Please wait...

ಸುಖೀ ದಾಂಪತ್ಯ ೧೯೪

ವಿಧೇಯ, ಗಂಭೀರ ಎನಿಸಿಕೊಂಡು ಮೇಲಕ್ಕೇರಿರುವ ಪ್ರತಿ ಗಂಡಿನ ಹಿಂದೆ ದುರ್ವರ್ತನೆಗೆ ಒಳಗಾದ ನೋವಿನ ರಾಶಿಯಿದೆ.

194: ಪುರುಷರ ನಾಕನರಕ: 3

ಪುರುಷರು ಪುರುಷರಾಗಿ ಗುರುತಿಸಿಕೊಳ್ಳುವ ಸಲುವಾಗಿ ತಮ್ಮೊಳಗಿನ ವೈಯಕ್ತಿಕವಾದ ಸಹಜ ಭಾವನೆಗಳನ್ನು ಕಟ್ಟಿಟ್ಟು ಇತರರು ಒಪ್ಪುವ ಕೃತಕ ಭಾವನೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಿದ್ದೆ. ಪುರುಷತ್ವದ ಪರಿಕಲ್ಪನೆಯ ಪರಿಣಾಮಗಳ ಬಗೆಗೆ ಇನ್ನಷ್ಟು ತಿಳಿಯೋಣ.

ಎರಡು: ಒತ್ತಡಕ್ಕೆ ಶರಣಾಗಿ ತನ್ನತನವನ್ನು ಮರೆಯುವುದು: ಇದು ಅರ್ಥವಾಗಲು ಎಲ್ಲಿಯೋ ಓದಿದ್ದನ್ನು ಉದಾಹರಿಸುತ್ತಿದ್ದೇನೆ. ಈ ಬಾಲಕನಿಗೆ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪನ ನೆರಳನ್ನೇ ಅನುಸರಿಸಿ ಗಂಡಸಾಗಲು ಹೊರಟಿದ್ದ. ಮನೆಯಲ್ಲಿದ್ದ ಕುರಿಮರಿಯ ಜೊತೆಗೆ ಅವನ ಒಡನಾಟ ಇತ್ತು. ಒಮ್ಮೆ ಹಬ್ಬಕ್ಕಾಗಿ ದೇವರಿಗೆ ಅರ್ಪಿಸಲೆಂದು ಕುರಿಮರಿಯನ್ನು ಸಜ್ಜುಗೊಳಿಸಲಾಯಿತು. ತನ್ನ ಕಣ್ಣೆದುರು ಅಪ್ಪ ಕುರಿ ಕೊಯ್ಯುವ ದೃಶ್ಯವನ್ನು ನೋಡಿ ಬಾಲಕ ಮರಗಟ್ಟಿ ಹೋದ. “ಧೈರ್ಯ” ತೋರಿಸಿದ್ದಕ್ಕಾಗಿ ಅಪ್ಪನಿಂದ ಶಾಬಾಶ್ ಎನಿಸಿಕೊಂಡ. ತಾನು ಅಪ್ಪನಂತೆ ಆಗಬೇಕೆಂದರೆ ಇಂಥದ್ದನ್ನು ಮಾಡಲೇಬೇಕು ಎಂದು ವಿಧಿಗಳಲ್ಲಿ ಪಾಲುಗೊಂಡ. ಮುಂದೆ ದೊಡ್ಡವನಾಗಿ ಬುದ್ಧಿ ಬೆಳೆಸಿಕೊಂಡು ಸಮುದಾಯದಲ್ಲಿ ದೈವಭಕ್ತನೆಂದು ಹೆಸರು ಗಳಿಸಿದರೂ ಸೂಕ್ಷ್ಮ ಭಾವನೆಗಳು ಬೆಳೆಯಲೇ ಇಲ್ಲ. ಭಾವನೆಗಳಿಗೆ ಸ್ಪಂದಿಸಲು ಹೋದರೆ ತಲೆಯಲ್ಲಿದ್ದ ಅಪ್ಪ ಕೆಣಕುತ್ತಿದ್ದ: “(ನನ್ನಂತೆ) ಗಂಡಸಾಗುವುದೇ ಆದರೆ ನಿನ್ನಲ್ಲಿ ಹೆಂಗರುಳಿಗೆ ಅವಕಾಶ ಇರಕೂಡದು!“

