ಸುಖೀ ದಾಂಪತ್ಯ ೧೯೫
ಹೆಣ್ಣನ್ನು ಆಕೆ ಇರುವಂತೆ ಸಹಜವಾಗಿ, ಇಡಿಯಾಗಿ ಗುರುತಿಸುವುದು ಅಗತ್ಯವಿಲ್ಲವೆಂದು ಗಂಡಸರಿಗೆ ಹೇಳಿಕೊಡಲಾಗಿದೆ.
195: ಪುರುಷರ ನಾಕ–ನರಕ: 4
ಪುರುಷರ ಮನೋವೇದನೆಯ ಬಗೆಗೆ ಮಾತಾಡುತ್ತಿದ್ದೇವೆ. ಪುರುಷರು ತಮ್ಮ ನೈಜ ಭಾವನೆಗಳನ್ನು ತೋರಿಸಲು ಹೋಗಿ ಆಘಾತಕ್ಕೊಳಗಾಗಿ ಬದಲಾಗುತ್ತ, ಸಮಾಜವು ಒಪ್ಪುವ ಕೃತಕ ಭಾವನೆಗಳನ್ನು ರೂಢಿಸಿಕೊಳ್ಳುತ್ತಾರೆ, ಹಾಗೂ ತನ್ನತನವನ್ನು ಮರೆಯುತ್ತ ಒಳಗುದಿಗೆ ಶರಣಾಗುತ್ತಾರೆ ಎಂದು ಗೊತ್ತಾಯಿತು.
ಸಹಜ ಭಾವನೆಗಳ ಮೇಲೆ ಸಮಾಜದ ಒತ್ತಡ ಬೀಳುವಾಗ ಇನ್ನು ಕೆಲವರು ಮೂರನೆಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ನಡೆಯುವ ವಿದ್ಯಮಾನದಲ್ಲಿ ತಮ್ಮದೇ ಅರ್ಥವನ್ನು ಕಂಡುಕೊಳ್ಳಲು ಹೊರಡುತ್ತಾರೆ. ಅದು ಹೇಗೆಂದು ನನ್ನ ವೈಯಕ್ತಿಕ ಅನುಭವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿವರಿಸುತ್ತೇನೆ.
ಸುಮಾರು 60-70 ವರ್ಷಗಳ ಹಿಂದಿನ ಮಾತು. ಈಗ “ಹಿರಿಯರು” ಅನ್ನಿಸಿಕೊಳ್ಳುವ ನಾವೆಲ್ಲ ಆಗ ತಾನೇ ಕಣ್ಣು ತೆರೆಯುತ್ತಿದ್ದೆವು. ಆಗ ಪುರುಷ ಪ್ರಧಾನ ಸಮಾಜವೇ ಎಲ್ಲೆಡೆಯಲ್ಲೂ ವಿಜೃಂಭಿಸುತ್ತಿತ್ತು. ಹೆಣ್ಣುಗಂಡುಗಳ ನಡುವೆ ಅಡ್ಡಗೋಡೆಯಂಥ ನಿರ್ಬಂಧವು ಕೈಚಾಚಿದರೆ ಎಟುಕುವಂತ್ತಿತ್ತು. ಹೆಣ್ಣುಗಂಡುಗಳ ದಾಂಪತ್ಯಕ್ಕೆ ಹೊರತಾದ ಯಾವುದೇ ಸಂಬಂಧವನ್ನು ಸಮಾಜವು ಮಾನ್ಯ ಮಾಡುತ್ತಿರಲಿಲ್ಲ. ಹೆಣ್ಣುಗಂಡುಗಳು ಕೇವಲ ಸ್ನೇಹದಿಂದ ಇರಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆಯಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ, ಕಿಶೋರ-ಕಿಶೋರಿಯರು