ಸುಖೀ ದಾಂಪತ್ಯ ೨೦೯
ಹೆಣ್ಣಿನ ಜನನಾಂಗದ ಬಗೆಗೆ ನಮಗೆಷ್ಟು ಗೊತ್ತಿದೆ?
209: ಹೆಣ್ಣಿನ ಕಾಮಪ್ರಜ್ಞೆ-5
ತಾನು ಮೆಚ್ಚಿದ ಗಂಡಿನೊಡನೆ ಸುಖಿಸುವ ಹೆಣ್ಣಿಗೂ ಕೂಡ ಅವಳದೇ ಆದ ಪ್ರತ್ಯೇಕ ಸುಖವಿದೆ, ಅಷ್ಟಲ್ಲದೆ ಹೆಣ್ಣಿನ ಕಾಮಪ್ರಜ್ಞೆಯಲ್ಲೂ ಬೆರಗುಗೊಳ್ಳುವ ವೈವಿಧ್ಯ ಇದೆಯೆಂದು ಹೇಳುತ್ತಿದ್ದೆ. ಈ ಸಲ ಹೆಣ್ಣಿನ ಜನನಾಂಗ ಕೇಂದ್ರೀಕೃತ ಕಾಮಪ್ರಜ್ಞೆಯ ಬಗೆಗೆ ಮಾತಾಡೋಣ.
ಗಂಡಿನ ಶಿಶ್ನಕ್ಕೆ ಸಮಾನವಾದ ಕಾಮಾಂಗ ಹೆಣ್ಣಿನಲ್ಲಿ ಯಾವುದು? ಹೆಚ್ಚಿನವರ ತಲೆಗೆ ಥಟ್ಟನೆ ಹೊಳೆಯುವುದು ಯೋನಿಯೆ. ಯಾಕೆ? ಶಿಶ್ನವು ಕೂಡುವುದು ಯೋನಿಯ ಜೊತೆಗೆ. ವಾಸ್ತವವಾಗಿ, ಶಿಶ್ನಕ್ಕೆ ಸಮಾನವಾದ ಹೆಣ್ಣಿನ ಕಾಮಾಂಗವು ಭಗಾಂಕುರ. ಹಾಗಾಗಿ ಮೊದಲು ಭಗಾಂಕುರದ ಬಗೆಗೆ ಒಂದಷ್ಟು ಮಾಹಿತಿ:
ಭಗಾಂಕುರವು ಹೆಣ್ಣಿನ ಜನನಾಂಗದ ಒಳತುಟಿಗಳು ಸೇರುವಲ್ಲಿ ಮೇಲ್ಗಡೆ ಇದೆ. ಇದರ ರಚನೆಯೂ ಶಿಶ್ನದ ರಚನೆಯೂ ಥೇಟ್ ಒಂದೇ: ಮಣಿ, ಮುಂದೊಗಲು, ಗಡಸುಗೊಳ್ಳುವ ಸ್ಪಂಜುಗಳು, ಸ್ನಾಯುಗಳು ಎಲ್ಲವೂ ಇದರಲ್ಲಿವೆ – ಮೂತ್ರನಾಳ ಒಂದಿಲ್ಲ ಅಷ್ಟೆ, ಇನ್ನು ಕಾರ್ಯ? ಭಗಾಂಕುರಕ್ಕೆ ಕಾಮಸ್ಪರ್ಶವನ್ನು ಗ್ರಹಿಸುವುದರ ಹೊರತು ಬೇರೇನೂ ಕೆಲಸವಿಲ್ಲ! ಉದ್ರೇಕವಾದಾಗ ಭಗಾಂಕುರವು 3-4.5 ಅಂಗುಲಗಳಷ್ಟು ದೊಡ್ಡದಾಗುತ್ತದೆ. ಅಷ್ಟಾದರೂ ಮುಕ್ಕಾಲು ಭಾಗ ಬಚ್ಚಿಟ್ಟುಕೊಂಡಿರುತ್ತದೆ. ಹಾಗಾಗಿ ಇದರ ಇರುವಿಕೆಯನ್ನು ಹುಡುಕಬೇಕಾಗುತ್ತದೆ. ಇದರ ಮಣಿಯಲ್ಲಿಯು 8000 ಸ್ಪರ್ಶತಂತುಗಳನ್ನು ಹೊಂದಿದ್ದು ಶಿಶ್ನದ ದುಪ್ಪಟ್ಟು ಸಂವೇದನಾಶೀಲ ಆಗಿದೆ. ಕೆಲವರಿಗೆ ಅತಿಕಡಿಮೆ ಸ್ಪರ್ಶವು ಸಾಕಾದರೆ ಇನ್ನು ಕೆಲವರಿಗೆ ಬಲವಾದ ಘರ್ಷಣೆ ಅಗತ್ಯವಾಗುತ್ತದೆ. ಶೇ 50-75% ಹೆಂಗಸರಿಗೆ ಯೋನಿಸಂಭೋಗದ ಮೂಲಕ ಭಾವಪ್ರಾಪ್ತಿ ಆಗುವುದಿಲ್ಲ. ಅವರಿಗೆಲ್ಲ ಭಗಾಂಕುರದ ಸಂವೇದನೆ ಬೇಕೇಬೇಕು. ಕೆಲವು ಹೆಂಗಸರು ತಮ್ಮ ಭಗಾಂಕುರದ (ತುದಿಯನ್ನಲ್ಲ) ಆಳದ ಭಾಗವನ್ನು ಉತ್ತೇಜಿಸಿದಾಗ ಸುಖಪಡುತ್ತಾರೆ. ಭಗಾಂಕುರವು ವಯಸ್ಸಾದಂತೆ ಅಳತೆಯಲ್ಲಿ ದೊಡ್ಡದಾಗುತ್ತದೆ. ಹದಿವಯಸ್ಸಿನವರಿಗಿಂತ ಮುಟ್ಟುನಿಂತ ಹೆಣ್ಣಿನ ಭಗಾಂಕುರವು ಎರಡರಷ್ಟು ದೊಡ್ಡದೂ ದಪ್ಪಗೂ ಆಗುತ್ತದೆ. (ಹಾಗೆಂದು ಯಾರೂ ಕೊಚ್ಚಿಕೊಳ್ಳುವುದಿಲ್ಲ!)
ವಿಪರ್ಯಾಸ ಏನೆಂದರೆ, ಜಗತ್ತಿನ ಅರ್ಧಕ್ಕರ್ಧ ಜನರು ಭಗಾಂಕುರವನ್ನು ಹೊತ್ತಿದ್ದರೂ ಅದನ್ನು ಯಾರೂ ಗುರುತಿಸುವವರಿಲ್ಲ. ಅದೇ ಶಿಶ್ನದ ಅಹಮಿಕೆ ನೋಡಿ. ಮಾನವರ ಸಂಸ್ಕೃತಿಗಳಲ್ಲಿ ಶಿಶ್ನದ ಸಂಕೇತಗಳು (ಉದಾ. ಭೂತಾನಿನಲ್ಲಿ ಶಿಶ್ನದ ಪ್ರತಿಕೃತಿಗಳು) ಎಲ್ಲೆಡೆ ರಾರಾಜಿಸುತ್ತಿವೆ. ನಮ್ಮ ಶಿವಲಿಂಗದ ಕೆಳಗೆ ಯೋನಿಯಿದೆಯೇ ಹೊರತು ಭಗಾಂಕುರವಿಲ್ಲ. ಹೀಗೆ ರಚನೆ ಹಾಗೂ ಕಾರ್ಯರೀತಿಯಲ್ಲಿ ಶಿಶ್ನಕ್ಕೆ ಸಮಾನವಾದರೂ ಭಗಾಂಕುರವು ದುರ್ಲಕ್ಷ್ಯಕ್ಕೆ ಈಡಾಗಿದೆ.