ಭೀಕರವೆನಿಸುವ ಈ ದೃಷ್ಟಾಂತದ ಸೌಮ್ಯ ರೂಪಗಳು ಸಾಕಷ್ಟಿವೆ. ಮಾರ್ಗದರ್ಶನ, ಉಪದೇಶ, ಬುದ್ಧಿವಾದ, ನೀತಿಬೋಧೆ, ಕರ್ತವ್ಯ ಮುಂತಾದ ಹೆಸರಿನಲ್ಲಿ ಗಂಡುಮಕ್ಕಳ ಮೇಲೆ ಧೋರಣೆಗಳನ್ನು ಹೇರಿ, “ನೀವು ಹೀಗಿದ್ದರೇನೇ ನಾವು ಒಪ್ಪಿಕೊಳ್ಳುತ್ತೇವೆ” ಎಂದೆನ್ನಲಾಗುತ್ತದೆ, ಉದಾ. ಮಗನ ಇಷ್ಟಕ್ಕೆ ವಿರುದ್ಧವಾಗಿ ವೈದ್ಯನನ್ನಾಗಿ ಮಾಡಿದ ಅಪ್ಪ. ಯಾಕೆ? ವಯಸ್ಸಾದಾಗ ತನ್ನ ಆರೈಕೆಗೆ ಬೇಕಲ್ಲವೆ? ಆದರೆ ಮಗನ ಪ್ರತಿಭೆಗೆ ವಿದೇಶದಲ್ಲಿ ಅವಕಾಶ ಸಿಕ್ಕು ಹೊರಟಾಗ ಅಪ್ಪ ಬಿಲ್ಕುಲ್ ಒಪ್ಪಲಿಲ್ಲ. ನಮ್ಮನ್ನು ನೋಡಿಕೊಳ್ಳುವ ಕರ್ತವ್ಯ ಬಿಟ್ಟು ಹೇಗೆ ಹೋಗುತ್ತೀಯಾ ಎಂದ. ಮಗಳು ನೋಡಿಕೊಳ್ಳುವ ಹೊಣೆಹೊತ್ತರೂ ಹೆಣ್ಣೆಂದು ತಿರಸ್ಕರಿಸಿದ ಭವಿಷ್ಯ ಮೊಟಕಾದ ಮಗನಿಗೆ ಎಷ್ಟು ಗಾಸಿಯಾಗಿರಬೇಡ?

