ಸುಖೀ ದಾಂಪತ್ಯ ೧೯೭
ಗಂಡಸರು ಸಾಂಪ್ರದಾಯಿಕ ಗಂಡು ಮಾದರಿಯನ್ನು ಬಿಟ್ಟುಕೊಟ್ಟು ದಾಂಪತ್ಯಕ್ಕೆ ಒಪ್ಪುವ ಗಂಡಸುತನವನ್ನು ರೂಪಿಸಿಕೊಳ್ಳುವ ಕಾಲ ಬಂದಿದೆ.
197: ಪುರುಷರ ನಾಕ–ನರಕ: 6
ಹೆಣ್ಣನ್ನು – ತಾಯಿಯಾಗಲಿ, ಪ್ರೇಯಸಿಯಾಗಲಿ – ಅರ್ಥೈಸಿಕೊಳ್ಳಬೇಕಾದರೆ ಆಕೆಯ ಲೈಂಗಿಕತೆಯ ವ್ಯಕ್ತಿತ್ವವನ್ನೂ ಲೈಂಗಿಕತೆಗೆ ಹೊರತಾದ ವ್ಯಕ್ತಿತ್ವವನ್ನೂ ಒಟ್ಟೊಟ್ಟಿಗೆ ಅರ್ಥಮಾಡಿಕೊಳ್ಳುವುದು ಯಾವುದೇ ಪುರುಷನಿಗೆ ಅಗತ್ಯವಾಗುತ್ತದೆ, ಹಾಗೂ ಈ ಸಂವೇದನಾಶೀಲ ಸ್ಪಂದನೆಯನ್ನು ಪುರುಷ ಪ್ರಧಾನ ವ್ಯವಸ್ಥೆಯು ಗಂಡಿನಿಂದ ಕಿತ್ತುಕೊಂಡಿದೆ ಎಂದು ಹೇಳುತ್ತಿದ್ದೆ.
ನನ್ನ ವಾದವನ್ನು ಹೆಚ್ಚಿನ ಗಂಡಸರು ಸಾರಾಸಗಟಾಗಿ ತಳ್ಳಿಹಾಕಬಹುದು. ಹೆಣ್ಣುಗಂಡುಗಳ ಶಾರೀರಿಕ ವ್ಯವಸ್ಥೆಯಲ್ಲಿಯೇ ಮೂಲಭೂತ ವ್ಯತ್ಯಾಸ ಇರುವಾಗ ಗಂಡು ಹೆಣ್ಣಿಗಿಂತ ಭಿನ್ನವಾಗಿ – ಕೆಲವೊಮ್ಮೆ ವ್ಯತಿರಿಕ್ತವಾಗಿ – ವರ್ತಿಸುವುದು ಸಹಜವಲ್ಲವೆ ಎಂದು ಪ್ರಶ್ನಿಸಬಹುದು. ಹಾಗಾಗಿ ಗಂಡಿನ ಶರೀರವು ಲೈಂಗಿಕ ಕ್ರಿಯೆಗೆ ಹೇಗೆ ಸಂಬಂಧಪಡುತ್ತದೆ, ಹಾಗೂ ಇದು ಹೆಣ್ಣಿನ ಮೇಲೆ ಪ್ರತಿಫಲಿತಗೊಳ್ಳುತ್ತದೆ ಎನ್ನುವುದರ ಬಗೆಗೇ ಮಾತಾಡೋಣ.
ಶಾರೀರಿಕವಾಗಿ ಹೇಳಬೇಕೆಂದರೆ, ಗಂಡಿನ ಜನನಾಂಗಗಳ ರಚನೆ ಹಾಗೂ ಕಾರ್ಯರೀತಿಗಳು ಟೆಸ್ಟೋಸ್ಟೆರೋನ್ ಎಂಬ ಹಾರ್ಮೋನಿನಿಂದ ರೂಪುಗೊಳ್ಳುತ್ತವೆ. ಈ ಹಾರ್ಮೋನು ಒಂದಾನೊಂದು ಕಾಲದಲ್ಲಿ ಬೇಟೆಗೆ ಹಾಗೂ ಬೇಟೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅನುಕೂಲಕರವಾದ ದೇಹಧಾರ್ಡ್ಯವನ್ನೂ ಆಕ್ರಮಣಶೀಲತೆಯನ್ನೂ (aggression) ಕೊಟ್ಟಿದ್ದಿದೆ. ವೇಗದಲ್ಲಿ ಗಾಡಿ ಓಡಿಸುವುದು ಮುಂತಾದ ಆಕ್ರಮಣಶೀಲ ಚಟುವಟಿಕೆಗಳಲ್ಲಿ ಟೆಸ್ಟೋಸ್ಟೆರೋನಿನ ಛಾಪು ಎದ್ದುಕಾಣುತ್ತದೆ. (ಇಲ್ಲಿ “ಆಕ್ರಮಣ” ಎಂಬ ಪದವನ್ನು “ರಭಸದಿಂದ ಮುಂದುವರಿಯುವುದು” ಎಂಬರ್ಥದಲ್ಲಿ ಮಾತ್ರ ಉಪಯೋಗಿಸುತ್ತಿದ್ದೇನೆ, ದಾಳಿ ಎಂಬರ್ಥದಲ್ಲಿ ಅಲ್ಲ.) ಕೂಟದಲ್ಲಿ ಆಕ್ರಮಣಶೀಲತೆಗೆ ಸ್ವಲ್ಪವೇ ಸ್ಥಾನವಿದೆ. ಸಂಗಾತಿಗಳಿಬ್ಬರೂ ಆಕ್ರಮಣಶೀಲ ಆದರೆ ಕೂಟ ರಸದೌತಣ ಆಗುತ್ತದೆ. ಆದರೆ ಗಂಡು ಮಾತ್ರ ಆಕ್ರಮಣಶೀಲ ಆಗುವಾಗ ನಾಲ್ಕು ತೊಂದರೆಗಳಂತೂ ಕಾಣುತ್ತವೆ.
ಒಂದು: ಗಂಡು ಮುನ್ನುಗ್ಗುವಾಗ ಹೆಣ್ಣು ಅವಕಾಶ ಮಾಡಿಕೊಡಲು ತಟಸ್ಥಳಾಗಿ ಉಳಿಯಬೇಕಾಗುತ್ತದೆ. ಪರಿಣಾಮವಾಗಿ ತಟಸ್ಥಳಾಗಿ ಒಪ್ಪಿಸಿಕೊಳ್ಳುವುದೇ ಸುಖ ಎನ್ನಬೇಕಾಗುತ್ತದೆ. ಅದಲ್ಲದೆ ಸಂಚಲನೆಯು ಗಂಡಿನ ಏಕಪಕ್ಷೀಯ ನಿರ್ಧಾರವಾಗುತ್ತದೆ. ಪುರುಷ ಪ್ರಾಧಾನ್ಯತೆಗೆ ಒಗ್ಗಿಹೋದ ಹೆಂಗಸರಂತೂ ಸಂಚಲನೆ ತೋರಿಸುವುದು ಹೆಣ್ಣಿಗೆ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ನಾನು ನೋಡಿದ ಒಬ್ಬನು ತಟಸ್ಥ ಸ್ಥಿತಿಯ ಹೆಣ್ಣನ್ನು ಗಂಟೆಗಟ್ಟಲೆ ಸಂಭೋಗಿಸುವ ಧಾರಣಶಕ್ತಿ ಹೊಂದಿದ್ದ. ನಡುವೆ ಅವಳು ಸ್ವಲ್ಪ ಚಲಿಸಿದರೂ ಅವನಿಗೆ ಕಿರಿಕಿರಿ ಆಗುತ್ತಿತ್ತು.
ಎರಡು: ಗಂಡು ಮೇಲೇರಿ ದಿಗ್ವಿಜಯ ಆಚರಿಸುತ್ತ ಇರುವಾಗ ತನ್ನ ಕೆಳಗಿರುವ ಹೆಣ್ಣು ಎಷ್ಟು ಸುಖ ಪಡೆಯುತ್ತಿದ್ದಾಳೆ ಎಂದು ಗಮನಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಇಬ್ಬರ ನಡುವಿನ ಭಾವಸಂಪರ್ಕದ ಕೊಂಡಿ ಕಳಚಿಕೊಂಡಿರುವ ಈ ಸ್ಥಿತಿಯಲ್ಲಿ ಹೆಣ್ಣು ಖುಷಿಪಟ್ಟರೂ ಭಾವಪ್ರಾಪ್ತಿ ಆಗದೆ ನಿಸ್ಸಹಾಯಕ ಆಗಬಹುದು. “ಗಂಡಿನ ಭಾರ/ಅವಸರ ತಾಳಲಾರೆ” ಎನ್ನುವ ಹೆಣ್ಣಿನ ಇಂಗಿತ ಕೊಂಡಿ ಕಳಚಿರುವುದೇ ಆಗಿರಬಹುದು.
