ಸುಖೀ ದಾಂಪತ್ಯ ೨೧೭
ಹಿರಿಯರ ದಾಂಪತ್ಯಗಳ ವೈಫಲ್ಯ ನೋಡಿ ಯುವಜನರು ನಂಬಿಕೆ ಕಳೆದುಕೊಂಡಿದ್ದಾರೆ.
217: ಆಧುನಿಕ ದಾಂಪತ್ಯಗಳು – 2
ಬದಲಾಗುತ್ತಿರುವ ದಾಂಪತ್ಯಗಳ ಕುರಿತು ಚರ್ಚೆ ಶುರುಮಾಡುತ್ತ ಭವಿಷ್ಯದಲ್ಲಿ ದಾಂಪತ್ಯಗಳು ಹೇಗಿರಬಹುದು ಎಂದು ಜಿಜ್ಞಾಸೆ ನಡೆಸಿದ್ದೇವೆ. ಇದಕ್ಕಾಗಿ ಹಿಂದಿನ ಹಾಗೂ ಈಗಿನ ತಲೆಮಾರಿನ ದಾಂಪತ್ಯಗಳನ್ನು ಹೋಲಿಸಿ ನೋಡುತ್ತ ಎರಡರಲ್ಲೂ ಮದುವೆಯ ಉದ್ದೇಶ ಹಾಗೂ ಸಾಧನೆಯ ಕುರಿತು ಯೋಚಿಸೋಣ.
ಅನಾದಿಕಾಲದಿಂದ ಗಂಡುಹೆಣ್ಣುಗಳ ಸಂಬಂಧವನ್ನು ಜೋಡಿಸಲು ಮನೆತನದ ಉದ್ಯೋಗವೇ ಮುಖ್ಯವಾಗಿತ್ತು. ಈ ಕುಲಕಸಬುಗಳೇ ಮುಂದೆ ಜಾತಿಗಳಾದುವು ಎನ್ನುವುದಕ್ಕೆ ಆಧಾರವಿದೆ. ಸ್ವಜಾತಿಯ ಹೆಣ್ಣನ್ನು ತರುವುದು ಕುಟುಂಬದ ದುಡಿಮೆಗೆ ಕೊಡುಗೆಯಾಗುತ್ತಿತ್ತು. ಮಕ್ಕಳು ಚಿಕ್ಕಂದಿನಿಂದಲೇ ವಂಶವೃತ್ತಿಗೆ ಕೈಜೋಡಿಸುತ್ತಿದ್ದುದರಿಂದ ಹದಿವಯಸ್ಸಿನ ಕೊನೆಗೆ ಪರಿಣಿತಿ ಪಡೆಯುತ್ತಿದ್ದರು. ಜೊತೆಜೊತೆಗೆ ಲೈಂಗಿಕ ಚಟುವಟಿಕೆಗೂ ತಯಾರಾಗುತ್ತಿದ್ದರು. ಆದರೆ ಬುದ್ಧಿಯ ಪರಿಪಕ್ವತೆ ಇಲ್ಲದಿದ್ದುದರಿಂದ ಹಿರಿಯರೇ ಅವರ ಮದುವೆಯ ವ್ಯವಸ್ಥೆ ಮಾಡುತ್ತಿದ್ದರು. ಬೇಗ ಮದುವೆಯಾದಷ್ಟೂ ಬೇಗ ಮಕ್ಕಳಾಗುವುದರಿಂದ ಉದ್ಯೋಗಕ್ಕೆ ಇನ್ನಷ್ಟು ಕೈಗಳು ದೊರಕುತ್ತಿದ್ದುವು. ಪುರುಷ ಪ್ರಾಧಾನ್ಯತೆಯ ದೃಷ್ಟಿಯಿಂದ ಹುಡುಗ-ಹುಡುಗಿಯರ ನಡುವೆ ಐದರಿಂದ ಹತ್ತು ವರ್ಷಗಳ ಅಂತರವಿರುತ್ತಿತ್ತು. ಸಂಗಾತಿಯ ಆಯ್ಕೆ, ದಾಂಪತ್ಯ ಹಾಗೂ ಲೈಂಗಿಕ ವಿಷಯಗಳಲ್ಲೇ ಏಕೆ, ಬದುಕಿನ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲೂ ಹಿರಿಯರ ಮಾತೇ ಅನುಸರಣೆಯಲ್ಲಿತ್ತು. (ಮೂವತ್ತು ವರ್ಷಗಳ ಹಿಂದಿನ ಘಟನೆ: ಅರವತ್ತೈದರ ಹಿರಿಯನೊಬ್ಬನನ್ನು ಹಳ್ಳಿಯ ಸರಪಂಚನ ಸ್ಥಾನವನ್ನು ಒಪ್ಪಿಕೊಳ್ಳಲು ಕೇಳಿದಾಗ ಆತ ತೊಂಬತ್ತು ವರ್ಷದ ತಂದೆಯ ಅನುಮತಿ ಕೇಳಿದ. ತಂದೆ ಬೇಡವೆಂದಾಗ ಎಷ್ಟೇ ಒತ್ತಾಯ ಮಾಡಿದರೂ ಒಪ್ಪಲಿಲ್ಲ.) ಅನುಸರಿಸದಿದ್ದರೆ ಒತ್ತಾಯ ಹೇರಲಾಗುತ್ತಿತ್ತು.
