ಸುಖೀ ದಾಂಪತ್ಯ ೨೦೧
ಕಾಮಕೂಟವು ಸಂತತವಾಗಿ ನಡೆಯುತ್ತಿರುವ ದೀರ್ಘ ದಾಂಪತ್ಯಗಳಲ್ಲಿ ಲೈಂಗಿಕ ಸಾಮರಸ್ಯ ಇರುತ್ತದೆಯೆ?
201: ಪುರುಷರ ನಾಕ–ನರಕ: 10
ಪುರುಷ ಪ್ರಧಾನ ಸಂಸ್ಕೃತಿಯು ಸ್ತ್ರೀಯರಲ್ಲದೆ ಪುರುಷರನ್ನೂ ಹೇಗೆ ಸಂಕಷ್ಟಕ್ಕೆ ಗುರಿಮಾಡಿದೆ ಎಂದು ಒಂಬತ್ತು ಕಂತುಗಳಲ್ಲಿ ವಿವರಿಸಿದ್ದೇನೆ. ಇಷ್ಟಾದರೂ ಸದ್ಭಾವನೆಯುಳ್ಳ ಕೆಲವರು ಗಂಡಸರು ಇದನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಸತ್ವವಿಲ್ಲದಿದ್ದರೆ ಸಾವಿರಾರು ವರ್ಷಗಳಿಂದ ಜಗತ್ತಿನಾದ್ಯಂತ ಎಲ್ಲ ಪರಂಪರೆಗಳಲ್ಲೂ ಉಳಿದುಬರುತ್ತಿತ್ತೆ ಎಂದು ಪ್ರಶ್ನಿಸಬಹುದು. ಸ್ತ್ರೀಯರ ಹಾಗೂ ಮಕ್ಕಳ ಅತ್ಯಾಚಾರಿಗಳನ್ನು ಬಿಟ್ಟರೆ ಉಳಿದ ಪುರುಷರೆಲ್ಲ ತಾವು ಪ್ರೀತಿಸುವ ಹೆಣ್ಣಿನ ಹಾಗೂ ತಮ್ಮ ಕುಟುಂಬದ ಸಲುವಾಗಿ ಹಗಲಿರುಳೂ ಪರಿಶ್ರಮ ಪಡುವುದನ್ನು ನೆನೆಸಿಕೊಂಡು ಇದು ಪುರುಷಪ್ರಧಾನ ವ್ಯವಸ್ಥೆಯ ಫಲವಲ್ಲವೆ ಎಂದು ಸವಾಲು ಎಸೆಯಬಹುದು. ಆದರೆ ನಾವೀಗ ಮಾತಾಡುತ್ತಿರುವುದು ದಾಂಪತ್ಯ-ಲೈಂಗಿಕ ಆಯಾಮದಲ್ಲಿ. ದಂಪತಿಗಳ ನಡುವೆ ಲೈಂಗಿಕ ಸಾಮರಸ್ಯವನ್ನು ತಂದುಕೊಳ್ಳುವ ನಿಟ್ಟಿನಲ್ಲಿ ಪುರುಷ ಪ್ರಧಾನತೆಯು ಹೇಗೆ ಪ್ರಭಾವ ಬೀರುತ್ತದೆ? ಪುರುಷ ಪ್ರಧಾನತೆಯ ದಾಂಪತ್ಯ ನಡೆಸುತ್ತ ಲೈಂಗಿಕ ಸುಖವನ್ನು ಸವಿಯಲಿಕ್ಕಾಗದೆ ನೆರವಿಗಾಗಿ ನನ್ನಲ್ಲಿಗೆ ಧಾವಿಸಿದವರು ಸಾವಿರಾರು ಪುರುಷರಿದ್ದಾರೆ. ಅವರಲ್ಲಿ ಒಬ್ಬರ ದೃಷ್ಟಾಂತವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಇವರು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಸರದಿಂದ ಬಂದವರು. ಸ್ವತಃ ಕಷ್ಟಬಿದ್ದು ಅತ್ಯುಚ್ಚ ಶಿಕ್ಷಣ ಪಡೆದು ವಿದ್ವಾಂಸರಾಗಿ, ಸಮಾಜಮುಖೀ ಕಾರ್ಯಕ್ರಮಗಳನ್ನು ಕೈಗೊಂಡಿರುವವರು – ಹಾಗಾಗಿ ಇವರನ್ನು ಪಂಡಿತರು ಎಂದೇ ಕರೆಯೋಣ. ಪಂಡಿತರು ಮದುವೆ ಮಾಡಿಸಿಕೊಂಡು ಮೂರೂವರೆ ದಶಕ ದಾಟಿದ್ದು ಮಕ್ಕಳೂ ಮೊಮ್ಮಕ್ಕಳೂ ಇದ್ದಾರೆ. ಹೆಂಡತಿ ಹತ್ತು ವರ್ಷ ಚಿಕ್ಕವಳಿದ್ದು, ವಿಧೇಯಳಾಗಿ ಸತೀಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾಳೆ. ಇವರಿಗೂ ಲೈಂಗಿಕ ಸಮಸ್ಯೆಯಿದೆ. ಹಾಗೆ ನೋಡಿದರೆ ಸಮಸ್ಯೆ ಇವರದಲ್ಲ, ಇವರ ಹೆಂಡತಿಯದು. ಆಕೆಗೆ ಕಾಮಕೂಟದಲ್ಲಿ ಮೊದಲಿನಿಂದರೂ ಏನೇನೂ ಆಸಕ್ತಿಯಿಲ್ಲ. ಇವರೇ ಮೈಮೇಲೆ ಹೋದರೆ ಹೆಚ್ಚಿನಂಶ ಒಲ್ಲೆನ್ನದೆ ಸಹಕರಿಸುತ್ತಾಳೆ. ಕೆಲವೊಮ್ಮೆ ಸಂಭೋಗದ ಕೊನೆಕೊನೆಗೆ ಇವರು ಆಕೆಯ ಖಾಸಗೀ ಭಗಾಂಕುರಕ್ಕೆ ಬೆರಳು ಆಡಿಸಿದರೆ ಖುಷಿಯಿಂದ ಅನುಭವಿಸುತ್ತಾಳೆ. ವಿಷಾದದ ಸಂಗತಿ ಏನೆಂದರೆ, ಇಲ್ಲಿಯ ತನಕದ ಕಾಮಕೂಟಗಳಲ್ಲಿ ಆಕೆ ಒಮ್ಮೆಯಾದರೂ ಗಂಡನ ಮೈ ಮುಟ್ಟಿಲ್ಲ, ಕೈಯಾಡಿಸಿಲ್ಲ – ತಾನೇ ಆಸಕ್ತಿಯಿಂದ ಹತ್ತಿರ ಬರುವುದಂತೂ ದೂರ ಉಳಿಯಿತು. ಹಾಗಾಗಿ ಪಂಡಿತರಿಗೆ ಮೈಸುಖ ಹಕ್ಕಿನಿಂದ ಸಿಕ್ಕರೂ ತೃಪ್ತಿಯಿಲ್ಲ. ಇನ್ನು ಕೆಲವೊಮ್ಮೆ ಆಕೆ ಗಂಡನನ್ನು ಹತ್ತಿರ ಬರಗೊಡಿಸುವುದಿಲ್ಲ. ಆಗ ಇವರೇ ಬಲವಂತದಿಂದ ಮೈಮೇಲೆ ಬಿದ್ದು, ಏಟುತಿಂದು ಹಿಮ್ಮೆಟ್ಟಿದ್ದಾರೆ. ಕೈಮುಗಿದು ಬೇಡಿಕೊಂಡರೂ, ಕಣ್ಣೀರುಗರೆದರೂ ಆಕೆ ಒಪ್ಪಿಲ್ಲ. ಹಾಗಿದ್ದರೂ ಇವರು ಹೊರಹೆಣ್ಣಿನ ಬಗೆಗೆ ಯೋಚಿಸಿಲ್ಲ. ಹೆಂಡತಿಯನ್ನು ಅಪಾರ ಪ್ರೀತಿಸುತ್ತಿದ್ದು, ಆಕೆಯಿಂದಲೇ ಸುಖಪಡಲು ಹೆಣಗುತ್ತಿದ್ದಾರೆ.