ಕಲಾಕಾರ್ತಿ ಸೋಫಿಯಾ ವ್ಯಾಲೇಸ್ ನ್ಯೂಯಾರ್ಕ್‌ನಲ್ಲಿ ಒಂದು ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಗೋಡೆಯ ತುಂಬ ಹರಡಿಕೊಂಡು ಬರಹದ ರೂಪದಲ್ಲಿ ಇರುವ ಇದರ ಹೆಸರು ಕ್ಲಿಟರಸಿ (Cliteracy, 100 Natural Laws). ಕ್ಲಿಟರಸಿ ಎಂದರೆ ಭಗಾಂಕುರದ ಬಗೆಗಿನ ಸಾಕ್ಷರತೆ. ಇದರಲ್ಲಿರುವ ನೂರು ಹೇಳಿಕೆಗಳಲ್ಲಿ ಕೆಲವನ್ನು ನನಗೆ ತಿಳಿದಂತೆ ಗುಂಪಾಗಿ ಮಾಡಿ ನಿಮ್ಮೆದುರು ಇಟ್ಟಿದ್ದೇನೆ:
- ಯೋನಿ-ಶಿಶ್ನದ ಸಂಭೋಗದಲ್ಲಿ (ಭಗಾಂಕುರದ ಪಾತ್ರ ಇಲ್ಲದಿದ್ದರೂ) ಹೆಣ್ಣಿಗೆ ತೃಪ್ತಿಯಾಗುತ್ತದೆ ಎಂಬ ತಪ್ಪುನಂಬಿಕೆ ಸಾರ್ವತ್ರಿಕವಾಗಿದೆ. ಭಗಾಂಕುರವು ಸಕ್ರಿಯವಾಗಿ ಪಾಲುಗೊಂಡರೆ ಮಾತ್ರ ಭಾವಪ್ರಾಪ್ತಿ ಆಗುತ್ತದೆ – ಶಿಶ್ನ ಇಲ್ಲದಿದ್ದರೂ ಸರಿ.
- ನಿನ್ನ ಜನನಾಂಗವು ಅಸಹ್ಯವೆಂದು ಹೇಳಿಕೊಟ್ಟು, ನಂತರ ಅದನ್ನೇ ನಿನ್ನನ್ನು ಪ್ರೀತಿಸುವ ಗಂಡಿನೊಡನೆ ಹಂಚಿಕೊಳ್ಳಬೇಕೆಂಬ ದ್ವಂದ್ವವನ್ನು ಹೆಣ್ಣಿನ ಮೇಲೆ ಹೇರಲಾಗಿದೆ.
- ನೀಲಿಚಿತ್ರಗಳಲ್ಲಿ ಹೆಣ್ಣಿಗೆ ನೋವು, ಉದ್ದೇಶಪೂರ್ವಕ ಅವಹೇಳನ ಮಾತ್ರ ಆಗುತ್ತದೆ. ಗಂಡಿನ ತೃಪ್ತಿಯನ್ನು ತೋರಿಸಿ ಹೆಣ್ಣಿನ ತೃಪ್ತಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ.
- ವೈದ್ಯ ವಿಜ್ಞಾನದಲ್ಲಿ ಭಗಾಂಕುರಕ್ಕೆ ಪ್ರಾಶಸ್ತ್ಯ ಕೊಡದಿರುವುದು ಹೆಣ್ಣನ್ನು ತಿರಸ್ಕರಿಸುವುದರ ಸಂಕೇತ. ಯೋನಿಯ ಮೂಲಕ ಹೆಣ್ಣಿನ ಕಾಮತೃಪ್ತಿ ಎಂದು ಸಿಗ್ಮಂಡ್ ಫ್ರಾಯ್ಡ್ ದೊಡ್ಡ ಸುಳ್ಳು ಸೃಷ್ಟಿಸಿದ್ದಾನೆ. ಉಬ್ಬುಗಳಿರುವ ಕಾಂಡೋಮ್‌ಗಳು ಹೆಣ್ಣಿಗಾಗಿ ಅಲ್ಲ, ಹೆಣ್ಣಿಗೆ ಸುಖಕೊಡುವ ನೆಪದಲ್ಲಿ ಗಂಡು ಯೋನಿಯನ್ನು ಉಪಯಗಿಸಲಿಕ್ಕಾಗಿ. ಹೆಂಗಸರಿಗೂ ವಯಾಗ್ರಾ ಕಂಡುಹಿಡಿಯುವ ನೆಪದಲ್ಲಿ ಔಷಧಿ ಸಂಸ್ಥೆಗಳು “ಹೆಣ್ಣಿನ ಲೈಂಗಿಕ ಅಸಾಮರ್ಥ್ಯ” ಎನ್ನುವ ಕಾಯಿಲೆಯನ್ನು ಸೃಷ್ಟಿಸಿವೆ.