ಹೀಗೆ, ಹಿರಿಯರು ಕಿರಿಯರ ಮದುವೆಗಳನ್ನು ವ್ಯವಸ್ಥೆ ಮಾಡುವುದಕ್ಕೆ ಒಂದು ಹಿನ್ನೆಲೆಯಿತ್ತು. ತದನಂತರ ಕರ್ತವ್ಯ-ಜವಾಬ್ದಾರಿ-ಸುಖದ ಮಾದರಿಯ ಸಮುದಾಯ ರೂಪದ ದಾಂಪತ್ಯವು ಜಾರಿಯಲ್ಲಿತ್ತು. ಹಾಗಾಗಿ ಮದುವೆಯಾಗಿ ದಶಕಗಳೇ ಕಳೆದು ಹಲವು ಮಕ್ಕಳಾದರೂ ಎಷ್ಟೋ ಕಡೆ ಗಂಡಹೆಂಡಿರು ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಂಡಿರದೆ ಇದ್ದಿದ್ದು ಆಶ್ಚರ್ಯಕರವೇನೂ ಆಗಿರಲಿಲ್ಲ. ಉದಾಹರಣೆಗಾಗಿ, ನನ್ನ ಅಪ್ಪ-ಅಮ್ಮ ಇಪ್ಪತ್ತು ವರ್ಷ ಹಾಗೂ ನಾಲ್ಕು ಮಕ್ಕಳ ನಂತರವೂ ಪರಸ್ಪರ ಅರ್ಥ ಮಾಡಿಕೊಳ್ಳದೆ ಇದ್ದುದು ನನಗೆ ನೆನಪಿದೆ. ಆಗ ದಾಂಪತ್ಯದ ಪ್ರಣಯ ಹಾಗೂ ಅನುಬಂಧಗಳು ಕಾವ್ಯಕ್ಕೆ ಮಾತ್ರ ಮೀಸಲಾಗಿದ್ದವು. ಅನೇಕ ದಾಂಪತ್ಯಗಳು ಮಕ್ಕಳಿಗೋಸ್ಕರ ಮಾತ್ರ ಇಡಿಯಾಗಿ ಉಳಿದಿರುತ್ತಿದ್ದುವು – ಈಗಲೂ ಇವೆ. ಹಾಗೆಯೇ, ಹಿರಿಯರ ಮಾತನ್ನು ನೆರವೇರಿಸುವುದು ಕಿರಿಯರ ಕರ್ತವ್ಯ ಎನ್ನುವ ಸಾಲಿನಲ್ಲಿ ದುರದೃಷ್ಟವಶಾತ್ ಮದುವೆಯೂ ಒಂದಾಗಿ ಬಳಕೆಯಾಗುತ್ತಿತ್ತು. ಹತ್ತು ವರ್ಷಗಳ ಹಿಂದಿನ ಮಾತು: ಹದಿನೆಂಟರ ಹುಡುಗಿಯನ್ನು ಕರೆದುಕೊಂಡು ಆಕೆಯ ಅಮ್ಮ, ಗಂಡ ಬಂದಿದ್ದರು. ಆಕೆ ಗಂಡನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪುತ್ತಿಲ್ಲವಂತೆ. ಓದುವ ಹುಡುಗಿಯನ್ನು ಕಾಲೇಜು ಬಿಡಿಸಿ ಸೋದರ ಮಾವನಿಗೆ ಮದುವೆ ಮಾಡಿದ್ದಾರೆ. ಯಾಕೆಂದರೆ ತೊಂಬತ್ತೆರಡರ ಆಕೆಯ ಅಜ್ಜನಿಗೆ ಸಾಯುವ ಮುಂಚೆ ಇವಳ ಮದುವೆ ನೋಡುವ ಆಸೆಯಂತೆ. ಒತ್ತಾಯದ ಮದುವೆಗಳು ಈಗಲೂ ಸಾಕಷ್ಟು