ನಿರ್ಮಲ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದರೆ ಹಿರಿಯರು ಸಹಿಸುತ್ತಿರಲಿಲ್ಲ. “ಏನ್ರೋ ನೀವಿಬ್ಬರೂ ಮದುವೆ ಆಗಬೇಕೆಂದಿದ್ದೀರಾ?” ಎಂದು ತಮಾಷೆಯ ನೆಪದಲ್ಲಿ ತಮ್ಮ ಮನದ ಹುಳುಕನ್ನು ತೋರಿಸಿಕೊಳ್ಳುತ್ತಿದ್ದರು. ಕುಂಟಬಿಲ್ಲೆ ಮುಂತಾದ ಆಟಗಳನ್ನು ಬಾಲಕರೂ, ಮರಕೋತಿ, ಕ್ರಿಕೆಟ್ನಂಥ ಆಟಗಳನ್ನು ಹೆಣ್ಣುಮಕ್ಕಳೂ ಆಡುವುದಕ್ಕೆ ನಿರ್ಬಂಧವಿರುತ್ತಿತ್ತು. ಮಾತು ಮೀರಿದರೆ ಹೆಣ್ಣಿಗ/ಗಂಡುಬೀರಿ ಎಂದು ಅಡ್ಡಹೆಸರು ಇಡಲಾಗುತ್ತಿತ್ತು. ಒಟ್ಟಾರೆ ಪುರುಷ ಪ್ರಾಧಾನ್ಯತೆಯು ಹೆಣ್ಣನ್ನು ಆಳುವಂತೆ ಗಂಡಸರನ್ನೂ ಆಳುತ್ತಿತ್ತು.
ಇಂಥ ವಾತಾವರಣದಲ್ಲಿ ಬೆಳೆದವರಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಅಳವಿನೊಡನೆ ಬಂದ ಹೆಣ್ಣು ಜಾತಿಯನ್ನು ನನ್ನ ಸಮಕಾಲೀನರು ಮಾಡುವಂತೆ ನನ್ನದೇ ತಿಳಿವಳಿಕೆಯ ಚೌಕಟ್ಟಿನೊಳಗೆ ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟೆ. ಕ್ರಮೇಣ ಹೆಂಗಸರನ್ನು (ನನ್ನ ಅರಿವಿಗೆ ಬರದಂತೆ) ಮೂರು ಮೂಲಮಾದರಿಗಳಲ್ಲಿ ಗುರುತಿಸಲು ಶುರುಮಾಡಿದೆ. ಮೊದಲ ಮಾದರಿಯೆಂದರೆ, ರಕ್ತಸಂಬಂಧವಿರದ ಹಿರಿಯ ಹೆಣ್ಣನ್ನು ತಾಯಿ ಅಥವಾ ಅಕ್ಕ ತಿಳಿಯುವುದು – ಈಗ ಹಿರಿಯ ಹೆಂಗಸನ್ನು ಆಂಟೀ ಎನ್ನುವಂತೆ. ಹಾಗೆಯೇ ಕಿರಿಯ ಹೆಣ್ಣನ್ನು ತಂಗಿ ಎಂದು ಅಂದುಕೊಳ್ಳುವುದು. ಹೀಗೇಕೆ? ಮಾತೃ/ಸೋದರಭಾವದಿಂದ ನೋಡುವುದು ಲೈಂಗಿಕ ಭಾವನೆಗಳಿಂದ ದೂರವಿಡುತ್ತದೆ ಎಂಬ ನಂಬಿಕೆ ಪ್ರಚಲಿತವಾಗಿತ್ತು. (ಆಗ ಶಾಲೆಯ ಮುಖ್ಯ ಶಿಕ್ಷಕರು ಭಾಷಣ ಮಾಡುವಾಗ “ಬಂಧುಭಗಿನಿಯರೇ…” ಎಂದು ಶುರುಮಾಡಿ, “ಒಬ್ಬರನ್ನು ಬಿಟ್ಟು” ಎಂದು ಸೇರಿಸಿ ತನ್ನ ಹೆಂಡತಿಯ ಕಡೆ ನೋಡುತ್ತಿದ್ದರೆ ಜನರೆಲ್ಲರೂ ನಗುತ್ತಿದ್ದರು.) ಈ ಸಂದರ್ಭದಲ್ಲಿ ಒಬ್ಬಳು ನೆನಪಾಗುತ್ತಿದ್ದಾಳೆ. ಈಕೆ ರಕ್ಷಾ ಬಂಧನದ ದಿನದಂದು ಕೈಗೆ ಸಿಕ್ಕ ಹುಡುಗರಿಗೆಲ್ಲ ರಾಖಿ ಕಟ್ಟುತ್ತಿದ್ದಳು. ಆಕೆಯ ಸೋದರಭಾವವನ್ನು ಮೆಚ್ಚಿದಾಗ ಆಕೆ ಹೇಳಿದ್ದೇನು? “ನಾನು ರಾಖಿ ಕಟ್ಟುವುದು ಬಾಂಧವ್ಯ ಬೆಳೆಸಲು ಅಲ್ಲ, ನನ್ನ ಬಗೆಗೆ ಕಾಮಭಾವನೆ ಬರದಂತೆ ದೂರವಿಡಲಿಕ್ಕೆ.” ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಸಂದರ್ಭದಲ್ಲಿ ನನಗೂ ನನ್ನ ಸ್ನೇಹಿತನಿಗೂ ಒಬ್ಬಳು ರಾಖಿ ಕಟ್ಟಿದವಳು ನಂತರ ನನ್ನ ಸ್ನೇಹಿತನನ್ನು ಮದುವೆಯಾಗಿದ್ದೂ ಇದೆ. ಇಂಥ ಸಂಗತಿಗಳು ಸಾಮಾಜಿಕ ನಂಬಿಕೆಯ ಕಣ್ಣಿಗೆ ಬೀಳದೆ ಮರೆಯಾಗಿರುವ ಹೆಣ್ಣುಗಂಡಿನ ಸಂಬಂಧಗಳ ಸಂಕೀರ್ಣತೆಯ ಮೇಲೆ ಬೆಳಕು ಚೆಲ್ಲುತ್ತವೆ.
ಹೆಂಗಸರನ್ನು ಸೋದರ ಭಾವದಿಂದ ನೋಡುತ್ತ ಹದಿವಯಸ್ಸಿಗೆ ಕಾಲಿಟ್ಟಾಗ ಸಹಜವಾದ ಕಾಮೇಚ್ಛೆ ಹುಟ್ಟಲು ಶುರುವಾಯಿತು. ಆದರೆ ಅದಕ್ಕೆ ಪ್ರತೀಕವಾಗಿ ಯಾರನ್ನು ಕಲ್ಪಿಸಿಕೊಳ್ಳುವುದು ಎಂದು ಗಲಿಬಿಲಿ ಆಯಿತು. ಯಾಕೆಂದರೆ ಮದುವೆಯಾಗುವ ತನಕ ಯಾವುದೇ ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡಕೂಡದು ಎಂಬ ನೀತಿ ತಲೆಯಲ್ಲಿ ಬೇರೂರಿತ್ತು! ಹಾಗಾಗಿ ಪರಿಚಿತ ಹೆಣ್ಣಿನ ಬಗೆಗೆ ಕಾಮಭಾವನೆ ಮೂಡಿದಾಗ ತೀವ್ರವಾದ ತಪ್ಪಿತಸ್ಥ ಭಾವ ಹುಟ್ಟಲು ಶುರುವಾಗಿ ನಿಲ್ಲಿಸಬೇಕಾಯಿತು. ಇದಕ್ಕೆ ಪರಿಹಾರವೋ ಎಂಬಂತೆ ಹೆಣ್ಣಿನ ಎರಡನೆಯ ಮಾದರಿ ಹುಟ್ಟಿಕೊಂಡಿತು: ನಾಟಕ, ಚಲಚ್ಚಿತ್ರ, ಜಾಹೀರಾತು ಮುಂತಾದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ, ಹಾಗೂ ವೈಯಕ್ತಿಕವಾಗಿ ಪರಿಚಯವಿಲ್ಲದ ಹೆಣ್ಣುಗಳನ್ನು ಕಾಮಿಸಲು ಅಡ್ಡಿಯಿಲ್ಲ! ಹೀಗೆ ಆಕರ್ಷಕ ಹೆಣ್ಣುಗಳನ್ನು ಕದ್ದು ನೋಡುತ್ತ ಭೋಗವಸ್ತುವನ್ನಾಗಿ ಕಲ್ಪಿಸಿಕೊಳ್ಳುವ ಅಭ್ಯಾಸ ಬೆಳೆಯಿತು. ಆಗಿನ ಕಾಲದಲ್ಲಿ ಶ್ರೀಮಂತರು ಇಷ್ಟಪಡುವ ಹೆಣ್ಣನ್ನು “ಇಟ್ಟುಕೊಳ್ಳು”ತ್ತಿದ್ದರೇ ವಿನಾ ಮದುವೆಯಾಗಿ ಸಂಸಾರ ಹೂಡಲು ಮನಸ್ಸು ಮಾಡುತ್ತಿರಲಿಲ್ಲ. ಹೀಗೆ ಪ್ರೀತಿಸುವುದು ಒಬ್ಬರನ್ನು, ಮದುವೆ ಆಗುವುದು ಇನ್ನೊಬ್ಬರನ್ನು ಎಂಬ ವಿಭಜನಾತ್ಮಕ ಧೋರಣೆ ಬೆಳೆಯಲು ಕಾರಣವಾಯಿತು.
ಇನ್ನು, ದೊಡ್ಡವರಾದ ನಂತರ ಮಾಡಿಕೊಂಡ ಮೂರನೆಯ ಮಾದರಿಯೆಂದರೆ ಹೆಂಡತಿ. ಮದುವೆಗೆ ದೊಡ್ಡ ಉದ್ದೇಶವೆಂದರೆ ಸಂತಾನೋತ್ಪತ್ತಿ. ಇದರ ಹಿಂದೆ ಕಾಮವೆಂದರೆ ಕೆಟ್ಟದ್ದು, ಹಾಗಾಗಿ ಅದನ್ನು ನಿಗ್ರಹಿಸಬೇಕು ಎಂಬ ವಿಚಾರವೂ ಇತ್ತಲ್ಲವೆ? ಪರಿಣಾಮವಾಗಿ ಗಂಡಹೆಂಡಿರ ನಡುವೆ ಕಾಮಕ್ರಿಯೆ ನಡೆಯುತ್ತಿದ್ದರೂ ಅದರಲ್ಲಿ ಪ್ರೇರಣಾತ್ಮಕವಾದುದು ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಏನೂ ಇರುತ್ತಿರಲಿಲ್ಲ. ಮಕ್ಕಳಾದ ನಂತರವಂತೂ ಗಂಡಹೆಂಡಿರ ಕಾಮಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಇನ್ನು ದಾಂಪತ್ಯದಲ್ಲಿ ಬೌದ್ಧಿಕ ಸಾಂಗತ್ಯ ಹೇಗಿತ್ತು? ನೀವು ನಂಬುತ್ತೀರೋ ಇಲ್ಲವೋ – ಆಗ “ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ” ಎನ್ನುವ ಗಾದೆಯನ್ನು ಹೆಚ್ಚಿನವರು ನಂಬುತ್ತಿದ್ದರು!
