಅವು ಬಹಳ ರಸವತ್ತಾಗಿ ಅರ್ಥಗರ್ಭಿತವಾಗಿವೆ.
ಅವನ ಮೊದಲ ಪ್ರಶ್ನೆಯಿದು: “ರೆಸ್ಟಾರೆಂಟ್ನಲ್ಲಿ ಕುಳಿತ ಜೋಡಿಗಳು ಮದುವೆ ಆಗಿದ್ದಾರೆ ಎಂದು ಹೇಗೆ ಕಂಡುಹಿಡಿಯುತ್ತೀರಿ?” ಪಾಲ್ಗೊಳ್ಳುವವರು ಸ್ವಲ್ಪ ಸಮಯ ಯೋಚನೆಯಲ್ಲಿ ಮುಳುಗುತ್ತಾರೆ. ಥಟ್ಟನೇ ಹೊಳೆಯುತ್ತದೆ: “ಮದುವೆಯಾದವರು ಪರಸ್ಪರ ಮಾತಾಡುವುದಿಲ್ಲ!”
ಅವನ ಮುಂದಿನ ಪ್ರಶ್ನೆ: “ಹಾಗಾದರೆ ಮದುವೆ ಆಗದ ಜೋಡಿಗಳನ್ನು ಹೇಗೆ ಕಂಡುಹಿಡಿಯುವಿರಿ?” ಥಟ್ಟನೆ ಹೋಲಿಕೆಯ ಉತ್ತರ ಬರುತ್ತದೆ. “ಅವರು ಪರಸ್ಪರ ತುಂಬಾ ಮಾತಾಡುತ್ತಾರೆ!” ಬೆನ್ನಹಿಂದೆ ಇನ್ನಷ್ಟು ಉತ್ತರಗಳು ಸರಸರನೇ ಬರುತ್ತವೆ. ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ… ಪರಸ್ಪರ ಸ್ಪರ್ಶಿಸುತ್ತಾರೆ. ಒಂದೇ ತಟ್ಟೆಯಿಂದ ತಿನ್ನುತ್ತಾರೆ. ಹೆಚ್ಚಾಗಿ ನಗುತ್ತ ಇರುತ್ತಾರೆ ಇತ್ಯಾದಿ.
ನಿಜ. ಸಾಕಷ್ಟು ವಿವಾಹಿತರು – ಅದರಲ್ಲಂತೂ ದಾಂಪತ್ಯದಲ್ಲಿ ಸುಮಾರು ವರ್ಷ ಕಳೆದವರು ಆರಾಮವಾಗಿರಬೇಕಾದ ಜಾಗದಲ್ಲಿ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳುತ್ತ ಮೊಬೈಲನ್ನೋ ಹತ್ತಿರವಿರುವ ಟೀವಿಯನ್ನು ನೋಡುತ್ತಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಒಡನಾಡಿಗಳು ಹಾಗೂ ಪ್ರೇಮಿಗಳು ಒಂದೇಸಮನೆ ಹರಟೆ ಹೊಡೆಯುತ್ತ, ನಗುತ್ತ ಒಂದು ಕಫ್ ಕಾಫಿಯ ಮೇಲೆ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಇವರು ಭೇಟಿಯ ಶೇ. 85ರಷ್ಟು ಹೊತ್ತು ಮುಖಾಮುಖಿಯಾಗಿ ನೋಡುತ್ತ ಸಮಯ ಕಳೆಯುವುದು ಕಂಡುಬಂದಿದೆ. ಅದಿರಲಿ, ಯುವಪ್ರೇಮಿಗಳು ಯಾಕೆ ಹೀಗೆ ಮಾಡುತ್ತಾರೆ? ಏನು ಪಡೆಯುತ್ತಾರೆ? ಆ ವಯಸ್ಸಿನಲ್ಲಿ ಅವರಿಗೆ ತಮ್ಮ ಸ್ವಂತಿಕೆಯ ಬಗೆಗೆ ವಿಶೇಷ ಅರಿವಿರುವುದಿಲ್ಲ. ಅದಕ್ಕೇ ಅಷ್ಟೊಂದು ಅಲಂಕಾರ ಮಾಡಿಕೊಂಡು ಸಂಗಾತಿಯ ಜೊತೆಗೆ ಇರುತ್ತಾರೆ. ಪ್ರೇಮಿಗಳು ಮನಸ್ಸಿನ ಆತಂಕ, ಭೀತಿಗಳನ್ನು ತೆಗೆದುಹಾಕಿ ಬೇಕಾದ ಸಂಭಾಷಣೆಯನ್ನಷ್ಟೇ ಕೈಗೆತ್ತಿಕೊಳ್ಳುತ್ತ, ಪರಸ್ಪರರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತ ಮಹತ್ವ ಪಡೆದುಕೊಳ್ಳುತ್ತಾರೆ. ತಮ್ಮಿಬ್ಬರಲ್ಲಿರುವ ಸಮಾನ ಗುಣಗಳನ್ನೂ ಅಭಿರುಚಿಗಳನ್ನೂ ಮುಂದಿಡುತ್ತ ಹತ್ತಿರವಾಗುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತ, ಭಿನ್ನಾಭಿಪ್ರಾಯಗಳನ್ನು ಎಚ್ಚರಿಕೆಯಿಂದ ದೂರವಿಡುತ್ತಾರೆ – ಮುಂದಿನ ಸಲ ಭೇಟಿಯಾಗುವ ಅವಕಾಶ ಉಳಿಸಿಕೊಳ್ಳಬೇಕಲ್ಲವೆ? ಹಾಗಾಗಿಯೇ ಒಂದೇಸಮನೆ ಗಂಟೆಗಟ್ಟಲೆ ಹರಟುತ್ತ, ಮುಖಕ್ಕೆ ಮುಖ ಕೊಟ್ಟು ನಗುತ್ತ ಇರುತ್ತಾರೆ.