ನಡೆಯುತ್ತಿವೆ. ದಾಂಪತ್ಯ ಸಮಸ್ಯೆ ಇಟ್ಟುಕೊಂಡು ಹೊಂದಾಣಿಕೆ ಆಗದೆ ನನ್ನಲ್ಲಿ ಬಂದವರಲ್ಲಿ ಹೆಚ್ಚಿನ ದಂಪತಿಗಳು ಹಿರಿಯರಿಂದ ವ್ಯವಸ್ಥಿತ ವಿವಾಹವನ್ನು ಒಪ್ಪಿಕೊಂಡಿರುವುದು ಕಂಡುಬರುತ್ತದೆ. ಹುಡುಗಿಯರಿಗೆ ಮದುವೆಗೆ ಒಪ್ಪಿರುವ ಕಾರಣ ಕೇಳಿದಾಗ, ಹುಡುಗ ಓದಿದ್ದಾನೆ, ಆಕರ್ಷಕ ಇದ್ದಾನೆ, ಸಂಪಾದನೆ ಚೆನ್ನಾಗಿದೆ ಎನ್ನುವ ಹಿರಿಯರ ಒತ್ತಾಸೆಗೆ ಒಪ್ಪಿ, ಸ್ವಭಾವ ಅರಿಯಲು ಸಮಯ ಸಿಗದೆ ಮದುವೆಯಾಗಿ ಅನುಭವಿಸಿದ ದೃಷ್ಟಾಂತಗಳು ಸಾಕಷ್ಟಿವೆ. ವಿಚ್ಛೇದನದ ಹಾದಿಹಿಡಿದ ದಾಂಪತ್ಯಗಳ ಪೈಕಿ ವ್ಯವಸ್ಥಿತ ವಿವಾಹಗಳದು ದೊಡ್ಡ ಪಾಲಿದೆ ಎನ್ನುವುದು ಮೆಡಿಸೆಕ್ಸ್ ಫೌಂಡೇಶನ್ಗೆ ಭೇಟಿಕೊಟ್ಟ ಜನರಿಂದ ಗೊತ್ತಾಗುತ್ತದೆ.
ಇತ್ತೀಚೆಗೆ ಸಾಮಾಜಿಕ ಸ್ತರದಲ್ಲೂ ತೀವ್ರ ಬದಲಾವಣೆಗಳು ಆಗುತ್ತಿವೆ. ಎಲ್ಲ ಜಾತಿಯ ಜನರು ಎಲ್ಲ ಉದ್ಯೋಗಗಳಲ್ಲಿ ಇರುವುದರಿಂದ “ಸ್ವಜಾತಿಯಲ್ಲಿ ವಿವಾಹ” ಎನ್ನುವುದೇ ಅರ್ಥ ಕಳೆದುಕೊಂಡಿದೆ. ಸಾಕಾಗದ್ದಕ್ಕೆ ಆಧುನಿಕ ಉದ್ಯೋಗಗಳ ಪ್ರಕಾರ ಹೊಸ ಜಾತಿಗಳು ಹುಟ್ಟಿಕೊಂಡಿವೆ – ತಂತ್ರಜ್ಞ, ವೈದ್ಯ, ರಾಜಕಾರಣಿ ಇತ್ಯಾದಿ. ಹೆಣ್ಣು ಉದ್ಯೋಗಸ್ಥಳಾಗಿ ಗಂಡಿನ ಸರಿಸಮ ದುಡಿಯುವುದರಿಂದ ಆರ್ಥಿಕ ಭದ್ರತೆ ಬೇಕಿಲ್ಲ. ಇನ್ನು, ಅನೇಕ ದಂಪತಿಗಳು ಮಗುವೇ ಬೇಡ, ಅನಾಥ ಮಗುವನ್ನು ದತ್ತು ತೆಗೆದುಕೊಳ್ಳೋಣ ಎನ್ನುತ್ತಿದ್ದಾರೆ. ಕೂಡು ಕುಟುಂಬಗಳು ವಿರಳವಾಗುತ್ತಿವೆ. ಹೆಣ್ಣಿಗೆ ಭದ್ರತೆ ಹಾಗೂ ಅವಲಂಬನೆಯ ಅಗತ್ಯ ಕಡಿಮೆಯಾಗುತ್ತ, ಸ್ನೇಹಸಂಬಂಧಕ್ಕೆ ಆದ್ಯತೆ ಹೆಚ್ಚುತ್ತಿದೆ. ಈ ಕಾರಣದಿಂದ ಸಂಗಾತಿಗಳ ನಡುವಿನ ವಯಸ್ಸಿನ ಅಂತರವೂ ಮಾಯವಾಗುತ್ತಿದೆ. ಕರ್ತವ್ಯದ ಮಾದರಿ ದೂರವಾಗುತ್ತ ಸಾಂಗತ್ಯದ ಮಾದರಿ ಹುಟ್ಟಿಕೊಳ್ಳುತ್ತಿದೆ. ತಮಗಿಷ್ಟ ಬಂದಂತೆ ತಕ್ಕ ಬಾಳಸಂಗಾತಿಯನ್ನು ಆರಿಸಿಕೊಳ್ಳುವುದು, ಹಾಗೂ ಅದಕ್ಕಾಗಿ ಸಾಕಷ್ಟು ಸಮಯ ಹಾಗೂ ಭಾವನೆಗಳನ್ನು ತೊಡಗಿಸಿಕೊಳ್ಳುವುದು ಬರಬರುತ್ತ ಹೆಚ್ಚಾಗುತ್ತಿದೆ. ಮುಂಚೆ ಅಪರೂಪವಾದ ಪ್ರೇಮವಿವಾಹಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿದ್ದು, ಸಾರ್ವತ್ರಿಕ ಆಗುವ ದಿನಗಳು ದೂರವಿಲ್ಲ.
ನವಜನಾಂಗದ ಸಂಬಂಧದಲ್ಲಿ ಇನ್ನೊಂದು ಮಹತ್ತರ ಬದಲಾವಣೆ ಆಗುತ್ತಿದೆ. ಅದೇನೆಂದರೆ “ಸಹ”ವಾಸಗಳು (live-in relationship). ಗಂಡುಹೆಣ್ಣುಗಳು ಮದುವೆಯಾಗದೆ ಒಟ್ಟಿಗಿರುವ ಪ್ರಕರಣಗಳು ಹೆಚ್ಚುತ್ತಿವೆ. ನಗರದ ಪರಿಸರದಲ್ಲಿ ಇದು ಹೆಚ್ಚಾಗಿದೆ. ಇವರಲ್ಲಿ ಸಾಂಗತ್ಯ-ಸಂಬಂಧ ಬೇಕು, ಮದುವೆ (ಸದ್ಯಕ್ಕಂತೂ) ಬೇಡ ಎನ್ನುವ ಪ್ರವೃತ್ತಿಯಿದೆ. ಇದೊಂದು ಬೇಜವಾಬ್ದಾರಿ ಸ್ವೈರ ನಡವಳಿಕೆ ಎಂದು ಸಂಪ್ರದಾಯಸ್ಥರಿಗೆ ಅನ್ನಿಸಬಹುದು. ಅದಕ್ಕೆ ಉತ್ತರವಾಗಿ ಸಹ-ವಾಸದಲ್ಲಿರುವ ಒಬ್ಬಳು ನನ್ನೊಡನೆ ಹೀಗೆ ಹಂಚಿಕೊಂಡಿದ್ದಾಳೆ: “ನನ್ನ ತಾಯಿಯು ನನ್ನ ತಂದೆ ಹಾಗೂ ಅಜ್ಜಿಯಿಂದ ದುರ್ನಡತೆಗೆ ಒಳಗಾಗಿ ಸಾಕಷ್ಟು ಅನುಭವಿಸಿದ್ದಾಳೆ. ತಾಯಿಯ ಬವಣೆ ನನಗೆ ಬೇಕಿಲ್ಲ. ನನಗೂ ಮದುವೆಯಾಗಲು ಒತ್ತಾಯ ಬಂತು. ಮದುವೆಯಾದರೆ ಗಂಡನಷ್ಟೇ ಅಲ್ಲ, ಇತರರ ದಿಗ್ಬಂಧನೆಗೆ ಒಳಗಾಗಿ ಸ್ವಂತಿಕೆ ಕಿತ್ತುಕೊಂಡು ಹೋಗುತ್ತದೆ ಎಂದೆನಿಸಿತು. ಎಲ್ಲರನ್ನು ಪ್ರಸನ್ನಗೊಳಿಸುವಾಗ ನನ್ನ ದಾಂಪತ್ಯ ಸುಖದ ತ್ಯಾಗ ಮಾಡಬೇಕಾಗುತ್ತದೆ. ಗಂಡನಾಗುವವನು ತನ್ನ ತಾಯ್ತಂದೆಯರ ವಿರುದ್ಧ ನನ್ನ ರಕ್ಷಣೆಗೆ ನಿಲ್ಲುವನೆಂಬ ಭರವಸೆಯೂ ನನಗಿಲ್ಲ. ಹಾಗಾಗಿ ನಾನೇಕೆ ಮದುವೆ ಆಗಬೇಕು? ಹೀಗೆಯೇ ಸುಖವಾಗಿದ್ದೇನೆ.” ಸಹವಾಸದಲ್ಲಿ ಇರಲು ಇನ್ನಿತರ ಕಾರಣಗಳಿವೆ. ಇನ್ನೊಂದು ಸಂದರ್ಭದಲ್ಲಿ ಒಬ್ಬನು ತಾಯ್ತಂದೆಯರ ಆಯ್ಕೆಯಂತೆ ಮದುವೆಯಾದ. ಹೆಂಡತಿಯ ಕಾಟ ಸಹಿಸದೆ ಅವಳಿಗೆ ವಿಚ್ಛೇದನ ಕೊಡಬೇಕಾಯಿತು. ಕಾನೂನಿನ ಹಾದಿಯಲ್ಲಿ ತನ್ನದಲ್ಲದ ತಪ್ಪಿಗೆ ಅವಮಾನಕ್ಕೆ ಒಳಗಾಗುವುದಲ್ಲದೆ ಲಕ್ಷಗಟ್ಟಲೆ ಕಳೆದುಕೊಳ್ಳಬೇಕಾಯಿತು. ಇಪ್ಪತ್ತೆಂಟು ವರ್ಷಕ್ಕೆ ಆದ ಆಘಾತವು ಮದುವೆಯ ಮೇಲಿನ ಭರವಸೆಯನ್ನೇ ಕಿತ್ತುಕೊಂಡಿತು. ಐದು ವರ್ಷ ಗೂಡಿನಲ್ಲಿ ಸತ್ತವನು ಕೊನೆಗೊಮ್ಮೆ ಬದುಕಿಬಂದು ತನಗೂ ಲೈಂಗಿಕ ಬದುಕು ಬದುಕಲು ಅರ್ಹತೆಯಿದೆ ಎಂದು ಕಂಡುಕೊಂಡ. ಪರಿಣಾಮವಾಗಿ ಸಹ-ವಾಸದಲ್ಲಿ ಸುಖ ಕಂಡುಕೊಂಡಿದ್ದಾನೆ. (ಇನ್ನು ಕೆಲವರು ದೀರ್ಘಕಾಲೀನ ಶಿಕ್ಷಣ ಪಡೆಯುತ್ತಿರುವಾಗ ತಾತ್ಕಾಲಿಕವಾಗಿ ಸಹ-ವಾಸವನ್ನು ಆಯ್ಕೆ ಮಾಡಿಕೊಂಡಿದ್ದಿದೆ.)
ಇದರರ್ಥ ಏನು? ಮಕ್ಕಳು ಕೆಟ್ಟ ದಾಂಪತ್ಯಗಳ ಮಾದರಿಗಳನ್ನು ನೋಡಿ ಬೇಸತ್ತಿದ್ದಾರೆ. ಇದು ಯುವಜನಾಂಗದ ಸ್ವೈರ ವೃತ್ತಿಯಲ್ಲ, ಹೊರತಾಗಿ ಹಿರಿಯರ ದಾಂಪತ್ಯಗಳ ವೈಫಲ್ಯದ ಬಗೆಗಿನ ಭ್ರಮನಿರಸನ, ಹಾಗೂ ನಂಬಿಕೆ ಕಳೆದುಕೊಂಡು ಕಂಡುಕೊಂಡ ಸತ್ಯಾಂಶ ಎನ್ನಿಸುತ್ತದೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.