ಸುಖೀ ದಾಂಪತ್ಯ ೨೦೫
ಹೆಣ್ಣಿನ ಮನಸ್ಸಿನಲ್ಲಿ ಇರುವುದನ್ನು ಆಕೆಯ ಗಂಡಿನ ಅನುಭವದ ಮೂಲಕ ತಿಳಿಯಲಾದೀತೆ?
205: ಹೆಣ್ಣಿನ ಕಾಮಪ್ರಜ್ಞೆ-1
ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಆಗ ತಾನೇ ಲೈಂಗಿಕ ಶಾಸ್ತ್ರದ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಅದರಲ್ಲಿ ಮೊದಲ ಪಾಠ ಏನೆಂದರೆ, ನನ್ನಲ್ಲಿ ಬರುವ ರೋಗಿಗಳಿಗೆ ಅವರ ಲೈಂಗಿಕ ಬದುಕಿನ ಬಗೆಗೆ ಮಾಹಿತಿ ಕೇಳುವುದು – ನಾನೇ ಯಾಕೆ ಕೇಳಬೇಕೆಂದರೆ, ಕೇಳದೆ ತಾವೇ ಹೇಳಿಕೊಳ್ಳುವಂಥ ವಿಷಯವಾಗಲೀ ಅದಕ್ಕೆ ಮುಕ್ತವಾದ ಕಾಲವಾಗಲೀ ಅದಾಗಿರಲಿಲ್ಲ. ಅದರಂತೆ ಒಬ್ಬರು ಮಧ್ಯವಯಸ್ಕ ಗಂಡಸು ಯಾವುದೋ ಕಾಯಿಲೆಯ ವಿಷಯವಾಗಿ ಬಂದಾಗ ಅವರ ಲೈಂಗಿಕ ಬದುಕು ಹೇಗಿದೆ ಎಂದು ವಿಚಾರಿಸಿದೆ. ಅವರು ಒಂದು ಕ್ಷಣ ಯೋಚಿಸಿ, “ಬಹಳ ಚೆನ್ನಾಗಿದೆ ಡಾಕ್ಟರೆ. ಉದ್ರೇಕ ಆದಾಗಲೆಲ್ಲ ಹೆಂಡತಿಯ ಬಳಿಗೆ ಹೋಗುತ್ತೇನೆ. ಒಂದೆರಡು ಸಲ ಚಲಿಸುವುದರಲ್ಲಿ ಸಲೀಸಾಗಿ ವೀರ್ಯಸ್ಖಲನ ಆಗಿಬಿಡುತ್ತದೆ. ಈಕಡೆ ಬಂದುಬಿಡುತ್ತೇನೆ.” ಎಂದು ತೃಪ್ತಿಯ ನಗೆ ಬೀರಿದರು. ಅವರು ಹೇಳಿದ್ದು ಕೇಳಿದರೆ, ಮಲ ವಿಸರ್ಜನೆಗೂ ವೀರ್ಯ ವಿಸರ್ಜನೆಗೂ ವ್ಯತ್ಯಾಸ ಇರಲಿಲ್ಲ. ನಾನು ಹೌದಲ್ಲವೆ ಎಂದುಕೊಂಡು ಟಿಪ್ಪಣಿ ಮಾಡಿಕೊಂಡೆ.
ನಂತರದ ವರ್ಷಗಳಲ್ಲಿ ಕಂಡುಬಂದಿದ್ದು ಇದಕ್ಕೆ ಪೂರ್ತಿ ವಿರುದ್ಧವಾಗಿತ್ತು. ಲೈಂಗಿಕ ಸಮಸ್ಯೆಯನ್ನು ಕಟ್ಟಿಕೊಂಡು ನನ್ನಲ್ಲಿ ಬಂದ ಸಾವಿರಾರು ಗಂಡಸರ ಪೈಕಿ ಬಹುಪಾಲು ಜನರ ಸಮಸ್ಯೆ ಏನು? “ಒಂದೆರಡು ಸಲ ಚಲಿಸುವುದರಲ್ಲಿ ಸ್ಖಲನ ಆಗಿಬಿಡುತ್ತದೆ!” ಅಂದರೆ, ಆ ಮಧ್ಯವಯಸ್ಕ ಗಂಡಸಿಗೆ ಆರಾಮವಾಗಿ ಆಗುವುದು ಇವರಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ! ವೀರ್ಯಸ್ಖಲನ ಆದಾಗ ಶಾರೀರಿಕ ತೃಪ್ತಿ ಆಗೇ ಆಗುತ್ತದೆ. ಆದರೂ ಕಿರಿಕಿರಿಯ ಅನಿಸಿಕೆ ಯಾಕೆಂದು ಕೆದರಿ ಕೇಳಿದಾಗ ಹೊರಗೆ ಬಂದಿದ್ದು ವಿಸ್ಮಯಕರವಾಗಿತ್ತು: ತನ್ನ ಸಂಗಾತಿಯನ್ನು ಕಾಮಕ್ರಿಯೆ ಮೂಲಕ ತೃಪ್ತಿಪಡಿಸಬೇಕು. ಸಂಗಾತಿಯನ್ನು “ತೃಪ್ತಿಪಡಿಸಬೇಕು” ಎಂದರೇನು ಎಂದು ಕೇಳಿದರೆ ಸ್ಪಷ್ಟ ಉತ್ತರವಿಲ್ಲ. ಅದರ ಹಿಂದಿರುವುದು ತನ್ನ ಕಾಲಿಗೆ ತಾನೇ ನಮಸ್ಕರಿಸಬೇಕು ಎನ್ನುವ ಹಪಹಪಿ ಎಂಬುದು ಹೇಳದಿದ್ದರೂ ಎದ್ದುಕಾಣುತ್ತಿತ್ತು. ಅಷ್ಟೊತ್ತಿಗೆ ಒಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೆ. ಕಾಮಕೂಟ ಎಂದರೆ ಗಂಡು ಹೆಣ್ಣಿಗೆ ಮಾಡಿ ತೃಪ್ತಿಪಡಿಸುವ ಕಾರ್ಯಕ್ರಮವಲ್ಲ. ಗಂಡುಹೆಣ್ಣು ಇಬ್ಬರೂ ಸಮಸಮವಾಗಿ ಭಾಗವಹಿಸಿ ಹಂಚಿಕೊಂಡು ಅನುಭವಿಸುವ ವಿಷಯ. ಹಾಗಾಗಿ ಸಮಸ್ಯೆಗೆ ಸಂಬಂಧಪಟ್ಟ ಸಂಗಾತಿಯನ್ನೂ ಕರೆತರಲು ಹೇಳಿದಾಗ ಅವರ ಉತ್ತರ ತಯಾರು: “ಆಕೆ ಕರೆದರೆ ಬರುವುದಿಲ್ಲ! ನನಗೇ ಟ್ರೀಟ್ಮೆಂಟ್ ಕೊಡಿ.” ಅದಕ್ಕಿಂತ ಹೆಚ್ಚು ಮಾತಾಡಲು ಅವಕಾಶವೇ ಇರಲಿಲ್ಲ. ಸಮಸ್ಯೆ ಇರುವ ಹೆಂಗಸರು ಸಹಾಯಕ್ಕಾಗಿ ಹೇಗೆ ಬರಲಾರರು ಎಂದು ಗೊಂದಲವಾಗುತ್ತಿತ್ತು. ತೃಪ್ತಿಯಾಗಿಲ್ಲ ಎಂದು ಸಂಗಾತಿ ಬಾಯಿಬಿಟ್ಟು ಹೇಳಿದ್ದಾರೆಯೇ ಎಂದು ಕೇಳಿದಾಗ, “ಆಕೆ ಹೇಳುವುದೇನು ಬಂತು, ಮುಖ ನೋಡಿದರೆ ಗೊತ್ತಾಗುವುದಿಲ್ಲವೆ?” ಎಂದು ಮರುಸವಾಲು ಎಸೆದು ನನ್ನ ಬಾಯಿ ಮುಚ್ಚಿಸಿದ್ದಿದೆ. ನಾನು ಗತ್ಯಂತರ ಇಲ್ಲದೆ ಔಷಧಿ ಬರೆದು ಕೊಟ್ಟಿದ್ದಿದೆ – ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿತು ಎಂಬುದು ಗೊತ್ತಿಲ್ಲ. ಸುಮಾರು ವರ್ಷಗಳ ನಂತರ ಗೊತ್ತಾಗಿದ್ದು ಏನೆಂದರೆ, ಇದರ ಹಿಂದೆ ಇರುವುದು ಹೆಣ್ಣಿನ ಲೈಂಗಿಕ ಸಮಸ್ಯೆಯಲ್ಲ, ಹೊರತಾಗಿ ಗಂಡಸಿನ ಮನೋಲೈಂಗಿಕ ದೌರ್ಬಲ್ಯ. ಹಾಗಾಗಿ ಈ ಗಂಡಸರ ಜೊತೆಗೆ ಮಲಗುವ ಹೆಂಗಸರ ತಲೆಯೊಳಗೆ ಏನು ನಡೆಯುತ್ತ ಇರುತ್ತದೆ, ಹಾಗೂ ಈ ಗಂಡಸರನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಾಗಲಿಲ್ಲ. ಕಾಮಕೂಟದಲ್ಲಿ ಹೆಂಗಸರ ಅನುಭವ ಏನು, ಹಾಗೂ ಅದನ್ನು ಅವರು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಬಗೆಗೆ ಪ್ರತ್ಯಕ್ಷ ಮಾಹಿತಿ ಸಿಗುವ ಲಕ್ಷಣ ಕಾಣಲಿಲ್ಲ. ಪ್ರತ್ಯಕ್ಷ ಮಾಹಿತಿ ಕೇಳಿಕೊಂಡು ಬಂದವರು ಇರಲಿಲ್ಲ ಎಂದಲ್ಲ. ಉದಾಹರಣೆಗೆ, ನನ್ನ ಬಂಧುಗಳ ಪೈಕಿ ಇಬ್ಬರು ತರುಣಿಯರು ಮದುವೆಯಾದ ಮೊದಲ ತಿಂಗಳಲ್ಲಿ ಜನನಾಂಗದ ಪರೀಕ್ಷೆ ಮಾಡಿಸಿಕೊಳ್ಳಲೆಂದು ಬಂದಿದ್ದರು. ಪರೀಕ್ಷೆ ಮುಗಿಸಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿ, ಅವರು ಬಂದ ಕಾರಣ ಕೇಳಿದೆ. ಈಗಾಗಲೇ ಸಂಭೋಗದಲ್ಲಿ ಪಾಲುಗೊಳ್ಳುತ್ತಿರುವ ಅವರಿಗೆ ಗರ್ಭಿಣಿಯಾಗಲು ಅಡ್ಡಿಯೇನೂ ಇಲ್ಲವೆಂದು ಖಚಿತ ಮಾಡಿಕೊಳ್ಳುವುದು