ಮೂರು: ಮುನ್ನುಗ್ಗುವುದನ್ನು ತಲೆಯಲ್ಲಿ ತುಂಬಿಕೊಂಡ ಗಂಡಂದಿರು ಕೂಟವೆಂದರೆ “ಗಂಡು ಹೆಣ್ಣಿನ ಮೇಲೆ ನಡೆಸುವ ನ್ಯಾಯಬದ್ಧ ಆಕ್ರಮಣ” ಎಂದು ಭಾವಿಸುತ್ತಾರೆ. ಇದರ ಇನ್ನೊಂದು ಹೆಸರು ವೈವಾಹಿಕ ಅತ್ಯಾಚಾರ (marital rape). ಇದನ್ನೇ ನೀಲಿ ಚಿತ್ರಗಳಲ್ಲಿ ಗಂಟೆಗಟ್ಟಲೆ ವೈಭವೀಕರಿಸುತ್ತ, ಆಕ್ರಮಣವು ಹೆಣ್ಣಿಗೆ ಇಷ್ಟವೆಂದು ತಪ್ಪಾಗಿ ಬಿಂಬಿಸಲಾಗುತ್ತದೆ. ಇದರಿಂದ ಗಂಡಂದಿರಿಗೆ ಭ್ರಮೆ ಹಾಗೂ ಹೆಣ್ಣಿಗೆ ಸಂಕಟ ಆಗುತ್ತದೆ. ಅಷ್ಟೇ ಅಲ್ಲ, ಆಕ್ರಮಣ ಬಯಸದ ಪುರುಷನು ತಾನು “ಕಡಿಮೆ ಪುರುಷ” ಎಂದು ಅರ್ಥೈಸಿಕೊಳ್ಳುತ್ತಾನೆ. ಇದೇ ಕಾರಣಕ್ಕೆ ಕಾಮಾಸಕ್ತಿಯನ್ನು ಮೊಟಕು ಮಾಡಿಕೊಂಡಿರುವ ಗಂಡಸರನ್ನು ನಾನು ನೋಡಿದ್ದೇನೆ.
ನಾಲ್ಕು: ಗಂಡಿನ ಆಕ್ರಮಣದಲ್ಲೂ ವಿಡಂಬನೆಯಿದೆ. ಆಕ್ರಮಣವು ಯೋನಿಯ ಆಳದುದ್ದಕ್ಕೂ ನಡೆಯುತ್ತದಷ್ಟೆ? ಆದರೆ ಯೋನಿಯ ಆಳ ಬಿಡಿ, ದ್ವಾರದ ಹೊರತಾಗಿ ಎಲ್ಲೆಲ್ಲೂ ಸ್ಪರ್ಶ ಸಂವೇದನೆಯ ನರತಂತುಗಳೇ ಇಲ್ಲ! ಇರುವುದೆಲ್ಲ ಭಗಾಂಕುರದ ತುದಿಯಲ್ಲಿ – ಅದೂ ಯೋನಿದ್ವಾರದಿಂದ ಒಂದಂಗುಲ ಮೇಲಿದೆ. ರಭಸದಿಂದ ಒಳಹೊಕ್ಕಾಗಲೂ ಭಗಾಂಕುರಕ್ಕೆ ತಾಗುವುದು ಸ್ವಲ್ಪವೆ. ಹೀಗಾಗಿ ಹೆಣ್ಣಿಗೆ ರಭಸದ ಸಂಭೋಗ ಎಂದರೆ ಜಲಪಾತದ ಕೆಳಗೆ ಕೈಚಾಚಿ ಬೊಗಸೆಯಲ್ಲಿ ನೀರು ಹಿಡಿದಂತೆ – ಬಹುಪಾಲು ವ್ಯರ್ಥವೇ ಆಗುತ್ತದೆ. ಇದನ್ನಾಕೆ ಬಾಯಿಬಿಟ್ಟು ಹೇಳಿಕೊಂಡರೆ ಮುಗಿಯಿತು, ಆಕ್ರಮಣಕಾರಿಯ ಮೇಲೆ ಕೀಳರಿಮೆಯ ಆಕ್ರಮಣವಾಗಿ ಮೆತ್ತಗಾಗಿಬಿಡುತ್ತಾನೆ. ಹೆಂಡತಿಯು ಸಂಭೋಗದ ನಂತರ ಬೆರಳಾಡಿಸಿ ತೃಪ್ತಿ ಕೊಡಬೇಕೆಂದು ಕೋರಿಕೊಂಡಾಗ ಮನವೊಪ್ಪದೆ ಪುನಃ ಸಂಭೋಗಕ್ಕೆ ಪ್ರಯತ್ನಪಟ್ಟು, ಗಡಸುತನ ಮರಳದೆ ಮುಖಭಂಗವಾಗಿ, ಚಿಕಿತ್ಸೆಗಾಗಿ ಧಾವಿಸಿಬಂದ ಗಂಡಸರು ಸಾಕಷ್ಟಿದ್ದಾರೆ!
