Please wait...

ಸುಖೀ ದಾಂಪತ್ಯ ೨೧೮

ಅನೇಕ ನವದಂಪತಿಗಳ ಜಗಳಗಳು ಗಂಡಹೆಂಡಿರ ನಡುವೆ ಆಗಿರದೆ ಹಿರಿಯರು ಹಾಗೂ ಕಿರಿಯರ ನಡುವೆ ಆಗುತ್ತವೆ!

218: ಆಧುನಿಕ ದಾಂಪತ್ಯಗಳು – 3

ನವಜನಾಂಗವು ಹಿರಿಯರ ದಾಂಪತ್ಯಗಳ ವೈಫಲ್ಯವನ್ನು ನೋಡಿ ರೂಢಿಗತ ದಾಂಪತ್ಯ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದು, ತಮ್ಮದೇ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದೆ. ವಿಷಯ ಹೀಗಿರುವಾಗ ಹಿರಿಯರ ಹಾಗೂ ಕಿರಿಯರ ನಡುವೆ ಘರ್ಷಣೆ ನಡೆಯದೆ ಇದ್ದೀತೆ? ಇದರ ಮಗ್ಗಲುಗಳನ್ನು ಒಂದು ದೃಷ್ಟಾಂತದಿಂದ ಅರ್ಥಮಾಡಿಕೊಳ್ಳೋಣ:

ಮೂವತ್ತು ದಾಟಿದ ಮನೋಜ-ಮಾನವಿ (ಹೆಸರು ಬದಲಾಯಿಸಲಾಗಿದೆ) ಹಿರಿಯರಿಂದ ವ್ಯವಸ್ಥೆಗೊಂಡು ದಂಪತಿಗಳಾಗಿ ಕೆಲವೇ ತಿಂಗಳಾಗಿದೆ. ತೀವ್ರ ಮನಸ್ತಾಪದಿಂದ ಇಬ್ಬರೂ ಬೇರೆಬೇರೆಯಾಗಿದ್ದಾರೆ. ಕಾರಣ? ಕಾರಣ ಇಲ್ಲಿ ಮುಖ್ಯವಲ್ಲ, ಜಗಳಗಳು ಆಗುತ್ತಿರುವುದು ಮುಖ್ಯ. ಜಗಳ ಯಾವಾಗ ಶುರುವಾಯಿತು? ಹಾಗೆ ನೋಡಿದರೆ ಮದುವೆ ನಿಶ್ಚಯ ಆಗಿ, ಹುಡುಗ-ಹುಡುಗಿ ಮಾತಾಡಲು ಶುರುಮಾಡಿದಾಗಿನಿಂದ ಚಿಕ್ಕಪುಟ್ಟ ವಿಷಯ ಎತ್ತಿಕೊಂಡು ಜಗಳಗಳು ಆಗುತ್ತಲೇ ಇದ್ದುವು. ಎರಡು ಸಲ ಇನ್ನೇನು ಸಂಬಂಧ ಮುರಿಯಬೇಕು ಎನ್ನುವ ಮಟ್ಟಿಗೆ ಹೋಗಿತ್ತಂತೆ. ಯಾಕೆ ಮುರಿಯಲಿಲ್ಲ ಎಂದರೆ, ಛತ್ರ ಹಿಡಿದು, ಲಗ್ನಪತ್ರಿಕೆ ಹಂಚಿಯಾಗಿತ್ತು. ಹಾಗಾಗಿ ಹಿರಿಯರು ಒಪ್ಪಲಿಲ್ಲವಂತೆ. “ಒಂದುಸಲ ಕೂಡಿರಲು ಶುರುವಾದರೆ ಎಲ್ಲವೂ ಕ್ರಮೇಣ ಸರಿಹೋಗುತ್ತದೆ.” ಎಂದು ಧೈರ್ಯ ಕೊಟ್ಟರಂತೆ. ಅದಕ್ಕೆ ವ್ಯತಿರಿಕ್ತವಾಗಿ ಮಧುಚಂದ್ರಕ್ಕೆ ಹೋದವರು ನಡೆಯಬೇಕಾದುದು ನಡೆಯದೆ ಜಗಳ ಆಡಿಕೊಂಡು ಬಂದಿದ್ದು, ಪರಸ್ಪರರಿಂದ ವಿಮುಖರಾಗಿದ್ದಾರೆ. ಈಗ ಇಬ್ಬರ ಕಡೆಯ ಹಿರಿಯರು ಏನೆನ್ನುತ್ತಾರೆ? “ಹುಡುಗ-ಹುಡುಗಿ ನಮ್ಮ ಸಮ್ಮುಖದಲ್ಲಿ ಪರಸ್ಪರ ಮಾತಾಡಿ ಒಪ್ಪಿಕೊಂಡಿದ್ದಾರೆ. ನಂತರವೇ ಮದುವೆಯ ತಾರೀಖು ನಿಶ್ಚಯಿಸಿದ್ದು. ಮೂರು ತಿಂಗಳ ಅವಧಿಯಲ್ಲಿ ವ್ಯವಹರಿಸಿ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲು ಸಾಕಷ್ಟು ಅವಕಾಶ ಕೊಟ್ಟಿದ್ದೆವು. ಅವರು ಮದುವೆ ಬೇಡವೆಂದಾಗ ನಿಲ್ಲಿಸುವುದಕ್ಕೆ ತೀರ ತಡವಾಗಿತ್ತು. ಈಗ ಇಬ್ಬರಿಗೂ ಬುದ್ಧಿ ಹೇಳುತ್ತಿದ್ದೇವೆ, ನೀವೂ ಹೇಳಿ.”

ಮನೋಜ-ಮಾನವಿಯ ನಡುವೆ ನಡೆಯುತ್ತಿರುವುದನ್ನು ನೋಡಿದರೆ ಹಲವು ಪ್ರಶ್ನೆಗಳು ತಲೆಯೆತ್ತುತ್ತವೆ.

ಸಂಬಂಧ ಜೋಡಿಸುವಾಗ ನಿಶ್ಚಿತಾರ್ಥದ ನಂತರ ಮದುವೆಗೆ ಕಾಲಾವಕಾಶ ಕೊಡುವ ಉದ್ದೇಶವೇನು? ನಮ್ಮಲ್ಲಿ “ವಿವಾಹ” ಎನ್ನುವ ಸಾಂಕೇತಿಕ ವಿಧಿಯು ಎಷ್ಟೊಂದು ದೈತ್ಯಾಕಾರವಾಗಿ ಬೆಳೆದಿದೆ ಎಂದರೆ ಈ ಸಮಾರಂಭದ ತಯಾರಿಗೇ ಸಮಯ, ಕೆಲಸ, ಹಣ ಎಲ್ಲವೂ ಕೈಮೀರುತ್ತವೆ. ಇಂಥದ್ದರಲ್ಲಿ ಮದುವೆ ಮುಗಿದರೆ ಸಾಕು ಎಂದು ಹಿರಿಯರು ಒದ್ದಾಡುತ್ತಿರುವಾಗ ರದ್ದುಪಡಿಸಲು ಯಾರು ತಾನೇ ಮನಸ್ಸು ಮಾಡುತ್ತಾರೆ? ಹೀಗಾಗಿ ಹೆಣ್ಣುಗಂಡುಗಳು ಭಾವೀ ಸಂಗಾತಿಯ ಬಗೆಗೆ ಭ್ರಮನಿರಸನ ಹೊಂದಿದರೂ ಹಿರಿಯರ ಇಷ್ಟದ ವಿರುದ್ಧ ಹೋಗಲಾರರು. ಹಾಗೆಂದು ಮದುವೆಯ ನಂತರ ಅರ್ಥವತ್ತಾದ ಸಂಬಂಧವನ್ನೂ ಕಟ್ಟಿಕೊಳ್ಳಲಾರರು. ಇದರರ್ಥ ಏನು? ನಿಶ್ಚಿತಾರ್ಥದ ನಂತರದ ಅವಧಿಯು ವಿವಾಹಕ್ಕೆ ಸಿದ್ಧತೆಗಾಗಿ ಇದೆಯೇ ಹೊರತು ದಾಂಪತ್ಯದ ಸಿದ್ಧತೆಗೆ ಅಲ್ಲ! – ಒಂದುವೇಳೆ ದಾಂಪತ್ಯಕ್ಕೆ ಸಿದ್ಧತೆ ಉದ್ದೇಶವಾದರೆ ಇಬ್ಬರೂ ಒಡನಾಟದಲ್ಲಿ ಸಾಕಷ್ಟು ಕಾಲಕಳೆದು, ಪರಸ್ಪರ ಒಪ್ಪದ ಹೊರತು ನಿಶ್ಚಿತಾರ್ಥ ಮಾಡುತ್ತಿರಲಿಲ್ಲ. ಅಂದರೆ ಇಲ್ಲಿ ಹಿರಿಯರು ಮಕ್ಕಳ ಇಷ್ಟವನ್ನು ಸೂಕ್ಷ್ಮವಾಗಿಯಾದರೂ ಅಲಕ್ಷಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಅನಿವಾರ್ಯವಾಗಿ ಮದುವೆಗೆ ಒಳಗಾಗುವ ಪ್ರಸಂಗದಲ್ಲಿ ಹೆಣ್ಣುಗಂಡುಗಳ ಮನಸ್ಸಿನಲ್ಲಿ ಏನು ನಡೆಯುತ್ತದೆ? ಸಂಬಂಧವನ್ನು ಒಪ್ಪದಿರುವಾಗ ಸಂಗಾತಿಯ ಬಗೆಗೆ ಬೇಡದ ಭಾವ ಇರುತ್ತದೆಯೇ ಹೊರತು ವೈಯಕ್ತಿಕವಾಗಿ ಕೋಪ, ಅಸಹನೆ, ತಿರಸ್ಕಾರ ಇತ್ಯಾದಿ ಇರುವುದಿಲ್ಲ. ಒಂದುವೇಳೆ ಮದುವೆ ಮುರಿದಿದ್ದರೆ “ಆ ವ್ಯಕ್ತಿ”ಯನ್ನು ಮರೆತೇಬಿಡುತ್ತಿದ್ದರು. ಹಿರಿಯರ ವಿರುದ್ಧ ಹೋರಾಡಲು ಆಗದೆ ಒಪ್ಪಬೇಕಾಗಿದೆ. ಅಂದರೆ, ಹಿರಿಯರ ವಿರುದ್ಧ ತೋರಿಸಲಾಗದ ಪ್ರತಿರೋಧವನ್ನು ಸಂಗಾತಿಯ ವಿರುದ್ಧ ತೋರಿಸುತ್ತಿದ್ದಾರೆ. “ಮದುವೆ ನಿಮ್ಮ ಕೈಯಲ್ಲಿದೆ, ಆದರೆ ದಾಂಪತ್ಯ ನನ್ನ ಕೈಯಲ್ಲಿದೆ!” ಎನ್ನುವ ಆಟ ಆಡುತ್ತಿದ್ದಾರೆ. ಬಿಡಿಸಿ ಹೇಳಬೇಕೆಂದರೆ, ಜಗಳದ ಹಿಂದೆ ಆಗಬಾರದ ಸಂಗಾತಿಯಲ್ಲ, ಆಗಬಾರದ ಹಿರಿಯರಿದ್ದಾರೆ! ಸಂಗಾತಿಯ ಬಗೆಗೆ ಕಾರಣಗಳು ಮಾತ್ರವಿದ್ದರೆ ಮಧುಚಂದ್ರದ ಕಾಮಕೂಟವು ಅದನ್ನೆಲ್ಲ ಮರೆಸಿಬಿಡುತ್ತದೆ. ಕಾಮಕ್ಕೆ ಅಂಥ ಸಾಮರ್ಥ್ಯವಿದೆ. ನಂತರ ಜಗಳಗಳ ಜೊತೆ ಕಾಮಕೂಟವೂ ಮುಂದುವರಿಯಬಹುದು.

ಹೀಗೆ ಹಿರಿಯರ ಕಾರಣದಿಂದ ಅನಿವಾರ್ಯ ದಾಂಪತ್ಯವನ್ನು ಒಪ್ಪಿಕೊಂಡು ಸುಖ ಅನುಭವಿಸಲಾಗದ ನೂರಾರು ಹೊಸ ಜೋಡಿಗಳು ಪ್ರತಿವರ್ಷ ಹುಟ್ಟುತ್ತಿದ್ದಾರೆ. ಇವರ ಸಂಬಂಧದ ಸುಧಾರಣೆಗೆ ಉಪಾಯವಿದೆಯೆ?