ಮುಂದಿನ ಪ್ರಶ್ನೆ: “ಮದುವೆಯಾದವರು ಯಾಕೆ ಮಾತಾಡುವುದಿಲ್ಲ?” ಉತ್ತರಗಳು ಒಂದೊಂದಾಗಿ ತೊಟ್ಟಿಕ್ಕುತ್ತವೆ. ಪಾಲ್ಗೊಳ್ಳುವವರಲ್ಲಿ ಕೆಲವರು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುತ್ತಾರೆ. ಹೌದು, ನಾವೇಕೆ ಮದುವೆಯಾದ ಮೇಲೆ ಮಾತು ಬಿಟ್ಟಿದ್ದೇವೆ? ಮೊದಲು ಹೊಳೆಯುವುದು: ಮಾತಾಡಲು ಏನಿರುತ್ತದೆ? ಎಲ್ಲಾ ಮಾತು ಮುಗಿದಿರುತ್ತದೆ. ಇನ್ನು ಕೆಲವರು ಬುದ್ಧಿವಂತರ ಪ್ರಕಾರ ಅವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ, ಹಾಗಾಗಿ ಏನೂ ಮಾತು ಉಳಿದಿರುವುದಿಲ್ಲ. ಆದರೆ ಅವರ ತಣ್ಣಗಿನ ಮುಖಭಾವವನ್ನು ನೋಡಿದರೆ ಅರ್ಥಮಾಡಿಕೊಂಡಿರುವಂತೆ ಅನ್ನಿಸುವುದಿಲ್ಲ. ತಮ್ಮ ನಡುವಿನ ಮೌನವನ್ನು ಅವರೇ ಹುಟ್ಟುಹಾಕಿರುವಂತೆ ಕಾಣುತ್ತದೆಯೇ ವಿನಾ ಬೆಚ್ಚಗಿನ ಶಾಂತಿ ಕಾಣುವುದಿಲ್ಲ. ಇಬ್ಬರ ನಡುವೆ ಸಂವಹನ (communication) ವಿಫಲವಾಗಿ ಮಾತು ಸೋತು ನೆಲಕಚ್ಚಿ ಮೌನವಾಗಿದ್ದಾರೆ.
ಈಗ ನೀವೇ ಈ ಪ್ರಶ್ನೆಯನ್ನು ಕೇಳಿಕೊಳ್ಳಿ: ಮದುವೆಯಾದವರು ಯಾಕೆ ಮಾತಾಡುವುದಿಲ್ಲ? ನೀವೊಂದುವೇಳೆ ಮದುವೆ ಆಗಿದ್ದರೆ ನಿಮ್ಮ ಅನುಭವದಿಂದ ಒಂದು ಸಲ ಪರೀಕ್ಷಿಸಿ. ನಿಮ್ಮಿಬ್ಬರ ನಡುವೆ ಮೌನ ಇರುವುದು ಎಲ್ಲ ಮಾತು ಮುಗಿದಿರುವುದರಿಂದ ಅಲ್ಲ. ಅದಕ್ಕೆ ಇನ್ನೊಂದು ಕಾರಣವಿದೆ: ಸಂಗಾತಿ ಹೇಳಬೇಕೆಂದಿರುವುದನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲ!