ಹಿರಿಯರನ್ನು ಪ್ರತಿಭಟಿಸಲು ಆಗದ ಅಸಹಾಯಕ ಮಕ್ಕಳು ಏನು ಮಾಡಬಲ್ಲರು? ಆಗವರ ಮನಸ್ಸು ಒಂದು ಹೊಂದಾಣಿಕೆಗೆ ಬರುತ್ತದೆ. ಹಿರಿಯರು ಬಯಸುವುದೇ ತಮಗೂ ಇಷ್ಟವೆಂದು “ನಂಬಲು” ಶುರುಮಾಡುತ್ತಾರೆ! ಬೇಡದ್ದನ್ನು ತನ್ನದೇ ಆಯ್ಕೆ ಎಂದು ಒಪ್ಪಿಕೊಳ್ಳುವುದು ಹೀಗೆಯೇ. “ನನಗೆ ಒತ್ತಾಯದ ಮದುವೆ ಏನೂ ಇಷ್ಟವಿರಲಿಲ್ಲ. ಈಗ ಅದರಲ್ಲೇ ಸುಖ ಕಾಣುತ್ತಿದ್ದೇನೆ” ಎಂದು ಕೆಲವರು ಹೇಳುವುದರ ಹಿಂದೆ ಪರಿಸ್ಥಿತಿಗೆ ಶರಣಾಗತಿ, ಭಾವನೆಗಳ ಬಲಿ, ಹಾಗೂ ಹೊಂದಾಣಿಕೆ ಎಷ್ಟಾಗಿದೆಯೆಂದು ಅನುಭವಿಸಿದವರೇ ಬಲ್ಲರು. ಹೀಗೆ ವಿಧೇಯ ಮಕ್ಕಳನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ ನೊಂದವರ ಮನದೊಳಗೆ ಏನು ನಡೆಯುತ್ತದೆ? ಇದರ ಬಗೆಗೆ ಆಪ್ತಸಲಹೆಗಾರ್ತಿ ಪದ್ಮಶ್ರೀ ಹಂಚಿಕೊಂಡ ಸಂಗತಿ ಸ್ವಾರಸ್ಯಕರವಾಗಿದೆ. ಸಂಪ್ರದಾಯಸ್ಥ ಹದಿವಯಸ್ಕರ ಕಾರ್ಯಾಗಾರದಲ್ಲಿ ಆಕೆ ಸವಾಲು ಹಾಕಿದರು: “ದೇವರು ಒಂದೇ ಒಂದು ಪ್ರಾರ್ಥನೆಯನ್ನು ನೆರವೇರಿಸುವುದಾದರೆ ಏನು ಕೇಳಿಕೊಳ್ಳುತ್ತೀರಿ?” ಅದಕ್ಕೆ ಕೆಲವರ ಉತ್ತರ: “ಬೆಳಗಿನ ಜಾವ ಸಿಹಿನಿದ್ದೆಯಲ್ಲಿ ಇರುವಾಗ ಬಡಿದೆಬ್ಬಿಸಿ, ಸ್ನಾನ-ಸಂಧ್ಯಾವಂದನೆ ಮಾಡೆಂದು ಅಪ್ಪ-ಅಮ್ಮ ಒತ್ತಾಯಿಸುತ್ತಾರಲ್ಲ, ಅದನ್ನು ನಿಲ್ಲಿಸಲು ದೇವರೇ ಅವರಿಗೆ ಬುದ್ಧಿಕೊಡು!” ಅಂತರ್ಜಾತೀಯ ಅಥವಾ ಅಂತರ್ಧರ್ಮೀಯ ವಿವಾಹವನ್ನು ಆಯ್ಕೆ ಮಾಡಿಕೊಂಡಾಗ ಹಿರಿಯರು ಮಕ್ಕಳ ಭಾವನೆಗಳನ್ನು ಹೊಸಕಿಹಾಕುವ ಜೊತೆಗೆ ಮಕ್ಕಳನ್ನೂ ಹೊಸಕಿಹಾಕಿದ ಪ್ರಕರಣಗಳು ಸಾಕಷ್ಟಿವೆ.

ಹೀಗೆ ವ್ಯವಸ್ಥೆಗೆ ಹೊಂದಿಕೊಳ್ಳುವುದಕ್ಕಾಗಿ ಕೋಮಲ ಭಾವನೆಗಳನ್ನು ದಮನಿಸುವ ಭಾವನಾತ್ಮಕ ದುರ್ವರ್ತನೆಗೆ (emotional abuse) ಬಲಿಯಾಗುವವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಎಂದು ಅನಿಸುತ್ತದೆ. ಇದರ ಫಲಶ್ರುತಿ ಏನಾಗಬಹುದು? ಈ ದಂಪತಿ ಇಷ್ಟಪಟ್ಟು ಮದುವೆಯಾಗಿ ಆರು ವರ್ಷಗಳಾದರೂ ಸೌಹಾರ್ದತೆ ಬೆಳೆದಿಲ್ಲ. ಕಾಮಕೂಟ ನಿಂತು ಸಾಕಷ್ಟು ಕಾಲವಾಗಿದೆ. ಇದರ ಹಿನ್ನೆಲೆಯೇನು? ಗಂಡನ ಬಾಲ್ಯದಲ್ಲಿ ಹೆತ್ತವರು ಇವನ ಮೈದಡವದೆ ದೂರದಿಂದಲೇ ಶಿಸ್ತು ಕಲಿಸುತ್ತಿದ್ದರು. ಮೂರು ವರ್ಷದವನಾದಾಗ ಇವನ ತಂಗಿ ಹುಟ್ಟಿದಳು. ತೋರುವ ಅಲ್ಪಪ್ರೀತಿಯನ್ನೂ ನಿಲ್ಲಿಸಿ ಅವರೆಂದರು: “ತಂಗಿಯ ಕಾಳಜಿ ನಿನ್ನ ಕರ್ತವ್ಯ. ಗಂಡಸಾಗಿ ಅವಳ ಜವಾಬ್ದಾರಿಯನ್ನು ನೀನೇ ಹೊರಬೇಕು!” ಪ್ರೀತಿಯನ್ನು ಕಳೆದುಕೊಂಡಿದ್ದಕ್ಕೆ ರೋದಿಸಲೂ ಆಗದೆ ಹಿರಿಯರ ಜೊತೆಗೆ “ಕಿರಿಯ-ಹಿರಿಯ”ನಾಗಿ ತಂಗಿಯ ಬಗೆಗೆ “ಪ್ರೀತಿ”ಯನ್ನು ತಂದುಕೊಳ್ಳಬೇಕಾಯಿತು. ಹೀಗೆ ಅಂತಃಕರಣದ ಸೆಲೆ ಬತ್ತಿಹೋಗಿ ಬೆಳೆದವನಿಗೆ ಜವಾಬ್ದಾರಿ ಬಂತೇ ವಿನಾ ಸ್ವಯಂಸ್ಫೂರ್ತಿಯಿಂದ ಪ್ರೀತಿಸುವುದು ಬರಲಿಲ್ಲ. ಇದು ಅವನ ದಾಂಪತ್ಯದಲ್ಲೂ ಇಳಿದಿದೆ. ಹೆಂಡತಿಯ ಸಕಲ ಜವಾಬ್ದಾರಿಗಳನ್ನು ಅನನ್ಯ ಕರ್ತವ್ಯ ಪ್ರಜ್ಞೆಯಿಂದ ಮಾಡುತ್ತಾನೆ – ಲೈಂಗಿಕ ಕ್ರಿಯೆಯನ್ನೂ ಕೂಡ. ಆದರೆ ಅವನು ಮಾಡಿದ್ದು ಯಾವುದೂ ಅವಳ ಹೃದಯ ಮುಟ್ಟುವುದಿಲ್ಲ. ತನ್ನ ಯಾಂತ್ರಿಕತೆಯ ಕಾರಣದಿಂದ ಹೆಂಡತಿಯನ್ನು ಕಳೆದುಕೊಳ್ಳುತ್ತಿದ್ದರೂ ದೋಷವೆಲ್ಲಿದೆ ಎಂದು ಗೊತ್ತಾಗುತ್ತಿಲ್ಲ.