ಇನ್ನು, ಗಂಡಿನ ಮೇಲೆ ಹೆಣ್ಣು “ಆಕ್ರಮಣ” ಮಾಡಿದರೆ ಹೇಗಿರುತ್ತದೆ? ಕೆಲವು ವರ್ಷಗಳ ಹಿಂದೆ “ಸುಖೀಭವ”ದಲ್ಲಿ ಬಂದ ಪ್ರಶ್ನೆ ನೆನಪಿದೆ. ಕಾಮಕೂಟದಲ್ಲಿ ಇಬ್ಬರಿಗೂ ಅತೀವ ಆಸಕ್ತಿಯಿದೆ. ಗಂಡ “ಇಚ್ಛಾ ಸ್ಖಲನಿ”. ಇಷ್ಟಬಂದಷ್ಟೂ ಹೊತ್ತು ಘರ್ಷಿಸುವ ಸಾಮರ್ಥ್ಯ ಅವನಿಗಿದೆ. ಆದರೆ, ಹೆಂಡತಿಗೆ ಬಯಕೆಯಾದಾಗ ಅವನ ಮೇಲೆ ಬಂದು, ಕೆದರಿದ ಮುಡಿಯನ್ನು ಕಟ್ಟಿಕೊಂಡು ಆಕ್ರಮಣಕ್ಕೆ ಸಿದ್ಧವಾದಳೋ, ಅವಳ ಅವತಾರ ಕಂಡು ಇವನ ಉದ್ರೇಕ ಜರ್ರನೆ ಇಳಿದುಹೋಗುತ್ತದೆ.
ಗಂಡು ಆಕ್ರಮಣಶೀಲತೆಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲ ಎನ್ನುವುದಕ್ಕೆ ದೃಷ್ಟಾಂತ: ಇವನು ಹೆತ್ತವರ ಕಟ್ಟುನಿಟ್ಟಿಗೆ ಒಳಪಟ್ಟು ತನ್ನಿಷ್ಟದಂತೆ ಬದುಕಲಾಗದೆ ಗುಮ್ಮನಗುಸಕ (passive aggressive) ವರ್ತನೆಯನ್ನು ಬೆಳೆಸಿಕೊಂಡಿದ್ದಾನೆ. ಹೆಂಡತಿ ರೇಗುವಾಗಲೆಲ್ಲ ಸೂಕ್ತವಾಗಿ ಸ್ಪಂದಿಸದೆ ತಪ್ಪಿಸಿಕೊಂಡು, ಹಾಸಿಗೆಯಲ್ಲಿ ಪ್ರತಿಕ್ರಿಯೆ ತೋರಿಸುತ್ತಾನೆ. ಆಕೆ ಕಾಮಕ್ರಿಯೆಗೆ ಇಷ್ಟಪಟ್ಟು, ಇನ್ನೂ ತಯಾರಾಗುತ್ತ ಇರುವಾಗ ಇವನು ಭರದಿಂದ ಮುಂದುವರಿದು ಸುಖದ ಹೆಸರಲ್ಲಿ ನೋವು ಕೊಡುತ್ತಾನೆ. ಇವನು ಸುಖ ಅನುಭವಿಸುತ್ತಿದ್ದಾನೆ ಎನ್ನುವುದಕ್ಕಿಂತಲೂ ಆಕ್ರಮಣ ಮಾಡುತ್ತಿದ್ದಾನೆ ಎಂದು ಆಕೆಗೆ ಅನ್ನಿಸುತ್ತಿದೆ. ಗಮನಿಸುವುದರ ಬದಲು ದಮನಿಸುವುದು ನಡೆಯುತ್ತಿದೆ. “ಹಗಲು ಮಾತಿನಲ್ಲಿ ನಾನು ತಿವಿಯುವುತ್ತೇನೆ. ರಾತ್ರಿ ಇವನು ತಿವಿಯುತ್ತ ಸೇಡು ತೀರಿಸಿಕೊಳ್ಳುತ್ತಿದ್ದಾನೆ” ಎಂದಾಕೆ ಹೇಳುತ್ತಾಳೆ.