ಈಗ ಅತಿಮುಖ್ಯ ಪ್ರಶ್ನೆ: “ನಿಮ್ಮ ಸಂಗಾತಿ ಹೇಳುವುದನ್ನು ಕೇಳಲು ಇಷ್ಟವಿಲ್ಲವೆಂದು ನಿಮಗೆ ಹೇಗೆ ಗೊತ್ತು?” ಅದಕ್ಕೆ ನೀವು, “ಯಾಕೆಂದರೆ ನನಗೆ ಈಗಾಗಲೇ ಗೊತ್ತು ನಮ್ಮಲ್ಲಿ ಸಂವಹನ ನಡೆಯುತ್ತಿಲ್ಲ ಅಂತ.” ಎನ್ನುತ್ತೀರಿ. ಸಂವಹನ ನಿಜವಾಗಲೂ ನಡೆಯದಿದ್ದಲ್ಲಿ ನೀವು ಕೇಳಿಸಿಕೊಳ್ಳಲು ಇಷ್ಟವಿಲ್ಲ ಎಂದು ಹೇಗೆ ಗೊತ್ತಾಗುತ್ತದೆ? ಇದರರ್ಥ ಏನೆಂದರೆ, ಇಲ್ಲಿ ಸಂವಹನ ನಡೆಯುತ್ತಿಲ್ಲ ಅಂತಲ್ಲ, ಬದಲಾಗಿ ಮೌನ ಸಂಭಾಷಣೆ ನಡೆಯುತ್ತಿದೆ. ಮೌನವೂ ಒಂದು ಒಳ್ಳೆಯ ಸಂವಹನ. “ನನ್ನ ಮನದಲ್ಲಿ ಇರುವುದನ್ನು ಕೇಳಿಸಿಕೊಳ್ಳಲು ಸಂಗಾತಿ ತಯಾರಿಲ್ಲ ಎನ್ನುವುದು ನನಗೆ ಗೊತ್ತು” ಎಂಬ ಮಾತು ಇಲ್ಲಿ ಸುತ್ತುತ್ತಿದೆ.
ಈಗ ನವದಾಂಪತ್ಯಗಳಿಗೆ ಬರೋಣ. ಸಂಗಾತಿಯ ಆಯ್ಕೆಗೆ ವೈಯಕ್ತಿಕ ವೃತ್ತಿ ಹಾಗೂ ಆರ್ಥಿಕ-ಸಾಮಾಜಿಕ ಅಂಶಗಳ ಜೊತೆಗೆ ಸಮಾನ ಗುಣಗಳೂ ಅಭಿರುಚಿಗಳೂ ಆಧಾರವಾಗುತ್ತಿವೆ. ಇದರ ತಳ ಸೋಸಿದರೆ ಸಿಗಬಹುದು? ಮದುವೆ ಎಂದರೆ ಏನೂ ಎಡವಟ್ಟು ಆಗಬಾರದು, ಎಲ್ಲವೂ ಸುರಕ್ಷಿತ, ಸುಖಕರ ಆಗಬೇಕು ಎನ್ನುವ ಅಭಿಮತ ಜನರಲ್ಲಿದೆ – ಇದರ ಹಿಂದೆ ನಿಶ್ಚಿತತೆ ಇಲ್ಲದಿದ್ದರೆ ಸಂಬಂಧ ಮುರಿದು ಬೀಳಬಹುದು ಎಂಬ ಭಯವಿದೆ. ಆದರೆ ನನ್ನ ಪ್ರಶ್ನೆ ಏನೆಂದರೆ, ಎಲ್ಲವೂ ಸುರಕ್ಷಿತ, ಸುಖಕರ ಎಂದು ನಿರೀಕ್ಷೆಯ ಪ್ರಕಾರ ಕೂಟ, ಜವಾಬ್ದಾರಿ, ಮಕ್ಕಳು ಎಂದು ಹೊರಟರೆ ಹೊಸದನ್ನು ಮಾಡಲು, ಮಾತಾಡಲು ಏನು ಉಳಿಯಿತು? ಅದಕ್ಕೇ ಮದುವೆಯಾದವರು ರೆಸ್ಟಾರೆಂಟ್ನಲ್ಲಿ ಹಾಗೆ ವರ್ತಿಸುವುದು!
ಇಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಮದುವೆಯು ಲೈಂಗಿಕ ಕ್ರಿಯೆಗೆ ಅರ್ಹತಾ ಪತ್ರ ಕೊಡುತ್ತದೆ. ಹಾಗಾಗಿ ಮದುವೆಯ ನಂತರ ಲೈಂಗಿಕ ಕ್ರಿಯೆ ನಡೆದೇ ನಡೆಯುತ್ತದೆ ಎಂದು ನಂಬುತ್ತ ಒಂದು ರೀತಿಯ ನಿಶ್ಚಿತತೆ ಅಥವಾ ಖಾತರಿತನದ ವಿಶ್ವಾಸದಿಂದ ಮುಂದುವರಿಯುತ್ತೇವೆ. ಲೈಂಗಿಕ ಕ್ರಿಯೆ ನಡೆಯುತ್ತದೇನೋ ನಿಜ, ಆದರೆ ಅದರಲ್ಲಿ ಸಿಗುವ ಸುಖ ಮೆಚ್ಚುವಂಥದ್ದು, ಹಾಗೂ ತನಗೆ ಬೇಕಾದುದೇ ಆಗಿರುತ್ತದೆ ಎಂಬುದು ಏನು ಖಾತರಿ? ಉದಾಹರಣೆಗೆ, ಗಂಡ ನಾವೀಗ ಕೂಡಬೇಕು ಎಂದು ಪ್ರಕಟಪಡಿಸಿದರೆ ಹೆಂಡತಿಗೆ ಏನು ಆಯ್ಕೆಯಿದೆ? ಒಂದು, ಅವನಿಗೆ ನೇರವಾದ ಸೆಕ್ಸ್ ಬೇಕು – ಅದು ಇವಳಿಗಾಗದು. ಇವಳಿಗೆ ಕೂಟದ ಮುನ್ನ ಭಾವಬಾಂಧವ್ಯ ಬೆಳೆಸಿಕೊಳ್ಳಬೇಕು. ಅಷ್ಟೊತ್ತಿಗೆ ಅವನಿಗೆ ಉದ್ರೇಕ ಇಳಿದುಬಿಡುತ್ತದೆ. ಹಾಗಾಗಿ ಕೂಟ ನಿಶ್ಚಿತವಾಗಿ ನಡೆದರೂ ತನಗೇನು ಬೇಕೋ ಅದು ಸಿಗುವುದಿಲ್ಲ. ಒಬ್ಬರು ಬದಲಾವಣೆ ಸೂಚಿಸಿದರೆ ಇನ್ನೊಬ್ಬರು ಮುರುಟಿಕೊಳ್ಳುತ್ತಾರೆ. ಆಗ ಏನೂ ನಡೆಯದೆ ಇರುವುದನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೇ ನಡೆಯುವುದನ್ನೇ ಅರೆಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಇಂಥವರು ಮಗುವಿನ ಸಹಿತ ರೆಸ್ಟಾರೆಂಟ್ನಲ್ಲಿ ಕುಳಿತರೆ ಮುಖಾಮುಖಿ ಕೂತು ನಗಲು ಸಾಧ್ಯವಿದೆಯೆ?
ಇದರರ್ಥ ಏನು? ಒಂದುಸಲ ನೀವು ಮದುವೆ ಅಂತ ಆಗಿಬಿಟ್ಟರೆ ನಿಶ್ಚಿತವಾದ ಕೆಲವು ಕೊಡುಗೆಗಳು ಸಿಗುತ್ತವೆ. ಆದರೆ ಬಾಂಧವ್ಯವು ಬಳುವಳಿಯಾಗಿ ಬರುವುದಿಲ್ಲ. ಅದನ್ನು ಪ್ರಯತ್ನಪಟ್ಟು ಕಟ್ಟಿಕೊಳ್ಳಬೇಕಾಗುತ್ತದೆ. ಬಾಂಧವ್ಯಕ್ಕೆ ಅಡಿಪಾಯವಾಗಿ ಮೊದಲು ಅನ್ಯೋನ್ಯತೆಯನ್ನು (intimacy) ಬೆಳೆಸಿಕೊಳ್ಳ ಬೇಕಾಗುತ್ತದೆ. ಅನ್ಯೋನ್ಯತೆಯನ್ನು ಸಾಧಿಸಿದ ಸಂಗಾತಿಗಳು ರೆಸ್ಟಾರೆಂಟ್ನಲ್ಲಿ ಕುಳಿತುಕೊಂಡು ಮುಂಚಿನ ರಾತ್ರಿ ನಡೆಸಿದ ಕಾಮಕೂಟದ ಬಗೆಗೆ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಾರೆ. ನಗುತ್ತಾರೆ.
ಆಧುನಿಕ ದಾಂಪತ್ಯಗಳಲ್ಲಿ ಅನ್ಯೋನ್ಯತೆಯ ಬಗೆಗೆ ಮುಂದಿನ ಸಲ ತಿಳಿಯೋಣವಂತೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.