ಹೀಗೆ “ಯಂತ್ರಪುರುಷ”ರಲ್ಲಿ ಭಾವನೆಯ ಬಡತನದ ಜೊತೆಗೆ ಬಹುಕಾಲದ ಖಿನ್ನತೆಯೂ ಹೆಚ್ಚಿಗಿದೆ. ಆದರೆ ಇಲ್ಲಿ ಖಿನ್ನತೆ ಸಮಸ್ಯೆಯಲ್ಲ, ಅದನ್ನು ತೋರಿಸಕೂಡದು ಎನ್ನುವುದೇ ಸಮಸ್ಯೆ. ಯಾಕೆ? ಎಷ್ಟೆಂದರೂ ನಾವು ಗಂಡಸರು, ಅತ್ತು ದುಃಖ ಹೊರಹಾಕಲು ಹೆಂಗಸು ಕೆಟ್ಟುಹೋದೆವೆ? ಹಾಗಾಗಿ ಎದೆಯಲ್ಲಿ ಕಲ್ಲಿಟ್ಟುಕೊಂಡು ಬದುಕಬೇಕು! ಪರಿಣಾಮವಾಗಿ ಸಂತತ ಭಾವನಾತ್ಮಕ ದಣಿವು (chronic emotional exhaustion) ಇವರ ಬದುಕಿನಲ್ಲಿ ಎಲ್ಲೆಲ್ಲೂ ಕಾಣುತ್ತದೆ. ಕಲಿತ ಬುದ್ಧಿಗೆ ಗುಲಾಮನಾದ ಶರೀರವು ಕುಸಿದು ಬೀಳುವ ತನಕ ದುಡಿಯುತ್ತದೆ. ಈ ಗುಂಪಿಗೆ ರೈತರೂ ಸೇರುತ್ತಾರೆ. ರೈತರ ಆತ್ಮಹತ್ಯೆಗೆ ಒಳಗಿನ ಕಾರಣ ಇದು. ಬದಲಾಗಿ ಕೈಲಾಗುವುದಿಲ್ಲ ಎಂದು ಗೋಳಿಟ್ಟು (ಹೆಂಗಸರಂತೆ) ಅತ್ತಿದ್ದರೆ ಫಲಶ್ರುತಿ ಬೇರೆಯೇ ಆಗಿರುತ್ತಿತ್ತು. ಈ ಸಂದರ್ಭದಲ್ಲಿ  ಅರವತ್ತೆರಡು ವರ್ಷಗಳ ಹಿಂದಿನ ಘಟನೆ ನೆನಪಿಗೆ ಬರುತ್ತಿದೆ. ನಾನಾಗ ಒಂಬತ್ತರ ಬಾಲಕ. ದೊಡ್ಡಣ್ಣನ ಪ್ರೇಮವಿವಾಹ ನಡೆಯುತ್ತಿತ್ತು. ಆಗ ನಮ್ಮಪ್ಪನನ್ನು ಅಲಕ್ಷ್ಯಕ್ಕೆ ಒಳಪಡಿಸಲಾಗಿ ಅವಮಾನ ಆಯಿತು. ಆಗಿನ ಕಾಲದ ಗಂಡಸರಂತೆ ಅವನು ಕೋಪದಿಂದ ಕೂಗಾಡಿ ಮದುವೆಯನ್ನು ನಿಲ್ಲಿಸಲು ಹೋಗಲಿಲ್ಲ. ಬದಲಾಗಿ, ಮೌನವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ. ನಂತರ ತನ್ನ ಕೋಣೆಗೆ ಬಂದು ದೊಡ್ಡ ದನಿತೆಗೆದು ಮನಃಪೂರ್ತಿ ಅತ್ತ. ಹಾಗೆ ಭಾವನೆಗಳನ್ನು ಪ್ರಕಟಪಡಿಸುವುದು ದೀರ್ಘಾಯುಷ್ಯಕ್ಕೆ ಸಹಾಯ ಮಾಡುತ್ತದೆ ಎಂದು ನನಗೆ ಆಮೇಲೆ ಗೊತ್ತಾಗಿದ್ದು.