- ಕಾನೂನಿನಲ್ಲಿ ಹೆಣ್ಣನ್ನು ಲಿಂಗದಿಂದ ಗುರುತಿಸಲಾಗುತ್ತದೆ, ಲೈಂಗಿಕತೆಯಿಂದಲ್ಲ. ಕಾಮಕೂಟ ಬೇಡವೆನ್ನುವ ಹೆಣ್ಣಿನ ಮೇಲೆ ದಾಂಪತ್ಯದ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತದೆ. ನ್ಯಾಯಾಧೀಶೆಯರೆ, ಕಾಮತೃಪ್ತಿ ಆಗದಿದ್ದರೆ ದಾಂಪತ್ಯದ ಕಾಮಕೂಟಕ್ಕೆ ಅರ್ಥವೇನಿದೆ? ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕದಂತೆ ಕಳೆದ ಹತ್ತು ವರ್ಷಗಳಲ್ಲಿ 3-4 ಕೋಟಿ ಹೆಂಗಸರ ಭಗಾಂಕುರವನ್ನು ಕಿತ್ತುಹಾಕಿ ಗಂಡಸರ ಸುಖದ ಗುಲಾಮರನ್ನಾಗಿ ಮಾಡಲಾಗಿದೆ.
- ಒಂದುವೇಳೆ ಹುಡುಗರಿಗೆ ವೃಷಣ ಬೀಜಗಳ ಬಗೆಗೆ ಹೇಳಿಕೊಟ್ಟು ಶಿಶ್ನವನ್ನು ಬಿಟ್ಟುಬಿಟ್ಟರೆ ಹೇಗಿರುತ್ತದೆ? ಯೋನಿ, ಗರ್ಭಕೋಶದ ಬಗೆಗೆ ಹೇಳಿಕೊಟ್ಟು ಭಗಾಂಕುರವನ್ನು ನಿರ್ಲಕ್ಷ್ಯ ಮಾಡಲಾಗಿದೆ.
- ಹುಡುಗಿಯರು ಲೈಂಗಿಕ ಶಿಕ್ಷಣಕ್ಕೆ ಕಾಲಿಡುವ ಮುಂಚೆಯೇ ಲೈಂಗಿಕತೆಯ ಅರಿವನ್ನು ಮೂಡಿಸಿಕೊಂಡಿರುತ್ತಾರೆ. ನಿಮ್ಮ ಹೆಣ್ಣುಮಕ್ಕಳಿಗೆ ಭಗಾಂಕುರವನ್ನು ಸ್ಪರ್ಶಿಸಿ ಸುಖಪಡುವುದನ್ನು ಹೇಳಿಕೊಟ್ಟರೆ ಮುಂದೆ ತಮ್ಮ ದಾಂಪತ್ಯದಲ್ಲಿ ತಪ್ಪಿತಸ್ಥ ಭಾವ ಇಲ್ಲದೆ ಏನು ಅಪೇಕ್ಷಿಸಬೇಕೆಂದು ಗೊತ್ತಾಗುತ್ತದೆ.
- ಶಿಶ್ನದ ಪ್ರವೇಶಕ್ಕೆ ಮಹತ್ವಕೊಟ್ಟು ಭಗಾಂಕುರವನ್ನು ಮರೆಯುವುದು ಎಂದರೆ ಕಾಮಕೂಟವಲ್ಲ, ಶರಣಾಗತಿ. ನಿಮ್ಮ ಒಪ್ಪಿಗೆಯಿಲ್ಲದೆ ನೋವಾಗುತ್ತಿದ್ದರೆ ಸಹಿಸುವುದು ಬೇಕಿಲ್ಲ. ಕಾಮತೃಪ್ತಿ ಪಡೆಯದೆ ಮಕ್ಕಳನ್ನು ಹೆರುವುದು ಎಂದರೆ ನಿಮ್ಮ ಶರೀರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದರ್ಥ. ಹೆಚ್ಚುಹೆಚ್ಚಾಗಿ ಕಾಮತೃಪ್ತಿ ಪಡೆಯಬೇಕೆಂದರೆ ಸಂತಾನಕ್ಕಾಗಿ ಎನ್ನದೆ ಸುಖಕ್ಕಾಗಿ ಕೂಟ ಬಯಸಿರಿ. ಹೆಂಗಸರು ತಮ್ಮ ಕಾಮತೃಪ್ತಿಯ ಬಗೆಗೆ ಮುಕ್ತವಾಗಿ ಹಂಚಿಕೊಳ್ಳುವುದು ಸ್ವಸ್ಥಸ್ವತಂತ್ರ ಸಮಾಜದ ಲಕ್ಷಣ.