ಇನ್ನೊಂದು ವಿಷಯ ಏನೆಂದರೆ, ಹೆಂಡತಿಗೆ ಇವರ ಆರ್ಥಿಕ ವ್ಯವಹಾರದಲ್ಲಿ ಮಾತ್ರ ಏನೇನೂ ನಂಬಿಕೆಯಿಲ್ಲ. ಪಂಡಿತರು ತಿಂಗಳ ಆದಾಯವನ್ನು ಬಿಲ್ ಸಹಿತ ಆಕೆಗೆ ಕೈಯಾರೆ ಒಪ್ಪಿಸಿ, ಖರ್ಚಿಗೆ ಹಣ ಪಡೆದುಕೊಳ್ಳುತ್ತಿದ್ದರೂ, “ಎಷ್ಟು ಗಳಿಸಿದ್ದೀರಿ ಎನ್ನುವುದನ್ನು ಬಿಡಿ, ಎಷ್ಟು ಮಹಾ ಉಳಿಸಿದ್ದೀರಿ?” ಎಂದು ಇವರ ಬಾಯಿ ಕಟ್ಟಿಬಿಡುತ್ತಾಳೆ. ಹೀಗೆ ಪಂಡಿತರ ಜೀವವನ್ನು ಖಜೀಲ ಮಾಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. “ಉಳಿದ ವಿಷಯಗಳಲ್ಲಿ ಆಕೆ ಉತ್ತಮ ಗೃಹಿಣಿ. ಮಕ್ಕಳನ್ನೂ, ಮೊಮ್ಮಕ್ಕಳನ್ನೂ ನನ್ನನ್ನೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾಳೆ – ಹಾಸಿಗೆಸುಖ ಒಂದು ಬಿಟ್ಟು!” ಎಂದು ಪಂಡಿತರು ನಿಟ್ಟುಸಿರು ಬಿಟ್ಟು ಕಣ್ಣು ಒದ್ದೆಮಾಡಿಕೊಳ್ಳುತ್ತಾರೆ. ಅವರ ಸೂಕ್ಷ್ಮ ಮನಸ್ಸು ಒಳಗೊಳಗೇ ನೋವು ತಿನ್ನುತ್ತಿರುವುದು ಎದ್ದುಕಾಣುತ್ತದೆ.
ಪಂಡಿತರ ಬಾಲ್ಯದ ಬಗೆಗೆ ಕೇಳಿದಾಗ ತಿಳಿದದ್ದು ಇದು: ಅವರು ಬೆಳೆದ ಹಳ್ಳಿಯ ದೊಡ್ಡ ಕುಟುಂಬದ ವಾತಾವರಣವು ವೈಯಕ್ತಿಕ ಬೆಳವಣಿಗೆಗೆ ಏನೇನೂ ಪೂರಕ ಆಗಿರಲಿಲ್ಲ. ಅಪ್ಪನಿಂದ ಶಿಕ್ಷೆ, ಬೈಗಳು ಸಿಕ್ಕಿದ್ದೇ ವಿನಾ ಪ್ರೀತಿ, ಕಾಳಜಿ ಸಿಗಲಿಲ್ಲ. ಊಟಗಳಿಗಿಂತ ಏಟುಗಳನ್ನು ಹೆಚ್ಚಾಗಿ ತಿಂದಿದ್ದಿದೆ. ಸಾಕಾಗದ್ದಕ್ಕೆ ಶರೀರವು ಸಣ್ಣಗೆ ಇದ್ದುದರಿಂದ ಗೇಲಿಗೆ ಒಳಗಾಗಿ ಅವಮಾನ ಅನುಭವಿಸಿದ್ದಿದೆ. ಇದ್ದುದರಲ್ಲೇ ಅಜ್ಜನ ಪ್ರೀತಿ ಸುಮಾರು ಸಿಕ್ಕಿದೆ. ಇಂಗ್ಲೀಷ್ ಬರುವುದಿಲ್ಲವೆಂದು ಕೀಳರಿಮೆ ಹುಟ್ಟಿದ್ದರಿಂದ ಆ ಭಾಷೆಯನ್ನು ಕಲಿತು ಪರಿಣಿತಿ ಸಂಪಾದಿಸಿದ್ದಾರೆ. ಪುಣ್ಯ, ಗಂಡಸಾಗಿದ್ದು ಅನುಕೂಲವಾಯಿತು – ಯಾಕೆಂದರೆ ಅವರ ವಾತಾವರಣದಲ್ಲಿ ಹೆಣ್ಣನ್ನು ಕೀಳಾಗಿ ನೋಡಲಾಗುತ್ತದೆ. ಹಾಗಾಗಿ ಗಂಡಸುತನ ಒಂದೇ ಮಹತ್ತರ ಅಂಶವಾಗಿ ಅವರ ನೆರವಿಗೆ ಬಂದಿದೆ. ಅದೇ ಗಂಡಸುತನವೇ ಕಾಮಸುಖಕ್ಕೆ ಅರ್ಹತೆಯನ್ನು ದಯಪಾಲಿಸಿ ಹೆಂಡತಿಯನ್ನು ಭೋಗಿಸುವಂತೆ, ಪ್ರೀತಿಸುವಂತೆ ಪ್ರೇರೇಪಿಸುತ್ತಿದೆ.