ಹೀಗೆ ವಿಧೇಯ, ಗಂಭೀರ ಎನಿಸಿಕೊಂಡು ಮೇಲಕ್ಕೇರಿರುವ ಬಹುತೇಕ ಪ್ರತಿ ಯಶಸ್ವೀ ಗಂಡಿನ ಹಿಂದೆಯೂ ಒಂದು ರಾಶಿ ದುರ್ವರ್ತನೆಗೆ ಒಳಗಾದ ನೋವಿರುತ್ತದೆ. ಅವನ ಬಾಲಪ್ರತಿಭೆ, ಸ್ವಂತದ ಆಯ್ಕೆ, ಸ್ವಯಂಸ್ಫೂರ್ತಿ, ಆತ್ಮಗೌರವ – ಎಲ್ಲದರ ಸಮಾಧಿಯಾಗಿ, ಮೇಲೆ ಸಾಧನೆಯ ಹೂವುಗಳು ಅರಳಿರುತ್ತವೆ. ಅವನು ಕೊಡಬಹುದಾದ ಆರ್ಥಿಕ ಹಾಗೂ ಕೌಟುಂಬಿಕ ಭದ್ರತೆಯನ್ನು ದಾಂಪತ್ಯಕ್ಕೆ ಅರ್ಹತೆಯಾಗಿ ತೆಗೆದುಕೊಳ್ಳುವಾಗ ಭಾವನಾತ್ಮಕ ಬಡತನವನ್ನು ಅಲಕ್ಷಿಸಲಾಗುತ್ತಿದೆ ಎನ್ನುವುದು ದುರಂತ.

ಹೆಣ್ಣಿನ ಪ್ರೀತಿಯನ್ನು ಅರ್ಥಮಾಡಿಕೊಳ್ಳದ ಗಂಡಸು ನಿಷ್ಕರುಣಿ ಅಲ್ಲ, ಬದಲಾಗಿ ಸ್ಪಂದಿಸಲು ಹೋಗಿ, ಆಘಾತಕ್ಕೊಳಗಾಗಿ ನೊಂದು ಹತಾಶನಾಗಿ ಕೊನೆಗೆ ಭಾವನೆಗಳನ್ನು ಕಟ್ಟಿಟ್ಟವ ಅಷ್ಟೆ! 

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
26th Main Rd, BHEL Officers Colony, Nandini Layout, Bangalore-560 096, Karnataka, India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 84949 44888, +91 84949 33888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.