ಉಪಾಯವನ್ನು ಅರಿಯುವುದಕ್ಕಿಂತ ಮುಂಚೆ ಪ್ರೇಮವಿವಾಹಗಳಲ್ಲಿ ಏನು ನಡೆಯುತ್ತದೆ ಎಂದು ಗಮನಿಸೋಣ. ಪ್ರಾರಂಭದಲ್ಲಿ ಹುಡುಗ ಹುಡುಗಿ ನೋಡುವಾಗ ಆಕರ್ಷಣೆ ಹುಟ್ಟುತ್ತದೆ. ಪರಸ್ಪರರಲ್ಲಿ ಆಸಕ್ತಿ ಹೊಂದಿ ಜೊತೆಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಸಂಗಾತಿಯಲ್ಲಿ ಕಾಣುವ ಗುಣವಿಶೇಷಗಳನ್ನು ಪ್ರೀತಿಸಲು ತೊಡಗುತ್ತಾರೆ. ಒಡನಾಟ ಹೆಚ್ಚಿಸುತ್ತಾರೆ. ಒಡನಾಟ ಹೆಚ್ಚಾದಂತೆ ಭಿನ್ನಾಭಿಪ್ರಾಯಗಳೂ ಹೊರಬರುತ್ತವೆ. ಚೌಕಾಶಿ ಮಾಡುತ್ತಾರೆ. ವಿರಸ ತೀವ್ರವಾದಾಗ ಮಾತುಬಿಟ್ಟು ದೂರವಾಗುತ್ತಾರೆ. ವಿರಹ ಹೆಚ್ಚಾದಾಗ ಮತ್ತೆ ಭೇಟಿಯಾಗುತ್ತಾರೆ. ಹೀಗೆ ಮಿಲನ–ದೂರೀಕರಣದ ಏರಿಳಿತವನ್ನು ಎದುರಿಸುತ್ತ ಹೊಂದಾಣಿಕೆಗೆ ಯತ್ನಿಸುತ್ತಾರೆ. ಪರಿಣಾಮವಾಗಿ ಒಂದೋ, ಭಿನ್ನಾಭಿಪ್ರಾಯ ಇದ್ದರೂ ಕೂಡಿ ಬಾಳಬಲ್ಲೆವು, ಅಥವಾ, ಪ್ರೀತಿಯಿದ್ದರೂ ಕೂಡಿ ಬಾಳಲಾರೆವು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂಥವರ ದಾಂಪತ್ಯದಲ್ಲಿ ಜಗಳಗಳು ಆದರೂ ಅದರೊಳಗೆ ಹೊಂದಾಣಿಕೆಯ ಉದ್ದೇಶವಿರುತ್ತದೆ. ಇಲ್ಲಿ ತಳಮಟ್ಟದ ಅಭಿಪ್ರಾಯ ಭೇದಗಳು ಕಾಣುವುದಿಲ್ಲ. ಒಟ್ಟಿನಲ್ಲಿ, ಪ್ರೇಮ ಪ್ರಕರಣಗಳು ಆಕರ್ಷಣೆಯಿಂದ ಶುರುವಾಗಿ, ಚೌಕಾಶಿ ನಡೆದು, ಹೊಂದಾಣಿಕೆ ಆದಮೇಲೆ ಮದುವೆ ನಡೆಯುತ್ತದೆ; ಇದರ ನಡುವೆ ಸಂಬಂಧ ಮುರಿದುಕೊಳ್ಳುವ ಆಯ್ಕೆಯೂ ಇದೆ. ಆದರೆ ವ್ಯವಸ್ಥಿತ ಪದ್ಧತಿಯು ಇದರ ವಿರುದ್ಧವಾಗಿದೆ. ಮೊದಲು ಮದುವೆ, ನಂತರ ಅನಿವಾರ್ಯ ಹೊಂದಾಣಿಕೆಯ ಪ್ರಯತ್ನದಲ್ಲಿ ಚೌಕಾಶಿ, ಜಗಳ ನಡೆಯುತ್ತದೆ. ಸಂಬಂಧ ಕಡಿದುಕೊಳ್ಳುವುದು ತುಂಬಾ ಕಠಿಣ. ಆಕರ್ಷಣೆ ಹುಟ್ಟುವುದು ಕೊನೆಗೆ! ಅನಿವಾರ್ಯ ಮದುವೆ ಆದವರು ಪ್ರೇಮವಿವಾಹದ ತತ್ವಗಳನ್ನು ಅಳವಡಿಸಿಕೊಳ್ಳಬಹುದು. ಅದು ಹೀಗೆ: ಸ್ವಲ್ಪಕಾಲ ಎರಡೂ ಕಡೆಯ ಸಂಬಂಧಿಕರಿಂದ ದೂರವಾಗಿ ಇಬ್ಬರೇ ಪ್ರತ್ಯೇಕ ವಾಸ ಮಾಡಬೇಕು. ಮದುವೆ ಆಗಿದೆ ಎಂಬುದನ್ನು ಮರೆತುಬಿಟ್ಟು ಸ್ನೇಹಿತರ ರೀತಿ ಸಹ-ವಾಸದಲ್ಲಿ (live-in) ಇರಬೇಕು. ಸಂಬಂಧ ಮುರಿದುಕೊಳ್ಳುವ ಆಯ್ಕೆಯನ್ನು ತೆರೆದಿಟ್ಟುಕೊಂಡೇ ಆಕರ್ಷಣೆಯನ್ನು ಮುಂದಿಟ್ಟುಕೊಂಡು ಹೊಸದಾದ ಸಂಬಂಧ ಹುಟ್ಟುಹಾಕಲು ಸಾಧ್ಯತೆಗಳಿವೆಯೇ ಎಂದು ಯೋಚಿಸಬೇಕು. ಸಾಧ್ಯತೆ ಕಂಡರೆ ಜೌಕಾಶಿ ಮಾಡುತ್ತ ಹೊಂದಾಣಿಕೆಗೆ ಯತ್ನಿಸಬೇಕು.