ಪಂಡಿತರ ಕಾಮಕೂಟದಲ್ಲಿ ಇನ್ನೊಂದು ಸಮಸ್ಯೆ ಹುಟ್ಟಿಕೊಂಡಿದೆ. ಹಲವು ತಿಂಗಳಿಂದ ಹೆಂಡತಿಗೆ ಮುಟ್ಟು ನಿಂತಿದೆ. ಯೋನಿದ್ರವ ಕಡಿಮೆಯಾಗಿದೆ. ಸಂಭೋಗವೆಂದರೆ ಆಕೆಯ ಮೈಮೇಲೆ ಮುಳ್ಳು ಬರುತ್ತವೆ. ಆದರೂ ನಡೆಯಬೇಕಾದುದು ನಿಂತಿಲ್ಲ. ಅದು ಹೇಗೆ ಎಂದು ಕೇಳುವ ಮುಂಚೆ ಪಂಡಿತರೇ ವಿವರಿಸಿದರು. ಕೆಲವು ವರ್ಷಗಳ ಹಿಂದೆ “ಸುಖೀಭವ” ಅಂಕಣದಲ್ಲಿ ಕೊಟ್ಟ ಸಲಹೆಯನ್ನು ಅನುಸರಿಸುತ್ತಿದ್ದಾರೆ. ಹೆಂಡತಿಯು ಮಲಗಿ ತನ್ನ ಜನನಾಂಗದ ಮುಂದೆ ಮುಷ್ಟಿಯನ್ನು ಸಡಿಲವಾಗಿ ಕಟ್ಟುತ್ತಾಳೆ. ಅವರು ಆಕೆಯ ತೊಡೆಗಳ ನಡುವೆ “ಮುಷ್ಟಿ-ಮೈಥುನ” ನಡೆಸುತ್ತಾರೆ.
ಇವರ ಲೈಂಗಿಕ ಅಸಾಮರಸ್ಯದ ಪರಿಣಾಮ ಎಲ್ಲಿಯ ತನಕ ಹೋಗಿದೆ ಎಂದು ತಿಳಿದುಕೊಂಡೆ. ಇವರಿಬ್ಬರ ಒತ್ತಾಯ-ಪ್ರತಿರೋಧದ ವಿಷಚಕ್ರವು ಮಲಗುವ ಕೋಣೆಯಿಂದ ಹೊರಹರಿದು ಕುಟುಂಬದ ನೆಮ್ಮದಿಯ ಮೇಲೆ ಹಾಯ್ದುಹೋಗಿದೆ. ವಿಪರೀತ ಜಗಳಗಳಾಗಿ ಆಕೆ ತಲೆಕೆಟ್ಟಂತೆ ವರ್ತಿಸಿದಾಗ ಮನೋರೋಗ ತಜ್ಞರಿಂದ ಔಷಧಿ ಕೊಡಿಸಿದ್ದಾರೆ. ಆಕೆಯ ಉಗ್ರತೆ ಕಡಿಮೆಯಾದರೂ ಕಾಮಾಸಕ್ತಿಯನ್ನು ಹುಟ್ಟಿಸಲು ಉಪಯೋಗ ಆಗಲಿಲ್ಲ. ಔಷಧಿಯಿಂದ ಸರಿಹೋಗಲು ಕಾಮಾಸಕ್ತಿಯೇನು ಕಾಯಿಲೆ ಕೆಟ್ಟುಹೋಯಿತೆ?