- ನಿಮ್ಮ ಸಂಗಾತಿಯು ಕಾಮತೃಪ್ತಿ ಕೊಡದೆ ಸತಾಯಿಸಿದ್ದಾರೆಯೆ? ಗಂಡು ತೃಪ್ತಿಯಾಗದೆ ಹೆಣ್ಣಿನ ಮೇಲಿನಿಂದ ಏಳುವುದಿಲ್ಲವಾದರೆ ಅತೃಪ್ತ ಹೆಣ್ಣೇಕೆ ಸುಮ್ಮನಿರಬೇಕು? ಕಾಮತೃಪ್ತಿ ಆಗದ ಕಾಮಕೂಟಕ್ಕೆ ಅರ್ಥವೇನಿದೆ?
- ನಮಗೆ ನೋವಿಲ್ಲದೆ ಬಹುಕಾಮತೃಪ್ತಿ (multiple orgasms) ಆಗಬೇಕು ಎನ್ನುವುದೇ ನಮ್ಮ ಸರಳ ಬೇಡಿಕೆ. ಹೆಣ್ಣಿಗೆ ಹಸ್ತಮೈಥುನದಿಂದ ತೃಪ್ತಿಯಾಗಲು ನಾಲ್ಕು ನಿಮಿಷಗಳು ಸಾಕು. ತೃಪ್ತಿಪಡಿಸಲು ಉಗುರು ಕತ್ತರಿಸಿದ ಬೆರಳು, ಸ್ವಚ್ಛವಾದ ಕೈಗಳು, ಒದ್ದೆಯಾದ ನಾಲಿಗೆ-ತುಟಿಗಳು ಇದ್ದರೆ ಸಾಕೇಸಾಕು, ಶಿಶ್ನ ಬೇಕಾಗಿಲ್ಲ. ಹೊಸ ಪ್ರಿಯಕರ ಸಿಕ್ಕರೆ ಅವನು ಬಾಯಿಯಿಂದ ಹಾಗೂ ಬೆರಳಿನಿಂದ ಸುಖ ಕೊಡುತ್ತಾನೋ (ಶಿಶ್ನದಿಂದಲ್ಲ) ಎಂದು ಮೊದಲು ಪರೀಕ್ಷಿಸಿ,
- ಬಹುವಿಧಗಳ ಸಂಭೋಗಗಳಲ್ಲಿ ಶಿಶ್ನಯೋನಿಯ ವಿಧವೂ ಒಂದಷ್ಟೆ. ಯೋನಿ ಒದ್ದೆಯಾಗುವುದು ಹೆಣ್ಣು ಸಂಭೋಗಕ್ಕೆ ತಯಾರಾದ ಲಕ್ಷಣ ಎಂದೇನಲ್ಲ. ಒದ್ದೆಯಾಗಲಿ ಆಗದಿರಲಿ, ಹೆಣ್ಣಿಗೆ ಸಂಭೋಗದಲ್ಲಿ ಆಸಕ್ತಿ ಇರಲಿಕ್ಕಿಲ್ಲ.
- ಭಗಾಂಕುರವು ಅಷ್ಟೊಂದು ಜನಪರಿಚಿತ ಆಗಿದ್ದರೆ ಅದರ ಪ್ರತಿಕೃತಿಗಳೇಕೆ ಎಲ್ಲಿಯೂ ಕಾಣುತ್ತಿಲ್ಲ?
ಕ್ಲಿಟರಸಿಯಲ್ಲಿ ಉಪಯೋಗಿಸುವ ಭಾಷೆಯೇ ಹೊಸದು. ಹೆಣ್ಣಿನ ಕಾಮದ ಅಭಿವ್ಯಕ್ತಿಯನ್ನು ಅಸಹ್ಯ, ರೋಗಿಷ್ಟ, ನಾಚಿಕೆಗೇಡು ಎನ್ನುವವರನ್ನು ಇದು ಪ್ರಶ್ನಿಸುತ್ತದೆ. ಲಿಂಗ ತಾರತಮ್ಯವಿಲ್ಲದೆ, ಹೆಣ್ಣುಗಂಡೆಂಬ ವಿಭಜನೆಯಿಲ್ಲದೆ ಪ್ರತಿಯೊಬ್ಬರ ಶರೀರವೂ ಲೈಂಗಿಕ ಸುಖಕ್ಕೆ ಅರ್ಹತೆಯಿದೆ ಎಂದು ಪ್ರತಿಪಾದಿಸುತ್ತದೆ.
ನಮಗೆಲ್ಲ ಕ್ಲಿಟರಸಿ ಬೇಕು!
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.