ಇವೆಲ್ಲದರಿಂದ ಏನು ಗೊತ್ತಾಗುತ್ತದೆ? ಗಂಡು ತಾನು ಗಂಡು ಎಂದು ಹೆಮ್ಮೆಪಟ್ಟುಕೊಳ್ಳಲು, ಕೂಟ ಬಯಸಲು ಮೂಲಕಾರಣವಾದ ಟೆಸ್ಟೋಸ್ಟೆರೋನ್ ಕೂಟದ ಸಮಸ್ಯೆಗಳಿಗೆ ಹಾದಿಮಾಡಿಕೊಡುತ್ತದೆ!
ಇದರರ್ಥ ಇಷ್ಟೆ: ಟೆಸ್ಟೋಸ್ಟೆರೋನ್ ವೀರ್ಯೋತ್ಪಾದನೆಗೆ ಅತ್ಯಗತ್ಯ. ವೀರ್ಯವನ್ನು ಯೋನಿಯ ಆದಷ್ಟು ಆಳದಲ್ಲಿ ನೆಟ್ಟು ಕೆಲಸ ಮುಗಿಸಿಬಿಡುವುದೇ ಆಕ್ರಮಣಶೀಲತೆ ಹಾಗೂ ರಭಸದ ಸಂಭೋಗದ ಉದ್ದೇಶ. ಆದರೆ ಕಾಮಸುಖವನ್ನು ಪೂರ್ಣಪ್ರಮಾಣದಲ್ಲಿ ಹೊಂದುವುದು ಎಂದರೆ “ಕೆಲಸ” ಹಾಗೂ “ಮುಗಿಸಿಬಿಡುವುದು” ಎನ್ನದೆ ಪ್ರತಿಕ್ಷಣವನ್ನೂ ಇದೇ ಕೊನೆಯ ಕ್ಷಣವೇನೋ ಎನ್ನುವಂತೆ, ಪ್ರತಿಕ್ಷಣದ ಅನುಭವದಲ್ಲೂ ತಡೆದು ನಿಂತುಕೊಳ್ಳುತ್ತ ಕ್ಷಣಕ್ಷಣದ ಸಂವೇದನೆಗಳಲ್ಲಿ ಮಗ್ನರಾಗಿ ಅನುಭವಿಸಬೇಕಾದ ವಿದ್ಯಮಾನ. ಹಾಗಾಗಿ ಇದು ಒಬ್ಬರ ಕಾರ್ಯವಲ್ಲದೆ ಇಬ್ಬರೂ ಸೇರಿ ಜೊತೆಜೊತೆಗೆ ಮಾಡಬೇಕಾದ ಕಾರ್ಯ. ಇದೊಂದು ರೀತಿ ಯುಗಳ ಗೀತೆ (duet) ಹಾಡಿದಂತೆ. ಹೆಣ್ಣು ಒಂದು ಸಾಲು ಭಾವಪೂರ್ಣವಾಗಿ ಹೇಳಿದರೆ ಗಂಡು ಇನ್ನೊಂದು ಸಾಲನ್ನು ಅಷ್ಟೇ ಭಾವಪೂರ್ಣವಾಗಿ ಹೇಳುವುದು, ಹಾಗೂ ಒಬ್ಬರು ಹಾಡುತ್ತಿರುವಾಗ ಇನ್ನೊಬ್ಬರು ಅವರೇ ತಾನು ಎನ್ನುವಂತೆ ಮೈದುಂಬಿ ಆಲಿಸುವುದು ಅಗತ್ಯವಾಗುತ್ತದೆ. ಹಾಗಾಗಿ ಇಬ್ಬರಿಗೂ ಕಾಮತೃಪ್ತಿ ಆಗಬೇಕಾದರೆ ಗಂಡು ತನ್ನ ಗಂಡಸುತನವನ್ನು ಕಾಮಕೂಟದಿಂದ ಹೊರಗಿಡಬೇಕಾಗುತ್ತದೆ. “ನಿನ್ನಂತೆ ನಾನು” ಎಂಬ ತತ್ವಮಸಿ ಭಾವವನ್ನು ಕಾಮಕೂಟದಲ್ಲಿ ತರಬೇಕಾಗುತ್ತದೆ. ಆಗ ಮಾತ್ರ ಆಕ್ರಮಣಶೀಲತೆಯು ಇಬ್ಬರಿಗೂ ಅದ್ಭುತ ಆಗಲು ಸಾಧ್ಯವಿದೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.