ಇದಲ್ಲದೆ ನಾಲ್ಕನೆಯ ಮಾದರಿಯೂ ಅಪರೂಪಕ್ಕೆ ಕಾಣುತ್ತಿತ್ತು: ಹೆಣ್ಣನ್ನು ಪ್ರೇಯಸಿಯನ್ನಾಗಿ ಕಾಣುವುದು. ಆಕೆಯನ್ನು ಕವಿಕಲ್ಪನೆಯಿಂದ ವೈಭವೀಕರಿಸುವುದು. ಆಗ ಪ್ರೇಮವಿವಾಹಗಳನ್ನು (ಹಿರಿಯರ ಆಯ್ಕೆ ಅಲ್ಲವಾದುದರಿಂದ) ಸಮಾಜ ವಿರೋಧಿಯಾಗಿ ಕಾಣಲಾಗುತ್ತಿತ್ತು. ವಿಚಿತ್ರವೆಂದರೆ ಪ್ರೇಯಸಿಯನ್ನು ಮದುವೆಯಾಗದಿದ್ದರೆ ಕಲ್ಪನೆಗಳು ಶ್ರೀಮಂತವಾಗಿಯೇ ಉಳಿಯುತ್ತಿದ್ದುವು. ಒಂದುವೇಳೆ ಹೆಂಡತಿಯಾಗಿ ಮನೆಗೆ ಕಾಲಿಟ್ಟಳೋ ಸಾಧಾರಣ ಹೆಣ್ಣಾಗಿ ಮೂಲೆಗುಂಪಾಗುತ್ತಿದ್ದಳು.
ಮೇಲೆ ಹೇಳಿದ ಸಂಬಂಧದ ಮಾದರಿಗಳು ಒಂದು ತಲೆಮಾರು ಕಳೆದಮೇಲೆ ಈಗಲೂ ಜೀವಂತವಾಗಿದ್ದು ದಾಂಪತ್ಯದ ಮೇಲೆ ಪ್ರಭಾವ ಬೀರುತ್ತಿವೆ. ದೃಷ್ಟಾಂತಕ್ಕಾಗಿ ಈ ಹೇಳಿಕೆಗಳನ್ನು ತೆಗೆದುಕೊಳ್ಳಿ:
- ನನ್ನ ಗಂಡನಿಗೆ ಸೆಕ್ಸ್ ಬೇಕು, ಆದರೆ ರಸಿಕತನ ಬೇಡ.
- ಇವನು ಪ್ರೀತಿಸಿ ಗೋಗರೆದು ನನ್ನನ್ನು ಒಪ್ಪಿಸಿ ಮದುವೆಯಾದ. ಈಗ ಕಸಕ್ಕಿಂತ ಕೀಳಾಗಿ ಕಾಣುತ್ತಿದ್ದಾನೆ.
- ನನ್ನ ಪ್ರತಿಭೆಯನ್ನು ಉದ್ಯೋಗವನ್ನು ಮೆಚ್ಚಿ ಮದುವೆಯಾದವರು ಸಂತಾನೋತ್ಪತ್ತಿಯ ಯಂತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನೀಗ ಮನೆಯಲ್ಲಿದ್ದೇನೆ.
- “ನನ್ನ ತಂಗಿಯ ತರಹ” ಎನ್ನುತ್ತ ನನ್ನ ತಂಗಿಯ ಜೊತೆಗೆ ಸಂಬಂಧ ಬೆಳೆಸಿದ್ದಾರೆ.
ಇದರರ್ಥ ಏನು? ಇವಳು ತಾಯಿ, ಇವಳು ಸೋದರಿ, ಇವಳು ಭೋಗವಸ್ತು, ಇವಳು ಹೆಂಡತಿ, ಇವಳು ಪ್ರೇಯಸಿ ಎಂದು ಹೆಣ್ಣನ್ನು ವಿಭಜನೆಯ ದೃಷ್ಟಿಯಿಂದ ನೋಡುವಾಗ ಹೆಣ್ಣನ್ನು ಇಡಿಯಾಗಿ, ಸಹಜ ಜೀವಿಯಾಗಿ ಕಲ್ಪಿಸಿಕೊಳ್ಳುವುದೇ ಗಂಡಿಗೆ ಅಸಾಧ್ಯವಾಗುತ್ತಿದೆ. ಇನ್ನು ಸಾಹಚರ್ಯೆ, ಸಾಂಗತ್ಯ, ಅನ್ಯೋನ್ಯತೆ ದೂರ ಉಳಿದುವು!
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.