ಬೇಕಾಗಿತ್ತಂತೆ. ಸಂಭೋಗವನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ನನ್ನ ನಾಲಗೆಯ ಮೇಲೆಯೇ ಉಳಿಯಿತು. ಇನ್ನು, ಶಾರೀರಿಕ ಚಿಕಿತ್ಸೆಗೆಂದು ಬಂದ ಮಹಿಳೆಯರಿಗೆ ಇಂಥದ್ದನ್ನು ಕೇಳುವುದಕ್ಕೆ ನನಗೇ ಸಂಕೋಚವಾಯಿತು. ಒಬ್ಬರು ಹಿರಿಯ ಲೈಂಗಿಕ ಶಾಸ್ತ್ರಜ್ಞರನ್ನು ಕೇಳಿದಾಗ, ನೀರಿನಲ್ಲಿ ಮೀನಿನ ಹೆಜ್ಜೆಯ ಗುರುತನ್ನೂ ಹೆಣ್ಣಿನ ಮನಸ್ಸನ್ನೂ ತಿಳಿಯಲು ಸಾಧ್ಯವಿಲ್ಲ ಎಂದರ್ಥ ಬರುವ ಸುಭಾಷಿತ ಉದುರಿಸಿದರು. ಇನ್ನು ನನ್ನ ಪರಿಚಯದ ಲೈಂಗಿಕ ಶಾಸ್ತ್ರಜ್ಞೆಗೆ ಕೇಳಿದಾಗ ಆಕೆಗೆ ಬರುವ ಪತ್ರಗಳಲ್ಲಿ ಹೆಚ್ಚಿನವು ಮುಟ್ಟು ಹಾಗೂ ಗರ್ಭಧಾರಣೆಗೆ ಸಂಬಂಧಪಟ್ಟಿದ್ದು ಎಂದು ಗೊತ್ತಾಯಿತು, ಹೀಗೆ ಗಂಡಸರ ಕಾಮದಾಟದಲ್ಲಿ ಭಾಗಿಯಾಗಿಯೂ ಎಲೆಮರೆಯ ಕಾಯಿಯಂತಿರುವ ಹೆಂಗಸರ ಲೈಂಗಿಕ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಏನನ್ನೂ ಸಾಧಿಸಲಾಗದೆ ನಿರುಪಾಯನಾಗಿದ್ದೆ. ಅಷ್ಟರಲ್ಲೇ ಒಂದು ಅದ್ಭುತ ವಿದ್ಯಮಾನ ನಿಧಾನವಾಗಿ ಬಿಚ್ಚಿಕೊಳ್ಳಲು ತೊಡಗಿತು.
ನಾನು 1999ನಲ್ಲಿ ಲೈಂಗಿಕ ಸಮಸ್ಯೆ-ಪರಿಹಾರಗಳ ಕುರಿತು ಎರಡು ಪತ್ರಿಕೆಗಳ ಅಂಕಣದಲ್ಲಿ ಬರೆಯಲು ಶುರುಮಾಡಿದೆ. ಕನ್ನಡದಲ್ಲಿ ಕಾಮೋದ್ದೀಪನೆಯ ಉದ್ದೇಶವಿಲ್ಲದ, ಅವೈಜ್ಞಾನಿಕ ನಂಬಿಕೆಗಳಿಂದ ಹೊರತಾದ, ವೈದ್ಯಕೀಯ ಹಾಗೂ ಮನೋವೈಜ್ಞಾನಿಕ ದೃಷ್ಟಿಕೋನದಿಂದ ಕೂಡಿದ ವಸ್ತುತಃ ಮಾಹಿತಿಯನ್ನು ಒದಗಿಸುವ ಗಂಭೀರ ಪ್ರಯತ್ನವಿದು. ಪ್ರತಿಕ್ರಿಯೆಯ ರೂಪದಲ್ಲಿ ಓದುಗರಿಂದ ಪತ್ರಗಳ ಮಹಾಪೂರವೇ ಹರಿದುಬಂತು. ಅದರಲ್ಲಿ ಶೇ. 90ರಷ್ಟು ಪ್ರಶ್ನೆಗಳು ಗಂಡಸರಿಂದಲೇ ಬಂದಿದ್ದು, ಮುಷ್ಟಿಮೈಥುನ ಹಾಗೂ ಶೀಘ್ರಸ್ಖಲನಕ್ಕೆ ಸಂಬಂಧಪಟ್ಟಿದ್ದು ಇರುತ್ತಿದ್ದುವು. ಆದರೆ ಉಳಿದ ಪತ್ರಗಳಲ್ಲಿ ನನಗೆ ಬೇಕಾದುದು ಅಡಗಿತ್ತು! ಅಂತೂ ಹೆಂಗಸರ ಅನುಭವಗಳನ್ನು ಪ್ರತ್ಯಕ್ಷವಾಗಿ ಅವರಿಂದಲೇ ಕೇಳುವಂತಾಯಿತು. ಕೆಲವರು ತಮ್ಮ ಸಮಸ್ಯೆಗಳ ವಿಷಯವಾಗಿ, ಇನ್ನು ಕೆಲವರು ತಮಗೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವುದಕ್ಕಾಗಿ ಭೇಟಿಮಾಡಲು ಶುರುಮಾಡಿದರು. ಅರ್ಧ ಕಾತುರ ಹಾಗೂ ಅರ್ಧ ಕೃತಜ್ಞತೆಯ ಭಾವದಿಂದ ಅವರನ್ನು ಸಂದರ್ಶಿಸುತ್ತ ಚರ್ಚಿಸಿದೆ. ತನ್ನ ಜನನಾಂಗಗಳು ಎಲ್ಲಿವೆ ಎಂದು ತೋರಿಸಿ ಎಂದು ಬಂದವರಿಂದ ಹಿಡಿದು, ಜನನಾಂಗದಲ್ಲಿ ಪರವಸ್ತುವನ್ನು ಹಾಕಿಕೊಂಡು ಸುಖಪಡುವ ಹೆಣ್ಣಿನ ತನಕ, ಗಂಡಸನ್ನು ತಬ್ಬಿಕೊಂಡರೆ ಗರ್ಭಿಣಿ ಆಗುತ್ತಾರೆ ಎಂದು ನಂಬಿದವರಿಂದ ಹಿಡಿದು, ವಿವಿಧ ನೀಲಿಚಿತ್ರಗಳನ್ನು ನೋಡಿರುವವರ ತನಕ ನಾನಾ ರೀತಿಯ ಹೆಂಗಸರು ನನ್ನಲ್ಲಿ ಬಂದಿದ್ದಾರೆ. ಇವರನ್ನು ಅತ್ಯಂತ ಸಮೀಪದಿಂದ ಹಾಗೂ ಮನಸ್ಸನ್ನು ಹೊಕ್ಕು ಅರ್ಥೈಸಿಕೊಳ್ಳುವ ವಿಶೇಷ ಸೌಭಾಗ್ಯ ನನ್ನದಾಗಿದೆ. ಅದರಲ್ಲಿ ಕಂಡುಬಂದ ಸಂಗತಿಗಳಲ್ಲಿ ಕೆಲವು ವಿಸ್ಮಯಕಾರಿ ಆಗಿದ್ದರೆ ಇನ್ನು ಕೆಲವು ಕುತೂಹಲ ಕೆರಳಿಸುವಂತಿವೆ, ಕೆಲವು ಗೊಂದಲಕ್ಕೆ ಈಡುಮಾಡುವಂತಿದ್ದರೆ ಇನ್ನು ಕೆಲವು ಹೃದಯವನ್ನು ಕರಗಿಸುವಂತಿವೆ. ಹೀಗೆ ಹೆಣ್ಣಿನ ಕಾಮಪ್ರಜ್ಞೆಯನ್ನೇ ವಿಶೇಷವಾಗಿ ಅಧ್ಯಯನ ಮಾಡಲು ಶುರುವಾಗಿದ್ದು. ಇದು ಕ್ರಮೇಣ ಒಂದು ವ್ಯವಸ್ಥಿತವಾದ ರೂಪ ತಳೆದಿದೆ.
ಅದನ್ನೇ ನಿಮ್ಮ ಮುಂದಿಡಲು ಹೊರಟಿದ್ದೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.