ನನಗೊಂದು ಪ್ರಶ್ನೆ ಮೂಡಿತು: ಇಷ್ಟುವರ್ಷ ಸುಮ್ಮನಿದ್ದವರು ಈಗ ತಜ್ಞರನ್ನು ಭೇಟಿಮಾಡುವ ಕಾರಣವೇನು? ಪಂಡಿತರು ಅದನ್ನೂ ವಿವರಿಸಿದರು. ಇತ್ತೀಚೆಗೆ ಇನ್ನೊಂದು ವಿಷಯ ಕಾಡತೊಡಗಿದೆ. ಇವರಿಗೆ ಶೀಘ್ರವೇ ಅರವತ್ತು ದಾಟಲಿದೆ. ಆಗ ಶಿಶ್ನದ ದೌರ್ಬಲ್ಯ ಕಾಣಿಸಿಕೊಂಡು ಸಂಭೋಗ ಅಸಾಧ್ಯವಾದರೆ ಸುಖದ ಏಕೈಕ ಹಾದಿಯೂ ಮುಚ್ಚಿಬಿಡಬಹುದು ಎಂಬ ಭಯ ಕಾಡುತ್ತಿದೆ. ಹಾಗಾಗಿ ಸುಖಕ್ಕೋಸ್ಕರ ಹೆಂಡತಿಯನ್ನು ಮುಂಚೆಗಿಂತ ಹೆಚ್ಚು ಒತ್ತಾಯಿಸುತ್ತಿದ್ದಾರೆ. ಒತ್ತಾಯ ಮಾಡಿದಷ್ಟೂ ಆಕೆ ಕಲ್ಲಾಗುತ್ತಿದ್ದಾಳೆ.
ಇಲ್ಲೇನು ನಡೆಯುತ್ತಿದೆ ಎಂಬುದನ್ನು ಗ್ರಹಿಸಲು ಯತ್ನಿಸಿದೆ. ಮಧ್ಯವಯಸ್ಸು ದಾಟುತ್ತಿರುವ ಈ ದಂಪತಿಯಲ್ಲಿ ಮೂರೂವರೆ ದಶಕಗಳಿಂದ ಕಾಮಕೂಟ ಸಂತತವಾಗಿ ನಡೆಯುತ್ತಿದೆ. ಹಾಗಿದ್ದರೂ ಲೈಂಗಿಕ ಸಾಮರಸ್ಯ ಇಲ್ಲ! ದಿಗ್ಭ್ರಮೆ ಆಯಿತು. ಮೈಗಳು ಕೂಡುತ್ತಿದ್ದರೂ ಮನಗಳು ಕೂಡಲಿಲ್ಲವಲ್ಲ ಎಂದು ವಿಷಾದ ಅನ್ನಿಸಿತು.
ಪಂಡಿತರಿಗೆ ನನ್ನಿಂದ ಏನು ಸಹಾಯ ಆಗಬೇಕು ಎಂದು ಕೇಳಿದಾಗ ಅವರ ಉತ್ತರ ನೇರವಾಗಿತ್ತು. ಹೆಂಡತಿಗೆ ಕಾಮಾಸಕ್ತಿ ಬರುವಂತೆ ಮಾಡಬೇಕು. ಆಕೆ ತಮ್ಮೊಡನೆ ಕಾಮಸುಖವನ್ನು ಹಂಚಿಕೊಳ್ಳುವ ಹಾಗೆ ಆಗಬೇಕು. ಅಂದರೆ ಬದಲಾವಣೆ ಹೆಂಡತಿಯಲ್ಲಿ ಆಗಬೇಕು. ಅವರಲ್ಲಿ?
ಅದಿರಲಿ, ಪಂಡಿತರ ಕತೆಗೂ ಪುರುಷ ಪ್ರಾಧಾನ್ಯತೆಗೂ ಏನು ಸಂಬಂಧ? ಅದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.