ಇಲ್ಲಿ ಹಿರಿಯರ ಪಾತ್ರವೇನು? ಅವರು ತಮ್ಮ ಹಿರಿತನವನ್ನು ಬಿಟ್ಟುಕೊಟ್ಟು ಮಕ್ಕಳೊಡನೆ ಸಮಾನಮಟ್ಟದಲ್ಲಿ ಬೆರೆಯಬೇಕು. ಸಂಬಂಧದ ಮೇಲೆ ಹಿರಿತನದ ಪ್ರಭಾವವನ್ನು ಹೇರಿದುದರ ಬಗೆಗೆ ಮಗ/ಮಗಳೊಂದಿಗೆ ಅಲ್ಲದೆ ಅಳಿಯ/ಸೊಸೆಯ ಎದುರೂ ತಪ್ಪು ಒಪ್ಪಿಕೊಳ್ಳಬೇಕು. ಜೊತೆಗೆ ಸರಿಪಡಿಸುವ ಹೊಣೆ ಹೊರಬೇಕು. ನವದಂಪತಿಗಳನ್ನು ಇನ್ನೊಂದು ಸಲ ಮಧುಚಂದ್ರಕ್ಕೆ ಕಳಿಸಬೇಕು. ಈ ಮಧುಚಂದ್ರವು ಪ್ರತ್ಯೇಕ ಮನೆಯಲ್ಲಿ, ಹಾಗೂ ಕನಿಷ್ಟ ಎರಡು ವರ್ಷ ನಡೆಯಲು ವ್ಯವಸ್ಥೆ ಮಾಡಬೇಕು. ನಡುವೆ ಸಂಬಂಧ ಮುರಿಯುವಂತೆ ಕಂಡರೆ ಪ್ರತಿರೋಧಿಸುವ ಬದಲು ಪ್ರೋತ್ಸಾಹಿಸಬೇಕು. ಕೊನೆಯದಾಗಿ, ಒಂದು ಮಗುವಾದರೆ ಎಲ್ಲವೂ ಸರಿಹೋಗುತ್ತದೆ ಎಂಬ ಸಲಹೆಯನ್ನಂತೂ ಕೊಡಲೇ ಕೂಡದು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.